ಜನಪರ್ಯಾಯದತ್ತ ಹೊರಳಲಾಗದ ರಾಜಕೀಯ ಪಕ್ಷಗಳು..
ಜನಪರ್ಯಾಯ ಕಾರ್ಯಸೂಚಿಯನ್ನಾಗಿಸದ ಬುದ್ಧಿಜೀವಿಗಳು..
-ನಂದಕುಮಾರ್ ಕುಂಬ್ರಿ ಉಬ್ಬು
ಮಿಂಚಂಚೆ: nandakumarnandana67@gmail.com
ಎಲ್ಲಾ ಪ್ರಜೆಗಳಿಗೆ ರಾಜ್ಯದ ಹಾಗೂ ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಆಗುಹೋಗುಗಳಲ್ಲಿ ಸಮಾನ ನೆಲೆಗಟ್ಟಿನಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಮುಕ್ತ ಅವಕಾಶ ಇರಬೇಕಾದುದು ಒಂದು ನೈಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿರಲು ಅತ್ಯಾವಶ್ಯಕವಾದ ಪೂರ್ವಶರತ್ತಾಗಿದೆ. ಆಗ ಮಾತ್ರ ‘ಪ್ರಜೆಗಳಿಂದ.. ಪ್ರಜೆಗಳಿಗಾಗಿ.. ಪ್ರಜೆಗಳೇ.. ಮುನ್ನೆಡೆಸುವ ವ್ಯವಸ್ಥೆ ಪ್ರಜಾಪ್ರಭುತ್ವ ಎಂದು ನಾವೆಲ್ಲಾ ಶಾಲಾದಿನಗಳಿಂದಲೂ ಉರುಹೊಡೆದುಕೊಂಡು ಬಂದ ಪಠ್ಯ ಪುಸ್ತಕಗಳಲ್ಲಿನ ಪ್ರಜಾಪ್ರಭುತ್ವದ ವ್ಯಾಖ್ಯಾನಕ್ಕೆ ಸರಿಯಾದ ಅರ್ಥ ಬರುವುದು.
ಆದರೆ ಶಾಲಾದಿನಗಳಿಂದಲೂ ನಮ್ಮ ದೇಶದಲ್ಲಿ
ಪ್ರಜಾಪ್ರಭುತ್ವ ಎಂಬುದು ಆಸ್ತಿವಂತರು, ರಾಜಕಾರಣಿಗಳು ಹಾಗೂ ಅಧಿಕಾರದ ಉನ್ನತ ಸ್ಥಾನಗಳಲ್ಲಿ ಕುಳಿತಿರುವವರು
ತಮಗಾಗಿ, ತಾವೇ, ತಮ್ಮಿಂದ ಮುನ್ನೆಡೆಸುತ್ತಿರುವ ಆಡಳಿತ ವ್ಯವಸ್ಥೆ ಎಂದೆಲ್ಲಾ ಚರ್ಚಾ ಸ್ಪರ್ದೆಗಳಲ್ಲಿ,
ಭಾಷಣಗಳಲ್ಲಿ, ಖಾಸಗಿ ಮಾತುಗಳಲ್ಲಿ ಹಲವರು ವಿಚಾರ ಮಂಡಿಸುತ್ತಲೇ ಬಂದಿದ್ದಾರೆ. ಅಲ್ಲದೇ ಮೊದಲಿನಿಂದಲೂ
ನಮ್ಮ ದೇಶದ ದಲಿತ, ಆದಿವಾಸಿ, ಹಿಂದುಳಿದ, ಮಹಿಳಾ ಇನ್ನಿತರ ಜನಸಮೂಹಗಳ ಬಹುಸಂಖ್ಯಾತರ ಬದುಕಿನ ನೇರ
ಅನುಭವ ಕೂಡ ಅದೇ ಆಗಿರುವುದರಿಂದ ಇಂತಹ ಮಾತುಗಳಿಗೆ ಜೋರಾದ ಚಪ್ಪಾಳೆಗಳು ಸಾಮಾನ್ಯವಾಗಿದ್ದವು.
ಹಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯ
ಭಾಗವಾದ ಸಂವಿಧಾನ, ರಾಜಕೀಯ ಪಕ್ಷಗಳು, ಚುನಾವಣೆಗಳು, ವಿಧಾನ ಸಭೆ, ಸಂಸತ್ತು, ನ್ಯಾಯಾಂಗ, ಕಾರ್ಯಾಂಗಗಳು
ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯದ
ಭಾಗವಾಗಿ ಮಾಧ್ಯಮಗಳು ಕೂಡ ಕಾರ್ಯಾಚರಿಸುತ್ತಾ ಬರುತ್ತಿವೆ. ಮೊದಲಿನಿಂದಲೂ ಅವುಗಳಲ್ಲಿ ಹೆಚ್ಚಿನ ಪಾಲು
ದೊಡ್ಡ ಉದ್ಯಮಿಗಳೇ ನಡೆಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಕನ್ನಡದಲ್ಲಿ ಪತ್ರಿಕೋದ್ಯಮವೆಂದೇ ಕರೆದುಕೊಂಡು
ಬರಲಾಗುತ್ತಿದೆ. ಉದ್ದಿಮೆ ಎಂದಾಗ ಅದು ವ್ಯವಹಾರ ಲಾಭ ನಷ್ಟಗಳ ಲೆಕ್ಕಾಚಾರವೇ ಪ್ರಧಾನ ತಾನೇ.
ಈಗಂತೂ ಮಾದ್ಯಮ ಎಂದಾಗ ಅದು ಸಂಪೂರ್ಣವಾಗಿ ಆಳುವ ಪಕ್ಷ ಹಾಗೂ
ಅದರ ಸರ್ಕಾರದ ನೇರ ತುತ್ತೂರಿಯಾಗಿ ಮಾತ್ರ ಕಾರ್ಯ ನಿರ್ವಹಿಸಬೇಕು ಎಂಬಂತಹ ಸ್ಥಿತಿಯನ್ನು ನಿರ್ಮಿಸಿಡಲಾಗಿದೆ.
ಸದ್ಯದಲ್ಲಿ ಆಳುವ ಪಕ್ಷ ಪೂರ್ಣ ರೂಪದಲ್ಲಿ ಇಂಡಿಯಾದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯ ಅಡಿಪಾಯವಾಗಿರುವ
ಬ್ರಾಹ್ಮಣಶಾಹಿ ಊಳಿಗಮಾನ್ಯತೆಯ ಮೌಲ್ಯಗಳಾದ ಜಾತಿ ಶ್ರೇಣೀಕರಣ, ಅಸ್ಪೃಶ್ಯತೆ, ಧಾರ್ಮಿಕ ಶ್ರೇಷ್ಟತೆ,
ಕುರುಡು ನಂಬಿಕೆಗಳು, ಶ್ರೇಷ್ಟತೆಯ ಕಾಯಿಲೆಯ ವ್ಯಸನಗಳನ್ನು ಹಿಂದೆಂದೂ ಇಲ್ಲದಷ್ಟು ಬಹಿರಂಗವಾಗಿಯೇ
ಪ್ರತಿಪಾದಿಸುತ್ತಾ ಜಾರಿಗೊಳಿಸತೊಡಗಿದೆ. ಇವುಗಳನ್ನೇ ಬಹಳಷ್ಟು ಮಾಧ್ಯಮಗಳು ರೋಚಕಗೊಳಿಸುತ್ತಾ, ಸುಳ್ಳುಗಳು,
ಅರ್ದಸತ್ಯಗಳು, ಆಯ್ದ ಅಸಂಬದ್ದ ಮಾಹಿತಿಗಳ ಮೂಲಕ ಪ್ರಚುರಪಡಿಸತೊಡಗಿ ಕೆಲವು ಕಾಲವಾಗಿದೆ. ಇಂಡಿಯಾದ
ಭಾರಿ ಕಾರ್ಪೋರೇಟ್ ಜಗತ್ತು ಇವುಗಳನ್ನು ವ್ಯವಸ್ಥಿತವಾಗಿ ಸಂಘಟಿಸಿಕೊಂಡು ತಮ್ಮ ಹಿತಾಸಕ್ತಿಗಳನ್ನು
ಕಾಯ್ದುಕೊಳ್ಳುತ್ತಾ ಬರುತ್ತಿವೆ.
ಇಂಡಿಯಾದಲ್ಲಿ ಬೆಳೆದುಬಂದ ಮದ್ಯಮ ಹಾಗೂ ಮೇಲ್ಮದ್ಯಮ ವರ್ಗದ
ಸ್ತರಗಳಿಗೆ ಒಂದು ಮಟ್ಟದಲ್ಲಿ ವರ್ತಿತವಾಗಿದ್ದ ಸಾಂವಿಧಾನಿಕ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯ
ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿಗಳಿಗೆ ಪೂರಕವಾಗಿ ಮಾಧ್ಯಮಗಳು ಒಂದು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು.
ಆದರೆ ಈಗ ಆ ಅವಕಾಶ ತೀವ್ರವಾಗಿ ಕುಬ್ಜಗೊಳ್ಳುತ್ತಾ ಬರುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳೆನಿಸಿಕೊಂಡವುಗಳಲ್ಲಿ
ಬಹುತೇಕವು ಭಾರಿ ಕಾರ್ಪೋರೇಟು ತೆಕ್ಕೆಗಳಲ್ಲಿ ಸಿಲುಕಿಕೊಂಡಿವೆ. ನೈಜ ಮಾಧ್ಯಮದ ಪರಿಕಲ್ಪನೆಯೇ ಉಸಿರಾಡಲು
ತಿಣುಕಾಡುತ್ತಿರುವ ಸ್ಥಿತಿಯಾಗಿದೆ.
ಜನರ ಅಭಿವ್ಯಕ್ತಿ ಸ್ವಾತಂತ್ರ್ಯವು ವ್ಯಕ್ತಗೊಳ್ಳುವುದರಲ್ಲಿ
ಮಾಧ್ಯಮಗಳಿಗೆ ಒಂದು ಪ್ರಧಾನ ಪಾತ್ರವಿದೆ. ಆದರೆ ಮಾಧ್ಯಮಗಳು ಒಂದು ಪಕ್ಷದ, ಒಬ್ಬ ವ್ಯಕ್ತಿಯ, ಒಂದು
ಧರ್ಮದ, ಒಂದು ಜಾತಿಯ, ಒಂದು ವರ್ಗದ ಹಿತಾಸಕ್ತಿಗಳ ರಕ್ಷಣೆ ಹಾಗೂ ಪ್ರಚಾರವನ್ನೇ ಪ್ರಧಾನವಾಗಿಸಿಕೊಂಡಾಗ
ನೈಜ ಮಾಧ್ಯಮವಾಗಿ ವರ್ತಿಸಲು ಸಾಧ್ಯವಾಗದು. ಇಂದು ಇಂಡಿಯಾದ ಮಾಧ್ಯಮಲೋಕದ ಸ್ಥಿತಿ ಬಹಳ ಹೀನಾಯ ಪರಿಸ್ಥಿತಿಗೆ
ತಲುಪಿದೆ. ಅದಕ್ಕೆ ನಮ್ಮ ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ಆಡಳಿತ ವ್ಯವಸ್ಥೆ ಇಂದು ತಲುಪಿರುವ ತೀವ್ರತರದ
ಬಿಕ್ಕಟ್ಟುಗಳು ಹಾಗೇನೆ ಅದಕ್ಕೆ ಕಾರಣರಾಗಿರುವ ಶಕ್ತಿಗಳೇ ಪ್ರಧಾನ ಕಾರಣವಾಗಿವೆ ಎನ್ನುವ ವಿಚಾರವನ್ನು
ಪ್ರತ್ಯೇಕವಾಗಿಯೇ ನೋಡಬೇಕಾಗಿದೆ.
ಇದರ ಭಾಗವಾಗಿಯೇ ಇಂಡಿಯಾದ ರಾಜಕೀಯ ಪಕ್ಷಗಳ
ಇಂದಿನ ಪರಿಸ್ಥಿತಿಯನ್ನು ನಾವು ಗಮನಿಸಬೇಕಾಗಿದೆ. ನಮ್ಮನ್ನು ಆಳುತ್ತಾ ಬರುತ್ತಿರುವ ಶಕ್ತಿಗಳು ಬ್ರಿಟೀಷರ
ನಂತರ ದೇಶ ಪ್ರಜಾಪ್ರಭುತ್ವ ದೇಶವಾಯಿತು, ನಮ್ಮದು ಸಂವಿಧಾನಾತ್ಮಕ ಪ್ರಜಾಪ್ರಭುತ್ವ ದೇಶ, ಯೂರೋಪಿನ
ಪ್ರಜಾಪ್ರಭುತ್ವ ಹಾಗೂ ಸಮಾಜವಾದದ ಸಕಾರಾತ್ಮಕ ಅಂಶಗಳನ್ನು ಒಳಗೊಂಡಿರುವ ವ್ಯವಸ್ಥೆ ನಮ್ಮದು… ಎಂದೆಲ್ಲಾ
ಪ್ರತಿಪಾದಿಸುತ್ತಾ ಬಂದಿವೆ. ತಾಂತ್ರಿಕವಾಗಿ ನೋಡುವುದಾದರೆ ನಮ್ಮದು ಪ್ರಜಾತಾಂತ್ರಿಕ ಗಣರಾಜ್ಯ
(democratic republic) ಎನ್ನುವುದು ಸರಿಯೇ ಇರಬಹುದಾದರೂ; ಒಟ್ಟಾರೆ ದಲಿತ, ಆದಿವಾಸಿ, ದಮನಿತ,
ಮಹಿಳಾ, ಹಿಂದುಳಿದ, ಹಲವಾರು ರಾಷ್ಟ್ರೀಯತೆಗಳು, ಭಾಶಿಕ ಜನಸಮೂಹಗಳ ಬಹುಸಂಖ್ಯಾತರನ್ನು ದೃಷ್ಟಿಯಲ್ಲಿಟ್ಟುಕೊಂಡು
ಗ್ರಹಿಸಹೊರಟಾಗ ಪ್ರಜಾತಾಂತ್ರಿಕ ಗಣರಾಜ್ಯವೆನ್ನುವುದು ಪ್ರಧಾನವಾಗಿ ಕೇವಲ ಮೇಲ್ಪದರದ ಹಾಗೂ ಮೇಲ್ಜಾತಿ
ಎಂದುಕೊಂಡಿರುವ ಸ್ತರದವರಿಗೆ ಹಾಗೂ ಮೇಲ್ವರ್ಗದವರಿಗೆ ಮಾತ್ರ ಅನ್ವಯಿಸುತ್ತಾ ಬಂದಿದೆ, ಕೇಂದ್ರೀಕರಣವೇ
ಪ್ರಧಾನವಾಗಿದೆ ಎನ್ನುವುದು ಕಣ್ಣಿಗೆ ರಾಚುವಂತೆ ಸ್ಪಷ್ಟವಾಗುತ್ತದೆ. ಈಗದು ಮತ್ತಷ್ಟು ತೀವ್ರಮಟ್ಟದ
ಹೆಚ್ಚಳದ ಕಾಲವಾಗಿದೆ.
ಹಾಗಾಗಿ ನಮ್ಮ ದೇಶದ ರಾಜಕೀಯ ಪಕ್ಷಗಳು ಮೇಲ್ಪದರದಲ್ಲಿರುವ
ಭಾರಿ ಆಸ್ತಿವಂತರು ಮತ್ತವರ ಬೆಂಬಲಿಗ ಸಮೂಹಗಳ ಪ್ರತಿನಿಧಿಗಳಾಗಿಯೇ ಕಾರ್ಯ ನಿರ್ವಹಿಸುತ್ತಾ ಬಂದಿವೆ.
ಇದರಲ್ಲಿ ಇಂಡಿಯನ್ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ್ದು ಪ್ರಧಾನ ಪಾತ್ರವಾಗಿದೆ. ನಂತರವೇ ಉಳಿದ ರಾಜಕೀಯ
ಪಕ್ಷಗಳು ಬರುತ್ತವೆ. ಎಪ್ಪತ್ತರ ದಶಕದಲ್ಲಿ ತೀವ್ರವಾದ ರಾಜಕೀಯ ಬಿಕ್ಕಟ್ಟಿನ ಭಾಗವಾಗಿ ಏಕವ್ಯಕ್ತಿ
ಹಾಗೂ ಏಕಪಕ್ಷದ ಫ್ಯಾಸಿಸ್ಟ್ ಆಡಳಿತ ಮತ್ತು ತುರ್ತುಪರಿಸ್ಥಿತಿ ಹೇರಿ ಪರಿಸ್ಥಿತಿ ನಿಭಾಯಿಸಲು ಇಂದಿರಾ
ಕಾಂಗ್ರೆಸ್ ಪಕ್ಷ ಪ್ರಯತ್ನ ಪಟ್ಟರೂ ಅದು ಅದರ ಅಧಿಕಾರಕ್ಕೆ ಮೊದಲ ಬಾರಿಗೆ ಒಂದು ಜಾರಿಕೆಗೆ ಕಾರಣವಾಯಿತು.
ಅದಕ್ಕೆ ದೇಶಾದ್ಯಂತ ದಲಿತ, ಆದಿವಾಸಿ, ರೈತ, ಯುವಜನ ಹೀಗೆ ಹಲವಾರು ಜನಹೋರಾಟಗಳು, ಕ್ರಾಂತಿಕಾರಿ ಹೋರಾಟಗಳು
ಸಿಡಿದು ಹರಡತೊಡಗಿದ್ದು ಮುಖ್ಯ ಕಾರಣವಾಗಿತ್ತು. ಅದರ ಲಾಭವನ್ನು ಜನತಾ ಪಕ್ಷ, ಜನಸಂಘ( ಈಗಿನ ಆರ್. ಎಸ್. ಎಸ್) ಇನ್ನಿತರ ರಾಜಕೀಯ
ಪಕ್ಷಗಳು ಪಡೆದುಕೊಳ್ಳಲು ಪ್ರಯತ್ನ ನಡೆಸಿ ಅತ್ಯಲ್ಪ ಕಾಲ ಸಮ್ಮಿಶ್ರ ಸರ್ಕಾರವನ್ನು ನಡೆಸಿದವು. ಆದರೆ
ಈ ರಾಜಕೀಯ ಪಕ್ಷಗಳು ಆಳುವ ಶಕ್ತಿಗಳ ಬೆಂಬಲ ಪಡೆದುಕೊಂಡು ಜನಾದರಣೆ ಸಂಘಟಿಸಿಕೊಂಡು ಸರ್ಕಾರ ಮುಂದುವರೆಸಲು
ಸಾಧ್ಯವಾಗದೇ ಹೋದವು. ಆಗಿನ ಕಾಲಘಟ್ಟವೆಂದರೆ ಒಟ್ಟಾರೆಯಾಗಿ ಏಕಪಕ್ಷದ ಹಿಡಿತದ ಕಾಲಘಟ್ಟವೇ ಆಗಿತ್ತು.
ಹೆಸರಿಗೆ ವಿರೋಧಪಕ್ಷಗಳೆಂದು ಹಲವಾರು ಇದ್ದವಾದರೂ ದೇಶದ ಅಧಿಕಾರ ರಾಜಕಾರಣದಲ್ಲಿ ಅವುಗಳ ಪಾತ್ರ ಬಹಳ
ಸೀಮಿತವಾಗಿತ್ತು.
ಬಹು ಪ್ರಚರಿತ ಜಯಪ್ರಕಾಶ ನಾರಾಯಣ ನೇತೃತ್ವದಲ್ಲಿ
ಸಂಪೂರ್ಣ ಕ್ರಾಂತಿ ಘೋಷಣೆಯೊಂದಿಗೆ ನಗರ ಕೇಂದ್ರಿತವಾಗಿದ್ದ ಒಂದು ಸ್ತರದ ಜನರನ್ನು ಸಂಘಟಿಸಿ ತುರ್ತು
ಪರಿಸ್ಥಿತಿ ಹೇರಿದ ಲಾಭ ಪಡೆದು ಕಾಂಗ್ರೆಸ್ ಆಡಳಿತವನ್ನು ಅಲ್ಪ ಕಾಲ ಕೊನೆಗಾಣಿಸಿದ್ದರೂ ಉಳಿದಂತೆ
ಸಕ್ರಿಯ ರಾಜಕೀಯ ಪಕ್ಷಗಳಾಗಿ, ಸಕ್ರಿಯ ಹಾಗೂ ರಚನಾತ್ಮಕ ವಿರೋಧ ಪಕ್ಷಗಳಾಗಿ ಪ್ರವರ್ತಿಸದೇ ಹೋದದ್ದೇ
ಚರಿತ್ರೆಯಾಗಿದೆ. ಇಂಡಿಯಾದ ಸಮಾಜೋಆರ್ಥಿಕ ವ್ಯವಸ್ಥೆಯಲ್ಲಿ ಪಾಶ್ಚಿಮಾತ್ಯದ ಬಂಡವಾಳಶಾಹಿ ಪ್ರಜಾಪ್ರಭುತ್ವದ
ಬೇರುಗಳು ಇಳಿಯಲು ಸಾಧ್ಯವಾಗಿಲ್ಲ. ಇಲ್ಲಿನ ಬ್ರಾಹ್ಮಣಶಾಹಿಊಳಿಗಮಾನ್ಯ ಹಿಡಿತ ಸಡಿಲವಾಗಿಲ್ಲ.
ಇಂಡಿಯಾದ ರಾಜಕೀಯ ಭೂಪಟದಲ್ಲಿ ಎಡ ಪಕ್ಷವಾದ
ಸಿಪಿಐ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಬ್ರಿಟೀಷ್ ವಿರೋದಿ ಹೋರಾಟದ ಕಾಲದಿಂದಲೂ ಸಕ್ರಿಯವಾಗಿತ್ತು.
ಸಶಸ್ತ್ರ ಹೋರಾಟವೂ ಸೇರಿದಂತೆ ಹಲವಾರು ರೀತಿಯ ಹೋರಾಟಗಳಲ್ಲಿ ಸಮಾಜದ ತಳಪಾಯದ ಜನರನ್ನು ಸಂಘಟಿಸುತ್ತಾ
ಬಂದಿತ್ತು. ನಂತರ ಕಾಂಗ್ರೆಸ್ ಪಕ್ಷದೊಂದಿಗೆ ಜೊತೆಗೂಡಿ ನಿಂತು ಬಿಟ್ಟಿತು. ಹಾಗಾಗಿ ಕಾರ್ಮಿಕ ವಲಯದಲ್ಲಿ
ಹೆಚ್ಚಿನ ಸಂಘಟಿತ ಶಕ್ತಿ ಇದಾಗಿದ್ದರೂ ಅದನ್ನು ರಾಜಕೀಯವಾಗಿ ಸಂಘಟಿತ ಶಕ್ತಿಯಾಗಿಸಿಕೊಳ್ಳಲು ಅದಕ್ಕೆ
ಸಾಧ್ಯವಾಗಲೇ ಇಲ್ಲ. ನಂತರ ಸೈದ್ಧಾಂತಿಕ ಭಿನ್ನತೆ ಎಂದು ಹಲವಾರು ಪಕ್ಷಗಳಾಗಿ ವಿಭಜನೆಗಳು ನಡೆದು ಸಿ
ಪಿ ಐ (ಎಂ) ಸಿಪಿಐ (ಎಂ ಎಲ್) ಹೀಗೆಲ್ಲಾ ಹಲವಾರು ಎಡಪಕ್ಷಗಳು ಹುಟ್ಟಿಕೊಂಡವು. ಇವುಗಳಲ್ಲಿ ಹಲವು
ಈಗಿನ ಮಾಮೂಲಿ ಅಧಿಕಾರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೆ ಕೆಲವು ಈ ಅಧಿಕಾರ ರಾಜಕಾರಣದಿಂದ ಹೊರತಾಗಿ
ನಿಂತು ಸಶಸ್ತ್ರ ಕ್ರಾಂತಿಕಾರಿ ಹೋರಾಟಗಳಲ್ಲಿ ತೊಡಗಿಕೊಂಡವು.
ಅಧಿಕಾರ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ
ಎಡಪಕ್ಷಗಳು ಸಂಘಟನಾ ಸ್ವರೂಪಗಳಲ್ಲಿ ಇತರ ಪಕ್ಷಗಳಿಗಿಂತ ಪ್ರತ್ಯೇಕತೆಗಳನ್ನು ಹೊಂದಿದ್ದರೂ ಮಿಕ್ಕೆಲ್ಲಾ
ವಿಚಾರಗಳಲ್ಲಿ ಕಾಂಗ್ರೆಸ್ ಇನ್ನಿತರ ಪಕ್ಷಗಳಿಗಿಂತ ಮೂಲಭೂತವಾಗಿ ಭಿನ್ನತೆಗಳನ್ನು ಹೊಂದದೇ ಹೋದವು.
ಜನಸಾಮಾನ್ಯರನ್ನು ಒಳಗೊಳಿಸಿಕೊಂಡು ರಾಜಕೀಯವಾಗಿ ಹೋರಾಟಗಳನ್ನು ರೂಪಿಸದೇ ಕೇವಲ ಆರ್ಥಿಕ ಹಕ್ಕೊತ್ತಾಯಗಳಿಗಾಗಿ
ಮಾತ್ರ ಸಂಘಟಿಸುತ್ತಾ ಬಂದವು.
ಇತರ ಪಕ್ಷಗಳು ಜನರನ್ನು ಓಟುಬ್ಯಾಂಕ್ ರಾಜಕಾರಣದಲ್ಲಿ
ಮುಳುಗಿಸಿಟ್ಟವು. ಓಟ್ ಬ್ಯಾಂಕ್ ಎಂದಾಗ ಕಳ್ಳ ಓಟುಗಳು, ಮತಗಟ್ಟೆ ಲೂಟಿಗಳು, ಡಮ್ಮಿ ಅಭ್ಯರ್ಥಿಗಳನ್ನು
ಕಣದಲ್ಲಿ ಇಳಿಸುವಿಕೆಗಳು, ಜಾತಿ, ಮತ, ಮಠ ಮುಖ್ಯಸ್ಥರುಗಳನ್ನು ಖರೀದಿಸಿ ಆಯಾ ಸಮುದಾಯಗಳ ಮತಗಳನ್ನು
ಗೋರಿಕೊಳ್ಳುವುದು, ಜಾತಿ ಮತಗಳ ನಡುವೆ ಬಿರುಕುಗಳನ್ನು ಹೆಚ್ಚಿಸುತ್ತಾ ಅದರ ಲಾಭವನ್ನು ದೋಚುವುದು;
ಹಣ ಕೊಡುಗೆ ಇನ್ನಿತರ ಆಮಿಷಗಳನ್ನು ಒಡ್ಡಿ ಮತಬೇಟೆ ನಡೆಸುವುದು, ಬೆದರಿಕೆಗಳನ್ನು ಒಡ್ಡಿ ಮತಗಳನ್ನು
ಕೂಡಿಸುವುದು…. ಹೀಗೆ ಎಲ್ಲಾ ಅಪ್ರಜಾತಾಂತ್ರಿಕ ಹಾಗೂ ಅನೈತಿಕ ಚುನಾವಣಾ ಪದ್ಧತಿಗಳು ಕೂಡ ಸೇರುತ್ತವೆ.
ಎಡಪಕ್ಷಗಳು ಇವುಗಳಲ್ಲಿ ಕೆಲವನ್ನು ಅನುಸರಿಸಿದರೂ
ತಮ್ಮ ಸಂಘಟಿತ ವಲಯವನ್ನು ತಮ್ಮ ಓಟುಬ್ಯಾಂಕ್ ಗಳಾಗಿಸಿಕೊಳ್ಳಲು ಸೋತವು. ಹಾಗೆ ನೋಡಿದರೆ ಕಾಂಗ್ರೆಸ್
ಆಗಲೀ, ಬಿಜೆಪಿ ಹೊರತುಪಡಿಸಿ ಇತರ ರಾಜಕೀಯ ಪಕ್ಷಗಳಾಗಲೀ ಎಡಪಕ್ಷಗಳಷ್ಟು ಸಂಘಟಿತ ವಲಯವನ್ನು ಹಾಗೇನೆ
ಸಂಘಟನಾ ಸ್ತರಗಳನ್ನು ಹೊಂದಿಲ್ಲ. ಆದರೆ ಅವುಗಳ ಓಟು ಬ್ಯಾಂಕ್ ಎಡ ಪಕ್ಷಗಳಿಗಿಂತ ಹಲವು ಪಟ್ಟು ದೊಡ್ಡದಿವೆ.
ಮಾರ್ಕ್ಸ್ ವಾದವೆಂದರೆ ಚುನಾವಣಾ ರಾಜಕಾರಣದಲ್ಲಿ ಮಾತ್ರ ಮುಳುಗಿರುವುದೇ ಆಗಿದೆ ಎಂಬಂತೆ ಈ ಎಡಪಕ್ಷಗಳ
ಕಾರ್ಯ ನಿರ್ವಹಣೆಯಾಗಿದೆ.
ಎಡಪಕ್ಷಗಳನ್ನು ಹೊರತುಪಡಿಸಿದರೆ ಉಳಿದಂತೆ
ಬಹುತೇಕ ರಾಜಕೀಯ ಪಕ್ಷಗಳು ಕುಟುಂಬ ಪಕ್ಷಗಳೆಂಬಂತೆಯೇ ಕಾರ್ಯಾಚರಿಸುತ್ತಾ ಬರುತ್ತಿವೆ. ಕೆಲವು ವ್ಯಕ್ತಿಗಳ
ಪಕ್ಷಗಳಾಗಿ ಅಸ್ತಿತ್ವ ಕಾಪಾಡಿಕೊಳ್ಳುತ್ತಿವೆ. ಕಾಂಗ್ರೆಸ್ ನೆಹರು ಹಾಗೂ ಇಂದಿರಾ ಕುಟುಂಬದ ಪಕ್ಷವಾಗಿದ್ದರೆ,
ಕರ್ನಾಟಕದ ಜಾತ್ಯಾತೀತ ಜನತಾದಳ ದೇವೇಗೌಡ ಕುಟುಂಬದ ಪಕ್ಷವಾಗಿದೆ. ತೆಲಂಗಾಣ ರಾಷ್ಟ್ರಸಮಿತಿ (ಈಗ ಭಾರತ್
ರಾಷ್ಟ್ರ ಸಮಿತಿ) ಚಂದ್ರಶೇಖರ ರಾವ್ ಕುಟುಂಬದ ಪಕ್ಷವಾಗಿದೆ. ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್
ಮಮತಾರ ಹಿಡಿತದಲ್ಲಿ ಇದ್ದರೆ, ಬಹುಜನ ಸಮಾಜ ಪಾರ್ಟಿ ಮಾಯಾವತಿ ಹಿಡಿತದಲ್ಲಿ ಇದೆ. ಆಮ್ ಆದ್ಮಿ ಪಕ್ಷ
ಕೇಜ್ರೀವಾಲ್ ಹಿಡಿತದಲ್ಲಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ ಪವಾರ್ ಕುಟುಂಬದ ಹಿಡಿತದಲ್ಲಿದೆ.
ಶಿವಸೇನೆ ಬಾಳಾ ಠಾಕ್ರೆ ಕುಟುಂಬದ ಹಿಡಿತ ಹೊಂದಿದ್ದರೆ ಕಾಶ್ಮೀರದ ನ್ಯಾಷನಲ್ ಕಾನ್ ಫೆರನ್ಸ್ ಫಾರೂಕ್
ಅಬ್ದುಲ್ಲಾ ಕುಟುಂಬದ ಹಿಡಿತದಲ್ಲಿದೆ. ಹೀಗೆಯೇ ದೇಶದ ಬಹುತೇಕ ರಾಜಕೀಯ ಪಕ್ಷಗಳು ಇದುವರೆಗೂ ಕಾರ್ಯಚರಿಸುತ್ತಾ
ಬಂದಿರೋದು.
ಇಂತಹ ಪಕ್ಷಗಳಲ್ಲಿ ಅಂತರಿಕ ಪ್ರಜಾಪ್ರಭುತ್ವ
ಪದ್ಧತಿಗಳಾಗಲೀ ಅಂತಹ ರಚನಾ ಸ್ತರಗಳಾಗಲೀ ಚಾಲ್ತಿಯಲ್ಲಿ ಇಲ್ಲ. ಕುಟುಂಬ ಇಲ್ಲವೇ ವ್ಯಕ್ತಿಗಳ ನಿರ್ದೇಶನದಂತೆ
ಈ ಪಕ್ಷಗಳು ಕಾರ್ಯಾಚರಿಸುತ್ತವೆಯೇ ಹೊರತು ಕಾರ್ಯಕರ್ತರನ್ನು ಹಾಗೂ ಜನಸಾಮಾನ್ಯರನ್ನು ಅವಲಂಬಿಸಿಯಾಗಲೀ
ಅವರನ್ನು ಸಂಘಟಿಸಿಯಾಗಲೀ ಕಾರ್ಯಾಚರಿಸುವುದಿಲ್ಲ. ಪದಾಧಿಕಾರಿಗಳನ್ನು ಕುಟುಂಬ ಇಲ್ಲವೇ ವ್ಯಕ್ತಿಗಳು
ನೇಮಕ ಮಾಡುತ್ತಾರೆಯೇ ವಿನಹ ಪ್ರಜಾತಾಂತ್ರಿಕವಾಗಿ ಕಾರ್ಯಕರ್ತರ ಮಧ್ಯೆಯಿಂದ ಆಯ್ಕೆ ಮಾಡುವ ಪದ್ಧತಿಗಳೇ
ಈ ಪಕ್ಷಗಳಲ್ಲಿ ಮೂಲಭೂತವಾಗಿಯೇ ಇಲ್ಲ.
ಇನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾಯೋಜಿತ
ಭಾರತೀಯ ಜನತಾ ಪಾರ್ಟಿ ಉಳಿದ ಎಲ್ಲಾ ಪಕ್ಷಗಳಿಗಿಂತಲೂ ಸಂಘಟನಾ ಸ್ತರಗಳನ್ನು ಹೊಂದಿದ್ದರೂ ಪ್ರಜಾತಾಂತ್ರಿಕ
ಪ್ರಕ್ರಿಯೆಗಳಲ್ಲಿ ರಚನೆಗೊಂಡವುಗಳಾಗಿರುವುದಿಲ್ಲ. ಕೋಮುದ್ರುವೀಕರಣ ಜಾತಿದ್ರುವೀಕರಣಗಳಿಗೆ, ಪ್ರಾದೇಶಿಕ
ದ್ರುವೀಕರಣಗಳಿಗೆ ಅನುಕೂಲವಾಗುವಂತೆ ಹಲವಾರು ರೀತಿಗಳಲ್ಲಿ ತಂತ್ರಕುತಂತ್ರಗಳ ಮೂಲಕ ಅಂತಹ ಸಂಘಟನಾ
ರಚನೆಗಳನ್ನು ಕಟ್ಟಲಾಗುತ್ತದೆ. ಅವೆಲ್ಲವನ್ನೂ ಸಂಘಪರಿವಾರದ ನೇರ ನಿರ್ದೇಶನಗಳಂತೆಯೇ ನಡೆಯುತ್ತವೆ.
ಇಂಡಿಯಾದ ಆಸ್ತಿ ಸಂಪತ್ತಿನ ಹಿಡಿತ ಹೊಂದಿರುವ
ಶಕ್ತಿಗಳೇ ಆಳುವ ಶಕ್ತಿಗಳಾಗಿವೆ. ಜಾಗತಿಕ ಭಾರಿ ಕಾರ್ಪೋರೇಟುಗಳುಗಳು ಈ ಶಕ್ತಿಗಳ ಮೂಲಕ ದೇಶದ ಮೇಲೆ
ಎಲ್ಲಾ ರೀತಿಗಳಲ್ಲೂ ಹಿಡಿತ ಸಾಧಿಸುತ್ತಾ ಬರುತ್ತಿವೆ. ಈಗ ದೇಶದ ಒಟ್ಟು ಸಂಪತ್ತಿನ ಮುಕ್ಕಾಲು ಪಾಲು
ಕೆಲವೇ ಕಾರ್ಪೋರೇಟುಗಳ ಹಿಡಿತಕ್ಕೆ ಹೋಗಿದೆ. ಇದುವರೆಗೂ ದೇಶದ ಸಂವಿಧಾನ ಸಂಸತ್ತು ವಿಧಾನಸಭೆಗಳನ್ನು,
ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅಣಿನೆರೆಸಿಕೊಳ್ಳುತ್ತಾ ತಮ್ಮ ತಮ್ಮ ಹಿತಾಸಕ್ತಿಗಳನ್ನು
ಕಾಪಾಡಿಕೊಳ್ಳುತ್ತಾ, ದೇಶದ ಸಂಪತ್ತಿನ ಮೇಲಿನ ನೇರ ಹಿಡಿತವನ್ನು ವೃದ್ಧಿಸಿಕೊಳ್ಳುತ್ತಾ ಬರಲಾಗಿದ್ದರೆ
ಈಗ ಸಂಸತ್ತು, ಸಂವಿಧಾನ, ನ್ಯಾಯಾಂಗ, ವಿಧಾನಸಭೆಗಳು, ಕಾನೂನುಗಳನ್ನು ತಮ್ಮ ಮೂಗಿನ ನೇರಕ್ಕೇ ಹಿಗ್ಗಿಸಿಕೊಳ್ಳುವುದು
ಕುಗ್ಗಿಸಿಕೊಳ್ಳುವುದೂ ಮಾಡುತ್ತಾ, ಕಾನೂನುಗಳ ತಿದ್ದುಪಡಿಗಳನ್ನೂ ಮಾಡುತ್ತಾ ಇಲ್ಲವೇ ಕಾನೂನುಗಳನ್ನೇ
ಉಲ್ಲಂಘಿಸುತ್ತಾ ತಮ್ಮ ಕಾರುಬಾರುಗಳನ್ನು ದೇಶದ ಜನರ ಮೇಲೆ ಹೇರತೊಡಗಿವೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಡ ರಾಜಕೀಯವಾಗಿ
ಸಕ್ರಿಯರಾಗಿರದಿದ್ದರೂ ಮನಮೋಹನ ಸಿಂಗ್ ರನ್ನು ಪ್ರಧಾನಿಯಾಗಿ ಎರಡು ಅವಧಿಗೆ ಕುಳ್ಳಿರಿಸಿದ್ದಾಗಲೀ
ತಮ್ಮ ಪಕ್ಷದಲ್ಲೇ ಮೂಲೆಗೆ ಜಾರತೊಡಗಿದ್ದ ನರೇಂದ್ರ ಮೋದಿಯನ್ನು ಭಾರಿ ಬಹುಮತದೊಂದಿಗೆ ಪ್ರಧಾನಿಯಾಗಿ
ಎರಡು ಬಾರಿ ಕುಳ್ಳಿರಿಸಿರುವುದು ಕೂಡ ಈ ಆಳುವ ಶಕ್ತಿಗಳ ಈ ನಡೆಗಳ ಭಾಗವಾಗಿಯೇ ಎನ್ನುವುದನ್ನು ಗ್ರಹಿಸದೇ
ಹೋದರೆ ನಮ್ಮ ದೇಶದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯನ್ನುಸರಿಯಾದ ವಾಸ್ತವ ನಮ್ಮ ಗ್ರಹಿಕೆಗೆ ಸಿಗಲಾರದು.
ಈಗ ಸಂವಿಧಾನವನ್ನೂ ಕೂಡ ಬದಲಾಯಿಸಬೇಕೆಂಬ
ಕೂಗುಗಳನ್ನು ಹೆಚ್ಚಿಸತೊಡಗಿದೆ. ಏಕಪಕ್ಷ, ಏಕವ್ಯಕ್ತಿ ಆಡಳಿತವನ್ನು ಸಂಘಟಿಸಿಕೊಳ್ಳುತ್ತಾ ತಮ್ಮ ಹುಕುಂಗಳನ್ನು
ಜಾರಿ ಮಾಡತೊಡಗಿವೆ. ಅದಕ್ಕೆ ಅನುಕೂಲವಾಗುವಂತೆ ಇತರ ರಾಜಕೀಯ ಪಕ್ಷಗಳ ರೂಢಿಗತ ಕಾರ್ಯ ಚಟುವಟಿಕೆಗಳನ್ನು
ಕೂಡ ನಿರ್ಬಂಧಿಸಲಾಗಿದೆ. ವಿರೋಧ ಪಕ್ಷಗಳೆನಿಸಿಕೊಂಡವುಗಳೂ ಕೂಡ ಸಾಂಕೇತಿಕ ವಿರೋಧವನ್ನು ಕೂಡ ಕ್ರಿಯಾಶೀಲವಾಗಿ
ಮಾಡದಂತಹ ವಾತಾವರಣ ನಿರ್ಮಿಸಿಡಲಾಗಿದೆ. ಅದಕ್ಕೆ ಈ ಪಕ್ಷಗಳ ಅಂತರಿಕ ದೌರ್ಬಲ್ಯ ಕೂಡ ಒಂದು ಪ್ರಧಾನ
ಕಾರಣವಾಗಿದೆ.
ನ್ಯಾಯಾಂಗವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ
ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗಳು ಈಗ ಬಿರುಸುಗೊಂಡಿವೆ. ಪ್ರಜಾತಾಂತ್ರಿಕ ಸಂಘಟನಾ
ಸಂರಚನೆಗಳನ್ನು ರೂಪಿಸಿಕೊಳ್ಳದೇ ಹೋಗಿದ್ದರಿಂದಾಗಿ ಈ ವಿರೋಧ ಪಕ್ಷಗಳ ಕಾರ್ಯನಿರ್ವಹಣೆ ಹಾಗೂ ಅಸ್ತಿತ್ವಗಳಿಗೇ
ಭಾರಿ ಸವಾಲು ಎದುರಾಗಿದೆ. ಅಂದರೆ ವಿರೋಧಗಳು ಎಲ್ಲಿಂದಲೇ ಆಗಲೀ ಬರಲೇಬಾರದೆಂಬ ವಾತಾವರಣವನ್ನು ಸೃಷ್ಟಿಸಿಡಲಾಗಿದೆ.
ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೇ ವಿರುದ್ಧವಾಗಿರುವ ವಾತಾವರಣವಾಗಿದೆ.
ನಮ್ಮ ದೇಶದ ಅಧಿಕಾರ ರಾಜಕಾರಣದಲ್ಲಿರುವ ಎಡಪಕ್ಷಗಳು
ಈ ವಾಸ್ತವದೊಂದಿಗೆ ಪ್ರವರ್ತಿಸದೇ ಹೋಗುತ್ತಿವೆ. ಈಗಲೂ ಕಾಂಗ್ರೆಸ್ ನಂತಹ ಪಕ್ಷಗಳೊಂದಿಗೆ ಚುನಾವಣಾ
ಹೊಂದಾಣಿಕೆಗಳ ಮೇಲೆಯೇ ಆದರಿಸಿಕೊಂಡು (ಕೇರಳದಂತಹ ರಾಜ್ಯಗಳು ಹೊರತುಪಡಿಸಿ) ಅಧಿಕಾರ ರಾಜಕಾರಣದಲ್ಲಿ
ನಿರತವಾಗಿವೆ. ಈಗ ಕೇವಲ ಕೇರಳದಲ್ಲಿ ಮಾತ್ರ ತಮ್ಮ ಅಧಿಕಾರ ಉಳಿಸಿಕೊಂಡಿದೆ. ಜನಸಾಮಾನ್ಯರನ್ನು ರಾಜಕೀಯವಾಗಿ
ಸಂಘಟಿಸುವ ಕಾರ್ಯ ನಾಮಮಾತ್ರಕ್ಕೆ ಮಾಡುತ್ತಾ ಬರುತ್ತಿವೆ. ತಮ್ಮ ನಾಯಕತ್ವದಲ್ಲಿರುವ ಕಾರ್ಮಿಕರನ್ನು,
ನೌಕರರನ್ನು ಕೂಡ ರಾಜಕೀಯವಾಗಿ ಸಂಘಟಿಸಿಕೊಳ್ಳದ ಹೀನಾಯ ಪರಿಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿವೆ. ಈಗಲೂ
ಈ ಪಕ್ಷಗಳು ದೇಶದ ಜನರು ಈಗಾಗಲೇ ಬೇಸತ್ತು ತಿರಸ್ಕರಿಸಿರುವ ಕಾಂಗ್ರೆಸ್ ಅನ್ನೇ ಆಶ್ರಯಿಸುವ, ಸದ್ಯಕ್ಕೇ
ಕಾಂಗ್ರೆಸ್ಸೇ ಈ ದೇಶಕ್ಕೆ ಪರಿಹಾರ ಎನ್ನುವಂತಹ ನಡೆಗಳಲ್ಲಿ ಮುಳುಗಿದೆ. ತುರ್ತುಪರಿಸ್ಥಿತಿಗಿಂತಲೂ
ಅಪಾಯಕಾರಿಯಾದ ಸಂವಿಧಾನಾತ್ಮಕ ಸಂಪೂರ್ಣ ನಿರಂಕುಶತೆಯತ್ತ ದಾಪುಗಾಲಿಡುತ್ತಿರುವ ಇಂಡಿಯಾದ ರಾಜಕೀಯ
ಆಡಳಿತ ವ್ಯವಸ್ಥೆಯ ವಿರುದ್ಧ ಜನಹೋರಾಟ ಕಟ್ಟಿ ಎದುರಿಸುವ ಪರ್ಯಾಯ ಕಾರ್ಯಸೂಚಿಯೇ ಈ ಪಕ್ಷಗಳಿಗೆ ಇಲ್ಲವಾಗಿದೆ.
ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಸಿಡಿದು
ಬೆಳೆದ ಜನಚಳವಳಿಗಳಾದ ದಲಿತ, ರೈತ, ವಿದ್ಯಾರ್ಥಿ ಚಳವಳಿಗಳು, ಹಲವಾರು ಪುರೋಗಾಮಿ ಧಾರೆಗಳಿಗೆ ಕಾರಣಕರ್ತವಾಗಿದ್ದರೂ
ನಂತರ ಜನಚಳವಳಿ ಬಿಟ್ಟು ಅಧಿಕಾರ ರಾಜಕಾರಣದ ಭಾಗವಾಗತೊಡಗಿದ ಮೇಲೆ ಬಡವಾದವು. ಈ ಚಳವಳಿಗಳ ನಾಯಕತ್ವ
ಕೂಡ ಅಧಿಕಾರ ರಾಜಕಾರಣ ಒಡ್ಡಿದ ಆಸೆ ಆಮಿಷಗಳಲ್ಲಿ ಬಂದಿಯಾಗಿಬಿಟ್ಟಿತು. ಜೊತೆಗೆ ಅಧಿಕಾರ ರಾಜಕಾರಣ
ಜನಚಳವಳಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹಲವಾರು ರೀತಿಗಳಲ್ಲಿ ಹೊಸಕಿಹಾಕಿತು. ಯಾಕೆಂದರೆ ಜನಚಳವಳಿಗಳು ಬೆಳೆದು ನಿಂತು ಮುಂದುವರೆದರೆ ಅದರಿಂದ
ಪ್ರಜ್ಞವಂತರಾಗುವ ಜನಸಮೂಹ ಅಧಿಕಾರ ರಾಜಕಾರಣದ ಕುಟಿಲತನಗಳ ಮೂಲಕ್ಕೆ ಕೊಡಲಿಯೇಟು ನೀಡುವ ಶಕ್ತಿ ಪಡೆಯುತ್ತದೆ.
ಆಳುವ ಶಕ್ತಿಗಳ ಹಿತಾಸಕ್ತಿಗಳಿಗೆ ಸಂಚಕಾರ ತಂದೊಡ್ಡುತ್ತದೆ. ನಂತರ ಈ ಚಳವಳಿಗಳು ಅಧಿಕಾರ ರಾಜಕಾರಣದ
ಪಕ್ಷಗಳ ಬಾಲಗಳಾದವು. ದನಿಗಳನ್ನೇ ಕಳೆದುಕೊಂಡವು.
ರಾಜ್ಯದ ಹಾಗೂ ದೇಶದ ಬಹಳಷ್ಟು ಪ್ರಗತಿಪರ,
ಉದಾರವಾದಿ ಬುದ್ಧಿಜೀವಿಗಳು ರಾಜಕೀಯ ಅನಕ್ಷರತೆ ಹಾಗೂ ಸೀಮಿತ ಪರಿಧಿಯ ವೈಚಾರಿಕತೆಯಡಿ ತಮ್ಮನ್ನು ಸಿಲುಕಿಸಿಕೊಂಡು
ಅದರ ಲಾಭ ವೈಯಕ್ತಿಕವಾಗಿ ಪಡೆಯುವಲ್ಲಿ ಮಾತ್ರ ಆಸಕ್ತಿ ಉಳಿಸಿಕೊಳ್ಳುವಷ್ಟಕ್ಕೆ ಸೀಮಿತಗೊಂಡಿದ್ದಾರೆ.
ಅದು ಆತ್ಮಹತ್ಯಾಕಾರಕ ಎಂಬ ಪ್ರಜ್ಞೆಯನ್ನೇ ಬೆಳೆಸಿಕೊಳ್ಳಲಾರದವರಾಗಿದ್ದಾರೆ. ಎಪ್ಪತ್ತರ ದಶಕದ ಜನಚಳವಳಿಗಳ
ಮೂಸೆಯಲ್ಲಿ ಅರಳಿ ಬೆಳೆದ ಬುದ್ಧಿಜೀವಿ ವರ್ಗ ಹಲವು ಮಿತಿಗಳಲ್ಲಿಯೂ ಒಂದಷ್ಟು ಪ್ರಗತಿಪರ ಸಾಮಾಜಿಕ
ಸ್ಪಂದನೆಗಳನ್ನು ಉಳಿಸಿಕೊಂಡಿತ್ತು. ಆದರೆ ಈಗ ಸಂಘಪರಿವಾರ ಹಾಗೂ ಬಿಜೆಪಿ ಮಾತ್ರ ದೇಶದ ಜನರಿಗೆ ಕಂಟಕಪ್ರಾಯವಾಗಿದೆ,
ಇವುಗಳೇ ಫ್ಯಾಸಿಸಂನ ಮೂಲವಾಗಿದೆ, ಕಾಂಗ್ರೆಸ್ ಮಾತ್ರ ಸದ್ಯದ ಪರಿಹಾರವಾಗಿದೆ, ಸಂವಿಧಾನವನ್ನು ಉಳಿಸಿಕೊಂಡರೆ
ದೇಶ ಉಳಿಯುತ್ತದೆ ಎನ್ನುವಂತಹ ಬಹುಸಂಖ್ಯಾತ ಜನಸಾಮಾನ್ಯರು ಈಗಾಗಲೇ ತಿರಸ್ಕರಿಸಿರುವ ಮತ್ತು ಅವಾಸ್ತವ
ಪ್ರತಿಪಾದನೆಗಳಲ್ಲೇ ಮುಳುಗಿದ್ದಾರೆ. ಹಾಗಾಗಿ ಇವರ ಚಿಂತನೆ, ಬರವಣಿಗೆಗಳಲ್ಲಿ ಬೆಳವಣಿಗೆ ನಿಂತುಹೋಗಿದೆ.
ವೈಚಾರಿಕ ತೀಕ್ಷ್ಣತೆ ಬರಡಾಗುತ್ತಿದೆ. ಸೃಜನಶೀಲತೆಗೆ ಮುಪ್ಪಡರುತ್ತಿದೆ. ರಾಜಕೀಯ ದಿವಾಳಿತನದ ವೈಚಾರಿಕತೆಯಲ್ಲೇ
ಮುಳುಗತೊಡಗಿದ್ದಾರೆ. ಹಲವರು ಹುದ್ದೆ, ಪ್ರಶಸ್ತಿ, ವೇದಿಕೆ, ಹಣ ಹೇಗಾದರಾಗಲೀ ತಮ್ಮದೊಂದು ಕೃತಿ ಹೊರಬಂದರೆ
ಸಾಕೆಂಬ ವ್ಯಕ್ತಿಹಿತಾಸಕ್ತಿಗಳಡಿ ಹೂತುಸಿಲುಕಿದ್ದಾರೆ. ಆಳುವಂತಹವರ ಕೃಪೆ ತಮ್ಮ ಮೇಲೆ ಇದ್ದರೆ ಸಾಕೆಂಬ
ಧನ್ಯತಾ ಭಾವದಲ್ಲೇ ತೇಲಾಡುವ ಉತ್ಕಟ ಬಯಕೆಯಲ್ಲೇ ಸಾಗುತ್ತಿದ್ದಾರೆ.
ಈ ಕಾಲಘಟ್ಟದ ಇಂತಹ ಗಂಭೀರ ಹಾಗೂ ಅಪಾಯಕಾರಿ
ಸವಾಲುಗಳನ್ನು ಅರ್ಥಮಾಡಿಕೊಳ್ಳುವುದೇ ಇಂದು ಜನಸಾಮಾನ್ಯರ ಪ್ರಧಾನ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ
ಸಮಾಜಮುಖಿಯಲ್ಲಿ ನಡೆಯುತ್ತಿರುವ ಈ ಚರ್ಚೆಗಳಿಗೆ ಬಹಳ ಮಹತ್ವವಿದೆ. ದೆಹಲಿ ಇನ್ನಿತರ ಕಡೆಗಳಲ್ಲಿ ಒಂದು
ವರುಷದ ಕಾಲ ನಡೆದ ಭಾರಿ ಮಟ್ಟದ ರೈತಾಪಿ ಹೋರಾಟಗಳ ಅದ್ಭುತ ಪ್ರಜಾತಾಂತ್ರಿಕ ಪಾಠಗಳು ನಮ್ಮ ಮುಂದಿವೆ.
17-01-2022
(ಸಮಾಜಮುಖಿ ಮಾಸಪತ್ರಿಕೆಯ 2023ರ ಫೆಬ್ರವರಿ ತಿಂಗಳ ಪ್ರಕಟಿತ ಬರೆಹವಿದು)
Comments
Post a Comment