Skip to main content

ಆರ್ಥಿಕ ಸಾಮಾಜಿಕ ಬಿಕ್ಕಟ್ಟುಗಳ ಉಲ್ಭಣತೆ ಅತ್ಯಾಚಾರ, - rape murder, social crisis. insecurity


ಆರ್ಥಿಕ ಸಾಮಾಜಿಕ ಬಿಕ್ಕಟ್ಟುಗಳ ಉಲ್ಭಣತೆ
ಅತ್ಯಾಚಾರ, ಅನ್ಯಾಯ, ಮೋಸ, ಕಗ್ಗೊಲೆ, ಅಭದ್ರತೆಗಳ ದೇಶ ಹಾಗೂ ಸಮಾಜ ಉಳಿದು ಬೆಳೆಯಲು ಸಾಧ್ಯವೇ?  ಸಮಾಜದ ಭವಿಷ್ಯವೇನು?
ಬದುಕಿನ ಹತ್ತು ಹಲವು ಸುಂದರ ಕನಸುಗಳನ್ನು ಇಟ್ಟುಕೊಂಡು, ವೃತ್ತಿಯಲ್ಲಿ ಬೆಳೆಯುತ್ತಿದ್ದ ಮತ್ತೊಂದು ಯುವ  ವಿದ್ಯಾವಂತ ಹೆಣ್ಣು ಮಗಳು ತೆಲಂಗಾಣ ರಾಜ್ಯದಲ್ಲಿ ವಿಕೃತ ಕಾಮುಕರಿಂದ ಅತ್ಯಾಚಾರಕ್ಕೀಡಾಗಿ ಸುಟ್ಟು ಕರಕಲಾಗಿ ಹತ್ಯೆಗೀಡಾಗಿದ್ದಾಳೆ.  ಆಕೆ ವೃತ್ತಿಯಲ್ಲಿ ಪಶುವೈದ್ಯೆ. ಸ್ಕೂಟರ್ ಪಂಕ್ಚರ್ ಗೆ ಸಹಾಯ ಮಾಡುವ ನೆಪದಲ್ಲಿ ಪುಂಡರು ಆಕೆಯನ್ನು ಎಳೆದುಕೊಂಡು ಹೋಗಿ ವಿಕ್ಷಿಪ್ತ, ವಿಕೃತ ಹಾಗೂ ಕ್ರೂರ ಗುಂಪು ಅತ್ಯಾಚಾರ ಮಾಡಿದ್ದಲ್ಲದೇ ನಂತರ ಆಕೆಯನ್ನು ಪೆಟ್ರೋಲಿನಲ್ಲಿ ಸುಟ್ಟು ಹಾಕಿರುವ ಘಟನೆಯನ್ನು ಹೇಗೆಂದು ಹೇಳುವುದೋ ಗೊತ್ತಾಗದಂತಹ ಸ್ಥಿತಿಯಾಗಿದೆ. ಉತ್ತರಪ್ರದೇಶದಲ್ಲಿ ಉನ್ನಾವೋದ ಅತ್ಯಾಚಾರ ಸಂತ್ರಸ್ಥೆಯನ್ನು ಹಾಡಹಗಲೇ ಬೆಂಕಿ ಹಚ್ಚಿ ಕಗ್ಗೊಲೆ ಮಾಡಲಾಗಿದೆ. ಇದೇ ಸಂಧರ್ಭದಲ್ಲಿ ನಮ್ಮದೇ ರಾಜ್ಯದ ಕಲ್ಬುರ್ಗಿಯಲ್ಲಿ ಎಂಟು ವರ್ಷದ ಎಳೆಬಾಲೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿದ್ದು ವರದಿಯಾಗಿದೆ. ನಮ್ಮ ದೇಶದಲ್ಲಿ ಎರಡು ಮೂರು ವರ್ಷದ ಎಳೆ ಕೂಸಿನಿಂದ ಹಿಡಿದು ಎಪ್ಪತ್ತು ಎಂಬತ್ತು ವರ್ಷದ ಅಜ್ಜಿಯರ ಮೇಲೂ ಪ್ರತಿ ನಿತ್ಯ ಅತ್ಯಾಚಾರಗಳು ನಡೆಯುತ್ತಿವೆ ಎನ್ನುವುದು ಹಲವರಿಗೆ ಆಶ್ಚರ್ಯವಾದರೂ ವಾಸ್ತವವಾಗಿದೆ. ಅದರಲ್ಲೂ ಕೇವಲ ದಲಿತ ದಮನಿತರು, ಬಡವರು ಎನ್ನುವ ಕಾರಣಕ್ಕೇನೆ ಮೇಲ್ಜಾತಿ ಮೇಲ್ವರ್ಗಗಳಿಂದ ಪ್ರತಿನಿತ್ಯ ಅತ್ಯಾಚಾರಗಳಿಗೆ ಈಡಾಗಬೇಕಾದ ಪರಿಸ್ಥಿತಿ ಸಾಮಾಜಿಕ ಸಂರಚನೆಯ ಭಾಗವಾಗಿಯೇ ಇದೆ ಎನ್ನುವುದು ಅಷ್ಟೇ ಸತ್ಯ. ಇವುಗಳು ದಾಖಲಾಗುವುದು ವಿರಳಾತಿವಿರಳವೆನ್ನಬಹುದು.
ಇನ್ನು ಅತ್ಯಾಚಾರವನ್ನು ಒಂದು ಮುಖ್ಯ ದಮನದ ಅಸ್ತ್ರವನ್ನಾಗಿಯೇ ಪ್ರಭುತ್ವ ಮತ್ತದರ ಅಂಗಗಳಾದ ಸೇನೆ, ಅರೆಸೇನೆ, ಪೋಲಿಸ್ ಇತ್ಯಾದಿ ಪಡೆಗಳು ಬಳಸುತ್ತಾ ಬರಲಾಗುತ್ತಿವೆ. 16 ವರ್ಷಗಳ ದಾಖಲೆ ಉಪವಾಸ ಮುಷ್ಕರ ನಡೆಸಿದ ಇರೊಮ್ ಶರ್ಮಿಲಾ ಹಾಗೂ ಮಣಿಪುರದ ಮಹಿಳೆಯರು ಇದನ್ನು ಬಲವಾಗಿಯೇ ಪ್ರತಿಭಟಿಸುತ್ತಾ ಬಂದಿದ್ದಾರೆ. ಮಣಿಪುರದಲ್ಲಿ 2004ರಲ್ಲಿ ಮಹಿಳೆಯರು ಪೂರ್ಣವಾಗಿ ಬೆತ್ತಲೆಯಾಗಿ ನಿಂತು ‘ಭಾರತೀಯ ಸೇನೆಯೇ ಬನ್ನಿ ನಮ್ಮನ್ನು ಅತ್ಯಾಚಾರ ಮಾಡಿ’ ಎಂದು ಬ್ಯಾನರ್ ಹಿಡಿದು ಪ್ರತಿಭಟಿಸಿದ್ದು ಜಾಗತಿಕವಾಗಿಯೇ ಭಾರಿ ಗಮನವನ್ನು ಸೆಳೆದ ವಿಚಾರವಾಗಿದ್ದನ್ನು ಇಲ್ಲಿ ನಾವು ಗಮನಿಸಬಹುದು. ಅಂದರೆ ಅತ್ಯಾಚಾರ ಪ್ರಭುತ್ವ ಹಾಗೂ ಸಾಮಾಜಿಕ ಸಂರಚನೆಯ ಭಾಗವಾಗಿಯೇ ನಡೆಯುತ್ತಾ ಬರುತ್ತಿದೆ ಎನ್ನುವ ಭೀಕರ ವಾಸ್ತವವನ್ನು ನಾವು ಗ್ರಹಿಸಲೇ ಬೇಕು.
ಧಾರ್ಮಿಕ ಸಂಸ್ಥೆಗಳಲ್ಲಿ, ಧರ್ಮಗುರು ಪೀಠಗಳಲ್ಲಿ, ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಹಿಳೆಯರ ಮೇಲೆ ಪ್ರತಿ ಕ್ಷಣ, ಪ್ರತಿನಿತ್ಯ ಅತ್ಯಾಚಾರಗಳಾಗುತ್ತಿರುವುದು ಇಲ್ಲಿನ ವಾಸ್ತವ. ಹಲವಾರು ಧರ್ಮಗುರುಗಳೆನಿಸಿಕೊಂಡಿರುವವರ ಮೇಲೆ ಅತ್ಯಾಚಾರ ಪ್ರಕರಣಗಳಿರುವುದೂ ಈ ದೇಶದ ವಾಸ್ತವವಾಗಿದೆ. ಇದಕ್ಕೆ ಯಾವ ಧರ್ಮಗಳೂ ಹೊರತಾಗಿಲ್ಲ. ವಿದಾನಸಭೆಗಳು ಹಾಗೂ ಸಂಸತ್ತಿನಲ್ಲಿ ಇರುವ ಒಂದು ದೊಡ್ಡ ಸಂಖ್ಯೆಯ ಶಾಸಕರು ಹಾಗೂ ಸಂಸದರ ಮೇಲೆ ಅತ್ಯಾಚಾರ ಪ್ರಕರಣಗಳಿವೆ ಎನ್ನುವುದನ್ನೂ ನಾವು ಗಮನಿಸಬೇಕು.
ಇಂತಹುದೇ ಲಕ್ಷಾಂತರ ಬಯಲಿಗೆ ಬಂದ ಹಾಗೂ ಬಾರದ ಪ್ರಕರಣಗಳಲ್ಲಿ ಆ ಹೆಣ್ಣುಮಕ್ಕಳು ಅನುಭವಿಸಿದ ಮಾನಸಿಕ ಹಾಗೂ ದೈಹಿಕ ನರಕ ಯಾತನೆಗಳನ್ನು ಹೇಗೆಂದು ಶಬ್ಧಗಳಲ್ಲಿ ಹಿಡಿದಿಡಲು ಸಾದ್ಯ. ಹೃದಯ ಕಲಕಿ, ಹಿಂಡಿ ಹಿಪ್ಪೆಯಾಗುವಂತಹ ಭೀಕರ ಘಟನೆಗಳವು. ಭಾರತದಲ್ಲಿ ಪ್ರತಿ ಗಂಟೆಗೆ 4 ಅತ್ಯಾಚಾರಗಳು ದಾಖಲಾಗುತ್ತವೆ, ವರ್ಷಕ್ಕೆ 32 ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಯ ವರದಿ ಹೇಳುತ್ತದೆ. ಆದರೆ ದಾಖಲೆಗಳಲ್ಲಿ ಸಿಗದ ಲಕ್ಷಾಂತರ ಪ್ರಕರಣಗಳಿವೆ. ಭಾರತದಲ್ಲಿ ಮಹಿಳೆಯರ ಮೇಲೆ, ಎಳೆ ಬಾಲಕಿಯರ ಮೇಲೆ ಇಂತಹ ಅಮಾನುಷ, ವಿಕ್ಷಿಪ್ತ ಹಾಗೂ ವಿಕೃತ ಧಾಳಿ ಹಾಗೂ ಕಗ್ಗೊಲೆಗಳು ಸಹಜ ಘಟನೆಗಳೆನ್ನುವಷ್ಟು ಪ್ರತಿ ಕ್ಷಣ, ಪ್ರತಿನಿತ್ಯ ನಡೆಯುತ್ತಿವೆ. ಕೆಲವು ಹೊರ ಪ್ರಪಂಚಕ್ಕೆ ಗೊತ್ತಾಗುತ್ತವೆ. ಹಲವು ಗೊತ್ತಾಗುವುದೇ ಇಲ್ಲ. ಹೊರ ಪ್ರಪಂಚಕ್ಕೆ ಗೊತ್ತಾದವುಗಳಲ್ಲಿ ಶಿಕ್ಷೆಯಾದ ಪ್ರಕರಣಗಳು ಬಹಳ ಕಡಿಮೆ.
ನಮ್ಮ ಕರ್ನಾಟಕದಲ್ಲಿಯೂ ಇಂತಹ ಘಟನೆಗಳು ಹಲವು ಬೆಳಕಿಗೆ ಬಂದಿದ್ದರೂ ಶಿಕ್ಷೆಯಾಗಿದ್ದೂ ಕಡಿಮೆ. ಕೆಲವು ಟೆಕ್ಕಿಗಳ ಪ್ರಕರಣದಲ್ಲಿ, ಮಣಿಪಾಲದ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು ಬಿಟ್ಟರೆ ಉಳಿದಂತೆ ಬೆಳಕಿಗೆ ಬಂದ ಅವಮರ್ಯಾದಾ ಹತ್ಯೆಗಳಾಗಲೀ, ತೀರ್ಥಹಳ್ಳಿ, ಧರ್ಮಸ್ಥಳ,  ಉಜಿರೆಗಳ ಅತ್ಯಾಚಾರ ಹತ್ಯಾ ಪ್ರಕರಣಗಳಾಗಲೀ ಸರಿಯಾದ ತನಿಖೆಯತ್ತಲೂ ಸಾಗದೇ ಹೋಗಿವೆ. ಇನ್ನು ಶಿಕ್ಷೆಯ ಮಾತು ದೂರವೇ ಉಳಿಯಿತು.
 ವಿಜಯಪುರದ ದಾನಮ್ಮ ಎಂಬ ಎಳೇ ಬಾಲಿಕೆಯ ಮೇಲಿನ ಅತ್ಯಾಚಾರ ಹಾಗೂ ಕಗ್ಗೊಲೆ ಪ್ರಕರಣದ ಆರೋಪಿಗಳನ್ನು ಆಗಿನ ಕಾಂಗ್ರೆಸ್ ನೇತೃತ್ವದ ಸರಕಾರವೇ ರಕ್ಷಿಸಿತು. ಸರಕಾರದೊಂದಿಗೆ ಕೆಲವು ಹೋರಾಟಗಾರರೆಂದು ಫೋಸು ನೀಡಿದವರು ಶಾಮೀಲಾದರು. ಸರಕಾರವೇ ಆ ಎಳೆ ಬಾಳೆಯನ್ನು ವೈಯಕ್ತಿಕವಾಗಿ ಅಪಮಾನ ಮಾಡಿತು. ಪೋಲಿಸ್ ಉನ್ನತಾಧಿಕಾರಿಗಳೇ ಅದರಲ್ಲಿ ಶಾಮೀಲಾದರು. ದಾನಮ್ಮನ ಉಸಿರು ಹಾಗೂ ಬದುಕಿಗೇ ಕಿಂಚಿತ್ತೂ ಬೆಲೆಯನ್ನೂ ನೀಡಲಾಗದೇ ಹೋಯಿತು ನಾಗರಿಕವೆನ್ನುವ ಸರಕಾರ.
 ಆದರೆ ದಾನಮ್ಮ ಪ್ರಕರಣವನ್ನು ಆಗಿನ ಕಾಂಗ್ರೆಸ್ ನೇತೃತ್ವದ ಸರಕಾರ ತಮ್ಮ ಓಟು ಬ್ಯಾಂಕ್ ರಾಜಕೀಯಕ್ಕಾಗಿ ಚೆನ್ನಾಗಿಯೇ ಬಳಸಿಕೊಂಡಿತು. ಹಲವಾರು ಜಿಲ್ಲೆಗಳಲ್ಲಿ ಬಂದ್ ಗಳಿಗೆ ಸರಕಾರವೇ ನೇರವಾಗಿ ಪ್ರೋತ್ಸಾಹಿಸಿ ತಾನು ಮಹಿಳಾ ಪರ, ದಲಿತ ಪರ, ಅನ್ಯಾಯದ ವಿರುಧ್ಧ, ಆರ್ ಎಸ್ ಎಸ್ ಸಂಘೀ ಶಕ್ತಿಗಳ ವಿರುದ್ಧವೆಂಬಂತಹ ಫೋಸು ನೀಡಿತ್ತು. ಆದರೆ ವಿಜಯಪುರ ಚಲೋ ಕಾರ್ಯಕ್ರಮ ನಡೆಯದಂತೆ ದಮನ ಮಾಡಿತು. ಜೊತೆಗೆ ದಾನಮ್ಮ ಅತ್ಯಾಚಾರ ಹಾಗೂ ಕೊಲೆಗಳ ಆರೋಪಿತ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರುಗಳ ಮಕ್ಕಳನ್ನು ಪೂರ್ಣವಾಗಿ ರಕ್ಷಿಸಿ ತಾನೆಂಥಹ ಮಹಿಳಾ ಹಾಗೂ ದಲಿತ ವಿರೋಧಿ ಎನ್ನುವುದನ್ನು ತೋರಿಸಿಕೊಂಡಿತ್ತು.
ವಿಜಯಪುರ ಚಲೋ ಕಾರ್ಯಕ್ರಮವನ್ನು ತಾವೇ ಮಾಡುತ್ತಿದ್ದೇವೆಂದು  ಆರಂಭದಲ್ಲಿ ಫೋಸು ನೀಡಿದ್ದ ಕೆಲವು ಹೋರಾಟಗಾರರು ನಂತರ ಅದು ತಮ್ಮ ಕಾರ್ಯಕ್ರಮವಲ್ಲ ನಾವು ಕೇವಲ ಸಲಹೆಗಾರರಷ್ಟೇ. ಅತ್ಯಾಚಾರಕ್ಕೀಡಾಗಿ ಧಾರುಣವಾಗಿ ಪ್ರಾಣವನ್ನೇ ಕಳೆದುಕೊಂಡ ದಾನಮ್ಮ ಬಗ್ಗೆ ಪೋಲಿಸ್ ಅಧಿಕಾರಿಯೊಬ್ಬರು ನೀಚವಾಗಿ ಮಾತನಾಡಿರುವ ಆಡಿಯೋ ಕ್ಲಿಪ್ಪಿಂಗ್ ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಿರುವಂತೆ ಸಲಹೆ ನೀಡಿ ಅದನ್ನು ತಡೆದವರು ತಾವೇ ಎನ್ನುವಂತೆ ಬಹಿರಂಗ ಪತ್ರಿಕಾಗೋಷ್ಠಿ ಮಾಡಿ ಹೇಳಿದರು. ಆದರೆ ಸರಕಾರ ಮಾಡಿದ ವಿಜಯಪುರ ಚಲೋ  ಕಾರ್ಯಕ್ರಮದ ದಮನವನ್ನು ಅವರು ಬಾಯ್ಮಾತಿಗೂ ಖಂಡಿಸಿದ ವರದಿಗಳು ಕಾಣಲಿಲ್ಲ. ನಂತರ ಅವರುಗಳು ಸಂಘಟಿಸುವ ಕಾರ್ಯಕ್ರಮಗಳಲ್ಲಿ ದಾನಮ್ಮನ ವಿಚಾರದ ಪ್ರಸ್ತಾಪ ಹೆಚ್ಚಾಗಿ ಬಂದಂತೆ ಕಾಣಲಿಲ್ಲ. ದಾನಮ್ಮನ ಸಾವು ಸಾವಿರಾರು ವರದಿಯಾದ  ಅತ್ಯಾಚಾರ ಹಾಗೂ ಕಗ್ಗೊಲೆ ಘಟನೆಗಳಲ್ಲಿಒಂದಾಗಿ ಮರೆ ಮಾಡಲಾಯಿತು. ಅತ್ಯಾಚಾರಿಗಳು ಕೊಲೆಗಡುಕರು ಅರಾಮಾಗೇ ಓಡಾಡುತ್ತಿದ್ದಾರೆ. ದಾನಮ್ಮನಂತಹ ಎಳೆಬಾಲೆಯರು ಮತ್ತವರ ಪೋಷಕರು ನಿಟ್ಟುಸಿರು ಹಾಗೂ ಭಯಾಂದೋಲನಗಳಲ್ಲೇ ದಿನ ದೂಡುತ್ತಿದ್ದಾರೆ. ಮನೆಯಲ್ಲಿರಲೂ ಕೂಡ ಸಾಧ್ಯವಾಗದಂತಹ ಅಭದ್ರತೆಯ ವಾತಾವರಣ ನಿರ್ಮಾಣವಾಗಿದೆ.
ಅಲ್ಲಿ ದಾನಮ್ಮ ಎಂಬ ಎಳೇ ಬಾಲಕಿ ದಲಿತ ಹಿನ್ನೆಲೆಯವಳಾಗಿದ್ದಳು. ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿದವರು ಎಂಬ ಆರೋಪಿತರು ಸಂಘ ಪರಿವಾರದ ಬಿಜೆಪಿ ಯಲ್ಲಿ ಗುರುತಿಸಿಕೊಂಡಿರುವವರ ಮಕ್ಕಳಾಗಿದ್ದರು . ಸರ್ಕಾರ ಹಾಗೂ ಈ ಕೆಲವು ಹೋರಾಟಗಾರರು ವಿಜಯಪುರದ ಸ್ಥಳೀಯ ಕೆಲವು ದಲಿತ ನಾಯಕರೆನ್ನಿಸಿಕೊಂಡವರು ಒಂದಾಗಿ ದಾನಮ್ಮ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಮುಚ್ಚಿ ಹಾಕಿದರು. ಅದನ್ನು ವಿರೋಧಿಸಿದ ಕೆಲವು ಹೋರಾಟಗಾರರನ್ನು ಹಲವಾರು ಕೇಸುಗಳಡಿ ಬಂಧಿಸಿ ಕಾರಾಗೃಹಕ್ಕೆ ತಳ್ಳಲಾಗಿತ್ತು.
ಹೆಣ್ಣು ಮಕ್ಕಳಿಗೆ ಇಂತಹ ಭಾರಿ ಸಾಮಾಜಿಕ ಅಭದ್ರತೆಗೆ ಪ್ರಧಾನ ಕಾರಣ ಇಂದಿನ  ಭಾರತದ ಸಮಾಜ ಎದುರಿಸುತ್ತಿರುವ ಭಾರಿ ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ಹಾಗೂ ಕುಸಿತಗಳು. ಆಳುವ ಶಕ್ತಿಗಳು ನಿರುದ್ಯೋಗ, ಬಡತನ, ಅಭದ್ರತೆ,ಅವಕಾಶ ಹೀನತೆ, ಬದುಕು ನಡೆಸಲಾಗದ ಪರಿಸ್ಥಿತಿ, ಇತ್ಯಾದಿ ಕಾರಣಗಳಿಂದ ಯುವಜನರಲ್ಲಿ ಹೆಚ್ಚುತ್ತಿರುವ ವ್ಯಗ್ರತೆಗಳನ್ನು ಮಹಿಳೆಯರ ಮೇಲೆ, ದಲಿತ ದಮನಿತರ, ಧಾರ್ಮಿಕ ಅಲ್ಪ ಸಂಖ್ಯಾತರ ಮೇಲೆ ತಿರುಗಿಸುವಲ್ಲಿ ಹತ್ತು ಹಲವು ರೀತಿಗಳಲ್ಲಿ ತೊಡಗಿವೆ.
ಊಳಿಗಮಾನ್ಯ ರಾಜಶಾಹಿ ವ್ಯವಸ್ಥೆ, ಮಠ ಮಾನ್ಯ ವ್ಯವಸ್ಥೆಯ ಸಂಸ್ಥೆಗಳು ಮಹಿಳೆಯನ್ನು ಪುರುಷನ ಸುಖಕ್ಕೊಸ್ಕರವೇ ಇರುವುದು, ಆತನ ಆಸ್ತಿ ಎಂದೆಲ್ಲಾ ಬಂಧಿಸಿಟ್ಟಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಂತಃಪುರದ ದಾಸಿಯರು, ವೇಶ್ಯಾಗೃಹಗಳ ಮಾಲುಗಳು, ಅಂದರೆ ರಾಜರುಗಳ, ಸಾಮಂತರ, ಭೂಮಾಲಿಕ ಆಸ್ತಿವಂತರ ಸ್ವತ್ತನ್ನಾಗಿ ಪರಿಗಣಿಸಲ್ಪಟ್ಟಿದ್ದಳು. ಚಾಣಕ್ಯನ ಅರ್ಥಶಾಸ್ತ್ರ , ಮನುಸ್ಮೃತಿ ವ್ಯವಸ್ಥೆಯನ್ನು ಸಾಂಸ್ಥೀಕರಿಸಿಟ್ಟಿತ್ತು. ಅದಕ್ಕೆ ಸಾಮಾಜಿಕ ಮಾನ್ಯತೆಯನ್ನು ಒದಗಿಸಿಬಿಟ್ಟಿತ್ತು.
ಹದಿನೆಂಟನೇ ಶತಮಾನದ ನಂತರದ ಜಗತ್ತಿನಲ್ಲಿ ಬದಲಾವಣೆಯ ಪರಿಣಾಮವಾಗಿ ಮಹಿಳೆ ಹಳೆಯ ಊಳಿಗಮಾನ್ಯ ಸಂಕೋಲೆಗಳಲ್ಲಿ ಕೆಲವದರಿಂದ ಬಿಡುಗಡೆಗೊಂಡಳು ಎಂದು ಭಾವಿಸುವಾಗಲೂ ಆಕೆ ಮತ್ತೆ ಹೊಸ ಬಂಡವಾಳಶಾಹಿ ಬಂಧನಗಳಿಗೆ, ಸಂಕೋಲೆಗಳಿಗೆ ಒಳಗಾದಳು. ಆಕೆಯನ್ನು ಮಾರುಕಟ್ಟೆಯ ಸರಕನ್ನಾಗಿ ಮಾಡಿತು ಬಂಡವಾಳಶಾಹಿ ಕಾರ್ಪೋರೇಟ್ ವ್ಯವಸ್ಥೆ. ಮೊದಲಿದ್ದ ಸೀಮಿತತೆಯಿಂದ ಆಕೆಯನ್ನು ವಿಶ್ವ ಮಾರುಕಟ್ಟೆಯ ಸರಕನ್ನಾಗಿ ಮಾಡಲಾಯಿತು. ಅದು ಈಗ ವಿಪರೀತ ಮಟ್ಟ ತಲುಪಿದ್ದು ಆಕೆಯ ದೇಹ, ಮಾತು, ನೋಟ, ನಡಿಗೆ, ತೊಡುಗೆ, ಹಾವಭಾವ, ಬಳಸುವ ಸಾದನ, ಅಂಗಗಳು, ಹೀಗೆ ಎಲ್ಲವನ್ನೂ, ಮಾದಕಗೊಳಿಸಿ, ಲೈಂಗಿಕಗೊಳಿಸಿ ಮಾರುಕಟ್ಟೆಯ ಸರಕನ್ನಾಗಿ ಮಾಡಲಾಯಿತು. ಕಾರ್ಪೊರೆಟ್ ಜಗತ್ತು ಇಂದಿನ ಸ್ಥಿತಿಯನ್ನು ಯಾವ ಮಟ್ಟಕ್ಕೆ ಹದಗೆಡಿಸಿಟ್ಟಿದೆಯೆಂದರೆ ಹೆಣ್ಣು ಎಂಬ ಶಬ್ಧ ಕಿವಿಗೆ ಬಿದ್ದೊಡನೆ, ಹೆಣ್ಣಿನ ಕಲ್ಪನೆ ಮನಸಿನಲ್ಲಿ ಮೂಡಿದೊಡನೆ, ಹೆಣ್ಣು ಆಕಾರವನ್ನು ನೋಡಿದೊಡನೆ ಕೂಡಲೇ ಲೈಂಗಿಕ ಕ್ರಿಯೆಗಳ ಚಿತ್ರಣವೇ ಪ್ರೈಮರಿ ಶಾಲೆಯ ಮಕ್ಕಳ ಮನಸಿನಲ್ಲೂ ಮೂಡಿಸುವಷ್ಟು.
ಗಂಡನ್ನೂ ಕೂಡ ಇದೇ ರೀತಿ ಲೈಂಗಿಕ ವಸ್ತುವನ್ನಾಗಿ ಮಾಡುವ ಪ್ರಕ್ರಿಯೆಗಳು ಬಹಳ ಹಿಂದೆಯೇ ಶುರುವಾಗಿದ್ದರೂ ಅದು ಗಂಡನ್ನು ಹೆಣ್ಣಿನ ಮಟ್ಟದಲ್ಲಿ ಲೈಂಗಿಕ ದಾಳಿಗೊಳಪಡಿಸುತ್ತಿಲ್ಲ. ಆದರೆ ವಿವೇಚನಾ ಹೀನರನ್ನಾಗಿ, ವ್ಯಕ್ತಿತ್ವಹೀನರನ್ನಾಗಿ ಮಾಡುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಯಾವುದೋ ಬಟ್ಟೆಯನ್ನೋ, ಯಾವುದೋ, ಪ್ರಸಾದನ ವಸ್ತುವನ್ನೋ, ಯಾವುದೋ ಒಳಉಡುಪುಗಳನ್ನೋ, ಬಳಸುವುದೇ  ಹೆಣ್ಣನ್ನು ಒಲಿಸುವ ಹಾಗೂ ಶ್ರೇಷ್ಠತೆಯ ಲಕ್ಷಣವೆಂಬಂತಹ ಪೊಳ್ಳುತನಗಳಿಗೆ ದಾಸರನ್ನಾಗಿ ಮಾಡಲಾಗುತ್ತಿದೆ.
ಲೈಂಗಿಕ ಕ್ರಿಯೆಗಳ ಪರ್ಯಾಯ ಶಬ್ಧವೇ ಹೆಣ್ಣು ಎನ್ನುವ ಮಟ್ಟಕ್ಕೆ ಈಗ ತಂದಿಡಲಾಗಿದೆ. ಅದರ ನಂತರವೇ ತಾಯಿ, ಅಕ್ಕ, ತಂಗಿ, ಇತ್ಯಾದಿ ಆಗಿವೆ. ಅಂತರ್ಜಾಲ, ಮೊಬೈಲ್ ಬಂದ ನಂತರ ಲೈಂಗಿಕ ಮಾರುಕಟ್ಟೆಯ ಜಾಲ ವಿಸ್ತ್ರುತಗೊಳಿಸಲಾಯಿತು. ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಪಿಲಿಫೈನ್ಸ್ ನಂತಹ ದೇಶಗಳು ಹತ್ತು ಹನ್ನೆರಡರ ಹೆಣ್ಣುಮಕ್ಕಳ ಕಳ್ಳಸಾಗಾಟಕ್ಕೆ ಅಗ್ರ ಸ್ಥಾನದಲ್ಲಿವೆ. ಇದರಲ್ಲಿ ಮಿಲಿಯಗಟ್ಟಲೆ ಎಳೆ ಹೆಣ್ಣು ಮಕ್ಕಳು ಬಲಿಪಶುಗಳಾಗುತ್ತಿವೆ. ಜೊತೆಯಲ್ಲಿ ಮಾನವ ಸಹಜ ಪ್ರೀತಿಯ ಸಂಬಂಧವಾದ ಲೈಂಗಿಕತೆಯನ್ನು ಇನ್ನಿಲ್ಲದಂತೆ ವಿಕೃತಗೊಳಿಸಿ, ಮಾನವ ಸಮುದಾಯಕ್ಕೇ ಅಪಾಯಕಾರಿಯನ್ನಾಗಿ ಮಾಡಲಾಗಿದೆ. ಪ್ರೀತಿ ಹಾಗೂ ಕಾಮದ ನವಿರಾದ, ಪ್ರೀತಿಯ ಭಾವ ತೀವ್ರತೆಯ ಹಾಗೂ ಮಾನವೀಯ ಸಂಬಂಧಗಳ ಜೋಡಣೆಯನ್ನು ಯುವ ಮನಸುಗಳಲ್ಲಿ ವಿಕೃತಗೊಳಿಸಿ, ವಿಕ್ಷಿಪ್ತಗೊಳಿಸಿ ನಾಶ ಮಾಡಲಾಗುತ್ತಿದೆ. ಎಷ್ಟು ಮಟ್ಟಕ್ಕೆಂದರೆ ಪ್ರೀತಿಗೆ ಪರ್ಯಾಯ ಶಬ್ಧ ಲೈಂಗಿಕ ಕ್ರಿಯೆ ಎನ್ನುವ ಮಟ್ಟಕ್ಕೆ ತಂದಿಡಲಾಗಿದೆ. ಅವರುಗಳು ಲೈಂಗಿಕ ಬದುಕನ್ನು ಸಹಜವಾಗಿ ನಡೆಸಲಾಗದಷ್ಟು ವಿಕೃತ ಹಾಗೂ ವಿಕ್ಷಿಪ್ತಗೊಳಿಸಿಡಲಾಗಿದೆ.  ಅದಲ್ಲದೇ ಭಾರತದಂತಹ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಆರೋಗ್ಯಕರ ತಿಳುವಳಿಕೆ ನೀಡುವ ಜ್ಞಾನದ ಕೊರತೆ ತೀವ್ರವಾಗಿದೆ. ಮುಕ್ತವಾಗಿ ಸಹಜವಾಗಿ ಸಹಜವಾಗಿ ಲೈಂಗಿಕ ವಿಚಾರಗಳನ್ನು ಚರ್ಚೆ, ಸಂವಾದ, ಅಭಿಪ್ರಾಯ ವಿನಿಮಯ ಮಾಡಲಾಗದಂತಹ ವಾತಾವರಣವೇ ಭಾರತದ ಬಹುತೇಕರ ಮನೆ ಹಾಗೂ ಸಮಾಜದಲ್ಲಿ ಇನ್ನೂ ಇದೆ. ಇದು ಪರಿಸ್ಥಿತಿಯನ್ನು ಮತ್ತೂ ಹದಗೆಡಿಸಿ ಭಯಾನಕಗೊಳಿಸಲಾಗಿದೆ. ಲೈಂಗಿಕ ಭಾವನೆಗಳನ್ನು ಉದ್ದೀಪನಗೊಳಿಸುವುದೇ ಉಡುಗೆ ತೊಡಿಗೆ, ನಡಿಗೆ, ಭಾವ, ಮಾತು, ಲಯ, ನಗುಗಳ ಕಾರ್ಯ ಎನ್ನುವ ವಿಕೃತ ಚಿಂತನೆಗಳನ್ನು ಜನರ ಮನಸ್ಸುಗಳಲ್ಲಿ ಅಚ್ಚೊತ್ತುವಂತೆ ಮಾಡಲಾಗಿದೆ. ಇಂಗ್ಲೀಷ್ ಭಾಷೆಯ ಬಳಕೆಯೊಂದಿಗೆ ಇಂತಹ ವಿಕೃತ ಹಾಗೂ ವಿಕ್ಷಿಪ್ತ ಚಿಂತನೆಗಳನ್ನು ಜೋಡಿಸಿ ಹೊಂದಿಸಲಾಗುತ್ತಿದೆ. ಯುವ ಜನರಿಗೆ ಆ ರೀತಿಯ ಸಾಮರ್ಥ್ಯ ಇಲ್ಲದೇ ಹೋಗುವುದು ದೊಡ್ಡ ಕೊರತೆ ಎಂಬಂತೆ ಮಾಡಿಡಲಾಗಿದೆ. ಈ ಗೀಳಿಗೆ ಬಹುದೊಡ್ಡ ಸಂಖ್ಯೆಯ ಜನರು ಬಲಿಯಾಗುತ್ತಿದ್ದಾರೆ. ಬಹುತೇಕ ಜನರು ಈ ವಿಚಾರಗಳನ್ನು ಗಮನಿಸುತ್ತಲೇ ಇಲ್ಲ. ಅಷ್ಟು ಸಾರ್ವಜನಿಕ ಮಾನ್ಯತೆಯನ್ನು ಅದು ಗಳಿಸುವಂತೆ ವ್ಯವಸ್ಥಿತವಾಗಿ ಮಾಡಲಾಗಿದೆ. ಇದೊಂದು ಮನುಷ್ಯವಿರೋಧಿ  ಕಾರ್ಪೋರೇಟ್ ಷಡ್ಯಂತ್ರ ಎನ್ನುವುದನ್ನು ಮನಗಾಣದೇ ಹೋಗುವವರೆಗೂ ಇದಕ್ಕೆ ಜನರು ಬಲಿಯಾಗುತ್ತಲೇ ಇರಬೇಕಾಗುತ್ತದೆ.
ಇಂದು ಭಾರತ ತೀವ್ರವಾದ ಆರ್ಥಿಕ ಹಾಗೂ ಸಾಮಾಜಿಕವಾಗಿ ಕ್ಷೋಭೆಯಲ್ಲಿದೆ. ಅದರ ಭಾಗವಾಗಿ ರಾಜಕೀಯ ಅಸ್ಥಿರತೆಯೂ, ಸಾಮಾಜಿಕ ಅಭದ್ರತೆಯೂ ತೀವ್ರವಾಗಿದೆ. ಇವೆಲ್ಲಾ ದಿನೇ ದಿನೇ ಯುವಜನರಲ್ಲಿ ಅಸಮಾಧಾನ, ರೋಷ, ವ್ಯಗ್ರತೆಗಳನ್ನು ತೀವ್ರಗೊಳಿಸುತ್ತಿವೆ. ಜೊತೆಗೆ ಮೊಬೈಲ್ ಮೂಲಕ ಅತ್ಯಂತ ಅಗ್ಗದಲ್ಲಿ ಸಿಗುವ ಅಸಹಜ, ವಿಕ್ಷಿಪ್ತ, ವಿಕೃತ ಲೈಂಗಿಕ ಚಿತ್ರಗಳು ಯುವ ಮನಸುಗಳನ್ನು ಮತ್ತಷ್ಟು ವ್ಯಗ್ರಗೊಳಿಸುತ್ತಿವೆ. ಇವೆಲ್ಲದರ ಪರಿಣಾಮ ಇಂದು ಪ್ರಿಯಾಂಕ ರೆಡ್ಡಿಗಳು, ನಿನ್ನೆ ಅಸೀಫಾಗಳು, ಮೊನ್ನೆ ಸೌಜನ್ಯ, ಸೌಮ್ಯ ದಾನಮ್ಮಗಳು, ಅಂದು ನಿರ್ಭಯಾಗಳು ಬಲಿಯಾಗುತ್ತಾ ಬರುತ್ತಿದ್ದಾರೆ. ಕಾನೂನು ಬಿಗಿ ಮಾಡುವ , ನೇಣಿಗೇರಿಸುವ ಕ್ರಮಗಳಿಂದ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿಲ್ಲ ಎನ್ನೋದು ಈಗಾಗಲೇ ಸಾಬೀತಾಗಿದೆ. ಯಾಕೆಂದರೆ ನಮ್ಮ ಎಲ್ಲಾ ವ್ಯವಸ್ಥೆಗಳಲ್ಲಿ ಪುರುಷಾಧಿಪತ್ಯದ ಪ್ರಾಬಲ್ಯವಿದೆ.
ನಿರ್ಭಯಾ ಪ್ರಕರಣದ ನಂತರ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಯಿತು. ನಂತರ ಕಾನೂನು ತಿದ್ದುಪಡಿಯಾಯಿತು. ಅತ್ಯಾಚಾರಿಗಳಿಗೆ ನೇಣಿಗೂ ಏರಿಸುವ ಕಾನೂನು ಬಂತು .ಕೆಲವರನ್ನು ನೇಣಿಗೆ ಏರಿಸಬೇಕೆಂಬ ತೀರ್ಪುಗಳೂ ಕೂಡ ಬಂದವು. ಆದರೆ ನಂತರವೂ ಅತ್ಯಾಚಾರಗಳು  ಹೆಚ್ಚಾಗುತ್ತಲೇ ಹೋಗುತ್ತಿವೆ. ಬದಲಿಗೆ ಮೊದಲಿಗೆ ಅತ್ಯಾಚಾರಗಳು ಮಾತ್ರ ನಡೆಯುತ್ತಿದ್ದ ಜಾಗದಲ್ಲಿಈಗ ಅತ್ಯಾಚಾರ ಮಾಡಿದ ಮೇಲೆ ಸಾಕ್ಷಿ ನಾಶ ಮಾಡಲು ಕಗ್ಗೊಲೆಗಳ ಪ್ರಕರಣಗಳು ಹೆಚ್ಚಿದವು. ಇದು ಏನನ್ನು ತೋರಿಸುತ್ತವೆ. ಕೇವಲ ಕಾನೂನುಗಳಿಂದ ಅಮಾನುಷ ಪಿಡುಗನ್ನು ತಡೆಗಟ್ಟಲು ಸಾಧ್ಯವಿಲ್ಲವೆಂದು ತಾನೆ.
ಜನರನ್ನು ಲೈಂಗಿಕತೆ, ಮಾದಕತೆ, ಮಧ್ಯ, ಜಾತಿ, ಧರ್ಮ, ಲಿಂಗ ಬೇಧಗಳ ವ್ಯಸನಗಳಲ್ಲಿ ಮುಳುಗಿಸಿ ಅವರು ತಮ್ಮ ಬದುಕಿಗೇ ಮಾರಕವಾಗಿರುವ ಸಂಗತಿಗಳ ಬಗ್ಗೆ ಹೊರಳದಂತೆ ಮಾಡುವ ಹುನ್ನಾರವಿದು. ಸಾಮಾಜಿಕ ವ್ಯಗ್ರತೆಗಳನ್ನು ಹೆಣ್ಣುಮಕ್ಕಳ ಮೇಲೆ ತಿರುಗಿಸುವ ದುಷ್ಟ ಸಂಚೂ ಕೂಡ ಹೌದು.
ಅಂಶಗಳನ್ನು ಗಮನದಲ್ಲಿಟ್ಟು ಪರಿಹಾರದತ್ತ ಸಾಗುವ ಚರ್ಚೆಗಳು ಹೆಚ್ಚಾಗಬೇಕಿದೆ. ಅಮಾನುಷ ಅಪರಾಧಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗುವಂತೆ ಒತ್ತಾಯ ಹೇರುತ್ತಾ, ಪ್ರತಿರೋಧ ಒಡ್ಡುತ್ತಲೇ, ಜನಸಾಮಾನ್ಯರು ಪ್ರಜ್ಞಾಪೂರ್ವಕವಾಗಿ ಪಿಡುಗಿನ ವಿರುದ್ಧ ನಿಲ್ಲುವಂತೆ ಮಾಡಬೇಕಾಗಿದೆ. ಮಾಧ್ಯಮ, ಸಾಹಿತ್ಯ, ದಿನನಿತ್ಯದ ವಿಚಾರಗಳಲ್ಲಿ ಮಹಿಳೆಯನ್ನು ಉಪಭೋಗಿ ವಸ್ತುವಂತೆ ಬಿಂಬಿಸುವ ಎಲ್ಲಾ ವಿಚಾರಗಳ ವಿರುದ್ಧ ನಿಲ್ಲಬೇಕಿದೆ. ವ್ಯಕ್ತಿಗತ, ಕೌಟುಂಬಿಕ ಹಾಗೂ ಸಂಘಟಿತ ವಿರೋಧ ಒಡ್ಡಬೇಕಿದೆ.
ಇಂದು ದೇಶ ತಲುಪುತ್ತಿರುವ ಭೀಕರ ಪರಿಸ್ಥಿತಿಯಲ್ಲಿ ಎಷ್ಟೆಲ್ಲಾ ಹೆಣ್ಣು ಮಕ್ಕಳು ಬಲಿಪಶುಗಳಾಗಬೇಕಾಗುತ್ತೋ ಹೇಳಲಾಗದು. ಅತ್ಯಂತ ನೋವು, ವಿಷಾಧದ ಹಾಗೂ ರೋಷದ ಸಂಗತಿಯಿದು.
ದಿಕ್ಕಿನಲ್ಲಿ ನಮ್ಮ ಚಿಂತನೆಗಳಿರಬೇಕಲ್ಲವೇ. ಯಾಕೆಂದರೆ ಮಹಿಳೆಯನ್ನು ಲೈಂಗಿಕ ವಸ್ತುವನ್ನಾಗಿ, ಲೈಂಗಿಕ ಸಲಕರಣೆಗಳ ಹಾಗೂ ಪ್ರಸಾಧನ ಸಾಧನಗಳ, ವಸ್ತು ಮಾರಾಟದ ಇತ್ಯಾದಿ ಸರಕನ್ನಾಗಿ, ಭೋಗವಸ್ತುವನ್ನಾಗಿ ಮಾಡಿರುವ ಹಿತಾಸಕ್ತಿಗಳನ್ನು ಗುರುತಿಸಿ ಜನರ ಮುಂದಿಡದೇ ಹೋದಷ್ಟು ಹಿತಾಸಕ್ತಿಗಳು ರಕ್ಷಿತರಾಗಿರುತ್ತಾರಲ್ಲವೇ. ಉಡುಗೆ ತೊಡುಗೆ ಅವರವರ ವೈಯಕ್ತಿಕ ಹಕ್ಕುಗಳು ಎಂಬುದನ್ನೂ ಒಪ್ಪುತ್ತಲೇ, ಕಾರ್ಪೋರೇಟ್ ಪ್ರಾಯೋಜಿತ ದೇಹ ರೋಚಕತೆ ಹಾಗೂ ಲೈಂಗಿಕತೆ ಹಾಗೂ ಮಾದಕತೆಗಳಿಗೇ ಮಾತ್ರ ಒತ್ತು ನೀಡುವಂತಹ, ವ್ಯಕ್ತಿತ್ವಗಳನ್ನೇ ಹರಣ ಮಾಡುವಂತಹ ಉಡುಗೆ ತೊಡುಗೆಗಳು ಹಾಗೂ ವಿಚಾರಗಳ ಗೀಳಿಗೆ ನಮ್ಮ ಯುವ ಸಮುದಾಯ ಬಲಿಯಾಗದಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಎಲ್ಲಾ ತಂದೆ ತಾಯಿ ಹಾಗೂ ಪೋಷಕರ ಮೇಲಿಲ್ಲವೇ? ಉಡುಗೆಯೂ ಕೂಡ ಭಾವವನ್ನು ಉಂಟುಮಾಡುವ ವಿಚಾರವಲ್ಲವೇ?
ಆ ಗೀಳಿನ ಹಿಂದೆ ಅಂತರಾಷ್ಟ್ರೀಯ ಲೈಂಗಿಕೋದ್ಯಮ !? ಕಾರ್ಪೋರೇಟುಗಳ ನೇರ ಹಿತಾಸಕ್ತಿಗಳಿವೆ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸದೇ ಹೋದರೆ ಅವರ ಬಲೆಗಳಲ್ಲಿ ನಾವು ಸಿಕ್ಕಿಬಿದ್ದಿದ್ದೇವೆ ಎಂದೇ ಅರ್ಥ.. ಇದೊಂದು ಸಂಕೀರ್ಣವಾದ ವಿಚಾರ. ಮೈ ತುಂಬ ಬಟ್ಟೆ ಧರಿಸಿದವರ, ಪುಟ್ಟ ಮಕ್ಕಳ  ಮೇಲೂ ಅತ್ಯಾಚಾರಗಳು ನಡೆಯುತ್ತಿವೆಯಲ್ಲಾ ಅದಕ್ಕೆ ತೊಡುಗೆ ಕಾರಣವೇ ಎಂಬೆಲ್ಲಾ ಚರ್ಚೆಗಳು ಚಾಲ್ತಿಯಲ್ಲಿವೆ. ಅದು  ನಿಜವೂ ಹೌದು. ಆದರೆ  ಸಮಾಜದಲ್ಲಿ ಹೆಣ್ಣಿನ  ಬಗ್ಗೆ ಮೂಡಿಸುತ್ತಿರುವ ವ್ಯಕ್ತಿತ್ವವಿರದ ಕೇವಲ ಲೈಂಗಿಕ ವಸ್ತುವೆಂಬಂತಹ ರೋಚಕ ಹಾಗೂ ಮಾದಕತೆಯ ಪರಿಕಲ್ಪನೆಯಿಂದಾಗಿಯೇ ಪುಟ್ಟ ಮಕ್ಕಳನ್ನೂ, ಮೈತುಂಬ ಬಟ್ಟೆ ತೊಟ್ಟುಕೊಂಡಿರುವ ಹೆಣ್ಣು ಮಕ್ಕಳ ಮೇಲೂ ಅತ್ಯಾಚಾರ ಮಾಡಿ ಕಗ್ಗೊಲೆ ಮಾಡುತ್ತಿರುವ ಮನಸ್ಥಿತಿ ಹಾಗೂ ಪರಿಸ್ಥಿತಿಗಳು ಹೆಚ್ಚು ಹೆಚ್ಚು ನಿರ್ಮಾಣವಾಗುತ್ತಿವೆ ಎನ್ನುವುದನ್ನು ಗಮನಿಸಬೇಕಲ್ಲವೇ.? ಉಡುಗೆ ತೊಡುಗೆಗೆ ಅದರಲ್ಲಿ ಒಂದು ಮುಖ್ಯ ಪಾತ್ರವಿದೆ ಎನ್ನುವುದನ್ನು ಗುರ್ತಿಸಬೇಕಿದೆ.
ಮಾಧ್ಯಮಗಳು ಸಿನಿಮಾ ತಾರೆಯರು ಮತ್ತು ಅವರ ಮಕ್ಕಳು ಧರಿಸುವ ಧಿರಿಸುಗಳ ಬಗ್ಗೆಯೇ, ಹಾಡಿ ಹೊಗಳುತ್ತಾ ಬೋಲ್ಡ್ ವ್ಯಕ್ತಿತ್ವ ಎಂದೆಲ್ಲಾ ಪುಟಗಟ್ಟಲೇ, ಗಂಟೆಗಟ್ಟಲೇ ಚರ್ಚಿಸುವುದನ್ನು, ಫ್ಯಾಷನ್ ಶೋ, ರಿಯಾಲಿಟಿ ಶೋ ಹೆಸರಿನಲ್ಲಿ ನಡೆಯುವ ಲೈಂಗಿಕತೆಗಳ/ಮಾದಕತೆಗಳ ವಿಕೃತ ವಿಜೃಂಬಣೆಗಳನ್ನು ನಾವು ಈ ಹಿನ್ನೆಲೆಯಲ್ಲಿಯೇ ಗಮನಿಸಬೇಕಲ್ಲವೇ. ಈ ಪಿಡುಗು ಈಗ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲೂ ಹಬ್ಬಿ ರಾರಾಜಿಸುತ್ತಿದೆ ಎನ್ನುವುದನ್ನು ಗಂಭೀರವಾಗಿ ಗಮನಿಸಬೇಕಲ್ಲವೇ.? ತಂದೆತಾಯಂದಿರು, ಪೋಷಕರು ಕೂಡ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳನ್ನು ಭಾಗವಹಿಸುವಂತೆ ಮಾಡುತ್ತಾ ಅಂತಹ ಗೀಳನ್ನು ತಮ್ಮ ಮಕ್ಕಳಲ್ಲಿ ಬೆಳೆಸಲು ಪ್ರೋತ್ಸಾಹ ನೀಡುತ್ತಾರೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಇಂದು ನಾವು ಅತ್ಯಾಚಾರ ಕಗ್ಗೊಲೆಗಳಿಂದ ಕಳೆದುಕೊಳ್ಳುತ್ತಿರುವ ಹೆಣ್ಣು ಮಕ್ಕಳನ್ನು, ಯುವ ಸಮುದಾಯವನ್ನು ಉಳಿಸಲು ಸಾಧ್ಯವಲ್ಲವೇ. ಜೊತೆಗೆ ಲೈಂಗಿಕತೆಯ ಬಗ್ಗೆ ಆರೋಗ್ಯಕರ ಶಿಕ್ಷಣ ಹಾಗೂ ಮುಕ್ತ ಚರ್ಚೆಯ ವಾತಾವರಣ ನಿರ್ಮಾಣ ಮಾಡುವ ಕಾರ್ಯವೂ ಆಗಬೇಕು. ಇದು ಮಹಿಳಾ ಸಮಾನತೆಯ ವಿಚಾರವೂ ಹೌದು, ಮಾನವೀಯ ಮೌಲ್ಯಗಳ ರಕ್ಷಣೆಯ ವಿಚಾರವೂ ಹೌದಲ್ಲವೇ.? ಮಹಿಳಾ ಸಮಾನತೆಯೂ ಸೇರಿದಂತೆ ಸಾಮಾಜಿಕ ಸಮಾನತೆಯ ವಿಚಾರವೂ ಇದರಲ್ಲಿ ಅಡಗಿದೆ.

ಭಾರಿ ಜಾಗತಿಕ ಕಾರ್ಪೋರೇಟುಗಳ ಕಪಿ ಮುಷ್ಠಿಯಿಂದ ನಮ್ಮ ದೇಶವನ್ನು ಬಿಡಿಸಿಕೊಂಡು ನಮ್ಮ ದೇಶದ ಆಸ್ತಿ ಹಾಗೂ ರಾಜಕೀಯ ಅಧಿಕಾರಗಳಲ್ಲಿ, ಸಾಮಾಜಿಕ ಸ್ಥಾನಮಾನಗಳಲ್ಲಿ ದಲಿತ ದಮನಿತರು ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವಕಾಶ ಸಿಗುವಂತಹ ಸಹಜ ವಾತಾವರಣ ನಿರ್ಮಾಣವಾಗುವವರೆಗೂ ಇಂತಹ ಅಪಾಯಗಳು ತಪ್ಪುವುದಿಲ್ಲ. ಈ ಸತ್ಯವನ್ನು ಮನಗಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸುವುದು ಎಲ್ಲಾ ಜನಸಾಮಾನ್ಯರ ಕರ್ತವ್ಯವಾಗಬೇಕಾಗಿದೆ.

07/11/2019                  -ನಂದಕುಮಾರ್. ಕೆ .ಎನ್. ಕುಂಬ್ರಿ ಉಬ್ಬು

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...