Skip to main content

ಜಾಗತೀಕರಣ ಲೂಟಿಯ ಪರಿಣಾಮ… ದಿವಾಳಿಯತ್ತ ಸಾಗಿರುವ ಪಾಕಿಸ್ತಾನ… ತೀಕ್ಷ್ಣಗೊಂಡ ರಾಜಕೀಯ ಬಿಕ್ಕಟ್ಟು…globalised loot#towards bankruptcy#pakistan#political crisis

 

ಜಾಗತೀಕರಣ ಲೂಟಿಯ ಪರಿಣಾಮ…

ದಿವಾಳಿಯತ್ತ ಸಾಗಿರುವ ಪಾಕಿಸ್ತಾನ…

ತೀಕ್ಷ್ಣಗೊಂಡ ರಾಜಕೀಯ ಬಿಕ್ಕಟ್ಟು…

-ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು

                                                ಮಿಂಚಂಚೆ: nandakumarnandana67@gmail.com

ಶ್ರೀಲಂಕಾದಲ್ಲಿನ ತೀವ್ರತರವಾದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟು ಮುಂದುವರೆಯುತ್ತಿರುವಂತೆಯೇ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲೂ ರಾಜಕೀಯ ಬಿಕ್ಕಟ್ಟು ತೀವ್ರವಾಗಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಬಹುಮತ ಕಳೆದುಕೊಂಡು ಅವಿಶ್ವಾಸ ನಿರ್ಣಯದ ಹಂತ ತಲುಪಿ ಪಾಕಿಸ್ತಾನದ ಸಂಸತ್ತನ್ನು ರದ್ದುಗೊಳಿಸಲಾಗಿದೆ. ಪ್ರಧಾನಿ ತಮ್ಮನ್ನು ಪದಚ್ಯುತಗೊಳಿಸಲು ಅಮೇರಿಕದಲ್ಲಿ ಯೋಜನೆ ಹೆಣೆದು ಜಾರಿಗೊಳಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಹೊಸ ಚುನಾವಣೆಯವರೆಗೂ ಇಮ್ರಾನ್ ಖಾನ್ ಉಸ್ತುವಾರಿ ಸರ್ಕಾರವನ್ನು ಮುನ್ನೆಡೆಸುವ ಇರಾದೆಯೊಂದಿಗೆ ತಮ್ಮ ರಾಜಕೀಯ ನಡೆಗಳನ್ನು ನಡೆಸಲು ಶ್ರಮಿಸಿದ್ದರು. ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಸಂಸತ್ತನ್ನು ರದ್ದುಗೊಳಿಸಿರುವುದನ್ನು ಒಪ್ಪದೇ ಬಹುಮತ ಇದೆಯೋ ಇಲ್ಲವೋ ಎಂಬುದು ಸಂಸತ್ತಿನಲ್ಲಿಯೇ ಸಾಬೀತಾಗಬೇಕು ಎಂದಿತ್ತು. ಈಗ ಇಮ್ರಾನ್ ಖಾನ್ ಸರ್ಕಾರ ಪತನಗೊಂಡಿರುವುದು ಖಾತ್ರಿಯಾಗಿದೆ.

                                 


ಪಾಕಿಸ್ತಾನದಲ್ಲಿನ ಬಿಕ್ಕಟ್ಟಿಗೂ ಶ್ರೀಲಂಕಾದಲ್ಲಿನ ಬಿಕ್ಕಟ್ಟಿಗೂ ಮೂಲಭೂತವಾಗಿ ವ್ಯತ್ಯಾಸಗಳೇನೂ ಇಲ್ಲ. ಇಮ್ರಾನ್ ಖಾನ್ ನ ಸರಕಾರವೂ ಸೇರಿದಂತೆ ಹಿಂದಿನಿಂದಲೂ ಆಳ್ವಿಕೆ ನಡೆಸಿಕೊಂಡು ಬಂದಿರುವ ಪಾಕಿಸ್ತಾನದ ಸರಕಾರಗಳು ಪ್ರಧಾನವಾಗಿ ಜಾಗತಿಕ ಹಣಕಾಸು ಸಂಸ್ಥೆಗಳ ಸಾಲಗಳ ಮೇಲೆ ದೇಶವನ್ನು ನಿಲ್ಲಿಸಿಕೊಂಡು ಬರುತ್ತಿವೆ. ಜಾಗತಿಕ ಭಾರಿ ಕಾರ್ಪೋರೇಟುಗಳಿಗೆ ಅನುಕೂಲವಾಗುವಂತೆ ತಮ್ಮ ದೇಶದ ಭೂಮಿ ಇನ್ನಿತರ ಸಂಪತ್ತನ್ನು ಹಲವಾರು ನೆಪಗಳಲ್ಲಿ ಬಿಟ್ಟುಕೊಡುತ್ತಾ ಬಂದಿವೆ. ಜಾಗತಿಕ ಹಣಕಾಸು ಸಂಸ್ಥೆಗಳೆಂದಾಗ ಅದು ವಿಶ್ವ ಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಧಿ, ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ಪ್ರಮುಖವಾಗಿವೆ. ಇವುಗಳ ಜೊತೆಗೆ ಚೈನಾ ಹಾಗೂ ರಷ್ಯಾಗಳಿಂದಲೂ ಸೇನಾ ಸಾಮಗ್ರಿ ಹಾಗೂ ಹಣಕಾಸು ಸಾಲಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ಜಾಗತೀಕರಣದ ನಿಬಂಧನೆಗಳನ್ನು ಒಂದಲ್ಲಾ ಒಂದು ರೀತಿಯಿಂದ ಪಾಲಿಸುತ್ತಾ ಬರುತ್ತಿದೆ. ಸಹಜವಾಗಿ ಜಾಗತೀಕರಣದ ಆರಂಭದಲ್ಲಿ ಎಲ್ಲೆಡೆಯಂತೆ ಈ ದೇಶದಲ್ಲೂ ಚಾಲ್ತಿಯಲ್ಲಿನ ಮಾನದಂಡಗಳ ಪ್ರಕಾರ ಆರ್ಥಿಕ ಪ್ರಗತಿಯ ಗತಿ ಏರಿತ್ತು ಕೂಡ.

ಪಾಕಿಸ್ತಾನ ಹೆಚ್ಚಾಗಿ ಅಮೇರಿಕದ ಬಾಲಂಗೋಚಿ ತರಹವೇ ನಡೆದುಕೊಳ್ಳುತ್ತಾ ಬಂದಿದ್ದು. ಹೆಚ್ಚಾಗಿ ಸೋವಿಯತ್ ರಷ್ಯಾ ಕಡೆಗೆ ವಾಲಿ ನಿಂತಿದ್ದಇಂಡಿಯಾ ಹಾಗೂ ಪಾಕಿಸ್ತಾನದ ನಡುವೆ ನಿರಂತರ ಸಂಘರ್ಷವನ್ನು ಕಾಯ್ದುಕೊಂಡು ಬರುವ ನೀತಿಯನ್ನು ಅಮೇರಿಕ ಅನುಸರಿಸಿತ್ತು. ಶಸ್ತ್ರಾಸ್ತ್ರ ವ್ಯಾಪಾರವನ್ನೂ ಹೆಚ್ಚು ಮಾಡಿಕೊಳ್ಳುತ್ತಾ ಬಂದಿತ್ತು. ಪಾಕಿಸ್ತಾನದ ಸೇನೆ ಕೂಡ ಅಮೇರಿಕ ಪರ ನಿಲುವನ್ನು ಬಹಿರಂಗವಾಗಿಯೇ ಸಾರಿಕೊಳ್ಳುತ್ತಾ ಬಂದಿದೆ.  ಸೋವಿಯತ್ ರಷ್ಯಾ ವಿರುದ್ಧದ ಶೀತಲ ಸಮರದಲ್ಲಿ ಅಮೇರಿಕ ನೇತೃತ್ವದ ಬಣದೊಂದಿಗೆ ಪಾಕಿಸ್ತಾನ ನಿಂತಿದ್ದಲ್ಲದೇ ಅಫ್ಞಾನಿಸ್ತಾನದ ತಾಲಿಬಾನ್, ಮುಜಾಹಿದೀನ್ ಇತ್ಯಾದಿ ಸಂಘಟನೆಗಳಿಗೆ ತನ್ನ ನೆಲದಲ್ಲಿ ಆಶ್ರಯ ಕೊಟ್ಟಿತ್ತು. ಅದು ಅಂತರಾಷ್ಟ್ರೀಯವಾಗಿಯೂ ಭಾರಿ ಟೀಕೆಗಳಿಗೆ ಗುರಿಯಾಗಿತ್ತು. ಅಲ್ಲದೇ ಹಲವಾರು ಸೋವಿಯತ್ ರಷ್ಯಾ ವಿರೋಧಿ ಗುಂಪುಗಳಿಗೆ ತರಬೇತಿ ವ್ಯವಸ್ಥೆಯನ್ನೂ ಕಲ್ಪಿಸಿ ಕೊಟ್ಟಿತ್ತು ಕೂಡ. ಜಾರ್ಜ್ ಬುಷ್ ಘೋಷಿಸಿದ ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರದಲ್ಲಿ ಪಾಕಿಸ್ತಾನ ಅಮೇರಿಕದೊಂದಿಗೆ ನಿಂತು ತನ್ನ ಸೇನಾಬಲವನ್ನು ಕೂಡ ಬಳಸಿತ್ತು. ಅದಕ್ಕಾಗಿ ದೊಡ್ಡ ಮೊತ್ತವನ್ನೂ ವ್ಯಯಿಸಿತ್ತು.

ಪಾಕಿಸ್ತಾನದ ಭೂಮಿ ಹಾಗೂ ಇನ್ನಿತರ ಸಂಪತ್ತಿನ ಹಂಚಿಕೆಯಲ್ಲಿ ಭಾರಿ ಅಸಮಾನತೆಗಳಿವೆ. ಭಾರಿ ಭೂಒಡೆಯರುಗಳು ಪಾಕಿಸ್ತಾನದ ಊಳಿಗಮಾನ್ಯ ಪ್ರತಿನಿಧಿಗಳಾಗಿ ಆ ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಹಾಗಾಗಿ ಅಲ್ಲಿನ ಬಹುಸಂಖ್ಯಾತ ಜನಸಾಮಾನ್ಯರ ತಲಾದಾಯ ಬಹಳ ಕೆಳಮಟ್ಟದಲ್ಲಿದೆ. ನಿರುದ್ಯೋಗ ಹಾಗೂ ಅರೆಉದ್ಯೋಗದ ಪ್ರಮಾಣ ಗಂಭೀರ ಮಟ್ಟದಲ್ಲಿ ಪಾಕಿಸ್ತಾನವನ್ನು ಬಾಧಿಸುತ್ತಾ ಬರುತ್ತಿದೆ. ಕೃಷಿ ಬಹುತೇಕವಾಗಿ ಹಿಂದುಳಿದ ವಿಧಾನಗಳಲ್ಲೇ ಮುಂದುವರೆದಿದೆ. ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿಮೂಲದ ಕೊಡುಗೆಯೇ ಹೆಚ್ಚಿನದಾಗಿದೆ. ನಂತರದ ಸ್ಥಾನ ಗಣಿಗಾರಿಕೆ ಮೊದಲಾದ ಉತ್ಪಾದನಾ ಕ್ಷೇತ್ರದ್ದಾಗಿದೆ. ಮೂಲಭೂತವಾಗಿ ಪಾಕಿಸ್ತಾನ ಕೈಗಾರಿಕಾ ದೇಶವಾಗಿ ಬೆಳೆದಿಲ್ಲ. ಹಾಗಾಗಿ ಕೈಗಾರಿಕಾ ಉತ್ಪಾದನೆಯೆಂದಾಗ ಗಣಿಗಾರಿಕೆ ಹಾಗೂ ಹತ್ತಿ ಬಟ್ಟೆಯ ಕ್ಷೇತ್ರ ಮಾತ್ರ ಹೇಳಬಹುದು. 

                                   


 2022ರ ಫೆಬ್ರುವರಿಯ ಮಧ್ಯಭಾಗದ ಅಂಕಿ ಅಂಶದ ಪ್ರಕಾರ ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನದ ಮೌಲ್ಯ 347 ಬಿಲಿಯನ್ ಅಮೇರಿಕನ್ ಡಾಲರುಗಳಾಗಿದ್ದವು. (ಒಂದು ಬಿಲಿಯನ್ ಎಂದರೆ ನೂರು ಕೋಟಿಗಳು) 2020ರಲ್ಲಿ ಪಾಕಿಸ್ತಾನದ ಜನರ ತಲಾದಾಯ ಕೇವಲ 1466 ಅಮೇರಿಕ ಡಾಲರುಗಳಾಗಿದ್ದವು. 2022ರ ಕೊನೆಯ ವೇಳೆಗೆ ಪಾಕಿಸ್ತಾನದ ಒಟ್ಟು ಸಾರ್ವಜನಿಕ ಸಾಲ ಅದರ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 90ಕ್ಕೂ ಹೆಚ್ಚಾಗಲಿದೆ ಎಂಬ ಮಾಹಿತಿಗಳು ಹೊರಬರುತ್ತಿವೆ. ಈಗಾಗಲೇ ಪಾಕಿಸ್ತಾನದ ಬಾಹ್ಯ ಸಾಲ ಅದರ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ 40ನ್ನು ಮೀರಿದೆ. ಈಗಲೇ ಪಾಕಿಸ್ತಾನಕ್ಕೆ ಸಾಲಸಂಬಂದಿ ಹೊಣೆಗಾರಿಕೆಗಳನ್ನು ಪೂರೈಸಲು ಸಾಧ್ಯವಾಗದಂತಹ ಸ್ಥಿತಿಯಿದೆ. ರಫ್ತು ಬಹಳ ಕಡಿಮೆಯಾಗುತ್ತಾ ಸಾಗುತ್ತಿದೆ. ಅದೇ ವೇಳೆ ಆಮದಿನ ಪ್ರಮಾಣ ಬಹಳ ವೇಗವಾಗಿ ಏರತೊಡಗಿದೆ. ಪಾಕಿಸ್ತಾನ ಗಂಭೀರವಾದ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸಲು ತೊಡಗಿ ಬಹಳ ಕಾಲವಾಗಿದೆ. ಹಾಗಾಗಿ ವಿದೇಶಿ ವಿನಿಮಯ ಮೀಸಲು ಪ್ರಮಾಣ ಕುಗ್ಗುತ್ತಾ ಸಾಗುತ್ತಿದೆ. ಒಟ್ಟಾರೆಯಾಗಿ ಗಮನಿಸಿದರೆ ಪಾಕಿಸ್ತಾನವನ್ನು ದಿವಾಳಿಯತ್ತ ಸಾಗಿಸಲಾಗುತ್ತಿದೆ.

881,913 ಚದುರ ಕಿಲೋಮೀಟರುಗಳಷ್ಟು ವಿಸ್ತೀರ್ಣ ಹಾಗೂ 22.85 ಕೋಟಿಯಷ್ಟು ಜನಸಂಖ್ಯೆಯ ಪಾಕಿಸ್ತಾನ ಜಗತ್ತಿನ ಐದನೇ ದೊಡ್ಡ ಜನಸಂಖ್ಯೆಯಿರುವ ಹಾಗೂ ಜಗತ್ತಿನ 33ನೇ ದೊಡ್ಡ ಭೂಪ್ರದೇಶವನ್ನೂ ಹೊಂದಿರುವ ರಾಷ್ಟ್ರವಾಗಿದೆ. ಸುಮಾರು 654,000 ದಷ್ಟು ಸೇನಾಬಲ ಹಾಗೂ 482,000 ದಷ್ಟು ಅರೆ ಸೈನಿಕ ಪಡೆಗಳನ್ನು ಹೊಂದಿರುವ ಪಾಕಿಸ್ತಾನ ಜಾಗತಿಕವಾಗಿ ಆರನೇ ದೊಡ್ಡ ಸೇನಾಬಲವಾಗಿದೆ. ಅಣು ಅಸ್ತ್ರಗಳನ್ನು ಹೊಂದಿರುವ ಈ ರಾಷ್ಟ್ರ ಸೇನೆಯ ನಿರ್ವಹಣೆಗಾಗಿ ತನ್ನ ಆಯವ್ಯಯದ ಶೇಕಡಾ 20ರಷ್ಟನ್ನು ಮೀಸಲಿಡಬೇಕಾದ ಹಂತ ತಲುಪಿದೆ. ಪಾಕಿಸ್ತಾನವು ಸೇನಾ ಶಸ್ತ್ರಾಸ್ತ್ರ ಹಾಗೂ ಉಪಕರಣಗಳಿಗಾಗಿ ಅಮೇರಿಕ ಹಾಗೂ ಚೀನವನ್ನು ಆಧರಿಸಿದೆ. ಪಾಕಿಸ್ತಾನ ಇಂತಹ ಭಾರಿ ಮೊತ್ತದ ಸೇನಾ ವೆಚ್ಚಗಳನ್ನು ಭರಿಸುವ ಆರ್ಥಿಕತೆಯನ್ನು ಬೆಳಸಿಕೊಂಡಿಲ್ಲ.

 


 

ಪಾಕಿಸ್ತಾನ ಮುಸ್ಲಿಂ ಗಣರಾಜ್ಯವೆಂದು ತನ್ನನ್ನು 1956ರಲ್ಲೇ ಘೋಷಿಸಿಕೊಂಡಿದೆ. ಮುಸ್ಲಿಂ ಧರ್ಮಕ್ಕೆ ಅದರ ರಾಷ್ಟ್ರೀಯ ಧರ್ಮವೆಂದು ಸಾಂವಿಧಾನಿಕ ಮಾನ್ಯತೆ ಕೊಟ್ಟಿದೆ. ಅದರೆ ಅದೇ ಸಂವಿಧಾನದ ಪ್ರಕಾರ ಯಾರು ಬೇಕಾದರೂ ಅವರ ನಂಬಿಕೆಯ ಧರ್ಮವನ್ನು ಪಾಲಿಸಲು ಅವಕಾಶ ಕಲ್ಪಿಸಲಾಗಿದೆ. ಪಾಕಿಸ್ತಾನದಲ್ಲಿ ಮುಸ್ಲಿಮರು ಶೇ 96.47ರಷ್ಟಿದ್ದರೆ, ದಲಿತರು, ಸಿಖ್ಖರು, ಫಶ್ತೂನರು, ಸಿಂಧಿಗಳು, ಸಾರೈಕಾಗಳು, ಮುಹಾಜಿರ್ ಗಳು, ಬಲೂಚಿಗಳು ಹಾಗೂ ಇತರ ಜಾತಿಯ ಜನರು ಅಲ್ಲಿನ ಜನಸಂಖ್ಯೆಯ ಶೇಕಡಾ 2.16ರಷ್ಟಿದ್ದಾರೆ. ಕ್ರಿಶ್ಚಿಯನ್ ಸಮುದಾಯದವರು ಶೇಕಡಾ 1.27ರಷ್ಟಿದ್ದಾರೆ. ಅಹಮದೀಯ ಎಂಬ ಪಂಗಡ 0.9ರಷ್ಟಿದೆ. ದಲಿತರನ್ನು ಅಲ್ಲಿ ಅಸ್ಪೃಶ್ಯರನ್ನಾಗಿಟ್ಟು, ಬಹಳ ಕೀಳಾಗಿ ನೋಡಲಾಗುತ್ತಿದೆ. ಅವರ ದುಡಿಮೆಯನ್ನು ದೋಚಲಾಗುತ್ತಿದೆ. 2013ರ ದಲಿತ್ ಸಾಲಿಡಾರಿಟಿ ನೆಟ್ ವರ್ಕ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ನಡೆಸಿದ ಅಧ್ಯಯನದಂತೆ ದಲಿತರು ಅಲ್ಲಿ 3, 30,000 ಜನರಿದ್ದಾರೆ. ಇದು ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡಾ 0.25ರಷ್ಟಾಗಿದೆ. ಇದು ಸರಿಯಾಗಿರುವ ಅಂಕಿಅಂಶವೆಂದು ಭಾವಿಸುವ ಅಗತ್ಯವಿಲ್ಲ. ಯಾಕೆಂದರೆ ಸಿಖ್ ಹಾಗೂ ಮುಸ್ಲಿಮರಲ್ಲೂ ದಲಿತ ಪಂಗಡಗಳಿವೆ. ಅವರನ್ನೆಲ್ಲಾ ಈ ಅಧ್ಯಯನ ಒಳಗೊಂಡಂತೆ ಕಾಣುತ್ತಿಲ್ಲ. ಆದರೆ ದಲಿತರಲ್ಲಿನ ಬಹುತೇಕರನ್ನು ಸ್ವಚ್ಚಗೊಳಿಸುವ ಕೆಲಸಗಳಲ್ಲಿ ಮಾತ್ರ ಮೀಸಲಾಗಿ ಬಳಸಲಾಗುತ್ತಿದೆ. 


                       


ಅಲ್ಲಿನ ಊಳಿಗಮಾನ್ಯತೆ ಮುಸ್ಲಿಂ ಧರ್ಮವನ್ನು ತನ್ನ ಹಿತಾಸಕ್ತಿಗಳಿಗೆ ಬಳಸಿಕೊಳ್ಳುತ್ತಾ ಬರುತ್ತಿದೆ. ಅಲ್ಲಿನ ಆಳುವ ವರ್ಗ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಜೊತೆಗೆ ಅವರ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಬಿಕ್ಕಟ್ಟಿನ ಸಂದರ್ಭಗಳಲ್ಲೆಲ್ಲಾ ಅಲ್ಪ ಸಂಖ್ಯಾತ ಸಮುದಾಯಗಳನ್ನು ಗುರಿ ಮಾಡುತ್ತಾ ಬಂದಿದೆ. ಅಲ್ಲಿನ ಆಳುತ್ತಾ ಬಂದ ಸರ್ಕಾರಗಳು ಇಂಡಿಯಾ ದೇಶವನ್ನು ತನ್ನ ದೇಶದ ಜನಸಾಮಾನ್ಯರಿಗೆ ಭಾರಿ ಬೆದರಿಕೆಯಾಗಿದೆ ಎಂದೆಲ್ಲಾ ಬಿಂಬಿಸುತ್ತಾ, ಯುದ್ಧ ಸನ್ನಿಯನ್ನೂ ಕೂಡ ಹುಟ್ಟುಹಾಕುತ್ತಾ ಅಲ್ಲಿನ ಪ್ರಮುಖ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ತಿರುಗಿಸುವ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. 

                   

                                       ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ದಲಿತರ ಒಂದು ಚಿತ್ರವಿದು

ಇಮ್ರಾನ್ ಖಾನ್ ರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷ ಮುಸ್ಲಿಂ ಕೋಮುವಾದವನ್ನು ಹಿಂದಿನ ಸರ್ಕಾರಗಳಿಗಿಂತಲೂ ಆಕ್ರಮಣಕಾರಿಯಾಗಿ ಬಳಸುತ್ತಾ ಬಂದಿದೆ. ಮುಸ್ಲಿಮೇತರ ಸಮುದಾಯಗಳನ್ನು ಆಕ್ರಮಣಕಾರಿಯಾಗಿ ಗುರಿ ಮಾಡುವುದು ಹೆಚ್ಚಿದೆ. ಚುನಾವಣಾ ಸಂದರ್ಭದಲ್ಲಿ ಜಾಗತಿಕ ಹಣಕಾಸು ಸಂಸ್ಥೆಗಳ ನಿಬಂಧನೆಗಳನ್ನು ಒಪ್ಪಿಕೊಳ್ಳುವುದಿಲ್ಲ… ದೇಶವನ್ನು ಜಾಗತಿಕ ಕಾರ್ಪೊರೇಟುಗಳ ಕೈಗೆ ಒಪ್ಪಿಸುವುದಿಲ್ಲ… ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ… ಎಂದೆಲ್ಲಾ ಭರವಸೆಯ ಭಾಷಣಗಳನ್ನು ಮಾಡಿದ್ದ, ಉದಾರವಾದಿಯಂತೆ ತೋರಿಸಿಕೊಂಡಿದ್ದ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ನಂತರ ವರ್ತಿಸಿದ್ದು ಮಾತ್ರ ಅದಕ್ಕೆ ತದ್ವಿರುದ್ಧವಾಗಿ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಾಲನಿಬಂಧನೆಗಳನ್ನು ಚಾಚು ತಪ್ಪದೇ ಪಾಲಿಸುತ್ತಾ ದೇಶವನ್ನು ಹೆಚ್ಚು ಜಾಗತಿಕ ಕಾರ್ಪೋರೇಟುಗಳ ಕೈಗೆ ದಾಟಿಸುತ್ತಾ ಹೋದರು. ದೇಶದ ಹಣದುಬ್ಬರ, ನಿರುದ್ಯೋಗಗಳು ಹೆಚ್ಚುತ್ತಾ ಹೋಗಿ ವಿದೇಶಿ ವಿನಿಮಯ ಮೀಸಲು ಕನಿಷ್ಟ ಮಟ್ಟ ತಲುಪಿ ಕಳೆದ ತಿಂಗಳಲ್ಲಿ ಕೇವಲ ಎರಡು ತಿಂಗಳುಗಳ ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳುವಷ್ಟು ವಿದೇಶಿ ಮೀಸಲು ತಲುಪಿತ್ತು.

                         

 ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಮನ ದೌರ್ಜನ್ಯಗಳ ವಿರುದ್ಧದ ಪ್ರತಿಭಟನೆ

 ಇವೆಲ್ಲದರಿಂದಾಗಿ ಜನರ ಪ್ರತಿರೋಧ ಹೆಚ್ಚಾಗತೊಡಗಿದಾಗ ಐ ಎಂ ಎಫ್ ನಿಬಂಧನೆಗಳ ವಿರುದ್ಧವಾಗಿ ತೈಲ ಹಾಗೂ ವಿದ್ಯುತ್ ಬೆಲೆಯನ್ನು ಇಳಿಸಿ ಜನಾಕ್ರೋಶಗಳನ್ನು ಸಮಾಧಾನಪಡಿಸಿ ತಮ್ಮ ಪ್ರಧಾನಿ ಪಟ್ಟವನ್ನು ಉಳಿಸಿಕೊಳ್ಳಲು ಹೆಣಗಿದರು. ಆದರೆ ಈ ಕ್ರಮಗಳನ್ನು ಐ ಎಂ ಎಫ್ ನೇರವಾಗಿಯೇ ಟೀಕೆಗೆ ಗುರಿಮಾಡಿ ತನ್ನ ಶರತ್ತುಗಳನ್ನು ಜಾರಿಗೊಳಿಸುವಲ್ಲಿ ‘ಒಂದು ಹೆಜ್ಜೆ ಮುಂದಿಟ್ಟಂತೆ ಮಾಡಿ ಎರಡು ಹೆಜ್ಜೆ ಹಿಂದಡಿಯಿಟ್ಟಿದೆ’ ಇಮ್ರಾನ್ ಖಾನ್ ಸರ್ಕಾರ ಎಂದಿತ್ತು. ನಂತರ ಇಮ್ರಾನ್ ಖಾನ್ ಸರ್ಕಾರವನ್ನು ಪದಚ್ಯುತಿಗೊಳಿಸುವ ಕಾರ್ಯ ಬಿರುಸು ಪಡೆಯಲಾರಂಭಿಸಿತು. ಸರ್ಕಾರದೊಂದಿಗೆ ಇದ್ದ ಮಿತ್ರಪಕ್ಷಗಳು ಹಾಗೂ ವಿರೋಧ ಪಕ್ಷಗಳನ್ನೂ ಈ ಕಾರ್ಯಕ್ಕಾಗಿ ಜಾಗತಿಕ ಕಾರ್ಪೋರೇಟುಗಳು ಹಾಗೂ ಅವರ ಹಣಕಾಸು ಸಂಸ್ಥೆಗಳು ಹಲವಾರು ವಿಧಗಳಲ್ಲಿ ಬಳಸಿಕೊಂಡವು. ಅದೀಗ ಕೊನೆಯ ಹಂತ ತಲುಪಿದೆ.

 ಇಮ್ರಾನ್ ಖಾನ್ ಅವಧಿಯಲ್ಲಿ ದೇಶವನ್ನು ಚೀನಾ ಹಾಗೂ ರಷ್ಯಾದೊಂದಿಗೆ ಹೆಚ್ಚಿನ ಸಂಬಂಧಗಳನ್ನು ಬೆಳೆಸಿಕೊಳ್ಳುವತ್ತ ಸಾಗಿತ್ತು ಪಾಕಿಸ್ತಾನ. ಉಕ್ರೈನ್ ಮೇಲಿನ ರಷ್ಯದ ನೇರ ಆಕ್ರಮಣದ ವಿಚಾರದಲ್ಲಿ ಅಮೇರಿಕ ಪರವಾಗಿ ಇಮ್ರಾನ್ ಖಾನ್ ಸರ್ಕಾರ ನಿಲ್ಲಲಿಲ್ಲ. ಉಕ್ರೈನ್ ಆಕ್ರಮಣ ಕುರಿತಾದ ವಿಶ್ವಸಂಸ್ಥೆಯ ಖಂಡನಾ ನಿರ್ಣಯದಲ್ಲೂ ಮತ ನೀಡುವುದರಿಂದ ಹೊರಗೆ ಉಳಿದಿತ್ತು. ಈ ಕ್ರಮಗಳು ಕೂಡ ಅಮೇರಿಕದ ಅತೃಪ್ತಿಗೆ ಕಾರಣವಾಗಿದ್ದವು.  ವಿಶ್ವ ಬ್ಯಾಂಕ್ ಹಾಗೂ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಗಳಂತಹ ಜಾಗತಿಕ ಹಣಕಾಸು ಸಂಸ್ಥೆಗಳು ಬಹುತೇಕವಾಗಿ ಅಮೇರಿಕದ ಹಿಡಿತದಲ್ಲೇ ಇವೆಯೆಂಬುದನ್ನೂ ನಾವಿಲ್ಲಿ ಗಮನಿಸಬೇಕು.

 ಪಾಕಿಸ್ತಾನದಲ್ಲಿ ಈಗ ನಿರುದ್ಯೋಗದ ಪ್ರಮಾಣ ಏರುತ್ತಲೇ ಹೋಗುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ವಿಪರೀತವಾಗಿ ಏರುತ್ತಿದೆ. ಹಣದುಬ್ಬರ ಎರಡಂಕಿಯನ್ನು ದಾಟಿ ಮುನ್ನೆಡೆಯುತ್ತಿದೆ. ಜೊತೆಗೆ ಕೊರೋನಾ ಮೂಲಕ ಮಾಡಿದ ಬಿಕ್ಕಟ್ಟು ಹಾಗೂ ಉಕ್ರೈನ್ ಬಿಕ್ಕಟ್ಟುಗಳ ನೇರ ಹಾಗೂ ಅಡ್ಡ ಪರಿಣಾಮಗಳು ಸೇರಿಕೊಂಡು ಪರಿಸ್ಥಿತಿ ಬಿಗಡಾಯಿಸಿ ಬಿಟ್ಟಿದೆ.

ಇವೆಲ್ಲದರ ಪರಣಾಮವಾಗಿ ಆ ದೇಶದಲ್ಲಿ ರಾಜಕೀಯ ಅಸ್ಥಿರತೆ ಕಾಣಿಸಿಕೊಂಡಿದೆ. ಅಲ್ಲಿನ ಸೇನಾ ಮುಖ್ಯಸ್ಥರು ನೇರವಾಗಿಯೇ ಅಮೇರಿಕ ಪರವಾದ ನಿಲುವುಗಳಿಂದ ಮಾತನಾಡತೊಡಗಿದ್ದಾರೆ.  ಸರ್ಕಾರದ ಉಕ್ರೈನ್ ಬಿಕ್ಕಟ್ಟಿನ ಕುರಿತಾದ ನಿಲುವಿಗೂ ಭಿನ್ನವಾಗಿ ಮಾತನಾಡತೊಡಗಿದ್ದಾರೆ.

ಅಮೇರಿಕ ಮತ್ತು ನೇಟೋ ಇದೇ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಮೇಲಿನ ಚೈನಾದ ಪ್ರಭಾವವನ್ನು ಕಡಿಮೆಗೊಳಿಸಿ ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ತಿರುಗಿಸಿಕೊಳ್ಳುವ ಪ್ರಯತ್ನ ಶುರುವಿಟ್ಟಿದೆ. ಅದಕ್ಕಾಗಿ ಪಾಕಿಸ್ತಾನಕ್ಕೆ ತಮ್ಮ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೂಲಕ ಕಠಿಣ ನಿಬಂಧನೆಗಳ ಸಾಲ ನೀಡಲು ಮುಂದಾಗಿವೆ. ಆದರೆ ಈಗಾಗಲೇ ಅಂತರಾಷ್ಟ್ರೀಯ ಹಣಕಾಸು ನಿಧಿಯ (ಐ ಎಂ ಎಫ್) ಸಾಲಕ್ಕಾಗಿ ಇಮ್ರಾನ್ ಖಾನ್ ಸರ್ಕಾರ ಪ್ರಯತ್ನ ನಡೆಸಿದ್ದರೂ ಅದು ಸಫಲವಾಗದೇ ಹೋಗಿದೆ. ಇಮ್ರಾನ್ ಖಾನ್ ರ ಸರ್ಕಾರ ಬದಲಾಗದೇ ಐಎಂಎಫ್ ಹಣಕಾಸು ಸಾಲ ಸಿಗದು, ಐ ಎಂ ಎಫ್ ಸಾಲ ದೊರೆಯದೇ ದೇಶ ಮುನ್ನೆಡೆಸಲು ಆಗದು ಎಂಬಂತಹ ಪರಿಸ್ಥಿತಿ ನಿರ್ಮಿಸಲಾಗಿದೆ. ಹಾಗಾಗಿ ಇಮ್ರಾನ್ ಖಾನ್ ಸರ್ಕಾರಕ್ಕೆ ಇದ್ದ ಬೆಂಬಲ ಬಿದ್ದುಹೋಗಿದೆ.

                     

ಪಾಕಿಸ್ತಾನದಲ್ಲಿ  ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸೆ ದೌರ್ಜನ್ಯದ ವಿರುದ್ಧ ಪ್ರತಿಭಟನೆಯ ಒಂದು ಚಿತ್ರ

 ಸದ್ಯಕ್ಕೆ ಇಮ್ರಾನ್ ಖಾನ್ ಸರ್ಕಾರ ಬಿದ್ದಿದೆ. ಈಗ ಚುನಾವಣೆಯ ಮೂಲಕ ಹೊಸ ಸರ್ಕಾರ ಬಂದರೂ ಬರಬಹುದು. ಅದು ಸಫಲವಾಗದೇ ಹೋದರೆ ಇಲ್ಲವೇ ಬಿಕ್ಕಟ್ಟನ್ನು ಮುಂದೆ ಮಾಡಿ ನೇರವಾಗಿ ಸೇನಾಡಳಿತ ಜಾರಿಗೆ ಬರುವ ಸಾಧ್ಯತೆಗಳು ಕೂಡ ಇವೆ.

ಶ್ರೀಲಂಕಾ ನಂತರ ಈಗ ಪಾಕಿಸ್ತಾನದಲ್ಲಿನ ಬೆಳವಣಿಗೆಗಳು ವಿಶ್ವ ಸಂಸ್ಥೆ, ಐ ಎಂ ಎಫ್ ಮೊದಲಾದ ಜಾಗತಿಕ ಹಣಕಾಸು ಸಂಸ್ಥೆಗಳ ಮೂಲಕ ಅಮೇರಿಕ, ಯೂರೋಪು ಮೂಲದ ಜಾಗತಿಕ ಭಾರಿ ಕಾರ್ಪೋರೇಟುಗಳು ಜಗತ್ತಿನ ರಾಷ್ಟ್ರಗಳನ್ನು ಮತ್ತು ಅದರ ಸರ್ಕಾರಗಳನ್ನು ರಚಿಸುವಲ್ಲಿ ಹಾಗೇನೆ ಬೀಳಿಸುವಲ್ಲಿ, ಆಡಳಿತಗಳಲ್ಲಿ ಹೇಗೆಲ್ಲಾ ನಿಯಂತ್ರಣ ಸಾಧಿಸುತ್ತವೆ. ಚುನಾವಣೆಗಳು ಹಾಗೂ ಜನರ ಮತ ನೀಡುವಿಕೆಗಳೆಲ್ಲಾ ಕೇವಲ ತೋರುಗಾಣಿಕೆಯ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನಾಗಿ ಮಾಡುತ್ತಾ ಜನಸಾಮಾನ್ಯರ ಕಣ್ಣಿಗೆ ಹೇಗೆಲ್ಲಾ ಮಣ್ಣೆರಚುತ್ತಾ ಬರಲಾಗುತ್ತಿದೆ ಎನ್ನುವುದಕ್ಕೆ ಇತ್ತೀಚಿನ ಕೆಲವು ಉದಾಹರಣೆಗಳಾಗಿವೆ. ಶ್ರೀಲಂಕ, ಪಾಕಿಸ್ತಾನದಂತಹ ಬಿಕ್ಕಟ್ಟಿನ ಬೆಳವಣಿಗೆಗಳು ಈಗ ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ನಡೆಯತೊಡಗಿವೆ.

10/04/2022                                                     

 

 


 

 

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...