ಸಿಡಿದು ನಿಂತ ದೇಶದ ಜನಸಾಮಾನ್ಯರು!
ದಂಗುಬಡಿದ ಮೋದಿಯ ಕೇಂದ್ರ ಸರಕಾರ!
ದೇಶದ ಜನಸಾಮಾನ್ಯರು ಇಂದು ಭಾರಿ ದೊಡ್ಡ ಪ್ರಮಾಣದಲ್ಲಿ
ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ದೇಶದ ಪ್ರಮುಖ ನಗರಗಳು, ವಿಶ್ವವಿದ್ಯಾಲಯಗಳು, ಐಐಟಿ, ಐಐಎಮ್ ನಂತಹ ಶಿಕ್ಷಣ ಸಂಸ್ಥೆಗಳು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳು
ಕಳೆದ ಹತ್ತಾರು ದಿನಗಳಿಂದ ಬಿರುಸಿನ ಜನಪ್ರತಿರೋಧದ ಕೇಂದ್ರಗಳಾಗಿ ಮಾರ್ಪಟ್ಟಿದೆ.
ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ದೇಶಾದ್ಯಂತ
ಮೋದಿ ಸರಕಾರದ ಜನವಿರೋಧಿ ಹಾಗೂ ದೇಶವಿರೋಧಿ ನೀತಿಗಳ
ವಿರುಧ್ಧ ಭಾರಿ ಹೋರಾಟಗಳಿಗೆ ಇಳಿದಿದ್ದಾರೆ. ಮೋದಿ ಸರಕಾರ ಜನರ ಮೇಲೆ ಮಾಡುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ದಮನ ದೌರ್ಜನ್ಯಗಳ
ವಿರುಧ್ಧ ಸಿಡಿದೆದ್ದು ನಿಂತಿದ್ದಾರೆ. ಪ್ರತಿಬಂದಕಾಜ್ಞೆ, ಕರ್ಫ್ಯೂ, ಬಂಧನ, ಸುಳ್ಳುಕೇಸು, ಲಾಠಿ
ಚಾರ್ಜ್, ಗೋಲಿಬಾರ್ ಗಳಿಗೆ ಅಂಜದೆ ಅಳುಕದೇ ದೈರ್ಯದಿಂದ ಎದೆಯೊಡ್ಡಿ ಲಕ್ಷಾಂತರ ಸಂಖ್ಯೆಯಲ್ಲಿ ಹೋರಾಟದಲ್ಲಿ ದುಮುಕುತ್ತಿದ್ದಾರೆ. ದೇಶವನ್ನು
ಅಧೋಗತಿಗೆ ದೂಡಿರುವ ಆಳುವ ಶಕ್ತಿಗಳು ಮತ್ತವರ ಸರ್ಕಾರವನ್ನು ಪ್ರಶ್ನಿಸಲು ತೊಡಗಿದ್ದಾರೆ.
ಜನರನ್ನು ಬಹಳ ಕಾಲ ಭ್ರಮೆಯಲ್ಲಿಟ್ಟು, ಆಮಿಷಗಳಿಗೆ
ದೂಡಿ ಹಿಡಿದಿಟ್ಟು, ಬೇಕಾಬಿಟ್ಟಿಯಾಗಿ ಜನಸಾಮಾನ್ಯರ ಹಕ್ಕುಗಳನ್ನು ಕಸಿದು, ಸಂಪನ್ಮೂಲಗಳನ್ನು ದೋಚುವ
ಕಾರ್ಯವನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಈ ಜನಪ್ರತಿರೋಧ ನಿರೂಪಿಸಿದೆ. ಜನರು ಸರಿಯಿಲ್ಲ,
ಯುವ ಸಮೂಹ ಸಂವೇದನೆಯನ್ನೇ ಕಳೆದುಕೊಂಡಿದೆ, ಮೊಬೈಲು ಸೆಲ್ಫಿಗಳಲ್ಲಿ ಮುಳುಗಿ ತಮ್ಮ ಅಸ್ತಿತ್ವ ಹಾಗೂ
ಕ್ರಿಯಾ ಶೀಲತೆಗಳನ್ನು ನಾಶಮಾಡಿಕೊಂಡಿದೆ…ಎಂದೆಲ್ಲಾ ಬೆಳೆದುಬಂದ ಆರೋಪಗಳಿಗೆ ಉತ್ತರಗಳನ್ನು ಈ ಹೋರಾಟಗಳ
ಮೂಲಕ ಯುವ ಸಮೂಹ ನೀಡ ತೊಡಗಿದೆ. ಇದು ಬಹಳ ಆಶಾದಾಯಕ ಬೆಳವಣಿಗೆಯಾಗಿದೆ. ದೇಶದ ಎಲ್ಲಾ ಜನರಲ್ಲಿ ನವ
ಸಂಚಲನವನ್ನು ಮೂಡಿಸುತ್ತಿದೆ.
ದೇಶದ ವಿವಿಧ ಭಾಗಗಳಲ್ಲಿ ಸರ್ಕಾರದ ಸಶಸ್ತ್ರ
ಪಡೆಗಳು ಹೋರಾಟ ನಿರತ ಜನರನ್ನು ಗುಂಡಿಟ್ಟು ಕೊಂದು ಹಾಕುತ್ತಿವೆ. ಉತ್ತರ ಪ್ರದೇಶ ಒಂದರಲ್ಲೇ ಇಪ್ಪತ್ತಕ್ಕೂ
ಹೆಚ್ಚು ಜನರನ್ನು ಕೊಂದು ಹಾಕಿರುವ ವರದಿಯಿದೆ. ಕರ್ನಾಟಕದ ಮಂಗಳೂರಿನಲ್ಲೂ ಇಬ್ಬರು ಯುವಕರನ್ನು ಪೋಲಿಸರು
ಗುಂಡಿಟ್ಟು ಕೊಂದು ಹಾಕಿದೆ. ಅಲ್ಲದೆ ದೇಶದ ಹಲವಾರು ಕಡೆಗಳಲ್ಲಿ ಪೋಲಿಸ್ ಪಡೆಗಳೇ ಸಾರ್ವಜನಿಕ ಆಸ್ತಿ
ಪಾಸ್ತಿಗಳನ್ನು, ಮನೆಗಳನ್ನು, ಮನೆಮುಂದೆ ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ಖಾಸಗಿ ವಾಹನಗಳನ್ನು ಒಡೆದು
ಹಾಕಿರುವ, ಬೆಂಕಿ ಕೊಟ್ಟಿರುವ ವರದಿಗಳಿವೆ. ಅದನ್ನು ಹೋರಾಟಗಾರರ ತಲೆಗಳಿಗೆ ಕಟ್ಟುವ ಕಾರ್ಯಗಳನ್ನು
ಮಾಡಲಾಗುತ್ತಿದೆ. ಅದು ಸರ್ಕಾರಗಳ ಫ್ಯಾಶಿಸ್ಟ್ ನೀತಿಯ ಭಾಗವಾಗಿಯೇ ನಡೆಯುತ್ತಿದೆ.
ಕರ್ನಾಟಕದ ಮಂಗಳೂರಿನಲ್ಲೂ ಅದು ಮರುಕಳಿಸಿದೆ.
ಅಲ್ಲಿನ ಪೋಲಿಸರು ಆಸ್ಪತ್ರೆಗಳಿಗೂ ನುಗ್ಗಿ ಹಾನಿಗೊಳಿಸಿರುವ, ಬಸ್ ಕಾಯುತ್ತಿದ್ದವರನ್ನೂ, ರಸ್ತೆಯಲ್ಲಿದ್ದ
ಮಹಿಳೆಯರು ಮಕ್ಕಳನ್ನು ಹೊಡೆದು ಗಾಯಗೊಳಿಸಿರುವ, ಪ್ರತಿಭಟನೆಗೆ ಸಂಬಂಧ ಪಡದವರನ್ನೂ ಕೂಡ ಹಿಡಿದು ಹೊಡೆದು
ಬಂಧಿಸಿರುವ, ಪತ್ರಕರ್ತರನ್ನೂ ಹೊಡೆದು, ಅವರ ಕ್ಯಾಮೆರಾ, ಮೊಬೈಲುಗಳನ್ನು ಒಡೆದು ಹಾನಿಗೊಳಿಸಿರುವ
ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ತುರ್ತು ನಿಗಾಘಟಕಕ್ಕೂ ನುಗ್ಗಿ ಭಯ ಮೂಡಿಸಿರುವ
ಘಟನೆ ಕೂಡ ನಡೆದಿದೆ. ಯಾವುದೇ ಕಾನೂನು ಕಟ್ಟಳೆಗಳನ್ನು ಪಾಲಿಸದೇ ಮಂಗಳೂರಿನಲ್ಲಿ ಜನರನ್ನು ಕೊಲ್ಲುವ
ಉದ್ದೇಶದಿಂದಲೇ ಪ್ರತಿಭಟನೆಗಳ ಮೇಲೆ ನೇರವಾಗಿ ಗುಂಡಿನ ಧಾಳಿ ನಡೆಸಲಾಗಿದೆ. ಅದಕ್ಕೆ ಸಾಕ್ಷಿಯೆಂಬಂತೆ
ಪೋಲಿಸ್ ಅಧಿಕಾರಿಗಳು ನಡೆಸಿದ ಸಂಭಾಷಣೆಗಳ ವೀಡಿಯೋ ಹಾಗೂ ಆಡಿಯೋ ತುಣುಕುಗಳು , ಸಿಸಿ ಟೀವಿ ದೃಶ್ಯಾವಳಿಗಳು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇಂಡಿಯಾದ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ,
ಮಣಿಪುರ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಗಳ ಜನಸಮುದಾಯ ಲೋಕಸಭೆಯ ಎರಡೂ ಸದನಗಳು ಸಿಎಬಿ ಯನ್ನು
ಸಿಎಎ ಯಾಗಿ ಕಾಯಿದೆಯಾಗಿಸಿದ ತಕ್ಷಣವೇ ಭಾರಿ ಮಟ್ಟದಲ್ಲಿ
ಬೀದಿಗಿಳಿದು ಪ್ರತಿಭಟಿಸಲಾರಂಭಿಸಿದರು. ಮತೀಯ ಆದಾರದಲ್ಲಿ ತಮ್ಮ ಪೌರತ್ವವನ್ನು ತೀರ್ಮಾನಿಸಲು ಮೋದಿಯ
ಬಿಜೆಪಿಯ ಕೇಂದ್ರ ಸರಕಾರ ಯಾರು ಎನ್ನುವಂತಹ ಪ್ರಶ್ನಗಳೆದ್ದವು. ಅಸ್ಸಾಂನಲ್ಲಿ ಅಕ್ರಮ ವಲಸಿಗ ವಿಚಾರವನ್ನು
ಸಂಕೀರ್ಣಗೊಳಿಸುತ್ತಾ ಬಹಳ ವಿವಾದಾತ್ಮಕ ಹಾಗೂ ರಾಜಕೀಯ ಲಾಭಗಳ ವಿಚಾರಗಳನ್ನಾಗಿ ಮಾಡಿಕೊಂಡು ಬಳಸುತ್ತಾ
ಬರಲಾಗಿತ್ತು. ಅದರಲ್ಲಿ ಸಂಘ ಪರಿವಾರ ಮುಂಚೂಣಿಯಲ್ಲಿತ್ತು. ಅದರ ಪರಿಣಾಮವೂ ಈ ಪ್ರತಿಭಟನೆಯಲ್ಲಿ ಕಾಣುತ್ತಿದೆ.
ಧಾರ್ಮಿಕ ತುಳಿತಕ್ಕೊಳಗಾದ ನಿರ್ದಿಷ್ಟ ರಾಷ್ಟ್ರಗಳ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಇಂಡಿಯಾದ ಪೌರತ್ವ
ನೀಡಲು ಜಾರಿಗೆ ತಂದಿದ್ದೆಂದು ಹೇಳಲಾಗುತ್ತಿರುವ ಸಿಎಎ ಎನ್ನುವಂತಹ ಕಾಯಿದೆಯನ್ನು ಅಲ್ಲಿನ ಜನರು ಅಕ್ಷರಶಃ
ಸ್ವೀಕರಿಸಲಿಲ್ಲ. ಎನ್ ಆರ್ ಸಿ ಜಾರಿಯ ನೇರ ಪರಿಣಾಮವನ್ನು ನೋಡಿದ ಅಲ್ಲಿನ ಜನಸಾಮಾನ್ಯರು ಮತಾಧಾರಿತವಾಗಿ
ಪೌರತ್ವ ನೀಡುವ ಜನವಿರೋಧಿಯಾದ ಮೋದಿ ಹಾಗೂ ಷಾ ಸರ್ಕಾರದ
ನಡೆಯನ್ನು ಹಿಮ್ಮಟ್ಟಿಸತೊಡಗಿದರು.
ಕೇಂದ್ರದ ಮೋದಿಯ ಬಿಜೆಪಿ ಸರಕಾರ ದೇಶದ ಸಮಸ್ತ ನಾಗರಿಕರ ಪೌರತ್ವವನ್ನೇ ಪ್ರಶ್ನಿಸುವಂತಹ ಕಾಯಿದೆಗಳನ್ನು
ಜಾರಿಗೆ ತಂದಿದೆ. ಇಂಡಿಯಾ ಸಿಟಿಜೆನ್ ಶಿಪ್ ಅಮೆಂಡ್
ಮೆಂಟ್ ಆಕ್ಟ್ 2019 ಎನ್ನುವ ಕಾಯಿದೆ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳ ಧಾರ್ಮಿಕ ದಮನಗಳನ್ನು
ಎದುರಿಸುತ್ತಿರುವ ಹಿಂದೂ, ಪಾರ್ಸಿ, ಕ್ರಿಶ್ಚಿಯನ್, ಜೈನ, ಸಿಖ್ ಸಮುದಾಯಗಳ ಜನರಿಗೆ ಇಂಡಿಯಾದ ಪೌರತ್ವ
ಒದಗಿಸುವ ಕಾಯಿದೆಯೆಂದು ಸರಕಾರ ಹೇಳುತ್ತಿದೆ. ಅದರ ಜೊತೆಗೆ ರಾಷ್ಟ್ರೀಯ ಪೌರತ್ವ ನೊಂದಣೆ (ಎನ್ ಆರ್
ಸಿ)ಯನ್ನೂ ದೇಶದಾದ್ಯಂತ ಜಾರಿಮಾಡುವ ತಯಾರಿಯಲ್ಲಿ ತೊಡಗಿದೆ. ಅಕ್ರಮ ವಲಸಿಗರೆಂದು ತೀರ್ಮಾನಿಸಿದವರನ್ನೆಲ್ಲಾ
ಕೂಡಿ ಹಾಕಿಡಲು ಡಿಟೆನ್ಷನ್ ಸೆಂಟರ್ ಇಲ್ಲ ಡಿಟೆನ್ಷನ್ ಕ್ಯಾಂಪ್ ಎಂದೆಲ್ಲಾ ಕರೆಯಲಾಗುವ ನಾಝಿ ಹಿಟ್ಲರ್
ನ ಕುಪ್ರಸಿದ್ದ ಕಾನ್ ಸೆಂಟ್ರೇಷನ್ ಕ್ಯಾಂಪುಗಳನ್ನು ಹೋಲುವ ಬಂದೀಖಾನೆಗಳನ್ನು ದೇಶದ ಎಲ್ಲೆಡೆಯೂ ನಿರ್ಮಿಸಲಾಗುತ್ತಿದೆ.
ಕರ್ನಾಟಕದ ಬೆಂಗಳೂರು ಬಳಿಯ ನೆಲಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ಇಂತಹ ಕ್ಯಾಂಪುಗಳ ನಿರ್ಮಾಣ ಕಾರ್ಯ
ಭರದಿಂದ ನಡೆಯುತ್ತಿದೆ.
ಈಗಿನ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ತಮ್ಮ
ಭಾಷಣಗಳಲ್ಲಿ ಮೊದಲಿನಿಂದಲೂ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೊಂದಣೆ (ಎನ್ ಆರ್ ಸಿ) ಯನ್ನು ಜಾರಿ
ಮಾಡಿ ಅಕ್ರಮ ವಲಸಿಗರನ್ನು ಹೊರಹಾಕಲಾಗುತ್ತದೆ ಎಂದು ಬಹಿರಂಗ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದಾರೆ.
ಪ್ರಧಾನಿ ಮೋದಿ ಕೂಡ ಹಲವು ಸಂಧರ್ಭಗಳಲ್ಲಿ ಈ ಮಾತನ್ನು ಹೇಳಿದ್ದಾರೆ. ಆದರೆ ಅಕ್ರಮ ವಲಸಿಗರೆಂದು ಮುದ್ರೆಯೊತ್ತಿದ
ಜನರನ್ನು ಎಲ್ಲಿಗೂ ಕಳಿಸಲು ಸಾಧ್ಯವಾಗದು. ಬೇರೆ ಯಾವ ದೇಶಗಳೂ ಅವರನ್ನು ಸ್ವೀಕರಿಸುವ ಮೂರ್ಖ ನಡೆಗಳನ್ನು
ಮಾಡುವುದು ಸುಲಭದಲ್ಲಿ ಆಗದು. ಹಾಗಿದ್ದಾಗ ಅವರನ್ನೆಲ್ಲಾ ಡಿಟೆನ್ಷನ್ ಸೆಂಟರ್ ಗಳೆಂಬ ಬಂದಿಖಾನೆಗಳಲ್ಲಿ
ಕುರಿಗಳಂತೆ ಕೂಡಿ ಹಾಕಿ, ಅವರಿಂದ ಬಿಟ್ಟಿ ಚಾಕರಿ ಮಾಡಿಸುವ , ಭಾರಿ ಕಾರ್ಪೋರೇಟುಗಳಿಗೆ ಬಿಟ್ಟಿಯಾಗಿ
ಶ್ರಮಶಕ್ತಿಯನ್ನು ಒದಗಿಸುವ ಕಾರ್ಯಗಳಲ್ಲಿ ಬಲವಂತದಿಂದ ತೊಡಗಿಸುವ ಕೆಲಸ ನಡೆಯುತ್ತದೆ. ಈಗಾಗಲೇ ಇರುವ
ಕಾರಾಗೃಹಗಳಲ್ಲಿ ಅಂತಹ ಪ್ರಯೋಗಗಳು ಶುರುವಾಗಿ ಬಹಳ ಕಾಲವಾಗಿದೆ.
ಅಸ್ಸಾಂನಲ್ಲಿ ಎನ್ ಆರ್ ಸಿ ಯನ್ನು ಜಾರಿ
ಮಾಡಿ ಸುಮಾರು 19 ಲಕ್ಷದಷ್ಟು ಜನರು ಇಂಡಿಯಾದ ಪೌರರಲ್ಲ ಎಂದು ನಿರ್ಧರಿಸಲಾಯಿತು. ಅದರಲ್ಲಿ ಹನ್ನೆರಡು
ಲಕ್ಷದಷ್ಟು ಜನರ ಹಿಂದುಗಳೆಂದು ಗುರುತಿಸುವ ಸಮುದಾಯಕ್ಕೆ ಸೇರಿದವರಾಗಿದ್ದರು. ಉಳಿದ ಏಳು ಲಕ್ಷದಷ್ಟು
ಜನರು ಮಾತ್ರವೇ ಮುಸ್ಲಿಮರಾಗಿದ್ದರು. ಆಶ್ಚರ್ಯದ ವಾಸ್ತವವೇನೆಂದರೆ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ, ಸೇನೆಯಲ್ಲಿ ಮೇಜರ್
ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದವರೂ ಕೂಡ ದೇಶದ ಪೌರರಲ್ಲ ಎಂದು ಹೇಳಲಾಯಿತು. ಮಾಜಿ ರಾಷ್ಟ್ರಪತಿಗಳಾದ
ದಿವಂಗತ ಪಕ್ರುದ್ದೀನ್ ಅಲಿ ಅಹಮದ್ ರ ಕುಟುಂಬಸ್ಥರು ಕೂಡ
ದೇಶದ ಪೌರರಲ್ಲ ಎಂದು ತೀರ್ಮಾನಿಸಲಾಯಿತು. ರೇಷನ್ ಕಾರ್ಡ್ ಇದ್ದವರು, ಮತದಾರರ ಗುರುತಿನ ಚೀಟಿ
ಇದ್ದವರು, ಕಂದಾಯ ಕಟ್ಟಿದ ರಸೀದಿ ಇದ್ದವರು ಕೂಡ ತಮ್ಮ ಪೌರತ್ವವನ್ನು ಸಾಬೀತು ಮಾಡಲಾಗದೇ ಡಿಟೆನ್ಷನ್
ಕ್ಯಾಂಪುಗಳೆಂಬ ಅಕ್ರಮ ವಾಸಿಗಳಿಗೆಂದೇ ಇರುವ ಜೈಲುಗಳಲ್ಲಿ ಬಂದಿಗಳಾಗಬೇಕಾಯಿತು. ಅಂದರೆ ಮೋದಿ ಸರ್ಕಾರ
ದೇಶಾದ್ಯಂತ ಜಾರಿ ಮಾಡಲು ಹೊರಟಿರುವ ಎನ್ ಆರ್ ಸಿ ತಲತಲಾಂತರದಿಂದ ವಾಸ ಮಾಡುತ್ತಾ ಬಂದ, ಇಲ್ಲೇ ಹುಟ್ಟಿ
ಬೆಳೆದ ದೇಶದ ಜನಸಾಮಾನ್ಯರಿಗೆ ಎಂತಹ ಮಾರಕವಾದ ಯೋಜನೆ
ಎನ್ನುವುದನ್ನು ಅಸ್ಸಾಂ ನ ಉದಾಹರಣೆ ನಮಗೆ ಸ್ಪಷ್ಟವಾಗಿ ಹೇಳುತ್ತದೆ. ಮೋದಿ ಹಾಗೂ ಅಮಿತ್ ಷಾ ಜೋಡಿ
ಮೊದಲಿನಿಂದಲೂ ಎನ್ ಆರ್ ಸಿ ಬಗ್ಗೆ ಅಕ್ರಮ ವಲಸಿಗರನ್ನು
ಪತ್ತೆ ಹಚ್ಚಿ ದೇಶದಿಂದ ಹೊರಗೆ ಕಳಿಸುವ ಭಾರಿ ಜನಪರಯೋಜನೆ ಎಂಬಂತೆ ಬಹಿರಂಗಸಭೆಗಳಲ್ಲಿ ಹೇಳುತ್ತಾ
ತಮ್ಮ ಭಕ್ತರಿಂದ ಶಿಳ್ಳೆ ಹಾಗೂ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಾ ಬಂದಿದ್ದರು.
ನೋಟು ರದ್ದತಿ ಮಾಡಿದಾಗ ದೇಶದ ಜನಸಾಮಾನ್ಯರನ್ನು
ನಾಜೂಕಾಗಿ ಯಾಮಾರಿಸಿದಂತೆ ಸಿಎಎ ಹಾಗೂ ಎನ್ ಆರ್ ಸಿ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಸಾಧ್ಯವಾಗದೇ
ಹೋಗಿದೆ. ಆದರೂ ಮೋದಿ ಸರ್ಕಾರದ ಪ್ರಯತ್ನ ನಿಂತಿಲ್ಲ. ಇದೇ ಡಿಸೆಂಬರ್ 22ರಂದು ದೆಹಲಿಯ ರಾಮ್ ಲೀಲಾ
ಮೈದಾನದಲ್ಲಿ ಜನಸಾಮಾನ್ಯರನ್ನು ಭಾವೋದ್ವೇಗಗೊಳಿಸಲು ಪ್ರಯತ್ನಿಸುತ್ತಾ ಸಿ ಎ ಎ ಬೇರೆ ಎನ್ ಆರ್ ಸಿ ಬೇರೆ! ಸಿಎಎಯಿಂಧ ಯಾರಿಗೂ ಅಪಾಯವಿಲ್ಲ!
ಎನ್ ಆರ್ ಸಿಯನ್ನು ದೇಶದಾದ್ಯಂತ ಜಾರಿಗೊಳಿಸುವ ಯೋಜನೆ ತಮ್ಮ ಸರ್ಕಾರದ ಬಳಿ ಇಲ್ಲ.! ಡಿಟೆನ್ಷನ್ ಸೆಂಟರ್
ಗಳನ್ನು ಎಲ್ಲೂ ನಿರ್ಮಿಸಲಾಗುತ್ತಿಲ್ಲ.! ವಿರೋಧ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸುಳ್ಳುಗಳನ್ನು
ಹರಡಿ ಜನರನ್ನು ತಪ್ಪುದಾರಿಗೆಳೆದು ದೇಶದಲ್ಲಿ ಪ್ರಕ್ಷುಭ್ಧ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿವೆ.!...ದೇಶದಲ್ಲಿರುವ
ಮುಸ್ಲಿಮ್ ಅಲ್ಪಸಂಖ್ಯಾತರಿಗೆ ನಮ್ಮ ಸರಕಾರದಿಂದ ಯಾವುದೇ ತೊಂದರೆಯೂ ಇಲ್ಲ.! ನಮ್ಮ ಸರಕಾರ ಇಂಡಿಯಾ
ದೇಶದ ಬಹುತ್ವವನ್ನು ಗೌರವಿಸುತ್ತದೆ.!. ಯಾರೂ ಕೂಡ
ಆತಂಕಕ್ಕೆ ಒಳಗಾಗದೇ ಶಾಂತಿ ಕಾಪಾಡಿ ....ಎಂದೆಲ್ಲಾ ತಮ್ಮ ಬಹಿರಂಗ ಭಾಷಣದಲ್ಲಿ ಹೇಳಿದ್ದಾರೆ.
ಆದರೆ ಪ್ರಧಾನಿ ಮೋದಿಯ ಮಾತುಗಳನ್ನು ಮೊದಲಿನಂತೆ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು
ಸಾಬೀತಾಗಿದೆ. ಆದರೂ ಮೋದಿ ತಮ್ಮ ಪ್ರಯತ್ನಗಳನ್ನು ನಿಲ್ಲಿಸದೇ ಮುಂದುವರೆಸಿದ್ದಾರೆ. ನನ್ನನ್ನು ನಂಬಿ
ಎಂದು ಪದೇ ಪದೇ ಹೇಳತೊಡಗಿದ್ದಾರೆ.
ಆದರೆ ಜನರು ಮಾಡುತ್ತಿರುವ ಈ ಭಾರಿ ಮಟ್ಟದ
ಹೋರಾಟದಲ್ಲಿ ವಿರೋಧ ಪಕ್ಷಗಳ ಪಾತ್ರ ಬಹಳ ನಗಣ್ಯವಾದುದು ಎನ್ನುವುದು ಬಹಿರಂಗವಾಗಿರುವ ಸತ್ಯ. ಕೆಲವು
ಎಡಪಕ್ಷಗಳು ಮಾತ್ರ ಈ ಹೋರಾಟದಲ್ಲಿ ಒಂದು ಮಟ್ಟದಲ್ಲಿ ತೊಡಗಿಸಿಕೊಂಡಿವೆ. ಆದರೆ ಅವುಗಳು ಕೂಡ ಹೇಲಿಕೊಳ್ಳುವಂತಹ
ರೀತಿಯಲ್ಲಿ ಜನರನ್ನು ಸಂಘಟಿಸಿ ಹೋರಾಟಗಳನ್ನು ನಡೆಸುತ್ತಿಲ್ಲ. ಹೋರಾಟದಲ್ಲಿ ತೊಡಗುತ್ತಿರುವ ಜನರೊಂದಿಗೆ
ಕೈಜೋಡಿಸುವುದನ್ನು ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಜನರನ್ನು ಸಂಘಟಿಸಿ ಸಮಾವೇಶವನ್ನು
ನಡೆಸಿದ್ದಾರೆ. ಉಳಿದಂತೆ ಕಾಂಗ್ರೆಸ್ ನಂತಹ ಪಕ್ಷಗಳು ಜನರ ಹೋರಾಟಗಳ ರಾಜಕೀಯ ಲಾಭ ಪಡೆಯಲು ಪ್ರಯತ್ನ
ನಡೆಸುತ್ತಿದೆಯಾದರೂ ಅದೂ ಕೂಡ ಅದರಿಂದ ಸಾಧ್ಯವಾಗದಂತಹ ಸ್ಥಿತಿಯಿದೆ.
ಹಾಗಾಗಿ ಈಗ ಜನರು ನಡೆಸುತ್ತಿರುವ ಭಾರಿ ಹೋರಾಟ
ಈ ಚುನಾವಣೆಗಳ ಲೆಕ್ಕಾಚಾರದ ರಾಜಕೀಯ ಪಕ್ಷಗಳಿಂದ ಹೊರತಾದ ಹೋರಾಟವಾಗಿ ನಿಂತಿದೆ. ಅದೇ ಕಾರಣದಿಂದಾಗಿಯೇ
ಮೋದಿ ಸರಕಾರಕ್ಕೆ ಈ ಹೋರಾಟವನ್ನು ದಮನ ಮಾಡಿ ಅಡಗಿಸಲು ಸಾಧ್ಯವಾಗದೇ ಹೋಗಿದೆ. ಒಂದು ವೇಳೆ ಈ ರಾಜಕೀಯ
ಪಕ್ಷಗಳ ನೇತೃತ್ವ ಹೋರಾಟಗಳಿಗೆ ಇದ್ದಿದ್ದರೆ ಈ ಹೋರಾಟ ಈ ಮಟ್ಟದ ತೀವ್ರತೆಯನ್ನೂ ಹಾಗೂ ನಿರಂತರತೆಯನ್ನು
ಪಡೆಯುತ್ತಿರಲಿಲ್ಲ. ಬಹಳ ಸಾಂಕೇತಿಕ ಮಟ್ಟಕ್ಕೆ ಇಳಿದುಬಿಡುವ ಅಪಾಯವಿತ್ತು.
ಈಗ ಮುಂದಿನ ವರ್ಷ ಜನಗಣತಿಯ ಕಾಲವಾಗಿದೆ.
ಆ ಜನಗಣತಿ ಕಾರ್ಯಕ್ರಮ ಈಗ ಜಾರಿ ಮಾಡುತ್ತಿರುವ ಸಿಎಎ , ಎನ್ ಆರ್ ಸಿ ಯ ಭಾಗವಾಗೇ ಸಹಜವಾಗಿ ಮಾಡಲಾಗುತ್ತದೆ
ಎನ್ನುವುದರಲ್ಲಿ ಅನುಮಾನ ಬೇಕಿಲ್ಲ. ಅಲ್ಲದೆ ಈಗ ಕೆಲವು ರಾಜ್ಯ ಸರಕಾರಗಳು ತಮ್ಮ ರಾಜ್ಯಗಳಲ್ಲಿ ಸಿಎಎ,
ಎನ್ ಆರ್ ಸಿ ಜಾರಿ ಮಾಡುವುದಿಲ್ಲ ಎಂದು ಹೇಳಲು ಶುರುಮಾಡಿವೆ. ಅದರಲ್ಲಿ ಆಂದ್ರ ಪ್ರದೇಶದ ಜಗಮೋಹನ್
ರೆಡ್ಡಿ, ಬಿಹಾರದ ನಿತೀಷ್ ಕುಮಾರ್, ಮಹಾರಾಷ್ಟ್ರದ ಉದ್ದವ್ ಠಾಕ್ರೆ, ಕೇರಳದ ಪಿಣರಾಯಿ ವಿಜಯನ್, ಪಶ್ಚಿಮ
ಬಂಗಾಳದ ಮಮತಾ ಬ್ಯಾನರ್ಜಿ, ಸೇರಿದಂತೆ ದೇಶದ ಹಲವು
ರಾಜ್ಯಗಳ ಮುಖ್ಯಮಂತ್ರಿಗಳಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಲೋಕಸಭೆಯಲ್ಲಿ ಸಿಎಬಿ ಯನ್ನು
ಬೆಂಬಲಿಸಿ ಮಸೂದೆಯಾಗಿಸಲು ಕೈಜೋಡಿಸಿದ ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಜಗಮೋಹನ್ ರೆಡ್ಡಿ, ಜೆಡಿಯು
ನ ನಿತೀಷ್ ಕುಮಾರ್ ರಂತಹವರೂ ಈಗ ತಮ್ಮ ರಾಜ್ಯಗಳಲ್ಲಿ ಸಿಎಎ ಹಾಗೂ ಎನ್ ಆರ್ ಸಿ ಜಾರಿ ಮಾಡುವುದಿಲ್ಲ…
ಎಂದೆಲ್ಲಾ ಕಾಗೆ ಹಾರಿಸಲು ಶುರುಮಾಡಿದ್ದಾರೆ. ತಮ್ಮ ರಾಜ್ಯಗಳ ಜನಕ್ರೋಷದ ಕಾವು ಅವರ ಬುಡಗಳಿಗೆ ಬರುವ
ಅಪಾಯದಿಂದ ಪಾರಾಗಲು ಈ ಎಲ್ಲಾ ನಾಟಕ ಆಡಲು ಶುರುವಿಟ್ಟುಕೊಂಡಿದ್ದಾರೆ ಎನ್ನುವುದರಲ್ಲಿ ಅನುಮಾನ ಬೇಕಾಗಿಲ್ಲ.
ಆದರೆ ಸಂವಿಧಾನಬದ್ದವಾಗಿ ಜಾರಿಮಾಡಲೇ ಬೇಕಾದ ಕಾಯಿದೆಗಳಿವು ಎನ್ನುವುದನ್ನು ಜಾಣತನದಿಂದ ಮರೆಮಾಚಿ
ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದ್ದಾರೆ. ಬಿ.ಜೆ.ಪಿ. ಯ ವಾಜಪೇಯಿ ಕಾಲದಲ್ಲಿ ಮಾಡಿದ ಪೌರತ್ವ ತಿದ್ದುಪಡಿ
ಕಾಯಿದೆ 2003ರ ಪ್ರಕಾರ ಎಲ್ಲಾ ರಾಜ್ಯ ಸರ್ಕಾರಗಳೂ ಪೌರತ್ವ ಸಂಬಂಧಿತ ಕೇಂದ್ರೀಯ ಕಾಯಿದೆಗಳನ್ನು ಜಾರಿ
ಮಾಡಲೇ ಬೇಕಾಗುತ್ತದೆ.
ಕೇಂದ್ರ ಸರಕಾರ
ಈ ಕಾಯಿದೆಗಳನ್ನು ಪುನಃ ಲೋಕಸಭೆಯಲ್ಲಿಟ್ಟು ವಾಪಾಸು ಪಡೆದು ಅಧಿಸೂಚನೆ ಹೊರಡಿಸದ ಹೊರತು ರಾಜ್ಯ ಸರ್ಕಾರಗಳು
ಇವುಗಳನ್ನು ಜಾರಿ ಮಾಡಲಾಗುವುದಿಲ್ಲ ಎನ್ನುವುದೆಲ್ಲಾ ಕೇವಲ ಬೊಗಳೆಯ ಮಾತುಗಳಾಗುತ್ತವೆ ಅಷ್ಟೇ. ಜನಸಾಮಾನ್ಯರು
ಇವರ ಬೊಗಳೆ ಹಾಗೂ ಯಾಮಾರಿಸುವ ಮಾತುಗಳನ್ನು ನಂಬದೇ ತಮ್ಮ ದೃಢ ಹೋರಾಟಗಳನ್ನು ಮುನ್ನೆಡಸಬೇಕಿದೆ. ಈ
ಎಲ್ಲಾ ಚುನಾವಣಾ ಲೆಕ್ಕಾಚಾರದ ಪಕ್ಷಗಳು ಮತ್ತವುಗಳ ನಾಯಕರುಗಳ ಮಾತುಗಳಿಗೆ, ಗಿಮಿಕ್ಕುಗಳಿಗೆ ಜನಸಾಮಾನ್ಯರು
ಬಲಿಯಾಗುತ್ತಾ ಬಂದಿದ್ದರಿಂದಲೇ ನಮ್ಮ ದೇಶವನ್ನು ಇಂದಿನ ಅಧೋಗತಿಗೆ ತಂದಿಡಲು ಅವರುಗಳಿಗೆ ಸುಲಭದಲ್ಲಿ
ಸಾಧ್ಯವಾಗಿದ್ದು ಎನ್ನುವುದನ್ನು ಮರೆಯಬಾರದು.
ಹಾಗಾಗಿ ಮುಂದಿನ ಜನಗಣತಿ ( ಎನ್ ಪಿ ಆರ್)
ಕಾರ್ಯಕ್ರಮವನ್ನು ಸಿಎಎ ಹಾಗೂ ಎನ್ ಆರ್ ಸಿ ಯನ್ನು ಅಧೀಕೃತವಾಗಿ ಕೇಂದ್ರ ಸರಕಾರ ರದ್ದುಗೊಳಿಸಿದ ನಂತರವೇ
ನಡೆಸಬೇಕು ಎಂದು ಹಕ್ಕೊತ್ತಾಯಗಳನ್ನು ಎಲ್ಲಾ ರಾಜ್ಯ ಸರಕಾರಗಳು ಕೇಂದ್ರಸರಕಾರದ ಮುಂದಿಡಲು ಜನಹೋರಾಟಗಳು
ಒತ್ತಡ ಹಾಕಬೇಕಿದೆ. ಇಲ್ಲದಿದ್ದರೆ ದೇಶದ ಜನಸಾಮಾನ್ಯರು ಭಾರಿ ಬೆಲೆ ತೆರಬೇಕಾಗುತ್ತದೆ. ದೇಶದ ಹಾಗೂ ದೇಶದ ಬಹುತ್ವ ಮತ್ತು ಜನಸಾಮಾನ್ಯರ ಪೌರತ್ವಗಳಿಗೇ
ಭಾರಿ ಅಪಾಯ ಸಂಭವಿಸುವ ಸಾಧ್ಯತೆಯಿವೆ. ಈಗ ಮುನ್ನೆಡೆಯುತ್ತಿರುವ ಜನಹೋರಾಟಗಳು ಅಲ್ಲಿಯವರೆಗೂ ವಿರಮಿಸದಂತೆ
ನೋಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಈ ಎಲ್ಲಾಚುನಾವಣಾ ಲೆಕ್ಕಾಚಾರದ ರಾಜಕೀಯ ಪಕ್ಷಗಳು ಮತ್ತವರ ಹಿಂಬಾಲಕರು
ಕೇಂದ್ರ ಸರಕಾರದೊಂದಿಗೆ ಪ್ರತ್ಯಕ್ಷ ಇಲ್ಲವೇ ಪರೊಕ್ಷವಾಗಿ ಶಾಮೀಲಾಗಿ ದೇಶದ ಜನಸಾಮಾನ್ಯರನ್ನು ಮೋಸಗೊಳಿಸುವ
ಸಾಧ್ಯತೆ ಇರುತ್ತದೆ.
ಆದರೆ ಈಗ ನಡೆಯುತ್ತಿರುವ ಮಾದರಿಯ ಹೋರಾಟಗಳಿಂದಲೇ ಬಹಳ ಕಾಲ
ಹೋರಾಟಗಳನ್ನು ಮುನ್ನೆಡೆಸಲು ಸಾಧ್ಯವಾಗದು. ಜನರ ಸಿಟ್ಟು ಆಕ್ರೋಷಗಳು ಹೊರಹಾಕಲು ಮಾತ್ರ ಸೀಮಿತವಾಗುವ
ಅಪಾಯವಿದೆ. ಇವಿಷ್ಟರಿಂದಲೇ ಜನಹೋರಾಟಕ್ಕೆ ಜಯ ಸಿಗಲಾರದು. ಈ ಎಲ್ಲಾ ಹೋರಾಟಗಳನ್ನು ಸಂಯೋಜನೆಗೊಳಿಸುವ
ಸಂಘಟನಾ ರಚನೆಯನ್ನು ಚುನಾವಣಾ ಲೆಕ್ಕಾಚಾರದ ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ಮಾಡಿಕೊಳ್ಳುವ ಅಗತ್ಯವಿದೆ.
ದೇಶದ ಎಲ್ಲಾ ಭಾಗದ ಹೋರಾಟ ನಿರತ ಜನರ, ಸಂಘಟನೆಗಳ, ಗುಂಪುಗಳ ಒಕ್ಕೂಟದ ರೀತಿಯ ಸಂರಚನೆಯೊಂದರ ಅಗತ್ಯವಿದೆ.
ಅಲ್ಲೂ ಕೂಡ ಹೋರಾಟಗಳನ್ನು ದಿಕ್ಕು ತಪ್ಪಿಸುವ, ಸರಕಾರಕ್ಕೆ ಅಥವಾ ಯಾವುದೋ ಪಕ್ಷಕ್ಕೆ ಅಡವಿಡುವ ಅಪಾಯದ
ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಕೇವಲ ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಮಾತ್ರವಲ್ಲದೆ ಮೋದಿ
ಸರಕಾರ ಮತ್ತು ಹಿಂದಿನ ಸರಕಾರಗಳು ಮಾಡುತ್ತಾ ಬಂದ ಎಲ್ಲಾ ಜನವಿರೋಧಿ ಹಾಗೂ ಭಾರಿ ಕಾರ್ಪೋರೇಟ್ ಪರ
ನೀತಿಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಬೇಕಿದೆ.
23/12/2019
-ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
Comments
Post a Comment