ಇತ್ತೀಚೆಗೆ ತಮ್ಮ ತೊಂಬತ್ತಕ್ಕೂ ಹೆಚ್ಚು ವರುಷಗಳ ತುಂಬು ಜೀವನವನ್ನು ಮುಗಿಸಿ ಹೋದ ಬಂಡಿಗಡಿಯ ಮಾಸ್ತಮಕ್ಕರಂತಹವರನ್ನು ( ಮ್ಯಾತಮ್ಮ ಎಂದೇ ಎಲ್ಲರಿಗೂ ಚಿರಪರಿಚಿತರಾಗಿದ್ದವರು, ಮಾಸ್ತಿಯಮ್ಮ ಎಂಬುದು ಮೂಲ ಹೆಸರು) ನೆನೆಯುವ 'ಅಮ್ಮನ ನೆನಪಿನಲ್ಲಿ' ಅಪರೂಪದಲ್ಲಿ ಅಪರೂಪವಾದ ಕಾರ್ಯಕ್ರಮ. ಇದನ್ನು ಅವರ ಮಕ್ಕಳು ಹಾಗೂ ಕುಟುಂಬದವರು ಅವರ ಕುಟುಂಬದ ಗೆಳೆಯರು, ಅವರ ಮಗ ವೃತ್ತಿಯಲ್ಲಿ ಶಿಕ್ಷಕರಾದ ಬಿ ಡಿ ನಾಗರಾಜ್ ರ ಗೆಳೆಯರು ಸೇರಿ ಇಂದು ಅಂದರೆ ಫೆಬ್ರವರಿ ಹದಿನಾರರಂದು ಆಯೋಜಿಸಿದ ಕಾರ್ಯಕ್ರಮವಿದು.
ಈ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು, ವೈಚಾರಿಕ ಬಳಗದವರು, ಸಾಹಿತ್ಯಾಸಕ್ತರು, ಅಮ್ಮ ಎಂಬ ವ್ಯಕ್ತಿತ್ವದ ಪ್ರಾಮುಖ್ಯತೆಗಳ ಬಗ್ಗೆ, ಭಾವನಾತ್ಮಕತೆಯ ಬಗ್ಗೆ ತಮ್ಮ ಮಾತುಗಳನ್ನು ಆಡಿದರು, ಜೊತೆಗೆ ಜನಮುಖಿ, ಜನಪದ ಹಾಗು ತತ್ವಪದಗಳ ಹಾಡುಗಾರರಾದ ನಾದ ಮಣಿನಾಲ್ಕೂರರ ಹಾಡುಗಾರಿಕೆ, ಮಕ್ಕಳ ಹಾಡುಗಳು ಗೆಳೆಯರ ಅನಿಸಿಕೆಗಳನ್ನು ಸಭೆಯ ಮುಂದಿಟ್ಟರು. ಜಾತಿಮತ ಪಂತಗಳನ್ನು ಮೀರಿ ನಡೆದ ಕಾರ್ಯಕ್ರಮವಿದು. ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಮಹತ್ವದ ಕಾರ್ಯಕ್ರಮ.
ಇದರಲ್ಲಿ ಮಾಸ್ತಮಕ್ಕರ ಬಂದು ಬಳಗದವರು ಮಾತ್ರವಲ್ಲದೆ ಊರಿನ ಹಲವರು, ಮುಸ್ಲಿಮ್ ಸಮುದಾಯದವರು, ಕ್ರಿಶ್ಚಿಯನ್ ಸಮುದಾಯದವರು, ದಲಿತದಮನಿತ ಸಮುದಾಯದ ಹಲವಾರು ಜನರು ಇಲ್ಲಿ ಒಂದೆಡೆ ಅಂದರೆ ಮಾಸ್ತಮ್ಮಕ್ಕನ ಬಂಡಿಗಡಿಯ ಮನೆಯಲ್ಲಿ ಸೇರಿದ್ದರು. ಸಾಮಾನ್ಯವಾಗಿ ತಿಥಿ, ಪುಣ್ಯತಿಥಿ ಎಂದೆಲ್ಲಾ ಕರೆಯಲ್ಪಡುವ ಮರಣದ ನಂತರ ಮಾಡುವ ಒಂದು ಪ್ರದರ್ಶಕ ಇಲ್ಲವೇ ಸಾಂಪ್ರದಾಯಿಕ ಆಚರಣೆಯಾಗಿ ಮಾತ್ರ ನಮ್ಮ ಸಮಾಜದಲ್ಲಿ ಇಂತಹವುಗಳನ್ನು ಆಚರಿಸುತ್ತಾರೆ. ಆದರೆ ಇದು ಹಾಗಲ್ಲ. ಇಲ್ಲಿ ಪ್ರದರ್ಶನವಿರಲಿಲ್ಲ. ಒಂಬತ್ತು ದಶಕಗಳ ಕಾಲ ವರುಷಗಳ ಕಾಲ ಬಾಳಿ ಬದುಕಿ ಮಕ್ಕಳು ಮೊಮ್ಮಕ್ಕಳನ್ನು ಆಡಿಸಿ ಬೆಳೆಸಿದ್ದ, ಊರಿನ ಹಲವಾರು ಜನರ ಹೆರಿಗೆಗಳನ್ನು ಮಾಡಿಸಿದ್ದ, ಮಾಸ್ತಮಕ್ಕ ಎಂಬ ವ್ಯಕ್ಯಿತ್ವ ಅಲ್ಲಿ ಪುನರ್ ರೂಪಿಸಿಕೊಳ್ಳುತ್ತಿತ್ತು. ಅಲ್ಲಿ ಜಾತಿ ಇರಲಿಲ್ಲ, ಮತವೂ ಇರಲಿಲ್ಲ, ಮಾಸ್ತಮಕ್ಕ, ಮಾಸ್ತಮ್ಮ ಎಂದೆಲ್ಲಾ ಎಲ್ಲರಿಂದಲೂ ಕರೆಯಲ್ಪಟ್ಟಿದ್ದ ವ್ಯಕ್ತಿತ್ವ ಮಾತ್ರವಿತ್ತು.
ಮಾಸ್ತಮಕ್ಕ ಓದು ಬರೆಹ ಬಲ್ಲವರಾಗಿರಲಿಲ್ಲ. ಉತ್ತರಕನ್ನಡದ ಭಟ್ಕಳ ಭಾಗದಿಂದ ಇಲ್ಲಿಗೆ ಬಂದ ಮಾಸ್ತಮಕ್ಕ ಜಾತಿಮತಗಳನು ಮೀರಿ ಊರಿನ ಎಲ್ಲರ ಅಮ್ಮನಾಗಿ ವಹಿಸಿದ್ದ ಪಾತ್ರಗಳು ಜೀವಂತವಾಗಿ ಅಲ್ಲಿ ಮಾತನಾಡಿದ್ದ ಊರಿನವರ ಬಾಯ ಮೂಲಕ ಸಬೆಯ ಮುಂದೆ ಅನಾವರಣವಾಗುತ್ತಿದ್ದವು. ಅಲ್ಲಿ ಮಾಸ್ತಮಕ್ಕನ ಪ್ರೀತಿ, ಕಾಳಜಿ, ಸೌಹಾರ್ದತೆ, ಅಪ್ಯಾಯತೆ, ಸಮಾನವಾಗಿ ಕಾಣುವ ಮನೋಭಾವ ಮೊದಲಾದ ಮಾನವೀಯ ಮೌಲ್ಯಗಳು ತೆರೆದುಕೊಂಡು ಅಲ್ಲಿ ನೆರೆದಿದ್ದ ಹಲವರನ್ನು ದಂಗುಬಡಿಸಿದ್ದಂತೂ ಹೌದು. ಹಲವರ ಕಣ್ಣಾಲಿಗಳನ್ನು ತೇವಗೊಳಿಸಿ ಉಮ್ಮಳಿಸಿಬರುವ ಭಾವ ಪರವಶತೆಗೆ ದೂಡಿದ್ದೂ ಕೂಡ ಸತ್ಯ. ಅವರ ವಿದ್ಯಾವಂತಿಕೆಗಳೇನು ಎಂಬುದನ್ನು ಅಲ್ಲಿ ಸ್ಪಷ್ಟವಾಗಿ ಅನಾವರಣವಾಯಿತು. ಓದುಬರೆಹಕ್ಕೂ ವಿದ್ಯವಂತಿಕೆಗೂ ಸಂಬಂಧವಿಲ್ಲ ಎಂಬುದನ್ನು ಈ ಸಭೆಯೂ ಸ್ಪಷ್ಟಪಡಿಸಿತು.
ಮಾಸ್ತಮಕ್ಕ ಎಂಬ ಹೆಸರು ಕೂಡ ಕುಟುಂಬ ಹಾಗೂ ಸಮುದಾಯದ ಮೂಲ ನಾಯಕಿಯೊಬ್ಬರ ಮೂಲದ್ದು. ಬಹುಶಹ ಬುಡಕಟ್ಟು ವೀರವನಿತೆಯೊಬ್ಬರ ಆರಾಧನಾ ಹೆಸರಾಗಿರಲೂಬಹುದು. ಸಹಜವಾಗಿ ನಾಯಕತ್ವ ಸ್ಥಾನ ವಹಿಸಿ ಸಮುದಾಯಕ್ಕಾಗಿ ತ್ಯಾಗ ಮಾಡಿದಂತಹವರನ್ನು ಆರಾಧಿಸುವುದು ಸಹಜ.
ಅದು ಯಾವ ಮಟ್ಟಕ್ಕೆ ಎಂದರೆ ಸಾಮಾನ್ಯವಾಗಿ ಶ್ರಾದ್ಧ, ತಿಥಿಯಂತಹ ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಸಮುದಾಯ ತಮ್ಮದೇ ಕಾರಣಗಳಿಗಾಗಿ, ಪಾಲ್ಗೊಳ್ಳುವುದು ವಾಡಿಕೆಯಲ್ಲ. ಆದರೆ ಮಾಸ್ತಮಕ್ಕನ ಕುರಿತು ನಡೆದ ಈ ಕಾರ್ಯಕ್ರಮಕ್ಕೆ ಊರಿನಲ್ಲಿನ ಮುಸ್ಲಿಮ್ ಸಮುದಾಯ ಮಸೀದಿಯಲ್ಲೇ ಚರ್ಚಿಸಿ ಪಾಲ್ಗೊಳ್ಳಲೇಬೇಕು ಎಂದು ಅಭಿಪ್ರಾಯಕ್ಕೆ ತಲುಪಿ ಮುಸ್ಲಿಮ್ ಸಮುದಾಯದ ಮಹಿಳೆಯರು,ಮಕ್ಕಳು ಪುರುಷರೆನ್ನದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದು ಮಾಸ್ತಮಕ್ಕನ ವ್ಯಕ್ತಿತ್ವ ಏನಾಗಿತ್ತು ಎನ್ನುವುದಕ್ಕೆ ಅತ್ಯದ್ಭುತ ನಿದರ್ಶನವಾಗಿದೆ. ಇಂದಿನ ದಿನಗಳಲ್ಲಂತೂ ಇದಕ್ಕೆ ಭಾರಿ ಮಹತ್ವವಿದೆ. ಹಳೆಯ ಕಾಲದ ಅಕ್ಷರ ಕಲಿತಿರದ ಒಬ್ಬ ಮಹಿಳೆಗೆ ಸಮಾಜದಲ್ಲಿ ಇಂತಹ ಒಂದು, ಅದೂ ಕೂಡ ಯಾರೂ ಸಹಜವಾಗಿ ನಿರೀಕ್ಷೆ ಮಾಡಲಾಗದ ಪಾತ್ರವನ್ನು ವಹಿಸಿ, ಅದ್ಭುತ ಬಲಶಾಲಿಯಾದ ಛಾಪನ್ನು ಅದು ಸಹಜವೆಂಬಂತೆ ಒತ್ತಿ ತನ್ನ ಬದುಕಿನ ಪಯಣವನ್ನು ಮುಗಿಸಿ ಈಗಲೂ ಊರಿನವರ , ಬಳಗದವರ ಮೂಲಕ ಜೀವಿಸುತ್ತಿರುವ ಪರಿಯನ್ನು ವರ್ಣಿಸಲು ಪದಗಳು ಸಾಲವು ಎಂದೇ ಹೇಳಬೇಕಾಗಿದೆ.
ಅಮ್ಮನ ಬಗ್ಗೆ ಬರೆದ, ತಂದೆ ತಾಯಿಗಳಿಲ್ಲದ ಮಕ್ಕಳು, ತಂದೆಯಿದ್ದರೆ ತಾಯಿಯಿಲ್ಲದ ತಾಯಿಯಿದ್ದರೆ ತಂದೆಯಿಲ್ಲದ ಹತ್ತಾರು ಮಕ್ಕಳಿದ್ದರು. ಅವರು ಒಬ್ಬೊಬ್ಬರೂ ಅದ್ಭುತವಾಗಿ ತಮ್ಮ ಬರೆಹಗಳನ್ನು ದಾಖಲಿಸಿ ಅಚ್ಚರಿ ಹಾಗೂ ಭಾವತೀವ್ರತೆಯನ್ನು ಮೂಡಿಸಿದವು. ಆಮಂತ್ರಣ ಪತ್ರವನ್ನು ಹಾಗೂ ಅದರಲ್ಲಿರುವ ಛಾಯಚಿತ್ರವನ್ನು ನೋಡಿ ಕೇವಲ ಹತ್ತು ನಿಮಿಷಗಳಲ್ಲಿ ಮಾಸ್ತಮಕ್ಕನ ಪೆನ್ಸಿಲ್ ರೇಖಾಚಿತ್ರವನ್ನು ಬರೆದು ಕಳುಹಿಸಿದ, ಎಪ್ಪತ್ತರಷ್ಟು ಪ್ರಾಯದ ದಾರವಾಡದಲ್ಲಿ ಅವ್ವನ ಹೆಸರಿನಲ್ಲಿ ಸಂಸ್ಥೆಯೊಂದನ್ನು ಕಟ್ಟಿಕೊಂಡು, ಅದರ ಮೂಲಕ ಅಮ್ಮನ ಕುರಿತು ಹಲವಾರು ಕೃತಿಗಳನ್ನು ಪ್ರಕಟಿಸುತ್ತಿರುವ ಹಿರಿಯರಾದ ದಾರವಾಡದ ಚಂದ್ರಶೇಖರ ವಸ್ತ್ರದರ ಅದ್ಭುತ ಪ್ರತಿಕ್ರಿಯೆಗೂ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಮುಸ್ಲಿಮ್ ಬಾಂಧವರು ಮಾಸ್ತಮ್ಮರ ನೆನಪಿನಲ್ಲಿ ಫ್ರೇಮ್ ಹಾಕಿರುವ ಅವರ ಫೋಟೋಗಳನ್ನು ಮಾಸ್ತಮ್ಮರ ಕುಟುಂಬದ ಸದಸ್ಯರಿಗೆ ನೀಡಿದರೆ. ಅಮ್ಮನ ಕುರಿತಾದ ಕಲಾಕೃತಿಗಳನ್ನು ರಚಿಸಿ ಕಳಿಸಿದ್ದರು ಕೆಲವು ಕಲಾಬಿದರು. ಸುಂದರವಾಗಿರುವ ಭಿತ್ತಿಪತ್ರಗಳು ಸಭಾಂಗಣದಲ್ಲಿದ್ದವು. ಕವಿತೆಗಳಿದ್ದವು. ಹಾಡುಗಳಿದ್ದವು. ಚಿತ್ರದುರ್ಗದಿಂದ ಬಂದ ಯುವತಿಯರು ಕೆಲವು ಶರಣರ ವಚನಗಳನ್ನು ಹಾಡಿದರು. ಅಮ್ಮನ ಕುರಿತಾದ ಪುಸ್ತಕ ಪ್ರದರ್ಶನವಿತ್ತು.
ಅಮ್ಮ ಎಂಬ ವ್ಯಕ್ತಿತ್ವ, ಆ ಶಬ್ದ....
ಸಾಮಾನ್ಯವಾಗಿ ನಮ್ಮೆಲ್ಲರ ಬದುಕಿನಲ್ಲಿ ಅತೀ ಹೆಚ್ಚು ಪ್ರಭಾವಿಸುವ, ಹೆಚ್ಚು ಕದಲಿಸುವ, ಅತೀ ಹೆಚ್ಚಿನ ಭರವಸೆಯನ್ನು, ಹೆಚ್ಚಿನ ಸಾಂತ್ವನವನ್ನು, ಅತೀ ಹೆಚ್ಚು ಮುದವನ್ನು ಜವಾಬ್ದಾರಿತನ ಹಾಗೂ ಮೂರ್ತವೂ ಅಮೂರ್ತವೂ ಆಗಿರುವ ಒಂದು ಅನುಭೂತಿ. ನೋವು ದುಃಖಗಳನ್ನು ಮರೆಸುವ ಮಾಂತ್ರಿಕತೆ. ಅದರಲ್ಲೂ ಮುಖ್ಯವಾಗಿ ಬಾಲ್ಯಾವಸ್ಥೆ ಹಾಗೂ ಪ್ರೌಢಾವಸ್ಥೆಯ ಕಾಲಘಟ್ಟಗಳಲ್ಲಿ
ಅಮ್ಮ ಎಂದರೆ ಅದೊಂದು ಜವಾಬ್ದಾರಿ, ಅದೊಂದು ತ್ಯಾಗ, ಅದೊಂದು ಕಾಳಜಿ, ಅದೊಂದು ಪ್ರೀತಿ, ಅದೊಂದು ಭಾವತೀವ್ರತೆ. ಅದೊಂದು ಮಾನಸಿಕತೆ, ಅದೊಂದು ನಮ್ಮೆಲ್ಲರ ಬದುಕಿನ ಸಂಕಥನವೂ ಹೌದು.
ಸಾಮಾನ್ಯವಾಗಿ ಅಪ್ಪನಿಗೆ ಹೋಲಿಸಿದಾಗ ಅಮ್ಮ ಹೆಚ್ಚು ಪ್ರಜಾತಾಂತ್ರಿಕ ವ್ಯಕ್ತಿ. ಮಕ್ಕಳು ಸಾಮಾನ್ಯವಾಗಿ ಅಮ್ಮನ ಮೂಲಕವೇ ತಮ್ಮ ಬಯಕೆ ಬೇಕು ಬೇಡಗಳನ್ನು ವ್ಯಕ್ತಪಡಿಸುತ್ತಾರೆ. ಅಮ್ಮನೊಂದಿಗೆ ಮುಕ್ತವಾಗಿ ಮಾತನಾಡುವುದು, ಜಗಳವಾಡುವುದು, ಸಲಿಗೆ ತಮಾಷೆ, ರೇಗಿಸುವುದು ಇವೆಲ್ಲಾ ಸಹಜವೆನ್ನುವಷ್ಟು ನಡೆಸಬಹುದು. ಆದರೆ ಅಪ್ಪಂದಿರ ವಿಚಾರದಲ್ಲಿ ಹಾಗಿಲ್ಲ. ಇದಕ್ಕೆ ಅಪವಾದಗಳು ಇಲ್ಲವೆಂದಲ್ಲ ಇದರರ್ಥ.
ಸಾಮಾನ್ಯವಾಗಿ ಮನೆಗಳು ಹಾಗೂ ಕುಟುಂಬಗಳು ಇರೋದರಲ್ಲಿ ಒಂದಷ್ಟು ಸುಸ್ಥಿರತೆ, ಸಮತೋಲನದಲ್ಲಿ ನಡೆಸಿಕೊಂಡು ಹೋಗೋದು ಅಮ್ಮಂದಿರು. ಆರ್ಥಿಕವಾಗಿಯೂ ಅಮ್ಮಂದಿರ ಪಾತ್ರಗಳು ಬಹಳ ಪ್ರಾಮುಖ್ಯತೆ ಇರುವಂತಹುದು.
ತಾಯ್ತನದ ಮನಸಿಗೆ ಹೆಣ್ಣು ಗಂಡೆಂಬ ಮಿತಿಗಳೂ ಇಲ್ಲ. ತಾಯ್ತನದ ಮನಸನ್ನೂ ಹೊಂದಿರುವ ಗಂಡಸರೂ ತಂದೆತನದ ಮನಸನ್ನೂ ಹೊಂದಿರುವ ಮಹಿಳೆಯರು ನಮ್ಮ ಸಮಾಜದಲ್ಲಿ ಇದ್ದಾರೆ.
ತಂದೆಯು ತಾಯ್ತನದ ಮನಸನ್ನೂ ತಾಯಿಯು ತಂದೆತನದ ಮನಸನ್ನೂ ರೂಢಿಸಿಕೊಳ್ಳುತ್ತಾ ಬದುಕಿನಲ್ಲಿ ಮುನ್ನೆಡೆದರೆ ಮಾತ್ರ ಮಾನವೀಯ ಅಂತಃಕರಣ, ಪ್ರೀತಿ, ಕಾಳಜಿ, ಅನುಕಂಪ, ಪ್ರೀತಿ, ಜವಾಬ್ದಾರಿ, ಕರ್ತವ್ಯ ಹೀಗೆ ಅಂತರಾಳದಲ್ಲಿ ನಾವುಗಳು ಮನುಷ್ಯನಾಗಲು ಅಗತ್ಯವಾದ ಗುಣಗಳು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಎಲ್ಲಾ ಪುರುಷರಿಗೂ ಹಾಗೂ ಎಲ್ಲಾ ಮಹಿಳೆಯರಿಗೂ ಅನ್ವಯಿಸುವಂತಹುದು. ಅವುಗಳ ಕೊರತೆಗಳು ಎಷ್ಟು ಮಟ್ಟಕ್ಕೆ ನಮ್ಮಲ್ಲಿ ಇರುತ್ತವೆಯೋ ಆ ಮಟ್ಟಕ್ಕೆ ನಾವುಗಳು ಮನುಷ್ಯತ್ವದ ಗುಣಗಳು ಬೆಳೆಸಿಕೊಳ್ಳಲು ಅಡ್ಡಿಗಳು ಸಹಜವಾಗಿ ಎದುರಾಗುತ್ತವೆ.
ಆದರೆ ನಮ್ಮೆಲ್ಲರ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತಾ ಬಂದ ಅಮ್ಮನ ಪಾತ್ರದ ಬಗ್ಗೆ ಆ ವ್ಯಕ್ತಿತ್ವದ ಬಗ್ಗೆ ಸರಿಯಾಗಿ ಹಾಗೂ ಸಮಗ್ರವಾಗಿ ಗ್ರಹಿಸುವ, ಅಮ್ಮನ ಪಾತ್ರದ ಮಹತ್ವವನ್ನು ಪುರಸ್ಕರಿಸಿ ನೋಡುವ ರೂಢಿ ಹಾಗೂ ಮನಸ್ಸುಗಳು ನಮ್ಮ ಸಮಾಜದಲ್ಲಿ ವಿರಳವಾಗಿದೆ.
ಕೇವಲ ಸಮಾಜದ ರೂಢಿಗತ, ಹಾಗೂ ಪ್ರದರ್ಶಕ ಆಚರಣೆಗಷ್ಟೇ ಸೀಮಿತಗೊಳಿಸಿ ನೋಡುವ ಪ್ರವೃತ್ತಿಯೇ ಸಾಮಾನ್ಯವಾಗಿದೆ.
ಅಂತಹ ಸನ್ನಿವೇಶದಲ್ಲಿ ತಮ್ಮ ಬದುಕನ್ನು ಮುಗಿಸಿಹೋದ ಅಮ್ಮನನ್ನು ಸ್ಮರಿಸಲು
ಇಂತಹ ಕಾರ್ಯಕ್ರಮಗಳು ಆಯೋಜಿಸುವುದು ಬಹಳ ಅರ್ಥಪೂರ್ಣವಾಗಿದೆ.
ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದು, ಒಣಪ್ರದರ್ಶಕತೆ, ಒಣ ಹಾಗೂ ಮೂಢ ಆಚರಣೆ, ಅರ್ಥವಿಲ್ಲದ, ಸಹಜತೆ ಹಾಗೂ ಜೀವಂತಿಕೆಯೇ ಇಲ್ಲದ ಕಾರ್ಯಕ್ರಮಗಳು, ದುಂದು ಆಚರಣೆಗಳ ಮನಸ್ಥಿತಿಗಳಿಗೆ ಚಿಕಿತ್ಸೆಗಳಾಗುವಂತಾಗಬೇಕು.
'ಅಮ್ಮನ ನಪಿನಲ್ಲಿ' ಎಂಬ ಇಂತಹ ಸಾರ್ಥಕ ಕಾರ್ಯಕ್ರಮವನ್ನು ಆಯೋಜಿಸಿದ ಮಾಸ್ತಮಕ್ಕನ ಮಕ್ಕಳು ಹಾಗೂ ಕುಟುಂಬ, ಅವರ ಊರಿನ ಹಾಗೂ ಹೊರಗಿನ ಗೆಳೆಯರು ಮತ್ತು ಹಿತೈಷಿಗಳ ಬಳಗಕ್ಕೆ ಅಭಿನಂದನೆಗಳು ಸಲ್ಲಬೇಕು.
೧೬/೦೨/೨೦೨೫. - ನಂದಕುಮಾರ್ ಕುಂಬ್ರಿಉಬ್ಬು.
Comments
Post a Comment