ಮರೀಚಿಕೆಯಾಗುತ್ತಿರುವ
ಕಾನೂನು ನ್ಯಾಯ
ಅಶಾಂತಿಯ
ಬೀಡಾಗಬಹುದೇ ಇಂಡಿಯಾ…
-ನಂದಕುಮಾರ್ ಕುಂಬ್ರಿಉಬ್ಬು
ಪಕ್ಕದ ರಾಜ್ಯ ಕೇರಳಮ್ ನ ಮಲೆಯಾಳಂ ಚಿತ್ರರಂಗವನ್ನು
ಬೆಚ್ಚಿಬೀಳಿಸಿದ್ದ ಸಿನಿಮಾ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಕಳೆದ ಎಂಟು ವರುಷಗಳಿಂದ
ದೂರು, ಪ್ರಥಮ ಮಾಹಿತಿ ವರದಿ, ತನಿಖೆ, ಬಂಧನ, ವಿಚಾರಣೆಯ ಹಂತಗಳು ಮುಗಿದು ಕೆಲವು ದಿನಗಳ ಹಿಂದೆ ತೀರ್ಪು
ಹೊರಬಿದ್ದಿದೆ. ಈ ಪ್ರಕರಣದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಪಲ್ಸರ್ ಸುನಿ ಮತ್ತು ಆತನ ಸಂಗಡಿಗ ಅಪರಾಧಿಗಳಿಗೆ
ಇಪ್ಪತ್ತು ವರುಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯ ನೀಡಿದೆ.
ಆದರೆ ಈ ಕೃತ್ಯವನ್ನು ಸುಪಾರಿ ಕೊಟ್ಟು ಮಾಡಿಸಲಾಗಿದೆ
ಎಂದು ಅದನ್ನು ಮಾಡಿಸಿದ್ದು ಮಲೆಯಾಳಮ್ ಚಿತ್ರರಂಗದ ನಟ ದಿಲೀಪ್ ಎಂದು ದೂರುಗಳು ವಾರ್ತೆಗಳು ಹರಡಿದ್ದವು.
ದಿಲೀಪರ ಮೇಲೆಯೂ ಈ ಪ್ರಕರಣ ದಾಖಲು ಮಾಡಬೇಕಾಗಿ ಬಂದು ನಟ ದಿಲೀಪ್ ಕಾರಗೃಹವಾಸದಲ್ಲಿ ಕೆಲವು ತಿಂಗಳುಗಳ
ಕಾಲ ಇರಬೇಕಾಗಿಯೂ ಬಂದಿತ್ತು. ಈ ಪ್ರಕರಣದಲ್ಲಿ ಸಾಕ್ಷಿದಾರರಾಗಿದ್ದ ಸುಮಾರು ಇಪ್ಪತ್ತೆಂಟು ಜನರು
ನ್ಯಾಯಾಲಯದ ವಿಚಾರಣೆಯ ಹೊತ್ತಿಗೆ ಪ್ರತಿಕೂಲ ಸಾಕ್ಷಿಯಾಗಿ ಬದಲಾದರೆಂದು ಸುದ್ದಿಯಿದೆ. ಅದಷ್ಟೇ ಅಲ್ಲದೇ
ಆರೋಪಿ ನ್ಯಾಯಾಲಯಕ್ಕೆ ಬರುವಾಗ ನ್ಯಾಯಾಧೀಶರೇ ತಮ್ಮ
ಪೀಠದಿಂದ ಎದ್ದು ನಿಂತು ಗೌರವ ಸೂಚಿಸಿರುವ ಘಟನೆಯೂ ನಡೆದಿದೆ ಎಂಬ ವರದಿಗಳೂ ಹರಿದಾಡಿದವು.
ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯದ ಪಿತೂರಿದಾರರ ಮೇಲೆ
ಕಾನೂನು ಕ್ರಮ ಜರುಗದೇ ಹೋಗಿರುವುದರಿಂದ ಈ ಪ್ರಕರಣದಲ್ಲಿ ನ್ಯಾಯವನ್ನು ಖಾತ್ರಿಮಾಡುವಲ್ಲಿ ನ್ಯಾಯಾಂಗ
ಹಾಗೂ ಆಡಳಿತಾಂಗಗಳು ಸೋತಿವೆ ಎಂಬ ಟೀಕೆಗಳು ಹಲವು ವಲಯಗಳಿಂದಲ್ಲದೇ ಸ್ವತಹ ದೂರುದಾರೆಯಿಂದಲೂ ಹೊರಬಿದ್ದಿವೆ.
ಈ ಪ್ರಕರಣದಿಂದ ಖುಲಾಸೆಯಾದ ನಟ ದಿಲೀಪ್ ತನ್ನ ವಿರುದ್ದ ಚಿತ್ರರಂಗದ ಕೆಲವರು ಹಾಗೂ ಕೆಲವು ಪೋಲಿಸ್
ಅಧಿಕಾರಿಗಳು ಷಡ್ಯಂತ್ರ ನಡೆಸಿ ಈ ಪ್ರಕರಣದಲ್ಲಿ ಸಿಲುಕಿಸಿದ್ದರು ಎಂದು ಮಾಧ್ಯಮಗಳ ಮೂಲಕ ದೂರಿದ್ದಾರೆ.
ದಿಲೀಪರ ಪರವಾಗಿ ಇಪ್ಪತ್ತಕ್ಕೂ ಹೆಚ್ಚು ವಕೀಲರ ತಂಡವೇ ವಾದ ಮಂಡಿಸಿದ್ದರೆಂಬ ವಾರ್ತೆಯಿದೆ. ದೂರುದಾರೆ
ಸಂತ್ರಸ್ಥ ನಟಿ ತಾನು ವಿಚಾರಣೆ ಹಾಗೂ ಪಾಟಿ ಸವಾಲುಗಳ ಹೆಸರಿನಲ್ಲಿ ಅನುಭವಿಸಿದ ಧಾರುಣತೆಗಳನ್ನು ಹೇಳಲು
ಸಾಧ್ಯವಿಲ್ಲದಷ್ಟಿವೆ ಎಂದು ಮಾಧ್ಯಮದೊಂದಿಗೆ ಮಾತನಾಡಿದಾಗ ಹೇಳಿದ್ದಾರೆ. ನನ್ನಂತಹವರಿಗೇ ಇಂತಹ ಪರಿಸ್ಥಿತಿಯಿರುವಾಗ
ಇನ್ನು ಯಾವುದೇ ಬೆಂಬಲ ಇಲ್ಲದ ಹೆಣ್ಣುಮಕ್ಕಳ ಕತೆಯೇನಾಗಿರಬಹುದು ಊಹಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.
ಈ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡುವ ಸಾಧ್ಯತೆಗಳಿವೆ.
ಈ ಪ್ರಕರಣವು ಕೇರಳಮ್ ರಾಜ್ಯದಲ್ಲಿ ಹಲವಾರು
ಬೆಳವಣಿಗೆಗಳಿಗೆ ಕಾರಣವಾಯಿತು. ಮಲೆಯಾಳ ಸಿನಿಮಾ ನಟಿಯರದೇ ಆದ ಸಂಘಟನೆಯೊಂದು ಹುಟ್ಟಿತು. ಚಿತ್ರರಂಗವೂ
ಸೇರಿದಂತೆ ವಿವಿಧ ರಂಗಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ಇನ್ನಿತರ ದೌರ್ಜನ್ಯಗಳನ್ನು ತಡೆಗಟ್ಟಲು
ರಾಚನಿಕ ವ್ಯವಸ್ಥೆಗಳು ರೂಪುಗೊಂಡವು. ಇದಾದ ನಂತರ ಮಲೆಯಾಳ ಚಿತ್ರರಂಗದ ಹಲವು ನಟರು ನಿರ್ದೇಶಕರುಗಳ
ವಿರುಧ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ದೂರುಗಳು ದಾಖಲಾದವು. ಇವುಗಳ ಬಗ್ಗೆ ತನಿಖೆ ನಡೆಸಿ
ವರದಿ ನೀಡಲು ನ್ಯಾಯಾಧೀಶೆ ಹೇಮಾರ ನೇತೃತ್ವದಲ್ಲಿ ಆಯೋಗವೊಂದು ರಚನೆಯಾಗಿ ಅದು ಚಿತ್ರರಂಗದಲ್ಲಿ ಮಹಿಳೆಯರ
ಮೇಲಾಗುತ್ತಿರುವ ಲೈಂಗಿಕ ಇನ್ನಿತರ ದೌರ್ಜನ್ಯಗಳು ನಿಜವೆಂದು ಸರ್ಕಾರಕ್ಕೆ ವರದಿ ನೀಡಿತು. ನಂತರವೂ
ಹಲವಾರು ದೂರುಗಳು ದಾಖಲಾದವು.ಕೆಲವು ಬಂದನಗಳು ಕೂಡಲೇ ಜಾಮೀನಿನಡಿ ಹೊರಬರುವುದೂ ನಡೆದವು. ಆದರೆ ಈ
ದೂರುಗಳು ಯಾವುವೂ ನೆಲೆನಿಲ್ಲದೇ ಹೋದವು. ಈ ಸಂಬಂಧದ ಎಲ್ಲಾ ಪ್ರಕರಣಗಳೂ ನ್ಯಾಯಾಲಯದಲ್ಲಿ ವಿಚಾರಣಾ
ಹಂತ ತಲುಪಲೇ ಇಲ್ಲ.
ಕರ್ನಾಟಕದಲ್ಲೂ ಮಿ ಟೂ ಹೆಸರಿನಲ್ಲಿ ಕೆಲವು
ನಟರ ಹೆಸರಿನಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೊರಬಿದ್ದು ದೂರು ದಾಖಲಾದವು. ಪತ್ರಿಕಾ ಗೋಷ್ಟಿಗಳು
ಪ್ರತಿ ಪತ್ರಿಕಾಗೋಷ್ಟಿಗಳು ನಡೆದವು. ಆಪಾದಿತ ನಟರ ಬೆಂಬಲಕ್ಕೆ ಹಲವು ನಟರುಗಳು ಟೊಂಕಕಟ್ಟಿ ನಿಂತರು.
ನೀಚ ಮಟ್ಟದ ಮಹಿಳಾವಿರೋಧಿ ನುಡಿಬಾಶೆಗಳ ಬಳಕೆ ಸಾಕಷ್ಟಾಯಿತು. ಇಲ್ಲಿ ಬಂಧನಗಳು ನಡೆಯಲಿಲ್ಲ. ನ್ಯಾಯಾಲಯದ
ವಿಚಾರಣಾ ಹಂತ ತಲುಪಲೂ ಇಲ್ಲ. ಒಂದಷ್ಟು ಕಾಲದ ನಂತರ ಕೊನೆಗೆ ಬಿ ವರದಿ ಸಲ್ಲಿಸಿ ಈ ಪ್ರಕರಣಗಳನ್ನು
ಮುಗಿಸಲಾಯಿತು ಎಂಬ ವರದಿ ಬಂದಿತು.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ವೈದಿಕ
ಪಂಗಡದ ಒಂದು ಮಠವಾದ ರಾಮಚಂದ್ರಾಪುರದ ಸ್ವಾಮಿಯೆನಿಸಿಕೊಂಡ ರಾಘವೇಶ್ವರರ ಮೇಲೆ ಅತ್ಯಾಚಾರ ಆರೋಪ ಗಂಭೀರವಾಗಿ
ಹೊರಬಿದ್ದಿತು. ದೂರು ದಾಖಲಾಯಿತು. ದೂರುದಾರೆ ಹಾಗೂ ಆಕೆಯ ಕುಟುಂಬದ ಮೇಲೆ ಕೆಟ್ಟ ವಾಗ್ಧಾಳಿಗಳು ನಡೆದವು.
ಪ್ರತಿದೂರು ದಾಖಲಾಗಿ ದೂರುದಾರೆಯ ಕುಟುಂಬ ಕಾರಾಗೃಹವಾಸ ಮಾಡಬೇಕಾಯಿತು. ಕನ್ನಡದ ಬಹುತೇಕ ಪತ್ರಿಕೆಗಳು
ಹಾಗೂ ದೃಶ್ಯ ಮಾಧ್ಯಮಗಳು ಆಪಾದಿತ ಈ ಸ್ವಾಮಿಯ ಪರವಾಗಿ ನಿಂತು ದೂರುದಾರೆ ಮತ್ತು ಆಕೆಯ ಕುಟುಂಬದ ವಿರುದ್ಧ
ಜನಾಭಿಪ್ರಾಯ ರೂಪಿಸುವಲ್ಲಿ ಪೈಪೋಟಿಗಿಳಿದವು. ಇಲ್ಲಿ ಆಪಾದಿತ ಸ್ವಾಮಿಯ ಬಂಧನವಾಗಲೇ ಇಲ್ಲ. ದೂರುದಾರೆ
ನೇರವಾಗಿ ಮಾಧ್ಯಮದೊಂದಿಗೆ ತನಗಾದ ಅನ್ಯಾಯವನ್ನು, ತನ್ನ ರಾಮನ ಮೇಲಿನ ಭಕ್ತಿಯನ್ನು ಆಪಾದಿತ ಸ್ವಾಮಿ
ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಬಳಸಿಕೊಂಡರೆಂದು ನೇರವಾಗಿಯೇ ಬಿಚ್ಚಿಟ್ಟರು. ಹಲವಾರು ನ್ಯಾಯಾಧೀಶರುಗಳು
ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದದ್ದೂ ವರದಿಯಾಯಿತು. ಆಪಾದಿತ ಸ್ವಾಮಿ ತನ್ನ ಬಂಧನದಿಂದ ತಪ್ಪಿಸಿಕೊಂಡರು.
ಹಾಗೂ ಹೀಗೂ ನ್ಯಾಯಾಂಗದ ವಿಚಾರಣೆ ಮುಗಿದು ಕೊನೆಗೆ ತೀರ್ಪು ಹೊರಬಂದಿತು. ಸದರಿ ಸ್ವಾಮಿ ದೂರುದಾರೆಯೊಂದಿಗೆ
ಲೈಂಗಿಕ ಸಂಬಂದ ಹೊಂದಿದ್ದು ನಿಜವೆಂದು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಆದರೆ ಅತ್ಯಾಚಾರವಲ್ಲ ಅದು
ಅವರುಗಳ ಮಧ್ಯೆ ಒಪ್ಪಿತ ಲೈಂಗಿಕ ಸಂಬಂಧವಾಗಿತ್ತೆಂದು ನ್ಯಾಯಾಲಯ ತೀರ್ಪಿತ್ತಿತು. ಸನ್ಯಾಸಿಯೆಂದು
ತೋರಿಸಿಕೊಳ್ಳುತ್ತಿರುವ ಆ ಸ್ವಾಮಿ ಈಗಲೂ ಆ ವೈದಿಕ ಪಂಗಡದ ಮಠದ ಸ್ವಾಮಿಯಾಗಿಯೇ ಮುಂದುವರೆದಿದ್ದಾರೆ.
ತೀರ್ಪು ಬಂದಮೇಲೆ ಆ ಸ್ವಾಮಿ ಪೀಠತ್ಯಾಗಮಾಡಬೇಕೆಂಬ ಹಕ್ಕೊತ್ತಾಯಗಳೊಂದಿಗೆ ಅದೇ ವೈದಿಕ ಪಂಗಡದ ಒಂದು
ಗುಂಪು ಪ್ರತಿಭಟನೆ ಮಾಡಿದ್ದರೂ ಅದು ಕಾರ್ಯಗತವಾಗಲಿಲ್ಲ. ಯಾಕೆಂದರೆ ಆ ವೈದಿಕ ಪಂಗಡದ ಪುರೋಹಿತಶಾಹಿಗಳ
ದೊಡ್ಡ ಗುಂಪು ಆ ಸ್ವಾಮಿಯ ಬೆಂಬಲಕ್ಕೆ ನಿಂತಿದೆ.
ಹಾಗೇನೆ ತನ್ನ ಮಠದ ಹೆಣ್ಣುಮಕ್ಕಳ ಮೇಲೆ ಲೈಂಗಿಕ
ದೌರ್ಜನ್ಯ ಆರೋಪ ಹೊತ್ತಿದ್ದ ವೈದಿಕೇತರ ಮಠದ ಪ್ರಭಾವಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮಿ
ಪೋಕ್ಸೋ ಪ್ರಕರಣಗಳನ್ನು ಹೊತ್ತು ಒಂದಷ್ಟು ದಿನಗಳ ಕಾರಾಗೃಹವಾಸವನ್ನೂ ಮಾಡಬೇಕಾಯಿತು. ಅವರ ಮೇಲಿನ
ಪ್ರಕರಣವೊಂದು ವಿಚಾರಣೆ ಮುಗಿದು ಇತ್ತೀಚೆಗೆ ನ್ಯಾಯಾಲಯದಲ್ಲಿ ಖುಲಾಸೆಯಾಯಿತು. ಇನ್ನು ಕೆಲವು ಅವರ
ಮೇಲಿನ ಅಂತಹುದೇ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಈ ಪ್ರಕರಣ ಹೊರಬರಲು ಆ ಮಠದಲ್ಲಿನ ಅಂತರಿಕ
ಕಚ್ಚಾಟವೇ ಕಾರಣವೆಂಬ ವರದಿಗಳಿವೆ.
ಈಗ ನಮ್ಮ ರಾಜ್ಯದ ದಕಿಣಕನ್ನಡ ಜಿಲ್ಲೆಯ ಧರ್ಮಸ್ಥಳದ
ಸುತ್ತಮುತ್ತ ನಾನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಅತ್ಯಾಚಾರ, ಕಣ್ಮರೆ, ಕೊಲೆಗಳಾಗಿವೆ. ಅಂತಹ ಹೆಣಗಳನ್ನು
ಅಲ್ಲಿನ ಗ್ರಾಮ ಪಂಚಾಯಿತಿಯೂ ಸೇರಿದಂತೆ ಹಲವರ ಉಸ್ತುವಾರಿಯಲ್ಲಿ ಅಲ್ಲಲ್ಲಿ ಹೂತುಹಾಕಲಾಗಿದೆ ಎಂಬ
ಬಹಳ ಗಂಭೀರ ಆರೋಪಗಳು ದಾಖಲಾಗಿ ವಿಶೇಶ ತನಿಖಾದಳದ ತನಿಖೆಯೂ ಸಾಗಿದೆ. ಈ ಕೊಲೆಗಳ ವಿರುಧ್ದ ಜನಹೋರಾಟವೂ
ಜಾರಿಯಲ್ಲಿದೆ. ತನಿಖೆ ದಿಕ್ಕು ತಪ್ಪಿಸುವುದೂ ತಪ್ಪುವುದು ಆಗುತ್ತಿದೆಯೆಂಬ ಆರೋಪಗಳೂ ಬಲವಾಘಿಯೇ ಕೇಳಿಬರುತ್ತಿದೆ.
ಆಳುವ ಸರ್ಕಾರ ಈ ಪ್ರಕರಣವನ್ನು ಹೇಗಾದರೂ ಮಾಡಿ ತಿಪ್ಪೆಸಾರಿಸುವ ರೀತಿ ವರ್ತಿಸುತ್ತಿರುವುದೂ ಮೇಲ್ನೋಟದಲ್ಲೇ
ಗೊತ್ತಾಗುವಂತಿದೆ. ಮುಖ್ಯವಾಹಿನಿಯೆಂದು ತಮ್ಮನ್ನು ಕರೆದುಕೊಳ್ಳುತ್ತಿರುವ ಬಹುತೇಕ ಮುದ್ರಣ ಹಾಗೂ
ದೃಶ್ಯ ಮಾಧ್ಯಮಗಳು ಈ ಪ್ರಕರಣದ ತನಿಖೆಗೆ ವಿರುದ್ಧವಾಗಿ ಪ್ರವರ್ತಿಸುತ್ತಿರುವುದನ್ನೂ ನಾಡಿನ ಜನರು
ಗಮನಿಸುತ್ತಿದ್ದಾರೆ.
ಉತ್ತರ ಇಂಡಿಯಾದಲ್ಲಿ ಹೆಸರುವಾಸಿ ಹಾಗೂ ಪ್ರಭಾವಿ
ಸ್ವಾಮಿಯೆಂದು ಬಿಂಬಿತವಾಗಿದ್ದ, ದೇಶದ ಪ್ರಧಾನಿಯನ್ನೇ ಕಾಲಿಗೆ ಬೀಳಿಸಿಕೊಳ್ಳುತ್ತಿದ್ದ ಅಸಾರಾಮ್
ಬಾಪು ಮತ್ತು ಆತನ ಮಗ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಾ ಕಾರಾಗೃಹದಲ್ಲಿದ್ದರೂ
ಪರೋಲ್, ಫರ್ಲೋ, ಆರೋಗ್ಯ ಇತ್ಯಾದಿ ನೆಪದಲ್ಲಿ ಆಗಾಗ್ಗೆ ಹೊರಗೆ ಇರುವುದು ಮಾಮೂಲಿಯಂತಾಗಿದೆ. ಅದೇ
ರೀತಿ ದೇರಾ ಸಚ್ಚಾ ಸೌದಾ ಪಂತದ ಗುರುವೆಂದು ಬಿಂಬಿತರಾಗಿದ್ದ ಗುರ್ಮೀತ್ ಸಿಂಗ್ ಅತ್ಯಾಚಾರ ಹಾಗೂ
ಕೊಲೆ ಪ್ರಕರಣದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸುತಿದ್ದರೂ ಪರೋಲ್ ಇತ್ಯಾದಿ ಸೌಲಭ್ಯಗಳನ್ನು ದಾರಾಳವಾಗಿ
ಬಳಸುತ್ತಾ ಹೊರಗೆ ಇರುವುದು ನಡೆಯುತ್ತಿದೆ.
ಈ ಹಿಂದಿನ ಜೆ ಎನ್ ಯು ವಿದ್ಯಾರ್ಥಿ ಸಯ್ಯದ್
ಉಮರ್ ಖಾಲಿದ್, ಶಾರ್ಜಿಲ್ ಇಮಾಮ್, ಅನಿರ್ಭನ್ ಬಟ್ಟಾಚಾರ್ಯ, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ,
ಮಹಮದ್ ಸಲೀಮ್ ಖಾನ್, ಅತರ್ ಖಾನ್, ಶಾದಬ್ ಅಹಮದ್, ಅಬ್ದುಲ್ ಖಾಲಿದ್ ಸೈಫಿ ಮೊದಲಾದವರನ್ನು
ಸಿಎಎ ಮೊದಲಾದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಿದ್ದಕ್ಕೆ ದೆಹಲಿ ಗಲಭೆಯೆಂದು ಹೆಸರಿಸಿ ಕರಾಳ ಸಂಘಟಿತ
ಅಪರಾಧಗಳ ಪ್ರತಿಬಂಧಕ ಕಾಯ್ದೆ (ಯುಎಪಿಎ) ಯಡಿ ಕಳೆದ ಹಲವು ವರುಷಗಳಿಂದ ಕಾರಾಗೃಹದಲ್ಲಿಡಲಾಗಿದೆ. ಅದರಲ್ಲಿ
ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ರನ್ನು ಕಳೆದ ಐದು ವರುಷಗಳಿಂದ ಕಾರಾಗೃಹದಲ್ಲಿ ಇಡಲಾಗಿದೆ.
ಇವರುಗಳ ಮೇಲೆ ಇನ್ನೂ ವಿಚಾರಣೆಯೇ ಆರಂಭ ಮಾಡದೇ ಜಾಮೀನನ್ನೂ ನೀಡದೇ ಬಂಧನದಲ್ಲಿ ಇಡಲಾಗಿದೆ. ಅವರೆಲ್ಲರೂ
ದೆಹಲಿ ಹಾಗೂ ಜೆ ಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದವರು. ಇದೀಗ ಉಮರ್ ಖಾಲೀದ್ ಗೆ
ಹಲವಾರು ತಿಂಗಳುಗಳ ಜಾಮೀನು ಅರ್ಜಿಯ ವಿಚಾರಣೆಯ ನಂತರ ಹಾಗೂ ಹೀಗೂ ನೋಡಿ ಸರ್ವೋಚ್ಚ ನ್ಯಾಯಾಲಯ ಕೇವಲ
ಎರಡುವಾರಗಳ ಕಾಲದ ಮದ್ಯಂತರ ಜಾಮೀನು ನೀಡಿರುವ ಸುದ್ದಿ ಬಂದಿದೆ.
ಇದಕ್ಕೂ ಮೊದಲು ಮಹಾರಾಷ್ಟ್ರದ ಕೋರೆಗಾಂವ್ ನಲ್ಲಿ
ಉಂಟಾದ ಗಲಾಟೆಯ ನೆಪದಲ್ಲಿ ವಕೀಲರು, ಪ್ರಾಧ್ಯಾಪಕರು, ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ಕವಿಗಳು,
ಬರೆಹಗಾರರು ಸೇರಿದಂತೆ ಹದಿನಾರು ಜನರನ್ನು ಬಂದಿಸಿ ಕರಾಳ ಯು ಎ ಪಿ ಎ ಯಡಿ ಕಾರಾಗೃಹದಲ್ಲಿ ಹಲವು ವರುಷಗಳಿಂದ
ಇರಿಸಲಾಗಿತ್ತು. ಇವರೆಲ್ಲರೂ ಕೂಡ ಈ ದೇಶದ ದಲಿತ ದಮನಿತರು, ಮಹಿಳೆಯರು, ಹಿಂದುಳಿದವರ ಪರವಾಗಿ ನಿಂತು
ನೈಜ ಪ್ರಜಾತಂತ್ರಕ್ಕಾಗಿ ದನಿಯೆತ್ತುತ್ತಾ ಬಂದವರಾಗಿದ್ದರು ಎನ್ನುವುದನ್ನು ಇಲ್ಲಿ ಒತ್ತುಕೊಟ್ಟು
ಗಮನಿಸಬೇಕಾಗಿದೆ. ಅದರಲ್ಲಿ ಹದಿಮೂರು ಜನರು ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ವಿವಿಧ ನ್ಯಾಯಾಲಯಗಳ
ಮೂಲಕ ಜಾಮೀನಿನಡಿ ಹೊರಗೆ ಬಂದಿದ್ದಾರೆ. ಇದೇ ಪ್ರಕರಣದಡಿ ಬಂದಿಸಿ ಇಟ್ಟಿದ್ದಎಂಬತ್ತನಾಲ್ಕು ವರುಷ
ಪ್ರಾಯದ ಫಾದರ್ ಸ್ಟಾನ್ ಸ್ವಾಮಿಯನ್ನು ಕಾರಾಗೃಹದಲ್ಲೇ ಕೊನೆಯುಸಿರೆಳೆಯುವಂತೆ ಮಾಡಲಾಯಿತು. ತೀವ್ರ
ಆರೋಗ್ಯ ಸಮಸ್ಯೆ ಹಾಗೂ ಕೈ ನಡುಕದಿಂದ ಬಳಲುತಿದ್ದ ಸ್ಟಾನ್ ಸ್ವಾಮಿಗೆ ಆಹಾರವನ್ನು ಕುಡಿಯಲು ಕೇವಲ
ಒಂದು ಸ್ಟ್ರಾ ಒದಗಿಸುವ ಬಗ್ಗೆಯೇ ಹಲವು ತಿಂಗಳುಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದಂತಹ
ಘಟನೆಯೂ ನಡೆಯಿತು. ಈಗಲೂ ದಲಿತ ಹಿನ್ನೆಲೆಯ ವಕೀಲ ಹಾಗೂ ಮಾನವ ಹಕ್ಕು ಕಾರ್ಯಕರ್ತ ಸುರೇಂದ್ರ ಗಾಡ್ಲಿಂಗ್,
ಸಾಗರ್ ಗೋರ್ಕೆ, ರಮೇಶ್ ಗಾಯಿಚರ್ ರನ್ನು ಇದೇ ಪ್ರಕರಣದಡಿ ಕಾರಾಗೃಹದಲ್ಲಿ ಇರಿಸಲಾಗಿದೆ. ಆದರೆ
ಆ ಗಲಾಟೆಯ ಪ್ರಧಾನ ಕಾರಣಕರ್ತರ ಮೇಲೆ ಯಾವುದೇ ಕ್ರಮ ಜರುಗಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಇದಕ್ಕೂ ಮೊದಲು ದೆಹಲಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ,
ದಲಿತ ಆದಿವಾಸಿ ಸಾಯಿಬಾಬರನ್ನು ಯುಎಪಿಎ ಪ್ರಕರಣದಡಿ ವಿಚಾರಣೆ ಹಾಗೂ ಶಿಕ್ಷೆಯ ಹೆಸರಿನಲ್ಲಿ ಹತ್ತು
ವರುಷಗಳಿಗೂ ಹೆಚ್ಚು ಕಾಲ ಕಾರಾಗೃಹದಲ್ಲಿ ಇಡಲಾಗಿತ್ತು. ಸಾಯಿಬಾಬ ಶೇ. ತೊಂಬತ್ತು ಭಾಗ ಅಂಗವೈಕಲ್ಯವನ್ನು
ಹೊಂದಿದ್ದು ಗಾಲಿ ಕುರ್ಚಿಯನ್ನೇ ಆಶ್ರಯಿಸಿದವರಾಗಿದ್ದರು. ಅಂತಹ ಒಬ್ಬ ಪ್ರಜಾತಾಂತ್ರಿಕ ವ್ಯಕ್ತಿಯನ್ನು
ಕಾರಾಗೃಹಕ್ಕೆ ತಳ್ಳಿದ ಈ ವ್ಯವಸ್ಥೆ ಅವರಿಗೆ ಅತ್ಯಗತ್ಯವಾಗಿದ್ದ ಕನಿಷ್ಟ ವೈದ್ಯಕೀಯ ಸೌಲಭ್ಯಗಳಿಗೂ
ಬಹಳ ಸತಾಯಿಸಲಾಯಿತು. ಕೊನೆಗೆ, ಅದೂ ಹತ್ತು ವರುಷಗಳ ನಂತರ, ಅವರ ಮೇಲಿನ ಆರೋಪ ಸರ್ವೋಚ್ಚ ನ್ಯಾಯಾಲಯದಲ್ಲಿ
ಖುಲಾಸೆಗೊಂಡಿತ್ತು. ಅಷೊತ್ತಿಗಾಗಲೇ ಸಾಯಿಬಾಬರು ದೈಹಿಕವಾಗಿ ಬಹಳ ಬಳಲಿಹೋಗಿದ್ದರು. ಪ್ರಕರಣದಿಂದ
ಕುಲಾಸೆಗೊಂಡ ಏಳು ತಿಂಗಳುಗಳಲ್ಲಿಯೇ ಸಾಯಿಬಾಬರ ಜೀವನ ಕೊನೆಗೊಂಡಿತ್ತು.
ಇಂತಹ ಹಲವಾರು ಪ್ರಕರಣಗಳು ಇಂಡಿಯಾದಲ್ಲಿ ಈಗ
ಹೆಚ್ಚಾಗತೊಡಗಿವೆ. ಇಲ್ಲಿನ ಆಡಳಿತಾಂಗ, ಪೊಲೀಸ್ ವ್ಯವಸ್ಥೆ, ನ್ಯಾಯಾಂಗಗಳಡಿ ಇಂತಹ ಸಾವಿರಾರು ಪ್ರಕರಣಗಳು
ನಡೆಯುತ್ತಿವೆ. ಅದರಲ್ಲೂ ದಲಿತ, ಆದಿವಾಸಿ, ಮುಸ್ಲಿಂ ಅಲ್ಪಸಂಖ್ಯಾತ ಜನಸಮುದಾಯಕ್ಕೆ ಸೇರಿದವರನ್ನೇ
ಅತೀ ಹೆಚ್ಚಿನ ಸಂಖ್ಯೆಗಳಲ್ಲಿ ಇಂತಹ ಹಲವು ಪ್ರಕರಣಗಳಡಿ
ಇಂಡಿಯಾದ ಕಾರಾಗೃಹಗಳಲ್ಲಿ ಇಡಲಾಗಿದೆ ಎಂಬ ಕಟುಸತ್ಯವನ್ನು ನಾವು ಗಮನಿಸಬೇಕು. ಜನಸಾಮಾನ್ಯಪರವಾಗಿ
ದನಿಯೆತ್ತಿ ನಿಂತು ಹೋರಾಡುವವರನ್ನು ಸುಳ್ಳು ಎನ್ ಕೌಂಟರುಗಳಲ್ಲಿ ಕಗ್ಗೊಲೆ ಮಾಡಿರುವ ನೂರಾರು ಪ್ರಕರಣಗಳು
ವರದಿಯಾಗಿವೆ ಹಾಗೂ ವರದಿಯಾಗುತ್ತಲೂ ಇದೆ.
ಕೆಲವು ತಿಂಗಳುಗಳ ಹಿಂದೆ ಅಸ್ಸಾಮಿನಲ್ಲಿ ಸುಮಾರು
ಐವತ್ತು ವರುಷಗಳಿಂದಲೂ ಬದುಕು ಕಟ್ಟಿಕೊಂಡಿದ್ದ ಹತ್ತಾರು ಕುಟುಂಬಗಳನ್ನು ಮೀಸಲು ಅರಣ್ಯ ಎಂಬ ನೆಪದಲ್ಲಿ
ಇಂಡಿಯಾದ ಅರೆಸೈನಿಕಪಡೆ ಹಾಗೂ ಪೋಲಿಸ್ ಪಡೆಗಳ ಮೂಲಕ ಬಲವಂತದಿಂದ ಒಂದೇ ದಿನದಲ್ಲಿ ನಿರ್ವಸಿತರನ್ನಾಗಿ
ಮಾಡಿ ಅವರು ಬದುಕು ಕಟ್ಟಿಕೊಂಡಿದ್ದ ಭೂಮಿಯಿಂದ ಅವರೆಲ್ಲರನ್ನು ಹೊರಹಾಕಲಾಯಿತು. ಇದನ್ನು ಪ್ರತಿಭಟಿಸಿದ
ರೈತ ಸಮೂಹದ ಮೇಲೆ ಹಲ್ಲೆ ದೌರ್ಜನ್ಯ ನಡೆಸಲಾಯಿತು.
ಒಬ್ಬ ರೈತನನ್ನು ಗುಂಡಿಟ್ಟು ಕೊಲ್ಲಲಾಯಿತು. ಹಲವರು ಗಾಯಗೊಂಡರು.
೨೦೧೮ರಲ್ಲಿ ತಮಿಳುನಾಡಿನ ತೂತ್ತುಕುಡಿಯಲ್ಲಿ
ಭಾರಿ ಕಾರ್ಪೋರೇಟ್ ಅಗರ್ ವಾಲ್ ಒಡೆತನದ ಸ್ಟೆರಿಲೈಟ್
ಇಂಡಸ್ಟ್ರೀಸ್ ನ ಅಕ್ರಮಗಳ ವಿರುದ್ಧ ಹೋರಾಡುತ್ತಿದ್ದವರಲ್ಲಿ ನಾಯಕತ್ವದಲ್ಲಿದ್ದ ಸುಮಾರು ಹನ್ನೆರಡು
ಜನರನ್ನು ಹಾಡಹಗಲೇ ಪೋಲಿಸ್ ಪಡೆಗಳು ಗುಂಡಿಟ್ಟು ಕೊಂದು ಹಾಕಿದ ಕ್ರೂರ ಘಟನೆ ನಡೆಯಿತು.
ಇಂತಹ ಹಲವಾರು ಪ್ರಕರಣಗಳು ದೇಶದ ತುಂಬ ನಡೆಯುತ್ತಾ
ಸಾಗಿವೆ. ಇವುಗಳ ಬಗ್ಗೆ ಹೊರಜಗತ್ತಿಗೆ ಅರಿವಾಗುವುದೂ ಹೆಚ್ಚಾಗುತ್ತಲೇ ಸಾಗಿವೆ. ಮುಖ್ಯವಾಹಿನಿ ಎಂದು
ಬಿಂಬಿಸಿಕೊಳ್ಳುತ್ತಿರುವ ಅಲ್ಪವಾಹಿನಿಗಳು ಸತ್ಯವನ್ನು ಮರೆಮಾಚಲು, ತಿರುಚಲು, ಏನೆಲ್ಲಾ ಪ್ರಯತ್ನಪಟ್ಟರೂ
ಜನರು ಪರ್ಯಾಯ ಮಾಧ್ಯಮಗಳ ಮೂಲಕ ಸತ್ಯವನ್ನು ತಿಳಿದುಕೊಳ್ಳತೊಡಗಿದ್ದಾರೆ.
ಸಂವಿಧಾನಾತ್ಮಕ ಪ್ರಜಾತಂತ್ರ ಹಾಗೂ ಜನರಿಂದ
ಆಯ್ಕೆಯಾಗುವ ಸರಕಾರಗಳ ಆಡಳಿತವಿರುವ ಈ ದೇಶದಲ್ಲಿ ಸಂವಿಧಾನ ಹಾಗೂ ಕಾನೂನಿಗೆ ವಿರುದ್ಧವಾಗಿರುವ ಇಂತಹ
ಸಾವಿರಾರು ಘಟನೆಗಳು ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿವೆ. ಇಂತಹ ಪ್ರಕರಣಗಳಿಗೆ ಕಾರಣಕರ್ತರಾಗುವ
ಪ್ರಭಾವಿಗಳ ಮೇಲೆ ಕಾನೂನು ಕ್ರಮಗಳು ಜರುಗಿ ನ್ಯಾಯ ಎನ್ನುವುದು ಮರೀಚಿಕೆಯಾಗಿರುವ ವಿಚಾರ ಜನಸಾಮಾನ್ಯರ
ಹೃದಯದಾಳಕ್ಕೆ ಇಳಿಯತೊಡಗಿದೆ.
ಅದರಲ್ಲೂ ದಲಿತರು, ಆದಿವಾಸಿಗಳು, ಮಹಿಳೆಯರು,
ಇನ್ನಿತರ ದಮನಿತ ಜನಸಮೂಹಗಳು, ಇತರ ಬಡಜನರ ಮೇಲೆ ಆರ್ಥಿಕ ಸಾಮಾಜಿಕ ಹಿಡಿತವಿರುವವರಿಂದ ನಡೆಯುವ ಅತ್ಯಾಚಾರ,
ದೌರ್ಜನ್ಯ, ಕೊಲೆ, ಶೋಷಣೆಗಳ ವಿಚಾರಗಳಲ್ಲಿ ಭಾರಿ ಕಾರ್ಪೋರೇಟುಗಳು, ಪ್ರಭಾವಿ ಮಠಪೀಠಗಳು, ಭಾರಿ ಆಸ್ತಿವಂತರುಗಳಿಂದ
ಕೂಡಿರುವ ಪ್ರಭುತ್ವ ಮತ್ತದರ ಪರವಾಗಿರುವವರು ಇದೇ ಸಂವಿಧಾನ ಹಾಗೂ ಕಾನೂನುಗಳನ್ನು ತಮ್ಮ ಪರವಾಗಿ ಸಮರ್ಥವಾಗಿ
ಬಳಸಿಕೊಳ್ಳುತ್ತಿದ್ದಾರೆ. ಎಲ್ಲವನ್ನೂ ತಮ್ಮ ಪರವಾಗಿ ತಿರುಗಿಸಿಕೊಳ್ಳುತ್ತಾ ಇಲ್ಲವೇ ಕೊಂಡುಕೊಳ್ಳುತ್ತಾ,
ಸನಾತನವಾದ ಪ್ರಾಯೋಜಿತ ಪುರುಷಾಧಿಪತ್ಯವನ್ನು ಬಳಸಿಕೊಳ್ಳುತ್ತಾ, ಬಾಯಿಮೂಗು ಒತ್ತಿಹಿಡಿಯುವ ತಂತ್ರ
ಬಳಸುತ್ತಾ ದೇಶದ ಆಸ್ತಿಸಂಪತ್ತಿನ ಮೇಲೆ ಏಕಸ್ವಾಮ್ಯ ಹಿಡಿತ ಸಾಧಿಸುತ್ತಾ ಇಡೀ ದೇಶದ ಜನಸಾಮಾನ್ಯರ
ಮೇಲೆ ಆಳುವ ವ್ಯವಸ್ಥೆಯ ಮೂಲಕ ಸಾಂಸ್ಥಿಕ ದೌರ್ಜನ್ಯಗಳನ್ನು ಭಾರಿ ಪ್ರಮಾಣದಲ್ಲಿ ಹರಿಬಿಡುತ್ತಿವೆ.
ಸರಕಾರಗಳನ್ನು ಆಡಳಿತಾಂಗಗಳನ್ನು ಅವರುಗಳ ದಾಳಗಳನ್ನಾಗಿ ಮಾಡಿಕೊಂಡಿವೆ. ಯಾವುದೇ ಪಕ್ಷಗಳ ಸರ್ಕಾರಗಳಿದ್ದರೂ
ಇವೆಲ್ಲಾ ಸಾಮಾನ್ಯ ಎಂಬಂತಾಗಿವೆ.
ಇವೆಲ್ಲವನ್ನೂ ಬಿಡಿಬಿಡಿ ಘಟನೆಗಳನ್ನಾಗಿ ಮಾತ್ರ ಗ್ರಹಿಸಿದರೆ ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಲಾಗುವುದಿಲ್ಲ.
ಇವೆಲ್ಲವನ್ನೂ ಜೋಡಿಸಿಕೊಂಡು ಕೂಡ ನೋಡಬೇಕಾಗಿದೆ. ಈ ಎಲ್ಲಾ ಪ್ರಕರಣಗಳು ಈ ದೇಶದಾದ್ಯಂತ ನಡೆಯುತ್ತಿರುವ
ವಾಸ್ತವಗಳನ್ನು ಸ್ಪಷ್ಟವಾಗಿ ತೆರೆದಿಡುವಂತಹವಾಗಿವೆ. ಈ ದೇಶವನ್ನು ಭಾರಿ ಆಸ್ತಿವಂತ ವರ್ಗ ಹಾಗೂ ಸನಾತನವಾದಿ
ಬ್ರಾಹ್ಮಣಶಾಹಿ ಸಾಮಾಜಿಕ ಹಿಡಿತಗಳು ಹಲವು ವಿಧಗಳಲ್ಲಿ ನಜ್ಜುಗುಜ್ಜುಮಾಡುತ್ತಿವೆ.
ಇವೆಲ್ಲವುಗಳ ಜೊತೆಗೆ ಭೂಮಿಯ ತಳ ತಲುಪುತ್ತಿರುವ
ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ, ಮಿತಿ ಮೀರುತ್ತಿರುವ ನಿರುದ್ಯೋಗ, ನೆಲಮುಟ್ಟುತ್ತಿರುವ ಜನಸಾಮಾನ್ಯರ
ತಲಾದಾಯ, ಕುಸಿಯುತ್ತಲೇ ಸಾಗಿರುವ ರೂಪಾಯಿ ಮೌಲ್ಯ, ಹೆಚ್ಚುತ್ತಿರುವ ಸಾಮಾಜಿಕ ಅಭದ್ರತೆ ಹಾಗೂ ರಾಜಕೀಯ
ಅಸ್ಥಿರತೆಗಳು ಹೀಗೆ ಎಲ್ಲಾ ಸೇರಿ ನಮ್ಮ ದೇಶದ ಪರಿಸ್ಥಿತಿಯನ್ನು ಇನ್ನಿಲ್ಲದಂತೆ ಹದಗೆಡಿಸುತ್ತಿವೆ. ಜನಸಾಮಾನ್ಯರ ಸಾಮೂಹಿಕ ಸಹನೆಯ ಮಿತಿ ಮೀರತೊಡಗುವ ಲಕ್ಷಣಗಳು
ಕಾಣುತ್ತಿವೆ. ಇವೆಲ್ಲವೂ ಸಾಮಾಜಿಕ ಚಲನೆಯ ನಿಯಮದಡಿಯಲ್ಲೇ ಜರುಗುತ್ತವೆ. ಈ ಪರಿಸ್ಥಿತಿ ಮತ್ತೂ ವೇಗವಾಗಿ
ಸಾಗುತ್ತಿರುವುದನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸುವ ದಿನಗಳು ಹತ್ತಿರವಾಗುತ್ತಿವೆ
ಎನಿಸುತ್ತಿದೆ. ಜನರ ಪ್ರಜ್ಞಾಪೂರ್ವಕ ಸಂಘಟಿತ ಪ್ರಯತ್ನದ ಗಂಭೀರ ಕೊರತೆಯಂತೂ ಎದ್ದುಕಾಣುತ್ತಿದೆ.
೧೭/೧೨/೨೦೨೫
ಇಮೇಲ್:
nandakumarnandana67@gmail.com
Comments
Post a Comment