Skip to main content

ಆಕ್ರಮಣಕಾರಿಯಾಗುತ್ತಿರುವ ಆಡಳಿತ ವ್ಯವಸ್ಥೆ# ಪ್ರತಿಭಟಿಸುತ್ತಿರುವ ಕರ್ನಾಟಕದ ಜನತ# offensive ruling system#struggling people of karnataka

 

ಆಕ್ರಮಣಕಾರಿಯಾಗುತ್ತಿರುವ ಆಡಳಿತ ವ್ಯವಸ್ಥೆ…

ಪ್ರತಿಭಟಿಸುತ್ತಿರುವ ಕರ್ನಾಟಕದ ಜನತೆ…




                -ನಂದಕುಮಾರ್ ಕೆ. ಎನ್. 
ಕುಂಬ್ರಿಉಬ್ಬು              nandakumarnandana67@gmail.com

        ದಕ್ಷಿಣ ಇಂಡಿಯಾದಲ್ಲಿ ಕರ್ನಾಟಕವನ್ನು ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಆಟದ ಮೈದಾನವನ್ನಾಗಿ ಸಂಘ ಪರಿವಾರ ಮಾರ್ಪಡಿಸುತ್ತಿದೆ. ಉತ್ತರ ಇಂಡಿಯಾದಲ್ಲಿಉತ್ತರ ಪ್ರದೇಶವನ್ನು ಬಹುತೇಕವಾಗಿ ಸಂಘಪರಿವಾರ ತನ್ನ ಭ್ರಾಹ್ಮಣಶಾಹಿ ಫ್ಯಾಸಿಸ್ಟ್ ನಡೆಗಳ ಮೈದಾನವನ್ನಾಗಿಸಿಕೊಂಡಿದೆ. ಯೋಗಿ ಎಂದು ಹೇಳಿಕೊಳ್ಳುವ ಆದಿತ್ಯನಾಥ ಸರ್ಕಾರವನ್ನು ಅದಕ್ಕಾಗಿ ನೇಮಿಸಿಕೊಳ್ಳಲಾಗಿದೆ. ಚುನಾವಣೆಯ ಮೂಲಕವೇ ಆ ಸರಕಾರ ಆರಿಸಿ ಬಂದಿದೆ ಎಂದುಕೊಂಡರೂ ನಮ್ಮ ದೇಶದ ಚುನಾವಣೆಗಳು ನಡೆಯುವ ರೀತಿ ಅದರಿಂದ ಹೊರಬರುವ ಫಲಿತಾಂಶಗಳನ್ನು ಸರಿಯಾಗಿ ಅವಲೋಕಿಸಿದರೆ ಅದರಲ್ಲಿ ಬಹುಸಂಖ್ಯಾತ ಜನಸಾಮಾನ್ಯರ ಪಾತ್ರ ಲೆಕ್ಕಕ್ಕೆ ಇಲ್ಲವೆಂಬುದು ಗ್ರಹಿಕೆಗೆ ಬರುತ್ತದೆ. ನಮ್ಮ ದೇಶದ ಚುನಾವಣೆಗಳನ್ನು ಭಾರಿ ಕಾರ್ಪೋರೇಟ್ ಹಣ ಹಾಗೂ ಬಲಾಡ್ಯ ಜಾತಿ ಗುಂಪುಗಾರಿಕೆ ಇನ್ನಿತರ ವಶೀಲಿಬಾಜಿಯ ಕುತಂತ್ರಗಳ ಮೂಲಕ ನಿರ್ವಹಿಸಿ, ಯಾರು ಬೇಕಾದರೂ ಅಧಿಕಾರದ ಸ್ಥಾನಗಳಲ್ಲಿ ಕೂರಬಹುದು ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ ತಾನೇ. ಇದಕ್ಕೆ ಇತ್ತೀಚಿನ ಮಹಾರಾಷ್ಟ್ರದಲ್ಲಿ ನಡೆದ ಶಿವಸೇನೆ ಸರ್ಕಾರವನ್ನು ಅವರ ಶಾಸಕರುಗಳ ಮೂಲಕವೇ ಉರುಳಿಸಿ ಅಧಿಕಾರ ವಶಪಡಿಸಿಕೊಂಡ  ವಿದ್ಯಮಾನವೂ ಕೂಡ ಒಂದು ಉದಾಹರಣೆಯಾಗಿದೆ. ಭಾರಿ ಕಾರ್ಪೋರೇಟು ಹಿತಾಸಕ್ತಿಗಳೇ ಇಲ್ಲೂ ಕೆಲಸಮಾಡಿದೆ ಎನ್ನುವುದನ್ನು ಗಮನಿಸಬೇಕು.

        ಆರಂಭದಲ್ಲಿ ಜೆಡಿಎಸ್ ನ ಹೆಚ್ ಡಿ ಕುಮಾರ ಸ್ವಾಮಿ ಸಹಕಾರದಿಂದ ಕರ್ನಾಟಕದಲ್ಲಿ  ಅಧಿಕಾರಕ್ಕೇರಿದ ಸಂಘ ಪರಿವಾರದ ಬಿಜೆಪಿ ಹತ್ತು ಹಲವು ಕುಟಿಲ ತಂತ್ರಗಳ ಮೂಲಕ ಶಾಸಕರ ಬಲ ಜೋಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಸರಕಾರ ರಚಿಸಿತು. ಮೊದಲಿಗೆ ಶಾಸಕರುಗಳನ್ನು ಕೊಂಡುಕೊಳ್ಳಲು, ಬೆದರಿಸಿ ಹಿಡಿದಿಟ್ಟುಕೊಳ್ಳಲು ಬಳ್ಳಾರಿ ಗಣಿಹಗರಣದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲುಗಳ ಕಳ್ಳಹಣವನ್ನು ಬಳಸಿಕೊಂಡಿತು. ಆ ಮೂಲಕ ಪ್ರಜಾತಂತ್ರಿಕವಾಗಿರಬೇಕಿದ್ದ ಅಧಿಕಾರವನ್ನು ಹಣದ ಮೂಲಕ ಆಮಿಷಗಳ ಮೂಲಕ, ಬೆದರಿಕೆಗಳ ಮೂಲಕ ಕೊಂಡುಕೊಳ್ಳಲಾಯಿತು. ನಂತರ ಆಕ್ರಮಣಕಾರಿಯಾಗಿ ತನ್ನ ನಡೆಗಳನ್ನು ನಡೆಸುತ್ತಾ ಗೋವು, ಲವ್ ಜೆಹಾದ್, ಮುಸ್ಲಿಂ ದ್ವೇಷ ಹರಡುವಿಕೆಗಳ ಮೂಲಕ ಅಧಿಕಾರ ರಾಜಕಾರಣದಲ್ಲಿ ತನ್ನ ಹಿಡಿತ ಬಿಗಿಗೊಳಿಸತೊಡಗಿತು. ಅದಕ್ಕಾಗಿ ನೂರಾರು ಮನುಷ್ಯ ವಿರೋಧಿ ಹಾಗೂ ನಾಡ ವಿರೋಧಿ ಕುಟಿಲ ತಂತ್ರಗಳನ್ನು ಮಾಡಿ ಎಲ್ಲಾ ಮಟ್ಟದಲ್ಲಿಯೂ ಜಾರಿಗೊಳಿಸುತ್ತಾ ಬಂದಿತು.

ದುಗ್ಗಾಣಿ ಬೆಲೆಗೆ ಮಂಗಳೂರು ವಿಮಾನ ನಿಲ್ದಾಣದ ಹಸ್ತಾಂತರ, ಈಗಾಗಲೇ ಪರಿಸರಕ್ಕೆ ಭಾರಿ ಅನಾಹುತ ಮಾಡಿದ್ದರೂ ನಾಗಾರ್ಜುನ ವಿದ್ಯುತ್ ಸ್ಥಾವರದ ವಿಸ್ತರಣೆ, ಸಾರ್ವಜನಿಕ ಹಾಗೂ ಖಾಸಗೀ ಸಹಿಭಾಗಿತ್ವದ ಹೆಸರಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರಾರು ಏಕರೆಗಳ ಮೀಸಲು ಅರಣ್ಯ ಪ್ರದೇಶವನ್ನು ನೀಡಿದ್ದು, ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಮಲೆನಾಡಿನ ಅರಣ್ಯ ಹಾಗೂ ಗುಡ್ಡಗಳನ್ನು ಅಗೆದುರುಳಿಸಿ ಭಾರಿ ಕಾರ್ಪೋರೇಟುಗಳ ಹಿತಾಸಕ್ತಿಗಳ ಕಾಪಾಡುವಿಕೆ….ಹೀಗೆ ಹಲವಾರು ಜನವಿರೋಧಿ ಕ್ರಮಗಳನ್ನು ಸುಲಭವಾಗಿ ನಡೆಸಲಾಯಿತು. ಕೋವಿದ್ 19 ಅನ್ನು ಕೂಡ ಇದಕ್ಕಾಗಿ ಚೆನ್ನಾಗಿ ಬಳಸಿಕೊಳ್ಳಲಾಯಿತು.

 ಚುನಾವಣೆಯಲ್ಲಿ ಲಿಂಗಾಯತ ಹಿನ್ನೆಲೆಯ ಯಡಿಯೂರಪ್ಪರನ್ನು ಸಂಪೂರ್ಣವಾಗಿ ಬಳಸಿಕೊಂಡು ಬಹುಮತ ಪಡೆದು ನಂತರ ಪೂರ್ಣಾವಧಿಯನ್ನು ಪೂರೈಸಲು ಬಿಡದೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ತಮ್ಮ ಕೈಗೊಂಬೆಯಾದ ಬಸವರಾಜ ಬೊಮ್ಮಾಯಿಯನ್ನು ಮುಖ್ಯ ಮಂತ್ರಿಯನ್ನಾಗಿ ಕುಳ್ಳಿರಿಸಿಕೊಂಡಿತು. ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿಯಾಗಿಸಿದ್ದಕ್ಕೆ ಒಳ್ಳೆಯ ಹಿನ್ನೆಲೆಯವರು… ಲೋಹಿಯಾ ಸಮಾಜವಾದಿ ಹಿನ್ನೆಲೆಯವರು… ಯೋಗ್ಯ ಆಯ್ಕೆ… ಇರೊದರಲ್ಲಿ ಸೂಕ್ತ ವ್ಯಕ್ತಿ… ಎಂದೆಲ್ಲಾ ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿರುವ ಹಲವರು ಮುಕ್ತವಾಗಿ ಸ್ವಾಗತಿಸಿದ್ದೂ ನಡೆಯಿತು.

ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಾದ ಮೇಲೆ ಸಂಘಪರಿವಾರ ಏಕಪಕ್ಷೀಯವಾಗಿ ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಬಹಿರಂಗವಾಗೇ ಯಾವುದೇ ತಡೆಯಿಲ್ಲದೇ ಜಾರಿಗೊಳಿಸತೊಡಗಿತು. ಸುಗ್ರೀವಾಜ್ಞೆಯ ಮೂಲಕ ಕಾನೂನುಗಳ ಜಾರಿಮಾಡುವಿಕೆಗಳು ಅಧಿಕವಾದವು. ಅದರಲ್ಲಿ ಮೋದಿ ಸರಕಾರ ಜಾರಿಮಾಡಲು ಸೂಚಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿದರು. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಸರಕಾರ ಸಂಘಪರಿವಾರದ ಕಾರ್ಯಸೂಚಿಯಾದ ರಾಷ್ಟ್ರೀಯ ಶಿಕ್ಷಣನೀತಿಯನ್ನು ಮೊಟ್ಟ ಮೊದಲಿಗೆ ಯಾವುದೇ ಹಿಂಜರಿಕೆಯಿಲ್ಲದೇ ಜಾರಿಗೊಳಿಸಿದ ರಾಜ್ಯವಾಯಿತು. ಅದರ ಅನುಷ್ಟಾನದ ಭಾಗವಾಗಿ ಯಾವುದೇ ನಿಯಮಾವಳಿಗಳನ್ನು ಪಾಲಿಸದೇ ಮೌಖಿಕ ಆದೇಶದ ಮೇಲೆ ಪಠ್ಯ ಪುಸ್ತಕ ಪರಿಷ್ಕರಣೆಯಂತಹ ಕಾರ್ಯಗಳಿಗೆ ಕೈ ಹಾಕಿದರು. ಇಂತಹ ಜವಾಬ್ದಾರಿಯುತ ವಿಚಾರಗಳಲ್ಲಿ ತೊಡಗುವ ಯಾವುದೇ ಅರ್ಹತೆ ಇರದ, ಸಾಮಾಜಿಕ ಕಾಳಜಿ ಕೂಡ ಇಲ್ಲದ ಬ್ರಾಹ್ಮಣಶಾಹಿ ಮೌಲ್ಯಗಳ ಕುರುಡು ಪ್ರತಿಪಾದಕ, ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ  ವಿಕೃತವಾಗಿ ಅಸಭ್ಯವಾಗಿ ಬರೆದುಕೊಳ್ಳುವ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದರು. ಇಡೀ ಸಮಿತಿಯೇ ಬ್ರಾಹ್ಮಣಮಯವಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಬಹುಶಹ ಇಂತಹ ಆಡಳಿತಾತ್ಮಕ ಅಕ್ರಮಗಳು ಈ ಹಿಂದೆಂದೂ ನಡೆದಿರಲಿಕ್ಕಿಲ್ಲ.

 ಕುವೆಂಪು ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ರಾಜಾರಾಮ ಹೆಗಡೆ “ಇಂಡಿಯಾದಲ್ಲಿ ಜಾತಿಗಳೇ ಇಲ್ಲ ಅವೆಲ್ಲಾ ಪಾಶ್ಚಾತ್ಯ ಚಿಂತನೆಗಳ ಹೇರಿಕೆಗಳು.. ಹಾಗಿದ್ದ ಮೇಲೆ ಜಾತಿ ಶೋಷಣೆಯ ಮಾತೆಲ್ಲಿದೆ”… ಎಂದು ಪ್ರತಿಪಾದಿಸುವವರು. ಇವರು ಬಾಲಗುರುಮೂರ್ತಿ ಎಂಬ ಇಂತಹ ವಿಚಾರಗಳ ಪ್ರತಿಪಾದಕರ ಬರೆಹಗಳನ್ನು ಕನ್ನಡಕ್ಕೆ ತರಲು ಶ್ರಮವಹಿಸಿ ಸಂಘಪರಿವಾರದ ಪತ್ರಿಕೆಗಳಿಗೆ ಕಳಿಸಿದವರು. ಅವರು ಕೂಡ ಈ ಸಮಿತಿಯ ಭಾಗವಾದರು.  ಈ ಸಮಿತಿಗೆ ಯಾವುದೇ ಶಾಸನಬದ್ದತೆ ಇಲ್ಲದಿದ್ದರೂ ಏಕ ಪಕ್ಷೀಯವಾಗಿ ಎಲ್ಲಾ ಶಾಲಾ ಪಠ್ಯಗಳನ್ನು ಬದಲಾಯಿಸಿ ಹಲವಾರು ಚಾರಿತ್ರಿಕ ವಾಸ್ತವ ಸಂಗತಿಗಳನ್ನು ತಿರುಚಿ ಮತ್ತಷ್ಟು ಬ್ರಾಹ್ಮಣಶಾಹಿ ಪರವಾಗಿರುವಂತೆ ಬದಲಾಯಿಸಿತು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಾಮಾಜಿಕವಾಗಿ ಬಹಳ ಅಪಾಯಕಾರಿಯಾದ ಮಟ್ಟದಲ್ಲಿ ಶಾಸನಬದ್ದ ಅಧಿಕಾರ ಇಲ್ಲವೇ ಮಾನ್ಯತೆ ಇಲ್ಲದಿದ್ದರೂ ಏಕಪಕ್ಷೀಯವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಪಠ್ಯಗಳನ್ನು ಬದಲಿಸಿತು.  ಅದನ್ನು ಬಿ ಸಿ ನಾಗೇಶ್ ಎಂಬ ಶಿಕ್ಷಣ ಮಂತ್ರಿ ಅನುಮೋದಿಸಿ ಜಾರಿಗೊಳಿಸಿದರು. ಪಾಠಪುಸ್ತಕಗಳ ಮುದ್ರಣ ಕಾರ್ಯವನ್ನೂ ಮಾಡಿದರು. ಅದರಲ್ಲಿ ಕೋಟ್ಯಾಂತರ ರೂಪಾಯಿಗಳ ಹಗರಣದ ಬಗ್ಗೆಯೂ ಸುದ್ಧಿಯಾಗಿವೆ.  ನಂತರ ರೋಹಿತ್ ಚಕ್ರತೀರ್ಥ ಸಮಿತಿಗೆ ಪಿಯು ಪಠ್ಯ ಪರಿಷ್ಕರಣೆಯ ಜವಾಬ್ದಾರಿಯನ್ನು ಕೂಡ ವಹಿಸಿತು. ನಂತರ ಜನರ ವಿರೋಧವನ್ನು ಶಮನಗೊಳಿಸಲು ಪಿಯು ಪಠ್ಯ ಪರಿಷ್ಕರಣೆ ಜವಾಬ್ದಾರಿ ಆ ಸಮಿತಿಗೆ ವಹಿಸಿಲ್ಲವೆಂದು ಹೇಳಲಾಯಿತು. ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮತದೊಂದಿಗೆ ಇವೆಲ್ಲಾ ನಡೆದಿವೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಇಲ್ಲವೆಂದರೆ ಬೊಮ್ಮಾಯಿಗೆ ಯಾವುದೇ ನಿರ್ಣಯಾತ್ಮಕ ಅಧಿಕಾರವಿಲ್ಲ ಎಂದು ಕೂಡ ತಿಳಿಯಬಹುದು. ಈ ವಿಚಾರವನ್ನು ಅವರ ಪಕ್ಷದವರೇ ಈಗ ಬಹಿರಂಗವಾಗಿಯೇ ಹೇಳುತ್ತಿದ್ದಾರೆ ಕೂಡ.



ಕರ್ನಾಟಕದ ಒಂದು ಬಲಾಢ್ಯ ಸಮುದಾಯವನ್ನು ತಮ್ಮ ಹಿಡಿತದೊಳಗೆ ಇಟ್ಟುಕೊಳ್ಳುವ ಉದ್ದೇಶದಿಂದ ಬೊಮ್ಮಾಯಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಸಂಘ ಪರಿವಾರ ತನಗೆ ಆಡಳಿತಾತ್ಮಕವಾಗಿ ಏನೆಲ್ಲಾ ಬೇಕೋ ಅವನ್ನೆಲ್ಲಾ ಸಾಧಿಸಲು ಹೊರಟಿದೆ ಎನ್ನುವುದಕ್ಕೆ ಹೆಚ್ಚಿನ ಒಳನೋಟವೇನೂ ಬೇಕಿಲ್ಲ ಬಿಡಿ. ಒಕ್ಕಲಿಗ ಸಮುದಾಯವನ್ನು ತಮ್ಮ ಹಿಡಿತದಡಿ ಇಟ್ಟುಕೊಳ್ಳಲು ಸಾಕಷ್ಟು ಮಂತ್ರಿ ಸ್ಥಾನಗಳನ್ನು ಆ ಸಮುದಾಯದ ವ್ಯಕ್ತಿಗಳಿಗೆ ನೀಡಲಾಗಿದೆ. ದಲಿತ ಸಮುದಾಯವನ್ನು ಯಾಮಾರಿಸಲು ದಲಿತ ಹಿನ್ನೆಲೆಯ ವ್ಯಕ್ತಿಗಳನ್ನು ಮಂತ್ರಿ ಶಾಸಕರುಗಳನ್ನಾಗಿಸಿದ್ದಾರೆ. ಇತರ ಪಕ್ಷಗಳಿಂದಲೂ ಸಮಾಜದ ಹಲವಾರು ಜಾತಿಸಮೂಹಗಳ ಶಾಸಕರುಗಳನ್ನು ಕೊಂಡುಕೊಂಡು ತಮ್ಮ ಪರ ಕೆಲಸ ಮಾಡಲು ಹಚ್ಚಿರುವುದನ್ನೂ ನಾವು ಗಮನಿಸಬಹುದು. ದಲಿತ ದಮನಿತಪರ ಅಂಬೇಡ್ಕರ್ ವಾದಿಗಳೆಂದು ಜನರ ಮುಂದೆ ಗುರುತಿಸಿಕೊಂಡವರಲ್ಲಿ ಹಲವರು ಹಲವಾರು ವೈಯಕ್ತಿಕ ಸ್ವಾರ್ಥಸಾಧನೆಗಳಿಗಾಗಿ ಸಂಘಪರಿವಾರದ ತೆಕ್ಕೆಗೆ ಸರಿದು ಯಾವುದೇ ಹಿಂಜರಿಕೆ ಇಲ್ಲದೇ ಸಂಘಪರಿವಾರದ ವಕ್ತಾರಿಕೆಗೆ ಇಳಿದು ಬಿಟ್ಟಿದ್ದಾರೆ. ಒಕ್ಕೂಟ ಸರಕಾರ ಬಹುಸಂಖ‍್ಯಾತ ಜನಸಮೂಹಕ್ಕೆ ಮಾರಕವಾಗಿ ಜಾರಿಗೊಳಿಸಿದ ಕೋವಿದ್ 19 ಹೆಸರಿನ ದೇಶಾದ್ಯಂತದ ಅವೈಜ್ಞಾನಿಕ ಲಾಕ್ ಡೌನ್ ಆಗಲೀ, ಅದಕ್ಕೂ ಹಿಂದಿನ ನೋಟು ರದ್ಧತಿಯನ್ನಾಗಲೀ, ಸಣ್ಣ ಮಧ್ಯಮ ಕೈಗಾರಿಕೆಗಳು ಹಾಗೂ ವ್ಯಾಪಾರ ವ್ಯವಹಾರಗಳಿಗೆ ಮಾರಕವಾಗಿರುವ ಜೆ ಎಸ್ ಟಿ ಹೇರಿಕೆಯನ್ನಾಗಲೀ, ಸಿಎಎ ಹಾಗೂ ಎನ್ ಆರ್ ಸಿಯಂತಹ ಮಾರಕ ಕಾಯಿದೆಗಳಾಗಲೀ, ಬ್ರಾಹ್ಮಣಶಾಹಿ ರಾಷ್ಟ್ರೀಯ ಶಿಕ್ಷಣ ನೀತಿಯಾಗಲೀ, ರೈತ ಹಾಗು ನಾಡವಿರೋಧಿ ರೈತ ಮಸೂದೆಗಳಾಗಲೀ, ಕಾರ್ಮಿಕರು ಹಾಗೂ ನೌಕರರು ಮತ್ತು ರಾಷ್ಟ್ರಕ್ಕೆ ಮಾರಕವಾಗುವ ಸಾರ್ವಜನಿಕ ವಲಯದ ಉದ್ದಿಮೆ ಸಂಸ್ಥೆಗಳ ಸಂಪೂರ್ಣ ಕಾರ್ಪೋರೇಟೀಕರಣವಾಗಲೀ, ಇತ್ತೀಚಿನ ಸೇನೆಯನ್ನು ಗುತ್ತಿಗೆಯಾಧಾರವಾಗಿಸುವ ಅಗ್ನಿಪಥ ಯೋಜನೆಯಾಗಲೀ, ಮೀಸಲಾತಿಯ ಮೂಲಭೂತ ಪರಿಕಲ್ಪನೆಗೆ ಎಳ್ಳುನೀರು ಬಿಡುತ್ತಿರುವುದಾಗಲೀ, ದಲಿತರದಮನಿತರು ಹಾಗೂ ಮಹಿಳೆಯರ ಮೇಲಿನ ಹೆಚ್ಚುತ್ತಿರುವ ಆಕ್ರಮಣಗಳಾಗಲೀ …. ಇವೆಲ್ಲಾ ತಮ್ಮ ತಮ್ಮ ಸಮೂಹದ ಬಹುಸಂಖ‍್ಯಾತರಿಗೆ ಒಟ್ಟಾರೆಯಾಗಿ ದೇಶದ ಜನಸಾಮಾನ್ಯರಿಗೆ ಮಾರಣಾಂತಿಕವಾಗಿದ್ದರೂ ಇವರುಗಳು ಅವುಗಳನ್ನು ಯಾವುದೇ ಅಳುಕೂ ಇಲ್ಲದೇ ಸಮರ್ಥಿಸುತ್ತಾ ಬರುತ್ತಿರುವುದನ್ನು ನಾವು ನೋಡಬಹುದು. ಇವರುಗಳು ಮೂಲ ಸಂಘಪರಿವಾರಕ್ಕಿಂತ ಆಕ್ರಮಣಕಾರಿ ಹಾಗೂ ಸಮರ್ಥವಾಗಿ ಸಮಾಜಕ್ಕೆ ಅಪಾಯಕಾರಿಯಾದ ಬ್ರಾಹ್ಮಣಶಾಹಿ ವಿಷವಿಚಾರಗಳನ್ನು ಯಾವುದೇ ಎಗ್ಗಿಲ್ಲದೆ ತಮ್ಮ ಸಮುದಾಯಗಳೊಳಗೆ ಪರಿಣಾಮಕಾರಿಯಾಗಿ ಹಬ್ಬುತ್ತಿರುವುದನ್ನು ನಾವು ಗಮನಿಸಬಹುದು. ಅದಕ್ಕಾಗಿ ಹಲವಾರು ಆಮಿಷಗಳನ್ನು ಒಡ್ಡುತ್ತಾ, ಕೆಲವರಿಗೆ ಲಾಭಗಳನ್ನು ನೀಡುತ್ತಾ, ಕುತಂತ್ರಗಳನ್ನು ಮಾಡುತ್ತಾ, ಹಸಿಹಸಿ ಸುಳ್ಳುಗಳನ್ನು ಹರಡುತ್ತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆಸಿದ ರಾಜಸ್ಥಾನದ ಉದಯಪುರದ ರಾಜಕೀಯ ಕೊಲೆಯನ್ನು ಕರ್ನಾಟಕದಲ್ಲಿ ಇವರುಗಳು ಮತೀಯವಾಗಿಸಿ, ನಿಭಾಯಿಸಿ ಬಳಸಿಕೊಂಡ ರೀತಿಗಳಲ್ಲೂ ನಾವು ಗಮನಿಸಬಹುದು.

 ಅದರಲ್ಲೂ ರಾಜ್ಯದ ಕರಾವಳಿಯ ದಕ್ಷಿಣಕನ್ನಡ ಉಡುಪಿ ಜಿಲ್ಲೆಗಳಲ್ಲಿ ಸಂಘಪರಿವಾರ ನಡೆಸಿದ ಜನಸಮೂಹಗಳನ್ನು ಬ್ರಾಹ್ಮಣಶಾಹಿ ವಿಷದಡಿ ಮುಳುಗಿಸಿ ನಾಶಮಾಡುವ ಪ್ರಯೋಗಗಳ ಭೀಕರ ಪರಿಣಾಮಗಳನ್ನು ನಾವಿಂದು ಗ್ರಹಿಸಬಹುದು. ಅಲ್ಲಿನ ಬಿಲ್ಲವ, ಬಂಟ, ವಿಶ್ವಕರ್ಮ ಮೊದಲಾದ ಜನಸಮೂಹಗಳ ಯುವಕ ಯುವತಿಯರನ್ನು ತಮ್ಮ ಕಾರ್ಯ ಸೂಚಿಗಳ ಜಾರಿಗಾಗಿ ಹಲವಾರು ರೀತಿಯಲ್ಲಿ ಬಳಸಿಕೊಂಡರು. ನಂತರ ಅದರ ಪರಿಣಾಮವಾಗಿ ಹಲವರು ಕೊಲೆಗಳಿಗೀಡಾಗಿರುವುದು ಹಾಗೂ ಸಾವಿರಾರು ಜನರು ಕೇಸುಗಳನ್ನು ಎದುರಿಸಬೇಕಾಗಿ ಬಂದಿದ್ದು, ನೂರಾರು ಜನರು ಜೈಲು ಪಾಲಾಗುವಂತಾಗಿರುವುದನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕಿದೆ. ಅವರ ಕುಟುಂಬಗಳು ಈ ಸ್ವಾರ್ಥ ಹಿತಾಸಕ್ತಿಗಳು ತಂದೊಡ್ಡಿರುವ ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದಾರೆ. ಈಗ ಈ ಬ್ರಾಹ್ಮಣಶಾಹಿ ನಾಯಕರುಗಳು ಯಾರೂ ಅವರನ್ನು ಗಮನಿಸುತ್ತಲೂ ಇಲ್ಲ. ಈ ಬ್ರಾಹ್ಮಣ ಮೂಲದ ನಾಯಕರುಗಳ ಮೇಲೆ ಯಾವ ಪ್ರಕರಣಗಳೂ ದಾಖಲಾಗುತ್ತಿಲ್ಲ. ಅವರುಗಳು ಜೈಲಿಗೂ ಹೋಗುತ್ತಿಲ್ಲ. ಇವರುಗಳ ಮಕ್ಕಳು ಬಂಧುಗಳು ಕೂಡ ಇವರುಗಳು ಪ್ರತಿಪಾದಿಸುವ ಧರ್ಮರಕ್ಷಣೆ!? ಯ ಕಾರ್ಯದಲ್ಲಿ ಇಲ್ಲವೇ ಇಲ್ಲ.

ಇದಿಷ್ಟೇ ಅಲ್ಲದೇ ಪ್ರಧಾನವಾಗಿ ಕರಾವಳಿಯ ಈ ಜಿಲ್ಲೆಗಳಲ್ಲಿ ಗೌತಮ್ ಅದಾನಿಯ ನಾಗಾರ್ಜುನ ಉಷ್ಣವಿದ್ಯುತ್ ಸ್ಥಾವರ, ಜಯಪ್ರಕಾಶ್ ಅಸೋಸಿಯೇಟ್ಸ್ ನ ಗುಂಡ್ಯದ ಜಲವಿದ್ಯುತ್ ಸ್ಥಾವರ, ಎಂ ಆರ್ ಪಿ ಎಲ್ ನಂತಹ ಭಾರಿ ತೈಲೋಧ್ಯಮ ಇನ್ನಿತರ ಭಾರಿ ಕಾರ್ಪೋರೇಟು ವ್ಯವಹಾರಗಳು ತಲೆಯೆತ್ತಲು ಈ ಬ್ರಾಹ್ಮಣಶಾಹಿ ಶಕ್ತಿಗಳು ಬೆಂಬಲಕ್ಕೆ ನಿಂತು ಕುತಂತ್ರ ಮಾಡಿ ಅಲ್ಲಿನ ಜನಸಾಮಾನ್ಯರನ್ನು ಒಕ್ಕಲೆಬ್ಬಿಸಿ ಬಿಸಾಕಿದರು. ಅದರ ಪರಿಣಾಮವಾಗಿ ಕೋಮು, ಜಾತಿವಾರು ಊರುಗಳು ಬೆಳೆದವು. ಪಾರಿಸರಿಕವಾಗಿ ಭಾರಿ ಹಾನಿಗೆ ಬೆಂಬಲವಾಗಿ ನಿಂತರು. ಇವರ ಹಲವು ಮಠಪೀಠಗಳು ಇದರಲ್ಲಿ ಶಾಮೀಲಾದವು. ಇದರಿಂದಾಗಿ ಕರಾವಳಿಯ ಜನರು ಹಾಗೂ ಮೀನುಗಾರರ ಬದುಕುಗಳು ಭಾರಿ ಹಾನಿಗೆ ಒಳಗಾಗಿವೆ. ಹಾರುಬೂದಿ ಸಮಸ್ಯೆಯಿಂದಾಗಿ ಕೃಷಿ ಕೈಗೆ ಸಿಗುತ್ತಿಲ್ಲ. ವಾತಾವರಣದ ಬಿಸಿಯೇರುವಿಕೆ ತೀವ್ರಗತಿಯಲ್ಲಿ ಸಾಗತೊಡಗಿದೆ. ಜನರ ಆರೋಗ್ಯಗಳ ಮೇಲೆ ಗಂಭೀರ ಪರಿಣಾಮಗಳು ಆಗತೊಡಗಿವೆ. ಜಾಗತೀಕರಣ ಪ್ರಕ್ರಿಯೆಗಳು ಬಿರುಸುಗೊಳ್ಳುವುದಕ್ಕೂ ಇಂಡಿಯಾದಲ್ಲಿ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಕೋಮುವಾದ ತನ್ನ ಆಕ್ರಮಣಗಳನ್ನು ಹೆಚ್ಚಿಸುತ್ತಾ ಹೋಗುತ್ತಿರುವುದಕ್ಕೂ ಇರುವ ನೇರ ಸಂಬಂಧವನ್ನು ಈ ಉದಾಹರಣೆಯಿಂದಲೂ ನಾವು ಗ್ರಹಿಸಬಹುದು.

ದಕ್ಷಿಣಕನ್ನಡ ಉಡುಪಿ ಜಿಲ್ಲೆಗಳು ಸಂಘಪರಿವಾರದ ಬ್ರಾಹ್ಮಣಶಾಹಿ ವಿಷಪ್ರಯೋಗದಿಂದ ಚೇತರಿಸಿಕೊಳ್ಳಲು ಒದ್ದಾಡತೊಡಗಿವೆ. ಈ ಭಾಗದಲ್ಲಿ ಜನಹೋರಾಟಗಳು ಆ ಮಟ್ಟಕ್ಕೆ ಮೂಡಿ ಬರದೇ ಇರುವುದು ಇದಕ್ಕೆ ಪ್ರಧಾನ ಕಾರಣವಾಗಿದೆ. ಜನಹೋರಾಟಗಳು ಸಿಡಿದಾಗಲೆಲ್ಲಾ ಬ್ರಾಹ್ಮಣಶಾಹಿ ಶಕ್ತಿಗಳೇ ಅದರ ಮುಂಚೂಣಿಯಲ್ಲಿ ಇರುವಂತೆ ನಾಟಕವಾಡಿ ನಂತರ ಅದರ ದಿಕ್ಕು ತಪ್ಪಿಸಿ ಹೋರಾಟ ಮುಂದುವರೆಯದಂತೆ ಮಾಡಿ ತಮ್ಮ ತಿಜೋರಿ ತುಂಬಿಸಿಕೊಳ್ಳುತ್ತಾರೆ. ಇದು ಅಲ್ಲಿನ ಎಂ ಆರ್ ಪಿ ಎಲ್, ಗುಂಡ್ಯ, ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ, ಎತ್ತಿನ ಹೊಳೆ ಇತ್ಯಾದಿ ಬಹುತೇಕ ಪ್ರಮುಖ ಹೋರಾಟಗಳ ಕತೆಯಾಗಿದೆ. ಕೋಮುವಾದವನ್ನು ವಿರೋಧಿಸುವ ಹೆಸರಿನಲ್ಲಿ ನಡೆದ ಕೆಲವು ಹೋರಾಟಗಳೂ ಕೂಡ ಬಹಳ ಬಲಹೀನವಾದ ನಿಲುವುಗಳನ್ನು ಹೊಂದಿ ಹಾಗೂ ಕೋಮುವಾದಿ  ಶಕ್ತಿಗಳನ್ನೇ ಒಳಗೊಳಿಸಿಕೊಳ್ಳುವಂತಹ ಗಂಭೀರ ಬಲಹೀನತೆಗಳನ್ನು ಹೊಂದಿದ್ದವು. ಮೇಲು ಮಟ್ಟಕ್ಕೆ ಸಾಮರಸ್ಯ ಸಹಬಾಳ್ವೆ ಇತ್ಯಾದಿ ಪದಬಳಕೆಗಳಡಿ ಇಂತಹ ಗಂಭೀರ ಲೋಪಗಳನ್ನು ಮುಚ್ಚಿಕೊಳ್ಳಲು ಪ್ರಯತ್ನ ನಡೆಸಿದವು. ಇದರಲ್ಲಿ ದೊಡ್ಡ ವ್ಯಾಪಾರಿ ಹಾಗೂ ಚುನಾವಣಾ ಹಿತಾಸಕ್ತಿಗಳದು ಪ್ರಧಾನ ಪಾತ್ರವಾಗಿದ್ದವು. ಸಾಮರಸ್ಯ ಸಹಬಾಳ್ವೆಯಲ್ಲಿ ಬದುಕುತ್ತಿರುವವರು ಹಾಗೇನೆ ಅವುಗಳನ್ನು ಬಯಸುತ್ತಿರುವವರು ಜನಸಾಮಾನ್ಯರು ಈ ಹೋರಾಟಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರೂ ವೇದಿಕೆಗಳಲ್ಲಿ ಕುಳಿತು ಭಾಷಣ ಬೋಧನೆ ಮಾಡಿದವರಲ್ಲಿನ ಹಲವರ ಹಿನ್ನೆಲೆಗಳು ಸೌಹಾರ್ದ, ಸಹಬಾಳ‍್ವೆ, ಸಾಮರಸ್ಯಗಳಿಗೆ ವಿರುದ್ಧವೇ ಇದ್ದಿದ್ದನ್ನು ನೋಡಿ ಭ್ರಮನಿರಸನಗೊಂಡರು.




ಆದರೆ ಚಲೋ ಉಡುಪಿಯಂತಹ ದಲಿತ ದಮನಿತರು ಪ್ರಧಾನವಾಗಿ ಒಗ್ಗೂಡಿ ನಡೆಸಿದ ಹೋರಾಟ ಉಡುಪಿಯಲ್ಲಿ ಹಾಗೂ ರಾಜ್ಯದಲ್ಲಿ ಸಾಕಷ್ಟು ಸಂಚಲನವನ್ನು ಉಂಟುಮಾಡಿತ್ತು. ಅದು ಅದುವರೆಗೂ ಸಾಗಿ ಬಂದಿದ್ದ ಒಂದು ರೀತಿಯ ಜಡತನವನ್ನು ಬಿಡಿಸಿತು ಎನ್ನಬಹುದು. ನಂತರ ಗುಡಿಬಂಡೆ ಚಲೋ, ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣವನ್ನು ವಿರೋಧಿಸಿ ರಾಜ್ಯಾದ್ಯಂತ  ಹೋರಾಟಗಳು ನಡೆಯಿತು. ದಾನಮ್ಮ ಪ್ರಕರಣ ವಿರೋಧಿಸಿ ಹಲವಾರು ಜಿಲ್ಲೆಗಳು ಬಂದ್ ಆಚರಿಸಿದವು. ಆದರೆ ದಾನಮ್ಮ ಪ್ರಕರಣವನ್ನು ದಡಮುಟ್ಟಿಸುವ ಆಸಕ್ತಿ ಕಾಣದಾಯಿತು. ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ರಾಜ್ಯಾದ್ಯಂತ ಹೋರಾಟಗಳು ಸಿಡಿದು ತಿಂಗಳಗಟ್ಟಲೆ ನಡೆಯಿತು. ಇದರಲ್ಲಿ ಅಲ್ಪ ಸಂಖ್ಯಾತ ಸಮುದಾಯ ಮಹಿಳೆಯರು ಪ್ರಧಾನವಾಗಿ ಧೃಢವಾಗಿ ನಿಂತು ಮುನ್ನೆಡೆಸಿದರು. ಈ ಬೆಳವಣಿಗೆ ಕೂಡ ಹೊಸ ವಿದ್ಯಮಾನವಾಗಿತ್ತು. ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಈ ಮಟ್ಟದಲ್ಲಿ ಸಂಘಟಿತಗೊಂಡು ನಿರಂತರತೆಯಿಂದ ಹೋರಾಟ ನಡೆಸಿದ ಉದಾಹರಣೆ ಅದಾಗಿತ್ತು. ಬೆಂಗಳೂರು, ದಾವಣಗೆರೆ, ಗುಲ್ಬರ್ಗ, ರಾಯಚೂರು, ಬೆಳಗಾವಿ ಮೊದಲಾದೆಡೆ ಈ ಹೋರಾಟ ಹರಡಿತ್ತು. ಇತರ ಹಲವಾರು ಪ್ರಗತಿಪರ ಜನಪರ ಶಕ್ತಿಗಳು ಈ ಹೋರಾಟವನ್ನು ಬೆಂಬಲಿಸಿದರು. ಕೋರೋನಾ ನೆಪದಲ್ಲಿ ಆ ಹೋರಾಟವನ್ನು ದಮನಿಸಲಾಯಿತು. ಅದಾಗಿ ನಂತರ ದೊಡ್ಡ ಮಟ್ಟದಲ್ಲಿ ಜನರು ಸಮಾವೇಶಗೊಂಡಿದ್ದ ಮುಖ್ಯ ಹೋರಾಟವೆಂದರೆ ಅದು ದೆಹಲಿಯ ರೈತ ಹೋರಾಟಕ್ಕೆ ಬೆಂಬಲವಾಗಿ ನಡೆದ ಶಿವಮೊಗ್ಗ, ಬೆಂಗಳೂರು, ಹಾವೇರಿ, ಬೆಳಗಾಂವ್ ಗಳಲ್ಲಿ ನಡೆದ ಹೋರಾಟಗಳು. ಇವುಗಳಲ್ಲೆಲ್ಲಾ ಜನರು ಸ್ವಯಂಪ್ರೇರಿತರಾಗಿಯೇ ಹತ್ತಾರು ಸಾವಿರಗಳ ಸಂಖ್ಯೆಯಲ್ಲಿ ಜೊತೆಗೂಡಿದ್ದನ್ನು ನಾವು ಕಾಣಬಹುದು. ಆದರೆ ಅಲ್ಲಿ ರೈತ ಮಸೂದೆಗಳ ಹಿಂದಿನ ಕಾರಣಗಳು ಮಾಡುವ ಅಪಾಯಗಳ ಬಗ್ಗೆ ಅರಿವು ಮೂಡಿಸುವ ರೀತಿಯಲ್ಲಿ ವೇದಿಕೆ ಪರಿಣಾಮಕಾರಿಯಾಗಿ ಕೆಲಸಮಾಡಲಿಲ್ಲ. ಅಲ್ಲದೇ ಜನರ ಮುಂದೆ ಈಗಾಗಲೇ ಭ್ರಷ್ಟರೆಂದು, ಮೋಸಗಾರರೆಂದು, ಜನದ್ರೋಹಿಗಳೆಂದು ಬಯಲಾಗಿ ದಿಕ್ಕಿಲ್ಲದೇ ಇದ್ದ ಒಂದು ಕಾಲದ ನಾಯಕರೆನಿಸಿಕೊಂಡವರೇ ಬಹಳಷ್ಟು ಜನ ಸಮಾವೇಶದ ವೇದಿಕೆಯಲ್ಲಿ ಕುಳಿತಿದ್ದರು. ಇದು ಸ್ವಯಂಪ್ರೇರಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಬಂದ ಜನಸಾಮಾನ್ಯರಿಗೆ ಭರವಸೆ ಮೂಡಿಸುವಂತಹ ರೀತಿಯಾಗಲಿಲ್ಲ. ಅದಾದ ನಂತರ ರಾಯಚೂರಿನ ನ್ಯಾಯಾಧೀಶರು ಅಂಬೇಡ್ಕರ್ ರಿಗೆ ಮಾಡಿದ ಅವಮಾನದ ನೆಪದಲ್ಲಿ ದಲಿತದಮನಿತರ ಆಕ್ರೋಶ ರಾಜ್ಯಾದ್ಯಂತ ಹೊರಬಿದ್ದು ಅದು ಭಾರಿ ಪ್ರತಿಭಟನೆಯಾಗಿ ಬೆಂಗಳೂರಿನಲ್ಲಿ ಪ್ರತಿದ್ವನಿಸಿತು. ತೀವ್ರವಾಗುತ್ತಾ ಸಾಗಿ ಬಂದಿದ್ದ ಬ್ರಾಹ್ಮಣಶಾಹಿ ಹಾಗೂ ಭಾರಿ ಕಾರ್ಪೋರೇಟ್ ದಾಳಿಗಳ ವಿರುದ್ದ ಈ ಮಟ್ಟದಲ್ಲಿ ದಲಿತ ದಮನಿತ ಸಮೂಹಗಳು ಒಗ್ಗೂಡಿ ಪ್ರತಿಭಟನೆ ನೆಡೆಸಿದ್ದು ಕಳೆದ ಸುಮಾರು ಎರಡೂವರೆ ದಶಕಗಳಲ್ಲೇ ಇಲ್ಲದ ವಿದ್ಯಮಾನವಾಗಿತ್ತು. ಆದರೆ ಪರ್ಯಾಯ ನಾಯಕತ್ವವೊಂದು ಹುಟ್ಟುವ ರೀತಿಯಲ್ಲಿಅದು ಮುಂದುವರೆಯಲಿಲ್ಲ. ಅಂತಹ ಐಕ್ಯತೆಯನ್ನು ಸಂಘಟಿಸಿಕೊಳ್ಳುವ ಕಡೆಗೆ ಒತ್ತಿಲ್ಲದೇ ಹೋಯಿತು.



ಈ ಎಲ್ಲಾ ಹೋರಾಟಗಳು ಪ್ರಧಾನವಾಗಿ ಸಂಘಪರಿವಾರ ಮತ್ತು ಭಾರಿ ಕಾರ್ಪೋರೇಟು ಪ್ರಾಯೋಜಿತ ಸರಕಾರಗಳ ಬಹುಸಂಖ್ಯಾತ ಜನರ ಮೇಲಿನ ಬ್ರಾಹ್ಮಣಶಾಹಿ ಮತ್ತು ಆಡಳಿತಾತ್ಮಕ ಆಕ್ರಮಣಗಳ ವಿರುದ್ಧ ನಡೆದ ಹೋರಾಟಗಳಾಗಿದ್ದವು. ಅದೂ ಅಲ್ಲದೇ ಬಹುತೇಕ ಅಲ್ಪ ಸಂಖ್ಯಾತರು, ದಲಿತರು, ಮಹಿಳೆಯರು ಇನ್ನಿತರ ಜನಸಮೂಹದ ಮೇಲೆ ನಡೆಯುತ್ತಿರುವ ಆಕ್ರಮಣಗಳಲ್ಲಿ ಸಂಘಪರಿವಾರದ ನೇರ ಹಾಗೂ ಪರೋಕ್ಷ ನೇತೃತ್ವ ಹಾಗೂ ಶಾಮೀಲುದಾರಿಕೆ ಇವೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಪಠ್ಯ ಪರಿಷ್ಕರಣೆಯಂತಹ ಕಾರ್ಯಕ್ಕೆ ಯಾವುದೇ ನೀತಿಸೂತ್ರಗಳನ್ನು ಪಾಲಿಸಿದೇ ಸಾರಾಸಗಟಾಗಿ ಇಳಿದಿದ್ದನ್ನು ಪ್ರತಿಭಟಿಸಿ ಹಲವಾರು ಹೋರಾಟಗಳು ನಡೆದವು. ಇದು ಕೂಡ ಸಂಘಪರಿವಾರದ ವಿರುದ್ಧವಾಗಿ ಕರ್ನಾಟಕದ ಜನರು ಮಾಡಿದ ಹೋರಾಟವಾಗಿತ್ತು.

ಪಠ್ಯ ಪರಿಷ್ಕರಣೆಯ ನೆಪದಲ್ಲಿ ಬಸವಣ್ಣ, ನಾರಾಯಣಗುರು, ಪೆರಿಯಾರ್, ಅಂಬೇಡ್ಕರ್, ಮೊದಲಾದ ಜನಚಳವಳಿಯ ನೇತಾರರನ್ನು ಹಾಗೂ ಮುಸ್ಲಿಂ, ಕ್ರೈಸ್ತ, ಭೌದ್ಧ ಮೊದಲಾದ ಧರ್ಮಗಳನ್ನು ಅವಗಣಿಸುವ ತಪ್ಪಾಗಿ ಬಿಂಬಿಸುವ ಕಾರ್ಯಗಳನ್ನು ಎಗ್ಗಿಲ್ಲದೇ ನಡೆಸಿದಾಗ ಜನಸಮೂಹಗಳು ಬೀದಿಗಿಳಿದವು. ಈ ಹೋರಾಟ ಈಗಲೂ ಮುಂದುವರೆದಿದ್ದರೂ ಬಹಳ ಸಂಕುಚಿತವಾಗಿ ತಮ್ಮ ಜಾತಿ ಸಮೂಹಗಳಿಗೆ ಸೀಮಿತವಾಗಿ ನಡೆಯಲಾರಂಭಿಸಿವೆ. ಎಲ್ಲರೂ ಒಗ್ಗೂಡಿ ಬ್ರಾಹ್ಮಣಶಾಹಿ ಸಂಚುಗಳನ್ನು ಬಯಲಿಗೆಳೆದು ಹಿಮ್ಮಟ್ಟಿಸಿನಿಲ್ಲಬೇಕೆಂಬ ಗ್ರಹಿಕೆಯಿಂದ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಅಂತಹ ಪ್ರಯತ್ನ ನಡೆಯಿತು. ಆದರೆ ಅದು ಯಾರನ್ನು ಒಳಗೊಳಿಸಬೇಕು ಯಾರನ್ನು ಒಳಗೊಳಿಸಬಾರದು ಎಂಬ ಸ್ಪಷ್ಟತೆ ಇಲ್ಲದೇ ಸಫಲವಾಗಲಿಲ್ಲ.

 ಕೆಲವು ಪ್ರಗತಿಪರ ವಲಯ ಬಿಟ್ಟರೆ ಉಳಿದಂತೆ ಎಲ್ಲವೂ ಈ ಗಂಭೀರ ಸಂಕುಚಿತತೆಯ ಕಾಯಿಲೆಯಿಂದ ಬಳಲುತ್ತಿವೆ. ಇದಕ್ಕೆ ಆಯಾ ಸಮುದಾಯಗಳ ಮಠಪೀಠಗಳು  ಕೆಲವು ಸಮುದಾಯ ನಾಯಕರುಗಳು, ಪುಡಾರಿಗಳು ಪ್ರಧಾನ ಕಾರಣರಾಗಿದ್ದಾರೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಶೂದ್ರ, ಸಮುದಾಯಗಳ ಮಧ್ಯೆ ಇರುವ ಇಂತಹ ಗಂಭೀರ ತಪ್ಪುಗಳನ್ನು ಸಮರ್ಥವಾಗಿ ಸಂಘಪರಿವಾರ ಉಪಯೋಗಿಸ ತೊಡಗಿದೆ. ಅದರಂತೆ ಸರ್ಕಾರ ಬಲಾಢ್ಯ ಸಮುದಾಯಗಳನ್ನು ಓಲೈಸುವ ರೀತಿಯಲ್ಲಿ ಪಠ್ಯಪರಿಷ್ಕರಣೆಯ ಅಪಚಾರಗಳನ್ನು ಸರಿಪಡಿಸುವ ನಾಟಕ ಶುರುವಿಟ್ಟುಕೊಂಡಿದೆ.

ಇದಕ್ಕೂ ಹಿಂದಿನ ಜನಹೋರಾಟಗಳಲ್ಲಿ ಜನಸಾಮಾನ್ಯರು ದೊಡ್ಡ ಮಟ್ಟದಲ್ಲಿ ಒಗ್ಗೂಡುತ್ತಾ ಬಂದಿದ್ದರೂ ಚುನಾವಣಾ ಲೆಕ್ಕಾಚಾರದಲ್ಲಿ ಮುಳುಗಿರುವ ಶಕ್ತಿಗಳು, ತಮ್ಮ ತಮ್ಮ ಹಿತಾಸಕ್ತಿಗಳು ಹಾಗೂ ಮಿತಿಗಳಡಿ ಜನರ ಹೋರಾಟಗಳನ್ನು ಹಿಡಿದಿಡಬೇಕೆಂದು ಕಾರ್ಯ ನಿರ್ವಹಿಸುತ್ತಿರುವ ಕೆಲವು ಶಕ್ತಿಗಳು  ಮಾಡುತ್ತಾ ಬರುತ್ತಿರುವ ಕಾರ್ಯಗಳಿಂದಾಗಿ ಅವಶ್ಯಕ ಫಲಿತಾಂಶಗಳನ್ನು ಪಡೆಯದೇ ಹೋಗುತ್ತಿವೆ. ಜನರ ಮಧ್ಯೆಯಿಂದ ಸರಿಯಾದ ಪ್ರಾಮಾಣಿಕ ನಾಯಕತ್ವ ರೂಪುಗೊಳ್ಳಲು ತಡೆಗಳಾಗಿ ಪರಿಣಮಿಸುತ್ತಿವೆ. ಹಲವಾರು ಭ್ರಮೆಗಳಡಿ ಸಮಾಜಮುಖಿ ಮನಸುಗಳನ್ನು, ಯುವ ಕಾರ್ಯಕರ್ತರನ್ನು ಹಾಗೂ ಜನರ ಹೋರಾಟದ ಚೈತನ್ಯವನ್ನು ಹುದುಗಿಸಿಡಲು ಪ್ರಯತ್ನಿಸುತ್ತಾ ಬರಲಾಗುತ್ತಿದೆ. ಹೋರಾಟದ ಗುರಿಗಳ ಕುರಿತು ದಿಕ್ಕುತಪ್ಪಿಸುವ ಕಾರ್ಯಗಳೇ ಹೆಚ್ಚಾಗಿ ನಡೆಯುತ್ತಿವೆ. ಇವೆಲ್ಲಾ ಜನಸಾಮಾನ್ಯರು ಒಗ್ಗೂಡಲು ಮತ್ತು ಹೋರಾಟಗಳನ್ನು ಪರಿಣಾಮಕಾರಿಯಾಗಿ ಮುನ್ನೆಡೆಸಲು ಭಾರಿ ತಡೆಗಳನ್ನು ನಿರ್ಮಿಸುತ್ತಿವೆ.




ಈ ಗಂಭೀರ ತಪ್ಪುಗಳಿಂದ ಜನಸಮುದಾಯಗಳು ಹೊರಬಂದು ಸಂಘಪರಿವಾರದ ಬ್ರಾಹ್ಮಣಶಾಹಿ ಸಂಚುಗಳ ವಿರುದ್ಧ ಮತ್ತು ಸಂಘ ಪರಿವಾರವನ್ನು ಪ್ರಾಯೋಜಿಸಿ ಬಳಸಿಕೊಳ್ಳುತ್ತಾ ದೇಶದ ಜನಸಾಮಾನ್ಯರನ್ನು ಹುರಿದು ಮುಕ್ಕುತ್ತಾ ಲೂಟಿ ಮಾಡುತ್ತಿರುವ ಭಾರಿ ಕಾರ್ಪೋರೇಟು ಶಕ್ತಿಗಳ ವಿರುದ್ಧ ಒಗ್ಗೂಡುತ್ತಾ ಗಟ್ಟಿ ದನಿಯಲ್ಲಿ ಪ್ರತಿಭಟಿಸಿ ನಿಲ್ಲಬೇಕಾದ ಅಗತ್ಯ ಬಹಳವಿದೆ. ಇದು ಈ ಸಂದರ್ಭದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ದಲಿತ, ದಮನಿತ, ಅಲ್ಪಸಂಖ್ಯಾತ, ಹಿಂದುಳಿದ ಜನಸಮುದಾಯಗಳು ತುರ್ತಾಗಿ ಗ್ರಹಿಸಬೇಕಾಗಿದೆ. ತಮ್ಮದೇ ಪರ್ಯಾಯ ನಾಯಕತ್ವವನ್ನು ರೂಪಿಸಿಕೊಳ್ಳಲು ತೊಡಗುವುದು ಅತ್ಯಗತ್ಯವಾಗಿದೆ.

03/07/2022                                                    

 

 

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...