Skip to main content

ಹಿಂಡೆನ್ ಬರ್ಗ್ ವರದಿ ಬಿಚ್ಚಿಟ್ಟ ಇಂಡಿಯಾದ ಆರ್ಥಿಕತೆಯ ಅಪಾಯಗಳು#hindenburg#adani group#indian economy#share market

ಹಿಂಡೆನ್ ಬರ್ಗ್ ವರದಿ ಬಿಚ್ಚಿಟ್ಟ ಇಂಡಿಯಾದ ಆರ್ಥಿಕತೆಯ ಗಂಭೀರ ಅಪಾಯಗಳು.

     


                                                                       
-ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು

                                             ಮಿಂಚಂಚೆ: nandakumarnandana67@gmail.com

ಇಂಡಿಯಾದ ಆರ್ಥಿಕ ವ್ಯವಸ್ಥೆಯು ಕೊಳೆತು ನಾರುತ್ತಾ ಹುಳಗಳನ್ನು ಉದುರಿಸಲು ತೊಡಗಿ ಬಹಳ ಕಾಲವಾಗಿದೆ. ಪ್ರಧಾನವಾಗಿ ನವವಸಾಹತುಶಾಹಿ ನೀತಿಯ ಅಳವಡಿಕೆಯು ತೀವ್ರವಾಗುತ್ತಾ ಹೋದ ಹಾಗೆಯೇ ಇದು ಹೆಚ್ಚಾಗುತ್ತಾ ಸಾಗಿದೆ. ಆಂಗ್ಲದಲ್ಲಿ crony capitalism  ಎಂದು ಕರೆಯಲ್ಪಡುವ ಆಪ್ತಬಂಡವಾಳಶಾಹಿ ಕೂಟಗಳ ಅವ್ಯವಹಾರಗಳು ಹೆಚ್ಚಾಗುತ್ತಾ ಸಾಗಿದವು. ಅದರಲ್ಲಿ ಟಾಟಾ ಬಿರ್ಲಾ ಕೂಟ, ಧೀರೂಭಾಯಿ ಅಂಬಾನಿ ಕೂಟ, ಅಂಬಾನಿ ಅದಾನಿ ಕೂಟ ಪ್ರಮುಖವಾದವುಗಳು. ಈ ಕೂಟಗಳು ಸರ್ಕಾರ ಹಾಗೂ ಪ್ರಧಾನಿ ಸೇರಿದಂತೆ ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ಯಾರಿರಬೇಕೆಂದು ನಿರ್ಧರಿಸುವ ಕೂಟಗಳಾಗಿದ್ದವು. 1947ರ ಕಾಲದಿಂದಲೂ ಟಾಟಾ ಬಿರ್ಲಾ ಬಂಡವಾಳಶಾಹಿ ಕೂಟ ಬಹಳ ಹೆಚ್ಚು ಕಾಲ ಇಂಡಿಯಾದ ರಾಜಕೀಯ ಹಾಗೂ ಆರ್ಥಿಕ ಆಗುಹೋಗುಗಳ ಮೇಲೆ ಪ್ರಭಾವಿಸುತ್ತಾ ಹಾಗೇನೆ ನಿಯಂತ್ರಿಸುತ್ತಾ ಬಂದಿತ್ತು. ಉದಾಹರಣೆಗೆ ಕರ್ನಾಟಕದಲ್ಲಿ ಸಾಮಾಜಿಕ ಻ಅರಣ್ಯದ ಹೆಸರಿನಲ್ಲಿ ಯೋಜನೆ ರೂಪಿಸಿ ಬಿರ್ಲಾನ ಬಟ್ಟೆ ಉದ್ದಿಮೆಗೆ ಪರಿಸರ ಹಾಗೂ ಅಂತರ್ಜಲಕ್ಕೆ ಮಾರಕವಾದ ಅಕೇಶಿಯಾ ನೀಲಗಿರಿಯಂತಹ ಕಚ್ಚಾ ವಸ್ತುಗಳನ್ನು ಸಾರ್ವಜನಿಕ ಹಣದಲ್ಲಿ ಬೆಳೆದು ಕೊಡಲಾಗಿತ್ತು. ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ದೇಶಾದ್ಯಂತ ನೋಡಬಹುದು. ಕೃಷಿ ಉತ್ಪನ್ನವಾದ ಕಾಫಿ, ಟೀ, ತಂಬಾಕು, ಕೋಕೋಗಳಂತಹ ಬೆಳೆಗಳನ್ನು ಕೈಗಾರಿಕಾ ಪಟ್ಟಿಗೆ ಸೇರಿಸಿ ಟಾಟಾರಂತಹ ಭಾರಿ ಕಾರ್ಪೋರೇಟುಗಳಿಗೆ ದೇಶದ ಹತ್ತಾರು ಸಾವಿರ ಹೆಕ್ಟೇರುಗಳ ಭೂಮಿಯ ಮೇಲೆ ಮಾಲಿಕತ್ವ ಹೊಂದಲು ಕಾನೂನಾತ್ಮಕವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಆಗಿನ ಸಂದರ್ಭ ಈಗಿನಂತೆ ಬಿಕ್ಕಟ್ಟಿನ ಪರಾಕಾಷ್ಟೆಯ ಕಾಲವಾಗಿಲ್ಲದೇ ಇದ್ದುದರಿಂದ ಈಗಿನಷ್ಟು ಪ್ರಮಾಣದಲ್ಲಿ ಬಾರಿ ಕಾರ್ಪೋರೇಟುಗಳ ಕೂಟಗಳ ಅಕ್ರಮಗಳು, ಹಗರಣಗಳು ಕಾಣಿಸಿಕೊಂಡಿರಲಿಲ್ಲ ಻ಅಷ್ಟೆ.

 ಅದರಲ್ಲಿ 1992 ರ ಕಾಲದ ಹರ್ಷದ್ ಮೆಹ್ತಾ ಪ್ರಕರಣ, ನಂತರದ ಗಣಿ ಹಗರಣ,  ದೂರಸಂಪರ್ಕ  ಸ್ಪೆಕ್ಟ್ರಂ ಹಗರಣ, ವ್ಯಾಪಂ ಹಗರಣ, ಶಾರದಾ ಚಿಟ್ ಫಂಡ್ಸ್ ಹಗರಣ, ಸತ್ಯಂ ಕಂಪ್ಯೂಟರ್ಸ್ ಹಗರಣಹೀಗೆ ದೇಶ ಹಾಗೂ ರಾಜ್ಯಗಳಲ್ಲಿನ ಹಗರಣಗಳು ಹಾಗೂ ಅಕ್ರಮಗಳ ಉದ್ದದ ಪಟ್ಟಿಯನ್ನೇ ಮಾಡಬಹುದು. ಹರ್ಷದ್ ಮೆಹ್ತಾ ಪ್ರಕರಣ ಕೆಲವು ಸಾವಿರ ಕೋಟಿಗಳಾದರೆ ನಂತರದವು ಹತ್ತಾರು ಸಾವಿರ ಕೋಟಿಗಳು ಹಾಗೂ ಹಲವಾರು ಲಕ್ಷ ಕೋಟಿಗಳದಾಗಿವೆ.

ಅರ್ದಕ್ಕೆ ಕಾಲೇಜು ಶಿಕ್ಷಣ ಬಿಟ್ಟ ಒಬ್ಬ ಸಾಮಾನ್ಯ ಬಂಡವಾಳಶಾಹಿಯಾಗಿದ್ದ ಻ಗೌತಮ್ ಅದಾನಿ ರಾಜೀವ್ ಗಾಂಧಿಯ ಕಾಲದ ಎಕ್ಸಿಂ (EXIM) ನೀತಿಯ ಲಾಭ ಪಡೆದು ಆಮದು ರಫ್ತುಗಳ ದೊಡ್ಡ ಕಾರ್ಪೋರೇಟು ಆದರು. ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗುವುದರೊಂದಿಗೆ ಇಂಡಿಯಾದ ಅಗ್ರಗಣ್ಯ ಕಾರ್ಪೋರೇಟ್ ಆದರು. ಪಾಲಿಮರ್, ವಜ್ರದ ವ್ಯಾಪಾರಗಳು, ಆಮದು ರಫ್ತು ಜೊತೆಗೆ ಹಲವಾರು ಉದ್ದಿಮೆಗಳ ಒಡೆಯರೆಂದು ಗುರುತಿಸಲ್ಪಟ್ಟರು. ಏಷಿಯಾದ ಻ಅತೀ ದೊಡ್ಡ ಸಂಪತ್ತಿನ ಒಡೆಯನೆಂದು ಫೋರ್ಬ್ಸ್ ಪಟ್ಟಿಮಾಡಿತ್ತು. 2013ರಲ್ಲಿ ಇಂಡಿಯಾದ ಅತೀ ದೊಡ್ಡ ಬಿಲಿಯಾಧಿಪತಿಗಳಲ್ಲಿ 22ನೇ ಸ್ಥಾನದಲ್ಲಿ ಗೌತಮ್ ಅದಾನಿ ಇದ್ದಾರೆ ಎಂದು ಫೋರ್ಬ್ಸ್ ಪತ್ರಿಕೆ ಪಟ್ಟಿ ಮಾಡಿತ್ತು. 2022ರಲ್ಲಿ ಜಗತ್ತಿನ ಅತೀ ದೊಡ್ಡ ಶ್ರೀಮಂತರ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರಿ ಅಮೇರಿಕ ಮೂಲದ ಇದೀಗ ಹಿಂಡೆನ್ ಬರ್ಗ್ ಸಂಶೋಧನಾ ವರದಿಯ ನಂತರ ಸಂಪತ್ತು ಇಳಿಕೆಯಾಗಿ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ.

2014ರ ಚುನಾವಣೆ ಸಂದರ್ಭದಲ್ಲಿ ತಮ್ಮ ಬಿಜೆಪಿ ಪಕ್ಷದಲ್ಲೇ ಆದರಣೆ ಕಳೆದುಕೊಂಡಿದ್ದ ನರೇಂದ್ರ ಮೋದಿಯನ್ನು ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿಸುವುದರಲ್ಲಿ ಅದಾನಿಯದು ಒಂದು ಪ್ರಧಾನ ಪಾತ್ರವಾಗಿತ್ತು. ಮೋದಿಯನ್ನು ಭಾರಿ ಬಹುಮತದಿಂದ ಪ್ರಧಾನಿ ಪಟ್ಟದಲ್ಲಿ ಕುಳ್ಳಿರಿಸಲು 30000 ಕೋಟಿಗಳಿಂದ 40000 ಕೋಟಿಗಳಷ್ಟು ಹಣವನ್ನು ಹೂಡಲಾಗಿತ್ತು ಎಂದೆಲ್ಲಾ ವರದಿಗಳಿದ್ದವು. ಇಷ್ಟೊಂದು ಅಗಾಧ ಮೊತ್ತದ ಹಣವನ್ನು ಹೂಡಿದ್ದರಲ್ಲಿ ಅಂಬಾನಿ ಅದಾನಿ ಕೂಟದ ಪಾತ್ರ ಪ್ರಧಾನವಾಗಿತ್ತು ಎನ್ನುವುದೂ ಕೂಡ ಸುದ್ಧಿಯಾಗಿತ್ತು. ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಗಳ ಕಾಲ ಻ಅಂತ್ಯಗೊಂಡು ಭಾರಿ ಬಹುಮತದ ಏಕಪಕ್ಷದ ಸರ್ಕಾರದ ಕಾಲ ಆರಂಭವಾಯಿತು. ಇದರೊಂದಿಗೆ ಮೊದಲಿನಿಂದ ಒಂದಷ್ಟು ಸ್ವಾಯತ್ತ, ಅರೆ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ರದ್ದುಗೊಳಿಸುವುದು, ಸಡಿಲಗೊಳಿಸುವುದು, ಇದ್ದ ಹಲ್ಲುಗಳನ್ನೂ ಕೂಡ ಕಿತ್ತು ಹಾಕುವುದು, ನಿಯಮಗಳ ನೇರ ಉಲ್ಲಂಘನೆಗಳಂತಹವುಗಳು ಅಧಿಕವಾದವು. ಇದಕ್ಕೆ ಯೋಜನಾ ಆಯೋಗ, ಚುನಾವಣಾ ಆಯೋಗ, ರಿಜರ್ವ್ ಬ್ಯಾಂಕ್, ಸಾರ್ವಜನಿಕರಂಗದ ಬ್ಯಾಂಕುಗಳು, ವಿಮಾ ನಿಗಮಗಳು, ಗಣಿ ನಿಗಮಗಳು, ಶೇರು ಮಾರುಕಟ್ಟೆಯ ಻ಕ್ರಮಗಳನ್ನು ತಡೆಯಬೇಕಾದ ಸೆಬಿ (SEBI) ಇತ್ಯಾದಿಗಳು ತಮ್ಮ ಮೊದಲಿನ ಕಾರ್ಯ ನಿರ್ವಹಣೆಯನ್ನೂ ಕೂಡ ಮಾಡದಂತೆ ಎಲ್ಲವನ್ನೂ ಪ್ರಧಾನಿ ಕಾರ್ಯಾಲಯದ ಻ಅಣತಿಯಂತೆಯೇ ನಡೆಸುವಂತೆ ಮಾಡಲಾಯಿತು. ಅದುವರೆಗೂ ಪಾಲಿಸುತ್ತಿದ್ದ ನೀತಿ ನಿಯಮಾವಳಿಗಳನ್ನು ಕೂಡ ಪಾಲಿಸದಂತೆ ಮಾಡಲಾಯಿತು. ಪ್ರಧಾನವಾಗಿ ಇದರ ಎಲ್ಲಾ ಲಾಭ ಻ಅಂಬಾನಿ  ಹಾಗೂ ಅದಾನಿ ಕೂಟಕ್ಕೆ ಆಗುತ್ತಾ ಬಂದಿರುವುದು ಬಹುತೇಕರಿಗೆ ಮೇಲುಮಟ್ಟದಲ್ಲಿಯೇ ಕಾಣುತ್ತಿದೆ.

ಇದರಲ್ಲಿ ಅದಾನಿ ಕುಟುಂಬ ಮೋದಿ ಸರ್ಕಾರದ ನೇರ ಬೆಂಬಲದೊಂದಿಗೆ ಅತ್ಯಂತ ಆಕ್ರಮಣಕಾರಿಯಾಗಿ ಇಂಡಿಯಾದ ಸಾರ್ವಜನಿಕ ಸಂಪತ್ತಿನ ಸ್ವಾಧೀನತೆಯಲ್ಲಿ ದಾಪುಗಾಲಿಟ್ಟು ಮುಂದೆ ಸಾಗುತ್ತಿದೆ. ಗಣಿಗಾರಿಕೆ, ವಿಮಾನ ನಿಲ್ದಾಣ, ಬಂದರು, ವಿದ್ಯುತ್, ರೈಲ್ವೆ, ವಿಶೇಷ ಆರ್ಥಿಕ ವಲಯ, ಸೌರವಿದ್ಯುತ್, ಮೂಲ ಸೌಕರ್ಯ ಅಭಿವೃದ್ಧಿ, ನೀರು ಇತ್ಯಾದಿ ಕ್ಷೇತ್ರಗಳಲ್ಲಿ ತನ್ನ ಹಿಡಿತ ಸಾಧಿಸುತ್ತಾ ಸಾಗುತ್ತಿದೆ. ಇದರ ಭಾಗವಾಗಿ ಕರ್ನಾಟಕದ ಉಡುಪಿಯ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ, ಮಂಗಳೂರಿನ ಻ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ವಶಕ್ಕೆ ಹೋಗಿದೆ. ರಾಜ್ಯದ ಹಲವಾರು ಸಣ್ಣ ಮದ್ಯಮ ಬಂದರುಗಳು ಅದಾನಿ ವಶವಾಗತೊಡಗಿವೆ. ನೂರಾರು ಏಕರೆ ಭೂಮಿ ಪಡೆದು ರಾಜ್ಯದಲ್ಲಿ ಸೌರ ವಿದ್ಯುತ್ ಕ್ಷೇತ್ರದಲ್ಲಿ ಅದಾನಿ ತೊಡಗುತ್ತಿದ್ದಾರೆ.


ಪಕ್ಕದ ಕೇರಳದಲ್ಲಿ ಅದಾನಿ ಸಮೂಹ ಅದರ ರಾಜಧಾನಿಯಾದ ತಿರುವನಂತಪುರದ ವಿಮಾನನಿಲ್ದಾಣವನ್ನು ವಶಪಡಿಸಿಕೊಂಡಿದೆ. ಜೊತೆಗೆ ವಿಜಿಂಗಮ್ ಬಂದರು ನಿರ್ಮಾಣ ಹಾಗೂ ನಿರ್ವಹಣೆಯನ್ನು ಅದಾನಿ ಸಮೂಹ ಮಾಡುತ್ತಿದೆ. ಜನರು ಹಾಗೂ ಪರಿಸರದ ಮೇಲೆ ಅದರಿಂದಾಗುವ ಮಾರಕ ಹಾನಿಯ ವಿರುದ್ಧ ನಡೆಯುತ್ತಿರುವ ಜನಹೋರಾಟಗಳನ್ನು ಅಲ್ಲಿನ ಎಡರಂಗ ಸರ್ಕಾರ ಹಾಗೂ ಒಕ್ಕೂಟ ಸರ್ಕಾರದ ಬೆಂಬಲದೊಂದಿಗೆ ಹಲವಾರು ರೀತಿಗಳಲ್ಲಿ ಹತ್ತಿಕ್ಕಲಾಗುತ್ತಿದೆ. ಎಡರಂಗ ಸರ್ಕಾರ ಅದಾನಿ ಸಮೂಹದ ಪರವಾಗಿ ನಿಂತು ಯುಎಪಿಎ ಯಂತಹ ಕರಾಳ ಕಾಯಿದೆಗಳನ್ನು ಹೇರಿ ನೂರಾರು ಹೋರಾಟಗಾರರ ಮೇಲೆ ಪ್ರಕರಣಗಳನ್ನು ದಾಖಲಿಸಿ ಬಂಧಿಸಿಟ್ಟಿದೆ. ಜೊತೆಗೆ ಯೂನಿಯನ್ ಸರ್ಕಾರದ ಅರೆಸೈನಿಕ ಪಡೆಗಳನ್ನು ವಿಜಿಂಗಮ್ ಹೋರಾಟವನ್ನು ದಮನಿಸಲು ಕರೆಸಿಕೊಂಡಿದೆ. ಇದನ್ನೆಲ್ಲಾ ಯುಎಪಿಎ ಯಂತಹ ಕರಾಳ ಕಾಯ್ದೆಗಳನ್ನು ತಾವು ವಿರೋಧಿಸುತ್ತೇವೆ ಫೆಡರಲ್ ನೀತಿಗಳನ್ನು ತಾವು ಅನುಸರಿಸುತ್ತೇವೆ ಯೂನಿಯನ್ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡಲು ನಾವು ಒಪ್ಪುವುದಿಲ್ಲ ಎಂದೆಲ್ಲಾ ಹೇಳಿಕೊಳ್ಳುತ್ತಲೇ ಈ ಎಡರಂಗ ಸರ್ಕಾರ ಮಾಡುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಇದೀಗ ಅಮೇರಿಕ಻ಮೂಲದ ಹಿಂಡೆನ್ಬರ್ಗ್ ಸಂಶೋಧನಾ ಸಂಸ್ಥೆಯು ಕಳೆದ ಎರಡು ವರುಷಗಳಿಂದ ತನಿಖೆಯನ್ನು ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅದಾನಿ ಸಮೂಹದ ಭಾರಿ ಆಕ್ರಮಗಳನ್ನು ಪಟ್ಟಿ ಮಾಡಿ ವರದಿಯೊಂದನ್ನು ಬಿಡುಗಡೆ ಮಾಡಿರುವುದು ಸಾಕಷ್ಟು ಜನರಿಗೆ ತಿಳಿದಿದೆ. ಅದರಿಂದಾಗಿ ಅದಾನಿಯ ಸುಮಾರು ನಾಲ್ಕು ಲಕ್ಷ ಕೋಟಿಗಳಿಗೂ ಮೀರಿದ ಸಂಪತ್ತು ಕರಗಿ ಹೋಗಿರುವುದು ಕೂಡ ತಿಳಿದಿರುವ ವಿಚಾರ.

ಈ ವರದಿಯಲ್ಲಿ ಒಂದೊಂದನ್ನೇ ಗುರುತಿಸುತ್ತಾ ಪಟ್ಟಿ ಮಾಡುತ್ತಾ ಹೋಗಲಾಗಿದೆ.

ಮೊದಲನೆಯದಾಗಿ ಶೇರು ಬೆಲೆಗಳನ್ನು ಶೇರುಮಾರುಕಟ್ಟೆಯಲ್ಲಿ ಕೃತಕವಾಗಿ ಏರುವಂತೆ ಮಾಡಿ ಹಾಗೂ ಹಲವಾರು ವರುಷಗಳಿಂದ ಲೆಕ್ಕಪತ್ರ ಹಗರಣ ನಡೆಸುತ್ತಾ 17.8 ಟ್ರಿಲಿಯನ್ (218 ದಶಲಕ್ಷ ಻ಅಮೇರಿಕನ್ ಡಾಲರುಗಳು) ಹಗರಣವನ್ನು ನಡೆಸಿದೆ.

ಕಳೆದ ಮೂರು ವರುಷಗಳಿಂದ ಗೌತಮ್ ಅದಾನಿ ಶೇರು ಮಾರುಕಟ್ಟೆಯಲ್ಲಿ ತನ್ನ ಸಮೂಹದ ಶೇರುಗಳ ಬೆಲೆಯನ್ನು ಕೃತಕವಾಗಿ ಏರಿಸಿ ಒಟ್ಟು ಸುಮಾರು 120 ದಶಲಕ್ಷ ಻ಅಮೇರಿಕನ್ ಡಾಲರುಗಳನ್ನು ಕೂಡಿಸಿಕೊಂಡಿದೆ. ಅದಾನಿ ಸಮೂಹದ ಏಳು ಕಂಪನಿಗಳ ಶೇರುಗಳ ಬೆಲೆಗಳು ಸರಾಸರಿ ಶೇಕಡಾ 819ರಷ್ಟು ಏರಿಕೆಯನ್ನು ಈ ಕಾಲದಲ್ಲಿ ಕಾಣಿಸಲಾಗಿದೆ. ಅದಾನಿ ಸಮೂಹವು ಸಾರ್ವಜನಿಕ ಮಿತ ಕಂಪನಿಯೆಂದು ನೊಂದಾಯಿಸಿಕೊಂಡಿದ್ದರೂ ಅದು ಅಪ್ಪಟ ಻ಅದಾನಿ ಕುಟುಂಬದ ಕಂಪನಿಯಾಗಿದೆ ಅದರ ಇಪ್ಪತ್ತೆರಡು ಅತ್ಯುನ್ನತ ಹುದ್ದೆಗಳಲ್ಲಿ ಎಂಟು ಜನರು ಅದಾನಿ ಕುಟುಂಬದವರೇ ಆಗಿದ್ದಾರೆ. ಎಲ್ಲಾ ಕೀಲಕ ತೀರ್ಮಾನಗಳನ್ನು ಅದಾನಿ ಕುಟುಂಬದ ಕೆಲವೇ ಜನರು ತೆಗೆದುಕೊಳ್ಳುತ್ತಾರೆ.

ಅದಾನಿ ಕುಟುಂಬವು ಮಾರಿಷಸ್, ಯುಎಇ, ಕ್ಯಾರಿಬಿಯನ್ ದ್ವೀಪಗಳಲ್ಲಿ ಶೆಲ್ ಕಂಪನಿಗಳ ಮೂಲಕ ಹಣ ಬಿಳಿ ಮಾಡುವ ಮನಿ ಲಾಂಡರಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಆರೋಪಣೆಗಳಿವೆ. ಅಕ್ರಮಗಳನ್ನು ತನಿಖೆ ಮಾಡುವ ನಾಲ್ಕು ಪ್ರಮುಖ ಸರ್ಕಾರಿ ಸಂಸ್ಥೆಗಳು ಈ ಆರೋಪಣೆಗಳನ್ನು ಮಾಡಿದ್ದಲ್ಲದೇ ತೆರಿಗೆದಾರರ ಅಂದಾಜು 17 ದಶಲಕ್ಷ ಅಮೇರಿಕನ್ ಡಾಲರುಗಳಷ್ಟು ಹಣವನ್ನು ಕಳ್ಳತನ ಹಾಗೂ ಭ್ರಷ್ಟಾಚಾರಗಳ ಮೂಲಕ ಸಂಗ್ರಹಿಸಿದೆ ಎಂದೂ ಹೇಳಿದೆ.




ಗೌತಮ್ ಅದಾನಿಯ ಕಿರಿಯ ಸಹೋದರ ರಾಜೇಶ್ ಅದಾನಿ, ಸಹೋದರಿಯ ಗಂಡ ಸಮೀರ್ ವೋರಾ ವಜ್ರದ ವ್ಯಾಪಾರದಲ್ಲಿ ಕೃತಕ ಕಂಪನಿಗಳನ್ನು ತೊಡಗಿಸಿದ್ದರು ಹಾಗೂ ಅದರ ಮೂಲಕ ಹಣಕಾಸು ಅಕ್ರಮಗಳನ್ನು ನಡೆಸಿದ್ದರು ಎಂದು ಆದಾಯ ತನಿಖಾ ನಿರ್ದೇಶಾನಲಯ (DRI) ಹೇಳಿತ್ತು. ಅಲ್ಲದೇ ರಾಜೇಶ್ ಅದಾನಿ ಕನಿಷ್ಟ ಎರಡು ಬಾರಿಯಾದರೂ ಅಕ್ರಮ ಹಾಗೂ ತೆರಿಗೆ ಮೋಸ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅದಾನಿ ಕುಟುಂಬವು ಆತನನ್ನೇ ಅದಾನಿಯ ಆಸ್ಟ್ರೇಲಿಯಾದ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕನನ್ನಾಗಿ ಮಾಡಿತ್ತು. ವಿನೋದ್ ಅದಾನಿ ಮತ್ತು ಆತನ ಹತ್ತಿರದ ಸಹಾಯಕರು ಮಾರಿಷಸ್ ನಲ್ಲೇ 38 ಕೃತಕ ಕಂಪನಿಗಳ ನಿಯಂತ್ರಣವನ್ನು ಹೊಂದಿದೆ. ಅದೇ ರೀತಿ ಸೈಪ್ರಸ್, ಯುಎಇ, ಸಿಂಗಾಪುರ್, ಮತ್ತಿತರ ಕ್ಯಾರಿಬಿಯನ್ ದ್ವೀಪಗಳಲ್ಲಿ ಕೂಡ ಹಲವಾರು ಕೃತಕ ಕಂಪನಿಗಳನ್ನು ಈತ ಮತ್ತು ಈತನ ಸಹಾಯಕರು ನಿಯಂತ್ರಿಸುತ್ತಿದ್ದಾರೆ. ಈ ಕಂಪನಿಗಳಿಗೆ ಸರಿಯಾದ ಉದ್ಯೋಗಿಗಳಾಗಲೀ, ಪ್ರತ್ಯೇಕ ವಿಳಾಸವಾಗಲೀ, ಪ್ರತ್ಯೇಕ ದೂರವಾಣಿ ಸಂಖ್ಯೆಯಾಗಲೀ ಸರಿಯಾದ ಜಾಲ ವಿಳಾಸವಾಗಲೀ ಇಲ್ಲ. ಹೀಗೆಲ್ಲಾ ಇದ್ದರೂ ಈ ಕೃತಕ ಕಂಪನಿಗಳು ಬಿಲಿಯಾಂತರ ಡಾಲರುಗಳನ್ನು ಯಾವುದೇ ಸರಿಯಾದ ವ್ಯವಹಾರ ಮಾಹಿತಿ ತೊರಿಸದೇ ಇಂಡಿಯಾದಲ್ಲಿರುವ ಅದಾನಿ ಸಮೂಹದ ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿ ನೊಂದಾಯಿತವಾಗಿರುವ ಸಂಸ್ಥೆಗಳಿಗೆ ರವಾನಿಸಿವೆ.

ಇಷ್ಟೇ ಅಲ್ಲದೇ ಅದಾನಿ ಸಮೂಹದ ಕಂಪನಿಗಳ ಬಹುತೇಕ ಶೇರು ಮಾಲಿಕರು ಅದಾನಿ ಕುಟುಂಬದವರೇ ಆಗಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಿದೆ. ಸೋರಿಕೆಯಾಗಿರುವ ಇಮೇಲ್  ಮಾಹಿತಿಯ ಪ್ರಕಾರ ಕೇತನ್ ಪರೇಕ್ ಎಂಬ ಕುಖ್ಯಾತ ಶೇರುದಲ್ಲಾಳಿಯ ಜೊತೆಗೂಡಿ ಅಕ್ರಮಗಳನ್ನು ಎಸಗಿ ಬಂಧನವನ್ನು ತಪ್ಪಿಸಿ ಪಲಾಯನ ಮಾಡಿರುವ ಧರ್ಮೇಶ್ ದೋಷಿ ಎಂಬ ಲೆಕ್ಕಪತ್ರಗಾರನ ಮೂಲಕ ಅದಾನಿ ಸಮೂಹ ವ್ಯವಹಾರ ನಡೆಸುತ್ತಿದೆ. ಶೇರುಗಳನ್ನು ಹಿಡಿದಿಟ್ಟುಕೊಂಡು ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಸೃಷ್ಟಿಸಿ ಅದರ ಮೂಲಕ ಶೇರು ಬೆಲೆಗಳು ಏರುವಂತೆ ಮಾಡಿ ಕೊಳ್ಳೆ ಲಾಭ ದೋಚುವ ಕಾರ್ಯವನ್ನು ಅದಾನಿ ಸಮೂಹವು ತಮ್ಮದೇ ಕೃತಕ ಕಂಪನಿಗಳು ಮಾಡಿದೆ.


ಕೇತನ್ ಪಾರೇಕ್ ನೊಂದಿಗಿನ ಸಹಕಾರ ಹಾಗೂ ವ್ಯವಹಾರ ಸಾಬೀತಾಗಿದ್ದರಿಂದಾಗಿ 2007ರಲ್ಲಿ ಅದಾನಿ ಸಮೂಹವನ್ನು  ಸೆಬಿ (SEBI) ನಿಷೇಧಕ್ಕೆ ಒಳಪಡಿಸಿತ್ತು. ನಂತರ ಅದನ್ನು ಬದಲಾಯಿಸಿ ದಂಡ ವಿಧಿಸುವ ಮಟ್ಟಕ್ಕೆ ಇಳಿಸಲಾಯಿತು. ಅದಾನಿ ಸಮೂಹವು ಕೇತನ್ ಪಾರೇಕ್  ಹಣಹೂಡಿಕೆ ಮೂಲಕ ಗುಜರಾತಿನ ಮುಂಡ್ರ ಬಂದರು ವ್ಯವಹಾರವನ್ನು ಆರಂಭಿಸಲು ಬಳಸಲಾಗಿತ್ತು ಎಂದು ಸೆಬಿಗೆ ಬರಹ ರೂಪದಲ್ಲಿ ಉತ್ತರಿಸಿತ್ತು ಕೂಡ.

ಅದಾನಿ ಸಮೂಹದ ಅದಾನಿ ಎಂಟರ್ ಪ್ರೈಸಸ್ ಹಾಗೂ ಅದಾನಿ ಟೋಟಲ್ ಗ್ಯಾಸ್ ನ ಲೆಕ್ಕ ಪತ್ರ ಪರಿಶೋಧಕರಾಗಿ ಸಹಿ ಮಾಡಿರುವವರು ವೃತ್ತಿಅನುಭವ ಇಲ್ಲದ 24 ಹಾಗೂ 23 ವಯಸಿನವರು. ಒಂದು ಪುಟ್ಟ ಕಚೇರಿಯನ್ನು ಹೊಂದಿದೆ ಎಂದು ತೋರಿಸಿರುವ ಶಾ ದಂಧಾರಿಯಾ ಇವರ ಸಂಸ್ಥೆ ಆಗಿದೆ.

ತನ್ನ ಮೇಲೆ ವಿಮರ್ಶೆ, ಟೀಕೆ, ಪ್ರಶ್ನೆ ಮಾಡುವ ಪತ್ರಕರ್ತರುಗಳ ಮೇಲೆ ಸರ್ಕಾರಗಳ ಮೇಲೆ ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹೇರಿ ಪ್ರಕರಣಗಳನ್ನು ದಾಖಲಿಸುವ, ಜೈಲಿಗೆ ಕಳಿಸುವ, ಇನ್ನಿತರ ಮಾರ್ಗಗಳ ಮೂಲಕ ಅವರುಗಳ ಸದ್ದಡಗಿಸುವ ಕಾರ್ಯವನ್ನುಅದಾನಿ ಸಮೂಹ ಮಾಡುತ್ತಿದೆ. ತನ್ನ ವಿರುದ್ಧ ಯಾವುದೇ ದನಿಗಳೂ ಕೂಡ ಹೂಡಿಕೆದಾರ ವಲಯದಿಂದಾಗಲೀ, ಪತ್ರಕರ್ತ ವಲಯದಿಂದಾಗಲೀ, ರಾಜಕೀಯ ವಲಯದಿಂದಾಗಲೀ ಬಾರದಂತೆ ಹಲವಾರು ರೀತಿಗಳಲ್ಲಿ ನೋಡಿಕೊಂಡು ಬರುತ್ತಿದೆ… ಅದಾನಿ ಸಮೂಹದ ಅವ್ಯವಹಾರಗಳ ಬಗ್ಗೆ ದನಿಯೆತ್ತಿದ ಕಾರಣಕ್ಕೆ ಪತ್ರಕರ್ತ ಪರಂಜಯ್ ಗುಹಾ ತಾಕುರ್ತಾ ರನ್ನು ಸುಳ್ಳು ಪ್ರಕರಣದಡಿ ಜೈಲಿಗೆ ತಳ್ಳಿದ್ದನ್ನು ಈ ವರದಿಯಲ್ಲಿ ಹೇಳಲಾಗಿದೆ. ಅದಾನಿ ಸಮೂಹದ ಏಳು ನೊಂದಾಯಿತ ಕಂಪನಿಗಳು ತಮ್ಮ ನಿಜವಾದ ಮಾರುಕಟ್ಟೆ ಮೌಲ್ಯಕ್ಕಿಂತಲೂ ಶೇಕಡಾ 85 ಕ್ಕಿಂತಲೂ ಹೆಚ್ಚು ಹೆಚ್ಚುವರಿ ಮೌಲ್ಯೀಕರಣ ಮಾಡಿಕೊಂಡಿವೆ…  ಹೀಗೆ ಅದಾನಿ ಸಮೂಹದ ಆರ್ಥಿಕ ಹಾಗೂ   ಸುಮಾರು ಬಹಳ ಗಂಭೀರವಾದ ವಿವರಗಳನ್ನು ಹಿಂಡೆನ್ ಬರ್ಗ್ ವರದಿ ನೀಡಿದೆ. ಅದಾನಿ ಸಮೂಹವು ಸುಮಾರು 578 ರಷ್ಟು ನೊಂದಾಯಿತ ಸಹಸಂಸ್ಥೆಗಳನ್ನು ತೆರಿಗೆ ಸ್ವರ್ಗ ಎನಿಸಿರುವ ದೇಶಗಳಲ್ಲಿ ಹೊಂದಿವೆ ಎಂಬ ವರದಿಯಿದೆ. ಇವುಗಳು ಕೃತಕ ಶೆಲ್ ಕಂಪನಿಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.


ಪ್ರಮುಖವಾಗಿ ಈ ವರದಿಯು ಅದಾನಿ ಸಮೂಹದ ಇಂಡಿಯಾದ ಹೊರಗಿನ ಶೇರು ವ್ಯವಹಾರಗಳನ್ನು ಆಧರಿಸಿ ಮಾತ್ರ ಮಾಡಲಾಗಿದೆ ಎಂದು ಹಿಂಡೆನ್ ಬರ್ಗ್ ಹೇಳಿಕೊಂಡಿದೆ.

ಇವೆಲ್ಲಾ ಒಂದುಕಡೆ ಇದ್ದರೆ ಅದಾನಿ ಸಮೂಹ ತನ್ನ ವ್ಯವವಹಾರಗಳನ್ನು ಸಾಲಗಳ ಮೇಲೆಯೇ ಬಹುತೇಕವಾಗಿ ಆಧರಿಸಿ ನಡೆಸುತ್ತಿದೆ ಎಂಬ ಕ್ರೆಡಿಟ್ ಸೈಟ್ಸ್ ಎಂಬ ಸಂಸ್ಥೆಯ ವರದಿ ಈ ಹಿಂದೆ ಬಂದಿತ್ತು. ಅದರಲ್ಲೂ ಇಂಡಿಯಾದ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗಳೇ ಅದಾನಿ ಸಮೂಹದ ಪ್ರಧಾನ ಹಣಕಾಸು ಮೂಲ ಹಾಗೂ ಹೂಡಿಕೆದಾರರೂ ಆಗಿದ್ದಾರೆ. ಅದರಲ್ಲೂ ಇಂಡಿಯಾದ ಅತೀ ದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿ ಸಮೂಹಕ್ಕೆ ಅತೀ ದೊಡ್ಡ ಹಣಕಾಸುಸಾಲ ಪೂರೈಕೆದಾರ ಹಾಗೂ ಹೂಡಿಕೆದಾರಿ ಸಂಸ್ಥೆಯಾಗಿದೆ ಎಂಬ ವರದಿಗಳಿವೆ. ಖಾಸಗೀ ಬ್ಯಾಂಕುಗಳು ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಪ್ರಮಾಣ ಕೇವಲ ಶೇ 2 ಆಗಿದೆ ಎಂಬ ವರದಿಗಳಿವೆ.

ಅಲ್ಲದೇ ಸಾಗರೋತ್ತರ ಕಂಪನಿಗಳೊಂದಿಗಿನ ವ್ಯವಹಾರಗಳ ಫಲಾನುಭವಿಗಳ ಸಾಚಾತನಗಳ ಬಗ್ಗೆ 2021ರ ಜೂನ್ ನಲ್ಲಿಯೇ ಒಂದಷ್ಟು ಸುದ್ಧಿಯಾದಾಗ ಅದರಿಂದಾಗಿ ಅದಾನಿ ಸಮೂಹದ ಶೇರುಗಳ ಬೆಲೆ ಕುಸಿತ ಕಂಡಿತ್ತು. ಕಲ್ಲಿದ್ದಲು ಬೆಲೆಯನ್ನು ಕೃತಕವಾಗಿ ಭಾರಿ ಮಟ್ಟಕ್ಕೆ ಏರಿಸಿ ಲಾಭ ದೋಚಿದ ಆರೋಪ ಕೂಡ ಅದಾನಿ ಸಮೂಹದ ಮೇಲೆ 2016ರಲ್ಲಿ ಬಂದಿತ್ತು. ಇದು 4.4 ಬಿಲಿಯನ್ ಅಮೇರಿಕನ್ ಡಾಲರುಗಳ ಹಗರಣವೆಂದು ಕರೆಸಿಕೊಂಡಿತ್ತು.

ಅದಾನಿ ಸಮೂಹಗಳ ಅಧ್ಯಕ್ಷ ಗೌತಮ್ ಅದಾನಿ ತನ್ನ ಸಮೂಹದ ಪ್ರಧಾನ ಹೂಡಿಕೆ ಅಂತರಾಷ್ಟ್ರೀಯ ಬಾಂಡ್ ಗಳ ಮೂಲಕ ಆಗುತ್ತಿದೆ. ಒಂಬತ್ತು ವರುಷಗಳ ಹಿಂದೆ ತನ್ನ ಶೇಕಡಾ 86ರಷ್ಟು ಹಣಕಾಸು ಸಾಲ ಸಾರ್ವಜನಿಕ ರಂಗದ ಬ್ಯಾಂಕುಗಳಿಂದ ಆಗುತ್ತಿತ್ತು. ಈಗ ಅದು ಶೇ 32 ಮಾತ್ರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. (ಭಾರಿ ಕಾರ್ಪೋರೇಟುಗಳ ಹತ್ತಾರು ಲಕ್ಷ ಕೋಟಿಗಳ ಸಾಲಗಳನ್ನು ಯೂನಿಯನ್ ಸರ್ಕಾರ ರೈಟ್ಆಫ್ (write off) ಹೆಸರಿನಲ್ಲಿ ಮನ್ನಾ ಮಾಡಿದ್ದನ್ನು ಗಮನಿಸಬೇಕು) ಅದೇ ವೇಳೆ ಅದಾನಿ ಸಮೂಹದ ಶೇರುಗಳ ಕುಸಿತದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್ ಐ ಸಿ ಇತ್ಯಾದಿ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗಳ ಶೇರುಗಳೂ ಕುಸಿತ ಕಂಡು ಹತ್ತಾರು ಸಾವಿರ ಕೋಟಿಗಳಷ್ಟು ದೊಡ್ಡ ನಷ್ಟಗಳನ್ನು ಅನುಭವಿಸಿವೆ.

ಹಿಂಡೆನ್ ಬರ್ಗ್ ವರದಿ ಹೊರಬಿದ್ದು ಅದು ಪ್ರಮುಖವಾದ ಎಂಬತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಮುಂದಿಟ್ಟ ನಂತರ ಅದಾನಿ ಸಮೂಹವು ಅದರ ವಿರುದ್ಧ ಕಾನೂನು ಕ್ರಮದ ಬೆದರಿಕೆ ಒಡ್ಡಿತ್ತು. ಅದನ್ನು ಸ್ವಾಗತಿಸಿದ ಹಿಂಡೆನ್ ಬರ್ಗ್ ಸಂಸ್ಥೆ ತಾನು ಕಾರ್ಯ ನಿರ್ವಹಿಸುತ್ತಿರುವ ಅಮೇರಿಕದಲ್ಲಿಯೇ ದಾವೆ ಹೂಡುವಂತೆ ಹೇಳಿ ತನ್ನ ವರದಿ ಸಾಕ್ಷ್ಯಾಧಾರಗಳನ್ನು ಆದರಿಸಿದೆ ಎಂದು ಸವಾಲು ಹಾಕಿದೆ. ತಾನು ಎತ್ತಿರುವ ಯಾವ ಪ್ರಶ್ನೆಗಳಿಗೂ ಉತ್ತರಿಸದೇ ಕಾನೂನು ಕ್ರಮದ ಬೆದರಿಕೆ ಒಡ್ಡಿರುವ ಅದಾನಿ ಸಮೂಹದ ನಡೆಯನ್ನು ಅದು ಟೀಕಿಸಿದೆ.

ಮೇಲ್ನೋಟದಲ್ಲಿಯೇ ಈ ಹಗರಣವು ದೇಶದ ಇದುವರೆಗಿನ ಅತೀ ದೊಡ್ಡ ಸಾರ್ವಜನಿಕ ಹಣಕಾಸು ಹಗರಣ ಹಾಗೂ ಅಪರಾಧಿ ಪ್ರಕರಣವಾಗಿ ಎದ್ದು ಕಾಣುತ್ತಿದೆ. ಇದರ ನಷ್ಟ ಅಂತಿಮವಾಗಿ ಈ ದೇಶದ ಜನಸಾಮಾನ್ಯರ ತಲೆಯ ಮೇಲೆ ಬಿದ್ದು ಅವರ ಕುತ್ತಿಗೆಯನ್ನು ಬಿಗಿಯತೊಡಗುತ್ತದೆ. ನವವಸಾಹತು ಕಾಲದ ಆಪ್ತ ಬಂಡವಾಳವಾದ (crony capitalism) ದ ನಡೆಗಳು ಜನಸಾಮಾನ್ಯರ ಬದುಕುಗಳಿಗೆ ಹೇಗೆಲ್ಲಾ ಸಂಚಕಾರ ತಂದಿಡುತ್ತವೆ ಎಂಬುದಕ್ಕೆ ಅದಾನಿ ಸಮೂಹ ಕೂಡ ಒಂದು ಉದಾಹರಣೆಯಾಗಿದೆ.

ಹಿಂಡೆನ್ ಬರ್ಗ್ ವರದಿಗೆ ಆಸಕ್ತರು ಈ ಲಿಂಕ್ ಮೂಲಕ ಸಂಪರ್ಕಿಸಬಹುದು https://hindenburgresearch.com/?p=2376

 

29-01-2023                                                  -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು

                                             ಮಿಂಚಂಚೆ: nandakumarnandana67@gmail.com

 

 


Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...