ಅರಣ್ಯ(ಸಂರಕ್ಷಣಾ) ತಿದ್ದುಪಡಿ ಕಾಯಿದೆ 2023#ಜನಸಾಮಾನ್ಯರ ಬದುಕುವ ಹಕ್ಕು# forest (conservation) amendment bill 2023
ಅರಣ್ಯ(ಸಂರಕ್ಷಣಾ) ತಿದ್ದುಪಡಿ ಕಾಯಿದೆ
2023 ಅರಣ್ಯವನ್ನು ಉಳಿಸೀತೆ?
ಜನಸಾಮಾನ್ಯರ ಬದುಕುವ ಹಕ್ಕುಗಳನ್ನು ರಕ್ಷಿಸೀತೆ?
ಮಿಂಚಂಚೆ: nandakumarnandana67@gmail.com
ಯೂನಿಯನ್ ಸರ್ಕಾರದ ಈ ತಿದ್ದುಪಡಿ ಮಸೂದೆಗಳಿಗೆ ಜಂಟಿ ಸಂಸದಿಯ ಸಮಿತಿಯು ಯಾವುದೇ ಆಕ್ಷೇಪಣೆಗಳನ್ನಾಗಲೀ ತಿದ್ದುಪಡಿಗಳನ್ನಾಗಲೀ ಸೂಚಿಸಿರಲಿಲ್ಲವೆಂದು ವರದಿಯಾಗಿದೆ. ಜಂಟಿ ಸಂಸದೀಯ ಸಮಿತಿಯು ಈ ಕುರಿತು ಸಭೆ ನಡೆಸಿರುವ ಬಗ್ಗೆಯೇ ಅನುಮಾನಗಳಿವೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿ ಈ ಮಸೂದೆಗಳ ಅನುಮೋದನೆಗೆ ಸುಲಭ ದಾರಿ ಮಾಡಿಕೊಟ್ಟವು. ವಿರೋಧ ಪಕ್ಷಗಳು ಕಾಟಾಚಾರದ ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಈ ತಿದ್ದುಪಡಿಗಳು ಜಾರಿಯಾಗದಂತೆ ತಡೆಯುವ ಯಾವುದೇ ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಲಿಲ್ಲ.ಇದರ ಜೊತೆಗೆ ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ) ಮಸೂದೆ 2023, ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ 2023 ಯಂತಹ ಹಲವು ವಿವಾದಾತ್ಮಕ ಮಸೂದೆಗಳನ್ನು ಕೂಡ ಸಂಸತ್ತಿನಲ್ಲಿ ಚರ್ಚೆಗೆ ಬಿಡದೇ ವಿರೋಧ ಪಕ್ಷಗಳ ಧರಣಿ, ಅಮಾನತ್ತು, ಸಭಾತ್ಯಾಗಗಳ ನಡುವೆ ಅಂಗೀಕಾರಗೊಂಡವು.
ವಿರೋಧ ಪಕ್ಷಗಳು ಆಡಳಿತ ಪಕ್ಷದ ಸಂಸದರು ಎಷ್ಟು
ಮಟ್ಟದಲ್ಲಿ ಇವುಗಳನ್ನು ಪರಶೀಲಿಸಿದವೋ/ರೋ ಎನ್ನುವುದು ಭಾರಿ ಪ್ರಶ್ನಾರ್ಥಕ ಚಿನ್ಹೆಗಳೇ ಆಗಿ ಉಳಿದುಬಿಟ್ಟಿವೆ.
ಇದು ಇಂಡಿಯಾ ಸಂಸದೀಯ ವ್ಯವಸ್ಥೆ ಇಂದು ತಲುಪಿರುವ ದುಸ್ಥಿತಿಯಾಗಿದೆ.
ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆ
2023 ಹಾಗೂ ಜೀವ ವೈವಿಧ್ಯ ತಿದ್ದುಪಡಿ ಮಸೂದೆಗಳು ಈ ಹಿಂದಿದ್ದ ಒಂದಷ್ಟು ರಕ್ಷಣಾತ್ಮಕ ನಿಯಮಗಳನ್ನು
ಬದಲಿಸುವುದು ಹಾಗೂ ಸಡಿಲಗೊಳಿಸುವುದನ್ನು ಮಾಡಿದೆ. ಇವುಗಳು ಮುಂಬರುವ ದಿನಗಳಲ್ಲಿ ಜನಸಾಮಾನ್ಯರು ಹಾಗೂ
ಅರಣ್ಯ ಪ್ರದೇಶಗಳ ಮೇಲೆ ಭಾರಿ ಪ್ರಮಾಣದಲ್ಲಿ ಎರಗಲಿವೆ. ಮಣಿಪುರದಲ್ಲಿ ಈಗ ನಡೆಸುತ್ತಿರುವುದು ಅದರ
ಒಂದು ಮಾದರಿಯಾಗಿದೆ. ಮೈತೇಯಿ ಜನಾಂಗೀಯ ಕೂಟವನ್ನು ಕುಕಿ ಹಾಗೂ ನಾಗ ಮೊದಲಾದ ಗುಡ್ಡಗಾಡು ಪ್ರದೇಶದ
ವಾಸಿಗಳಾಗಿರುವ ಜನಾಂಗೀಯ ಕೂಟಗಳ ವಿರುದ್ದ ಹಲವಾರು ನೆಪಗಳಲ್ಲಿ ಎತ್ತಿ ಕಟ್ಟಿ ಆಧುನಿಕ ಶಸ್ತ್ರಾಸ್ತ್ರಗಳು
ಹೊಂದುವಂತೆ ಅನುವು ಮಾಡಿಕೊಟ್ಟು ಮಾರಣಾಂತಿಕ ಧಾಳಿಗಳಿಗೆ ಇಳಿಸಿದ್ದಾರೆ. ರಾಜ್ಯದ ಪೋಲಿಸ್ ಶಸ್ತ್ರಾಗಾರಗಳು
ಬ್ರಾಹ್ಮಣ್ಯೀಕರಣಗೊಳಿಸಿದ ಮೈತೇಯಿ ಜನಾಂಗೀಯವಾದಿಗಳ ಹಿಡಿತಕ್ಕೆ ಹೋಗುತ್ತಾ ಸಾಗಿವೆ. ಮಣಿಪುರದಲ್ಲಿ
ಯಾವ ಪ್ರಭುತ್ವವೂ ಕಾರ್ಯ ನಿರ್ವಹಿಸುತ್ತಿಲ್ಲ. ವ್ಯಾಪಕ ಅರಾಜಕತೆಗಳಿಗೆ ಇಡೀ ಮಣಿಪುರವನ್ನು ಈಡು ಮಾಡಲಾಗಿದೆ.
ನಂತರ ಮಣಿಪುರವನ್ನು ಸಂಪೂರ್ಣವಾಗಿ ಭಾರಿ ಕಾರ್ಪೋರೇಟುಗಳ ಹಿಡಿತಕ್ಕೆ ತೆಗೆದುಕೊಂಡು ಹೋಗುವ ಭಾರಿ
ಫ್ಯಾಸಿಸ್ಟ್ ನಡೆಗಳಾಗಿವೆ ಇವು. ಆಗ ಮಣಿಪುರ ಮೈತೇಯಿ ಜನಾಂಗೀಯ ಕೂಟವೂ ಸೇರಿದಂತೆ ಯಾರಿಗೂ ಇಲ್ಲದಂತಹ
ಪರಿಸ್ಥಿತಿ ಏರ್ಪಡುತ್ತದೆ ಎಂಬ ಕಟುಸತ್ಯವನ್ನು ಇವರುಗಳು ಗ್ರಹಿಸುತ್ತಿಲ್ಲ.
ಅದಕ್ಕಾಗಿ ಕುಕಿ, ನಾಗಾ, ಜೋ ಮೊದಲಾದ ಜನಾಂಗೀಯ ಕೂಟಗಳನ್ನು
ಭಾಷಿಕವಾಗಿ, ಪ್ರಾದೇಶಿಕವಾಗಿ, ದೇಶೀಯವಾಗಿ, ಜನಾಂಗೀಯವಾಗಿ ಅನ್ಯರೆಂದು, ಮಾದಕ ಕಳ್ಳಸಾಗಣೆದಾರರೆಂದು,
ಮಣಿಪುರ ಮೈತೇಯಿಗಳಿಗೆ ಮಾತ್ರ ಸೇರಿದ್ದೆಂದು, ಇತರರು ಮಣಿಪುರ ತೊರೆಯಬೇಕೆಂದು…. ಇತ್ಯಾದಿ ಭಾವನೆಗಳು
ಮೈತೇಯಿ ಜನಾಂಗೀಯ ಕೂಟದ ನಡುವೆ ಮೊದಲಿನಿಂದಲೂ ಬಲವಾಗಿ ಬಿತ್ತುತ್ತಾ ಬೆಳೆಸುತ್ತಾ ಬರಲಾಗಿದೆ. ಇವೆಲ್ಲದರ
ಪರಿಣಾಮವಾಗಿ ಮಣಿಪುರದಲ್ಲಿ ಈಗ ಕುಕಿಗಳ ಮಾರಣಹೋಮ ನಡೆಯುತ್ತಿದೆ. ನೂರಾರು ಕಗ್ಗೊಲೆಗಳು ಹಾಗೂ ನೂರಾರು
ಅತ್ಯಾಚಾರಗಳು ನಡೆದಿವೆ. ನೂರಾರು ಹಳ್ಳಿಗಳನ್ನು ನಾಶಮಾಡಲಾಗಿದೆ.
ಇಂಡಿಯಾದ ಡಿ ಎನ್ ಎ ಯಲ್ಲಿ ಪ್ರಜಾಪ್ರಭುತ್ವ
ಮಿಳಿತವಾಗಿ ಸೇರಿದೆ. ನಾವು ಪ್ರಜಾಪ್ರಭುತ್ವವನ್ನು ಉಸಿರಾಡುತ್ತಾ ಜೀವಿಸುತ್ತಿದ್ದೇವೆ. ನಮ್ಮ ದೇಶದ
ಅಲ್ಪಸಂಖ‍್ಯಾತರು ಸೇರಿದಂತೆ ಎಲ್ಲಾ ಜನರಿಗೂ ಸಮಾನ ಅವಕಾಶಗಳಿವೆ, ಪ್ರಜಾಪ್ರಭುತ್ವ ನಮ್ಮ ಶಕ್ತಿ….
ಎಂದೆಲ್ಲಾ ಅಮೇರಿಕದಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳಬೇಕಾಗಿ ಬಂದ ತನ್ನ ಅಧಿಕಾರಾವಧಿಯ ಮೊದಲ ಪತ್ರಿಕಾ
ಗೋಷ್ಟಿಯಲ್ಲಿ ಪ್ರದಾನಿ ಹೇಳಿದ್ದರು. ಪ್ರಧಾನಿಯ ಮಾತುಗಳು
ಎಷ್ಟೊಂದು ಪೊಳ್ಳಿನದು ಮತ್ತು ಹುಸಿ ಪಟಾಕಿಗಳು ಎಂಬುದು ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು ಅತ್ಯಲ್ಪ
ಕಾಲದಲ್ಲೇ ಜಗತ್ತಿನೆದುರು ಮತ್ತೊಮ್ಮೆ ಬಿಚ್ಚಿಟ್ಟಿದೆ.
ಈಗ ಅನುಮೋದನೆಗೊಂಡ ಅರಣ್ಯ (ಸಂರಕ್ಷಣಾ) ತಿದ್ದುಪಡಿ
ಮಸೂದೆ 2023ರ ಪ್ರಕಾರವೇ ನೋಡಿದರೆ ಮಣಿಪುರ, ತ್ರಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಮ್
ನಂತಹ ರಾಜ್ಯಗಳ ಬಹುತೇಕ ಪ್ರದೇಶವು ಯೂನಿಯನ್ ಸರ್ಕಾರದ ಹಿಡಿತಕ್ಕೆ ಹೋಗುತ್ತವೆ. ಈ ರಾಜ್ಯಗಳ ಬಹುತೇಕ
ಭಾಗಗಳು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಾಗಿವೆ. ಈಶಾನ್ಯ ಇಂಡಿಯಾದ ಮಣಿಪುರದ ಶೇ. 74ರಷ್ಟು, ಮಿಜೋರಾಮ್ ನ
ಶೇ. 85ರಷ್ಟು, ನಾಗಾಲ್ಯಾಂಡ್ ನ ಶೇ. 74ರಷ್ಟು, ಅರುಣಾಚಲ ಪ್ರದೇಶದ ಶೇ. 79ರಷ್ಟು, ಮೇಘಾಲಯದ ಶೇ.
79 ರಷ್ಟು, ತ್ರಿಪುರದ ಶೇ. 74ರಷ್ಟು ಭೂಪ್ರದೇಶಗಳು ಅರಣ್ಯ ಪ್ರದೇಶಗಳಾಗಿವೆ. ಅಷ್ಟೇ ಅಲ್ಲದೇ ಈ ಪ್ರದೇಶಗಳು
ಪಶ್ಚಿಮ ಘಟ್ಟ ಹಾಗೂ ಪೂರ್ವ ಘಟ್ಟಗಳಂತೆ ಜೀವ ವೈವಿಧ್ಯತೆಗಳ ಪ್ರಮುಖ ಪ್ರದೇಶಗಳಾಗಿವೆ. ಈ ರಾಜ್ಯಗಳು
ಅಂತರಾಷ್ಟ್ರೀಯ ಗಡಿಗಳನ್ನು ಹೊಂದಿವೆ. ಹೊಸ ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆಯ ಪ್ರಕಾರ ಅಂತರಾಷ್ಟ್ರೀಯ
ಗಡಿಯಿಂದ ನೂರು ಕಿಲೋಮೀಟರುಗಳಷ್ಟು ಪ್ರದೇಶಗಳನ್ನು ಈ ಕಾಯಿದೆಯಿಂದ ಹೊರಗಿರಿಸಿದ್ದಲ್ಲದೇ ಅಷ್ಟು ಪ್ರದೇಶದ
ಹಿಡಿತವನ್ನು ರಾಜ್ಯಸರ್ಕಾರಗಳ ಬದಲಾಗಿ ನೇರವಾಗಿ ಯೂನಿಯನ್ ಸರ್ಕಾರಕ್ಕೆ ನೀಡಿದೆ. ಅದಕ್ಕೆ ಸೇನಾತ್ಮಕ ಹಾಗೂ ದೇಶದ ರಕ್ಷಣಾತ್ಮಕ ಕಾರಣಗಳನ್ನು ಮುಂದೊಡ್ಡಲಾಗಿದೆ.
ಗಡಿಯಿಂದ ನೂರು ಕಿಲೋ ಮೀಟರುಗಳು ಎಂದಾಗ ಇಂತಹ ಪುಟ್ಟ ರಾಜ್ಯಗಳ ಬಹುಪಾಲು ಪ್ರದೇಶಗಳು ಅದರೊಳಗೇ ಸೇರಿಬಿಡುತ್ತವೆ.
ಇದು ಸಹಜವಾಗಿ ಮುಂದಿನ ದಿನಗಳಲ್ಲಿ ಆ ಪ್ರದೇಶಗಳಲ್ಲಿ ನೆಲೆಗಳನ್ನು ಹೊಂದಿರುವ ನೂರೆಂಟು ಬುಡಕಟ್ಟು
ಜನಾಂಗಗಳಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಬಾಧಿಸುತ್ತಾ ಅವರುಗಳ ಬದುಕುವ ಹಕ್ಕುಗಳಿಗೇ ಗಂಡಾಂತರ ತಂದಿಡುತ್ತದೆ.
ಹಲವಾರು ರಾಜ್ಯಗಳು ಮತ್ತು ಅಲ್ಲಿನ ಸರ್ಕಾರಗಳು ಅಕ್ಷರಶಹ ನಾಮಮಾತ್ರದ್ದಾಗಿ ಬಿಡುತ್ತವೆ. ಯೂನಿಯನ್
ಒಕ್ಕೂಟ ತತ್ವ ಇತ್ಯಾದಿ ಪದಗಳು ನಮ್ಮ ದೇಶಕ್ಕೆ ಬಳಕೆ ಮಾಡಲೂ ಕೂಡ ಸಾಧ್ಯವಾಗದಂತಹ ಮಟ್ಟದ ಫ್ಯಾಸಿಸ್ಟ್
ಕೇಂದ್ರೀಕರಣ ನಡೆಯುತ್ತದೆ.
ಮಣಿಪುರದ ಇಂದಿನ ಪರಿಸ್ಥಿತಿ ನಾಳಿನ ಈ ರಾಜ್ಯಗಳ
ಪರಿಸ್ಥಿತಿಯಾಗುತ್ತದೆ. ಜೊತೆಗೆ ಉತ್ತರ ಖಂಡ, ಉತ್ತರ ಪ್ರದೇಶ, ಬಿಹಾರ, ಮಧ್ಯ ಇಂಡಿಯಾದ ರಾಜ್ಯಗಳು
ಹಾಗೂ ದಕ್ಷಿಣ ಇಂಡಿಯಾದ ರಾಜ್ಯಗಳ ಆದಿವಾಸಿ/ಬುಡಕಟ್ಟು ಹಾಗೂ ಇನ್ನಿತರ ಬಡ ರೈತಾಪಿಗಳ ಬದುಕಿನ ಹಕ್ಕುಗಳು
ಹಾಗೂ ಅರಣ್ಯಪ್ರದೇಶಗಳ ಮೇಲೆ ದಾಳಿ ಮಾಡುತ್ತದೆ.
ಈಗ ಅನುಮೋದನೆಗೊಂಡಿರುವ ಅರಣ್ಯ (ಸಂರಕ್ಷಣಾ)
ತಿದ್ದುಪಡಿ ಮಸೂದೆ 2023 ಈ ಹಿಂದಿನ ಅರಣ್ಯ ಕಾಯಿದೆಗಳಲ್ಲಿದ್ದ ರಕ್ಷಣಾತ್ಮಕ ಅಂಶಗಳಾದ ಅರಣ್ಯ ಪ್ರದೇಶಗಳಲ್ಲಿ
ಯೂನಿಯನ್ ಸರ್ಕಾರ/ರಾಜ್ಯಸರ್ಕಾರ ಬಯಸಿದ ಯಾವುದೇ ಅಭಿವೃದ್ದಿ ಹೆಸರಿನ ಚಟುವಟಿಕೆಗಳಿಗೆ ಗ್ರಾಮ ಸಭೆಗಳ
ಪೂರ್ವಾನುಮತಿ, ಪರಿಸರ ಇಲಾಖೆಯ ಅನುಮತಿಯ ಅಗತ್ಯವನ್ನೇ ರದ್ದುಪಡಿಸಿದೆ. ಜೊತೆಗೆ ರಾಜ್ಯಸರ್ಕಾರಗಳಿಗೆ
ಆಯಾ ರಾಜ್ಯದ ಅರಣ್ಯ ಪ್ರದೇಶಗಳ ಮೇಲಿದ್ದ ಅಧಿಕಾರವನ್ನು ಮೊಟಕುಗೊಳಿಸಿ ದೇಶದ ಅರಣ್ಯ ಪ್ರದೇಶಗಳನ್ನು
ಯೂನಿಯನ್ ಸರ್ಕಾರದ ನೇರ ಹಿಡಿತಕ್ಕೆ ಒಪ್ಪಿಸುತ್ತದೆ. ಇಂಡಿಯಾದ ಒಕ್ಕೂಟ ತತ್ವ ಈಗಿದ್ದ ಬಲವೂ ಇಲ್ಲದಂತಾಗುತ್ತದೆ.
ಇದಷ್ಟೇ ಅಲ್ಲದೇ ದೇಶದ ಅರಣ್ಯ ಪ್ರದೇಶಗಳನ್ನು
ಪರಿಸರ (ಇಕೋ) ಪ್ರವಾಸೋದ್ದಿಮೆ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಮೂಲಸೌಕರ್ಯಗಳನ್ನು ನಿರ್ಮಿಸಲು ಮುಕ್ತಗೊಳಿಸಿ
ಇಟ್ಟಿದೆ. ಯೂನಿಯನ್ ಸರ್ಕಾರ ಬಯಸಿದಲ್ಲಿ ದೇಶದ ಯಾವುದೇ ಅರಣ್ಯ ಪ್ರದೇಶಗಳನ್ನು ಪ್ರವಾಸೋದ್ದಿಮೆ,
ರಸ್ತೆ, ಪ್ರಾಣಿ ಸಂಗ್ರಹಾಲಯಗಳಿಗೆ, ಸಿಲ್ವಿಕಲ್ಚರ್ ಎಂಬ ಖಾಸಗೀ ಅರಣ್ಯೀಕರಣದ ಯೋಜನೆಗಳಿಗೆ ಈ ಮಸೂದೆಯು
ತೆರೆದಿಟ್ಟಿದೆ. ಜೊತೆಗೆ ದೇಶದ ಅಗತ್ಯತೆಗೆ ಎಂಬ ಹೆಸರಿನಲ್ಲಿ ಯೂನಿಯನ್ ಸರ್ಕಾರದ ಅನುಮತಿಯೊಂದಿಗೆ
ದೇಶದ ಯಾವುದೇ ಭಾಗದಲ್ಲಿ ಭಾರಿ ಗಣಿಗಾರಿಕೆ ಮೊದಲಾದ ಕಾರ್ಯಗಳಿಗೂ ಕೂಡ ಅರಣ್ಯ ಪ್ರದೇಶಗಳನ್ನು ತೆರೆದಿಡುವ
ಕಾರ್ಯವನ್ನು ಈ ಮಸೂದೆಯು ಮಾಡುತ್ತದೆ. ಗಣಿಗಾರಿಕೆ ಎಂಬ ಪದ ಈ ಮಸೂದೆಯಲ್ಲಿ ಇಲ್ಲದೇ ಹೋದರೂ ದೇಶದ
ಅಗತ್ಯತೆ ಎಂಬ ಪದದೊಂದಿಗೆ ಅರಣ್ಯ ಪ್ರದೇಶಗಳನ್ನು ತೆರೆದಿಡಲು ಯೂನಿಯನ್ ಸರ್ಕಾರಕ್ಕೆ ನೇರ ಅಧಿಕಾರವನ್ನು
ಈ ಮಸೂದೆಯು ನೀಡುತ್ತದೆಯಾದ್ದರಿಂದ ಅದನ್ನು ಭಾರಿ ಮಟ್ಟದ ಗಣಿಗಾರಿಕೆಯೂ ಸೇರಿದಂತೆ ಅವರು ಬಯಸಿದ ಎಲ್ಲಾ
ಚಟುವಟಿಕೆಗಳಿಗೆ ಎಂದೇ ಅರ್ಥೈಸಬೇಕಾಗುತ್ತದೆ. ಯಾಕೆಂದರೆ
ಅಗತ್ಯತೆಯನ್ನು ನಿರ್ದಿಷ್ಟವಾಗಿ ಏನು ಎನ್ನುವುದನ್ನು ಈ ಮಸೂದೆಯಲ್ಲಿ ಹೇಳಿಲ್ಲ. ಅದಕ್ಕೆ ರಾಜ್ಯ ಸರ್ಕಾರಗಳ
ಅನುಮತಿ ಕೂಡ ಅಗತ್ಯವಿಲ್ಲದಂತೆ ಈ ಮಸೂದೆಯ ಮೂಲಕ ಮಾಡಲಾಗಿದೆ.
ರಾಜ್ಯಗಳಿಗೆ, ಯೂನಿಯನ್ ಆಡಳಿತದ ಪ್ರದೇಶಗಳಿಗೆ,
ದೇಶದ ಯಾವುದೇ ಸರ್ಕಾರಗಳ ಅಧೀನದ ಪ್ರಾಧಿಕಾರ/ಸಂಸ್ಥೆಗಳಿಗೆ ಅರಣ್ಯ ಪ್ರದೇಶಗಳಲ್ಲಿ ಅರಣ್ಯೇತರವೂ ಸೇರಿದಂತೆ
ಯಾವುದೇ ಚಟುವಟಿಕೆಗಳನ್ನು ನಡೆಸುವ ನಿರ್ದೇಶನಗಳನ್ನು ನೇರವಾಗಿ ನೀಡುವ ಅಧಿಕಾರವನ್ನು ಈ ಮಸೂದೆಯು
ಯೂನಿಯನ್ ಸರ್ಕಾರಕ್ಕೆ ನೀಡಿದೆ. ಹಾಗಾದಾಗ ಸಹಜವಾಗಿ ಯೂನಿಯನ್ ಸರ್ಕಾರದ ಮೇಲೆ ಹಿಡಿತ ಹೊಂದುವ ಭಾರಿ
ಕಾರ್ಪೋರೇಟ್ ಕೂಟಗಳ ಅಣತಿಯಂತೆಯೇ ಎಲ್ಲವೂ ಜಾರಿಯಾಗುತ್ತಾ ಹೋಗುತ್ತವೆ. ರಾಜ್ಯಗಳು ಮತ್ತವುಗಳ ಸರ್ಕಾರಗಳು
ಈ ಬಗ್ಗೆ ಏನನ್ನೂ ಮಾಡದಂತಹ ಪರಿಸ್ಥಿತಿಗೆ ತಳ್ಳಲ್ಪಡುತ್ತದೆ. ಈ ಮಸೂದೆಯ ದೇಶದ ಅರಣ್ಯ ಪ್ರದೇಶಗಳ
ಮೇಲೆ ಯೂನಿಯನ್ ಸರ್ಕಾರದ ಮೂಲಕ ಭಾರಿ ಕಾರ್ಪೋರೇಟುಗಳು ಏಕಸ್ವಾಮ್ಯ ಸಾಧಿಸಲು ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ಮೊದಲಿನ ಕಾಯಿದೆಯಲ್ಲಿ ದಾಖಲೆಗಾಗಿಯಾದರೂ ಇದ್ದ ಪರಿಸರ ಅರಣ್ಯ ಹಾಗೂ ಪರಿಸರ ಇಲಾಖೆ, ರಾಜ್ಯಗಳ ಅನುಮತಿ,
ಗ್ರಾಮಸಭೆಗಳ ಅನುಮತಿಗಳ ಅಗತ್ಯವನ್ನೇ ಮೂಲಭೂತವಾಗಿ ಇಲ್ಲವಾಗಿಸಿದೆ. ಮೋದಿ ಸರ್ಕಾರ ಬಂದ ನಂತರ ಹಿಂದೆ
ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಅದರ ಇದ್ದ ಹಲ್ಲುಗಳನ್ನೂ ಮೊಂಡಾಗಿಸಲಾಗಿತ್ತು. ಈಗಂತೂ
ಆ ಮೊಂಡು ಹಲ್ಲುಗಳನ್ನೂ ಕೂಡ ಈ ಮಸೂದೆಯ ಮೂಲಕ ಕಿತ್ತು ಹಾಕಿದಂತಾಗಿದೆ. ಜೊತೆಗೆ ಅರಣ್ಯ ಹಕ್ಕು ಕಾಯಿದೆ
2006 ಅಲ್ಲದೇ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಅರಣ್ಯ ಪ್ರದೇಶವೆಂದು ಗುರುತಿಸಲು ಇರುವ ಮಾನದಂಡಗಳು
ಹಾಗೂ ರಕ್ಷಣೆಯ ಕುರಿತಾದ ತೀರ್ಪು ಕೂಡ ಈ ಮಸೂದೆಯ ಮೂಲಕ ನಿವಾರಿಸಲಾಗಿದೆ. ಇಲ್ಲವೇ ವರ್ತಿತವಾಗದಂತೆ
ಮಾಡಲಾಗಿದೆ.
ಜೊತೆಗೆ ದೇಶದ ಯೂನಿಯನ್ ಹಾಗೂ ರಾಜ್ಯ ಸರ್ಕಾರಗಳ
ಅಧೀನದಲ್ಲಿ ಇರುವ ಹಾಗೂ ಅಧೀನದಲ್ಲಿ ಇಲ್ಲದಿರುವ ಸೇರಿದಂತೆ ಯಾವುದೇ ಅರಣ್ಯ ಪ್ರದೇಶವನ್ನು ಬೋಗ್ಯಕ್ಕೆ
ಇಡಲು/ ವಹಿಸಿಕೊಡಲು ಯೂನಿಯನ್ ಸರ್ಕಾರದ ಪೂರ್ವಾನುಮತಿಯೊಂದಿಗೆ ಸರ್ಕಾರಗಳಿಗೆ ಈ ಮಸೂದೆಯು ಅನುವು
ಮಾಡಿಕೊಟ್ಟಿದೆ. ಇದು ಕೂಡ ಅರಣ್ಯ ಪ್ರದೇಶಗಳ ಖಾಸಗೀಕರಣದ ಭಾಗವಾಗಿ ವರ್ತಿಸುತ್ತದೆ. ಇದು ಅಕ್ಷರಶಹ
ಜಾರಿಯಾದರೆ ಹಕ್ಕುಪತ್ರ ಹೊಂದದ ತುಂಡು ಭೂಮಿಗಳಲ್ಲಿ ಕೃಷಿ ನಡೆಸುತ್ತಾ ಜೀವನ ಕಟ್ಟಿಕೊಂಡಿರುವ ಕೋಟ್ಯಾಂತರ
ಜನಸಾಮಾನ್ಯರ ಮೇಲೆ ಹೇಗೆಲ್ಲಾ ಪರಿಣಮಿಸಬಹುದು ಎನ್ನುವುದನ್ನು ಊಹಿಸಲೇ ಕಷ್ಟವಾಗುತ್ತದೆ. ಈಗಾಗಲೇ
ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ, ರಕ್ಷಿತಾರಣ್ಯ, ಮೀಸಲು ಅರಣ್ಯ ಇತ್ಯಾದಿ ಅರಣ್ಯ ಹಾಗೂ ವನ್ಯಮೃಗಗಳ
ಸಂರಕ್ಷಣೆಯ ಹೆಸರಿನ ಯೋಜನೆಗಳು ಹಾಗೂ ಕಾನೂನುಗಳು ದೇಶದ ಬಹುಸಂಖ್ಯಾತ ಜನಸಾಮಾನ್ಯರ ಮೇಲೆ ತೂಗುಕತ್ತಿಗಳನ್ನಾಗಿ
ಬಿಡಲಾಗಿದೆ. ಜೊತೆಗೆ ಕಸ್ತೂರಿ ರಂಗನ್ ವರದಿಯೂ ಸೇರಿಕೊಂಡಿದೆ. ಇದೀಗ ಅರಣ್ಯ (ಸಂರಕ್ಷಣಾ) ತಿದ್ದುಪಡಿ
ಕಾಯ್ದೆ 2023 ಬಂದಿದೆ. ಇದು ಈ ಎಲ್ಲವನ್ನೂ ಸೇರಿಸಿಕೊಂಡು ದೇಶದ ಭೂ ಸಂಪತ್ತನ್ನು ಕಾನೂನಾತ್ಮಕವಾಗಿಯೇ
ಭಾರಿ ಜಾಗತಿಕ ಕಾರ್ಪೋರೇಟುಗಳೆಡೆಗೆ ಸರಿಸಿಬಿಡುವಂತಾಗುತ್ತದೆ.
ಕರ್ನಾಟಕದ ಬಗರ್ ಹುಕುಂ ಸಾಗುವಳಿದಾರರು,
ಅರಣ್ಯ ಪ್ರದೇಶಗಳಲ್ಲಿ ನೆಲೆ ಕಟ್ಟಿಕೊಂಡಿರುವ ಹತ್ತಾರು ಸಾವಿರ ಆದಿವಾಸಿ ಜನಸಮೂಹಗಳು ಮತ್ತು ಇನ್ನಿತರ
ಬಡ ರೈತಾಪಿ ಜನಸಮೂಹಗಳ ಬದುಕುಗಳ ಮೇಲೆ ನೇರವಾಗಿ ಪರಿಣಾಮ ಬೀರುವಂತಹ ಗಂಭೀರ ವಿಚಾರ ಇದಾಗಿದೆ. ಒಂದು
ವೇಳೆ ರಾಜ್ಯ ಸರ್ಕಾರ ಬಯಸಿದರೂ ಯೂನಿಯನ್ ಸರ್ಕಾರದ ಅನುಮತಿ ಇಲ್ಲದೇ ಹೋದರೆ ರಾಜ್ಯ ಸರ್ಕಾರ ಈ ಎಲ್ಲಾ
ಪ್ರದೇಶಗಳ ರೈತಾಪಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ಏರ್ಪಡುತ್ತದೆ. ಈ ಹಿಂದೆ
ಅರಣ್ಯ ಹಕ್ಕು ಕಾನೂನಿನಡಿ ಕೂಡ ಆದಿವಾಸಿ ಬುಡಕಟ್ಟು ಹಾಗೂ ಇನ್ನಿತರೆ ಬಡ ರೈತಾಪಿ ಜನಸಮೂಹಗಳು ಆ ಕಾಯಿದೆಯಡಿ
ಇರುವ ನಿರ್ಬಂಧಗಳು ಹಾಗೂ ಅಧಿಕಾರಶಾಹಿಗಳ ಜನವಿರೋಧಿತನಗಳಿಂದಾಗಿ ಹಕ್ಕುಪತ್ರಗಳನ್ನು ಪಡೆಯಲು ಸಾಧ್ಯವಾಗದ
ದುಸ್ಥಿತಿಗಳಿಗೆ ಈಡಾಗಿರುವುದನ್ನು ನಾವು ನೋಡಬಹುದು. ಅದೇ ವೇಳೆಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ
ಸರ್ಕಾರಗಳು ನೇರ ಬೆಂಬಲ ನೀಡುತ್ತಾ ಇದ್ದಬದ್ದ ಭೂಮಿಗಳನ್ನು ಬಡಾವಣೆ, ನಿವೇಶನಗಳನ್ನಾಗಿಸಲು ಮುಕ್ತ
ಅನುಕೂಲ ಕಲ್ಪಿಸಿರುವುದನ್ನೂ ನಾವು ಗಮನಿಸಬಹುದು.
ಇವೆಲ್ಲಾ ಸೇರಿ ಆದಿವಾಸಿ/ಬುಡಕಟ್ಟು ಇನ್ನಿತರ
ಬಡ ಜನಸಾಮಾನ್ಯರು ತಮ್ಮ ಬದುಕಿನ ನೆಲೆಗಳನ್ನೇ ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡುತ್ತವೆ. ಜೊತೆಗೆ
ಅರಣ್ಯ ಪ್ರದೇಶಗಳ ಕಾರ್ಪೋರೇಟೀಕರಣ ತೀವ್ರವಾಗುತ್ತಾ ಅರಣ್ಯ ಪ್ರದೇಶಗಳ ವಿನಾಶ ಭಾರಿ ವೇಗವನ್ನು ಪಡೆಯುತ್ತದೆ.
ಜಾಗತಿಕ ತಾಪಮಾನ ಏರಿಕೆ ಹಾಗೂ ವಾತಾವರಣಕ್ಕೆ ಇಂಗಾಲ ಬಿಡುಗಡೆಯ ಪ್ರಮಾಣದ ಭಾರಿ ಹೆಚ್ಚಳಕ್ಕೆ ಮೂಲ
ಕಾರಣವಾಗಿರುವ ಭಾರಿ ಜಾಗತಿಕ ಕಾರ್ಪೋರೇಟುಗಳೇ ದೇಶದ ಅರಣ್ಯ ಪ್ರದೇಶಗಳನ್ನು ನಿರ್ವಹಿಸುವಂತಾದರೆ ಪರಿಣಾಮ
ಏನಾದೀತು.
ಅರಣ್ಯ ಭೋಗ್ಯಕ್ಕೆ ಬಿಡುವುದು ಎಂದಾಗ ಇದು ಭಾರಿ ಕಾರ್ಪೋರೇಟುಗಳಿಗೆ
ಹತ್ತಾರು ನೂರಾರು ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶಗಳನ್ನು ಹತ್ತಾರು ವರುಷಗಳವರೆಗೆ ವಹಿಸಿಕೊಟ್ಟು
ಮತ್ತೆ ನವೀಕರಿಸುತ್ತಾ ಹೋಗುವ ಭಾರಿ ಮೋಸದ ಪ್ರಹಸನವಾಗುವುದರಲ್ಲಿ ಅನುಮಾನ ಬೇಕಿಲ್ಲ. ಇವೆಲ್ಲಾ ಅರಣ್ಯ
ರಕ್ಷಣೆ ಹಾಗೂ ಬೆಳೆಸುವಿಕೆಯಲ್ಲಿ ಖಾಸಗಿ ಸಹಭಾಗಿತ್ವ ಎಂಬ ಆಕರ್ಷಕ ಪದಪುಂಜದಡಿ ಜನಸಾಮಾನ್ಯರನ್ನು
ಸಿಲುಕಿಸುತ್ತಾ ಮಾಡಲಾಗುತ್ತದೆ. ಕಾರ್ಪೋರೇಟ್ ಪರಿಸರವಾದಿಗಳು ಹೇಗಿದ್ದರೂ ಇದರ ಪರವಾಗಿ ತಮ್ಮ ಪ್ರಚಾರಾಂದೋಲನ
ಇನ್ನಿತರ ಕಾರ್ಯಕಲಾಪ ಹಮ್ಮಿಕೊಳ್ಳುತ್ತಾರೆ.
ಪರಿಸರ ಪ್ರವಾಸೋದ್ದಿಮೆ ಎಂಬುದು ಆಕರ್ಷಕ ಪದವಾಗಿದ್ದರೂ ಇದರ
ಸಾರ ದೇಶದ ಜನಸಾಮಾನ್ಯರಿಗೆ ಅದರಲ್ಲೂ ಆ ಪ್ರದೇಶಗಳಲ್ಲಿ
ಬದುಕು ಕಟ್ಟಿಕೊಂಡಿರುವ ಜನಸಮುದಾಯಗಳಿಗೆ ಬಹಳ ಕರಾಳವಾಗಿರುತ್ತದೆ. ಪರಸರ ಪ್ರವಾಸೋದ್ದಿಮೆಯೆಂದಾಗ
ಪಂಚತಾರಾ ಸೌಲಭ್ಯಗಳಿರುವ ರೆಸಾರ್ಟ್ ಗಳು, ಆಧುನಿಕ ಸೌಲಭ್ಯಗಳು, ಅಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಗಳು,
ನುಣುಪಾದ ರಸ್ತೆಗಳು, ಸಫಾರಿ ವ್ಯವಸ್ಥೆಗಳು, ಟ್ರಕ್ಕಿಂಗ್ ಹೆಸರಿನ ಮೋಜುಗಳು, ಕ್ಯಾಂಪ್ ಫೈರ್ ಗಳು,
ಮದ್ಯ ಮೋಜು ಮಸ್ತಿಗಳಿಗೆ ಸೌಲಭ್ಯಗಳು, ಹೈಟೆಕ್ ವೇಶ್ಯಾವಾಟಿಕೆಗಳು, ಮಾದಕ ವಸ್ತುಗಳ ಬಳಕೆಗಳು, ರ್ಯಾಪ್ಟಿಂಗ್,
ಬೋಟಿಂಗ್, ಸಾಹಸಗಳ ಹೆಸರಿನಲ್ಲಿ ನೈಸರ್ಗಿಕ ನದಿಗಳನ್ನು ಮುಕ್ತವಾಗಿಸುವುದು ಇವೆಲ್ಲವೂ ಸಹಜವಾಗಿಯೇ
ಸೇರಿಬಿಡುತ್ತವೆ. ಪ್ರವಾಸೋದ್ದಿಮೆಯ ಮೇಲೆ ಹಿಡಿತ ಹೊಂದಿರುವ ಭಾರಿ ಕಾರ್ಪೋರೇಟುಗಳ ಹಿಡಿತಕ್ಕೆ ಇಂತಹ
ಪ್ರದೇಶಗಳು ಸಹಜವಾಗಿ ಸೇರಿಬಿಡುತ್ತವೆ.
ಈ ಹಿಂದೆ ಇದ್ದ ಅರಣ್ಯ ಹಾಗೂ ಪರಿಸರ ಕಾನೂನುಗಳನ್ನು ಭಾರಿ
ಮಟ್ಟದಲ್ಲಿ ಉಲ್ಲಂಘನೆ ಮಾಡಿ ನಾಗರಹೊಳೆ, ಬಂಡಿಪುರ, ಕಾಳಿ ನದಿ ಕಣಿವೆ, ಶರಾವತಿ ನದಿ ಕಣಿವೆ ಮೊದಲಾದ
ಪ್ರದೇಶಗಳಲ್ಲಿ ಹಲವಾರು ಪಂಚತಾರಾ ರೆಸಾರ್ಟ್ ಗಳು ಆಕರ್ಷಕ ಹಾಗೂ ಪಂಚಿಂಗ್ ಹೆಸರುಗಳೊಂದಿಗೆ ಈಗಾಗಲೇ
ಕಾರ್ಯಾಚರಿಸುತ್ತಾ ಬರುತ್ತಿವೆ. ಅವುಗಳು ಮಾಡುತ್ತಿರುವ ಪರಿಸರ ಹಾಗೂ ಆ ಭಾಗದ ಜನಜೀವನದ ಮೇಲಿನ ಹಾನಿಗಳನ್ನು
ನಾವು ಸೂಕ್ಷ್ಮವಾಗಿ ಗಮನಿಸಿದರೆ ಈ ಹೊಸ ತಿದ್ದುಪಡಿ ಮಸೂದೆಯನ್ನು ಉಪಯೋಗಿಸಿಕೊಂಡು ಭಾರಿ ಕಾರ್ಪೋರೇಟುಗಳು
ನಮ್ಮ ದೇಶದ ಅರಣ್ಯ ಪ್ರದೇಶಗಳನ್ನು ಹೇಗೆಲ್ಲಾ ಬಳಸುತ್ತಾ ಹದಗೆಡಿಸಬಹುದು ಎನ್ನುವುದು ಅರ್ಥವಾಗುತ್ತದೆ.
ಈ ತಿದ್ದುಪಡಿ ಮಸೂದೆಯ ಕರಡನ್ನು ಸಾರ್ವಜನಿಕರ
ಗಮನಕ್ಕೆ ತರಲಾಗಿದ್ದರೂ ಸಾರ್ವಜನಿಕರಿಂದ ಬಂದ ದೂರುಗಳು, ತಕರಾರುಗಳು ಹಾಗೂ ತಿದ್ದುಪಡಿಗಳನ್ನು ಸರ್ಕಾರ
ಬಹಿರಂಗಗೊಳಿಸಲಿಲ್ಲ. ಸಂಸತ್ತಿನಲ್ಲಿ ಕೂಡ ಇವುಗಳು ಚರ್ಚೆಯಾಗದಂತೆ ಎಲ್ಲಾ ಪಕ್ಷಗಳು ಸೇರಿ ಬೇರೆ ಬೇರೆ
ನೆಪಗಳಲ್ಲಿ ವರ್ತಿಸಿದವು. ಹಾಗಾಗಿ ಸಾರ್ವಜನಿಕ ವಲಯದಲ್ಲಿ ವಿರೋಧಗಳು ಬಂದಿದ್ದರೂ ಯೂನಿಯನ್ ಸರ್ಕಾರವಾಗಲೀ
ಜಂಟಿ ಸಂಸದೀಯ ಸಮಿತಿಯಾಗಲೀ ತಲೆಗೇ ಹಾಕಿಕೊಳ್ಳದೇ ಇಂತಹ ಜನಸಾಮಾನ್ಯ ವಿರೋಧಿ ಮತ್ತು ಅರಣ್ಯ ಹಾಗೂ
ಪರಿಸರ ವಿರೋಧಿ ಮಸೂದೆಯು ಅನುಮೋದನೆಗೊಂಡು ಕಾಯಿದೆಯಾಗಿ ದೇಶದ ಜನರ ಮೇಲೆ ಎರಗಲು ಸಿದ್ಧವಾಗಿದೆ.
ತಕ್ಷಣಕ್ಕೆ ರಾಷ್ಟ್ರಪತಿಗಳು ಇದಕ್ಕೆ ತಮ್ಮ
ಅಂಕಿತ ಹಾಕದಂತೆ ಒತ್ತಾಯ ಮಾಡುವುದೂ ಸೇರಿದಂತೆ ಇದರ ವಿರುದ್ಧ ಜನಾಂದೋಲನ ರೂಪುಗೊಂಡು ಜನರು ಹಾಗೂ
ಪರಿಸರಕ್ಕೆ ಭಾರಿ ಮಾರಕವನ್ನುಂಟುಮಾಡುವ ಈ ಕಾಯಿದೆಯನ್ನು ರದ್ದಾಗುವಂತೆ ನೋಡಿಕೊಳ್ಳದಿದ್ದಲ್ಲಿ ದೇಶಾದ್ಯಂತ
ಮಣಿಪುರಗಳಂತಹ ಹಲವಾರು ಘಟನೆಗಳು ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳಲಿವೆ.
07/08/2023
Comments
Post a Comment