Skip to main content

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

 

ಜನಪರ ಸಮಾಜೋರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.

 

ಎಂ ಎನ್ ಸುಂದರ್ ರಾಜ್

 ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.  ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.

ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು

 

ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.

 

ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ ಮೈಲಿಗಲ್ಲಾಗಿದೆ. ಅಲ್ಲಿ ಸಿಡಿದ ಶರಣ ಚಳವಳಿ ಕ್ರೂರ ಬ್ರಾಹ್ಮಣಶಾಹಿ ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆಗೆ ಬಲು ದೊಡ್ಡ ಹೊಡೆತವನ್ನು ಹನ್ನೆರಡನೇ ಶತಮಾನದಲ್ಲಿಯೇ ನೀಡಿತ್ತು. ಬ್ರಾಹ್ಮಣಶಾಹಿ ಊಳಿಗಮಾನ್ಯ ವಿರೋಧಿ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ನಾಡಿನಾದ್ಯಂತ ಹರಡಿತ್ತು.

 

ಅಂತಹ  ಶರಣ ಚಳವಳಿಯ ನಾಡಿನ ಕಮ್ಯೂನಿಸ್ಟ್ ಸಮಾಜವಾದಿ ಹಿರಿಯ ನೇತಾರರಲ್ಲಿ ಒಬ್ಬರಾಗಿದ್ದ ಬೀದರದ ಎಮ್ ಎನ್ ಸುಂದರ್ ರಾಜ್ ಕಳೆದ ತಿಂಗಳು ಫೆಬ್ರವರಿ 14 ರಂದು ತಮ್ಮ ಸಾರ್ಥಕ ಜೀವನ ಯಾತ್ರೆ ಮುಗಿಸಿದ್ದಾರೆ. ಸುಂದರ್ ರಾಜ್ ಕರ್ನಾಟಕದ ಹಲವಾರು ಭಾಗದ ಹೋರಾಟದಲ್ಲಿದ್ದ ಜನತೆಗೆ ಚಿರಪರಿಚಿತರಾಗಿದ್ದವರು.

 

ಆರಂಭದಲ್ಲಿ ಸಿ ಪಿ ಐ ಪಕ್ಷ ನಂತರ ಸಿ ಪಿ ಐ( ಎಂ)ನಲ್ಲಿ ತೊಡಗಿಸಿಕೊಂಡಿದ್ದ ಅವರು ನಂತರ ರೈತಕೂಲಿಗಳ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದವರು. ಸಿಪಿಐ ಹಾಗೂ ಸಿಪಿಐ( ಎಂ) ನ ರಾಜಕೀಯ ಹಾಗೂ ಆಚರಣೆಗಳ ಕುರಿತು ತೀವ್ರವಾದ ವಿಮರ್ಶೆಗಳು ಅವರಲ್ಲಿ ಮೂಡಿದವು.

 

ಕೊನೆಗೆ ಸಮಾಜದ ಅಮೂಲಾಗ್ರ ಬದಲಾವಣೆಯ ಕ್ರಾಂತಿಕಾರಿ ರಾಜಕೀಯದೊಂದಿಗೆ ದೃಢವಾಗಿ ನಿಂತು ತಮ್ಮ ಕೊನೆಯ ಕಾಲದವರೆಗೂ ಹಾಗೇನೇ ಇದ್ದವರು. ಯಾವತ್ತೂ ವೈಯಕ್ತಿಕ ಸ್ವಾರ್ಥ, ದುರಾಸೆ, ಪದವಿ ಪ್ರಚಾರಗಳಿಗಾಗಿ ಹಂಬಲಿಸಿದವರಲ್ಲ. ತಾನು ಮಾಡುತ್ತಿದ್ದ ಸಾಮಾಜಿಕ ಕಾರ್ಯ ತಮ್ಮ ಕರ್ತವ್ಯವೆಂದು ಭಾವಿಸಿದ್ದವರು. ತಮ್ಮ ಬದುಕಿನ ಪ್ರಧಾನ ಭಾಗವನ್ನು ಜನಸಾಮಾನ್ಯರಿಗಾಗಿ ಅದರಲ್ಲೂ ದಲಿತ ದಮನಿತರ ಆದಿವಾಸಿ ಇನ್ನಿತರ ಜನಸಾಮಾನ್ಯರ ಬದುಕುಗಳ ಏಳಿಗೆಗಾಗಿ ನೀಡಿದವರು ಸುಂದರ್ ರಾಜ್. ಇದಕ್ಕೆ ಅವರ ಅಣ್ಣ ಮಾಣಿಕ್ ರಾವ್ ರ ಪ್ರಭಾವ ಕಾರಣವಾಗಿತ್ತು.

 

ಬೀದರಿನ ಔರಾದ ತಾಲೂಕಿನಲ್ಲಿ ಸಿಡಿದ ರೈತಕೂಲಿ ಹೋರಾಟದ ಮುಂಚೂಣಿಯಲ್ಗಿ ಒಬ್ಬರಾಗಿ ನಿಂತಿದ್ದ ಕಾಮ್ರೇಡ್ ಸುಂದರ ರಾಜ್ ನೂರಾರು ಏಕರೆ ಭೂಮಿಯನ್ನು ರೈತಕೂಲಿಗಳು ತಮ್ಮ ಹಕ್ಕಾಗಿ ಪಡೆಯಲು ಕಾರಣ ಕರ್ತರಲ್ಲಿ ಒಬ್ಬರಾಗಿದ್ದರು.

 

ಬೀದರಿನಲ್ಲಿ ನಡೆದ ಊಳಿಗಮಾನ್ಯ ವಿರೋಧಿ ಹೋರಾಟದಲ್ಲಿ ಸಕ್ರಿಯರಾಗಿ ನಿಂತಿದ್ದರವರು. ಕರ್ನಾಟಕ ರೈತ ಕೂಲಿ ಸಂಘದ ರಾಜ್ಯಾದ್ಯಕ್ಷರಾಗಿ ತೊಡಗಿಸಿಕೊಂಡಿದ್ದರು.

 

1989ರಲ್ಲಿ ಬೀದರಿನಲ್ಲಿ ನಡೆದ ಹತ್ತು ಸಾವಿರದಷ್ಟು ರೈತಕೂಲಿಗಳು ಇನ್ನಿತರರು ಅಣಿನೆರೆದ ರೈತಕೂಲಿ ಸಮ್ಮೇಳನದ ಯಶಸ್ಸಿನ ರೂವಾರಿಗಳಲ್ಲಿ ಒಬ್ಬರಾಗಿ ದುಡಿದವರು ಕಾ. ಸುಂದರ್ ರಾಜ್. ಆ ಸಮ್ಮೇಳನ ಉತ್ತರ ಕರ್ನಾಟಕದ ಭಾಗದಲ್ಲಿ ಭಾರಿ ಸಂಚಲನವನ್ನು ಉಂಟು ಮಾಡಿತ್ತು. ಕ್ರಾಂತಿಕಾರಿ ರಾಜಕೀಯವನ್ನು ಜನರ ಮದ್ಯೆ ತೆಗೆದುಕೊಂಡು ಹೋಗಿತ್ತು. ಎಡಚಿಂತನೆ ಹಾಗೂ ಎಡಪಕ್ಷಗಳೆಂದರೆ ಸಿಪಿಐ ಇಲ್ಲವೇ ಸಿಪಿಐ(ಎಂ) ನಂತಹ ಚುನಾವಣಾ ಕಾರ್ಯಕಲಾಪಗಳು ಮಾತ್ರ ಎಂದೇ ತಿಳಿದು ಕೊಂಡಿದ್ದ ಬಹುತೇಕರಿಗೆ  ಜನರ ಬದುಕಿನ ಆಮೂಲಾಗ್ರ ಬದಲಾವಣೆಗಾಗಿನ ನೈಜ ಪರ್ಯಾಯ ಜನಪರ ರಾಜಕೀಯ ಕಾರ್ಯಕಲಾಪಗಳನ್ನು ಪರಿಚಯಿಸಿತ್ತು.

 

ಬೀದರಿನ ಕೊಳಾರದಲ್ಲಿ ಬಹುರಾಷ್ಟ್ರೀಯ ಭಾರಿ ಕಾರ್ಪೊರೇಟ್ ಕೂಟಕ್ಕೆ ಅನುಕೂಲ ಕಲ್ಪಿಸಲು ಸ್ಥಾಪಿಸಿದ ಭಯಂಕರ ವಿಷಕಾರಿ ಬಲ್ಕ್ ಡ್ರಗ್ ಕಂಪನಿಗಳನ್ನು ಸ್ಥಾಪಿಸಲಾಗಿತ್ತು. ಈ ಕಂಪನಿಗಳು ಪರಿಸರ ಇನ್ನಿತರ ಕಾನೂನುಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಾ ಸಾಗಿದ್ದವು. ಇವುಗಳು ಮಾಡುತ್ತಿದ್ದ ಮನುಷ್ಯ, ಪರಿಸರ ಹಾಗೂ ಪಶು ಪಕ್ಷಿಗಳ ಮೇಲಿನ ಹಾನಿಗಳ ವಿರುದ್ದ ಸಿಡಿದ ಭಾರಿ ಹೋರಾಟದಲ್ಲಿ ಸಕ್ರಿಯರಾಗಿ ಸುಂದರ್ ರಾಜ್ ಕೂಡ ತೊಡಗಿಸಿಕೊಂಡಿದ್ದರು.

 

ರಾಯಚೂರಿನಲ್ಲಿ ನಡಯುತ್ತಿದ್ದ ರೈತಕೂಲಿ ಹೋರಾಟಗಳಲ್ಲೂ ಸಕ್ರಿಯರಾಗಿದ್ದವರು ಸುಂದರ್ ರಾಜ್. ನಾಡಿನ ಹಲವಾರು ಸತ್ಯ ಶೋಧನಾ ತಂಡದಲ್ಲಿ ಸಕ್ರಿಯರಾಗಿ ತೊಡಗಿದ ಅವರು ಸಮಾಜದ ದೊಡ್ಡ ಆಸ್ತಿವಂತರು, ಸರ್ಕಾರ ಹಾಗೂ ಪೋಲಿಸ್ ವ್ಯವಸ್ಥೆ ಜನಸಾಮಾನ್ಯರ ಮೇಲೆ ನಡೆಸುತ್ತಿದ್ದ ಹಲವಾರು ಶೋಷಣೆ ದೌರ್ಜನ್ಯಗಳನ್ನು ನಾಡಿನ ಪ್ರಜ್ಞಾವಂತ ಜನರಿಗೆ ಅರ್ಥ ಮಾಡಿಸಲು ದುಡಿದವರಾಗಿದ್ದರು.


         ಅಲ್ಲದೇ  ತಮಗೆ ಸಾಧ್ಯವಾಗುವ ಹಲವಾರು ಅನುಕೂಲಗಳನ್ನು ಪಕ್ಷಬೇದ ಮರೆತು ನೂರಾರು ಜನರಿಗೆ ಮಾಡಿಕೊಡುತ್ತಾ ಬಂದಿದ್ದರು. ಜಾತೀಯ, ಕೋಮುವಾದಿ ಹಿಂಸೆಗಳ ವಿರುದ್ದ ಹೋರಾಡುತ್ತಾ ನಿಂತಿದ್ದವರು ಕಾಮ್ರೇಡ್ ಸುಂದರ್ ರಾಜ್. ಅವರು ಬೀದರಿನಲ್ಲಿ ಕಾಮ್ರೇಡ್ ಸುಂದರ್ ರಾಜ್ ಎಂದೇ ಗುರುತಿಸಲ್ಪಟ್ಟಿದ್ದರು. ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಕಾರಿಡಾರಿನ ಹೆಸರಿನ ರೈತಾಪಿಗಳು ಹಾಗೂ ನಾಡಿನ ಲೂಟಿಯ ಯೋಜನೆಯ ವಿರೋಧಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

 

ಬೀದರಿನಲ್ಲಿ ನಡೆದ ಸಿಖ್ ವಿರೋಧಿ ಹಿಂಸಾಕಾಂಡದ ವಿರುದ್ದ ಜನರೊಂದಿಗೆ ನಿಂತು ಪ್ರತಿಭಟಿಸಿದ್ದರವರು. ಹಾಗೇನೆ ಮುಸ್ಲಿಮ್, ಕ್ರಿಶ್ಚಿಯನ್ ದಲಿತದಮನಿತ ಹಾಗೂ ಮಹಿಳಾ ವಿರುದ್ದದ ಬ್ರಾಹ್ಮಣಶಾಹಿ ಕೋಮುವಾದಿ ದಾಳಿ ಹಾಗೂ ಹಿಂಸಾಕಾಂಡಗಳ ವಿರುದ್ದ ಹೋರಾಡುತ್ತಾ ತಮ್ಮ ಸಾಮಾಜಿಕ ಕಾಳಜಿ, ಕಮ್ಯೂನಿಸ್ಟ್ ಸಮಾಜವಾದಿ ಆಶಯ ಹಾಗೂ ಗುರಿಗಳಿಗೆ ಬದ್ದರಾಗಿಯೇ ಮುಂದುವರೆಯುತ್ತಾ ಬಂದವರಾಗಿದ್ದವರು ಸಂಗಾತಿ ಸುಂದರ್ ರಾಜ್.

 

ಅವರು ಆರಂಭದಲ್ಲಿ ಅಲ್ಪ ಕಾಲ ಶಾಲಾ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಬಕಾರಿ ಇಲಾಖೆಯಲ್ಲಿ ಗುಮಾಸ್ತರಾಗಿ ನಂತರ ಮುಂಬೈನಲ್ಲಿ ಶಾಲಾ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆಗೆಲ್ಲಾ ಅವರು ತಮ್ಮ ಪ್ರತಿಭಟನಾ ಮನೋಭಾವದಲ್ಲೇ ಬೆಳೆದು ಬಂದಿದ್ದರು.

 

ಎಡಪಕ್ಷದ ಅಭ್ಯರ್ಥಿಯಾಗಿ ಬೀದರ ಮುನ್ಸಿಪಲ್ ಕೌನ್ಸಿಲರ್ ಆಗಿ ಆಯ್ಕೆ ಆಗಿ ಕಾರ್ಯ ನಿರ್ವಹಿಸಿದ್ದರು.  ಆಗಲೂ ಅವರು ಜನಸ್ನೇಹಿಯಾಗಿಯೇ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು. ಭ್ರಷ್ಟಾಚಾರ ಹಾಗೂ ಅಕ್ರಮಗಳ ವಿರುದ್ದ ನಿಂತಿದ್ದರು.

 

ರಾಜ್ಯದ ಹಲವು ಭೂ ಹೋರಾಟ, ರೈತಕೂಲಿ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರಾಗಿದ್ದರು.

 

ಹಲವಾರು ಅಂತರ್ಜಾತಿ ಹಾಗೂ ಅಂತರ್ ದರ್ಮೀಯ ಮದುವೆಗಳಿಗೆ ಸಾಕ್ಷಿಯಾಗಿದ್ದರು. ಬೀದರ್ ನಗರದಲ್ಲಿ ಭಗತ್ ಸಿಂಗ್ ಟ್ರಸ್ಟ್ ನ ಸಕ್ರಿಯ ಸ್ಥಾಪಕ ಸದಸ್ಯರಾಗಿದ್ದರು. ಅದೇ ರೀತಿಯಲ್ಲಿ ಬೀದರ ನಗರದ ನೌಬಾದಿನಲ್ಲಿ ಸ್ಥಾಪಿಸಲಾಗಿರುವ ಕೆಂಪು ನೀಲಿ ಗ್ರಂಥಾಲಯದ ಸ್ಥಾಪಕರಲ್ಲಿ ಒಬ್ಬರಾಗಿದ್ದರು.
ಸದಾ ದಲಿತ ದಮನಿತಪರವಾಗಿ ತಮ್ಮ ಕೊನೆಗಾಲದವರೆಗೂ ದುಡಿಯವ ಜನರ ಪರವಾದ, ದೇಶ ಹಾಗೂ ಜನರ ರಕ್ಷಣೆಯ ಕುರಿತಾದ ಅಪಾರ ಕಾಳಜಿಗಳನ್ನು ಇಟ್ಟುಕೊಂಡಿದ್ದವರಾಗಿದ್ದರು. ಕೊನೆಯುಸಿರಿನವರೆಗೂ ರಾಜಕೀಯವಾಗಿಯೇ ಪ್ರತಿಯೊಂದನ್ನು ಗ್ರಹಿಸಿನೋಡುತ್ತಾ ಚರ್ಚೆ ಸಂವಾದ ನಡೆಸುತ್ತಿದ್ದವರು ಸುಂದರ್ ರಾಜ್.

 

ನಾಡು ಒಬ್ಬ ನೈಜ ಜನಪರ ಪ್ರಜಾತಂತ್ರಪರ ನೈಜ ಮಾನವೀಯ ಕಾಳಜಿಯಿರುವ ಹಿರಿಯ ಜೀವವೊಂದನ್ನು ಕಳೆದುಕೊಂಡಿದೆ. ಅಲ್ಲಿಗೆ ಬೀದರಿನ ಒಂದು ತಲೆಮಾರಿನ ಪ್ರಾಮಾಣಿಕ ಜನಪರ ಜೀವಗಳನ್ನು ಕಳೆದುಕೊಂಡಂತಾಗಿದೆ. ಹಿರಿಯ ಪತ್ರಕರ್ತರಾಗಿದ್ದ ವಿಶ್ವನಾಥ ಪಾಟೀಲ( ದಮನ್ ಪಾಟೀಲ್) ನಂತರ ಪ್ರಾಧ್ಯಾಪಕ ಹಾಗೂ ಪತ್ರಕರ್ತ ಹಣಮಂತಪ್ಪಾ ಪಾಟೀಲ, ಪ್ರಾಧ್ಯಾಪಕ ಹಾಗೂ ಪತ್ರಕರ್ತ ಶಿವರಾಜ ಕಾಡೋದೆ ಇದೀಗ ಸಂಗಾತಿ ( ಕಾಮ್ರೇಡ್ ) ಎಂ ಎನ್ ಸುಂದರ ರಾಜ್ ತಮ್ಮ ಜೀವನ ಯಾತ್ರೆಗಳನ್ನು ಮುಗಿಸಿದ್ದಾರೆ.

 

ಸುಂದರ್ ರಾಜ್ ಮಾನವೀಯ ಕಳಕಳಿ ಕಾಳಜಿಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸುತ್ತಾ ಬಂದವರಾಗಿದ್ದರು.
ಜನಪರತೆ, ಪ್ರಾಮಾಣಿಕತೆಗಳನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡವರಾಗಿದ್ದರು.

 

ಅವರಿಗೆ 90 ಕ್ಕೂ ಮೀರಿ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳನ್ನು

ಕೆಲವು ತಿಂಗಳುಗಳಿಂದ ಎದುರಿಸುತ್ತಿದ್ದರು. ಅವರ ಕೊನೆಯ ದಿನಗಳಲ್ಲಿ ಹಾಸಿಗೆಗೆ ಸೀಮಿತರಾಗಿ ತಮ್ಮ ಅಂತಿಮ ಯಾತ್ರೆ ಮುಗಿಸಿದರು. ತಮ್ಮ ಸಾರ್ಥಕ ಜೀವನ ಕೊನೆಗೊಳಿಸಿದರು.

 

ಅವರ ನೆನಪು ಜನರ ಮನಸಿನಲ್ಲಿ ಅದರಲ್ಲೂ ಬೀದರ, ಗುಲ್ಬರ್ಗ ರಾಯಚೂರು ಭಾಗದ ಜನರಲ್ಲಿ ಸದಾ ನೆಲೆಸಿರುತ್ತದೆ.


                             06/03/2024.                         - ನಂದಕುಮಾರ್ . ಕುಂಬ್ರಿ ಉಬ್ಬು 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...