Skip to main content

ಶ್ರೀಲಂಕ ತುರ್ತು ಪರಿಸ್ಥಿತಿ#ಜಾಗತೀಕರಣದ ನಿರಂಕುಶತೆಯ ಬಳುವಳಿ#srilanka emergency#globalisation#fascism

 

ಶ್ರೀಲಂಕ ತುರ್ತು ಪರಿಸ್ಥಿತಿ

ಜಾಗತೀಕರಣದ ನಿರಂಕುಶತೆಯ ಬಳುವಳಿ....

                                                              -ನಂದಕುಮಾರ್. ಕೆ. ಎನ್. ಕುಂಬ್ರಿ ಉಬ್ಬು

                                                            ಮಿಂಚಂಚೆ:nandakumarnandana67@gmail.com


     ತುಂಡು ಬ್ರೆಡ್ಡಿಗಾಗಿ, ಜೀವ ರಕ್ಷಕ ಔಷಧಿಗಳಿಗಾಗಿ, ನಿತ್ಯದ ಆಹಾರ ವಸ್ತುಗಳಿಗಾಗಿ, ನಿತ್ಯಬಳಕೆಯ ಅನಿಲ ಮತ್ತು ಇಂಧನಕ್ಕಾಗಿ ಮೈಲುದ್ದ ಸರತಿ ಸಾಲುಗಳು, ದಿನಕ್ಕೆ ಹದಿನಾರರಿಂದ 20 ಗಂಟೆಗಳ ವಿದ್ಯುತ್ ನಿಲುಗಡೆ, ನೀರು ಸರಬರಾಜು ಇಲ್ಲ. ಆಸ್ಪತ್ರೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯಚರಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ವಿದ್ಯುತ್ ಇಲ್ಲ, ಇತರ ಇಂಧನವೂ ಇಲ್ಲ, ಗಂಟೆಗಟ್ಟಲೆ ಕಾದರೂ ಆಹಾರ ವಸ್ತುಗಳು ಸಿಗುತ್ತಿಲ್ಲ. ಎಲ್ಲಾ ವಸ್ತುಗಳಿಗೂ ಬೆಲೆಗಳು ಗಗನಕ್ಕೇರಿದ್ದರಿಂದಾಗಿ ಕೊಳ್ಳಲಾಗುತ್ತಿಲ್ಲ , ಜನಸಾಮಾನ್ಯರ ಕೈಯಲ್ಲಿ ಹಣವೇ ಇಲ್ಲ. ಹಣ ಸಂಪಾದಿಸಲು ಉದ್ಯೋಗ ಕೂಡ ಇಲ್ಲ. ಸಂಚಾರ ವ್ಯವಸ್ಥೆ ಸ್ತಬ್ಧವಾದಂತಹ ಅನುಭವ, ಎಲ್ಲಾ ಅಗತ್ಯ ವಸ್ತುಗಳನ್ನೂ ಸೇನೆಯ ಉಸ್ತುವಾರಿಯಲ್ಲಿ ಪಡಿತರದ ರೀತಿ ಹಂಚುವಿಕೆ. ಅದೂ ಕೂಡ ಎಲ್ಲರಿಗೂ ಸಿಗುತ್ತಿಲ್ಲ, ಇಂಧನ ಹಾಗೂ ವಿದ್ಯುತ್‍ ವ್ಯಾಪಕ ಕೊರತೆ, ಮುದ್ರಣ ಕಾಗದ ಇಲ್ಲ. ಪತ್ರಿಕೆಗಳಾಗಲೀ, ಪಾಠ ಪುಸ್ತಕಗಳಾಗಲೀ ಮುದ್ರಣ ಮಾಡಲಾಗದ ಸ್ಥಿತಿ, ಇತರ ದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕೂಡ ಹಣವಿಲ್ಲದ ಸ್ಥಿತಿ, ಕೃಷಿಚಟುವಟಿಕೆಗಳಾಗಲೀ, ಕೈಗಾರಿಕಾ ಚಟುವಟಿಕೆಗಳಾಗಲೀ ನಡೆಯಲಾರದ ಸ್ಥಿತಿ…ಎಲ್ಲೆಡೆಯೂ ಜನರ ಹಾಹಾಕಾರ, ಬೀದಿಗಿಳಿದ ಆಕ್ರೋಶಭರಿತ ಜನರಿಂದ ರಾಷ್ಟ್ರದ ಅಧ್ಯಕ್ಷರ ಬಂಗಲೆಯ ಮುತ್ತಿಗೆ, ಲಾಟಿ ಏಟುಗಳು, ಟಿಯರ್ ಗ್ಯಾಸ್ ಸಿಡಿತಗಳು, ಬಂಧನಗಳು, ಚಿತ್ರಹಿಂಸೆಗಳು, ದೇಶಾದ್ಯಂತ ಕರ್ಫ್ಯೂ…..ಇಂತಹ ಒಂದು ಸಾಮಾಜಿಕ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದೇ ತೀವ್ರ ಸುಸ್ತಿನ ವಿಚಾರ. ಇನ್ನು ಅನುಭವಿಸಬೇಕಾಗಿ ಬಂದರೆ ಪರಿಸ್ಥಿತಿ ಹೇಗಿರಬಹುದು?. ಇದಕ್ಕಿಂತಲೂ ಕೆಟ್ಟ ಆರ್ಥಿಕ, ರಾಜಕೀಯ, ಆಡಳಿತಾತ್ಮಕ ಹಾಗೂ ಸಾಮಾಜಿಕ ಪರಿಸ್ಥಿತಿ ನಮ್ಮ ಪಕ್ಕದ ತಮಿಳುನಾಡು ರಾಜ್ಯದ ಗಡಿಯಿಂದ ಇಪ್ಪತ್ತೆರಡು ಕಿ.ಮೀಟರುಗಳ ದೂರದಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕದಲ್ಲಿ ಹುಟ್ಟುಹಾಕಲಾಗಿದೆ.


                ಪ್ರತಿಭಟನಾ ನಿರತ ಶ್ರೀಲಂಕಾ ಜನರು

ನಮ್ಮ ದೇಶದ ದಕ್ಷಿಣಕ್ಕೆ ಇರುವ ದ್ವೀಪ ರಾಷ್ಟ್ರ ಶ್ರೀಲಂಕಾ ಇಂದು ವ್ಯಾಪಕ ಅರಾಜಕತೆಯಲ್ಲಿ ಮುಳುಗಿದೆ. ಅಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದಕ್ಕೂ ಕೆಲವು ತಿಂಗಳ ಮೊದಲಿನಿಂದಲೇ ಆರ್ಥಿಕ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು. ಅಲ್ಲಿನ ಜನಸಾಮಾನ್ಯರು ತತ್ತರಿಸುವಂತೆ ಮಾಡಲಾಗಿದೆ. ಸುಮಾರು 2.3 ಕೋಟಿಯಷ್ಟು ಜನಸಂಖ್ಯೆಯಿರುವ, 62,705 ಚದುರ ಕಿಲೋಮೀಟರುಗಳಷ್ಟು ಭೂಪ್ರದೇಶವನ್ನು ಹೊಂದಿರುವ ಈ ದ್ವೀಪ ರಾಷ್ಟ್ರದಲ್ಲಿ ಜನಸಾಮಾನ್ಯರು ಈಗ ದಿಕ್ಕೆಟ್ಟು ನಿಲ್ಲುವಂತೆ ಮಾಡಿಡಲಾಗಿದೆ.

ಶ್ರೀಲಂಕದ ಹಣದುಬ್ಬರದ ಪ್ರಮಾಣ ಇಡೀ ಏಷಿಯಾ ಖಂಡದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಶ್ರೀಲಂಕಾದ ಕೇಂದ್ರೀಯ ಬ್ಯಾಂಕಿನ ದತ್ತಾಂಶದಂತೆ ಅದು ಇದೇ ವರುಷದ ಫೆಬ್ರುವರಿಯಲ್ಲಿ ಶೇಕಡಾ 17.5 ರಷ್ಟಿತ್ತು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐ ಎಂ ಎಫ್) ಪ್ರಕಾರ 2021 ನೇ ಸಾಲಿನಲ್ಲಿ ಶ್ರೀಲಂಕಾದ ಒಟ್ಟು ಸಾರ್ವಜನಿಕ ಸಾಲ ಅಲ್ಲಿನ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 119 ಆಗಿತ್ತು. ಅಂದರೆ ಅದರ ಒಟ್ಟು ವಾರ್ಷಿಕ ಉತ್ಪಾದನೆಗಿಂತಲೂ ಶೇಕಡಾ 19ರಷ್ಟು ಹೆಚ್ಚು.

 


                                                 ಅಧ್ಯಕ್ಷ ನಿವಾಸದ ಎದುರು ಭದ್ರತಾ ಪಡೆಯ ಬಸ್ಸಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಭತ್ತ, ತೆಂಗು, ಟಿ, ರಬ್ಬರು, ತಂಬಾಕುಗಳು ಶ್ರೀಲಂಕದ ಮುಖ್ಯ ಬೆಳೆಗಳು. ಪ್ರವಾಸೋದ್ದಿಮೆ, ಟಿ, ರಬ್ಬರು, ಸಿದ್ಧ ಉಡುಪುಗಳು ಶ್ರೀಲಂಕಾದ ಮುಖ್ಯ ಕೈಗಾರಿಕೆಗಳಾಗಿವೆ. ಮೊದಲೇ ಮೂರು ದಶಕಗಳ ಅಂತರ್ ಯುದ್ಧದಿಂದ ಬಸವಳಿದಿದ್ದ ಈ ರಾಷ್ಟ್ರದ ಪ್ರವಾಸೋದ್ದಿಮೆ ಮತ್ತಿತರ ಉದ್ದಿಮೆಗಳು 2019ರಲ್ಲಿ ಹಲವೆಡೆ ನಡೆದ ಸರಣಿ ಬಾಂಬ್ ಧಾಳಿಗಳ ನಂತರ ನೆಲಕಚ್ಚತೊಡಗಿತ್ತು. ಆ ರಾಷ್ಟ್ರದ ಒಟ್ಟು ವಾರ್ಷಿಕ ಉತ್ಪನ್ನದಲ್ಲಿ 2000ದಲ್ಲಿ ಶೇಕಡಾ 6ರಷ್ಟು ಇದ್ದ ಪ್ರವಾಸೋದ್ದಿಮೆ ವರಮಾನ 2019 ರಲ್ಲಿ ಶೇಕಡಾ 12.6ರಷ್ಟು ಬರುತ್ತಿತ್ತು. ಒಟ್ಟಾರೆ ಪ್ರವಾಸೋದ್ದಿಮೆಯಿಂದ ಬರುವ ಆದಾಯ ಒಟ್ಟು ರಾಷ್ಟ್ರೀಯ ಉತ್ಪನ್ನದ  ಶೇಕಡಾ 20ರಷ್ಟಾಗಿತ್ತು ಎಂಬ ಮತ್ತೊಂದು ಅಂದಾಜು ಕೂಡ ಇದೆ. ಕಳೆದೆರಡು ವರುಷಗಳಿಂದ ಕೋವಿದ್ 19ರ ಹೆಸರಿನ ಲಾಕ್ ಡೌನ್ ಇತ್ಯಾದಿ ಅವಾಂತರಗಳಿಂದಾಗಿ ಪ್ರವಾಸೋದ್ದಿಮೆ ಮಾತ್ರವಲ್ಲದೇ ಇದ್ದ ಎಲ್ಲಾ ಉತ್ಪಾದನಾ ಹಾಗೂ ಕೃಷಿ ಚಟುವಟಿಕೆಗಳೂ ಸ್ತಬ್ಧಗೊಂಡ ಪರಿಸ್ಥಿತಿಗೆ ಜಾರಿದ್ದವು. ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ನೆಪದಲ್ಲಿ 2019ರಲ್ಲಿ ಶೇಕಡಾ 15ರಷ್ಟು ತೆರಿಗೆ ಕಡಿತ ಮಾಡಿ ಭಾರಿ ಶ್ರೀಮಂತರ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಅದರಿಂದಾಗಿ ಸರಕಾರದ ತೆರಿಗೆ ಸಂಗ್ರಹದ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಟೀ ಮತ್ತು ಸಿದ್ದ ಉಡುಪುಗಳು ಮಾತ್ರವೇ ಶ್ರೀಲಂಕಾದ ಒಟ್ಟು ರಫ್ತಿನಲ್ಲಿ ಶೇಕಡಾ 50ರಷ್ಟು ಪಾಲು ಪಡೆದಿತ್ತು. ಇತರ ಉತ್ಪಾದನೆ ಹಾಗೂ ರಫ್ತುಗಳ ಮೇಲೆ ಗಮನ ನೀಡಲಿಲ್ಲ. ಇಡೀ ದೇಶ ಭಾರಿ ಮೊತ್ತದ ಸಾಲದ ಮೇಲೆ ನಡೆಯತೊಡಗಿತು. ತೈಲ, ಅನಿಲದಿಂದ ಹಿಡಿದು ಪ್ರತಿಯೊಂದನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿಗೆ ದೂಡಲ್ಪಟ್ಟು ವಿದೇಶಿ ವಿನಿಮಯ ಕೊರತೆ ಶೇಕಡಾ 70ನ್ನು ದಾಟಿತು. 2000ದಲ್ಲಿ ಶ್ರೀಲಂಕಾದ ರಪ್ತು ಅದರ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 12ಕ್ಕೆ ಕುಸಿದು ಬಿಟ್ಟಿತ್ತು. ಮೊದಲೇ ಕೆಲವು ದಶಕಗಳಿಂದ ತೀವ್ರವಾಗುತ್ತಾ ನಡೆದಿದ್ದ ವ್ಯಾಪಾರ ಕೊರತೆಯಿಂದ ಬಳಲುತ್ತಾ ಬಂದಿದ್ದ ಶ್ರೀಲಂಕಾ ಸರಕಾರದ ಬೊಕ್ಕಸದಲ್ಲಿ ವಿದೇಶಿ ವಿನಿಮಯ ಮೀಸಲು ಈಗ ಬರಿದಾಗಿದ್ದರಿಂದಾಗಿ ಆಮದು ಮಾಡಿಕೊಳ್ಳುವ ಶಕ್ತಿಯನ್ನೂ ಕೂಡ ಕಳೆದುಕೊಂಡು ಬಿಟ್ಟಿತು. ಜೊತೆಗೆ ವಿಪರೀತವಾಗಿರುವ ಸಾಲಮರುಪಾವತಿ ಹಾಗೂ ಬಡ್ಡಿ ಪಾವತಿಯ ಮೊತ್ತಗಳಿಂದಾಗಿ ದೇಶದ ಹಣಕಾಸು ವ್ಯವಸ್ಥೆ ದಿಕ್ಕಾಪಾಲಾಗಿದೆ. ಇದರಿಂದಾಗಿ ಇಡೀ ಶ್ರೀಲಂಕಾ ಹಸಿವು, ನೀರಡಿಕೆ, ಕತ್ತಲೆ, ಭವಿಷ್ಯದ ಬಗೆಗಿನ ಆತಂಕ, ಆಕ್ರೋಶಗಳಿಂದ ತತ್ತರಿಸುವಂತಾಯಿತು. ಇದಕ್ಕೆ ಸರಕಾರದ ದುರಾಡಳಿತವೇ ಕಾರಣವೆಂದು ದೇಶಾದ್ಯಂತ ಅಧ್ಯಕ್ಷ ಗೋತಾಬಾಯಾ ಸರಕಾರದ ರಾಜಿನಾಮೆಗೆ ಒತ್ತಾಯಗಳು ಹೆಚ್ಚಾಗತೊಡಗಿವೆ. ಭಾರಿ ಪ್ರತಿಭಟನೆಗಳಿಗೆ ಕಾರಣವಾಗಿವೆ. ಸರಕಾರ ಸೇನೆಗೆ ಭಾರಿ ಅಧಿಕಾರ ನೀಡಿ ಜನರ ಪ್ರತಿರೋಧವನ್ನು ಹತ್ತಿಕ್ಕತೊಡಗಿದೆ. ನೂರಾರು ಜನರ ಬಂಧನಗಳು ನಡೆದು ಜನಸಾಮಾನ್ಯರ ಮೇಲೆ ಸರ್ಕಾರಿ ಹಿಂಸೆಗಳು ವ್ಯಾಪಕವಾಗಿದೆ. ಪಿಟಿಎ( ಪ್ರೊಟೆಕ್ಷನ್ ಫ್ರಮ್ ಟೆರರಸಿಂ ಆಕ್ಟ್) ಎಂಬ ಕರಾಳ ಕಾನೂನಿನ ಮೂಲಕ ಹೋರಾಟ ನಿರತ ಜನರನ್ನು ವಿಚಾರಣೆಯಿಲ್ಲದೇ ಸೆರಮನೆಯಲ್ಲಿಡಲು ತೊಡಗಿದೆ.

 


                ರಾಜಪಕ್ಸೆ ಕುಟುಂಬದ ಸರ್ಕಾರದ ರಾಜಿನಾಮೆಗೆ ಒತ್ತಾಯ

 ಪಿಟಿಎ ಕಾನೂನನ್ನು ಭಯೋತ್ಪಾದನೆ ತಡೆಯುವ ಉದ್ದೇಶ ಹೇಳಿ 1979ರಿಂದಲೇ ಶ್ರೀಲಂಕಾದಲ್ಲಿ ಜಾರಿಯಲ್ಲಿಡಲಾಗಿದೆ. ಮೊದಲು ಅಲ್ಲಿ ಸಿಡಿದ ಎಡಪಂಥೀಯ ಹೋರಾಟಗಾರರ ಮೇಲೆ ಅದನ್ನು ಬಳಸಲಾಗಿತ್ತು. ನಂತರ ಅಲ್ಲಿನ ತಮಿಳು ರಾಷ್ಟ್ರೀಯತಾ ಹೋರಾಟಗಾರರ ಮೇಲೆ ವ್ಯಾಪಕವಾಗಿ ಬಳಸಲಾಗಿತ್ತು. ಅದರ ನಂತರ ಅಲ್ಲಿನ ಮುಸ್ಲಿಂ ಅಲ್ಪಸಂಖ‍್ಯಾತರ ಮೇಲೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಈಗ ಅದನ್ನು ಹೋರಾಡುತ್ತಿರುವ ಸಿಂಹಳೀಯರ ಮೇಲೆ ಬಳಸಲಾಗುತ್ತಿದೆ.

ಶ್ರೀಲಂಕಾದ ಶೇಕಡಾ 75ಕ್ಕೂ ಹೆಚ್ಚು ಭೂ ಹಿಡುವಳಿಗಳು ಅರ್ದ ಏಕರೆಗಿಂತಲೂ ಕಡಿಮೆಯದು. ಅಂದರೆ ಶ್ರೀಲಂಕಾದ ಬಹುತೇಕ ಭೂಮಿ ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಅದರಲ್ಲಿ ಟೀ ಹಾಗೂ ರಬ್ಬರ್ ಉದ್ದಿಮೆದಾರರ ಕೈಯಲ್ಲಿ ಕೇಂದ್ರೀಕೃತಗೊಂಡಿರುವ ಭೂಮಿ ದೊಡ್ಡ ಪ್ರಮಾಣದ್ದಾಗಿದೆ. ಟೀ ಉದ್ದಿಮೆ ಪ್ರಧಾನವಾಗಿ ಕೇವಲ ಎರಡು ಕುಟುಂಬಗಳ ಸ್ವತ್ತಾಗಿಬಿಟ್ಟಿದೆ. ಇಂಡಿಯಾ ಮೂಲದ ಕಂಪನಿಗಳೂ ಕೂಡ ಶ್ರೀಲಂಕಾದಲ್ಲಿ ಕಾರ್ಯಾಚರಿಸುತ್ತಿವೆ. ಅಲ್ಲಿನ ಪೆಟ್ರೋಲಿಯಂ ಉದ್ದಿಮೆ ಬಹುತೇಕವಾಗಿ ಇಂಡಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಚೆನ್ನೈ ಆಯಿಲ್ ಕಾರ್ಪೋರೇಷನ್ ಹಿಡಿತದಲ್ಲಿ ಇದೆ.

                

         ಸೇನಾ ಉಸ್ತುವಾರಿಯಲ್ಲಿ ನಿತ್ಯ ಅಗತ್ಯದ ವಸ್ತುಗಳಿಗೆ ಸರತಿ ಸಾಲು ಈಗ ಶ್ರೀಲಂಕದಲ್ಲಿ ಈಗ ಸಾಮಾನ್ಯ

 ಈ ದೇಶ ಸುಮಾರು ಮೂರು ಲಕ್ಷದಷ್ಟು ಸೇನಾಬಲವನ್ನು ಹೊಂದಿದೆ. ಸೇನಾ ನಿರ್ವಹಣೆಗಾಗಿ 2019ರಲ್ಲಿ 1.67 ಬಿಲಿಯನ್ ಅಮೇರಿಕನ್ ಡಾಲರುಗಳನ್ನು ಅಂದರೆ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 1.64ರಷ್ಟು ವೆಚ್ಚ ಮಾಡಿತ್ತು. 1995ರಲ್ಲಿ ಇದು ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 5.86 ಇದ್ದರೆ 2000ದಲ್ಲಿ ಶೇಕಡಾ 5.3 ರಷ್ಟಿತ್ತು. ಈ ಮಟ್ಟದ ಸೇನಾ ವೆಚ್ಚ ಮಾಡುವ ಶ್ರೀಲಂಕಾದಂತಹ ಹಿಂದುಳಿದ ದೇಶಗಳು ಉತ್ಪಾದನೆ ಹಾಗೂ ಅಭಿವೃದ್ದಿಗಾಗಿ ಗಮನ ಹರಿಸಲು ಸಾಧ್ಯವಾಗುವುದಾದರೂ ಹೇಗೆ?.

ಶ್ರೀಲಂಕಾದಲ್ಲಿ ಬಹುಸಂಖ್ಯಾತರು ಸಿಂಹಳೀಯರಾಗಿದ್ದಾರೆ. ಅಲ್ಲಿನ 2012ರ ಸರ್ಕಾರಿ ಜನಗಣತಿಯ ಅಂಕಿಅಂಶದ ಪ್ರಕಾರ ಸಿಂಹಳೀಯರು ಆ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ74.9 ರಷ್ಟಿದ್ದಾರೆ. ಇವರು ಭೌದ್ಧ ಧರ್ಮದ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ. ಶೇಕಡಾ 11.2ರಷ್ಟು ಶ್ರೀಲಂಕಾ ತಮಿಳರಿದ್ದರೆ, ಶೇಕಡಾ 4.2ರಷ್ಟು ಇಂಡಿಯಾದ ತಮಿಳರಿದ್ದಾರೆ. ಶೇಕಡಾ 9.2ರಷ್ಟು ಶ್ರೀಲಂಕಾ ಮೂರ (Moors) ರಿದ್ದಾರೆ. ಬಹುತೇಕವಾಗಿ ತಮಿಳು ಮಾತನಾಡುವ ಇವರನ್ನು ಶ್ರಿಲಂಕಾದ ಮುಸ್ಲಿಮರೆಂದು ಕರೆಯಲಾಗುತ್ತಿದೆ. ಇವರಲ್ಲೂ ಶ್ರೀಲಂಕ ಮೂಲದವರು, ಇಂಡಿಯಾ ಮೂಲದವರು ಮತ್ತು ಮಲಯ ಮೂಲದವರು ಎಂಬ ವಿಂಗಡನೆ ಕೂಡ ಇದೆ. ಇತರ ಸಮುದಾಯದವರು ಶೇಕಡಾ0.5ರಷ್ಟಿದ್ದಾರೆ.

ಇದರಲ್ಲಿ ಶ್ರೀಲಂಕಾ ತಮಿಳರ ಮೇಲೆ ಭೌದ್ಧ ಧರ್ಮೀಯ ಎಂದು ಹೇಳಿಕೊಳ್ಳುವ ಸಿಂಹಳೀಯ ಪ್ರಭುತ್ವದ ನಿರಂತರವಾದ ಹಿಂಸೆ, ದಮನ,, ಕಗ್ಗೊಲೆಗಳು, ಮಾರಣಹೋಮಗಳ ಕಾರಣದಿಂದಾಗಿ ತಮಿಳು ರಾಷ್ಟ್ರೀಯತಾ ಅಸ್ಮಿತೆಯಡಿ ಹೋರಾಟಗಳು ಸಿಡಿಯುತ್ತದೆ. ಅದು ನಂತರ ಸಶಸ್ತ್ರ ಹೋರಾಟವಾಗಿ ಮಾರ್ಪಟ್ಟು ತಮಿಳು ಪ್ರತ್ಯೇಕ ರಾಷ್ಟ್ರಕ್ಕಾಗಿನ ಹೋರಾಟವಾಗುತ್ತದೆ. ಅದರಲ್ಲಿ ಎಲ್ ಟಿ ಟಿ ಇ ಸಂಘಟನೆ ಮುಂಚೂಣಿಯಾಗುತ್ತದೆ. ಶ್ರೀಲಂಕದ ಪ್ರಭುತ್ವ ಇಂಡಿಯಾ, ಅಮೇರಿಕ, ಚೀನ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳ ಬೆಂಬಲದೊಂದಿಗೆ ಅಲ್ಲಿನ ಸಶಸ್ತ್ರ ಹೋರಾಟವನ್ನು ಸಂಪೂರ್ಣವಾಗಿ ದಮನಿಸಿ 2009ರಲ್ಲಿ ಎಲ್ ಟಿ ಟಿ ಇ ನಾಯಕತ್ವವನ್ನು ನಿರ್ನಾಮ ಮಾಡುತ್ತದೆ. ಇದಕ್ಕೆ ಮೂರು ದಶಕಗಳ ಕಾಲಾವಧಿ ತೆಗೆದುಕೊಳ್ಳುತ್ತದೆ.



                                ಅನಿಲಕ್ಕಾಗಿನ ಸರತಿಸಾಲು

ಈ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ತಮಿಳರ ಮೇಲೆ ವ್ಯಾಪಕ ಹಿಂಸಾಚಾರಗಳನ್ನು ಹರಿಬಿಟ್ಟಿರುವ ಬಗ್ಗೆ ಹಲವಾರು ಜಾಗತಿಕ ಮಾನವಹಕ್ಕು ಸಂಘಟನೆಗಳ ವರದಿಗಳು ಹೇಳುತ್ತವೆ. ವಿಶ್ವಸಂಸ್ಥೆಯಲ್ಲೂ ಈ ವಿಚಾರ ಹಲವು ಬಾರಿ ಚರ್ಚೆಗೆ ಒಳಗಾಗಿ ಆ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮವೆಸಗಿದ ಸೇನಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ವಿಶ್ವ ಸಂಸ್ಥೆ ನಿರ್ಣಯದ ಮೂಲಕ ಶ್ರೀಲಂಕದ  ಸರ್ಕಾರಕ್ಕೆ ತಿಳಿಸುತ್ತದೆ. ಅದಕ್ಕೆ ಕೊನೆಗೂ ಸಮ್ಮತಿಸಿದ ಶ್ರೀಲಂಕಾ ಸರ್ಕಾರ ಆ ನಿರ್ಣಯವನ್ನು ಇದುವರೆಗೂ ಜಾರಿಗೊಳಿಸಿಲ್ಲ. ಅಲ್ಲದೇ ಶ್ರೀಲಂಕದ ನ್ಯಾಯಾಲಯಗಳು ಶಿಕ್ಷೆ ವಿಧಿಸಿರುವ ಅಪರಾಧಿ ಅಧಿಕಾರಿಗಳ ಮೇಲಿನ ಶಿಕ್ಷೆಯನ್ನು ಸರ್ಕಾರ ಮನ್ನಾ ಮಾಡಿ ಅವರನ್ನು ತನ್ನ ಸೇವೆಗೆ ಮತ್ತೆ ನಿಯೋಜಿಸಿಕೊಂಡಿದೆ. ಅಕ್ರಮಗಳನ್ನು ಮಾಡಿದ ಸೇನಾಧಿಕಾರಿಗಳನ್ನು ಸನ್ಮಾನಿಸಿ ಬಿರುದು, ಪ್ರಶಸ್ತಿಗಳನ್ನು ನೀಡಿದೆ. ಇಷ್ಟೆಲ್ಲಾ ರೀತಿಯಲ್ಲಿ ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂಘಿಸಿದ್ಧಕ್ಕಾಗಿ ಅಮೇರಿಕವಾಗಲೀ, ಯೂರೋಪಿನ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಯಾವುದೇ ರಾಷ್ಟ್ರಗಳೂ ಕೂಡ, ಕ್ಯೂಬಾ, ಇರಾನ್, ಲಿಬಿಯಾ, ಇರಾಕ್ ಮೊದಲಾದ ರಾಷ್ಟ್ರಗಳ ಮೇಲೆ ಹೇರಿದಂತೆ ಯಾವುದೇ ನಿರ್ಬಂಧಗಳನ್ನೂ ಶ್ರೀಲಂಕದ ಮೇಲೆ ಇದುವರೆಗೂ ಹೇರಲೂ ಇಲ್ಲ.

ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (ಡೆಮೋಕ್ರಟಿಕ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ಶ್ರೀಲಂಕ) ಎಂದು 1978ರಿಂದ ಕರೆದುಕೊಂಡಿದ್ದರೂ ಶ್ರೀಲಂಕದ ಪ್ರಭುತ್ವ ತನ್ನ ಆಚರಣೆಯಲ್ಲಿ ಯಾವತ್ತೂ ಪ್ರಜಾತಾಂತ್ರಿಕವಾಗಲೀ, ಸಮಾಜವಾದಿಯಾಗಲೀ ಗಣರಾಜ್ಯವಾಗಲೀ ಆಗಿರಲಿಲ್ಲ ಎನ್ನುವುದಕ್ಕೆ ಅದು ನಡೆದುಕೊಂಡು ಬಂದ ಹಾದಿಯನ್ನು ಚಾರಿತ್ರಿಕವಾಗಿ ಅವಲೋಕಿಸಿದರೆ ಗೊತ್ತಾಗುವ ವಿಚಾರ. ಶ್ರೀಲಂಕದ ಪ್ರಭುತ್ವ ಭೌದ್ದ ಧರ್ಮೀಯ ಸಿಂಹಳೀಯರ ಹಿಡಿತದಲ್ಲಿಯೇ ಸಾಗಿ ಬರುತ್ತಿದೆ. ಅಲ್ಲದೇ ದೇಶ ಭೂಮಿ ಸಂಪತ್ತುಗಳ ಮೇಲೆ ಸಿಂಹಳೀಯರಲ್ಲಿನ ಅಲ್ಪ ಸಂಖ‍್ಯಾತರಾದ ಭಾರಿ ಸಂಪತ್ತಿನ ಒಡೆಯರ ಹಿಡಿತವಿದೆ. ಭೌದ್ಧ ಪುರೋಹಿತಶಾಹಿ ಅಲ್ಲಿನ ಪ್ರಭುತ್ವವನ್ನು ನಿಯಂತ್ರಿಸುತ್ತಾ ಬಂದಿದೆ. ಸರ್ಕಾರದ ಸೇನೆ, ಪೋಲಿಸ್, ಆಡಳಿತಾಂಗ, ನ್ಯಾಯಾಂಗದಲ್ಲಿ ಸಿಂಹಳೀಯರದೇ ಹಿಡಿತವಿದೆ. ತಮಿಳರಿಗಾಗಲೀ, ಅಲ್ಲಿನ ಮುಸ್ಲಿಮರಿಗಾಗಲೀ ಕನಿಷ್ಟ ಸರಿಯಾದ ಪ್ರಾತಿನಿಧ್ಯವೂ ಇಲ್ಲ. ಶ್ರೀಲಂಕ ಉತ್ತರ ಹಾಗೂ ಈಶಾನ್ಯ ಭಾಗದ ತಮಿಳು ಪ್ರದೇಶವನ್ನು ಪ್ರತಿನಿಧಿಸುವವರು ಸರ್ಕಾರದ ಭಾಗವಾಗಿ ನಾಮಮಾತ್ರದಲ್ಲಿ ಇದ್ದು ಸಿಂಹಳೀಯ ಪ್ರಭುತ್ವದ ಹಿತಾಸಕ್ತಿಗಳ ಪರವಾಗೇ ಕಾರ್ಯ ನಿರ್ವಹಿಸುತ್ತಾ ಬಂದರು.

ಶ್ರೀಲಂಕ 1948ರಲ್ಲಿ ಬ್ರಿಟಿಷ್ ಪ್ರಭುತ್ವದಿಂದ ಸ್ವಾತಂತ್ರ್ಯಗೊಂಡ ನಂತರದಿಂದಲೂ ಶ್ರೀಲಂಕಾದ ಬಹುಸಂಖ‍್ಯಾತ ಜನಸಮುದಾಯಗಳ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ನಿರಂಕುಶಾಧಿಕಾರವನ್ನು ಹೇರುತ್ತಾ ಬರಲಾಗಿದೆ. ಇದರ ವಿರುದ್ಧ ಜನರು ಹತ್ತು ಹಲವು ರೀತಿಗಳಲ್ಲಿ ಹೋರಾಡುತ್ತಲೇ ಬರುತ್ತಿದ್ದಾರೆ. ಸಿಂಹಳೀಯ ದುರಭಿಮಾನ ಹಾಗೂ ಭೌಧ್ದ ಕೋಮುವಾದಗಳನ್ನು ಪೋಷಣೆ ಮಾಡಿಕೊಂಡು ಬಂದ ಅಲ್ಲಿನ ಪ್ರಭುತ್ವ ಅದನ್ನು ಅಲ್ಲಿನ ತಮಿಳರು ಹಾಗೂ ಮುಸ್ಲಿಮರತ್ತ ತಿರುಗಿಸುತ್ತಾ ಬಂದಿದೆ. ಅವರ ಬದುಕು ದುಡಿಮೆಗಳನ್ನು ಕಬಳಿಸುತ್ತಾ ಬಂದಿದೆ. ಹಲವಾರು ಕೋಮು ಹಾಗೂ ಜನಾಂಗೀಯ ಮಾರಣಹೋಮಗಳನ್ನು ಸಂಘಟಿಸಲಾಗಿದೆ. ಲಕ್ಷಾಂತರ ಜನರ ಪ್ರಾಣಗಳನ್ನು ಬಲಿತೆಗೆದುಕೊಳ್ಳಲಾಗಿದೆ.

ಪ್ರತ್ಯೇಕ ತಮಿಳು ಈಳಂಗಾಗಿನ ಸಶಸ್ತ್ರ ಹೋರಾಟವನ್ನು ದಮನಿಸಿದ ನಂತರದಲ್ಲಿ ರಾಜಪಕ್ಸೆ ಕುಟುಂಬ ಚುನಾವಣೆಗಳನ್ನು ಬಳಸಿಕೊಂಡು ಸರ್ಕಾರವನ್ನು ಹಿಡಿದಿಟ್ಟುಕೊಳ್ಳುತ್ತಾ ಬಂದಿದೆ. ಈಗಿನ ಸರ್ಕಾರದಲ್ಲಿ ರಾಜಪಕ್ಸೆ ಕುಟುಂಬದವರೇ ಹದಿನಾರಕ್ಕೂ ಹೆಚ್ಚು ಪ್ರಧಾನ ಹಾಗೂ ಮಹತ್ವದ ಖಾತೆಗಳನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ. ಸೇನೆಯಲ್ಲೂ ತನಗೆ ಅನುಕೂಲಿತ ನೇಮಕಾತಿಗಳ ಮೂಲಕ ರಾಜಪಕ್ಸೆ ಕುಟುಂಬ ಹಿಡಿತ ಸಾಧಿಸಿದೆ. ಈ ಹಿಂದಿನ ಮಹಿಂದ್ರ ರಾಜಪಕ್ಷೆಯಿಂದ ಆರಂಭವಾದ ಈ ಕುಟುಂಬದ ಹಿಡಿತ ಸಂವಿಧಾನ ತಿದ್ದುಪಡಿಗಳ ಮೂಲಕ ಪ್ರಭುತ್ವದ ಎಲ್ಲಾ ಅಂಗಗಳು ಹಾಗೂ ನ್ಯಾಯಾಂಗದ ಮೇಲೂ ಅಧ್ಯಕ್ಷೀಯ ಹಿಡಿತ ಸಾಧಿಸಿ ಪೂರ್ಣ ಪ್ರಮಾಣದ ಭೌದ್ಧ ಹೆಸರಿನ ಫ್ಯಾಸಿಸ್ಟ್ ಆಡಳಿತದಡಿ ಇಡೀ ಶ್ರೀಲಂಕವನ್ನು ಹಿಡಿದಿಡಲು ಹೊರಟಿದೆ. ಅದಕ್ಕಾಗಿ ಹಲವಾರು ಕಾನೂನಾತ್ಮಕ ಬದಲಾವಣೆಗಳನ್ನು ಮಾಡುತ್ತಾ ಬರಲಾಗಿದೆ. ‘ಒಂದು ದೇಶ, ಒಂದು ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಕಾನೂನು…..ಎಂಬೆಲ್ಲಾ ಘೋಷಣೆಯಡಿ ಭೌದ್ಧ ಧರ್ಮವನ್ನು ದೇಶದ ಅಧೀಕೃತ ಧರ್ಮವನ್ನಾಗಿ ಮತ್ತು ಸಿಂಹಳೀಯ ಭಾಷೆಯನ್ನು ದೇಶದ ಅಧೀಕೃತ ಭಾಷೆಯನ್ನಾಗಿ ಶ್ರೀಲಂಕದ ಎಲ್ಲಾ ಸಮುದಾಯದವರ ಮೇಲೂ ಹೇರಿ, ಶ್ರೀಲಂಕ ಭೌದ್ಧ ದೇಶ ಎಂದು ಸಾರಲು ಈಗಿನ ಗೋತಾಬಾಯೆ ರಾಜಪಕ್ಷೆ ಸರಕಾರ ಹೊರಟಿದೆ. ಅದಕ್ಕಾಗಿ ಭೌದ್ಧ ಪುರೋಹಿತರ ನೇತೃತ್ವದಲ್ಲಿ ಸಮಿತಿಯೊಂದನ್ನು ಮಾಡಲಾಗಿ, ಅದು ತನ್ನ ವರದಿಯಲ್ಲಿ ಈ ಶಿಫಾರಸನ್ನು ಮಾಡಿದೆ. ಕೋರೋನಾ ಸಂದರ್ಭವನ್ನು ಬಳಸಿಕೊಂಡು ಹಲವಾರು ಕಾನೂನಾತ್ಮಕ ತಿದ್ದುಪಡಿಗಳು ಹಾಗೂ ಕಾನೂನು ಮಾರ್ಪಾಡುಗಳನ್ನು ಮಾಡಲಾಗಿದೆ. ತಮಿಳರು ಹಾಗೂ ಮುಸ್ಲಿಮರ ಮೇಲೆ ಸಿಂಹಳೀಯರ ಮೂಲಕ ಎಲ್ಲಾ ರೀತಿಗಳಿಂದಲೂ ಧಾಳಿಗಳನ್ನು ಸಂಘಟಿಸುತ್ತಾ ಬರಲಾಗುತ್ತಿದೆ.


                          

              ಶ್ರೀಲಂಕದ ಅಧ್ಯಕ್ಷ ಗೊತಾಬಾಯೆ ರಾಜಪಕ್ಸೆ                   ಶ್ರೀಲಂಕದ ಪ್ರಧಾನಿ ಮಹಿಂದ ರಾಜಪಕ್ಸೆ 

ಆದರೆ ಈಗ ಶ್ರೀಲಂಕದ ಭೌದ್ಧ ಫ್ಯಾಸಿಸ್ಟ್ ಪ್ರಭುತ್ವ ತಮಿಳರು, ಮುಸ್ಲಿಮರ ಜೊತೆಗೆ ತನ್ನ ದುರಾಡಳಿತವನ್ನು ಪ್ರಶ್ನಿಸಿ ಬೀದಿಗಿಳಿಯುತ್ತಿರುವ ಸಿಂಹಳೀಯ ಭೌದ್ಧ ಬಹುಸಂಖ‍್ಯಾತರನ್ನು ಗುರಿಮಾಡತೊಡಗಿದೆ. ಪ್ರತಿ ನಾಲ್ಕು ಜನರಿಗೆ ಒಬ್ಬರಂತೆ ಸೇನೆಯನ್ನು ನಿಯೋಜಿಸಿದೆ. ಅಲ್ಲದೆ ಅದಕ್ಕೆ ಅಪರಿಮಿತ ಅಧಿಕಾರವನ್ನು ನೀಡಿದೆ. ಅಧ್ಯಕ್ಷ ಗೊತಾಬಾಯೆ ರಾಜಪಕ್ಷೆ ಈಗ ಸೇನೆಯ ಸರ್ವೊಚ್ಚ ಅಧಿಕಾರಿಯಾಗಿದ್ದಾರೆ.

ಇದೇ ರಾಜಪಕ್ಷೆ ಕುಟುಂಬಕ್ಕೆ ಚೀನ, ಇಂಡಿಯಾ, ಅಮೇರಿಕ ಸೇರಿದಂತೆ ಯೂರೋಪಿನ ರಾಷ್ಟ್ರಗಳು ಕೂಡ ಬೆಂಬಲಿಸುತ್ತಾ ಬರುತ್ತಿವೆ ಎಂಬುದನ್ನೂ ನಾವಿಲ್ಲಿ ಗುರುತಿಸಬೇಕಾಗಿದೆ. ಇದೀಗ ಚೀನ, ಇಂಡಿಯಾ, ಐ ಎಂ ಎಫ್ ಶ್ರೀಲಂಕಾ ಸರ್ಕಾರಕ್ಕೆ ಹಣಕಾಸು ಸಾಲ ಒದಗಿಸಿ ಈಗಿನ ಆರ್ಥಿಕ ದುಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಲು ಹೊರಟಿವೆ. ಅದಕ್ಕೆ ಕಠಿಣ ಶರತ್ತುಗಳನ್ನು ಕೂಡ ಶ್ರೀಲಂಕದ ಸರ್ಕಾರದ ಮೇಲೆ ಹೇರಲಾಗುತ್ತಿದೆ. ಅದರಂತೆ ಶ್ರೀಲಂಕ ತನ್ನ ರೂಪಾಯಿ ಮೌಲ್ಯವನ್ನು ಕುಗ್ಗಿಸಿರುವುದು ನಡೆದಿದೆ. ಇಂತಹ ನಡೆಗಳು ದೇಶವನ್ನು ಮತ್ತಷ್ಟು ದಿವಾಳಿಯತ್ತ ಸಾಗಿಸುವ ಸಾಧ್ಯತೆಗಳು ದಟ್ಟವಾಗತೊಡಗಿದೆ.

ಜಾಗತೀಕರಣದ ನಂತರ ಜಾಗತಿಕವಾಗಿ ನಿರಂಕುಶತೆ ಅಥವಾ ಫ್ಯಾಸಿಸ್ಟ್ ಆಳ್ವಿಕೆ ಜಾಗತಿಕ ವಿದ್ಯಮಾನವಾಗಿ ನಗ್ನಗೊಂಡಿರುವುದನ್ನು ಶ್ರೀಲಂಕದ ಮೂಲಕವೂ ಗ್ರಹಿಸಬಹುದು. ಫ್ಯಾಸಿಸಂ ಯಾವುದೇ ರೂಪದಲ್ಲಿ ಬೇಕಾದರೂ ಜಾರಿಯಾಗಬಹುದು, ಆದರೆ ಅದು ಭಾರಿ ಆಸ್ತಿವಂತರ ಸೇವೆಗಾಗಿಯೇ ಆಗಿರುತ್ತದೆ. ಅದಕ್ಕೆ ಧರ್ಮವೋ, ಭಾಷೆಯೋ, ಪ್ರದೇಶವೋ ಇಲ್ಲ. ಸಾಮಾಜಿಕ ಹಿಡಿತ, ದಮನ, ಲೂಟಿ, ಶೋಷಣೆ, ಅಪ್ರಜಾತಾಂತ್ರಿಕತೆ, ನಿರಂಕುಶತೆಗಳ ಜಾರಿಯೇ ಅದರ ಉದ್ದೇಶ. ಆದರೆ ಅದು ಗುರಿ ಮಾಡುವುದು ಎಲ್ಲಾ ಧರ್ಮ, ಭಾಷೆ, ಪ್ರದೇಶ, ಜನಾಂಗಗಳ ಜನಸಾಮಾನ್ಯರನ್ನು ಎನ್ನುವುದು ಶ್ರೀಲಂಕದ ಸಿಂಹಳೀಯ ಬಹುಸಂಖ‍್ಯಾತರ ಇಂದಿನ ಸ್ಥಿತಿ ಕೂಡ ಸ್ಪಷ್ಟವಾಗಿ ಹೇಳುತ್ತಿದೆ. 

03/04/2022

                                                          

 

 

 

 

 

Comments

  1. ಬಹಳ ಮಾಹಿತಿಪೂರ್ಣವಾದ ಲೇಖನ ಸರ್
    ಅಲ್ಲಿನ ಹಾಗೆ ಭಾರತದಲ್ಲಾಗದೆ ಇರಲಿ ಅಷ್ಟೆ ಸಾಕು ಅನ್ನೋ ರೀತಿಯ ಅಭಿಪ್ರಾಯ ಮೂಡಿತು ಮನಸಲ್ಲಿ.🙏

    ReplyDelete
    Replies
    1. ide tharahada paristiti halvaaru deshagalallive, pakistan,peru etc

      Delete

Post a Comment

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...