Skip to main content

ಸಮವಸ್ತ್ರದಿಂದ ಸಮಾನತೆ ಬಾರದು#ಶಿಕ್ಷಣ ನಿರಾಕರಿಸುವುದರಿಂದ ಸಮಾನತೆ ಬೆಳೆಯದು#head scarf# education# Uniform#eqaulity

ಸಮವಸ್ತ್ರದಿಂದ ಸಮಾನತೆ ಬಾರದು…

ತಲೆವಸ್ತ್ರದಿಂದ ಸಮವಸ್ತ್ರ ಕುಂದದು…

ಶಿಕ್ಷಣ ನಿರಾಕರಿಸುವುದರಿಂದ ಸಮಾನತೆ ಬೆಳೆಯದು…


        -ನಂದಕುಮಾರ್. ಕೆ. ಎನ್.ಕುಂಬ್ರಿಉಬ್ಬು.

                                                ಮಿಂಚಂಚೆ: nandakumarnandana67@gmail.com

ಉಡುಪಿಯ ಕಾಲೇಜೊಂದರಲ್ಲಿ ಹೆಣ್ಣುಮಕ್ಕಳು ಹಾಕಿಕೊಳ್ಳುವ ತಲೆವಸ್ತ್ರದ ನೆಪವೊಂದನ್ನು ಹಿಡಿದು ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಶಕ್ತಿಯಾದ ಸಂಘ ಪರಿವಾರ ಆರಂಭಿಸಿದ ಚಿತಾವಣೆ ಈಗ ರಾಜ್ಯ ಮತ್ತು ಇಡೀ ದೇಶದಲ್ಲೇ ಒಂದು ಸಮುದಾಯವನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ನೇರವಾಗಿ ಗುರಿ ಮಾಡಿದೆ. ಅವರ ಶಿಕ್ಷಣಕ್ಕೇ ಕುತ್ತಾಗಿಸಿದೆ. ಇವುಗಳ ಮೂಲಕ ಅವರ ಶಿಕ್ಷಣದ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ. ಅದಕ್ಕೆ ಸಾರ್ವಜನಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಕುಟಿಲ ಪ್ರಯತ್ನ ಬಿರುಸಾಗಿದೆ.

                 


 

ಇದು ಕೇವಲ ಒಂದು ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣದ ವಿಚಾರ ಮಾತ್ರವಲ್ಲ. ಮುಂದಿನ ದಿನಗಳಲ್ಲಿ ಇಡೀ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಸಾಧ್ಯತೆಗಳನ್ನು ಹೊಂದಿದೆ. ಒಟ್ಟಾರೆಯಾಗಿ ಅಲ್ಪಸಂಖ್ಯಾತ ಮತ್ತು ದಲಿತ ದಮನಿತ ಹಿನ್ನೆಲೆಯ ವಿದ್ಯಾರ್ಥಿ ಸಮೂಹದ ಶಿಕ್ಷಣದ ಹಕ್ಕಿನ ಮೇಲೆಯೇ ಕೆಟ್ಟ ಪರಿಣಾಮ ಬೀರುತ್ತದೆ. ಶಾಲಾ ಕಾಲೇಜುಗಳ ಅಭಿವೃದ್ಧಿ ಸಮಿತಿಗಳನ್ನು ಬಳಸಿಕೊಂಡು ವಸ್ತ್ರ ಸಂಹಿತೆ, ನೀತಿಸಂಹಿತೆಗಳನ್ನು, ಆಚಾರ ಸಂಹಿತೆ, ಧರ್ಮ ಸಂಹಿತೆ ಇತ್ಯಾದಿ ಹೇರಿ ನಿರ್ದಿಷ್ಟ ಇಲ್ಲವೇ ಅಲ್ಪ ಸಂಖ‍್ಯಾತ, ದಲಿತ ದಮನಿತ ವಿದ್ಯಾರ್ಥಿ ಸಮೂಹದ ಯುವಜನರನ್ನು ಶಿಕ್ಷಣದಿಂದಲೇ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಹೊರಗಿಡಲು ದಾರಿ ಸುಲಭಮಾಡಿದೆ. ಭಗವದ್ಗೀತೆಯ ಕಲಿಕೆಯನ್ನು ಶಾಲಾ ಪಠ್ಯಗಳಲ್ಲಿ ಕಡ್ಡಾಯಗೊಳಿಸುವ ಹೇಳಿಕೆಗಳು ಬರತೊಡಗಿರುವುದನ್ನು ನಾವಿಲ್ಲಿ ಗಮನಿಸಬಹುದು.

ಹೆಣ್ಣುಮಕ್ಕಳ ತಲೆವಸ್ತ್ರವನ್ನು ವಿವಾದವನ್ನಾಗಿಸುವಲ್ಲಿ ಸಂಘಪರಿವಾರದ ಕುಮ್ಮಕ್ಕು ಹಾಗೂ ಸಂಘಟಿತ ಪ್ರಯತ್ನ ಪ್ರಧಾನ ಕಾರಣವಾಗಿದೆ ಎನ್ನುವುದರಲ್ಲಿ ಅನುಮಾನವಿರಬೇಕಿಲ್ಲ. ಇದರ ಹಿಂದೆ ಸಂಘ ಪರಿವಾರದ ವ್ಯವಸ್ಥಿತ ಪಿತೂರಿ ಇರುವುದು ಬಹುತೇಕವಾಗಿ ಎಲ್ಲರಿಗೂ ಗೊತ್ತಾಗಿರುವ ವಿಚಾರ. ಇದು ಅವರ ದೂರಗಾಮಿ ಯೋಜನೆಗಳ ಭಾಗವೆಂಬುದೂ ಸಾಕಷ್ಟು ಜನರಿಗೆ ಗೊತ್ತಾಗಿರುವ ವಿಚಾರ. ಅಲ್ಲದೇ ಇದನ್ನು ಬಿಡಿ ಘಟನೆಯನ್ನಾಗಿ ಪರಿಗಣಿಸುವಂತಹುದೂ ಅಲ್ಲ. ಮುಂದಿನ ದಿನಗಳಲ್ಲಿ ಇಂಡಿಯಾದಾದ್ಯಂತ ಅವರು ನಡೆಸಹೊರಟಿರುವ ಕೋಮುವಾದಿ ಕಾರ್ಯಕ್ರಮಗಳ ಭಾಗ ಇದಾಗಿದೆ. ಇದಕ್ಕೆ ಪೂರಕವಾಗಿ ದೇಶದಾದ್ಯಂತ ಹಲವಾರು ಬುಡಮೇಲು ಕೃತ್ಯಗಳನ್ನು ಆಯೋಜಿಸಲಾಗುತ್ತಿದೆ. ಅದಕ್ಕಾಗಿ ದಕ್ಷಿಣದ ರಾಜ್ಯಗಳಲ್ಲಿ ದ್ರಾವಿಡ ಚಿಂತನೆಗಳು ಸ್ವಲ್ಪ ಬಲಹೀನವಾಗಿರುವ ಮತ್ತು ಅವರದೇ ಸರ್ಕಾರವಿರುವ ಕರ್ನಾಟಕವನ್ನು ಅವರು ಆಯ್ದುಕೊಂಡಿದ್ದಾರೆ.  ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಬಿಟ್ಟರೆ ಇತರೆಡೆ ಅವರಿಗೆ ಸರಿಯಾದ ನೆಲೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದನ್ನು ಗಮನಿಸಬೇಕಿದೆ.

ಇದಕ್ಕೂ ಕೆಲವು ವರುಷಗಳ ಹಿಂದೆಯೇ ತಲೆವಸ್ತ್ರವನ್ನು ವಿವಾದ ಮಾಡಿ ಮುನ್ನೆಲೆಗೆ ತರಲಾಗಿದ್ದರೂ ಅದು ವ್ಯಾಪಕತೆ ಪಡೆದುಕೊಂಡಿರಲಿಲ್ಲ. ಜನರು ಸ್ಥಳೀಯವಾಗಿಯೇ ಸರಿಯಾದ ರೀತಿಯಲ್ಲಿ ಅಂತಹ ವಿವಾದವನ್ನು ತಣ್ಣಗಾಗಿಸಿದ್ದರು. ಉಡುಪಿಯದಕ್ಕಿಂತಲೂ ಕೆಲವೇ ದಿನಗಳ ಮೊದಲು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪದವಿ ಕಾಲೇಜಿನಲ್ಲಿ ಸಂಘಪರಿವಾರ ಇದೇ ವಿವಾದವನ್ನು ಹುಟ್ಟುಹಾಕಿತ್ತು. ಆದರೆ ಅಲ್ಲಿನ ಪ್ರಾಂಶುಪಾಲರು, ವಿದ್ಯಾರ್ಥಿಗಳ ಪೋಷಕರುಗಳು ಹಾಗೂ ಸ್ಥಳೀಯ ಮುಖಂಡರುಗಳು ಸೇರಿ ಅದು ವಿವಾದವಲ್ಲ. ಹೆಣ್ಣು ಮಕ್ಕಳು ತಲೆಗೆ ಬಟ್ಟೆ ಹಾಕಿಕೊಳ್ಳುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ, ಅದನ್ನು ವಿರೋಧಿಸಿ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎನ್ನುವುದು ಸರಿಯಲ್ಲ ಎಂದು ತೀರ್ಮಾನಿಸಿ ಬೆಳೆಯಲು ಬಿಟ್ಟಿರಲಿಲ್ಲ. ಅದು ಜವಾಬ್ದಾರಿ ಇರುವವರು ಮಾಡಬೇಕಾಗಿದ್ದ ಅತ್ಯಗತ್ಯ ಕಾರ್ಯವಾಗಿತ್ತು. ಆದರೆ ಉಡುಪಿಯಲ್ಲಿ ಅಂತಹ ಕೆಲಸವನ್ನು ಯಾರೂ ಮಾಡದೇ ವಿವಾದವಾಗಿಸಿ ಹರಡಲು ನಿಂತುಬಿಟ್ಟರು.

ಸಂಘಪರಿವಾರ ವಿದ್ಯಾರ್ಥಿ ಸಮೂಹವನ್ನು; ಅದರಲ್ಲೂ ದಲಿತ, ಹಿಂದುಳಿದ ಹಿನ್ನೆಲೆಯವರನ್ನು ಹೇಗಾದರೂ ಇದರಡಿ ತೊಡಗಿಸಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಹಾಗೂ ಆ ಇಡೀ ಸಮುದಾಯವನ್ನೇ ಗುರಿಮಾಡಿ ಕೋಮುದ್ವೇಷದ ಕಾರ್ಕೋಟಕ ವಿಷದಡಿ ಮುಳುಗಿಸಲು ತಮ್ಮ ಎಲ್ಲಾ ಶಕ್ತಿ ಹಾಗೂ ಪ್ರಯತ್ನಗಳನ್ನು ಮುಂದುವರೆಸುತ್ತಾ ಹೋಯಿತು. ತಮ್ಮದೇ ಸರ್ಕಾರವನ್ನು ಕೂಡ ಚೆನ್ನಾಗಿ ಬಳಸಿಕೊಂಡಿತು.


                     


 

ಇದನ್ನು ಬೆಳಸುವಲ್ಲಿ, ಹರಡುವಲ್ಲಿ ಧಾರ್ಮಿಕ ಮೂಲಭೂತವಾದಿ ಹಾಗೂ ಪುರುಷಾಧಿಪತ್ಯಪರ ಶಕ್ತಿಗಳೂ ಕೂಡ ತಮ್ಮ ಕೊಡುಗೆ ನೀಡಿರುವುದನ್ನು ಅಗತ್ಯವಾಗಿ ಗಮನಿಸಲೇಬೇಕಿದೆ. ಮುಸ್ಲಿಂ ಧಾರ್ಮಿಕ ಮುಖಂಡರುಗಳೆನಿಸಿಕೊಂಡವರು ಮಹಿಳೆಯರು ತಲೆ ವಸ್ತ್ರ ತೊಡುವುದು ತಮ್ಮ ಧರ್ಮದ ಕಡ್ಡಾಯ ವಸ್ತ್ರ ಧಾರಣೆ… ತಮ್ಮ ಧಾರ್ಮಿಕ ಗ್ರಂಥದಲ್ಲೇ ಅದನ್ನು ಹೇಳಲಾಗಿದೆ… ಅದು ತಮ್ಮ ಧಾರ್ಮಿಕ ಹಕ್ಕು… ಎಂದೆಲ್ಲಾ ಹೇಳಿಕೆ ಕೊಡಲಾರಂಭಿಸಿದರು. ಅದನ್ನು ಬೆಂಬಲಿಸುವವರ ಒಂದಷ್ಟು ದನಿಗಳೂ ಸೇರಿಕೊಂಡವು, ತಲೆವಸ್ತ್ರಗಳಿಗೆ ಅವಕಾಶ ಇಲ್ಲದಿದ್ದರೆ ಹೆಣ್ಣು ಮಕ್ಕಳು ಶಿಕ್ಷಣವನ್ನೇ ನಿರಾಕರಿಸಿ ಶಿಕ್ಷಣ  ಸಂಸ್ಥೆಗಳಿಂದಲೇ ಹೊರನಡೆಯಬೇಕು ಎಂಬಂತಹ ಸಾಂದರ್ಭಿಕ ಪ್ರಜ್ಞೆಯಿಲ್ಲದ ಅತಿರೇಕದ ನಡೆಗಳನ್ನು ಈ ಶಕ್ತಿಗಳು ನಡೆಸಿದವು. ಮತೀಯ ಪರವಾದ ಕೆಲವು ಸಂಘಟನೆಗಳೂ ಅದೇ ದನಿಯಲ್ಲಿ ಕೆಲಸ ಮಾಡತೊಡಗಿದವು. ಅಲ್ಲಿ ಆ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಬಗೆಗಿನ ಕಾಳಜಿ, ಹೆಣ್ಣು ಮಕ್ಕಳ ಮತ್ತು ಅವರ ಶಿಕ್ಷಣದ ಹಕ್ಕುಗಳ ಕಾಳಜಿ, ಅವರ ಮುಂದಿನ ಭವಿಷ್ಯದ ಕಾಳಜಿಗಳಿಗಿಂತಲೂ ಧಾರ್ಮಿಕ ಕಟ್ಟುಪಾಡುಗಳು, ಅವನ್ನು ಮಹಿಳೆಯರ ಮೇಲೆ ಹೇರುವ ಆಸಕ್ತಿಗಳೇ ಮುಖ್ಯವಾಗಿ ಬಹಿರಂಗವಾಗಿ ಪ್ರದರ್ಶಿತವಾಗಿದ್ದವು. ಅಲ್ಲಿಗೆ ಸಂಘಪರಿವಾರ ತಲೆವಸ್ತ್ರ ವಿಚಾರವನ್ನು ಬಳಸಿಕೊಂಡು ಮಾಡಬಯಸಿದ ಪರಿಣಾಮ ಸುಲಭವಾಯಿತು. ಇವನ್ನೆಲ್ಲಾ ಬಳಸಿಕೊಂಡು ಸಂಘಪರಿವಾರ ಮತ್ತು ಸರ್ಕಾರ ತನ್ನ ಶಿಕ್ಷಣ ಯಂತ್ರಾಂಗದ ಮೂಲಕ ಚಾಣಾಕ್ಷ ನಡೆಗಳನ್ನು ನಡೆಸಿತು.

ಜಗತ್ತಿನ ಹಲವಾರು ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹಿಜಾಬ್ (ತಲೆ ಬಟ್ಟೆ) ಧರಿಸುವುದು ಧಾರ್ಮಿಕವಾಗಿ ಕಡ್ಡಾಯವಾಗಿಲ್ಲ. ಹಿಜಾಬ್ ಧಾರ್ಮಿಕತೆಗಿಂತಲೂ ಸಾಂಸ್ಕೃತಿಕ ವಿಚಾರ ಎಂದೂ ಕೂಡ ಕಾಣಲಾಗುತ್ತಿದೆ.  ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳಲ್ಲೂ ಹಿಜಾಬ್ ಧಾರ್ಮಿಕ ಕಡ್ಡಾಯದ ವಿಚಾರವಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸುವಂತಿಲ್ಲ ಎಂಬ ಕಾನೂನುಗಳು ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿವೆ.

ನಮ್ಮ ದೇಶದಲ್ಲಿ ಸಾರ್ವಜನಿಕ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಏಕಪಕ್ಷೀಯವಾಗಿ ಬ್ರಾಹ್ಮಣಶಾಹಿ ಮೌಲ್ಯಗಳನ್ನು ಎತ್ತಿಹಿಡಿಯುವ ಪೂಜೆ, ಹೋಮ ಹವನಗಳನ್ನು, ಪ್ರಾರ್ಥನೆಗಳನ್ನು ಮೊದಲಿನಿಂದಲೂ ನಡೆಸುತ್ತಾ ಬರಲಾಗುತ್ತಿದೆ. ಧಾರ್ಮಿಕ ಸಂಕೇತಗಳನ್ನು ತೊಟ್ಟು ಸಾರ್ವಜನಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ನಮ್ಮ ದೇಶದಲ್ಲಿ ಸಾಮಾನ್ಯ ವಿಚಾರವಾಗಿದೆ. ಇದು ಸಂವಿಧಾನಬಾಹಿರವಾಗಿದ್ದರೂ ಆಳುವ ಸರ್ಕಾರಗಳೆಲ್ಲವೂ ಇದಕ್ಕೆ ಅವಕಾಶ ಹಾಗೂ ಆಸ್ಪದಗಳನ್ನು, ಪ್ರೋತ್ಸಾಹಗಳನ್ನು ಕೊಡುತ್ತಾ ಬಂದಿವೆ. ಹೀಗಿರುವಾಗ ಈಗ ಕೇವಲ ಹುಡುಗಿಯರು ತೊಡುವ ತಲೆಬಟ್ಟೆಯ ನೆಪ ಹಿಡಿದು ಅವರನ್ನು ಶಾಲಾಕಾಲೇಜುಗಳಿಂದಲೇ ಹೊರಹಾಕುವುದು ಎಷ್ಟು ಅಮಾನವೀಯವಾದ ಕೃತ್ಯ ಎಂಬ ಬಗ್ಗೆ ಕನಿಷ್ಟ ನಾಚಿಕೆಯಾದರೂ ಬೇಡವೇ.

ತಲೆ ಬಟ್ಟೆಯ ವಿಚಾರವನ್ನು ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. ನ್ಯಾಯಾಲಯ ಮದ್ಯಂತರ ಆದೇಶವೊಂದನ್ನು ಹೊರಡಿಸಿ ಉಡುಪಿಯ ಸಂಬಂಧಿತ ಶಿಕ್ಷಣ ಸಂಸ್ಥೆಯಲ್ಲಿ ಮುಂದಿನ ಆದೇಶದವರೆಗೂ ತಲೆವಸ್ತ್ರಕ್ಕಾಗಲೀ ಕೇಸರಿ ಶಾಲಿಗಾಗಲಿ ಅವಕಾಶವಿಲ್ಲ ಎಂದಿತು. ಆದರೆ ಸರ್ಕಾರಿ ಯಂತ್ರಾಂಗ ಮತ್ತು ಸಂಘಪರಿವಾರದ ಮೂಲಕ ಆ ಮದ್ಯಂತರ ಆದೇಶವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೂ ಅನ್ವಯವಾಗುವಂತೆ ಪ್ರತ್ಯಕ್ಷ ಮತ್ತು ಪರೋಕ್ಷ ವಿದಾನಗಳಿಂದ ಜಾರಿ ಮಾಡಲಾರಂಭಿಸಲಾಯಿತು. ವಿದ್ಯಾರ್ಥಿನಿಯರ ಪ್ರತಿಭಟನೆ ಧರಣಿಗಳು ನಡೆಯತೊಡಗಿದವು.  ವಿದ್ಯುನ್ಮಾನ ಹಾಗೂ ಇನ್ನಿತರ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಿ ಒಂದಿಡೀ ಸಮುದಾಯವನ್ನು ದೂರೀಕರಿಸುವ, ಅಪರಾಧೀಕರಿಸಿ ಗುರಿಮಾಡುವ, ಇತರರಿಂದ ಬೇರ್ಪಡಿಸುವ ಕಾರ್ಯಗಳು ಬಿರುಸಾಗಿ ನಡೆಸಲಾಯಿತು. ಒಂದು ಕಾಲೇಜಿನ ತಲೆವಸ್ತ್ರದ ವಿಚಾರ ಇಡೀ ರಾಜ್ಯ ವ್ಯಾಪಿಸುವಂತೆ ಮಾಡಲಾಯಿತು. ವಿನಾಶಕಾರಿ ಕೋಮುವಿಷದ ಜ್ವಾಲೆಗೆ ಜನರನ್ನು ಬಲಿಕೊಡುವ ಪ್ರಯತ್ನದ ಭಾಗವಾಗಿಸಲಾಯಿತು.

 ನ್ಯಾಯಾಲಯ ತನ್ನ ವಿಚಾರಣೆಯನ್ನು ತಲೆವಸ್ತ್ರ ಧಾರ್ಮಿಕ ಅವಶ್ಯಕತೆ ಹೌದೋ ಅಲ್ಲವೋ ಎನ್ನುವುದರ ಮೇಲೆ ಕೇಂದ್ರೀಕರಿಸಿತು. ತಿಂಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠ ತಲೆವಸ್ತ್ರ ಧಾರ್ಮಿಕ ಅವಶ್ಯಕತೆಯಾಗಿಲ್ಲ, ಸರ್ಕಾರ ಇಲ್ಲವೇ ಸಂಬಂದಿತ ಶಿಕ್ಷಣಸಂಸ್ಥೆಗಳು, ಇಲ್ಲವೇ ಶಾಲಾಭಿವೃದ್ದಿ ಸಮಿತಿಗಳು ನಿರ್ದರಿಸುವ ಸಮವಸ್ತ್ರ ಅಂಗೀಕರಿಸಿ ಅನುಸರಿಸಬೇಕು ಎಂಬಂತಹ ತೀರ್ಪು ನೀಡಿತು.

ತಲೆ ವಸ್ತ್ರದ ನೆಪದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವುದು ಸರಿಯೇ ಎಂಬ ಮೂಲಭೂತ ಪ್ರಶ್ನೆಯ ಬಗ್ಗೆ ನ್ಯಾಯಾಲಯ ಗಮನ ಕೊಡಲಿಲ್ಲ, ಇಲ್ಲವೇ ಗಮನ ಕೊಡದಂತೆ ಪ್ರಕರಣವನ್ನು ನಿರ್ವಹಿಸಿ ಅನುಕೂಲಿತ ತೀರ್ಪು ಹೊರಬರುವಂತೆ ಮಾಡಲಾಯಿತು. ಕೊರೋನಾ ನೆಪದಲ್ಲಿ ಮಕ್ಕಳ ಶಿಕ್ಷಣದ ಅವಕಾಶಕ್ಕೆ ಆದ ಹಾನಿಯ ಬೆನ್ನಲ್ಲೇ ತಲೆವಸ್ತ್ರದ ಹೆಸರಿನಲ್ಲಿಇಂತಹ ಬೆಳವಣಿಗೆಯಾಗುವಂತೆ ಮಾಡಿ ಅದಕ್ಕೆ ಧಾರ್ಮಿಕ ಅಲ್ಪಸಂಖ‍್ಯಾತ ಹಿನ್ನೆಲೆಯ ಹೆಣ್ಣುಮಕ್ಕಳನ್ನು ಗುರಿಮಾಡಿ ಅವರ ಶಿಕ್ಷಣದ ಹಕ್ಕನ್ನೇ ಕಸಿಯಲಾಗಿದೆ.

ನಮ್ಮ ದೇಶದ ಜನರ ತಲಾದಾಯವಾಗಲೀ, ಜೀವನ ಮಟ್ಟವಾಗಲೀ, ಜನರ ಕೊಳ್ಳುವ ಶಕ್ತಿಯಾಗಲೀ, ಉದ್ಯೋಗಾವಕಾಶಗಳಾಗಲೀ, ಉತ್ಪಾದನಾ ವಲಯವಾಗಲೀ, ಕೈಗಾರಿಕಾ ವಲಯವಾಗಲೀ ಬೆಳವಣಿಗೆ ಕಾಣದೇ ದಿನೇದಿನೇ ತೀವ್ರವಾಗಿ ಕುಸಿಯುತ್ತಾ ಹೋಗುತ್ತಿರುವ ಸಂದರ್ಭ ಇದಾಗಿದೆ. ಜನಸಾಮಾನ್ಯರ ಬದುಕಿನ ಮೂಲಭೂತ ಹಕ್ಕುಗಳಿಗೆ ಅವಕಾಶವಿಲ್ಲದಂತೆ ಮಾಡಿಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಇತ್ಯಾದಿ ನೀತಿಗಳ ಹೆಸರಿನಡಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಜನಸಾಮಾನ್ಯರಿಂದ ಸಂಪೂರ್ಣವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇಡೀ ಶಿಕ್ಷಣರಂಗವನ್ನೇ ಸಂಪೂರ್ಣವಾಗಿ ಭಾರಿ ಕಾರ್ಪೋರೇಟುಗಳ ದಂಧೆಯಾಗಿಸಲಾಗಿಸುತ್ತಿದೆ. ಭಾರಿ ಕಾರ್ಪೋರೇಟುಗಳ ಶಿಕ್ಷಣದ ಕಂಪನಿಗಳು ಆರಂಭವಾಗತೊಡಗಿವೆ. ಜನಸಾಮಾನ್ಯರ ಮೂಲಭೂತ ಹಕ್ಕಾದ ಸಾರ್ವಜನಿಕ ಶಿಕ್ಷಣ ಹೋಗಿ ಶಿಕ್ಷಣೋದ್ಯಮ ಎಂದು ಗುರುತಿಸಲು ಶುರುವಾಗಿದೆ.


                 


 

ಇಂಡಿಯಾದಂತಹ ಅಸಮಾನತೆ, ಬಡತನ, ಶೋಷಣೆ, ಮನುಷ್ಯತ್ವಕ್ಕೇ ಹೇಸಿಗೆಯೆನಿಸುವಷ್ಟು ಜಾತಿ ಹಾಗೂ ವರ್ಗ ತಾರತಮ್ಯಗಳನ್ನು ಕಾಪಾಡುತ್ತಾ ಮತ್ತು ಹೆಚ್ಚಿಸುತ್ತಾ ಬರುತ್ತಿರುವ ದೇಶವೊಂದರಲ್ಲಿ ವಿದ್ಯಾರ್ಥಿಗಳಲ್ಲಿ ಸಮಾನತೆಯ ಚಿಂತನೆಗಳನ್ನು ಬೆಳಸಲು ಸಮವಸ್ತ್ರಗಳನ್ನು ನಿಗದಿಪಡಿಸಲಾಗುತ್ತಿದೆ ಹಾಗಾಗಿ ಅದನ್ನು ಪ್ರತಿಯೊಬ್ಬರೂ ಪಾಲಿಸುವುದು ಅಗತ್ಯ ಎಂಬ ಪ್ರತಿಪಾದನೆಯೇ ಭಾರಿ ಹಾಸ್ಯಾಸ್ಪದ ವಿಚಾರ. ಮಾತ್ರವಲ್ಲ, ಅತ್ಯಂತ ನಾಚಿಗೆಗೇಡಿನ ವಿಚಾರ ಎನ್ನುವುದನ್ನು ಮೊದಲು ಗ್ರಹಿಸಬೇಕಿದೆ. ದೇಶದ ಜನಸಾಮಾನ್ಯರ ಬದುಕಿನ ಮಟ್ಟವನ್ನು ಹೆಚ್ಚಿಸುವಲ್ಲಿ, ಸಾಮಾಜಿಕ ಅಂತರವನ್ನು ನಿವಾರಿಸುವಲ್ಲಿ ಯಾವುದೇ ಮೂಲಭೂತ ಪರಿಣಾಮಕಾರಿ ಕಾರ್ಯ ನಿರ್ವಹಿಸದೇ ಅದಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಾ ಬರಲಾಗುತ್ತಿದೆ. ಜನಸಾಮಾನ್ಯರನ್ನು ಮತ್ತಷ್ಟು ಅಧೋಗತಿಗೆ ನೂಕಲಾಗುತ್ತಿದೆ. ಜಾತಿ ದೌರ್ಜನ್ಯಗಳು, ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆ ಇನ್ನಿತರ ದೌರ್ಜನ್ಯಗಳು ಪ್ರತಿ ಕ್ಷಣ ಹಾಗೂ ಪ್ರತಿದಿನವೂ ಹೆಚ್ಚುತ್ತಾ ಸಾಗುತ್ತಿರುವ ವರದಿಗಳು ಬರುತ್ತಲೇ ಇವೆ.

 ಇವನ್ನೆಲ್ಲಾ ಮರೆಮಾಚಿ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲು ಆಳುವ ಶಕ್ತಿಗಳು ಸಮವಸ್ತ್ರ ಇತ್ಯಾದಿ ಸೋಗಲಾಡಿ ಕಾರ್ಯಗಳನ್ನು ಇಟ್ಟುಕೊಂಡು ಅದರ ಸಮರ್ಥನೆಗೆ ಕಪಟ ಹಾಗೂ ವಿತಂಡವಾದಗಳನ್ನು ಮುಂದಿಡುತ್ತಿರುವುದು ನಡೆಯುತ್ತಿದೆ. ಶಾಲಾಭಿವೃದ್ದಿ ಸಮಿತಿಗಳಲ್ಲಿ ಆಡಳಿತ ಪಕ್ಷದ ಶಾಸಕರು, ಸ್ಥಳೀಯ ರಾಜಕೀಯ ಪುಡಾರಿಗಳು ಸೇರುವುದು ಸಾಮಾನ್ಯ ವಿಚಾರ ತಾನೇ. ಅಂತಹ ಸಮಿತಿಗಳ ಕೈಗೆ ವಸ್ತ್ರಸಂಹಿತೆ ಹೇರುವ ಅಧಿಕಾರ ಸಿಕ್ಕರೆ ಆಗುವ ಪರಿಣಾಮಗಳ ಬಗ್ಗೆ ನ್ಯಾಯಾಲಯ ಗಮನ ಹರಿಸಿದಂತೆ ಕಾಣುತ್ತಿಲ್ಲ. ಅಲ್ಲದೇ ಸಮವಸ್ತ್ರ ಹೇರಿಕೆ ಎನ್ನುವುದು ದೊಡ್ಡ ಹಗರಣಗಳ ಕಾಳದಂಧೆಯಾಗಿ ಮಾರ್ಪಟ್ಟಿರುವ ವಿಚಾರ ಕೂಡ ನಮ್ಮ ಮುಂದೆಯೇ ಇದೆ.

ನಮ್ಮ ದೇಶದ ವಸ್ತು ಸ್ಥಿತಿಯೇ ಹೀಗಿರುವಾಗ ನಿಗದಿತ ಸಮವಸ್ತ್ರ ಮಾತ್ರ ಹಾಕಿಕೊಳ್ಳಬೇಕು, ತಲೆವಸ್ತ್ರ ಹಾಕಲೇಬಾರದು ಹಾಕಿಕೊಂಡರೆ ಶಿಕ್ಷಣಕ್ಕೆ ಅವಕಾಶವಿಲ್ಲ, ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂಬಂತೆ ಸರ್ಕಾರ ಮತ್ತು ಮತ್ತಿತರ ಅಂಗಗಳು ವರ್ತಿಸುವುದು ಜವಾಬ್ದಾರಿಯುತವಾಗಲು ಸಾಧ್ಯವೇ?.

 ಇಂತಹ ನಡೆಗಳು ಮುಂದಿನ ದಿನಗಳಲ್ಲಿ ಇಡೀ ಸಾಮಾಜಿಕ ವ್ಯವಸ್ಥೆಯೇ ಸಂಪೂರ್ಣವಾಗಿ ದಿಕ್ಕೆಡಲು, ಸಾಮಾಜಿಕ ಅಶಾಂತಿ ಹಾಗೂ ಜನಸಾಮಾನ್ಯರ ಬದುಕಿನ ಅಭದ್ರತೆಗಳು ಮತ್ತಷ್ಟು ಹೆಚ್ಚಲು ಕಾರಣವಾಗಬಹುದು ಎಂಬ ಸಾಮಾನ್ಯ ಗ್ರಹಿಕೆಗಳ ಕೊರತೆ ಸಾಕಷ್ಟು ಕಾಣುತ್ತಿದೆ. ಇಂತಹ ಮಾದರಿಗಳನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಹಾಗೂ ಸಾಂಧರ್ಭಿಕ ಲಾಭಗಳಿಗಾಗಿ ಪಟ್ಟಭದ್ರ ಶಕ್ತಿಗಳು ಸಮಾಜದ ಬಹುಸಂಖ್ಯಾತ ಜನಸಮೂಹದ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಸಾಧ್ಯತೆಗಳು ಈಗ ಮತ್ತಷ್ಟು ಹೆಚ್ಚಾದಂತಾಗಿದೆ. ತಲೆವಸ್ತ್ರ ಇತ್ಯಾದಿ ವಿವಾದವನ್ನು ಬಳಸಿಕೊಂಡು ವಿದ್ಯಾರ್ಥಿಯುವಜನರು ಹಾಗೂ ಇನ್ನಿತರರ ಗಮನವನ್ನು ಅವರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುವ ಉದ್ದೇಶವೂ ಇದರ ಹಿಂದಿದೆ.

ನಾಡಿನ ಎಲ್ಲಾ ಧಾರ್ಮಿಕ, ಜಾತಿ, ಸಮೂಹಗಳ ಜನಸಾಮಾನ್ಯರು ಎಚ್ಚರಗೊಂಡು ಬ್ರಾಹ್ಮಣಶಾಹಿ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳು ಹಾಗೂ ಅದಕ್ಕೆ ಪೂರಕವಾಗಿ ವರ್ತಿಸುವ ಮತೀಯ ಮೂಲಭೂತವಾದಿ ಶಕ್ತಿಗಳನ್ನು ಪಕ್ಕಕ್ಕಿಟ್ಟು ಸಂಘಟಿತ ಪ್ರಯತ್ನ ಮಾಡದೇ ಇಂತಹ ಗಂಭೀರ ಬಿಕ್ಕಟ್ಟುಗಳಿಗೆ ಪರಿಹಾರ ಸಿಗುವುದಿಲ್ಲ.

20/03/2022                                        

 



Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...