Skip to main content

ತಾಯಿಯೊಬ್ಬಳ ಕೋಳಿವ್ಯಾಪಾರ# mother#chicken trade#fate#

 

                                        ತಾಯಿಯೊಬ್ಬಳ ಕೋಳಿವ್ಯಾಪಾರ


ಅಂದು ಮುಂಜಾನೆಯಿಂದ ಆ ತಾಯಿ ಬಹಳ ಕುಶಿಯಲ್ಲಿದ್ದಳು. ಆ ತಾಯಿ ಮದುವೆಯಾದ ಮೇಲೆ ಜೀವನದಲ್ಲಿ ಮೊದಲ ಬಾರಿ ಒಂದಷ್ಟು ಕಾಸು ಅಂದು ಸಂಪಾದಿಸಿದ್ದಳು.



ಅದೊಂದು ಕಾಡಿನಿಂದಾವೃತವಾಗಿದ್ದ ಹಳ್ಳಿ. ಈ ತಾಯಿಯ ಮನೆಗೂ ಅಲ್ಲಿದ್ದ ಬೇರೊಂದು ಮನೆಗೂ ಸುಮಾರು ಅರ್ದ ಕಿಲೋಮೀಟರುಗಳ ದೂರವಿರಬಹುದೇನೋ. ಮತ್ತೆ ಮನೆ ನೋಡಬೇಕಾದರೆ ಮತ್ತೊಂದು ಕಿಲೋಮೀಟರಾದರೂ ಹೆಜ್ಜೆ ಹಾಕಬೇಕಿತ್ತು. ಆಗ ಹೆಜ್ಜೆಗಳೇ ಮುಖ್ಯವಾಗಿತ್ತು. ವಾಹನಗಳು ಆ ಹಳ್ಳಿ ಸುತ್ತಮುತ್ತ ಯಾರಬಳಿಯೂ ಇರಲಿಲ್ಲ. ಇದ್ದಿದ್ದು ಎತ್ತಿನಗಾಡಿ ಮಾತ್ರ. ಅದೂ ಕೂಡ ಗದ್ದೆ ತೋಟ ಹೀಗೆ ಒಂದಷ್ಟು ಅನುಕೂಲವಿದ್ದವರಲ್ಲಿ ಮಾತ್ರ. ಹತ್ತಾರು ಗಾಡಿ ಕಟ್ಟಿಕೊಂಡು ಸಾಲಾಗಿ ಮಣ್ಣು ಕಲ್ಲುಗಳ ರಸ್ತೆಯಲ್ಲಿ ಮದುವೆ ದಿಬ್ಬಣ ಹೊರಡುತ್ತಿದ್ದ ಕಾಲವದು. ಬಸ್ಸು ಲಾರಿ ಕಾರು ಮುಖ ನೋಡಬೇಕಾದರೆ ಮೂರು ನಾಲ್ಕು ಕಿಲೋಮೀಟರುಗಳಷ್ಟು ಹೆಜ್ಜೆ ಹಾಕಲೇಬೇಕಿತ್ತು.

ಆಕೆ ದೂರದ ಊರಲ್ಲಿ ಬೆಳೆದು ಬಂದವಳು. ಮದುವೆಯಾದಾಗ ಈ ಹಳ್ಳಿಗೆ ಬಂದು ಇರಲೇಬೇಕಾದ ಅನಿವಾರ್ಯತೆ ಆಕೆಗೆ. ಆಕೆಯ ಗಂಡ ಹೊರಗೆ ಯಾವುದೋ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ. ಮನೆಗೆ ಬರುವುದು ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಮಾತ್ರ. ಈ ತಾಯಿ ಹತ್ತನೇ ತರಗತಿಯವರೆಗೆ ಓದಿದವಳು. ಆಕೆಯ ಗಂಡನೂ ಸಾಕಷ್ಟು ಓದಿದವನೇ ಆಗಿದ್ದ. ಜೋಡಿಗೆ ಆರು ಮಕ್ಕಳಿದ್ದರು. ಒಂದಷ್ಟು ಗದ್ದೆ ಜಮೀನು ಇವರಿಗಿತ್ತು.  

ಹೀಗಿರಬೇಕಾದರೆ ಈ ತಾಯಿ ಮೊಟ್ಟ ಮೊದಲ ಬಾರಿ ಎರಡು ಕೋಳಿಮರಿಗಳನ್ನು ಸಾಕತೊಡಗಿದಳು. ಅದೂ ಕೂಡ ಬೇರೊಂದು ಮನೆಯವರು ಆಕೆಗೆ ಕೊಟ್ಟಿದ್ದರು. ಈ ತಾಯಿ ಅದನ್ನು ಬಯಸಿ ಪಡೆದುಕೊಂಡಿರಲಿಲ್ಲವಾದರೂ ಬೇಡವೆಂದರೂ ಕೊಟ್ಟಾಗ ಇರಲಿ ನೋಡೋಣ ಎಂದು ತಗೊಂಡಳು. ಒಂದೆರಡು ತಿಂಗಳುಗಳಲ್ಲಿಯೇ ಆ ಕೋಳಿ ಜೋಡಿಯಿಂದ ಹತ್ತಾರು ಮೊಟ್ಟೆಗಳು ಸಿಕ್ಕವು. ಇನ್ನಷ್ಟು ಮರಿಗಳನ್ನು ಮಾಡುವ ಇರಾದೆಯಿಂದ ಮೊಟ್ಟೆಗಳನ್ನು ಒಂದಷ್ಟು ಹಾಳಾದ ಬುಟ್ಟಿಯೊಂದರಲ್ಲಿ ಹುಲ್ಲಿನ ಹಾಸಿಗೆ ಮಾಡಿ ತಾಯಿ ಕೋಳಿಯ ಕಾವಿಗೆ ಕೂರಿಸಿ ಬುಟ್ಟಿ ಮುಚ್ಚಿದಳು. ಈ ತಿಳುವಳಿಕೆ ಈ ತಾಯಿಯದಲ್ಲ. ಇದನ್ನು ಪಕ್ಕದ ಮನೆಯವರ ಸಹಾಯದಿಂದ ಮಾಡಿದ್ದಳು.  ಇಪ್ಪತೈದು ದಿನಗಳು ಕಳೆಯುವಷ್ಟರಲ್ಲಿ ಏಳೆಂಟು ಮರಿಗಳು ಹೊರಬಂದವು.

ಹೀಗೆ ಕೆಲವು ತಿಂಗಳುಗಳು ಕಳೆಯುವಷ್ಟರಲ್ಲಿ ಕೋಳಿಮರಿಗಳು ಬೆಳೆದು ದೊಡ್ಡವಾದವು. ಮೇವಿಗೇನೂ ಕೊರತೆಯಿರಲಿಲ್ಲವಾದ್ದರಿಂದ ಕೋಳಿಗಳು ಸೊಂಪಾಗಿಯೇ ಬೆಳೆದುಬಿಟ್ಟದ್ದವು.. ಅದೊಂದು ಬೆಳಿಗ್ಗೆ ಒಬ್ಬರು ಅವರ ಯಾವುದೋ ಹರಕೆ ತೀರಿಸಲು ಕೋಳಿಗಳು ಬೇಕಾಗಿದ್ದವು ಕೊಡುವಿರಾ ಎಂದು ಈ ತಾಯಿಯ ಹತ್ತಿರ ಬಂದರು. ಈ ತಾಯಿ ಯಾವುದೋ ಒಂದು ರೇಟಿಗೆ ಚೌಕಾಸಿ ಮಾಡಿ ಎರಡು ಕೋಳಿಗಳನ್ನು ಅವರಿಗೆ ಕೊಟ್ಟು ದುಡ್ಡು ಇಸ್ಕೊಂಡಳು.  ಒಂದು ಗಂಟೆ ಕಳೆದಿರಬೇಕು ಮತ್ತೊಬ್ಬರು ಕೋಳಿ ಕೇಳಿಕೊಂಡು ಬಂದು ನಾಲ್ಕೈದು ಕೋಳಿಗಳನ್ನು ಅದೇ ರೇಟಿಗೆ ತಗೊಂಡೋದರು. ಮತ್ತೊಂದು ಅರ್ದ ಗಂಟೆ ಕಳೆಯುವಷ್ಟರಲ್ಲಿ ಕೋಳಿಗಳನ್ನು ಕೇಳಿಕೊಂಡು ಮತ್ತೂ ಕೆಲವರು ಬಂದರು. ತಾಯಿಗೆ ಮೊದಲ ಕೋಳಿ ಕೇಳಿ ಬಂದವರದು ಬಹಳ ಒಳ್ಳೆ ಕೈಗುಣ ಹಾಗಾಗಿ ನನ್ನ ಕೋಳಿಗಳು ಒಳ್ಳೆ ರೇಟಿಗೆ ಮಾರಾಟವಾಗುತ್ತಿವೆ ಎಂದೆಲ್ಲಾ ತುಂಬಾ ಕುಷಿಪಡುತ್ತಾ ಕೋಳಿಗಳನ್ನು ಬಂದವರಿಗೆಲ್ಲಾ ಅದೇ ರೇಟಿಗೆ ಕೊಟ್ಟು ಬಿಟ್ಟಳು. ಆ ಮದ್ಯಾಹ್ನದೊಳಗೆ ಆಕೆಯಲ್ಲಿದ್ದ ಕೋಳಿಗಳೆಲ್ಲಾ ಮಾರಾಟವಾಗಿಹೋಗಿದ್ದವು. ಒಂದೆರಡನ್ನು ಮಾತ್ರ ಉಳಿಸಿಕೊಂಡಳು. ನಂತರ ಬಂದವರಿಗೆ ಕೋಳಿಗಳು ಇರದೇ ಹೋಗಿದ್ದರಿಂದ ನಿರಾಸೆ ಹೊತ್ತು ವಾಪಾಸಾದರು. ಆ ತಾಯಿಯ ಕೈಯಲ್ಲಿ ಒಂದಷ್ಟು ದುಡ್ಡು ಸೇರಿಕೊಂಡಿತು. ಅದೇ ಆ ತಾಯಿಯ ಅಂದಿನ ಕುಶಿಯ ಕಾರಣ.

ಒಂದೆರಡು ದಿನಗಳು ಕಳೆದಿರಬಹುದು. ಈ ತಾಯಿ ಹತ್ತಿರದ ಪೇಟೆಕಡೆ ಹೋಗಿ ಬರುವಾಗ ಪರಿಚಯದ ಒಬ್ಬ ಹೆಂಗಸು ಮಾತಿಗೆ ಸಿಕ್ಕು ಕೋಳಿ ವ್ಯಾಪಾರದ ಬಗ್ಗೆ ಕೇಳಿದಳು.  ಮಾತಿನ ಮದ್ಯೆ ಆ ಕೋಳಿಗಳಿಗೆ ಈಗ ಮಾರಾಟವಾಗಿದ್ದಕ್ಕಿಂತಲೂ ದುಪ್ಪಟ್ಟು ಬೆಲೆಯಿದೆ ಎಂಬ ಸತ್ಯವನ್ನು ಈ ತಾಯಿಗೆ ಹೇಳಿಬಿಟ್ಟಳು. ಅದುವರೆಗೂ ಕೋಳಿಗಾಗಿ ಮೊದಲು ಬಂದವರ ಒಳ್ಳೆ ಕೈಗುಣ, ತನ್ನ ಒಳ್ಳೆ ಅದೃಷ್ಟ ಎಂದೆಲ್ಲಾ ಕುಶಿಯಲ್ಲಿ ತೇಲಾಡುತ್ತಿದ್ದ ತಾಯಿಯ ಕುಶಿ ಒಮ್ಮಗೇ ಕುಸಿದುಹೋಗಿಬಿಡ್ತು. ಅಯ್ಯೋ…. ಎಷ್ಟೊಂದು ಹಣ ಕಳೆದುಕೊಂಡೆ… ಯಾವ ಹೊತ್ತಿನಲ್ಲಿ ಆ ಮನೆಹಾಳು ಕೈಗುಣದವರಲ್ಲಿ ವ್ಯವಹಾರ ಮಾಡಿದೆನೋ…. ಆ ದಿನ ಬೆಳಿಗ್ಗೆ ಯಾರ ಮುಖ ನೋಡಿ ಎದ್ದೆನೋ… ಏನೋ…ಆ ಹಣ ಸಿಕ್ಕಿದ್ದರೆ ಏನೆಲ್ಲ ಮಾಡಬಹುದಿತ್ತು….ಛೇ ನನ್ನ ದುರಾದೃಷ್ಟವೇ….ಎಂದೆಲ್ಲಾ ಯೋಚಿಸುತ್ತಾ ಪೆಚ್ಚುಮೋರೆ ಹೊತ್ತು ಮನೆಗೆ ಬಂದಳು.

 

23/08/2024                                           -ನಂದಕುಮಾರ್ ಕುಂಬ್ರಿಉಬ್ಬು.

                                 Email: nandakumarnanda67@gmail.com

 

 

                       

 

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...