Skip to main content

ಮಹಿಳೆಯರ ಮೇಲಿನ ಅತ್ಯಾಚಾರಗಳೂ! ಸರಕಾರಿ ಆಡಳಿತ ಯಂತ್ರವೂ !-rapes, murders, govt organs, communal agenda


ಮಹಿಳೆಯರ ಮೇಲಿನ ಅತ್ಯಾಚಾರಗಳೂ!
 ಸರಕಾರಿ ಆಡಳಿತ ಯಂತ್ರವೂ !
ಸಂಘ ಪರಿವಾರದ ಕೋಮುವಾದೀ ಫ್ಯಾಸಿಸ್ಟ್ ಕಾರ್ಯ ಸೂಚಿಯೂ!
ನಮ್ಮ ಪಕ್ಕದ ರಾಜ್ಯ ತೆಲಂಗಾಣದಲ್ಲಿ ದಿಶಾ ಎಂಬ ಎನ್ನುವ ಹೆಣ್ಣುಮಗಳೊಬ್ಬಳನ್ನು ವಿಕ್ಷಿಪ್ತ ಹಾಗೂ ವಿಕೃತ ಮನಸ್ಸಿನ ಯುವಕರು ಧಾರುಣವಾಗಿ ಅತ್ಯಾಚಾರ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಕರಕಲಾಗಿಸಿದ್ದು ಇಡೀ ದೇಶದ ಹೃದಯವನ್ನೇ ಕಲಕಿದ ಘಟನೆ. ಅದೇ ಸಂಧರ್ಭದಲ್ಲೇ ನಮ್ಮ ರಾಜ್ಯದ ಕಲ್ಬುರ್ಗಿಯಲ್ಲಿ ಎಂಟು ವರ್ಷದ ಎಂಟು ವರ್ಷದ ಎಳೇ ಬಾಲೆಯೊಬ್ಬಳನ್ನು ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿದ ಘಟನೆಯೂ ನಡೆಯಿತು. ಅದು ಹೆಚ್ಚು ಸುದ್ಧಿಯಾಗಲಿಲ್ಲ. ಇದೇ ಸಮಯದಲ್ಲೇ ದಾನಮ್ಮ ಎಂಬ ಎಳೇ ಬಾಲೆಯ ಅತ್ಯಾಚಾರ ಕೊಲೆ ಘಟನೆಯಲ್ಲಿ ಸುದ್ಧಿಗೆ ಗ್ರಾಸವಾಗಿದ್ದ ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ಪ್ರಿಯಾಂಕ ಎಂಬ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ಕೊಲೆ ನಡೆದಿದ್ದು ಹೆಚ್ಚಾಗಿ ಸುದ್ಧಿ ಮಾದ್ಯಮಗಳ ಕಣ್ಣಿಗೆ ಬೀಳಲಿಲ್ಲ. ದಿಶಾಳನ್ನು ಸುಟ್ಟು ಹಾಕಿದ ಸ್ಥಳದ ಪಕ್ಕದಲ್ಲೇ ಮತ್ತೊಂದು ಹೆಣ್ಣು ದೇಹ ಕರಕಲಾಗಿ ಸಿಕ್ಕಿದ್ದ ವರದಿಯೂ ಬಂದಿತ್ತು. ಅದೂ ಕೂಡ ಹೆಚ್ಚಿನ ಸುದ್ಧಿಗೆ ಗ್ರಾಸವಾಗಲಿಲ್ಲ. ಅಂದರೆ ಹೈದರಾಬಾದ್ ಘಟನೆಯ ಸಂದರ್ಭದಲ್ಲೇ ಕರ್ನಾಟಕವೂ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳು ನಡೆದಿವೆ. ಕೆಲವು ಮಾತ್ರ ಒಂದು ಮಟ್ಟದ ಸುದ್ದಿಯಾದವು ಅಷ್ಟೇ. ಅದರಲ್ಲಿ ಒಂದೆರಡು ಘಟನೆಗಳಿಗೆ ಮಾತ್ರ ಸಾರ್ವಜನಿಕ ಆಕ್ರೋಷಗಳು ವ್ಯಕ್ತವಾದವು. ಸುದ್ದಿಯಾಗದೇ ಉಳಿದವುಗಳ ಲೆಕ್ಕಗಳನ್ನು ಯಾರೂ ಮಾಡಲು ಸಾದ್ಯವಿಲ್ಲ.

ಹೈದರಾಬಾದ್ ನ ದಿಶಾ ಮೇಲಿನ ಧಾರುಣ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಮಹಿಳಾ ಸಮೂಹ ಬೀದಿಗಿಳಿಯಿತು. ಅತ್ಯಾಚಾರಿ ಕೊಲೆಗಡುಕರನ್ನು ನೇಣಿಗೇರಿಸಬೇಕು, ಗುಂಡಿಟ್ಟು ಸಾಯಿಸಬೇಕೆಂದು, ಕಲ್ಲು ಹೊಡೆದು ಸಾಯಿಸಬೇಕೆಂದು, ಸೌದಿ ಮಾದರಿ ಶಿಕ್ಷೆ ನೀಡಬೇಕೆಂದು, ಪುರುಷತ್ವ ಹರಣ ಮಾಡಬೇಕೆಂದು… ಹೀಗೆ ಹಲವಾರು ರೀತಿಯಲ್ಲಿ ರೋಷದ ಭಾವಾವೇಶದ ಪ್ರತಿಕ್ರಿಯೆಗಳು ಬಂದವು.

2014 ರ ನವಂಬರ್ ನಲ್ಲಿ ಮಲೆನಾಡಿನ ತೀರ್ಥಹಳ್ಳಿಯ ನಂದಿತಾ ಎಂಬ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯಿತೆಂದು ಭಾರಿ ಸುದ್ಧಿಯನ್ನು ಮಾಡಲಾಗಿತ್ತು. ನಂತರ ಆ ಹೆಣ್ಣು ಮಗು ಸಾವಿಗೀಡಾದಳು. ಅದನ್ನು ನಡೆಸಿದವರು ನಿರ್ದಿಷ್ಠ ಕೋಮಿನವರು ಎನ್ನುವ ಸುದ್ಧಿ ಅದಕ್ಕಿಂತಲೂ ಹೆಚ್ಚಿನ ಸುದ್ಧಿಯಾಗಿತ್ತು. ನಂತರ ಅದನ್ನು ನಡೆಸಿದವರು ಅವರಲ್ಲ ಎಂಬ ಸುದ್ಧಿಯೂ ಬಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಉಜಿರೆಯಲ್ಲಿ ಸೌಜನ್ಯ ಎಂಬ ಹೆಣ್ಣು ಮಗಳ ಮೇಲೆ ಅತ್ಯಾಚಾರ ಹಾಗೂ ಕಗ್ಗೊಲೆ ನಡೆದಿದ್ದು ರಾಜ್ಯದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಆ ಘಟನೆಯಲ್ಲಿ ಧರ್ಮಸ್ಥಳದ ಹೆಗ್ಡೆ ಕುಟುಂಬದ ಹೆಸರೂ ತಳುಕು ಹಾಕಿಕೊಂಡಿತ್ತು. ಪುತ್ತೂರಿನಲ್ಲಿ ತಮ್ಮ ಸಹಪಾಠಿಯ ಮೇಲೆ ಅತ್ಯಾಚಾರ ಎಸಗಿದವರು ಸಂಘ ಪರಿವಾರದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನವರಾಗಿದ್ದರು ಎಂದು ಸುದ್ಧಿಯಾಗಿತ್ತು. ಅಲ್ಲಿ ಅತ್ಯಾಚಾರಕ್ಕೆ ಈಡಾದ ಹೆಣ್ಣುಮಗಳು ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದಳು. ಆಕೆಯೂ ಕೂಡ ಅದೇ ವಿದ್ಯಾರ್ಥಿ ಸಂಘಟನೆಯ ಸದಸ್ಯೆಯಾಗಿದ್ದಳು. ಅದನ್ನು ಪ್ರತಿಭಟಿಸಿ ಬೀದಿ ಹೋರಾಟಗಳು ನಡೆದಿದ್ದು ಕಡಿಮೆ. ಸಂಘ ಪರಿವಾರ ಆ ಬಗ್ಗೆ ತುಟಿಯನ್ನೇ ಬಿಚ್ಚಿರಲಿಲ್ಲ. 

ಕಳೆದ 2018ರಲ್ಲಿ ಕಾಶ್ಮೀರದ ಕತುವಾದಲ್ಲಿ ಅಸೀಫಾ ಎನ್ನುವ ಬಕ್ರೆವಾಲ್ ಎಂಬ ಅಲೆಮಾರಿ ಸಮುದಾಯದ ಎಂಟು ವರ್ಷದ ಹೆಣ್ಣು ಮಗುವಿನ ಮೇಲೆ ಭೀಕರ ರೀತಿಯಲ್ಲಿ ಅತ್ಯಾಚಾರ ನಡೆಸಿ ಕಗ್ಗೊಲೆ ಮಾಡಲಾಯಿತು. ಇದು ನಡೆದದ್ದು ದೇವಸ್ಥಾನವೊಂದರಲ್ಲಿ. ಮಾಡಿದವರಲ್ಲಿ ದೇವಸ್ಥಾನದ ಪೂಜಾರಿಯೂ ಸೇರಿದ್ದ. ಈ ಘಟನೆ ಕೂಡ ಭಾರಿ ಆಕ್ರೋಷಕ್ಕೆ ಕಾರಣವಾಗಿತ್ತು.

ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ ದೇಶಾದ್ಯಂತ ಭಾರಿ ಸುದ್ಧಿಗೆ ಗ್ರಾಸವಾದ ಘಟನೆ. ಅಲ್ಲಿ ತಿಂಗಳಾನುಗಟ್ಟಲೆ ಆ ಹೆಣ್ಣು ಮಗಳನ್ನು ಬಂಧಿಯಾಗಿಸಿಕೊಂಡು ನಿರಂತರ ಅತ್ಯಾಚಾರಗಳನ್ನು ನಡೆಸಲಾಗಿತ್ತು. ಆಕೆ ಅದನ್ನು ದೃಢವಾಗಿ ವಿರೋಧಿಸಿ ಕಾನೂನು ಮೊರೆಹೋಗಿದ್ದರಿಂದ ಆಕೆಯನ್ನು ಈಗ ಹೊಡೆದು, ಇರಿದು ಬೆಂಕಿ ಇಟ್ಟು ಕಗ್ಗೊಲೆ ಮಾಡಲಾಗಿದೆ. ಸರಕಾರ, ಕಾನೂನು, ನ್ಯಾಯಾಲಯ ಹಾಗೂ  ಪೋಲಿಸ್ ವ್ಯವಸ್ಥೆ ಆಕೆಗೆ ರಕ್ಷಣೆ ಕೊಟ್ಟು ಕಾಪಾಡಲಿಲ್ಲ. ಇದೇ ಸಂಧರ್ಭದಲ್ಲೇ ಉತ್ತರ ಪ್ರದೇಶದ ಮುಜಾಫುರ್ ನಗರ್ ನಲ್ಲಿ ಅತ್ಯಾಚಾರ ಸಂತ್ರಸ್ಥೆಯ ಮೇಲೆ ದೂರು ವಾಪಾಸು ಪಡೆಯದಿದ್ದುದಕ್ಕಾಗಿ ಆಸಿಡ್ ಧಾಳಿ ನಡೆದ ವರದಿಯಾಗಿದೆ. ಅಲ್ಲಿನ ಯೋಗಿ ಆದಿತ್ಯನಾಥ್ ಸರಕಾರ ಆ ಹೆಣ್ಣು ಮಗಳಿಗೂ ರಕ್ಷಣೆ ನೀಡಲಿಲ್ಲ. ಆಕೆ ಈಗ ಶೇ 30 ರಷ್ಟು ಸುಟ್ಟ ಗಾಯಗಳಿಗೆ ಈಡಾಗಿದ್ದಾಳೆಂಬ ವರದಿಯಿದೆ.

‘ನ ಸ್ತ್ರಿ ಸ್ವಾತಂತ್ರ್ಯಮರ್ಹತಿ’ ಎಂಬ ಮನುವಾದಿ ಸೂತ್ರವನ್ನು ಪಾಲಿಸಬೇಕೆನ್ನುವ ಸಂಘಪರಿವಾರ ಮತ್ತದರ ರಾಜಕೀಯ ಪಕ್ಷವಾದ ಬಿಜೆಪಿ ಅತ್ಯಾಚಾರ ಪ್ರಕರಣಗಳಲ್ಲಿ ನೇರವಾಗಿಯೂ ಹಾಗೂ ಪರೋಕ್ಷವಾಗಿಯೂ ಶಾಮೀಲಾಗಿರುವ ವರದಿಗಳಿವೆ. ಈ ವಿಚಾರದಲ್ಲಿ ಇತರ ಪಕ್ಷಗಳೂ ಕಡಿಮೆ ಅಪರಾಧಿಗಳೆಂದು ಭಾವಿಸಲಾಗದು. ಆದರೆ ಸಂಘ ಪರಿವಾರ ಅತ್ಯಾಚಾರವನ್ನು ಜಾತೀವಾದಿ ಹಾಗೂ ಕೋಮುವಾದಿ ಅಸ್ತ್ರವನ್ನಾಗಿ ಪ್ರಧಾನವಾಗಿ ಉಪಯೋಗಿಸುತ್ತಾ ಬಂದಿದೆ. ಬಾಬರೀ ಮಸೀದಿ ಉರುಳಿಸಿದ ನಂತರ ನಡೆಸಿದ ಕೋಮು ಹಿಂಸಾಚಾರಗಳಲ್ಲಿ, ಗೋದ್ರಾ ಹತ್ಯಾಕಾಂಡಗಳಲ್ಲಿ ಅಲ್ಪ ಸಂಖ್ಯಾತ ಕೋಮಿನ ಮಹಿಳೆಯರನ್ನು ಭೀಕರ ಅತ್ಯಾಚಾರಗಳಿಗೆ ಈಡು ಮಾಡಿ ಕಗ್ಗೊಲೆ ಮಾಡಲಾಗಿತ್ತು. ಅತ್ಯಾಚಾರ ಮಾಡಿ ನಂತರ ಗರ್ಭಿಣಿ ಮಹಿಳೆಯರ ಹೊಟ್ಟೆಗಳನ್ನು ತ್ರಿಶೂಲಗಳಿಂದ ಬಗೆದು ಹಾಕಲಾಗಿತ್ತು.

ವಿಜಯಪುರ, ಜಮಖಂಡಿ, ಪುತ್ತೂರು, ಉಜಿರೆ, ಉತ್ತರ ಪ್ರದೇಶದ ಉನ್ನಾವೋ, ಮುಜಾಫುರ್ ನಗರ್ ಮೊದಲಾದ ಕಡೆಗಳಲ್ಲಿ ಸಂಘಪರಿವಾರದವರೇ ಆರೋಪಿಗಳಾಗಿದ್ದಾರೆ. ಅದರಲ್ಲಿ ಮಂತ್ರಿಗಳಿಂದ ಹಿಡಿದು ಶಾಸಕ, ಕಾರ್ಯಕರ್ತರವರೆಗೂ ಸೇರಿದ್ದಾರೆ. ಉನ್ನಾವೋ ಘಟನೆಯಲ್ಲಿ ಮಾಜಿ ಕಾಂಗ್ರೆಸ್, ಹಾಲಿ ಬಿಜೆಪಿ ಶಾಸಕನೇ ಪ್ರಧಾನ ಆರೋಪಿಯಾಗಿದ್ದಾನೆ. ಉತ್ತರ ಪ್ರದೇಶ ಸರಕಾರ ಆ ಅಪರಾಧಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಘಟನೆಯನ್ನೂ ಕೂಡ ಕೋಮುವಾದೀಕರಣ ಮಾಡಿ ದಿಕ್ಕು ತಪ್ಪಿಸಲು ಸಂಘ ಪರಿವಾರ ಶ್ರಮಿಸಿತ್ತು. ಈಗ ಸಂತ್ರಸ್ಥೆಯನ್ನು ಜೀವಂತವಾಗಿ ಮುಗಿಸುವಲ್ಲಿ ಸರಕಾರವೂ ಶಾಮೀಲಾಗಿರುವುದು ಮೇಲ್ನೋಟದಲ್ಲೇ ಕಾಣಿಸುವಂತಿದೆ. ಕಾಶ್ಮೀರದ ಕತುವಾ ಅತ್ಯಾಚಾರ ಹಾಗೂ ಕಗ್ಗೊಲೆ ಆರೋಪಿಗಳ ಪರವಾಗಿ ಸಂಘ ಪರಿವಾರ ನೇರವಾಗಿ ನಿಂತಿದ್ದಲ್ಲದೆ ಅದಕ್ಕಾಗೀಯೇ ‘ಹಿಂದೂ ಏಕತಾ ಮಂಚ್’ ಎಂಬ ಒಂದು ಸಂಘಟನಾ ರೂಪವನ್ನು ಸೃಷ್ಠಿಸಿ ಹಿಂದೂ ಮತೋನ್ಮಾದವನ್ನು ಬಡಿದೆಬ್ಬಿಸಿ, ಆ ಮಗುವಿನ ಮೇಲೆ ನಡೆದ ಅಮಾನುಷತೆಯನ್ನು ಬೆಂಬಲಿಸಿ, ಅಪರಾಧಿಗಳನ್ನು ರಕ್ಷಿಸಲು ಇನ್ನಿಲ್ಲದ ಕಸರತ್ತು ನಡೆಸಿತ್ತು. ಸಂತ್ರಸ್ಥ ಕುಟುಂಬದ ಪರವಾಗಿ ವಾದಿಸದಂತೆ ವಕೀಲರುಗಳ ಮೇಲೂ ಬೆದರಿಕೆ ಹಾಕಿತ್ತು ಸಂಘ ಪರಿವಾರ. ಸಂಘ ಪರಿವಾರ ಮತ್ತದರ ಸಿದ್ಧಾಂತ ಎಂತಹ ಜೀವವಿರೋಧಿ ಎನ್ನುವುದಕ್ಕೆ ಇವೆಲ್ಲಾ ಕೆಲವು ಉದಾಹರಣೆಗಳಷ್ಟೇ.

ಕರ್ನಾಟದ ತೀರ್ಥಹಳ್ಳಿ, ವಿಜಯಪುರ, ಜಮಖಂಡಿ, ಪುತ್ತೂರು, ಬೆಳ್ತಂಗಡಿ ಮೊದಲಾದ ಅತ್ಯಾಚಾರ ಮತ್ತು ಕಗ್ಗೊಲೆ ಘಟನೆಗಳಲ್ಲಿ ಸಂಘ ಪರಿವಾರದ ಕೋಮುವಾದಿ ಮತ್ತು ಜಾತೀವಾದಿ ಕಾರ್ಯ ಸೂಚಿಗಳು ಕೆಲಸ ಮಾಡಿದ್ದವು. ತೀರ್ಥಹಳ್ಳಿ ಘಟನೆಯಲ್ಲಿ ತಮ್ಮ ದುಷ್ಪ್ರಚಾರ ಯಂತ್ರಂಗಗಳನ್ನು ಬಳಸಿ ಕೋಮುವಾದೀಕರಣ ಮಾಡಿ ಕೋಮು ಗಲಭೆ ಸೃಷ್ಠಿಸಲು ಇನ್ನಿಲ್ಲದಂತೆ ಪ್ರಯತ್ನಿಸಲಾಗಿತ್ತು. ಆದರೆ ಅದರಲ್ಲಿ ಮುಸ್ಲಿಂ ಸಮುದಾಯದವರು ಯಾರೂ ಇರಲಿಲ್ಲ ಎನ್ನುವುದು ನಂತರ ಸಾಬೀತಾಗಿತ್ತು. ಅಲ್ಲಿಗೆ ಆ ಪ್ರಕರಣ ಮುಚ್ಚಿಹೋದಂತಾಯಿತು.

 ಹೈದರಾಬಾದಿನ ಘಟನೆಯ ವಿರುದ್ಧ ಜನಾಕ್ರೋಷ ಹೆಚ್ಚಿದಂತೆ ಅದನ್ನು ಕೋಮುವಾದೀಕರಣ ಮಾಡಿ ಜನರ ಆಕ್ರೋಷವನ್ನು ಮುಸ್ಲಿಂ ಸಮುದಾಯದ ವಿರುದ್ಧ ತಿರುಗಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡಲಾಯಿತು. ಆ ಪ್ರಯತ್ನ ಇನ್ನೂ ನಿಂತಿಲ್ಲ. ಅತ್ಯಾಚಾರಿ ಆರೋಪಿಗಳಲ್ಲಿ ಒಬ್ಬಾತ ಮುಸ್ಲಿಂ ಸಮುದಾಯಕ್ಕೆ ಸೇರಿದ್ದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಲು ನೋಡಿದ್ದರು. ಸಂಘಪರಿವಾರದ ನಮೋ ಬ್ರಿಗೇಡ್ ನ ಮುಖ್ಯಸ್ಥನಾಗಿದ್ದ ಚಕ್ರವರ್ತಿ ಸೂಲಿಬೆಲೆ ಎಂಬಾತ ಹೈದರಾಬಾದ್ ಘಟನೆಯಲ್ಲಿ ಶಾಮೀಲಾಗಿದ್ದನೆಂದು ಹೇಳಲಾದ  ಮುಸ್ಲಿಂ ಆರೋಪಿಯನ್ನು ಸಾಯುವವರೆಗೂ ನೇಣಿಗೇರಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಿಷವನ್ನು ವಾಂತಿ ಮಾಡಿಕೊಂಡಿದ್ದ. ಉಳಿದ ಮೂವರು ಮುಸ್ಲಿಮರಾಗಿರಲಿಲ್ಲ ಎನ್ನುವುದನ್ನು ಮರೆಮಾಚಿ ಆ ಘಟನೆಗೆ ಮುಸ್ಲಿಮರೇ ಕಾರಣವೆನ್ನುವಂತೆ ಬಿಂಬಿಸಲು ಪ್ರಯತ್ನಿಸಿದ್ದ. ಈಗ ಆ ಘಟನೆಯಲ್ಲಿ ಶಾಮೀಲಾದವರೆಲ್ಲರೂ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದವರು ಎಂದು ತಿರುಚಿ ಪ್ರಚಾರ ಮಾಡುವ ಕಾರ್ಯವನ್ನು ಸಂಘ ಪರಿವಾರದ ಶಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುರುವಿಟ್ಟುಕೊಂಡಿವೆ.

ಆದರೆ ಸೂಲಿಬೆಲೆ ಸೇರಿದಂತೆ ಸಂಘ ಪರಿವಾರದ ಶಕ್ತಿಗಳು ಕರ್ನಾಟಕದ ರಾಮಚಂದ್ರಪುರದ ರಾಘವೇಶ್ವರ, ಉತ್ತರ ಭಾರತದ ಅಸಾರಾಂ ಬಾಪೂ ಮತ್ತು ಆತನ ಮಗ, ಸ್ವಾಮಿ ಚಿನ್ಮಯಾನಂದ ಮೊದಲಾದ ಹಿಂದೂ ಧರ್ಮದವರೆಂದು ಬಿಂಬಿಸಿಕೊಂಡಿರುವ ಮಠಾಧೀಶರುಗಳ, ಆದ್ಯಾತ್ಮಿಕ ಗುರುಗಳೆನಿಸಿಕೊಂಡವರುಗಳು ಮಾಡಿರುವ ಅತ್ಯಾಚಾರಗಳ ಬಗ್ಗೆ ಸಾರ್ವಜನಿಕ ಸುದ್ಧಿಯಾದರೂ, ನ್ಯಾಯಾಲಯಗಳ ಕಟ್ಟೆ ಏರಿದ್ದರೂ, ಆರೋಪ ಸಾಬೀತಾಗಿ ಶಿಕ್ಷೆಗೆ ಈಡಾಗಿದ್ದರೂ ಯಾವುದೇ ಚಕಾರ ಎತ್ತದೇ ಅಂತಹವರ ಸಂಪೂರ್ಣ ಸಮರ್ಥನೆಗಳಲ್ಲಿ ತೊಡಗಿದೆ. ತನ್ನ ರಾಜಕೀಯ ಅಂಗವಾದ ಬಿ ಜೆ ಪಿ ನಲವತ್ತಕ್ಕೂ ಹೆಚ್ಚು ಸಂಸದರು ಅತ್ಯಾಚಾರ ಸೇರಿದಂತೆ ಕೊಲೆ, ಹಲ್ಲೆ ಮೊದಲಾದ ಅಪರಾಧಗಳನ್ನು ಎಸಗಿದ ಆರೋಪಗಳಲ್ಲಿ ವಿಚಾರಣೆ ಎದುರಿಸುತ್ತಿದ್ದರೂ ಅವರ ಅಪರಾಧ ಕೃತ್ಯಗಳನ್ನು ವಿರೋಧಿಸದೇ ಅವರನ್ನು ಸಮರ್ಥನೆ ಮಾಡುವ ಕಾರ್ಯ ಮಾಡುತ್ತಾ ಬಂದಿದೆ.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೈದರಾಬಾದ್ ಘಟನೆಯ ಕುರಿತು ಹಸು ಸಾಕಿದರೆ ಅತ್ಯಾಚಾರ ಮನೋಭಾವನೆಗಳು ಹುಟ್ಟುವುದಿಲ್ಲ ಎಂದು ಅತ್ಯಾಚಾರ ನಿಲ್ಲಿಸುವ ಪರಿಹಾರ ಸೂಚಿಸಿರುವ ವಾರ್ತೆಯಿದೆ. ಆದರೆ ತಮ್ಮ ಆಶ್ರಮಗಳಲ್ಲಿ ನುರಾರು ಹಸುಗಳನ್ನು ಸಾಕುವ ಮಠಾಧೀಶರು ಧಾರ್ಮಿಕ ಮುಖಂಡರೆನಿಸಿಕೊಂಡವರು ಯಾಕೆ ತಮ್ಮ ಭಕ್ತರನ್ನೇ ಅತ್ಯಾಚಾರ ಮಾಡುತ್ತಿದ್ದಾರೆಂಬುದರ ಬಗ್ಗೆ ಅವರು ತುಟಿ ಬಿಚ್ಚಿದ  ವಾರ್ತೆಯೇನೂ ಇದುವರೆಗೂ ಬಂದಿಲ್ಲ!.

ಹಿಂದೂ ಧಾರ್ಮಿಕತೆ ಎನ್ನುವ ಬ್ರಾಹ್ಮಣಶಾಹಿ ಚಿಂತನೆಯೇ ಮಹಿಳಾವಿರೋಧಿ ಹಾಗೂ ಜಾತಿವಿರೋಧಿ ಬುನಾದಿಯ ಮೇಲೆ ನಿಂತಿರುವ ಚಿಂತನೆಯಾಗಿದೆ. ಮಹಿಳೆಯರನ್ನು ದಾಸಿಯರಾಗಿ, ರಾಣಿಯರಾಗಿ, ಜೀತಗಾರರಾಗಿ ಶ್ರಮಲೂಟಿ, ದಮನ ಅತ್ಯಾಚಾರಗಳಿಗೆ ಈಡು ಮಾಡುವುದು ತಪ್ಪೆಂದು ಅದು ಭಾವಿಸುವುದಿಲ್ಲ. ಅದರಲ್ಲೂ ತಳಪಾಯದ ಸಮುದಾಯಗಳಿಗೆ ಸೇರಿದ ಮಹಿಳೆಯರನ್ನಂತೂ ಭಾರಿ ತುಚ್ಚವಾಗಿ ಕಾಣುತ್ತದೆ. ಅದೇ ರೀತಿ ವಿಧವೆಯರು, ಗಂಡನಿಂದ ಹೊರತಳ್ಳಲ್ಪಟ್ಟವರನ್ನು ಅದು ಬಹಳ ನಿಕೃಷ್ಟವಾಗಿ ಕಾಣುತ್ತದೆ. ಮಾತೆ ಇಲ್ಲವೇ ದೇವಿಯೆಂದು ಕೇವಲ ಮೇಲುಮಟ್ಟದಲ್ಲಿ ಹೇಳಲಾಗುತ್ತಿದ್ದರೂ ಮಹಿಳೆಯರು ಒಂದು ಸಮೂಹವಾಗಿಯೇ ಪುರುಷ ಸಮೂಹದ, ಅದರಲ್ಲೂ ರಾಜರುಗಳು, ಪುರೋಹಿತರುಗಳು, ಆಡಳಿತದ ಮುಖ್ಯಸ್ಥರು ಮೊದಲಾದವರ ಸೇವೆಗಾಗಿಯೇ ಮೀಸಲು ಎನ್ನುವುದೇ ಅದರ ತಿರುಳಾಗಿದೆ. ಈ ಊಳಿಗಮಾನ್ಯ ಚಿಂತನೆಯನ್ನು ಕಾರ್ಪೋರೇಟು ಹಿತಾಸಕ್ತಿಗಳು ಬಳಸುತ್ತಾ ಜನಸಾಮಾನ್ಯರನ್ನು ಹಿಡಿದಿಟ್ಟುಕೊಂಡು  ತಮ್ಮ ಫ್ಯಾಸಿಸ್ಟ್ ಕಾರ್ಯ ಸೂಚಿಯನ್ನು ಕುಶಲತೆಯಿಂದ ಜಾರಿಗೊಳಿಸಲು ತೊಡಗಿವೆ.
ಬ್ರಾಹ್ಮಣಶಾಹಿ ಹಿಂದೂ ಧಾರ್ಮಿಕತೆಯ ವಿಚಾರಗಳನ್ನು ವಿರೋಧಿಸದೇ ಮಠ ಮಾನ್ಯಗಳು, ಧಾರ್ಮಿಕ ಗುರುಗಳೆನ್ನಿಸಕೊಂಡವರು, ರಾಜಕೀಯ ನಾಯಕರುಗಳ, ಸರ್ಕಾರಗಳು ಮತ್ತದರ ಅಂಗಗಳ ಇಂತಹ ಮಹಿಳಾ ವಿರೋಧಿ ದುಷ್ಟ ಕೃತ್ಯಗಳನ್ನು ವಿರೋಧಿಸದೇ ಹೋದರೆ ಸಾಂಸ್ಥಿಕಗೊಂಡು ವ್ಯವಸ್ಥೆಯ ಭಾಗವಾಗಿರುವ ಅತ್ಯಾಚಾರ ಎಂಬ ಜೀವ ವಿರೋಧಿ ಪಿಡುಗನ್ನು ತಡೆಗಟ್ಟಲು ಸಾಧ್ಯವಾಗದು. ಹಾಗಾಗಿ ಕೋಮುವಾದ, ಜಾತೀವಾದ, ಕಾರ್ಪೋರೇಟು ಪರ ಚಿಂತನೆಗಳನ್ನು ಗ್ರಹಿಸಿ ಹಿಮ್ಮೆಟ್ಟಿಸುವುದು  ಬಹಳ ಅಗತ್ಯ.

ಮಹಿಳೆಯರೂ ಸೇರಿದಂತೆ ದಲಿತ ದಮನಿತ ಸಮುದಾಯಗಳಿಗೆ  ದೇಶಧ ಸಂಪತ್ತು, ರಾಜಕೀಯ ಅಧಿಕಾರ, ಸಾಮಾಜಿಕ ಸ್ಥಾನಮಾನಗಳಲ್ಲಿ ಸಮಾನ ಅವಕಾಶಗಳು ಸಹಜವಾಗಿ ದೊರೆಯುವಂತಾಗದ ಹೊರತು ಅತ್ಯಾಚಾರವೂ ಕಗ್ಗೊಲೆಗಳೂ ಸೇರಿದಂತೆ ಮಹಿಳಾ ಶೋಷಣೆ ತಪ್ಪಲಾರದು.
08/12/2019                                                     -ನಂದಕುಮಾರ್ ಕೆ ಎನ್ . ಕುಂಬ್ರಿಉಬ್ಬು


 ಮಿಂಚಂಚೆ: nandakumarnandana67@gmail.com


Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...