Skip to main content

ದ್ರೌಪದಿ ಮುರ್ಮು ರಾಷ್ಟ್ರಪತಿಯಾದರೆ ಆದಿವಾಸಿ ದಲಿತದಮನಿತರ ಮೇಲಿನ ದಾಳಿ ಕಡಿಮೆಯಾಗುವುದೇ#Draupadi murmu# attack on tribal, dalith ,oppresseds# NDA presidential candidate#

 

        ದ್ರೌಪದಿ ಮುರ್ಮು ರಾಷ್ಟ್ರಪತಿಯಾದರೆ

ಆದಿವಾಸಿ ದಲಿತದಮನಿತರ ಮೇಲಿನ ದಾಳಿ ಕಡಿಮೆಯಾಗುವುದೇ?

                                                            -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು.

ಮಿಂಚಂಚೆ: nandakumarnandana67@gmail.com         

                                        

ಇಂಡಿಯಾದ ಆಳುವ ಶಕ್ತಿಗಳು ಒಬ್ಬ ಆದಿವಾಸಿ ಹಿನ್ನೆಲೆಯವರನ್ನು ರಾಷ್ಟ್ರಪತಿಯಾಗಿಸಿಕೊಳ್ಳಲು ಹೊರಟಿದೆ. ಸಂಘಪರಿವಾರದ ಬಿಜೆಪಿ ಸರ್ಕಾರ ದ್ರೌಪದಿ ಮುರ್ಮು ಎಂಬ ಆದಿವಾಸಿ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಾಪಿಸಲು ತಯಾರಿ ನಡೆಸಿದೆ. ಮುರ್ಮು ರಾಷ್ಟ್ರಪತಿ ಅಭ್ಯರ್ಥಿ ಎಂದು ಪ್ರಚಾರವಾಗುವ ಸಂದರ್ಭದಲ್ಲೇ ಮುರ್ಮು ಗುಡಿಯೊಂದರ ಬಳಿಗೆ ಧಾವಿಸುತ್ತಾ ಹೋಗುವ ವೇಗದಲ್ಲೇ ಕಸಪೊರಕೆಯೊಂದನ್ನು ಕೇಳುವ, ನಂತರ ಸೆರಗು ಸೊಂಟಕೆ ಕಟ್ಟಿ ದೇವಸ್ಥಾನದ ಅಂಗಳವನು ಭಯಭಕ್ತಿಯಿಂದ ಗುಡಿಸುವ ವೀಡಿಯೋ ಕೂಡ ಸಾಕಷ್ಟು ಪ್ರಸಾರವಾಯಿತು. ಈ ದೇಶದ ರಾಷ್ಟ್ರಪತಿ ಹೇಗಿರಬೇಕು ಎಂಬುದನ್ನು ಹೇಳುತ್ತಿರುವ ರೂಪಕವಾಗಿಯೂ ಇದನ್ನು ತಿಳಿಯಬಹುದೇನೋ!.

                                                                

    ದ್ರೌಪದಿ ಮುರ್ಮು

ಮೂಲತಹ ಸಂತಾಲಿ ಬುಡಕಟ್ಟಿನವರಾದ ಮುರ್ಮು ಬುಡಕಟ್ಟು ಗ್ರಾಮ ಮುಖ್ಯಸ್ಥರ ಕುಟುಂಬಕ್ಕೆ ಸೇರಿದವರು. 1997ರಿಂದ ಬಿಜೆಪಿ ಪಕ್ಷದ ಸದಸ್ಯೆಯಾಗಿರುವವರು. ಬಿಜೆಪಿಯ ಪರಿಶಿಷ್ಟ ಬುಡಕಟ್ಟು ಮೊರ್ಚಾದ ಒರಿಸ್ಸಾ ರಾಜ್ಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದವರು. ಮುರ್ಮು ಒರಿಸ್ಸಾ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದವರು. ದ್ರೌಪದಿ ಮುರ್ಮು ಜಾರ್ಖಂಡ್ ರಾಜ್ಯದ ಮೊದಲ ರಾಜ್ಯಪಾಲರಾಗಿದ್ದರು.

ನಮ್ಮ ದೇಶಕ್ಕೆ ದಲಿತ ಹಿನ್ನೆಲೆಯ, ಮುಸ್ಲಿಂ ಹಿನ್ನೆಲೆಯ, ಮಹಿಳಾ ಹಿನ್ನೆಲೆಯ ರಾಷ್ಟ್ರಪತಿಗಳಾಗಿ ಹೋಗಿದ್ದಾರೆ. ಆಗೆಲ್ಲಾ ರಾಷ್ಟ್ರಪತಿ ಭವನ ಈ ದೇಶದ ದಲಿತದಮನಿತ ಜನಸಾಮಾನ್ಯರಿಗೆ ಸಂವಿಧಾನದತ್ತ ಹಕ್ಕುಗಳು ಸೌಲಭ್ಯಗಳು ಸಿಗುವಂತೆ ಮಾಡಿದ್ದಾಗಲೀ, ಸರ್ಕಾರಗಳು ಸಂವಿಧಾನವನ್ನು ಮುಂದಿಡುತ್ತಾ ದೇಶದ ಜನಸಾಮಾನ್ಯರ ಸಂಪತ್ತುಗಳನ್ನು ಜಾಗತಿಕ ಭಾರಿ ಕಾರ್ಪೋರೇಟುಗಳಿಗೆ ವರ್ಗಾಯಿಸುವುದನ್ನು ತಡೆಯುವಂತಹ ಕಾರ್ಯ ನಿರ್ವಹಿಸಿದ ಉದಾಹರಣೆಗಳಿಲ್ಲ. ಬದಲಿಗೆ ಇಂತಹ ಹಿನ್ನೆಲೆಯವರು ರಾಷ್ಟ್ರಪತಿಗಳಾಗುವ ಸಂದರ್ಭಗಳಲ್ಲಿ ದೇಶವನ್ನು ಮತ್ತಷ್ಟು ಜಾಗತಿಕ ಭಾರಿ ಕಾರ್ಪೋರೇಟುಗಳ ಹಿಡಿತಕ್ಕೆ ಸರಿಸುವಂತಹ ಕಾರ್ಯಗಳೇ ಹೆಚ್ಚಾಗಿ ನಡೆದವು ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬೇಕಾಗಿದೆ. ಹಿಂದೆ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೇಲ್ ಸಿಂಗ್ ತಮ್ಮದೇ ಆದ ಕೆಲವು ರಾಜಕೀಯ ಕಾರಣಗಳಿಗಾಗಿ ಆಗಿನ ರಾಜೀವ್ ಗಾಂಧಿ ಸರ್ಕಾರದ ಕೆಲವು ನೀತಿಗಳನ್ನು ಹಾಗೂ ಆ ಸರ್ಕಾರ ಅನುಮೋದಿಸಿದ ಕೆಲವು ಕಾನೂನುಗಳಿಗೆ ಸಹಿ ಹಾಕದೇ ಮರಳಿಸಿದ್ದು ಬಿಟ್ಟರೆ ಉಳಿದಂತೆ ಬಹುತೇಕ ರಾಷ್ಟ್ರಪತಿಗಳು ಆಳುವ ಸರ್ಕಾರಗಳ ಜೊತೆಗೆ ತಕರಾರಿಲ್ಲದೇ ಕಾರ್ಯ ನಿರ್ವಹಿಸಿದ್ದರು. ನಮ್ಮ ದೇಶದಲ್ಲಿ ರಾಷ್ಟ್ರಪತಿ ಸಾಂವಿಧಾನಾತ್ಮಕ ಹುದ್ದೆಯಾಗಿದ್ದರೂ ಆ ಹುದ್ದೆಗಿರುವ ಸಾಂವಿಧಾನಿಕ ಅಧಿಕಾರ ಬಹಳ ಸೀಮಿತವಾದುದು.

ಜಾಗತಿಕ ಭಾರಿ ಕಾರ್ಪೋರೇಟು ವ್ಯವಸ್ಥೆ ಯೋಜಿತ ಜಾಗತೀಕರಣದ ಪ್ರಕ್ರಿಯೆಗಳನ್ನು ಬಿರುಸುಗೊಳಿಸುವ ಸಂದರ್ಭಗಳಲ್ಲೇ ಸಮಾಜದ ಅಡಿಪಾಯ ಸಮುದಾಯ ಹಿನ್ನೆಲೆಯವರನ್ನು ರಾಷ್ಟ್ರಪತಿಯಂತಹ ಸ್ಥಾನಗಳಲ್ಲಿ ಕೂರಿಸುವ ಕಾರ್ಯಗಳು ನಡೆದಿದ್ದು ಎನ್ನುವುದನ್ನು ನಾವು ಗಮನಿಸಬಹುದು. ಈಗ ನಮ್ಮ ದೇಶದ ರಾಷ್ಟ್ರಪತಿ ಆಗಹೊರಟಿರುವವರು ಹಲವು ಬಾರಿ ಶಾಸಕರಾಗಿ, ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದವರು. ಆದರೆ ಮೊನ್ನೆಯಷ್ಟೇ ಅದೂ ರಾಷ್ಟ್ರಪತಿ ಅಭ್ಯರ್ಥಿ ಎಂದು ತೀರ್ಮಾನಿಸಿದ ನಂತರವೇ ಅವರ ಸ್ವಂತ ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಎಂದು ಸುದ್ಧಿಯಾಯಿತು. ನಮ್ಮ ದೇಶದ ಅಡಿಪಾಯದ ಸಮುದಾಯವನ್ನು ಆಳುವ ವ್ಯವಸ್ಥೆ ಎಷ್ಟೊಂದು ಕ್ರೂರವಾಗಿ ಹಾಗೂ ವ್ಯವಸ್ಥಿತವಾಗಿ ತನ್ನ ಹಿತಾಸಕ್ತಿಗಳಿಗಾಗಿ ಬಳಸುತ್ತಾ ಬರುತ್ತಿದೆ ಎನ್ನಲು ಇದು ಮತ್ತೊಂದು ರೂಪಕವೆನ್ನಬಹುದು.

ಬಂಗಾಳದ ಜನಪರ ಸಾಹಿತಿ ಮಹಾ ಶ್ವೇತಾದೇವಿ ತಮ್ಮದೊಂದು ಕತೆಯ ನಾಯಕಿಯನ್ನಾಗಿ ದೋಪ್ದಿ ಎಂಬ ಆದಿವಾಸಿ ಮಹಿಳೆಯನ್ನು ಮಾಡಿದ್ದರು. ಅವರ ಕತಾಸಂಕಲನಕ್ಕೂ ‘ದೋಪ್ದಿ ಮತ್ತು ಇತರ ಕತೆಗಳು’ ಎಂಬ ಹೆಸರಿತ್ತು. ಅದು ಕನ್ನಡಕ್ಕೂ ಅನುವಾದಗೊಂಡಿದೆ. ಅವರ ಕತಾ ನಾಯಕಿ ದೋಪ್ದಿ ಆಳುವ ವ್ಯವಸ್ಥೆಯ ಜನರ ಮೇಲಿನ ಕ್ರೂರ ದಮನದ ವಿರುದ್ಧ ರಾಜಿರಹಿತವಾಗಿ ಸಿಡಿದು ನಿಂತ ಧೀರ ನಾಯಕಿ. ಸರಕಾರದ ಜನವಿರೋಧಿತನವನ್ನು ಪ್ರಶ್ನಿಸಿ ಹೋರಾಡಿದ ಕಾರಣಕ್ಕೆ, ಅದೂ ಅಲ್ಲದೇ ಹೆಣ್ಣಾ ಎಂಬ ಕಾರಣಕ್ಕಾಗಿಯೇ ತನ್ನ ಶರೀರದ ಮೇಲೆಯೇ ಸರಕಾರಿ ಪಡೆಗಳು ಕ್ರೂರವಾಗಿ ದಾಳಿ ನಡೆಸುವಾಗಲೂ ಎದುರಿಸಿ ಸೆಡ್ಡು ಹೊಡೆದು ನಿಲ್ಲುವ ಗಟ್ಟಿಗಿತ್ತಿಯಾದ ನಾಯಕಿ ದೋಪ್ದಿ. ಆಳುವ ವ್ಯವಸ್ಥೆ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆಯ ಹೆಸರಿನಲ್ಲಿ ಯಾವ ಮಟ್ಟದ ಕ್ರೌರ್ಯವನ್ನು ಈ ದೇಶದ ಆದಿವಾಸಿ ಸಮುದಾಯಗಳ ಮೇಲೆ, ಮಹಿಳೆಯರ ಮೇಲೆ ಹರಿಬಿಡುತ್ತಾ ಅವರ ಬದುಕುಗಳನ್ನು ಮೂರಾಬಟ್ಟೆ ಮಾಡುತ್ತಾ ಬರಲಾಗಿದೆ ಎನ್ನುವುದನ್ನು ಮಹಾಶ್ವೇತಾದೇವಿಯರ ಈ ಕತೆ ಕಣ್ಣಿಗೆ ಕಟ್ಟುವಂತೆ ತೆರೆದಿಡುತ್ತದೆ. ಅದು ಕೇವಲ ಕತೆಯಲ್ಲ ಈ ದೇಶದ ಬಹುಸಂಖ‍್ಯಾತ ಆದಿವಾಸಿ ಬುಡಕಟ್ಟು ಈಗಲೂ ಇರುವ ಸಮುದಾಯಗಳ ಪರಿಸ್ಥಿತಿಯೇ ಆಗಿದೆ.

ಬ್ರಿಟೀಷ್ ಆಡಳಿತ ಇಲ್ಲಿನ ಹಲವಾರು ಬುಡಕಟ್ಟು ಸಮುದಾಯಗಳನ್ನು ಅಪರಾಧಿ ಬುಡಕಟ್ಟುಗಳೆಂದೇ( criminal tribes) ದಾಖಲಿಸಿ ದಮನಿಸಲು ಶ್ರಮಿಸಿತ್ತು. ಕಾರಣ ಈ ಸಮುದಾಯಗಳು ಬ್ರಿಟೀಷ್ ಆಡಳಿತಕ್ಕೆ ಒಡ್ಡಿದ ಸೆಡ್ಡು ಅಂತಹುದಾಗಿತ್ತು. ಈಗಲೂ ನಮ್ಮ ಹಾಲಿ ಆಡಳಿತ ವ್ಯವಸ್ಥೆಯಡಿ ಕೂಡ ಅವೇ ನೀತಿಗಳು ಮುಂದುವರೆದಿವೆ. ಬ್ರಿಟೀಷ್ ಆಡಳಿತಕ್ಕೆ ಆದಿವಾಸಿ ಸಶಸ್ತ್ರ ಬಂಡಾಯಗಳನ್ನು ಹತ್ತಿಕ್ಕಲು ಸಾಧ್ಯವೇ ಆಗಿರಲಿಲ್ಲ. ಚೋಟಾ ನಾಗಪುರದ ಬಿರ್ಸಾ ಮುಂಡಾ, ಚತ್ತೀಸ್ ಗಡದ ನಾರಾಯಣ ಸಿಂಗ್, ಆಂದ್ರದ ಅಲ್ಲೂರಿ ಸೀತಾರಾಮರಾಜು, ನಾಗಾ ಬುಡಕಟ್ಟು ನಾಯಕಿ ರಾಣಿ ಗಯಿಧಿನಿಲ್ಯೂ, ಸಂತಾಲ್ ಬುಡಕಟ್ಟು ನಾಯಕರಾದ ಸಿಧು ಮುರ್ಮು ಮತ್ತು ಕಾನು ಮುರ್ಮು ಮೊದಲಾದ ಬುಡಕಟ್ಟು ಹಿನ್ನೆಲೆಯ ನಾಯಕರು ಬ್ರಿಟೀಷ್ ಆಡಳಿತದ ನಿದ್ದೆ ಕೆಡಿಸಿದ್ದರು. ಹಲವಾರು ಬುಡಕಟ್ಟು ನಾಯಕರನ್ನು ಬ್ರಿಟಿಷ್ ಆಡಳಿತ ಸೆರೆಹಿಡಿದು ಅತ್ಯಂತ ಕ್ರೂರವಾಗಿ ಕೊಂದು ಹಾಕಿದ್ದರೂ ಬುಡಕಟ್ಟು ಸಶಸ್ತ್ರ ಬಂಡಾಯಗಳು ದೇಶದ ಉದ್ದಗಲಕ್ಕೂ ಸಿಡಿಯುತ್ತಲೇ ಇದ್ದವು. ಚಕ್ಮ, ಗೊಂಡ, ಹಾಲ್ಬ, ಪಹಾರಿಯಾ, ಕೋಲಿ, ಚೌರ, ಭೂಮಿಜ್, ಮಿಜೋ, ಕೋಯಾ, ಭಿಲ್, ಕರ್ನಾಟಕದ ಹಲಗಲಿಯ ಬೇಡ ಬುಡಕಟ್ಟು... ಇತ್ಯಾದಿ ನೂರಾರು ಬುಡಕಟ್ಟುಗಳು ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟಗಳನ್ನು ನಡೆಸಿದ್ದವು. ಇದಕ್ಕೆ ಪ್ರಧಾನ ಕಾರಣ ಬ್ರಿಟೀಷರು ನಡೆಸುತ್ತಿದ್ದ ಅರಣ್ಯ ಹಾಗೂ ಪರಿಸರ ಸಂಪತ್ತಿನ ಲೂಟಿ ಮತ್ತು ಬುಡಕಟ್ಟು ಪ್ರದೇಶಗಳ ಮೇಲಿನ ಆಕ್ರಮಣಗಳಾಗಿದ್ದವು. ಇದಕ್ಕೆ ಸ್ಥಳೀಯ ಭೂಮಾಲಿಕ ವರ್ಗ ಸಾಥ್ ನೀಡುತ್ತಿತ್ತು. ಈ ಭೂಮಾಲಿಕ ವರ್ಗ ಆ ಮೂಲಕ ಆದಿವಾಸಿ ಬುಡಕಟ್ಟು ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆಸುತ್ತಾ ಬಂದಿತ್ತು.

ನಮ್ಮ ದೇಶದ ನೀರಾವರಿ, ವಿದ್ಯುತ್ ಉತ್ಪಾದನೆ ಮೊದಲಾದ ಅಭಿವೃದ್ಧಿಗೆ ಆರಂಭವೆಂದು ಬಣ್ಣಿಸುತ್ತಾ ಬಂದಿರುವ ಜಗತ್ತಿನ ಬೃಹತ್ ಯೋಜನೆಗಳಲ್ಲಿ ಒಂದೆಂದು ಪರಿಗಣಿತವಾಗಿದ್ದ ಮೊದಲನೇ ಪಂಚವಾರ್ಷಿಕ ಯೋಜನೆಯ ಬಾಕ್ರಾ-ನಂಗಲ್ ಯೋಜನೆಯಿಂದ ಹಿಡಿದು ಇದುವರೆಗಿನ ಅಭಿವೃದ್ದಿ ಹೆಸರಿನ ಯೋಜನೆಗಳ ನೆಪದಲ್ಲಿ ಮಿಲಿಯಾಂತರ ಜನಸಾಮಾನ್ಯರನ್ನು ಒಕ್ಕಲೆಬ್ಬಿಸಲಾಗಿದೆ. ಪ್ರವಾಹ ನಿಯಂತ್ರಣದ ನೆಪದಲ್ಲೂ ಹಲವಾರು ಜಲಾಶಯಗಳನ್ನು ಕಟ್ಟಲಾಗಿದೆ. ಇಂಡಿಯನ್ ಸೋಷಿಯಲ್ ಇನ್ ಸ್ಟಿಟ್ಯೂಟ್ ಪ್ರಕಾರವೇ 1998 ರ ವೇಳೆಗಾಗಲೇ ಅಭಿವೃದ್ದಿ ಹೆಸರಿನಲ್ಲಿ ಸುಮಾರು 21.3 ದಶಲಕ್ಷ ಜನರನ್ನು ಒಕ್ಕಲೆಬ್ಬಿಸಲಾಗಿದೆ. ಇದರಲ್ಲಿ ಭಾರಿ ಜಲಾಶಯಗಳು, ಗಣಿಗಾರಿಕೆಗಳು, ಕೈಗಾರಿಕಾ ಅಭಿವೃದ್ದಿ, ವನ್ಯ ಜೀವಿ ಸಂರಕ್ಷಣೆ ಮತ್ತು ರಾಷ್ಟ್ರೀಯ ಉದ್ಯಾನವನಗಳು ಸೇರಿವೆ. ಒಕ್ಕಲೆಬ್ಬಿಸಿದವರಲ್ಲಿ ಬಹುಸಂಖ‍್ಯಾತರು ಆದಿವಾಸಿ ಬುಡಕಟ್ಟು ಸಮೂಹಗಳಿಗೆ ಸೇರಿದವರು ಮತ್ತು ಇತರ ಬಡ ಜನಸಮುದಾಯಗಳು ಎನ್ನುವುದರಲ್ಲಿ ಅನುಮಾನ ಬೇಕಿಲ್ಲ. ಈ ಅಂಕಿಅಂಶಗಳು ಪರಿಸ್ಥಿತಿಯ ಪುರ್ಣ ಚಿತ್ರಣವನ್ನು ನೀಡುತ್ತಿದೆ ಎಂದು ಇದರ ಅರ್ಥವಲ್ಲ. ಇದರ ಹಲವು ಪಟ್ಟು ಗ
ಗಂಭೀರವಾದ ಪ್ರತ್ಯಕ್ಷ ಹಾಗೂ ಪರೋಕ್ಷ ಹಾನಿಗಳನ್ನು ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಇನ್ನಿತರ ಜನಸಾಮಾನ್ಯರಿಗೆ ಹಾಗೂ ಪರಿಸರಕ್ಕೆ ಆಳುವ ವ್ಯವಸ್ಥೆ ಮಾಡುತ್ತಾ ಬಂದಿದೆ. ಅದರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಲೂ ಇದ್ದೇವೆ.

ಒಕ್ಕಲೆಬ್ಬಿಸಿದವರಿಗೆ ನೀಡಿದ್ದ ಭರವಸೆಯಂತೆ ನ್ಯಾಯಯುತ  ಪರಿಹಾರ ಕಲ್ಪಿಸಿ, ಕೃಷಿಯೋಗ್ಯ ಭೂಮಿ, ಉದ್ಯೋಗ ಮೂಲಭೂತ ಸೌಲಭ್ಯ ನೀಡಿರುವ ಬಗ್ಗೆ ಗಮನಿಸಿದರೆ ಬಹಳ ಗಾಬರಿಯಾಗುತ್ತದೆ. ನಮ್ಮ ಆಳುವ ವ್ಯವಸ್ಥೆಯು ಹೇರುತ್ತಿರುವ ಅಭಿವೃದ್ಧಿಯು ಎಷ್ಟು ಮಟ್ಟಕ್ಕೆ ಬಹುಸಂಖ‍್ಯಾತರಾಗಿರುವ ಈ ದೇಶದ ಅಡಿಪಾಯದ ಸಮುದಾಯಗಳ ವಿರುದ್ಧವಾಗಿದೆ ಎನ್ನುವುದು ಕಣ್ಣಿಗೆ ರಾಚುತ್ತದೆ.

1950-1990 ರವರೆಗಿನ ಒಂದು ಅಂಕಿ ಅಂಶದಂತೆ ಜಲಾಶಯ, ಗಣಿಗಾರಿಕೆ, ಭಾರಿ ಕೈಗಾರಿಕೆ, ವನ್ಯಜೀವಿ ಸಂರಕ್ಷಣೆ ಹಾಗೂ ರಾಷ್ಟ್ರೀಯ ಉದ್ಯಾನವನ ಹೆಸರಿನ ಅಭಿವೃದ್ಧಿ ಯೋಜನೆಗಳಲ್ಲಿ ಒಟ್ಟು ನಿರ್ವಸಿತರಾದವರಲ್ಲಿ ಶೇಕಡಾ 25ರಿಂದ 30ರಷ್ಟು ಜನರಿಗೆ ಪುನರ್ವಸತಿ ಎಂದು ಹೆಸರಿಗೆ ಮಾತ್ರ ಪರಿಹಾರ ಹಾಗೂ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಅದು ಕೂಡ ಸರಿಯಾದ ಪರ್ಯಾಯವಲ್ಲ. ಬಂಜರು ಭೂಮಿ, ನೀರಿನ ಸೌಲಭ್ಯ ಇಲ್ಲದ ಭೂಮಿಗೆ ಅವರನ್ನೆಲ್ಲಾ ತಳ್ಳಿಹಾಕಿರುವುದು ಕಣ್ಣಿಗೆ ರಾಚುತ್ತದೆ. ಆದರೆ ಹಾಗೆ ನಿರ್ವಸಿತರಾದವರಲ್ಲಿ ಶೇಕಡಾ 80ಕ್ಕೂ ಹೆಚ್ಚುಭಾಗ ಆದಿವಾಸಿ ಬುಡಕಟ್ಟು ಸಮುದಾಯಗಳಾಗಿದ್ದರೆ ಪರಿಹಾರ ಪುನರ್ವಸತಿ ಕಲ್ಪಿಸಿದ್ದು ಅವರ ಶೇ 2ರಿಂದ 2.5 ಯಷ್ಟು ಜನರಿಗೆ ಮಾತ್ರ. ಉಳಿದ ಶೇಕಡಾ 97 ಕ್ಕೂ ಹೆಚ್ಚಿನ ನಿರ್ವಸಿತ ಆದಿವಾಸಿ ಬುಡಕಟ್ಟು ಸಮುದಾಯಗಳು ತಮ್ಮ ಮೂಲಸ್ಥಳಗಳಿಂದ ದಿಕ್ಕಾ ಪಾಲಾಗಿ ಎಲ್ಲೆಂದರಲ್ಲಿ ಹೋಗಿ ತಮ್ಮ ಬದುಕುಗಳನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಯಿತು. ಅವರಿಗೆ ಯಾವುದೇ ಭೂಮಿ, ಹಕ್ಕುಪತ್ರ ಇನ್ನಿತರ ಸೌಲಭ್ಯಗಳನ್ನು ಇದುವರೆಗೂ ಆಳುತ್ತಾ ಬಂದ ಸರ್ಕಾರಗಳು ಕಲ್ಪಿಸದೇ ಅವರ ಬದುಕುಗಳನ್ನು ಮೂರಾಬಟ್ಟೆ ಮಾಡಿಟ್ಟಿವೆ. ಹಾಗೆ ವಲಸೆಹೋದ ಜನಸಮುದಾಯಗಳನ್ನು ಪದೇ ಪದೇ ಒಕ್ಕಲೆಬ್ಬಿಸುತ್ತಾ ಹೋದ ಉದಾಹರಣೆಗಳು ಸಾಕಷ್ಟಿವೆ. ಬ್ರಿಟೀಷರ ನೇರ ಆಡಳಿತ ಕೊನೆಗೊಂಡ ನಂತರದಿಂದ 1990ರವರೆಗೆ ಸುಮಾರು 60ದಶಲಕ್ಷಕ್ಕೂ ಹೆಚ್ಚು ಜನರನ್ನು ಒಕ್ಕಲೆಬ್ಬಿಸಿ ಬಿಸಾಕಲಾಗಿದೆ. ಇದರಲ್ಲಿ ಹೆಚ್ಚಿನವರು ಆದಿವಾಸಿ ಬುಡಕಟ್ಟು ಸಮುದಾಯಗಳೇ ಆಗಿವೆ.

 ನಮ್ಮ ಕರ್ನಾಟಕದ ಉದಾಹರಣೆಗಳೂ ಸಾಕಷ್ಟಿವೆ. ಕೈಗಾ, ಸೀಬರ್ಡ್ ನೌಕಾನೆಲೆ, ಬೇಡ್ತಿ, ವರಾಹಿ, ಚಕ್ರಾ, ನಾಗರಹೊಳೆ, ಬಂಡಿಪುರ, ಭದ್ರ ಅಭಯಾರಣ್ಯ ಉಡುಪಿಯ ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರ, ಇತ್ಯಾದಿಗಳನ್ನು ನೋಡಬಹುದು. ಈ ಯೋಜನೆಗಳ ನೆಪದಲ್ಲಿ ಒಕ್ಕಲೆಬ್ಬಿಸಿದವರಿಗೆ ಇದುವರೆಗೂ ಸರಿಯಾದ ಪರಿಹಾರವಾಗಲೀ, ಪರ್ಯಾಯ ಭೂಮಿಯಾಗಲೀ ನೀಡಿಲ್ಲ. ಆದರೆ ಉತ್ತರ ಇಂಡಿಯಾದ ಒಕ್ಕಲೆಬ್ಬಿಸಿದವರ ಕತೆಗಳೂ ಕರ್ನಾಟಕಕ್ಕಿಂತಲೂ ಬಹಳ ಭೀಕರವಾಗಿವೆ.

ಈ ಎಲ್ಲಾ ಯೋಜನೆಗಳು ಭಾರಿ ಪ್ರಚಾರದೊಂದಿಗೆ ಹೇಳಿಕೊಂಡು ಬಂದ ಉದ್ಧೇಶಗಳನ್ನು ಇದುವರೆಗೂ ಪೂರೈಸಿಲ್ಲ. ಕೃಷಿಗೆ ನೀರಾವರಿಯೆಂದು ಹೇಳಿ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಭಾರಿ ಮಟ್ಟದಲ್ಲಿ ಮಣ್ಣು ತನ್ನ ಆರೋಗ್ಯ ಕಳೆದುಕೊಂಡು ಬಂಜರಾಗತೊಡಗಿದೆ. ಮಿತಿಯಿಲ್ಲದ ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಕಗಳನ್ನು ಬಳಸಬೇಕಾದ ಒತ್ತಡ ಹೇರಿದ್ದರಿಂದಾಗಿ ಸಾವಿರಾರು ಜೀವ ಜಂತುಗಳು ನಾಶವಾಗಿ ಪಾರಿಸರಿಕ ಏರುಪೇರುಗಳಿಗೆ ಕಾರಣವಾಗಿವೆ. ಪ್ರವಾಹ ತಡೆಯಲೆಂದು ಜಲಾಶಯಗಳೆಂದು ಹೇಳಿಕೊಂಡಿದ್ದರೂ ಇಂತಹ ಜಲಾಶಯಗಳಿಂದಾಗಿಯೇ ಪ್ರವಾಹಗಳು ಮತ್ತಷ್ಟು ಹೆಚ್ಚಾಗಿ ನಿಯಂತ್ರಣವಿಲ್ಲದೇ ಜಲಪ್ರಳಯಗಳು ಸಂಭವಿಸುತ್ತಿವೆ. ಭಾರಿ ಭೂಕುಸಿತಗಳಿಗೂ ಕಾರಣವಾಗುತ್ತಾ ಮಾನವ ಸಂಪನ್ಮೂಲ ಹಾಗು ಪ್ರಾಕೃತಿಕ ಸಂಪನ್ಮೂಲಗಳ ವಿನಾಶಕ್ಕೆ ಕಾರಣವಾಗುತ್ತಿವೆ. ಭೂಕಂಪನಗಳಿಗೂ ಕಾರಣವಾಗುತ್ತಿವೆ. ಅಕಾಲಿಕ ಮಳೆ, ಅತೀವೃಷ್ಟಿ, ಅನಾವೃಷ್ಟಿ, ಭಾರಿ ಜಲಪ್ರಳಯಗಳು, ಭಾರಿ ಭೂಕುಸಿತಗಳು ಈಗ ಮಾಮೂಲಿ ಸಂಗತಿಗಳಾಗಿವೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ ಎನ್ನುವುದು ಪ್ರತ್ಯೇಕವಾಘಗಿ ಹೇಳಬೇಕಾದ ಅಗತ್ಯವಿಲ್ಲ

 ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಇರುವಿಕೆಯಿಲ್ಲದೇ ಪರಿಸರ ರಕ್ಷಣೆಯಾಗಲು ಅಸಾಧ್ಯ. ಅರಣ್ಯ ಹಾಗೂ ಪರಿಸರ ರಕ್ಷಣೆಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳು ಇನ್ನಿತರ ಸ್ಥಳೀಯ ಜನಸಾಮಾನ್ಯರ ಪಾತ್ರ ಬಹಳ ಮುಖ್ಯವಾದುದು. ನೀರು, ಕಾಡು, ಭೂಮಿ ಹಾಗೂ ತಮ್ಮ ಸ್ವಾತಂತ್ರ್ಯ ರಕ್ಷಣೆಗಾಗಿ ಈ ದೇಶದ ಆದಿವಾಸಿಬುಡಕಟ್ಟು ಸಮುದಾಯಗಳು ಅಪಾರ ತ್ಯಾಗ ಹಾಗೂ ಬಲಿದಾನಪೂರಿತವಾದ ಸಂಗ್ರಾಮ ನಡೆಸುತ್ತಾ ಬಂದಿರುವುದನ್ನು ನಾವು ನೋಡಿದ್ದೇವೆ. ಈಗಲೂ ಮಧ್ಯ ಇಂಡಿಯಾ ಹಾಗೂ ಈಶಾನ್ಯ ಇಂಡಿಯಾದಲ್ಲಿ ಮೂಲನಿವಾಸಿ ಬುಡಕಟ್ಟು ಸಮುದಾಯಗಳು  ಇವೇ ಕಾರಣಗಳಿಗಾಗಿಯೇ ಆಳುವ ಸರಕಾರಗಳ ವಿರುದ್ಧ ಸಂಗ್ರಾಮ ನಡೆಸುತ್ತಿವೆ ಎನ್ನುವುದನ್ನೂ ಗಮನಿಸಬೇಕಾದ ಅಗತ್ಯವಿದೆ..

ಕೈಗಾರಿಕಾ ಅಭಿವೃದ್ದಿ ಹೆಸರಿನ ಯೋಜನೆಗಳು ಕೂಡ ಕೃಷಿಭೂಮಿ ಹಾಗೂ ಜಲಮೂಲಗಳನ್ನು ನಾಶಮಾಡುತ್ತಾ ವಿಷಾನಿಲ ಹೊರಹಾಕುವ ಮರಣಶಯ್ಯೆಗಳನ್ನು ಹುಟ್ಟುಹಾಕಿವೆ. ಜೊತೆಗೆ ಸ್ಥಳೀಯವಾಗಿ ವಿಕೇಂದ್ರಿತ ಕೈಗಾರಿಕಾ ಬೆಳವಣಿಗೆಗೆ ತಡೆಯೊಡ್ಡಿ ಸ್ಥಳೀಯ ತಂತ್ರಜ್ಞಾನದ ಅಭಿವೃದ್ದಿ ಹಾಗೂ ಸ್ವಾವಲಂಬನೆ ಸಾಧಿಸಲಾಗದಂತೆ ಮಾಡಿಟ್ಟಿವೆ.

ಇದೇ ವೇಳೆಯಲ್ಲಿ ಈ ಎಲ್ಲಾ ಭಾರಿ ಯೋಜನೆಗಳಿಂದಾಗಿ ಸಿಮೆಂಟ್, ಕಬ್ಬಿಣ, ಭಾರಿ ವಾಹನ ಹಾಗೂ ಯಂತ್ರೋಪಕರಣಗಳ ತಯಾರಕರಾದ ಜಾಗತಿಕ ಭಾರಿ ಕಾರ್ಪೋರೇಟುಗಳು ಮತ್ತು ಅವರ ದಲ್ಲಾಳಿಗಳು ಹಲವಾರು ಪಟ್ಟು ಸೂಪರ್ ಲಾಭ ಗಳಿಸುತ್ತಾ ತಮ್ಮ ಸಂಪತ್ತುಗಳನ್ನು ವೃದ್ಧಿಸಿಕೊಂಡವು. ಇವುಗಳ ಜೊತೆಗೆ ಭಾರಿ ರಾಸಾಯನಿಕ ಕಾರ್ಪೋರೇಟುಗಳು ಸೇರಿಕೊಂಡವು. ಹಸಿರು ಕ್ರಾಂತಿಯ ಪರಿಕಲ್ಪನೆ ಕೂಡ ಇವರುಗಳ ಯೋಜನೆಯೇ ಆಗಿತ್ತು. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಹಸಿರು ಕ್ರಾಂತಿಯ ನೀರಾವರಿ ಪ್ರದೇಶಗಳು ಮತ್ತು ಅಲ್ಲಿನ ರೈತರು ಹಾಗೂ ಇನ್ನಿತರ ಜನಸಾಮಾನ್ಯರು ಇಂದು ಅನುಭವಿಸುತ್ತಿರುವ ಪಡಿಪಾಟಲುಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಬೆಳೆಗೆ ತಕ್ಕ ಬೆಲೆಯಿಲ್ಲದೇ ಸಾಲ ಇನ್ನಿತರ ಕಿತ್ತು ತಿನ್ನುವ ಸಮಸ್ಯೆಗಳನ್ನು ತಾಳಲಾಗದೇ ನಮ್ಮ ದೇಶದ ಲಕ್ಷಾಂತರ ರೈತರು ಆತ್ಮಹತ್ಯೆಗಳಿಗೆ ಇಳಿಯಬೇಕಾಗಿ ಬಂದಿದ್ದು ಕೂಡ ಪ್ರಧಾನವಾಗಿ ಇವೇ ಕಾರಣಗಳಿಂದಾಗಿ ಎನ್ನುವುದನ್ನು ಮರೆಯಬಾರದು.

ಆದಿವಾಸಿ ಬುಡಕಟ್ಟು ಪ್ರದೇಶಗಳಲ್ಲಿರುವ ಸಮೃಧ್ದ ಪ್ರಾಕೃತಿಕ ಸಂಪತ್ತುಗಳನ್ನು ಭಾರಿ ಕಾರ್ಪೋರೇಟುಗಳಿಗೆ ಧಾರೆಯೆರೆಯುವ ಕಾಯಕದಲ್ಲಿ ಇದುವರೆಗೂ ಆಳುತ್ತಾ ಬಂದಿರುವ ಯಾವ ಸರ್ಕಾರಗಳೂ ಹಿಂದೆ ಬಿದ್ದ ಉದಾಹರಣೆಯಿಲ್ಲ. ಚತ್ತೀಸ್ ಗಡದಲ್ಲಿ ಬಿಜೆಪಿಯ ಭಾರಿ ಕಾರ್ಪೋರೇಟುಪರ ನೀತಿಗಳನ್ನು ಟೀಕಿಸುತ್ತಾ ಕಾಂಗ್ರೆಸ್ ಬಂದಿತ್ತು. ನಂತರ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಕಾಂಗ್ರೆಸ್ ತನ್ನ ಸರಕಾರ ರಚಿಸಿದ ಒಂದೆರಡು ತಿಂಗಳುಗಳಲ್ಲೇ ಆದಿವಾಸಿ ಬುಡಕಟ್ಟುಗಳಿರುವ ಸುಮಾರು 70,000 ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವನ್ನು ಗಣಿಗಾರಿಕೆಗಾಗಿ ಭಾರಿ ಕಾರ್ಪೋರೇಟುಗಳಿಗೆ ಹಸ್ತಾಂತರಿಸಿದ್ದನ್ನು ನಾವಿಲ್ಲಿ ಗಮನಿಸಬಹುದು.

ಭಾರಿ ಕಾರ್ಪೋರೇಟುಗಳು ಈ ದೇಶದ ಅರಣ್ಯ ಹಾಗೂ ಖನಿಜ ಮೊದಲಾದ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆಹೊಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿವೆ. ಅದಕ್ಕಾಗಿ ಹಲವಾರು ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿಕೊಳ್ಳುತ್ತಾ ಬರಲಾಗುತ್ತಿದೆ. ಆದಿವಾಸಿ ಬುಡಕಟ್ಟು ಪ್ರದೇಶಗಳ ಮೇಲಿನ  ಆಕ್ರಮಣಗಳನ್ನು ತೀವ್ರಗೊಳಿಸುತ್ತಾ ಬರಲಾಗುತ್ತಿದೆ. ಒಂದು ವರುಷದ ಹಿಂದೆ ಇದೇ ಒರಿಸ್ಸಾದ ನೂರಾರು ಕುಟುಂಬಗಳನ್ನು ಒಕ್ಕೆಲೆಬ್ಬಿಸಲು ಅರೆಸೈನಿಕ ಪಡೆಗಳೊಂದಿಗೆ ದಾಳಿಯಿಟ್ಟು ಅದರಲ್ಲಿ ಒಬ್ಬ ರೈತನನ್ನು ಗುಂಡಿಟ್ಟು ಕೊಂದದ್ದಲ್ಲದೇ ಸತ್ತು ಬಿದ್ದ ರೈತನ ಮೇಲೆ ಸರ್ಕಾರಿ ಛಾಯಾಚಿತ್ರಕಾರ ಒದ್ದು ಅಪಮಾನ ಮಾಡಿದ ಘಟನೆಯನ್ನು ಬಹಳಷ್ಟು ಜನ ಮರೆತಿರಲಾರರು. ಹಲವಾರು ಜನರು ಗಾಯಗೊಂಡಿರುವ ಘಟನೆಯೂ ನಡೆಯಿತು.

ಇದೀಗ ಯೂನಿಯನ್ ಸರ್ಕಾರ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿಯನ್ನಾಗಿಸುತ್ತಿದೆ. ದಲಿತಪರ ಬಹುಜನಪರ ಎಂದು ಬಿಂಬಿಸಿಕೊಂಡಿರುವ ಬಿ ಎಸ್ ಪಿಯ ಮಾಯಾವತಿ ಈಗಾಗಲೇ ಮುರ್ಮುಗೆ ತನ್ನ ಬೆಂಬಲವನ್ನು ಘೋಷಿಸಿಯಾಗಿದೆ. ಜಾತ್ಯಾತೀತ ಎಂದು ಹೇಳಿಕೊಳ್ಳುವ ಜನತಾದಳ ಕೂಡ ಮುರ್ಮುರನ್ನು ಬೆಂಬಲಿಸಿ ಬಿಜೆಪಿ ನಾಯಕರ ಹೆಗಲ ಮೇಲೆ ಕೈ ಹಾಕಿರುವ ಛಾಯಾಚಿತ್ರ ಪ್ರಚಾರವೂ ನಡೆದಿದೆ. ಆ ಮೂಲಕ ಬಿಜೆಪಿಯ ಜೊತೆಗಿನ ಸಹಪಯಣ ತನ್ನದೆಂದು ಮತ್ತೊಮ್ಮೆ ತೋರಿಸಿಕೊಂಡಿದ್ದಾರೆ.

ಬಿಜು ಜನತಾದಳ, ವೈ ಎಸ್ಸಾರ್ ಕಾಂಗ್ರೆಸ್ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ, ತೆಲುಗು ದೇಶಂ ಪಕ್ಷ, ಶಿರೋಮಣಿ ಅಕಾಲಿದಳ ಮೊದಲಾದ ಪಕ್ಷಗಳು ಮುರ್ಮುರನ್ನು ಬೆಂಬಲಿಸಿವೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ಪಕ್ಷಗಳು ಆದಿವಾಸಿ ಕಾರ್ಡ್ ಅನ್ನು ತಮ್ಮ ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದಲೂ ಬಿಜೆಪಿ ಜೊತೆಗೆ ಸೇರಿ ತಮ್ಮ ಲಾಭಗಳನ್ನು ಪಡೆಯಲು ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿಯನ್ನಾಗಿಸಲು ಬೆಂಬಲಿಸಬಹುದು.

 

11/07/2022      

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...