Skip to main content

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

 

ʼರಾಗಿ ತೆನೆʼ

ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ

ಒಂದು ಗಾಢ ಜೀವಿತಾನುಭವ ಕಥನ

  


“ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ….

ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ.

ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿಕೊಂಡವರಿಗೂ ಮದುವೆಯಾಯಿತೆಂದೇ ಕಟ್ಟಳೆ……. ಹೀಗೆ ಮುಟ್ಟಿಸಿಕೊಂಡ ಹುಡುಗಿಯನ್ನು ಇನ್ನಾರೂ ಲಗ್ನವಾಗುವಂತಿಲ್ಲ…

ಅವ್ವನಿಗೆ ನಮ್ಮಪ್ಪನನ್ನು ಮದುವೆಯಾಗಲು ಇಚ್ಚೆ ಇರಲಿಲ್ಲವಂತೆ. ಈ ಕುರಿತು ಎರಡೂ ಮನೆಯವರು ಕೇಳಿದಾಗ ಇವಳು ನಾನೊಲ್ಲೆ ಎಂದಿದ್ದಳಂತೆ ನಮ್ಮ ತಂದೆಯ ತಂದೆ ಇದರಿಂದ ವ್ಯಗ್ರರಾಗಿ ಮುಟ್ಟುವ ತಂತ್ರಗಾರಿಕೆಯನ್ನು ಅಪ್ಪನಿಗೆ ತಂತ್ರಿಸಿದ.  ಅಪ್ಪ ಸಂಚು ಹೂಡಿ ಈ ಕೈಂಕರ್ಯದಲ್ಲಿ ತೊಡಗಿ ಒಲ್ಲದ ಹೆಣ್ಣನ್ನು ಹೆಂಡತಿಯನ್ನಾಗಿ ಮಾಡಿಕೊಂಡ. ಅಲ್ಲಿಗೆ ಇನ್ನೂ ಆಟವಾಡಿಕೊಂಡಿರಬಹುದಾಗಿದ್ದ ಅವ್ವನ ಬಾಲ್ಯ ಅವಸಾನವಾಯಿತು.. ಮುಂದೆ ಅವ್ವ ಅಜ್ಜನ ಮನೆ ಸೇರಿದ್ದು ಹಲವು ಹುಲಿಗಳ ನಡುವೆ ಸಿಕ್ಕ  ಹುಲ್ಲೆಯಂತೆ ಮತ್ತೊಂದು ವ್ಯಸನಾಂಬುಧಿಗೆ ಇಳಿದಂತಾಯಿತು…..

          ಅವ್ವ ಗಂಡನ ಮನೆಗೆ ಬಂದಾಗ ಅತ್ತೆ ಮಾವ, ಮಾವನ ಚಿಕ್ಕಮ್ಮ, ಅತ್ತೆಯ ಅಮ್ಮ, ಗಂಡ, ಗಂಡನ ಒಬ್ಬಳು ತಂಗಿ, ಇಬ್ಬರು ತಮ್ಮಂದಿರು, ಒಟ್ಟು ಒಂಬತ್ತು ಮಂದಿ ಜನ ನೂರು ಆಡು, ಮೂವ್ವತ್ತು ರಾಸು ದನ, ನಮ್ಮ ಹಟ್ಟಿಗೂ ಕುಡಿಯುವ ನೀರಿನ ಬಾವಿಗೂ ಒಂದು ಮೈಲು. ಗುಡ್ಡ ಇಳಿದು ಬಾವಿಯಲ್ಲಿ ನೀರು ಸೇದಿಕೊಂಡು ಎರಡು ಗಡಿಗೆ ಹೊತ್ತು ತಿಟ್ಹತ್ತಿ ತಿರುಗಿ ಬರಬೇಕಿತ್ತು…. ಮನೆಮಂದಿಯ  ಶೌಚ, ಆಚಮನ, ಅಡುಗೆಗಳಿಗೆ, ಬೇಕಾಗುವಷ್ಟು ನೀರನ್ನು ಅವ್ವನೇ ಸೇದಿಕೊಂಡು ಹೊತ್ತು ತರಬೇಕಿತ್ತು. ಅವಳು ಈ ಕಾಯಕದಲ್ಲಿ ತೊಡಗಿದ್ದಾಗ ಒಮ್ಮೆ ಹೀಗಾಯಿತು.  ತಲೆಯ ಮೇಲೊಂದು ಬಗಲಲ್ಲೊಂದು ಗಡಿಗೆ ಹೊತ್ತು ಬರುವಾಗ ಕೈಜಾರಿ ಗಡಿಗೆಯೊಂದು ಒಡೆದುಹೋಯಿತು. ಬೆದರಿ ಹಾದಿಯಲ್ಲಿಯೇ ಅಳುತ್ತಾ ಕುಳಿತಳು. ಈ ಸುದ್ದಿಯನ್ನು ನೀರಿಗೆ ಬಂದ ಇತರೆ ನೀರೆಯರು ನಮ್ಮ ಮನೆಗೆ ಮುಟ್ಟಿಸಿದರು. ನಮ್ಮಜ್ಜ ಈರೇಗೌಡ ಮನೆಯಿಂದ ಬಿದಿರು ಗಣವನ್ನು ಸೆಳೆದುತಂದು ಅವ್ವ ಕೂತು ಅಳುತ್ತಿದ್ದ ಜಾಗದಿಂದ ಮನೆ ಮುಟ್ಟುವವರೆಗೆ ನಾಯಿಗೆಂಬಂತೆ ಬಡಿದುಕೊಂಡು ಕರೆತಂದನಂತೆ. ಅವ್ವನ ಮನದ ಮೇಲೆ ಇದೊಂದು ವಾಸಿಯಾಗದ ವ್ರಣವಾಗಿತ್ತೆಂದು ತೋರುತ್ತದೆ. ಅವಳು ಇದನ್ನು ನಮ್ಮೊಡನೆ ಆಗಾಗ ಹೇಳಿಕೊಂಡು ಬಿಕ್ಕಳಿಸುತ್ತಿದ್ದಳು. ನಾನು ಬಾಲ್ಯದಲ್ಲಿ ಕಂಡಂತೆ ಹಟ್ಟಿಯಲ್ಲಿ ಮದುವೆಯಾದ ಗಂಡುಗಳು ಹೆಂಡತಿಯರನ್ನು ಸಾರ್ವಜನಿಕವಾಗಿ ಹೊಡೆದು ಹಾದಿರಂಪ ಬೀದಿರಂಪ ಮಾಡುವುದು ತಮ್ಮ ಪುರುಷತ್ವದ ಅಭಿವ್ಯಕ್ತಿ ಎಂದು ಭಾವಿಸಿದ್ದರು. ಆದರೆ ನಮ್ಮವ್ವನ ವಿಷಯದಲ್ಲಿ ಇದಿನ್ನೂ ಮಾನಘಾತುಕ. ಇಲ್ಲಿ ಗಂಡನಷ್ಟೇ ಅಲ್ಲ ಮಾವನೂ ಬಡಿಯುವುದು ಅವಳ ಬಾಳಿನ ವಿಶೇಷ.

 ನಮ್ಮ ತಾತ ಅವ್ವನಿಗೆ ಹೊಡೆಯುತ್ತಿದ್ದ ಎಪಿಸೋಡುಗಳಲ್ಲಿ ಸ್ವತಹ ಒಂದಕ್ಕೆ ಸಾಕ್ಷಿಯಾಗಿದ್ದೇನೆ. ನಾಲ್ಕನೇ ಇಯತ್ತೆಯಲ್ಲಿದ್ದೆ ಎಂದು ಕಾಣುತ್ತದೆ; ಅವ್ವ ಬೆಳಗಿನಜಾವದಲ್ಲಿ ಬೀಸುವ ಕಲ್ಲಿನಲ್ಲಿ ಅವರೇ ಕಾಳನ್ನು ಒಡೆದು ಬೇಳೆ ಮಾಡುತ್ತಿತ್ತು. ನಾನು ಅವಳ ಬೆನ್ನಿಗಂಟಿ ಕೊರಳಿಗೆ ಕೈಸುತ್ತಿ ಆಟವಾಡುತ್ತಿದ್ದೆ. ಅಜ್ಜ ಎಲ್ಲಿಂದಲೋ ಬಂದ ಕಾರಣವೇನೆಂದು ಗ್ಯಾಪನವಿಲ್ಲ. ಬಂದವನೇ ಅವ್ವನಿಗೆ ಸುತ್ತಿಕೊಂಡಿದ್ದ ನನ್ನನ್ನು ಎಡಗೈಯಿಂದ ಬದಿಗೆ ಸರಿಸಿ ಅವ್ವನ ಜುಟ್ಟನ್ನು ಅದೇ ಕೈಯಲ್ಲಿ ಸಿಂಬೆ ಸುತ್ತಿಕೊಂಡು ಅವಳ ಬೆನ್ನಿನ ಮೇಲೆ ಹಿಡಿದ. ಸಾಲದೆಂಬಂತೆ ಕೂದಲನ್ನಿಡಿದು ಹೊರಗೆಳೆದು ದನಕ್ಕೆಂಬಂತೆ ಬಡಿದ. ಅವ್ವ ಚೀರಿಕೊಂಡಳು. ಬೆಕ್ಕಿಗೆದರಿ ಬಿಲ ಸೇರುವ ಇಲಿಯೆಂಬಂತೆ ಗೋಡೆಯ ಮೂಲೆಯೊಂದರಲ್ಲಿ ನಾನು ಅಳುತ್ತಾ ಉಚ್ಚೆ ಹುಯ್ದುಕೊಳ್ಳುತ್ತಿದ್ದೆ. ಇದೇ ಸಮಯಕ್ಕೆ ನಮ್ಮವ್ವನ ಗಂಡ ತನ್ನ ಧರ್ಮ ಪತ್ನಿಗೆ ಸಾಕ್ಷಿಯೆಂಬಂತೆ ಹಾದು ಹೋದ. ತುಟಿಗಳೆರಡನ್ನು ಒಲಿದುಕೊಂಡು ಹೋಗಿದ್ದರೂ ಏನನಿಸುತ್ತಿರಲಿಲ್ಲ. ಅವುಗಳಲ್ಲಿ ಕೊಂಕು ನಗೆಯನ್ನು ಬೀರಲೆತ್ನಿಸಿದ್ದ. ಅವ್ವ ಈ ಉಗ್ರಗಾಮಿಗಳ ನಡುವೆ ಬದುಕಿದ್ದಳೆಂಬುದು ಊಹಿಸಿಕೊಳ್ಳುವುದು ಕಷ್ಟ…..”

ಇದು ತಿಮ್ಮಮ್ಮ ಎಂಬ ಬುಡಕಟ್ಟು ಮಹಿಳೆಯೊಬ್ಬರು ಅನುಭವಿಸುತ್ತಾ ಬಂದ ಜೀವಿತ ಕಥನದ ತುಣುಕುಗಳು. ಇವು ಅವರ ಮಗನಾಗಿ ಹುಟ್ಟಿ ಬೆಳೆದು ಈಗ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಜಿ ಎನ್. ದನಂಜಯ ಮೂರ್ತಿ ತಮ್ಮ ಅವ್ವನ ಬಗ್ಗೆ ತಮಗೆ ದಕ್ಕಿದ್ದನ್ನು ಕಟ್ಟಿಕೊಟ್ಟಿರುವ ಪರಿಯ ಒಂದಷ್ಟು ಸಂಗತಿಗಳು. ಈ ಸಂಗತಿಗಳನ್ನು ದನಂಜಯ ಮೂರ್ತಿ ʼರಾಗಿತೆನೆʼ ಎಂಬ ಕೃತಿಯಲ್ಲಿ ಕಟ್ಟಿಕೊಡುತ್ತಾರೆ. ೧೨೪ ಪುಟಗಳ  ಈ ಕೃತಿಯನ್ನು ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿದೆ. ಇದಕ್ಕೆ ಡಾ. ಕಾಳೇಗೌಡ ನಾಗವಾರರು ಬೆನ್ನುಡಿ ಬರೆದಿದ್ದಾರೆ.

ಕೆ. (ಕ್ಯಾತಮಾರನಹಳ್ಳಿ) ಗೊಲ್ಲರ ಹಟ್ಟಿಯ ತಿಮ್ಮಮ್ಮ ಅನಕ್ಷರಸ್ಥೆ. ಆಟವಾಡಿಕೊಂಡಿರಬೇಕಾದ ಕಾಲದಲ್ಲೇ ವಿವಾಹ ಹೇರಿಕೆಯಾಗಿ ಇಷ್ಟವಿಲ್ಲದವರೊಡನೆ ಸಂಸಾರ ಮಾಡಬೇಕಾಗಿ ಬಂದು ಎರಡು ಮಕ್ಕಳನ್ನು ಹಡೆದು ಸಾಕಿ ಬೆಳೆಸಿದ ತಾಯಿ. ಸಾಯುವ ವಯಸ್ಸಲ್ಲದಿದ್ದರೂ ಕ್ಯಾನ್ಸರ್‌ ಮಾರಿಗೆ ತುತ್ತಾಗಿ, ನೋವು ನಿಂದನೆಗಳಿಗೆ ಗುರಿಯಾಗಿ ನರಳುತ್ತಾ ಪ್ರಾಣ ಬಿಡಬೇಕಾದ ಪರಿಸ್ಥಿತಿಗೆ ತಲುಪಿದ ನಮ್ಮೆಲ್ಲರ ಮದ್ಯೆಯ ಮದ್ಯ ವಯಸಿಗೆ ಹತ್ತಿರವಾಗಿದ್ದ ಬಡ ಬುಡಕಟ್ಟು ಹೆಣ್ಣುಮಗಳು.

ತಿಮ್ಮಕ್ಕ ಇಂಡಿಯಾದ ಹಳ್ಳಿಗಾಡಿನ ಬುಡಕಟ್ಟು, ದಲಿತ ದಮನಿತ, ಹಿಂದುಳಿದ ಜನಸಮುದಾಯಗಳ ಬಹುಸಂ‍ಖ್ಯಾತ ಹೆಣ್ಣುಮಕ್ಕಳನ್ನು ಈಗಲೂ ಪ್ರತಿನಿಧಿಸುತ್ತಿದ್ದಾರೆ ಎಂಬುದು ಅರ್ಥೈಸಿ ಗ್ರಹಿಸಬೇಕಾದ ವಿಚಾರ. ಆಕೆ ಅನುಭವಿಸಬೇಕಾಗಿ ಬಂದ ಹೃದಯವಿದ್ರಾವಕ ಜೀವಿತಪಯಣಗಳನ್ನು, ಅವರ ಮಗ ತನ್ನ ಅವ್ವನ ಬಗೆಗಿನ ಭಾವ ತೀವ್ರತೆಗಳೊಂದಿಗೆ ಅನುಭವಿಸಿದ ಹಾಗೂ ವೈಚಾರಿಕ ಮೂಸೆಯಲ್ಲಿ ಹೊರತಂದ ವಿಚಾರಗಳು ಈ ಕೃತಿಯಲ್ಲಿವೆ.

ಈ ಕೃತಿ ಇಂಡಿಯಾದ ಬ್ರಾಹ್ಮಣಶಾಹಿ ಊಳಿಗಮಾನ್ಯತೆ ಹೇಗೆ ಬುಡಕಟ್ಟು ಮೌಲ್ಯಗಳನ್ನು ತಲೆಕೆಳಗು ಮಾಡಿ ತನ್ನ ಹಾದಿಯಲ್ಲಿ ಎಳೆದುಕೊಂಡು ಅದೇ ವೇಳೆಯಲ್ಲೇ ತನ್ನಿಂದ ಹೊರಗೇ ನಿಲ್ಲಿಸಿಕೊಂಡು ಸಾಗಿ ಬಂದಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿ ಬೆಳಕು ಚೆಲ್ಲುತ್ತದೆ. ಬುಡಕಟ್ಟು ಪದ್ದತಿಗಳಲ್ಲಿ ಹೆಣ್ಣು ಮಕ್ಕಳಿಗೆ  ಪ್ರಧಾನ ಇಲ್ಲವೇ ಸಮಾನ ಸ್ಥಾನಗಳಿದ್ದ ಕಾಲವೊಂದಿತ್ತು. ಬುಡಕಟ್ಟು ವ್ಯವಸ್ಥೆಯೊಳಗೆ ವರ್ಗ ಸಮಾಜದ ಬೇರುಗಳು ಬಿಟ್ಟುಕೊಂಡು ಸ್ಥೀರೀಕರಿಸೀಕೊಂಡಾದ ಮೇಲೆ ಬುಡಕಟ್ಟು ವ್ಯವಸ್ಥೆ ಪುರುಷಾಧಿಪತ್ಯದ ಹಿಡಿತದಡಿ ಸಿಲುಕಿತು. ಬುಡಕಟ್ಟಾಗಿಯೂ ಜಾತಿಯಾಗಿಯೂ ಕೆಲವೊಮ್ಮೆ ಎರಡೂ ಆಗಿಯೂ ವರ್ತಿಸುತ್ತಾ ಬರತೊಡಗಿದವು. ಊರಿನಿಂದ ಹೊರಗಿದ್ದರೂ ಬ್ರಾಹ್ಮಣ ಪುರೋಹಿತರು, ಊರಗೌಡರು ಇನ್ನಿತರ ಊರಿನ ನಾಯಕರೆನಿಸಿಕೊಂಡವರು ಹಟ್ಟಿಯ ಕಾರ್ಯಗಳಲ್ಲಿ ಮೇಲುಸ್ತುವಾರಿ ನಡೆಸುವ, ಹಟ್ಟಿಯ ಪುರೋಹಿತಶಾಹಿ ಅವರಿಗೆ ಬೆಂಬಲವಾಗಿ ನಿಲ್ಲುವ, ಊಟಗಳಲ್ಲಿ ಪ್ರತ್ಯೇಕ ಅಡುಗೆ ಮತ್ತು ಪಂಕ್ತಿಬೇದ ಹೇರುವ, ಒಂದೇ ಹಟ್ಟಿ, ಒಂದೇ ಬುಡಕಟ್ಟಾದರೂ ಅದರೊಳಗೆ ಪ್ರತ್ಯೇಕ ಗುಂಪುಗಳಾಗಿಯೂ, ಜಾತಿಗಳಾಗಿಯೂ ವರ್ತಿಸುತ್ತಿರುವ ಪರಿಗಳನ್ನೂ ಇಲ್ಲೂ ಕಾಣಬಹುದು. ದನಂಜಯ ಮೂರ್ತಿ ತಮ್ಮ ಅಮ್ಮನ ಅಕಾಲಿಕ ಧಾರುಣ ಸಾವಿಗೆ ನಡುಗಿ ನುಡಿನಮನಗಳನ್ನು ಈ ಕೃತಿಯ ಮೂಲಕ ಸಲ್ಲಿಸುತ್ತಾ ಇಂತಹ ಕೆಲವು ಊಳಿಗಮಾನ್ಯ ಸಾಮಾಜಿಕ ಬಿಕ್ಕಟ್ಟುಗಳನ್ನು ತಮ್ಮದೇ ಉದಾಹರಣೆಗಳ ಮೂಲಕ ಮುಚ್ಚುಮರೆಯಿಲ್ಲದೇ ನಿರೂಪಿಸಿದ್ದಾರೆ.

ದನಂಜಯ ಮೂರ್ತಿ ತಮ್ಮ ಪದವಿ ಶಿಕ್ಷಣದಲ್ಲಿ ಕನ್ನಡ ಮೇಜರ್‌ ತೆಗೆದುಕೊಂಡು ಆಗ ಅವರು ಮೊದಲು ಕೊಂಡ ತ. ಸು. ಶಾಮ ರಾಯರ ʼಕನ್ನಡ ಸಾಹಿತ್ಯ ಚರಿತ್ರೆʼ ಪುಸ್ತಕವನ್ನು ತೊಂಬತ್ತು ರೂಪಾಯಿ ಕೊಟ್ಟು ಕೊಂಡುಕೊಂಡಾಗ ಅವರವ್ವ ಅವೊತ್ತು ಮಾತ್ರ ʼಅಲ್ಲಾ ಕಣ್ಲಾ ಇಷ್ಟೊಂದು ದುಡ್ಡಿನ ಪುಸ್ತಕ ಯಾಕೆ ತಂದೆ? ನಾನು ಮೂರು ದಿನ ಇದಕ್ಕೋಸ್ಕರ ಕಲ್ಲೊರಬೇಕುʼ ಎಂದು ಬೈದಳು ಎಂದು ದಾಖಲಿಸುತ್ತಾರೆ. ಇವೆಲ್ಲಾ ತನ್ನ ಮಗ ಓದಿ ದೊಡ್ಡ ಸರ್ಕಾರಿ ಅಧಿಕಾರಿಯಾಗಬೇಕೆಂಬ ಅದಮ್ಯ ತುಡಿತದಿಂದ ಮಗನಿಗಾಗಿ ದುಡಿಯುತ್ತಿದ್ದ ಆ ಅವ್ವನ ಬದುಕಿನ ವಾಸ್ತವಗಳನ್ನು ಅಂತಹ ಅವ್ವನ ಮಗನ ಶಿಕ್ಷಣದ ಪಯಣದ ಕಠೋರತೆಗಳನ್ನು ಮುಖಕ್ಕೆ ಹೊಡೆಯುವಂತೆ ಬಿಚ್ಚಿಡುತ್ತದೆ. ಮನುಷ್ಯಸಂವೇದನಾಂಗಗಳನ್ನು ಸರಿಯಾಗಿ ಕೆಲಸ ಮಾಡುತ್ತಿರುವಂತೆ ಇಟ್ಟುಕೊಂಡವರಿಗಂತೂ ಬಹಳ ತೀವ್ರವಾಗಿ ಈ ಕೃತಿಯಲ್ಲಿನ ಇಂತಹ ವಿವರಗಳು ಕಾಡಲೇಬೇಕು.

ಬಹು ಪ್ರಚರಿತ ಸಾಂವಿಧಾನಿಕ ಹಕ್ಕುಗಳು ಇನ್ನೂ ನಮ್ಮ ಹಳ್ಳಿಗಾಡಿನ ಹಟ್ಟಿ ಜನರಿಗಾಗಲೀ ಸಮಾಜದ ತಳಪಾಯದ ಇನ್ನಿತರ ಜನರಿಗಾಗಲೀ ತಲುಪಿಲ್ಲ ಹಾಗೂ ತಲುಪುತ್ತಿಲ್ಲ ಎಂಬ ಕಟುಸತ್ಯಗಳನ್ನು ದನಂಜಯ ಮೂರ್ತಿ ತಮ್ಮದೇ ಹಟ್ಟಿಯ ಅನುಭವಗಳ ಮೂಲಕ ಸಹಜವಾಗಿ ಬಿಚ್ಚಿಡುತ್ತಾರೆ. ಅಲ್ಲಿ ಸಂವಿಧಾನ ಹಕ್ಕುಗಳು ಇತ್ಯಾದಿಗಳ ಉಲ್ಲೇಖಗಳಿಲ್ಲದಿದ್ದರೂ ಗ್ರಹಿಸುವ ಮನಸಿರುವವರು ಗ್ರಹಿಸಬಹುದು.

ಹಟ್ಟಿಯ ಬಗ್ಗೆ ಹೇಳುತ್ತಾ “ಸಮುದಾಯದ ಮುಗ್ಧತೆಯ ಬಗ್ಗೆ ಅಧಯಯನಕಾರರು ಅವರ ಕೆಲವೇ ಆಚರಣೆಗಳನ್ನು ಕಂಡು ಆನಂದ ತುಂದಿಲರಾಗಿ ಏನೇ ವ್ಯಾಖ್ಯಾನಿಸಿರಬಹುದು ಅವು ಕೇವಲ ಮನರಂಜನೆಗೆ ಸಂಬಂಧಿಸಿದ ಸಾಂಸ್ಕೃತಿಕ ಸಂಗತಿಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲಿರುವ ಕೆಲವು ಆಚರಣೆಗಳು ಮನುಷ್ಯರಾದವರು ತಲೆತಗ್ಗಿಸುವಂತಹವು” ಎನ್ನುತ್ತಾರೆ.  ಅಂತಹ ಹಲವು ಉದಾಹರಣೆಗಳ ಸಹಿತವಾದ ವಿವರಣೆಗಳು  ಈ ಕೃತಿಯಲ್ಲಿವೆ.

ಜನಪದ ಇಲ್ಲವೇ ಜಾನಪದದ ಹೆಸರಿನಲ್ಲಿ ಅಲ್ಲಿನ ಎಲ್ಲವೂ ಉನ್ನತ ಮಟ್ಟದವು ಎಂದು ಬಿಂಬಿಸುವ ಚಾಳಿಗಳನ್ನು ರೂಢಿಸಿಕೊಂಡಿರುವ ಅಧ್ಯಯನಕಾರರು ಯೋಚಿಸಬೇಕಾದ ಬಹಳ ಮುಖ್ಯವಾದ ಸಂಗತಿಯಿದು. ವಿಮರ್ಶಾತ್ಮಕವಾಗಿ ಜನಪದ ಇಲ್ಲವೇ ಜಾನಪದ ಅಧ್ಯಯನಗಳನ್ನು ಮಾಡುತ್ತಾ ಕಾಲ ಮತ್ತು ಸಂದರ್ಭಗಳೊಂದಿಗೆ ನೋಡಿ ವಿವೇಚನೆಯಿಂದ ವಿಶ್ಲೇಷಣೆ ನಡೆಸುತ್ತಾ ಅಲ್ಲಿನ ಸಾಮುದಾಯಿಕ ಬದುಕು ಹಾಗೂ ಮನುಷ್ಯ ಮೌಲ್ಯಗಳನ್ನು ಹಿಡಿದಿಡುವ ಹೊತ್ತಿನಲ್ಲೇ ಅಲ್ಲಿರುವ ಮನುಷ್ಯ  ವಿರೋಧಿತನಗಳನ್ನೂ ಗುರುತಿಸಿ ಹಿಡಿದು ಕೊಡಬೇಕಾದ ಜವಾಬ್ಧಾರಿ ಅದ್ಯಯನಕಾರರಿಗಿದೆ ಎಂಬುದನ್ನು ಮರೆಯಬಾರದು.

ಕರ್ನಾಟಕದ ಎಲ್ಲಾ ಗೊಲ್ಲರ ಹಟ್ಟಿಗಳಿಗೆ ಕಾನೂನು ರೀತ್ಯ ಯಾವುದೇ ಚಹರೆಗಳೇ ಇಲ್ಲ. ಅವುಗಳು ಕಂದಾಯ ಗ್ರಾಮಗಳು ಕೂಡ ಅಲ್ಲ ಎಂದು ಹೇಳುತ್ತಾ ಹಟ್ಟಿಗಳನ್ನು ಊರುಗಳು ಹೊರಗಿಟ್ಟಂತೆ ಸರ್ಕಾರಗಳು ಆಡಳಿತಗಳು ಹೇಗೆಲ್ಲಾ ಹತ್ತಾರು ಮನೆಗಳು ನೂರಾರು ಜನರಿರುವ ಹಟ್ಟಿಗಳನ್ನು ಹೊರಗಿಡುತ್ತಾ ಬಂದಿವೆ ಎಂದು ಹೇಳಿಕೊಂಡು ಹೋಗುತ್ತಾರೆ.  ಜನಸಾಮಾನ್ಯರ ಕಾಯಿಲೆಗಳನ್ನು ಭಾರಿ ಕಾರ್ಪೋರೇಟು ವೈದ್ಯಕೀಯ ಜಾಲದ ಮಾಫಿಯಾ ಹೇಗೆಲ್ಲಾ ಬಳಸಿಕೊಂಡು ರೋಗಿಯನ್ನು ಹಾಗೇನೆ ರೋಗಿಯ ಕುಟುಂಬಗಳನ್ನೂ ಹಿಂಡಿ ಹಿಸುಕಿ ಪ್ರಯೋಗ ಪಶುಗಳನ್ನಾಗಿ ಮಾಡಿ ಬಿಸಾಕುತ್ತವೆ ಎನ್ನುವ ನಾಗರಿಕ ವೇಶದಾರಿಗಳ ಕ್ರೂರತೆಗಳನ್ನು ತೆರೆದಿಡುತ್ತಾರೆ. ಕೊರೋನಾ ನೆಪದಲ್ಲಿ ಹೇರಲ್ಪಟ್ಟ ಸಂಕಷ್ಟಗಳು ಕ್ಯಾನ್ಸರ್‌ ಪೀಡಿತ ತಿಮ್ಮಮ್ಮನನ್ನು ಹೇಗೆಲ್ಲಾ ಘಾಸಿಗೊಳಿಸಿ ಅವರನ್ನು ಸಾವಿನ ಹತ್ತಿರಕ್ಕೆ ದೂಡುತ್ತಾ ಹೋಯಿತು ಎಂಬ ಅನುಭವಜನಿತ ಕಠೋರ ವಿವರಗಳು ಇದರಲ್ಲಿವೆ.

ಅಪ್ಪ ಎಂಬ ಕುಟುಂಬದಲ್ಲಿನ ಪುರುಷಾಧಿಪತ್ಯದ ವಾರಸುದಾರನ ಬಗ್ಗೆ ಹೇಳುತ್ತಾರೆ. ಹೇಗೆಲ್ಲಾ ತಮ್ಮ ತಾಯಿ ಹಾಗೂ ಕುಟುಂಬ ಸದಸ್ಯರನ್ನು ಪೀಡನೆಗೆ ಒಳಪಡಿಸಿದ್ದನ್ನು ಉದಾಹರಣೆಗಳ ಮೂಲಕ ಬಿಡಿಸಿಡುತ್ತಾರೆ. ದರ್ಪ, ಸ್ವಾರ್ಥ, , ದಮನ, ದೌರ್ಜನ್ಯ , ಮಹಿಳಾ ವಿರೋಧಿ ವಿಕೃತತೆಗಳ ಮೂರ್ತರೂಪ ಈ ಅಪ್ಪನಾಗಿದ್ದ.

ಕೊನೆಗೆ ʼಅಪ್ಪನದು ವ್ಯಾಖ್ಯಾನಕ್ಕೆ ಸಿಗದ ವ್ಯಕ್ತಿತ್ವ ಈಗ ಆತನ ಬಳಿ ಕುಳಿತು ನೋಡಿದರೆ ಅವನ ಅನಂತ ಮುಖಗಳ ಬದಲಿಗೆ ಬೆನ್ನು ಬಾಗಿಯೂ ಕಾಯಕದಲ್ಲಿ ಕಳೆದುಹೋಗಿರುವ ಯೋಗಿʼ ಯ ರೀತಿಯಲ್ಲಿ ಕಾಣುತ್ತಾರೆ.

ಅವ್ವನನ್ನು ಕೊನೆಗಾಲದಲ್ಲಿ ಉಪಚರಿಸಿಕೊಂಡು ಬಂದ ತಮ್ಮ ತಂಗಿಯ ಬದುಕು ತನ್ನ ಅವ್ವನ ಬದುಕಿನ ಮುಂದುವರಿಕೆಯಾಗಿ  ಕಂಡು ವ್ಯಥೆಪಡುವ ಸರದಿ ಈಗ ಮತ್ತೆ ಅಣ್ಣನಾದ ದನಂಜಯ ಮೂರ್ತಿಯದಾಗಿದೆ. ತಂಗಿಯ ವೈವಾಹಿಕ ಬದುಕು ಮುರುಟಿಬಿದ್ದಿದೆ.

ದನಂಜಯ ಮೂರ್ತಿ ತಮ್ಮ ಬಾಳಸಂಗಾತಿ ಪದ್ಮ ಮತ್ತು ಅವ್ವನ ಸಂಬಂಧಗಳ ಬಗ್ಗೆ ಹೇಳುತ್ತಾರೆ.  ಮೊದಲೆಲ್ಲಾ ಕಿರಿಕಿರಿಯಾಗಿದ್ದ ಅತ್ತೆ ಸೊಸೆ ಸಂಬಂಧಗಳು ಮಾಗಿ ಹೇಗೆ ತಮ್ಮ ಬಾಳ ಸಂಗಾತಿ ಯಾವುದೇ ಹಿಂಜರಿಕೆಯಿಲ್ಲದೇ ತನ್ನ ಅತ್ತೆಯ ಕಡು ವಾಸನಾಪೂರಿತ ಕ್ಯಾನ್ಸರ್‌ ವ್ರಣಗಳನ್ನು ಶುಚಿಗೊಳಿಸಿ ಉಪಚರಿಸುತ್ತಾ ನೋಡಿಕೊಳ್ಳುವ ನೈಜ ಮಾನವೀಯ ಅಂತಃಕರಣದ ಸಂಬಂಧವಾಗಿ ಬೆಳೆಸಿಕೊಂಡಿದ್ದನ್ನು ದಾಖಲಿಸಿದ್ದಾರೆ. ಇವೆಲ್ಲಾ ಸುಲಭದ ವಿಚಾರಗಳಲ್ಲ. ಇದಕ್ಕೆ ಆ ಮಟ್ಟದಲ್ಲಿ ಮನುಷ್ಯ ಪ್ರೀತಿ ಹಾಗೂ ನೈಜ ಕಾಳಜಿಯ ಮೌಲ್ಯಗಳನ್ನು ಅಂತರ್ಗತ ಮಾಡಿಕೊಳ್ಳಬೇಕಾಗುತ್ತದೆ.

          ʼರಾಗಿತೆನೆʼ ಎಂಬ ಈ ಕೃತಿ ತನ್ನವ್ವ ತಿಮ್ಮಮ್ಮನ ಧಾರುಣ ಅಗಲಿಕೆಯ ನೋವು ವ್ಯಥೆ ಮತ್ತು ರೋದನೆಯ ಮೂಲವಾಗಿ ಹೊರಬಂದಿದ್ದರೂ ಇದು ಕೇವಲ ರೋಧನೆ ಮಾತ್ರವಲ್ಲ. ನಮ್ಮ ದೇಶದ ತಳಪಾಯದ ಜನಸಮುದಾಯಗಳ ಅದರಲ್ಲೂ ಮಹಿಳೆಯರ ಜೀವನ ಪರಿಸ್ಥಿತಿಗಳಿಗೆ ಒಂದು ಕೈಗನ್ನಡಿಯಾಗಿ ದನಂಜಯ ಮೂರ್ತಿ ಕನ್ನಡಿಗರಿಗೆ ನೀಡಿದ್ದಾರೆ.

ಈ ಕೃತಿ ಸಾಹಿತ್ಯಿಕ ವಿಮರ್ಶೆಗೆ ಒಳಪಡುವಂತಹುದಲ್ಲ. ಹಾಗೇ ಮಾಡಹೋದರೆ ಈ ಸಂದರ್ಭದಲ್ಲಿ ಅದು ಕ್ರೂರವಾಗಬಹುದು. ಯಾಕೆಂದರೆ ಈ ಕೃತಿ ತನ್ನವ್ವನನ್ನು ಧಾರುಣವಾಗಿ ಕಳೆದುಕೊಂಡ ವಿದ್ಯಾವಂತ ಮಗನೊಬ್ಬನ ಭಾವತೀವ್ರ ವೈಚಾರಿಕ ಹೃದಯಸ್ಪರ್ಶಿ ಸ್ಪಂದನೆಯಾಗಿದೆ. ಅಲ್ಲಿ ವಿಮರ್ಶೆಗೆ ಅನುವಿಲ್ಲ.

ಹಾಗಂತ ಈ ಕೃತಿ ಸಾಹಿತ್ಯಿಕವಾಗಿ ಇಲ್ಲವೆಂದಲ್ಲ. ಇದು ಕನ್ನಡದಲ್ಲಿ ಬಂದಿರುವ ತಳಪಾಯದ ಸಮುದಾಯಗಳ ಅನುಭವ ಕಥನಗಳ ಸಾಲಿನಲ್ಲಿ ಒಂದು ಪ್ರಮುಖ ಗಾಢ ಕೃತಿಯಾಗಿ ನಿಲ್ಲುತ್ತದೆ. ಇದಕ್ಕಾಗಿ ದನಂಜಯ ಮೂರ್ತಿಗೆ ಅಭಿನಂಧನೇನೋ ಮತ್ತೇನೋ ಹೇಳಿದರೂ ಅದು ಕ್ಲೀಷೆಯಾಗಿಬಿಡುತ್ತದೆ.

 ಈ ಮೌಲಿಕ ಕೃತಿಯನ್ನು ಪ್ರಕಟಿಸಿದ ಅಹರ್ನಿಶಿ ಪ್ರಕಾಶನ ಅಭಿನಂದನಾರ್ಹ.

 

ಆಸಕ್ತರು ಈ ಕೃತಿಗಾಗಿ ಕೆಳಗಿನ ವಿಳಾಸವನ್ನುಸಂಪರ್ಕಿಸಬಹುದು

ಅಹರ್ನಿಶಿ ಪ್ರಕಾಶನ

ಜ್ಞಾನ ವಿಹಾರ ಬಡಾವಣೆ

ಕಂಟ್ರಿ ಕ್ಲಬ್‌ ಎದುರು, ವಿದ್ಯಾನಗರ , ಶಿವಮೊಗ್ಗ 577203

ಮೊ: 9449174662,  8861100584

 

                                                                     



                                                                     

೧೫/೦೨/೨೦೨೬                                               -ನಂದಕುಮಾರ್‌ ಕುಂಬ್ರಿ ಉಬ್ಬು

                                                  Email: nandakumarnandana67@gmail.com

 

 

 

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...