ಸಿಡಿದು ನಿಂತ ದೇಶದ ಜನಸಾಮಾನ್ಯರು! ದಂಗುಬಡಿದ ಮೋದಿಯ ಕೇಂದ್ರ ಸರಕಾರ! ದೇಶದ ಜನಸಾಮಾನ್ಯರು ಇಂದು ಭಾರಿ ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ದೇಶದ ಪ್ರಮುಖ ನಗರಗಳು, ವಿಶ್ವವಿದ್ಯಾಲಯಗಳು, ಐಐಟಿ, ಐಐಎಮ್ ನಂತಹ ಶಿಕ್ಷಣ ಸಂಸ್ಥೆಗಳು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳು ಕಳೆದ ಹತ್ತಾರು ದಿನಗಳಿಂದ ಬಿರುಸಿನ ಜನಪ್ರತಿರೋಧದ ಕೇಂದ್ರಗಳಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ದೇಶಾದ್ಯಂತ ಮೋದಿ ಸರಕಾರದ ಜನವಿರೋಧಿ ಹಾಗೂ ದೇಶವಿರೋಧಿ ನೀತಿಗಳ ವಿರುಧ್ಧ ಭಾರಿ ಹೋರಾಟಗಳಿಗೆ ಇಳಿದಿದ್ದಾರೆ. ಮೋದಿ ಸರಕಾರ ಜನರ ಮೇಲೆ ಮಾಡುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ದಮನ ದೌರ್ಜನ್ಯಗಳ ವಿರುಧ್ಧ ಸಿಡಿದೆದ್ದು ನಿಂತಿದ್ದಾರೆ. ಪ್ರತಿಬಂದಕಾಜ್ಞೆ, ಕರ್ಫ್ಯೂ, ಬಂಧನ, ಸುಳ್ಳುಕೇಸು, ಲಾಠಿ ಚಾರ್ಜ್, ಗೋಲಿಬಾರ್ ಗಳಿಗೆ ಅಂಜದೆ ಅಳುಕದೇ ದೈರ್ಯದಿಂದ ಎದೆಯೊಡ್ಡಿ ಲಕ್ಷಾಂತರ ಸಂಖ್ಯೆಯಲ್ಲಿ ಹೋರಾಟದಲ್ಲಿ ದುಮುಕುತ್ತಿದ್ದಾರೆ. ದೇಶವನ್ನು ಅಧೋಗತಿಗೆ ದೂಡಿರುವ ಆಳುವ ಶಕ್ತಿಗಳು ಮತ್ತವರ ಸರ್ಕಾರವನ್ನು ಪ್ರಶ್ನಿಸಲು ತೊಡಗಿದ್ದಾರೆ. ಜನರನ್ನು ಬಹಳ ಕಾಲ ಭ್ರಮೆಯಲ್ಲಿಟ್ಟು, ಆಮಿಷಗಳಿಗೆ ದೂಡಿ ಹಿಡಿದಿಟ್ಟು, ಬೇಕಾಬಿಟ್ಟಿಯಾಗಿ ಜನಸಾಮಾನ್ಯರ ಹಕ್ಕುಗಳನ್ನು ಕಸಿದು, ಸಂಪನ್ಮೂಲಗಳನ್ನು ದೋಚುವ ಕಾರ್ಯವನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಈ ಜನಪ್ರತಿರೋಧ ನಿರೂಪಿಸಿದೆ....