ಜಾಗತಿಕ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆ ರಶ್ಯದ ಯುಕ್ರೈನ್ ಮೇಲಿನ ಆಕ್ರಮಣ… #russia ukraine war# global power order#America#china
ಜಾಗತಿಕ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆ
ರಶ್ಯದ ಯುಕ್ರೈನ್ ಮೇಲಿನ ಆಕ್ರಮಣ…
-ನಂದಕುಮಾರ್
ಕೆ ಎನ್. ಕುಂಬ್ರಿ ಉಬ್ಬು
ಮಿಂಚಂಚೆ:
nandakumarnandana67@gmail.com
ಯುಕ್ರೈನ್ ಮೇಲಿನ ರಶ್ಯದ ನೇರ ಸೇನಾ ದಾಳಿಗಳು
ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಂದುವರೆದಿವೆ. ಯುಕ್ರೈನಿನ ಪೂರ್ವಭಾಗಗಳನ್ನು ಆಕ್ರಮಿಸಿಕೊಳ್ಳುತ್ತಾ
ಯುಕ್ರೈನ್ ರಾಜಧಾನಿ ಕೀವ್ ಅನ್ನು ವಶಪಡಿಸುವ ಹಂತದಲ್ಲಿ ರಶ್ಯ ಮುಂದುವರೆದಿದೆ. ಇದರಿಂದಾಗಿ ನೂರಾರು
ಜನರು ಸಾವಿಗೀಡಾಗಿದ್ದಾರೆ. ಯುಕ್ರೈನಿನ ಜನರ ಆಸ್ತಿಪಾಸ್ತಿಗಳು ನಾಶವಾಗುತ್ತಿವೆ. ಚೆರ್ನಾಬಿಲ್ ಸೇರಿದಂತೆ
ಯುಕ್ರೈನಿನ ಎರಡು ಅಣು ವಿದ್ಯುತ್ ಸ್ಥಾವರಗಳನ್ನು ರಷ್ಯಾ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಒಂದು ಮಿಲಿಯನ್ನಿಗಿಂತಲೂ ಹೆಚ್ಚು ಯುಕ್ರೇನಿಯನ್ನರು ನಿರಾಶ್ರಿತರಾಗಿ
ಪಕ್ಕದ ಐರೋಪ್ಯ ರಾಷ್ಟ್ರಗಳಿಗೆ ಈಗಾಗಲೇ ವಲಸೆ ಹೋಗಿದ್ದಾರೆ ಎಂಬ ವರದಿಗಳು ಬರುತ್ತಿವೆ. ದಾಳಿಗಳು
ಮತ್ತೂ ಮುಂದುವರೆದಲ್ಲಿ ವಲಸೆ ಸಮಸ್ಯೆ ಐರೋಪ್ಯ ರಾಷ್ಟ್ರಗಳನ್ನು ಭಾಧಿಸಲಿದೆ. ಇದು ನೇಟೋ ರಾಷ್ಟ್ರಗಳೊಳಗೆ
ಬಿಕ್ಕಟ್ಟಿಗೆ ಒಂದು ಕಾರಣವಾಗಲಿದೆ.
ಅಮೇರಿಕ ಅಧ್ಯಕ್ಷ ಬಿದೆನ್ ರಶ್ಯ
ಅಧ್ಯಕ್ಷ ಪುತಿನ್ ಯುಕ್ರೈನ್
ಅಧ್ಯಕ್ಷ ಜೆಲೆನ್ಸ್ಕಿ
ಅಮೇರಿಕ ಹಾಗೂ ನೇಟೋ ರಶ್ಯದ ಮೇಲೆ ಭಾರಿ ಆರ್ಥಿಕ
ನಿರ್ಭಂಧಗಳನ್ನು ಹೇರುತ್ತಾ ಸಾಗಿವೆ. ಆಂಶಿಕವಾಗಿ ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್
ಫೈನಾನ್ಷಿಯಲ್ ಟೆಲಿಕಮ್ಯೂನಿಕೇಶನ್ (SWIFT) ವ್ಯವಸ್ಥೆಯಿಂದ
ಹಾಗೂ ಪಾಶ್ಚಿಮಾತ್ಯ ಅಂತರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಿಂದ ರಶ್ಯವನ್ನು ಹೊರಗಿಡಲಾಗಿದೆ. ರಶ್ಯದಿಂದ
ಯೂರೋಪಿಗೆ ನೇರವಾಗಿ ಕೊಳವೆ ಮೂಲಕ ನೈಸರ್ಗಿಕ ಅನಿಲ ಹಾಗೂ ತೈಲ ಸರಬರಾಜಿನ ಎರಡನೇ ಯೋಜನೆಯಾದ ನೋರ್ಡ್
ಸ್ಟ್ರೀಮ್ 2 ಜಾರಿಯಾಗದಂತೆ ನಿರ್ಬಂಧಿಸಲಾಗಿದೆ. ಇದು ನೇರವಾಗಿ ಐರೋಪ್ಯ ರಾಷ್ಟ್ರ ಜರ್ಮನಿಯ ಮೇಲೆ
ಗಂಭೀರ ಪರಿಣಾಮ ಬೀರಲಿದೆ. ಆದರೆ ಈಗಾಗಲೇ ಜಾರಿಯಾಗಿರುವ ನೋರ್ಡ್ ಸ್ಟ್ರೀಮ್ 1 ಈಗಲೂ ಚಾಲ್ತಿಯಲ್ಲಿದೆ.
ಒಟ್ಟಾರೆ ನೋರ್ಡ್ ಸ್ಟ್ರೀಮ್ ಯೋಜನೆಯನ್ನು ತಡೆಯಲು ಅಮೇರಿಕ ಹಲವಾರು ಪ್ರಯತ್ನಗಳನ್ನು ನಡೆಸುತ್ತಲೇ
ಬಂದಿತ್ತು. ಜರ್ಮನಿಯ ಮೇಲೆ ಹಲವಾರು ರೀತಿಯಲ್ಲಿ ಒತ್ತಡಗಳನ್ನು ಹಾಕಿತ್ತು. ಯೋಜನೆ ನಿರ್ಮಾಣದ ಕಂಪನಿಗಳ
ಮೇಲೆ ಅಮೇರಿಕ ನಿರ್ಬಂಧವನ್ನು ಹೇರಿತ್ತು. ಕೊನೆಗೆ ರಶ್ಯ ಆ ಯೋಜನೆಯ ನಿರ್ಮಾಣವನ್ನು ಪೂರ್ಣಗೊಳಿಸಿತ್ತು.
ಬಾಲ್ಟಿಕ್ ಸಮುದ್ರದಡಿಯಲ್ಲಿ ಹಾದು ಹೋಗುವ 1222 ಕಿಮೀಟರುಗಳ ಆ ಕೊಳವೆ ಸಂಪರ್ಕವನ್ನು ಬಾಂಬ್ ಧಾಳಿಗೆ
ಒಳಪಡಿಸುವ ಬೆದರಿಕೆಯನ್ನೂ ಕೂಡ ಅಮೇರಿಕ ಹಾಕಿದೆ ಎಂದು ಹೇಳಲಾಗುತ್ತಿದೆ.
ಅಂತರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಭಾರಿ
ಕುಸಿತಗಳು ಕಾಣಿಸತೊಡಗಿವೆ. ಇದರಿಂದಾಗಿ ಕೆಲವು ಭಾರಿ ಕಾರ್ಪೋರೇಟುಗಳ ಸಂಪತ್ತು ಕರಗುತ್ತಾ ಸಾಗುತ್ತಿದೆ.
ಇಂಡಿಯಾದಲ್ಲೂ ಇದು ಕಾಣಿಸುತ್ತಿದೆ. ಜಾಗತಿಕವಾಗಿ ಪೆಟ್ರೋಲು ಹಾಗೂ ಅನಿಲದ ಸರಬರಾಜು ಹಾಗೂ ಬೆಲೆಗಳ
ಮೇಲೆ ಬಹಳ ಪರಿಣಾಮ ಬೀರತೊಡಗಿದೆ. ಅಂತರಾಷ್ಟ್ರೀಯ ವ್ಯಾಪಾರ ವ್ಯವಹಾರಗಳು ಕಡಿತವಾಗುತ್ತಾ ಸಾಗಿದೆ.
ರಶ್ಯದ ಮೇಲೆ ಹೇರುವ ನಿರ್ಬಂಧಗಳು ಕೇವಲ ರಶ್ಯವನ್ನು ಮಾತ್ರ ಬಾಧಿಸುವುದಿಲ್ಲ ಬದಲಿಗೆ ಯೂರೋಪು ಅಮೇರಿಕ
ಸೇರಿದಂತೆ ಹಲವಾರು ರಾಷ್ಟ್ರಗಳನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಬಾಧಿಸುತ್ತದೆ. ಯೂರೋಪು ಸೇರಿದಂತೆ
ಜಗತ್ತಿನ ಹಲವಾರು ರಾಷ್ಟ್ರಗಳು ರಶ್ಯದ ಸೇನಾ ವಸ್ತುಗಳು, ತೈಲ ಮತ್ತು ಅನಿಲ, ಆಹಾರ ವಸ್ತುಗಳು, ಖನಿಜಗಳನ್ನು
ಅವಲಂಬಿಸಿವೆ. ರಶ್ಯ ತನ್ನ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಹೇರುವ ರಾಷ್ಟ್ರಗಳ ಮೇಲೆ ಪ್ರತೀಕಾರವಾದ
ಕ್ರಮಗಳನ್ನು ತೆಗೆದುಕೊಳ್ಳತೊಡಗಿದೆ.
ಚೀನ ರಶ್ಯ ಮೇಲಿನ ಅಮೇರಿಕ ಹಾಗೂ ನೇಟೋ ನಿರ್ಬಂಧಗಳನ್ನು
ಒಪ್ಪುವುದಿಲ್ಲ ಎಂದು ಬಹಿರಂಗಪಡಿಸಿದೆ. ಅದೇ ರೀತಿ ಇರಾನ್, ಕ್ಯೂಬಾ, ಸೇರಿದಂತೆ ಜಗತ್ತಿನ ಹಲವಾರು
ರಾಷ್ಟ್ರಗಳು ಕೂಡ ಒಪ್ಪದು. ಇಂಡಿಯಾ ಶೇಕಡಾ 70 ರಷ್ಟು ಸೇನಾ ಸಾಮಾಗ್ರಿಗಳಿಗೆ ರಶ್ಯಾವನ್ನು ಅವಲಂಬಿಸಿದೆ.
ಹಾಗಾಗಿ ರಶ್ಯದ ಮೇಲಿನ ನಿರ್ಬಂಧಗಳನ್ನು ಇಂಡಿಯಾ ಪಾಲಿಸುವುದು ಕಷ್ಟ. ರಶ್ಯದ ಯುಕ್ರೈನ್ ಆಕ್ರಮಣದ
ವಿರುದ್ಧದ ನಿರ್ಣಯದ ಪರವಾಗಿ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸುವುದರಿಂದ ಇಂಡಿಯಾ ಹೊರಗೆ ಉಳಿದಿದ್ದನ್ನು
ಗಮನಿಸಬಹುದು. ಅಲ್ಲದೇ ಯುಕ್ರೈನ್ ಮೇಲಿನ ಆಕ್ರಮಣವನ್ನು ಇಂಡಿಯಾ ಮತ್ತು ಚೀನಾ ಇದುವರೆಗೂ ಖಂಡಿಸಲಿಲ್ಲ.
ರಶ್ಯ ತನ್ನ ವೀಟೋ ಅಧಿಕಾರ ಬಳಸಿ ಆ ನಿರ್ಣಯವನ್ನು ತಡೆಯಿತು.
ರಶ್ಯ ಯುಕ್ರೈನ್ ಯುದ್ಧಕ್ಕೆ ಕಾರಣಕರ್ತರುಗಳಾದ ಅಮೇರಿಕಾ,
ನೇಟೋ ರಾಷ್ಟ್ರಗಳ, ಹಾಗೂ ರಶ್ಯ ಮತ್ತು ಚೀನಾದ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಗುರಿ ಮುಟ್ಟುವವರೆಗೆ
ಈ ಯುದ್ಧವನ್ನು ಸದ್ಯಕ್ಕೆ ನಿಲ್ಲಿಸುವಂತೆ ಕಾಣುತ್ತಿಲ್ಲ. ಬದಲಿಗೆ ಮತ್ತಷ್ಟು ವಿಸ್ತರಿಸುವಂತಹ ನಡೆಗಳನ್ನು
ನಡೆಸುತ್ತಿವೆ. ಅಮೇರಿಕಾ ಮತ್ತು ನೇಟೋ ಯುಕ್ರೈನಿನ ಸೇನೆಗೆ ಭಾರಿಶಸ್ತಾಸ್ತ್ರಗಳನ್ನು ಸರಬರಾಜು ಮಾಡುತ್ತಿವೆ.
ರಶ್ಯದ ವಿರುದ್ಧ ಅಂತರಾಷ್ಟ್ರೀಯ ಪ್ರಚಾರಯುದ್ಧವನ್ನು ಬಿರುಸುಗೊಳಿಸಿವೆ. ಆದರೆ ರಶ್ಯ ಮತ್ತು ಚೀನಾ
ಯುಕ್ರೈನ್ ಅನ್ನು ನಿಶ್ಯಸ್ತ್ರಗೊಳಿಸಿ, ನೇಟೋ ವಿಸ್ತರಣೆಗೆ ತಡೆ ಹಾಕುವ ಕಾರ್ಯದಲ್ಲಿ ಮೇಲುಗೈ ಸಾಧಿಸಿದಾಗ
ಯುದ್ದವನ್ನು ನಿಲ್ಲಿಸಬಹುದು. ಆದರೆ ಅಮೇರಿಕ ಮತ್ತದರ ಕೆಲವು ನೇಟೋ ರಾಷ್ಟ್ರಗಳಿಗೆ ಯುದ್ಧ ಮುಂದುವರೆಯಬೇಕಾಗಿದೆ.
ಆ ಮೂಲಕ ರಶ್ಯವನ್ನು ಏಕಾಂಗಿಯಾಗಿಸುವ ಇಲ್ಲವೇ ತಟಸ್ಥಗೊಳಿಸುವ, ಚೀನವನ್ನು ಕಟ್ಟಿ ಹಾಕುವ ಉದ್ದೇಶವನ್ನು
ಸೇನಾನಷ್ಟವಿಲ್ಲದೇ ಸಾಧಿಸಬೇಕಾಗಿದೆ.
ಯುಕ್ರೈನಿನ ಅಧ್ಯಕ್ಷ ಜೆಲೆನಿಸ್ಕಿ ಅಮೇರಿಕಾ
ಮತ್ತು ನೇಟೋ ತಮ್ಮ ಪಡೆಗಳನ್ನು ನೇರವಾಗಿ ಯುಕ್ರೈನಿನ ಪರವಾಗಿ ಕಳಿಸುವಂತೆ ಅಪಾಯಕಾರಿಯಾದ ಒತ್ತಾಯವನ್ನು
ಮೊದಲಿನಿಂದಲೂ ಪದೇ ಪದೇ ಮಾಡುತ್ತಾ ಬರುತ್ತಿದ್ದಾರೆ. ಇದೀಗ ನೇಟೋ ಯುಕ್ರೈನಿನ ವಾಯುಪ್ರದೇಶವನ್ನು
ವಾಯು ಹಾರಾಟ ಮುಕ್ತ ವಲಯವನ್ನಾಗಿ ಘೋಷಿಸಬೇಕೆಂಬ ಒತ್ತಾಯವನ್ನು ಜೆಲೆನಿಸ್ಕಿ ಮಾಡಿದ್ದರ ಬೆನ್ನ ಹಿಂದೆಯೇ
ರಶ್ಯಾದ ಅಧ್ಯಕ್ಷ ವ್ಲಾದಿಮೀರ್ ಪುತಿನ್ ಅಂತಹ ಕ್ರಮಗಳಿಗೆ ಮುಂದಾದರೆ ಅಂತಹ ರಾಷ್ಟ್ರಗಳು ನೇರವಾಗಿ
ರಶ್ಯದ ಮೇಲೆ ಯುದ್ಧ ಘೋಷಿಸಿರುವುದಾಗಿ ನಾವು ಪರಿಗಣಿಸುತ್ತೇವೆ ಎಂದಿದ್ದಾರೆ. ಅಮೇರಿಕ ಮತ್ತು ನೇಟೋ
ನೇರವಾಗಿ ಯುದ್ದದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಪುನರುಚ್ಚರಿಸುತ್ತಾ ಬಂದಿವೆ. ಆದರೆ ಪ್ರಚೋದನಾಕಾರಿಯಾಗಿ
ವ್ಯವಹರಿಸುತ್ತಿವೆ.
ರಶ್ಯವನ್ನು ಯುದ್ಧಕ್ಕೆ ಇಳಿಯುವಂತೆ ಮಾಡಲು ಅಮೇರಿಕದ ಪ್ರಯತ್ನ ಶುರುವಾಗಿ ಹಲವು ವರುಷಗಳಾಗುತ್ತಾ ಬಂದಿವೆ. ಯಾಕೆಂದರೆ ಜಗತ್ತಿನ ದೊಡ್ಡ ಸೈನಿಕ ಶಕ್ತಿಯಾಗಿರುವ ರಶ್ಯದ ಅಂತರಾಷ್ಟ್ರೀಯ ವ್ಯಾಪಾರಗಳನ್ನು ಹಾಳುಗೆಡವಿ ಅದರ ಜಾಗದಲ್ಲಿ ತನ್ನನ್ನು ಸಂಪೂರ್ಣವಾಗಿ ಸ್ಥಾಪಿಸಿಕೊಳ್ಳುವ ಹುನ್ನಾರ ಅಮೇರಿಕಾದ್ದಾಗಿದೆ. ಅದರಂತೆ ರಶ್ಯಾದೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿ ನೇಟೋವನ್ನು ಪೂರ್ವ ಯೂರೋಪಿನ ರಾಷ್ಟ್ರಗಳಿಗೆ ವಿಸ್ತರಿಸುತ್ತಾ ಸಾಗಿ ರಶ್ಯವನ್ನು ಏಕಾಂಗಿಗೊಳಿಸಿ ಸೇನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸುತ್ತುವರೆಯುವ ನಡೆಗಳನ್ನು ನಡೆಸುತ್ತಾ ಬರಲಾಗಿತ್ತು. ರಶ್ಯವನ್ನು ಗುರಿಯಾಗಿರಿಸಿ ಪೋಲೆಂಡ್, ರೊಮೇನಿಯಾ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ, ಹಂಗೇರಿ, ಬಲ್ಗೇರಿಯಾ ಮೊದಲಾದ ರಶ್ಯ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಕ್ಷಿಪಣಿಗಳನ್ನು ನಿಲ್ಲಿಸಲಾಗಿತ್ತು. ಅದನ್ನು ಬಿ9 ಫರ್ಮಾಟ್ ಎಂದು ಸೇನಾತ್ಮಕವಾಗಿ ಹೆಸರಿಸಲಾಗಿದೆ. ಪೂರ್ವ ಯೂರೋಪಿನ ಹಲವಾರು ರಾಷ್ಟ್ರಗಳ ಸರಕಾರಗಳನ್ನು ತಮ್ಮ ಕೈಗೊಂಬೆಯಾಗುವಂತೆ ಒತ್ತಡ ತಂತ್ರ ಮತ್ತು ಬುಡಮೇಲು ಕೃತ್ಯಗಳ ಮೂಲಕ ಮಾಡಿಕೊಂಡು ರಶ್ಯಾದ ಹಿತಾಸಕ್ತಿಗಳಿಗೆ ಹೊಡೆತ ಕೊಡಲಾಗಿತ್ತು. ಸಿರಿಯಾ, ಚೆಚನ್ಯಾಗಳಂತಹ ಕೆಲ ರಾಷ್ಟ್ರಗಳಲ್ಲಿ ಅಮೇರಿಕದ ಅಂತಹ ನಡೆಗಳನ್ನು ರಶ್ಯ ತಡೆದು ನಿಲ್ಲಿಸಿತ್ತು.
ರಶ್ಯದ ಯೋರೋಪಿನೊಂದಿಗಿನ ಅನಿಲ ಹಾಗೂ ತೈಲ
ವ್ಯಾಪಾರವನ್ನು ಸಂಪೂರ್ಣವಾಗಿ ತಡೆದು ಅದರ ಬದಲಿಗೆ ಅಮೇರಿಕದ ದುಬಾರಿ ತೈಲ ಹಾಗೂ ಅನಿಲದ ಮೇಲೆ ಜರ್ಮನಿಯಂತಹ
ರಾಷ್ಟ್ರಗಳು ಅವಲಂಬಿಸುವಂತೆ ಮಾಡುವ ಪ್ರಯತ್ನವನ್ನು ಅಮೇರಿಕ ನಿರಂತರವಾಗಿ ಮಾಡುತ್ತಲೇ ಬಂದಿತ್ತು.
ಆದರೆ ಅಮೇರಿಕದ ಅಂತಹ ಪ್ರಯತ್ನಗಳು ಇದುವರೆಗೂ ಫಲಕೊಟ್ಟಿರಲಿಲ್ಲ.
ರಶ್ಯ ಯುಕ್ರೈನ್ ಬಿಕ್ಕಟ್ಟನ್ನು ನಾವು ಗ್ರಹಿಸಬೇಕಾದರೆ
ಅಮೇರಿಕ ಮತ್ತು ನೇಟೋದ ಪರಿಸ್ಥಿತಿಯನ್ನು ಅವಲೋಕಿಸಬೇಕಾಗುತ್ತದೆ. ಅಮೇರಿಕ ಜಗತ್ತಿನ ಅತೀ ದೊಡ್ಡ ಆರ್ಥಿಕತೆಯೆಂದೇ
ಹೇಳಲಾಗುತ್ತಿದೆ. ಆದರೆ ಅದೇ ವೇಳೆಯಲ್ಲಿ ಅಮೇರಿಕ ಜಗತ್ತಿನ ಅತೀ ದೊಡ್ಡ ಸಾಲಗಾರ ರಾಷ್ಟ್ರವೆಂದು ಅದರ
ಅಂಕಿ ಅಂಶಗಳು ಹೇಳುತ್ತವೆ.
ಅದರ ಅಂತರಿಕ ಸಾಲವೇ ಮೂವತ್ತು ಟ್ರಿಲಿಯನ್
ಡಾಲರುಗಳಿಗೂ ಹೆಚ್ಚು ಇದೆ. ಇದು ಅದರ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತಲೂ ಏಳು ಟ್ರಿಲಿಯನ್ ಡಾಲರುಗಳಷ್ಟು
ಹೆಚ್ಚಿನದಾಗಿದೆ. ಇನ್ನೂ ಬಾಹ್ಯ ಸಾಲ ಎರಡು ಕೋಟಿ ಇಪ್ಪತೈದು ಲಕ್ಷದ ತೊಂಬತೈದು ಸಾವಿರದ ನಾನೂರ ನಲವತ್ತೆಂಟು
ದಶಲಕ್ಷ ಅಮೇರಿಕ ಡಾಲರುಗಳಾಗಿದ್ದವು ಎಂದು 2021ರ ಎರಡನೇ ತ್ರೈಮಾಸಿಕದ ಸರಕಾರಿ ಅಂಕಿ ಅಂಶ ಹೇಳುತ್ತದೆ.
2022ರ ಫೆಬ್ರುವರಿ ವೇಳೆಗೆ ಅಮೇರಿಕಕ್ಕೆ ಬಾಹ್ಯ ಸಾಲದಲ್ಲಿ ಜಪಾನಿನ ಸಾಲ 1,304 ಬಿಲಿಯನ್ ಡಾಲರುಗಳಷ್ಟು
ಅಂದರೆ ಒಟ್ಟು ಬಾಹ್ಯ ಸಾಲದ ಶೇಕಡಾ 17ರಷ್ಟು ಇದ್ದರೆ ಎರಡನೇ ಅತೀ ಹೆಚ್ಚು ಸಾಲ ಅಂದರೆ 1,068 ಬಿಲಿಯನ್
ಅಮೇರಿಕನ್ ಡಾಲರುಗಳಷ್ಟು, ಸಾಲ ಚೀನದೊಂದಿಗೆ ಇತ್ತು. ಅದು
ಒಟ್ಟು ಬಾಹ್ಯ ಸಾಲದ ಶೇಕಡಾ 14ರಷ್ಟು ಆಗಿದೆ. ಇದು ಅಮೇರಿಕ ಎದುರಿಸುತ್ತಿರುವ ಅಂತರಿಕ ಬಿಕ್ಕಟ್ಟಿನ
ಪ್ರಮಾಣವನ್ನು ತೋರಿಸುತ್ತದೆ.
ಅಮೇರಿಕದ ರಾಜಕೀಯ ಆಗುಹೋಗುಗಳನ್ನು ನಿಯಂತ್ರಿಸುತ್ತಿರುವುದು
ಸೇನಾ, ಶಸ್ತ್ರಾಸ್ತ್ರ, ತೈಲ, ಅನಿಲ, ಗಣಿಗಾರಿಕಾ, ಬ್ಯಾಂಕಿಂಗ್ ಹಾಗೂ ರಿಯಲ್ ಎಸ್ಟೇಟ್ ಕಾರ್ಪೋರೇಟುಗಳಾಗಿವೆ. ಈ ಕ್ಷೇತ್ರಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಕೆಲವೇ
ಕಾರ್ಪೋರೇಟುಗಳು ಅಮೇರಿಕದ ಪ್ರಜಾಪ್ರಭುತ್ವವನ್ನು ಹಾಗೇನೆ ಜಾಗತಿಕ ಪ್ರಜಾಪ್ರಭುತ್ವವನ್ನೂ ಕೂಡ ತೀರ್ಮಾನಿಸುತ್ತವೆ.
ಅಮೇರಿಕದ ಆಡಳಿತಗಾರರು ಒಂದಲ್ಲಾ ಒಂದು ರೀತಿಯಲ್ಲಿ ಈ ಕ್ಷೇತ್ರಗಳ ಕಾರ್ಪೋರೇಟುಗಳೊಂದಿಗೆ ನೇರವಾಗಿ
ಇಲ್ಲವೇ ಪರೋಕ್ಷವಾಗಿ ಸಂಬಂಧಪಟ್ಟವರಾಗಿರುತ್ತಾರೆ. ಇದು ಜನಸಾಮಾನ್ಯರ ಪರಿಕಲ್ಪನೆಯ ಪ್ರಜಾಪ್ರಭುತ್ವದ
ವ್ಯಂಗ್ಯವಾಗಿದೆ.
ಈಗ ರಶ್ಯ ಮತ್ತು ಯುಕ್ರೈನ್ ಯುದ್ದದಲ್ಲಿ ಅಮೇರಿಕದ ಈ ಕೆಲವೇ ಕಾರ್ಪೋರೇಟುಗಳ ಹಿತಾಸಕ್ತಿಗಳು ಪ್ರಧಾನವಾಗಿ ಕೆಲಸ ಮಾಡುತ್ತಿವೆ. ಆದರೆ ನೇರವಾಗಿ ರಶ್ಯದೊಂದಿಗೆ ಸೇನಾ ಸಮರಕ್ಕೆ ಹೋಗುವ ಪರಿಸ್ಥಿತಿಯಲ್ಲಿ ಅಮೇರಿಕ ಸದ್ಯಕ್ಕೆ ಇಲ್ಲ. ಅದು ಅವರಿಗೆ ದುಬಾರಿಯಾದುದು. ಜೊತೆಗೆ ಸ್ವತಹ ಅಮೇರಿಕದ ಜನಸಾಮಾನ್ಯರು ಅಮೇರಿಕ ನೇರವಾಗಿ ಯುದ್ಧದಲ್ಲಿ ತೊಡಗುವುದರ ವಿರುದ್ಧವಿದ್ದಾರೆ. ಅದರಿಂದಾಗಿ ರಾಜಕೀಯವಾಗಿಯೂ ಅಮೇರಿಕದ ಆಡಳಿತಗಾರರಿಗೆ ಗಿಟ್ಟುವುದು ಕಡಿಮೆಯೇ. ರಶ್ಯ ಕೂಡ ಯುದ್ಧವನ್ನು ಯುಕ್ರೈನಿನ ಆಚೆಗೆ ವಿಸ್ತರಿಸುವ ಇರಾದೆ ಹೊಂದಿದಂತೆ ಕಾಣುತ್ತಿಲ್ಲ. ರಶ್ಯ ಸದ್ಯಕ್ಕೆ ಯುಕ್ರೈನ್ ಆಕ್ರಮಣದ ಮೂಲಕ ನೇಟೋ ಹಾಗೂ ಅಮೇರಿಕದ ವಿಸ್ತರಣೆಗಳನ್ನು ಹಾಗೂ ತನ್ನ ಆರ್ಥಿಕ ತಡೆಗಳನ್ನು ನಿವಾರಿಸಿಕೊಂಡು, ಚೀನಾದೊಂದಿಗೆ ಸೇರಿಕೊಂಡು ಕೂಟ ರಚಿಸಿಕೊಂಡು ಜಾಗತಿಕ ಪ್ರಾಬಲ್ಯ ಹಾಗೂ ಪ್ರಭಾವವನ್ನು ಬೆಳಸಿಕೊಳ್ಳುವ ಉದ್ದೇಶ ಸ್ಪಷ್ಟವಾಗಿ ಹೊಂದಿದೆ.
ಅದೇ ವೇಳೆಯಲ್ಲಿ ಅಮೇರಿಕಕ್ಕೆ ಬೆಳೆಯುತ್ತಿರುವ
ರಶ್ಯ ಮತ್ತು ಚೀನಾಗಳ ಜಾಗತಿಕ ಹಿಡಿತವನ್ನು ತಡೆದು ತಮ್ಮ ಆರ್ಥಿಕ ಹಾಗೂ ಸೇನಾ ಪ್ರಭಾವಗಳನ್ನು ಬೆಳಸಬೇಕು.
ಹಾಗಾಗಿಯೇ ತಮ್ಮ ಕೈಗೊಂಬೆಯಾದ ಯುಕ್ರೈನಿನ ಅಧ್ಯಕ್ಷರನ್ನು ಇಟ್ಟುಕೊಂಡು ರಶ್ಯವನ್ನು ಯುದ್ದಕ್ಕೆ ಎಳೆಯಲಾಗಿದೆ.
ಅಮೇರಿಕ ಹಾಗೂ ನೇಟೋ ಬಹಳ ಕಾಲದಿಂದ ರಶ್ಯ ವಿರೋಧಿ ಪ್ರಚಾರ ಹಾಗೂ ಪ್ರಚೋದನಕಾರಿ ಅಭಿಯಾನ ಕೈಗೊಂಡು
ಅದರಂತೆ ನಡೆಗಳನ್ನು ನಡೆಸುತ್ತಾ ಬಂದಿವೆ. ರಶ್ಯದಿಂದ ಯೂರೋಪಿಗೆ ಬೆದರಿಕೆಯಿದೆ ಎಂಬ ಪ್ರಚಾರವನ್ನು
ಕೂಡ ನಡೆಸುತ್ತಾ ಬರಲಾಗಿದೆ.
ಅಮೇರಿಕದ ಈಗಿನ ಅಧ್ಯಕ್ಷ ಜೋಯ್ ಬಿಡೆನ್ ರಶ್ಯ
ಯುಕ್ರೈನ್ ಅನ್ನು ಆಕ್ರಮಿಸಲಿದೆ ಎಂದು ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಕೊನೆಗದು ಎಷ್ಟು
ಮಟ್ಟಕ್ಕೆಂದರೆ ಅವರೇ ರಶ್ಯದ ಅಧ್ಯಕ್ಷರೇನೋ ಎಂದು ಅನುಮಾನ ಬರುವಷ್ಟು ನೇರವಾಗಿ ದಿನವೂ ಹೇಳುತ್ತಾ
ಬಂದಿದ್ದಾರೆ. ಯುಕ್ರೈನ್ ವಿಚಾರದಲ್ಲಿ ಮಾತುಕತೆ, ಇನ್ನಿತರ ಒತ್ತಡ ತಂತ್ರ, ರಾಜತಾಂತ್ರಿಕ ನಡೆ ಇತ್ಯಾದಿ
ಎಲ್ಲಾ ನಡೆಗಳನ್ನೂ ರಶ್ಯ ನಡೆಸುತ್ತಾ ಬಂದಿತ್ತು. ಆದರೆ ಜೆಲೆನ್ ಸ್ಕಿ, ಅಮೇರಿಕ ಹಾಗೂ ನೇಟೋ ನಡೆಗಳು
ಅದಕ್ಕೆ ವಿರುದ್ಧವಾಗಿದ್ದು ರಶ್ಯಾದ ಹಿತಾಸಕ್ತಿಗಳಿಗೆ ನೇರವಾಗಿ ಮಾರಕವಾಗಿರುವುದರಿಂದಾಗಿ ರಶ್ಯ ನೇರವಾಗಿ
ಯುಕ್ರೈನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಹಸಕ್ಕೆ ಕೈಹಾಕಿದೆ.
ರಶ್ಯದ ಗೂಢಚಾರ ಸಂಸ್ಥೆ ಕೆಜಿಬಿಯ ಹಿಂದಿನ
ಅಂತರಾಷ್ಟ್ರೀಯ ಅಧಿಕಾರಿಯಾಗಿದ್ದ ಈಗಿನ ರಶ್ಯದ ಅಧ್ಯಕ್ಷ ವ್ಲಾದಿಮೀರ್ ಪುತಿನ್ ಅಲ್ಲಿನ ಕೆಲವೇ ಭಾರಿ
ಕಾರ್ಪೋರೇಟುಗಳ ಪ್ರತಿನಿಧಿಯಾಗಿ ಆಡಳಿತ ನಡೆಸುತ್ತಾ ಪ್ರಜಾಪ್ರಭುತ್ವ ಹೆಸರಿನ ಚುನಾವಣಾ ನಾಟಕಗಳನ್ನು
ನಡೆಸುತ್ತಾ ಬರುತ್ತಿದ್ದಾರೆ. 1999 ರಲ್ಲಿ ಬೋರಿಸ್ ಯೆಲ್ಸ್ಟಿನ್ ಸರಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದು
ನಂತರ ಎರಡು ಸಾವಿರದ ಇಸವಿಯಿಂದ ಅಧ್ಯಕ್ಷರಾಗಿ ರಶ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಇದರ ಮಧ್ಯೆ
ಎರಡನೇ ಬಾರಿ ಅದ್ಯಕ್ಷರಾಗಲು ರಶ್ಯದ ಸಾಂವಿಧಾನಿಕ ತಡೆಗಳಿಂದಾಗಿ ರಶ್ಯದ ಪ್ರಧಾನ ಮಂತ್ರಿಯಾಗಿ ಒಂದು
ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಸಾಂವಿಧಾನಿಕ ಮಾರ್ಪಾಡು ಮಾಡಿ ತಮ್ಮ ಅಧ್ಯಕ್ಷತೆಗಿದ್ದ
ತಡೆಗಳನ್ನು ನಿವಾರಿಸಿಕೊಂಡು ನಾಲ್ಕನೇ ಅವಧಿಗೂ ಅಧ್ಯಕ್ಷರಾಗಿದ್ದಾರೆ. 2036ರವರೆಗೂ ಪುತಿನ್ ಅಧ್ಯಕ್ಷರಾಗಿ
ಆಯ್ಕೆಯಾಗುತ್ತಾ ಮುಂದುವರೆಯುವ ಅವಕಾಶವನ್ನು ಮಾಡಿಕೊಳ್ಳಲಾಗಿದೆ. ತನ್ನ ರಾಜಕೀಯ ವಿರೋಧಿಗಳನ್ನು ದಮನಿಸಿ
ಇಡುತ್ತಾ, ಜೈಲಿಗೆ ತಳ್ಳುತ್ತಾ ತನ್ನ ಹಿಡಿತ ತಪ್ಪಿಹೋಗದಂತೆ ನೋಡಿಕೊಳ್ಳುತ್ತಾ ಬರುತ್ತಿರುವ ಒಬ್ಬ
ಸರ್ವಾಧಿಕಾರಿ ನಿಲುವಿನ ವ್ಯಕ್ತಿ ಪುತಿನ್. ಅವರ ಮೇಲೆ ಚುನಾವಣಾ ಅಕ್ರಮಗಳು ಹಾಗೂ ಭಾರಿ ಭ್ರಷ್ಟಾಚಾರದ
ಆರೋಪಗಳಿವೆ. ಅಮೇರಿಕದ ಈ ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರನ್ನು ಚುನಾಯಿಸಿ ತರುವಲ್ಲಿ ಪುತಿನ್
ಕೈವಾಡವಿತ್ತು ಎಂಬ ಆರೋಪ ಬಲವಾಗಿ ಸದ್ದು ಮಾಡಿದ್ದನ್ನು ಗಮನಿಸಬಹುದು. ಪುತಿನ್ ತಮ್ಮ ಅಧಿಕಾರಾವಧಿಯಲ್ಲಿ
ಭಾರಿ ಅಕ್ರಮ ಸಂಪತ್ತನ್ನು ಗಳಿಸಿ ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ಜಗತ್ತಿನ
ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಪುತಿನ್ ಕೂಡ ಒಬ್ಬರು ಎನ್ನಲಾಗುತ್ತಿದೆ. ಯುಕ್ರೈನ್ ಆಕ್ರಮಣದ
ನಂತರ ಅಮೇರಿಕ ಹಾಗೂ ನೇಟೋ ರಾಷ್ಟ್ರಗಳು ತಮ್ಮ ರಾಷ್ಟ್ರಗಳಲ್ಲಿರುವ ಪುತಿನ್ ರ ವೈಯಕ್ತಿಕ ಅಂತರಾಷ್ಟ್ರೀಯ
ಹೂಡಿಕೆಗಳನ್ನು ಕೂಡ ಸ್ತಂಭಿಸಿರುವುದನ್ನು ಗಮನಿಸಬಹುದು.
ರಶ್ಯದ ಮೇಲಿನ ಅಮೇರಿಕಾ ನಿರ್ದೇಶಿತ ನಿರ್ಬಂಧಗಳ ಪರಿಣಾಮವಾಗಿ ರಶ್ಯ, ಚೀನಾ, ಇರಾನ್, ಮತ್ತು ಇತರ ರಾಷ್ಟ್ರಗಳು ಸೇರಿಕೊಂಡು ಪರ್ಯಾಯ ಜಾಗತಿಕ ಆರ್ಥಿಕ ವ್ಯವಹಾರಕ್ಕಾಗಿನ ತಮ್ಮದೇ ವ್ಯವಸ್ಥೆಯನ್ನು ರೂಪಿಸುವ ಸಾಧ್ಯತೆಗಳಿವೆ. ಸ್ವಿಫ್ಟ್ ಗೆ ಬದಲಿಗೆ ತಮ್ಮದೇ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಇಂಡಿಯಾ ಸೇರಿದಂತೆ ನೂರ ಐದು ರಾಷ್ಟ್ರಗಳನ್ನು ಒಳಗೊಳಿಸಿಕೊಂಡು ಏಷಿಯನ್ ಇನ್ ಫ್ರಾಸ್ಟ್ರಕ್ಚರ್ ಅಂಡ್ ಡೆವಲಪ್ ಮೆಂಟ್ ಬ್ಯಾಂಕ್ ಅನ್ನು 2015ರಲ್ಲೇ ರೂಪಿಸಿ 2016ರಿಂದ ಚಾಲನೆಗೊಳಿಸಲಾಗಿದೆ.
ಹಾಗೇನೆ ಬ್ರಜಿಲ್, ರಶ್ಯ, ಚೀನಾ ಇಂಡಿಯಾ,
ದಕ್ಷಿಣ ಆಫ್ರಿಕಾ, ಬಾಂಗ್ಲಾ ದೇಶ, ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್, ಉರುಗ್ವೆ ರಾಷ್ಟ್ರಗಳನ್ನು
ಒಳಗೊಂಡಿರುವ ಬ್ರಿಕ್ಸ್ ರಾಷ್ಟ್ರಗಳ ಹೆಸರಿನ ತಮ್ಮದೇ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ಎಂಬ ಬ್ಯಾಂಕಿಂಗ್
ವ್ಯವಸ್ಥೆಯನ್ನು 2014ರಿಂದ ಚೀನಾ ರಷ್ಯಾ ನೇತೃತ್ವ ರೂಪಿಸಿಕೊಂಡಿವೆ. ಅಲ್ಲದೇ ರಶ್ಯಾದ ರೂಬಲ್ ಹಾಗೂ
ಚೀನಾದ ಯುವಾನ್ ಗಳಿಗೆ ಅಂತರಾಷ್ಟ್ರೀಯ ನಾಣ್ಯವೆಂಬ ಮಾನ್ಯತೆ ಇದೆ. ಚೀನಾ ತನ್ನ ವ್ಯಾಪಾರ ವ್ಯವಹಾರವನ್ನು
ಪ್ರಧಾನವಾಗಿ ಯುವಾನ್ ಮೂಲಕವೇ ನಡೆಸತೊಡಗಿದೆ. ವಿಶ್ವ ಸಂಸ್ಥೆ ರಷ್ಯಾ ಮತ್ತು ಚೀನವನ್ನು ಹೊರಗಿಟ್ಟು
ಯಾವುದೇ ತೀರ್ಮಾನವನ್ನು ಅಂಗೀಕರಿಸಲಾಗದ ಸ್ಥಿತಿ ಮೊದಲಿನಿಂದಲೂ ಇದೆ. ಅದಷ್ಟೇ ಅಲ್ಲದೇ ಅಮೇರಿಕದ ಒತ್ತಡಗಳಿಗೆ
ಒಳಗಾಗುವುದು ಅಷ್ಟೇನೂ ಲಾಭದಾಯಕವಾಗದು ಎಂಬ ವಾಸ್ತವ ಗ್ರಹಿಕೆ ನೇಟೋ ರಾಷ್ಟ್ರಗಳ ಅನುಭವಕ್ಕೂ ಬಂದಿದೆ.
ಜಾಗತಿಕ ವ್ಯವಹಾರ ಹಾಗೂ ತಮ್ಮ ರಾಷ್ಟ್ರಗಳ ಆಳುವ ಹಿತಾಸಕ್ತಿಗಳ ರಕ್ಷಣೆಗಾಗಿ ಲಾಭವಾಗುವ ಅಂತರಾಷ್ಟ್ರೀಯ
ಬಣದ ಜೊತೆಗೆ ಅವುಗಳು ಅನಿವಾರ್ಯವಾಗಿ ನಿಲ್ಲಲೇ ಬೇಕಾಗುತ್ತದೆ.
ಜಾಗತಿಕ ಹಿಡಿತ ಸಾಧಿಸುವಲ್ಲಿ ಅಮೇರಿಕ ನೇತೃತ್ವದ
ಬಣವಾಗಲೀ ಚೀನಾ ರಷ್ಯಾ ನೇತೃತ್ವದ ಬಣವಾಗಲೀ ಗೆಲುವು ಸಾಧಿಸುವುದರಿಂದ ಜಗತ್ತಿನ ಜನಸಾಮಾನ್ಯರಿಗೆ ಅನುಕೂಲವೇನೂ
ಆಗುವುದಿಲ್ಲ. ಅಮೇರಿಕದ ಏಕ ಶಕ್ತಿಯ ಮೇಲಾಳ್ವಿಕೆಗೆ ಸ್ವಲ್ಪ ತಡೆಗಳುಂಟಾಗಿ ಅದರ ಅಲ್ಪ ಸ್ವಲ್ಪ ಲಾಭ
ಸದ್ಯಕ್ಕೆ ದೊರೆಯಬಹುದು ಅಷ್ಟೆ. ಜಾಗತಿಕ ಲೂಟಿ ಹಾಗೂ ಹಿಡಿತದ ಮುಖಗಳ ಬದಲಾವಣೆಯಾಗಬಹುದು. ಆದರೆ ಅದರಿಂದ
ಜಾಗತಿಕ ಶಾಂತಿ, ಭದ್ರತೆ, ಸಾಮರಸ್ಯ ಖಾತರಿಯಾಗದು. ಯುದ್ಧ ಭೀತಿಯೂ ಅಂತ್ಯವಾಗದು. ಯುದ್ಧಗಳು ಯಾವಾಗ
ಬೇಕಾದರೂ ಸ್ಪೋಟಗೊಳ್ಳುವಂತಹ ಪರಿಸ್ಥಿತಿ ನಿರಂತರವಾಗಿರುತ್ತದೆ.
ಜಾಗತಿಕ
ಶಾಂತಿ ಹಾಗೂ ಭದ್ರತೆ ಹಾಗೂ ಜನಸಾಮಾನ್ಯರ ಅಭಿವೃದ್ದಿಗಾಗಿ ಜಾಗತಿಕ ಜನಸಾಮಾನ್ಯರು ಸಂಘಟಿತ ಶಕ್ತಿಯಾಗಿ
ರಾಜಕೀಯವಾಗಿ ತೊಡಗಿಸಿಕೊಳ್ಳುತ್ತಾ ಇಂತಹ ಲೂಟಿಕೋರ ಹಿತಾಸಕ್ತಿಗಳಿಂದ ಜಗತ್ತನ್ನು ಮುಕ್ತಗೊಳಿಸುವತ್ತ,
ಜಾಗತಿಕ ಶಾಂತಿ, ಭದ್ರತೆ, ಸುವ್ಯವಸ್ಥೆಯನ್ನು ರೂಪಿಸಿಕೊಳ್ಳುವತ್ತ ಕಾರ್ಯಪ್ರವೃತ್ತರಾಗಬೇಕಿದೆ.
06/03/2022
Comments
Post a Comment