ಪ್ರಜಾಪ್ರಭುತ್ವ ನೆಲೆಗೊಳ್ಳಲು ಇರುವ ಸವಾಲುಗಳು ಹಾಗೂ
ಪರಿಹಾರದ ದಾರಿಗಳು
ಇಮೇಲ್:nandakumarnandana67@gmail.com
ಮಾನ್ಯರೇ, ಸ್ನೇಹಿತರೇ, ಎಲ್ಲರಿಗೂ ಶುಭಾಶಯಗಳು….
2023ರ ಮೇ ಸಾಹಿತ್ಯ ಮೇಳ ದೇಶದ ಇಂದಿನ ಬಹಳ ಮುಖ್ಯ ಪ್ರಶ್ನೆಗಳಾದ
ಪ್ರಜಾಪ್ರಭುತ್ವ, ಪ್ರಜಾತಾಂತ್ರಿಕತೆ ಅದಕ್ಕೆದುರಾಗಿರುವ ಸಮಸ್ಯೆ ಸವಾಲುಗಳು, ಮತ್ತವುಗಳ ಪರಿಹಾರ
ಎಂಬೆಲ್ಲಾ ವಿಚಾರಗಳ ಕುರಿತು ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಿದೆ. ಇಲ್ಲಿ ನಾಡಿನ ಹಾಗೂ
ದೇಶದ ವಿವಿಧ ಕ್ಷೇತ್ರದ ಹಲವು ಕಾರ್ಯಕರ್ತರು, ಚಿಂತಕರು, ಬುದ್ದಿಜೀವಿಗಳು ತಮ್ಮ ವಿಚಾರಗಳನ್ನು
ಅನುಭವದ ಪಾಠಗಳನ್ನು ಮುಂದಿಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಹಾಗೂ ಅಧಿಕಾರದ ಅಂಗಗಳ ಯಾವುದೇ
ಸಹಯೋಗ ಇಲ್ಲವೇ ನೆರವು ಪಡೆಯದೇ ಜನಸಾಮಾನ್ಯರನ್ನೇ ಆದರಿಸಿ ಮೇ ಸಾಹಿತ್ಯ ಮೇಳದಂತಹವುಗಳನ್ನು
ಸಂಘಟಿಸುವುದು ಸಣ್ಣ ವಿಚಾರವೇನಲ್ಲ.
ಇದಕ್ಕೆ ಇಂದು ಬಹಳ ದೊಡ್ಡ ಸಾಮಾಜಿಕ ಸಂಘಟನೆಯ ಪ್ರಾಮುಖ್ಯತೆ ಇದೆ. ಇಂತಹವು ಇಂದು
ಅದರಲ್ಲೂ ಕರ್ನಾಟಕದಲ್ಲಿ ಬಹಳ ಅಪರೂಪವಾದ ವಿಚಾರವಾಗಿದೆ. ಇದರಲ್ಲಿ ನಾಡಿನ ವಿವಿಧ ಭಾಗಗಳಿಂದ ವಿವಿಧ
ವಲಯದ ಹಾಗೂ ವಿವಿಧ ಚಿಂತನೆಯ ಜನಸಾಮಾನ್ಯರು ಸ್ವಯಂಪ್ರೇರಣೆಯಿಂದ ಒಂದೆಡೆ ಸೇರಿ
ಭಾಗಿಯಾಗುತ್ತಿರುವುದು ಬಹಳ ಮಹತ್ವದ ಸಂಗತಿಯಾಗಿದೆ. ಇದು ಅವರ ಪ್ರಜ್ಞಾಮಟ್ಟವನ್ನು ಹಾಗೂ ಅವರ
ಸಮಾಜಪರತೆ ಹಾಗೂ ಪ್ರಜಾತಾಂತ್ರಿಕ ಸ್ಪೂರ್ತಿಯನ್ನು ಎತ್ತಿತೋರಿಸುವ ಸಂಗತಿಯಾಗಿದೆ. ಜೊತೆಗೆ
ಪ್ರಜಾತಾಂತ್ರಿಕತೆಯ ಮಹತ್ವವನ್ನು ಎತ್ತಿಹಿಡಿಯುವ ಒಂದು ಒಳ್ಳೆಯ ಉದಾಹರಣೆಯಾಗಿದೆ. ಮೇ ಸಾಹಿತ್ಯ
ಮೇಳವನ್ನು ಸಂಘಟಿಸುತ್ತಿರುವ ಎಲ್ಲರಿಗೂ, ಅದಕ್ಕಾಗಿ ವಿವಿಧ ರೀತಿಗಳಲ್ಲಿ ಶ್ರಮಿಸುತ್ತಿರುವ ಎಲ್ಲಾ
ಮನಸುಗಳಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.
ಜಾಗತೀಕರಣದ ಸೂತ್ರಗಳಾದ ಉದಾರೀಕರಣ, ಖಾಸಗೀಕರಣಗಳ ಮೂಲಕ ಸಾರ್ವಜನಿಕ ವಲಯದಲ್ಲಿ
ಸರಕಾರಗಳ ಪಾತ್ರಗಳನ್ನು ಕಡಿತಗೊಳಿಸುತ್ತಾ ಬಂದು ಈಗ ಪರಾಕಾಷ್ಠೆಯತ್ತ ಸಾಗತೊಡಗಿದೆ. ಹಾಗಿದ್ದರೂ
ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ಗಣನೀಯ ಮಟ್ಟದಲ್ಲಿ ಏರುಮುಖದ ಬೆಳವಣಿಗೆ ಕಾಣಲು
ಸಾಧ್ಯವಾಗುತ್ತಿಲ್ಲ. ತನ್ನ ಸ್ಥಿರತೆಯನ್ನು ಕೂಡ ಕಾಪಾಡಿಕೊಳ್ಳಲಾಗುತ್ತಿಲ್ಲ. ಈಗ ಜಾಗತಿಕ
ಕಾರ್ಪೋರೇಟುಗಳು ತಾವುಗಳು ಮೂರು ದಶಕಗಳ ಹಿಂದೆ ಹೇರಿದ್ದ ಜಾಗತೀಕರಣ ನೀತಿಗಳು ಹಾಗೂ
ಒಪ್ಪಂದಗಳಿಂದ ಹಿಂದೆ ಸರಿಯುವ, ನಮ್ಮ ಮಾರುಕಟ್ಟೆ ನಮಗೆ, ನಮ್ಮ ದೇಶ ನಮಗೆ, ನಮ್ಮ ದೇಶದ
ಉದ್ಯೋಗಾವಕಾಶ ನಮ್ಮ ದೇಶದವರಿಗೆ, ಡಿಗ್ಲೋಬಲೈಸೇಷನ್ ಎಂದೆಲ್ಲಾ ತಮ್ಮ ಅನುಕೂಲ ಹಾಗೂ ಆಯ್ಕೆಯ
ವಾದಗಳನ್ನು ರಕ್ಷಣಾತ್ಮಕ ನೀತಿಗಳನ್ನು ಮುಂದಿಡತೊಡಗಿವೆ. ಆದರೆ ಅವರುಗಳೇ ಸೃಷ್ಟಿಸಿದ
ಸಿಕ್ಕುಗಳಿಂದ ಬಿಡಿಸಿಕೊಳ್ಳಲಾಗದೇ ತಿಣುಕಾಡುತ್ತಿದ್ದಾರೆ.
ಜಾಗತೀಕರಣದ ಮೂಲಕ ಕೆಲವೇ ಕಾರ್ಪೋರೇಟು ಸಂಸ್ಥೆಗಳು ಜಾಗತಿಕ ಸಂಪತ್ತಿನ
ಬಹುಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಸಾಗಿದ್ದಾರೆ. ಆದರೂ ಅವುಗಳು ಬಯಸಿದ
ಜಾಗತಿಕ ಆರ್ಥಿಕ ಚೇತರಿಕೆಗಳು ಕಾಣದೇ ಹೋಗುತ್ತಿವೆ. ಇದಕ್ಕೆ ಕೃಷಿ, ಕೈಗಾರಿಕೆ, ಮೊದಲಾದ
ಉತ್ಪಾದನಾ ವಲಯಗಳ ಬೆಳವಣಿಗೆಯಾಗದೇ ಹೋಗುತ್ತಿರುವುದೇ ಪ್ರಧಾನ ಕಾರಣವಾಗಿದೆ. ಜಾಗತಿಕವಾಗಿ
ಜನಸಾಮಾನ್ಯರ ಕೊಳ್ಳುವ ಶಕ್ತಿ ಬೆಳೆಯದೇ ಕ್ಷಯಿಸುತ್ತಾ ಸಾಗುತ್ತಿರುವುದು ಇದಕ್ಕೆ ಪ್ರಧಾನ ಕಾರಣವಾಗಿದೆ.
ಜಾಗತಿಕ ಬಂಡವಾಳವು ಅದುವರೆಗೂ ಹಲವು ಅದರಲ್ಲೂ ತೃತೀಯ ಜಗತ್ತಿನ ದೇಶಗಳಲ್ಲಿ ಇದ್ದ ಒಂದಷ್ಟು
ಮೇಲ್ಮಟ್ಟದ ಸ್ವಾತಂತ್ರ್ಯ, ಸಾರ್ವಭೌಮತ್ವ, ಸಾಂವಿಧಾನಿಕ ವ್ಯವಸ್ಥೆಯನ್ನು ಜಾಗತೀಕರಣ ಹೇರುವ
ಮೂಲಕ ಸಂಪೂರ್ಣವಾಗಿ ಬದಿಗೆ ಸರಿಸಿತು ಇಲ್ಲವೇ ಧಿಕ್ಕರಿಸಿತು.
ಇಂಡಿಯಾದ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಲ್ಲ. ನಮ್ಮನ್ನಾಳುವವರು ನಮ್ಮ
ದೇಶ ಹಾಗೂ ದೇಶದ ಜನರನ್ನು ಜಾಗತಿಕ ಬಂಡವಾಳದ ಅಡಿಯಾಳನ್ನಾಗಿ ಮಾಡಿಬಿಟ್ಟರು. ಜಾಗತೀಕರಣ ಹೇರಿ
ಈಗ ಮೂರು ದಶಕ ಕಳೆದುಹೋಗಿದೆ. ಈಗ ಜನರ ಆದಾಯಮೂಲಗಳ ನಾಶ, ಉತ್ಪಾದನಾ ಸಲಕರಣಗಳ ನಾಶ.
ಉದ್ಯೋಗಾವಕಾಶಗಳ ನಾಶ ಎಲ್ಲಾ ಸೇರಿ ಜನರ ಕೊಳ್ಳುವ ಶಕ್ತಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ
ಕುಸಿದುಹೋಗಿದೆ. ಹಾಗಾಗಿ ಎಲ್ಲಾ ಉತ್ಪಾದನಾ ಹಾಗೇನೆ ಸೇವಾ ಕ್ಷೇತ್ರಗಳಲ್ಲಿ ಗ್ರಾಹಕರ ಕೊರತೆ
ಭಾರಿ ಮಟ್ಟ ತಲುಪಿದೆ. ನೋಟು ರದ್ದತಿಯ ನಂತರ ಇದು ಪರಾಕಾಷ್ಟೆಯತ್ತ ಹೋಗುತ್ತಿದೆ. ಕೋರೋನಾ ಲಾಕ್
ಡೌನ್ ಹಾಗೂ ನಿರ್ಬಂಧ ಅದನ್ನು ಮತ್ತೂ ಉನ್ನತ ಹಂತದ ಪರಾಕಾಷ್ಟೆತೆಯತ್ತ ಸಾಗಿಸಿದೆ. ಕೊರೋನಾ ಲಾಕ್
ಡೌನ್ ಮೊದಲ ಎರಡು ತಿಂಗಳುಗಳಲ್ಲೇ ದಿನಗೂಲಿಗಳು ಹಾಗೂ ಸಣ್ಣ ವ್ಯಾಪಾರಿ ವಲಯದ ಸುಮಾರು 12
ಕೋಟಿಗಳಿಗೂ ಹೆಚ್ಚು ಉದ್ಯೋಗಗಳು ನಷ್ಟವಾಗಿದ್ದವು ಎಂಬ ವರದಿಗಳಿದ್ದವು.
ಜಾಗತೀಕರಣದ
ಬಿಕ್ಕಟ್ಟಿನ ಭಾಗವಾಗೇ ಕೊರೋನಾ ಬಿಕ್ಕಟ್ಟನ್ನು ಸೃಷ್ಟಿಮಾಡಲಾಯಿತು. ಒಂದು ಸಾಮಾನ್ಯ ವೈರಸ್ ನೆಪ
ಹಿಡಿದು ಜಾಗತಿಕವಾಗಿ ಭೂಮಿ, ಸಲಕರಣೆಗಳು, ಯಂತ್ರಗಳು, ಕಾರ್ಮಿಕರು, ಶ್ರಮಿಕರು ಸೇರಿದಂತೆ
ಉತ್ಪಾದನಾ ಶಕ್ತಿಗಳ ಮೇಲೆ ದಾಳಿಗಳನ್ನು ಮಾಡುತ್ತಾ ನಾಶ ಮಾಡಲಾಯಿತು. ಮತ್ತಷ್ಟು ಫ್ಯಾಸಿಸ್ಟ್
ನೀತಿಗಳ ಹೇರಿಕೆಗಳ ಪ್ರಯೋಗಗಳು ನಡೆದವು. ಇದರ ಗರಿಷ್ಠ ಲಾಭ ಮತ್ತೆ ಜಾಗತಿಕ ಹಿಡಿತದ ಕೆಲವೇ
ಕಾರ್ಪೋರೇಟುಗಳ ಕೈಗೆ ಸೇರಿತು. ಇದಕ್ಕೆ ಕೊರೋನಾ ಕಾಲದಲ್ಲಿ ನಮ್ಮ ದೇಶದಲ್ಲಿ ಅಂಬಾನಿ ಅದಾನಿ
ಮೊದಲಾದ ಕಾರ್ಪೋರೇಟ್ ಬಳಗ ಹತ್ತುಹಲವು ಪಟ್ಟು ಸಂಪತ್ತನ್ನು ಶೇಕರಿಸಿಕೊಂಡಿದ್ದನ್ನು
ಗಮನಿಸಬಹುದು. ಅದೇ ರೀತಿ ಮೈಕ್ರೋಸಾಫ್ಟ್, ಫೇಸ್ ಬುಕ್, ಗೂಗಲ್, ಸೆರಮ್ ಇನ್ಸ್ಟಿ ಟ್ಯೂಟ್,
ಅಸ್ಟ್ರಾಜೆನೆಕಾ, ಅಮೇಜಾನ್ ನಂತಹ ಜಾಗತಿಕ ಕಾರ್ಪೋರೇಟುಗಳು ಹತ್ತಾರು ನೂರಾರು ಪಟ್ಟು
ಸಂಪತ್ತನ್ನು ಶೇಕರಿಸಿಕೊಂಡವು. ಆದರೆ ಇವುಗಳಲ್ಲಿ ಉತ್ಪಾದನಾ ವಲಯದ ಕಾರ್ಪೋರೇಟುಗಳನ್ನು
ಹುಡುಕಬೇಕಾದ ಪರಿಸ್ಥಿತಿ ಇದೆ. ಇವುಗಳು ಸಂಪತ್ತು ಶೇಖರಿಸಿದ್ದು ಪ್ರಧಾನವಾಗಿ ಉತ್ಪಾದನೆಯ
ಹೆಚ್ಚಳದ ಮೂಲಕ ಅಲ್ಲ. ಬದಲಿಗೆ ಜನರ ಕನಿಷ್ಠ ಬದುಕಿನ ಆದಾಯಗಳನ್ನು ಕಸಿಯುವ ಹಾಗೂ ಸೇವಾ ವಲಯ
ಹಾಗೂ ಸಾರ್ವಜನಿಕ ವಲಯಗಳನ್ನು ತಮ್ಮ ಹಿಡಿತಗಳಿಗೆ ಸೇರಿಸುವ ಮೂಲಕ. ಅದು ಅಂತರ್ಜಾಲ ಸಾಮಾಜಿಕ
ಜಾಲಗಳು, ಆನ್ ಲೈನ್ ವ್ಯವಹಾರ, ಚಿಲ್ಲರೆ ಮಾರಾಟ ಕ್ಷೇತ್ರ, ಗಣಿ, ವಿಮೆ, ಬ್ಯಾಂಕ್, ರೇಲ್ವೆ,
ವಿಮಾನಯಾನ, ಸಾರಿಗೆ, ಭೂಮಿ, ಅರಣ್ಯ ಹೀಗೆ ಸಾಗುತ್ತದೆ. ಇದರಲ್ಲಿ ಎಲ್ಲೂ ಹೊಸದಾದ ಸರಕು
ಉತ್ಪಾದನೆಗಳು ಇಲ್ಲವೇ ಸರಕು ಉತ್ಪಾದನೆಯ ಹೆಚ್ಚಳ
ಕಾಣುವುದು ಅಪರೂಪ.
ಸ್ವಾತಂತ್ರ್ಯದ
ವಿಚಾರಕ್ಕೆ ಬಂದರೆ ಇಂದು ನಮ್ಮ ದೇಶದ ಮೇಲಿನ ಹಿಡಿತ ಬಹುರಾಷ್ಟ್ರೀಯ ಕಾರ್ಪೋರೇಟ್ ಕೂಟ ಹಾಗೂ
ದೊಡ್ಡ ಆಸ್ತಿವಂತರ ಕೂಟಗಳ ಕೈಯಲ್ಲಿದೆ. ಅಂದು ಒಂದು ಈಸ್ಟ್ ಇಂಡಿಯಾ ಕಂಪನಿಯ ಜಾಗದಲ್ಲಿ ಇಂದು ಹಲವು ರಾಷ್ಟ್ರಗಳ ಜಾಗತಿಕ ಕಾರ್ಪೋರೇಟು ಕಂಪನಿಗಳಿವೆ. ಅವುಗಳು ನಮ್ಮ ದೇಶದ ಎಲ್ಲಾ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಿ ತಮ್ಮ ಅಗತ್ಯಗಳಿಗೆ
ತಕ್ಕಂತೆ ತೀರ್ಮಾನಗಳನ್ನು ಜನಸಾಮಾನ್ಯರ ಮೇಲೆ ಹೇರುತ್ತಾ ಬಂದಿವೆ. ನಮ್ಮ ಪ್ರತಿನಿಧಿಗಳೆಂದು
ಹೇಳಿಕೊಳ್ಳುವ ಸರಕಾರಗಳು ಮತ್ತವುಗಳ ಯಂತ್ರಾಂಗಗಳು ಈ ಕೂಟಗಳ ಬಾಲಂಗೋಚಿಗಳಂತೆ
ಕಾರ್ಯನಿರ್ವಹಿಸುತ್ತಿರುವುದು ಬಹುತೇಕ ಜನಸಾಮಾನ್ಯರ ಅನುಭವವಾಗಿದೆ. ಇದು ಅಂದಿನ ಪಂಚವಾರ್ಷಿಕ
ಯೋಜನೆಗಳು, ಬ್ಯಾಂಕ್ ರಾಷ್ಟ್ರೀಕರಣಗಳಿಂದ ಹಿಡಿದು ಇಂದಿನ ನೋಟು ಆಮಾನ್ಯೀಕರಣ, ಬ್ಯಾಂಕ್
ಖಾಸಗೀಕರಣಗಳವರೆಗೆ ನಮಗೆ ಕಾಣಿಸುವ ವಿಚಾರ. ಅಂದಿನದನ್ನು ಒಳಹೊಕ್ಕು ನೋಡಿದಾಗ ಮಾತ್ರ
ಅರ್ಥವಾಗುವಂತಿದ್ದರೆ ಇಂದಿನದು ಮೇಲ್ನೋಟದಲ್ಲೇ ಅರ್ಥವಾಗುವಂತೆ ಇದೆ. ಅಂದಿನದನ್ನು ಅರ್ಥ
ಮಾಡಿಕೊಳ್ಳಬೇಕಾದರೆ ಒಂದಷ್ಟು ಅಧ್ಯಯನಗಳ ಅವಶ್ಯಕತೆಯಿದ್ದರೆ ಇಂದಿನದನ್ನು ಅರ್ಥಮಾಡಿಕೊಳ್ಳಲು
ಅಷ್ಟೊಂದು ಅಧ್ಯಯನದ ಅವಶ್ಯಕತೆಯಿಲ್ಲ ಎನ್ನುವುದಷ್ಟೇ ಇರುವ ಅಲ್ಪ ಸ್ವಲ್ಪ ವ್ಯತ್ಯಾಸ. ಇದಕ್ಕೆ ರಾಫೇಲ್,
ಫಸಲ್ ಬಿಮಾ, ಬ್ಯಾಂಕ್ ಗಳ ವಿಲೀನೀಕರಣ, ಜಿಯೋ ಮೊಬೈಲ್ ಜಾಲ ವಿಸ್ತರಿಸಲು ಬಿ ಎಸ್ ಎನ್ ಎಲ್
ವಿನಾಶ, ಗಣಿ ನಿಗಮ, ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ (ಒ ಎನ್ ಜಿ ಸಿ), ಯಂತಹ ಸಾರ್ವಜನಿಕ ಸಂಸ್ಥೆಗಳನ್ನು ನಾಶಗೊಳಿಸುವಂತಹ ಹಗರಣಗಳಿಂದಲೂ ಸ್ಪಷ್ಟವಾಗುವ
ವಿಚಾರ.
ಅಂದೆಲ್ಲಾ
ಈ ಭಾರಿ ಕಾರ್ಪೋರೇಟ್ ಕೂಟಗಳು ಹಿಂಬಾಗಿಲಿನಿಂದ ಸರ್ಕಾರಗಳನ್ನು ನಿಯಂತ್ರಿಸುತ್ತಿದ್ದರೆ, ಇಂದು ಈ
ಕೂಟಗಳು ನೇರವಾಗಿಯೇ ಸರಕಾರಗಳನ್ನು, ಪ್ರಧಾನಿಗಳನ್ನು ತಾವೇ ನೇಮಿಸುವ ಮಟ್ಟದಲ್ಲಿ, ಇಡೀ ರಾಜಕೀಯ
ಪಕ್ಷಗಳನ್ನೇ ಖರೀದಿಸುವ, ಬಯಸಿದವರನ್ನು ಚುನಾಯಿಸಿಕೊಳ್ಳುವ ಮಟ್ಟದಲ್ಲಿ ತಮ್ಮ ನಿಯಂತ್ರಣದಲ್ಲಿ
ಆಡಳಿತವನ್ನು ಬಿಗಿಯಾಗಿಸಿಕೊಂಡಿವೆ. ಸಂವಿಧಾನ ಹಾಗೂ ಸಂಸತ್ತುಗಳನ್ನು ಈ ಶಕ್ತಿಗಳು ಸಾರಾ ಸಗಟಾಗಿ
ಬದಿಗೆ ಸರಿಸಿರುವ ಅನುಭವ ಇಂದಿನ ಜನಸಾಮಾನ್ಯರದಾಗಿದೆ. ಯಾಕೆಂದರೆ ಸಂಸತ್ತಿನಲ್ಲಿ ಚರ್ಚೆ ನಡೆಸಲೂ
ಕೂಡ ಅವಕಾಶ ಇಲ್ಲದಿರುವಂತಹ ಸ್ಥಿತಿ ಇರುವುದನ್ನು ಹಲವು ಸಂಸತ್ ಸದಸ್ಯರುಗಳೇ ಖಾಸಗಿಯಾಗಿ
ಹೇಳುತ್ತಾರೆಂದರೆ ನಮ್ಮ ಸ್ವತಂತ್ರ್ಯ ಗಣರಾಜ್ಯದ ಇಂದಿನ ಮಟ್ಟ ಏನು ಅನ್ನುವುದನ್ನು ನಾವು
ಗ್ರಹಿಸಬಹುದು. ವಿಶ್ವ ವ್ಯಾಪಾರಿ ಸಂಸ್ಥೆಯ ಒಪ್ಪಂದಗಳಿಗೆ ಸಹಿ ಹಾಕುವ ವಿಚಾರ ಇರಬಹುದು,
ಹತ್ತುಹಲವು ಅಂತರಾಷ್ಟ್ರೀಯ ಒಪ್ಪಂದಗಳಿಗೆ ಸಹಿಹಾಕುವ ವಿಚಾರಗಳಿರಬಹುದು, ಆಧಾರ್ ಕಾರ್ಡಿನ
ಹೇರಿಕೆ ಇರಬಹುದು ಹೀಗೆ ನಾವು ನೋಡಿದಾಗ ಇಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ಸಂಪೂರ್ಣವಾಗಿ ಅವಗಣನೆ
ಮಾಡಿರುವ ಇಲ್ಲವೇ ಬದಿಗೆ ಸರಿಸಿರುವ ವಿಚಾರಗಳು ಮುಖಕ್ಕೆ ರಾಚುವಂತೆ ಕಾಣಿಸುತ್ತವೆ.
ಇನ್ನು
ಆರ್ಥಿಕ ಸಮಾನತೆಯೊಂದಿಗೆ ಜಾತಿ ಸಮಾನತೆ, ಲಿಂಗಸಮಾನತೆ ಸಾಧಿಸದೇ ಸ್ವಾತಂತ್ರ್ಯ ಎನ್ನುವುದು
ಮರೀಚಿಕೆ ಮಾತ್ರವೆನ್ನುವುದನ್ನು ನಾವು ಗಮನಿಸಬೇಕು. ಇದನ್ನು ಸಂವಿಧಾನದ ಕರಡು ರಚನೆಯಲ್ಲಿ
ಪ್ರಮುಖ ಪಾತ್ರ ವಹಿಸಿದ್ದ ಡಾ ಅಂಬೇಡ್ಕರ್ ಸೇರಿದಂತೆ ಹಲವರು ಈಗಾಗಲೇ ಹೇಳಿದ್ದಾರೆ. ಈ ವಿಚಾರದಲ್ಲಿ ನಮ್ಮ ದೇಶ ಒಟ್ಟಾರೆ
ಹೋಲಿಕೆಯಲ್ಲಿ ಈಗ ಮತ್ತಷ್ಟು ಹಿಂದಕ್ಕೆ
ಹೋಗಿದೆಯೆನ್ನಬಹುದು. ಶೇ 1ರಷ್ಟಿರುವ ಜನ ದೇಶದ ಶೇ 70ಕ್ಕೂ ಹೆಚ್ಚು ಆಸ್ತಿಪಾಸ್ತಿಗಳ ಮೇಲೆ
ಹಿಡಿತ ಸಾಧಿಸಿರುವ ಬಗ್ಗೆ ಬರುತ್ತಿರುವ ವರದಿಗಳು ಇದನ್ನು ದೃಢಪಡಿಸುತ್ತವೆ. ಕೇವಲ 9
ಕಾರ್ಪೋರೇಟುಗಳು ದೇಶದ ಶೇ50ಕ್ಕೂ ಹೆಚ್ಚು ಸಂಪತ್ತಿನ ಮೇಲೆ ಹಿಡಿತ ಸಾಧಿಸಿವೆ ಎಂದಾಗ ಆರ್ಥಿಕ
ಹಾಗೂ ಸಾಮಾಜಿಕ ಅಸಮಾನತೆಯ ಪರಿಸ್ಥಿತಿ ಯಾವ ಹಂತ ತಲುಪಿದೆ ಎನ್ನುವುದನ್ನು ನೋಡಬಹುದು. ದೇಶದ
ಪ್ರಥಮ ಪ್ರಜೆಯೆಂದು ಹೇಳಿಕೊಳ್ಳುವ ರಾಷ್ಟ್ರಪತಿಗಳ, ದೇಶದ ಆಡಳಿತಾತ್ಮಕ ಮುಖ್ಯಸ್ಥರೆಂದು
ಹೇಳಲಾಗಿರುವ ಪ್ರಧಾನಿಗಳ ಹೆಗಲ ಮೇಲೆ ಕಾರ್ಪೋರೇಟು ಮುಖ್ಯಸ್ಥರುಗಳು ತಮ್ಮ ಕೈಗಳನ್ನು ಹಾಕಿ
ಬಹಿರಂಗವಾಗಿ ಸಂಭಾಷಣೆ ನಡೆಸುವ, ನಡೆದಾಡುವ ಚಿತ್ರಗಳು ಇಂದು ಸಾಮಾನ್ಯವಾಗಿ ಹೋಗಿದೆ. ಅವರ ಶರೀರ
ಭಾಷೆಗಳಲ್ಲಿ ದಾಷ್ಟ್ಯಗಳು ಎದ್ದು ಕಾಣುವಂತಿರುತ್ತದೆ.
ಜಾತಿ,
ಕೋಮು, ಲಿಂಗ, ಪ್ರಾದೇಶಿಕ ಅಸಮಾನತೆಗಳ ಮಟ್ಟ ಒಟ್ಟು ಅನುಪಾತದ ಸಾರಂಶದಲ್ಲಿ ನೋಡಿದಾಗ ಇಂದು ಅದರ
ವಿಕೃತತೆಗಳು ಹಾದಿ ಬೀದಿ ಹಳ್ಳಿ ಕೇರಿಗಳಲ್ಲಿ ಕೇಕೇ ಹಾಕಿ ಆರ್ಭಟಗೈಯುತ್ತಿರುವ
ಅನುಭವವಾಗುತ್ತಿವೆ. ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ತೀವ್ರ ಸ್ವರೂಪ ಪಡೆದುಕೊಂಡಿರುವ ಈ
ಸಂದರ್ಭದಲ್ಲಿ ಈ ಅಸಮಾನತೆಯ ಕರಾಳತೆ ಹಾಗೂ ವಿಕೃತತೆಗಳು ಭೀಕರವಾಗತೊಡಗಿವೆ. ಆದರೆ ಇವುಗಳ ಮೇಲೆ
ಜನಸಾಮಾನ್ಯರು ಗಮನಹರಿಸದಂತೆ ಮಾಡಲು ಕೋಮು, ಜಾತಿ, ಜೆಹಾದ್ ಇತ್ಯಾದಿ ಅಪ್ರಸ್ತುತ ಹಾಗೂ
ಜನಸಾಮಾನ್ಯರಿಗೆ ಯಾವ ಭಾದಕವೂ ಅಲ್ಲದ ವಿಚಾರಗಳಿಗೆ ಜನಸಾಮಾನ್ಯರ ಗಮನ ಕೇಂದ್ರೀಕರಣಗೊಳ್ಳುವಂತೆ ವ್ಯವಸ್ಥಿತವಾಗಿ
ಮಾಡಲಾಗುತ್ತಿದೆ. ಇಂತಹ ಬೃಹತ್ ಷಡ್ಯಂತ್ರಗಳನ್ನು
ಜಾರಿಗೊಳಿಸುತ್ತಿರುವುದನ್ನು ಅರ್ಥ ಮಾಡಿಕೊಂಡವರು ಬಹಳ ಕಡಿಮೆ ಎನ್ನಬಹುದು. ಹಾಗಾಗಿ ದೇಗುಲ
ಪ್ರವೇಶ, ಮಂದಿರ ನಿರ್ಮಾಣ, ಪಶು ದನ, ಗೋ ಮೂತ್ರ, ಗಂಗಾ
ನದಿ, ಕುಂಭ ಮೇಳ ಇತ್ಯಾದಿಗಳ ಸುತ್ತಾ ಪರವಿರೋಧಗಳ ಚರ್ಚೆ ಪ್ರತಿಭಟನೆಗಳಲ್ಲಿ ಜನಸಾಮಾನ್ಯರನ್ನು
ಮುಳುಗಿಸಿಡುವ ಕಾರ್ಯ ನಡೆಯುತ್ತಿದೆ. ಹಾಗೆ ಮಾಡುವ ಮೂಲಕ ಜನಸಾಮಾನ್ಯರ ಸಾವು ಬದುಕಿನ ನೂರೆಂಟು
ರಾಜಕೀಯಾರ್ಥಿಕ ಹಾಗೂ ಸಾಮಾಜಿಕ ಪ್ರಶ್ನೆಗಳ ಸುತ್ತಾ ಜನಹೋರಾಟಗಳು ಸಿಡಿಯದಂತೆ ನೋಡಿಕೊಳ್ಳಲು
ಶ್ರಮಿಸಲಾಗುತ್ತಿದೆ. ಅದೇ ವೇಳೆಯಲ್ಲಿ ಈ
ಎಲ್ಲಾ ಮುಸುಕು ಚಟುವಟಿಕೆಗಳ ಗುರಾಣಿಗಳನ್ನು ಅಡ್ಡಹಿಡಿದು ಸಾಮಾಜಿಕ ಹೋರಾಟಗಾರರನ್ನು ಜನಪರ
ವ್ಯಕ್ತಿ ಸಂಘಟನೆಗಳನ್ನು ಹತ್ತು ಹಲವು ರೀತಿಗಳಲ್ಲಿ ದಮನಿಸಿಡುವ, ಸುಳ್ಳು ಕೇಸುಗಳಡಿ
ಕಾರಾಗೃಹಗಳಲ್ಲಿ ಕೊಳೆಹಾಕುವ, ಸುಳ್ಳು ಎನ್ ಕೌಂಟರುಗಳಲ್ಲಿ ಕಗ್ಗೊಲೆ ಮಾಡುವ, ಹತ್ತು ಹಲವು ಜನ
ವಿರೋಧಿ ನೀತಿಗಳನ್ನು ಜಾರಿಗೊಳಿಸುವ, ಸಂವಿಧಾನ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ನಗಣ್ಯಗೊಳಿಸುವ,
ದಲಿತ ದಮನಿತರಿಗೆ ಇದ್ದ ಅಲ್ಪ ಸ್ವಲ್ಪ ಮೀಸಲಾತಿಯಂತಹ ರಕ್ಷಣೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷ
ರೀತಿಗಳಲ್ಲಿ ನಾಜೂಕಿನಿಂದ
ಅಸ್ತಿತ್ವರಹಿತಗೊಳಿಸುವ… ಹೀಗೆ ಹಿಂದೆ ಇದ್ದ ಒಂದು ಮಟ್ಟದ ರಕ್ಷಣಾತ್ಮಕ ಚೌಕಟ್ಟುಗಳು ಹಾಗೂ ವಿಧಿ
ವಿಧಾನಗಳ ಅಸ್ತಿತ್ವಗಳನ್ನೇ ನಿರ್ನಾಮ ಮಾಡುತ್ತಿರುವ ಕಾರ್ಯಗಳು ಇಂದು ಹೆಚ್ಚುಹೆಚ್ಚು
ಬಿರುಸುಗೊಳ್ಳುತ್ತಿರುವುದನ್ನು ನಾವು ನೊಡುತ್ತಿದ್ದೇವೆ. ಇದಕ್ಕೆ ತಮಿಳು ನಾಡಿನ ಸ್ಟರಿಲೈಟ್
ವಿರೋಧಿ ಹೋರಾಟಗಾರರನ್ನು ಎಲ್ಲಾ ಸಾಂವಿಧಾನಿಕ ವಿಧಿಗಳನ್ನು ಧಿಕ್ಕರಿಸಿ ಗುಂಡಿಟ್ಟು ಕೊಂದಿದ್ದು,
ಇದೀಗ ಕೇರಳದ ವಿಜಿಂಗಮ್ ಬಂದರನ್ನು ಅದಾನಿಗೆ ಒಪ್ಪಿಸಿ ಜನರ ಬದುಕಿಗೆ ಸಂಚಕಾರ ತಂದಿರುವುದನ್ನು
ವಿರೋಧಿಸುತ್ತಿರುವ ಹೋರಾಟಗಾರರ ಮೇಲೆ ಯುಎಪಿಎಯಂತಹ ಪ್ರಜಾತಂತ್ರ ವಿರೋಧಿ ಕಾಯಿದೆಗಳನ್ನು
ಹೇರಿದ್ದು ಉದಾಹರಣೆಗಳನ್ನಾಗಿ ನೋಡಬಹುದು. ಇವೆಲ್ಲವೂ
ಅಸಮಾನತೆಗಳನ್ನು ಮತ್ತಷ್ಟು ಹೆಚ್ಚುಗೊಳಿಸುವ ಪ್ರಜಾತಂತ್ರವನ್ನು ಗಾಳಿಗೆ ತೂರುವ ಕಾರ್ಯಗಳೇ
ಆಗಿವೆ.
ಮೊದಲು
ಕೂಲಿ ಮಾಡುತ್ತಿದ್ದವರು ದೂರವಾಣಿ ಹೊಂದಿರಲಿಲ್ಲ ಇಂದು ಕೂಲಿ ಮಾಡುವವರು ಮೊಬೈಲ್ ಗಳನ್ನು
ಹೊಂದಿದ್ದಾರೆ ಹಾಗಾಗಿ ಸಮಾನತೆಯಲ್ಲಿ ಏರಿಕೆಯಾಗಿದೆ ಎಂದೆಲ್ಲಾ ವಾದ ಮಾಡುವ ಒಂದು ದೊಡ್ಡ
ಜನಸಮುದಾಯವಿದೆ. ಆದರೆ ಅದು ಸಮಾನತೆಯ ಲಕ್ಷಣವಲ್ಲ ಎಂಬುದನ್ನು ಗ್ರಹಿಸಬೇಕು. ಕೂಲಿಕಾರನ
ಶ್ರಮವನ್ನು ಸಮರ್ಥವಾಗಿ ಮತ್ತು ನಾಜೂಕಿನಿಂದ ಮತ್ತಷ್ಟು ಶೋಷಿಸುವ, ಆತನ ಚಿಂತನೆಗಳನ್ನು
ದಿಕ್ಕುತಪ್ಪಿಸಿ ನಿಯಂತ್ರಿಸುವ ಸಾಧನವಾಗಿದೆ ಎನ್ನುವ ಅಂಶವನ್ನು ಗಮನಿಸದೇ ಹೋಗುತ್ತಾರೆ. ಸಂಪತ್ತಿನ ಹಂಚಿಕೆಯ ಅನುಪಾತದ ಈಗಿನ ತೀವ್ರ
ಕುಸಿತವನ್ನು ಪರಿಗಣಿಸಲು ಅವರು ಹೋಗುವುದಿಲ್ಲ. ಸಮಾನತೆಯ ವ್ಯಾಖ್ಯಾನವನ್ನು ಹೆಂಚಿನ ಮನೆ, ಮೊಬೈಲು ಟಿವಿ, ಮೋಟರು ಸೈಕಲುಗಳಂತಹ
ಸಾಧನಗಳ ಬಳಕೆಗಳ ಹೆಚ್ಚಳಗಳನ್ನು ಹಗಲುಗುರುಡುತನದಿಂದ ಗ್ರಹಿಸಲು ಹೋಗುವುದರ ಪರಿಣಾಮವಿದು. ಈ ವಾದಿಗಳ
ವಲಯದಲ್ಲಿ ಒಂದು ದೊಡ್ಡ ಬುದ್ಧಿಜೀವಿ ವರ್ಗವೂ ಸೇರಿಕೊಂಡಿದೆ. ಮಧ್ಯಮ ವರ್ಗ ಇಂದು
ಅನುಭವಿಸುತ್ತಿರುವ ಅನುಭೋಗಿವಸ್ತುಗಳ ಸಂಖ್ಯೆಯಲ್ಲಿನ ಆಯ್ಕೆಯ ಅವಕಾಶ ಮತ್ತು ಏರಿಕೆಯಿಂದ ಈ ವರ್ಗ ಉಬ್ಬಿಹೋಗಿ ಮೈಮರೆತು ನಿಂತಿರುವುದರ
ಪರಿಣಾಮ ಇದಾಗಿದೆ.
ಇಂಡಿಯಾ
ಒಂದು ಒಕ್ಕೂಟ (ಯೂನಿಯನ್) ವ್ಯವಸ್ಥೆಯನ್ನು ಹೊಂದಿರುವ ಸ್ವತಂತ್ರ್ಯ ಸಾರ್ವಭೌಮ ಗಣರಾಜ್ಯವೆಂದು
ಸಾರಿಕೊಂಡು ಬಂದಿದ್ದರೂ ನೈಜ ಅರ್ಥದಲ್ಲಿ ಅದನ್ನು ಮೊದಲಿನಿಂದಲೂ ಸಾಕಾರಗೊಳಿಸದೇ ಮತ್ತಷ್ಟು
ಕುಬ್ಜಗೊಳಿಸುತ್ತಾ ಬಂದು ಜಾಗತೀಕರಣದ ನಂತರ ಈಗ ಅದು ಸಂಪೂರ್ಣ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ
ಸನಿಹ ಬಂದು ನಿಂತಾಗಿದೆ. ಸಂವಿಧಾನದ ಹೆಸರಿನಲ್ಲೇ, ಅದನ್ನು ಬಳಸಿಕೊಂಡೇ ಇದನ್ನು ಸಾಧಿಸಲಾಗಿದೆ
ಎನ್ನುವ ಅಂಶವನ್ನು ಮರೆಯಕೂಡದು. ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯಗಳಿಗಿರುವ ಸ್ವಾಯತ್ತ
ನಿರ್ಣಯಾಧಿಕಾರಗಳನ್ನು ಕೇಂದ್ರ ಸರಕಾರ ಭಾವಿಸಿದಲ್ಲಿ ಕಿತ್ತುಕೊಳ್ಳುವ ವಿಧಿಗಳೂ ಕೂಡ ಅದೇ
ಸಂವಿಧಾನದಲ್ಲಿ ಮೊದಲಿನಿಂದಲೂ ಅಡಕಗೊಂಡಿವೆ ಎನ್ನುವುದನ್ನೂ ನಾವು ಗಂಭೀರವಾಗಿ ಗಮನಿಸಬೇಕು.
ರಾಜ್ಯ ಹಾಗೂ ಮತ್ತದರ ಸರ್ಕಾರಗಳು ಮುನಿಸಿಪಾಲಿಟಿಗೆ ಸಮವಾಗುವತ್ತ ಕೇಂದ್ರೀಕರಣ
ಪ್ರಕ್ರಿಯೆಗಳು ಸಾಗುತ್ತಿದೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಲ್ಲ. ಸಂವಿಧಾನದ ಆಶಯಗಳು
ಒಳ್ಳೆಯದಿವೆ ಎಂದಾಕ್ಷಣ ಅವುಗಳು ಜಾರಿಗೊಂಡುಬಿಡುತ್ತವೆ ಎಂದೇನಿಲ್ಲ. ಅದು ಆಯಾ ಸರಕಾರಗಳ ಬದ್ದತೆಯ ಮೇಲೆ ಅವಲಂಬಿಸಿರುವ ವಿಚಾರವಾಗುತ್ತದೆ. ಅಸಮಾನತೆ
ತುಂಬಿ ತುಳುಕುತ್ತಿರುವ ಸಮಾಜ ವ್ಯವಸ್ಥೆಯೊಂದರಲ್ಲಿ ಎಂತಹ ಸಂವಿಧಾನ ರಚನೆಗೊಂಡರೂ ಅದು ಜಾರಿಯಾಗುವುದು ಸಮಾಜದ ಸಂಪತ್ತಿನ ಮೇಲೆ ಹಿಡಿತ
ಸಾಧಿಸಿರುವ ಶಕ್ತಿಗಳ ಪರವಾಗೇ ಹೊರತು ಬಹುಸಂಖ್ಯಾತ ಜನಸಾಮಾನ್ಯರ ಪರವಾಗಿ ಆಗಲು ಸಾಧ್ಯವಿಲ್ಲ.
ಇನ್ನು ಕೊಟ್ಟಂತೆ ಮಾಡಿ ಕೊಡದೇ ಇರುವಂತೆ ಮಾಡಬಹುದಾದ ವಿಧಿಗಳೂ ಕೂಡ ಒಂದು ಸಂವಿಧಾನದಲ್ಲಿ
ಇದ್ದಾಗ ಅದು ಬಹುಸಂಖ್ಯಾತ
ಜನಸಾಮಾನ್ಯರಿಗೆ ಮರೀಚಿಕೆಯಾಗಿ ಕಾಣಿಸಲಾರಂಭಿಸುತ್ತವೆ. ಇಂಡಿಯಾದ ಸಂವಿಧಾನದಲ್ಲಿ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ, ಸಂಯುಕ್ತ ಪಟ್ಟಿ
ಅಂತೆಲ್ಲಾ ನಿರ್ಣಯಾಧಿಕಾರದ ವರ್ಗೀಕರಣ ಮಾಡಲಾಗಿದ್ದರೂ ರಾಜ್ಯ ಪಟ್ಟಿಯಲ್ಲಿನ
ನಿರ್ಣಯಾಧಿಕಾರಗಳನ್ನು ಯಾವುದಾದರೂ ತುರ್ತು ನೆಪ ಹೇಳಿ ಇಲ್ಲವೇ ಸಂಸತ್ತಿನಲ್ಲಿ ಭಾರಿ ಬಹುಮತ
ಹೊಂದುವ ಸರಕಾರವೊಂದು ಸಂಸತ್ತಿನ ತೀರ್ಮಾನದ ಮೂಲಕವೇ ನಿರಾಕರಿಸಬಹುದು ಇಲ್ಲವೇ ಸುಗ್ರೀವಾಜ್ಞೆ
ಹೊರಡಿಸಬಹುದು. ಇನ್ನು ಅಧಿಕಾರ ಕೇಂದ್ರವೊಂದು ನ್ಯಾಯಾಂಗದ ಮೇಲೂ ಪ್ರತ್ಯಕ್ಷ ಇಲ್ಲವೇ
ಪರೋಕ್ಷವಾಗಿ ಹಿಡಿತ ಸಾಧಿಸಿದರೆ ಇಂತಹ ಕಾರ್ಯಗಳು ಮತ್ತೂ ಸುಲಭವಾಗಿ ನ್ಯಾಯಾಂಗವನ್ನು
ಮುಂದಿಟ್ಟುಕೊಂಡು ಕೂಡ ಮಾಡಬಹುದು ಎನ್ನುವುದಕ್ಕೆ ಇಂಡಿಯಾದ ಸಂವಿಧಾನ ಜಾರಿಗೊಂಡ ದಿನದಿಂದಲೂ
ಹಲವಾರು ಉದಾಹರಣೆಗಳನ್ನು ನಾವು ನೋಡಬಹುದು. ಈಗ ಅನುಷ್ಠಾನಗೊಳಿಸುತ್ತಿರುವ ಜಿ ಎಸ್ ಟಿ,
ಇರಬಹುದು, ಆಧಾರ್ ಯೋಜನೆ, ಪೌರತ್ವ ನೊಂದಣೆ ಇರಬಹುದು, ರಾಷ್ಟ್ರೀಯ ಶಿಕ್ಷಣ ನೀತಿ ಇರಬಹುದು,
ಕಾರ್ಪೊರೇಟ್ ಪರ ಕಾಯಿದೆಗಳಿರಹುದು, ದೆಹಲಿ ರಾಜ್ಯದ ಹಿಡಿತವನ್ನು ಹೊಂದಲು ಮಾಡುತ್ತಿರುವ
ಪ್ರಯತ್ನಗಳಿರಬಹುದು ಇವೆಲ್ಲಾ ಕೇಂದ್ರೀಕರಣದ ಪರಾಕಾಷ್ಠೆಯ ನಡೆಗಳೆಂದು ಅರ್ಥ ಮಾಡಿಕೊಳ್ಳಬೇಕು.
ಸಂಸತ್ತನ್ನೂ ಬದಿಗೆ ಸರಿಸಿ, ರಾಜ್ಯಗಳ ಅಭಿಪ್ರಾಯಗಳನ್ನೂ ಕೇಳದೇ ಯಾವುದೇ ಸಾಂವಿಧಾನಿಕ ಮಾನ್ಯತೆ
ಇಲ್ಲದ ಆಧಾರ್ ಯೋಜನೆಯನ್ನು ಏಕಪಕ್ಷೀಯವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಲವಂತದಿಂದ
ಜನಸಾಮಾನ್ಯರ ಮೇಲೆ ಹೇರಲಾಯಿತು. ರಾಜ್ಯಗಳ
ಅಧಿಕಾರ ಹಾಗೂ ಜನಸಾಮಾನ್ಯರ ಖಾಸಗಿತನವನ್ನು ಹರಣ ಮಾಡುವ, ಜನಸಾಮಾನ್ಯರ ಮೇಲೆ ಸಾರಾಸಗಟು ಗೂಢಚಾರಿಕೆ ಮಾಡುವ ಕೇಂದ್ರದ ಈ ಅಪಾಯಕಾರಿ ನಡೆಯನ್ನು ಈಗ ನ್ಯಾಯಾಂಗ ಕೂಡ ಮಾನ್ಯ ಮಾಡುವಂತೆ ಆಗಿದ್ದನ್ನು ನಾವು
ನೋಡಿದ್ದೇವೆ. ಅಂದರೆ ಆಳುವ ಶಕ್ತಿಗಳು ಸಂವಿಧಾನವನ್ನು ತಮಗೆ ಅನುಕೂಲವಾಗಿ ಹೇಗೆಲ್ಲಾ
ಬಳಸಿಕೊಳ್ಳುತ್ತಾರೆ ಹೇಗೆಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಪಕ್ಕಕ್ಕೆ ಸರಿಸಿ
ದಕ್ಕಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಒಂದು ತಾಜಾ ಉದಾಹರಣೆಯಾಗಿದೆ.
ಹಾಗಾಗಿ
ಇಂದು ಇಂಡಿಯಾ ಒಂದು ಒಕ್ಕೂಟ ವ್ಯವಸ್ಥೆಯಿರುವ ಗಣರಾಜ್ಯಕ್ಕೆ ಬದಲಾಗಿ ಸಂಪೂರ್ಣ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಸನಿಹ ಬಂದು
ನಿಂತಿದೆ. ಸಂವಿಧಾನಿಕವಾಗಿ ಸಾಧ್ಯವಾಗದ ಮೇಲ್ಜಾತಿ ಬಡವರಿಗೆ ಶೇ10 ಮೀಸಲಾತಿಯನ್ನು ಸಂಸತ್ತಿನ ಎರಡೂ ಅಂಗಗಳೂ ಸಲೀಸಾಗಿ
ಅಂಗೀಕರಿಸಿ ಈಗ ಜಾರಿಮಾಡುತ್ತಿದೆ. ಇದು
ದಲಿತ ದಮನಿತರಿಗೆ ಇದ್ದ ಅಲ್ಪ ಸ್ವಲ್ಪ ಸಾಂವಿಧಾನಿಕ
ರಕ್ಷಣೆಯನ್ನೇ ಚಾಣಾಕ್ಷತನದಿಂದ ಕಿತ್ತುಕೊಳ್ಳುವ ಷಡ್ಯಂತ್ರ ಕೂಡ ಹೌದು. ಇದರ ಬಗ್ಗೆ ನ್ಯಾಯಾಂಗ
ಏನು ಹೇಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಇಂತಹ
ಕಾರ್ಯಗಳು ಇಂದು ನಿನ್ನೆಯಿಂದ ಶುರುವಾಗಿವೆ ಎಂದರೆ ಸರಿಯಾಗುವುದಿಲ್ಲ. ಇವುಗಳ ಮೂಲ ಸಂವಿಧಾನದ ಅಳವಡಿಕೆ ಹಾಗೂ ಜಾರಿಗೊಳಿಸುವಲ್ಲಿನಿಂದಲೇ ಶುರುವಾಗಿವೆ
ಎನ್ನುವುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸರಿಯಾಗಿ ಗ್ರಹಿಸಿ ನೋಡಲು ಸಾಧ್ಯವಾಗುತ್ತದೆ. ಇಂಡಿಯಾವನ್ನು
ಹಾಗೇನೇ ಸಂವಿಧಾನವನ್ನೂ ಮೊದಲಿನಿಂದಲೂ ಇಲ್ಲಿಯವರೆಗೂ ಒಪ್ಪಿಕೊಳ್ಳದೇ ಇರುವ ಒಂದು ದೊಡ್ಡ ಜನಸಮೂಹ ಈಗಲೂ
ಇದೆ. ಅದರ ಹೇರಿಕೆಯ ವಿರುದ್ಧ ಸಶಸ್ತ್ರಹೋರಾಟಗಳೂ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಈ ಜನ ಸಮುದಾಯಗಳು ನಿರತವಾಗಿವೆ. ಮಿಜೋರಾಂ, ಅಸ್ಸಾಂ, ತ್ರಿಪುರ, ಮೊದಲಾದ ಇಂಡಿಯಾದ
ಈಶಾನ್ಯ ಭಾಗದ ಜನಸಮುದಾಯಗಳು ಹಾಗೇನೇ ಕಾಶ್ಮೀರ ಪ್ರದೇಶದ ಜನರು, ಮಧ್ಯಇಂಡಿಯಾದ ಹತ್ತು ಹಲವು
ಬುಡಕಟ್ಟು ಸಮುದಾಯಗಳು ಇಂಡಿಯಾದ ಸಶಸ್ತ್ರ ಪಡೆಗಳೊಂದಿಗೆ ಅಕ್ಷರಶಃ ಬೀದಿ ಕಾಳಗ, ಯುದ್ಧಗಳಲ್ಲಿ
ನಿರತವಾಗಿವೆ. ಆ ಪ್ರದೇಶಗಳಲ್ಲಿ ಇಂಡಿಯಾದ ಸೇನೆಯೇ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ.
ಅಲ್ಲೆಲ್ಲಾ ಸೇನಾ ಪಡೆಗಳಿಗೆ ವಿಶೇಷಾಧಿಕಾರ ನೀಡಲಾಗಿದೆ. ಈಗಲೂ ಇಂಡಿಯಾದ ಸಶಸ್ತ್ರ ಪಡೆಗಳ ವಿಶೇಶ
ಅಧಿಕಾರದಡಿ ಕಾಶ್ಮೀರ, ಅಸ್ಸಾಂ ನಂತಹ ರಾಜ್ಯಗಳಿವೆ. ಸುದೀರ್ಘಕಾಲ ಸೇನೆಯ ಮೂಲಕ ಆಡಳಿತ ನಡೆಸುವ
ವ್ಯವಸ್ಥೆಯೊಂದು ಹೇಗಿದ್ದರೂ ಪ್ರಜಾಪ್ರಭುತ್ವದ ಮಾದರಿಯಾಗದು ತಾನೇ. ಪ್ರಜಾಪ್ರಭುತ್ವ ಜಾರಿಯಲ್ಲಿ
ಇಲ್ಲ ಎಂದರೆ ಅದು ಫ್ಯಾಸಿಸ್ಟ್ ಇಲ್ಲವೇ ನಿರಂಕುಶಾಧಿಕಾರ ಎಂದೇ ಅರ್ಥ ತಾನೇ?
ಅಲ್ಲೆಲ್ಲಾ
ಚುನಾಯಿತ ಸರಕಾರಗಳು ಕೇವಲ ನಾಮಮಾತ್ರದ್ದೆನ್ನುವಷ್ಟರ ಮಟ್ಟಿಗೆ ಸೀಮಿತವಾಗಿ ಕಾರ್ಯ
ನಿರ್ವಹಿಸುತ್ತಾ ಬರುತ್ತಿವೆ. ಆ ಭಾಗಗಳಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ
ಬಹಿಷ್ಕರಿಸಿರುವ ವರದಿಗಳು ಬರುತ್ತಿರುತ್ತವೆ. ಅಂತಹಸಮಾರಂಭಗಳಲ್ಲಿ ರಾಜ್ಯಪಾಲರು, ಮುಖ್ಯ ಮಂತ್ರಿಗಳು
ಬಹುತೇಕ ಖಾಲಿ ಖುರ್ಚಿಗಳ ಮುಂದೆ ಭಾಷಣ
ಮಾಡಬೇಕಾಗಿ ಬಂದದ್ದೂ ವರದಿಯಾಗುತ್ತವೆ. ದಕ್ಷಿಣದ ಹಲವು ರಾಜ್ಯಗಳ ಸರ್ಕಾರಗಳ ಮುಖ್ಯಸ್ಥರುಗಳೇ
ಸಂಪನ್ಮೂಲ ಹಂಚಿಕೆ ಹಾಗೂ ಕೇಂದ್ರೀಕರಣದ ವಿರುದ್ಧ ಧ್ವನಿ ಗಟ್ಟಿಮಾಡುತ್ತಾ
ಮಾತನಾಡಲಾರಂಭಿಸಿದ್ದಾರೆ. ಇವುಗಳು ಈ ಏಳು ದಶಕಗಳಲ್ಲಿ ಇಂಡಿಯಾ ಸಾಗಿ ಬಂದ ದಾರಿಗಳು ಹಾಗೂ
ಸಾಧನೆಗಳೇನು ಎನ್ನುವುದಕ್ಕೆ ನಿದರ್ಶನಗಳಾಗಿವೆ. ಇಂಡಿಯಾದ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ
ವಾಸ್ತವಕ್ಕೆ ಹಿಡಿಯುವ ಕನ್ನಡಿಯಾಗಿದೆ.
ಇಂತಹ
ಸಂದರ್ಭದಲ್ಲಿ ಸಂವಿಧಾನ ರಕ್ಷಿಸಿ, ಸಂವಿಧಾನ ನಮ್ಮ ದರ್ಮಗ್ರಂಥ, ಸಂವಿಧಾನ ಉಳಿದರೆ ದೇಶ ಉಳಿದೀತು
ಎಂದೆಲ್ಲಾ ಕೂಗುಗಳು ಘೋಷಣೆಗಳನ್ನು ಹಲವು ಜನಪರ ವಲಯಗಳಲ್ಲಿ ಗುರ್ತಿಸಿಕೊಂಡವರೂ ಕೂಡ
ಹಾಕತೊಡಗಿದ್ದಾರೆ. ಇದು ಎಂತಹ ಅಭಾಸದ ನಡೆಯೆನ್ನುವುದನ್ನು ಅವರುಗಳು ಗ್ರಹಿಸದೆಯೂ ಇರಬಹುದು. ಸಂವಿಧಾನ ಒಂದು ಧರ್ಮಗ್ರಂಥ ಎಂದು ಪರಿಭಾವಿಸುವಂತಾದರೆ ಅದರ ಅಪಾಯ ಗಂಭೀರ.
ಸಂವಿಧಾನ ಎಂದರೆ ಸಂವಿಧಾನ ಮಾತ್ರ ಅದು ಧರ್ಮವೂ
ಆಗಬಾರದು ಧರ್ಮಗ್ರಂಥವೂ ಆಗಬಾರದು. ಧರ್ಮ ಇಲ್ಲವೇ ಪವಿತ್ರ ಎಂದೆಲ್ಲಾ ಸಂವಿಧಾನವನ್ನು ಪರಿಗಣಿಸ
ಹೋದರೆ ಅದು ಪ್ರಜಾತಾಂತ್ರಿಕತೆಗೇ ಮುಳುವಾಗಿಬಿಡುವ ಸಂಗತಿಯಾಗಿಬಿಡುತ್ತದೆ.
ಆದರೆ
ಇಂದು ಸಂವಿಧಾನದ ಸರಿಯಾದ ಪ್ರಜಾತಾಂತ್ರಿಕ
ಆಶಯಗಳನ್ನು ಎತ್ತಿಹಿಡಿಯುವ ಅದೇ ವೇಳೆಯಲ್ಲಿ ದೇಶದ ಜನರನ್ನು ಹಾಗೂ ದೇಶವನ್ನು ರಕ್ಷಿಸಬೇಕಾದರೆ ಪ್ರಧಾನ ಕಂಟಕ ಶಕ್ತಿಗಳನ್ನು ಹಾಗೂ ತಡೆಗಳನ್ನು ಸರಿಯಾಗಿ ಗುರ್ತಿಸಿ ಆ ಶಕ್ತಿಗಳ
ವಿರುಧ್ಧ ದ್ವನಿಗಳೇಳುವಂತೆ ಆಗಬೇಕು. ಸಂವಿಧಾನ ಜಾರಿಗೊಂಡು ಏಳು ದಶಕಗಳು ಕಳೆದರೂ ಯಾಕೆ ಈ ದೇಶದ
ಬಹುಸಂಖ‍್ಯಾತ ಜನಸಾಮನ್ಯರಿಗೆ ಅದು ವರ್ತಿತವಾಗುತ್ತಾ ಬಂದಿಲ್ಲ. ಎಲ್ಲೆಲ್ಲಿ, ಏನೇನು, ಯಾಕೆ
ಲೋಪಗಳು ಹಾಗೂ ತಪ್ಪುಗಳು ಯಾವ್ಯಾವ ಶಕ್ತಿಗಳಿಂದ ನಡೆಯುತ್ತಾ ಬಂದವು ಎನ್ನುವುದರ ಚರ್ಚೆ,
ವಿಶ್ಲೇಷಣೆ, ನಡೆಯಬೇಕಾದುದು ಇಂದಿನ ತುರ್ತು ಅಗತ್ಯ ಅಲ್ಲವೇ.
ಇಂಡಿಯಾದ
ಬಹುಸಂಖ್ಯಾತ ಜನಸಮೂಹವಾದ ತಳಪಾಯದ ದಲಿತ, ಆದಿವಾಸಿ, ದಮನಿತ, ಹಿಂದುಳಿದ ಬಡವರ್ಗಗಳ
ಬಹುಸಂಖ್ಯಾತರಿಗೆ ಸಂವಿಧಾನಾತ್ಮಕ ಹಕ್ಕುಗಳು ಹಾಗೂ ಭದ್ರತೆಗಳು ಈಗಲೂ ಸಿಗುತ್ತಿಲ್ಲ ಎಂಬುದನ್ನು
ನಾವು ಬಹಳ ಗಂಭೀರವಾಗಿ ನೋಡಬೇಕಾದ ವಿಚಾರವಾಗಿದೆ. ಇದು ಬಹಳ ಪ್ರಧಾನವಾದ ಪ್ರಜಾತಾಂತ್ರಿಕ
ವಿಚಾರವಾಗಿದೆ. ಈಗಲೂ ದಲಿತ ಆದಿವಾಸಿ, ಮಹಿಳೆ ಇನ್ನಿತರ ದಮನಿತ ವರ್ಗಗಳಿಗೆ ಸ್ವಂತ ಮನೆ ಹಾಗೂ
ಭೂಮಿಯಿಲ್ಲದವರೇ ಹೆಚ್ಚಿನವರಾಗಿದ್ದಾರೆ. ಮಲಹೊರುವಿಕೆ, ಜೀತಗಾರಿಕೆ. ಇಲ್ಲವೇ ಕೂಲಿಯೇ ಬದುಕಿನ
ಆದಾರವಾಗಿದೆ. ಮಲವನ್ನು ತಲೆಮೇಲೆ ಹೊರಿಸುವ, ಮನುಷ್ಯರನ್ನು ಅಸ್ಪೃಷ್ಯರೆಂದು ಪರಿಗಣಿಸುವ
ಸಾಮಾಜಿಕ ವ್ಯವಸ್ಥೆಯೊಂದು ನಾಗರಿಕವಾಗಲೀ ಪ್ರಜಾತಾಂತ್ರಿಕವಾಗಲೀ ಆಗಲು ಸಾಧ್ಯವೇ ಇಲ್ಲ. ಮತ
ನೀಡುವ ಹಕ್ಕು, ಕೆಲವು ಪಡಿತರ ವ್ಯವಸ್ಥೆ, ಕೆಲವರಿಗೆ ಮೀಸಲಾತಿ ಸಿಕ್ಕಿದೆ ಎಂದಾಕ್ಷಣ ಅದು ಎಲ್ಲಾ
ಜನಸಾಮಾನ್ಯರಿಗೆ ಸಂವಿಧಾನಾತ್ಮಕ ಹಕ್ಕುಗಳ ಸಿಗತೊಡಗಿದೆ ಎಂಬ ಅರ್ಥದಲ್ಲಿ ಗ್ರಹಿಸಿದರೆ ಅದು ಅದು
ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಅಪಾಯಕಾರಿಯಾಗುತ್ತದೆ.
ಇಂಡಿಯಾದ
ಯೂನಿಯನ್ ಸರಕಾರ ತನ್ನ ಭದ್ರತಾ ಹಾಗೂ ಗೂಢಚಾರ ಸಂಸ್ಥೆಗಳಿಗೆ ದೇಶದ ಜನಸಾಮಾನ್ಯರ ಎಲ್ಲಾ
ಗಣಕಯಂತ್ರಗಳ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸುವ ಅಧಿಕಾರವನ್ನು ಅಧೀಕೃತವಾಗಿ ನೀಡಲು
ಹೊರಟಿದೆ. ಹಿಂದೆಲ್ಲಾ ಅದನ್ನು ಕಾನೂನು ಉಲ್ಲಂಘಿಸಿ ರಹಸ್ಯವಾಗಿ ಮಾಡಿಕೊಂಡು ಬರಲಾಗಿತ್ತು.
ದೂರವಾಣಿ ಕದ್ದಾಲಿಸುವುದು, ಅಂಚೆಗಳನ್ನು ಕದ್ದು ಓದಿ ಪ್ರತಿ ಮಾಡಿಡುವ ಕೆಲಸಗಳು ಅಧೀಕೃತ ಮುದ್ರೆ
ಇಲ್ಲದೇ ಸಾಕಷ್ಟು ನಡೆಯುತ್ತಿದ್ದವು. ಅಂತಹ ಕದ್ದಾಲಿಕೆಗಳು ಹಿಂದೆ ಬಹಳ ಸದ್ದುಗಳನ್ನು ಮಾಡಿವೆ.
ಅದರಲ್ಲೂ ರಾಜಕಾರಣಿಗಳ ದೂರವಾಣಿ ಕದ್ದಾಲಿಕೆಗಳು ಹಗರಣಗಳಾಗಿ ಹೊರಬಂದ ಉದಾಹರಣೆಗಳು ಇವೆ. ಆಯಾ
ಸರಕಾರಗಳು ತಮ್ಮ ವಿರೋಧಿಗಳ ಮೇಲೆ ಈ ರೀತಿಯ ಅನಧೀಕೃತ ನಿಗಾ ಇಡುವುದು ಮಾಮೂಲಿ ವಿಚಾರವಾಗಿದೆ.
ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಕೂಡ ಇವನ್ನು
ಗರಿಷ್ಠ ಮಟ್ಟದಲ್ಲಿ ಮಾಡಿರುವ ಆರೋಪಗಳಿವೆ.
ಜನ
ಹೋರಾಟಗಳು ತೀವ್ರವಾಗಿರುವ ಕಡೆಗಳಲ್ಲಿ ಸಾರಾ ಸಗಟಾಗಿ ಮೊಬೈಲ್ ಹಾಗೂ ಸ್ಥಿರ ದೂರವಾಣಿಗಳನ್ನು
ಕದ್ದಾಲಿಸುವ, ಅಂತರ್ಜಾಲ ಸಂಪರ್ಕಗಳೊಳಗೆ ತೂರಿ ಮಾಹಿತಿ ಕದಿಯುವ ಕೆಲಸಗಳನ್ನು ಸರಕಾರಗಳು ಮಾಡುತ್ತಿರುವುದು ಗುಟ್ಟೇನೂ ಅಲ್ಲ. ಇದೀಗ ಅಂತಹ
ಕಾರ್ಯಗಳಿಗೆ ಅಧೀಕೃತ ಸಾರಾಸಗಟು ಪರವಾನಿಗೆ ನೀಡುವ ಕೆಲಸವನ್ನು ಮೋದಿ ಸರಕಾರ ಮಾಡಿದೆ.
ಜನಸಾಮಾನ್ಯರ ಮಾಹಿತಿ ಕದಿಯುವ ಕೆಲಸಗಳನ್ನು
ಖಾಸಗಿ ಕಾರ್ಪೋರೇಟು ಸಂಸ್ಥೆಗಳು ಕೂಡ ಮಾಡುತ್ತವೆ. ಸಾಮಾಜಿಕ ಜಾಲತಾಣ ಕಂಪನಿಗಳು ಸಾರ್ವಜನಿಕರ
ಖಾಸಗಿ ಮಾಹಿತಿಗಳನ್ನು ಕಾರ್ಪೋರೇಟುಗಳಿಗೆ ಕದ್ದು ಮಾರಾಟ ಮಾಡುವ ಕೆಲಸಗಳನ್ನು ಮಾಡುತ್ತಿರುವ
ವರದಿಗಳು ಕೂಡ ಬಯಲಿಗೆ ಬಂದಿವೆ. ಮಾಹಿತಿ ಸೋರಿಕೆ ಹೆಸರಿನಲ್ಲೂ ಈ ಕಳ್ಳಾಟ ನಡೆಯುತ್ತವೆ. ಜೊತೆಗೆ
ಹ್ಯಾಕರ್ ಗಳು ಕೂಡ ಈ ರೀತಿ ಮಾಹಿತಿ ಕದಿಯುವ ಕೆಲಸಗಳನ್ನು ಮಾಡುತ್ತಾರೆ. ಮಾಹಿತಿ ಕದಿಯುವ ಈ
ಕಾರ್ಯ ಇಂದು ದೊಡ್ಡ ಕಳ್ಳ ದಂಧೆಯಾಗಿ ಸಾವಿರಾರು ಕೋಟಿ ಡಾಲರುಗಳ ಕಳ್ಳ ವ್ಯವಹಾರ ಆಗಿದೆ.
ಹ್ಯಾಕಿಂಗ್ ಮಾಡಲಿಕ್ಕಾಗಿಯೇ ಹಲವಾರು ತಂತ್ರಾಂಶಗಳು ಬರುತ್ತಿವೆ. ಆಪ್ ಗಳು ಬರುತ್ತಿವೆ.
ಅನಧೀಕೃತ ಸಂಸ್ಥೆಗಳೂ ಇವೆ.
ಈಗ
ಮಾಡಹೊರಟಿರುವುದು ಅಧೀಕೃತವಾಗಿ ಜನಸಾಮಾನ್ಯರ ಖಾಸಗಿತನದ ಸಂಪೂರ್ಣ ಹರಣ. ಭದ್ರತಾ ಸಂಸ್ಥೆಗಳು
ಜನಸಾಮಾನ್ಯರ ಗಣಕಯಂತ್ರಗಳ ಮೇಲೆ ನಿಗಾ ವಹಿಸಿ ಬೇಕಾದ ಹಾಗೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು
ನಿಯಮಬದ್ಧಗೊಳಿಸುವ ಮೂಲಕ ದೇಶವನ್ನು ಅಧೀಕೃತವಾಗಿ ಪೋಲೀಸ್ ರಾಜ್ ಗೆ ಒಳಪಡಿಸುವಂತಾಗುತ್ತದೆ.
ಇಲ್ಲಿ ಜನಸಾಮಾನ್ಯರ ಸಂವಿಧಾನದತ್ತ ಹಕ್ಕುಗಳು, ಖಾಸಗಿತನ, ಮಾಧ್ಯಮ ಸ್ವಾತಂತ್ರ್ಯ ಎಲ್ಲಾ
ಸಂಪೂರ್ಣ ಗೌಣವಾಗಿ ಬಿಡುತ್ತವೆ.
ಮಾಧ್ಯಮಗಳ
ಮೇಲೆಯೂ ಇದರ ಪರಿಣಾಮ ಗಂಭೀರವಾಗಿಬಿಡುತ್ತದೆ. ಮಾಧ್ಯಮ ಸ್ವಾತಂತ್ರ್ಯ ಹೆಸರಿಗೂ ಕೂಡ ಇಲ್ಲದ
ಸ್ಥಿತಿ ಬರುತ್ತದೆ. ಭದ್ರತಾ ಸಂಸ್ಥೆಗಳು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಮಾಧ್ಯಮ ಪ್ರತಿನಿಧಿಗಳ
ಗಣಕಯಂತ್ರಗಳನ್ನು ಹೊತ್ತೊಯ್ಯಬಹುದು ಇಲ್ಲವೇ ತಂದು ಒಪ್ಪಿಸಲು ಹೇಳಬಹುದು. ಅದರಲ್ಲಿನ
ಮಾಹಿತಿಯನ್ನೆಲ್ಲಾ ತೆಗೆದುಕೊಳ್ಳಬಹುದು. ಇಲ್ಲವೇ ಗೊತ್ತಾಗದಂತೆಯೇ ಮಾಧ್ಯಮ ಪ್ರತಿನಿಧಿಗಳು ಮತ್ತು ಸಂಸ್ಥೆಗಳ ಗಣಕಯಂತ್ರ
ಹಾಗೂ ಅಂತರ್ಜಾಲ ಸಂಪರ್ಕಗಳ ಮೇಲೆ ನೇರ ನಿಗಾ ಇಟ್ಟು ಕಿರುಕುಳ ನೀಡಲು ಬಳಸಲೂ ಬಹುದು. ಆಯಾ
ಸರಕಾರಗಳು ತಮಗಾಗದ ಮಾಧ್ಯಮ ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಈ ಕಾನೂನು ಮೂಲಕ ದಾಳಿ
ನಡೆಸಬಹುದು. ಈಗಲೇ ಮಾಧ್ಯಮ ಸ್ವಾತಂತ್ರ್ಯವೆನ್ನುವುದು ನಾಮಮಾತ್ರದ್ದಾಗುವ ಸ್ಥಿತಿ ಬಂದೊದಗಿದೆ.
ಇನ್ನು ಈ ಕಾನೂನು ಜಾರಿಯಾದರೆ ಅದು ಪೂರ್ಣ ನಾಮಾವಶೇಷವಾದಂತೆಯೇ ಸರಿ.
ಒಟ್ಟಿನಲ್ಲಿ
ಒಂದು ಪೂರ್ಣ ಫ್ಯಾಸಿಸ್ಟ್ ವ್ಯವಸ್ಥೆಯನ್ನು ಹೇರಲು ಅಧೀಕೃತವಾಗೇ ತಯಾರಿಗಳು ನಡೆಯುತ್ತಿವೆ
ಎನ್ನಬಹುದು.
ಇಂಡಿಯಾದ ಕಂಪನಿಯೆಂದು ಬಿಂಬಿಸಿಕೊಳ್ಳುವ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್
ಅಂಬಾನಿ ಕೂಡ ಇಂಡಿಯಾದ ಮಾಹಿತಿಗಳು ಮತ್ತದರ ಒಡೆತನ ಇಂಡಿಯಾದ ಕೈಯಲ್ಲೇ ಇರಬೇಕು. ಅದು ವಿದೇಶಿ
ಕಾರ್ಪೋರೆಟ್ ಕಂಪನಿಗಳ ಪಾಲಾಗಬಾರದು ಎಂಬ ಮಾತುಗಳನ್ನು ಕೆಲವು ವೇದಿಕೆಗಳಲ್ಲಿ ಹೇಳಿದ್ದರು.
ಹಾಗಾಗಿ ಈಗಾಗಲೇ ವಿದೇಶಿ ಕಂಪನಿಗಳ ಕೈ ಸೇರಿರುವ ಮಾಹಿತಿಗಳನ್ನು ವಾಪಾಸು ಪಡೆಯುವಂತಾಗಬೇಕು ಎಂದೂ
ಹೇಳಿದ್ದೂ ನಡೆದಿದೆ. ಮಾಹಿತಿಗಳನ್ನು ಹಾಗೂ ಮಾಹಿತಿ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದುದು
ನಾವು 1947ರಲ್ಲಿ ಗಳಿಸಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದಷ್ಟೇ
ಪ್ರಾಮುಖ್ಯತೆಯುಳ್ಳದ್ದು, ಮಾಹಿತಿ ವಸಾಹತುಶಾಹಿ ನಮ್ಮ ದೇಶದ ಹಿಡಿತ ಸಾಧಿಸಲು ಬಿಡಬಾರದು ಎಂದೂ
ಸೇರಿಸಿ ಮಾತಾಡಿದ್ದಾರೆ. ಇದನ್ನು ಆತ ಆರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಪ್ರಾಯೋಜಿಸಿದ್ದ
ರಿಪಬ್ಲಿಕ್ ಮೀಟ್ ನ ವೇದಿಕೆಯಿಂದಲೂ ಹೇಳಿದ್ದರು. ಆದರೆ ಸ್ವತಃ ಮುಖೇಶ್ ಅಂಬಾನಿ ಬಹುರಾಷ್ಟ್ರೀಯ
ಕಂಪನಿಯ ಮಾಲಿಕನೆಂಬ ಮಾಹಿತಿಯನ್ನು ಜಾಣತನದಿಂದ ಮರೆಮಾಚಿ ಇಂಡಿಯಾದವರ ಮಾಹಿತಿಗಳು ಇಂಡಿಯಾದವರ
ಕೈಯಲ್ಲಿ ಇರಬೇಕು ಎಂದು ಹೇಳಿರುವುದು ಜನಸಾಮಾನ್ಯರ ಹಿತದೃಷ್ಟಿಯಿಂದ ಅಲ್ಲವೆಂಬುದನ್ನು
ಗ್ರಹಿಸಬೇಕು. ಆತನ ದೃಷ್ಟಿಯಲ್ಲಿ ಆತ ಇಂಡಿಯಾದವರು. ಇಲ್ಲಿನ ಬೃಹತ್ ಮಾರುಕಟ್ಟೆಯ ಮೇಲೆ ಹಿಡಿತ
ಸಾಧಿಸಲು ಆತನ ಕೈಯಲ್ಲಿ ಇಲ್ಲಿನವರ ಮಾಹಿತಿ ಇರಬೇಕು. ಬೇರೆಯವರಿಗಲ್ಲ ಎಂದು ಅರ್ಥ. ಮಾಹಿತಿ ಸಂಗ್ರಹ ಸರಕಾರಗಳ ಮೂಲಕವಾದರೆ ಖರ್ಚೇ ಇಲ್ಲದೇ ಆತನಿಗೆ ಅದರ ಬಹುಪಾಲು
ಲಾಭ ಸಿಗುತ್ತದೆ. ಸರಕಾರ ಏನಾಗಿರಬೇಕು, ಪ್ರಧಾನಿ ಯಾರಾಗಿರಬೇಕು ಎನ್ನುವುದನ್ನೇ ನಿರ್ಧರಿಸುವ
ಹಂತದಲ್ಲಿರುವ ಆತನಿಗೆ ಇಂತಹ ಮಾಹಿತಿ ಸಂಗ್ರಹದ ಕೆಲಸವನ್ನು ಸರಕಾರಗಳು ಮಾಡಿ ಕೊಡದೇ ಇರಲು
ಸಾಧ್ಯವೇ. ಅನಾಣ್ಯೀಕರಣದ ಹಂತದಲ್ಲಿ ಜಿಯೋ ಹೆಸರಿನ ಮೋಬೈಲ್ ಜಾಲ, ಜಿಯೋ ವ್ಯಾಲೆಟ್ ಎಂದೆಲ್ಲಾ
ಸ್ಥಾಪಿಸಿ ಸರಕಾರವನ್ನು ತನ್ನ ನೇರ ಅನುಕೂಲಕ್ಕೆ ಬಳಸುತ್ತಾ ಬಂದ ಕಾರ್ಯವಿಧಾನ ಮುಖೇಶ್ ಅಂಬಾನಿ
ಕಂಪನಿಗಿದೆ. ಅವನ್ನೆಲ್ಲಾ ಡಿಜಿಟಲ್ ಹಣ ಹಾಗೂ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸುವ ನೆಪ ಹೇಳಿ
ಮಾಡಲಾಗಿದ್ದನ್ನು ನಾವು ಗಮನಿಸಬಹುದು. ಹಾಗೇನೇ ರೈತರಿಗೆ ಅನುಕೂಲ ಮಾಡಿಕೊಡುವ ಹೆಸರಿನಲ್ಲಿ
‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ’ ಅಂತ ಬೆಳೆವಿಮೆಯ ನೆಪದಲ್ಲಿ ಅನಿಲ್ ಅಂಬಾನಿಯ ವಿಮಾ
ಕಂಪನಿಗೆ ಹಲವಾರು ಸಾವಿರ ಕೋಟಿ ರೂಪಾಯಿಗಳ ಸಾರ್ವಜನಿಕ ಹಣ ಸೋರಿಹೋಗಲು ನೇರವಾಗಿ ದಾರಿ ಮಾಡಿಕೊಟ್ಟ
ಉದಾಹರಣೆ ಕೂಡ ನಮ್ಮ ಮುಂದಿದೆ. ಇದನ್ನು ರಫೇಲ್ ಹಗರಣಕ್ಕಿಂತಲೂ ದೊಡ್ಡದಾದ ಹಗರಣವೆಂದು ಹಿರಿಯ
ಪತ್ರಕರ್ತ ಪಿ ಸಾಯಿನಾಥ್, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ರಂತಹವರು ಹೇಳಿದ್ದಾರೆ. ಇದೀಗ
ದ್ರೋಣ್ ಉತ್ಪಾದನೆಯ ಮೇಲೆ ಏಕಸ್ವಾಮ್ಯ ಸಾಧಿಸಲು ಸರ್ಕಾರವನ್ನು ಬಳಸಲು ತೊಡಗಿರುವ ವ್ಯಕ್ತಿ
ಮುಖೇಶ್ ಅಂಬಾನಿ.
ಮಾಹಿತಿಗಳು
ಇಂದು ಬೃಹತ್ ಮೊತ್ತದ ಬಂಡವಾಳವನ್ನು
ಕ್ರೋಢೀಕರಿಸಲು ಬೇಕಾದ ಅಗತ್ಯ ಸರಕಾಗಿದೆ. ಹಾಗಾಗಿ ಮಾಹಿತಿ ಎಂದರೆ ಹಣವಾಗಿದೆ. ಮಾಹಿತಿ ಎಂದಾಗ
ಕೇವಲ ಹೆಸರು ವಿಳಾಸವಲ್ಲ. ಅದು ವೃತ್ತಿ, ಆದಾಯ, ಹಣಕಾಸು ವ್ಯವಹಾರ, ಬ್ಯಾಂಕ್ ಖಾತೆಗಳು, ವಿಮಾ
ಖಾತೆಗಳು, ಶೇರು ಬಾಂಡುಗಳ ಮಾಹಿತಿಗಳು, ಆಸ್ತಿ ಪಾಸ್ತಿ ಮಾಹಿತಿಗಳು, ಸಾಮಾಜಿಕ ಪ್ರಭಾವ,
ಹವ್ಯಾಸಗಳು, ಚಿಂತನೆಗಳು, ಕಾಯಿಲೆ ಹಾಗೂ ಔಷಧಿಗಳ
ಸೇವನೆ ಇತ್ಯಾದಿ ಎಲ್ಲಾ ರೀತಿಯ ಮಾಹಿತಿಗಳು ಎಂದು ಗ್ರಹಿಸಬೇಕು. ಉದಾಹರಣೆಗೆ ವಿಮಾ ಕಂಪನಿಯೊಂದು
ಹೊಸದಾಗಿ ವಿಮಾಖಾತೆ ತೆರೆಯುವ ಸಂದರ್ಭದಲ್ಲಿ ಸಂಬಂಧಿತ ವ್ಯಕ್ತಿಯ ಎಲ್ಲಾ ಖಾಸಗಿ ಮಾಹಿತಿಯನ್ನು
ಮೊದಲೇ ಇಟ್ಟುಕೊಂಡಿದ್ದರೆ ಆಗಬಹುದಾದ ಲಾಭ ಏನಾಗಿರಬಹುದು ಎಂದು ನಾವು ಕಲ್ಪಿಸಿಕೊಂಡರೆ ಈ
ಮಾಹಿತಿಗಳನ್ನು ಇಂತಹ ಕಂಪನಿಗಳು ಹೇಗೆಲ್ಲಾ ಬಳಸಿ ಹಣ ಕೊಳ್ಳೆಹೊಡೆಯಲು ಸಾಧ್ಯ ಎನ್ನುವುದು ನಮ್ಮ
ಗ್ರಹಿಕೆಗೆ ಬರುತ್ತದೆ.
ಭದ್ರತೆ
ಹಾಗೂ ಕಾಳಸಂತೆಕೋರರ ವಿಚಾರ ಮುಂದಿಟ್ಟು ಜನಸಾಮಾನ್ಯರ ಖಾಸಗೀ ಹಾಗೂ ವ್ಯವಹಾರದ ಮಾಹಿತಿಗಳನ್ನು
ಅಧೀಕೃತವಾಗಿ ಶೇಖರಿಸುವ ಮೂಲಕ ಭದ್ರತೆಯ ಹಾಗೂ ಕಳ್ಳ ಆರ್ಥಿಕ ವ್ಯವಹಾರಗಳನ್ನು ಮಟ್ಟ ಹಾಕುತ್ತೇವೆಂಬ ನೆಪ ಹೇಳಿ
ಜನಸಾಮಾನ್ಯರನ್ನು ದಿಕ್ಕು ತಪ್ಪಿಸಲು ನೋಡುತ್ತಿದೆ ಸರಕಾರ.
ಅಮೇರಿಕ
ಜಗತ್ತಿನ ಜನರ ಅಂತರ್ಜಾಲ, ಮೊಬೈಲ್ ಮಾತುಕತೆ, ವಿದ್ಯುನ್ಮಾನ ಅಂಚೆಗಳ ಎಲ್ಲಾ ಮಾಹಿತಿಗಳನ್ನು
ಅದಕ್ಕಾಗಿಯೇ ರೂಪುಗೊಳಿಸಲಾದ ಸೂಪರ್ ಗಣಕಯಂತ್ರಗಳ ಮೂಲಕ ಸಂಗ್ರಹಿಸಿ ಇಟ್ಟುಕೊಂಡಿದ್ದು ಬಹಿರಂಗವಾಗಿತ್ತು. ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಕೋಲಾಹಲವನ್ನು
ಸೃಷ್ಟಿಸಿದ ಘಟನೆಯಾಗಿತ್ತು.
ಜನಸಾಮಾನ್ಯರ
ಖಾಸಗಿತನವನ್ನೇ ಸಂಪೂರ್ಣವಾಗಿ ಕಸಿಯುವ, ಮಾಧ್ಯಮ ಸ್ವಾತಂತ್ರ್ಯವನ್ನು ಪೂರ್ಣವಾಗಿ ಕಸಿಯುವ,
ಸಂವಿಧಾನದತ್ತ ಹಕ್ಕುಗಳನ್ನು ನಿರಾಕರಿಸುವ ಅದೇ ವೇಳೆಯಲ್ಲಿ ಕಾರ್ಪೋರೇಟುಗಳಿಗೆ ಅಗಾಧ ಲಾಭಗಳನ್ನು
ಮಾಡಿಕೊಡುವ ಇಂತಹ ಕಾನೂನುಗಳು ಜಾರಿಯಾಗದಂತೆ ತಡೆಯದಿದ್ದರೆ ‘ಹಗ್ಗ ಹಾಗೂ ಗಮ್ ಟೇಪ್ ಸ್ವತಃ
ಕೊಟ್ಟು ಬಾಯಿ ಮುಚ್ಚಿಸಿ ಕೈಕಾಲು ಕಟ್ಟಿಸಿಕೊಂಡ’ ಸ್ಥಿತಿ ದೇಶದ ಜನಸಾಮಾನ್ಯರದಾಗುತ್ತದೆ. ಅಲ್ಲಿ
ಪ್ರಜಾತಂತ್ರಕ್ಕೆ ಕನಿಷ್ಟ ಅವಕಾಶವೂ ಇಲ್ಲದಂತಾಗುತ್ತದೆ.
ಇಂಡಿಯಾ
ದೇಶವನ್ನು ರೂಪುಗೊಳಿಸಿ ಈಗ ಏಳು ದಶಕಗಳು ಕಳೆದಿವೆ.
ಬ್ರಿಟೀಷ್ ಪೂರ್ವದಲ್ಲಿ ರಾಜರುಗಳು ಪಾಳೇಗಾರರಿಂದ ಕೂಡಿದ ಸಾವಿರಾರು ಸಂಸ್ಥಾನಗಳಿದ್ದ ಪ್ರದೇಶ
ಬ್ರಿಟೀಷರ ನಂತರ ಈಗಿನ ಇಂಡಿಯಾ ಎಂದು ಕರೆಸಿಕೊಂಡಿದೆ. ಈ ಭೂಪ್ರದೇಶದಲ್ಲಿ ಬ್ರಿಟೀಷ್ ಈಸ್ಟ್
ಇಂಡಿಯಾ ಕಂಪನಿ ಬರುವುದಕ್ಕೂ ಮೊದಲು ನೂರಾರು ರಾಜಸಂಸ್ಥಾನಗಳಿದ್ದವು. ನಂತರ ಅವುಗಳಲ್ಲಿ ಬಹುತೇಕ
ರಾಜಸಂಸ್ಥಾನಗಳು ಬ್ರಿಟೀಷರ ಸಾಮಂತರಾಗಿಯೇ ಬದಲಾದವರಾಗಿದ್ದರು. ಮೈಸೂರಿನ ಟಿಪ್ಪು ಸುಲ್ತಾನನಂತಹ
ಕೆಲವೇ ಸಾಮ್ರಾಟರು ಮಾತ್ರ ಬ್ರಿಟೀಷರ ಸಾಮಂತರಾಗಲು ಒಪ್ಪದೇ ಸ್ವತಂತ್ರ್ಯ ಸಂಸ್ಥಾನಗಳಾಗಿ
ಉಳಿದಿದ್ದವು. ಆದರೆ ಟಿಪ್ಪುವಿನ ಆಡಳಿತದ ಮೈಸೂರು ಸಾಮ್ರಾಜ್ಯ ಹೆಚ್ಚುಕಮ್ಮಿ ಈಗಿನ ಇಂಡಿಯಾದ
ಅರ್ದಕ್ಕಿಂತಲೂ ಹೆಚ್ಚಿನ ಭೂಭಾಗವನ್ನು ಒಳಗೊಂಡಿತ್ತು. ಉಳಿದವುಗಳು ಚಿಕ್ಕಪುಟ್ಟ
ಸಂಸ್ಥಾನಗಳಾಗಿದ್ದವು. ಟಿಪ್ಪುವನ್ನು ಹೊರತುಪಡಿಸಿದಂತೆ ಇದ್ದ ರಾಜರುಗಳು ಟಿಪ್ಪುವಿನಷ್ಟು
ಸ್ವತಂತ್ರ ನಿಲುವು ಹಾಗೂ ಸ್ವತಂತ್ರ ಅಡಿಪಾಯ ಹಾಗೂ ಮೇಲ್ರಚನೆಗಳನ್ನು ಕಟ್ಟಿಕೊಂಡವರಾಗಿರಲಿಲ್ಲ.
ಸ್ವಾತಂತ್ರ್ಯದ ಆಶೋತ್ತರಗಳನ್ನು ಬೆಳಸಿಕೊಂಡವರಾಗಿರಲಿಲ್ಲ. ಯಾಕೆಂದರೆ ಟಿಪ್ಪುಸುಲ್ತಾನ ಕೇವಲ
ಬ್ರಿಟೀಷರಿಂದ ಸ್ವತಂತ್ರವಾಗಿರಬೇಕೆಂಬ ನಿಲುವಿನವನಾಗಿರಲಿಲ್ಲ. ಆತ ಯೂರೋಪಿನಲ್ಲಿ ಹದಿನೆಂಟನೇ
ಶತಮಾನದಲ್ಲಿ ಆದಂತಹ ಆ ಸಂದರ್ಭದ ಭಾರಿ ಕ್ರಾಂತಿಕಾರಿ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಯ
ಹರಿಕಾರನಾಗಿದ್ದ ಒಬ್ಬ ಸಾಮ್ರಾಟ. ಅಂದರೆ ಬಂಡವಾಳಶಾಹಿ ಬದಲಾವಣೆಯ ಹರಿಕಾರ. ಅಂದಿನ ಕಾಲಕ್ಕೆ ಆತ
ಬಹುದೊಡ್ಡ ಸಾಮಾಜಿಕ ಕ್ರಾಂತಿಕಾರಿಯಾಗಿದ್ದ ಎನ್ನುವುದನ್ನು ನಾವಿಲ್ಲಿ ಅಗತ್ಯವಾಗಿ ಗಮನಿಸಬೇಕು.
ಅದಕ್ಕೆ ಆತನ ಜಾತ್ಯಾತೀತ ನಿಲುವುಗಳು ಹಾಗೂ ದಲಿತ ದಮನಿತರ ಪರವಾದ ನಿಲುವುಗಳು. ಪಾಳೇಗಾರರ
ಹಿಡಿತದಲ್ಲಿದ್ದ ಭೂಮಿಗಳನ್ನು ಭೂಹೀನರಿಗೆ ಹಂಚಿದ್ದು, ಕೃಷಿಯ ನೀರಾವರೀಕರಣ ಹಾಗೂ ಆಧುನೀಕರಣ,
ಕೈಗಾರಿಕೀಕರಣ, ತೋಟಗಾರಿಕೆ, ರೇಷ್ಮೆ ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಪರಿಚಯಿಸಿ
ಪ್ರೋತ್ಸಾಹಿಸಿದ್ದು, ಸ್ಥಾಪಿಸಿದ ಯಂತ್ರಚಾಲಿತ ಕಾರ್ಖಾನೆಗಳು, ಮಾಡಿದ ಹತ್ತಿ ಹಾಗೂ ಮಸ್ಲಿನ್
ಬಟ್ಟೆ, ರಾಕೆಟ್ ತಂತ್ರಜ್ಞಾನ ಇತ್ಯಾದಿ ಆವಿಷ್ಕಾರಗಳು ಕೆಲವು ಉದಾಹರಣೆಗಳಾಗಿವೆ.
ಆದರೆ
ಈ ಪ್ರಜಾತಾಂತ್ರಿಕ ಬೆಳವಣಿಗೆ ಟಿಪ್ಪುವಿನ ಮರಣದೊಂದಿಗೆ ಸ್ತಬ್ಧವಾಯಿತು ಎನ್ನಬಹುದು. ಯಾಕೆಂದರೆ
ನಂತರ ಬ್ರಿಟೀಷರು ಊಳಿಗಮಾನ್ಯ ರಾಜರುಗಳನ್ನು ತಮ್ಮ ಸಾಮಂತರನ್ನಾಗಿ ಮಾಡಿಕೊಂಡು ಆಡಳಿತ ನಡೆಸಲು
ಶುರುಮಾಡಿದರು. ಭೂಮಾಲಿಕ ಜೀತಗಾರ ಸಂಬಂಧಗಳೇ ಪ್ರಧಾನವಾಗಿ ಮುಂದುವರೆದವು.
ಅಲ್ಲಿಗೆ ಹನ್ನೆರಡನೇ ಶತಮಾನದ ಶರಣ ಚಳುವಳಿಯಿಂದ ಆರಂಭವಾದ ನಾಡಿನ ಪ್ರಜಾತಾಂತ್ರೀಕರಣ
ಪ್ರಕ್ರಿಯೆಯು ಟಿಪ್ಪುವಿನ ಮರಣದ ನಂತರ ನಿಂತುಹೋದಂತಾಯಿತು. ನಂತರ ಬ್ರಿಟೀಷ್ ವಿರೋಧಿ ಹೋರಾಟಗಳು
ಪ್ರಜಾತಾಂತ್ರಿಕ ಆಶೋತ್ತರಗಳೊಂದಿಗೆ ಆರಂಭವಾಗಲು ಸ್ವಲ್ಪ ಕಾಲ ಹಿಡಿಯಿತು. ಯಾವಾಗ ಬ್ರಿಟೀಷ್
ವಿರೋಧಿ ಹೋರಾಟಗಳು ಕಾವು ಪಡೆದು ಅದು ಪ್ರಜಾತಾಂತ್ರಿಕ ಬದಲಾವಣೆಯ ಆಶೋತ್ತರಗಳನ್ನು
ಹೊಂದಲಾರಂಬಿಸಿತೋ ಆಗ ದಿಗಿಲುಗೊಂಡ ಬ್ರಿಟೀಷರು ಕಾರ್ಯಾಚರಣೆಗಿಳಿದರು. ಅದರಂತೆ ಹಳೇ
ಪಾಳೇಗಾರರುಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಗಳು ಸಿಲುಕುವಂತೆ ಮಾಡುವ ತಂತ್ರಹೂಡಿದ್ದರು.
ಕಾಂಗ್ರೆಸ್ ಪಕ್ಷವನ್ನು ಅವರೇ ಚಾಲ್ತಿಗೆ ತಂದರು. ಅದರೊಳಗೆ ಸ್ವಾತಂತ್ರ್ಯ ಚಳವಳಿಗಳನ್ನು
ಸಿಲುಕಿಸಲು ಪ್ರಯತ್ನಿಸುತ್ತಾ ಬಂದರು.
ಇದರ
ಹೊರತಾಗಿಯೂ ಬ್ರಿಟೀಷರು ಇಲ್ಲಿ ನೇರ ಆಡಳಿತ ನಡೆಸಲು ಸಾಧ್ಯವಾಗದ ಪರಿಸ್ಥಿತಿ ತಲೆತೋರಿತು.
ಅನಿವಾರ್ಯವಾಗಿ ಮೇಲ್ಜಾತಿ ಮೇಲ್ವರ್ಗ ಮತ್ತು ಭಾರಿ ಭೂಒಡೆಯರ ಪ್ರತಿನಿಧಿಗಳ ನೇತೃತ್ವದ
ಕಾಂಗ್ರೆಸ್ ಪಕ್ಷದ ನಾಯಕ ಜವಾಹರಲಾಲ್ ನೆಹರು ಕೈಗೆ ಅಧಿಕಾರ ಹಸ್ತಾಂತರವನ್ನು 1947ರ ಆಗಸ್ಟ್
ಹದಿನೈದರ ಮಧ್ಯ ರಾತ್ರಿಯಲ್ಲಿ ಬ್ರಿಟೀಷ್ ವಸಾಹತುಶಾಹಿಗಳು ಮಾಡಿದರು. ವಾಸ್ತವದಲ್ಲಿ ಕಾಂಗ್ರೆಸ್ ಇಂಡಿಯಾದ
ಜನಸಾಮಾನ್ಯರ ಪ್ರತಿನಿಧಿಯೆಂದು ಆಗಲೂ ಅಂಗೀಕಾರಗೊಂಡಿರಲೇ ಇಲ್ಲ. ಆದರೆ ಬ್ರಿಟೀಷ್
ವಸಾಹತುಶಾಹಿಗಳು ಮಾತ್ರ ಅಧಿಕಾರ ಹಸ್ತಾಂತರ ಮಾಡಲು ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದರಲ್ಲಿ
ಆಶ್ಚರ್ಯ ಪಡುವಂತದ್ದೇನೂ ಇಲ್ಲ. ಯಾಕೆಂದರೆ ಅದನ್ನು ಅವರೇ ಸಾಕಿ ಬೆಳೆಸಿದ್ದು ತಾನೆ.
ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನದ ಕರಡು ರಚನೆಯಾಗಿ ಎರಡು ಸಾವಿರಕ್ಕೂ ಹೆಚ್ಚು
ತಿದ್ದುಪಡಿಗಳೊಂದಿಗೆ ಅನುಮೋದನೆಗೊಂಡು ಇಂಡಿಯಾ ಸಮಾಜವಾದಿ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳಲ್ಲಿನ
ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು
ಅಳವಡಿಸಿಕೊಂಡಿರುವ ದೇಶವೆಂದು ಕರೆದುಕೊಳ್ಳಲಾಯಿತು. ಆದರೆ ಅನುಷ್ಠಾನದ ವಿಚಾರ ಬಂದಾಗ ಅವೆಲ್ಲಾ
ಪಕ್ಕಕ್ಕೆ ಸರಿಸಲ್ಪಡುತ್ತಾ ಸಮಾಜದ ಭಾರಿ ಕಾರ್ಪೋರೇಟುಗಳು, ಭಾರಿ ಆಸ್ತಿವಂತ ವರ್ಗಗಳು ಹಾಗೂ
ಅನುಕೂಲಸ್ಥರ ಪರವಾಗಿಯೇ ಪ್ರಧಾನವಾಗಿ ವರ್ತಿಸುತ್ತಾ ಬಂದಿರುವುದು ಎದ್ದು ಕಾಣುವ ವಿಚಾರ.
ಭೂಮಿ
ಸಂಪತ್ತುಗಳು ಜನರ ನಡುವೆ ಹಂಚಿಕೆಯಾಗದೇ ಆಕಾಶ ಭೂಮಿಯಷ್ಟು ತೀವ್ರ ಅಸಮಾನತೆಗಳು ಬೆಳೆದು
ನಿಲ್ಲುತ್ತಾ ಬಂದಿವೆ. ಜಾತಿ ಅಸಮಾನತೆ, ಮಹಿಳಾ ಅಸಮಾನತೆಗಳಲ್ಲಿ ಮೂಲಭೂತ ಬದಲಾವಣೆ ಇನ್ನೂ
ಬಂದಿಲ್ಲದಿರುವುದು ಇಂದಿಗೂ ಕಣ್ಣಿಗೆ ರಾಚುತ್ತಿರುವ ವಿಚಾರ. ದೇಶದಲ್ಲಿ ಉತ್ಪಾದನೆಯಾಗುತ್ತಾ ಬಂದ
ಒಟ್ಟು ಸಂಪತ್ತಿನ ಬಹುಪಾಲು ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಜಿಂದಾಲ್, ಹಿಂದೂಜಾ ಇತ್ಯಾದಿ
ಕೆಲವೇ ಗುಜರಾತಿ, ಮಾರವಾಡಿ,
ಪಾರ್ಸಿ, ಬನಿಯಾ ಕಾರ್ಪೊರೇಟುಗಳ ಕೂಟಗಳ ಕೈಗೆ
ಸೇರಿಸಲ್ಪಡುತ್ತಾ ಬಂದಿದೆ. ದೇಶದ ಶೇ 70ಕ್ಕೂ ಹೆಚ್ಚು ಸಂಪತ್ತು ಕೇವಲ ಹತ್ತರಷ್ಟಿರುವ
ಕಾರ್ಪೋರೇಟುಗಳ ಕೈಗಳಿಗೆ ಸೇರಿಕೊಂಡಿದೆ ಎಂದು ಕೆಲವು ವರದಿಗಳು ಆಗಾಗ್ಗೆ ಹೇಳುತ್ತಲೇ ಬರುತ್ತಿವೆ.
ದೇಶದ ತೆರಿಗೆಯಲ್ಲಿ ಅತೀ ಬಡವರ ಪಾಲು ಶೇ64.3ರಷ್ಟಿದ್ದರೆ ಶೇಕಡಾ 72ರಷ್ಟು ದೇಶದ ಆಸ್ತಿ
ಸಂಪತ್ತು ಹೊಂದಿರುವ ಒಟ್ಟು ಜನಸಂಖ‍್ಯೆಯ ಕೇವಲ ಶೇಕಡಾ ಹತ್ತಿರುವ ಅತೀ ಶ್ರೀಮಂತರ ಪಾಲು ದೇಶದ
ತೆರಿಗೆಯಲ್ಲಿ ಕೇವಲ ಶೇಕಡಾ 3ರಿಂದ 4 ರಷ್ಟಿದೆ. ಮದ್ಯಮವರ್ಗ ಶೇಕಡಾ 40ರಷ್ಟು ತೆರಿಗೆ
ನೀಡುತ್ತಿದೆ ಎಂದು ಇತ್ತೀಚಿನ ಆಕ್ಸಫಾಮ್ ವರದಿ ಹೇಳುತ್ತಿದೆ. ಇಂತಹ ಅಸಮಾನತೆಯಿರುವ ದೇಶವೊಂದು
ಜನಸಾಮಾನ್ಯರ ಪ್ರಜಾಪ್ರಭುತ್ವವಾಗಲು ಸಾಧ್ಯವೇ.
ಉತ್ತರ
ಇಂಡಿಯಾ, ದಕ್ಷಿಣ ಇಂಡಿಯಾದ ನಡುವೆ ತೀವ್ರ ವೈರುಧ್ಯಗಳು ಬೆಳೆಯುತ್ತಿವೆ. ದಕ್ಷಿಣ ಇಂಡಿಯಾದ
ರಾಜ್ಯಗಳ ಉತ್ಪಾದಿಸುವ ಸಂಪತ್ತನ್ನು ಉತ್ತರ ರಾಜ್ಯಗಳಿಗೆ ಅಸಮಾನ ಹಾಗೂ ಅವೈಜ್ಞಾನಿಕವಾಗಿ
ಹಂಚಲಾಗುತ್ತಿದೆ ಎಂಬ ಆರೋಪವೂ ಬಲವಾಗಿ ಬರತೊಡಗಿದೆ. ಅಷ್ಟೇ ಅಲ್ಲದೆ ರಾಜ್ಯಗಳ ನಡುವೆ ಉತ್ತರ ಇಂಡಿಯಾದ
ಹಿಂದಿ ವಲಯದ ಹಿಡಿತದಲ್ಲಿರುವ ಯೂನಿಯನ್ ಸರಕಾರಗಳ ಪಕ್ಷಪಾತಿ
ಧೋರಣೆಗಳ ಬಗ್ಗೆ ಭಾರಿ ಮಟ್ಟದ ವೈರುಧ್ಯಗಳು ಬೆಳೆಯುತ್ತಿವೆ. ಅಂದರೆ ಪ್ರಜಾ ತಾಂತ್ರಿಕವಾದ
ಒಕ್ಕೂಟ ತತ್ವಗಳಡಿ ಕೇಂದ್ರ ರಾಜ್ಯ ಸಂಬಂಧಗಳನ್ನು ರೂಪುಗೊಳಿಸುತ್ತಾ, ಬಳಸುತ್ತಾ, ಬೆಳೆಸದಿರುವ
ಪರಿಣಾಮವಾಗಿ ಯೂನಿಯನ್ ಸರಕಾರಗಳ ಹಿಡಿತ ಹೆಚ್ಚಾಗುತ್ತಾ ರಾಜ್ಯಗಳ ಜನಸಾಮಾನ್ಯರು, ಭಾಷೆಗಳು,
ಸಂಸೃತಿಗಳು, ಜನಪದೀಯ ಪರಂಪರೆಗಳು ಸಂಪತ್ತು ವಿಕಾಸಗೊಳ್ಳುತ್ತಾ ಅರಳಲು ಸಾಧ್ಯವಾಗದೇ ನಶಿಸಿಹೋಗುವ
ಅಪಾಯಗಳಿಗೆ ಗುರಿಯಾಗಿವೆ. ಆದರೆ ಇಂದು ರಾಜ್ಯಗಳ ಆಡಳಿತಗಳ ಮೇಲೆ ಯೂನಿಯನ್ ಸರ್ಕಾರದ ಅಧಿಪತ್ಯ
ಹಿಂದೆಂದೂ ಇಲ್ಲದಷ್ಟು ಹೆಚ್ಚಿ ಹತ್ತು ಹಲವು ಹೇರಿಕೆಗಳನ್ನು ರಾಜ್ಯಗಳ ಮೇಲೆ ಮಾಡಲಾಗುತ್ತಿದೆ.
ರಾಜ್ಯಗಳ ಸ್ವಾಯತ್ತತೆ ಎನ್ನುವುದು ನಾಮ ಮಾತ್ರದ ವಿಚಾರವಾಗುತ್ತಿದೆ.
ಗಣರಾಜ್ಯವೆಂದು
ಕರೆದುಕೊಂಡರೂ ವಾಸ್ತವವಾಗಿ ಗಣರಾಜ್ಯ ತತ್ವಗಳು ಪಾಲನೆಯಾಗದೇ ಯೂನಿಯನ್ ಸರ್ಕಾರದ ಅಧಿಪತ್ಯವನ್ನು
ಹೆಚ್ಚಿಸುತ್ತಾ ಬರಲಾಗುತ್ತಿದೆ. ಈಗ ಮೊದಲಿದ್ದಷ್ಟೂ ಒಕ್ಕೂಟ ತತ್ವಗಳು ಪಾಲನೆಯಾಗದೇ ‘ಒಂದು ದೇಶ
ಒಂದೇ ತೆರಿಗೆ’ ‘ಆದಾರ್ ಬದುಕಿನ ಆಧಾರ’ ಎಂದೆಲ್ಲಾ ಆಕರ್ಷಕವೆನಿಸುವ ಘೋಷಣೆಗಳಡಿ ಕೇಂದ್ರದ
ರಾಜ್ಯಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಒಂದು ದೇಶ ಒಂದೇ ಭಾಷೆ, ಒಂದೇ ಧರ್ಮ, ಒಂದೇ
ಸಂಸೃತಿ, ಒಂದೇ ಪಕ್ಷ, ಒಂದೇ ಸರಕಾರ, ಒಂದೇ ಶಿಕ್ಷಣ, ಒಂದೇ ತೆರಿಗೆ, ದೇಶವ್ಯಾಪಿ ಒಂದೇ ನೀತಿ,
ದೇಶಾದ್ಯಂತ ಒಂದೇ ನಾಗರಿಕ ಸಂಹಿತೆ, ಸನಾತನ ಧಾರ್ಮಿಕ ವಿಧಿಗಳೇ ಶ್ರೇಷ್ಟ ಎಂದು ಪ್ರಚಾರವನ್ನು
ಅಬ್ಬರಗೊಳಿಸಲಾಗುತ್ತಿದೆ. ಇದೀಗ ದೇಶದ ಸಂಸತ್ತಿನ ಹೊಸ ಕಟ್ಟಡವನ್ನು ಬ್ರಾಹ್ಮಣಶಾಹಿ ವಿಧಿಗಳೇ
ಉದ್ಘಾಟನೆ ಮಾಡಿವೆ. ಹಾಗೇ ಮುಂದುವರೆದು ದೇಶಾದ್ಯಂತ ಒಬ್ಬರದೇ ಅಧಿಕಾರ ಎನ್ನುವಷ್ಟರ ಮಟ್ಟಕ್ಕೆ
ಎಳೆದುಕೊಂಡುಹೋಗುವ ಲಕ್ಷಣಗಳು ಗೋಚರಿಸತೊಡಗಿವೆ. ಸಾಂವಿಧಾನಿಕ ಅಂಗವಾದ ನ್ಯಾಯಾಂಗದ ಸ್ವಾಯತ್ತತೆ
ಹಿಂದೆಂದೂ ಇಲ್ಲದಷ್ಟು ಕುಸಿದು ಅದರ ಮೇಲೆ ಕೇಂದ್ರ ಸರಕಾರದ ಪ್ರಭಾವ ಮತ್ತು ಹಿಡಿತ
ಹೆಚ್ಚಾಗುತ್ತಿರುವುದು ಕಾಣುತ್ತಿದೆ. ಇದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳೇ ದೇಶದ
ಜನರ ಮುಂದೆ ನೇರವಾಗೇ ಹೇಳಿದ್ದನ್ನು ನಾವು ಗಂಭೀರವಾಗಿ ಗಮನಿಸಬೇಕಾಗಿದೆ.
ನ್ಯಾಯಾಲಯದ
ತೀರ್ಪುಗಳು ಕೂಡ ಆಳುವ ಸರ್ಕಾರದ ರಾಜಕೀಯ ಬಣ್ಣಗಳನ್ನು ಭಾರಿ ಮಟ್ಟದಲ್ಲಿ
ಮೆದ್ದುಕೊಳ್ಳುತ್ತಿರುವುದು ಅನುಭವಕ್ಕೆ ಬರುತ್ತಿರುವ ವಿಚಾರ. ಇನ್ನು ಚುನಾವಣಾ ಆಯೋಗ, ಮಾಹಿತಿ
ಹಕ್ಕು ಆಯೋಗ, ರಿಸರ್ವ್ ಬ್ಯಾಂಕ್, ರಾಷ್ಟ್ರೀಯ ತನಿಖಾದಳ, ದೆಹಲಿ ವಿಶೇಷ ಪೋಲೀಸ್ ಕಾಯ್ದೆಯಡಿ
ರಚಿತವಾದ ಸಿ.ಬಿ.ಐ ಯಂತಹ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ಎಲ್ಲಾ ಕಾಯ್ದೆ ಕಾನೂನುಗಳನ್ನು
ಗಾಳಿಗೆ ತೂರಿ ಕೇಂದ್ರ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಸುವ ಪ್ರಕ್ರಿಯೆಗಳು ಹಿಂದೆಂದಿಗಿಂತಲೂ
ಅಪಾಯಕಾರಿ ಮಟ್ಟ ತಲುಪಿರುವುದು ಅನುಭವಕ್ಕೆ ಬಂದಿರುವ ವಿಚಾರ. ಅಂದರೆ ಸಂವಿಧಾನವನ್ನು
ಮೊದಲಿನಿಂದಲೂ ಸರಕಾರಗಳು ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲು ಮಾತ್ರ ಉಪಯೋಗಿಸುತ್ತಾ
ವಾಸ್ತವದಲ್ಲಿ ಅದೇ ಸಂವಿಧಾನವನ್ನು ಹಲವಾರು ರೀತಿಗಳಲ್ಲಿ ಉಲ್ಲಂಘಿಸುತ್ತಲೇ ಬರಲಾಗಿದೆ
ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಇಂದದು ಮೊದಲಿದ್ದ ಸಂವಿಧಾನ ಅಳವಡಿಕೆ
ಎಂಬ ಪರದೆಯನ್ನು ಕೂಡ ಕಳಚಿ ನೇರವಾಗೇ ನಡೆಯುವ ಹಂತ ತಲುಪಿದೆ.
ಈ
ಬೆಳವಣಿಗೆಗಳು ಒಮ್ಮೆಗೆ ದುತ್ತೆಂದು ಉದ್ಭವಿಸಿದ್ದಲ್ಲ. ಇಂದಿನ ಈ ಎಲ್ಲಾ ಬೆಳವಣಿಗೆಗಳಿಗೂ ಮೂಲ
ಅಧಿಕಾರ ಹಸ್ತಾಂತರ, ಕಾಂಗ್ರೆಸ್ ಬ್ರಿಟೀಷ್ ಪ್ರಭುತ್ವದ ಸಖ್ಯ ನಂತರ ಅಮೇರಿಕ, ರಷ್ಯಾ, ಜಪಾನ್,
ಜರ್ಮನಿ ಇಸ್ರೇಲ್ ಮೊದಲಾದ ಪ್ರಭುತ್ವಗಳು ಹಾಗೂ ಜಾಗತಿಕ ಹಣಖಾಸು ಸಂಸ್ಥೆಗಳೊಂದಿಗೆ ಇದುವರೆಗೂ
ಅಧಿಕಾರ ನಡೆಸುತ್ತಾ ಬಂದ ಇಂಡಿಯಾದ ಸರಕಾರಗಳ ಸಖ್ಯಗಳು; ಇವೆಲ್ಲಾ ಮುಖ್ಯ ಕಾರಣವಾಗಿವೆ.
ಇಂದು
ಈ ಶಕ್ತಿಗಳಿಗೆ ಹಿಂದೆಲ್ಲಾ
ಪ್ರತಿಪಾದಿಸುತ್ತಿದ್ದ ಪ್ರಜಾಪ್ರಭುತ್ವ ಪದ್ಧತಿಯ ಕಾನೂನು ಕಟ್ಟಳೆಗಳನ್ನು ಮೇಲ್ಮಟ್ಟದಲ್ಲೂ ಕೂಡ
ಪಾಲಿಸಲು ಸಾಧ್ಯವಾಗದಿರುವುದು ಜಾಗತಿಕ ವಿದ್ಯಮಾನವಾಗಿ ನಮಗೆ ಕಾಣುತ್ತಿದೆ. ಅದು ಅವರು ಇಂದು
ಎದುರಿಸುತ್ತಿರುವ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ. ತಮ್ಮ ಕಾರ್ಪೊರೆಟ್
ಸಂಕಷ್ಟಗಳನ್ನು ನೀಗಿಸಿಕೊಳ್ಳಲು ಅವರಿಗೆ ಬೇಕಾದ ವ್ಯವಸ್ಥೆಯೊಂದನ್ನು ಅವರುಗಳು ರೂಪಿಸ
ತೊಡಗಿದ್ದಾರೆ. ಅಲ್ಲಿ ಅವರಿಗೆ ಹತ್ತು ಹಲವು
ಕಾನೂನುಗಳ ಅಡ್ಡಿ ಆತಂಕಗಳಿರಬಾರದು. ಅದೇ ನಿರಂಕುಶ ಫ್ಯಾಸಿಸ್ಟ್ ವ್ಯವಸ್ಥೆ. ಅದರಲ್ಲಿ ತಮ್ಮ
ಪಾಲು ಪಡೆಯಲು ಬಹುತೇಕವಾಗಿ ಚುನಾವಣೆಗಳಿಗೆ ಮಾತ್ರ ಇರುವ ರಾಜಕೀಯ ಪಕ್ಷಗಳು
ಶ್ರಮಿಸುತ್ತಿರುವುದನ್ನು ನಾವೀಗ ನೋಡುತ್ತಿದ್ದೇವೆ. ಅದರಲ್ಲಿ ಬಿ.ಜೆ.ಪಿ ಮತ್ತು ಕಾಂಗ್ರೆಸ್
ಮುಂಚೂಣಿಯಲ್ಲಿವೆ.
ದೇಶ
ಮುಂದಿನ ವರ್ಷ ಚುನಾವಣೆಗೆ ಹೋಗುತ್ತಿದೆ. ಆ ಸಮಯದೊಳಗೆ ಏನು ಬೇಕಾದರೂ ಸಂಭವಿಸುವ ಸಾದ್ಯತೆಗಳು
ಕಾಣುತ್ತಿವೆ. ಪ್ರಭಾವಿ ರಾಜಕಾರಣಿಗಳು, ಪ್ರಭಾವಿ ಮಠಾಧೀಶರಂತಹ ವ್ಯಕ್ತಿಗಳು ನ್ಯಾಯಾಂಗಕ್ಕೇ
ನಿರ್ದೇಶನ ನೀಡುತ್ತಾ ಇಂತಿಂತಹ ಕೆಲಸಗಳನ್ನು ಮಾಡಬಾರದು, ಮಾಡಬೇಕು ಎಂದು ಬಹಿರಂಗವಾಗಿ ಕರೆ
ಕೊಡಲು ಶುರು ಮಾಡಿದ್ದಾರೆ. ನ್ಯಾಯಾಂಗದ ಪರಿಧಿಯನ್ನು ತೀರ್ಮಾನಿಸುತ್ತಿದ್ದಾರೆ. ರಾಮ, ಹನುಮಂತ,
ಅಯ್ಯಪ್ಪ, ಮಂದಿರ, ಮಸೀದಿ, ಚರ್ಚ್ ನಂತಹ ಜನರ ನಂಬಿಕೆಗಳನ್ನು ಎತ್ತಿಕೊಂಡು ಭಾವನಾ ರಾಜಕಾರಣದಡಿ
(emotional politics) ಜನಸಾಮಾನ್ಯರನ್ನು ಮುಳುಗಿಸಿಡಲು ನಿರಂತರವಾಗಿ ಪ್ರಯತ್ನಿಸುತ್ತಲೇ
ಇದ್ದಾರೆ. ಕೋಮುಗಲಭೆ ಹುಟ್ಟುಹಾಕಿ ಕೋಮುದೃವೀಕರಣಗಳನ್ನು ಮಾಡುತ್ತಾ ಅದರ ಆರ್ಥಿಕ ಹಾಗೂ ರಾಜಕೀಯ
ಸೂಪರ್ ಲಾಭಗಳನ್ನು ಆಳುತ್ತಿರುವ ಪಡೆಯುತ್ತಿವೆ.
ಕೋರೆಗಾಂವ್ ಗಲಭೆ ಹಾಗೂ ಕೊಲೆಗಳಿಗೆ ಕಾರಣರಾಗಿದ್ದವರ
ಮೇಲೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸದೇ ಆರೋಪ ಪಟ್ಟಿಯಿಂದ ಹೊರಗಿಟ್ಟು ಬದಲಿಗೆ ದಲಿತ ದಮನಿತ ಪರವಾಗಿ ಕಾರ್ಯ
ನಿರ್ವಹಿಸುತ್ತಿದ್ದ ಪ್ರಜಾತಂತ್ರವಾದಿಗಳು, ಬುದ್ದಿಜೀವಿಗಳನ್ನು ಕೋರೆಗಾಂವ್ ಗಲಭೆಗೆ ಕಾರಣರೆಂದು
ಬಂಧಿಸಿಡಲಾಗಿದೆ. ಅವರಿಗೆ ಸಹಜವಾಗಿ ದೊರೆಯಬೇಕಾಗಿದ್ದ ಜಾಮೀನು ಕೂಡ ನೀಡದಂತೆ
ನೋಡಿಕೊಳ್ಳಲಾಗುತ್ತಿದೆ. ಕೇವಲ ಮೂವರಿಗೆ ಮಾತ್ರ ಹಲವು ವರುಷಗಳ ಸೆರವಾಸದ ನಂತರ ಕಠಿಣ
ಶರತ್ತುಬದ್ದ ಜಾಮೀನು ದೊರಕಿದೆ. ನಂತರ ಜನರ ಒತ್ತಡದಿಂದಾಗಿ ಕೋರೆಗಾಂವ್ ಗಲಭೆಯ ರೂವಾರಿಗಳಲ್ಲಿ
ಕೆಲವರ ಮೇಲೆ ದೂರು ದಾಖಲಾಗಿದ್ದರೂ ಅವರಿಗೆಲ್ಲಾ ಸುಲಭವಾಗಿ ಜಾಮೀನು ನೀಡಿ ತನಿಖೆಯ ಹಾದಿಯನ್ನು
ತಪ್ಪಿಸುತ್ತಾ ಬರಲಾಗುತ್ತಿದೆ.
ಈಗ
ಬ್ರಿಟ್ಟನ್ ವುಡ್ಸ್, ಡಂಕೆಲ್, ಗ್ಯಾಟ್ ಒಪ್ಪಂದಗಳ ಬಗ್ಗೆ ಹಲವರಿಗೆ ಅಷ್ಟಾಗಿ
ಗೊತ್ತಿಲ್ಲದಿದ್ದರೂ ವರ್ಲ್ಡ್ ಟ್ರೇಡ್ ಆರ್ಗನೈಜೇಷನ್ ಬಗ್ಗೆ, ಜಾಗತೀಕರಣಗಳ ಬಗ್ಗೆ ಸಾಕಷ್ಟು
ಜನರಿಗೆ ಗೊತ್ತಿದೆ. ಯಾಕೆಂದರೆ ಜಾಗತೀಕರಣದಿಂದ ಜನಸಾಮಾನ್ಯರ ಬದುಕೇ ಬಂಗಾರವಾಗುತ್ತದೆ,
ಉದ್ಯೋಗಾವಕಾಶಗಳ ಮಹಾಪೂರವೇ ಹರಿದು ಬರುತ್ತದೆ, ಇಂಡಿಯಾ ವಿಶ್ವದಲ್ಲೇ ದೊಡ್ಡ ಆರ್ಥಿಕ
ಶಕ್ತಿಯಾಗುತ್ತದೆ…. ಹೀಗೆಲ್ಲಾ ಬಿಂಬಿಸಿ ಯುವಜನರನ್ನು 30 ವರ್ಷಗಳಿಗೂ ಹಿಂದೆ ಇಲ್ಲಿನ ಸರಕಾರವೇ
ಯಾಮಾರಿಸಿತ್ತು. ಇದಕ್ಕೆ ಪೂರಕವಾಗಿ ಅಂತರಾಷ್ಟ್ರೀಯ ಹಣಕಾಸು ನಿಧಿ, (ಐಎಂಏಫ್), ಏಷಿಯನ್ ಡೆವಲಪ್
ಮೆಂಟ್ ಬ್ಯಾಂಕ್, ವಿಶ್ವಸಂಸ್ಥೆ ಯಂತಹ ಜಾಗತಿಕ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಇಂಡಿಯಾದ ಬಗ್ಗೆ
ಭಾರಿ ಆರ್ಥಿಕ ಬೆಳವಣಿಗೆಯ ವರದಿಗಳನ್ನು ಪ್ರಕಟಿಸತೊಡಗಿದ್ದವು. ಮದ್ಯಮ ವರ್ಗದ ದೊಡ್ಡ ಸಂಖ್ಯೆಯ ಜನರು ಅದನ್ನು ಪೂರ್ಣವಾಗಿ ನಂಬಿಬಿಟ್ಟಿದ್ದರು. ಆರಂಭದ ಕೆಲ ವರ್ಷಗಳಲ್ಲಿ ಕೆಲವರಿಗೆ ಸಿಕ್ಕ
ಅವಕಾಶಗಳನ್ನು ನೋಡಿ ಭಾರಿ ಸಂಖ್ಯೆಯ ಮದ್ಯಮ ವರ್ಗದ ಯುವಸಮೂಹ ಹುಚ್ಚೆದ್ದು ಕುಣಿಯಲು ಶುರುವಾಗಿತ್ತು. ಆದರೆ ಆ ಉಬ್ಬಿದ್ದ ಬಲೂನು ಕೆಲವೇ ವರುಷಗಳಲ್ಲಿ ಒಡೆದು ಯುವ ಸಮೂಹದ
ಭರವಸೆಗಳು ನೆಲಕಚ್ಚಿದ್ದವು. ಭಾರಿ ಪ್ರಚಾರಿತ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಜಾಗತಿಕ
ಬಿಕ್ಕಟ್ಟಿಗೆ ಒಳಗಾಗಿ ಮೊದಲಿನ ಅವಕಾಶಗಳೆಲ್ಲಾ ಇಲ್ಲದಾಯಿತು. ಅವಕಾಶ ವಂಚಿತ ಅತೃಪ್ತ ಮೇಲ್ಜಾತಿ
ಮೇಲ್ವರ್ಗದ ಹಾಗೂ ಮದ್ಯಮ ವರ್ಗದ ಒಂದು ದೊಡ್ಡ ಜನಸಮೂಹ ದಲಿತರು, ಮುಸ್ಲಿಮರು,
ಹಿಂದುಳಿದವರಿಂದಾಗಿಯೇ ತಮಗೆ ಈ ಗತಿ ಬಂದಿದೆ ಎಂಬ ಹಸಿಸುಳ್ಳುಗಳನ್ನು ಆವಾಹಿಸಿಕೊಂಡಿದೆ. ಈಗ ಸರ್ವಾಧಿಕಾರವನ್ನು ಎತ್ತಿಹಿಡಿಯುತ್ತಾ ಮೋದಿಯ
ಬಿಜೆಪಿಯ ದೊಡ್ಡ ಬೆಂಬಲಿಗರಾಗಿ ಮಾರ್ಪಟ್ಟಿದ್ದಾರೆ. ಅಂದರೆ ಈಗ ಆಳುವ ಶಕ್ತಿಗಳು ಜನಸಾಮಾನ್ಯರ
ಮೇಲೆ ಹೇರಲು ಬಯಸುತ್ತಿರುವ ಫ್ಯಾಶಿಸ್ಟ್ ನಿರಂಕುಶಾಧಿಕಾರಕ್ಕೆ ಜನರ ಮದ್ಯೆಯೇ ಬೆಂಬಲಿಗರನ್ನು
ಸೃಷ್ಟಿಸಿಕೊಳ್ಳಲು ಹಿಂದಿನಿಂದ
ಆಡಳಿತ ನಡೆಸಿಕೊಂಡು ಬಂದ ಸರಕಾರಗಳು ಎಲ್ಲಾ ಸಹಾಯ ಮಾಡಿವೆ ಎನ್ನಬಹುದು.
ಬ್ರಿಟ್ಟನ್
ವುಡ್ಸ್ ಸಂಸ್ಥೆಗಳೂ ಸೇರಿದಂತೆ ಗ್ಯಾಟ್, ಡಂಕೆಲ್, ವರ್ಲ್ಡ್ ಟ್ರೇಡ್ ಆರ್ಗನೈಜೇಷನ್ ಮೊದಲಾದ
ಸಂಸ್ಥೆಗಳ ಒಪ್ಪಂದಗಳಿಗೆ ಸಹಿ ಹಾಕುವ ಮೊದಲು ಸಂಸತ್ತಿನಲ್ಲಿ ಚರ್ಚೆಗೇ ಇಟ್ಟಿರಲಿಲ್ಲ ಆಗಿನ
ಕಾಂಗ್ರೆಸ್ ಸರಕಾರ. ಅಂದರೆ ಸಂವಿಧಾನ ಹಾಗೂ
ಸಾಂವಿಧಾನಿಕ ಸಂಸ್ಥೆಗಳನ್ನು ಹೊರಗಿಟ್ಟು ದೇಶದ ಸಾರ್ವಭೌಮತೆಗೇ ಹಾನಿಯಾಗುವಂತಹ ಹತ್ತು ಹಲವು
ಒಪ್ಪಂದಗಳಿಗೆ ಹಿಂದಿನ ಸರಕಾರಗಳು ಸಹಿ ಮಾಡುತ್ತಾ ಬಂದಿದ್ದವು ಎನ್ನುವುದನ್ನು ನಾವಿಲ್ಲಿ
ಸರಿಯಾಗಿ ಗುರ್ತಿಸಬೇಕು.
ಜಾಗತೀಕರಣ,
ಜಾಗತಿಕ ಹಳ್ಳಿ, ಎಂಬ ಮೋಹಕ ಶಬ್ದಗಳ ಮೂಲಕ ಜನಸಾಮಾನ್ಯರನ್ನು ಯಾಮಾರಿಸಲು ಆಗಿನ ಸರಕಾರಗಳು ಬಳಸಿದ
ತಂತ್ರಗಳು ಒಂದೆರಡೇನಲ್ಲ. ಅಂದರೇ ಜಾಗತೀಕರಣದ ಹೆಸರಿನಲ್ಲಿ ಉದಾರೀಕರಣ ನೀತಿ ಅನುಸರಿಸಿದ್ದು
ಕೆಲವೇ ಕಾರ್ಪೋರೇಟುಗಳು ಬಹುಸಂಖ್ಯಾತ ಜನಸಾಮಾನ್ಯರ ದುಡಿಮೆಯ ಗಳಿಕೆಯನ್ನು ಕಬಳಿಸಲು ಅನುಕೂಲ
ಮಾಡಿಕೊಡಲು ಎನ್ನುವುದು ಈಗ ಸ್ಪಷ್ಟವಾಗಿ ಕಾಣತೊಡಗಿದೆ. ಇವೆಲ್ಲದರ ಹಿಂದೆ ಹಿಂದಿನ ಸರಕಾರಗಳು
ನೇರವಾಗಿಯೇ ಇವೆ. ಹಾಗಾಗಿಯೇ ಈಗ ಮುಖೇಶ್ ಅಂಬಾನಿ, ಅದಾನಿಯಂತಹವರನ್ನು ಒಳಗೊಂಡ ಕಾರ್ಪೋರೇಟ್ ಕೂಟ
ದೇಶದ ಎಲ್ಲವನ್ನೂ ತಮ್ಮ ನೇರ ನಿಯಂತ್ರಣಕ್ಕೆ ಈಗ ಒಳಪಡಿಸಲು ಸಾಧ್ಯವಾಗಿದ್ದು.
ಈಗ
ನಮ್ಮದು ಅಂತ ಹೇಳಿಕೊಳ್ಳುವ ಯಾವ ಕ್ಷೇತ್ರವೂ ನಮ್ಮ ದೇಶದ ಸರಕಾರದ ಹಿಡಿತದಲ್ಲಿ ಇಲ್ಲದಂತಾಗಿವೆ
ಎನ್ನುವುದೇ ಹಸಿ ಸತ್ಯ. ಕೃಷಿ, ಶಿಕ್ಷಣ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಹಾಗೂ ವಿತರಣೆ,
ಆರೋಗ್ಯ, ಬ್ಯಾಂಕಿಂಗ್, ವಿಮೆ, ರಸ್ತೆ,
ರಕ್ಷಣಾ ಕ್ಷೇತ್ರವನ್ನೊಳಗೊಂಡಂತೆ ಎಲ್ಲವೂ ಜಾಗತಿಕ ಹಿತಾಸಕ್ತಿಯ ಭಾರಿ ಕಾರ್ಪೋರೇಟುಗಳೇ ನಿಯಂತ್ರಿಸುತ್ತಿದ್ದಾರೆ.
ಜಾಗತಿಕ
ಹಣಕಾಸು ಹಾಗೂ ರಾಜಕೀಯ ಸಂಸ್ಥೆಗಳು ಸರಕಾರಗಳು ಯಾವುದೇ ಉತ್ಪಾದನಾ ಚಟುವಟಿಕೆ, ಜನಕಲ್ಯಾಣ
ಯೋಜನೆಗಳು, ನಾಗರಿಕ ಸೌಲಭ್ಯ ನೀಡಿಕೆ ಇತ್ಯಾದಿ ಚಟುವಟಿಕೆಗೆಗಳಲ್ಲಿ ತೊಡಗದೇ ಕೇವಲ
ಮೇಲುಸ್ತುವಾರಿಯ ಮಟ್ಟದಲ್ಲಿ ಮಾತ್ರ ಕಾರ್ಯ ನಿರ್ವಹಿಸಬೇಕು. ಸರಕಾರ ಜನಸಾಮಾನ್ಯರಿಗಾಗಿ ಮಾಡುವ
ವೆಚ್ಚಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಎಲ್ಲವನ್ನೂ ಕಾರ್ಪೋರೇಟ್ ಶಕ್ತಿಗಳಿಗೆ
ಮುಕ್ತವಾಗಿಡಬೇಕು… ಎಂದೆಲ್ಲಾ ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳ ಭಾಗವಾಗಿ ಭಾರಿ ಒತ್ತಡ
ತಂತ್ರಗಳನ್ನು ತೀವ್ರಗೊಳಿಸುತ್ತಾ ಸಾಗಿವೆ. ಈ ಎಲ್ಲಾ ಶರತ್ತುಗಳು ಪ್ರಜಾಪ್ರಭುತ್ವ
ನೆಲೆನಿಲ್ಲಲು, ಪ್ರಜಾತಾಂತ್ರಿಕತೆ ಬೆಳೆಯಲು ಮಾರಣಾಂತಿಕವಾದ ಹೊಡೆತಗಳನ್ನು ನೀಡುತ್ತಿದೆ.
ಜಾಗತಿಕವಾಗಿ ಹಲವು ಸರಕಾರಗಳು ವಿಶ್ವ ಬ್ಯಾಂಕ್,
ಅಂತರಾಷ್ಟ್ರೀಯ ಹಣಕಾಸು ನಿಧಿ ಮೊದಲಾದ ಜಾಗತಿಕ ಹಣಕಾಸು ಸಂಸ್ಥೆಗಳಿಂದ ಅಸಮಾನ ಶರತ್ತುಗಳಿಗೆ
ಒಪ್ಪಿ ಸಹಿಹಾಕಿ ಭಾರಿ ಮಟ್ಟದಲ್ಲಿ ಸಾಲಗಳನ್ನು ತೆಗೆದುಕೊಳ್ಳುತ್ತಾ ಸಾಗುತ್ತಿರುವುದರಿಂದಾಗಿ
ಪ್ರಜಾಪ್ರಭುತ್ವದ ಅವಕಾಶಗಳನ್ನು ಮೊಟಕುಗೊಳಿಸುತ್ತಾ ಸಾಗಲಾಗುತ್ತಿದೆ. ಪಕ್ಕದ ಶ್ರೀಲಂಕಾ,
ಪಾಕಿಸ್ತಾನ, ಪೆರು, ಯೂರೋಪಿನ ಯುನೈಟೆಡ್ ಕಿಂಗ್ ಡಂ ನಂತಹ ದೇಶಗಳು ದಿವಾಳಿಯತ್ತ ಸಾಗಿ
ಜನಸಾಮಾನ್ಯರ ದಂಗೆಗಳನ್ನು ಕಾಣುವಂತಾಗಿದ್ದು ಪ್ರಧಾನವಾಗಿ ಇವೇ ಕಾರಣಗಳಿಂದಾಗಿ ಎನ್ನುವುದನ್ನು
ನಾವಿಲ್ಲಿ ಗಮನಿಸಬೇಕಾಗಿದೆ. ಇದೀಗ ಜಾಗತಿಕವಾಗಿ ಮೊದಲ ಸ್ಥಾನದ ಆರ್ಥಿಕತೆಯಾಗಿದ್ದ ಅಮೇರಿಕ
ಸಂಯುಕ್ತ ಸಂಸ್ಥಾನ ಭಾರಿ ಸಾಲದ ಸುಳಿಗೆ ಸಿಲುಕಿ ತನ್ನ ಸೇನೆ ಹಾಗೂ ನೌಕರರಿಗೆ ಸಂಬಳ ನೀಡಲು ಕೂಡ
ಮತ್ತಷ್ಟು ಸಾಲ ವಿಸ್ತರಿಸಬೇಕಾದ ಪರಿಸ್ಥಿತಿ ತಲುಪಿರುವ ವರದಿಗಳು ಬರುತ್ತಿವೆ. ಇವೆಲ್ಲದರ
ಪರಿಣಾಮಗಳು ಜಾಗತಿಕವಾಗಿ ಪ್ರಜಾಪ್ರಭುತ್ವ ನೆಲಗೊಳ್ಳಲು ಅಡ್ಡಿ ಆತಂಕಗಳನ್ನು ಸೃಷ್ಟಿಸುತ್ತವೆ.
ಇಂಡಿಯಾ
ಕೂಡ ಜಾಗತಿಕ ಹಣಕಾಸು ಹಾಗೂ ರಾಜಕೀಯ ಸಂಸ್ಥೆಗಳ ಹಿಡಿತಗಳಲ್ಲೇ ಸಾಗುತ್ತಾ ಬರುತ್ತಿದೆ. 2022ರ
ಮಾರ್ಚ್ ಕೊನೆಯ ವೇಳೆಗೆ ಇಂಡಿಯಾದ ಬಾಹ್ಯ ಸಾಲ 620 ಬಿಲಿಯನ್ ಅಮೇರಿಕನ್ ಡಾಲರುಗಳು ಎಂದು
ಯೂನಿಯನ್ ಸರಕಾರದ ಹಣಕಾಸು ಸಚಿವಾಲಯವೇ ಹೇಳುತ್ತಿದೆ. (ಒಂದು ಡಾಲರಿನ ಬೆಲೆ ಇಂದು ಇಂಡಿಯಾದ
ಸುಮಾರು 83 ರೂಪಾಯಿಗಳಾಗಿವೆ. ಒಂದು ಬಿಲಿಯನ್ ಎಂದರೆ ಒಂದು ನೂರು ಕೋಟಿಗಳು ಎಂದಾಗುತ್ತದೆ.) ಸಾಲ ಏರುಗತಿಯಲ್ಲೇ ಸಾಗುತ್ತಿದೆ. 2021ರಲ್ಲಿ ಇಂಡಿಯಾದ
ಸಾಲ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 84 ರಷ್ಟು ಇದೆ ಎಂದು 2023ರ ಆರ್ಥಿಕ ಸಮೇಕ್ಷೆ
2022-2023 ರ ವರದಿ ಹೇಳುತ್ತಿದೆ. ಇದು ದೇಶದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ನೆಲೆಯೂರಿ
ನಿಲ್ಲಲು ಬಹಳ ದೊಡ್ಡ ತಡೆಯಾಗಿದೆ.
ಇಂಡಿಯಾದಲ್ಲಿ
ಇದುವರೆಗೂ ಆಳುವ ಶಕ್ತಿಗಳು ಸಂವಿಧಾನವನ್ನು ಬಳಸಿಕೊಂಡು ತಮ್ಮ ಹಿತಾಸಕ್ತಿಗಳನ್ನು
ಕಾಪಾಡಿಕೊಳ್ಳುತ್ತಾ ದೇಶದ ಜನಸಾಮಾನ್ಯರನ್ನು ಯಾಮಾರಿಸುತ್ತಿದ್ದರು. ಆದರೆ ಇಂದು ಆರ್ಥಿಕ
ಬಿಕ್ಕಟ್ಟು ವಿಪರೀತವಾಗಿರುವುದರಿಂದ ಜನಸಾಮಾನ್ಯರ ಗಳಿಕೆಯೆಲ್ಲವನ್ನೂ ತಮ್ಮ ಜೇಬಿಗೆ
ಇಳಿಸಿಕೊಳ್ಳುವ ದಾವಂತ ಅವರಿಗಿದೆ. ಹಾಗಾಗಿ ಸಂವಿಧಾನವನ್ನು ಸಾಂವಿಧಾನಿಕ ಸಂಸ್ಥೆಗಳನ್ನು ಅವರಿಗೆ
ಮುಂಚಿನಷ್ಟು ಅನುಕೂಲಕರವಾಗಿ ಉಪಯೋಗಿಸಲು ಒಂದಷ್ಟು ತಡೆಗಳಿವೆ. ಹಾಗಾಗಿ ಸಂವಿಧಾನ ಹಾಗೂ
ಸಾಂವಿಧಾನಿಕ ಸಂಸ್ಥೆಗಳನ್ನೇ ಇಲ್ಲದಂತೆ ಮಾಡುತ್ತಿದ್ದಾರೆ. ಅದಕ್ಕೆ ಇತ್ತೀಚಿನ ಸರ್ವೋಚ್ಚ
ನ್ಯಾಯಾಲಯ ಎದುರಿಸುತ್ತಿರುವ ಬಿಕ್ಕಟ್ಟು ಒಂದು ಉದಾಹರಣೆಯಾಗಿದೆ. ನ್ಯಾಯಾಧೀಶರ ನೇಮಕಗಳಲ್ಲಿನ ಬಿಕ್ಕಟ್ಟುಗಳು, ಬಾಬರೀ
ಮಸೀದಿ ಧ್ವಂಸ, ಅಯೋಧ್ಯೆ ರಾಮ ಮಂದಿರ, ಗೋಧ್ರಾ ಹತ್ಯಾಕಾಂಡ, ಗ್ಯಾನ್ ವ್ಯಾಪಿ ಮಸೀದಿ ಇತ್ಯಾದಿ
ಪ್ರಮುಖ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಇವೆಲ್ಲವನ್ನೂ ಗಮನಿಸಬಹುದು.
ಇಂಡಿಯಾ ದೇಶ
ಸಂದಿಗ್ಧ ಘಟ್ಟದಲ್ಲಿ ಹಾದು ಹೋಗಲು ತೊಡಗಿ ಹಲವು ದಶಕಗಳೇ
ಕಳೆದಿವೆ. ಜಾಗತೀಕರಣದ ದಾಳಿ ಆರಂಭವಾದಾಗಿನಿಂದಲೇ ಇಂಡಿಯಾದ ಅದುವರೆಗೂ ಇದ್ದ ಒಂದು ಮೇಲು ಮಟ್ಟದ
ಸ್ವಾಯತ್ತತೆ ಹಾಗೂ ಸ್ಥಳೀಯ ಆರ್ಥಿಕ ವ್ಯವಹಾರಗಳೆಲ್ಲಾ ಭಾರಿ ಬಹುರಾಷ್ಟ್ರೀಯ ಕಂಪನಿಗಳ ಕಡೆಗೆ
ಸರಿಸುವ ಪ್ರಕ್ರಿಯೆ ವೇಗ ಪಡೆಯಿತು. ಜಾಗತೀಕರಣದ ನಂತರದ ಮೂರು ದಶಕಗಳಲ್ಲಿ ಆರಂಭದ ಸುಮಾರು ಹತ್ತು
ವರ್ಷಗಳು ಅಂತರ್ಜಾಲ, ಮಾಹಿತಿ ತಂತ್ರಜ್ಞಾನ ನಂತರ ಜೈವಿಕ ತಂತ್ರಜ್ಞಾನ ಅಗಾಧ ಅಭಿವೃದ್ಧಿಯ
ಅವಕಾಶಗಳನ್ನು ಬಿಂಬಿಸಿತ್ತು. ಆದರೆ ನಂತರ ಮಾಹಿತಿ ತಂತ್ರಜ್ಞಾನದ ಗುಳ್ಳೆ ಒಡೆದು ಹೋಗಿ
ಅದರಲ್ಲಿದ್ದ ಉದ್ಯೋಗಾವಕಾಶಗಳು ತೀವ್ರ ಕುಸಿತಕ್ಕೆ ಒಳಗಾಯಿತು. ಸಾವಿರಾರು ಉದ್ಯೋಗಿಗಳು
ನಿರುದ್ಯೋಗಿಗಳಾದರು. ಹಲವಾರು ಕಳ್ಳತನ ದರೋಡೆಗಳಲ್ಲಿ ತೊಡಗಿದವರಲ್ಲಿ ಹಲವರು ಐಟಿ ಉದ್ಯೋಗಿಗಳೂ
ಇದ್ದರು ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಈಗ ಮಾಹಿತಿ ತಂತ್ರಜ್ಞಾನ
ಕ್ಷೇತ್ರ ಕೆಲವೇ ಕಂಪನಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದೆ. ಏಕಸ್ವಾಮ್ಯ ಹಿಡಿತ ಎಂದರೆ ಅಭಿವೃದ್ಧಿಯ
ಕುಸಿತವೆಂದೇ ಅರ್ಥ ಮಾಡಿಕೊಳ್ಳಬೇಕಾಗಿದೆ.
ಜಾಗತೀಕರಣದ
ಮೊದಲು ಕಾರು, ರೆಫ್ರಿಜರೇಟರುಗಳು,
ಬೈಕು, ಸ್ಕೂಟರುಗಳು, ವಾಷಿಂಗ್ ಮೆಷಿನ್, ಟಿವಿ ಇತ್ಯಾದಿಗಳಲ್ಲಿ ಗ್ರಾಹಕರಿಗೆ ಹೆಚ್ಚು
ಆಯ್ಕೆಗಳಿರಲಿಲ್ಲ. ಜಾಗತೀಕರಣದ ನಂತರ ಈ ರೀತಿಯ ಉಪಭೋಗಿ ವಸ್ತುಗಳು ಸ್ಪರ್ಧಾತ್ಮಕ ದರಗಳಲ್ಲಿ
ಗ್ರಾಹಕರಿಗೆ ದೊರೆಯತೊಡಗಿದವು. ಕೃಷಿ ಇತ್ಯಾದಿ ಉತ್ಪಾದನಾ
ಚಟುವಟಿಕೆಗಳಿಗಿಂತಲೂ ಹೆಚ್ಚು ಸಾಲಗಳು ಈ ರೀತಿಯ ಉಪಭೋಗಿ ವಸ್ತುಗಳ ಖರೀದಿಗೆ ಸಿಗತೊಡಗಿದವು.
ಅಂದರೆ ಮಧ್ಯಮವರ್ಗಗಳ ಉಪಭೋಗಿ ಆಸೆಗಳಿಗೆ ಜಾಗತೀಕರಣ ಗೊಬ್ಬರ ಎರೆದು ಪೋಷಿಸುತ್ತಾ ಕೃತಕ
ಅಭಿವೃದ್ಧಿಯ ಮಂಪರಿನಲ್ಲಿ ಬೀಳಿಸಿಟ್ಟರು. ನಂತರ ಪೇಜರ್, ಮೊಬೈಲ್, ಸ್ಮಾರ್ಟ್ ಫೋನ್, 3 ಜಿ, 4 ಜಿ, 5 ಜಿ, ಸ್ಟಾರ್ಟ್ ಅಪ್, ಹೊಸ
ಹೊಸ ಬ್ರಾಂಡ್ ಗಳ ಅವಶ್ಯಕವಲ್ಲದ ವಿವಿಧ ಅನುಭೋಗಿ ಉತ್ಪನ್ನಗಳು ಹೀಗೆ ಬೆಳೆದು ಅದೇ ಹುಸಿ
ಮಂಪರಿನಲ್ಲಿಯೇ ಮಧ್ಯಮ ವರ್ಗ ಹಾಗೂ ಯುವ
ಸಮೂಹವನ್ನು ಮುಳುಗಿಸಿಡಲಾಯಿತು.
ಜೈವಿಕ
ತಂತ್ರಜ್ಞಾನದಡಿ ನಮ್ಮ ದೇಶದ ಬೀಜ ಸಂಪತ್ತು ತಳಿ ಸಂಪತ್ತು ಬಹುತೇಕವಾಗಿ ಭಾರಿ ಜಾಗತಿಕ ಕಾರ್ಪೋರೇಟುಗಳ
ಪಾಲಾಯಿತು. ಮಾನ್ಸಾಂಟೋ, ಅಡ್ ವಾಂತಾ, ಮಹಿಕೋದಂತಹ ಭಾರಿ ಜಾಗತಿಕ ಕೃಷಿ ಕಂಪನಿಗಳೇ ಸ್ಥಳೀಯ
ಬೀಜಗಳು, ತಳಿಗಳ ಮೇಲೆ ಬಹುತೇಕವಾಗಿ ಏಕಸ್ವಾಮ್ಯ ಸಾಧಿಸಿದವು. ತಳಿ ತಂತ್ರಜ್ಞಾನದ ಮೂಲಕ
ಮೊಳಕೆಯೊಡೆಯುವ ಬೀಜಗಳ ಸಹಜ ಗುಣಗಳ ಮೇಲೆ ಕೂಡ ಹಿಡಿತ ಸಾಧಿಸಿದವು. ರೈತರು ಅನಿವಾರ್ಯವಾಗಿ
ಬಿತ್ತನೆ ಬೀಜಗಳಿಗಾಗಿ ಇಂತಹ ಕಂಪನಿಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ಹೇರಲಾಯಿತು.
ಸ್ಥಳೀಯ ಬೀಜೋತ್ಪತ್ತಿ ಇನ್ನಿಲ್ಲದಂತೆ ನೆಲಕಚ್ಚಿ ಕುಳಿತವು. ಗೊಬ್ಬರ ಹಾಗೂ ಇನ್ನಿತರ ಕೃಷಿ
ಸಂಬಂಧಿತ ವಸ್ತುಗಳ ಮೇಲಿನ ಸಹಾಯ ಧನಗಳು ಇನ್ನಿತರ ರಿಯಾಯ್ತಿಗಳು ಕಡಿಮೆ ಮಾಡುತ್ತಾ ಬರಲಾಯಿತು.
ಈಗ ಅದು ಕನಿಷ್ಠ ಮಟ್ಟಕ್ಕೆ ತಂದಿಟ್ಟಿದ್ದಾರೆ.
ಕೃಷಿ
ಬಿಕ್ಕಟ್ಟು ತೀವ್ರಗೊಂಡ ಪರಿಣಾಮ ಲಕ್ಷಾಂತರ ರೈತರು ಆತ್ಮಹತ್ಯೆಗಳ ದಾರಿ ಹಿಡಿದರು. ತೀರಾ
ಹಿಂದುಳಿದ ಪ್ರದೇಶಗಳಾದ ಕರ್ನಾಟಕದ ಹೈದರಾಬಾದ್ ಕರ್ನಾಟಕ, ಮಹಾರಾಷ್ಟ್ರದ ವಿದರ್ಭ, ಆಂದ್ರದ
ತೆಲಂಗಾಣ, ಮಾತ್ರವಲ್ಲದೇ ನೀರಾವರಿ ಸೌಲಭ್ಯಗಳಿರುವ ಮುಂದುವರೆದ ಪ್ರದೇಶವೆನಿಸಿಕೊಂಡಿರುವ
ಪಂಜಾಬ್, ಹರ್ಯಾಣದಂತಹ ರಾಜ್ಯಗಳು, ಕರ್ನಾಟಕದ ಮುಂದುವರೆದ ಭಾಗಗಳೆಂದುಕೊಂಡಿರುವ ಮಂಡ್ಯ,
ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲೂ ರೈತರ ಆತ್ಮಹತ್ಯೆಗಳು ಆಗಿವೆ. ಅದು ಈಗಲೂ
ಮುಂದುವರೆಯುತ್ತಿದೆ. ಒಂದು ಅಂದಾಜಿನ ಪ್ರಕಾರ
ದೇಶಾದ್ಯಂತ 7 ಲಕ್ಷಕ್ಕೂ ಹೆಚ್ಚು ರೈತರು ಆರ್ಥಿಕ ಸಂಕಷ್ಟಗಳಿಂದಾಗಿ ತಮ್ಮ ಜೀವಗಳನ್ನು
ಕೊನೆಗೊಳಿಸಿದರು. ಅವರುಗಳ ಕುಟುಂಬಗಳು ಅನಾಥವಾದವು. ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ
ಹೆಚ್ಚಾಗಿರುವ ಸಾಧ್ಯತೆಗಳೇ ಹೆಚ್ಚಿವೆ. ಈ ದುರಂತ ಈಗಲೂ ಮುಂದುವರೆಯುತ್ತಿದೆ. ಆದರೆ ಸರಿಯಾಗಿ
ವರದಿಯಾಗದೇ ಹೋಗುತ್ತಿದೆ. ಈ ರೀತಿಯ ವ್ಯವಸ್ಥೆ ಮಾಡುತ್ತಿರುವ ಕಗ್ಗೊಲೆಗಳ ಸರಿಯಾದ ಅಂಕಿ
ಅಂಶಗಳನ್ನು ಕೂಡ ಸಂಗ್ರಹಿಸಿ ಇಡುವ ಕಾರ್ಯ ಈಗ ನಿಂತು ಹೋಗಿದೆ.
ಜಾಗತೀಕರಣದ
ನಂತರ ಕೃಷಿಕರ ಮೇಲಾದ ಕೆಲವು ಕ್ರೂರ ಪರಿಣಾಮಗಳಿವು. ಇನ್ನು ಕೃಷಿ ಹಿಡುವಳಿಗಳು ಹಿಂದಿಗಿಂತಲೂ
ಕಡಿಮೆಯಾಗಿದೆ. ಹಳೆಯ ಭಾರಿ ಭೂ ಮಾಲಿಕರ ಜೊತೆಗೆ ಭಾರಿ ಕಾರ್ಪೋರೇಟುಗಳು ಲಕ್ಷಾಂತರ ಹೆಕ್ಟೇರುಗಳ
ಭೂಮಿಯ ಮೇಲೆ ವಿವಿಧ ನೆಪಗಳಲ್ಲಿ ಹಿಡಿತ
ಸಾಧಿಸಿರುವುದೂ ನಡೆದಿದೆ. ಈಗ ಕೆಲವೇ ಕಾರ್ಪೋರೇಟುಗಳು ದೇಶದ ಆಸ್ತಿ ಸಂಪತ್ತಿನ ಮೇಲೆ ಸಂಪೂರ್ಣ
ಹಿಡಿತ ಸಾಧಿಸಿರುವ ಮಟ್ಟ ತಲುಪಿದೆ. ಮೊದಲಿದ್ದ ಸಾರ್ವಜನಿಕ ರಂಗ ಈಗ ನಿರ್ನಾಮವಾಗುವ ಹಂತ
ತಲುಪಿದೆ. ಇದು ಜನಸಾಮಾನ್ಯರ ಪ್ರಜಾಪ್ರಭುತ್ವ ನೆಲೆನಿಲ್ಲಲು ಭಾರಿ ಅಡ್ಡಿಯಾಗಿ ಪರಿಣಮಿಸಿದೆ.
ಇಂದು
ಚುನಾವಣೆಗಳನ್ನು ಹಾಗೂ ಸರಕಾರಗಳನ್ನು ಕೆಲವೇ ಕಾರ್ಪೋರೇಟು ಕೂಟವೇ ನೇರವಾಗಿ ತೀರ್ಮಾನಿಸುತ್ತಿದೆ. ಇದು ಹಿಂದಿನ ಮನಮೋಹನ್ ಸಿಂಗ್ ಸರಕಾರ
ಸ್ಥಾಪನೆಯ ಕಾಲದಲ್ಲೂ ನಂತರದ ಮೋದಿ ಸರಕಾರದ ಕಾಲದಲ್ಲೂ ಹೆಚ್ಚು ನಿಚ್ಚಳವಾಗಿ ಕಂಡು ಬಂದಿದೆ.
ಮನಮೋಹನ್ ಸಿಂಗ್ ಯಾವುದೇ ರಾಜಕೀಯ ಹಿನ್ನೆಲೆಯ ವ್ಯಕ್ತಿಯಾಗಿರಲಿಲ್ಲ. ಅರ್ಥ ಶಾಸ್ತ್ರಜ್ಞರಾಗಿದ್ದ
ಅವರು ವಿಶ್ವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಇಂಡಿಯಾ ಸರಕಾರದ ಆರ್ಥಿಕ
ಸಲಹೆಗಾರರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕಾರ್ಯ
ನಿರ್ವಹಿಸಿದ್ದ ಒಬ್ಬ ಅಧಿಕಾರಿಯಾಗಿದ್ದರು. ಜಾಗತೀಕರಣ ಆರಂಭವಾದಾಗಿನಿಂದಲೂ ಮನಮೋಹನ್ ಸಿಂಗ್ ಇಂಡಿಯಾದ
ನೀತಿ ನಿರೂಪಣೆಯ ಆಯಕಟ್ಟಿನ ಜಾಗಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಾ ಬಂದವರು. ನಂತರ 1991ರಲ್ಲಿ
ಕಾಂಗ್ರೆಸ್ ನ ಪಿ ವಿ ನರಸಿಂಹರಾವ್ ಪ್ರದಾನಿಯಾಗಿದ್ದ ಸರಕಾರದಲ್ಲಿ ದಿಡೀರೆಂದು ಇವರನ್ನು ಕೇಂದ್ರ
ಹಣಕಾಸು ಮಂತ್ರಿಯನ್ನಾಗಿ ಕುಳ್ಳಿರಿಸಲಾಯಿತು. ಅದು ಕಾಕತಾಳೀಯವೇನೂ ಆಗಿರಲಿಲ್ಲ.
ಅದು
ಜಾಗತಿಕ ಆರ್ಥಿಕತೆಯ ಬಿಕ್ಕಟ್ಟು ತೀವ್ರವಾಗುತ್ತಿದ್ದ
ಕಾಲ. ಸಾಕಷ್ಟು ವಿರೋಧದ ನಡುವೆಯೂ ಮನಮೋಹನ್ ಸಿಂಗ್ ಜಾಗತೀಕರಣವನ್ನು ಇಂಡಿಯಾಕ್ಕೆ
ಅಳವಡಿಸುವುದಕ್ಕೆ ಆಧ್ಯತೆಯ ಮೇಲೆ ಕಾರ್ಯ ನಿರ್ವಹಿಸಿದರು. ಅಭಿವೃದ್ಧಿಗೆ ಜಾಗತೀಕರಣ;
ಜಾಗತೀಕರಣಕ್ಕೆ ಉದಾರೀಕರಣ, ಖಾಸಗೀಕರಣಗಳು ಅತ್ಯಗತ್ಯವೆಂದೇ ಪ್ರತಿಪಾದಿಸುತ್ತಾ ಬರಲಾಗಿತ್ತು.
ಮನಮೋಹನ್ ಸಿಂಗ್ ಅದಕ್ಕಾಗೇ ಪ್ರತ್ಯೇಕ ನೀತಿ ನಿರೂಪಣೆಗಳನ್ನು ಮಾಡುವುದರಲ್ಲಿ ಪ್ರಮುಖ ಪಾತ್ರ
ನಿರ್ವಹಿಸಿದ್ದರು. 2004 ರಲ್ಲಿ ಚುನಾವಣೆಯಲ್ಲಿ
ಸ್ಪರ್ದಿಸದೇ ನೇರವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಪ್ರಧಾನಿಯಾದರು. ಅದಕ್ಕೆ
ಜಾಗತಿಕ ಭಾರಿ ಕಾರ್ಪೋರೇಟುಗಳು ಹಾಗೂ ವಿಶ್ವ ಬ್ಯಾಂಕಿನಂತಹ ಹಣಕಾಸು ಸಂಸ್ಥೆಗಳ ಒತ್ತಡಗಳು
ಕಾರಣವೆಂಬ ಚರ್ಚೆಗಳು ಒಂದಷ್ಟು ನಡೆದವು. ನಂತರ ಅವರು ಹತ್ತು ವರ್ಷಗಳ ಕಾಲ ಪ್ರಧಾನಿ ಪಟ್ಟದಿಂದ
ಕದಲಲಿಲ್ಲ. ಆಶ್ಚರ್ಯವೆನಿಸಿದರೂ ನಮ್ಮ ಪ್ರಜಾಪ್ರಭುತ್ವದ ಅನ್ವರ್ಥವೋ ಅಥವಾ ವ್ಯಂಗ್ಯವೋ ಎಂಬಂತೆ
ಆಗಲೂ ಅವರು ಚುನಾವಣೆಗೆ ಸ್ಫರ್ಧಿಸಿ ಜನರಿಂದ ಆಯ್ಕೆಯಾಗಿರಲಿಲ್ಲ. ಪ್ರಧಾನಿ ಪಟ್ಟಕ್ಕಾಗಿ ಮಾತ್ರ
ರಾಜ್ಯಸಭಾ ಸದಸ್ಯರಾಗಿ ಇದ್ದರು.
ಸಮ್ಮಿಶ್ರ
ಸರಕಾರವಾಗಿದ್ದರೂ ಆ ಹತ್ತು ವರ್ಷಗಳಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇಡೀ ದೇಶವನ್ನು ಭಾರಿ ಜಾಗತಿಕ
ಕಾರ್ಪೋರೇಟುಗಳ ಅನುಕೂಲಕ್ಕೆ ತಕ್ಕಂತೆ ಆಳ್ವಿಕೆ ನಡೆಸಿತು. ಅದಕ್ಕೆ ತೊಡಕುಗಳೆನಿಸಿದ್ದ ಹಿಂದಿನ
ನೀತಿಗಳನ್ನೆಲ್ಲಾ ಬದಲಾಯಿಸಿದರು. ಅದಕ್ಕೆ ಬೇಕಾದ ಹೊಸ ನೀತಿ ಸೂತ್ರಗಳನ್ನು ರೂಪಿಸಿದರು. ಯುಐಡಿಎಐ (ಆಧಾರ್), ವ್ಯಾಟ್, ಜಿ.ಎಸ್.ಟಿ. ಹೊಸ ಕೈಗಾರಿಕಾ ನೀತಿ, ಹೊಸ ಶಿಕ್ಷಣ
ನೀತಿ, ಖಾಸಗಿ, ಕಾರ್ಪೋರೇಟ್ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುವ ನೀತಿ, ಖಾಸಗೀ ಸರ್ಕಾರಿ
ಭಾಗೀದಾರಿಕೆ ನೀತಿ, ಕಾರ್ಮಿಕರ ಭದ್ರತೆ ನಿರಾಕರಿಸುವ ಹೊಸ ಕಾರ್ಮಿಕ ನೀತಿ ಇತ್ಯಾದಿಗಳನ್ನು
ರೂಪಿಸುವುದೂ, ಜಾರಿ ಮಾಡುವುದೂ ನಡೆಯಿತು. ಸರಕಾರಿ ನೌಕರರಿಗೆ ಹಾಗೂ ಕಾರ್ಮಿಕರಿಗೆ
ವೃದ್ದಾಪ್ಯದಲ್ಲಿ ಭದ್ರತೆಯಾಗಿದ್ದ ಪಿಂಚಣಿ
ವ್ಯವಸ್ಥೆಯನ್ನು ಮೊಟಕುಗೊಳಿಸಿ ಕೇವಲ ಕಾರ್ಮಿಕರು ದುಡಿದ ಹಣವನ್ನೇ ಸಂಗ್ರಹಿಸಿ ಕ್ರೋಢೀಕರಿಸಿ
ಪಿಂಚಣಿ ನೀಡುವ ವ್ಯವಸ್ಥೆ ಮಾಡಲಾಯಿತು. ಇದೀಗ ಆ ಸಂಗ್ರಹಿತ ಹಣವನ್ನು ಶೇರು ಮಾರುಕಟ್ಟೆಯಲ್ಲಿ
ತೊಡಗಿಸಿ ಭಾರಿ ಕಾರ್ಪೋರೆಟ್ ಗಳಿಗೆ ಬಂಡವಾಳ ಕ್ರೋಢೀಕರಣಕ್ಕೆ ಅನುಕೂಲ ಕಲ್ಪಿಸಲಾಗಿದೆ. ಹತ್ತು ಹಲವು ದಮನಕಾರಿ ಕರಾಳ ಶಾಸನಗಳನ್ನು ರೂಪಿಸಿ ಜನರ
ಮೇಲೆ ಹೇರಲಾಯಿತು. ಜಾಗತಿಕ ಬಂಡವಾಳಶಾಹಿ ದೇಶಗಳಾದ ಅಮೇರಿಕ, ಜರ್ಮನಿ, ಯು, ಕೆ, ಇಸ್ರೇಲ್
ಮೊದಲಾದ ರಾಷ್ಟ್ರಗಳೊಂದಿಗೆ ದೇಶಕ್ಕೆ ಮಾರಕವಾಗುವ ಹತ್ತು ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಈ
ಎಲ್ಲಾ ಮಾರಕಗಳನ್ನು ಮರೆಮಾಚಲು ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ, ಉದ್ಯೋಗ
ಖಾತರಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಗಳಂತಹ ಕೆಲವು ಜನಪ್ರಿಯವೆನಿಸುವ
ಯೋಜನೆಗಳನ್ನೂ ಘೋಷಿಸಲಾಗಿತ್ತು. ಅದರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಒಂದು ಮಟ್ಟದಲ್ಲಿ ಹತ್ತು
ಹಲವು ಭ್ರಷ್ಟಾಚಾರಗಳು ಹೊರಬರಲು ಕಾರಣವಾಯಿತು. ಹಾಗೇಯೇ ಅದನ್ನಿಟ್ಟುಕೊಂಡು ಬ್ಲಾಕ್ ಮೇಲ್
ಭ್ರಷ್ಟಾಚಾರಗಳೂ ಶುರುವಾದವು. ಉದ್ಯೋಗ ಖಾತ್ರಿ, ಆರೋಗ್ಯ ಮಿಷನ್ ನಂತಹವುಗಳು ಬಹುತೇಕವಾಗಿ ಮತ್ತೆ
ಭ್ರಷ್ಟಾಚಾರಕ್ಕೆ ಮತ್ತೊಂದು ಯೋಜನೆಗಳ ತರಹವೇ ವರ್ತಿಸಿದೆ.
ಅವರ
ಕಾಲದಲ್ಲಿಯೇ ಅದುವರೆಗೂ ಇಲ್ಲದ ಭಾರಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾದವು, ಏಷಿಯನ್ ಗೇಮ್ಸ್
ಹಗರಣ, 2ಜಿ ತರಂಗಾಂತರ ಹಗರಣ, ಕಲ್ಲಿದ್ದಲು ಹಗರಣ ಮೊದಲಾದ ಹತ್ತಾರು ಸಾವಿರ ಕೋಟಿಗಳ ಬಹು ದೊಡ್ಡ ಹಗರಣಗಳು ಬೆಳಕಿಗೆ ಬಂದವು. ವಿವಾದಿತ ನಾಗರಿಕ ಅಣು ಒಪ್ಪಂದಕ್ಕೆ
ಭಾರಿ ವಿರೋಧದ ನಡುವೆಯೂ ಸಹಿ ಹಾಕಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲವೇ
ಕಾರ್ಪೋರೇಟುಗಳ ಏಕಸ್ವಾಮ್ಯ ಹಿಡಿತ ಸ್ಥಾಪಿತವಾಗಿ ನೂರಾರು ಕಂಪನಿಗಳು ಬಾಗಿಲು ಹಾಕಿಕೊಂಡವು.
ಮನಮೋಹನ್
ಸಿಂಗ್ ಸಾರ್ವಜನಿಕವಾಗಿ ಮಾತಾಡುತ್ತಿದ್ದುದು ಬಹಳ ಕಡಿಮೆಯಾಗಿತ್ತು. ಅವರು ಪತ್ರಿಕಾ ಗೋಷ್ಠಿ
ನಡೆಸಿದ್ದು ಕೂಡ ವಿರಳ. ಆದರೆ ಅವರು ಜಾಗತಿಕ ಕಾರ್ಪೋರೇಟು ಪರವಾಗಿ ಇಂಡಿಯಾದ ಎಲ್ಲಾ ರಂಗಗಳನ್ನು
ತೆರೆದಿಡುವ ಕೆಲಸಗಳಲ್ಲಿ ಮುಂಚೂಣಿ
ಪ್ರಧಾನಿಯಾಗಿದ್ದರು. ಅಂದರೆ ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಸರಕಾರ ದೇಶದ ಸಕಲ ರಂಗಗಳನ್ನೂ
ಜಾಗತಿಕ ಕಾರ್ಪೋರೇಟುಗಳಿಗೆ ತೆರೆದಿಡುವ ಕಾರ್ಯವನ್ನು ಬಹಳ ಚಾಕಚಕ್ಯತೆಗಳಿಂದ ಮಾಡಿದವರು. ಅದಕ್ಕೆ
ಬೇಕಾದ ಎಲ್ಲಾ ನೀತಿಗಳನ್ನೂ ರೂಪಿಸಿ ಇಟ್ಟವರಲ್ಲಿ ಪ್ರಮುಖರಾಗಿದ್ದಾರೆ. ಆರಂಭದಲ್ಲಿ ಒಟ್ಟು
ವಾರ್ಷಿಕ ಉತ್ಪನ್ನದಲ್ಲಿ (ಜಿಡಿಪಿ) ಎರಡಂಕಿಯ ಬೆಳವಣಿಗೆ ದಾಖಲಿಸಿ ಜನಸಾಮಾನ್ಯರನ್ನು ಅದರಲ್ಲೂ
ಮದ್ಯಮವರ್ಗವನ್ನು ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಅವಕಾಶಗಳ ಮಹಾಪೂರವೆಂದು ಬಿಂಬಿಸಿ ನಂತರ
ಜಿಡಿಪಿ ಅಭಿವೃದ್ಧಿ ದರ ಒಂದಂಕಿಗೆ ಸರಿದು ಕುಸಿಯುತ್ತಾ 2014ರ ಸುಮಾರಿಗೆ ಅದು ಶೇಕಡಾ ಏಳು
ಎಂಟರಷ್ಟಕ್ಕೆ ಇಳಿದಿತ್ತು. ಅದಿಗ ಮತ್ತೂ ಇಳಿದು ಐ ಎಂ ಏಫ್ ಪ್ರಕಾರವೇ ಶೇಕಡಾ ಐದು ಆರರ
ಸಮೀಪವಿದೆ.
ಹಾಗಂತ ಜಿಡಿಪಿ ಅಭಿವೃದ್ಧಿಯನ್ನು ದೇಶದ ಜನಸಾಮಾನ್ಯರ
ಅಭಿವೃದ್ಧಿ ಎಂದು ಗ್ರಹಿಸಹೋಗುವುದು ತಪ್ಪಾದ ಲೆಕ್ಕಾಚಾರವಾಗುತ್ತದೆ. ಜಿಡಿಪಿ ಏರುತ್ತಿದೆ
ಎಂದಾಕ್ಷಣ ಜನಸಾಮಾನ್ಯರ ತಲಾದಾಯ, ಬದುಕಿನ ಮಟ್ಟಗಳ ನೈಜ ಅಭಿವೃದ್ಧಿಯಾಗುವುದಿಲ್ಲ.
2014ರ
ಸಂದರ್ಭದಲ್ಲಿ ಮನಮೋಹನ್ ಸಿಂಗ್ ಸರಕಾರ ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು.
ನಿರುದ್ಯೋಗ ಸಮಸ್ಯೆಯ ಹೆಚ್ಚಳ ಅಲ್ಲದೇ ದೇಶದ ಆರ್ಥಿಕತೆ ತೀವ್ರ ಬಿಕ್ಕಟ್ಟಿನಿಂದ ಕುಸಿತದೆಡೆಗೆ ಸರಿಯುತ್ತಿತ್ತು. ಮನಮೋಹನ್ ಸಿಂಗ್ ಅವಧಿಯಲ್ಲೂ ಅಂಬಾನಿ ಕೂಟದಂತಹ
ಭಾರಿ ಕಾರ್ಪೋರೇಟು ಕೂಟಗಳು ಗರಿಷ್ಠ ಲಾಭಗಳನ್ನು ಕೊಳ್ಳೆ ಹೊಡೆದಿದ್ದವು. ಹಲವು ಹಗರಣಗಳಲ್ಲಿ
ಅಂಬಾನಿ, ಟಾಟಾಗಳಂತಹ ಭಾರಿ ಕಾರ್ಪೋರೇಟು ಕೂಟಗಳ ಹೆಸರು ಕೂಡ ಕೇಳಿ ಬಂದಿತ್ತು. ವಿಶ್ವಾಸ ಹಾಗೂ ಜನಪ್ರಿಯತೆ ಕಳೆದುಕೊಂಡ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರದ
ಬದಲಿಗೆ ಅದುವರೆಗೂ ನೇರವಾಗಿ ಕಂಡಿರದಿದ್ದ ರೀತಿಯಲ್ಲಿ ನರೇಂದ್ರ ಮೋದಿ ಸರಕಾರವನ್ನು ಭಾರಿ ಬಹುಮತ
ಮೂಡಿಸಿ ದೇಶದ ಮೇಲೆ ಹೇರಲಾಯಿತು. ಅದಕ್ಕೆ ಕೋಮುವಿಷ, ಜಾತಿಯ ವಿಷಗಳ ಜೊತೆಗೆ ಹುಸಿ ಅಭಿವೃದ್ಧಿಯ
ಕಲ್ಪನೆಗಳನ್ನು ವ್ಯಾಪಕವಾಗಿ ಬಳಸಲಾಯಿತು. ಇವೆಲ್ಲದರ ಹಿಂದೆ ಅಮೇರಿಕ ಸೇರಿದಂತೆ ಹಲವು ಜಾಗತಿಕ ಹಾಗೂ ದೇಶದ ಒಳಗಿನ ಭಾರಿ ಖಾರ್ಪೋರೇಟ್ ಶಕ್ತಿಗಳು
ಕೆಲಸ ಮಾಡಿದ್ದವು.
ಮನಮೋಹನ್
ಸಿಂಗ್ ಸರಕಾರ ಮಾಡದೇ ಬಿಟ್ಟು ಹೋಗಿದ್ದ ಭಾರಿ ಕಾರ್ಪೋರೇಟು ಪರ ಕೆಲಸಗಳನ್ನೆಲ್ಲಾ ಜನರನ್ನು
ಅದ್ಭುತವಾಗಿ ಯಾಮಾರಿಸಿ (ಅದರಲ್ಲೂ ಮುಖ್ಯವಾಗಿ ಮಧ್ಯವರ್ಗದ ಜನರನ್ನು) ಮೋದಿ ಸರ್ಕಾರ ಮುಗಿಸಿಕೊಟ್ಟಿದೆ.
ಹತ್ತಾರು ಸಾವಿರ ಕೋಟಿಗಳ ಮೇಕ್ ಇನ್ ಇಂಡಿಯಾ, ಸ್ಕಿಲ್
ಇಂಡಿಯಾ, ಗಂಗಾ ಶುಧ್ಧೀಕರಣ ಯೋಜನೆ, ರಫೇಲ್ ಹಗರಣ, ಫಸಲ್ ಭಿಮಾ ಹಗರಣಗಳಂತಹ ಹಲವಾರು ಹಗರಣಗಳ
ಪರಂಪರೆಯನ್ನು ಮುಂದುವರೆಸಿದೆ.
ಮೋದಿ
-2 ಸರಕಾರ ಆರಂಭವಾದಾಗಿನಿಂದ ಹಿಂದಿದ್ದ ಹಲವು ಕಾನೂನುಗಳ ತಿದ್ದುಪಡಿಗಳ ಜಾರಿಯನ್ನು ವೇಗದಿಂದಲೇ
ಮಾಡತೊಡಗಿದೆ. ಬ್ರಿಟೀಷ್ ಕಾಲದ ಅರಣ್ಯ ಕಾಯಿದೆ ತಿದ್ದುಪಡಿ ಮಾಡಿ ಆದಿವಾಸಿ ಬುಡಕಟ್ಟುಗಳನ್ನು
ಇನ್ನಿತರ ಜನಸಾಮಾನ್ಯರನ್ನು ಅವರ ಮೂಲ ಸ್ಥಳಗಳಿಂದಲೇ ಒಕ್ಕಲೆಬ್ಬಿಸಿ ಭಾರಿ ಕಾರ್ಪೋರೇಟುಗಳಿಗೆ
ಹಸ್ತಾಂತರಿಸಲು ಅನುಕೂಲವಾಗುವಂತೆ ಮಾಡಲು ಹೊರಟಿರುವ ಬೆನ್ನ ಹಿಂದೆಯೇ ಹಳೆಯ ಹಲವಾರು ಕಾನೂನುಗಳ
ತಿದ್ದುಪಡಿಗಳನ್ನು ಜಾರಿ ಮಾಡಲು ತೊಡಗಿದೆ. ಕಾರ್ಮಿಕ ಕಾಯಿದೆ, ಕಂಪನಿ ಕಾಯಿದೆ, ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ (ಎನ್
ಐ ಎ), ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯಿದೆ (ಯುಎಪಿಎ), ಮಾಹಿತಿ ಹಕ್ಕು ಕಾಯಿದೆ (ಆರ್
ಟಿ ಐ) ಹೀಗೆ ಪಟ್ಟಿ ಸಾಗುತ್ತದೆ. ಜೊತೆಗೆ ಶಿಕ್ಷಣ ನೀತಿಯ ಬದಲಾವಣೆ ಮಾಡಿ ಅದನ್ನು ರಾಷ್ಟ್ರೀಯ
ಶಿಕ್ಷಣ ನೀತಿಯೆಂದು ಹೆಸರಿಸಿ ಮತ್ತಷ್ಟು ಕೇಂದ್ರತ್ವ, ಬ್ರಾಹ್ಮಣತ್ವ ಹಾಗೂ ಹಿಂದಿ ಭಾಷಾ ಹೇರಿಕೆ
ಮಾಡುವ ಹುನ್ನಾರ ನಡೆಸಿದೆ. ಈ ಎಲ್ಲದರ ಬಗ್ಗೆ ದೇಶಾದ್ಯಂತ
ಈಗಾಗಲೇ ಚರ್ಚೆಗಳು ನಡೆಯುತ್ತಿವೆ.
ಹಲವಾರು
ಸಾಮಾಜಿಕ ಕಾರ್ಯಕರ್ತರುಗಳ ನಿರಂತರ ಹೋರಾಟ ಜೊತೆಗೆ ಅಂತರಾಷ್ಟ್ರೀಯ ಮಾನದಂಡಗಳ ಒತ್ತಡಗಳ
ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದಿತ್ತು. ಪ್ರಜೆಗಳಿಗೆ ಸರಿಯಾದ ಮಾಹಿತಿಗಳ
ಲಭ್ಯತೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರ ಮೂಲಭೂತ ಅಗತ್ಯಗಳಲ್ಲಿ ಒಂದು. ಅದಕ್ಕೆ ಒಂದು ಮಟ್ಟದಲ್ಲಿ ಅವಕಾಶ ಕೊಟ್ಟಿದ್ದ ಕಾನೂನನ್ನು ಕೂಡ ಈಗ ಬಹಳ
ಬಲಹೀನಗೊಳಿಸಿ ತಿದ್ದುಪಡಿಗಳನ್ನು ಮಾಡಲಾಗಿದೆ. ಅದು ಕಾನೂನಾಗಿ ಆಗಿದ್ದು ಕೂಡ ಇಂಡಿಯಾ ಒಂದು
ಪ್ರಜಾಪ್ರಭುತ್ವ ದೇಶವೆಂದು ಹೇಳಿಕೊಂಡು ಸುಮಾರು ಆರು ದಶಕಗಳ ನಂತರ. ಅದು ಇಂಡಿಯಾದ
ಪ್ರಜಾಪ್ರಭುತ್ವದ ವಿಪರ್ಯಾಸವೆಂದು ಹೇಳಬಹುದು. ಈಗ ಅದನ್ನೂ ಕೂಡ ಇದ್ದೂ ಇಲ್ಲದ ಕಾನೂನನ್ನಾಗಿ
ಮಾಡಲಾಗಿದೆ.
ಪ್ರಸ್ತುತ
ತಿದ್ದುಪಡಿಯ ಪ್ರಕಾರ ಯಾವುದೇ ಮಾಹಿತಿಗಳನ್ನು ನೀಡಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸುವುದು
ಕೇಂದ್ರ ಸರಕಾರವಾಗುತ್ತದೆ. ಮಾಹಿತಿ ಹಕ್ಕು ಆಯೋಗಕ್ಕಿದ್ದ ಸ್ವಾಯತ್ತತೆ ಹಾಗೂ ಅಧಿಕಾರಗಳನ್ನು
ಮೊಟಕು ಮಾಡಿ ಮುಖ್ಯ ಮಾಹಿತಿ ಹಕ್ಕು ಕಮಿಷನರ್ ಕೇಂದ್ರ ಸರಕಾರದ ನೌಕರರನ್ನಾಗಿ ಮಾಡಿಡಲಾಗಿದೆ. ಈ
ತಿದ್ದುಪಡಿಗಳಿಗೆ ಒಂದೆರಡು ಪಕ್ಷಗಳು ಬಿಟ್ಟರೆ ಬಹುತೇಕ ರಾಜಕೀಯ ಪಕ್ಷಗಳು ಬೆಂಬಲಿಸಿರೋದರಲ್ಲಿ
ಆಶ್ಚರ್ಯವೇನಲ್ಲ. ಆರಂಭದಲ್ಲಿ ವಿರೋಧಿಸಿದ ರಾಜಕೀಯ ನೇತಾರರೂ ಕೂಡ ನಂತರ ಅವುಗಳನ್ನು
ಬೆಂಬಲಿಸಿದರು. ಸದನದಲ್ಲಿ ವಿರೋಧಿಸಬೇಕಾದವರು ಸಭಾತ್ಯಾಗದ ನಾಟಕವಾಡಿ ಎಲ್ಲಾ ತಿದ್ದುಪಡಿಗಳು
ಅತ್ಯಲ್ಪ ವಿರೋಧದೊಂದಿಗೆ ಅನುಮೋದನೆಗೊಳ್ಳುವಂತೆ ಮಾಡಿದರು. ಯಾಕೆಂದರೆ ಅವರ್ಯಾರಿಗೂ ಸಾರ್ವಜನಿಕ
ಮಾಹಿತಿಗಳನ್ನು ಮುಕ್ತವಾಗಿ ಸಾರ್ವಜನಿಕರಿಗೆ ತೆರದಿಡುವುದು ಆತಂಕದ ವಿಚಾರವೇ ಆಗಿತ್ತು. ಕೇವಲ
ಹದಿನಾಲ್ಕು ವರುಷದಲ್ಲೇ ಮಾಹಿತಿ ಹಕ್ಕು ಕಾಯಿದೆ ಇಲ್ಲದ ರೀತಿಯಲ್ಲಿ ಮಾಡಿಡಲಾಗಿದೆ. ಈಗ
ಲಕ್ಷಾಂತರ ಮಾಹಿತಿಗಾಗಿನ ಅರ್ಜಿಗಳು ವಿಲೇವಾರಿಯಾಗದೇ ಉಳಿಯತೊಡಗಿವೆ.
ಮೋದಿ
ಸರಕಾರದ ಈ ನಡೆಗಳನ್ನು ಈ ಹಿಂದೆ ಮುಖ್ಯ ಮಾಹಿತಿ ಹಕ್ಕು ಕಮಿಷನರ್ ಗಳಾಗಿದ್ದ ವಜಾಹತ್
ಹಬೀಬುಲ್ಲಾ, ದೀಪಕ್ ಸಂಧು, ಹಾಗೂ ಶೈಲೇಶ್ ಗಾಂಧಿ, ಶ್ರೀದರ್ ಆಚಾರ್ಯಲು ಎಮ್ಮ ಎಮ್ ಅನ್ಸಾರಿ, ಯಶೋವರ್ಧನ್ ಆಜಾದ್ ಹಾಗೂ ಅನ್ನ ಪೂರ್ಣ ದೀಕ್ಷಿತ್ ಟೀಕಿಸಿ ಇದು
ಮಾಹಿತಿ ಹಕ್ಕು ಆಯೋಗದ ಸ್ವಾಯತ್ತತೆ ಹಾಗೂ ಜನರ ಮಾಹಿತಿ ಪಡೆಯುವ ಮೂಲಭೂತ ಹಕ್ಕುಗಳ ಮೇಲೆ
ನಡೆಯುತ್ತಿರುವ ನೇರ ದಾಳಿ ಎಂದಿದ್ದಾರೆ.
ಮತ್ತೊಬ್ಬ
ಮಾಜಿ ಕೇಂದ್ರ ಮಾಹಿತಿ ಹಕ್ಕು ಕಮಿಷನರ್ ಶ್ರೀಧರ್ ಆಚಾರ್ಯಲು ಮಾಹಿತಿ ಹಕ್ಕು ತಿದ್ದುಪಡಿ ಮಸೂದೆ 2019
ಅನ್ನು ಜನರ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರಕಾರ ನಡೆಸಿದ ದಾಳಿ
ಎಂದಿದ್ದಾರೆ. ಇಂಡಿಯಾದ ಸರ್ವೋಚ್ಚ ನ್ಯಾಯಾಲಯ ಮಾಹಿತಿಗಳನ್ನು ತಿಳಿದುಕೊಳ್ಳುವುದು ಜನರ ಮೂಲಭೂತ
ಹಕ್ಕೆಂದು ಪದೇ ಪದೇ ಹೇಳಿರುವುದನ್ನು ಉಲ್ಲೇಖಿಸಿ ಅವರು ಪ್ರತಿಕ್ರಿಯಿಸಿದ್ದಾರೆ.
ಇವುಗಳಲ್ಲಿ
ಈಗ ಲೋಕಸಭೆ ಅಂಗೀಕರಿಸಿದ ಎನ್ ಐ ಎ ಹಾಗೂ ಯು ಎ ಪಿ ಎ ಗೆ ಮಾಡಿರುವ ತಿದ್ದುಪಡಿಗಳು ಬಹಳ
ಅಪಾಯಕಾರಿಯಾಗಿವೆ. ಮೂಲ ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿವೆ. ಇಂಡಿಯಾದ ಮುಸ್ಲಿಂ
ಅಲ್ಪಸಂಖ್ಯಾತರು, ದಲಿತದಮನಿತ ಸಂಘಟನೆಗಳು, ಮಾನವ ಹಕ್ಕು ಕಾರ್ಯಕರ್ತರು, ಸಾಮಾಜಿಕ ಸಂಘಟನೆಗಳು,
ಸಾಮಾಜಿಕ ಹೋರಾಟಗಾರರು, ಪತ್ರಿಕಾ ಪ್ರತಿನಿಧಿಗಳು, ಮಾಧ್ಯಮಗಳು, ಕಾರ್ಮಿಕ ಸಂಘಟನೆಗಳು, ರೈತ
ಸಂಘಟನೆಗಳು, ವಿದ್ಯಾರ್ಥಿಯುವಜನ ಸಂಘಟನೆಗಳು, ವಿರೋಧ ಪಕ್ಷಗಳು ಸೇರಿದಂತೆ ಜನಸಾಮಾನ್ಯರನ್ನು ಇದು
ಭವಿಷ್ಯದಲ್ಲಿ ನೇರವಾಗಿ ಗುರಿಮಾಡುತ್ತದೆ.
ಅಲ್ಲದೇ
ಈ ತಿದ್ದುಪಡಿಗಳ ಕುರಿತು ಓದಿ ಚರ್ಚೆ ನಡೆಸಲು ಅಗತ್ಯವಿದ್ದಷ್ಟು ಸಮಯ ಒದಗಿಸಿ ಮತ್ತು
ವ್ಯವಸ್ಥೆಗಳನ್ನು ಕೇಂದ್ರ ಸರಕಾರ ಮಾಡದೇ ತರಾತುರಿಯಲ್ಲಿ ತಿದ್ದುಪಡಿಗಳನ್ನು ಮುಂದಿಡುವಂತೆ ಮಾಡಿ
ತನಗಿರುವ ಬಹುಮತದ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಅನುಮೋದನೆ ಮಾಡಿಸಿಕೊಂಡಿತು. ಇದಕ್ಕೆ ಸಮಾಜವಾದಿ
ಪಾರ್ಟಿ ಯಂತಹ ಪಕ್ಷಗಳ ಬೆಂಬಲವನ್ನು ಮೋದಿ ಸರಕಾರ ಪಡೆಯಿತು.
ಯುಎಪಿಎ
ತಿದ್ದುಪಡಿ ಮಸೂದೆಯನ್ನು ಈಗಾಗಲೇ ಅನುಮೋದಿಸಲಾಗಿದೆ. ಅದರ ಪ್ರಕಾರ ಕೇಂದ್ರ ಸರ್ಕಾರ ಯಾವುದೇ
ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ಆರೋಪ ಹೊರಿಸಿ ವರ್ಷಾನುಗಟ್ಟಲೆ ವಿಚಾರಣೆಯೇ ಇಲ್ಲದೇ
ಬಂಧಿಸಿಡಬಹುದು. ಇದುವರೆಗೆ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿ ಪ್ರಕರಣ
ಹೂಡುವ, ಅದರ ಸದಸ್ಯರೆಂದು ಬಂಧಿಸುವ ಅಧಿಕಾರ ಯುಎಪಿಎ ಪ್ರಕಾರ ಯೂನಿಯನ್ ಸರ್ಕಾರಕ್ಕೆ ಇತ್ತು.
ಆದರೆ ಅಂತಿಮ ತೀರ್ಮಾನ ಏನಿದ್ದರೂ ನ್ಯಾಯಾಲಯದ್ದಾಗಿತ್ತು. ನ್ಯಾಯಾಲಯದಲ್ಲಿ ಅದನ್ನು
ಸಾಬೀತುಪಡಿಸುವ ಹೊಣೆಗಾರಿಕೆ ಸರಕಾರದ್ದಾಗಿತ್ತು.
ಹಾಗಿದ್ದಾಗಲೂ
ಅದನ್ನು ಬಳಸಿ ಅದರ ಹಲವು ಕರಾಳ ಕಲಮುಗಳನ್ನು ಹಾಕಿ ಸಾವಿರಾರು ಆದಿವಾಸಿ ಬುಡಕಟ್ಟು ಜನರನ್ನು,
ಹೋರಾಟಗಾರರನ್ನು, ಪ್ರಜಾತಂತ್ರವಾದಿಗಳನ್ನು ಬಂಧಿಸಿ ದೇಶದ ವಿವಿಧ ಸೆರಮನೆಗಳಲ್ಲಿ ಇಡಲಾಗಿದೆ.
ಈಗಿನ
ತಿದ್ದುಪಡಿಯ ಅಪಾಯವೇನೆಂದರೆ ನ್ಯಾಯಾಲಯವನ್ನು ಹೊರಗಿಟ್ಟು ಕೇಂದ್ರ ಸರಕಾರವೇ ಅಂತಹ ತೀರ್ಮಾನಕ್ಕೆ
ಬರುವ, ಅದರಂತೆ ಕ್ರಮ ಜರುಗಿಸುವ ಒಂದು ರೀತಿಯ ಪ್ರಶ್ನಾತೀತ ಶಾಸನಬದ್ಧ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಈಗಿನ ತಿದ್ದುಪಡಿಗಳು ನೀಡುತ್ತದೆ.
ಈ ತಿದ್ದುಪಡಿಯ 35 (3) (d) ಪ್ರಕಾರ ಕೇಂದ್ರ ಸರಕಾರಕ್ಕೆ ಅನಿರ್ಬಂದಿತ ಅಧಿಕಾರವನ್ನು ನೀಡುತ್ತದೆ. ಇದನ್ನು
ಬಳಸಿ ಕೇಂದ್ರ ಸರಕಾರ ದೇಶದ ಯಾವುದೇ ಭಾಗದಲ್ಲಿ ನೇರವಾಗಿ ರಾಜ್ಯ ಸರಕಾರಗಳ ಅಂಗೀಕಾರ ಪಡೆಯದೇ
ಕಾರ್ಯಾಚರಿಸಿ ಯಾವುದೇ ಸಂಘಟನೆ ಇಲ್ಲವೇ ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ತೀರ್ಮಾನಿಸಿ
ಬಂಧಿಸಬಹುದು. ವಿಚಾರಣೆಯೇ ಇಲ್ಲದೇ, ಜಾಮೀನು ನೀಡದೇ ಕನಿಷ್ಠ ಆರು ತಿಂಗಳ ಕಾಲದಿಂದ ಹಲವು
ವರ್ಷಗಳವರೆಗೆ ಬಂಧನದಲ್ಲಿಡಬಹುದು. ಜೊತೆಗೆ ಅವರ ಆಸ್ತಿಪಾಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ
ಅಧಿಕಾರಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಸಂಬಂಧಿತರೇ ಕೇಂದ್ರ ಸರಕಾರಕ್ಕೆ ತಾವುಗಳು
ನಿರ್ದೋಷಿಗಳೆಂದು ಸಾಬೀತುಪಡಿಸಬೇಕಾಗುತ್ತದೆ. ಮೊದಲಿದ್ದಂತೆ ಸರಕಾರ ಬಂಧಿತರ ಮೇಲಿರುವ
ಆರೋಪಗಳನ್ನು ನ್ಯಾಯಾಲಯಕ್ಕೆ ಸಾಬೀತು ಪಡಿಸುವ ಹೊಣೆಗಾರಿಕೆಯಿಂದ ಹೊರಗುಳಿಯುತ್ತದೆ. ಅಲ್ಲದೆ
ನ್ಯಾಯಾಲಯವನ್ನು ಹೊರಗಿಟ್ಟು ಸರಕಾರವೇ ಇವೆಲ್ಲವನ್ನೂ ತೀರ್ಮಾನಿಸುವ ಅಧಿಕಾರ ಹೊಂದುತ್ತದೆ.
ಅಂದರೆ ನ್ಯಾಯಾಂಗದ ಅಧಿಕಾರವನ್ನು ಮೊಟಕು ಮಾಡಿ ಪ್ರಭುತ್ವದ ಫ್ಯಾಸಿಸ್ಟ್ ಅಧಿಕಾರಗಳನ್ನು
ಏಕಪಕ್ಷೀಯವಾಗಿ ಹೇರುವ ಒಂದು ಪ್ರಯತ್ನವೇ ಈ ತಿದ್ದುಪಡಿಗಳಾಗಿವೆ ಎನ್ನಬಹುದು.
ಇದಕ್ಕೆ
ಪೂರಕವಾಗಿ ದೇಶದ ಯಾವುದೇ ಭಾಗದಲ್ಲಿ ಆಯಾ ರಾಜ್ಯ ಸರ್ಕಾರಗಳ ಅನುಮತಿಯಿಲ್ಲದೇ ಕಾರ್ಯಾಚರಿಸುವ,
ಬಂಧಿಸುವ, ಅವರ ಆಸ್ತಿಪಾಸ್ತಿಗಳನ್ನು ಮುಟ್ಟಗೋಲು ಹಾಕಿಕೊಳ್ಳುವ ಅಧಿಕಾರಗಳನ್ನು ರಾಷ್ಟ್ರೀಯ
ತನಿಖಾ ಸಂಸ್ಥೆ (ಎನ್ ಐ ಎ) ಕಾಯಿದೆಗೆ ಮಾಡಿದ ತಿದ್ದುಪಡಿಗಳು ನೀಡುತ್ತವೆ. ಅಂದರೆ ಯೂನಿಯನ್
ಸರಕಾರ ಎನ್ ಐ ಎ ಮೂಲಕ ರಾಜ್ಯ ಸರಕಾರಗಳನ್ನು ಬದಿಗೊತ್ತಿ ಏಕಪಕ್ಷೀಯವಾಗಿ ಕೇಂದ್ರಾಧಿಪತ್ಯವನ್ನು
ಚಲಾಯಿಸುತ್ತದೆ ಎಂದೇ ಈ ತಿದ್ದುಪಡಿಗಳ ಒಳಾರ್ಥ.
ಹಾಗಾಗಿ
ಈ ತಿದ್ದುಪಡಿಗಳು ಜನಸಾಮಾನ್ಯರ ಮೇಲೆ, ಒಕ್ಕೂಟ ವ್ಯವಸ್ಥೆಯ ಮೇಲೆ, ಈಗಿರುವ ರಾಜ್ಯಗಳ ಅಧಿಕಾರಗಳ
ಮೇಲೆ ಭಾರಿ ಅಪಾಯಕಾರಿ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ಉಂಟುಮಾಡುತ್ತವೆ ಎಂದು
ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ
ಗೃಹ ಮಂತ್ರಿ ಅಮಿತ್ ಷಾ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಗಳನ್ನು ಮಂಡಿಸುತ್ತಾ ‘ಯಾರೇ
ವ್ಯಕ್ತಿಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವ, ಅದಕ್ಕೆ ಹಣಕಾಸು ಒದಗಿಸುವ,
ಸಿದ್ಧಾಂತಗಳನ್ನು ಬೆಂಬಲಿಸುವ, ಅಂತಹ ಸಿದ್ಧಾಂತಗಳನ್ನು ಯುವಜನಾಂಗದ ಮದ್ಯೆ ಹರಡುವವರನ್ನು ಭಯೋತ್ಪಾದಕರೆಂದು
ಪರಿಗಣಿಸಬಹುದು. ಭಯೋತ್ಪಾದನೆಯೆಂದರೆ ಕೇವಲ ಬಂದೂಕಿನ ಬಳಕೆ ವಿಚಾರ ಮಾತ್ರವಲ್ಲ,
ಭಯೋತ್ಪಾದನೆಯೆಂದರೆ ದ್ವೇಷ ಹರಡುವುದು ಬಂಡಾಯ ವೈಚಾರಿಕತೆಯ ಹರಡುವಿಕೆ ಕೂಡ ಭಯೋತ್ಪಾದನೆಯೇ
ಆಗುತ್ತದೆ. ಸಾಮಾಜಿಕ ಚಟುವಟಿಕೆ ನೆಪದಲ್ಲಿ ಸೈದ್ಧಾಂತಿಕ ಚಳವಳಿಯೆಂದು ಹೇಳಿಕೊಳ್ಳುವ ವಿಶೇಷವಾಗಿ
‘ಮಾವೋವಾದಿಗಳು’ ‘ನಗರ ನಕ್ಸಲರ’ ಚಟುವಟಿಕೆಗಳನ್ನು ಸರಕಾರ ಸಹಿಸುವುದಿಲ್ಲ’ ಎಂದಿದ್ದಾರೆ.
ಈಗಾಗಲೇ ಪ್ರಾದ್ಯಾಪಕರುಗಳು, ವಕೀಲರು, ಮಾನವ ಹಕ್ಕು ಕಾರ್ಯಕರ್ತರುಗಳು, ಪತ್ರಕರ್ತರು,
ಸಾಮಾಜಿಕ ಹೋರಾಟಗಾರರು, ಸೇರಿದಂತೆ ಸಾವಿರಾರು ಜನರನ್ನು ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದವರು,
‘ನಕ್ಸಲರು’ ನಗರ ನಕ್ಸಲರು ಎಂದೆಲ್ಲಾ ಕಾರಣಗಳನ್ನು ನೀಡಿ ದೇಶದ ವಿವಿಧ ಕಾರಾಗೃಹಗಳಲ್ಲಿ ಕರಾಳ ಯುಎಪಿಎ ಯ ಹಲವು ಕಲಮುಗಳಡಿ ಬಂಧಿಸಿಟ್ಟಿರುವುದನ್ನು ನಾವಿಲ್ಲಿ ಗಮನಕ್ಕೆ
ತೆಗೆದುಕೊಳ್ಳಬಹುದು. ಮುಸ್ಲಿಮ್ ಅಲ್ಪಸಂಖ‍್ಯಾತರನ್ನು ನೂರಾರು ಸಂಖ‍್ಯೆಯಲ್ಲಿ ಈ ಯುಎಪಿಎ
ಕಾಯ್ದೆಯಡಿ ಬಂದನದಲ್ಲಿಡಲಾಗಿದೆ. ಕಳೆದ ವರ್ಷ ಭೀಮ ಕೋರೆಗಾಂವ್ ಘಟನೆಯ ನೆಪ ಮಾಡಿ, ಪ್ರಧಾನಿ
ಮೋದಿಯನ್ನು ಕೊಲ್ಲಲು ಸಂಚು ರೂಪಿಸಿರುವ ನೆಪ ಮಾಡಿ ಮಹಾ ರಾಷ್ಟ್ರ, ಆಂದ್ರಪ್ರದೇಶ,
ತೆಲಂಗಾಣಗಳಿಗೆ ಸೇರಿರುವ ಹಲವಾರು ಸಮಾಜಮುಖಿ ಬುದ್ಧಿಜೀವಿಗಳು, ಚಿಂತಕರು, ಕವಿಗಳು,
ಪತ್ರಕರ್ತರು, ವಕೀಲರುಗಳನ್ನು ಯುಎಪಿಎಯ ಹಲವು ಕಲಮುಗಳಡಿ ಬಂಧಿಸಿದ್ದರು. ಅವರಿಗೆ ಜಾಮೀನು
ಸಿಗದಂತೆ ಮಾಡಿ, ಆರೋಪ ಪಟ್ಟಿಗಳನ್ನು ಕೂಡ ಬೇಕೆಂದೇ ವಿಳಂಬ ಮಾಡಿ, ವರ್ಷ ಕಳೆದರೂ ಇನ್ನೂ
ಸೆರೆಮನೆಯಿಂದ ಹೊರಬರದಂತೆ ಮಾಡಿಟ್ಟಿರುವುದನ್ನೂ ನಾವಿಲ್ಲಿ ಗಮನಿಸಬಹುದು. ನ್ಯಾಯಾಲಯದ
ಅಧೀನದಡಿಯಲ್ಲಿಯೇ ಯುಎಪಿಎ ಕಾನೂನು ಇಟ್ಟುಕೊಂಡು ಪ್ರಭುತ್ವ ಇಷ್ಟು ಕರಾಳವಾಗಿ
ವರ್ತಿಸುತ್ತಿರುವಾಗ ಇನ್ನು ನ್ಯಾಯಾಲಯದ ಪರಿಧಿಯಿಂದ ಈ ಕಾನೂನನ್ನು ಹೊರಗಿಟ್ಟು ಕೇಂದ್ರ
ಸರ್ಕಾರವೇ ತೀರ್ಪು ನೀಡಿ ಶಿಕ್ಷೆ ನೀಡುವಂತಾದರೆ ಅದರ ಕರಾಳತೆ ಹೇಗಿರಲು ಸಾಧ್ಯ ಎನ್ನುವುದನ್ನು
ಊಹಿಸಿಕೊಳ್ಳಬಹುದು.
ಗುಂಪು
ಹತ್ಯೆ ನಡೆಸುವ, ಜೈ ಶ್ರೀರಾಮ್ ಉಚ್ಚಾರವನ್ನು ಹೇರಿ ಥಳಿಸುವ ಘಟನೆಗಳ ಕುರಿತಂತೆ ಪ್ರಧಾನಿ
ಮೋದಿಗೆ ಸಾಮೂಹಿಕ ಪತ್ರ ಬರೆದ ಹಲವು ಲೇಖಕರು, ಸಾಹಿತಿಗಳು, ಸಿನಿಮಾ ರಂಗದ ಗಣ್ಯರು ಸೇರಿದಂತೆ
ನೂರಾರು ಜನರ ಮೇಲೆ ರಾಜದ್ರೋಹ, ಮತೀಯ ದ್ವೇಷ ಹರಡುವುದು ಸೇರಿದಂತೆ ಹಲವು ಪ್ರಕರಣಗಳಡಿ ದೂರನ್ನು
ದಾಖಲು ಮಾಡಿಕೊಳ್ಳಲಾಗಿರುವುದನ್ನೂ ನಾವಿಲ್ಲಿ ಗಮನಿಸಬೇಕು. ಜೊತೆಗೆ ಇಂದಿರಾ ಜೈಸಿಂಗ್ ರಂತಹ
ಸರ್ವೋಚ್ಚ ನ್ಯಾಯಾಲಯದ ಹೆಸರಾಂತ ವಕೀಲರುಗಳು ನಡೆಸುತ್ತಿರುವ ಸಂಸ್ಥೆಗಳ ಮೇಲೆ ಕುಂಟು ನೆಪಗಳಡಿ
ಮಾಡಿರುವ ದಾಳಿಗಳನ್ನು ಕೂಡ ಗಮನಿಸಬಹುದು. ಹಿಂದಿನಿಂದ ಕೋಮುವಾದಿ ದಾಳಿಗಳನ್ನು ವಿರೋಧಿಸಿ ನಿಂತಿದ್ದಕ್ಕಾಗಿ
ತೀಸ್ತಾ ಸೆಟಲ್ವಾಡ್ ರ ಮೇಲೆ ದಾಖಲಾಗಿರುವ ಪ್ರಕರಣಗಳು, ಮಾಡುತ್ತಿರುವ ದಾಳಿಗಳನ್ನು ನಾವು
ನೋಡಬಹುದು. ವರವರರಾವ್, ಆನಂದ್ ತೇಲ್ ತುಂಬ್ಡೆ, ಗೌತಮ್ ನವಲಾಖ, ಸುಧಾ ಭಾರಧ್ವಾಜ್, ಸುರೇಂದ್ರ
ಗಾಡ್ಲಿಂಗ್, ಸುಧೀರ್ ಧವಲೆ, ಶೋಮಾ ಸೇನ್, ಫ್ರೊ ಹನಿಬಾಬು, ಅರುಣ್ ಫೆರೇರಾ, ವೆರ್ನಾನ್
ಗೊನ್ಸಾಲ್ವಿಸ್ ಮೊದಲಾದ ಪ್ರಜಾತಾಂತ್ರಿಕ ಸಮಾಜಮುಖಿ ಪ್ರಗತಿಪರ ವ್ಯಕ್ತಿಗಳ ಬಂಧನಗಳನ್ನು
ನಾವಿಲ್ಲಿ ಪ್ರಜಾಪ್ರಭುತ್ವದ ಮೂಲಭೂತ ವಿಚಾರಗಳನ್ನು ಇಟ್ಟುಕೊಂಡು ಗಮನಿಸಬೇಕು. ಅಂದರೆ ಒಂದು
ಅಪ್ಪಟ ಪ್ರಜಾತಾಂತ್ರಿಕ ನಡೆಗಳಿಗೂ ಕೂಡ ರಾಜದ್ರೋಹದಂತಹ ಪ್ರಕರಣಗಳನ್ನು ದಾಖಲಾಗುವ ಸಂದರ್ಭವಾಗಿದೆ
ಇದು. ಹಾಗಿರುವಾಗ ಇಂತಹ ಪ್ರಭುತ್ವಕ್ಕೆ ಅಪರಿಮಿತ ಅಧಿಕಾರಗಳನ್ನು ನೀಡುವ ಇಂತಹ ಕಾನೂನು
ತಿದ್ದುಪಡಿಗಳು ಭವಿಷ್ಯದಲ್ಲಿ ಉಂಟುಮಾಡಬಹುದಾದ ಗಂಭೀರ ಪರಿಣಾಮಗಳನ್ನು ನಾವು ಅಂದಾಜು ಮಾಡಬಹುದು.
ಇಂತಹವುಗಳು ಪ್ರಜಾಸತ್ತಾತ್ಮಕತೆಯನ್ನು ನೆಲಸಮಮಾಡುವಂತಹ ವಿಚಾರಗಳಾಗಿವೆ.
ಟಾಡಾ,
ಪೋಟಾದಂತಹ ಕರಾಳ ಕಾನೂನುಗಳು ರದ್ದುಗೊಳಿಸಬೇಕಾಗಿ ಬಂದಿದ್ದರೂ ಅದರ ಮುಂದುವರಿಕೆಯಾಗಿ ಯುಎಪಿಎ
1967 ಅನ್ನು ತಿದ್ದುಪಡಿಗಳೊಂದಿಗೆ ಕರಾಳಗೊಳಿಸಿ
ಉದಾರವಾದಿ ಕಾನೂನು ಎಂದು ಬಿಂಬಿಸಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರಗಳು
ಜಾರಿಗೊಳಿಸಿದ್ದವು. ಈಗ ಮೋದಿ ಸರಕಾರ ಯುಎಪಿಎ ಎಂಬ ದಮನಕಾರಿ ಕಾನೂನು ಅಸ್ತ್ರವನ್ನು ತಾನೇ
ನೇರವಾಗಿ ಪ್ರಯೋಗಿಸಲು ಸಜ್ಜು ಮಾಡಿಕೊಂಡಿದೆ. ಅದೇ ವೇಳೆ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ, ದರ್ಗಾ
ದಾಳಿಗಳಂತಹವುಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಗಳಡಿ ಬಂಧಿಸಲ್ಪಟ್ಟ ಪ್ರಜ್ಯಾಸಿಂಗ್, ಪುರೋಹಿತ್
ರಂತಹವರ ಮೇಲೆ, ಗೋಮಾಂಸ, ಜಯ್ ಶ್ರೀರಾಮ್ ಹೆಸರಿನಲ್ಲಿ ನಡೆಸುವ ಗುಂಪು ಹತ್ಯಾಕಾರರ ಮೇಲೆ,
ಹಲ್ಲೆಕಾರರ ಮೇಲೆ, ಮುಸ್ಲಿಮ್, ಕ್ರಿಶ್ಚಿಯನ್ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದ್ವೇಷ ಹರಡುವವರ
ಮೇಲೆ, ದಲಿತರ ಕಗ್ಗೊಲೆ ಮಾಡುವವರ ಮೇಲೆ, ದಲಿತರ ಬಹಿಷ್ಕಾರ ಹಾಕುವವರ ಮೇಲೆ ಇಂತಹ ಕಾನೂನು ತಿದ್ದುಪಡಿಗಳು ವರ್ತಿಸುವುದಿಲ್ಲ
ಎನ್ನುವುದು ಹಿಂದಿನ ಟಾಡಾ, ಪೋಟಾ, ಯುಎಪಿಎ ಜಾರಿಯಾದ ನಂತರದ ಚರಿತ್ರೆಯಿಂದಲೇ ನಾವು
ಅರ್ಥಮಾಡಿಕೊಳ್ಳಬಹುದು. ಹೀಗೆ ಮಾಡುತ್ತಿರುವ ಕಾನೂನು ತಿದ್ದುಪಡಿಗಳು ಬಿಡಿ ಬಿಡಿ ಪ್ರಕರಣಗಳಾಗಿ
ನೋಡದೇ ಒಟ್ಟಾರೆಯಾಗಿ ನೋಡಿ ಭ್ರಾಹ್ಮಣಶಾಹಿ- ಕಾರ್ಪೋರೇಟ್ ಫ್ಯಾಸಿಸ್ಟ್ ವ್ಯವಸ್ಥೆಯೊಂದನ್ನು ಹೇರುವ ವ್ಯವಸ್ಥಿತ ನಡೆಗಳೆಂದು ಗ್ರಹಿಸಬೇಕು. ಯಾಕೆಂದರೆ
ಇಂಡಿಯಾದಲ್ಲಿ ಫ್ಯಾಸಿಸಂ ಜಾರಿಗೊಳಿಸಲು ಸಿದ್ದ ಸಂಘಟಿತ ಶಕ್ತಿಯಾಗಿ ಬ್ರಾಹ್ಮಣಶಾಹಿ
ಸಂಘಪರಿವಾರವಿದೆ. ಅದನ್ನು ಭಾರಿ ಕಾರ್ಪೋರೇಟ್ ಶಕ್ತಿಗಳು ಎಲ್ಲಾ ರೀತಿಯಲ್ಲೂ ಪ್ರಾಯೋಜಿಸುತ್ತಾ
ಬಳಸಿಕೊಳ್ಳುತ್ತಿವೆ. ಸಹಜವಾಗಿಯೇ ಇದು ಪ್ರಜಾಪ್ರಭುತ್ವ ಬೆಳೆಯಲು ಮುಳುವಾಗುತ್ತವೆ.
ಭಾರಿ ಕಾರ್ಪೋರೇಟುಗಳು, ಬ್ರಾಹ್ಮಣಶಾಹಿ ಫ್ಯಾಸಿಸಂ ಮತ್ತು
ಪ್ರಜಾಪ್ರಭುತ್ವ
ಅದು
2014 ರ ಸಂದರ್ಭ. ಅದುವರೆಗೂ ಮೋದಿ ಪ್ರಧಾನಿ ಪಟ್ಟದಲ್ಲಿ
ಕುಳಿತುಕೊಳ್ಳಬಹುದೆಂದು ನಿರೀಕ್ಷಿಸಿದವರು ಬಹಳ ಕಡಿಮೆ ಜನ. ಯಾಕೆಂದರೆ ಬಿಜೆಪಿಯ ಹೈಕಮಾಂಡಿನಲ್ಲೇ
ಮೋದಿ ಬಗ್ಗೆ ಒಪ್ಪಿಗೆಯಿರಲಿಲ್ಲ. ಮೋದಿಗೆ ಗುಜರಾತ್ ಬಿಟ್ಟರೆ ಬಿಜೆಪಿಯಲ್ಲೂ ಹೇಳಿಕೊಳ್ಳುವಂತಹ
ಹಿಡಿತವೇನೂ ಇರಲಿಲ್ಲ. ಸಂಘಪರಿವಾರದ ವಾಜಪೇಯಿ, ಅಡ್ವಾನಿ ಮುರಳಿಮನೋಹರ ಜೋಷಿಯಾದಿಯಾಗಿ ಬಿಜೆಪಿ
ನಾಯಕತ್ವ ಕೆಲವು ಸಂದರ್ಭಗಳಲ್ಲಿ ಮೋದಿಗೆ ಪ್ರತಿಕೂಲವಾದ ಮಾತುಗಳನ್ನೂ ಆಡಿದ್ದರು. ಗುಜರಾತ್
ನರಮೇಧದ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆ ನರಮೇಧ ನರೇಂದ್ರ ಮೋದಿಯ ನೇರ
ನಿರ್ದೇಶನದಲ್ಲಿ ನಡೆದಿತ್ತು ಎಂದು ಮೊದಲು ಕುಮಾರ್ ನಂತರ ಸಂಜೀವ್ ಭಟ್ ಸೇರಿದಂತೆ ಕೆಲವು ಐಪಿಎಸ್
ಅಧಿಕಾರಿಗಳು ಬಹಿರಂಗವಾಗಿಯೇ ಹೇಳಿದ್ದರು. ನ್ಯಾಯಾಲಯಗಳಲ್ಲಿ ಹಲವು ಖಟ್ಲೆಗಳನ್ನು
ಹೂಡಲಾಗಿದ್ದವು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಆಯ್ಕೆಯಾಗಿದ್ದು ಮೂರನೇ
ಅವಧಿಗೂ ಅವರು ಸ್ಪರ್ದಿಸುತ್ತಾರೆಂದು ಇತ್ತು. ಆದರೆ ಆಗಲೇ ಮೊದಲಿನಿಂದಲೂ ಹೇಳಲಾಗುತ್ತಿದ್ದ ಮೋದಿ ಹವಾ ಗುಜರಾತಿನಲ್ಲೂ
ಇದ್ದಿರಲಿಲ್ಲಿ. ಅಲ್ಲಿನ ಪ್ರಭಾವಿ ಪಾಟಿದಾರ್ ಜನಸಮೂಹ ಮೋದಿಯ ವಿರುದ್ದ ನಿಲ್ಲಲಾರಂಭಿಸಿದ್ದರು. ಗುಜರಾತಿನ
ಜನಸಾಮಾನ್ಯರಲ್ಲಿ ಮೋದಿ ಪಾಲನೆ ಬಗ್ಗೆ ಅಸಮಾಧಾನಗಳು ಬೆಳೆದಿದ್ದವು. ಗೋದ್ರಾ ಕೋಮು ನರಮೇಧದ
ಹುಚ್ಚು ಆವೇಶಗಳು ಹೆಚ್ಚೇನೂ ಕಾರ್ಯ ನಿರ್ವಹಿಸದಂತಾಗಿದ್ದವು.
ನಂತರದ್ದು ಆಕಸ್ಮಿಕವೆನ್ನುವಂತೆ ಕಾಣಿಸತೊಡಗಿ ಅಚ್ಚರಿಪಡುವಂತಹ ರೀತಿಯ ಬೆಳವಣಿಗೆಗಳು ನಡೆದವು. ಅದುವರೆಗೂ ಅವರ ಪಕ್ಷದಲ್ಲೇ ಮೋದಿಗೆ ಬೆಂಬಲ
ಇಲ್ಲವೆಂದು ಅನಿಸಿದ್ದು ನಂತರ ಪೂರ್ತಿ ತಿರುಗ ಮುರುಗಾಯಿತು. ಅದುವರೆಗೂ ಇರದಿದ್ದ ಬೆಂಬಲ ಅವರ
ಪಕ್ಷದಲ್ಲೇ ಅವರಿಗೆ ಕಾರ್ಯಕರ್ತರಿಂದ ಆಶ್ಚರ್ಯಕರ ರೀತಿಯಲ್ಲಿ ಕಾಣಿಸತೊಡಗಿತು. ನಮೋ ಬ್ರಿಗೇಡ್
ಗಳಂತಹ ಹೊಸ ಹೊಸ ಸಂಘಟನೆಗಳು ಎಲ್ಲೆಲ್ಲೂ ಕಾಣಿಸತೊಡಗಿದವು. ಸಂಘ ಪರಿವಾರವನ್ನು ಪೂರ್ಣವಾಗಿ
ಮೋದಿಪರವಾಗಿ ನಿಲ್ಲುವಂತೆ ಮಾಡಲಾಯಿತು. ಜೊತೆಗೆ ನಮೋ ಬನಿಯನ್, ನಮೋ ಟೋಪಿ, ನಮೋ ಷರ್ಟ್
ಹೀಗೆಲ್ಲಾ ಹೊರಬಂದವು. ಅಡ್ವಾನಿ ಜೋಷಿಯಾದಿಗಳನ್ನು
ಹಾಗೂ ಹೈಕಮಾಂಡನ್ನು ಪಕ್ಕಕ್ಕೆ ಸರಿಸಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ನಂತರದ್ದು ಮತ್ತೊಂದು ಕತೆ. ಇಂಡಿಯಾ ಅದುವರೆಗೂ
ಕಂಡಿರದಿದ್ದ ಮಟ್ಟದಲ್ಲಿ ಭಾರಿ ಚುನಾವಣಾಪ್ರಚಾರ ತಂತ್ರಗಳನ್ನು ಬಳಸಲಾಯಿತು. ಅದರಲ್ಲಿ
ಅಂತರ್ಜಾಲ, ಆಕಾಶವಾಣಿ, ದೂರದರ್ಶನ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ
ಜಾಲತಾಣಗಳನ್ನು ವ್ಯಾಪಕವಾಗಿ ಏಕಪಕ್ಷೀಯವಾಗಿ ಬಳಸಲಾಯಿತು. ಸಾಮಾಜಿಕ ಜಾಲತಾಣಗಳದು ಅದರಲ್ಲೆಲ್ಲಾ
ವಿಶೇಷವಾದುದು. ಇವುಗಳನ್ನೆಲ್ಲಾ ನಿರ್ವಹಿಸಲು ಸಾವಿರಾರು ಸಂಖ್ಯೆಯ ಜನರನ್ನು
ಚಾಲನೆಗೊಳಿಸಲಾಯಿತು. ಅದರಲ್ಲಿ ಐಟಿ ಉದ್ಯೋಗಿಗಳದು ದೊಡ್ಡ ಪಡೆಯಿತ್ತು. ಇವರೆಲ್ಲರಿಗೂ ಭಾರಿ
ಆಕರ್ಷಕವಾದ ಸಂಬಳವೂ ಇತ್ತು. ದ್ವೇಷ ಹರಡುವವರ, ಅಕ್ಷರ ದಾಳಿಗಳನ್ನು ನಡೆಸುವ, ದೈಹಿಕ ದಾಳಿಗಳನ್ನು
ನಡೆಸುವ, ಮೋದಿ ಬಗ್ಗೆ ಟೀಕೆ ವಿಮರ್ಶೆಗಳು ಬಾರದಂತೆ, ಬಂದರೂ ಹರಡದಂತೆ ನೋಡಿಕೊಳ್ಳುವ ತಂಡಗಳು
ಎಲ್ಲೆಲ್ಲೂ ಕಾರ್ಯಾಚರಿಸತೊಡಗಿದವು. ಸಾಮಾಜಿಕ ಮಾಧ್ಯಮಗಳಾದ ಪೇಸ್ ಬುಕ್, ವಾಟ್ಸಾಪ್,
ಟ್ವಿಟ್ಟರ್, ಯೂ ಟ್ಯೂಬ್ ಗಳಂತಹವುಗಳನ್ನೂ ಮೋದಿ ಪರವಾಗಿ ಇರುವಂತೆ ನೋಡಿಕೊಳ್ಳಲಾಯಿತು. ಅದಕ್ಕೆ
ಅವರಿಗೆ ಕೊಡಬೇಕಾದ ಇನಾಮುಗಳನ್ನು ಕೊಡಲಾಗಿತ್ತು. ಅದಕ್ಕಾಗಿಯೇ ಹೊಸಹೊಸ ಮಾಧ್ಯಮ ರೂಪಗಳನ್ನು
ಸೃಷ್ಟಿಸಲಾಯಿತು.
ಭಾರಿ
ಜಾಗತಿಕ ಕಾರ್ಪೊರೇಟ್ ಕಂಪನಿಗಳು ಮೊಟ್ಟ ಮೊದಲಿಗೆ ಒಂದು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವಾಗ
ಮಾಡುವ ಜಾಹೀರಾತು ವಿದಾನಗಳಿಗಿಂತಲೂ ಹತ್ತಾರು ಪಟ್ಟು ಹೆಚ್ಚಿನ ರೀತಿಗಳಲ್ಲಿ ಆಕ್ರಮಣಕಾರಿಯಾಗಿ ಮೋದಿ
ಬ್ರಾಂಡ್ ಅನ್ನು ನಿರ್ಮಾಣ ಮಾಡಲಾಯಿತು. ಮೋದಿಯನ್ನು ಜನಸಾಮಾನ್ಯರ ಬಳಿ ತೆಗೆದುಕೊಂಡು ಹೋಗಲು ಮೋದಿ ತಂಡ ಬಿತ್ತಿದ ಕತೆಯನ್ನು ಹಿಡಿದು
ಕಾಂಗ್ರೆಸ್ಸಿನ ಮಣಿ ಶಂಕರ್ ಅಯ್ಯರ್ ಮಾಡಿದ ಮೋದಿಯ ಚಾಯ್ ಮಾರಾಟದ ಬಗ್ಗೆ ನಿಂದನಾತ್ಮಕ ಹೇಳಿಕೆಯನ್ನೇ ‘ಚಾಯ್ ಪೇ ಚರ್ಚಾ’, ಮೋದಿ ಟಿ ಕಪ್, ಎಂದು ಜನಪ್ರಿಯಗೊಳಿಸಿ ಹಿಂದೆಂದೋ ಚಾಯ್ ಮಾರಿದ್ದ ಅತೀ ಸರಳಸಾಮಾನ್ಯ ವ್ಯಕ್ತಿಯನ್ನಾಗಿ ಮೋದಿಯನ್ನು ಬಿಂಬಿಸಲಾಯಿತು.
ಅದು ಸಾಕಷ್ಟು ಪ್ರಮಾಣದಲ್ಲಿ ಜನಸಾಮಾನ್ಯರನ್ನು ತಟ್ಟಿತ್ತು ಕೂಡ. ಆದರೆ ಮೋದಿ ಎಂದೂ ಚಾಯ್ ಮಾರಿದ
ಉದಾಹರಣೆಯೇ ಇರಲಿಲ್ಲ ಎನ್ನುವುದು ನಂತರ ಬಯಲಾಯಿತು. ಅವೆಲ್ಲಾ ಉತ್ಪಾದಿತ ಸುಳ್ಳುಗಳ
ಭಾಗವಾಗಿದ್ದವು ಎನ್ನುವುದು ಬಹುತೇಕರಿಗೆ ಅರ್ಥವಾಗತೊಡಗಿದ್ದು ಇತ್ತೀಚೆಗಷ್ಟೇ.
ಬಿಜೆಪಿ
ಪಕ್ಷವನ್ನೂ ಮೀರಿದಂತೆ ಮೋದಿ ಹವಾ ನಿರ್ಮಿಸಲು ಹತ್ತು ಹಲವು ಹೊಸ ಪ್ರಚಾರ ತಂತ್ರಗಳನ್ನು ಹೆಣೆದು
ಜಾರಿಗೊಳಿಸಲಾಯಿತು. ಅಂದರೆ ಮುಸ್ಲಿಂ ಹಾಗೂ ಕ್ರೈಸ್ತ ಅಲ್ಪ ಸಂಖ್ಯಾತರನ್ನು, ಪಾಕಿಸ್ತಾನವನ್ನು, ಪ್ರಗತಿಪರರನ್ನು,
ಪ್ರಜಾತಂತ್ರ ವಾದಿಗಳನ್ನು, ಪ್ರಜಾ ತಾಂತ್ರಿಕ ಮೌಲ್ಯಗಳನ್ನು, ವಿರೋಧ ಪಕ್ಷಗಳನ್ನು (ಈ ಪಕ್ಷಗಳ
ಮಹಾ ಸಾಧನೆಗಳ ಬಗ್ಗೆ ಜನರಿಗೆ ಮೊದಲೇ ಬಹುತೇಕವಾಗಿ ಗೊತ್ತಿದ್ದುದರಿಂದ ಇವರುಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾದ
ಅವಶ್ಯಕತೆಯೇ ಬಂದಿರಲಿಲ್ಲ ಬಿಡಿ), ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸಿ ಜನರೆದುರು ನಿಲ್ಲಿಸುವ
ಕೆಲಸ ಭಾರಿ ವ್ಯವಸ್ಥಿತ ರೀತಿಗಳಲ್ಲಿ ಮಾಡಲಾಯಿತು. ವಿವಾದಗಳು ಏಳುವಂತೆ ಮಾಡಿ ಪ್ರಚಾರ
ಮಾಡಲಾಯಿತು.
ನೋಡ
ನೋಡುತ್ತಿದ್ದಂತೆ ಇಡೀ ಚುನಾವಣಾ ವಾತಾವರಣವೇ ಬದಲಾಗತೊಡಗಿತ್ತು.
ಎಲ್ಲೆಡೆಯೂ ಮೋದಿ ಅಲೆಯೆದ್ದು ಬೀಸುತ್ತಿದೆ ಎನಿಸುವ ವಾತಾವರಣ ನಿರ್ಮಾಣವಾಗತೊಡಗಿತು. ಜೊತೆಗೆ
ಮೋದಿ ಜನಸಾಮಾನ್ಯರ, ನಿರುದ್ಯೋಗಿಗಳ, ಸಣ್ಣಪುಟ್ಟ ವ್ಯಾಪಾರ ವಹಿವಾಟು, ಉದ್ದಿಮೆಗಳ
ಭಾಗ್ಯವಿದಾತನೆಂಬಂತೆ ತನ್ನ ವಾಝ್ಜರಿಯಿಂದಲೂ ಬಿಂಬಿಸಲು ಸಾಕಷ್ಟು ಯಶಸ್ವಿಯಾಗಿದ್ದರು. ಹಲವು
ಸಮಾಜಮುಖಿ ಮನಸುಗಳು ಮೋದಿ ವ್ಯಕ್ತಿಯಾಗಿ ಬಿಜೆಪಿ ಇಲ್ಲವೇ ಸಂಘ ಪರಿವಾರದ ರೀತಿಯಲ್ಲಿ ಅಲ್ಲ.
ಮೋದಿ ಆಡಳಿತವಿದ್ದ ಗುಜರಾತಿನಲ್ಲಿ ಸಂಘ ಪರಿವಾರದ ಚಟುವಟಿಕೆಗಳು ಚಿಗುರದಂತೆ ನೋಡಿಕೊಂಡಿದ್ದರು
ಎಂದೆಲ್ಲಾ ಗೊತ್ತಿದ್ದೂ ಗೊತ್ತಿಲ್ಲದಂತೆಯೋ ಮೋದಿಯ ಬಗ್ಗೆ ಸದಭಿಪ್ರಾಯವನ್ನು ಹರಡತೊಡಗಿದ್ದರು.
ಹಲವರು ಮೋದಿ ಸಂಘ ಪರಿವಾರದ ಅಣತಿಯಂತೆ ಕಾರ್ಯ ನಿರ್ವಹಿಸದಿದ್ದರೂ ಅದಾನಿ, ಅಂಬಾನಿ, ಟಾಟಾಗಳಂತಹ
ಭಾರಿ ಕಾರ್ಪೋರೇಟುಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ಹೇಳಿದರು. ಮೋದಿ ಆಡಳಿತದಲ್ಲಿ ಗುಜರಾತ್ ಅದ್ಭುತ ಬೆಳವಣಿಗೆಗಳನ್ನು ಸಾಧಿಸಿತು ಎಂದೆಲ್ಲಾ
ಹೇಳತೊಡಗಿದರು. ಆದರೆ ಅವರು ಹೇಳುತ್ತಿದ್ದ ಅಂಕಿ ಅಂಶಗಳು ಸುಳ್ಳಾಗಿದ್ದವು ಎನ್ನುವುದು ಬಯಲಾಗಿ ಬಹುತೇಕರಿಗೆ ಅರಿವಾಗಿದ್ದು ಬಹಳ ನಂತರವೇ. ಗುಜರಾತ್ ಅಭಿವೃದ್ಧಿ ಮಾದರಿ ಎನ್ನುವುದು ಪೊಳ್ಳಿನ
ಮಾದರಿಯಾಗಿತ್ತು ಎಂದೆಲ್ಲಾ ಬಹುತೇಕರಿಗೆ ಗೊತ್ತಾಗಿದ್ದು ತಡವಾಗಿ.
ಮೋದಿಯ
ಬಿಜೆಪಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಭಾರಿ ಬಹುಮತ ಪಡೆದು ಸುಮಾರು ಎರಡು ದಶಕಗಳ ನಂತರ ಬಹುಮತದ ಸರ್ಕಾರವೊಂದನ್ನು ಸ್ಥಾಪಿಸಲಾಯಿತು. ಇದು
ಮೋದಿಯ ಭಾರಿ ಸಾಧನೆಯನ್ನಾಗಿಯೂ ಬಿಂಬಿಸಿಡಲಾಯಿತು. ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್
ಮೆಷೀನ್ ಗಳನ್ನು ಹಂಚಿಕೆ ಮಾಡಿ ಒತ್ತಿದ ಮತಗಳೆಲ್ಲವೂ ಮೋದಿ ಪರವಾಗಿಯೇ ಹೋಗುವಂತೆ ಮಾಡಲಾಗಿತ್ತು ಎಂಬ ವರದಿಗಳೂ ಬಂದವು.
ಅಷ್ಟರಲ್ಲಿ ಆಗಲೇ ಇಂಡಿಯಾದ ಮಧ್ಯಮ ವರ್ಗ ಮೋದಿ ಮೋಡಿಯೊಳಗೆ ಸಿಲುಕಿ ತೇಲಾಡತೊಡಗಿದ್ದರು. ಭಾರಿ
ಭರವಸೆಗಳನ್ನೂ ಹೊಂದಿದ್ದರು. ನಂತರದ ಎರಡು ವರ್ಷಗಳ ಕಾಲ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಸಹಾಯಧನ
ನೇರ ಬ್ಯಾಂಕ್ ಖಾತೆಗೆ, ಭೇಟಿ ಪಡಾವೋ ಭೇಟಿ ಬಚಾವೋ,
ಪ್ರಧಾನ್ ಮಂತ್ರಿ ಜನಧನ್ ಯೋಜನಾ, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನಾ, ಸ್ಟಾರ್ಟ್ ಅಪ್ ಇತ್ಯಾದಿ
ಯೋಜನೆಗಳನ್ನು ಜನಸಾಮಾನ್ಯರಿಗೆ ಆಕರ್ಷಕವಾಗುವಂತೆ ಮಾಡಿ ಮುಂದಿಡಲಾಯಿತು. ಆದರೆ ವಾಸ್ತವದಲ್ಲಿ ಇವುಗಳು ಯಾವುವೂ ಜನಸಾಮಾನ್ಯರಿಗೆ ಪ್ರಯೋಜನಕ್ಕೆ
ಬಾರದ, ಅಪಾಯಕಾರಿಯೂ ಆದ ಅದೇ ವೇಳೆ ಭಾರಿ
ಕಾರ್ಪೊರೇಟುಗಳಿಗೆ ಸೂಪರ್ ಬಂಪರ್ ಲಾಭಗಳನ್ನು ಮಾಡುವ ಯೋಜನೆಗಳಾಗಿದ್ದವು ಎನ್ನುವುದು ಹಲವರಿಗೆ ಗೊತ್ತಾಗಿದ್ದು ನಂತರವೇ.
ಅದಕ್ಕೆ ಒಂದು ಉದಾಹರಣೆಯಾಗಿ ಅನಿಲ ಸಬ್ಸಿಡಿಯನ್ನು ನೇರಖಾತೆಗೆ ಹಾಕಲಾಗುತ್ತದೆ ಎಂದು ಬಿಂಬಿಸಿ
ಮಾರುಕಟ್ಟೆ ಶಕ್ತಿಗಳಿಗೆ ಅನಿಲ ಮಾರಾಟವನ್ನು ಮುಕ್ತಗೊಳಿಸಿ ಅನಿಲ ಸಬ್ಸಿಡಿಯನ್ನೇ ಚಾಕಚಕ್ಯತೆಯಿಂದ
ಇಲ್ಲದಂತೆ ಕೆಲವರಿಗೆ ಕೊಡುತ್ತಾ ಹಲವರಿಗೆ ಇಲ್ಲದಂತೆ ಮಾಡಿದ್ದು, ಮುನ್ನೂರು ನಾನೂರು ರೂಪಾಯಿಗಳಿಗೆ
ಸಿಗುತ್ತಿದ್ದ ಅನಿಲ ಸಿಲಿಂಡರ್ ನ ಬೆಲೆ ಈಗ 1200ಕ್ಕೆ ತಲುಪಿಸಿ ಮಾರುಕಟ್ಟೆ ಶಕ್ತಿಗಳಿಗೆ ಸೂಪರ್
ಲಾಭ ಕೊಳ್ಳೆಹೊಡೆಯಲು ಅನುಕೂಲ ಕಲ್ಪಿಸಿದ್ದನ್ನು ನಾವು ಗಮನಿಸಬಹುದು.
ನಂತರದ್ದು
ನೋಟು ರದ್ದತಿ, ಜಿ ಎಸ್ ಟಿ ಹೇರಿಕೆ. ನೋಟು ರದ್ದತಿಯನ್ನು ಬಹುತೇಕ ಜನರು ಬಹಳ ಉಮೇದಿನಿಂದ
ಸ್ವಾಗತಿಸುವಂತಹ ರೀತಿಯಲ್ಲಿ ಬಿಂಬಿಸಿ ಮಾಡಲಾಗಿತ್ತು. ಇದು ಸರ್ಕಾರ ಮಾಡಿದ ದೇಶದ ಜನಸಾಮಾನ್ಯರ
ಹಗಲು ದರೋಡೆ ಎನ್ನುವುದು ಹಲವರಿಗೆ ಗೊತ್ತಾಗಿದ್ದು ಬಹಳ ನಂತರ. ಈ ನಡುವೆ ಹಲವು ನೀತಿ
ಬದಲಾವಣೆಗಳು, ಕಾನೂನು ತಿದ್ದುಪಡಿಗಳು ಇತ್ಯಾದಿಗಳೆಲ್ಲಾ ನಡೆದವು. ಸರಕಾರಿ ಹಿಡಿತದ ಲಾಭಪೂರಿತ
ಸಂಸ್ಥೆಗಳೆಲ್ಲಾ ನಷ್ಟ ತೋರಿಸುವ ಇಲ್ಲವೇ ಖಾಸಗಿಯವರಿಗೆ ಮಾರಾಟವಾಗುವ ರೀತಿ ಆಗತೊಡಗಿತು. ಇದರಿಂದಾಗಿ
ಜನರಿಗೆ ಗುಣ ಮಟ್ಟದ ಸೇವೆ ಹಾಗೂ ದೇಶಕ್ಕೆ ಗರಿಷ್ಠ ಅಭಿವೃದ್ಧಿ ಎಂದೆಲ್ಲಾ ಭಾರಿ ಪ್ರಚಾರ
ನೀಡಲಾಯಿತು.ಕಾಂಗ್ರೆಸ್ ಇನ್ನಿತರ ವಿರೋಧ ಪಕ್ಷಗಳು ನಾಮ ಮಾತ್ರಕ್ಕಾದರೂ ತಮ್ಮ ದನಿಗಳನ್ನು
ಎತ್ತಲಾರದ ಪರಿಸ್ಥಿತಿಯಲ್ಲಿದ್ದವು. ಎಡಪಕ್ಷಗಳು ಒಂದು ಮಟ್ಟಕ್ಕೆ ದನಿ ಎತ್ತಿದ್ದರೂ ಅದು
ನಾಮಮಾತ್ರಕ್ಕೆಂಬಂತೆ ಇತ್ತು. ನಂತರ ಏನಾಯಿತು ಏನಾಗುತ್ತಿದೆ ಎನ್ನುವುದು ಸಾಕಷ್ಟು ಜನರಿಗೆ
ಗೊತ್ತೇ ಇದೆ.
ಅಂದರೆ
ತಮಗೆ ಬೇಕಾದ ಒಬ್ಬ ವ್ಯಕ್ತಿಯನ್ನು ಆಧರಿಸಿದ ಸರ್ಕಾರವನ್ನು ಅಧಿಕಾರಕ್ಕೆ ತಂದು ತಮಗೆ ಬೇಕಾದ
ಹಾಗೆ ಕಾನೂನು ಕಟ್ಟಳೆಗಳನ್ನು ತಿರುಚಿ, ಉಲ್ಲಂಘಿಸಿ, ಹಾಗೆ ಸಾದ್ಯವಾಗದವುಗಳನ್ನು ಮಾರ್ಪಡಿಸಿ
ಐದು ವರ್ಷಗಳ ಕಾಲ ಜನಸಾಮಾನ್ಯರನ್ನು ಈ ಮಟ್ಟದಲ್ಲಿ ದೋಚಿ ಭಾರಿ ಕಾರ್ಪೋರೇಟುಗಳಿಗೆ ಈ ಮಟ್ಟದ
ಸೂಪರ್ ಡೂಪರ್ ಲಾಭ ಮಾಡಿಕೊಟ್ಟಂತಹ ಸರ್ಕಾರ ಮೋದಿ ಸರಕಾರ. ಅದಾನಿ, ಅಂಬಾನಿ ಕೂಟ ಇದರ ಅತ್ಯಂತ
ಹೆಚ್ಚಿನ ಫಲಾನುಭವಿಗಳೆಂದು ಮೇಲ್ಮಟ್ಟದಲ್ಲಿ ಕಾಣಿಸುತ್ತದೆ. ಆದರೆ ವಾಸ್ತವ ಅಷ್ಟು ಮಾತ್ರವೇ
ಅಲ್ಲ.
ಇಂಡಿಯನ್
ಪೊಲಿಟಿಕಲ್ ಆಕ್ಷನ್ ಕಮಿಟಿ (IPAC) ಎನ್ನುವ ಒಂದು ಸಂಸ್ಥೆ 2014ರ ಚುನಾವಣಾ ಸಂದರ್ಭದಲ್ಲಿ
ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು. ಇದರ ಮೂಲವೂ ಅಮೇರಿಕದ್ದೇ ಆಗಿದೆ.
ಇದರ ಜೊತೆಗೆ ಸಿಟಿಜನ್ಸ್ ಫಾರ್ ಅಕೌಂಟೇಬಲ್
ಗವರ್ನನ್ಸ್ (ಸಿ ಎ ಜಿ) ಎಂಬ ಸಂಸ್ಥೆಯನ್ನು
ಮಾದ್ಯಮಗಳೆಲ್ಲಾ ಚುನಾವಣಾ ತಂತ್ರ ನಿಪುಣನೆಂದು ಬಿಂಬಿಸಿದ್ದ ಪ್ರಶಾಂತ್ ಕಿಶೋರ್ ರಚಿಸಿದ್ದರು.
ಇದರಲ್ಲಿದ್ದವರೆಲ್ಲಾ ಐಐಟಿ, ಐ ಐ ಎಂ, ಸ್ಟಾನ್
ಫೋರ್ಡ್ ಯೂನಿವರ್ಸಿಟಿ, ಕಾರ್ನೆಲ್ ಯೂನಿವರ್ಸಿಟಿ ಮೊದಲಾದ ಕಡೆಯಿಂದ ಬಂದವರೇ ಹೆಚ್ಚಿನವರು
ಆಗಿದ್ದರು. ಅವರೆಲ್ಲಾ ಮೆಕಿನ್ಸೆ, ಜೆ ಪಿ ಮಾರ್ಗನ್, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಇಂಡಿಯನ್
ಎಕ್ಸ್ ಪ್ರೆಸ್ ಗ್ರೂಪ್, ಆಲ್ ಇಂಡಿಯಾ ರೇಡಿಯೋ ಮೊದಲಾದೆಡೆ ಕಾರ್ಯ ನಿರ್ವಹಿಸಿದವರಾಗಿದ್ದರು.
ಅವರಿಗೆಲ್ಲಾ ಲಕ್ಷಾಂತರ ರೂಪಾಯಿಗಳ ಸಂಬಳ ನೀಡಲಾಗುತ್ತಿತ್ತು. ಈ ಸಿ ಎ ಜಿ ತನ್ನನ್ನು ಸೋಷಿಯಲ್
ಅಸಿಸ್ಟೆನ್ಸ್ ಆರ್ಗನೈಜೇಷನ್ (ಸಾಮಾಜಿಕ ಸಹಾಯಕ ಸಂಘಟನೆ) ಎಂದು ಕರೆದುಕೊಂಡಿತ್ತು. ಬಿಹಾರಿನ ಸಮಾಜವಾದಿ ಪರಿವಾರದವರೆಂದು ಬಿಂಬಿಸಿಕೊಂಡ ಮುಖ್ಯ ಮಂತ್ರಿ ನಿತೀಶ್
ಕುಮಾರ್ ಹಾಗೇನೆ ಪಂಜಾಬಿನ ಆಗ ಕಾಂಗ್ರೆಸಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ
ಇದೇ ಪ್ರಶಾಂತ್ ಕಿಶೋರ್ ಸೇವೆಯನ್ನು ಪಡೆದುಕೊಂಡವರಾಗಿದ್ದಾರೆ. ಲಾಭರಹಿತವಾದ ಸೇವೆ ತಮ್ಮದೆಂದು
ಹೇಳುತ್ತಾ ಚುನಾವಣಾ ನಿರ್ವಹಣೆ ನಿರೂಪಣೆ ಮಾಡುವ, ಭಾರಿ ಕಾರ್ಪೋರೇಟುಗಳ ವ್ಯಾಪಾರ ವಹಿವಾಟುಗಳ
ವೇದಿಕೆ ನಿರ್ವಹಣೆ, ಬಾರಿ ಕಂಪನಿಗಳಿಗೆ ಬ್ರಾಂಡ್ ನಿರ್ಮಾಣ ಮಾಡಿಕೊಡುವುದು ಇತ್ಯಾದಿ ಮಾಡುವ ಈ
ಸಂಸ್ಥೆ ಸಾವಿರಾರು ಕೋಟಿ ರೂಪಾಯಿಗಳನ್ನು ಇಂತಹ ಕೆಲಸಗಳಿಗಾಗಿ ಪಡೆಯುತ್ತಿದೆ. ಇಂತಹ ಭಾರಿ ಕಾರ್ಪೋರೇಟ್ ಪರ ಸಂಸ್ಥೆಗಳು
ಚುನಾವಣಾ ರಂಗದಲ್ಲಿ ಕಾರ್ಯ ಚಟುವಟಿಕೆ ನಡೆಸುವುದೆಂದರೆ ಅದು ಪ್ರಜಾಪ್ರಭುತ್ವ ಪರವೂ
ಆಗುವುದಿಲ್ಲ. ಇಂತಹವು ಜನಸಾಮಾನ್ಯರ ಪ್ರಜಾತಾಂತ್ರಿಕ ಹಕ್ಕುಗಳ ಪರ ನಿಲ್ಲಲು ಸಾಧ್ಯವೇ ಇಲ್ಲ
ತಾನೇ.
ಇಂದು ವಿಶ್ವದ ಬಹುಸಂಖ್ಯಾತ ಜನಸಮೂಹ ನೂರೆಂಟು ಸಂಕಷ್ಟಗಳಿಗೆ ಈಡಾಗಿದ್ದಾರೆ. ಎಲ್ಲಾ ರೀತಿಯ ಅಸಮಾನತೆಗಳ ಹೆಚ್ಚಳಕ್ಕೆ ಜನಸಾಮಾನ್ಯರನ್ನು ಈಡು ಮಾಡಲಾಗಿದೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ವರ್ಣಅಸಮಾನತೆ, ಪ್ರಾದೇಶಿಕ ಅಸಮಾನತೆ ಹೀಗೆ ಅಸಮಾನತೆಗಳ ದೊಡ್ಡ ಕೂಪಗಳೊಳಗೆ ಈ ಜನರೆಲ್ಲಾ ಒದ್ದಾಡುವಂತೆ ಮಾಡಲಾಗಿದೆ. ಜಾಗತಿಕವಾಗಿ ಶ್ರಮಜೀವಿಗಳಿಂದ ಉತ್ಪಾದನೆಯಾಗುವ ಸಂಪತ್ತು ಕೆಲವೇ ಜಾಗತಿಕ ಕಾರ್ಪೊರೆಟ್ ಗಳು ಹತ್ತು ಹಲವು ಕುತಂತ್ರ, ತಂತ್ರಗಳಿಂದ ದೋಚುತ್ತಾ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ಅದೇ ವೇಳೆ ಹಿಂದೆ ಇದ್ದ ಕಾರ್ಮಿಕರ ಜಾಗಗಳಲ್ಲಿ
ರೋಬೋಟೀಕರಣ ಮಾಡಲಾಗುತ್ತಿದೆ. ಕೃತಕ ಬುದ್ದಿಮತ್ತೆಯನ್ನು ವ್ಯಾಪಕಗೊಳಿಸಲು ಶ್ರಮಿಸಲಾಗುತ್ತಿದೆ.
ಭಾರಿ ಕಾರ್ಪೋರೇಟುಗಳ ಪೈಪೋಟಿ ಹಾಗೂ ಕುತಂತ್ರಗಳಿಂದಾಗಿ ಇಂಡಿಯಾದಲ್ಲೇ ಸಾವಿರಾರು ಉದ್ದಿಮೆಗಳು
ನೆಲಕಚ್ಚಿ ಹೋಗಿವೆ. ಇಂಡಿಯಾದ ನಿರುದ್ಯೋಗದ ಪ್ರಮಾಣ 2023ರ ಮಾರ್ಚ್ ವೇಳೆಗೆ ಶೇ 8.11ಕ್ಕೂ
ಹೆಚ್ಚು ಇತ್ತೆಂಬ ವರದಿಗಳಿವೆ. ಎಕಾನಮಿಕ್ ಔಟ್ ಲುಕ್ ನಲ್ಲಿ ಮೇ 1ರಂದು ಪ್ರಕಟವಾದ ಲೇಖನವೊಂದು ಈ
ಬಗ್ಗೆ ವಿವರಿಸಿದೆ. ಸ್ಟಾರ್ಟ್ ಅಪ್ ಬೆಳವಣಿಗೆ ಎಂದೆಲ್ಲಾ ಭಾರಿ ಬಿಂಬಿಸುವಿಕೆ ನಡೆದಿದ್ದರೂ
ಅವುಗಳು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ. ಸ್ಟಾರ್ಟ್ ಅಪ್ ಆದ ವೇಗದಲ್ಲೇ ಮುಚ್ಚುವಿಕೆಗಳೂ
ನಡೆಯುತ್ತಿರೋದೇ ಹೆಚ್ಚಾಗಿದೆ. ಆದರೆ ಸ್ಟಾರ್ಟ್ ಅಪ್ ಗಳ ಭಾರಿ ಪ್ರಚಾರ ನೀಡಲಾಗುತ್ತಿದೆ.
ವಾಸ್ತವ ಹುಸಿಯಾಗಿವೆ ಎಂದು ಸರ್ಕಾರಿ ಅಂಕಿಅಂಶಗಳೇ ತಿಳಿಸುತ್ತವೆ.
ಹೊಸ
ಉದ್ದಿಮೆಗಳು ಮೇಲೇಳಲಾಗದಂತಹ ವಾತಾವರಣವಿದೆ. ಹೆಚ್ಚಾಗಿ ಮೊಬೈಲ್ ಜಾಲ, ವಿಮೆ, ಪ್ರವಾಸೋದ್ದಿಮೆ,
ರಿಟೇಲ್, ವ್ಯಾಪಾರಗಳಂತಹ ಸೇವಾ ವಲಯಗಳಿಗೆ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಉತ್ಪಾದನೆಯಿಲ್ಲದ
ಅರ್ಥ ವ್ಯವಸ್ಥೆಯಂತೆ ಮಾಡಲಾಗುತ್ತಿದೆ. ಎಲ್ಲವನ್ನೂ ದೈತ್ಯ ಕಾರ್ಪೋರೇಟುಗಳು ನುಂಗಿ ನೀರು
ಕುಡಿಯುತ್ತಿವೆ. ಇಂಡಿಯಾದಲ್ಲಿ ಈ ಪ್ರಕ್ರಿಯೆಯನ್ನು ಅಂಬಾನಿ, ಅದಾನಿ ಮೊದಲಾದ ಭಾರಿ ಕಾರ್ಪೋರೇಟು
ಕೂಟಗಳು ಯಾವುದೇ ಹೊಸ ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸದೇ ದೇಶದ ಆಸ್ತಿ
ಸಂಪತ್ತುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಇತ್ತೀಚಿನ ಪರಿಯನ್ನು ಗಮನಿಸಿದರೆ
ಅರ್ಥವಾಗುತ್ತದೆ.
ಅಮೇರಿಕಾ,
ಯುಕೆ, ಫ್ರಾನ್ಸ್, ಜರ್ಮನಿ, ಜಪಾನ್, ರಷ್ಯಾ, ಮೊದಲಾದ ಮುಂದುವರೆದ ರಾಷ್ಟ್ರಗಳೆನಿಸಿಕೊಂಡವುಗಳ ಪ್ರಧಾನ ಸಮಸ್ಯೆ ಕೂಡ ನಿರುದ್ಯೋಗವೇ ಆಗಿದೆ. ವಿಶ್ವಕಾರ್ಮಿಕ ವರ್ಗ ನಿರುದ್ಯೋಗ, ಅರೆ ಉದ್ಯೋಗಗಳಿಂದ ತತ್ತರಿಸುತ್ತಿದೆ. ಫ್ರಾನ್ಸ್
ನಲ್ಲಿ ನಿರುದ್ಯೋಗ ಶೇಕಡಾ 7.1 ಇದ್ದರೆ, ಉಕ್ರೇನ್, ಗ್ರೀಸ್, ಸ್ಪಯಿನ್ ನಲ್ಲಿ ಶೇಕಡಾ 13ಕ್ಕೂ
ಹೆಚ್ಚಿದೆ. ಟರ್ಕಿಯಲ್ಲಿ ಶೇಕಡಾ ಹತ್ತರಷ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಶೇಕಡಾ 32ಕ್ಕೂ
ಹೆಚ್ಚು ಇದೆ ಎಂದೆಲ್ಲಾ ವರದಿಗಳಿವೆ.
ದಿನವಹಿ ಹತ್ತಾರು ಸಾವಿರ ಜನರು ಜಾಗತಿಕವಾಗಿ ಉದ್ಯೋಗ
ಸಂಬಂದಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ ಎಂದು ಅಂತರಾಷ್ಟ್ರೀಯ ಲೇಬರ್ ಆರ್ಗನೈಜೇಷನ್ (ಐ ಎಲ್ ಒ)
ಹೇಳಿದೆ. ಈಗದು ಮತ್ತಷ್ಟು ಏರುಗತಿಯಲ್ಲಿಯೇ ಸಾಗುತ್ತಿದೆ. ಇದು ಈ ದೇಶಗಳಲ್ಲಿ ಕಾರ್ಮಿಕರ ಭಾರಿ
ಪ್ರತಿಭಟನೆಗಳಿಗೆ ಕಾರಣವಾಗಿದೆ. ಫ್ರಾನ್ಸ್ ನಲ್ಲಿ ನಡೆದ ಯೆಲ್ಲೋ ವೆಸ್ಟ್ಸ್ ನಂತಹ
ಪ್ರತಿಭಟನೆಗಳಿಗೆ ಇದೇ ಪ್ರಧಾನ ಕಾರಣವಾಗಿದೆ.
ಒಂದೆಡೆ
ಜನಸಾಮಾನ್ಯರ ಬದುಕುಗಳನ್ನು ಭಾರಿ ಕನಿಷ್ಠ ಮಟ್ಟಕ್ಕೆ ದೂಡುತ್ತಾ, ಸೇನಾ ನಿರ್ವಹಣೆಗಾಗಿ ಮಾಡುತ್ತಿರುವ ವೆಚ್ಚ ಜಾಗತಿಕವಾಗಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ.
ಇಂಡಿಯಾ 2022-23ರ ತನ್ನ ಆಯವ್ಯಯದ ಶೇಕಡಾ 13ರಷ್ಟು ಅಂದರೆ 5.94 ಕೋಟಿ ರೂಪಾಯಿಳಷ್ಟು ಹಣವನ್ನು
ಸೇನಾವೆಚ್ಚಕ್ಕಾಗಿ ಮೀಸಲಿರಿಸಿದೆ 2018ರಲ್ಲಿ ಸುಮಾರು 1.8 ಟ್ರಿಲಿಯನ್ ಡಾಲರುಗಳಷ್ಟು ಹಣವನ್ನು
ಜಾಗತಿಕವಾಗಿ ಕೇವಲ ಸೇನೆಗಾಗಿಯೇ ವೆಚ್ಚ ಮಾಡಲಾಗಿದೆ. ಇದು ಇದುವರೆಗಿನ ದಾಖಲಾದ ಅತೀ
ಹೆಚ್ಚಿನ ಸೇನಾ ವೆಚ್ಚವಾಗಿದೆ.
ಅಂದರೆ ಉತ್ಪಾದನೆಯಾಗುವ ಸಂಪತ್ತಿನಲ್ಲಿ ದೊಡ್ಡ ಪಾಲು ಅನುತ್ಪಾದಕ ಹಾಗೂ ವಿನಾಶಕಾರಿ ಯುಧ್ಧ
ಸನ್ನದ್ಧತೆಗಳಿಗಾಗಿಯೇ ಜಾಗತಿಕ ಆಳುವ ಶಕ್ತಿಗಳು ಖರ್ಚು ಮಾಡುತ್ತಿವೆ. 2023ರ ಏಪ್ರಿಲ್ ವೇಳೆಗೆ
ಜಾಗತಿಕವಾಗಿ ಸೇನಾ ವೆಚ್ಚ 2240 ಬಿಲಿಯನ್ ಅಮೇರಿಕನ್ ಡಾಲರುಗಳಾಗಿವೆ ಎಂಬ ಅಂತರಾಷ್ಟ್ರೀಯ
ಶಾಂತಿ ಸಂಶೋಧನಾ ಸಂಸ್ಥೆಯ (SIPRI) ವರದಿ ಇದೆ. ಇವೆಲ್ಲಾ ಪ್ರಜಾಪ್ರಭುತ್ವ ನೆಲೆನಿಂತು ಅರಳಲು
ಭಾರಿ ಅಡ್ಡಿಗಳನ್ನು ಜಾಗತಿಕವಾಗಿ ಸೃಷ್ಟಿಸುತ್ತಿವೆ.
ಜಾಗತಿಕ
ಬಂಡವಾಳಶಾಹಿ ವ್ಯವಸ್ಥೆ ತನ್ನದೇ ಮುಖ್ಯ ಕಾರಣಗಳಿಂದ ಬಿಕ್ಕಟ್ಟಿಗೆ ಒಳಗಾಗಿ ಬಹಳ ಕಾಲವಾಗಿದೆ.
ಬಂಡವಾಳಶಾಹಿ ಇಡೀ ಜಗತ್ತನ್ನೇ ಆವರಿಸಿಕೊಂಡಾದ ಮೇಲೆ ಅದಕ್ಕೆ ಹೊಸ ಮಾರುಕಟ್ಟೆಯ ಸಾಧ್ಯತೆಗಳು
ಕರಗಿಹೋದವು. ಹಾಗಾಗಿ ಇರುವ ಜಾಗತಿಕ ಮಾರುಕಟ್ಟೆಗಾಗಿಯೇ ಪೈಪೋಟಿಗಳು, ಕದನಗಳು, ಯುಧ್ಧಗಳು,
ವ್ಯಾಪಾರಿ ಯುಧ್ಧಗಳು, ಸಾಲ ಸಹಾಯಗಳ ತಂತ್ರ ಕುತಂತ್ರಗಳ ಕಳ್ಳಾಟಗಳು ಶುರುವಾದವು. ನವವಸಾಹತು
ರೀತಿಯ ಲೂಟಿಗಳ ಮೂಲಕ ಜಗತ್ತಿನ ರಾಷ್ಟ್ರಗಳನ್ನು ಈ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಮೂಗಿನ
ನೇರಕ್ಕೆ ಹಿಡಿತದಲ್ಲಿಟ್ಟುಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಾ ಬಂದಿವೆ.. ಅಲ್ಲಿನ
ಸರಕಾರಗಳನ್ನೂ ತಾವೇ ನಿಯಂತ್ರಣದಲ್ಲಿಟ್ಟುಕೊಂಡಿವೆ. ಆಯಾ ದೇಶಗಳ ಜನರ ನಡುವೆ ಒಡಕು ಮೂಡಿಸಲು ಆಯಾ
ದೇಶಗಳಲ್ಲಿರುವ ಒಡೆಯುವ ವಿಚಾರಗಳಾದ ಜಾತಿ, ಧರ್ಮ, ರಾಷ್ಟ್ರೀಯತೆ, ಭಾಷೆ, ಬಣ್ಣ, ಲಿಂಗ ಹೀಗೆ
ತಮಗೆ ಅನುಕೂಲಕರ ಅಂಶಗಳನ್ನು ಸಮರ್ಥವಾಗಿ ಬಳಸುತ್ತಿದ್ದಾರೆ. ಅದಕ್ಕೆ ಪ್ರಜಾಪ್ರಭುತ್ವ ಸ್ಥಾಪನೆಯ
ಹುಸಿ ಮುಸುಕುಗಳನ್ನೂ ಹಾಕಲಾಗುತ್ತದೆ. ಪ್ರಜಾಪ್ರಭುತ್ವ ಸ್ಥಾಪನೆ ಮಾಡಿ ಆಯಾ ರಾಷ್ಟ್ರಗಳ ಜನರಿಗೆ
ಸಹಾಯ ಮಾಡುವ ನೆಪಗಳಲ್ಲೇ ಹಲವಾರು ವಿನಾಶಕಾರಿ ಯುದ್ಧಗಳನ್ನು ನಡೆಸಲಾಗಿದೆ. ಇವುಗಳನ್ನು ನಾವು
ಗಮನಿಸಿದರೆ ಜಾಗತಿಕ ಬಂಡವಾಳಶಾಹಿಗಳು ಹೇಳುವ ಪ್ರಜಾಪ್ರಭುತ್ವದ ಹೂರಣವೇನು ಎನ್ನುವುದು
ಅರ್ಥವಾಗುವ ವಿಚಾರ.
ಇಂಡಿಯಾದ ಕಾರ್ಮಿಕರು, ರೈತಾಪಿಗಳು, ಕೂಲಿಕಾರರು ಸೇರಿದಂತೆ ಬಹುಸಂಖ್ಯಾತ ಜನಸಾಮಾನ್ಯರು
ಇಂದಿನ ಬದುಕು ನಡೆಸಲಾಗದ ತೀಕ್ಷ್ಣವಾದ ಬಿಕ್ಕಟ್ಟಿನ ಸ್ಥಿತಿಗೆ ಒಳಗಾಗಿದ್ದಾರೆ. ಕೆಲವೇ ಕಾರ್ಪೋರೇಟುಗಳು ದೇಶದ ಒಟ್ಟು
ಆಸ್ತಿ ಸಂಪತ್ತಿನ ಮೇಲೆ ತಮ್ಮ ಹಿಡಿತ ಸಾಧಿಸಿರುವುದಲ್ಲದೇ ಸರಕಾರಗಳನ್ನೂ ಕೂಡ ತಾವೇ ನೇರವಾಗಿ
ನಿರ್ಧರಿಸುತ್ತಿವೆ. ಇದೇ ರೀತಿಯ ವಿದ್ಯಮಾನಗಳೇ ಜಾಗತಿಕವಾಗಿ ಬಹುತೇಕ ರಾಷ್ಟ್ರಗಳಲ್ಲಿ
ನಡೆಯುತ್ತಿವೆ. ಅಮೇರಿಕ, ಫ್ರಾನ್ಸ್, ಯುಕೆ ಮೊದಲಾದ ರಾಷ್ಟ್ರಗಳಲ್ಲಿ ಇದುವರೆಗೂ ಇದ್ದ
ಬಂಡವಾಳಶಾಹಿ ಪ್ರಜಾಪ್ರಭುತ್ವದ ನಿಯಮಗಳೂ ಕೂಡ ರದ್ದಾಗಿ ನಿರಂಕುಶ ಫ್ಯಾಸಿಸ್ಟೀಕರಣಗಳನ್ನು
ಹೇರಲಾಗುತ್ತಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು
ಸೇನಾ ವೆಚ್ಚ ಮಾಡುವ ರಾಷ್ಟ್ರಗಳಲ್ಲಿ ಇಂಡಿಯಾ ರಷ್ಯಾವನ್ನು ಹಿಂದಿಕ್ಕಿ ನಾಲ್ಕನೇ
ಸ್ಥಾನಕ್ಕೇರಿದೆ. ಆದರೆ ಇಂಡಿಯಾದ ಬಹುಸಂಖ್ಯಾತ
ಜನಸಮೂಹವನ್ನು ತೀವ್ರ ಆರ್ಥಿಕ ದುಸ್ಥಿತಿಗೆ ತಳ್ಳಿದೆ.
ಇದರ ಬಾಗವಾಗಿಯೇ ಮೂರು
ದಶಕಗಳ ಹಿಂದೆ ಜಾಗತಿಕ ಕಾರ್ಪೊರೆಟ್ ಗಳ ಲೂಟಿಗಾಗಿಯೇ ಜಾಗತೀಕರಣವನ್ನು ವಿಶ್ವದ ಜನರ ಮೇಲೆ ಹೇರಲಾಯಿತು. ಆದರೂ ಜಾಗತಿಕ ಬಂಡವಾಳಿಗರು ತಮ್ಮ ಸೂಪರ್ ಲಾಭ ಕಾಯ್ದಕೊಳ್ಳಲು ಸಾದ್ಯವಾಗುತ್ತಿಲ್ಲ. ಅಗತ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ಉತ್ಪಾದನೆ ಮಾಡುವುದು ಒಂದೆಡೆಯಾದರೆ
ಉತ್ಪಾದನೆ ಮಾಡದೆ ಲಾಭ ಕೊಳ್ಳೆ ಹೊಡೆಯಲು ತಮ್ಮ ತಮ್ಮಲ್ಲೇ ಪೈಪೋಟಿ ಮಾಡುತ್ತಾ ಮತ್ತೂ ಬಿಕ್ಕಟ್ಟಿನ ಸ್ಥಿತಿಗೆ ಜಗತ್ತನ್ನು ಕೊಂಡೊಯ್ಯುತ್ತಿದ್ದಾರೆ. ಸಿರಿಯಾ, ಲಿಬಿಯಾ, ಇರಾಕ್, ಅಫ್ಘಾನಿಸ್ತಾನ, ಪ್ಯಾಲೆಸ್ತೇನ್ ಇದೀಗ ಉಕ್ರೇನ್ ಮೊದಲಾದೆಡೆಗಳಲ್ಲಿ ಪ್ರಾದೇಶಿಕ ಯುದ್ಧಗಳನ್ನು ಜಾಗತಿಕ ಮಟ್ಟದಲ್ಲಿ ನಡೆಸಿದರೂ ಅವರ ಬಿಕ್ಕಟ್ಟು ಪರಿಹಾರವಾಗದ ಈಗ ಮತ್ತೂ ಹೆಚ್ಚು ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಅವರ ಇಂತಹ ವಿನಾಶಕಾರಿ ಪ್ರಯತ್ನಗಳು ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ
ಅಂತರ್ಯುದ್ದಗಳಿಗೆ, ಅರಾಜಕತೆಗಳಿಗೆ ಕಾರಣವಾಗಿವೆ. ಇವೆಲ್ಲಾ ಪ್ರಜಾಪ್ರಬುತ್ವ
ನೆಲೆಗೊಳ್ಳುವುದನ್ನು ತಡೆಯುತ್ತಿವೆ.
ಇಂಡಿಯಾದಲ್ಲಿ ಕಾರ್ಮಿಕ
ವರ್ಗ ಹೋರಾಡಿ ಪಡೆದಂತಹ ಹಲವು ಕಾರ್ಮಿಕ ಹಕ್ಕುಗಳು ಈಗ ಬಹುತೇಕ ಇಲ್ಲವಾಗಿವೆ. ಕಾರ್ಮಿಕರಿಗೆ ಒಂದು ಮಟ್ಟದ
ಭದ್ರತೆ ಒದಗಿಸುತ್ತಿದ್ದ ಹಳೇ
ಕಾರ್ಮಿಕ ಕಾಯ್ದೆಗಳಿಗೆಲ್ಲಾ ಜಾಗತೀಕರಣದ ನಂತರ ಜಾಗತಿಕ ಭಾರಿ ಕಾರ್ಪೋರೇಟುಗಳಿಗೆ
ಅನುಕೂಲವಾಗುವಂತೆ ಹಲವಾರು ತಿದ್ದುಪಡಿಗಳನ್ನು ಮಾಡುತ್ತಾ ಬರಲಾಗುತ್ತಿದೆ. ಅದು ಯಾವ
ಮಟ್ಟಕ್ಕೆಂದರೆ ಕಾರ್ಮಿಕರನ್ನು ಕಾರ್ಮಿಕರಾಗಿಯೇ ಪರಿಗಣಿಸದೇ ಇರುವಷ್ಟು ಮಟ್ಟಕ್ಕೆ ಆಗಿದೆ. ನಿಗಧಿತ ಅವಧಿಯ ಉದ್ಯೋಗ (Fixed term employment) ಅನ್ನುವ ನಿಯಮ ಅದಕ್ಕೆ ಮೋದಿ ಸರ್ಕಾರದ ಒಂದು ಸೇರ್ಪಡೆಯಾಗಿದೆ.
ಇದೀಗ
ಮೊದಲಿದ್ದ ಎಂಟು ಗಂಟೆಗಳ ಬದಲು ದಿನಕ್ಕೆ ಹನ್ನೆರಡು ಗಂಟೆಗಳ ಕೆಲಸದ ಅವಧಿಯನ್ನು ಹೆಚ್ಚಿಸಲಾಗಿದೆ.
ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಕೆಲಸದ ಅವಧಿಯನ್ನು ಹನ್ನೆರಡು ಗಂಟೆಗಳಿಗೆ ಹೆಚ್ಚಿಸಿವೆ.
ತಮಿಳುನಾಡಿನ ಡಿ ಎಂ ಕೆ ಸರ್ಕಾರ ಹನ್ನೆರಡು
ಗಂಟೆಗಳ ಕೆಲಸದ ಅವಧಿಯನ್ನು ಹೆಚ್ಚಿಸಲು ಮುಂದಾಗಿ ನಂತರ ಜನರ ವಿರೋಧದ ಕಾರಣದಿಂದಾಗಿ
ಹಿಂದ್ಸರಿದಿದೆ. ಮೋದಿ ಸರಕಾರ
ನೋಟು ರದ್ಧತಿ, ಜಿ ಎಸ್ ಟಿ ಹೇರಿಕೆಗಳನ್ನು ಮಾಡಿ ಅದುವರೆಗೂ ಇದ್ದ ಸಾಂಪ್ರದಾಯಿಕ ಹಾಗೂ
ಅಸಾಂಪ್ರದಾಯಿಕ ಉದ್ಯೋಗಗಳೂ ನೆಲಕಚ್ಚುವಂತೆ ಮಾಡಿತು. ಒಂದು ವರದಿಯ ಪ್ರಕಾರ ಅದರಿಂದಾಗಿ ಆ
ಕ್ಷಣಕ್ಕೇ ಇಂಡಿಯಾದ 50 ಲಕ್ಷ ಉದ್ಯೋಗಗಳನ್ನು ನೆಲಕಚ್ಚುವಂತೆ ಮಾಡಿತ್ತು.
ಜಾಗತೀಕರಣದ ನಂತರ ಕೊಳ್ಳುಬಾಕ ಇಲ್ಲವೇ ಉಪಭೋಗಿ ಸಂಸ್ಕೃತಿ,
ಶಾಪಿಂಗ್ ಸಂಸ್ಕೃತಿಯ ಗೀಳಿಗೆ ಜನರನ್ನು ಅದರಲ್ಲೂ ಮದ್ಯಮ ವರ್ಗದ ಜನರನ್ನು ಕೆಡವಿ ಹಾಕಲಾಗಿತ್ತು.
ಈ ಜನರೇ ಅನಾವಶ್ಯಕ ವಸ್ತುಗಳ ಗ್ರಾಹಕರು ಹಾಗೂ ಜಾಗತೀಕರಣದ ಪ್ರಧಾನ ಬೆಂಬಲಿಗರೂ ಆಗಿದ್ದರು. ಜಾಗತಿಕ ಬಂಡವಾಳಶಾಹಿ ಈ ಜನರನ್ನು ಮಾನಸಿಕವಾಗಿ ಹತ್ತು
ಹಲವು ವಿಧಾನಗಳ ಮೂಲಕ ತಮ್ಮ ತೆಕ್ಕೆಯೊಳಗ ಇಟ್ಟುಕೊಂಡು ಬಂದಿತ್ತು.
ಇವರ ಬೆಂಬಲದೊಂದಿಗೆ ಇಂಡಿಯಾದ ಎಲ್ಲಾ ರಂಗಗಳನ್ನು ಜಾಗತಿಕ ಬಂಡವಾಳ ತನ್ನ ವ್ಯಾಪ್ತಿಗೆ ಒಳಪಡಿಸುತ್ತಾ
ಸಾಗಿತ್ತು. ಆದಾರ್ ಕಡ್ಡಾಯ, ಪಾನ್ ಕಾರ್ಡ್
ಕಡ್ಡಾಯ, ಜನರು ತಾವು ದುಡಿದ ಹಣ ಬಳಸಲೂ ನಿರ್ಬಂಧ, ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ
ಮುಕ್ತ ಅವಕಾಶ, ಕಾರ್ಮಿಕ ಕಾನೂನುಗಳ ಸಡಿಲಿಕೆ, ಇಲ್ಲವೇ ತಿದ್ದುಪಡಿ, ಭಾರಿ ಕಾರ್ಪೋರೇಟು ಪರ
ಎಲ್ಲಾ ಕಾನೂನು ಕಟ್ಟಳೆಗಳ ತಿದ್ದುಪಡಿಗಳು, ಭಾರಿ ಕಾರ್ಪೋರೇಟುಗಳ ಸಾಲಬಾಕಿಗಳ ಮೇಲೆ ಕ್ರಮ
ತೆಗೆದುಕೊಳ್ಳದೇ ಅವರ ಅಕ್ರಮಗಳನ್ನು
ಮುಚ್ಚಿಕೊಳ್ಳಲು ಅನುಕೂಲವಾಗುವಂತಹ ಇನ್ ಸಾಲ್ ವೆನ್ಸಿ ಕಾಯಿದೆಗೆ ತಿದ್ದುಪಡಿ ಇತ್ಯಾದಿಗಳಿಂದ
ಹಿಡಿದು ನೋಟು ರದ್ಧತಿ, ಜಿ ಎಸ್ ಟಿ ಹೇರಿಕೆ, ಸಂವಿಧಾನಾತ್ಮಕ ವಿಧಿಗಳ ಬದಲಾವಣೆ, ಯು ಎ ಪಿ ಎ
ಯಂತಹ ಕರಾಳ ಕಾನೂನುಗಳನ್ನು ಮತ್ತಷ್ಟು ಕರಾಳಗೊಳಿಸಿ ತಿದ್ದುಪಡಿಗಳು, ಒಕ್ಕೂಟ ವ್ಯವಸ್ಥೆಯ
ನಿಯಮಗಳನ್ನು ಸಂಪೂರ್ಣ ಕಡೆಗಣಿಸಿ ವ್ಯಾಪಕ ಕೇಂದ್ರೀಕರಣಗೊಳಿಸುವುದು, ರಾಜ್ಯ ಸರಕಾರಗಳ
ಅಧಿಕಾರಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮೊಟಕುಗೊಳಿಸುತ್ತಾ ಹೋಗುವುದು, ಶಾಸಕಾಂಗ,
ಕಾರ್ಯಾಂಗಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಾ ನ್ಯಾಯಾಂಗವನ್ನೂ ತಮ್ಮ ಹಿಡಿತಕ್ಕೆ ಪ್ರತ್ಯಕ್ಷ
ಹಾಗೂ ಪರೋಕ್ಷವಾಗಿ ತೆಗೆದುಕೊಳ್ಳುತ್ತಾ ಹೋಗುವುದು…ಹೀಗೆ ಹತ್ತು ಹಲವು
ಪ್ರಕ್ರಿಯೆಗಳ ವೇಗ ಹೆಚ್ಚಿದವು. ನೋಟು ಅಮಾನ್ಯೀಕರಣದ ಮೂಲಕ ದೇಶದ ಎಲ್ಲಾ ಜನಸಾಮಾನ್ಯರ
ಕೈಯಲ್ಲಿದ್ದ ಹಣವೆಲ್ಲಾ ಸುಮಾರು ಆರೇಳು ತಿಂಗಳುಗಳವರೆಗೆ ಸರ್ಕಾರ ವಶಪಡಿಸಿ ಇಟ್ಟುಕೊಂಡು ಕೆಲವೇ
ಭಾರಿ ಕಾರ್ಪೋರೇಟುಗಳ ಹಿತಾಸಕ್ತಿಗಳನ್ನು ಕಾಪಾಡಿತು.
ವಿಶ್ವ ಆರ್ಥಿಕ ವೇದಿಕೆಯು ಬಿಡುಗಡೆಗೊಳಿಸಿದ 2020ರ ವರದಿಯಲ್ಲಿ ನಮ್ಮ ದೇಶದ
ಲಿಂಗ ಸಮಾನತೆಯ ಸೂಚ್ಯಂಕವು 153 ರಾಷ್ಟ್ರಗಳಿಗೆ ಹೋಲಿಸಿದಾಗ 112ನೇ ಸ್ಥಾನದಲ್ಲಿದೆ. ಅಂದರೆ ನೇಪಾಳ, ಶ್ರೀಲಂಕಾ, ಬಾಂಗ್ಲಾ ದೇಶಕ್ಕಿಂತಲೂ ಕಳಪೆ ಸ್ಥಾನದಲ್ಲಿದೆ. ಬಾಂಗ್ಲಾ ದೇಶ 50ನೇ ಸ್ಥಾನದಲ್ಲಿದ್ದರೆ, ನೇಪಾಳ ಹಾಗೂ ಶ್ರೀಲಂಕಾ ಕ್ರಮವಾಗಿ 101
ಹಾಗೂ 102ನೇ ಸ್ಥಾನಗಳಲ್ಲಿವೆ. ಮಹಿಳೆಯರ ಸರಾಸರಿ ವರಮಾನವು ಬಹಳ ಕೆಳಮಟ್ಟದಲ್ಲಿದೆ. ಈಗ ಜಿಡಿಪಿ ದರ, ತಲಾದಾಯ ದರ, ಕೈಗಾರಿಕೆ ಅಭಿವೃದ್ದಿ
ದರ, ಕೃಷಿ ಅಭಿವೃದ್ಧಿ ದರ ಇತ್ಯಾದಿಗಳಲ್ಲಿ ಇಂಡಿಯಾ ಜಾಗತಿಕವಾಗಿ ನೂರರ ನಂತರದ ಸ್ಥಾನದಲ್ಲಿ
ನಿಲ್ಲತೊಡಗಿದೆ.
ಇಂಡಿಯಾದಲ್ಲಿ
ಮಹಿಳಾ ವೇತನವು ಪುರುಷರಿಗಿಂತ ಸರಾಸರಿ ಶೇ 34ಕ್ಕಿಂತಲೂ ಕಡಿಮೆಯಿದೆ. ಇಂಡಿಯಾದ ಮಹಿಳೆಯರು
ಕಾರ್ಮಿಕರಾಗಿ ದುಡಿಯುತ್ತಿರುವುದು ಒಟ್ಟು ಕಾರ್ಮಿಕರಲ್ಲಿ ಶೇ 25ರಷ್ಟು ಮಾತ್ರ. ವೇತನಗಳಲ್ಲಿ
ಇಂಡಿಯಾದ ಮಹಿಳೆಯರಿಗೆ ಲಿಂಗತಾರತಮ್ಯ ಕೂಡ ಅತ್ಯಧಿಕ. ಅದು ಜಾಗತಿಕವಾಗಿ 145ನೇ ಸ್ಥಾನದಲ್ಲಿದೆ.
ಇನ್ನು ಶಿಕ್ಷಣ, ಆರೋಗ್ಯ, ಆಹಾರ ಮೊದಲಾದ
ವಿಚಾರಗಳಲ್ಲಿ ಲಿಂಗತಾರತಮ್ಯಗಳು ಮುಖಕ್ಕೆ ರಾಚುವಂತಿವೆ. ಇನ್ನು ಮಹಿಳೆಯರಿಗೆ ಆಸ್ತಿ ಹಾಗೂ
ರಾಜಕೀಯ ಅಧಿಕಾರದ ಅಂಗಗಳಲ್ಲಿ ಸಮಾನ ಪಾಲು ಎಂಬ ವಿಚಾರ ಇನ್ನೂ ಮರೀಚಿಕೆಯ ಮಟ್ಟದಲ್ಲೇ
ಸಾಗುತ್ತಿದೆ.
ಪ್ರಭುತ್ವ
ಇದುವರೆಗೂ ಹಾಕಿಕೊಂಡಿದ್ದ ತನ್ನ ಪ್ರಜಾತಾಂತ್ರಿಕ ಪರದೆಗಳನ್ನೆಲ್ಲಾ ಹರಿದುಹಾಕಿ ಬ್ರಾಹ್ಮಣಶಾಹಿ
ಫ್ಯಾಸಿಸ್ಟ್ ನಿರಂಕುಶಾಧಿಕಾರದ ನಗ್ನತೆಯನ್ನು ಸಂಪೂರ್ಣವಾಗಿ ತೋರಿಸಲು ಆರಂಭಿಸಿರುವ ಸಂದರ್ಭವಾಗಿದೆ.
ಒಂದು ಮಟ್ಟದಲ್ಲಿ ಇದುವರೆಗೂ ಇದ್ದ ಸಾಂವಿಧಾನಿಕ ರಕ್ಷಣೆ ಕೂಡ ಮರೀಚಿಕೆಯಂತಾಗುತ್ತಿದೆ.
ದಲಿತದಮನಿತ ಜನಸಮೂಹ ಮತ್ತು ಪ್ರಜಾಪ್ರಭುತ್ವ
ಶತಮಾನಗಳಿಂದ ನಿರಂತರವಾಗಿ ಹೋರಾಡುತ್ತಾ ಬಂದ ದಲಿತದಮನಿತ ಜನಸಮೂಹದಲ್ಲಿ ಮೂಡಿದ
ಜಾಗೃತಿ, ಸಮರಶೀಲತ್ವ ಹಾಗೂ ಹುಟ್ಟಿದ ಸಂಘಟಿತ ಶಕ್ತಿ ಆಳುವ ಶಕ್ತಿಗಳಿಗೆ ಬಹಳ ದಿಗಿಲಿನ
ವಿಚಾರವಾಗಿಬಿಟ್ಟವು. ಹಾಗಾಗಿ ಮೊದಲಿನಿಂದಲೂ ಅದನ್ನು ತಡೆಯುವ, ದಿಕ್ಕು ತಪ್ಪಿಸುವ,
ಬಲಹೀನಗೊಳಿಸುವ ಕಾರ್ಯಗಳನ್ನು ಮಾಡುತ್ತಲೇ ಬಂದರು. ಅದು ಸಂವಿಧಾನ ಅಂಗೀಕಾರಗೊಳ್ಳುವ
ಪ್ರಕ್ರಿಯೆಯಿಂದಲೇ ಪ್ರಾರಂಭವಾಯಿತೆನ್ನಬಹುದು. ಸಂವಿಧಾನವನ್ನು ತಮ್ಮಹಿತಾಸಕ್ತಿಗಳಿಗೆ ತಕ್ಕಂತೆ
ರೂಪಿಸಿಕೊಳ್ಳಲು ಸಾವಿರಾರು ತಿದ್ದುಪಡಿಗಳು ಬಂದವು. ಅವುಗಳಲ್ಲಿ ಸುಮಾರು ಎರಡು ಸಾವಿರಕ್ಕೂ
ಹೆಚ್ಚು ತಿದ್ದುಪಡಿಗಳಿಗೆ ಅಂಗೀಕಾರ ನೀಡಲಾಯಿತು. ಅದಕ್ಕೆ ಪ್ರಧಾನ ಕಾರಣ ಸಂವಿಧಾನ ರಚನಾ ಸಭೆಯ
ಸದಸ್ಯರುಗಳಲ್ಲಿ ಬಹುತೇಕರು ಶ್ರೀಮಂತ ಭೂಮಾಲಿಕತ್ವದ ಹಿನ್ನೆಲೆಯವರು, ರಾಜಮನೆತನಗಳ
ಹಿನ್ನೆಲೆಯವರಾಗಿದ್ದರು. ಅದರಲ್ಲೂ ಕಾಂಗ್ರೆಸ್ ಸದಸ್ಯರುಗಳೇ ಹೆಚ್ಚಿನವರಾಗಿದ್ದರು. ಅಂಬೇಡ್ಕರ್ ರಂತಹ ಕೆಲವೇ ಜನ ಮಾತ್ರ ದಲಿತ ದಮನಿತ ಜನಸಾಮಾನ್ಯ ಹಿನ್ನೆಲೆಯಿಂದ
ಬಂದವರಾಗಿದ್ದರು.
ಅಂಬೇಡ್ಕರ್ ದಲಿತ, ಮಹಿಳಾ ಹಾಗೂ ಕಾರ್ಮಿಕ ಪರವಾದ ಹಲವು ಕಾನೂನುಗಳನ್ನು
ರೂಪಿಸುವಲ್ಲಿ, ತಿದ್ದುಪಡಿ ತರುವಲ್ಲಿ ಪ್ರಧಾನವಾಗಿ ಶ್ರಮಿಸಿದ್ದರು.
ದೇಶಕ್ಕೆ ನೈಜ ಸ್ವಾತಂತ್ರ್ಯ ಹಾಗೂ ಪ್ರಜಾ ಪ್ರಭುತ್ವ ಲಭಿಸುವುದು ದಲಿತ
ದಮನಿತರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಖಾತ್ರಿಯಾದಾಗ ಮಾತ್ರ ಎಂಬುದನ್ನು ಅಂಬೇಡ್ಕರರು
ಗ್ರಹಿಸಿದ್ದರು. ಅದನ್ನು ಅವರು ಹಲವಾರು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅಂಗೀಕಾರಗೊಂಡು
1950ರಿಂದಲೇ ಚಾಲ್ತಿಗೆ ಬಂದ ಸಂವಿಧಾನದಿಂದ ದಲಿತದಮನಿತರಿಗೆ ಸ್ವಾತಂತ್ರ್ಯ ಸಮಾನತೆ ಪ್ರಜಾತಾಂತ್ರಿಕ
ಹಕ್ಕುಗಳು ಸಿಕ್ಕಿ ಬಿಡುತ್ತದೆ ಎಂಬ ಕಲ್ಪನೆ ಅಂಬೇಡ್ಕರದಾಗಿರಲಿಲ್ಲ. ಅಂಗೀಕಾರಗೊಂಡ ಸಂವಿಧಾನದ
ಬಗ್ಗೆ ಅವರಿಗೆ ಸಮಾಧಾನವೂ ಇರಲಿಲ್ಲ. ಅದು ಈ ದೇಶದ ಜನಸಾಮಾನ್ಯರ ಹಿತಕ್ಕನುಸಾರವಾಗಿಯೇ
ಅಂತಿಮಗೊಂಡಿದೆ ಎಂಬ ಅಭಿಪ್ರಾಯ ಅಂಬೇಡ್ಕರದಾಗಿರಲಿಲ್ಲ. ಪ್ರಜಾಪ್ರಭುತ್ವವನ್ನು ಮೇಲಿನಿಂದ
ಕಟ್ಟಲು ಸಾಧ್ಯವಿಲ್ಲ ಎಂಬ ಅರಿವು ಅಂಬೇಡ್ಕರದಾಗಿತ್ತು. ಪ್ರಜಾಪ್ರಭುತ್ವವು ನೈಜವಾಗಿ
ಜನಸಾಮಾನ್ಯರಿಗೆ ದೊರೆಯಬೇಕಾದರೆ ಅದನ್ನು ಸಮಾಜದ ಬುಡಮಟ್ಟದಿಂದ ಕಟ್ಟಿಕೊಂಡು ಬರಬೇಕಾಗುತ್ತದೆ
ಎಂಬ ನಿಲುವು ಅಂಬೇಡ್ಕರದಾಗಿತ್ತು. ಚುನಾವಣೆಯಲ್ಲಿ ಓಟು ನೀಡುವ ಹಕ್ಕು ಸಿಕ್ಕರೂ ಅದು ಸಮಾಜದ
ಅಡಿಪಾಯದ ಜನಸಾಮಾನ್ಯರಾದ ದಲಿತ ದಮನಿತ ಬಡವರಿಗೆ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಸಮಾನತೆ
ಖಾತ್ರಿಯಾಗಿ ದೊರೆಯುವವರೆಗೂ ವ್ಯವಸ್ಥೆಯೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಬೆಳೆಯಲಾಗದು ಎಂಬ
ಸ್ಪಷ್ಟತೆ ಅಂಬೇಡ್ಕರರಿಗಿತ್ತು.
ಆದರೆ ಇಂಡಿಯಾದ ಆಳುವ ವರ್ಗ ಅಂಬೇಡ್ಕರ್ ರನ್ನು ಸಂವಿಧಾನಕ್ಕೆ ಪರ್ಯಾಯವೆಂಬಂತೆ
ಬಿಂಬಿಸಿ ದಲಿತದಮನಿತರನ್ನು ಸಂವಿಧಾನವೇ ತಮ್ಮ ವಿಮೋಚನೆಯ ಅಸ್ತ್ರ ಎಂಬಂತಹ ಭ್ರಮೆಯಡಿ ಹೂತಿಡಲು
ಶ್ರಮಿಸುತ್ತಾ ಬಂದಿತು. ದಲಿತ ದಮನಿತರಲ್ಲಿನ ಅನುಕೂಲಸ್ಥರು, ರಾಜಕೀಯ ಪುಡಾರಿಗಳು ಆಳುವ ಶಕ್ತಿಗಳ
ಈ ಕುತಂತ್ರಕ್ಕೆ ಕೈಜೋಡಿಸಿದರು. ಹನ್ನೆರಡನೇ ಶತಮಾನದ ವಚನ ಚಳವಳಿಯಿಂದ ಹಿಡಿದು ಅಯ್ಯನ್ ಕಾಳಿ,
ಜ್ಯೋತಿಭಾಫುಲೆ, ಸಾವಿತ್ರಿಭಾಯಿ ಫುಲೆ, ಶಾಹು ಮಹಾರಾಜ್, ಹೈದರಾಲಿ, ಟಿಪ್ಪುಸುಲ್ತಾನ್, ಡಾ.
ಅಂಬೇಡ್ಕರ್, ಬಿರ್ಸಾಮುಂಡ, ನಾರಾಯಣ ಗುರು, ಪೆರಿಯಾರ್ ರಾಮಸ್ವಾಮಿ ನಾಯಕರ್, ಕುದ್ಮುಲ್ ರಂಗರಾವ್
ರಂತಹ ವ್ಯಕ್ತಿಗಳು ಸೇರಿದಂತೆ ಅಸಂಖ್ಯಾತ ಚಳವಳಿಗಳು ಹಾಗೂ ಜನರ ಹೋರಾಟ ಹಾಗೂ ತ್ಯಾಗ ಬಲಿದಾನಗಳ
ಫಲ ಉಂಡು ದಲಿತದಮನಿತರಲ್ಲಿ ಶಿಕ್ಷಿತರಾದ ಮದ್ಯಮವರ್ಗವೊಂದು ಬೆಳೆದು ಬಂದಿತ್ತು. ಈ ಮಧ್ಯಮ ವರ್ಗದ
ಸ್ತರವನ್ನೇ ಆಳುವ ವರ್ಗಗಳು ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ದಾಳಗಳನ್ನಾಗಿ
ಬಳಸಿಕೊಳ್ಳತೊಡಗಿತು. ಈ ವರ್ಗವನ್ನು ಬಳಸಿಕೊಂಡು ದಲಿತದಮನಿತರು ಸಂಘಟಿತರಾಗುವುದನ್ನು ತಡೆಯುವ,
ಅವರ ಮೂಲಭೂತ ಸಮಸ್ಯೆಗಳಿಂದ ಅವರನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ಆಳುವ ಮೇಲ್ಜಾತಿ
ಮೇಲ್ವರ್ಗದ ಶಕ್ತಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿರಂತರವಾಗಿ ಮಾಡುತ್ತಲೇ ಬಂದರು.
ಅಂಬೇಡ್ಕರ್ ರಲ್ಲಿ ಅವರ ಜೀವನದ ಕೊನೆಯ ಭಾಗದಲ್ಲಿ ಸಾಕಷ್ಟು ಅಸಮಾಧಾನ
ಮಡುಗಟ್ಟಿತ್ತು. ಹಿಂದಿನವರ ಹೋರಾಟದ ಫಲಗಳನ್ನು, ಮೀಸಲಾತಿ ಇತ್ಯಾದಿ ಸೌಲಭ್ಯ ಅನುಭವಿಸಿ
ಅನುಕೂಲಸ್ಥರಾದ ದಲಿತದಮನಿತ ಹಿನ್ನೆಲೆಯವರು ಸಮಾಜ ಹಾಗೂ ಸಮುದಾಯದ ಬಗ್ಗೆ ಅಸಡ್ಡೆ ಬೆಳೆಸಿಕೊಂಡು
ಕೇವಲ ತಮ್ಮ ಸ್ವಾರ್ಥ ಮಾತ್ರ ನೋಡಿಕೊಳ್ಳುವ ಮಟ್ಟ ತಲುಪಿದ್ದನ್ನು ಅಂಬೇಡ್ಕರ್ ತಮ್ಮ ಜೀವಿತ
ಕಾಲದಲ್ಲೇ ನೋಡಿದ್ದರು. ಹೋರಾಟವನ್ನು ಮುನ್ನೆಡೆಸುವ ಪ್ರಾಮಾಣಿಕ ನಾಯಕತ್ವದ ಕೊರತೆ
ಅಂಬೇಡ್ಕರರನ್ನು ಕಾಡಿತ್ತು. ವೃದ್ದಾಪ್ಯದ ಬಲಹೀನತೆಯಿಂದಾಗಿ ತಮ್ಮಿಂದ ಹೆಚ್ಚಿನದನ್ನು ಮಾಡಲು
ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗೂ ಇತ್ತು. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಆಂಗ್ಲ ಹಾಗೂ
ಹಿಂದಿಯಲ್ಲಿ ಪ್ರಕಟವಾಗಿರುವ ‘ಡಾ ಬಾಬಾಸಾಹೇಬ್ ಅಂಬೇಡ್ಕರ್ ಸ್ ಲೆಟರ್ಸ್ ಟು ದಾದಾಸಾಹೇಬ್ ಗಾಯಕ್
ವಾಡ್’ ಎಂಬ ಪುಸ್ತಕದಲ್ಲಿರುವ ಅಂಬೇಡ್ಕರರ ಇದುವರೆಗೂ ಪ್ರಕಟವಾಗದೇ ಇದ್ದ ಪತ್ರಗಳಲ್ಲೂ ಈ ಬಗ್ಗೆ
ಹಲವಾರು ಉಲ್ಲೇಖಗಳಿವೆ.
1956ರ ಅವಧಿಯಲ್ಲಿ
ಅಂಬೇಡ್ಕರರು ಮಾತನಾಡುತ್ತಾ “ಬಹಳಷ್ಟು ಜನರು ನಮ್ಮ
ಸಂವಿಧಾನದ ಬಗ್ಗೆ ಅತೀ ಉತ್ಸಾಹಿಗಳಾಗಿ ಕಾಣುತ್ತಾರೆ. ನನ್ನದಂತೂ ಹಾಗಲ್ಲ. ಸದ್ಯದ ಇಂಡಿಯಾದ
ಸಂವಿಧಾನವನ್ನು ಕಿತ್ತೆಸೆಯಬೇಕೆನ್ನುವ, ಕನಿಷ್ಠ ಮಟ್ಟಿಗೆ ಅದನ್ನು ಸಂಪೂರ್ಣವಾಗಿ ಸರಿಪಡಿಸಲು
ಹೆಣಗುವ ಜನರನ್ನು ಸೇರಿಕೊಳ್ಳಲು ನಾನು ಸಿಧ್ಧ” ಎಂದು ಸ್ವತಹ ಹೇಳಿದ್ದರು. ಅಂಬೇಡ್ಕರರ ಈ ಮಾತು ಇಂಡಿಯಾದಲ್ಲಿ ಪ್ರಜಾಪ್ರಭುತ್ವದ
ಯಶಸ್ಸಿಗೆ ಇರುವ ಸವಾಲುಗಳ ಕುರಿತಾದ ಮಾತಿನ ಭಾಗವಾಗಿತ್ತು ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ
ಗಮನಿಸಬೇಕು.
ಪ್ರಜಾಪ್ರಭುತ್ವವು ಯಶಸ್ವಿಯಾಗುವುದು ಹೇಗೆ ಎಂಬುದರ ಕುರಿತು ಮಾತನಾಡುತ್ತಾ
ಅಂಬೇಡ್ಕರರು “ಮೊದಲನೆಯದಾಗಿ ಅಸಮಾನತೆ
ಸಮಾಜದಲ್ಲಿ ಇರಕೂಡದು. ಪೀಡಿತರಾಗಿ ತುಳಿತಕ್ಕೊಳಗಾಗುವ ಜನವರ್ಗವು ಸಮಾಜದಲ್ಲಿ ಇರಬಾರದು. ಎಲ್ಲಾ
ಬಗೆಯ ಹಕ್ಕು ಮತ್ತು ಅಧಿಕಾರಗಳು ಕೇಂದ್ರೀಕೃತಗೊಳಿಸಿಕೊಂಡ ವರ್ಗ ಒಂದು ಕಡೆ ಎಲ್ಲಾ ಬಗೆಯ
ಹೊರೆಯನ್ನೂ ಹೊರುವ ವರ್ಗ ಮತ್ತೊಂದು ಕಡೆಗೆ ಎಂಬ ವಿಭಜನೆ ಇರಕೂಡದು ….” ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎನ್ನುತ್ತಾರೆ.
ಮುಂದುವರೆದು… “ಪ್ರತಿ ಐದು ವರ್ಷಗಳಿಗೊಮ್ಮೆ ಮಾತ್ರ ಜನಾಭಿಪ್ರಾಯದ ತೀರ್ಪನ್ನು ಪಡೆಯುವ ಮುನ್ನ,
ನಡುವಿನ ಕಾಲದಲ್ಲಿ ಅನಿಯಂತ್ರಿತವಾದ ಅಧಿಕಾರವನ್ನು ಬಳಸಿಕೊಳ್ಳುವ ಈ ‘ಪಂಚವಾರ್ಷಿಕ’
ನಿಯಂತ್ರಣದಿಂದ ನಿಜವಾದ ಪ್ರಜಾಪ್ರಭುತ್ವವು ಬರಲಾರದು….ಪ್ರಜಾಪ್ರಭುತ್ವದಲ್ಲಿ
ರಾಜಕೀಯ ಅಧಿಕಾರದ ಮೇಲೆ ಬರೀ ಜನಾಭಿಪ್ರಾಯದ ನಿಯಂತ್ರಣ ಬೇಕೆಂದಲ್ಲ, ಅದು ತಾತ್ಕಾಲಿಕವಾಗಿಯೂ
ಸತತವಾಗಿಯೂ ಬೇಕು…”ಎನ್ನುತ್ತಾರೆ.
ಆದರೆ ಅಂಬೇಡ್ಕರರ ಹೋರಾಟಗಳನ್ನು, ಅವರ ವಿಚಾರಗಳನ್ನು ಜನರೆಡೆಗೆ ತಲುಪಿಸುವ
ಕಾರ್ಯ ಮಾಡದೇ ಚುನಾವಣೆಯ ಮೂಲಕ ರಾಜಕೀಯ ಅಧಿಕಾರವನ್ನು ದಲಿತದಮನಿತರು ಗಳಿಸಿ ಸಮಾನತೆ
ಸ್ಥಾಪಿಸಬಹುದು ಎಂಬ ಹುಸಿ ಹಾಗೂ ಹಸಿ ಸುಳ್ಳುಗಳನ್ನು ಜನಸಾಮಾನ್ಯರ ನಡುವೆ ಬಿತ್ತುತ್ತಾ ರಾಜಕೀಯ
ಪುಢಾರಿಗಿರಿ ಮಾಡುತ್ತಾ ಬಂದ ಹುಟ್ಟಿನಿಂದ ದಲಿತ ದಮನಿತ ಹಿನ್ನೆಲೆಯ ಹಲವರು ದಲಿತ ದಮನಿತರ ವಿಮೋಚನಾ ಹೋರಾಟಕ್ಕೆ ದ್ರೋಹ ಮಾಡುತ್ತಾ
ಬಂದರು. ದಲಿತ ದಮನಿತರು ಐಕ್ಯಶಕ್ತಿಯಾಗಿ ನಿಲ್ಲುವುದನ್ನು ತಡೆಯಲು ಶ್ರಮಿಸುತ್ತಾ ಬಂದರು.
ಇದರಲ್ಲಿ ಹಲವರು ದಲಿತ ದಮನಿತರ ಹೋರಾಟ ತ್ಯಾಗ ಬಲಿದಾನದ ಪ್ರತಿಫಲವಾದ ಮೀಸಲಾತಿ ಇತ್ಯಾದಿ
ಸೌಲಭ್ಯಗಳನ್ನು ತಾವು ಮಾತ್ರ ಬಳಸಿಕೊಳ್ಳಬೇಕೆನ್ನುವ ಮನೋಭಾವದ ಸರ್ಕಾರಿ ನೌಕರರು,
ದಲಿತದಮನಿತರಲ್ಲಿನ ಬುದ್ಧಿಜೀವಿ ವರ್ಗ, ಅದರಲ್ಲಿನ ಮಧ್ಯಮ ಹಾಗೂ ಶ್ರೀಮಂತ ವರ್ಗದವರು
ಪ್ರಧಾನವಾಗಿದ್ದಾರೆ.
ಇಂತಹವರುಗಳೇ ಇಂಡಿಯಾದ ಬ್ರಾಹ್ಮಣಶಾಹಿ ಆಳುವ ವರ್ಗಗಳ ಛೇಲಾಗಿರಿ ಮಾಡುತ್ತಾ
ದಲಿತದಮನಿತರ ದನಿಯನ್ನು ಅಡಗಿಸಲು ಆಳುವವರ್ಗಗಳ ಸೇವೆಗೆ ನಿಂತಿದ್ದಾರೆ. ಅಂತಹ ಹಲವರು ಕೇಂದ್ರ
ಹಾಗೂ ರಾಜ್ಯಗಳಲ್ಲಿ ಮಂತ್ರಿಗಳಾಗಿ, ಅಧಿಕಾರಶಾಹಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈಗಲೂ
ಕಾರ್ಯನಿರ್ವಹಿಸುತ್ತಿದ್ದಾರೆ ಕೂಡ. ಆದರೆ ಬಹುಸಂಖ್ಯಾತ ದಲಿತ ದಮನಿತರ ಬದುಕುಗಳಿಗೆ ಇವರು
ಮಾರಕವಾಗಿಯೇ ಪ್ರವರ್ತಿಸುತ್ತಾ ಬಂದಿದ್ದಾರೆ. ಬಹುಸಂಖ್ಯಾತ ದಲಿತದಮನಿತರೆಡೆಗೆ ಸಾಂವಿಧಾನಿಕ
ರಕ್ಷಣೆಯಾಗಲೀ, ಹಕ್ಕುಗಳಾಗಲೀ, ಮೀಸಲಾತಿಯಂತಹ ಸೌಲಭ್ಯಗಳಾಗಲೀ ಈಗಲೂ ತಲುಪದಂತೆ ತಡೆಯುತ್ತಾ
ಬರಲಾಗಿದೆ ಎಂಬ ಸತ್ಯ ಇವರುಗಳಿಗೆ ಗೊತ್ತಿಲ್ಲದ ವಿಚಾರವಲ್ಲ. ಆದರೆ ಜಾಣಗುರುಡು ಅಭಿನಯಿಸುತ್ತಾ
ತಮಗೆ ಎಷ್ಟೆಲ್ಲಾ ಸಾಧ್ಯವೋ ಅಷ್ಟನ್ನೂ ಬಾಚಿಕೊಳ್ಳುವ ಕಡೆ ಮಾತ್ರ ನೋಡುತ್ತಾ ಬಂದಿದ್ದರ
ಪರಿಣಾಮವನ್ನು ನಾವಿಂದು ಸ್ಪಷ್ಟವಾಗಿ ಕಾಣುತ್ತಿದ್ದೇವೆ.
ಇದರ ಪರಿಣಾಮ ಹಲವು ವಿಧಗಳಲ್ಲಿವೆ. ಎಲ್ಲಕ್ಕಿಂತಲೂ ಪ್ರಧಾನವಾಗಿ ಈ ಸ್ತರ
ಅಂಬೇಡ್ಕರರನ್ನು ದೇವರನ್ನಾಗಿ ಮಾಡಿ ಪೂಜಿಸುತ್ತಾ ಅಂಬೇಡ್ಕರರಿಗೆ ಸಂವಿಧಾನವನ್ನು
ಪರ್ಯಾಯವನ್ನಾಗಿಸಿ ಅದನ್ನು ಪರಮಪವಿತ್ರವೆಂದು, ಧರ್ಮಗ್ರಂಥವೆಂದೂ ಬಿಂಬಿಸುತ್ತಾ ದಲಿತ ದಮನಿತರಲ್ಲಿ ಸಂವಿಧಾನ ಹಾಗೂ ಇಂಡಿಯಾದ ಪ್ರಜಾಪ್ರಭುತ್ವದ ಬಗ್ಗೆ
ಹುಸಿ ಭ್ರಮೆಯನ್ನು ಬಿತ್ತುತ್ತಾ ಬರುತ್ತಿದೆ.. ದಲಿತ ದಮನಿತರು ಜಾಗೃತಗೊಳ್ಳುವುದನ್ನು ತಡೆದು
ಅವರನ್ನು ಕೇವಲ ಓಟು ಬ್ಯಾಂಕ್ ರಾಜಕೀಯಕ್ಕಾಗಿ ಮಾತ್ರ ಬಳಸಲು ಆಳುವ ವರ್ಗಕ್ಕೆ ಸಹಾಯ
ಮಾಡುತ್ತಾರೆ. ಊಳಿಗಮಾನ್ಯ ಬ್ರಾಹ್ಮಣ್ಯವನ್ನೂ ತಾವೇ ಪಾಲಿಸುತ್ತಾ ನವ ಬ್ರಾಹ್ಮಣವಾದಿಗಳಾಗಿ
ಘಳಿಗೆ, ಜ್ಯೋತಿಷ್ಯ, ಸತ್ಯನಾರಾಯಣ ಪೂಜೆ, ವ್ರತ, ದಿನಗಳನ್ನು ಆಚರಿಸುತ್ತಾರೆ. ತಮ್ಮದು ಭೌದ್ಧ
ಧರ್ಮವೆಂದು ಹೇಳುವವರಲ್ಲಿ ಹಲವರು ಕೂಡ ಇಂತಹವುಗಳನ್ನು ಬೇರೆ ವಿಧಗಳಲ್ಲಿ ಆಚರಿಸುತ್ತಿದ್ದಾರೆ.
ಭೌದ್ದ ಧರ್ಮ ಸ್ವೀಕಾರದಿಂದ ದಲಿತದಮನಿತರ ಉದ್ದಾರವಾಗುತ್ತದೆ ಎಂಬ ಹುಸಿಯನ್ನೂ ಈಗ ದೊಡ್ಡ
ಪ್ರಮಾಣದಲ್ಲಿ ಹರಿಬಿಡಲಾಗುತ್ತಿದೆ. ಆದರೆ ಅದು ವಾಸ್ತವವಲ್ಲ ಎಂಬ ಸತ್ಯವನ್ನು ನಾವುಗಳು ನೇರವಾಗೇ
ನೋಡುತ್ತಿದ್ದೇವೆ. ಅಲ್ಲದೆ ದಲಿತರನ್ನು ತಮ್ಮ ಬದುಕಿನ ಅಸ್ತಿತ್ವ ಹಾಗೂ ಅವಕಾಶಗಳಿಗಾಗಿನ
ಸಂಘಟಿತ ಹೋರಾಟಗಳಿಂದ ಬೇರೆಡೆಗೆ ಸರಿಸುವ ಅಪಾಯಕಾರಿ ನಡೆಗಳಾಗಿ ಪರಿಣಮಿಸುತ್ತಿವೆ..
ಇದೆಲ್ಲದರ ಪರಿಣಾಮಗಳು ಇಂದು ಬಹಳ ಗಂಭೀರವಾಗಿ ದಲಿತದಮನಿತ ಜನಸಮೂಹವನ್ನು ಹಾಗೂ
ಅವರ ಪ್ರಜಾತಾಂತ್ರಿಕ ಆಶೋತ್ತರಗಳನ್ನು ಭಾಧಿಸುತ್ತಿವೆ. ಕೆಲವು ಪರಿಣಾಮಗಳ ಕುರಿತು ಅಂಬೇಡ್ಕರರು
ಅಂದು ಗ್ರಹಿಸಿ ಆ ಬಗ್ಗೆ ಹೇಳಿದ್ದರು ಕೂಡ.
ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಮೂರ್ತಿಯನ್ನು, ಬುದ್ಧನ ಮೂರ್ತಿಯನ್ನು
ಮುಂದಿಟ್ಟುಕೊಂಡೇ ದೇಶದ ಬಹುಸಂಖ್ಯಾತ ಜನಸಮೂಹವಾಗಿರುವ ದಲಿತ ದಮನಿತ ಹಿಂದುಳಿದ, ಅಲ್ಪಸಂಖ್ಯಾತ
ಬಡ ಜನಸಾಮಾನ್ಯರನ್ನು ವಂಚಿಸುತ್ತಾ ಬರಲಾಗಿತ್ತು. ಅವರ ಪ್ರಜಾತಾಂತ್ರಿಕ ಆಶೋತ್ತರಗಳು ಹಾಗೂ
ಹಕ್ಕುಗಳಿಂದ ಕಳೆದ ಏಳು ದಶಕಗಳಿಂದಲೂ ವಂಚಿತರನ್ನಾಗಿ ಮಾಡುತ್ತಾ ಬರಲಾಗಿತ್ತು ಎನ್ನುವ ಕಣ್ಣಿಗೆ
ರಾಚುವ ಸತ್ಯವನ್ನು ಇಂದಾದರೂ ಮನಗಂಡು ಆ ನಿಟ್ಟಿನಲ್ಲಿ ಜನಜಾಗೃತಿ ನಡೆಸಬೇಕಾದ ಅಗತ್ಯ ಬಹಳ
ಅವಶ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಜನಸಾಮಾನ್ಯರು ಚಿಂತಿಸುತ್ತಾ
ಕಾರ್ಯ ನಿರ್ವಹಿಸುವಂತೆ ಮಾಡಬೇಕಿದೆ.
ಯಾಕೆಂದರೆ ಇದುವರೆಗೂ ದಲಿತ ದಮನಿತರಲ್ಲಿನ ಕೆಲವರಿಗಾದರೂ ಮೇಲ್ಮಟ್ಟದಲ್ಲಿ
ಸಿಗುತ್ತಿದ್ದ ಮೀಸಲಾತಿಯಂತಹ ಸವಲತ್ತುಗಳು ಸಂಪೂರ್ಣವಾಗಿ ರದ್ದಾಗತೊಡಗಿವೆ. ಇಲ್ಲವೇ ಕೇವಲ
ಕಾಗದದಲ್ಲಿರುವ ಸರಕನ್ನಾಗಿಸಲಾಗಿದೆ. ಜಾಗತೀಕರಣದ ನಂತರ ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ
ತೀವ್ರಗೊಳ್ಳುತ್ತಾ ಇಂದು ಅದರ ಪರಾಕಾಷ್ಠೆ ತಲುಪಿ ಮೀಸಲಾತಿ ಬಗ್ಗೆ ಪುನರಾಲೋಚಿಸಿ ತೀರ್ಮಾನಿಸಲು
ಸಂಪುಟ ಉಪಸಮಿತಿಗಳನ್ನು ರಚಿಸುವ, ಮೇಲ್ಜಾತಿ ಮೇಲ್ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಇತ್ಯಾದಿ
ನಾಟಕೀಯ ನಡೆಗಳವರೆಗೆ ತಲುಪಿವೆ. ಜೊತೆಗೆ ದಲಿತದಮನಿತರ ರಕ್ಷಣೆಗೆಂದು ರಚಿತವಾಗಿದ್ದ
ಕಾಯ್ದೆಗಳನ್ನು ಸಡಿಲಗೊಳಿಸುವ, ರದ್ದುಮಾಡುವ ಕಾರ್ಯಗಳು ಬಿರುಸಾಗಿವೆ. ಸಾಂವಿಧಾನಿಕ
ಬದ್ಧತೆಯಾಗಿದ್ದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳಿಗೆ ಆಯವ್ಯಯದಲ್ಲಿ ನಿಗದಿತ
ಪ್ರಮಾಣದಲ್ಲಿ ತೆಗೆದಿರಿಸಲೇಬೇಕಿದ್ದ ಹಣಕಾಸು ಪ್ರಮಾಣ ಕಡಿತಗೊಳಿಸಲಾಗದೆ. ಮೊದಲಿನಿಂದಲೂ
ಮಾಡುತ್ತಾ ಬಂದಿದ್ದ ತೆಗೆದಿರಿಸುವ ಇಂತಹ ಹಣಕಾಸನ್ನು ದಲಿತದಮನಿತರ ಏಳಿಗೆಗಾಗಿ ವಚ್ಚಮಾಡದೇ
ಇರುವ, ಬೇರೆ ಸಾಮಾನ್ಯ ಯೋಜನೆಗಳಿಗೆ ಹರಿಸುವ, ವೆಚ್ಚ ಮಾಡದೇ ವಾಪಾಸು ಕಳಿಸುವ ಕ್ರೂರ ಹಾಗೂ
ನೀಚಾತಿನೀಚ ಕ್ರೂರ ಜಾತೀಯತೆಯ ಸರಕಾರಿ ಹಾಗೂ ಅಧಿಕಾರಶಾಹಿ ಪ್ರವೃತ್ತಿಗಳು ಇಂದು ಎಗ್ಗಿಲ್ಲದೇ
ನಡೆಯತೊಡಗಿವೆ. ಮಲಹೊರಿಸುವ ಪದ್ದತಿಯನ್ನು ನಿಷೇಧವಿದೆ ಎಂದು ಇದ್ದರೂ ಸರ್ಕಾರದ ಸಂಸ್ಥೆಗಳೇ
ಶೌಚಗುಂಡಿಗಳ ಸ್ವಚ್ಚತೆಗೆ ದಲಿತರನ್ನೇ ಬಳಸುತ್ತಿವೆ. ಈಗ ಆ ನಿಷೇಧದ ಕಾಯಿದೆಯನ್ನೂ
ಸಡಿಲಗೊಳಿಸಿರುವುದರ ಸುದ್ಧಿ ಇದೆ. ಇದುವರೆಗೂ
ಅಂಬೇಡ್ಕರ್ ಹೆಸರನ್ನು ಹಾಗೂ ಸಂವಿಧಾನವನ್ನು ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ಬಳಸಿಕೊಂಡ ಆಳುವ
ಶಕ್ತಿಗಳು ಇಂದು ಅಂಬೇಡ್ಕರರ ಜನಪರ ಪಾತ್ರವನ್ನು ನಿರಾಕರಿಸುವ, ಸಂವಿಧಾನವನ್ನು ಬದಲಾಯಿಸುವ
ನಿಟ್ಟಿನಲ್ಲಿ ಸಾಗುತ್ತಿವೆ. ಅದೂ ಅಲ್ಲದೇ ಇದುವರೆಗೆ ಹಲವು ಮುಸುಕುಗಳಡಿ ಕಾರ್ಯ
ನಿರ್ವಹಿಸುತ್ತಿದ್ದ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಶಕ್ತಿಗಳು ಸಂವಿಧಾನ ಬದ್ದ ಹಾಗೂ
ಪ್ರಜಾಪ್ರಭುತ್ವವೆಂದು ಬಿಂಬಿಸಿಕೊಂಡು ಅಧಿಕಾರದ ಪೀಠದಲ್ಲಿ ನೇರವಾಗಿ ಕುಳಿತು ಭಾರಿ ಹಾಗೂ
ದಲ್ಲಾಳಿ ಕಾರ್ಪೋರೇಟುಗಳ ಸೇವೆಯಲ್ಲಿ ತೊಡಗಿವೆ. ದೇಶದ ಜನಸಾಮಾನ್ಯರ ಸ್ವತ್ತುಗಳು, ತುಂಡು ಭೂಮಿ
ಹಾಗೂ ಪ್ರತಿ ದುಡಿಮೆಯನ್ನೂ ಭಾರಿ ಕಾರ್ಪೋರೇಟುಗಳಿಗೆ ಯಾವುದೇ ಎಗ್ಗಿಲ್ಲದೇ ಎತ್ತಿ ಕೊಡತೊಡಗಿದೆ.
ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಜನಸಾಮಾನ್ಯರದೇನೂ ಪ್ರಧಾನ ಪಾತ್ರವಿಲ್ಲ ಎಂಬ ಸತ್ಯ ಕೂಡ
ಈಗಂತೂ ರಟ್ಟಾಗಿ ಬಹಿರಂಗವಾಗಿರುವ ವಿಚಾರ ತಾನೇ.
ಮಧ್ಯಮ ವರ್ಗ
ಮತ್ತು ಪ್ರಜಾಪ್ರಭುತ್ವ
ನಮ್ಮ ದೇಶದ ಬಹುಪಾಲು ನಗರಕೇಂದ್ರಿತ ಮಧ್ಯಮ ವರ್ಗ ಕೇಜ್ರೀವಾಲ್ ಹಾಗೂ ಭಾರಿ
ಕಾರ್ಪೋರೇಟ್ ಪ್ರಾಯೋಜಿತವಾಗಿದ್ದ ಅಣ್ಣಾ ಹಜಾರೆ ನೇತೃತ್ವವೆಂದು ಬಿಂಬಿಸಲ್ಪಟ್ಟ ಯುಪಿಎ ಆಡಳಿತ
ಕಾಲದ ಲೋಕ್ ಪಾಲ್ ಆಂದೋಲನದಲ್ಲಿ ಮೇಲೆದ್ದು ಕುಳಿತು ನಂತರ ಮಕಾಡೆ ಮಲಗಿ ಮೋದಿ ಭಜನೆಯಲ್ಲಿ
ಕಾಲಕಳೆಯುತ್ತಾ ಒಂದು ರೀತಿಯ ಸಮೂಹ ಸನ್ನಿಯಲ್ಲಿ ಮೈಮರೆಯುತ್ತಾ ಬಂದಿದೆ ಎನ್ನಬಹುದು. ಬಹಳ
ಹೆಚ್ಚು ವ್ಯಕ್ತಿಕೇಂದ್ರಿತ್ವದಲ್ಲಿ ಸಿಲುಕಿರುವ ಈ ವರ್ಗದ ಹೆಚ್ಚಿನವರು ಸಾಮಾಜಿಕವಾಗಿ
ಚಿಂತಿಸುವುದು ಅದರಲ್ಲೂ ಸಮಾಜದ ಬಹುಸಂಖ‍್ಯಾತ ತಳಪಾಯದ ಜನಸಮುದಾಯಗಳ ಬದುಕು ಹಾಗೂ ಹಕ್ಕುಗಳ
ಬಗ್ಗೆ ಗಮನಿಸುವುದು ಬಹಳ ಕಡಿಮೆ. ಸಮಾಜದ ಎಲ್ಲವನ್ನೂ ತಮ್ಮಹಿತಾಸಕ್ತಿಗಳಿಗೆ ಸುಲಭವಾಗಿ
ದೊರೆಯುವಂತಿರಬೇಕೆಂದು ಹಪಹಪಿಸುವವರು ಹೆಚ್ಚಿನವರಾಗಿದ್ದಾರೆ. ಭಾರಿ ಕಾರ್ಪೋರೇಟ್ ಕೂಟ
ಮೊದಲಿನಿಂದಲೂ ಈ ವರ್ಗವನ್ನು ಅನುಭೋಗಿ ಸಂಸ್ಕೃತಿಯಲ್ಲಿ ಮೀಯಿಸುತ್ತಾ, ಮುಳುಗಿಸುತ್ತಾ ಬಂದು ಅವರ
ದುಡಿಮೆ ಉಳಿತಾಯಗಳನ್ನು ವಿವಿಧ ರೀತಿಗಳಲ್ಲಿ ಕಸಿಯುತ್ತಾ ಬಂದಿತ್ತು. ಜಾಗತೀಕರಣದ ಮೂಲಕ ಅದನ್ನು
ಮತ್ತೂ ತೀವ್ರಗೊಳಿಸಿತ್ತು. ಅದರಿಂದಾಗಿಯೇ ಈ ವರ್ಗ ಜಾಗತೀಕರಣದ ಹಾಗೂ ಭಾರಿ ಕಾರ್ಪೋರೇಟ್ ಪರವಾದ
ಚಿಂತನೆಗಳನ್ನು ಬಲಗೊಳಿಸಿಕೊಂಡು ಬಂದಿತ್ತು. ಆರಂಭದಲ್ಲಿ ಒಂದಷ್ಟು ಅನುಕೂಲತೆಗಳನ್ನು ಅನುಭವಿಸಿ
ಉಳಿದ ಜನವರ್ಗಗಳ ಕುರಿತು ಒಂದು ಕೆಟ್ಟ ರೀತಿಯ ಅಸಡ್ಡೆ, ತಿರಸ್ಕಾರ, ಹೇವರಿಕೆಗಳನ್ನು
ಬೆಳೆಸಿಕೊಂಡಿತ್ತು. ಇದರ ಪರಿಣಾಮವಾಗಿ ಭಾರಿ
ಕಾರ್ಪೋರೇಟ್ ಕೂಟ ಸಂಘಪರಿವಾರವನ್ನು ತೊಡಗಿಸಿಕೊಂಡು ಮೋದಿಯನ್ನು ಪ್ರಧಾನಿಯನ್ನಾಗಿ
ಪ್ರತಿಷ್ಠಾಪಿಸಿದ್ದು ಪ್ರಧಾನವಾಗಿ ಇದೇ ಮಧ್ಯಮವರ್ಗದ ಬೆಂಬಲದಿಂದಲೇ ಎನ್ನುವುದು ಸಾಕಷ್ಟು
ಜನರಿಗೆ ಈಗ ಗೊತ್ತಿರುವ ವಿಚಾರ. ಹಾಗಾಗಿ ಮುಂದೆ ಒಳ್ಳೇ ದಿನಗಳು ಬರುತ್ತವೆ, ಅಚ್ಚೇ ದಿನ್
ಆಯೇಗಾ, ಚಾಯ್ ಪೆ ಚರ್ಚಾ, ಇಂಡಿಯಾ ವಿಶ್ವಗುರು, ಮನ್ ಕಿ ಬಾತ್, ಜಾಗತಿಕ ಶಕ್ತಿ, 5 ಟ್ರಿಲಿಯನ್
ಡಾಲರು ಆರ್ಥಿಕತೆ, ಅಭಿವೃದ್ಧಿಯ ಮಹಾಪೂರ, ಇತ್ಯಾದಿ ಮನಮೋಹಕ ಪದಪುಂಜಗಳಿಗೆ ಬಲಿಯಾಗುತ್ತಾ,
ದಲಿತರು ಅಲ್ಪಸಂಖ್ಯಾತರುಗಳ ವಿರುಧ್ಧ ವಿಷಕಾರುತ್ತಾ, ನೋಟು ರದ್ಧತಿ, ಜಿ ಎಸ್ ಟಿ ಹೇರಿಕೆ, ಭಾರೀ
ಕಾರ್ಪೋರೇಟುಗಳ ಲಕ್ಷಾಂತರ ಕೋಟಿಗಳ ಸಾಲಗಳ ರದ್ಧತಿ, ತೈಲ ಬೆಲೆಯೇರಿಕೆ, ಅಡುಗೆ ಅನಿಲ ಸಹಾಯಧನ
ಸೇರಿದಂತೆ ಹಲವು ಸಹಾಯಧನಗಳ ರದ್ಧತಿ, ಸಣ್ಣ ಹಾಗೂ ಮಧ್ಯಮ ಸಾಲ ಸೌಲಭ್ಯಗಳ ರದ್ಧತಿ, ಭಾರಿ
ಕಾರ್ಪೋರೇಟು ಪರ ಸರ್ಕಾರಿ ನೀತಿಗಳು, ಆಳುತ್ತಿರುವ ವ್ಯವಸ್ಥೆ ಹುಟ್ಟಿಸಿದ ಕೊರೋನಾ ಭಯಾಂದೋಲನ
ಇತ್ಯಾದಿಗಳಿಗೆ ಮಧ್ಯಮ ವರ್ಗ ಮತ್ತದರ ಯುವ
ಪೀಳಿಗೆ ಪ್ರಧಾನವಾಗಿ ಬಲಿಪಶುಗಳಾಗುತ್ತಲೇ ಬರುತ್ತಿವೆ. ಇವೆಲ್ಲವುಗಳಿಂದಾಗಿ ಮಧ್ಯಮವರ್ಗದ ದೊಡ್ಡ
ಸಂಖ್ಯೆಯ ಜನರು ತಮ್ಮ ಜೀವಮಾನದ ಉಳಿತಾಯ ಹಾಗೂ ಆಸ್ತಿಗಳನ್ನು, ಉದ್ಯೋಗಗಳನ್ನು
ಕಳೆದುಕೊಂಡಿದ್ದಾರೆ. ಇದು ಈಗಲೂ ಮುಂದುವರೆದಿದೆ. ಈಗ ಆಳುವ ವ್ಯವಸ್ಥೆ ಮಿಲಿಯಗಟ್ಟಲೆ ಮದ್ಯಮ
ವರ್ಗವನ್ನು ಬಡವರ್ಗಕ್ಕೆ ಸರಿಸಿಬಿಟ್ಟಿದೆ. ಇಷ್ಟೆಲ್ಲಾ ಆದರೂ ಈ ವರ್ಗ ತನ್ನ ಮೈಕೊಡವಿ ಎದ್ದು
ನಿಲ್ಲದೇ ಇರುವಷ್ಟು ಬಲಹೀನಗೊಂಡಿದೆ. ಸೈದ್ಧಾಂತಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಆಳುವ ವ್ಯವಸ್ಥೆ
ಇವರನ್ನು ಅತ್ಯಂತ ಬಲಹೀನರನ್ನಾಗಿಸಿದೆ. ತನ್ನ ಅಸ್ತಿತ್ವವನ್ನು ಕೂಡ ರಕ್ಷಿಸಿಕೊಳ್ಳಲಾಗದ
ಪರಿಸ್ಥಿತಿಯಲ್ಲಿದೆ.
ಈ ವರ್ಗದಲ್ಲಿ ಅಂತಹ ನಾಯಕತ್ವ ಬೆಳೆದು ಬಾರದೇ ಇರುವುದು ದೇಶದಲ್ಲಿ
ನಡೆಯುತ್ತಿರುವ ಜನಹೋರಾಟಗಳನ್ನು ವಿರೋಧಿಸುತ್ತಾ ಬಂದಿರುವುದರ ಪರಿಣಾಮವಾಗಿದೆ. ಈ ವರ್ಗಕ್ಕೆ
ಬಹುಸಂಖ‍್ಯಾತ ತಳಪಾಯದ ಸಮುದಾಯಗಳ ಬಗ್ಗೆ ತಾವನುಭವಿಸುತ್ತಿರುವ ದೇಶದ ಸಂಪತ್ತು ಸೌಲಭ್ಯಗಳಿಗೆ ಈ
ತಳಪಾಯದ ಜನಸಮೂಹಗಳ ಶ್ರಮವೇ ಕಾರಣ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಈ ವರ್ಗದಲ್ಲಿನ
ದಲಿತರು ಸೇರಿದಂತೆ ಬಹುಸಂಖ್ಯಾತರು ಬ್ರಾಹ್ಮಣಶಾಹಿ ಮೌಲ್ಯಗಳಲ್ಲಿ ಮುಳುಗಿರುವ ಪರಿಣಾಮವಾಗಿ ಉಳಿದ
ಜನವರ್ಗಗಳಿಂದ ವಿಮುಖವಾಗಿರುವ ಈ ವರ್ಗ ಎದ್ದು ನಿಲ್ಲಲಾರದಷ್ಟು ಶಕ್ತಿಹೀನವಾಗಿ ಬಿಟ್ಟಿದೆ. ಇದು
ಭಾರಿ ಕಾರ್ಪೋರೇಟುಗಳಿಗೆ ತಮ್ಮ ನಡೆಗಳನ್ನು ನಡೆಸಲು ಭಾರಿ ಅನುಕೂಲ ಮಾಡಿಕೊಟ್ಟಿದೆ. ಹಾಗಾಗಿಯೇ
ಈಗಲೂ ಬಿಜೆಪಿಯಂತಹ ಪಕ್ಷಕ್ಕೆ ಶೇಕಡಾ ಇಪ್ಪತೈದರಿಂದ ಮೂವತೈದರಷ್ಟು ಮತಗಳು ಗ್ಯಾರಂಟಿ ಎಂಬಂತಹ
ಸ್ಥಿತಿಯಿದೆ. ಇದನ್ನೇ ಭಾರಿ ಕಾರ್ಪೋರೇಟ್ ಶಕ್ತಿಗಳು ತಮ್ಮ ಸಂಸದೀಯ ಅನುಕೂಲಕ್ಕಾಗಿ
ಬಳಸುತ್ತಿವೆ. ಹಾಗಂತ ಮದ್ಯಮವರ್ಗಕ್ಕೆ ಸೇರಿದವರಾರೂ ಹೋರಾಟರಂಗದಲ್ಲಿ. ಪ್ರತಿರೋಧದಲ್ಲಿ
ಇಲ್ಲವೆಂದು ಇದರ ಅರ್ಥವಲ್ಲ. ಹಲವರು ತೊಡಗಿದ್ದಾರೆ. ಆದರೆ ಪ್ರಧಾನವಾದ ಮದ್ಯಮವರ್ಗದ ಜನಸಮೂಹದ
ಬಗ್ಗೆ ಇಲ್ಲಿ ಹೇಳುತ್ತಿರುವುದು.
ಕರ್ನಾಟಕದಲ್ಲಿ ಮಧ್ಯಮ ವರ್ಗಕ್ಕೆ ಸೇರಿದ ಹಲವರು ಹಾಗೂ ಕೆಲವು ಸಂಘಟನೆಗಳು ಈ
ಎಲ್ಲಾ ಅಪಾಯಗಳ ಬಗ್ಗೆ ಮಾತನಾಡುತ್ತಿದ್ದರೂ ಅವರ ಮಿತಿ ಇಂದಿನ ದುರಂತಗಳಿಗೆಲ್ಲಾ ಪ್ರಧಾನ
ಕಾರಣಕರ್ತರುಗಳ ವಲಯದಲ್ಲಿರುವ ಕಾಂಗ್ರೆಸ್ ಮೊದಲಾದ ಈಗಾಗಲೇ ಜನರ ಮಧ್ಯೆ ಪೂರ್ಣ ಬೆತ್ತಲಾಗಿ
ನಿಂತಿರುವ ಚುನಾವಣಾ ರಾಜಕಾರಣದ ರಾಜಕೀಯ ಪಕ್ಷಗಳನ್ನು, ಅವುಗಳ ಕೆಲವು ನಾಯಕರನ್ನು ಪರಿಹಾರ ಹಾಗೂ ಪರ್ಯಾಯವಾಗಿ
ಮುಂದಿಟ್ಟು ಚುನಾವಣೆಗಳಲ್ಲಿ ಬೆಂಬಲಿಸುವಲ್ಲಿಗೆ ಬಂದು ನಿಲ್ಲುತ್ತಿದೆ. ಇದಕ್ಕೆ ಕುರುಡನಿಗಿಂತ
ಮಳ್ಳೆಗಣ್ಣು ವಾಸಿ, ಕಾಂಗ್ರೆಸ್ ಮಾತ್ರ ಪರ್ಯಾಯ, ಕಾಂಗ್ರೆಸ್ ಸಂವಿಧಾನಪರವಾಗಿದೆ, ಕಾಂಗ್ರೆಸ್
ಬಿಜೆಪಿಯಷ್ಟು ಆಕ್ರಮಣಕಾರಿಯಲ್ಲ, ಅಲ್ಲಿ ಉಸಿರುಕಟ್ಟಿಸುವ ವಾತಾವರಣವಿರೋದಿಲ್ಲ ಇತ್ಯಾದಿ
ಸಮರ್ಥನೆಗಳನ್ನು ಮುಂದೊಡ್ಡಲಾಗುತ್ತಿದೆ. ಅಲ್ಲದೇ ಜನಹೋರಾಟಗಳನ್ನು ಹಾಗೂ ಜನರನ್ನು ಕಾಂಗ್ರೆಸ್
ಪರವಾಗಿ ನಿಲ್ಲುವಂತೆ, ಮತ ನೀಡುವಂತೆ ಬಹಿರಂಗವಾಗಿ ಹಾಗೂ ಪರೋಕ್ಷವಾಗಿ ಸಂಘಟಿಸುವ ಕೆಲಸಗಳನ್ನು
ಮಾಡುತ್ತಿದ್ದಾರೆ. ಆದರೆ ಈ ನಡೆಗಳು ಜನಸಾಮಾನ್ಯರಿಗೆ ನಂಬಿಕೆ ಹುಟ್ಟಿಸುವ ವಿಚಾರವಾಗುವುದಿಲ್ಲ. ಸದ್ಯದ
ಕಾರ್ಯತಂತ್ರ ಮಾತ್ರ ಎಂದೆಲ್ಲಾ ಸಮರ್ಥಿಸಹೋದರೂ ಇವುಗಳು ಪ್ರಜಾತಾಂತ್ರಿಕ ನಡೆ ಕೂಡ ಆಗುವುದಿಲ್ಲ.
ಅಲ್ಲದೇ ಸ್ವಯಂ ವೈರುಧ್ಯದ ಅಪಾಯಕಾರಿ ನಡೆಗಳಾಗಿವೆ. ಇದು ಪ್ರಗತಿಪರ ವಲಯದ ಹಲವು ವ್ಯಕ್ತಿಗಳು,
ಸಂಘಟನೆಗಳಿಗೂ ಅನ್ವಯವಾಗುತ್ತದೆ
ನಿನ್ನೆ ಸಂಜೆವರೆಗೆ ಆ ಪಕ್ಷದಲ್ಲಿದ್ದವರು ರಾತ್ರಿ ಈ ಪಕ್ಷಕ್ಕೆ ಸೇರಿ ಬೆಳಗಿನ
ವೇಳೆಗೆ ಟಿಕೆಟ್ ಪಡೆದು ಮದ್ಯಾಹ್ನದ ವೇಳೆಗೆ ಈ ಪಕ್ಷದ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ
ಸಲ್ಲಿಸಿ ಗೆದ್ದುಬರುವ ಪರಿಸ್ಥಿತಿ ಇದೆ. ಅಲ್ಲದೇ ಇರುವ ಸರ್ಕಾರದ ಶಾಸಕರುಗಳು ಮಂತ್ರಿಗಳಲ್ಲಿ
ಹೆಚ್ಚಿನವರು ಹಿಂದೆ ಇದ್ದ ಪಕ್ಷದ ಸರಕಾರದ ಶಾಸಕರುಗಳು ಮಂತ್ರಿಗಳಾಗಿದ್ದವರೇ ಆಗಿರುತ್ತಾರೆ.?
ಅದೂ ಅಲ್ಲದೇ ಭಾರಿ ಕಾರ್ಪೋರೇಟ್ ಶಕ್ತಿಗಳು ಹಾಗೂ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಶಕ್ತಿಗಳು ಆ
ಪಕ್ಷದಲ್ಲೂ ಯಾವುದಾದರೊಂದು ವಿಧದಲ್ಲಿ ಹಿಡಿತ ಸಾಧಿಸಿರುತ್ತಾರೆ ಈ ಪಕ್ಷದಲ್ಲೂ ಹಿಡಿತ
ಸಾಧಿಸಿರುತ್ತಾರೆ ಎನ್ನುವುದನ್ನೂ ಈಗಲೂ ನೋಡುತ್ತಿದ್ದೇವಲ್ಲ. ಯಾವ ಪಕ್ಷ ಬಂದರೂ ಅವರುಗಳ
ಹಿತಾಸಕ್ತಿಗಳಿಗೆ ಯಾವುದೇ ತಡೆಗಳೂ ಇರೋದಿಲ್ಲವಲ್ಲ. ಹೀಗಿರುವಾಗ ಈ ಪಕ್ಷಕ್ಕಿಂತ ಆ ಪಕ್ಷ ವಾಸಿ
ಎಂದು ಹೇಳಲು ತೊಡಗಿದರೆ ಜನರು ನಂಬುವುದಾದರು ಹೇಗೆ.? ಜನರ ನಂಬಿಕೆ ಗಳಿಸುವುದಾದರೂ ಹೇಗೆ.? ಜನರ
ನಂಬಿಕೆ ಗಳಿಸದೇ ಯಾವುದಾದರೂ ಹೋರಾಟ ಕಟ್ಟಲು ಸಾಧ್ಯವೇ?
ಇಂಡಿಯಾದಲ್ಲಿ ಕೇವಲ ಚುನಾವಣಾ ರಾಜಕಾರಣದ ಮೂಲಕ
ಪ್ರಜಾಪ್ರಭುತ್ವ ನೆಲೆನಿಲ್ಲಿಸಲು ಸಾಧ್ಯವಿಲ್ಲ. ಅಲ್ಲದೇ ಅದು ಭಾರಿ ಕಾರ್ಪೋರೇಟ್ ಹಾಗೂ ಭಾರಿ
ಆಸ್ತಿವಂತ ಶಕ್ತಿಗಳಿಗೆ ಅನುಕೂಲಕರವಾಗಿ ವರ್ತಿಸುತ್ತಾ ಬರುತ್ತವೆ ಎಂಬುದು ಈ ಏಳು ದಶಕಗಳ
ಉದಾಹರಣೆಗಳು ಸಾರಿ ಹೇಳುತ್ತಾ ಬಂದಿವೆ. ಕೋಟಿಗಟ್ಟಲೆ ಹಣ ಖರ್ಚುಮಾಡುವ ಶಕ್ತಿಯಿರುವವರು,
ದೌರ್ಜನ್ಯ ಹಾಗೂ ಶಕ್ತಿ ಪ್ರದರ್ಶನ ಸಾಧ್ಯವಿರುವವರು ಮಾತ್ರ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯ
ಎಂದಿರುವಾಗ ಅಲ್ಲಿ ಬಹುಸಂಖ‍್ಯಾತ ಜನಸಾಮಾನ್ಯರ ಪ್ರಜಾಪ್ರಭುತ್ವ ಅರಳಿ ಬೆಳೆಯಲು
ಸಾಧ್ಯವಾಗುವುದೇ?. ಇದು ಪ್ರಜಾಸತ್ತಾತ್ಮಕತೆ ಬೆಳೆದು ಅರಳಲು ಇರುವ ಮತ್ತೊಂದು ಪ್ರಮುಖ ತೊಡಕಿನ
ವಿಚಾರವಾಗಿದೆ.
ಆದಿವಾಸಿಗಳು,
ವಿದ್ಯಾರ್ಥಿಗಳು, ರೈತಾಪಿಗಳು ಹಾಗೂ ಪ್ರಜಾಪ್ರಭುತ್ವ
2022ರ ಮಾರ್ಚ್ ನಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ನೆಲೆಸಿ ಕೃಷಿ
ಮಾಡುತ್ತಿದ್ದ ಬಡ ರೈತಾಪಿಗಳನ್ನು ಯಾವುದೇ ನಿಯಮಾವಳಿಗಳನ್ನು ಪಾಲಿಸದೇ, ಮಾನವಹಕ್ಕುಗಳ
ನಿಯಮಗಳನ್ನು ಕೂಡ ಕನಿಷ್ಟ ಪಾಲನೆಯನ್ನೂ ಮಾಡದೆ, ಸರಕಾರಿ ಬಲಪ್ರಯೋಗಗಳ ಮೂಲಕ ಹೀನ ಮಟ್ಟದಲ್ಲಿ ಒಕ್ಕಲೆಬ್ಬಿಸಿ
ಬಿಸುಡುವಂತಹ ಕ್ರಮಗಳನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಸರಕಾರ ಮಾಡಿತು. ಅಲ್ಲಿ ಸರ್ಕಾರಿ
ಛಾಯಾಗ್ರಾಹಕ ಒಬ್ಬ ಸರಕಾರಿ ಪಡೆಗಳ ಗುಂಡೇಟು ತಿಂದು ಶವವಾಗಿ ಬಿದ್ದ ರೈತನ ದೇಹದ ಮೇಲೆ ಹಾರಿ
ಒದೆಯುವ ಘಟನೆ ನಡೆದು ಅದು ಮಾಧ್ಯಮ ಹಾಗೂ ಬುದ್ಧಿಜೀವಿ ವಲಯದಲ್ಲಿ ಹೆಚ್ಚು ಚರ್ಚೆಗೆ
ಕಾರಣವಾಗಿತ್ತು. ಆದರೆ ನೂರಾರು ರೈತಾಪಿ ಜನರನ್ನು ಅವರು ರೂಢಿಸಿಕೊಂಡು ಬದುಕು ರೂಪಿಸಿಕೊಂಡ
ನೆಲದಿಂದ ಸರಕಾರ ತನ್ನ ಸಶಸ್ತ್ರಬಲದ ಮೂಲಕ ದಿನಬೆಳಗಾಗುವುದರೊಳಗೆ
ಕೊಂದು, ಹೊಡೆದು, ಹಿಂಸಿಸಿ ಎತ್ತಿ ಬಿಸುಡಿದ್ದು ಅಷ್ಟೊಂದು ಚರ್ಚೆಯಾಗಲಿಲ್ಲ. ಅದನ್ನು ಕೋಮುವಾದಿ ವಿಷ
ಹರಡುವ ಮೂಲಕ ಮರೆಸಲು ಹಾಗೇನೆ ಸಮರ್ಥಿಸಲು ಹೊರಟಿದ್ದು ನಮ್ಮ ಸರಕಾರಿ ವ್ಯವಸ್ಥೆ ಹೇಗೆಲ್ಲಾ
ಮತ್ತು ಎಷ್ಟೊಂದು ಪ್ರಮಾಣದಲ್ಲಿ ಬ್ರಾಹ್ಮಣಶಾಹಿ ನಿರಂಕುಶೀಕರಣಗೊಳ್ಳುತ್ತಾ ಸಾಗುತ್ತಿದೆ
ಎನ್ನುವುದನ್ನು ಎತ್ತಿ ತೋರಿಸುವ ಮತ್ತೊಂದು ಉದಾಹರಣೆಯಾಗಿದೆ. ಅಸ್ಸಾಂ ಒಂದರಲ್ಲಿಯೇ ಸುಮಾರು
ಮೂರೂವರೆ ಲಕ್ಷ ಜನರು ಒಕ್ಕೆಲೆದ್ದು ನಿರಾಶ್ರತರಾಗುವಂತೆ ಮಾಡಿಡಲಾಗಿದೆ. ಅದಕ್ಕೆ ಹೋರಾಟ,
ಅರಣ್ಯ, ಪ್ರವಾಹ. ಪೌರತ್ವ ನೊಂದಣೆ ಇತ್ಯಾದಿ ಹಲವಾರು ಕಾರಣಗಳನ್ನು ಮುಂದಿಡಲಾಗಿದೆ. ಇಂತಹುದು
ದೇಶಾದ್ಯಂತ ಹಲವಾರು ನಡೆಯುತ್ತಲೇ ಬರುತ್ತಿವೆ. ಇವುಗಳು ಯಾವುದೇ ರೀತಿಯಲ್ಲೂ ಪ್ರಜಾಸತ್ತಾತ್ಮಕ
ವ್ಯವಸ್ಥೆಯೊಂದರ ಲಕ್ಷಣಗಳಲ್ಲ ಎಂಬುದನ್ನು ಹೇಳಬೇಕಿಲ್ಲ ತಾನೇ.
ಪೌರತ್ವ ನೊಂದಣಿ ಕಾಯ್ದೆಗಳು, ಕೃಷಿ ತಿದ್ದುಪಡಿ ಮಸೂದೆಗಳು, ಕಾರ್ಮಿಕ
ತಿದ್ದುಪಡಿ ಕಾಯಿದೆಗಳು, ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳು, ಗಣಿ ತಿದ್ದುಪಡಿ ಕಾಯ್ದೆಗಳು
ಸಂಪೂರ್ಣ ಅರ್ಥದಲ್ಲಿ ಪೂರ್ಣವಾಗಿ ಜಾರಿಯಾಗುವುದಾದರೆ ಅದರ ಪರಿಣಾಮ ಈ ದೇಶದ ತಳಪಾಯದ ಜನಸಾಮಾನ್ಯರ
ಮೇಲೆ, ರೈತಾಪಿಗಳ ಮೇಲೆ, ಅಲ್ಪ ಸಂಖ್ಯಾತರು, ಮದ್ಯಮ, ಮೇಲ್ಮದ್ಯಮ, ಇನ್ನಿತರ ಜನವರ್ಗಗಳ ಮೇಲೆ
ಹೇಗೆಲ್ಲಾ ಆಗಬಹುದು ಎಂಬುದರ ಮುನ್ಸೂಚನೆಗಳೇ ಇಂತಹ ಘಟನೆಗಳಾಗಿವೆ ಎನ್ನುವುದನ್ನು ಗ್ರಹಿಸಬೇಕಾದ
ಅಗತ್ಯವಿದೆ.
ಬ್ರಿಟೀಷ್ ವಸಾಹತುಶಾಹಿಯು ತನ್ನ ಅರಣ್ಯ ಲೂಟಿಯ ಅನುಕೂಲಕ್ಕೆ ತಕ್ಕಂತೆಎಲ್ಲಾ
ಕಾಯಿದೆಗಳಂತೆ ಅರಣ್ಯ ಕಾಯಿದೆಯನ್ನೂ ರೂಪಿಸಿದರು. ಅದೇ ಅರಣ್ಯ ಕಾಯಿದೆಯನ್ನು ಉಳಿಸಿಕೊಂಡು
ಬ್ರಿಟೀಷರ ನಂತರದ ಏಳು ದಶಕಗಳ ಕಾಲದಲ್ಲಿ ಆಳುತ್ತಾ ಬಂದ ಸರಕಾರಗಳು ಅರಣ್ಯ ರಕ್ಷಣೆಯ ಹೆಸರಿನಲ್ಲೇ
ಹಲವಾರು ತಿದ್ದುಪಡಿಗಳನ್ನು ಮಾಡುತ್ತಾ ಬಂದಿವೆ. ಅದರ ಭಾಗವಾಗಿಯೇ ಮೀಸಲು ಅರಣ್ಯ, ಗೋಮಾಳ,
ರಕ್ಷಿತಾರಣ್ಯ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ, ಹುಲಿ ಯೋಜನೆ, ಆನೆ ಕಾರಿಡಾರ್, ಔಷಧೀಯ
ಅರಣ್ಯ ಇತ್ಯಾದಿಗಳ ಹೆಸರಿನಲ್ಲಿ ಆದಿವಾಸಿ ಇನ್ನಿತರ ಮೂಲನಿವಾಸಿ ಜನರನ್ನು ಒಕ್ಕಲೆಬ್ಬಿಸುವ
ಕಾರ್ಯಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಾಡುತ್ತಾ ಬರಲಾಗಿದೆ. ಇದರ ಜೊತೆಯಲ್ಲೇ ಅಂತಹ
ರಕ್ಷಿತ ಅರಣ್ಯ ಪ್ರದೇಶಗಳಲ್ಲಿಯೇ ಭಾರಿ ಗಣಿಗಾರಿಕೆಗಳನ್ನು, ಪ್ರವಾಸೋದ್ಧಿಮೆ ಹೆಸರಿನ ತಾರಾ
ರೆಸಾರ್ಟ್ ಗಳನ್ನು, ಜಲಾಶಯ, ವಿದ್ಯುತ್, ಭಾರಿ ರಸ್ತೆ ಇತ್ಯಾದಿ ಯೋಜನೆಗಳಿಗಾಗಿ ಭಾರಿ
ಕಾರ್ಪೋರೇಟ್ ಹಿತಾಸಕ್ತಿಗಳಿಗೆ ಬಿಟ್ಟುಕೊಡುವ ಕಾರ್ಯಗಳನ್ನೂ ಮಾಡುತ್ತಾ ಬರಲಾಗಿದೆ.
ಇವೆಲ್ಲವನ್ನೂ ಪರಿಸರ ಹಾಗೂ ಅರಣ್ಯ ರಕ್ಷಣೆಯ ಹೆಸರಿನಲ್ಲೇ ಮಾಡಲಾಗಿದೆ ಎಂಬುದನ್ನೂ ಸ್ಪಷ್ಟವಾಗಿ
ಗಮನಿಸಬೇಕು. ಜನಸಾಮಾನ್ಯರನ್ನು ಒಕ್ಕಲೆಬ್ಬಿಸಿ ಬಿಸುಡುವುದು ಅದೇ ಜಾಗದಲ್ಲಿ ಭಾರಿ
ಕಾರ್ಪೋರೇಟುಗಳಿಗೆ ಅವಕಾಶ ಒದಗಿಸುವುದು ಈ ನೀತಿಗಳನ್ನೇ ಸರಕಾರಗಳು ಅನುಸರಿಸುತ್ತಾ ಬಂದಿವೆ.
ಅದೇ ವೇಳೆ ಒಕ್ಕಲೆಬ್ಬಿಸಿ ಬಿಸುಡಿದ ಲಕ್ಷಾಂತರ ಆದಿವಾಸಿ ಇನ್ನಿತರ ಜನಸಾಮಾನ್ಯರಿಗೆ
ಕನಿಷ್ಠ ಪರ್ಯಾಯಗಳನ್ನೂ ಕೂಡ ಒದಗಿಸದೇ ಅವರುಗಳ ಬದುಕುಗಳನ್ನೇ ಬರ್ಬಾದು ಮಾಡಿಡಲಾಗಿರುವ ದೊಡ್ಡ
ಪರಂಪರೆಯೇ ಇದೆ. ಕರ್ನಾಟಕದಲ್ಲೂ ನಾಗರಹೊಳೆ, ಬಂಡಿಪುರ, ಮೂಡಿಗೆರೆಯ ತತ್ಕೊಳ, ಕಾರವಾರದ ಸೀಬರ್ಡ್
ಮೊದಲಾದ ಕಡೆಗಳಲ್ಲಿ ಸರಕಾರಗಳು ಬಲವಂತದ ಹಾಗೆಯೇ ಹಿಂಸಾತ್ಮಕವಾಗಿ ಆದಿವಾಸಿ ಇನ್ನಿತರ
ಜನಸಮುದಾಯಗಳನ್ನು ಒಕ್ಕಲೆಬ್ಬಿಸಿ ಬದುಕು ನಾಶ ಮಾಡಿ ಬೀದಿಪಾಲು ಮಾಡಿರುವ ಉದಾಹರಣೆಗಳಿವೆ. ಅಂದರೆ
ಹಿಂದಿನಿಂದ ಕಾನೂನುಗಳ ಮೂಲಕವೇ ಇಷ್ಟೆಲ್ಲಾ ಅಕ್ರಮಗಳು ಸರಕಾರಗಳಿಂದ ನಡೆದಿವೆ ಎಂದ ಮೇಲೆ ಇನ್ನು
ಭಾರಿ ಕಾರ್ಪೋರೇಟುಗಳ ಕೈಯಲ್ಲಿ ಈ ಪ್ರದೇಶಗಳೆಲ್ಲಾ ಸೇರಿಕೊಂಡರೆ ಜನರು ಹಾಗೂ ಪರಿಸರದ ಪರಿಸ್ಥಿತಿ
ಏನಾಗಬಹುದು ಎನ್ನುವುದನ್ನು ಊಹಿಸಿದರೆ ಭಾರಿ ಭಯಾನಕ ಚಿತ್ರಣ ಕಣ್ಣ ಮುಂದೆ ಬರಬಹುದು. ಕಳೆದ ವರುಷ
ಅಸ್ಸಾಂನಲ್ಲಿ ನಡೆದ ನೂರಾರು ಸಂಖ‍್ಯೆಯಲ್ಲಿ ಅರೆ ಸೇನಾಪಡೆಗಳನ್ನು ನುಗ್ಗಿಸಿ ನಡೆಸಿದ ಕಗ್ಗೊಲೆ
ಹಲ್ಲೆ ಹಾಗೂ ಒಕ್ಕಲೆಬ್ಬಿಸುವಿಕೆಗಳಿಗಿಂತಲೂ ಭೀಕರವಾದ ರೀತಿಯ ಘಟನೆಗಳು ದೇಶದ ತುಂಬೆಲ್ಲಾ
ವಿಪರೀತವೆನ್ನುವಷ್ಟು ಹೆಚ್ಚಬಹುದು.
ರಾಜ್ಯ ಸರ್ಕಾರಗಳು, ಯೂನಿಯನ್ ಆಡಳಿತ ಪ್ರದೇಶಗಳ ಆಡಳಿತಗಳಿಗೆ ಕಳುಹಿಸಿ
ಬಹಿರಂಗವಾಗಿಸಿರುವ ತಿದ್ದುಪಡಿ ಪ್ರಸ್ತಾವನೆಗಳಲ್ಲಿ ಅರಣ್ಯ ರಕ್ಷಣಾ ಕಾಯಿದೆ 1980 ರ ಕಲಮು 1
ಮತ್ತು 2 ಕ್ಕೆ ತಿದ್ದುಪಡಿಗಳನ್ನು ತಂದು ಅಭಿವೃದ್ದಿ ಹೆಸರಿನ ಯೋಜನೆಗಳಿಗೆ ಯಾವುದೇ
ತೊಂದರೆಯಾಗದಂತೆ ಮಾಡುವ ಸ್ಪಷ್ಟ ಉದ್ದೇಶವಿದೆ. ಅದರ ಪ್ರಕಾರ ಅರಣ್ಯ ಪ್ರದೇಶಗಳಲ್ಲಿ ರಸ್ತೆ
ನಿರ್ಮಾಣ, ತೋಟಗಾರಿಕೆ (ಪ್ಲಾಂಟೇಶನ್) ತೈಲ ಉತ್ಖನನ, ಅರಣ್ಯ ಪ್ರವಾಸೋದ್ದಿಮೆ, ಮತ್ತು
ವ್ಯೂಹತಾಂತ್ರಿಕ ಯೋಜನೆಗಳಿಗೆ ಅರಣ್ಯ ರಕ್ಷಣಾ ಕಾಯಿದೆ ಯಾವುದೇ ತಡೆಯಾಗದಂತೆ ಮಾಡುವುದು. ರಾಜ್ಯ
ಸರ್ಕಾರಗಳಿಗೆ ಅರಣ್ಯ ಪ್ರದೇಶಗಳನ್ನು ವ್ಯಕ್ತಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಕಾರ್ಪೋರೇಟು
ಕಂಪನಿಗಳಿಗೆ ಭೋಗ್ಯಕ್ಕೆ ನೀಡಬಹುದಾದ ಪೂರ್ಣ ಅಧಿಕಾರ ನೀಡುವುದು. ಖಾಸಗಿ ಅರಣ್ಯ ಪ್ರದೇಶಗಳನ್ನು
ನಿರ್ಮಿಸುವುದು, ಅರಣ್ಯ ಪ್ರದೇಶಗಳನ್ನು ಖಾಸಗಿ ಉಸ್ತುವಾರಿಗೆ ಹಸ್ತಾಂತರಿಸುವುದು, ಅರಣ್ಯ
ಪ್ರದೇಶಗಳಲ್ಲಿ ಸರ್ವೇಕ್ಷಣೆ, ವಿಚಕ್ಷಣೆ, ತನಿಖೆ ಇತ್ಯಾದಿಗಳನ್ನು ನಡೆಸಲು ಯಾವುದೇ ಅಡ್ಡಿಗಳು
ಇಲ್ಲದಂತೆ ಮಾಡುವುದು. ರೈಲು, ರಸ್ತೆ ಇತ್ಯಾದಿ ಯೋಜನೆಗಳಿಗಾಗಿ 1980ಕ್ಕೂ ಮೊದಲು ಸ್ವಾಧೀನ
ಪಡಿಸಿದ ಅರಣ್ಯ ಭೂಮಿಗಳಲ್ಲಿ
ಯೋಜನೆಗಳನ್ನು ಜಾರಿಗೊಳಿಸಲು ಅರಣ್ಯ ಇಲಾಖೆಯ ಅನುಮತಿಯ ಅವಶ್ಯಕತೆಯನ್ನು ಇಲ್ಲವಾಗಿಸುವುದು
ಸೇರಿವೆ. ಅಲ್ಲದೇ ಅಗತ್ಯವೆಂದಾದಲ್ಲಿ ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ದಿ ಹೆಸರಿನ ಯೋಜನೆಗಳನ್ನು
ಜಾರಿಗೊಳಿಸಲು ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುವ ಉದ್ದೇಶವೂ ಈ ತಿದ್ದುಪಡಿಗಳದಾಗಿದೆ.
ಒಟ್ಟಿನಲ್ಲಿ ಅರಣ್ಯ ರಕ್ಷಣೆಗಾಗಿ ಈ ಹಿಂದೆ ಇದ್ದ ಕಾನೂನಾತ್ಮಕ ರಕ್ಷಣೆಗಳನ್ನೂ
ಕೂಡ ಇಲ್ಲವಾಗಿಸಿ ನೇರವಾಗಿ ಮತ್ತು ಪರೋಕ್ಷವಾಗಿ ಭಾರಿ ಕಾರ್ಪೋರೇಟುಗಳಿಗೆ ಅರಣ್ಯ ಪ್ರದೇಶಗಳನ್ನು
ಬಿಟ್ಟುಕೊಡಲು ಮಾಡುತ್ತಿರುವ ಅರಣ್ಯ ಮತ್ತು ಪರಿಸರ ರಕ್ಷಣೆಯ ಹೆಸರಿನ ಕಸರತ್ತು ಇವುಗಳಾಗಿವೆ
ಎಂಬುದು ಸ್ಪಷ್ಟ. ಇಲ್ಲಿ ಜನಸಾಮಾನ್ಯರಿಗೆ ಅರಣ್ಯದ ಮೇಲೆ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸುವ
ಅದೇ ವೇಳೆಯಲ್ಲೇ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಸಾಮಾನ್ಯರು ತಮ್ಮ ಬದುಕಿನ ಮೂಲಗಳಿಂದ
ಹೊರದಬ್ಬಲ್ಪಡುವ ಪ್ರಕ್ರಿಯೆಗಳಿಗೆ ಹೆಚ್ಚಿನ ಕಾನೂನು ಬಲವನ್ನು ಈ ಪ್ರಸ್ತಾವನೆಗಳು ನೀಡುತ್ತವೆ.
ಉದಾಹರಣೆಗೆ ಅಭಿವೃದ್ಧಿಗಾಗಿಯೋ ಇಲ್ಲವೇ ಅರಣ್ಯ ರಕ್ಷಣೆಗಾಗಿಯೋ ಅರಣ್ಯ ಪ್ರದೇಶಗಳನ್ನು ಖಾಸಗಿ
ವ್ಯಕ್ತಿ, ಕಂಪನಿ, ಇಲ್ಲವೇ ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸಿದಾಗ ಸಹಜವಾಗಿ ಆ ಪ್ರದೇಶದಲ್ಲಿ
ಇರುವ ಇಲ್ಲವೇ ಆ ಅರಣ್ಯ ಪ್ರದೇಶವನ್ನು ಆಧರಿಸಿರುವ ಜನಸಾಮಾನ್ಯರು ತಮ್ಮ ಸಹಜ ಹಕ್ಕುಗಳನ್ನು
ಕಳೆದುಕೊಳ್ಳಲೇ ಬೇಕಾಗುತ್ತದೆ. ಅನಿವಾರ್ಯವಾಗಿ ಒಕ್ಕಲೆದ್ದು ಹೋಗಲೇಬೇಕಾಗಬಹುದು. ಸರ್ಕಾರಗಳು ಬಲವಂತವಾಗಿಯೇ
ಒಕ್ಕಲೆಬ್ಬಿಸಬಹುದು.
ದೇಶದ ಜನರ ಮೇಲೆ ಪೌರತ್ವ ನೊಂದಣಿ ಎಂಬ ಫ್ಯಾಸಿಸ್ಟ್ ನೀತಿಯ ಬಾಗವೊಂದನ್ನು ಹೇರಲು
ಪ್ರಯತ್ನಗಳು ಸಾಗುತ್ತಿವೆ. ಈಶಾನ್ಯ ಇಂಡಿಯಾದಲ್ಲಿ ಇದನ್ನು ಹೇರಲು ಹೋದ ಪರಿಣಾಮದಿಂದಾಗಿ
ಸಾವಿರಾರು ಜನರು ದೇಶಭ್ರಷ್ಟರಾಗಿ ನಿರಾಶ್ರಿತ ಶಿಬಿರಗಳಲ್ಲಿ ಈಗಲೂ ಕೊಳೆಯುವಂತೆ ಮಾಡಿಡಲಾಗಿದೆ.
ಇದು ಬೇರೆಡೆಗಳಲ್ಲಿ ಹೇರುವ ಕಾರ್ಯ ಸಧ್ಯಕ್ಕೆ ಆರಂಭವಾಗದಿದ್ದರೂ ಅದರ ಭೀತಿ ಈಗಲೂ
ಮುಂದುವರೆಯುತ್ತಿದೆ. ಇವುಗಳು ಪ್ರಜಾಪ್ರಭುತ್ವ ನೆಲೆನಿಲ್ಲಲು ಮುಳುವಾಗಿ ಪರಿಣಮಿಸುತ್ತವೆ.
ದೇಶದ ವಿಶ್ವವಿದ್ಯಾಲಯಗಳ ಮೇಲೆ ಕೇಂದ್ರೀಯ ಹಿಡಿತ ಸಾಧಿಸುತ್ತಾ ತನ್ನ ಭಾರಿ
ಕಾರ್ಪೋರೇಟ್ ಪರ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಕಾರ್ಯಸೂಚಿಗಳನ್ನು ಹೇರುವ ಪ್ರಯತ್ನಗಳು
ಸಾಗುತ್ತಿವೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಅಲಿಘಡ್
ವಿಶ್ವವಿದ್ಯಾಲಯ, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯ ಮೊದಲಾದೆಡೆಗಳಲ್ಲಿ ನಡೆದ
ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗಳನ್ನು ನಾವಿಲ್ಲಿ ಗಮನಿಸಬೇಕು. ಇದೀಗ ಬಹುಸಂಖ‍್ಯಾತ
ಜನಸಾಮಾನ್ಯರ ವಿರೋಧಿ ಹಾಗೂ ಬ್ರಾಹ್ಮಣಶಾಹಿ ಚಿಂತನೆಗಳನ್ನು ಹೇರಲು ಅನುಕೂಲವಾಗುವಂತಿರುವ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದ ವಿದ್ಯಾರ್ಥಿ ಸಮೂಹದ ಮೇಲೆ ಹೇರುವ ಕಾರ್ಯ ಬಹಳ ಜೋರಾಗಿದೆ.
ಇವುಗಳೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪ್ರಜಾತಾಂತ್ರಿಕ ಪ್ರಜ್ಞೆ ಬೆಳೆಯದಂತೆ ಪ್ರಜಾತಾಂತ್ರಿಕ
ಚಟುವಟಿಕೆಗಳು ನಡೆಯದಂತೆ, ವೈಜ್ಞಾನಿಕತೆ ಬೆಳೆಯದಂತೆ ಸಂಪೂರ್ಣವಾಗಿ ತಡೆಯುವ
ಪ್ರಯತ್ನಗಳಾಗಿವೆ. ಇವೆಲ್ಲವೂ ಸಾಹಿತ್ಯ, ಕಲೆ,
ಸಿನಿಮಾ, ರಂಗಭೂಮಿಗಳನ್ನು, ಸೃಜನಶೀಲ ಬೆಳವಣಿಗೆಗಳನ್ನು ತಡೆಯುತ್ತಿವೆ. ಇದಕ್ಕೆ ದೆಹಲಿಯ
ರಾಷ್ಟ್ರೀಯ ನಾಟಕ ಶಾಲೆ, ಚರಿತ್ರೆಯ ಪಠ್ಯ ತಿದ್ದುವಿಕೆ ಹಾಗೂ ಸನಾತನ ಪಠ್ಯ ಸೇರಿಸುವಿಕೆ, ಶಾಲಾ
ಪಠ್ಯಗಳಲ್ಲಿ ಬ್ರಾಹ್ಮಣಶಾಹಿ ಮೌಲ್ಯಗಳ ಸೇರ್ಪಡೆ ಹಾಗೂ ವಿಜೃಂಭಣೆ, ಕರ್ನಾಟಕದ ರಂಗಾಯಣಗಳಂತಹ
ಸಾಕಷ್ಟು ಉದಾಹರಣೆಗಳಿವೆ. ಬ್ರಾಹ್ಮಣಶಾಹಿ ಕೋಮುವಾದಿ ವಿಷಗಳನ್ನು ತುಂಬಿಸಿ ಕಳಪೆ ಗುಣಮಟ್ಟ ಹಾಗೂ
ಕೀಳು ಅಭಿರುಚಿ ಹರಡುವ ಮತ್ತು ಒಕ್ಕೂಟ ತತ್ವಗಳಿಗೆ ಮುಳುವಾಗುವಂತಹ ಕಾಶ್ಮೀರಿ ಫೈಲ್ಸ್,
ಕೇರಳಫೈಲ್ಸ್, ನಂತಹ ಚಲನಚಿತ್ರಗಳನ್ನು ಸರ್ಕಾರಗಳೇ ನೇರವಾಗಿ ಪ್ರಾಯೋಜಿಸತೊಡಗಿವೆ. ಹಲವು
ಪ್ರತಿಷ್ಟಿತರೆನಿಸಿಕೊಂಡ ಸಾಹಿತಿಗಳು ಕಲಾವಿದರು ತಾಳುತ್ತಿರುವ ಬ್ರಾಹ್ಮಣಶಾಹಿ ಪ್ರಭುತ್ವಪರ ನಿಲುವುಗಳು
ಕೂಡ ಸಾಬೀತುಪಡಿಸುತ್ತಿವೆ.
ಪ್ರಭುತ್ವದ ಜನವಿರೋಧಿ ನಡೆಗಳಿಗೆ ಜನಸಮೂಹದ
ಪ್ರಜಾತಾಂತ್ರಿಕ ಪ್ರತಿರೋಧಗಳು ಹಾಗೂ ಪಾಠಗಳು
ಇವೆಲ್ಲದರ ವಿರುದ್ದ ಹಲವಾರು ಹೋರಾಟಗಳು ನಡೆಯುತ್ತಾ ಬಂದಿವೆ. ಅವುಗಳಲ್ಲಿ ಪ್ರಮುಖವಾದ ಕೆಲವನ್ನು ಹೆಸರಿಸುವುದಾದರೆ 2006ರಲ್ಲಿ
ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಕೈರ್ಲಾಂಜಿಯಲ್ಲಿ ನಡೆದ ಬೂತಮಾಂಗೆ ಕುಟುಂಬದ ಮೇಲಿನ ಜಾತಿ ಕೊಲೆ
ಹಾಗೂ ದೌರ್ಜನ್ಯದ ವಿರುದ್ಧದ ಹೋರಾಟ, ಅದು ದಲಿತ ಹಾಗೂ ಸಮಾಜದ ಹಲವು ಪ್ರಗತಿಪರ ಶಕ್ತಿಗಳ ಒಗ್ಗಟ್ಟಿನ
ಹೋರಾಟವಾಗಿತ್ತು. ಅಟ್ರಾಸಿಟಿ ಕಾಯಿದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ವಿರೋಧಿಸಿ
ಭಾರಿಹೋರಾಟಗಳು ನಡೆದವು. ಭವಿಷ್ಯ ನಿಧಿ (ಪಿ.ಎಫ್) ಹಣವನ್ನು ಕಾರ್ಪೋರೇಟೀಕರಿಸುವುದನ್ನು
ಪ್ರತಿಭಟಿಸಿ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಹೋರಾಟ ಸಿಡಿಯಿತು. ಕಾರ್ಮಿಕ ವರ್ಗ
ಬೀದಿಕಾಳಗಕ್ಕಿಳಿಯಿತು. ಗುಜರಾತಿನ ಊನಾದಲ್ಲಿ ಗೋ
ರಕ್ಷಣೆಯ ಹೆಸರಿನಲ್ಲಿ ದಲಿತರ ಮೇಲೆ ನಡೆದ ಮಾರಣಾಂತಿಕ ದೌರ್ಜನ್ಯಗಳ ವಿರುದ್ದ ಹೋರಾಟ
ರೂಪುಗೊಂಡಿತು. 2017ರಲ್ಲಿ ಉತ್ತರಪ್ರದೇಶದ ಉನ್ನಾವೋದಲ್ಲಿ ದಲಿತ ಬಾಲಕಿಯ ಮೇಲಿನ ಗುಂಪು
ಅತ್ಯಾಚಾರ ಕ್ರೂರ ದೌರ್ಜನ್ಯಗಳ ಹೋರಾಟ ಸಿಡಿಯಿತು. ಅದರ ಪರಿಣಾಮವಾಗಿ ಬಿಜೆಪಿ ಶಾಸಕ ಕುಲ್ ದೀಪ್ ಸೆನೆಗರ್
ಜೈಲುಪಾಲಾಗಬೇಕಾಯಿತು. ಇಂತಹ ಹಲವು ಹೋರಾಟಗಳು ದೇಶಾದ್ಯಂತ ಸಂಚಲನಗಳನ್ನು ಸೃಷ್ಟಿಸಿದ್ದವು. ದೇಶದ
ಹಲವೆಡೆ ದಲಿತ ಸಮೂಹ ಮೈಕೊಡವಿಕೊಂಡು ಎದ್ದೇಳುವಂತೆ ಮಾಡಿತು. ಕರ್ನಾಟಕದಲ್ಲೂ ದಲಿತರ ಮೇಲಿನ
ದೌರ್ಜನ್ಯದ ವಿರುದ್ಧ ಅತ್ಯಾಚಾರಗಳ ವಿರುದ್ಧ, ಪೌರತ್ವ ಕಾಯಿದೆ ಜಾರಿ ವಿರುದ್ಧ ಹೋರಾಟಗಳು
ನಡೆದವು. ತಮ್ಮ ಮೇಲಿನ ಹೆಚ್ಚುತ್ತಲೇ ಸಾಗುತ್ತಿರುವ ಹಿಂಸೆ, ದೌರ್ಜನ್ಯ, ತಾರತಮ್ಯ, ಅಭದ್ರತೆಗಳ
ವಿರುದ್ಧ ಬೆಂಗಳೂರಿನಲ್ಲಿ ಕೆಲವು ದಶಕಗಳ ನಂತರ ದಲಿತರ ಭಾರಿ ಪ್ರತಿಭಟನಾ ಸಮಾವೇಶ ನಡೆಯಿತು.
ಸಾಮೂಹಿಕ ಆತ್ಮಹತ್ಯೆಗಳಂತಹ
ಪರಿಸ್ಥಿತಿಗೆ ದೂಡಲ್ಪಟ್ಟ ರೈತಾಪಿಗಳು ಮಹಾರಾಷ್ಟ್ರದಲ್ಲಿ ಅಪಾರ ಕಷ್ಟಗಳನ್ನು ಸಹಿಸಿಕೊಂಡು,
ಕಾಲುಗಳನ್ನು ಸುಟ್ಟುಕೊಂಡು ಮುಂಬೈ ಅಧಿಕಾರ ತಾಣಕ್ಕೆ ಕಾಲ್ನಡಿಗೆ ಬೃಹತ್ ಜಾತಾ ನಡೆಸಿದರು.
ಪಂಜಾಬ್ ಹಾಗೂ ಹರಿಯಾಣದ ರೈತಾಪಿಗಳು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸರಕಾರಗಳ ಜನವಿರೋಧಿ
ಪ್ರಜಾಪ್ರಭುತ್ವ ವಿರೋಧಿ, ಭಾರಿ ಕಾರ್ಪೋರೇಟ್ ಪರ ನೀತಿಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ
ಬಂದರು.
ಉಸ್ಮಾನಿಯಾ, ಜೆ. ಎನ್. ಯು ವಿದ್ಯಾರ್ಥಿ ಸಮೂಹ ಬಹಳ ಕೆಚ್ಚಿನಿಂದ ಸರಕಾರದ ಜನವಿರೋಧಿ
ಹಾಗೂ ಫ್ಯಾಸಿಸ್ಟ್ ನಡೆಗಳನ್ನು ವಿರೋಧಿಸಿ ನಿಂತು ಹೋರಾಡಿದರು. ಅದಕ್ಕಾಗಿ ದೈಹಿಕ ಹಲ್ಲೆಗಳೂ
ಸೇರಿದಂತೆ ಹಲವಾರು ಹಿಂಸೆ ಕಿರುಕುಳಗಳಿಗೆ ಒಳಗಾಗಬೇಕಾಯಿತು. ಹಲವು ವಿದ್ಯಾರ್ಥಿನಿ/ವಿದ್ಯಾರ್ಥಿಗಳು
ಕಾರಾಗೃಹವಾಸಕ್ಕೆ ಒಳಗಾಗಬೇಕಾಯಿತು. ನ್ಯಾಯಾಲಯಗಳಿಗೆ ತಿರುಗಾಡಬೇಕಾಯಿತು. ವಿದ್ಯಾರ್ಥಿನಿ/ವಿದ್ಯಾರ್ಥಿಗಳು
ಹಾಗೂ ದೇಶದ ಜನರ ಪರವಾಗಿ ನಿಂತಿದ್ದಕ್ಕೆ ಹಲವು ವಿದ್ಯಾರ್ಥಿನಿ /ವಿದ್ಯಾರ್ಥಿಗಳು ಈಗಲೂ
ಕಾರಾಗೃಹಗಳಲ್ಲಿದ್ದಾರೆ. ನಂತರ ದೆಹಲಿ ವಿವಿ, ಅಲಿಘಡ್ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ,
ಪಶ್ಚಿಮ ಬಂಗಾಲದ ಜಾದವ್ ಪುರ ವಿವಿ, ಹೈದರಾಬಾದಿನ ಉಸ್ಮಾನಿಯಾ ವಿವಿ ಮೊದಲಾದೆಡೆಗಳಲ್ಲಿ
ವಿದ್ಯಾರ್ಥಿ ಸಮೂಹ ಭಾರಿ ಹೋರಾಟಗಳಿಗೆ ಇಳಿದರು. ನಂತರ ಪೌರತ್ವ ನೊಂದಣೆ ಕಡ್ಡಾಯಗೊಳಿಸುವುದರ
ವಿರುದ್ಧ ಜನರ ಹೋರಾಟಗಳು ದೇಶದ ವಿವಿದೆಡೆ ನಡೆದವು. ಇವುಗಳ ಮೂಲಕ ಮೂಲಕ ಶಾಹಿನ್ ಭಾಗ್ ಮಾದರಿಯ ಹೆಚ್ಚಿನ
ಸುಸಂಘಟಿತ ಸಾಮೂಹಿಕ ಹೋರಾಟವೊಂದು ರೂಪುಗೊಂಡಿತು.
ಇವುಗಳ ಜೊತೆಗೆ ಈ ಕಾಲಘಟ್ಟದ ನಮ್ಮ ದೇಶದ ಬಹಳ ಮಹತ್ವದ ಅಷ್ಟೇ ಅಲ್ಲದೇ ಜಾಗತಿಕವಾಗಿಯೇ
ಸಂಚಲನ ಸೃಷ್ಟಿಸಿದ ಉತ್ತರ ಇಂಡಿಯಾದ ರೈತಾಪಿಗಳ ಹೋರಾಟ ಬೆಳೆದು ಒಂದೂವರೆ ವರುಷಗಳ ಕಾಲ ದೇಶದ
ರಾಜಧಾನಿ ದೆಹಲಿಯಲ್ಲಿ ನಿರಂತರವಾಗಿ ಮುಂದುವರೆಯಿತು. ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ
ಪ್ರಭುತ್ವದ ಹಲವಾರು ಕಿರುಕುಳ, ಬೆದರಿಕೆ, ಹಿಂಸೆ, ದೂರು ದಾಖಲುಗಳು, ಕೊಲೆ ಬೆದರಿಕೆಗಳು,
ದೌರ್ಜನ್ಯಗಳ ನಡುವೆಯೂ ದೃಢಚಿತ್ತದಿಂದ ಸುಸಂಘಟಿತವಾಗಿ ಪ್ರಭುತ್ವಕ್ಕೆ ಭಾರಿ ಸವಾಲನ್ನು ಹಾಕಿ
ಪ್ರಧಾನ ಹಕ್ಕೊತ್ತಾಯಗಳಿಂದ ಕಿಂಚಿತ್ತೂ ಹಿಂದೆ ಸರಿಯದೇ ಅಭೂತಪೂರ್ವವಾದ ಹೋರಾಟ ಮಾದರಿಯನ್ನು
ರೂಪಿಸಿದರು. ಇದಕ್ಕಾಗಿ ಸುಮಾರು ಏಳುನೂರಕ್ಕೂ ಹೆಚ್ಚು ರೈತಾಪಿಗಳು ಪ್ರಾಣಗಳನ್ನೇ ಕಳೆದುಕೊಳ್ಳಬೇಕಾಗಿ
ಬಂದಿತು. ಸುಡುಬೇಸಿಗೆ ಕೊರೆಯುವ ಚಳಿಗಳ ಮದ್ಯೆ ಲಕ್ಷಾಂತರ ಜನರು ನಲುಗಬೇಕಾಯಿತು.
ಅದರಲ್ಲೂ ಮುಖ್ಯವಾಗಿ ದಲಿತದಮನಿತ ಸಮುದಾಯವನ್ನು ಹಾಗೂ ಕೋಮು ಹಿಂಸೆಗೆ ಈಡಾಗಿಸಿದ್ದ
ಪ್ರದೇಶದ ಅಲ್ಪಸಂಖ‍್ಯಾತ ಸಮುದಾಯವನ್ನು ಭರವಸೆ ಮೂಡಿಸಿ ಈ ಹೋರಾಟದೊಳಗೆ ಸಂಘಟಿಸಿಕೊಂಡಿದ್ದು ಈ
ಕಾಲಗಟ್ಟದ ಬಹಳ ದೊಡ್ಡ ಸಂಗತಿಯಾಗಿದೆ. ಜೊತೆಗೆ ಚುನಾವಣಾ ರಾಜಕಾರಣದ ರಾಜಕೀಯ ಪಕ್ಷಗಳು ಹಾಗೂ
ಚುನಾವಣಾ ರಾಜಕಾರಣದ ಶಕ್ತಿಗಳು ಹೋರಾಟದ ನಾಯಕತ್ವವನ್ನು ಕಬಳಿಸದಂತೆ ಕಾಪಾಡಿಕೊಂಡಿದ್ದು
ಮತ್ತೊಂದು ಪ್ರಮುಖ ಪಾಠವಾಗಿದೆ. ಹೋರಾಟದ ವೇದಿಕೆಗಳನ್ನು ಹೋರಾಟದ ಶಕ್ತಿಗಳಿಗೆ ಮಾತ್ರ
ಸೀಮಿತಗೊಳಿಸಿ ಬಹಳ ಸ್ಪಷ್ಟ ನಿಲುವಿನೊಂದಿಗೆ ಮುನ್ನೆಡೆದಿದ್ದರಿಂದ ಅಂತಹ ಅಭೂತಪೂರ್ವವಾದ ಸಾವಿರ,
ಲಕ್ಷಗಳ ಸಂಖ್ಯೆಯಲ್ಲಿ ಜನರು ಒಗ್ಗೂಡಲು ಹಾಗೇನೆ ದೀರ್ಘ ಕಾಲದವರೆಗೂ ಪ್ರಭುತ್ವ ಮತ್ತಿತರ ಬಲಶಾಲಿ
ಶಕ್ತಿಗಳನ್ನು ದೃಢವಾಗಿ ಎದುರಿಸಿ ನಿಲ್ಲಲು ಸಾಧ್ಯವಾಯಿತು.
ಭಿನ್ನ ಭಿನ್ನ ಸೈದ್ಧಾಂತಿಕ ವಿಚಾರಗಳಿರುವ ದೇಶದ
ಐನೂರಕ್ಕಿಂತಲೂ ಹೆಚ್ಚಿನ ಸಂಘಟನೆಗಳನ್ನು ಒಗ್ಗೂಡಿಸಿ ಸಂಯುಕ್ತ ಕಿಸಾನ್ ಮಂಚ್ ಎಂಬ ಭಾರಿ ಐಕ್ಯರಂಗವೊಂದರ
ಅಡಿಯಲ್ಲಿ ಹೋರಾಟವನ್ನು ಮುನ್ನೆಡೆಸಿರುವುದು ಮಹತ್ವದ ಸಂಗತಿಯಾಗಿದೆ. ಈ ಮಂಚ್ ನ ಭಾಗವಾಗದೇನೆ ಈ ಹೋರಾಟವನ್ನು
ಬೆಂಬಲಿಸಿದ ಹಲವು ಸಂಘಟನೆಗಳಿದ್ದು ಹೋರಾಟದ ಜೊತೆಗೆ ಹೆಜ್ಜೆ ಹಾಕಿರುವುದು ಮತ್ತೊಂದು ಪ್ರಮುಖ ವಿಚಾರ.
ಜೊತೆಗೆ ಮಹಿಳೆಯರು ಸೇರಿದಂತೆ ಲಕ್ಷಾಂತರ ರೈತಾಪಿಗಳು ದೇಶದ ವಿವಿಧ ಭಾಗಗಳಿಂದ ಬಂದು ಸೇರಿದರೂ ಯಾರಿಗೂ
ಭಿನ್ನ ಭೇದ ಮಾಡದೇ ಆಹಾರ, ನೀರು, ವಸತಿ, ಆರೋಗ್ಯ ಇತ್ಯಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು
ಸಾಗಿದ ಸಾಮುದಾಯಿಕ ವ್ಯವಸ್ಥೆ. ಹೋರಾಟ ನಿರತ ತಾಣಗಳ ಹಲವಾರು ವೇದಿಕೆಗಳಲ್ಲಿ ನಡೆಸಿದ ರಾಜಕೀಯ, ಸಾಮಾಜಿಕ,
ಆರ್ಥಿಕ, ಸಾಹಿತ್ಯ, ಕಲೆ ಇತ್ಯಾದಿಗಳ ಕಾರ್ಯಕ್ರಮಗಳು ಹಾಗೂ ಚರ್ಚೆಗಳು. ಅಲ್ಲಿ ಅಭಿವೃದ್ದಿಗೊಂಡ ವೈಚಾರಿಕ
ಸ್ಪಷ್ಟತೆಗಳು ಹಾಗೂ ರೂಪುಗೊಂಡ ಯುವ ನಾಯಕತ್ವ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸನ್ನದ್ದ ಸ್ಥಿತಿಯಲ್ಲಿ
ಇದ್ದ ಸ್ವಯಂಸೇವಕರುಗಳ ತಂಡಗಳು. ಮಾಡಿಕೊಂಢ ಸ್ವಯಂರಕ್ಷಣಾ ವ್ಯವಸ್ಥೆ, ವಿಚಾರ ವಿನಿಮಯಕ್ಕಾಗಿ ನಡೆಸಿದ
ಪರ್ಯಾಯ ಮಾಧ್ಯಮ ವ್ಯವಸ್ಥೆ, ಇವೆಲ್ಲವನ್ನು ಸಂಯೋಜನೆಯೊಂದಿಗೆ ನೋಡಿಕೊಂಡ ವೈಚಾರಿಕ ಸ್ಪಷ್ಟತೆ ಹೊಂದಿದ
ಸಮರ್ಥ ಸಾಮೂಹಿಕ ನಾಯಕತ್ವ ಇತ್ಯಾದಿಗಳು ಹಲವಾರು ಶ್ರೀಮಂತ ವಿಚಾರಗಳು ಹಾಗೂ ಹೋರಾಟರೂಪಗಳನ್ನು ದೇಶದ
ಜನರ ಮುಂದೆ ಇಟ್ಟಿದೆ.
ಈ ಎಲ್ಲಾ ಅಂಶಗಳನ್ನು ಎಲ್ಲಾ ಪ್ರಾಮಾಣಿಕ ಸಾಮಾಜಿಕ
ಕಾರ್ಯಕರ್ತರು ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಆದರೆ ಉತ್ತರ ಇಂಡಿಯಾದಲ್ಲಿ ಅದರಲ್ಲೂ ಪಂಜಾಬ್ ಹರಿಯಾಣದಲ್ಲಿ ಹಲವಾರು ವರುಷಗಳಿಂದ
ನಿರಂತರವಾಗಿ ಮತ್ತು ಸೈದ್ದಾಂತಿಕ ಸ್ಪಷ್ಟತೆಯಿಂದ ನಡೆದುಕೊಂಡು ಬಂದ ರೈತಾಪಿ ಚಳವಳಿಯ
ಪರಿಣಾಮವಾಗಿ ರೂಪುಗೊಂಡು ಭಾರಿ ಬೆಳವಣಿಗೆ ಹೊಂದಿದ ಈ ರೈತಚಳವಳಿಯಲ್ಲಿ ಭೂಹೀನ, ಬಡ
ರೈತಾಪಿಗಳೊಂದಿಗೆ, ಮಧ್ಯಮ ಹಾಗೂ ಶ್ರೀಮಂತ ರೈತರು, ಅಲ್ಲದೇ ಭಾರಿ ಭೂಮಾಲಿಕ ವರ್ಗ ಕೂಡ
ಸೇರಿಕೊಂಡಿತ್ತು. ಭಾರಿ ಕಾರ್ಪೋರೇಟು ಪ್ರಾಯೋಜಿತ ಸರಕಾರಿ ನೀತಿಗಳ ಬಿಸಿ ಈ ವರ್ಗಗಳಿಗೂ
ತಟ್ಟಿದ್ದು ಮತ್ತು ಇತರ ಜನಸಮುದಾಯಗಳ ಬೆಂಬಲವಿಲ್ಲದೇ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವುದು
ಅಸಾಧ್ಯ ಎಂಬ ಸಾಂದರ್ಭಿಕ ಅರಿವು ಇವರಲ್ಲಿ ಬಂದಿರುವುದರಿಂದ ಅದು ಸಾಧ್ಯವಾಗಿದೆ.
ಜೊತೆಗೆ ಉನ್ನತ ಮಟ್ಟದ ಪ್ರಜಾತಾಂತ್ರಿಕತೆ ಹಾಗು ಅದಕ್ಕೆ ತಕ್ಕಂತಹ ಸಂಘಟನಾ ರಚನೆಗಳನ್ನು
ರೂಪಿಸಿಕೊಂಡಿದ್ದರಿಂದಾಗಿ ಈ ಹೋರಾಟ ವಿಶಾಲ ಜನಸಮೂಹವನ್ನು ತನ್ನೊಂದಿಗೆ ಸೇರಿಸಿಕೊಂಡು ಅಂತಹ
ಚಾರಿತ್ರಿಕ ಜನಹೋರಾಟವೊಂದು ಬೆಳೆದು ಹರಡಲು ಸಾಧ್ಯವಾಯಿತು. ಈ ಹೋರಾಟದ ಸಾಮೂಹಿಕ ನಾಯಕತ್ವ ಉನ್ನತ
ಮಟ್ಟದ ಪ್ರಜಾತಾಂತ್ರಿಕತೆಯನ್ನು ಸ್ಪಷ್ಟತೆ ಹಾಗೂ ಕಾರ್ಯಶೀಲತೆಗಳೊಂದಿಗೆ
ಅಳವಡಿಸಿಕೊಂಡಿದ್ದರಿಂದಾಗಿ ಲಕ್ಷಾಂತರ ರೈತಾಪಿಗಳನ್ನು ಒಗ್ಗೂಡಿಸಲು ಜಾಗತಿಕ ಸಂಚಲನ ಸೃಷ್ಟಿಸಲು ಯೂನಿಯನ್
ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಅಧೀಕೃತವಾಗಿ ಪಡೆದುಕೊಳ್ಳುವಂತೆ ಮಾಡಲು
ಸಾಧ್ಯವಾಯಿತು.
ಈ ಹೋರಾಟ
ಈಗಿನ ಸಂದರ್ಭಕ್ಕೆ ಅತ್ಯಗತ್ಯವಾದ ಹಲವಾರು ಪಾಠಗಳನ್ನು ಹೇಳುತ್ತಿದೆ. ವ್ಯಕ್ತಿ ಕೇಂದ್ರಿತ ಇಲ್ಲವೇ
ಸ್ವಪ್ರತಿಷ್ಠೆಯ, ಇಲ್ಲವೇ ಗತಕಾಲದ ವೈಭವೀಕರಣದಲ್ಲಿ ಮುಳುಗಿ ಉಸಿರುಕಟ್ಟಿ, ಪಕ್ಷಪಾತ, ಭ್ರಷ್ಟತೆ,
ಅಪ್ರಮಾಣಿಕತೆಗಳಲ್ಲಿ ಎದುಸುರು ಬಿಡುತ್ತಿರುವ ಹಲವಾರು ಜನಪರ ಪ್ರಗತಿಪರ ವಲಯದ ಸಂಘಟನೆ ಮತ್ತದರ ನಾಯಕರುಗಳು
ಈ ಪಾಠಗಳನ್ನು ಗ್ರಹಿಸಿದರೆ ಮಾತ್ರ ಅಸ್ತಿತ್ವದಲ್ಲಿರಲು ಸಾಧ್ಯ ಎನ್ನುವುದನ್ನು ಮನಗಂಡರೆ
ಅದು ಒಂದು ಆಶಾದಾಯಕ ಬೆಳವಣಿಗೆಯೆನ್ನಬಹುದು. ವಿಷಯಾಧಾರಿತವಾಗಿಯಾದರೂ ಪ್ರಜಾತಾಂತ್ರಿಕವಾಗಿ ಎಲ್ಲರೂ
ಒಗ್ಗೂಡಿ ನಿಲ್ಲದಿದ್ದರೆ ಯಾರ ಅಸ್ತಿತ್ವವೂ ಇರಲಾರದು ಎಂಬ ದೆಹಲಿ ಹೋರಾಟ ಕಲಿಸಿರುವ ಭಾರಿ ಮಹತ್ವದ
ಪಾಠವನ್ನು ಇವರೆಲ್ಲರೂ ಕಲಿತು ಮೈಗೂಡಿಸಬೇಕಿದೆ. ಆಳುವವರನ್ನು ಅವರ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಾ,
ಅವರ ಚೇಲಾಗಿರಿ ಮಾಡುತ್ತಾ ಬಾಯಿ ಮಾತಿನಲ್ಲಿ ರೈತರ, ದಲಿತರ, ಮಹಿಳೆಯರ ಪರ ಮಾತನಾಡುವ ವ್ಯಕ್ತಿಗಳನ್ನು
ಹಾಗೂ ಸಂಘಟನೆಗಳನ್ನು ನಾಯಕತ್ವ ಸ್ಥಾನಗಳಿಂದ ಕಿತ್ತುಹಾಕಿ ಇಲ್ಲವೇ ಪಕ್ಕಕ್ಕಿಟ್ಟು ಹೋರಾಟವನ್ನು ಮುನ್ನೆಡೆಸುವ
ಅಗತ್ಯವನ್ನು ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಮನಗಂಡು ಕಾರ್ಯೋನ್ಮುಖರಾಗಬೇಕಾದ ತುರ್ತನ್ನು ಕೂಡ
ಈ ಬೆಳವಣಿಗೆಗಳು ಸ್ಪಷ್ಟವಾಗಿ ಬಿಚ್ಚಿಟ್ಟಿವೆ.
ಇಂದು
ದೇಶದ ಬಹುಸಂಖ‍್ಯಾತರಾದ ಸಾಮಾನ್ಯ ಕೃಷಿಕರಾಗಲೀ, ಸಣ್ಣ ಮತ್ತು ಮದ್ಯಮ ಗಾತ್ರದ ಕೈಗಾರಿಕೆಗಳಾಗಲೀ,
ಗುಡಿ ಕೈಗಾರಿಕೆಗಳಾಗಲೀ ಜಾಗತಿಕ ಭಾರಿ ಕಾರ್ಪೋರೇಟುಗಳ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಂಡು ತಮ್ಮ
ಅಸ್ತಿತ್ವ ಹಾಗೂ ಭವಿಷ್ಯಗಳನ್ನು ಉಳಿಸಿಕೊಳ್ಳಬೇಕೆಂದರೆ ತಮ್ಮದೇ ಆದ ಸಹಕಾರಿ ಸಂಘಟನೆಗಳನ್ನು ಕಟ್ಟಿಕೊಳ್ಳಲೇಬೇಕಿದೆ.
ತಮ್ಮದೇ ಸಹಕಾರಿ ಮಾರುಕಟ್ಟೆ ಹಾಗೂ ಸಹಕಾರಿ ಮಾರಾಟವ್ಯವಸ್ಥೆಯನ್ನೂ ರೂಪಿಸಿಕೊಳ್ಳಬೇಕಿದೆ. ಆಗ ಮಾತ್ರ
ತಮ್ಮ ದನಿಯನ್ನು ಎತ್ತಲು ಸಾಧ್ಯವಾಗುತ್ತದೆ.
ಅದು
ಈಗಾಗಲೇ ಅಸ್ತಿತ್ವದಲ್ಲಿರುವ ಸಹಕಾರಿ ಸಂಸ್ಥೆಗಳಂತೆ ಅಪ್ರಜಾತಾಂತ್ರಿಕವಾಗಿ ಕಾರ್ಯ ನಿರ್ವಹಿಸುವ ರೀತಿಯಲ್ಲಿ
ಹಾಗೂ ಭಾರಿ ಪ್ರಭಾವಿಗಳ ಹಿಡಿತಕ್ಕೆ ಸಿಗದಂತೆ ನೋಡಿಕೊಳ್ಳಬೇಕು. ದೆಹಲಿ ರೈತಾಪಿ ಹೋರಾಟವನ್ನು ಈ ನಿಟ್ಟಿನಲ್ಲಿ
ಅಧ್ಯಯನ ಮಾಡಿ ಪಾಠಗಳನ್ನು ಹೆಕ್ಕಿಕೊಳ್ಳಬೇಕು. ಅದರ ಸಾಮೂಹಿಕ ನಾಯಕತ್ವದ ನೀತಿಗಳನ್ನು ಪಾರದರ್ಶಕವಾಗಿ
ಅಳವಡಿಸಿಕೊಳ್ಳಬೇಕು. ವ್ಯಕ್ತಿಕೇಂದ್ರತ್ವ ಹಾಗೂ ವ್ಯಕ್ತಿಪ್ರತಿಷ್ಟೆಯ ಸ್ವಯಂವಿನಾಶಕಾರಿ ಅಪಾಯಗಳನ್ನು
ಮನಗಂಡು ಅದು ತಮ್ಮ ಸಹಕಾರಿಗಳಲ್ಲಿ ನುಸುಳದಂತೆ ಅಂತರಿಕ ರಚನೆಗಳನ್ನು ಮಾಡಿಕೊಳ್ಳಬೇಕು. ಸಾಮೂಹಿಕವಾಗಿರುವುದು
ಹಾಗೂ ಸಾಮೂಹಿಕವಾಗಿ ದೃಢವಾಗಿ ನಿಲ್ಲದೇ ಹೋದರೆ ಎಲ್ಲರೂ ಬಹಳ ಅಪಾಯಗಳಿಗೆ ಈಡಾಗಬೇಕಾಗುತ್ತದೆ ಎಂಬ
ಅರಿವಿನ ಶಿಕ್ಷಣ ಹೊಂದಬೇಕಾಗಿದೆ. ಇಂತಹ ಸಮಾಜವಾದಿ ಸಹಕಾರಿ ಪ್ರಯೋಗಗಳ ಅಧ್ಯಯನ ಹಾಗೂ ಪಾಠಗಳನ್ನು
ಗ್ರಹಿಸುತ್ತಾ ನಡೆಸಬೇಕಾಗುತ್ತದೆ.
ವಿಷಯಾಧರಿತವಾಗಿ
ಎಲ್ಲರೂ ಒಗ್ಗೂಡುವಂತೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ನಮ್ಮ ದೇಶದ ಜನಸಾಮಾನ್ಯರ ಮುಂದೆ
ಬಹಳ ಗಂಭೀರವಾದ ಹಾಗೇನೆಅಸ್ತಿತ್ವಗಳಿಗೆ ಮುಳುವಾಗಬಹುದಾದ ನೂರೆಂಟು ಸವಾಲುಗಳನ್ನು ಜಾಗತಿಕ ಆರ್ಥಿಕಶಕ್ತಿಗಳು
ಒಡ್ಡುತ್ತಿವೆ. ಸರಕಾರಗಳು ಅವುಗಳ ಅಣತಿಯಂತೆ ನಡೆಯುತ್ತಿವೆ. ಇವನ್ನೆಲ್ಲ ಸರಿಯಾಗಿ ಎದುರಿಸಿ ನಿಲ್ಲಬೇಕಾದರೆ
ಭಿನ್ನ ಅಭಿಪ್ರಾಯಗಳೊಂದಿಗೂ ಒಟ್ಟಿಗೆ ಸಾಗಬಹುದಾದ ಉನ್ನತ ಮಟ್ಟದ ಪ್ರಜಾತಾಂತ್ರಿಕತೆಯನ್ನು ರೂಢಿಸಿಕೊಳ್ಳುತ್ತಾ
ವಿವಿಧ ಚಿಂತನೆಗಳ ಹಿನ್ನೆಲೆಯ ಪ್ರಾಮಾಣಿಕ ಕಾಳಜಿಯ ಸಮಾಜಮುಖಿಗಳು, ಸಮಾಜಮುಖಿ ಸಂಘಟನೆಗಳು ಒಕ್ಕೂಟ
ಇಲ್ಲವೇ ಐಕ್ಯರಂಗಗಳಲ್ಲಿ ವಿಷಯಾದಾರಿತವಾಗಿಯಾದರೂ ಒಗ್ಗೂಡುವುದು ಅನಿವಾರ್ಯವಾಗಿದೆ. ಇಂತಹ ಒಗ್ಗಟ್ಟಿನ
ಶಕ್ತಿ ಏನೆಂಬುದನ್ನು ದೆಹಲಿಯ ರೈತಾಪಿ ಹೋರಾಟ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಜನಸಾಮಾನ್ಯರ ಪ್ರಜ್ಞಾಮಟ್ಟ ಹೆಚ್ಚಿಸುವಂತಹ ಸಾಮೂಹಿಕ
ರಾಜಕೀಯ ಹೋರಾಟಗಳ ಮೂಲಕ ಮಾತ್ರ ಪ್ರಜಾತಾಂತ್ರಿಕ ಮೌಲ್ಯಗಳು ಜನಸಾಮಾನ್ಯರಲ್ಲಿ ನೆಲೆನಿಲ್ಲುತ್ತಾ
ಮುಂದೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯತ್ತ ಸಾಗಲು ಸಾಧ್ಯವಾಗುತ್ತದೆ. ಈ ಸಾಮೂಹಿಕ ಹೋರಾಟಗಳು
ದೇಶದ ಬಹುಸಂಖ‍್ಯಾತ ಜನಸಾಮಾನ್ಯರನ್ನು ಹಾಗೂ ದೇಶವನ್ನು ಭಾಧಿಸುತ್ತಿರುವ ಸಮಸ್ಯೆಗಳು ಹಾಗೂ ಸ್ವಾತಂತ್ರ್ಯ
ಹಾಗೂ ಪ್ರಜಾಪ್ರಭುತ್ವಕ್ಕೆ ಮುಳುವಾಗಿರುವ ಜಾಗತಿಕ ಬಂಡವಾಳದ ಹಿಡಿತ ಹಾಗೂ ನಡೆಗಳು, ಅಸಮಾನ ಹಾಗೂ
ಆಕ್ರಮಣಕಾರಿ ಅಂತರಾಷ್ಟ್ರೀಯ ಒಪ್ಪಂದಗಳು, ದೇಶದ ಮೇಲಿನ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳ
ಹಿಡಿತ ಮೊದಲಾದ ಪ್ರಧಾನ ಬಿಕ್ಕಟ್ಟುಗಳನ್ನು ಮುಂದಿಟ್ಟುಕೊಂಡು ಇಲ್ಲವೇ ಹೋರಾಟಗಳೊಂದಿಗೆ
ಜೋಡಿಸಿಕೊಂಡು ವಿಷಯಾಧಾರಿತವಾಗಿ ಜನಹೋರಾಟಗಳನ್ನು ಬೆಳೆಸಬೇಕಾದ ತುರ್ತು ಅಗತ್ಯ ಎಲ್ಲರ
ಮುಂದಿದೆ.
ಈ ನಿಟ್ಟಿನಲ್ಲಿ
ಮೇ ಸಾಹಿತ್ಯ ಮೇಳ ಈ ಹೊತ್ತಿನ ಬಹಳ ಮುಖ್ಯವಾಗಿರುವ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ನಾಡಿನ ಹಲವು
ಹೋರಾಟಗಾರರು, ಚಿಂತಕರು, ಸಾಹಿತಿ, ಕಲಾವಿದರು ಇಲ್ಲಿ ಬಂದು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಿಚಾರವಿನಿಮಯ, ಸಂವಾದ, ಚರ್ಚೆ, ಭಿನ್ನಾಭಿಪ್ರಾಯಗಳ ಸಂಗಮಗಳಿಗೆ ಮುಕ್ತ ಪ್ರಜಾತಾಂತ್ರಿಕ ಅವಕಾಶ
ಮಾಡಿಕೊಂಡು ಬಹಸಂಖ‍್ಯಾತರಿಗೆ ಭಾಧಿಸುತ್ತಿರುವ ಸಮಸ್ಯೆಗಳ ಪರಿಹಾರದ ಭಾಗವಾಗಿ ಒಪ್ಪಿತವಾಗಿರುವ ವಿಚಾರಗಳನ್ನು
ನಿರ್ಣಯಗಳ ರೀತಿಯಲ್ಲಿ ಸ್ವೀಕರಿಸಿ ಮನಃಪೂರ್ವಕವಾಗಿ ಜಾರಿಗೊಳಿಸಲು ತೊಡಗಿದಾಗ ಮಾತ್ರ ಪ್ರಜಾತಾಂತ್ರಿಕತೆ
ಬೆಳೆದು ಪ್ರಜಾಪ್ರಭುತ್ವ ನೆಲೆನಿಲ್ಲಲು ಹಾದಿಮಾಡಿಕೊಡುತ್ತದೆ.
ನನಗೆ
ಇಷ್ಟು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು.
28/05/2023
Comments
Post a Comment