Skip to main content

ಚುನಾವಣೆಗಳು ನಿರ್ದೇಶಿತ ಹಾಗೂ ಪ್ರಾಯೋಜಿತ ಸಾಮಾಜಿಕ ಅಕ್ರಮಗಳಾಗುತ್ತಿವೆ #election#sponcered# directed social offences

 

ಚುನಾವಣೆಗಳು ನಿರ್ದೇಶಿತ ಹಾಗೂ ಪ್ರಾಯೋಜಿತ ಸಾಮಾಜಿಕ ಅಕ್ರಮಗಳಾಗುತ್ತಿವೆ !

          


                                                                
 -ನಂದಕುಮಾರ್ ಕುಂಬ್ರಿಉಬ್ಬು

                                                                                                           
                                                            ಮಿಂಚಂಚೆ: nandakumarnandana67@gmail.com

ಕಳೆದ 21/02/2023ರಂದು ಇಂಡಿಯಾದ ದಿ ವೈರ್ ಆಂಗ್ಲ ಸುದ್ದಿ ಜಾಲತಾಣ ಒಂದು ತನಿಖಾ ವರದಿಯನ್ನು ಪ್ರಕಟಿಸಿತು. ಸೈಬರ್ ಮೆರ್ಸನರೀಸ್ ಆರ್ ಹ್ಯಾಕಿಂಗ್ ಎಲೆಕ್ಷನ್ಸ್ ಗ್ಲೋಬಲೀ ಎಂಬ ಆ ವರದಿಯು ಇಂದು ಪ್ರಜಾಪ್ರಭುತ್ವ ದೇಶಗಳೆಂದು ಕರೆದುಕೊಳ್ಳುತ್ತಿರುವ ದೇಶಗಳ ಬಹಳ ಪ್ರಮುಖ ಪ್ರಕ್ರಿಯೆಯಾದ ಚುನಾವಣೆಗಳನ್ನು ಆರ್ಥಿಕ ಪಟ್ಟಭದ್ರ ಹಿತಾಸಕ್ತಿಗಳು ತಲುಪಿಸಿರುವ ಪ್ರಪಾತವನ್ನು ಬಿಚ್ಚಿಟ್ಟಿದೆ. ಇಂತಹ ಅಕ್ರಮಗಳು ಈ ಹಿಂದೆಯೂ ಕೂಡ ಅಮೇರಿಕಾ, ಯು ಕೆ ಸೇರಿದಂತೆ ಹಲವಾರು ದೇಶಗಳಲ್ಲಿ ಸುದ್ಧಿಗೆ ಗ್ರಾಸವಾಗಿದ್ದವು. ಆ ವರದಿಯು ಜಾಗತಿಕವಾಗಿ ಮೊದಲಿಗೆ ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ (OCCRP) ನಲ್ಲಿ ಪ್ರಕಟವಾಗಿ ನಂತರ ಜರ್ಮನಿ, ಇಸ್ರೇಲ್, ಆಸ್ಟ್ರೀಯ, ಫ್ರಾನ್ಸ್, ಯುಕೆ ಮೊದಲಾದ ದೇಶಗಳ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಯುನೈಟೆಡ್ ಕಿಂಗ್ ಡಮ್ ನ ಗಾರ್ಡಿಯನ್ ಪತ್ರಿಕೆಯಲ್ಲೂ ಪ್ರಕಟವಾಗಿದೆ.

ಆ ವರದಿಯು ವಿವಿಧ ದೇಶಗಳ ಪತ್ರಕರ್ತರುಗಳು ಒಗ್ಗೂಡಿ ಜಾಗತಿಕವಾಗಿ ತನಿಖೆ ನಡೆಸಿ ಬಿಡುಗಡೆ ಮಾಡಿದ ವರದಿಯಾಗಿತ್ತು. ಆ ವರದಿಯು ಭಾರಿ ಕಾರ್ಪೋರೇಟು ಹಾಗೂ ರಾಜಕೀಯ ಹಿತಾಸಕ್ತಿಗಳು ಜಾಗತಿಕವಾಗಿ ವಿವಿಧ ದೇಶಗಳ ಚುನಾವಣೆಗಳನ್ನು ಹೇಗೆಲ್ಲಾ ನಿರ್ವಹಿಸುತ್ತಿವೆ, ದಿಕ್ಕುತಪ್ಪಿಸಲಾಗುತ್ತಿದೆ, ತಮಗೆ ಅನುಕೂಲಿತ ಇಲ್ಲವೇ ತಮ್ಮದೇ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಹೇಗೆಲ್ಲಾ ತಂತ್ರಕುತಂತ್ರಗಳನ್ನು ಮಾಡಲಾಗುತ್ತಿದೆ ಎಂಬೆಲ್ಲಾ ವಿವರಗಳನ್ನು ಒಳಗೊಂಡಿದೆ.

ಸರ್ಕಾರಿ ಅಂಗಗಳು, ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು, ಇಮೇಲ್ ಖಾತೆಗಳು, ಇನ್ನಿತರ ಸರ್ಕಾರಿ ಹಾಗೂ ಖಾಸಗೀ ಮಾಹಿತಿ ಮೂಲಗಳು… ಹೀಗೆ ಎಲ್ಲಾ ಮಾಹಿತಿ ಮೂಲಗಳನ್ನೂ ಬಳಸಿಕೊಳ್ಳುತ್ತಾ ಜಾಗತಿಕವಾಗಿ ಸುಮಾರು ಹನ್ನೆರಡಕ್ಕೂ ಹೆಚ್ಚಿನ ದೇಶಗಳ ಅದ್ಯಕ್ಷೀಯ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿರುವುದೂ ಅಲ್ಲದೇ ನಿರ್ದಿಷ್ಟ ವ್ಯಕ್ತಿಗಳೇ ಚುನಾವಣೆಗಳಲ್ಲಿ ಜಯ ಸಾಧಿಸುವಂತೆ ನೋಡಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಅದಕ್ಕಾಗಿ ಸುಳ್ಳುಮಾಹಿತಿಗಳನ್ನು ವ್ಯಾಪಕಗೊಳಿಸುವುದು, ಕೃತಕ ಬುದ್ದಿಮತ್ತೆ ಬಳಸುವುದು, ಹ್ಯಾಕ್ ಮಾಡುವುದು, ಬ್ಲಾಕ್ ಮೆಯಿಲ್ ಮಾಡುವುದು ಇತ್ಯಾದಿ ಎಲ್ಲವನ್ನೂ ಅನುಸರಿಸಲಾಗಿತ್ತು ಎಂದು ಆ ವರದಿ ಹೇಳುತ್ತದೆ. ಇದರಲ್ಲಿ ಟೀಮ್ ಜಾರ್ಜ್ ಎಂಬ ಗುಂಪು ನಡೆಸಿರುವ ಇಂತಹ ಕೃತ್ಯಗಳ ಬಗ್ಗೆ ಕೇಂದ್ರೀಕರಿಸಿ ಬಯಲು ಮಾಡಲಾಗಿದೆ.      

ಜಾಗತಿಕವಾಗಿ ಸೈಬರ್ ಮೆರ್ಸನರಿಗಳು ಎಂದು ಆಂಗ್ಲದಲ್ಲಿ ಕರೆಯಲ್ಪಡುವ ಡಿಜಿಟಲ್ ಕೂಲಿಯಾಳುಗಳು ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುತ್ತಾ ಇವುಗಳನ್ನೆಲ್ಲಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂತರಾಷ್ಟ್ರೀಯ ಪತ್ರಕರ್ತರ ತಂಡವು ಇಸ್ರೇಲಿ ಮೂಲದ ಸುಳ್ಳುಮಾಹಿತಿಗಳನ್ನು ಸೃಷ್ಟಿಸಿ ಹರಡುವ ಹಾಗೂ ಮಾಹಿತಿಗಳನ್ನು ದಾರಿ ತಪ್ಪಿಸುವ ಪರಿಣತರಿರುವ ಇಂತಹ ಗುಂಪುಗಳೊಂದಿಗೆ ಗ್ರಾಹಕರಂತೆ ಸಮೀಪಿಸಿ ಇಂತಹ ಮಾಹಿತಿಗಳನ್ನು ಕಲೆಹಾಕಿ ಈ ವರದಿಯನ್ನು ತಯಾರಿಸಿದ್ದಾರೆ. ಆಫ್ರಿಕಾದ ಚುನಾವಣೆಗಳನ್ನು ದಿಕ್ಕುತಪ್ಪಿಸಲು ಇಂತಹ ತಂಡಗಳ ನೆರವನ್ನು ಕೇಳುವ ನೆಪದಲ್ಲಿ ಈ ಮಾಹಿತಿಗಳನ್ನು ಕಲೆಹಾಕಲಾಗಿದೆ. 33 ಅಧ್ಯಕ್ಷೀಯ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿ ಅದರಲ್ಲಿ 27 ಚುನಾವಣೆಗಳಲ್ಲಿ ಈ ತಂಡಗಳು ತಮಗೆ ಬೇಕಾದಂತೆ ಫಲಿತಾಂಶಗಳನ್ನು ಯಶಸ್ವಿಯಾಗಿ ತಯಾರುಮಾಡಿಕೊಟ್ಟಿರುವ ವಿವರಗಳನ್ನು ಪತ್ರಕರ್ತರ ತಂಡ ಕಲೆಹಾಕಿದೆ.

ಇವರುಗಳ ಕಾರ್ಯತಂತ್ರಗಳಲ್ಲಿ ಹ್ಯಾಕಿಂಗ್, ನಕಲು ಮಾಡುವುದು, ಸುಳ್ಳು ಸುದ್ಧಿಗಳನ್ನು ಹರಡುವುದು ಮಾತ್ರವಲ್ಲದೇ ತಮ್ಮದೇ ಗೂಢಚಾರ ತಂತ್ರಾಂಶಗಳನ್ನು ಸೇರಿಸುವುದು, ನೇರವಾಗಿ ಚುನಾವಣೆಗಳನ್ನು ಹಾಳುಗೆಡವುವುದು, ನಿರ್ದಿಷ್ಟವಾಗಿ ಕೇಂದ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗಳನ್ನು ನಡೆಸುವುದು ಇತ್ಯಾದಿಗಳು ಸೇರಿವೆ. ಅದರಲ್ಲಿ ಉನ್ನತ ಮಟ್ಟದ ಅಧಿಕಾರ ಸ್ಥಾನದಲ್ಲಿರುವವರ ಟೆಲೆಗ್ರಾಮ್, ಜಿಮೇಲ್ ಖಾತೆಗಳನ್ನು ಅನಧೀಕೃತವಾಗಿ ಬಳಸಿಕೊಳ್ಳಲಾಗಿದೆ. ಪತ್ರಕರ್ತ ತಂಡವು ಇವರು ತಿಳಿಸಿರುವ ಕಾರ್ಯತಂತ್ರಗಳಲ್ಲಿ ಹಲವನ್ನು ಅಳವಡಿಸಿಕೊಂಡಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಇವರುಗಳ ಇಂತಹ ಸೇವಾಕಾರ್ಯಗಳಿಗೆ ಕನಿಷ್ಟ 6 ದಶಲಕ್ಷ ಯೂರೋಗಳಿಂದ ಹಿಡಿದು 15 ದಶಲಕ್ಷಕ್ಕೂ ಹೆಚ್ಚಿನ ಯೂರೋಗಳಷ್ಟು ಹಣವನ್ನು ಗ್ರಾಹಕರು ನೀಡಬೇಕಾಗುತ್ತದೆ.  ಸರ್ಕಾರೇತರ ಸಂಸ್ಥೆಗಳು ಕಾನೂನು ಕಂಪನಿಗಳ ಮೂಲಕ ಈ ಹಣವನ್ನು ವರ್ಗಾಯಿಸಿಕೊಳ್ಳಲಾಗುತ್ತದೆ. ಜೋರ್ಜ್ ಎಂಬ ವ್ಯಕ್ತಿಗೆ ಜಾಗತಿಕವಾಗಿ ಅಮೇರಿಕ, ಇಸ್ರೇಲ್, ಉಕ್ರೈನ್, ಇಂಡೋನೇಷಿಯಾ ಮೊದಲಾದ ದೇಶಗಳಲ್ಲಿ ಸಂಪರ್ಕ ಜಾಲವಿದೆ.

ಈ ಸಂಸ್ಥೆಗಳು ಇಲ್ಲವೇ ತಂಡಗಳು ತಮ್ಮ ಗುರುತುಗಳನ್ನು ಬಹಿರಂಗವಾಗದಂತೆ ನೋಡಿಕೊಳ್ಳುತ್ತವೆ. ಪತ್ರಕರ್ತರ ತಂಡವು ತಾವು ಸಂಪರ್ಕ ಸಾಧಿಸಿದ ಜೋರ್ಜ್ ಎಂಬ ವ್ಯಕ್ತಿಯ ನೈಜ ಗುರುತು ಟಾಲ್ ಹನಾನ್ ಎಂಬ ಸ್ವಯಂಘೋಷಿತ ಭಯೋತ್ಪಾದನಾ ವಿರೋಧಿ ಪರಿಣತ ಹಾಗೂ ಸೈಬರ್ ವಿಶೇಶಜ್ಞನೆಂದು ಮಾಧ್ಯಮಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೆಂದು ಪತ್ತೆ ಹಚ್ಚಿದ್ದಾರೆ.

ಜೋರ್ಜ್ ನ ತಂಡ ಅಂತರಾಷ್ಟ್ರೀಯ ಪತ್ರಕರ್ತರ ತಂಡಕ್ಕೆ ಕೀನ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗುಂಪು ಕಾರ್ಯ ನಿರ್ವಹಿಸಿದ್ದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿದ್ದ. ಅದರ ಜಾಡು ಹಿಡಿದ ಪತ್ರಕರ್ತರ ತಂಡ ಆತ ಉನ್ನತ ಸೇನಾ ಅಧಿಕಾರಿಗಳೂ ಸೇರಿದಂತೆ ಕೀನ್ಯಾದ ಉನ್ನತ ಅಧಿಕಾರ ಕೇಂದ್ರಗಳ ಮುಖ್ಯಸ್ಥರಿಗೆ ನೇರವಾಗಿ ಸಂದೇಶ ರವಾನಿಸಿ ಅವರೆಲ್ಲರನ್ನೂ ಗೊಂದಲಕ್ಕೊಳಪಡಿಸಿ ಕೋಲಾಹಲ ಸೃಷ್ಟಿಸುವ ಪರಿಯನ್ನು ನೇರವಾಗಿ ಗ್ರಹಿಸಿದ್ದರು.

ವಾಸ್ತವದಲ್ಲಿ ನೋಡಿದಾಗ ಕೀನ್ಯಾ ಅಧ್ಯಕ್ಷೀಯ ಚುನಾವಣೆ ಬಹಳ ಅಶಾಂತಿ ಹಾಗೂ ಗೊಂದಲಗಳ ಗೂಡಾಗಿ ಹೋಗಿತ್ತು. ಅನಾಮಧೇಯ ನಕಲಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿ ಮತ ರಿಗ್ಗಿಂಗ್ ವ್ಯಾಪಕವಾಗಿ ಮಾಡಲಾಗಿದೆ ಎಂಬಂತಹ ವಾತಾವರಣ ಸೃಷ್ಟಿಸಲಾಗಿತ್ತು. ಚುನಾವಣೆಗೂ ಮೊದಲು ಮೂವರು ವೆನೆಜುಯೇಲಾ ಮೂಲದವರನ್ನು ನೈರೋಬಿ ವಿಮಾನನಿಲ್ದಾಣದಲ್ಲಿ ಬಂಧಿಸಿ ಅನುಮಾನಾಸ್ಪದ ಚುನಾವಣಾ ಸಾಮಾಗ್ರಿಗಳನ್ನು ಹೊಂದಿದ್ದರು ಎಂದು ಆರೋಪಿಸಿ ಭಾರಿ ಸುದ್ಧಿಯಾಗುವಂತೆ ಮಾಡಲಾಗಿತ್ತು. ಅವರಲ್ಲಿ ಅಂತಹುದು ಏನೂ ಇರಲಿಲ್ಲವೆಂದೂ ಹೇಳಿದ ಕೀನ್ಯಾದ ಪೋಲೀಸರು ಅವರನ್ನು ಮಾರನೇ ದಿನ ಬಿಡುಗಡೆ ಮಾಡಿದ್ದರೂ ಕೂಡ ಅದು ಸುದ್ಧಿಯಾಗದಂತೆ ನೋಡಿಕೊಳ್ಳಲಾಗಿತ್ತು. ಹೀಗೆಲ್ಲಾ ಮಾಡಿ ಇಡೀ ಚುನಾವಣಾ ಪ್ರಕ್ರಿಯೆಗಳೇ ಅಕ್ರಮವಾಗಿವೆ ಎಂಬಂತೆ ವಾತಾವರಣ ಸೃಷ್ಟಿಸಲಾಗಿತ್ತು. ಇದರ ಬೆನ್ನಲ್ಲಿಯೇ ಚುನಾವಣಾ ಅಕ್ರಮಗಳೆಂದು ಹೆಸರಿಸಿ ಹಲವಾರು ದಾವೆಗಳನ್ನು ಕೀನ್ಯಾದ ವಿವಿಧ ನ್ಯಾಯಾಲಯಗಳಲ್ಲಿ ಹೂಡಲಾಗಿತ್ತು. ಕೀನ್ಯಾದ ವಿರೋಧ ಪಕ್ಷಗಳು ಈ ಎಲ್ಲಾ ಆರೋಪಗಳನ್ನು ಹಿಡಿದು ಪ್ರತಿಭಟನೆಗಳನ್ನು ಸಂಘಟಿಸಿದವು. ನಂತರ ಕೀನ್ಯಾದ ಸರ್ವೋಚ್ಚ ನ್ಯಾಯಾಲಯ ಆರೋಪಗಳು ನಿರಾಧಾರವಾದವುಗಳು ಎಂದು ಹೇಳಿ ಚುನಾವಣೆಯನ್ನು ಸಕ್ರಮವೆಂದು ಹೇಳಿ ರುಟು ಕೀನ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಎತ್ತಿ ಹಿಡಿಯಿತು. ಆ ಸಂಬಂಧಿತ ಎಲ್ಲಾ ದಾವೆಗಳನ್ನು ರದ್ದುಗೊಳಿಸಿತು. ಜೋರ್ಜ್ ತಂಡ ರುಟುರನ್ನು ಗುರಿಯಾಗಿಸಿಯೇ ತನ್ನ ಕಾರ್ಯಾಚರಣೆಗಳನ್ನು ನಡೆಸಿತ್ತು.

ಸೋರಿಕೆಯಾದ ಇಮೇಲ್ ಗಳು ಜೋರ್ಜ್ ತಂಡ  ಎಂದು ಹೇಳಿಕೊಂಡ ಹನಾನ್ ಜೊತೆ ಕೇಂಬ್ರಿಡ್ಜ್ ಅನಾಲಿಟಿಕಾ ಕೆಲಸಮಾಡಿದ್ದನ್ನು ಬಯಲುಗೊಳಿಸಿದೆ. 2018ರಲ್ಲಿ ಇಸ್ರೇಲಿ ಸಮಾಲೋಚಕ ತಂಡವನ್ನು ನೈಜೀರಿಯಾದ ಅಧ್ಯಕ್ಷ ಗುಡ್ ಲಕ್ ಜೋನಾತನ್ ತನ್ನ ಪರವಾಗಿ ನಿಯೋಜಿಸಿಕೊಂಡಿದ್ದನ್ನು ಬ್ರಿಟನ್ ಸಂಸದರ ತಂಡಕ್ಕೆ  ಮಾಜಿ ಎಸ್ ಸಿ ಎಲ್ ಗುಂಪಿನ   ಕಾರ್ಯಕ್ರಮ ನಿರ್ದೇಶಕಿ ಬ್ರಿಟ್ನಿ ಕೈಸರ್ ಬಯಲುಗೊಳಿಸಿರುವುದೂ ನಡೆದಿದೆ. ಎಸ್ ಸಿ ಎಲ್ ಗುಂಪು ಎಂಬ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾದ ಪಿತೃಸಂಸ್ಥೆಯಾಗಿದೆ. ಇವುಗಳು ದೇಶಗಳ ಜನಸಾಮಾನ್ಯರನ್ನು ಹತ್ತುಹಲವು ವಿಧಗಳಲ್ಲಿ ದಾರಿತಪ್ಪಿಸುವ, ಸುಳ್ಳು ಸುದ್ಧಿಗಳ ಹಿಂದೆ ಓಡುವಂತೆ ಮಾಡುವ, ಸಾಮೂಹಿಕ ಅಶಾಂತಿ, ಅನುಮಾನ, ಬೆದರಿಕೆಗಳನ್ನು ಕೃತಕವಾಗಿ ಸೃಷ್ಟಿಸುವ ಸಂಸ್ಥೆಗಳಾಗಿವೆ. ಹಾಗೆಲ್ಲಾ ಮಾಡುತ್ತಾ ಆಯಾ ದೇಶಗಳ ರಾಜಕೀಯ ಇನ್ನಿತರ ಅಧಿಕಾರ ಕೇಂದ್ರಗಳ ಮೇಲೆ ಹಿಡಿತ ಸಾಧಿಸಲು ತನ್ನನ್ನು ನೇಮಿಸಿಕೊಳ್ಳುವ ಕಂಪನಿಗಳು, ರಾಜಕೀಯ ನೇತಾರರಿಗೆ ಬೆಂಬಲವನ್ನಾಗಿ ಪರಿವರ್ತಿಸುವ ಕಾರ್ಯಗಳಿಗೆ ಮೀಸಲಿರುವ ಗುಂಪುಗಳಾಗಿವೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ತಾನು ನೀಡುತ್ತಿರುವ ಚುನಾವಣೆಗಳನ್ನು ಪ್ರಭಾವಿಸುವ ಸೇವೆಗಳಿಗಾಗಿ ಯೂನಿವರ್ಸಿಟಿ ಕಂಪ್ಯೂಟೇಶನಲ್ ಪ್ರಪಾಗಾಂಡಾ ಯೋಜನೆ ಗುರುತಿಸಿರುವ 65 ಸಂಸ್ಥೆಗಳಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಕೂಡ ಒಂದಾಗಿದೆ.

ಟೀಮ್ ಜೋರ್ಜ್ ಆಫ್ರಿಕಾ ಮಾತ್ರವಲ್ಲದೇ ಯೂರೋಪ್, ಲ್ಯಾಟಿನ್ ಅಮೇರಿಕಾ, ಆಗ್ನೇಯ ಏಷ್ಯಾ, ಮತ್ತು ಕೆರೀಬಿಯನ್ ದೇಶಗಳ ಚುನಾವಣೆಗಳನ್ನು ಪ್ರಭಾವಿಸುವ ಸೇವೆಗಳನ್ನು ನೀಡಿದೆ. ಹಲವಾರು ದೇಶಗಳ ಅಧಿಕಾರಸ್ಥರ ಫೋನುಗಳ ಮೇಲೆ ಕೂಡ ನಿಯಂತ್ರಣ ಸಾಧಿಸಿ ತನ್ನ ಕಾರ್ಯಗಳನ್ನು ನಡೆಸಿತ್ತು. ಇವರುಗಳ ಇಂತಹ ಕಾರ್ಯಗಳನ್ನು ಪತ್ತೆ ಹಚ್ಚಲಾಗದಂತಹ ರೀತಿಗಳಲ್ಲಿ, ಪತ್ತೆಯಾದರೂ ಪ್ರಧಾನ ಸೂತ್ರಧಾರರು ಬಯಲಾಗದಂತಹ ರೀತಿಗಳಲ್ಲಿ ನಡೆಸಿಕೊಂಡು ಬರಲಾಗುತ್ತದೆ. ಕಾನೂನು ಕುಣಿಕೆಗಳಲ್ಲೂ ಇವರುಗಳು ಸಿಲುಕದಂತಹ ರೀತಿಗಳಲ್ಲಿ ನೋಡಿಕೊಂಡು ಬರಲಾಗುತ್ತಿದೆ. ಜಾಗತಿಕವಾಗಿ ಹಲವಾರು ಮಾಧ್ಯಮ ಸಂಸ್ಥೆಗಳನ್ನೂ ಕೂಡ ಇವರುಗಳ ಉದ್ದೇಶಗಳಿಗೆ ಚಾಕಚಕ್ಯತೆಯಿಂದ ಬಳಸಿಕೊಳ್ಳಲಾಗಿದೆ. ಇಸ್ರೇಲ್ ದೇಶದೊಂದಿಗೆ ಟೀಮ್ ಜೋರ್ಜ್ ಗೆ ನೇರ ಸಂಬಂಧ ಕೂಡ ಬಯಲಾಗಿದೆ. ವಿಸಾ(Visa), ಉಬರ್ ನಂತಹ ಕಾರ್ಪೋರೇಟು ಸಂಸ್ಥೆಗಳೂ ಕೂಡ ತಮ್ಮ ವಹಿವಾಟು ಪರ ಅಭಿಪ್ರಾಯ ರೂಪಿಸಲು ಇವರುಗಳ ಸೇವೆ ಪಡೆದುಕೊಂಡಿವೆ. ಟೀಮ್ ಜೋರ್ಜ್ ಎನ್ನುವ ಹೆಸರಿನಿಂದ ಕಾರ್ಯಾಚರಿಸುವ ಟಾಲ್ ಹನಾನ್ ಇಸ್ರೇಲಿನ ವಿಶೇಶ ಪಡೆಗಳ ಸ್ಪೋಟಕ ತಜ್ಞನಾಗಿ ಕೆಲಸಮಾಡಿರುವ ವರದಿಯೂ ಇದೆ. ಈತ ಟಾಲ್ ಸೊಲ್ ಎನೆರ್ಜಿ, ಮತ್ತು ಡೆಮಾಮನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂಬ ಎರಡು ಇಸ್ರೇಲಿ ಕಂಪನಿಗಳ ಸಿಇಒ ಆಗಿದ್ದಾನೆ. ಇದರಲ್ಲಿ ಡೆಮಾಮನ್  ಎಂಬ ಕಂಪನಿ ಇಸ್ರೇಲಿನ ರಕ್ಷಣಾ ಸಚಿವಾಲಯದ ಜಾಲತಾಣದಲ್ಲಿ ಹೆಸರಿಸಿರುವ ಗೂಢಚಾರ ಸಂಸ್ಥೆಯಾಗಿದೆ. ಇವುಗಳು ಆಯಾ ದೇಶಗಳಲ್ಲಿ ಇರುವ ನೊಂದಾಯಿತ ಸಂಸ್ಥೆಗಳನ್ನೂ ಕೂಡ ವ್ಯವಹಾರ ಕುದುರಿಸಿ ತಮ್ಮ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತವೆ.

ಈ ವರದಿಯ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ನಡೆದ ಅದರಲ್ಲೂ ನಿರ್ದಿಷ್ಟವಾಗಿ 2014 ಲೋಕಸಭಾ ಚುನಾವಣೆ ಹಾಗೂ ನಂತರದ ಚುನಾವಣೆಗಳಲ್ಲಿ ನಡೆದ ವಿದ್ಯಮಾನಗಳನ್ನು, ಇಸ್ರೇಲಿನ ಗೂಢಚಾರ ತಂತ್ರಾಂಶ ಪೆಗಾಸಸ್ ವಿವಾದ, ದೇಶದಲ್ಲಿ ಮಾನವಹಕ್ಕು ಹೋರಾಟಗಾರರ ಹಾಗೂ ದಲಿತದಮನಿತ ಪರ ನಿಂತಿರುವ ಸಾಮಾಜಿಕ ಹೋರಾಟಗಾರರ ಮೇಲೆ ಹೇರಿದ ಪ್ರಕರಣಗಳು, ಸೆರಮನೆಗೆ ತಳ್ಳಿದ್ದನ್ನೂ ಹಾಗೂ ಅವರ ಮೇಲೆ ಮಾಡಿದ ಆರೋಪಗಳನ್ನು ಮಗದೊಮ್ಮೆ ಪರಿಶೀಲಿಸಿ ನೋಡಬೇಕಾದ ಅಗತ್ಯವಿದೆ ತಾನೆ. ದೇಶದಲ್ಲಿ ನಡೆಯುತ್ತಿರುವ ನಿರ್ದಿಷ್ಟ ಜನಸಮುದಾಯದ ಕೇಂದ್ರೀಕರಿಸಿ ನಡೆಯುತ್ತಿರುವ ಸುಳ್ಳು ಸುದ್ದಿಗಳ ಪ್ರಚಾರ, ಅದನ್ನು ಹಿಡಿದು ನಡೆಸುವ ದಾಳಿಗಳು ಪ್ರತಿಭಟನೆಗಳು, ದಿನನಿತ್ಯ ಜನಸಾಮಾನ್ಯರ ಗಮನವನ್ನು ಅಮುಖ್ಯ ಹಾಗೂ ಕ್ಷುಲ್ಲುಕ ವಿಚಾರಗಳ ಮೇಲೆಯೇ ಕೇಂದ್ರೀಕೃತವಾಗುವಂತೆ ನೋಡಿಕೊಳ್ಳುತ್ತಾ ಬರುತ್ತಿರುವ ಪರಿಯನ್ನೂ ಗಮನಿಸಬೇಕಾದ ತುರ್ತಿದೆ.

ಹೆಚ್ಚಿನ ವಿವರಗಳಿಗೆ ದಿ ವೈರ್ ನಲ್ಲಿ ಪ್ರಕಟಿತ ಆಂಗ್ಲ ವರದಿಯನ್ನು ಈ ಕೆಳಗಿನ ಕೊಂಡಿಯನ್ನು ಬಳಸಿ ನೋಡಬಹುದು.

https://thewire.in/world/cyber-mercenaries-are-hacking-elections-globally-heres-an-example-of-how-they-do-it

 (ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ಪ್ರಕಟಿತ ಲೇಖನವಿದು)

26/02/2023                                                    

                                                

           


Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...