Skip to main content

ಪೌರತ್ವ ಕಾಯಿದೆಯ ಹೆಸರಿನಲ್ಲಿ ಅಲ್ಪಸಂಖ್ಯಾತ , ದಲಿತ, ದಮನಿತ, ಬಹುಸಂಖ್ಯಾತ - CAA-NRC- minorities- daliths-


ಪೌರತ್ವ ಕಾಯಿದೆಯ ಹೆಸರಿನಲ್ಲಿ ಅಲ್ಪಸಂಖ್ಯಾತ ,

ದಲಿತ, ದಮನಿತ, ಬಹುಸಂಖ್ಯಾತ ಜನಸಾಮಾನ್ಯರ

 ಪೌರತ್ವ ನಿರಾಕರಣೆಯ ಸಂಚು!?

ಇಂಡಿಯಾ ಇಂದು ಭಾರಿ ಪ್ರಕ್ಷುಭ್ಧತೆಯಲ್ಲಿದೆ. ಇಡೀ ದೇಶದ ಬಹುಸಂಖ್ಯಾತ ಜನಸಾಮಾನ್ಯರು  ಕೇಂದ್ರ ಸರಕಾರದ ನಿರಂಕುಶ ಆಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರತಿಬಂಧಕಾಜ್ಞೆ, ಕರ್ಫ್ಯೂ ಗಳನ್ನು ಲೆಕ್ಕಿಸದೇ, ಪ್ರಭುತ್ವದ ಸಶಸ್ರ್ತ ಪಡೆಗಳ  ಲಾಠಿ ಚಾರ್ಜ್ ಗುಂಡೇಟಿಗೆ ಎದೆಯೊಡ್ಡಿ ಬೀದಿಗಿಳಿದು ಹೋರಾಟಗಳಿಗೆ ದುಮುಕುತ್ತಿದ್ದಾರೆ. ವಿದ್ಯಾರ್ಥಿ ಸಮೂಹ ಅದರಲ್ಲಿ ಮುಂಚೂಣಿಯಲ್ಲಿದೆ.

1947ರಲ್ಲಿ ಬ್ರಿಟೀಷರು ಇಂಡಿಯಾದಲ್ಲಿದ್ದ ಭಾರಿ ಭೂಮಾಲಿಕರು ಹಾಗೂ ರಾಜರುಗಳು, ಪಾಳೇಗಾರರು ಮತ್ತು ಪ್ರಧಾನವಾಗಿ ಬ್ರಿಟೀಷರ ದಲ್ಲಾಳಿ ಬಂಡವಾಳಿಗರನ್ನೊಳಗೊಂಡ ಭಾರಿ ಆಸ್ತಿವಂತರಾಗಿದ್ದ ವರ್ಗಗಳಿಗೆ ರಾಜಕೀಯ ಅಧಿಕಾರ ಹಸ್ತಾಂತರ  ಮಾಡಿ ಭೌತಿಕವಾಗಿ ಇಂಡಿಯಾ ತೊರೆದು ಹೋದರು. ಅದಾಗಿ ಏಳು ದಶಕಗಳು ಕಳೆದಿವೆ.  ಈ ಏಳು ದಶಕಗಳಲ್ಲಿ ಇಂಡಿಯಾ ದೇಶವು ಜಾಗತಿಕ ಭಾರಿ ಕಾರ್ಪೋರೇಟುಗಳ ಹಿಡಿತಗಳಲ್ಲಿ ಸಿಲುಕಿತ್ತು. ಅದು ಈ ದೇಶದ ಜನಸಾಮಾನ್ಯರನ್ನು ಭಾರಿ ಅಭದ್ರತೆಯತ್ತ ದೂಡಿದೆ. ಅದರ ಪರಿಣಾಮವಾಗಿ ಇಂದು ಈ ದೇಶದಲ್ಲೇ ಹುಟ್ಟಿ ಬೆಳೆದ ಜನಸಾಮಾನ್ಯರು ದೇಶಭ್ರಷ್ಟರಾಗಿ ಕ್ಯಾಂಪುಗಳಲ್ಲಿ ಬಂದಿಗಳಾಗಿ ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.

ಇಂಡಿಯಾದ ಭಾಗವೆಂದು ಆಳುವ ಸರ್ಕಾರಗಳು ಹೇಳುತ್ತಾ ಬಂದ ಈಶಾನ್ಯ ಭಾಗದ ಅಸ್ಸಾಂ, ಮಣಿಪುರ, ಅರುಣಾಚಲಪ್ರದೇಶ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ರಾಜ್ಯಗಳು ಇಂದು ಮತ್ತೊಮ್ಮೆ ಹೊತ್ತಿ ಉರಿಯಲಾರಂಭಿಸಿವೆ. ಕಾಶ್ಮೀರದ ಎಲ್ಲಾ ಜನರನ್ನು  ಅವರದೇ ನೆಲದಲ್ಲಿ ಅಕ್ಷರಶಃ ಬಂದಿಗಳನ್ನಾಗಿ ಮಾಡಿಡಲಾಗಿದೆ. ದೆಹಲಿ, ಉತ್ತರಖಂಡ, ಜಾರ್ಖಂಡ್, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ತಮಿಳುನಾಡು ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಮದ್ಯ ಪ್ರದೇಶ, ಬಿಹಾರ ಸೇರಿದಂತೆ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆಯಲಾರಂಭಿಸಿವೆ. ದೇಶದ ಈಶಾನ್ಯ ಭಾಗವು ಮೊದಲಿನಿಂದಲೂ ಸೇನೆಯ ಹಿಡಿತದಲ್ಲಿಯೇ ಇದೆ. ಈಗ ಮತ್ತಷ್ಟು ಸೇನಾ ತುಕಡಿಗಳನ್ನು ಈ ಭಾಗಗಳಿಗೆ ರವಾನಿಸಿರುವ ಸುದ್ಧಿಯಿದೆ. ಒಟ್ಟಿನಲ್ಲಿ ದೇಶವಿಂದು ಆತಂಕ, ಅನುಮಾನ, ಅಭದ್ರತೆ, ಚರ್ಚೆ,  ಭಾರಿ ಹೋರಾಟ, ಪ್ರದರ್ಶನಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸೇರಿದಂತೆ ದಲಿತ ದಮನಿತರು ಸಧ್ಯಕ್ಕೆ ಕೋಮುವಾದಿ ಹಾಗೂ ಜಾತೀವಾದಿ ಧಾಳಿಗಳ ಜೊತೆಗೆ ದೇಶ ಭ್ರಷ್ಠತೆಯ ಭಾರಿ ಅಭಧ್ರತೆಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಇಂಡಿಯಾದ ಸಂಸತ್ತಿನ ಎರಡೂ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಗಳು ಅನುಮೋದಿಸಿ ರಾಷ್ಟ್ರಪತಿಗಳ ಅಂಕಿತವೂ ಬಿದ್ದು  ಪೌರತ್ವ ತಿದ್ದುಪಡಿ ಮಸೂದೆ  2019, 12/12/2019ರಿಂದ ಕಾಯಿದೆಯಾಗಿ ಜಾರಿಗೆ ಬಂದಿದೆ. ಸಿಟಿಜೆನ್ ಶಿಪ್ (ಅಮೆಂಡ್ ಮೆಂಟ್) ಬಿಲ್ 2019 ,ಕ್ಯಾಬ್ (CAB) ಎಂದು ಸಂಸತ್ತಿನಲ್ಲಿ ಮಂಡಿತವಾಗಿತ್ತು. ಈಗ ಸಂಕ್ಷಿಪ್ತವಾಗಿ ಸಿಎಎ (CAA) ಎಂದು ಇದನ್ನು ಕರೆಯಲಾಗುತ್ತಿದೆ. ಇದಕ್ಕೂ ಮೊದಲು ಇಂಡಿಯಾ ಪೌರತ್ವ ಕಾಯಿದೆ 1955 ಎಂದು ಇತ್ತು. ಅದರಲ್ಲಿ ನಿರ್ದಿಷ್ಟ ಅವಧಿಯಿಂದ ಭಾರತದ ಗಡಿಯೊಳಗೆ ವಾಸ ಮಾಡುತ್ತಿರುವ, ಹುಟ್ಟಿರುವ ಎಲ್ಲರೂ ಭಾರತದ ಪೌರರು ಎಂದು ಪರಿಗಣಿಸಲಾಗಿತ್ತು. ಧಾರ್ಮಿಕತೆ ಆಧಾರದಲ್ಲಿ ಪೌರತ್ವ ನೀಡುವ, ನಿರ್ದಿಷ್ಠ ರಾಷ್ಟ್ರಗಳಿಗೆ ಮಾತ್ರ ಸೇರಿದ, ನಿರ್ಧಿಷ್ಟ ಧರ್ಮಗಳಿಗೆ ಸೇರಿದವರಿಗೆ ಮಾತ್ರ ಎನ್ನುವ ಪ್ರಸ್ತಾವಗಳಿರಲಿಲ್ಲ.

ಅದನ್ನು ಈಗ ಬದಲಾಯಿಸಲಾಗಿದೆ. ಇದನ್ನು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ವಲಸಿಗರಾಗಿ 2014ಕ್ಕೂ ಮುಂಚೆ ಇಂಡಿಯಾಕ್ಕೆ ಬಂದಿರುವ ಹಿಂದು, ಫಾರ್ಸಿ, ಜೈನ, ಕ್ರಿಶ್ಚಿಯನ್, ಸಿಖ್ ಸಮುದಾಯಗಳ ಜನರಿಗೆ ಇಂಡಿಯಾದ ಪೌರತ್ವವನ್ನು ನೀಡುವ ಮಸೂದೆ  ಎಂದು ನರೇಂದ್ರ ಮೋದಿ ಸರಕಾರ ಹೇಳುತ್ತಿದೆ. ಅದರಲ್ಲಿ ಮುಸ್ಲಿಮರನ್ನು ಉದ್ಧೇಶಪೂರ್ವಕವಾಗಿಯೇ ಹೊರಗಿಟ್ಟಿರುವ ಮತ್ತು ಧಾರ್ಮಿಕ ಆದಾರದ ಮೇಲೆ ಪೌರತ್ವ ನೀಡುವ ಮೋದಿಯ ಬಿಜೆಪಿ ಸರಕಾರದ ನಡೆಗಳ ಬಗ್ಗೆ ವ್ಯಾಪಕ ಖಂಡನೆಗಳು ಪ್ರತಿಭಟನೆಗಳು ದಾಖಲಾಗುತ್ತಿವೆ. ಸಹಜವಾಗಿ ಸಂಘಪರಿವಾರ ಇವುಗಳನ್ನು ಮುಕ್ತವಾಗಿ ಬೆಂಬಲಿಸುತ್ತಿದೆ.

ಆದರೆ ವಿಷಯ ಅಷ್ಟು ಸರಳವಿಲ್ಲ. ಇದನ್ನು ಜನರ ಪ್ರತಿಭಟನೆಗಳು ಈಗಾಗಲೇ ತೋರಿಸುತ್ತಿವೆ. ಧಾರ್ಮಿಕತೆಯ ಆಧಾರದಲ್ಲಿ ಪೌರತ್ವ ನೀಡುವ ಮೋದಿ  ಸರಕಾರದ  ಕ್ರಮ  ಒಟ್ಟಾರೆ ಸಂವಿಧಾನದ ಆಶಯಗಳಿಗೆ ಹಾಗೂ ಸಂವಿಧಾನದ ವಿಧಿ 14 ಕ್ಕೆ ತದ್ವಿರುದ್ಧವಾಗಿದೆ ಎಂದು ಚರ್ಚೆಗಳು ನಡೆಯುತ್ತಿವೆ. ಇಂಡಿಯಾದ ಭೂಪ್ರದೇಶದಲ್ಲಿ ನೆಲೆಸಿರುವ ಎಲ್ಲರೂ ಕಾನೂನಿನ  ಮುಂದೆ ಸಮಾನರು ಎಂದು ಸಂವಿಧಾನ 14ನೇ ವಿಧಿ ಹೇಳುತ್ತದೆ. ಜಾತಿ ಇಲ್ಲವೇ ಮತಾಧಾರಿತವಾಗಿ ಪೌರತ್ವ ಗುರುತಿಸುವುದು ಸಂವಿಧಾನದ ಆಶಯಗಳು ಹಾಗೂ ವಿಧಿಗಳಿಗೆ  ಹಾಗೂ ಅಂತರಾಷ್ಟ್ರೀಯ ಮಾನದಂಡಗಳಿಗೂ ವಿರುದ್ಧವಾದುದು.

 ನ್ಯಾಯಾಲಯದ ಕಟ್ಟೆ ಏರಿರುವ ಈ ಮಸೂದೆಯ ಗತಿ ಮುಂದೆ ಏನಾಗಬಹುದು ಎನ್ನುವ ಬಗ್ಗೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಪರಿಸ್ಥಿತಿ ಇಂಡಿಯಾದಲ್ಲಿ ಈಗ ಇಲ್ಲ. ಬಾಬರೀ ಮಸೀದಿ, ಗೋದ್ರಾ, ಶಬರಿಮಲೆ, ಕರ್ನಾಟಕದ ಶಾಸಕರ ಅನರ್ಹತೆ ಮೊದಲಾದ ಪ್ರಕರಣಗಳಲ್ಲಿ  ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಹಾಗೂ ನಡೆಗಳನ್ನು ಗಮನಿಸಿದರೆ ಅದು ಅರ್ಥವಾಗುವ ವಿಚಾರ. ನ್ಯಾಯದ ಮೂಲ ಕಲ್ಪನೆಗಳಿಗೆ ದಕ್ಕೆಯಾಗುತ್ತಿರುವ ಸಂಧರ್ಭವಿದಾಗಿದೆ.

 ಈಗ  ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಮಸೂದೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ. ರಾಷ್ಟ್ರಾದ್ಯಂತ ಜಾರಿಗೊಳಿಸಲು ಹೊರಟಿರುವ ಪೌರತ್ವ ನೊಂದಾವಣೆಗೆ (ಎನ್ ಆರ್ ಸಿ) ಪೂರಕವಾಗಿಯೇ ಈ ಮಸೂದೆಯನ್ನು ಜಾರಿಗೆ ತರಲಾಗಿದೆ. ಇದರ ಜೊತೆಗೆ ದೇಶದ ಜನರನ್ನು ಜಾತಿ ಧರ್ಮಗಳ ಆಧಾರಗಳಲ್ಲಿ ಮತ್ತಷ್ಟು ಧೃವೀಕರಣಗೊಳಿಸುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಹುನ್ನಾರ, ಮುಸ್ಲಿಮರು, ಆದಿವಾಸಿಗಳು ದಲಿತದಮನಿತರು, ಮತ್ತಿತರರ ಮತ ನೀಡುವ ಹಕ್ಕುಗಳನ್ನು ಶಾಸನಬದ್ಧವಾಗಿ ನಿರಾಕರಿಸುವ, ಬಹುಸಂಖ್ಯಾತ ದಲಿತ, ಆದಿವಾಸಿಗಳನ್ನು ದೇಶಭ್ರಷ್ಠಗೊಳಿಸುವ, ಸದಾ ಅತಂತ್ರ ಸ್ಥಿತಿಯಲ್ಲಿಡುವ, ಅವರಿಗೆ ಶಾಸನಬದ್ಧ ಅವಕಾಶಗಳನ್ನು ನಿರಾಕರಿಸುವ, ದಲಿತ ದಮನಿತ ಅಲ್ಪಸಂಖ್ಯಾತರ ಹೋರಾಟದ ದ್ವನಿಗಳನ್ನು ಶಾಸನಬದ್ಧವಾಗಿ ಅಡಗಿಸುವ, ದೇಶವಿಂದು ಎದುರಿಸುತ್ತಿರುವ ತೀವ್ರತರದ ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟು, ನಿರುದ್ಯೋಗ, ತಲಾ ಆದಾಯ ಕುಸಿತ, ಬೆಲೆಯೇರಿಕೆ, ಹಣದುಬ್ಬರ, ಭಾರಿ ಕಾರ್ಪೋರೇಟು ಲೂಟಿ, ಸಾಮಾಜಿಕ ಅಭದ್ರತೆ, ಮೀಸಲಾತಿ ಮೊದಲಾದ ಅವಕಾಶ ವಂಚನೆ ಇತ್ಯಾದಿಗಳಿಂದ ಜನಸಾಮಾನ್ಯರ ಗಮನವನ್ನು ದಿಕ್ಕುತಪ್ಪಿಸುವ, ದೇಶದ ಎಲ್ಲ ಜನಸಾಮಾನ್ಯರ ಮೇಲೆ ನೇರ ನಿಗಾ ಇಡುವ, ಎಲ್ಲಾ ಪ್ರಜಾತಾಂತ್ರಿಕ ಅವಕಾಶಗಳನ್ನೇ ನಿರಾಕರಿಸುವ…… ಇತ್ಯಾದಿ ಉದ್ಧೇಶಗಳು ಈ ನಡೆಗಳ ಹಿಂದೆ ಅಡಗಿರುವುದನ್ನು ಗುರುತಿಸಬೇಕಾಗಿದೆ.

 ಯಾಕೆಂದರೆ ಈ ದೇಶದ ಬಹುಸಂಖ್ಯಾತ ಜನರಲ್ಲಿ ಸರಿಯಾಗಿ ಯಾವುದೇ ದಾಖಲೆಗಳು ಈಗಲೂ ಇಲ್ಲ. ಅದರಲ್ಲೂ ಕೋಟ್ಯಾಂತರ ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಯಾವುದೇ ದಾಖಲೆಯೂ ಇರುವುದಿಲ್ಲ. ಇನ್ನು ಆದಾರ್ ಕಾರ್ಡ್ ಆಗಲಿ, ಮತದಾರ ಗುರುತು ಪತ್ರವಾಗಲೀ, ಶಾಲಾ ದಾಖಲಾತಿ ದಾಖಲೆಯಾಗಲೀ, ಜನನ ಪತ್ರವಾಗಲೀ, ಚಾಲನಾ ಪರವಾನಿಗೆಯಾಗಲೀ, ಪಾಸ್ ಪೋರ್ಟ್ ಆಗಲೀ, ಈ ದೇಶದ ಪೌರತ್ವವನ್ನು ನಿರ್ಧರಿಸುವ ದಾಖಲೆಗಳೆಂದು ಈಗಲೂ ಶಾಸನಬದ್ದವಾಗಿ ಪರಿಗಣಿಸಲ್ಪಟ್ಟಿಲ್ಲ. ಅವೆಲ್ಲವೂ ಆಯಾ ಉದ್ದೇಶಗಳಿಗೆ ಮಾತ್ರವೆಂದು ಮಾತ್ರ ಹೇಳಲ್ಪಟ್ಟಿದೆ. ಅಲ್ಲದೆ ಜನಸಾಮಾನ್ಯರ ಬಳಿ ಇರುವ ದಾಖಲೆಗಳಲ್ಲೂ ನೂರೆಂಟು ಲೋಪಗಳಿರುವ ದೇಶ ನಮ್ಮದು. ಅಲ್ಲದೆ ತಮ್ಮ ಪೌರತ್ವ ಸಾಬೀತು ಪಡಿಸಲು ಬೇಕಾದ ದಾಖಲೆಗಳೇನು ಎನ್ನುವುದನ್ನು ಸ್ಪಷ್ಟವಾಗಿ ಕಾಯಿದೆಯಲ್ಲಿ ಗುರುತಿಸಲಾಗಿಲ್ಲ. ಹೀಗಿರುವಾಗ ಜನಸಾಮಾನ್ಯರು ತಮ್ಮ ಪೌರತ್ವವನ್ನು ತಾವೇ ಸಾಬೀತು ಮಾಡಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟರೆ ಕತೆ ಏನಾಗಬಹುದು ಊಹಿಸಲಾಗದು. ಉದಾಹರಣೆಗೆ ಈಗ ಮೋದಿ ಹಾಗೂ  ಶಾ ಸರಕಾರ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯ ಪ್ರಕಾರ 2014 ಡೆಸೆಂಬರ್ 31ಕ್ಕೂ ಮುಂಚಿನಿಂದ ಈ ದೇಶದಲ್ಲಿ ವಾಸವಿರುವ ನಿರ್ದಿಷ್ಟ ರಾಷ್ಟ್ರಗಳ, ನಿರ್ದಿಷ್ಟ ಸಮುದಾಯಗಳ ಜನರಿಗೆ ಇಂಡಿಯಾದ ಪೌರತ್ವ ನೀಡಲಾಗುವುದು ಎಂದಿದೆ. ಆದರೆ ಅದನ್ನು ಸಾಬೀತು ಮಾಡಬೇಕಾದ ಜವಾಬ್ದಾರಿ ಆಯಾ ಜನರದೇ ಆಗಿರುತ್ತದೆ. ಅದಕ್ಕಿರುವ ದಾಖಲೆಗಳು ಮಾನದಂಡಗಳು ಭಾರಿ ಗೊಂದಲಕಾರಿಯೇ ಆಗಿವೆ.

ಗೂಢಚಾರಿ ಸಂಸ್ಥೆಗಳ ವರದಿಯೇ ಅಂತಿಮ!

  ಅದೂ ಅಲ್ಲದೆ ದೇಶದ ಪೌರತ್ವವನ್ನು ನಿರ್ಧರಿಸುವುದು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ಆರ್ ಎ ಡಬ್ಲ್ಯೂ ) ಮತ್ತು ಇಂಟೆಲಿಜೆನ್ಸ್ ಬ್ಯೂರೋ ( ಐ ಬಿ) ಎಂಬ ಇಂಡಿಯಾ ದೇಶದ ಗೂಢಚಾರ ಹಾಗೂ ಭದ್ರತಾ ಅಂಗಗಳಾಗಿವೆ. ಇವುಗಳು ಜನರ ಮಾಹಿತಿಗಳನ್ನು ಸಂಗ್ರಹಿಸಿದ ನಂತರ ಇಂಡಿಯಾದ ಭೂ ಪ್ರದೇಶದೊಳಗೆ ಇರುವ ಜನರೆಲ್ಲರು ವಿದೇಶದಿಂದ ಬಂದ ಅಕ್ರಮ ವಲಸಿಗರೋ ಅಲ್ಲವೋ ಎಂದು ತೀರ್ಮಾನಿಸಿ ಅದನ್ನು ಅಂತಿಮಗೊಳಿಸಿ ಸರಕಾರಕ್ಕೆ ಕಳುಹಿಸಿ ಕೊಟ್ಟ  ಬಳಿಕವೇ ಸರಕಾರ ಯಾರದೇ ಪೌರತ್ವವನ್ನು ತೀರ್ಮಾನಿಸುವುದು. ಎಲ್ಲಾ ಜನರ ವ್ಯಕ್ತಿಗತ ಮಾಹಿತಿಗಳೆಲ್ಲಾ ಈ ಗೂಢಚಾರ ಹಾಗೂ ಭದ್ರತಾ ಸಂಸ್ಥೆಗಳು ನಿರ್ವಹಿಸುತ್ತಾ ಎಲ್ಲಾ ಜನಸಾಮಾನ್ಯರ ಖಾಸಗೀ ವ್ಯವಹಾರಗಳೂ ಸೇರಿದಂತೆ ಎಲ್ಲದರ ಮೇಲೆ ನೇರ ನಿಗಾ ಇಡಲು ಸುಲಭ ಮಾಡಿಕೊಳ್ಳುವ ಉದ್ದೇಶವೂ ಈ ನಡೆಗಳ ಹಿಂದೆ ಇದೆಯೆನ್ನುವುದನ್ನೂ ಗ್ರಹಿಸಬೇಕಿದೆ. ಅಸ್ಸಾಂನಲ್ಲಿ ಇಂತಿಷ್ಟು ಜನರು ಅಕ್ರಮ ವಲಸಿಗರು ಎಂದು ಸರ್ಕಾರ ತೀರ್ಮಾನಿಸಿದ್ದು ಈ ಸಂಸ್ಥೆಗಳು ಸಲ್ಲಿಸಿದ ವರದಿಯನ್ನಾಧರಿಸಿಯೇ ಆಗಿತ್ತು.   ಇವೆಲ್ಲದರ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮ ಊಹಿಸಲು ಕೂಡ ಕಷ್ಟಕರವಾದುದು.

ದೇಶದಲ್ಲಿಯೇ ಹುಟ್ಟಿ ಬೆಳೆದರೂ ದೇಶಭ್ರಷ್ಟರಾಗಿ ಕ್ಯಾಂಪುಗಳಲ್ಲಿ ಬಂದಿಗಳಾಗಿ ಕೊಳೆಯಬೇಕೆ?

 ಇಂಡಿಯಾದ ಗಡಿಯೊಳಗೆ ತಲತಲಾಂತರಗಳಿಂದ ವಾಸ ಮಾಡುತ್ತಾ ಬಂದಿರುವ ಜನಸಾಮಾನ್ಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗಳನ್ನು ಈಗಲೂ ಕೂಡ ಖಾತ್ರಿ ಮಾಡಲಾಗದ ಸರಕಾರವೊಂದು ನೆರೆಯ ಕೇವಲ ಮೂರು ರಾಷ್ಟ್ರಗಳಲ್ಲಿರುವ ಮುಸ್ಲಿಮೇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಹಾಗೂ ಭದ್ರತೆ ನೀಡಲು ಕಾನೂನೊಂದನ್ನು ತರುತ್ತಿದೆಯೆನ್ನುವುದೇ ಹಾಸ್ಯಾಸ್ಪದ ಹಾಗೂ ಶಂಕಾಸ್ಪದವಾಗುವುದಿಲ್ಲವೇ.? ಅಲ್ಲದೇ ಸರಕಾರದ ಅಂಕಿ ಅಂಶದ ಪ್ರಕಾರ ಕೇವಲ 31,313 ಮುಸ್ಲಿಮೇತರ ಜನರು ಮಾತ್ರ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳ ವಲಸಿಗರು ಇಂಡಿಯಾದಲ್ಲಿರುವುದು. ಇಷ್ಟು ಸಣ್ಣ ಜನಸಂಖ್ಯೆಯ ಜನರಿಗೆ ಪೌರತ್ವ ನೀಡುವ ವಿಚಾರ ಈಗ ದೊಡ್ಡ ಸಮಸ್ಯೆಯಾಗಿ ಮುಂದೆ ಬಂದಿದೆಯೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ !.

ಸಮಾಜದ ಅರ್ಧ  ಬಾಗವಾಗಿರುವ ಮಹಿಳಾ ಸಮುದಾಯವಿಂದು ಹಿಂದೆಂದೂ ಇಲ್ಲದಷ್ಟು ಸಾಮಾಜಿಕ ಹಾಗೂ ಆರ್ಥಿಕ ಅಭದ್ರತೆಗಳಿಗೆ ಈಡಾಗುತ್ತಾ ಬೀದಿ ಶವವಾಗುವ, ಸುಟ್ಟು ಕರಕಲಾಗುವ, ಹಾಡಹಗಲೇ ಅತ್ಯಾಚಾರ, ಕಿರುಕುಳ ಹಿಂಸೆಗಳಿಗೆ ಗುರಿಯಾಗುವ, ಹಗಲುರಾತ್ರಿ ತಮ್ಮ ಶ್ರಮವನ್ನು ವಿಪರೀತವಾದ ಲೂಟಿಗೆ ತೆರೆದಿಡಬೇಕಾದ ಪರಿಸ್ಥಿತಿಗೆ ಒಳಗಾಗುವ ಪರಿಸ್ಥಿತಿಯನ್ನು ತಂದಿಡಲಾಗಿದೆ. ಅವರ ರಕ್ಷಣೆ ಖಾತ್ರಿಗೊಳಿಸುವಂತಹ ಕಾರ್ಯ ಯಾವುದನ್ನೂ ಸರಕಾರ ಗಂಭೀರವಾಗಿ ಮಾಡದೇ ಇರುವುದು ಕಣ್ಣಿಗೆ ರಾಚುವ ಸತ್ಯವಾಗಿದೆ.

ಇಂದು  ದಲಿತ ದಮನಿತರ ಮೇಲಿನ ದೌರ್ಜನ್ಯಗಳು ದೇಶಾದ್ಯಂತ ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿದೆ. ಕೇವಲ ದಲಿತದಮನಿತರಾಗಿರುವ ಕಾರಣಕ್ಕೇನೆ ಬೀದಿ ಶವವಾಗಬೇಕಾದ, ತುಚ್ಚ ಅವಮಾನಗಳಿಗೀಡಾಗಬೇಕಾದ, ಕಗ್ಗೊಲೆಗಳಿಗೀಡಾಗಬೇಕಾದ, ಮಲದ ಗುಂಡಿಗಳಲ್ಲಿ ಉಸಿರುಕಟ್ಟಿ ಸಾಯಬೇಕಾದ ಪರಿಸ್ಥಿತಿಗಳು ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಇವುಗಳನ್ನು ತಡೆಗಟ್ಟಲು ಬೇಕಾದ ಪರಿಣಾಮಕಾರಿ ಕ್ರಮಗಳನ್ನು ಸರಕಾರ ಮಾಡುತ್ತಿದೆಯಾ ಎಂದರೆ ಕನಿಷ್ಠ ಮಟ್ಟದಲ್ಲಿ ಕೂಡ ಇಲ್ಲವೆನ್ನುವುದೇ ಎದ್ದುಕಾಣುವ ಸತ್ಯ. ಬದಲಿಗೆ  ಅವರ ಪೌರತ್ವವನ್ನೇ ನಿರಾಕರಿಸಿ ಅಕ್ರಮವಲಸಿಗರೆಂದು ಬಂಧಿಸಿ ಕ್ಯಾಂಪುಗಳಲ್ಲಿ ಕೂಡಿಹಾಕಿಡುವ ಸಂಚು ನಡೆಸಲಾಗುತ್ತಿದೆ!

ದೇಶದ ಆಸ್ತಿ ಹಾಗೂ ಸಂಪನ್ಮೂಲ ಲಪಟಾಯಿಸುವ ಭಾರಿ ಕಾರ್ಪೋರೇಟ್ ವರಸೆ

ಈ ದೇಶದ ಆದಿವಾಸಿ ಬುಡಕಟ್ಟು ಸಮುದಾಯಗಳು ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ನಾಶವಾಗಬೇಕಾದ ಪರಿಸ್ಥಿತಿ ಕೂಡ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಕಾರಣವೇನೆಂದರೆ ಮೋದಿಯ ಕೇಂದ್ರ ಸರಕಾರ ಆದಿವಾಸಿ ಬುಡಕಟ್ಟುಗಳು ತಲೆತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಪ್ರದೇಶಗಳನ್ನು ಭಾರಿ ಕಾರ್ಪೋರೇಟುಗಳಿಗೆ ಗಣಿಗಾರಿಕೆ ಮೊದಲಾದ ಚಟುವಟಿಕೆಗಳಿಗೆ ತೆರೆದಿಡುವ ಕಾನೂನು ಜಾರಿಗೆ ತಂದಿದೆ. ಅದರಲ್ಲಿ ಖಾಸಗೀ ಸಹಭಾಗಿತ್ವದಲ್ಲಿ ಅರಣ್ಯ ರಕ್ಷಣೆ ಹಾಗೂ ಅರಣ್ಯ ಬೆಳೆಸುವಿಕೆ ಕೂಡ ಒಂದು. ಇಲ್ಲಿ ಖಾಸಗಿ ಎಂದರೆ ಅದು ಭಾರಿ ಕಾರ್ಪೋರೇಟುಗಳೆನ್ನುವುದರಲ್ಲಿ ಅನುಮಾನ ಬೇಕಿಲ್ಲ. ಅದರ ಸಿಂಹಪಾಲು ಅಂಬಾನಿ ಅದಾನಿ ಕೂಟದ ಕಾರ್ಪೋರೇಟುಗಳಿಗೆ ಆಗುತ್ತಿವೆ ಎನ್ನುವುದೂ ಕೂಡ ರಹಸ್ಯ ವಿಚಾರ ಅಲ್ಲ.

ಇಂದು ಇಂಡಿಯಾದ ಅತೀ ದೊಡ್ಡ ಭೂಮಾಲಿಕರುಗಳು ಈ ಕಾರ್ಪೋರೇಟು ಕೂಟಗಳೇ ಆಗಿವೆ ಎನ್ನುವುದು ಆಶ್ಚರ್ಯದ ವಿಚಾರವಲ್ಲ. ಲಕ್ಷಾಂತರ ಹೆಕ್ಟೇರ್ ಭೂಮಿ ಇವರುಗಳ ಹಿಡಿತದಲ್ಲಿದೆ. ಇವರುಗಳು ಸೇರಿದಂತೆ ಭಾರಿ ಆಸ್ತಿವಂತರುಗಳು ಮತ್ತವರ ಬೆಂಬಲಿಗರು ಈ ದೇಶದ ಆಳು ಶಕ್ತಿಗಳಾಗಿವೆ.  ಈಗ ರೈಲ್ವೇ ಹಾಗೂ ರಕ್ಷಣಾ ಇಲಾಖೆಯ ಭೂಮಿಗಳನ್ನೂ ಈ ಕೂಟಗಳಿಗೆ ನೀಡುವ ಕಾರ್ಯ ಚಾಲ್ತಿಯಲ್ಲಿದೆ. ಈ ಎರಡೂ ಇಲಾಖೆಗಳಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿಯಿದೆ. ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ರೈತಾಪಿಗಳ ಭೂಮಿಗಳನ್ನು ಅತೀ ಹೆಚ್ಚಿನ ಮಟ್ಟದಲ್ಲಿ ಈ ಎರಡು ಇಲಾಖೆಗಳಿಗಾಗಿ ಸರಕಾರ ವಶಪಡಿಸಿಟ್ಟುಕೊಂಡಿತ್ತು. ಈಗದು ಸುಲಭವಾಗಿ ಕಾರ್ಪೋರೇಟುಗಳ ಪಾಲಾಗುವಂತೆ ವ್ಯವಸ್ಥಿತವಾಗಿ ಸರಕಾರವೇ ನೋಡಿಕೊಳ್ಳುತ್ತಿದೆ. ಅದೇ ರೀತಿ ಸಾರ್ವಜನಿಕ ವಲಯದ ಕಂಪನಿಗಳನ್ನು ಸಾರಾಸಗಟಾಗಿ ಭಾರಿ ಕಾರ್ಪೋರೇಟುಗಳಿಗೆ ಕೊಡುವ ಕಾರ್ಯ ಹಿಂದೆಂದಿಗಿಂತಲೂ ಬಹಳ ಬಿರುಸಿನಿಂದ ಸಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಈ ಬಗ್ಗೆ  ಚರ್ಚೆ ನಡೆಯುವುದು ಹೆಚ್ಚಾಗಿ ಕಾಣದೇ ಹೋಗಿರುವುದು ಕಾಕತಾಳೀಯವೆಂದು ಹೇಳಲಾಗದು.

ವಿರೋಧ ಪಕ್ಷಗಳ ವಿರೋಧವೆಂಬ ಪ್ರಹಸನ?

 ಅಂದರೆ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಭಾರಿ ಚರ್ಚೆ ನಡೆಸಿದ ವಿರೋಧ ಪಕ್ಷಗಳು ಜನಸಾಮಾನ್ಯರ ಪರವಾಗಿ ತಾವೇನೋ ಭಾರಿ ಏನೋ ಕಡಿದು ಕಟ್ಟೇ ಹಾಕುತ್ತಿದ್ದೇವೆ ಎನ್ನುವ ಭ್ರಮೆಯನ್ನು ಬಿತ್ತಲು ಪ್ರಯತ್ನಿಸಿವೆ. ಸಿಎಬಿ  ಆಡಳಿತ ಪಕ್ಷ ಕೂಡ ತಾನು ಹಿಂದೂಗಳಿಗಾಗಿ ಭಾರಿ ದೊಡ್ಡ ಕೊಡುಗೆಯನ್ನು ಕೊಡುತ್ತಿದ್ದೇನೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ವಾಸ್ತವದಲ್ಲಿ ಈ ಕಾಯಿದೆಯ ರೂವಾರಿ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಸರಕಾರ ಬಹಳ ಹಿಂದೆಯೇ ಇದನ್ನು ಇದೇ ರೀತಿಯಲ್ಲಿಯೇ ಪ್ರಸ್ತಾಪಿಸಿತ್ತು. ಈಗ ವಿರೋಧದ ನಾಟಕ ಮಾಡುತ್ತಿದೆ. ಬಿಜೆಪಿ ಇದರ ಲಾಭ ಪೂರ್ಣವಾಗಿ ತಾವೇ ಪಡೆದುಕೊಳ್ಳಬೇಕೆಂದು ಈ ಬಗ್ಗೆ ಇದುವರೆಗೂ ಮೌನವಹಿಸಿ ಜನರ ಆಕ್ರೋಷ ತಮ್ಮ ಮೇಲೆ ತಿರುಗಿರುವುದನ್ನು ಕಂಡು ಇದರ ರೂವಾರಿ ತಾವಲ್ಲ ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್ ಸರಕಾರ ಇದರ ರೂವಾರಿ ಎಂದು ಈಗ ಹೇಳತೊಡಗಿದೆ. ವಿರೋಧ ಪಕ್ಷಗಳು ಚುನಾವಣಾ ಭಾಗವಾಗಿ ಮಾಡಿಕೊಳ್ಳುವ ಮೈತ್ರಿಯನ್ನು ಆಡಳಿತ ಪಕ್ಷದ ಇಂತಹ ಗಂಡಾಂತರಗಳನ್ನು ತಡೆಯುವ ವಿಚಾರದಲ್ಲಿ ಮಾಡಿಕೊಳ್ಳಲು ತಯಾರಾಗುವುದಿಲ್ಲ. ಅಂತಹ ಆಸಕ್ತಿಯನ್ನೇನೂ ತೋರಿಸುವುದಿಲ್ಲ. ಜನರ ವಿರೋಧ ಎದುರಾದಾಗ ಮಾತ್ರ ‘ಹೊಡೆದಂತೆ ಅತ್ತಂತೆ ಸತ್ತಂತೆ’ ಮಾಡುವ ನೀತಿ ಅನುಸರಿಸುತ್ತವೆ.

ಬದಲಿಗೆ ಈಗ ಭಾರಿ ದೊಡ್ಡ ದನಿಯಲ್ಲಿ ಪ್ರತಿಭಟಿಸಿ ಮಾತನಾಡುತ್ತಿರುವ ಮಮತಾ ಬ್ಯಾನೆರ್ಜಿ ಆಗ ವಾಜಪೇಯಿ ಸರಕಾರದ ಭಾಗವಾಗಿ ಅದನ್ನು ಬೆಂಬಲಿಸಿದ್ದರು. ಪೌರತ್ವ ತಿದ್ದುಪಡಿ ಮಸೂದೆ 2003ರ ಪ್ರಕಾರ ಕೇಂದ್ರ ಸರಕಾರಕ್ಕೆ ಮಾತ್ರ ಪೌರತ್ವವನ್ನು ನಿರ್ಧರಿಸುವ ಅಧಿಕಾರವಿದ್ದು, ಎನ್ ಆರ್ ಸಿ,( ನ್ಯಾಷನಲ್ ರಿಜಿಸ್ಟರ್ ಆಫ್ ಚಿಟಿಜೆನ್ ಶಿಪ್) ಎನ್ ಪಿ ಆರ್ ( ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟರ್ ) ಜಾರಿ ಮಾಡಲೇಬೇಕಾದ ಸಾಂವಿಧಾನಿಕ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸುತ್ತದೆ.

ಹಾಗಾಗಿ ತಮ್ಮ ತಮ್ಮ  ರಾಜ್ಯಗಳಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿರುವ ಇಂಡಿಯನ್ ಪೌರತ್ವ ಕಾಯಿದೆ 2019 ಅನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿರುವ ಕೇರಳದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ, ಪಶ್ಚಿಮಬಂಗಾಳದ ಮಮತಾ ಬ್ಯಾನೆರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರಕಾರ,  ಪಂಜಾಬಿನ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಸೇರಿದಂತೆ ಕೆಲವು ರಾಜ್ಯ ಸರಕಾರಗಳು ತಮ್ಮ ತಮ್ಮ ರಾಜ್ಯಗಳ ಜನಸಾಮಾನ್ಯರಿಗೆ ಹುಸಿ ಭರವಸೆಗಳನ್ನು ನೀಡಿ ಭ್ರಮೆಯಲ್ಲಿಡಲು ಪ್ರಯತ್ನಿಸಿವೆ. ಆ ಮೂಲಕ ಅಲ್ಲಿನ ಜನಸಾಮಾನ್ಯರ ಆಕ್ರೋಷ ತಮ್ಮ ಮೇಲೆ ತಿರುಗದಂತೆ ಮತ್ತು ಜನರು ಈ ಕಾಯಿದೆಯನ್ನು ಪ್ರತಿಭಟಿಸಿ ಬೀದಿಗೆ ಇಳಿಯದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿವೆ. ಕೇರಳದ ಪಿಣರಾಯಿ ನೇತೃತ್ವದ ಎಡರಂಗ ಸರಕಾರ ತನ್ನ ರಾಜ್ಯದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಕೆಲವು ಪಕ್ಷಗಳ ನೇತೃತ್ವದಲ್ಲಿ ಜನರು ಈ ಕಾಯಿದೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಬಂದ್ ಹಾಗೂ ಮುಷ್ಕರಕ್ಕೆ ಕರೆ ನೀಡಿರುವುದನ್ನು ಬಹಿರಂಗವಾಗಿ ವಿರೋಧಿಸಿ ದಮನಿಸುತ್ತಿರುವ ವರದಿ ಬರುತ್ತಿವೆ.

ಎಲ್ಲರೂ ಜಿಗಣೆಗಳೇ ನಮ್ಮ ನೆತ್ತರಿಗೆ !

 ವಾಸ್ತವದಲ್ಲಿ ಹಿಂದೂ ಸಮುದಾಯಗಳು ಎಂದು ಹೇಳಿಕೊಳ್ಳುವವರು ಸೇರಿದಂತೆ ಎಲ್ಲಾ ಜನಸಾಮಾನ್ಯರ ವಿರುಧ್ದವೇ  ಇವರೆಲ್ಲರೂ ಇದ್ದಾರೆ.  ಈ ಎರಡೂ ಬಣಗಳು ಮಾಡುತ್ತಿರುವ ಕಾರ್ಯದಲ್ಲಿ ಮೂಲಭೂತ ವ್ಯತ್ಯಾಸವಿಲ್ಲ. ಅದೇನೆಂದರೆ ‘ಹೊಡೆದಂತೆ ಅತ್ತಂತೆ ಮಾಡಿ ‘ ಕಾರ್ಪೋರೇಟುಗಳ ಪರವಾದ ಸರ್ಕಾರದ ನಡೆಗಳು ಸುಲಲಿತವಾಗಿ ಸಾಗುವಂತೆ ನೋಡಿಕೊಳ್ಳುವುದು. ಅವುಗಳಿಗೆ ಯಾವುದೇ ತಡೆಗಳು ಎದುರಾಗದಂತೆ ನೋಡಿಕೊಳ್ಳುವುದು. ಅದಕ್ಕಾಗಿಯೇ ಈ ಎಲ್ಲಾ  ವಾದ ಪ್ರತಿವಾದ ಆರ್ಭಟಗಳನ್ನು ಚಾಲ್ತಿಯಲ್ಲಿಟ್ಟಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇದನ್ನು ಅರ್ಥ ಮಾಡಿಕೊಳ್ಳಲು ಸಂಸತ್ತಿನ ಉಭಯ ಸದನಗಳು ಪೌರತ್ವ ಮಸೂದೆಯಲ್ಲಿ ಮುಳುಗಿರುವಾಗಲೇ ಸಾರ್ವಜನಿಕ ತೈಲ ಕಂಪನಿ ಬಿ ಪಿ ಸಿ ಎಲ್ ಮಾರಾಟವಾಗಿದೆ ಎಂಬ ಸುದ್ಧಿಯಿದೆ. ಬಿ ಇ ಎಂ ಎಲ್ ನ ಶೇ 28 ಕ್ಕೂ ಹೆಚ್ಚು ಸರಕಾರಿ ಶೇರುಗಳನ್ನು ಮಾರಾಟ ಮಾಡಲಾಗುತ್ತಿದೆ. ನಿಧಿ ಶೇಖರಣೆಯ ಹೆಸರಿನಲ್ಲಿ ಇಂತಹ ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಸಂಪೂರ್ಣವಾಗಿ ಭಾರಿ ಕಾರ್ಪೋರೇಟುಗಳಿಗೆ ದುಗ್ಗಾಣಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಮಾರಾಟಗಳ ದೊಡ್ಡ ಪಟ್ಟಿಯೇ ಸರ್ಕಾರ ತಯಾರು ಮಾಡಿ ಇಟ್ಟುಕೊಂಡಿದೆ.  ಸಾರ್ವಜನಿಕರ ಬ್ಯಾಂಕ್ ಠೇವಣಿಗಳಿಗೆ ಭಾರಿ ಅಪಾಯಕಾರಿಯಾದ ಎಫ್ ಆರ್ ಡಿ ಐ        ( ಫೈನಾನ್ಸಿಯಲ್ ರೆಸಲ್ಯೂಷನ್ ಅಂಡ್ ಡೆಪಾಸಿಟ್ ಇನ್ಶೂರೆನ್ಸ್ ಬಿಲ್ ) ಮಸೂದೆಯನ್ನು ಈ ಅಧಿವೇಶನದ ಕೊನೆಯ ದಿನ ಯಾವುದೇ ತಡೆಯಿಲ್ಲದೆ ಮಂಡಿತವಾಗಿ ಲೋಕಸಭೆಯ ಸೆಲೆಕ್ಟ್ ಸಮಿತಿಗೆ ಕಳುಹಿಸಲಾಗಿದೆ. ಈ ಮಸೂದೆಯ ಪ್ರಕಾರ ಸರಕಾರಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಜನರ ಠೇವಣಿಗಳನ್ನು ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಸರಕಾರ ಬಳಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ ಠೇವಣಿದಾರರಿಗೆ ಕೇವಲ ಒಂದು ಲಕ್ಷದವರೆಗಿನ ಠೇವಣಿ ಹಣಕ್ಕೆ ಮಾತ್ರ ಖಾತರಿ ನೀಡಿ ವಾಪಾಸು ಪಡೆಯಬಹುದಾದ ಅವಕಾಶ ನೀಡುತ್ತದೆ. ಇದರ ಬಗ್ಗೆ ಭಾರಿ ವಿವಾದವೆದ್ದಾಗ ಮೋದಿ ಸರಕಾರ ಕಳೆದ ಅಧಿವೇಶನದಲ್ಲಿ ಇದನ್ನು ಮಂಡಿಸುವುದರಿಂದ ಹಿಂದೆ ಸರಿದಿತ್ತು. ವಾಪಾಸು ಪಡೆಯಲಾಗಿದೆ ಎಂದು ಸುಳ್ಳು ಹೇಳಲಾಗಿತ್ತು. ಇಂತಹ ಸಾರ್ವಜನಿಕ ಉಳಿತಾಯ ಹಾಗೂ ಠೇವಣಿಗಳಿಗೆ ಮಾರಕವಾದ ಕಾನೂನು ತಿದ್ದುಪಡಿಗಳ  ಬಗ್ಗೆ ಈಗ ಸಂಸತ್ತಿನಲ್ಲಿ ದ್ವನಿಯೇಳದೇ ಇರುವುದು ಕಾಕತಾಳೀಯವೇನಲ್ಲ.

ಕೃಷಿ ಬಿಕ್ಕಟ್ಟಿಗೆ, ರೈತರ ಆತ್ಮಹತ್ಯೆಗಳಿಗೆ ಕೊನೆಯಂತೂ ಇಲ್ಲವಾಗಿದೆ. ಸಣ್ಣ ಮದ್ಯಮ ಕೈಗಾರಿಕೆಗಳು ನೆಲಕಚ್ಚುವುದು ಮುಂದುವರೆದಿವೆ. ಹೊಸ ಉದ್ಯೋಗಾವಕಾಶಗಳ ಸೃಷ್ಠಿಯ ಕತೆ ಹಾಗಿರಲಿ ಇದ್ದ ಉದ್ಯೋಗಗಳೇ ಕಣ್ಮರೆಯಾಗುತ್ತಿರುವುದು ಇನ್ನೂ ನಿಂತಿಲ್ಲ. ಹಿಂದೆ ಇದ್ದ ದೇಶದ ಉತ್ಪಾದನಾ  ಹಾಗೂ ಸೇವಾ ಕ್ಷೇತ್ರಗಳು ತೀವ್ರ ಕುಸಿತಕ್ಕೊಳಗಾಗುವುದು ಇನ್ನೂ ನಿಂತಿಲ್ಲ. ಕೇಂದ್ರ ಸರಕಾರದ ಅಂಕಿಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರವೇ ಕೈಗಾರಿಕಾ ಕ್ಷೇತ್ರ -4.3ಕ್ಕೆ ಹಾಗೂ ಉತ್ಪಾದನಾ ಕ್ಷೇತ್ರ -3.9 ಕ್ಕೆ ಕುಸಿದಿದೆ. ಜಿಡಿಪಿ ದರ 4.5ಕ್ಕೆ ಕುಸಿದಿದೆ.

ಆಹಾರ ದಾನ್ಯಗಳ ಹಣದುಬ್ಬರ ವಿಪರೀತವೆನ್ನುವಷ್ಟು ಏರಿಕೆಯಾಗುತ್ತಿದೆ. ದೇಶದ ಪ್ರಜೆಗಳಿಗೆ ಶಿಕ್ಷಣ ನೀಡುವ ಕತೆ ಹಾಗಿರಲಿ ಇರುವ ಸಾರ್ವಜನಿಕ ಶಿಕ್ಷಣ ಹಾಗೂ ವಿಶ್ವ ವಿದ್ಯಾಲಯಗಳನ್ನೇ ಕಾರ್ಪೋರೇಟುಗಳ ವಶಕ್ಕೆ ನೀಡುವ ಕಾರ್ಯ ಬಿರುಸಾಗಿದೆ. ಜೆ ಎನ್ ಯು, ಸೇರಿದಂತೆ ದೇಶದ ಹಲವು ವಿಶ್ವ ವಿದ್ಯಾಲಯಗಳ ಮೇಲಿನ ಕೇಂದ್ರ ಸರಕಾರ ಹಿಡಿತ ಸಾಧಿಸುತ್ತಿರುವುದು, ಫೀ ಹೆಚ್ಚಳಗೊಳಿಸುತ್ತಿರುವುದು ಮತ್ತು ವಿದ್ಯಾರ್ಥಿಗಳ ಮೇಲೆ ದಮನಕಾಂಡ ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ದೇಶದ ಮದ್ಯಮ ವರ್ಗ ಹಿಂದೆಂದೂ ಇಲ್ಲದಷ್ಟು ಆತಂಕ, ಅಭದ್ರತೆ, ಪ್ರಜಾತಾಂತ್ರಿಕ ಹಕ್ಕು ಹಾಗೂ ಅವಕಾಶಗಳ ನಿರಾಕರಣೆ  ಮೊದಲಾದ ದಾಳಿಗಳಿಗೆ ಈಡಾಗಿದೆ.

ಮೋದಿಯ ಬಿಜೆಪಿ ಸರಕಾರ ಅಸ್ಸಾಂ ನಲ್ಲಿ ಭಾರಿ ಪ್ರಚಾರ ಕೊಟ್ಟು ಪೌರತ್ವ ನೊಂದಾವಣೆ ( ಎನ್ ಆರ್ ಸಿ) ಕಾರ್ಯ ಮಾಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಕೈ ಹಾಕಿತು. ಮೂರೂವರೆ ಕೋಟಿಯಷ್ಟು ಜನಸಂಖ್ಯೆಯಿರುವ ಅಸ್ಸಾಂನ ಸುಮಾರು ಹತ್ತೊಂಬತ್ತು ಲಕ್ಷದಷ್ಟು ಜನರು ಇಂಡಿಯಾದ ಪೌರರಲ್ಲವೆಂದು ತೀರ್ಮಾನಿಸಲಾಯಿತು. ಯಾಕೆಂದರೆ ಸರಕಾರದ ಪ್ರಕಾರ ಅವರಲ್ಲಿ ಸರಿಯಾದ ದಾಖಲೆಗಳು ಇರಲಿಲ್ಲ. ಅದರಲ್ಲಿ ಮುಸ್ಲಿಂ ಅಲ್ಪ ಸಂಖ್ಯಾತರು ಸುಮಾರು ಏಳು ಲಕ್ಷಗಳಷ್ಟು ಮಾತ್ರವಾಗಿತ್ತು. ಉಳಿದ ಸುಮಾರು ಹನ್ನೆರಡು ಲಕ್ಷಗಳಷ್ಟು ಜನರು ಬಂಗಾಳಿ ಮತ್ತು ಹಿಂದಿ ಮಾತನಾಡುವ ವಿವಿಧ ಜಾತಿಗಳಿಗೆ ಸೇರಿದ ಹಿಂದು ಸಮುದಾಯಕ್ಕೆ  ಸೇರಿದವರೆಂದು ಗುರುತಿಸಲಾಯಿತು. ಇದಕ್ಕಾಗಿ ಸುಮಾರು 1500 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಲಾಗಿತ್ತು.

ಆಶ್ಚರ್ಯವೆಂದರೆ  ಇಂಡಿಯಾದ ಮಾಜಿ ರಾಷ್ಟ್ರಪತಿಗಳ ಕುಟುಂಬಸ್ಥರು, ಸೇನೆಯಲ್ಲಿ, ಸರ್ಕಾರಿ ನೌಕರಿಯಲ್ಲಿ  ಕಾರ್ಯ ನಿರ್ವಹಿಸಿ ನಿವೃತ್ತರಾದವರೂ ಕೂಡ ಇಂಡಿಯಾದ ಪೌರರಲ್ಲವೆಂದು ತೀರ್ಮಾನಿಸಿ ಅವರನ್ನು ಕ್ಯಾಂಪುಗಳಲ್ಲಿ ಬಂಧಿಸಿಡುವ ಕಾರ್ಯ ಮಾಡಲಾಯಿತು. ಅದರಲ್ಲಿ ಹಿಂದು ಹಾಗೂ ಮುಸ್ಲಿ ಸಮುದಾಯಗಳೆಂದು ಗುರುತಿಸಿಕೊಂಡವರೂ ಇದ್ದರು. ಇದು ಕೇಂದ್ರದ ಮೋದಿ ಸರ್ಕಾರಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಅದನ್ನು ಮರೆಮಾಚಲು ಮುಸ್ಲಿಮೇತರರಿಗೆ ಇಂಡಿಯಾದ ಪೌರತ್ವ ನೀಡಲೆಂದೇ ಈ ತಿದ್ದುಪಡಿ ಮಸೂದೆಯನ್ನು ತರಲಾಗಿದೆ ಎಂದು ದೊಡ್ಡ ಸುಳ್ಳನ್ನು ಬಿತ್ತಲು ಶ್ರಮಿಸುತ್ತಿದೆ. ಅಂದರೆ ಪೌರತ್ವ ತಿದ್ದುಪಡಿ ಮಸೂದೆ ವಾಸ್ತವದಲ್ಲಿ ಈ ದೇಶದ ಬಹುಸಂಖ್ಯಾತ ಜನಸಾಮಾನ್ಯರ ಪೌರತ್ವ ನಿರಾಕರಣೆ ಕಾಯಿದೆಯಾಗಿಯೇ ಜಾರಿಯಾಗುತ್ತದೆ.!

ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯಿದೆ 2019 ಹಾಗೂ ರಾಷ್ಟ್ರೀಯ ಪೌರತ್ವ ನೊಂದಾವಣೆ ಕಾರ್ಯಕ್ರಮ ಹಾಗೂ ಇದೆಲ್ಲದರ ಮೂಲವಾಗಿರುವ ಪೌರತ್ವ ತಿದ್ದುಪಡಿ ಮಸೂದೆ 2003ರ ಪ್ರಧಾನ ಗುರಿ ಈ ದೇಶದ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಅಲ್ಪಸಂಖ್ಯಾತರು, ದಲಿತದಮನಿತ ಆದಿವಾಸಿ ಸಮುದಾಯಗಳು, ಇನ್ನಿತರ ಬಡಜನರೇ ಆಗಿದ್ದಾರೆ. ವಾಜಪೇಯಿ ಸರಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಮಸೂದೆ 2003, ರಾಜ್ಯಸರ್ಕಾರಗಳು ಇವನ್ನು ಜಾರಿಗೊಳಿಸುವುದು ಕಡ್ಡಾಯಗೊಳಿಸಿದೆ. ಆಗ ಅದನ್ನು ತಡೆಯುವಲ್ಲಿ ಕೆಲಸ ಮಾಡದ ವಿರೋಧ ಪಕ್ಷಗಳು ಇಂದು ದೊಡ್ಡ ನಾಟಕದಲ್ಲಿ ತೊಡಗಿ ಜನಸಾಮಾನ್ಯರನ್ನು ವಂಚಿಸಲು ಹೊರಟಿವೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನೆರ್ಜಿ, ಕೇರಳದ ಪಿಣರಾಯಿ ವಿಜಯನ್, ಪಂಜಾಬಿನ ಅಮರಿಂದರ್ ಸಿಂಗ್ ಮೊದಲಾದ ಕೆಲವು ಮುಖ್ಯ ಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಪೌರತ್ವ ಮಸೂದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಾ ತಮ್ಮ ರಾಜ್ಯಗಳ ಜನರನ್ನು ಕತ್ತಲೆಯಲ್ಲಿಡಲು ನೋಡುತ್ತಿದ್ದಾರೆ. ಇವರುಗಳು ವಾಜಪೇಯಿ ಸರಕಾರ ರಾಜ್ಯಗಳಿಗೆ ಕಡ್ಡಾಯಗೊಳಿಸಿದ ಪೌರತ್ವ ತಿದ್ದುಪಡಿ ಮಸೂದೆ 2003ರ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಅವೆಲ್ಲವನ್ನೂ ರದ್ದುಗೊಳಿಸಬೇಕೆಂಬ ಹಕ್ಕೊತ್ತಾಯಗಳನ್ನು ಈ ಪಕ್ಷಗಳು ಇದುವರೆಗೆ ಮುಂದಿಟ್ಟಿಲ್ಲ.

ಸಂವಿಧಾನವನ್ನೇ ಅಪ್ರಸ್ತುತಗೊಳಿಸುವ ಹುನ್ನಾರಗಳ ಮುಂದುವರೆದ ಭಾಗ !

ಮೋದಿಯ ಕೇಂದ್ರ ಸರಕಾರ ಇಂಡಿಯಾ ದೇಶದ ಸಂವಿಧಾನದ ಕಲಮುಗಳನ್ನು ಒಂದೊಂದಾಗಿ ಸಡಿಲಗೊಳಿಸುವ ಇಲ್ಲವೇ ಬದಲಾಯಿಸುವ ಹಿಂದಿನ ಸರಕಾರಗಳ ಚಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಕಾಶ್ಮೀರದಲ್ಲಿ ನೆಪ ಮಾತ್ರದಲ್ಲಿ 370  ಹಾಗೂ  35 ಎ ಕಲಮುಗಳನ್ನು  ಸಂವಿಧಾನಕ್ಕೆ ತಿದ್ದುಪಡಿ ತಂದು ರದ್ದುಗೊಳಿಸಿತು. ಇದು ಈಶಾನ್ಯ ಭಾಗದ ಹಲವು ರಾಜ್ಯಗಳು ಹಾಗೂ ಕರ್ನಾಟಕದಂತಹ ರಾಜ್ಯಗಳ ಮೇಲೆಯೂ ತೂಗುಕತ್ತಿಯಾಗಿದೆ. ಯಾಕೆಂದರೆ ಇಲ್ಲೆಲ್ಲಾ ಸಾಂವಿಧಾನಿಕ ರಕ್ಷಣೆಯ ಕಲಮುಗಳು ಜಾರಿಯಲ್ಲಿವೆ. ಇದೀಗ ಧರ್ಮಾಧಾರಿತವಾಗಿ ಪೌರತ್ವವನ್ನು ನಿರ್ಧರಿಸುವ ಮಸೂದೆಯ ಮೂಲಕ ಸಂವಿಧಾನ ಸೆಕ್ಯುಲರ್ ಆಶಯಗಳಿಗೆ ಭಂಗವನ್ನು ಉಂಟುಮಾಡಲಾಗಿದೆ. ಇದು ಸಂವಿಧಾನವನ್ನೇ ಸಂಪೂರ್ಣ  ನಗಣ್ಯಗೊಳಿಸಬಹುದಾದ ಸಾಧ್ಯತೆಯನ್ನು ಹೊಂದಿರುವ ಮಸೂದೆಯಾಗಿದೆ. ಜಾತಿ ಹಾಗೂ ಮತಾಧಾರಿತ ಆಡಳಿತ ವ್ಯವಸ್ಥೆಯನ್ನು ಅಧೀಕೃತವಾಗಿ ಸಾಂಸ್ಥಿಕಗೊಳಿಸುವ ಹುನ್ನಾರವೂ ಇದರ ಹಿಂದೆ ಅಡಗಿದೆ.

ಇತ್ತೀಚೆಗೆ ಉಡುಪಿಯ ಅಷ್ಠ ಮಠಗಳ ಮಠಾಧೀಶರೊಬ್ಬರು ದೇಶದಲ್ಲಿ ದೇವಸ್ಥಾನಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಎಲ್ಲವನ್ನೂ ನಿರ್ಧರಿಸುವ ಅಧಿಕಾರವಿರಬೇಕು, ಅದರಂತೆ ವ್ಯವಸ್ಥೆ ನಡೆಯಬೇಕು ಎಂದು ಬಹಿರಂಗವಾಗಿ ಹೇಳಿರುವುದು ಸುದ್ಧಿಯಾಗಿದೆ. ಈ ಹೇಳಿಕೆಯನ್ನು ಲಘುವಾಗಿ ನೋಡಿದರೆ ಸಮಸ್ಯೆಯ ಆಳ ಅರ್ಥವಾಗಲಾರದು. ಯೋಗಿಗಳು, ಸಾಧ್ವಿಗಳು, ಬಾಬಗಳು, ಸ್ವಾಮಿಗಳು ಎಂದೆಲ್ಲಾ ಹೇಳಿಕೊಳ್ಳುವ ಜನರು ಆಯಕಟ್ಟಿನ ಅಧಿಕಾರ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಮಾಡುವುದರ ಹಿಂದೆ ಈ ಎಲ್ಲಾ ಬ್ರಾಹ್ಮಣ ಶಾಹಿ ಫ್ಯಾಸಿಸ್ಠ್ ವ್ಯವಸ್ಥೆ ಹೇರುವ ಹುನ್ನಾರಗಳಿವೆ. ಸಂವಿಧಾನವನ್ನು ಅಸ್ಥಿರಗೊಳಿಸುತ್ತಾ  ಕಿತ್ತುಹಾಕದೇ ಅವರಿಗದು ಅಧೀಕೃತವಾಗಿ ಸಾಧ್ಯವಾಗುವುದಿಲ್ಲ. ಆ ಮಠಾಧೀಶರು ಹೇಳಿರುವುದರ ಹಿಂದೆ ದಲಿತ ದಮನಿತರಿಗೆ ಯಾವುದೇ ಸಾಮಾಜಿಕ ಹಾಗೂ ಆಡಳಿತಾತ್ಮಕ ರಕ್ಷಣೆಯಿಲ್ಲದಂತೆ ಮಾಡಿ ಮನುವಾದಿ ಬ್ರಾಹ್ಮಣಶಾಹಿ ವ್ಯವಸ್ಥೆಯನ್ನು ಅಧೀಕೃತಗೊಳಿಸಿ ಹೇರುವ ಹುನ್ನಾರವಲ್ಲದೇ ಬೇರೇನೂ ಇಲ್ಲವೆನ್ನುವುದನ್ನು ಗ್ರಹಿಸಬೇಕಿದೆ.

ವಿಷಯ ಇಷ್ಟು ಮಾತ್ರವಲ್ಲ ಸಂವಿಧಾನವನ್ನು ಮುಂದಿಟ್ಟುಕೊಂಡು ಈ ದೇಶದ ಎಲ್ಲಾ ರಂಗಗಳನ್ನೂ ಭಾರಿ ಜಾಗತಿಕ ಕಾರ್ಪೋರೇಟು ಕಂಪನಿಗಳ ಸುಪರ್ದಿಗೆ ನೀಡುತ್ತಾ ಬರಲಾಯಿತು. ಅಂಬೇಡ್ಕರ್ ರನ್ನು ಮತ್ತು ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವನ್ನು ಭಾವನಾತ್ಮಕಗೊಳಿಸುತ್ತಾ ಈ ದೇಶದ ದಲಿತದಮನಿತ ಜನಸಾಮಾನ್ಯರನ್ನು ಸಂವಿಧಾನಬದ್ದ ಹಕ್ಕು ಹಾಗೂ ಸೌಲಭ್ಯಗಳನ್ನು ವಂಚಿಸುತ್ತಾ ಬರಲಾಗಿತ್ತು. ಅದರ ಜೊತೆಯಲ್ಲೇ ಸಂವಿಧಾನವನ್ನೂ ಅಪಮೌಲ್ಯಗೊಳಿಸುತ್ತಾ ಬರಲಾಗಿತ್ತು. ಈಗ ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ಆ ಭಾವನಾತ್ಮಕತೆಯನ್ನೂ ನಿವಾರಿಸುವ ಕಾರ್ಯ ಮಾಡಲಾಗುತ್ತಿದೆ. ಇದರ ಭಾಗವಾಗಿಯೇ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅಧಿಕಾರ ಸ್ಥಾನಗಳಿಂದ ಬರುತ್ತಿರುವ ಕೊಂಕುನುಡಿಗಳು, ಅಂಬೇಡ್ಕರ್ ರ ಪಾತ್ರವನ್ನು ನಗಣ್ಯಗೊಳಿಸುವ ಕ್ರಿಯೆಗಳು, ಸಂವಿಧಾನ ಬದಲಿಸುತ್ತೇವೆ ಎನ್ನುವ ಮಾತುಗಳು … ಇತ್ಯಾದಿಗಳನ್ನು ನಾವು ಗ್ರಹಿಸಬೇಕಿದೆ.

ಜನಸಾಮಾನ್ಯರ ಪ್ರಜಾತಾಂತ್ರಿಕ ಹಕ್ಕುಗಳನ್ನೆಲ್ಲಾ ನಿರಾಕರಿಸುತ್ತಾ ಬರಲಾಯಿತು. ಹಿಂದಿನಿಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ಮುಖ್ಯ ಕೆಲಸಗಳೇ ಇವುಗಳಾಗಿದ್ದವು. ಆ ಮೂಲಕ ಒಂದು ಮಟ್ಟಕ್ಕೆ ಇದ್ದ  ಮೀಸಲಾತಿ, ಭೂ ಹಂಚಿಕೆ ಕೃಷಿ ಭೂಮಿ ಮಿತಿ, ಕೆಲವು ಸೌಲಭ್ಯಗಳ ಒದಗಿಸುವಿಕೆಗಾಗಿನ ಕಾನೂನುಗಳು, ಶಿಕ್ಷಣದ ಹಕ್ಕು ಇನ್ನಿತರ ಒಂದು ಮಟ್ಟಕ್ಕೆ ಇದ್ದ ಸಂವಿಧಾನಾತ್ಮಕ ಭದ್ರತೆಗಳನ್ನು ಸಡಿಲಗೊಳಿಸುವುದು ನಿರಾಕರಿಸುವುದನ್ನು ಹಿಂಬಾಗಿಲು ಹಾಗೂ ಮುಂಬಾಗಿಲಿನಿಂದ ಮಾಡುತ್ತಾ ಬರಲಾಯಿತು. ಜಾಗತೀಕರಣದ ನಂತರ ದೇಶದ ಗಡಿ, ರಕ್ಷಣೆ ಸರಕಾರಿ ವ್ಯವಸ್ಥೆ ಇತ್ಯಾದಿಗಳು ನಾಮ ಮಾತ್ರದ್ದಾಗಿಸುವ ಕಾರ್ಯ ಬಿರುಸಾಯಿತು. ಸರಕಾರವೆಂದರೆ ಕೇವಲ ಭಾರಿ ಕಾರ್ಪೋರೇಟು ಹಾಗೂ ಭಾರಿ ಆಸ್ತಿವಂತರ ಸೇವೆಗಾಗಿ ಮಾತ್ರ ಎನ್ನುವ ಸ್ಥಿತಿ ನಿರ್ಮಾಣವಾಯಿತು. ಅವರಿಗೆ ಅಗತ್ಯವಾದ ನೀತಿ ನಿರೂಪಣೇ ಹಾಗೂ ಜಾರಿ ಮಾತ್ರ ಸರಕಾರಿ ಅಂಗಗಳ ಆಧ್ಯತೆಯ ವಿಚಾರವಾಯಿತು.

ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಸಂವಿಧಾನವನ್ನೂ ನೆಪ ಮಾತ್ರಕ್ಕೂ ಇಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಂವಿಧಾನದಲ್ಲಿರುವ ಕಲಮುಗಳು ಅವರಿಗೆ ತಾಂತ್ರಿಕ ತಡೆಗಳಾಗುತ್ತಿವೆ. ಆಡಳಿತಾತ್ಮಕವಾಗಿ ತಮಗೆ ಅನುಕೂಲಕರ ನೀತಿ ನಿರೂಪಣೆ ಮತ್ತು ಜಾರಿಗೊಳಿಸುವಿಕೆಗಳಿಗೆ ಅದು ತಡೆಯೊಡ್ಡುತ್ತಿದೆ. ಹಾಗಾಗಿ ಇಡೀ ಸಂವಿಧಾನವನ್ನೇ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಅಪ್ರಸ್ತುತಗೊಳಿಸುವ ಕಾರ್ಯಗಳಲ್ಲಿ ಸರಕಾರಗಳು ನಿರತವಾಗಿವೆ. ಅದರ ಮುಂದುವರೆದ ಭಾಗವೇ ಪೌರತ್ವ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣೆಯಾಗಿದೆ.

ಎಲ್ಲಾ ಜನಸಾಮಾನ್ಯರೇ ಪೌರತ್ವ ಮಸೂದೆಯ ನೇರ ಗುರಿ !

ಕೇಂದ್ರ ಸರಕಾರ ಸದ್ಯಕ್ಕೆ ಪೌರತ್ವ ಕಾಯಿದೆಯನ್ನು ಮುಸ್ಲಿಮರಿಗೆ ಮಾತ್ರ ಅನ್ವಯಿಸುವ ರೀತಿಯಲ್ಲಿ ಜಾಣತನದಿಂದ ಮಾತನಾಡುತ್ತಿದ್ದರೂ ವಾಸ್ತವದಲ್ಲಿ ಅದು ಸಂಪೂರ್ಣ ಸುಳ್ಳೇ ಆಗುತ್ತದೆ. ಅಸ್ಸಾಂನ ಉದಾಹರಣೆ ನಮ್ಮ ಮುಂದಿದೆ. ಈ ದೇಶದಲ್ಲಿ ತಲತಲಾಂತರದಿಂದ ವಾಸ ಮಾಡುತ್ತಾ ಬಂದಿರುವ ಹಿಂದುಗಳೆಂದು ಗುರ್ತಿಸಲ್ಪಡುವವರೂ ಸೇರಿದಂತೆ ಎಲ್ಲರೂ ತಮ್ಮ ಪೌರತ್ವವನ್ನು ಸಾಬೀತು ಮಾಡಬೇಕಾದ ಆತಂಕ ಸೃಷ್ಠಿಸಿ ಅವರೆಲ್ಲರನ್ನೂ ದೇಶಭ್ರಷ್ಠತೆಯ ಭಯದಲ್ಲಿರಿಸುವ ಮಹಾ ಕುತಂತ್ರ ಇದರ ಹಿಂದೆ ಅಡಗಿದೆ. ದೇಶವನ್ನು ನಿರಂಕುಶ ಫ್ಯಾಸಿಸ್ಟ್ ವ್ಯವಸ್ಥೆಯಡಿ ಇರಿಸುವ ಭಾರಿ ಹುನ್ನಾರ ಇವೆಲ್ಲದರ ಹಿಂದೆ ಇದೆ.

ಈಗದು ಮುಸ್ಲಿಮರನ್ನು ಇತರ ಸಮುದಾಯಗಳಿಂದ ಪ್ರತ್ಯೇಕಿಸಲು ಬಳಸಲಾಗುತ್ತಿದ್ದರೂ ನಂತರ ಅದು ಈ ದೇಶದ ದಲಿತ ದಮನಿತ, ಹಿಂದುಳಿದ, ಅಲ್ಪಸಂಖ್ಯಾತ ಧಾರ್ಮಿಕ ಜನಸಮುದಾಯಗಳಿಗೆ ಸೇರಿದ ಬಹುಸಂಖ್ಯಾತ ಜನಸಾಮಾನ್ಯರನ್ನು ನೇರವಾಗಿ ಗುರಿ ಮಾಡುವ ಅಸ್ತ್ರವಾಗಿಯೇ ಬಳಸಲ್ಪಡುತ್ತದೆ. ಈ ಬಹುಸಂಖ್ಯಾತರು ತಮ್ಮ ಹಾಗೂ ದೇಶದ ಮೇಲೆ ಆಗುತ್ತಿರುವ ಭಾರಿ ಕಾರ್ಪೋರೇಟ್ ಹಾಗೂ ಭಾರಿ ಆಸ್ತಿವಂತರ ಹಾಗೂ ಭ್ರಾಹ್ಮಣಶಾಹಿ ಫ್ಯಾಸಿಸ್ಟ್ ದಾಳಿಗಳ ಬಗ್ಗೆ ಉಸಿರೆತ್ತದಂತೆ ತಡೆಯುವ ಸ್ಪಷ್ಟ ಉದ್ದೇಶ ಅಲ್ಲಿದೆ. ಸರಕಾರದ  ಮಾತನ್ನು ನಂಬಿ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆ ನಮಗೇನಿಲ್ಲ ಎಂದು ಉಳಿದವರು ಸುಮ್ಮನೇ ಕುಳಿತರೇ ಭಾರಿ ಕಂಟಕ ತಪ್ಪಿದ್ದಲ್ಲ. ಮುಸ್ಲಿಮರನ್ನು ತಮ್ಮೊಂದಿಗೆ ಸೇರಿಸಿಕೊಂಡು ಐಕ್ಯ ಹೋರಾಟಗಳನ್ನು ರೂಪಿಸಬೇಕಾದುದು ಇಂದು ಅತ್ಯಗತ್ಯ.

ಮುಸ್ಲಿಮ್ ಸಮುದಾಯ ಕೂಡ ಇತರ ಜನಸಮುದಾಯಗಳನ್ನು ಸೇರಿಸಿಕೊಂಡು ಪ್ರಬಲ ಪ್ರತಿರೋಧ ಚಳವಳಿಯನ್ನು ರೂಪಿಸಬೇಕಿದೆ. ಇಲ್ಲದಿದ್ದಲ್ಲಿ ಅವರನ್ನು ಇತರ ಜನಸಮುದಾಯಗಳಿಂದ ಪ್ರತ್ಯೇಕಗೊಳಿಸಿ ಏಕಾಂಗಿಯಾಗಿಸುವ ಕೇಂದ್ರದ ಮೋದಿಯ ಬಿಜೆಪಿ ಸರಕಾರ ತಯಾರು ಮಾಡಿಟ್ಟಿರುವ ಕುಣಿಕೆಯೊಳಗೆ ತಾವೇ ಹೋಗಿ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ. ಆ ಸಮುದಾಯದ ಮುಖಂಡರುಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ರಾಜಕೀಯ ಮತೀಯ ಇನ್ನಿತರೆ ಕಾರಣಗಳಿಗಾಗಿ ಮುಸ್ಲಿಮ ಸಮುದಾಯವನ್ನು ಇತರರಿಂದ ಪ್ರತ್ಯೇಕವಾಗಿಸಿ  ಹೋರಾಟಗಳಿಗೆ ತೊಡಗಿದಷ್ಟೂ ಸಂಘ ಪರಿವಾರದ ಕುತಂತ್ರಗಳಿಗೆ ಬಲಿಯಾಗಬೇಕಾದ ಅಪಾಯಕ್ಕೆ ಇಡೀ ಸಮುದಾಯ ಈಡಾಗಬೇಕಾಗುತ್ತದೆ. ಮುಸ್ಲಿಮರು ಮತ್ತು ಇತರ ಜನಸಮುದಾಯಗಳು ಎಂದು ನೇರವಾಗಿ ಕೋಮು ದೃವೀಕರಣಗೊಳಿಸುವ ಸಂಘ ಪರಿವಾರದ ಕುತಂತ್ರಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದಂತೆಯೇ ಆಗಿಬಿಡುತ್ತದೆ.

ಈ ದೇಶವನ್ನು ಜಾಗತಿಕ ಕಾರ್ಪೋರೇಟುಗಳು ಹಾಗೂ ಭಾರಿ ಆಸ್ತಿವಂತವರ್ಗದ ಹಿಡಿತಗಳಿಂದ ಬಿಡಿಸಿಕೊಂಡು   ಬ್ರಿಟೀಷ್ ವಿರೋಧಿ ಸ್ವಾತಂತ್ರ್ಯ ಹೋರಾಟದ ನಿಜವಾದ ಆಶಯಗಳಾಗಿದ್ದ ಬಹುಸಂಖ್ಯಾತ ಜನಸಾಮಾನ್ಯರ ನೈಜ ಪ್ರಜಾಪ್ರಭುತ್ವ ಸ್ಥಾಪಿತವಾಗಬೇಕು. ದೇಶದ ಸಂಪತ್ತು ಹಾಗೂ ರಾಜಕೀಯ ಅಧಿಕಾರದ ಮೇಲೆ, ದಲಿತ ದಮನಿತ ಇನ್ನಿತರ ಜನಸಾಮಾನ್ಯರಿಗೆ ಸಮಾನ ಅವಕಾಶ ಸಹಜವಾಗಿ ಸಿಗಬೇಕು. ಅದಾಗದೇ ಈ ದೇಶದ ಜನಸಾಮಾನ್ಯರು ಹಾಗೂ ದೇಶಕ್ಕೆ ಉಳಿಗಾಲವಿರುವುದಿಲ್ಲ ಎನ್ನುವುದನ್ನು ಎಲ್ಲರೂ ಗ್ರಹಿಸಬೇಕಾದ ತುರ್ತಿದೆ.   

19/12/2019                                                   - ನಂದಕುಮಾರ್ ಕೆ.ಎನ್. ಕುಂಬ್ರಿ ಉಬ್ಬು.

ಮಿಂಚಂಚೆ: nandakumarnandana67@gmail.com






Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...