Skip to main content

ಹೆಚ್ಚಳವಾಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಧಾಳಿಗಳು.. ಸಾಮಾಜಿಕ ಕ್ಷೋಬೆಯತ್ತ ಕರುನಾಡು# brahminical fascist attacks#karnataka# social unrest

 

ಹೆಚ್ಚಳವಾಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಧಾಳಿಗಳು..

ಸಾಮಾಜಿಕ ಕ್ಷೋಬೆಯತ್ತ ಕರುನಾಡು..

                                    -ನಂದಕುಮಾರ್ ಕುಂಬ್ರಿ ಉಬ್ಬು.

                                                ಮಿಂಚಂಚೆ: nandakumarnandana67@gmail.com

ಕರ್ನಾಟಕವನ್ನು ಉತ್ತರ ಇಂಡಿಯಾದ ತರಹದ ಅದರಲ್ಲೂ ಉತ್ತರಪ್ರದೇಶ ರಾಜ್ಯದ ರೀತಿಯಲ್ಲಿ ಬದಲಾಯಿಸಲಾಗುತ್ತಿದೆಯೇ ಎಂಬ ಅನುಮಾನಗಳು ಸಾಕಷ್ಟು ಜನರಲ್ಲಿ ಮೂಡತೊಡಗಿ ಬಹಳ ಕಾಲವಾಗಿದೆ. ಅದಕ್ಕೆ ಪೂರಕವಾಗಿ ಉತ್ತರ ಇಂಡಿಯಾದ ಹಲವಾರು ರಾಜ್ಯಗಳಲ್ಲಿ ನಡೆಯುವ ರೀತಿಯ ನೂರಾರು, ಸಾವಿರಾರು ಘಟನೆಗಳನ್ನು ಹಾಗೂ ಪ್ರಕರಣಗಳನ್ನು ಕರ್ನಾಟಕ ಕಾಣಲು ತೊಡಗಿ ಬಹಳ ಕಾಲವಾಗಿದೆ. ಪ್ರೀತಿ, ಪ್ರೇಮ, ಅಂತರ್ ಧರ್ಮ ಮದುವೆ, ಅಂತರ್ಜಾತಿ ಮದುವೆಗಳು; ಗಂಡು ಹೆಣ್ಣು ಮನುಷ್ಯ ಮನುಷ್ಯರ ನಡುವಿನ ಸಹಜ ಸ್ನೇಹ, ಗೆಳೆತನ, ಸೌಹಾರ್ಧತೆ, ಕೊಡುಕೊಳ್ಳುವಿಕೆ ಮೊದಲಾದ ಮನುಷ್ಯ ಸಹಜ ಸಂಬಂಧಗಳು ಹಾಗೂ ಮನುಷ್ಯಸಹಜ ಭಾವನೆಗಳನ್ನೂ ಕೋಮುವಿಷದಡಿ ಮುಳುಗಿಸಿ ಅಸಹನೀಯ ವಾತಾವರಣ ನಿರ್ಮಿಸುತ್ತಾ ಬರಲಾಯಿತು. ಇದನ್ನು ನಿರ್ದಿಷ್ಟವಾಗಿ ಬಾಬರೀ ಮಸೀದಿ ವಿವಾದದ ಹುಟ್ಟುಹಾಕುವ ಮೂಲಕ ಕಳೆದ ನಾಲ್ಕು ದಶಕಗಳಿಂದ ಕ್ರಮೇಣವಾಗಿ ಸಂಘಪರಿವಾರ ಮಾಡುತ್ತಾ ಬಂದಿದೆ.

 

 

ಇದೀಗ ವಿಪರೀತವೆನ್ನುವಷ್ಟು ಮುಂದುವರೆಯುತ್ತಾ ಹೋಗುತ್ತಿದೆ. ಪ್ರೀತಿ, ಗೆಳೆತನ, ಮನುಷ್ಯ ಸಂಬಂಧಗಳನ್ನು ಪಾಲಿಸಿಕೊಂಡು ಹೋಗಲು, ತಮಗೆ ಅನುಕೂಲ ಅನಿಸಿದ ಬಟ್ಟೆಗಳನ್ನು ತೊಡಲು, ತಮ್ಮಿಷ್ಟದ ಆಹಾರಗಳನ್ನು ತಿನ್ನಲು ಹಾಗೇನೆ ಕೊಳ್ಳಲು, ತಮ್ಮಿಷ್ಟದ ಗೆಳೆಯರು ಪರಿಚಿತರೊಂದಿಗೆ ಪ್ರಯಾಣ ಮಾಡಲು, ಸಂಭ್ರಮಾಚರಣೆಗಳಲ್ಲಿ ಪಾಲ್ಗೊಳ್ಳಲು, ಮುಕ್ತವಾಗಿ ವ್ಯಾಪಾರ ವ್ಯವಹಾರ ಮಾಡಲು ಕೂಡ ಸಾಧ್ಯವಿಲ್ಲದಂತಹ ಸ್ಥಿತಿಯನ್ನು ತಂದಿಡಲಾಗುತ್ತಿದೆ. ಸರ್ಕಾರ ಹಾಗೂ ನಾಗರಿಕ ವ್ಯವಸ್ಥೆಯೇ ಅಸ್ತಿತ್ವದಲ್ಲಿ ಇಲ್ಲದಂತಹ ಅನುಭವ ಕರ್ನಾಟಕದಲ್ಲಿ ಆಗತೊಡಗಿದೆ.

 ಅದು ಮುಂದುವರೆಯುತ್ತಾ ಈಗ ಕರ್ನಾಟಕದಲ್ಲಿ ಜನಸಾಮಾನ್ಯರಿಗೆ ಕನಿಷ್ಠ ಭದ್ರತೆಯೂ ಇಲ್ಲದಂತಹ ಪರಿಸ್ಥಿತಿಯತ್ತ ಸಾಗುತ್ತಿದೆ. ಅದರಲ್ಲೂ ಸಂಘ ಪರಿವಾರ ದಕ್ಷಿಣ ಇಂಡಿಯಾದಲ್ಲಿ ತನ್ನ ಅಧಿಕಾರ ರಾಜಕಾರಣದ ಬುನಾದಿ ಹಾಕಿ ಭದ್ರಗೊಳಿಸಲು ಪ್ರಧಾನವಾಗಿ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡು ಅದರಂತೆ ಕಾರ್ಯ ನಿರ್ವಹಿಸುತ್ತಾ ಬರತೊಡಗಿದಂದಿನಿಂದ ಇದು ತೀವ್ರವಾಗಿದೆ. ಹುಬ್ಬಳ್ಳಿಯ ಈದ್ಗಾ ಮೈದಾನ, ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಗಳಂತಹ ಸ್ಥಳಗಳು, ದನ, ಹಂದಿ ಮೊದಲಾದ ಜಾನುವಾರುಗಳು ಮೊದಲಾದವನ್ನು ನಿರ್ದಿಷ್ಟವಾಗಿ ಬಳಸಿಕೊಳ್ಳುತ್ತಾ ವಿವಾದಾತ್ಮಕಗೊಳಿಸಿ ಆ ಮೂಲಕ ಕೋಮು ದ್ರುವೀಕರಣಗೊಳಿಸಲು ಆರಂಭಿಸುತ್ತಾಅದರಿಂದ ಅಧಿಕಾರ ರಾಜಕಾರಣದಲ್ಲಿ ಕ್ರಮೇಣವಾಗಿ ತನ್ನ ಹಿಡಿತ ಸಾಧಿಸುತ್ತಾ ಬಂದಿತ್ತು.

 

 


ಸಂಘಪರಿವಾರದ ಬಜರಂಗದಳ, ಹಿಂದೂ ಜಾಗರಣ ವೇದಿಕೆ, ವಿಶ್ವಹಿಂದೂ ಪರಿಷತ್ ಗಳಂತಹ ಸಂಘಟನೆಗಳಲ್ಲದೇ ನೂರಾರು ಸ್ಥಳೀಯವಾದ ಯುವಕ ಸಂಘ, ಭಜನಾ ಮಂಡಲ, ಕನ್ನಡಪರ ಸಂಘಟನೆಗಳು ಮೊದಲಾದ ಸಂಘಟನಾ ರೂಪಗಳನ್ನು ಯಕ್ಷಗಾನ ಮೊದಲಾದ ಕಲಾರೂಪಗಳನ್ನು ಬಳಸಿಕೊಂಡು ಕರ್ನಾಟಕಾದ್ಯಂತ ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯಗಳ ಮೇಲೆ ಹಲವಾರು ರೀತಿಯ ದಾಳಿಗಳನ್ನು ಮಾಡುತ್ತಾ ಬರಲಾಯಿತು. ಅಪಪ್ರಚಾರದಾಳಿಗಳನ್ನೂ ವ್ಯಾಪಕವಾಗಿಸುತ್ತಾ ಬರಲಾಯಿತು. ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಕೋಮುಸಮೂಹಸನ್ನಿಯನ್ನೇ ಸೃಷ್ಟಿಸಿತ್ತು. ಅದಕ್ಕಾಗಿ ಅಲ್ಲಿನ ಮಠಗಳು ಹಾಗೂ ಹಲವಾರು ದೇವಸ್ಥಾನಗಳು ಹಾಗೂ ಅವುಗಳ ಮುಖ್ಯಸ್ಥರುಗಳನ್ನು ವ್ಯಾಪಕವಾಗಿ ಬಳಸಲಾಯಿತು. ಹಲವಾರು ಮಸೀದಿಗಳು ಚರ್ಚ್ ಗಳು  ನೇರ ಆಕ್ರಮಣಕ್ಕೊಳಗಾದವು. ಗೋ ರಕ್ಷಣೆ ಹೆಸರಿನಲ್ಲಿ ಜಾನುವಾರು ಸಾಕಾಣಿಕೆ ಹಾಗೂ ಮಾಂಸಮಾರಾಟ ವ್ಯವಹಾರಗಳನ್ನು ಕೋಮುವಾದಿ ಧಾಳಿಗಳಿಗೆ ಒಳಪಡಿಸುತ್ತಾ ನಿಯಂತ್ರಣ ಸಾಧಿಸಿ ಲಾಭ ಕೊಳ್ಳೆ ಹೊಡೆಯುವ ಕಾರ್ಯವನ್ನು ಮೊದಲಿಟ್ಟರು. ಜೊತೆಗೆ ದಲಿತ ದಮನಿತ ಹಿನ್ನೆಲೆಯ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಕೊಲೆಗಳಲ್ಲಿ ಸಂಘಪರಿವಾರದವರ ನಂಟುಗಳು ಬಯಲಾಗತೊಡಗಿದವು. ಹಲವಾರು ಪ್ರಕರಣಗಳು ನಡೆದು ಬಯಲಾದರೂ ಕಾನೂನು ಕ್ರಮಗಳು ನಡೆದು, ಬಂಧನಗಳಾಗಿ, ಅಪರಾಧಿಗಳಿಗೆ ಶಿಕ್ಷೆಯಾಗುವ ಖಚಿತತೆ ಇಲ್ಲದಂತಾಯಿತು. ಕಾನೂನು ಪಾಲನೆ ಮಾಡಬೇಕಾದ ಆಡಳಿತ ವ್ಯವಸ್ಥೆಯ ಮೂಗಿನ ಅಡಿಯಲ್ಲಿಯೇ ಮತೀಯ ದ್ವೇಷದ ಚಟುವಟಿಕೆಗಳು, ಹಲ್ಲೆ, ಕಗ್ಗೊಲೆಗಳು, ಅತ್ಯಾಚಾರಗಳು, ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆಗಳ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದವು.

 

 

ದಕ್ಷಿಣ ಇಂಡಿಯಾದ ಮಾಧ್ಯಮಗಳಲ್ಲಿಯೇ ಕನ್ನಡ ಮಾಧ್ಯಮಗಳ ಗುಣಮಟ್ಟ, ಅದರಲ್ಲೂ ವಿದ್ಯುನ್ಮಾನ ಮಾಧ್ಯಮ ಬಹಳ ಪಕ್ಷಪಾತಿ ಹಾಗೂ ಬಹಳ ಕಳಪೆಯದಾಗಿ ಸಾಗುತ್ತಾ ಬಂದಿತು. ಸುಳ್ಳುಗಳು, ಜಾತೀವಾದ, ಕೋಮುವಾದಗಳಲ್ಲಿ ಅದ್ದಿ ನೆನಸಿಟ್ಟ ಸುದ್ಧಿಗಳು ಹಾಗೂ ಕಾರ್ಯಕ್ರಮಗಳ ಪ್ರಸಾರವೇ ತಮ್ಮ ಪ್ರಧಾನ ಕರ್ತವ್ಯವಾಗಿಸಿಕೊಂಡವು. ಸಂಘಪರಿವಾರದ ತುತ್ತೂರಿಯಾಗಿ, ಬಿಜೆಪಿ ಸರ್ಕಾರದ ಪ್ರಚಾರದ ಭಾಗವಾಗಿ ವರ್ತಿಸತೊಡಗಿದವು. ಅದಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಪಡೆಯತೊಡಗಿದವು. ಜನರ ಕಣ್ಣಲ್ಲಿ ಮೊದಲಿದ್ದ ಆದರಣೆ ಹಾಗೂ ಮಾನ್ಯತೆಯನ್ನು ಕನ್ನಡ ಪತ್ರಿಕೋದ್ಯಮ ಕಳೆದುಕೊಂಡಿತು.

ಇವುಗಳನ್ನು ನಡೆಸುತ್ತಾ ಹಾಗೇನೇ ಬಳಸುತ್ತಾ ಸಂಘಟನಾತ್ಮಕವಾಗಿ ಭಯಗಳನ್ನು ಉಂಟುಮಾಡುತ್ತಾ ಅದನ್ನು ಉಪಯೋಗಿಸಿಕೊಂಡು ವ್ಯಾಪಾರ ವ್ಯವಹಾರಗಳ ಲಾಭಗಳನ್ನು, ಹಫ್ತಾ ವಸೂಲಿಯಂತಹ ಗೂಂಡಾ ದಂಧೆಯನ್ನೂ ಈ ಕೋಮುವಾದಿ ಹಾಗೂ ಜಾತೀವಾದಿ ಶಕ್ತಿಗಳು ಮಂಗಳೂರಿನಂತಹ ಪ್ರದೇಶಗಳಲ್ಲಿ ನಡೆಸತೊಡಗಿದರು. ದನ ಜಾನುವಾರುಗಳ ಕಳ್ಳತನ ಹಾಗೂ ಕಳ್ಳ ಸಾಗಾಣಿಕೆಗಳನ್ನು ನಡೆಸತೊಡಗಿದರು. ಅದರ ವ್ಯವಹಾರಗಳಲ್ಲಿ ವಿವಾದ ಬಂದು ಸಂಘಪರಿವಾರದ ಸಂಘಟನೆಗಳಲ್ಲಿ ಗುರುತಿಸಿಕೊಂಡವರೇ ಪರಸ್ಪರ ಕೊಂದುಕೊಂಡ ಹತ್ತಾರು ಪ್ರಕರಣಗಳೂ ವರದಿಯಾದವು. ಹಫ್ತಾ ಕೊಡದಿರುವ ವ್ಯಾಪಾರಿ ಸಂಸ್ಥೆಗಳ ಮೇಲೆ ಯಾವುದಾದರೂ ನೆಪದಲ್ಲಿ ಧಾಳಿ ನಡೆಸಿ ವಿವಾದಗೊಳಿಸುವಂತಹ ಭಯಗಳನ್ನು ಹರಡಿ ಅದರ ಲಾಭಗಳನ್ನು ಇಂತಹ ಸಂಘಟನೆಗಳ ಹಲವಾರು ನಾಯಕರುಗಳು ದೋಚತೊಡಗಿದರು. ಪಬ್ ದಾಳಿ, ಹೋಟೆಲ್ ದಾಳಿ, ಗೋ ಸಾಗಾಟತಡೆ ಧಾಳಿ, ರೆಸಾರ್ಟ್ ಮೇಲಿನ ಧಾಳಿ…ಹೀಗೆ ವ್ಯಾಪಕವಾಗಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಾ ಬಂದರು. ಇವೆಲ್ಲವುಗಳ ಮೂಲಕ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಸಂಘಟನಾ ಸಮೂಹವಾದ ಸಂಘಪರಿವಾರ ತನ್ನ ಬೇರುಗಳನ್ನು ಊರಿ ವಿಸ್ತರಿಸುತ್ತಾ ಸಾಗಿತು.

ಆ ಪ್ರಯತ್ನದಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಎಂಬ ಪ್ರಾದೇಶಿಕವೂ ಅಲ್ಲದ, ರಾಷ್ಟ್ರೀಯವೂ ಅಲ್ಲದ, ಜಾತ್ಯಾತೀತವೂ ಅಲ್ಲದ ಚುನಾವಣಾ ರಾಜಕಾರಣದ ಮಾಮೂಲಿ ಪಕ್ಷವನ್ನು ಸಮರ್ಥವಾಗಿ ಬಳಸಿಕೊಂಡು ವಿಧಾನ ಸಭೆಯಲ್ಲಿ ತನ್ನ ಹಿಡಿತ ಹೆಚ್ಚಿಸಿಕೊಳ್ಳುತ್ತಾ ಸಾಗಿತ್ತು. ಚುನಾವಣಾ ಅಧಿಕಾರ ರಾಜಕಾರಣದಲ್ಲಿ ನೆಲೆಯೂರಲು ಜೆಡಿಎಸ್ 2006ರಲ್ಲಿ ಬಿಜೆಪಿಗೆ ಮೊಟ್ಟ ಮೊದಲ ಅವಕಾಶ ಒದಗಿಸಿಕೊಟ್ಟಿತ್ತು. ಅದುವರೆಗೂ ಬಿಜೆಪಿಗೆ ಅಂತಹ ಅವಕಾಶ ಒದಗಿಬಂದಿರಲಿಲ್ಲ. ಸಂಘ ಪರಿವಾರದ ನಿರಂತರವಾದ ಎಲ್ಲಾ ಪ್ರಯತ್ನಗಳ ನಡುವೆಯೂ ಬಿಜೆಪಿಯು ತನ್ನ ಶಕ್ತಿಯನ್ನು ಆ ಮಟ್ಟಕ್ಕೆ ಬೆಳೆಸಿಕೊಳ್ಳಲು ಆಗಿರಲಿಲ್ಲ. ಆದರೆ ಜೆಡಿಎಸ್ ಎಂಬ ರಾಜಕೀಯ ಅವಕಾಶವಾದದ ಮತ್ತು ಜಾತ್ಯತೀತ ಸೋಗಿನ ಪಕ್ಷದ ಹೆಚ್ ಡಿ ಕುಮಾರ ಸ್ವಾಮಿಯಂತಹ ನಾಯಕನನ್ನು ಸಂಘಪರಿವಾರ ಬುಟ್ಟಿಗೆ ಹಾಕಿಕೊಂಡು 20-20 ಸರ್ಕಾರವನ್ನು ರಚಿಸಿತು. ಇದು ಶಾಸಕಾಂಗದಲ್ಲಿ ತನ್ನ ಕುಟಿಲತನಗಳನ್ನು ಬಳಸಿಕೊಂಡು, ಶಾಸಕರುಗಳನ್ನೇ ಖರೀದಿಸಿಕೊಂಡು ತನ್ನ ಶಾಸಕ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿತು. ರಾಜ್ಯದ ಗಣಿಸಂಪತ್ತನ್ನು ದೋಚುತ್ತಾ ಕೊಳ್ಳೆಯ ಸಾಮ್ರಾಜ್ಯ ಕಟ್ಟಿದ್ದ ರೆಡ್ಡಿ ಸಹೋದರರು ಬಿಜೆಪಿಯ ಭಾಗವಾಗಿ ತಮ್ಮ ಕಳ್ಳ ಹಣದ ಮೂಲಕ ಸರ್ಕಾರದಲ್ಲಿ ಬಲಶಾಲಿ ನಡೆಗಳನ್ನು ನಡೆಸತೊಡಗಿದರು. 20-20 ಸರ್ಕಾರದ ಕಾಲಾವಧಿಯಲ್ಲಿ ಸಂಘಪರಿವಾರ ತನ್ನ ಕೋಮುದ್ರುವೀಕರಣ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಇತರ ಜನಸಮೂಹವನ್ನುಎತ್ತಿ ಕಟ್ಟಿ ಜನಸಾಮಾನ್ಯರ ಮನಸುಗಳಲ್ಲಿ ದ್ವೇಷ ಬಿತ್ತಲು ಎಲ್ಲವನ್ನೂ ಉಪಯೋಗಿಸುತ್ತಾ ಬಂದಿತು.

 


20-20 ಸರ್ಕಾರದ ಮೊದಲ ಇಪ್ಪತ್ತು ತಿಂಗಳ ಅವಧಿ ಮುಗಿದ ನಂತರ ಬಿಜೆಪಿಗೆ ಮುಖ್ಯ ಮಂತ್ರಿ ಪಟ್ಟ ಬಿಟ್ಟುಕೊಡುವ ವಿಚಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮೀನ ಮೇಷ ಎಣಿಸತೊಡಗಿದರು. ಸಂಘ ಪರಿವಾರ ಶಾಸಕರುಗಳನ್ನೇ ಖರೀದಿಸತೊಡಗಿತು. ಕೊನೆಗೆ ಕುಮಾರ ಸ್ವಾಮಿ ಸರ್ಕಾರ ಬಿದ್ದು ಜೆಡಿಎಸ್ ನ ಶಾಸಕರ ಬಲ ಕುಗ್ಗಿತು. ಬಿಜೆಪಿ ಶಾಸಕಾಂಗದಲ್ಲಿ ತನ್ನ ಹಿಡಿತವನ್ನು ಹೆಚ್ಚಿಸಿಕೊಂಡಿತು. ಅಲ್ಪಾವಧಿಯಲ್ಲಿ ಬಿಜೆಪಿ ಮುಖ್ಯ ಮಂತ್ರಿ ಸ್ಥಾನವನ್ನೂ ಗಳಿಸಿ ಅದರ ಮೂಲಕ ತನಗಿರುವ ಹಿಡಿತವನ್ನು ಹೆಚ್ಚಿಸಿಕೊಂಡರೂ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಐದು ವರುಷಗಳ ಅವಧಿಯನ್ನು ಪೂರೈಸಿತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಾಗದೇ ಹೋಯಿತು. ಕಾಂಗ್ರೆಸ್ ಬೇಷರತ್ತಾಗಿ ಜೆ ಡಿ ಎಸ್ ನ ಕುಮಾರಸ್ವಾಮಿಗೆ ಬೇಷರತ್ತಾಗಿ ಬೆಂಬಲ ನೀಡುವ ಮೂಲಕ ಮತ್ತೆ ಸಮ್ಮಿಶ್ರ ಸರ್ಕಾರ ರಚಿಸಿತು. ಬಿಜೆಪಿ ಶಾಕರುಗಳ ಖರೀದಿಯ ಆಟವನ್ನು ಮುಂದುವರೆಸುತ್ತಾ ಹೋಯಿತು. ಕೊನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವಾರು ಶಾಸಕರು ಖರೀದಿಯಾದರು. ರೆಸಾರ್ಟ್ ರಾಜಕಾರಣ ನಡೆದು ಕೊನೆಗೆ ಕುಮಾರ ಸ್ವಾಮಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಗೆದ್ದುಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ತಮ್ಮ ಎಲ್ಲಾ ಇಷ್ಟಗಳನ್ನು ಪೂರೈಸಿಕೊಳ್ಳಲು ಯಡಿಯೂರಪ್ಪರಂತಹ ಒಂದಷ್ಟು ಜನಬೆಂಬಲ ಹಾಗೂ ಒಂದಷ್ಟು ಸ್ವಂತಿಕೆಯಿರುವ ವ್ಯಕ್ತಿ ಮುಖ್ಯಮಂತ್ರಿ ಸ್ಥಾನದಲ್ಲಿರುವುದು ಸಂಘಪರಿವಾರಕ್ಕೆ ಬೇಡವಾಗಿ ವಯಸ್ಸು ಇತ್ಯಾದಿ ನೆಪ ಹಿಡಿದು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಬಸವರಾಜ್ ಬೊಮ್ಮಾಯಿಯಂತಹ ಬಲಹೀನ ಮತ್ತು ಸ್ವಂತಿಕೆಯಿಲ್ಲದ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಗಿದೆ.

ಕರ್ನಾಟಕದಲ್ಲಿನ ಈ ಎಲ್ಲಾ ಪ್ರಮುಖ ಬೆಳವಣಿಗೆಗಳ ನಡುವೆ ಸಂಘ ಪರಿವಾರ ತನಗಿರುವ ಎಲ್ಲಾ ಆಡಳಿತಾತ್ಮಕ ಅವಕಾಶಗಳನ್ನು ಬಳಸಿಕೊಂಡು ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಕಾರ್ಯಸೂಚಿಗಳನ್ನು ಜಾರಿಮಾಡುತ್ತಲೇ ಬಂದಿದೆ. ಕೋಮುವಾರು ದ್ವೇಷಕಾರಿ ವಿಭಜನೆಗಳನ್ನು ಆಕ್ರಮಣಕಾರಿಯಾಗಿ ಮಾಡುತ್ತಾ, ಜಾತೀವಾರು ದೌರ್ಜನ್ಯಗಳನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಾ ಬಂದಿದೆ. ಇವುಗಳ ಮೂಲಕ ದಲಿತ ದಮನಿತ ಹಿಂದುಳಿದ ಜನಸಮುದಾಯಗಳನ್ನು ಹಿಂದೂ ಎಂಬ ಹೆಸರಿನಲ್ಲಿ ಬ್ರಾಹ್ಮಣಶಾಹಿ ವಿಷವ್ಯವಸ್ಥೆಯ ತೆಕ್ಕೆಯೊಳಗೆ ಹಿಡಿದಿಟ್ಟುಕೊಳ್ಳುವ ಕುತಂತ್ರಗಳನ್ನೂ ಮಾಡುತ್ತಾ ಬರಲಾಯಿತು.

 

 


 ಹಿಂದುಳಿದ ದಲಿತ ದಮನಿತ ಜನಸಮುದಾಯಗಳ ದೈವ, ದೇವಸ್ಥಾನ, ಆಚಾರವಿಚಾರಗಳನ್ನು ಬ್ರಾಹ್ಮಣಶಾಹಿ ಪುರೋಹಿತಶಾಹಿ ವ್ಯವಸ್ಥೆಯೊಳಗೆ ತೆಗೆದುಕೊಂಡು ಹತೋಟಿ ಪಡೆಯುತ್ತಾ ಬರಲಾಯಿತು. ವಾಸ್ತು, ದಿಕ್ಕು, ಇತ್ಯಾದಿ ಹೆಸರುಗಳಲ್ಲಿ ಜನರ ನಂಬಿಕೆಯ ಬನಗಳು, ಕಟ್ಟೆಗಳು, ದೈವಗಳು ಇತ್ಯಾದಿಗಳ ಸ್ಥಾನಗಳನ್ನು ಬದಲಾಯಿಸಲಾಯಿತು. ಗುಡಿಗಳು, ಪ್ರತಿಷ್ಠಾಪನೆಗಳನ್ನು ಮಾಡಲಾಯಿತು. ಹಾಗಾಗಿ ಹಿಂದಿದ್ದ ಹಲವಾರು ಬನಗಳು, ಕಟ್ಟೆಗಳು ಈಗ ಗುಡಿ ದೇವಸ್ಥಾನಗಳಾಗಿ ಬದಲಾಗಿದ್ದಲ್ಲದೇ, ಹಿಂದಿನ ಶೂದ್ರ ದೈವ ಸ್ಥಾನಗಳ ರೂಪಗಳು ಬದಲಾಗಿವೆ. ಅವುಗಳೊಂದಿಗೆ ಪಕ್ಕದಲ್ಲಿ ಬ್ರಾಹ್ಮಣಶಾಹಿ ದೇವರುಗಳನ್ನು ಪ್ರತಿಷ್ಠಾಪಿಸಿ ದೇವಸ್ಥಾನಗಳನ್ನು ಕಟ್ಟಲಾಗಿದೆ. ಇಲ್ಲೆಲ್ಲಾ ಬ್ರಾಹ್ಮಣಶಾಹಿ ಪದ್ಧತಿಯಂತೆ ಪೂಜೆ, ಹೋಮ, ವ್ರತಗಳನ್ನು ವ್ಯಾಪಕಗೊಳಿಸಲಾಯಿತು. ಮೊದಲಿದ್ದ ಶೂದ್ರ ಪೂಜಾರಿಗಳ ಜಾಗದಲ್ಲಿ ಬ್ರಾಹ್ಮಣ ಪೂಜಾರಿಗಳನ್ನು ಪ್ರತಿಷ್ಠಾಪಿಸಲಾಯಿತು. ಬ್ರಾಹ್ಮಣ ಪುರೋಹಿತಶಾಹಿಗಳ ಅಣತಿಯಂತೆ ಇಂತಹ ಎಲ್ಲಾ ಕಡೆಗಳಲ್ಲಿ ಆಚಾರಗಳು, ಪೂಜಾ ಪದ್ಧತಿಗಳನ್ನು ಬದಲಾಯಿಸಿ ಜಾರಿಗೆ ತರಲಾಗಿದೆ/ತರಲಾಗುತ್ತಿದೆ.

ಇವುಗಳ ಜೊತೆಯಲ್ಲಿ ಹಿಂದೂ ಸಮಾಜೊತ್ಸವ ಹೆಸರಿನ ದ್ವೇಷವಿಷ ಬಿತ್ತುವ ಸಮಾವೇಶಗಳನ್ನು ಸಂಘಟಿಸುತ್ತಾ ಬರಲಾಯಿತು. ಹಿಂದೂ ಎಂಬ ಸಾಮಾನ್ಯ ರೂಢಿಗತ ಪರಿಕಲ್ಪನೆಯ ಶೂದ್ರ ದಲಿತ ಸಮುದಾಯಗಳನ್ನು ಬ್ರಾಹ್ಮಣಶಾಹಿ ಪರಿಕಲ್ಪನೆಯ ಹಿಂದುತ್ವದಡಿ ಹಿಡಿದಿಡುವ ಕಾರ್ಯಗಳನ್ನು ಬಿರುಸುಗೊಳಿಸುತ್ತಾ ಬಂದರು. ಶೂದ್ರ ದಲಿತಸಮುದಾಯಗಳ ಹಿಂದು ಪರಿಕಲ್ಪನೆಯನ್ನು ಬ್ರಾಹ್ಮಣಶಾಹಿ ಹಿಂದುತ್ವದಡಿ ವಿಲೀನಗೊಳಿಸುವ ಕಾರ್ಯಗಳನ್ನು ನಾಜೂಕಿನ ನಡೆಗಳ ಮೂಲಕ ಮಾಡಲಾಯಿತು. ಇದಕ್ಕೆ ಅವರು ಬಳಸಿಕೊಂಡಿದ್ದು ಆಯಾ ಪ್ರದೇಶಗಳ ಬಹುಸಂಖ್ಯಾತ ಸಮುದಾಯಗಳನ್ನು. ದಕ್ಷಿಣಕನ್ನಡದಲ್ಲಿ ಅವರು ಇದಕ್ಕಾಗಿ ಬಿಲ್ಲವ ಬಂಟ ಸಮುದಾಯವನ್ನು ಬಳಸಿಕೊಂಡರೆ, ಮಂಡ್ಯ, ಚಿಕ್ಕಮಗಳೂರು ಮೊದಲಾದ ಕಡೆಗಳಲ್ಲಿ ಒಕ್ಕಲಿಗ ಸಮುದಾಯವನ್ನು ಬಳಸಿಕೊಂಡರು. ದಲಿತ ಸಮುದಾಯದಲ್ಲಿ ಸ್ಪೃಶ್ಯ ಸಮುದಾಯಗಳಾದ ಲಂಬಾಣಿ, ನಾಯಕರನ್ನು ಬಳಸಿಕೊಂಡರು. ಅಸ್ಪೃಶ್ಯವೆಂದು ಪರಿಗಣಿಸಿ ಇಟ್ಟಿರುವವರಲ್ಲಿ ಮಾದಿಗ ಸಮುದಾಯವನ್ನು ಅದರ ಮಠಾಧೀಶರು ಹಾಗೂ ಅದರ ಮುಖಂಡರುಗಳ ಮೂಲಕ ಬಳಸಿಕೊಳ್ಳತೊಡಗಿದರು. ಉತ್ತರ ಕರ್ನಾಟಕದ ಭಾಗಗಳಲ್ಲಿ ಲಿಂಗಾಯತ ಸಮುದಾಯವನ್ನು ಬಳಸಿಕೊಂಡರು.


 

 

ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿನ ಚಳವಳಿ ಸಂಘ ಪರಿವಾರದ ವಿಚ್ಚಿದ್ರಕಾರಿ ಪ್ರಯತ್ನಗಳಿಗೆ ಒಂದಷ್ಟು ಅಡ್ಡಿಯನ್ನುಂಟು ಮಾಡಿದ್ದು ಹೌದಾದರೂ ಅದು ಸಂಘಪರಿವಾರದ ಬ್ರಾಹ್ಮಣಶಾಹಿ ನಡೆಗಳಿಗೆ ಗುಣಾತ್ಮಕವಾದ ಪ್ರತಿರೋಧವನ್ನೇನು ಒಡ್ಡಲಿಲ್ಲ. ಆ ಚಳವಳಿ ಲಿಂಗಾಯತ ಸಮುದಾಯವನ್ನು ಸಂಘಪರಿವಾರ ಹಿಂದುತ್ವೀಕರಣ (ಬ್ರಾಹ್ಮಣತ್ವೀಕರಣ) ಗೊಳಿಸಿದ್ದನ್ನು ವಿರೋಧಿಸಿ ನಿಲ್ಲುವ ಉದ್ದೇಶವನ್ನೂ ಕೂಡ ಹೊಂದಿರಲಿಲ್ಲ.  ಅದು ಚುನಾವಣಾ ರಾಜಕಾರಣದ ದಾಳವಾಗಿ ಮತ್ತೆ ಅದೇ ಸಂಘಪರಿವಾರಕ್ಕೆ ಅನುಕೂಲವಾಗಿ ಪರಿಣಮಿಸಿತು.



  ಇವುಗಳ ನಡುವೆಯೇ ಕೋಮುಧ್ರುವೀಕರಣವನ್ನು ಬಿರುಸುಗೊಳಿಸುತ್ತಾ ಜನಸಾಮಾನ್ಯರ ಗಮನವನ್ನು ತಪ್ಪಿಸಲಾಯಿತು. ಜನಸಾಮಾನ್ಯರ ನಿತ್ಯ ಸಮಸ್ಯೆಗಳಾದ ಅಗತ್ಯ ವಸ್ತುಗಳ ಬೆಲೆಯೇರಿಕೆ, ಸರ್ಕಾರಿ ಸೌಲಭ್ಯಗಳ, ಶಿಕ್ಷಣ ಸೌಲಭ್ಯಗಳ, ಮೂಲಭೂತ ಸೌಲಭ್ಯಗಳ ಕಡಿತಗಳನ್ನು ಮಾಡುತ್ತಾ ಬರಲಾಯಿತು. ಸರಕಾರಿ ಇಲಾಖೆಗಳು ಮತ್ತು ಅವುಗಳ ಅಧಿಕಾರಿ ಹಾಗೂ ನೌಕರ ವರ್ಗ ನಡೆಸುತ್ತಿರುವ ವ್ಯಾಪಕ ಭ್ರಷ್ಟಾಚಾರಗಳು, ಜನಸಾಮಾನ್ಯರನ್ನು ತುಚ್ಚವಾಗಿ ನಡೆಸಿಕೊಳ್ಳುವುದು ಹೆಚ್ಚಾಗತೊಡಗಿತು. ಒಕ್ಕೂಟ ಸರ್ಕಾರ ಕರ್ನಾಟಕದ ಮೇಲೆ ಹೇರುತ್ತಾ ಸಾಗಿದ ಕೇಂದ್ರತ್ವ ಹಾಗೂ ಹಿಂದಿ ಸಂಸ್ಕೃತಗಳ ಹೇರಿಕೆ ಮೊದಲಾದವುಗಳನ್ನು ಹೆಚ್ಚಿಸಲಾಯಿತು. ಕರ್ನಾಟಕದಿಂದ ಇಪ್ಪತ್ತರಷ್ಟು ಬಿಜೆಪಿ ಸಂಸದರಿದ್ದರೂ ಕರ್ನಾಟಕವನ್ನು ಒಕ್ಕೂಟ ಸರ್ಕಾರ ಕಡೆಗಣಿಸುತ್ತಾ ಬರುವುದು ಹೆಚ್ಚಿತು. ಯಾವ ಮಟ್ಟಕ್ಕೆ ಇದು ಹೋಯಿತೆಂದರೆ ರಾಜ್ಯದ ಹಕ್ಕಿನ ಜಿ ಎಸ್ ಟಿ ಪಾಲು ಹಾಗೂ ಅನುದಾನಗಳನ್ನು ಒದಗಿಸೋದರಲ್ಲೂ ಭಾರಿ ಅಸಡ್ಡೆ ಮತ್ತು ತಾರತಮ್ಯಗಳನ್ನು ಪ್ರದರ್ಶಿಸುತ್ತಾ ಬರಲಾಯಿತು. ಇಂತಹ ನೀತಿಗಳನ್ನು ಪ್ರಶ್ನಿಸಿ ಬೀದಿಗಿಳಿಯುವ ಕಾರ್ಯ ನಡೆಯಲೇ ಇಲ್ಲ. ವಿರೋಧ ಪಕ್ಷಗಳಲ್ಲಿ ಕೆಲವು ಮಾತ್ರ ಕೇವಲ ಬಾಯಿಮಾತಿನ ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಬೇರೇನೂ ನಡೆಯಲಿಲ್ಲ. ಆದರೆ ಸಂಘ ಪರಿವಾರ ಹಲವಾರು ಅತ್ಯಾಚಾರ ಕೊಲೆಗಳನ್ನು ತನ್ನ ಪರವಾಗಿ ಬಳಸಿಕೊಳ್ಳಲು ಬೀದಿ ಹೋರಾಟಗಳನ್ನು ಸಂಘಟಿತ್ತು. ಅವುಗಳ ಕಾರಣಕರ್ತರುಗಳು ಅವರ ಕಡೆಯವರೇ ಆಗಿದ್ದರು ಎನ್ನುವುದು ನಂತರ ಬಯಲಾಯಿತು.



ಕೋಮುಧ್ರುವೀಕರಣ ಹೆಚ್ಚಿಸುತ್ತಾ ಮುಸ್ಲಿಮರನ್ನು ತೀವ್ರವಾಗಿ ಗುರಿಮಾಡುತ್ತಿದ್ದರೆ ಮತ್ತೊಂದೆಡೆ ದಲಿತರ ಮೇಲಿನ ಆಕ್ರಮಣಗಳು, ಕಗ್ಗೊಲೆಗಳು, ಅತ್ಯಾಚಾರ ಹತ್ಯೆಗಳು, ದೌರ್ಜನ್ಯಗಳು, ಬಹಿಷ್ಕಾರಗಳು ವಿಪರೀತವೆನ್ನಿಸುವಷ್ಟು ವರದಿಯಾಗತೊಡಗಿದವು. ಇಂತಹ ವರದಿಯಾದವುಗಳ ಅಂಕಿಅಂಶಗಳು ಇಡೀ ದೇಶದಲ್ಲಿಯೇ ಕರ್ನಾಟಕವನ್ನು ಉತ್ತರ ಇಂಡಿಯಾದ ಉತ್ತರ ಪ್ರದೇಶದಂತಹ ರಾಜ್ಯಗಳ ಸಾಲಿನಲ್ಲಿ ನಿಲ್ಲಿಸಿತು. ಇದು ಐದು ವರುಷ ಪೂರೈಸಿದ ಕಾಂಗ್ರೆಸ್ ಕಾಲಾವಧಿಯಲ್ಲೂ ಕಾಣಿಸಿದ್ದ ವಿದ್ಯಮಾನವಾಗಿತ್ತು ಎನ್ನುವುದನ್ನು ಕೂಡ ಇಲ್ಲಿ ಗಮನಿಸಬೇಕಾಗಿದೆ. ಆದರೆ ದಲಿತ ಸಂಘಟನೆಗಳೆಂದು ಹೆಸರಿಟ್ಟುಕೊಂಡ ಸಂಘಟನೆಗಳಾಗಲೀ, ದಲಿತರ ನಾಯಕರೆನಿಸಿಕೊಂಡವರಾಗಲೀ ಪ್ರತಿಭಟಿಸಿ ಬೀದಿಗಿಳಿಯುವ ಸ್ಥಿತಿಯಲ್ಲಿ ಇಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಾ ಬಂದರು.



 ಜನರು ತಮ್ಮದೇ ರೀತಿಗಳಲ್ಲಿ ಪ್ರತಿಭಟಿಸುತ್ತಾ ಬಂದರು ಕೆಲವು ಸಂಘಟನೆಗಳು ಜೊತೆಗೂಡಿದವು. ನಂತರದ ಕಾಲದಲ್ಲಿ ಈ ಕುರಿತಾದ ಸಂಘಟನಾತ್ಮಕ ಪ್ರತಿಭಟನೆಗಳು ಹೆಚ್ಚುತ್ತಾ ಬಂದವು. ಉಡುಪಿ ಚಲೋ, ಗುಡಿಬಂಡೆ ಚಲೋಗಳಂತಹ ಹೋರಾಟಗಳು ನಡೆದವು. ರಾಯಚೂರಿನ ಜಿಲ್ಲಾ ನ್ಯಾಯಾಧೀಶರೊಬ್ಬರು ಅಂಬೇಡ್ಕರ್ ಭಾವಚಿತ್ರದ ವಿಚಾರದಲ್ಲಿ ಮಾಡಿದ ಅವಮಾನದ ನೆಪದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ದಲಿತ ಸಮೂಹ ಭಾರಿ ಮಟ್ಟದಲ್ಲಿ ಪ್ರತಿಭಟಿಸಿ ನಿಂತಿತು. ನಂತರ ಬೆಂಗಳೂರಿನಲ್ಲಿ ನಡೆದ ದಲಿತರ ಮಹಾ ಪ್ರತಿಭಟನಾ ಸಮಾವೇಶ ಕಳೆದ ಸುಮಾರು ಎರಡು ದಶಕಗಳಿಗೂ ನಂತರದಲ್ಲಿ ನಡೆದ ಭಾರಿ ಪ್ರತಿಭಟನೆಯಾಗಿ ದಾಖಲಾಯಿತು.

ಇದಕ್ಕೂ ಮೊದಲು ದೆಹಲಿ ಉತ್ತರಪ್ರದೇಶ ಅಸ್ಸಾಂ ಮೊದಲಾದೆಡೆ ನಡೆದ ಪೌರತ್ವ ಸಂಬಂಧಿ ಕಾಯಿದೆಗಳ ಹೇರಿಕೆಗಳ ವಿರುದ್ಧ ನಡೆದ ಚಳುವಳಿಗಳ ಪ್ರಭಾವ ಕರ್ನಾಟಕದ ಹಲವಾರು ಕಡೆಗಳಲ್ಲಿ ಪ್ರತಿಫಲಿಸಿದವು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಂಡರು. ದೆಹಲಿಯ ಚಾರಿತ್ರಿಕ ಶಾಹೀನ್ ಭಾಗ್ ಮಾದರಿಯಲ್ಲಿಯೇ ರಾಜ್ಯದಲ್ಲೂ ಹೋರಾಟಗಳು ಸಿಡಿದವು. ಇವುಗಳಲ್ಲೆಲ್ಲಾ ಅಲ್ಪ ಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಕೋರೊನಾ ನೆಪದಲ್ಲಿ ಈ ಹೋರಾಟವನ್ನು ಆಳುವ ವ್ಯವಸ್ಥೆ ತಟಸ್ಥಗೊಳಿಸಿದರೂ ಅದರ ಪ್ರಭಾವವನ್ನು ತಗ್ಗಿಸಲು ಸಾಧ್ಯವಾಗಲಿಲ್ಲ.

  ದೆಹಲಿ ಹಾಗೂ ಇನ್ನಿತರೆಡೆ ನಡೆದ ವರುಷ ಕಾಲಾವಧಿ ಚಾರಿತ್ರಿಕ ರೈತಾಪಿ ಹೋರಾಟದ ಸ್ಪೂರ್ತಿಯ ಪರಿಣಾಮವಾಗಿ ಕರ್ನಾಟಕದ ರೈತಾಪಿಗಳು ರಾಜ್ಯದ ಶಿವಮೊಗ್ಗ, ಬೆಂಗಳೂರು, ಹಾವೇರಿ ಬೆಳಗಾವಿಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು. ಇದು ಕೂಡ ಕಳೆದ ಎರಡು ದಶಕಗಳ ನಂತರದಲ್ಲಿ ಮಹತ್ವದ ರೈತಾಪಿ ಪ್ರತಿರೋಧದ ಬೆಳವಣಿಗೆಯಾಗಿತ್ತು. ಶಿವಮೊಗ್ಗದಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಸಮಾವೇಶಗೊಂಡ ರೈತಾಪಿ ಜನರು ಮೋದಿಯ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಹಾಗೂ ರಾಜ್ಯದ ಯಡಿಯೂರಪ್ಪ ಬಿಜೆಪಿ ನೇತೃತ್ವದ ಸರಕಾರದ ರೈತವಿರೋಧಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ತಮ್ಮ ಪ್ರತಿರೋಧಗಳನ್ನು ದಾಖಲು ಮಾಡಿತ್ತು. ಈ ಸಂಘಟಿತ ಪ್ರತಿರೋಧಗಳು ಸಂ‍ಘ ಪರಿವಾರದ ಕೋಮುವಾದಿ ಜಾತೀವಾದಿ ಹುನ್ನಾರಗಳ ವಿರುದ್ಧ ಹಾಗೇನೆ ಜನರ ಮುಂದೆ ಸರಕಾರಗಳು ತಂದಿಡುತ್ತಿರುವ ಸಂಕಟಗಳ ವಿರುದ್ಧ ಜನರು ಸ್ವಯಂಪ್ರೇರಿತರಾಗಿ ಒಗ್ಗೂಡಿ ನಿಂತಿದ್ದರ ಪ್ರತಿಫಲವಾಗಿತ್ತು.

ಕೆಲವು ಸಂಘಟನೆಗಳು ಜನರ ಈ ಸ್ವಪ್ರೇರಿತ ಪ್ರತಿರೋಧದಲ್ಲಿ ಜೊತೆಗೂಡಿ ಕೆಲಸ ಮಾಡಿದವು. ಆದರೆ ಈ ಸಂಘಟನೆಗಳಲ್ಲಿ ಹಲವು ಜನರ ಹೋರಾಟಗಳನ್ನು ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್ ಅನ್ನು ಜನರ ಮುಂದೆ ಬಿಂಬಿಸಲು ಬಳಸಿಕೊಳ್ಳಲು ಶ್ರಮಿಸಿದರು. ಹೋರಾಟ ವೇದಿಕೆಗಳಲ್ಲಿ ಅಂತಹ ರಾಜಕೀಯ ನೇತಾರರಿಗೆ ಅವಕಾಶ ಕಲ್ಪಿಸಿಕೊಟ್ಟರು. ಅದು ಜನರ ಹೋರಾಟದ ಸ್ಪೂರ್ತಿಗಳಿಗೆ ಆ ಮಟ್ಟದಲ್ಲಿ ದಕ್ಕೆ ಮಾಡಿತು. ಯಾಕೆಂದರೆ ಕಾಂಗ್ರೆಸ್ ಪಕ್ಷ ತನ್ನ ಜನವಿರೋಧಿ ನೀತಿಗಳ ಜಾರಿಯಿಂದಾಗಿಯೇ ಜನರ ಮುಂದೆ ಬೆತ್ತಲಾಗಿ ನಿಂತು ಬಹಳ ಕಾಲವಾಗಿದೆ. ಅಲ್ಲದೇ ಈಗಿನ ಸರಕಾರಗಳು ಆಕ್ರಮಣಕಾರಿಯಾಗಿ ಜಾರಿಮಾಡುತ್ತಿರುವ ನೀತಿಗಳು ಹಿಂದಿನಿಂದ ಕಾಂಗ್ರೆಸ್ ರೂಪಿಸಿ ಜಾರಿಗೊಳಿಸುತ್ತಾ ಬಂದ ನೀತಿಗಳ ಮುಂದುವರೆದ ಭಾಗಗಳಾಗಿವೆ. ಈ ಸತ್ಯವನ್ನು ಮರೆಮಾಚಿ ಜನರ ಮುಂದೆ ಬಿಂಬಿಸುವ ಕಾರ್ಯಗಳು ಬಹಳ ಹಾನಿಕರವಾದ ದೂರಗಾಮಿ ಪರಿಣಾಮ ಬೀರುತ್ತವೆ ಎಂಬ ಅಂಶವೂ ಇದೆ.

 ಜಾಗತಿಕ ಭಾರಿ ಕಾರ್ಪೋರೇಟುಗಳಿಗೆ ಹಾಗು ಅವುಗಳು ಹೇರಿದ ಜಾಗತೀಕರಣಕ್ಕೆ ಪಕ್ಷವೋ ವ್ಯಕ್ತಿಯೋ ಮುಖ್ಯವಲ್ಲ. ಅವರ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಷ್ಟೇ ಈ ಶಕ್ತಿಗಳ ಲಕ್ಷ್ಯವಾಗಿರುತ್ತದೆ. ಹಾಗಿದ್ದಾಗ ಅವರ ದಾಳ ಹಾಗೂ ಗಾಳದ ಭಾಗವೇ ಆದ ಕಾಂಗ್ರೆಸ್ ಅನ್ನು ಜನರ ಮುಂದೆ ಪರ್ಯಾಯವಾಗಿ ಪ್ರತಿಪಾದಿಸುವುದರಿಂದ ಜಾರಿಯಾಗುತ್ತಿರುವ ನೀತಿಗಳಲ್ಲಾಗಲೀ, ಆಕ್ರಮಣಕಾರತ್ವದಲ್ಲಾಗಲೀ ಮೂಲಭೂತವಾಗಿ ವ್ಯತ್ಯಾಸವೇನೂ ಆಗದು. ಅಲ್ಲದೇ ಇವುಗಳು ಜನರು ತಮಗೆ ಅಗತ್ಯವಾಗಿರುವ ಪರ್ಯಾಯಗಳ ಕಡೆಗೆ ಹೊರಳದಂತೆ ಮಾಡುವ ಶ್ರಮವಾಗಿಬಿಡುತ್ತದೆ. ಹಾಗಾಗಿ ಸಂಘ ಪರಿವಾರ ಮಾಡುತ್ತಿರುವ ಜನರನ್ನು ದಿಕ್ಕು ತಪ್ಪಿಸುವ ಕಾರ್ಯಗಳಿಗೆ ಇಂತಹವು ಸಾರಾಂಶದಲ್ಲಿ ಪೂರಕವಾಗೇ ಕೆಲಸ ಮಾಡುತ್ತವೆ. ಈ ಪ್ರಮುಖ ಅಂಶವನ್ನು ಸಮಾಜಮುಖಿಗಳು ಹಾಗೂ ಜನಪರ ವಲಯದಲ್ಲಿರುವವರಲ್ಲಿ ಹಲವರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲದಿರುವುದು ದುರಂತವೆನ್ನಲೇ ಬೇಕಾಗಿದೆ. ಇಂತಹ ಕಾರ್ಯಗಳು ಹಾಗೂ ಚಿಂತನೆಗಳು ಜಾಗತೀಕರಣದ ನವವಸಾಹತು ನೀತಿಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಹಾಯ ಮಾಡುತ್ತವೆ. ಇಂತಹವೇ ಕರ್ನಾಟಕದಲ್ಲಿ ಸ್ವಲ್ಪ ಹೆಚ್ಚಿನ ಮಟ್ಟದಲ್ಲೇ ನಡೆಯುತ್ತಾ ಬರುತ್ತಿವೆ.

ಕರ್ನಾಟಕದಲಿ ಜನಪರ ಮಾಧ್ಯಮಗಳ ಕೊರತೆಯೂ ಬಹಳವಿರುವುದರಿಂದಾಗಿ ಇಂತಹ ಚರ್ಚೆಗಳಿಗೆ ವೇದಿಕೆಗಳು ಇಲ್ಲವೆನ್ನುವಷ್ಟು ಕಡಿಮೆಯಾಗಿವೆ. ಕೆಲವೇ ಕೆಲವು ಅಂತಹ ಮಾಧ್ಯಮಗಳು ಇದ್ದರೂ ಅವುಗಳು ಬಹಳ ಮಿತಿಗಳಿಗೆ ಒಳಗಾಗಿವೆ. ವೈಚಾರಿಕ ಚಿಂತನೆಗಳು, ಪರ್ಯಾಯ ಚಿಂತನೆಗಳು ಹರಡಲು ಇದು ಅಡ್ಡಿಗಳನ್ನು ಒಡ್ಡುತ್ತಿವೆ. ಇನ್ನು ಕನ್ನಡ ಸಾಮಾಜಿಕ ಜಾಲತಾಣ ಹಾಗೂ ಅಂತರ್ಜಾಲ ಪತ್ರಿಕೆಗಳಲ್ಲೂ ಬಹಳ ಸೀಮಿತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಸಂಘಪರಿವಾರದ ಜೀವವಿರೋಧಿ ಕುತಂತ್ರಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ರಾಜಕೀಯ ಸ್ಪಷ್ಟತೆಯ ಕೊರತೆ ಬಹಳವಿದೆ. ಅದನ್ನು ವೈಚಾರಿಕವಾಗಿ ಮುಂದಿನ ಹಂತಕ್ಕೆ ತಲುಪಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎನ್ನಬೇಕಾಗಿದೆ.



ಬಿಜೆಪಿ ಸರ್ಕಾರ ಬಹುಮತ ಹೊಂದಿ ಆಡಳಿತಕ್ಕೆ ಬಂದಿದ್ದರೂ ಅಂತರಿಕವಾಗಿ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಬ್ರಾಹ್ಮಣ ಹಾಗೂ ಲಿಂಗಾಯತ, ಹಿತಾಸಕ್ತಿಗಳ ನಡುವಿನ ತಾಕಲಾಟಗಳು ಹಾಗೇನೆ ಶೂದ್ರ ಮತ್ತು ಬ್ರಾಹ್ಮಣ ಮೂಲದ ನಾಯಕರುಗಳ ಹಿತಾಸಕ್ತಿಗಳ ಪರಸ್ಪರ ಸಂಘರ್ಷಗಳು ಬಿರುಸಾಗಿ ಸಾಗುತ್ತಿವೆ. ಅದರ ಭಾಗವಾಗೇ ಇದೀಗ ಕುರುಬ ಸಮುದಾಯ ಮೂಲದ ಈಶ್ವರಪ್ಪ ರಾಜೀನಾಮೆ ನೀಡಬೇಕಾದ ಪರಿಸ್ಥಿತಿಯನ್ನು ತಂದಿಡಲಾಗಿದೆ.  ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮತ್ತು ಈಶ್ವರಪ್ಪರ ಮೇಲೆ ಮಾಡಿದ ಕಮಿಷನ್ ಹಾಗೂ ಭ್ರಷ್ಟಾಚಾರದ ಬಗ್ಗೆ ನೇರ ಆರೋಪಗಳ ನಂತರವೂ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ದೃಢವಾಗಿ ಹೇಳುತ್ತಾ ಬಂದ ಈಶ್ವರಪ್ಪ ಈಗ ಅನಿವಾರ್ಯವಾಗಿ ರಾಜಿನಾಮೆ ನೀಡಿದ್ದೂ ಆಗಿದೆ. ಹಿಂದೂ ಮಹಾ ಸಭಾ ಎಂಬ ಸಂಘಟನೆ ಕೇವಲ ರಾಜಿನಾಮೆ ಸಾಕಾಗುವುದಿಲ್ಲ, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದೆ. ಈ ಬಿಜೆಪಿ ಸರ್ಕಾರ ಕೇವಲ ಕಣ್ಣೊರೆಸುವ ಕಾರ್ಯ ಮಾಡುತ್ತಿದೆ, ಹಿಂದೆಯೂ ಮಾಡಿದೆ ಈಗಲೂ ಅದನ್ನೇ ಮಾಡುತ್ತಿದೆ. ಈಶ್ವರಪ್ಪರನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂಬ ನೇರ ಆರೋಪಗಳನ್ನು ಅದು ಮಾಡಿದೆ. ಅಷ್ಟೇ ಅಲ್ಲದೇ ಬೊಮ್ಮಾಯಿ ಸರಕಾರ ರಾಜೀನಾಮೆ ಕೊಟ್ಟು ರಾಜ್ಯಪಾಲರ ನೇತೃತ್ವದಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಇವೆಲ್ಲಾ ಸಂಘ ಪರಿವಾರದ ಒಳಗಿನ ಬಿಕ್ಕಟ್ಟುಗಳ ಕೆಲವು ಉದಾಹರಣೆಗಳಾಗಿವೆ.

ಜನರು ಮೋದಿ ಸರ್ಕಾರ ಹೇರುತ್ತಿರುವ ಜನವಿರೋಧಿ ಹಾಗೂ ಭಾರಿ ಕಾರ್ಪೋರೇಟು ಪರ ನೀತಿಗಳ ವಿರುದ್ಧ ಭಾರಿ ಪ್ರತಿರೋಧ ಒಡ್ಡತೊಡಗಲು ಶುರುವಾದಾಗ ಸಂಘ ಪರಿವಾರದಲ್ಲಿ ಮಸುಕು ಕವಿಯಲು ಆರಂಭವಾಗಿತ್ತು. ಅದರ ಸುಳ್ಳುಹರಡುವ ಕಾರ್ಖಾನೆಗಳು ಒಂದಷ್ಟು ದಿನ ಕಾರ್ಯ ನಿರ್ವಹಿಸಲಾಗದೇ ಹೋಯಿತು. ಮೋದಿಯ ಬಗ್ಗೆ ವಿರೋಧಿ ಭಾವನೆಗಳು ಜನರಲ್ಲಿ ಹೆಚ್ಚಾಗತೊಡಗಿತ್ತು.

2023ರಲ್ಲಿ ಕರ್ನಾಟಕ, ಗುಜರಾತ್ ಮೊದಲಾದ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಯಾವುದೇ ಜನಹಿತ ಕಾರ್ಯಗಳನ್ನು ಮಾಡದೇ, ಕೇವಲ ಸ್ಥಳ, ರಸ್ತೆ, ಸಂಸ್ಥೆ ಮೊದಲಾದವುಗಳ ಹೆಸರು ಬದಲಾಯಿಸುವ, ಸಂಸ್ಕೃತ ವಿವಿಯಂತಹ ಬ್ರಾಹ್ಮಣಶಾಹಿ ಕಾರ್ಯಸೂಚಿಗಳನ್ನು ಅಧೀಕೃತವಾಗಿ ಹೇರುವ, ಕೊರೋನಾ ವಿಚಾರ ಹಿಡಿದು ಜನಸಾಮಾನ್ಯರಲ್ಲಿ ಭಯಾಂದೋಲನ ಹುಟ್ಟುಹಾಕಿ ಜನವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಕೆಲಸಗಳಿಗಷ್ಟೇ ಸೀಮಿತವಾಗಿಬಿಟ್ಟಿತ್ತು. ಜನಸಾಮಾನ್ಯರಲ್ಲಿ ಇವೆಲ್ಲದರ ಅರಿವು ಹೆಚ್ಚಾಗತೊಡಗಿ ಸಂಘ ಪರಿವಾರದ ಆತಂಕಕ್ಕೆ ಕಾರಣವಾಗಿತ್ತು. ಜನಸಾಮಾನ್ಯರನ್ನು ತಮ್ಮ ಖೆಡ್ಡಾಗೆ ಬೀಳಿಸಲು ಯೋಜನೆ ರೂಪಿಸಿ ಹೆಣ್ಣು ಮಕ್ಕಳು ತೊಡುವ ತಲೆ ಬಟ್ಟೆಯನ್ನು ವಿವಾದವಾಗಿಸಿ ವಿದ್ಯಾರ್ಥಿ ಸಮೂಹವನ್ನು ಮುಸ್ಲಿಮ ಸಮುದಾಯದ ವಿರುದ್ಧ ಎತ್ತಿಕಟ್ಟಲು ನೋಡಿತು. ಇದನ್ನು ವಿದ್ಯಾರ್ಥಿನಿಯರು ವಿರೋಧಿಸಿ ನಿಂತರು. ಕೊನೆಗೆದು ನ್ಯಾಯಾಲಯದ ಮೂಲಕ ಗೊಂದಲದ ಗೂಡಾಗಿಸಿ ನೂರಾರು ಮುಸ್ಲಿಮ್ ಸಮುದಾಯ ಹಿನ್ನೆಲೆಯ ಹುಡುಗಿಯರು ತಮ್ಮ ವಿಧ್ಯಾಭ್ಯಾಸವನ್ನೇ ಮೊಟಕುಗೊಳಿಸಬೇಕಾದ ಪರಿಸ್ಥಿತಿಯನ್ನು ತಂದಿಟ್ಟರು.

ಇಂತಹವುಗಳಿಗೆ ಮುಸ್ಲಿಮ್ ಧಾರ್ಮಿಕತೆಯನ್ನು ಮೂಲಭೂತವಾದಿಯಾಗಿಸಿ ನೋಡುವ ಶಕ್ತಿಗಳ ಕೊಡುಗೆಯೂ ಸಾಕಷ್ಟು ಇದೆ. ಈ ಅಂಶವನ್ನು ಮರೆಯದೇ ಗಮನಿಸುವುದು ಅವಶ್ಯಕವಾಗಿದೆ. ಮುಸ್ಲಿಮ್ ಸಮುದಾಯದಲ್ಲಿನ ಶಿಕ್ಷಿತ ಯುವ ಸಮೂಹದ ಹಲವರು ಕೂಡ ಮೂಲಭೂತವಾದಿ ಪ್ರತಿಪಾದಕರಾಗಿ ವರ್ತಿಸುತ್ತಾ ಸಂಘಪರಿವಾರದ ಹುನ್ನಾರಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪೂರಕ ವಾತಾವರಣ ನಿರ್ಮಿಸುತ್ತಿದ್ದಾರೆ. ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಕೋಮುವಾದವನ್ನು ಮೂಲಭೂತವಾದದ ಮೂಲಕ ಎದುರಿಸಿ ತಡೆಯಲು ಸಾಧ್ಯವಿಲ್ಲ ಬದಲಿಗೆ ಅದು ಸಂಘಪರಿವಾರದ ಫ್ಯಾಸಿಸ್ಟ್ ಹುನ್ನಾರಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ

ಇದರ ಮಧ್ಯೆ ಮುಸ್ಲಿಂ ಸಮುದಾಯದ ಮೇಲೆ ಆಹಾರ, ತಲೆಬಟ್ಟೆ, ಆಚಾರ, ವಿಚಾರ ಹೀಗೆ ಎಲ್ಲಾ ನೆಪಗಳನ್ನು ಹಿಡಿದು ಅಪಪ್ರಚಾರ ಹಬ್ಬಿಸುವುದು ನಡೆಯುತ್ತಿದೆ. ಅನಗತ್ಯ ವಿವಾದ ಹುಟ್ಟುಹಾಕಿ, ಸಾಮಾಜಿಕ ಉದ್ವಿಗ್ನತೆ ಹೆಚ್ಚಿಸುವುದು ಇತ್ಯಾದಿ ಮಾಡುತ್ತಾ ಕೋಮುಧ್ರುವೀಕರಣದತ್ತ ಎಳೆದೊಯ್ಯುತ್ತಾ ಅದರ ಎಲ್ಲಾ ನೇರ ಹಾಗೂ ಪರೋಕ್ಷ ಲಾಭಗಳನ್ನು ಪಡೆಯುವುದಕ್ಕೆ ಸಂಘಪರಿವಾರ ಶ್ರಮಿಸುತ್ತಾ ಬಂದಿದೆ. ನಂತರ ಮಾಂಸಾಹಾರಿಗಳನ್ನು ಗುರಿಮಾಡುತ್ತಾ ಮಾಂಸಾಹಾರ ನಿಷೇಧವನ್ನು ಹಲವಾರು ನೆಪಗಳಲ್ಲಿ ಹೇರತೊಡಗಿದೆ.

ಯುವ ತಲೆಮಾರಿನ ಮೆದುಳೊಳಗೆ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಚಿಂತನೆಗಳನ್ನು ಬಿತ್ತಿ ಬೆಳೆಸುವ ಕಡೆಗೆ ಅದು ತನ್ನ ಒತ್ತು ಕೊಡುತ್ತಾ ಬಂದಿದೆ. ಅದಕ್ಕಾಗಿ ಅದು ಶಿಕ್ಷಣ ಕ್ಷೇತ್ರದಲ್ಲಿ ತನ್ನ ಹಲವಾರು ನಡೆಗಳನ್ನು ನಡೆಸುತ್ತಿದೆ. ಮೋದಿಯ ಬಿಜೆಪಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಆರಂಭ ಮಾಡಲಾಗಿದೆ. ಇದು ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾರ್ಪೋರೇಟುಗಳಿಗೆ ಹಸ್ತಾಂತರಿಸುವ ಕಾರ್ಯದ ಭಾಗವಾಗಿದೆ. ಇದು ಶಿಕ್ಷಣವನ್ನು ದಲಿತದಮನಿತರು ಹಾಗೂ ಬಡವರಿಗೆ ಎಟುಕದಂತೆ ಮಾಡುವ ಹುನ್ನಾರವೆಂದು ನಾಡಿನ ಸಮಾಜಮುಖಿಗಳು ವಿರೋಧಿಸಿದ್ದರೂ ರಾಜ್ಯ ಸರ್ಕಾರ ಗಣನೆಗೆ ತೆಗೆದುಕೊಳ್ಳಲಿಲ್ಲ.

ರಾಜ್ಯವಿಂದು ದಲಿತದಮನಿತರ, ಮುಸ್ಲಿಮ್, ಕ್ರಿಶ್ಚಿಯನ್ ಅಲ್ಪಸಂಖ್ಯಾತರ, ಮಹಿಳೆಯರು ಇನ್ನಿತರ ಬಡಸಮುದಾಯಗಳ ಜೀವ ಹಾಗೂ ಬದುಕುಗಳಿಗೆ ಭದ್ರತೆಯಿಲ್ಲದ ತಾಣವಾಗಿ ಮಾರ್ಪಡುತ್ತಿದೆ. ದಲಿತರನ್ನು ಮಲಗುಂಡಿಗಳಿಗೆ ಇಳಿಸಿ ಉಸಿರುಗಟ್ಟಿ ಸಾಯಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಮುಂದಿದೆ.



ಶಿಕ್ಷಣದ ಬಗ್ಗೆ ಯಾವುದೇ ಪರಿಣತಿ ಇಲ್ಲದ ಬ್ರಾಹ್ಮಣಶಾಹಿ ಪ್ರತಿಪಾದಕರನ್ನು ಒಳಗೊಳಿಸಿದ ಸಮಿತಿಯ ಮೂಲಕ ಪಠ್ಯಪುಸ್ತಕ ಪರಿಷ್ಕರಣೆಗಳನ್ನು ನಡೆಸುತ್ತಿದೆ ಕರ್ನಾಟಕದ ಬಿಜೆಪಿ ಸರ್ಕಾರ. ಆ ಮೂಲಕ ಯುವ ಮನಸುಗಳಲ್ಲಿ ಬ್ರಾಹ್ಮಣಶಾಹಿ ಸುಳ್ಳುಗಳನ್ನು ಪ್ರತಿಷ್ಠಾಪಿಸುವ ಕಾರ್ಯ ಬಿರುಸುಗೊಳಿಸಿದೆ. ಕನ್ನಡಪರವೆಂದು ಹೇಳಿಕೊಳ್ಳುವ ಸಂಘಟನೆಗಳಲ್ಲಿ ಬಹುತೇಕವು ಕೋಮುವ್ಯಾಧಿಗೊಳಗಾಗಿ ಬಹಳ ಕಾಲವಾಗಿರುವುದರಿಂದ ಕನ್ನಡಜನ ನಾಡು ನುಡಿಗಳ ರಕ್ಷಣೆಗೆ ದನಿಯೆತ್ತುವ ಶಕ್ತಿ ಕಳೆದುಕೊಂಡಿವೆ.

ರೈತಾಪಿಗಳ ಚಾರಿತ್ರಿಕ ಹೋರಾಟಗಳ ಕಾರಣ ಮೋದಿ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಿದ್ದರೂ ರಾಜ್ಯ ಸರ್ಕಾರ ಮಾಡಿರುವ ಕೃಷಿ ಕಾಯಿದೆಗಳ ತಿದ್ದುಪಡಿಗಳನ್ನು ರದ್ದುಗೊಳಿಸದೇ ಮುಂದುವರೆಸಿದೆ.



ಒಟ್ಟು ವಾರ್ಷಿಕ ಉತ್ಪನ್ನದಲ್ಲಿ ದೇಶದಲ್ಲಿಯೇ ಆರನೇ ಸ್ಥಾನವನ್ನು ಹೊಂದಿದ್ದರೂ ನೀತಿ ಆಯೋಗ ಹೇಳುವ ಪ್ರಕಾರವೇ ರಾಜ್ಯದಲ್ಲಿ ಬಡತನ ರೇಖೆಯ ಕೆಳಗಿರುವವರ ಪ್ರಮಾಣ ಶೇಕಡಾ 20ರಷ್ಟಿದೆ.  ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಮದ್ಯಮ ಸ್ಥಾನವನ್ನು ಹೊಂದಿದೆ. ರಾಜ್ಯದ ವಾರ್ಷಿಕ ಖರ್ಚು 2.52 ಲಕ್ಷ ಕೋಟಿಗಳಷ್ಟಿದ್ದರೆ ಆದಾಯ 1-90 ಲಕ್ಷ ಕೋಟಿಗಳಷ್ಟಿದೆ. ಅಂದರೆ ಆದಾಯ ಹಾಗು ವೆಚ್ಚಗಳ ನಡುವಿನ ಅಂತರವೇ 62000 ಕೋಟಿಗಳಷ್ಟಿದೆ. ರಾಜ್ಯದ ಸಾರ್ವಜನಿಕ ಸಾಲ ರಾಜ್ಯದ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 28ರ ಸನಿಹ ತಲುಪುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ಕೆ ಎಫ್ ಆರ್ ಎ (ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯಿದೆ 2002) ನಿಗದಿಪಡಿಸಿರುವ ಶೇಕಡಾ 25ರ ಗಡಿಯನ್ನು ದಾಟಿ ಶೇ 3ರಷ್ಟು ಹೆಚ್ಚಳವಾಗಿದೆ. ಈಗ ಸರ್ಕಾರ ಈ ಕಾಯಿದೆಗೆ ತಿದ್ದುಪಡಿ ತಂದು ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳಲು ಹೊರಟಿದೆ. 2021-22ನೇ ಸಾಲಿನ ಎರಡನೇ ತ್ರೈಮಾಸಿಕದ ವರದಿಯ ಪ್ರಕಾರ ದೇಶದಲ್ಲಿ ಆಗುತ್ತಿರುವ ಒಟ್ಟು ವಿದೇಶಿ ಹೂಡಿಕೆಗಳಲ್ಲಿ ಶೇಕಡಾ 48ರಷ್ಟು ಕರ್ನಾಟಕದಲ್ಲೇ ಆಗುತ್ತಿದೆ.

ವಿದೇಶಿ ಹೂಡಿಕೆಗಳ ಪ್ರಮಾಣದ ಹೆಚ್ಚಳ ಅಭಿವೃದ್ಧಿಯ ಮಾನದಂಡವಾಗಿ ಪರಿಗಣಿಸುವ ವಾಡಿಕೆಯನ್ನು ನವವಸಾಹತುಶಾಹಿ ವ್ಯವಸ್ಥೆ ಹುಟ್ಟುಹಾಕಿ ಬಹಳ ಕಾಲವಾಗಿದೆ. ಆದರೆ ಅದು ಸತ್ಯವಲ್ಲ ಎನ್ನುವುದು ಜಗತ್ತಿನ ಹಲವಾರು ರಾಷ್ಟ್ರಗಳು ತಲುಪಿರುವ ಇಂದಿನ ದುರಂತಮಯ ಸ್ಥಿತಿಗಳು ಸಾಬೀತು ಮಾಡುತ್ತಿವೆ. ವಿದೇಶಿ ಹೂಡಿಕೆಯ ಹೆಚ್ಚಳ ಎಂದಾಗ ಜಾಗತಿಕ ಕಾರ್ಪೋರೇಟುಗಳ ಹಿಡಿತಕ್ಕೆ ರಾಜ್ಯದ ಸಂಪನ್ಮೂಲಗಳು ಹೋಗುವ ಪ್ರಮಾಣದ ಹೆಚ್ಚಳ ಎಂದೇ ಅರ್ಥ. ರಾಜ್ಯದ ಸರ್ಕಾರ ಜಾಗತಿಕ ಕಾರ್ಪೋರೇಟುಗಳಿಗೆ ಹೆಚ್ಚು ಹೆಚ್ಚು ಅನುಕೂಲಕರವಾದ ನೀತಿಗಳನ್ನು ಅಳವಡಿಸುತ್ತಾ ಹೋಗುತ್ತಿದೆ ಎಂದು ಅರ್ಥ. ಜಾಗತಿಕ ಸ್ಥಿತ್ಯಂತರಗಳ ಡೋಲಾಯಮಾನಗಳಿಗೆ ಪರಿಣಾಮಗಳಿಗೆ ಹೆಚ್ಚು ಹೆಚ್ಚು ತೆರದಿಡಲಾಗುತ್ತಿದೆ ಎಂದು ಅರ್ಥ.

ಇವನ್ನು ಸರಿಯಾಗಿ ಅವಲೋಕಿಸಿದಾಗ ಕರ್ನಾಟಕವಿಂದು ಸಾಗುತ್ತಿರುವ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿಯೇ ಸಂಘ ಪರಿವಾರದ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ನಡೆಗಳನ್ನು ಗ್ರಹಿಸುವ ಅಗತ್ಯವಿದೆ.

ತಾವೇ ಹುಟ್ಟುಹಾಕಿರುವ ಫ್ಯಾಸಿಸ್ಟ್ ಪುಂಡು ಗುಂಪುಗಳ ಮೇಲೆ ಸರ್ಕಾರಕ್ಕಾಗಲೀ ಸಂಘ ಪರಿವಾರಕ್ಕಾಗಲೀ ನಿಯಂತ್ರಣ ಸಾಧಿಸಲು ಆಗದೇ ಹೋಗುತ್ತಿದೆ.  ಕಾರ್ಪೋರೇಟುಗಳ ವ್ಯವಹಾರಗಳಿಗೂ ಅದು ತಡೆಗಳನ್ನು ಮಾಡಲು ಶುರುವಾಗಿರುವುದರಿಂದಲೇ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾರಂತಹವರು ಅಂತಹ ಗುಂಪುಗಳನ್ನು ಹತ್ತಿಕ್ಕಿ ರಾಜ್ಯದಲ್ಲಿ ಕಾರ್ಪೋರೇಟು ವ್ಯವಹಾರಗಳು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಸರ್ಕಾರವನ್ನು ಬಹಿರಂಗವಾಗಿ ಆಗ್ರಹಿಸಿದ್ದಾರೆ. ಹಾಗಾಗಿಯೇ ಮೊದಲಿಗೆ ಬ್ರಾಹ್ಮಣಶಾಹಿ ಪುಂಡು ಗುಂಪುಗಳ ಗೂಂಡಾಗಿರಿ ಕೃತ್ಯಗಳನ್ನು ಸಮರ್ಥಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಸಹಿಸಲಾಗದು ಎಂದು ಈಗ ಖಡಕ್ ಹೇಳಿಕೆ ನೀಡಿರುವುದು.

ರಾಜ್ಯದ ದಲಿತದಮನಿತ ಮಹಿಳಾ ಹಿಂದುಳಿದ ಜನಸಾಮಾನ್ಯರು, ಯುವಜನರು ರಾಜ್ಯದಲ್ಲಿನ ಈ ಎಲ್ಲಾ ಬೆಳವಣಿಗೆಗಳನ್ನು ಸರಿಯಾಗಿ ಗ್ರಹಿಸಿ ಬಹುಸಂಖ್ಯಾತ ಜನಸಾಮಾನ್ಯರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಕಾರ್ಯೋನ್ಮುಖರಾಗಬೇಕಾದ ಅಗತ್ಯ ಬಹಳವಿದೆ.

18/04/2022                                                     -ನಂದಕುಮಾರ್ ಕೆ.ಎನ್.ಕುಂಬ್ರಿ ಉಬ್ಬು.

                                                ಮಿಂಚಂಚೆ: nandakumarnandana67@gmail.com

 

 

             

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...