ಕೇರಳದ ಎಡರಂಗ ಸರ್ಕಾರದ ವೈರುಧ್ಯಗಳೂ#ಸಿಲ್ವರ್ ಲೈನ್ ರೈಲು ಯೋಜನೆ ಹುಟ್ಟುಹಾಕಿದ ಜನಪ್ರತಿಭಟನೆಗಳೂ#kerala left front#silverline semi highspeed train
ಕೇರಳದ
ಎಡರಂಗ ಸರ್ಕಾರದ ವೈರುಧ್ಯಗಳೂ…
ಸಿಲ್ವರ್ ಲೈನ್ ರೈಲು ಯೋಜನೆ ಹುಟ್ಟುಹಾಕಿದ
ಜನಪ್ರತಿಭಟನೆಗಳೂ…
-ನಂದಕುಮಾರ್ ಕೆ .ಎನ್. ಕುಂಬ್ರಿ ಉಬ್ಬು ಮಿಂಚಂಚೆ: nandakumarnandana67@gmail.com
ಪಕ್ಕದ ಕೇರಳ ರಾಜ್ಯ ಕೆಲವು ತಿಂಗಳುಗಳಿಂದ ಹಲವಾರು ಸುದ್ಧಿಗಳಿಗೆ ಕಾರಣವಾಗುತ್ತಿದೆ. ಕೊರೋನಾ ಮೊದಲ ಬಾರಿ ಕಾಣಿಸಿಕೊಂಡ ರಾಜ್ಯ ಹಾಗೇನೆ ಅದನ್ನು ಸಮರ್ಥವಾಗಿ ನಿಭಾಯಿಸಿದ ರಾಜ್ಯವೂ ಕೇರಳವೆಂದು ದೇಶ ಅಲ್ಲದೇ ಅಂತರಾಷ್ಟ್ರೀಯವಾಗಿಯೂ ಸುದ್ಧಿ ಮಾಡಿತ್ತು.
ಕೇರಳ ಸುಮಾರು ಮೂರುಮುಕ್ಕಾಲು ಕೋಟಿ ಜನಸಂಖ‍್ಯೆಯ
ರಾಜ್ಯ. ದೇಶಾದ್ಯಂತ ಕೇರಳಿಯರು ಹರಡಿದ್ದಾರೆ. ಅಮೇರಿಕ, ಯೂರೋಪು, ಏಷಿಯಾ, ಆಫ್ರಿಕಾ ಖಂಡದ ರಾಷ್ಟ್ರಗಳು
ಅಲ್ಲದೇ ಗಲ್ಫ್ ರಾಷ್ಟಗಳಲ್ಲೂ ಕೇರಳೀಯರು ಹರಡಿಕೊಂಡಿದ್ದಾರೆ. ಪ್ರತಿ ಮನೆಯಿಂದ ಒಬ್ಬಿಬ್ಬರಾದರೂ ಹೊರರಾಷ್ಟ್ರಗಳಲ್ಲಿ
ದುಡಿದು ಕೇರಳಕ್ಕೆ ಹಣ ಕಳಿಸುತ್ತಾರೆ. ಕೊರೋನಾ ಮೂಲಕ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಸಾಕಷ್ಟು ಜನರು
ಹೊರದೇಶಗಳಿಂದ ವಾಪಾಸಾಗಬೇಕಾಗಿ ಬಂದಿತ್ತು. ಅವರಲ್ಲಿ ಹಲವರು ಈಗ ಜಮೀನು ಕೊಂಡು ಇಲ್ಲವೇ ಗುತ್ತಿಗೆಗೆ
ಹಿಡಿದು ಕೃಷಿ ಮಾಡುವತ್ತ ಸಾಗಿದ್ದಾರೆ.
ಕೇರಳ ಪ್ರಧಾನವಾಗಿ ಗ್ರಾಹಕ ರಾಜ್ಯವಾಗಿದೆ.
ಉತ್ಪಾದಕ ರಾಜ್ಯವಾಗಿ ಬೆಳೆದಿಲ್ಲ. ಜನರ ಜೀವನ ಮಟ್ಟ ಉಳಿದ ರಾಜ್ಯಗಳಿಗಿಂತಲೂ ಮುಂದಿರುವುದು ನಿಜವಾದರೂ
ಅದು ಪ್ರಧಾನವಾಗಿ ಸಾದ್ಯವಾಗಿದ್ದು ರಾಜ್ಯದ ಉತ್ಪಾದಕತೆಯಿಂದಲ್ಲ. ಅನಿವಾಸಿ ಕೇರಳಿಯರ ಹಣ ರವಾನೆ ಮತ್ತು
ಪ್ರವಾಸೋದ್ಯಮ ಇತ್ಯಾದಿ ಸೇವಾವಲಯಗಳ ಕೊಡುಗೆಗಳು ಹಾಗೂ ಸರ್ಕಾರಗಳು ಮಾಡುತ್ತಾ ಬಂದಿರುವ ಸಾಲಗಳ ಕೊಡುಗೆಗಳು
ಪ್ರಧಾನವಾಗಿವೆ. ಕೇರಳದ ಆರ್ಥಿಕತೆಯನ್ನು ಸಾಲ ಆರ್ಥಿಕತೆ ಎನ್ನಬಹುದು. ಕೇರಳ ದೇಶದಲ್ಲಿಯೇ ಮೂರನೇ
ಸಾಲಗಾರ ರಾಜ್ಯವಾಗಿದೆ ಎಂದು 2021-22 ರ ಸರ್ಕಾರಿ ವರದಿ ಹೇಳುತ್ತದೆ. ಇದೇ ಸಾಲಿನಲ್ಲಿ ಕೇರಳ ರಾಜ್ಯದ
ಒಟ್ಟು ಸಾಲ 3.27 ಲಕ್ಷ ಕೋಟಿ ರೂಪಾಯಿಗಳಾಗಿವೆ. ರಾಜ್ಯದ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ
38.3 ರಷ್ಟು ಸಾಲವನ್ನು ಕೇರಳ ಹೊಂದಿದೆ. ಕೇರಳ ಸಾಮಾಜಿಕ ಕ್ಷೇಮಾಭಿವೃದ್ದಿಗಳಿಗಾಗಿ ವ್ಯಯಿಸುತ್ತಿರುವ
ಮೊತ್ತ ಕೂಡ ದೇಶದ ಇತರ ಎಲ್ಲಾ ರಾಜ್ಯಗಳಿಗಿಂತಲೂ ಹಲವು ಪಟ್ಟು ಹೆಚ್ಚಿನದಾಗಿದೆ. ಒಂದು ಅಂದಾಜಿನ ಪ್ರಕಾರ
ರಾಷ್ಟ್ರೀಯ ಸರಾಸರಿ ಶೇಕಡಾ 30ರಷ್ಟಿದ್ದರೆ ಕೇರಳದಲ್ಲಿ ಅದು ಶೇಕಡಾ 162 ರಷ್ಟಿದೆ.
ಸಿಲ್ವರ್ ಲೈನ್ ರೈಲು ಯೋಜನೆ ಮಾರ್ಗ ಮತ್ತು ನಿಲ್ದಾಣಗಳ ನಕ್ಷೆ.
ಕೇರಳ ಈಗ ಸುದ್ಧಿ ಮಾಡುತ್ತಿರುವುದು ಅಭಿವೃದ್ದಿಯ
ಕಾರಣಗಳಿಂದಾಗಿ ಅಲ್ಲ. ಬದಲಿಗೆ ರಾಜಕೀಯ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ. ಮೊದಲನೆಯದು ಪಿಣರಾಯಿ
ವಿಜಯನ್ ನೇತೃತ್ವದ ಎಡ ಪ್ರಜಾ ಸತ್ತಾತ್ಮಕ ರಂಗ ಸರ್ಕಾರವು ಜಾರಿಗೆ ತರಲು ಹೊರಟಿರುವ ಕೇರಳ ರೈಲು ಯೋಜನೆಯದು. ಇದರ ಸರ್ವೆ ನಡೆಸಲು ವಿವಾದಿತ ಫ್ರೆಂಚ್ ಕಂಪನಿಯೊಂದಕ್ಕೆ
ಗುತ್ತಿಗೆ ಕೊಟ್ಟಿರುವ ವಿಚಾರವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. ಅಲ್ಲದೇ ಈ ಯೋಜನೆಯು ಪರಿಸರಕ್ಕೆ
ಮತ್ತು ಸುಮಾರು 20,000 ಕುಟುಂಬಗಳಿಗೆ ಹಾನಿ ಮಾಡುತ್ತದೆ ಎಂದಿದೆ. ಈ ಯೋಜನೆ ಹಿಂದೆ ಭಾರಿ ಕಮಿಷನ್
ಲಾಭಿ ಹಾಗೂ ಭ್ರಷ್ಟಾಚಾರಗಳಿವೆ ಎಂದೆಲ್ಲಾ ಆರೋಪಿಸಿದೆ. ಇದನ್ನು ವಿರೋಧಿಸಿ ಹಲವಾರು ಕಡೆಗಳಲ್ಲಿ ಸಭೆ
ಸಮಾವೇಶಗಳು ನಡೆಯುತ್ತಾ ಬಂದಿವೆ. ನರ್ಮದಾ ಬಚಾವೋ ಚಳವಳಿಯ, ಪರಿಸರ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೇದಾ
ಪಾಟ್ಕರ್, ಹೆಸರಾಂತ ಜನಪರ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಮೊದಲಾದವರು ಕೂಡ ಈ
ಸಮಾವೇಶಗಳಲ್ಲಿ ಭಾಗವಹಿಸಿ ಈ ಯೋಜನೆಯನ್ನು ವಿರೋಧಿಸಿದ್ದಾರೆ. ಇದು ಪರಿಸರಕ್ಕೆ ಹಾಗೂ ಜನರಿಗೆ ಹಾನಿಕರವಾಗುತ್ತದೆ,
ಕೇರಳದಂತಹ ರಾಜ್ಯಕ್ಕೆ ಇದು ಯೋಗ್ಯವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದು ಕೇರಳದ ರಾಜಧಾನಿ ತಿರುವನಂತಪುರದಿಂದ
ನಮ್ಮ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯನ್ನು ನಾಲ್ಕು ಗಂಟೆಗಳ ಅವಧಿಯೊಳಗೆ ತಲುಪುವ
ಸೆಮಿ ಹೈಸ್ಪೀಡ್ ರೈಲು ಯೋಜನೆಯಾಗಿದೆ. 529 ಕಿ.ಮೀಟರು ಉದ್ದದ ಈ ರೈಲು ಯೋಜನೆಯನ್ನು ಸಿಲ್ವರ್ ಲೈನ್
ಯೋಜನೆ ಎನ್ನಲಾಗುತ್ತಿದೆ. ಹನ್ನೊಂದು ನಿಲ್ದಾಣಗಳ
ಈ ಯೋಜನೆಯಲ್ಲಿ ಗಂಟೆಗೆ ಕನಿಷ್ಟ 120 ಕಿ. ಮೀಟರುಗಳು ಗರಿಷ್ಟ 200 ಕಿ. ಮೀಟರುಗಳ ವೇಗದಲ್ಲಿ ರೈಲು
ಚಲಿಸುತ್ತದೆ ಎನ್ನಲಾಗಿದೆ. ಸುಮಾರು 66,079 ಕೋಟಿಗಳ ಯೋಜನೆ ಇದಾಗಿದೆ. 1300 ಏಕರೆ ಭೂಮಿಯನ್ನು ಇದಕ್ಕಾಗಿ
ಸ್ವಾಧೀನಪಡಿಸಬೇಕಾಗುತ್ತದೆ ಎಂಬ ಅಂದಾಜಿದೆ.
ಆದರೆ ಕಾಂಗ್ರೆಸ್ ಇದರ ಯೋಜನಾ ವೆಚ್ಚ ಒಂದೂಕಾಲು
ಲಕ್ಷ ಕೋಟಿಗಳಿಗೂ ಮೀರುತ್ತದೆ ಹಾಗಾಗಿ ದುಬಾರಿಯಾಗುತ್ತದೆ ಎಂದು ಟೀಕಿಸಿದೆ. ಈ ಯೋಜನೆ ಹಾದು ಹೋಗುವ
ಮಾರ್ಗವನ್ನು ಗುರುತಿಸಿ ಕಲ್ಲು ಗುರುತುಗಳನ್ನು ನೆಡಲು ಹಲವಾರು ಕಡೆಗಳಲ್ಲಿ ಆಯಾ ಪ್ರದೇಶದ ಜನರು ತಡೆಯೊಡ್ಡುತ್ತಿದ್ದಾರೆ.
ಹಲವೆಡೆ ಪೊಲಿಸ್ ಬಲಪ್ರಯೋಗಗಳು ಹಾಗೂ ಲಾಠಿಗಳ ಪ್ರಯೋಗಗಳು ನಡೆದಿವೆ.
ಪ್ರಸ್ತುತ ಈಗ ತಿರುವನಂತಪುರದಿಂದ ಕಾಸರಗೋಡಿಗೆ ಇರುವ ರೈಲು
ಪ್ರಯಾಣ ಹನ್ನೆರಡು ಗಂಟೆಗಳಷ್ಟು ದೀರ್ಘ ಅವಧಿಯದಾಗಿದೆ. ರಸ್ತೆ ಪ್ರಯಾಣ ಮತ್ತೂ ದೀರ್ಘಾವಧಿಯದಾಗಿದೆ.
ಕೇರಳ ಸಂಚಾರ ದಟ್ಟಣೆಯ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಕೇರಳದ ರಸ್ತೆಗಳಲ್ಲಿ ಸಾಗುವುದು ದುಸ್ತರವೆನ್ನಿಸುವ
ಸ್ಥಿತಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಇತರ ರಾಜ್ಯಗಳಿಗಿಂತಲೂ ಕಿರಿದಾದವುಗಳಾಗಿವೆ. ಕೇರಳ ದೇಶದಲ್ಲಿಯೇ
ಹೆಚ್ಚು ಜನಸಂಖ‍್ಯಾ ದಟ್ಟಣೆಯಿರುವ ರಾಜ್ಯವಾಗಿರುವುದರಿಂದ ರಸ್ತೆ ಅಗಲೀಕರಣ ಕೂಡ ಕಷ್ಟದಾಯಕವಾಗಿದೆ.
ಆದರೂ ಈಗ ಕೆಲವು ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಹಾಗೂ ಆರು ಪಥವಾಗಿಸಲಾಗುತ್ತಿದೆ. ಅದಕ್ಕಾಗಿ
ರಸ್ತೆಯ ಬದಿಯ ಸಾವಿರಾರು ಮರಗಳನ್ನು ಕಡಿದುರುಳಿಸಲಾಗಿಸಲಾಗುತ್ತಿದೆ. ಹಲವಾರು ಮನೆ ಕಟ್ಟಡಗಳನ್ನು
ತೆರವುಗೊಳಿಸಲಾಗುತ್ತಿದೆ.
ಎಡಪ್ರಜಾಸತ್ತಾತ್ಮಕ ರಂಗದ ಸರ್ಕಾರ ಸಂಚಾರ
ದಟ್ಟಣೆಯ ಸಮಸ್ಯೆಗೆ ಪರಿಹಾರವಾಗಿ ಹಾಗೂ ರಾಜ್ಯದ ಒಂದು ತುದಿಯನ್ನು ಮತ್ತೊಂದು ತುದಿಯಲ್ಲಿರುವ ರಾಜಧಾನಿಗೆ
ಸೆಮಿ ಸ್ಪೀಡ್ ರೈಲು ಯೋಜನೆಯ ಮೂಲಕ ಜೋಡಿಸಿ ರಾಜ್ಯದ ಅಭಿವೃದ್ಧಿಯನ್ನು ಹಾಗೂ ಜನಸಾಮಾನ್ಯರ ಓಡಾಟಗಳನ್ನು
ಸುಗಮಗೊಳಿಸಿ ವೇಗ ಸಾಧಿಸಲು ಕೆ ರೈಲು ಯೋಜನೆ ಅತ್ಯಾವಶ್ಯಕವೆಂದು ಪ್ರತಿಪಾದಿಸುತ್ತಿದೆ. ಅದರಿಂದಾಗಿ
ಅತ್ಯಂತ ಕಡಿಮೆ ಮನೆಗಳು ಹಾಗೂ ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ ಅಷ್ಟೆ. ಅಲ್ಲದೇ ಇದು ಬಹುತೇಕವಾಗಿ
ಇದು ಮೆಟ್ರೋ ರೈಲಿನ ತರಹ ಭೂಮಿಯಿಂದ ಮೇಲೆ ಎತ್ತರದಲ್ಲಿ ಮತ್ತು ಭೂಮಿಯಡಿಯಲ್ಲಿ ನಿರ್ಮಿಸುವ ಹಳಿಗಳ
ಮೇಲೆ ಚಲಿಸುವಂತಹುದಾಗಿದೆ. ಅಲ್ಲದೇ ಐದರಷ್ಟು ನಿಲ್ದಾಣಗಳು ಎತ್ತರದಲ್ಲಿಯೂ ಉಳಿದವುಗಳು ಭೂಮಿಯಡಿ
ನಿರ್ಮಿಸಲಾಗುತ್ತದೆ. ಇದಕ್ಕಾಗಿ ಅರಣ್ಯ ನಾಶ ಕೂಡ
ಅತ್ಯಲ್ಪವಾಗಿದೆ ಎಂದು ವಾದಿಸುತ್ತಿದೆ. ಕೇರಳ ರೈಲು ಮಾರ್ಗಗಳ ಅಭಿವೃದ್ಧಿಗಾಗಿಯೇ ಕೇರಳ ರೈಲ್ವೇ ಡೆವಲಪ್
ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಎಂಬ ಕಂಪನಿಯನ್ನು ಹುಟ್ಟುಹಾಕಲಾಗಿದೆ. ಈ ಕಂಪನಿಯಲ್ಲಿ ರಾಜ್ಯದ ಪಾಲು
ಶೇಕಡಾ 51ರಷ್ಟಿದ್ದರೆ ಯೂನಿಯನ್ ಸರ್ಕಾರದ ಪಾಲು 49ರಷ್ಟು ಇದೆ.
ಆದರೆ ಈ ರೈಲು ಯೋಜನೆ ಹಾದು ಹೋಗುವ ಮಾರ್ಗವನ್ನು ಗುರುತು ಮಾಡಲು ರಾಜ್ಯದ ಹಲವಾರು ಕಡೆಗಳಲ್ಲಿ ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಳ್ಳುವ ಜನರಿಂದ ಪ್ರತಿರೋಧ ಎದುರಾಗುತ್ತಿದೆ. ಸಂಬಂಧಿಸಿದವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆಯದೆ ಈ ಯೋಜನೆಯ ಸರ್ವೆ ಹೆಸರಿನಲ್ಲಿ ಏಕಾಏಕಿ ಖಾಸಗಿ ಭೂಮಿ ಹಾಗೂ ವಸತಿ ಪ್ರದೇಶಗಳ ಮಧ್ಯೆ ದೊಡ್ಡ ದೊಡ್ಡ ಕಲ್ಲುಗಳನ್ನು ಬಲವಂತವಾಗಿ ನೆಡಲು ಸರ್ಕಾರ ಹೊರಟಿದೆ. ಇದು ಜನರಲ್ಲಿ ಭಾರಿ ಆತಂಕ ಹಾಗೂ ಅನುಮಾನ ಮೂಡಿಸಿದ್ದಲ್ಲದೆ ಅವರನ್ನು ಕೆರಳಿಸಿದೆ. ಅಲ್ಲದೇ ಈ ಹಿಂದಿನ ಕೆಲವು ಯೋಜನೆಗಳಿಗೆ ಘೋಷಿಸಿರುವ ಪರಿಹಾರಗಳನ್ನು ಹತ್ತಾರು ವರುಷಗಳಾದರೂ ಜನರಿಗೆ ವಿತರಿಸದೇ ಇರುವ ಉದಾಹರಣೆಗಳು ಕೂಡ ಜನರ ಮುಂದಿವೆ. ಸರ್ಕಾರ ನೆಡುತ್ತಿರುವ ಕಲ್ಲುಗಳನ್ನು ಕಿತ್ತೆಸೆಯುತ್ತಿದ್ದಾರೆ. ಪೋಲಿಸ್ ಬಲ ಬಳಸಿ ಸರ್ವೆ ಕಲ್ಲು ನೆಡಲೂ ಬಂದರೂ ಜನರು ಪ್ರತಿರೋಧಿಸಿ ವಾಪಾಸಾಗುವಂತೆ ಮಾಡುತ್ತಿದ್ದಾರೆ.
ನಿರ್ವಸಿತರಾಗುವವರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯಗಳ ಬಗ್ಗೆ ಜನರಿಗೆ ಭರವಸೆ ಕೊಟ್ಟಿಲ್ಲ. ಕೇರಳದಲ್ಲಿ ಐದು ಸೆಂಟ್ ಹಾಗೂ ಹತ್ತು ಸೆಂಟ್ ಭೂಮಿಯವರು (ಒಂದು ಸೆಂಟ್ ಎಂದರೆ ಒಂದು ಏಕರೆಯ ನೂರರಲ್ಲಿ ಒಂದು ಭಾಗ) ಹೆಚ್ಚಿನವರು. ಅಲ್ಲಿ ಒಂದು ಸೆಂಟ್ ಭೂಮಿಯ ಬೆಲೆ ಲಕ್ಷದಿಂದ ಹತ್ತಾರು ಲಕ್ಷಗಳವರೆಗೂ ಇದೆ. ಹಾಗಾಗಿ ನಿರ್ವಸಿತರಾಗುವ ಹತ್ತಾರು ಸಾವಿರ ಕುಟುಂಬಗಳು ಪರ್ಯಾಯವಾಗಿ ಬೇರೆ ಭೂಮಿ ಕೊಂಡುಕೊಳ್ಳುವುದು ಬಹಳ ಕಷ್ಟಕರ. ಈ ಯೋಜನೆಯಿಂದಾಗಿ ಜನರು ಕಳೆದುಕೊಳ್ಳುವ ಜೀವನಾಧಾರ ಹಾಗೂ ವಸತಿಗಳಿಗೆ ಸರ್ಕಾರ ನೀಡುವ ಪರಿಹಾರದಿಂದ ಸಾಧ್ಯವಾಗದು. ಸರ್ಕಾರ ಅದಕ್ಕೆ ಪರ್ಯಾಯವಾಗಿ ಬೇರೆ ಭೂಮಿ ಕೊಡುವ ಭರವಸೆ ಕೊಡುತ್ತಿಲ್ಲ. ತುಂಡು ಭೂಮಿಗಳ ಮಧ್ಯೆ ಈ ಯೋಜನೆ ಹಾದು ಹೋಗುವಾಗ ಮತ್ತಷ್ಟು ತುಂಡಾಗಿ ಹಳಿಗಳ ಎರಡೂ ಬದಿಯ ಭೂಮಿ ನಿರುಪಯೋಗಿ ಆಗುವ ಅಪಾಯ ಎದುರಾಗಿದೆ. ಈ ಸಮಸ್ಯೆ ಪರಿಹಾರದ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ. ಸರ್ವೆ ಹೆಸರಿನಲ್ಲಿ ಕಲ್ಲುಗಳನ್ನು ಒಮ್ಮೆ ನೆಟ್ಟರೆ ಆ ಭೂಮಿಗೆ ಬ್ಯಾಂಕ್ ಸಾಲವೂ ದೊರೆಯದು, ಮಾರಾಟ ಮಾಡಲೂ ಕೂಡ ಆಗದಂತಹ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿ ಹತ್ತಾರು ಸಾವಿರ ಕುಟುಂಬಗಳು ತಮ್ಮ ಜೀವಮಾನದ ಉಳಿತಾಯಗಳಾದ ತುಂಡು ಭೂಮಿ ಹಾಗೂ ವಸತಿಗಳನ್ನು ಕಳೆದುಕೊಂಡು ನಿರ್ಗತಿಕರಾಗುವ ಅಪಾಯವಿದೆ. ಅಲ್ಲದೆ ಪ್ರಸ್ತಾವಿತ ಪರಿಹಾರ ಮೊತ್ತ ಕಡಿಮೆಯದು ಮತ್ತು ಈ ರೈಲು ಯೋಜನೆಯಿಂದಾಗಿ ಅದರ ಅಕ್ಕ ಪಕ್ಕದ ಜಮೀನುಗಳ ಬೆಲೆಗಳೇನೂ ಏರದು ಬದಲಿಗೆ ಕಡಿಮೆಯಾಗಬಹುದು ಇತ್ಯಾದಿ ಅಂಶಗಳು ಪ್ರಧಾನವಾಗಿ ಕೆಲಸ ಮಾಡುತ್ತಿದೆ. ಈ ಯೋಜನೆ ಜನಸಾಮಾನ್ಯರ ಹಿತಾಸಕ್ತಿಗಳ ದೃಷ್ಟಿಯಿಂದ ಜಾರಿ ಮಾಡುತ್ತಿಲ್ಲ. ಬದಲಿಗೆ ಭಾರಿ ಕಾರ್ಪೋರೇಟ್ ಹಿತಾಸಕ್ತಿಗಳ ಹಿತಾಸಕ್ತಿಗಳಿಗಾಗಿ ಜಾರಿಗೊಳಿಸಲಾಗುತ್ತಿದೆ ಎಂಬ ಟೀಕೆಗಳೂ ಬರುತ್ತಿವೆ. ರಿಯಲ್ ಎಸ್ಟೇಟ್ ಲಾಭಿ ಕೂಡ ಈ ಪ್ರತಿಭಟನೆಯ ಹಿಂದೆ ಕೆಲಸ ಮಾಡುತ್ತಿದೆ. ಈ ಯೋಜನೆಗೆ ಜಪಾನಿನ ಹಣಕಾಸು ಹಾಗೂ ತಾಂತ್ರಿಕ ನೆರವು ಪಡೆಯಲಾಗುತ್ತಿದೆ ಅವರು ಅದನ್ನು ಮಾಡಬೇಕಾದರೆ ಶೇಕಡಾ 70 ರಷ್ಟು ಭೂ ಸ್ವಾಧೀನ ಮೊದಲಿಗೇ ಆಗಬೇಕು ಎಂಬ ಶರತ್ತನ್ನು ಮುಂದಿಟ್ಟಿದ್ದಾರೆಂದು ಅದಕ್ಕಾಗಿಯೇ ಎಡರಂಗ ಸರ್ಕಾರ ತರಾತುರಿಯಲ್ಲಿ ಭೂಸ್ವಾಧೀನಕ್ಕೆ ಹೊರಟಿದೆ ಎಂಬ ಸುದ್ಧಿ ಕೂಡ ಇದೆ.
ಸಿಲ್ವರ್ ಲೈನ್ ವಿರೋಧಿ ಪ್ರತಿಭಟನೆ
ಕೊಟ್ಟಯಂ
ಜೊತೆಗೆ ಈ ಯೋಜನೆ ಕಾರ್ಯಸಾಧುವಾದುದಲ್ಲ. ವ್ಯಾಪಕ ಪರಿಸರ ನಾಶ ಹಾಗೂ ಜನರ ಆಸ್ತಿಪಾಸ್ತಿ ನಾಶಕ್ಕೆ ಕಾರಣವಾಗಲಿದೆ. ಕೇರಳ ರಾಜ್ಯಕ್ಕೆ ಅದು ದುಬಾರಿಯಾಗಲಿದೆ, ಆರ್ಥಿಕವಾಗಿಯೂ ಈ ಯೋಜನೆ ಬಹಳ ದುಬಾರಿಯಾಗಲಿದೆ, ಇದರಿಂದಾಗಿ ರಾಜ್ಯ ಸಾಲದಲ್ಲಿ ಮುಳುಗಲಿದೆ ಎಂದೆಲ್ಲಾ ವಾದಗಳನ್ನು ಬೇರೆ ಬೇರೆ ವಲಯಗಳು ಮುಂದಿಡುತ್ತಿವೆ. ಜನರ ಪ್ರತಿಭಟನೆಯನ್ನು ಕಾಂಗ್ರೆಸ್ ಬೆಂಬಲಿಸಿ ನಿಲ್ಲುತ್ತಿದೆ. ಕೇರಳ ಬಿಜೆಪಿ ಕೂಡ ವಿರೋಧಿಸುತ್ತಿದೆ. ಆದರೆ ಯೂನಿಯನ್ ಸರ್ಕಾರ ಈ ಯೋಜನೆಯನ್ನು ವಿರೋಧಿಸುತ್ತಿಲ್ಲ. ಅಲ್ಲದೇ ಯೂನಿಯನ್ ರೈಲ್ವೇ ಸಚಿವಾಲಯವೂ ಈ ಯೋಜನೆಯಲ್ಲಿ ಭಾಗಿಧಾರಿಯಾಗಿದೆ.
ಭಾರಿ ಪ್ರಚಾರ ಕೊಟ್ಟು ಬೃಹತ್ ಬಂಡವಾಳದ ಮೆಟ್ರೋ
ರೈಲುಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಅಲ್ಲದೇ ಜನರಿಗೆ ಸಮಯ ಹಾಗೂ ಹಣಕ್ಕೆ
ಕುತ್ತಾಗಿ ಪರಿಣಮಿಸಿದೆ. ಆರ್ಥಿಕವಾಗಿಯೂ ಲಾಭದಾಯಕವಾಗಿಲ್ಲ. ಇದು ದೇಶದ ಎಲ್ಲೆಡೆಯ ಮೆಟ್ರೋ ಯೋಜನೆ
ಕತೆಯಾಗಿದೆ. ಈ ಯೋಜನೆಗಳ ಭಾರಿ ಲಾಭ ಸಿಮೆಂಟ್ ಉಕ್ಕು ಹಾಗೂ ನಿರ್ಮಾಣ ಕಂಪನಿಗಳದಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಸರದಿಯ
ಗೆಲುವು ಸಾಧಿಸುವಲ್ಲಿ ಸೋತು ಕುಳಿತಿರುವ ಕಾಂಗ್ರೆಸ್ ಪಕ್ಷ ಕೆ ರೈಲು ಯೋಜನೆಯನ್ನು ವಿರೋಧಿಸುವ ಹೋರಾಟವನ್ನು
ತನ್ನ ಮುಂದಿನ ಚುನಾವಣೆಯ ಗೆಲುವಿನ ಅಸ್ತ್ರವನ್ನಾಗಿಸಲು ಪ್ರಯತ್ನಿಸುತ್ತಿದೆ. ಕಳೆದ ಬಾರಿ ವಿಧಾನಸಭೆಯ
ಅವಧಿಯಲ್ಲಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ
ನಡೆಸಿ ಓಟು ಗಳಿಸಲು ಪ್ರಯತ್ನ ನಡೆಸಿತ್ತು. ಈ ವಿಚಾರದಲ್ಲಿ ಬಿಜೆಪಿಯೊಂದಿಗೆ ಪೈಪೋಟಿಗೆ ಇಳಿದು ಬಿಟ್ಟಿತ್ತು.
ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಗಾಗಲಿ ಕಾಂಗ್ರೆಸಿಗಾಗಲೀ ಅದರಿಂದ ದೊಡ್ಡ ಲಾಭವಾಗಿರಲಿಲ್ಲ. ಪಿಣರಾಯಿ
ಸರ್ಕಾರ ಮತ್ತೊಮ್ಮೆ ಚುನಾವಣೆ ಗೆದ್ದು ಅಧಿಕಾರ ಹಿಡಿಯಿತು. ಕೇರಳದ ಇತಿಹಾಸದಲ್ಲಿ ಎರಡು ವಿಧಾನ ಸಭಾ
ಅವಧಿಗಳನ್ನು ನಿರಂತರವಾಗಿ ಒಂದೇ ಪಕ್ಷ ಹಿಡಿತ ಸಾಧಿಸಲು ಅದುವರೆಗೂ ಆಗಿರಲಿಲ್ಲ.
ಸದ್ಯಕ್ಕೆ ದೇಶದಲ್ಲಿ ಕೇರಳದಲ್ಲಿ ಮಾತ್ರ
ಆಡಳಿತದ ಪ್ರಧಾನ ಭಾಗವಾಗಿರುವ ಸಿಪಿಐ (ಎಂ) ಪಕ್ಷ ತನ್ನ ರಾಜ್ಯ ಸಮ್ಮೇಳನವನ್ನು ಪೂರ್ತಿಗೊಳಿಸಿ ಮಹಾಧಿವೇಶನ
ನಡೆಸಹೊರಟಿದೆ. ಈ ಸಂದರ್ಭದಲ್ಲಿ ಅದರ ಕೆಲವು ಹೇಳಿಕೆಗಳು ಹೊರಬಿದ್ದಿವೆ. ಅದರಲ್ಲಿ ಮುಖ್ಯವಾಗಿ ಹೆಚ್ಚು
ಗಮನ ಸೆಳೆಯುತ್ತಿರುವುದು ಕಾರ್ಮಿಕ ಸಂಘಟನೆಗಳು ಸಮರ ಶೀಲತೆಯನ್ನು ಕಡಿಮೆಗೊಳಿಸಬೇಕು. ಕಾರಣ ರಾಜ್ಯಕ್ಕೆ
ಬಂಡವಾಳ ಹರಿದುಬರುವಂತೆ ಮಾಡಬೇಕಾಗಿದೆ. ಕಾರ್ಮಿಕರ ಸಮರ ಶೀಲತೆಯಿಂದಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ
ಕಡಿಮೆಯಾಗಿದೆ. ಆ ಸಮಸ್ಯೆಯನ್ನು ಪರಿಹರಿಸಲು ಇದು ಅಗತ್ಯ ಎಂದೆಲ್ಲಾ ತನ್ನ ವಾದಗಳನ್ನು ಇಡುತ್ತಿದೆ.
ಇದನ್ನು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ಸಮ್ಮೇಳನದ ಸಮಾರೋಪ ಸಮಾವೇಶದಲ್ಲೇ ಸ್ಪಷ್ಟವಾಗಿಯೇ
ಹೇಳಿದ್ದರು. ಅಲ್ಲದೇ ಅದರ ಸಮ್ಮೇಳನದ ದಸ್ತಾವೇಜಿನಲ್ಲಿಯೂ ಇದನ್ನು ಹೇಳಲಾಗಿದೆ. ಈ ನಿಲುವು ಕಾರ್ಮಿಕ
ವಿರೋಧಿ ನಿಲುವು ಮತ್ತು ಬಂಡವಾಳಶಾಹಿ ನಿಲುವು ಎಂದೆಲ್ಲಾ ಟೀಕೆಗಳೂ ಕೂಡ ಹಲವು ವಲಯಗಳಿಂದ ಬರುತ್ತಿವೆ.
ಬಂಡವಾಳ ಹರಿದುಬರಬೇಕು ಅದಕ್ಕೆ ಕಾರ್ಮಿಕರು ಅನುವು ಮಾಡಿಕೊಡಬೇಕು ಎಂಬ ವಾದವೇ ಸಹಜವಾಗಿ ಕಾರ್ಮಿಕ
ವಿರೋಧಿಯಾಗಿ ಬಿಡುತ್ತದೆ.
ಕೇರಳ ರಾಜ್ಯದಲ್ಲಿಯೇ ಸಾರ್ವಜನಿಕ ಬಂಡವಾಳವನ್ನು
ಸರ್ಕಾರವೇ ಯಾಕೆ ಸೃಷ್ಟಿ ಮಾಡಲಾಗುತ್ತಿಲ್ಲ? ಭಾರಿ ಕಾರ್ಪೋರೇಟುಗಳ ಬಂಡವಾಳವೇ ಯಾಕೆ ಬೇಕಾಗಿದೆ?,
ಭಾರಿ ಕಾರ್ಪೋರೇಟುಗಳ ಬಂಡವಾಳ ಹೂಡಿಕೆ ಎಂದಾಗ ಅವರ ಹಿತಾಸಕ್ತಿಗಳನ್ನು ಪೂರೈಸಬೇಕಾಗುತ್ತದೆ ಎಂದಾಗುವುದಿಲ್ಲವೆ?,
ದೇಶದಲ್ಲಿ ಇರೋದರಲ್ಲಿ ಹೆಚ್ಚು ಸಶಕ್ತವಾಗಿರುವ ಕೇರಳದ ಸಹಕಾರಿ ರಂಗಗಳನ್ನು ಕೈಗಾರಿಕೀಕರಣ, ಕೃಷಿ
ಹಾಗೂ ಉದ್ಯೋಗ ಸೃಷ್ಟಿಗಾಗಿ ಯಾಕೆ ದೊಡ್ಡ ಮಟ್ಟದಲ್ಲಿ ತೊಡಗಿಸಲಾಗುತ್ತಿಲ್ಲ?, ಸಹಕಾರಿ ಹಾಗೂ ಸಾರ್ವಜನಿಕರಂಗಗಳನ್ನು
ಸಶಕ್ತಗೊಳಿಸಿ ಸಮರ್ಥವಾಗಿ ತೊಡಗಿಸೋ ಮೂಲಕ ಮಾತ್ರ ಸ್ವಾವಲಂಬಿ ಹಾಗೂ ಸಶಕ್ತ ಕೇರಳ ನಿರ್ಮಾಣ ಸಾಧ್ಯ
ಎಂಬ ವಿಚಾರವನ್ನು ಸರ್ಕಾರ ಯಾಕೆ ಗೌಣಗೊಳಿಸಿ ನೋಡುತ್ತಿದೆ?, ಇರುವ ಸಾರ್ವಜನಿಕ ರಂಗಗಳಲ್ಲಿ ಭ್ರಷ್ಟಾಚಾರ,
ಅಧಿಕಾರಶಾಹಿ ದುಂಡಾವರ್ತಿ, ಕರ್ತವ್ಯ ಲೋಪ, ಪಕ್ಷಪಾತ ಇತ್ಯಾದಿಗಳನ್ನು ನಿಯಂತ್ರಿಸಿ ಸರಿಯಾದ ರೀತಿಯಲ್ಲಿ
ನಡೆಯುವಂತೆ ಯಾಕೆ ಮಾಡುತ್ತಿಲ್ಲ?, ಜಾಗತೀಕರಣದ ಮೂವತ್ತು ವರುಷಗಳ ಅಷ್ಟೆಲ್ಲಾ ಅವಾಂತರಗಳನ್ನು ನೋಡಿದ
ಮೇಲೂ ಯಾಕೆ ಅವೆಲ್ಲಾ ಅರ್ಥವಾಗುತ್ತಿಲ್ಲ?, ಹಾಗಾದರೆ ಇವರು ಪ್ರತಿಪಾದಿಸುವ ಕಮ್ಯೂನಿಸ್ಟ್ ಸಮಾಜವಾದವೆಂದರೆ
ಏನು? ಇತ್ಯಾದಿ ಪ್ರಶ್ನೆಗಳು ಹಲವು ವಲಯಗಳಿಂದ ಬಂದಿವೆ.
ಇತ್ತೀಚೆಗೆ
ಎರ್ನಾಕುಳಂನಲ್ಲಿ ಜರುಗಿದ ಸಿಪಿಐ(ಎಂ) ನ ಕೇರಳ ರಾಜ್ಯ ಸಮ್ಮೇಳನದ ಸಮಾರೋಪದ ಬಹಿರಂಗ ಸಮಾವೇಶ
ಕೇರಳದಲ್ಲಿ ತಲೆಹೊರೆಗಳನ್ನು ಇಳಿಸುವ ಹಮಾಲಿ ಕೆಲಸದವರು ನೋಕು ಕೂಲಿ (ನೋಡಲು ಕೂಲಿ) ಎಂಬ ಹೆಸರಿನಲ್ಲಿ ಕೆಲಸ ಮಾಡದೇ ಕಡ್ಡಾಯ ಸುಲಿಗೆ ಮಾಡುವ ವಿಧಾನವೊಂದು ಚಾಲ್ತಿಯಲ್ಲಿದೆ. ಯಾವುದೇ ಲಾರಿ ಇಲ್ಲವೇ ಗೂಡ್ಸ್ ವಾಹನಗಳು ವಸ್ತುಗಳನ್ನು ತುಂಬಿಕೊಂಡು ಬಂದಲ್ಲಿ ಸಂಬಂಧಪಟ್ಟ ಮಾಲಿಕರು ಆ ಪ್ರದೇಶದ ಹಮಾಲಿದಾರರ ಸಂಘಟನಾ ಘಟಕ ನಿಗದಿಪಡಿಸಿದಷ್ಟು ಕೂಲಿಹಣವನ್ನು ನೀಡಲೇಬೇಕು. ಆದರೆ ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ. ಒಂದುವೇಳೆ ಅವರು ಸಾಮಾನುಗಳನ್ನು ಇಳಿಸಿಕೊಟ್ಟರೂ ಬಹಳ ಅಜಾಗರೂಕತೆಯಿಂದ ವಸ್ತುಗಳು ಹಾಳಾಗುವಂತೆ ಇಲ್ಲವೇ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಇಳಿಸಿಬಿಟ್ಟು ಹೋಗುವ ರೂಢಿ ಬೆಳೆದಿತ್ತು. ಅವರ ಇಂತಹ ದುಂಡಾವರ್ತನೆಗಳನ್ನು ಪ್ರಶ್ನಿಸುವಂತೆ ಇರಲಿಲ್ಲ. ಒಂದು ವೇಳೆ ಪ್ರಶ್ನಿಸಿದರೆ ಅಂತಹವರ ಜೊತೆಗೆ ಎಲ್ಲಾ ವಿಚಾರಗಳಲ್ಲೂ ತಗಾದೆ, ಅಸಹಕಾರಗಳು, ಕಿರುಕುಳಗಳು ಸಾಮಾನ್ಯವಾಗಿದ್ದವು. ಇವು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅದು ನ್ಯಾಯಾಲಯದ ಕಟ್ಟೆಯೂ ಹತ್ತಿ ನ್ಯಾಯಾಲಯ ಅದು ನಿಯಮ ಬಾಹಿರವಾದ ಕಾರ್ಯವೆಂದು ನಿಲ್ಲಿಸಬೇಕೆಂದು ತಾಕೀತು ಮಾಡಿದ ಮೇಲೆ ಇತ್ತೀಚೆಗೆ ಕೇರಳ ವಿಧಾನಸಭೆ ಆ ಬಗ್ಗೆ ನಿಯಮ ರೂಪಿಸಿದೆ. ನೋಕು ಕೂಲಿಯನ್ನು ಯಾರೂ ಪಡೆಯುವಂತಿಲ್ಲ ಎಂದು ತಾಕೀತು ಮಾಡಿದೆ. ಆ ರೀತಿ ಪಡೆಯುವವರ ಮೇಲೆ ಕ್ರಮ ಹಾಗೂ ಶಿಕ್ಷೆಯನ್ನು ನಿಗದಿಗೊಳಿಸಿ ಕಾನೂನು ಅನುಮೋದಿಸಿದೆ.
ಮತ್ತೊಂದು ಪ್ರಮುಖವಾದ ತೀರ್ಮಾನವೆಂದರೆ ಸಿಪಿಐ
(ಎಂ) ಗುಡಿ ದೇವಸ್ಥಾನಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಂಘ ಪರಿವಾರ ನಡೆಸುತ್ತಿರುವ
ಗುಡಿದೇವಸ್ಥಾನಗಳ ಅಪಬಳಕೆಯನ್ನು ತಡೆಯಲು ಇದು ಅಗತ್ಯವಾಗಿದೆ ಎಂಬ ಸಮರ್ಥನೆಗಳನ್ನು ನೀಡಲಾಗಿದೆ. ಅದರಂತೆ
ಕೆಲವು ದೇವಸ್ಥಾನಗಳ ಚಟುವಟಿಕೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದೆ ಕೂಡ. ಈ ಕ್ರಮಗಳನ್ನು ಬಿಜೆಪಿ
ವಿರೋಧಿಸಿದೆ. ಸಿ ಪಿ ಐ (ಎಂ) ನ ಈ ತೀರ್ಮಾನದ ಬಗ್ಗೆಯೂ ಸಾಕಷ್ಟು ಟೀಕೆಗಳು ಬರುತ್ತಿವೆ. ಇವರುಗಳು
ಹೇಳುವ ವೈಜ್ಞಾನಿಕ ಸಮಾಜವಾದವೆಲ್ಲಿ ದೇವಸ್ಥಾನಗಳ ಚಟುವಟಿಕೆಗಳೆಲ್ಲಿ? ಒಂದಕ್ಕೊಂದು ವೈರುಧ್ಯವಿರುವಂತಹ
ವಿಚಾರಗಳಿವು. ನಾಯಕತ್ವದ ಮಟ್ಟದಲ್ಲೇ ಹೀಗಿರಬೇಕಾದರೆ ಇನ್ನು ಕಾರ್ಯಕರ್ತರ ಪ್ರಜ್ಞಾಮಟ್ಟ ಹೇಗೆ ವೈಜ್ಞಾನಿಕವಾಗಲು
ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಹಲವು ವಲಯಗಳಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ.
ಆದರೆ ಕೇರಳದ ಸಿಪಿಐ (ಎಂ), ಸಿಪಿಐ ನಂತಹ
ಪಕ್ಷಗಳ ಹಲವಾರು ನಾಯಕರುಗಳು ಜಾತೀಯತೆಯ ಆಚರಣೆಗಳು, ಬ್ರಾಹ್ಮಣಶಾಹಿ ಆಚರಣೆಗಳನ್ನು ಮೊದಲಿನಿಂದಲೂ
ಖುದ್ದು ಆಚರಿಸುತ್ತಲೇ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ದಲಿತ ಆದಿವಾಸಿ ಹಿನ್ನೆಲೆಯವರು ಎಂಬ ಕಾರಣಕ್ಕಾಗಿಯೇ
ಅವರ ಮೇಲೆ ಈ ಪಕ್ಷಗಳು ದೌರ್ಜನ್ಯ ನಡೆಸಿರುವ ಉದಾಹರಣೆಗಳು ಕೂಡ ಸಾಕಷ್ಟಿವೆ.
ಸಿಪಿಐ (ಎಂ) ತನ್ನ ಸಮ್ಮೇಳನದ ದಸ್ತಾವೇಜುಗಳಲ್ಲಾಗಲೀ
ತಮ್ಮ ನಿರ್ಣಯಗಳಲ್ಲಾಗಲೀ ದೇಶ ಎದುರಿಸುತ್ತಿರುವ ಫ್ಯಾಸಿಸಂ ಅಪಾಯಗಳ ಮೇಲೆ ಕೇಂದ್ರೀಕರಿಸಿಲ್ಲದಿರುವುದು
ಎದ್ದು ಕಾಣಿಸುತ್ತದೆ. ಹೆಚ್ಚಿನ ಒತ್ತು ಎಡ ಮತ್ತು ಇತರ ಪ್ರಜಾ ತಾಂತ್ರಿಕ ರಾಜಕೀಯ ಶಕ್ತಿಗಳನ್ನು
ಒಗ್ಗೂಡಿಸಿ ಚುನಾವಣೆಗಳಲ್ಲಿ ಜಯಗಳಿಸುವ ಮೂಲಕ ಸಂಘಪರಿವಾರದ ಶಕ್ತಿಗಳ ಪ್ರಭಾವ ಬೆಳೆಯದಂತೆ ತಡೆಯುವ
ಪ್ರಸ್ತಾಪಗಳಿವೆ. ಇದು ಫ್ಯಾಸಿಸಂ ಎಂದರೆ ಸಂಘಪರಿವಾರಕ್ಕೆ ಸೀಮಿತ ಎನ್ನುವ ಎಡ ಮತ್ತು ಪ್ರಗತಿಪರ ವಲಯಗಳ
ನಿಲುವುಗಳಿಗೆ ತಕ್ಕಂತೆ ಇದೆ. ಆದರೆ ಇದು ಆ ಪಕ್ಷ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿರುವ ಮಾಮೂಲಿ
ಚುನಾವಣಾ ರಾಜಕೀಯ ನಡೆಯಾಗಿದೆ. ಗುರಿ ಮಾಡುವುದರಲ್ಲಿ
ಮಾತ್ರ ವ್ಯತ್ಯಾಸವಿರಬಹುದು ಅಷ್ಟೆ. ಅಲ್ಲದೇ ಹಾಗೆ
ರಚನೆಗೊಂಡ ಸರ್ಕಾರಗಳು ಭಾರಿ ಕಾರ್ಪೋರೇಟ್ ಶಕ್ತಿಗಳಿಗೆ ಅನುಕೂಲವಾಗುವಂತೆ ಆಡಳಿತ ನಡೆಸುತ್ತಾ ಬಂದಿರುವುದರ
ಪರಿಣಾಮಗಳನ್ನು ಇಂದು ಆಯಾ ಪ್ರದೇಶದ ಜನರು ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ತ್ರಿಪುರಗಳನ್ನು
ಸಿಪಿಐ (ಎಂ) ಆಡಳಿತಾತ್ಮಕವಾಗಿ ಕಳೆದುಕೊಂಡು ಬಹಳ ಕಾಲವಾಗಿದೆ.
ಕೇರಳ ಎಡ ಪ್ರಜಾಸತ್ತಾತ್ಮಕ ರಂಗದ ನೇತೃತ್ವ
ನಡೆಸುತ್ತಿರುವ ಸ್ವಯಂ ವೈರುಧ್ಯಗಳ ಇಂತಹ ರಾಜಕೀಯ ನಡೆಗಳು ಆ ರಾಜ್ಯದ ಜನಸಾಮಾನ್ಯರಿಗಾಗಲೀ ದೇಶದ ಜನಸಾಮಾನ್ಯರಿಗಾಗಲೀ
ಉಪಯೋಗಕಾರಿಯಾಗದು ಎನ್ನುವುದಕ್ಕೆ ಹೆಚ್ಚಿನ ವಿಶ್ಲೇಶಣೆಯ ಅಗತ್ಯವಿಲ್ಲ. ಜಾಗತಿಕ ಬಂಡವಾಳದ ಅಗತ್ಯಕ್ಕೆ
ತಕ್ಕಂತೆ ಸಿ ಪಿ ಐ (ಎಂ) ಕೂಡ ತನ್ನ ನಿಲುವು ಹಾಗೂ ಧೋರಣೆಗಳನ್ನು ಇತರ ಪಕ್ಷಗಳಂತೆ ಬದಲಾಯಿಸುತ್ತಾ
ಬರುತ್ತಿದೆ ಎಂಬ ಅಂಶ ಕೂಡ ಗಮನಾರ್ಹ.
27/03/2022
Comments
Post a Comment