ಸಮಾಜಮುಖಿಗಳು ಜನಪರ ಬುದ್ದಿಜೀವಿಗಳು ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವಗಳ ಕನ್ನಡಿಗಳಾಗಬೇಕು# electoral parties#intellectuals#pro peolpe activists# progressive organizations
ಸಮಾಜಮುಖಿಗಳು ಜನಪರ ಬುದ್ದಿಜೀವಿಗಳು ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವಗಳ ಕನ್ನಡಿಗಳಾಗಬೇಕು.
ಬದಲಿಗೆ ಚುನಾವಣೆಗಳಿಗಷ್ಟೇ ಸೀಮಿತರಾಗುವ ಶಕ್ತಿಗಳ ಕುರುಡು ಸಮರ್ಥಕರಾಗುವುದು ಅಪಾಯಕರ.....
nandakumarnandana@gmail.com
ನಮ್ಮ ದೇಶದ ಚುನಾವಣೆಗಳನ್ನು ಭಾರಿ ಕಾರ್ಪೋರೇಟು ಹಾಗೂ ಭಾರಿ ಆಸ್ತಿವಂತ ವರ್ಗ ನೇರವಾಗಿ ನಿರ್ವಹಣೆ ಮಾಡತೊಡಗಿರುವುದನ್ನು ಗಂಭೀರವಾಗಿ ಗಮನಿಸಬೇಕು. ೨೦೧೪ ರ ಚುನಾವಣೆ ಹಾಗೂ ನಂತರದ ಚುನಾವಣೆಗಳಲ್ಲಿ ನಿರ್ವಹಣೆ ಹೇಗೆಲ್ಲಾ ನಡೆಯುತ್ತವೆ ಎಂಬುದು ಎದ್ದುಕಾಣುತ್ತಿರುವ ವಿಚಾರ. ಪಕ್ಷಗಳನ್ನೂ, ಸಂಸದರನ್ನೂ, ಶಾಸಕರುಗಳನ್ನೂ ನೇರವಾಗಿಯೇ ಭಾರಿ ಕಾರ್ಪೋರೇಟು ಸಮೂಹವು ಖರೀದಿಸಿ ತಮ್ಮ ಪರವಾಗಿ ಸರ್ಕಾರಗಳನ್ನು ರಚಿಸಿ ನಡೆಸುತ್ತಿರೋದು ಎದ್ದುಕಾಣುತ್ತಿರುವ ವಿಚಾರವಲ್ಲವೇ. ಒಂದು ವೇಳೆ ಕೆಲವು ಕಾರಣಗಳಿಂದ ಭಿನ್ನಪಕ್ಷಗಳು ಅಲ್ಪಬಹುಮತ ಪಡೆದರೂ ಅವುಗಳು ತಮ್ಮ ಪರವಾಗಿ ಕಾರ್ಯನಿರ್ವಹಿಸಲಾಗದ ಸ್ಥಿತಿಯಲ್ಲಿದ್ದರೆ ಅದರ ಶಾಸಕರುಗಳನ್ನೇ ಖರೀದಿಸಿ ತಮ್ನ ಅನುಕೂಲದ ಬಹುಮತದ ಸರಕಾರಗಳನ್ನು ಭಾರಿ ಕಾರ್ಪೋರೇಟು ಕೂಟಗಳು ನಡೆಸುತ್ತಿರೋದು ಸರಿಯಷ್ಟೇ. ಕೆಲವು ಸ್ಥಾನಗಳನ್ನು ಪಡೆದ ಪಕ್ಷಗಳನ್ನೂ ಇಡಿಯಾಗಿಯೋ ಆಂಶಿಕವಾಗಿಯೋ ಕೊಂಡುಕೊಳ್ಳಲಾಗುತ್ತಿದೆಯಲ್ಲವೆ. ಇದು ಇಂದು ಚುನಾವಣಾ ರಾಜಕಾರಣದ ಪರಿಸ್ಥಿತಿಯಲ್ಲವೇ. ಭಾರಿ ಕಾರ್ಪೋರೇಟು ಕೂಟಗಳೇ ನೇರವಾಗಿ ಸರ್ಕಾರದ ನೀತಿನಿರ್ದಾರಗಳನ್ನು ಮಾಡುತ್ತಿವೆ. ಮೋದಿ ಸರ್ಕಾರವನ್ನಿಟ್ಟುಕೊಂಡು ಮಾಡಿದ ಅದಾನಿ ಹಗರಣ ಅದರ ಒಂದು ಸಣ್ಣ ಭಾಗವಾಗಿದೆ.
ಇಂದು ಇಪ್ಪತ್ತೈದು ವರುಷಗಳ ಹಿಂದಿನಷ್ಟೂ ಕೂಡ ಚುನಾವಣೆಯಲ್ಲಿ ಮತದಾರರ ನಿರ್ಣಯಗಳು ನಿರ್ಣಾಯಕವಾಗುತ್ತಿಲ್ಲ. ಮೋದಿಯ ಬಿಜೆಪಿಯನ್ನು ಅಧಿಕಾರದಲ್ಲಿ ಕುಳ್ಳಿರಿಸಿದ ನಂತರ ಆಡಳಿತಕ್ಕೆ ಬಂದ ಬಿಜೆಪಿಯೇತರ ರಾಜ್ಯ ಸರಕಾರಗಳೂ ಕೂಡ ಮೋದಿ ಆಡಳಿತಕ್ಕಿಂತ ಭಿನ್ನವಾದ ರೀತಿಯಲ್ಲಿ ನೀತಿಗಳನ್ನು ಪಾಲಿಸಿಲ್ಲ. ತಮಿಳುನಾಡು ಮಾತ್ರ ಕೆಲವು ವಿಚಾರಗಳಲ್ಲಿ ಸ್ವಲ್ಪ ಅಂದರೆ ರಾಷ್ಟ್ರೀಯ ಶಿಕ್ಷಣನೀತಿ, ಭಾಷಾ ಹೇರಿಕೆ ಇತ್ಯಾದಿ ವಿಚಾರಗಳಲ್ಲಿ ಭಿನ್ನವಾಗಿ ನಿಲುವು ತಳೆದು ಎದುರಿಸಿ ನಿಂತಿದ್ದು ಬಿಟ್ಟರೆ ಉಳಿದಂತೆ ಬಹುತೇಕ ರಾಜ್ಯ ಸರ್ಕಾರಗಳು ಅವುಗಳನ್ನೇ ಅನುಸರಿಸಿದವು ಎಂಬ ಅಂಶವನ್ನು ಗಮನಿಸಬೇಕು.
ಇಂಡಿಯಾದಲ್ಲಿ ಹೆಚ್ಚಾಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಆಕ್ರಮಣಗಳು ಜಾಗತಿಕ ಬಂಡವಾಳ ( ಜಾಗತಿಕ ಭಾರಿ ಕಾರ್ಪೋರೇಟುಗಳು) ದ ಆರ್ಥಿಕ ಆಕ್ರಮಣಗಳೊಂದಿಗೆ ಗ್ರಹಿಸಬೇಕಾಗುತ್ತದೆ.
ಜಿ 20 ಯಂತಹ ಕೂಟಗಳು, ಗ್ಲೋಬಲ್ ಇನ್ ವೆಸ್ಟರ್ಸ್ ಮೀಟ್ ಗಳು ದೇಶದ ಜನಸಾಮಾನ್ಯರ ಅಭಿವೃದ್ಧಿಗಾಗಿ ಅಲ್ಲವಲ್ಲ. ದೇಶದ ಜನಸಾಮಾನ್ಯರ ಬದುಕಿನ ಮೂಲಗಳನ್ನೇ ಎತ್ತಿಕೊಂಡು ಹೋಗುವಂತಹವುಗಳು.
ಇಂದು ಸಮಾಜಮುಖಿಗಳು ಹಾಗೂ ಪ್ರಜಾತಂತ್ರವಾದಿಗಳು ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಹಾಗೂ ಭಾರಿ ಕಾರ್ಪೋರೇಟ್ ಪರ ನೀತಿಗಳ ವಿರುದ್ಧದ ಕಾರ್ಯ ಸೂಚಿಗಳನ್ನು ಜನರ ಮಧ್ಯೆ ಚರ್ಚೆಗೆ ತರಬೇಕು. ದಲಿತ, ಆದಿವಾಸಿ, ಮಹಿಳಾ, ಇತರ ದಮನಿತ, ಹಿಂದುಳಿದ ,ಅಲ್ಪ ಸಂಖ್ಯಾತ ಪರವಾದ ಕಾರ್ಯಸೂಚಿಗಳನ್ನು ಕಾರ್ಯಕ್ರಮಗಳನ್ನು ಜನರ ಮುಂದೆ ಇಡಬೇಕು. ಈಗ ಹಾಲಿ ಇರುವ ಜನವಿರೋಧಿ ಹಾಗೂ ದೇಶ ವಿರೋಧಿ ನೀತಿಗಳನ್ನು ವಾಪಾಸ್ಸು ಪಡೆಯುವ ಹಕ್ಕೊತ್ತಾಯಗಳು ಹೆಚ್ಚುವಂತೆ ಮಾಡಬೇಕು. ಇಂತಹ ಕಾರ್ಯಗಳಲ್ಲಿ ಬುದ್ದಿಜೀವಿ ವರ್ಗದ ಪಾತ್ರ ಬಹಳ ಇದೆ. ಅದನ್ನು ಮನಗಾಣಬೇಕು.
ಅಂತಹ ಕಾರ್ಯಸೂಚಿಗಳನ್ನು ಇಟ್ಟುಕೊಂಡು ಅದರ ಆಧಾರದಡಿ ಜನಪರ ಸಂಘಟನೆಗಳು, ಇನ್ನಿತರ ಜನಪರ ಪ್ರಜಾತಾಂತ್ರಿಕ ಶಕ್ತಿಗಳು ಒಗ್ಗೂಡುವಂತಾಗಬೇಕು. ನಾಳೆ ಯಾವುದೇ ಸರಕಾರ ಬಂದರೂ ಇಂತಹ ಸಂಘಟಿತ ಜನಪರ ಶಕ್ತಿಗಳನ್ನು ಕಡೆಗಣಿಸಿ ಆಕ್ರಮಣಕಾರಿಯಾಗಿ ವರ್ತಿಸದಂತಹ ಒತ್ತಡ ನಿರ್ಮಿಸುವಂತಾಗಬೇಕು. ಜನರು ತಾವೇ ತಿರ್ಮಾನಿಸಿಕೊಳ್ಳುತ್ತಾರೆ. ಅವರಿಗೆ ಇಂತಹ ಪಕ್ಷಗಳನ್ನೇ ಗೆಲ್ಲಿಸಿ ಇಂತಹ ವ್ಯಕ್ತಿಗಳನ್ನೇ ಬೆಂಬಲಿಸಿ ಎಂದೆಲ್ಲಾ ಕರೆ ಕೊಡೋದೂ ಬುದ್ದಿಜೀವಿ ವರ್ಗದ ಪಾತ್ರವಲ್ಲ. ಅದು ತಮ್ಮ ಕ್ರೆಡಿಬಿಲಿಟಿಗೇ ದಕ್ಕೆ ತಂದುಕೊಂಡಂತಾಗುತ್ತದೆ. ಜನಸಾಮಾನ್ಯರಲ್ಲಿ ಅನುಮಾನಗಳನ್ನು ಹೆಚ್ಚಿಸಿ ಅಂತರ ಹೆಚ್ಚಿಸುತ್ತಾ ಅವರಿಂದ ಜನಪರ ಬುದ್ದಿಜೀವಿ ಪ್ರಗತಿಪರ ಸಮೂಹವನ್ನು ದೂರ ಮಾಡುತ್ತದೆ.
ಇರೋ ಸಾಮಾಜಿಕ ಆರ್ಥಿಕ ರಾಜಕೀಯ ಪರಿಸ್ಥಿತಿಗಳನ್ನು, ಅದರ ಒಳಹೂರಣ ಹಾಗೂ ಒಳಸುಳಿಗಳನ್ನು ಜನರ ಮುಂದೆ ಚರ್ಚೆಯಾಗುವಂತೆ ತೆರದಿಡಬೇಕಾದುದು ಜನಪರ ಪ್ರಗತಿಪರ ಬುದ್ದಿಜೀವಿ ವರ್ಗ ಹಾಗೂ ಸಮಾಜಮುಖಿಗಳು ಮಾಡಬೇಕಾದ ಕರ್ತವ್ಯವಾಗಿದೆ. ಇಂದಿನ ಸಂದರ್ಭದಲ್ಲಿ ಇದಕ್ಕೆ ವಿಶೇಶ ಮಹತ್ವವಿದೆ.
ಜನಪರ ನೀತಿಸೂತ್ರಗಳನ್ನು, ಇದುವರೆಗಿನ ಜನವಿರೋಧಿ ನೀತಿಗಳ ತಿದ್ದುಪಡಿಗಳು ರದ್ದತಿಗಳು, ಜನಪರ ಶರತ್ತುಗಳನ್ನು..... ಮುಂದಿಟ್ಟು ಅವುಗಳು ಚುನಾವಣಾ ವಿಷಯವಾಗುವಂತೆ ಮಾಡಬೇಕಾದ ಅಗತ್ಯ ಬಹಳವಿದೆ. ಇವುಗಳನ್ನು ಮಾಡದೇ ಚುನಾವಣಾ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರುವ ಯಾವುದೇ ರಾಜಕೀಯ ಯಾತ್ರೆಯನ್ನಾಗಲೀ, ಚುನಾವಣಾ ರಾಜಕಾರಣ ಮಾತ್ರ ಮಾಡುವ ಯಾವುದೇ ರಾಜಕೀಯ ಪಕ್ಷಗಳನ್ನಾಗಲೀ ಜನಪರವಾಗಿರುವ ಶರತ್ತುಗಳಿಲ್ಲದೇ ಏಕಪಕ್ಷೀಯವಾಗಿಯೋ ಆಂಶಿಕವಾಗಿಯೋ ಬೆಂಬಲಿಸುವ ಕಾರ್ಯ ಜನಸಾಮಾನ್ಯರಿಗೆ ಉಪಯೋಗಕರವಾಗದು. ಅದು ಜನರಲ್ಲಿ ಭ್ರಮೆ ಹುಟ್ಟಿಸುವ ಕಾರ್ಯವಾಗಬಹುದು ಅಷ್ಟೇ. ಅಪಾಯಕಾರಿಯೂ ಕೂಡ. ಅಂತಿಮವಾಗಿ ಫ್ಯಾಸಿಸ್ಟ್ ವ್ಯವಸ್ಥೆಯನ್ನೇ ಮತ್ತಷ್ಟು ಬಲಪಡಿಸುವಂತಾಗುತ್ತದೆ ಅಷ್ಟೆ.
ಅದು ಬಿಟ್ಟು ಈ ಸಂದರ್ಭದಲ್ಲಿ ಯಾವುದೋ ಒಂದು ಚುನಾವಣಾ ರಾಜಕಾರಣ ಮಾತ್ರ ಮಾಡುವ ಪಕ್ಷ ಅಧಿಕಾರಕ್ಕೆ ಬರೋದರಿಂದ ಹಾಲಿ ಸರಕಾರ ಅನುಸರಿಸಿದ ನೀತಿಗಳು ಬದಲಾಗಿ ಜನಸಾಮಾನ್ಯರು ನಿರಾಳವೋ ಇಲ್ಲವೇ ಉಸಿರಾಡಲು ಅನುಕೂಲವೋ ಆಗಿಬಿಡುತ್ತದೆ ಎಂಬ ಅವಾಸ್ತವಗಳಿಗೆ ಜೋತುಬಿದ್ದರೆ ಆಗಬಹುದಾದ ಅಪಾಯಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಕಾಲವಿದು.
೧೩/೦೨/೨೦೨೩. - ನಂದಕುಮಾರ್ ಕುಂಬ್ರಿ ಉಬ್ಬು
nandakumarnandana@gmail.com
Comments
Post a Comment