ಒಂದು
ಹಳ್ಳಿಯ ಕತೆ
-ನಂದಕುಮಾರ್ ಕುಂಬ್ರಿ ಉಬ್ಬು
ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು
ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ
ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ
ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ
ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ
ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ
ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು.
ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ.. ಇಲ್ಲಿಂದ ಜೋಗಕ್ಕೆ ವೈಮಾನಿಕ ದೂರ ಸುಮಾರು ಒಂದು ಕಿ.ಮೀಟರು ಇರಬಹುದು. ರಸ್ತೆಯಲ್ಲಿ ಸಾಗಿದರೆ ಅದು ಸುಮಾರು ಎಂಟು ಕಿ.ಮೀಗಳು ಅಗಬಹುದು. ಈ ಹಳ್ಳಿಯ ಹೆಸರು ಪಡನ್ ಬೈಲು. ಇದು ಆಡಳಿತಾತ್ಮಕವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಸೇರುತ್ತದೆ. ಈ ಹಳ್ಳಿಯ ಪಕ್ಕದಲ್ಲಿ, ಅಂದರೆ ಎರಡೂವರೆ ಕಿ.ಮೀಟರುಗಳಷ್ಟು ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಈ ಹೆದ್ದಾರಿಯಿಂದ ಒಂದು ಮಣ್ಣುರಸ್ತೆ ಕವಲೊಡೆದು ಈ ಹಳ್ಳಿಯ ಮೂಲಕ ಸಾಗುತ್ತದೆ. ಈ ರಸ್ತೆ ಮುಂದೆ ಎಂಟರಿಂದ ಹತ್ತು ಕಿ.ಮೀಟರುಗಳು ಕ್ರಮಿಸಿ ಕಾರ್ಗಲ್ ಎಂಬ ಊರಿನ ಮೂಲಕ ಮತ್ತೆ ಅದೇ ಹೆದ್ದಾರಿಯನ್ನು ಸೇರಿಕೊಳ್ಳುತ್ತದೆ. ಇದನ್ನು ಜಿಲ್ಲಾ ಮುಖ್ಯರಸ್ತೆ ಎಂದು ಗುರುತಿಸಿ ಕಿ.ಮೀ ಕಲ್ಲುಗಳನ್ನು ಹಾಕಲಾಗಿದೆ. ಆದರೆ ಈ ರಸ್ತೆಯಲ್ಲಿ ಬೇಸಿಗೆಯಲ್ಲೇ ವಾಹನಗಳು ತಿರುಗಾಡಲು ಸಾದ್ಯವಿಲ್ಲದಂತಹ ಸ್ಥಿತಿಯಿದೆ. ಕನಿಷ್ಟ ಜಲ್ಲಿಕಲ್ಲುಗಳನ್ನು ಕೂಡ ಇನ್ನೂ ಕಾಣದಿರುವ ಜಿಲ್ಲಾ ಮುಖ್ಯ ರಸ್ತೆ ಎಂದು ಕರೆಸಿಕೊಂಡಿರುವ ರಸ್ತೆ ಇದಾಗಿದೆ ಎಂದರೆ ನೀವು ನಂಬಲೇಬೇಕು. ಇನ್ನು ಮಳೆಗಾಲದಲ್ಲಂತೂ ಕಾಲ್ನಡಿಗೆಯಷ್ಟೇ ಸಾದ್ಯ. ಆಟೋರಿಕ್ಷಗಳಾಗಲೀ ಬೈಕು ಕಾರುಗಳಾಗಲೀ ಮಳೆಗಾಲದಲ್ಲಿ ಈ ರಸ್ತೆಗಿಳಿಯಲು ಅಸಾಧ್ಯವೆನ್ನುವಂತಹ ಪರಿಸ್ಥಿತಿಯಿದೆ. ಪಡನ್ ಬೈಲಿನ ಜನರು ಸೇರಿಕೊಂಡು ಶ್ರಮದಾನ ಮಾಡಿ ತಮ್ಮ ಊರಿನವರೆಗಿನ ರಸ್ತೆಯನ್ನು ವರುಷವರುಷವೂ ರಿಪೇರಿ ಮಾಡುತ್ತಿರುವುದರಿಂದಾಗಿ ಬೇಸಿಗೆಯಲ್ಲಿ ಒಂದಷ್ಟು ಶ್ರಮ ವಹಿಸಿ ವಾಹನಗಳನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಬಹುದು ಅಷ್ಟೆ. ಯಾರಿಗಾದರೂ ಆರೋಗ್ಯ ಏರುಪೇರಾಗಿ ನಡಯಲಾರದಂತಹ ಪರಿಸ್ಥಿತಿ ಬಂದರೆ ಕಂಬಳಿ ಇಲ್ಲವೇ ಬೆಡ್ ಶೀಟಿನಲ್ಲಿ ಮಲಗಿಸಿ ನಾಲ್ಕಾರು ಜನರು ಸೇರಿ ಎತ್ತಿಕೊಂಡು ಹಲವು ಕಿ.ಮೀಟರುಗಳು ಕ್ರಮಿಸಿ ಹೆದ್ದಾರಿ ಸೇರಿ ಅಲ್ಲಿಂದ ಯಾವುದಾದರೂ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ಈಗಲೂ ಇದೆಯೆಂದರೆ ಅಲ್ಲಿನ ಪರಿಸ್ಥಿತಿಯ ಧಾರುಣತೆಯನ್ನು ಗ್ರಹಿಸಬಹುದು. ಈ ರಸ್ತೆಯಲ್ಲಿ ಕಾರ್ಗಲ್ ವರೆಗೂ ಹಲವಾರು ಮನೆಗಳಿವೆ. ಅವರುಗಳಂತೂ ಏಳೆಂಟು ಕಿ.ಮೀಟರುಗಳು ಈ ರಸ್ತೆಯೆಂದು ಕರೆಯಲ್ಪಡುವ ಆದರೆ ವಾಹನಗಳು ಚಲಿಸಲಾಗದಂತಿರುವ ದಾರಿಯಲ್ಲಿ ಸಾಗಿ ಬರಬೇಕಾಗುತ್ತದೆ. ಶಾಲೆಗಳಿಗೆ ಹೋಗುವ ಮಕ್ಕಳಂತೂ ಮಳೆಗಾಲದಲ್ಲಿ ಪಡುವ ಪಾಡು ಅಷ್ಟಿಷ್ಟಲ್ಲ. ರಭಸವಾಗಿ ಸುರಿಯುವ ಭಾರಿ ಮಳೆ ಹಾಗೂ ರಭಸದ ಕುಳಿರ್ಗಾಳಿಯ ಜೊತೆಗೆ ಕಾಡಿನ ರಸ್ತೆಯ ಕೆಸರಿನ ಮಧ್ಯೆ ಹಲವು ಕಿ.ಮೀಗಳಷ್ಟು ನಡೆದುಕೊಂಡೇ ಸಾಗಬೇಕಾದ ದುಸ್ಥಿತಿ.
ಅಲ್ಲಿನವರಿಗೆ ಅಲ್ಪ ಸ್ವಲ್ಪ ಭೂಮಿಯಿದೆ. ಭತ್ತ
ಅಡಿಕೆ ಪ್ರಧಾನವಾಗಿ ಬೆಳೆಯುತ್ತಾರೆ. ಅಡಿಕೆಗೆ ರೋಗ ಈಗಾಗಲೇ ಹರಡತೊಡಗಿದೆ. ಈ ಹಳ್ಳಿ ಸ್ವಯಂಪೂರ್ಣ
ಹಳ್ಳಿಯಂತೆ ಇದೆ. ಮಿಗುತಾಯ ಆದಾಯ ಎನ್ನುವುದು ಇಲ್ಲವೆನ್ನುವಷ್ಟು ಕಡಿಮೆ. ಪಕ್ಕದಲ್ಲೇ ಲೋಕಪ್ರಸಿದ್ದವೆಂದು
ಕರೆಯಲ್ಪಡುವ ಜೋಗ ಜಲಪಾತವಿದೆ. ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗಳು ಇಲ್ಲಿಗೆ ಬೇಟಿ ನೀಡುತ್ತಾರೆ.
ದೇಶದ ಒಂದು ಪ್ರಮುಖ ಪ್ರವಾಸಿ ತಾಣವೆಂದು ಜೋಗ ಜಲಪಾತಕ್ಕೆ ಹೆಸರಿದೆ. ಕವಿಗಳಿಗೆ ಸೌಂದರ್ಯ ಹಾಗೂ ರಮ್ಯತೆಯ
ಸ್ಪೂರ್ತಿಯಾಗಿ ಕನ್ನಡದ ಕವಿ ನಿಸಾರ್ ಅಹಮದ್ ರಿಂದ ನಿತ್ಯೋತ್ಸವ ಕವನದಲ್ಲಿ ಸ್ಥಾನ ಗಿಟ್ಟಿಸಿಕೊಂಡ
ಜಲಪಾತವಿದು. ʼಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ… ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿʼ…
ಎಂದೆಲ್ಲಾ ಕರ್ನಾಟಕದ ಮೇರು ಕಲಾವಿದ ರಾಜಕುಮಾರ್ ರಿಂದ ಹಾಡಿಸಿಕೊಂಡ ತಾಣವಿದು. ಆದರೆ ʼಜೋಗದ ಸಿರಿಯ
ಬೆಳಕುʼ ಈ ಭಾಗದ ಜನರ ಬದುಕಿಗೆ ಸಿರಿ ಹೋಗಲಿ ಕನಿಷ್ಟ ಮೂಲಭೂತ ನಾಗರಿಕ ಸೌಲಭ್ಯಗಳಿಗೂ ದಾರಿ ಮಾಡಿಕೊಡಲಿಲ್ಲವೆಂದರೆ
ಏನನ್ನಬೇಕು? ಇಷ್ಟೆಲ್ಲಾ ಇದ್ದರೂ ಜೋಗಕ್ಕೆ ಹೊಂದಿಕೊಂಡಿರುವ ಈ ಹಳ್ಳಿಗಳಿಗೆ ಕನಿಷ್ಟ ಜಲ್ಲಿ ರಸ್ತೆಯೂ
ಇಲ್ಲ. ವಿದ್ಯುತ್ ಸಂಪರ್ಕವಿದ್ದರೂ ಮಿಕ್ಸಿ ನಡೆಸಲೂ ಕೂಡ ವೋಲ್ಟೇಜ್ ಇರುವುದಿಲ್ಲವೆಂದರೆ ನಮ್ಮ
ದೇಶದ ಅದರಲ್ಲೂ ನಮ್ಮ ರಾಜ್ಯದ ಅಭಿವೃದ್ದಿಯ ಅಣಕವಲ್ಲವೇ?! ಈ ಹಳ್ಳಿಯು ನಮ್ಮ ನಾಡಿನ ಇಂತಹ ಸಾವಿರಾರು
ಹಳ್ಳಿಗಳನ್ನು ಪ್ರತಿನಿಧಿಸುತ್ತದೆ ಎನ್ನಬಹುದು.
ಇದು ನಮ್ಮ ರಾಜಕೀಯ ಅಧಿಕಾರ ವ್ಯವಸ್ಥೆ ಇಲ್ಲವೇ
ಆಡಳಿತ ವ್ಯವಸ್ಥೆಯ ಗಂಭೀರ ವೈಫಲ್ಯವಲ್ಲವೇ?!. ಈ ಭಾಗವನ್ನು ಕರ್ನಾಟಕದ ಅಧಿಕಾರ ರಾಜಕಾರಣದ ದಿಗ್ಗಜರಲ್ಲಿ
ಸ್ಥಾನ ಪಡೆದಿದ್ದ ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತಹವರು ವಿಧಾನ ಸಭೆಯಲ್ಲಿ ಪ್ರತಿನಿಧಿಸಿದ್ದರು.
ಬಂಗಾರಪ್ಪ ಮುಖ್ಯ ಮಂತ್ರಿಯಾಗಿಯೂ ಅಧಿಕಾರ ನಡೆಸಿದವರು. ಕಾಗೋಡು ತಿಮ್ಮಪ್ಪ ಶಾಸಕ, ಸಭಾಪತಿ, ಕಂದಾಯ
ಮಂತ್ರಿಯಾಗಿಯೂ ಅಧಿಕಾರ ನಡೆಸಿದವರು. ನಂತರ ಕುಮಾರ್ ಬಂಗಾರಪ್ಪ, ಈಗ ಮಧುಬಂಗಾರಪ್ಪ, ಬೇಳೂರು ಗೋಪಾಲಕೃಷ್ಣರಂತಹವರು
ಪ್ರತಿನಿಧಿಸುತ್ತಿದ್ದಾರೆ. ಮಧು ಬಂಗಾರಪ್ಪ ಸಂಫುಟ ಸಚಿವರಾಗಿರುವವರು.
ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣರು ನಗುತ್ತಿರುವ
ಕಟೌಟುಗಳು ಜೋಗ ಜಲಪಾತದ ಸ್ಥಳದಲ್ಲಿ ಈಗಲೂ ನೋಡಬಹುದು. ಅವರುಗಳ ಅದರಲ್ಲಿನ ನಗುಮುಖದ ಅರ್ಥವೇನೋ ಗೊತ್ತಿಲ್ಲ.
ʼನೋಡಿ…. ನಾವುಗಳು ಇದುವರೆಗೂ ಈ ಭಾಗದ ಹಳ್ಳಿಗಾಡಿನ ಜನರಿಗೆ ಕನಿಷ್ಟ ನಾಗರಿಕ ಸೌಲಭ್ಯಗಳನ್ನು ಕೂಡ
ಕಲ್ಪಿಸದೇ ಇದ್ದರೂ ಮತ್ತೆ ಮತ್ತೆ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದೇವೆಂದೋ… ವಾಹನಗಳೂ ಸಾಗಲಾರದ
ಮಣ್ಣಿನ ಗುಂಡಿಗಳ ರಸ್ತೆಗೆ ಜಿಲ್ಲಾ ಮುಖ್ಯ ರಸ್ತೆ ಎಂದು
ಕಿ.ಮೀ ಕಲ್ಲು ನೆಟ್ಟಿದ್ದೇ ಮಹಾ ಅಭಿವೃದ್ದಿಯೆಂದೋ… ಹಳ್ಳಿಗಾಡಿನ ಜನರ ಕತೆ ಅತ್ಲಾಗಿರಲಿ.. ಈಗ ಜೋಗದಲ್ಲಿ ನಾವು
ಪ್ರವಾಸಿಗಳಿಗಾಗಿ ಮಾಡುತ್ತಿರುವ ಕೋಟಿಗಟ್ಟಲೆ ರೂಪಾಯಿಗಳ ಅಭಿವೃದ್ದಿ ನೋಡಿ ಎಂದೋ….ʼ ಇವೆಲ್ಲ ಅವರವರ
ಗ್ರಹಿಕೆಗಳಿಗೆ ತಕ್ಕಂತೆ ಅರ್ಥೈಸಿಕೊಳ್ಳಬಹುದೇನೋ. ಆದರೆ ಆ ಹಳ್ಳಿಗಾಡಿನ ಜನರ ಬದುಕನ್ನು ನೇರವಾಗಿ
ನೋಡಿದವರಿಗೆ ಮಾತ್ರ ಇವರುಗಳೆಲ್ಲಾ ಸೇರಿಕೊಂಡು ಈ ಭಾಗದ ಜನಸಾಮಾನ್ಯರನ್ನು ಘೋರವಾಗಿ ವಂಚಿಸುತ್ತಾ
ಬಂದಿದ್ದಾರೆ ಎಂಬುದು ಸ್ಪಷ್ಟವಾಗಿ ಅರ್ಥವಾಗಿ ಬಿಡುತ್ತದೆ.
ಇದು ಕೇವಲ ಈ ಒಂದು ಹಳ್ಳಿಗಷ್ಟೇ ಸೀಮಿತವಾದ
ವಿಚಾರವಲ್ಲ ಈ ಶಿವಮೊಗ್ಗ ಜಿಲ್ಲೆಯ ಈ ಭಾಗದ ಹಾಗೂ
ಉತ್ತರಕನ್ನಡ ಜಿಲ್ಲೆಯ ಹಲವು ಹಳ್ಳಿಗಳ ಕತೆಗಳು ಹಾಗೂ ಪರಿಸ್ಥಿತಿಗಳು ಇದೇ ರೀತಿಯಲ್ಲಿವೆ. ಅಲ್ಪ ಸ್ವಲ್ಪ
ವ್ಯತ್ಯಾಸಗಳು ಕಾಣಬಹುದಷ್ಟೇ. ಈ ಎಲ್ಲಾ ಹಳ್ಳಿಗಳಿರುವ ಭಾಗಗಳು ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು
ನೀಡುತ್ತಿರುವ ಪ್ರದೇಶಗಳಾಗಿವೆ ಎನ್ನುವುದನ್ನಿಲ್ಲಿ ಗಮನಿಸಬೇಕು.
ಕರ್ನಾಟಕದ ಪ್ರವಾಸಿಗರು ಜೋಗ ಜಲಪಾತ ನೋಡಲು
ಇಲ್ಲಿಗೆ ಭೇಟಿಕೊಡುವಾಗ ಕಡ್ಡಾಯವಾಗಿ ಈ ಭಾಗದ ಇಂತಹ ಹಳ್ಳಿಗಳಲ್ಲಿ ಒಂದನ್ನಾದರೂ ಭೇಟಿ ಮಾಡಿ ಅಲ್ಲಿನ
ಜನಸಾಮಾನ್ಯರನ್ನು ಮಾತನಾಡಿಸಿ ಬರುವಂತಹ ಕನಿಷ್ಟ ಕಾಳಜಿ ಹಾಗೂ ಕರ್ತವ್ಯವನ್ನು ಪಾಲಿಸಬೇಕು. ಪ್ರವಾಸವೆಂದರೆ
ಕೇವಲ ರಮ್ಯ ತಾಣಗಳನ್ನು ನೋಡಿ ಸವಿದು ಹೋಗುವುದು ಮಾತ್ರವಲ್ಲ. ಅಂತಹ ತಾಣಗಳ ಸುತ್ತಮುತ್ತಲಿನ ಜನರು,
ಅವರ ಹಳ್ಳಿಗಳು, ಅವರ ಬದುಕು, ಅಲ್ಲಿನ ಪ್ರಕೃತಿ ವಿಶೇಶ ಮೊದಲಾದವುಗಳನ್ನು ಅರಿಯುವುದು ಎಂಬುದೇ ನೈಜಪ್ರವಾಸಿಯೊಬ್ಬರ
ಸರಿಯಾದ ದೃಷ್ಟಿಕೋನವಾಗುತ್ತದೆ. ಪ್ರವಾಸವನ್ನು ಈ ರೀತಿಯಲ್ಲಿ ಅರ್ಥೈಸಿ ಅದರಂತೆ ಪಾಲಿಸಿದರೆ ಪ್ರವಾಸ
ಎನ್ನುವುದು ಅರಿವಿನ ಗಣಿಯನ್ನೇ ತೆರೆಯುತ್ತದೆ ಹೃದಯದ ವಿಶಾಲತೆಯನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ
ಪ್ರವಾಸ ಎಂಬುದು ಮೋಜಿನ ಲಹರಿಯಲ್ಲಿ ನೈಜ ವಿಚಾರ ತಿಳಿಯದೇ ಅರಿವಿನಿಂದ ವಂಚಿತರಾಗುವಂತೆ ಮಾಡುತ್ತದೆ.
ಸಾಮಾನ್ಯವಾಗಿ ಪ್ರವಾಸದ ಹೆಸರಿನಲ್ಲಿ ಇದೇ ಆಗುತ್ತಿರುವುದು. ಇಂತಹ ದೃಷ್ಟಿಕೋನಗಳನ್ನೇ ಸಾಮಾನ್ಯವಾಗಿ
ಕಲಿಸುತ್ತಿರುವುದು.
ಕೆಲವು ವರುಷಗಳ ಹಿಂದೆ ಈ ಹಳ್ಳಿಗಾಡುಗಳಿರುವ
ಪ್ರದೇಶವನ್ನು ಖಾಸಗಿ ಕಂಪನಿಯೊಂದಕ್ಕೆ ಜೋಗ ಜಲಪಾತದ ಅಭಿವೃದ್ಧಿಯ ಹೆಸರಿನಲ್ಲಿ ಪರಭಾರೆ ಮಾಡಲು ಸರ್ಕಾರಿ
ವ್ಯವಸ್ಥೆ ಹೊರಟಿತ್ತು. ಚೆಕ್ ಡ್ಯಾಮ್ ನಿರ್ಮಿಸಿ ಈ ಪ್ರದೇಶವನ್ನು ಮುಳುಗಡೆ ಮಾಡಿ ನೂರಾರು ವರುಷಗಳಿಂದ
ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನರನ್ನು ಒಕ್ಕಲೆಬ್ಬಿಸಿ ನಿರ್ವಸಿತರನ್ನಾಗಿ ಮಾಡಿ ಕಾರ್ಪೋರೇಟುಗಳಿಗೆ
ಭಾರಿ ಲಾಭ ಮಾಡಿಕೊಡುವ ಕುತಂತ್ರ ಅದಾಗಿತ್ತು. ಜೋಗ ಜಲಪಾತ ವರುಷವಿಡೀ ತುಂಬಿತುಳುಕುವಂತೆ ಮಾಡುವ ಭಾರಿ
ಪ್ರವಾಸೋದ್ದಿಮೆ ಅಭಿವೃದ್ದಿ ಯೋಜನೆ ಎಂದೆಲ್ಲಾ ಅದನ್ನು ಬಿಂಬಿಸಲಾಗಿತ್ತು. ಈ ಭಾಗದ ಜನಸಾಮಾನ್ಯರು
ಹಾಗೂ ಪ್ರಕೃತಿಯ ನಾಶಕ್ಕೆ ಕಾರಣವಾಗಬಹುದಾಗಿದ್ದ ಆ ಯೋಜನೆಗೆ ಜನರ ವಿರೋಧ ತೀವ್ರವಾಗಿದ್ದರಿಂದ ಅದು
ಜಾರಿಯಾಗಿರಲಿಲ್ಲ. ಈ ಭಾಗದವರೇ ಆಗಿದ್ದ ಕನ್ನಡದ ಸಾಹಿತಿ, ಕತೆಗಾರ ನಾ ಡಿಸೋಜರು ಹೋರಾಟದಲ್ಲಿ ಇಲ್ಲಿನ
ಜನರೊಂದಿಗೆ ನಿಂತಿದ್ದರು. ಅದರಿಂದಾಗಿ ಈ ಭಾಗದ ಹಳ್ಳಿಗಳಷ್ಟೇ ಅಲ್ಲ ಕಾಡು ಹಾಗೂ ಸಾವಿರಾರು ಏಕರೆ
ಕೃಷಿಯೋಗ್ಯ ಭೂಪ್ರದೇಶವೂ ಮುಳುಗಡೆಯಾಗುತ್ತಿತ್ತು. ಅದೂ ಅಲ್ಲದೇ ಹಿಂದೆ ಲಿಂಗನಮಕ್ಕಿ ಆಣೆಕಟ್ಟಿಗಾಗಿ ಕೂಡ ಈ ಭಾಗದಿಂದ
ಭಾರಿ ಪ್ರಮಾಣದಲ್ಲಿ ಕಲ್ಲು ಮಣ್ಣುಗಳನ್ನು ಬಗೆದು ಸಾಗಿಸಲಾಗಿತ್ತು.
ಕಾರ್ಪೋರೇಟುಗಳಿಗೆ ಲಾಭದ ಖಜಾನೆಯನ್ನು ತೆರೆದುಕೊಡುವ
ಯೋಜನೆಗಳ ಜಾರಿಗಾಗಿನ ಉತ್ಸಾಹ ಹಾಗೂ ಮುತುವರ್ಜಿ ಜಾನಸಾಮಾನ್ಯರ ವಿಚಾರದಲ್ಲಿ ತೋರದಿರುವವರೇ ನಮ್ಮ
ಅಧಿಕಾರ ರಾಜಕಾರಣದಲ್ಲಿರುವವರಲ್ಲಿ ಹೆಚ್ಚಿನವರಾಗಿದ್ದಾರೆ. ಇದು ನಮ್ಮ ಚುನಾವಣಾ ರಾಜಕಾರಣದ ಪ್ರಧಾನ
ಭಾಗವಾಗಿರುವುದು ನಾಡಿನ ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದಕ್ಕೆ ಪಕ್ಷಗಳ ಬೇಧಗಳೂ ಇಲ್ಲವಲ್ಲ.
ಕರ್ನಾಟಕ ಸರ್ಕಾರ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಆಡಳಿತಾಂಗ ಇನ್ನಾದರೂ ತಮ್ಮ ಇರುವಿಕೆಯನ್ನು
ಈ ಭಾಗದ ಜನರ ಬದುಕಿಗೆ ಪೂರಕವಾಗಿ ತೋರಿಸುತ್ತಾರೋ.. ಕಾದುನೋಡಬೇಕಾಗಿದೆ. ಜನರು ಸಂಘಟಿತರಾಗಿ ಇದಕ್ಕಾಗಿ
ಶ್ರಮಿಸಬೇಕಾದ ಅಗತ್ಯವೂ ಇದೆ. ನಾಡಿನ ಜನರ ಒತ್ತಾಸೆಯೂ ಬೇಕಿದೆ.
೨೨/೧೨/೨೦೨೫
Comments
Post a Comment