Skip to main content

ಚಾರಿತ್ರಿಕ ರೈತಾಪಿ ಚಳವಳಿಗೆ ಹತ್ತು ತಿಂಗಳು/ peasant movement of India/lessons

 

ಚಾರಿತ್ರಿಕ ರೈತಾಪಿ ಚಳವಳಿಗೆ ಹತ್ತು ತಿಂಗಳು

ಚಾರಿತ್ರಿಕ ರೈತ ಚಳವಳಿ ದೇಶಕ್ಕೆ ಹೇಳುತ್ತಿರುವ ಪಾಠಗಳು

                                               - ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು

ಮಿಂಚಂಚೆ:-nandakumarnandana67@gmail.com



 

ದೇಶವಷ್ಟೇ ಅಲ್ಲದೇ ಜಾಗತಿಕವಾಗಿಯೇ ಭಾರಿ ಸಂಚಲನವನ್ನು ಸೃಷ್ಟಿಸುತ್ತಿರುವ ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಮದ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಹರಡಿ ಹಾಗೇನೆ ದೇಶಾದ್ಯಂತ ನಡೆಯುತ್ತಿರುವ ರೈತ ಚಳವಳಿಗೆ ಈಗ ಹತ್ತು ತಿಂಗಳು. ಇದು ಸಾಮಾನ್ಯವಾದ ವಿಚಾರವಲ್ಲ. ಆಳುವ ಸರ್ಕಾರದ ಅಂಗಗಳ ಎಡೆಬಿಡದ ಕಿರುಕುಳಗಳು, ಅಡ್ಡಿಗಳು, ಒಡೆದು ಹಾಕುವ ದುಷ್ಟತನಗಳು ಮತ್ತು ದಮನಗಳ ನಡುವೆ ಇಷ್ಟೊಂದು ಸುದೀರ್ಘವಾಗಿ ಮತ್ತು ನಿರಂತರವಾಗಿ ಜನಚಳವಳಿಯೊಂದು ನಡೆಯುತ್ತಾ ಬಂದಿರೋದು ಮಹತ್ವಪೂರ್ಣ ಚಾರಿತ್ರಿಕ ವಿಚಾರವಾಗಿದೆ. ಈ ಚಳವಳಿಯ ನಾಯಕತ್ವ ದೇಶಾದ್ಯಂತ ಸಂಚರಿಸುತ್ತಾ ರೈತಾಪಿಗಳು ಮತ್ತಿತರ ಜನಸಮೂಹಗಳನ್ನು ಸಂಘಟಿಸುತ್ತಾ ಸಾಗುತ್ತಿದೆ. ಕರ್ನಾಟಕಕ್ಕೂ ಬಂದು ರಾಜ್ಯದ ಹಲವಾರು ಕಡೆಗಳಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯ ವಿಚಾರಗಳನ್ನು ತಲುಪಿಸಿದೆ.


 

 

ದೇಶದ ಆಳುವ ಶಕ್ತಿಗಳು ಬ್ರಿಟೀಷರ ನಂತರದ ಎಪ್ಪತ್ತ ಮೂರು ವರುಷಗಳು ಮತ್ತು ಜಾಗತೀಕರಣದ ಮೂವತ್ತು ವರುಷಗಳಲ್ಲಿ ದೇಶದ ಇಡೀ ರೈತಸಮುದಾಯವನ್ನು ತಲುಪಿಸಿರುವ ದುಸ್ಥಿತಿಗಳಿಗೆ ಹಿಡಿದ ಕೈಗನ್ನಡಿಯೂ ಇದಾಗಿದೆ. ಬ್ರಿಟೀಷರು ಬಿಟ್ಟು ಹೋದ ನಂತರದಲ್ಲಿ ಈ ಮಟ್ಟದ, ಇಷ್ಟೊಂದು ವ್ಯಾಪ್ತಿಯ ರೈತಾಪಿ ಚಳವಳಿ ನಡೆದ ಉದಾಹರಣೆ ಇಲ್ಲ. ಬ್ರಿಟೀಷರ ಕಾಲದಲ್ಲೂ ವಿವಿಧ ವರ್ಗ, ಧರ್ಮ, ಜಾತಿಗಳ ಹಿನ್ನೆಲೆಯ ರೈತಾಪಿಗಳು ಒಂದೇ ವೇದಿಕೆಯಡಿ ಒಗ್ಗೂಡುತ್ತಾ ಒಂದೇ ರೀತಿಯ ಹಕ್ಕೊತ್ತಾಯಗಳೊಂದಿಗೆ ಹಲವಾರು ಹೊಸ ಹೊಸ ಕ್ರಿಯಾಶೀಲತೆಗಳೊಂದಿಗೆ ನಿರಂತರವಾಗಿ ಈ ಮಟ್ಟದಲ್ಲಿ ಸುದೀರ್ಘವಾದ ಚಳವಳಿ ನಡೆಸಿದ ಉದಾಹರಣೆಯೂ ಇಲ್ಲ. ಬಿಡಿಬಿಡಿ ಹೋರಾಟಗಳು, ಬಿಡಿಬಿಡಿ ಹಕ್ಕೊತ್ತಾಯಗಳೊಂದಿಗೆ ನಡೆಯುತ್ತಿದ್ದವು ಅಷ್ಟೇ. ಅವುಗಳ ನಿರಂತರತೆಯೂ ಅಲ್ಪಾವಧಿಯಾಗಿದ್ದವು.


ಈಗ ನಡೆಯುತ್ತಿರುವ ರೈತಾಪಿ ಹೋರಾಟದ ಸಾಮೂಹಿಕ ನಾಯಕತ್ವ ಸ್ಪಷ್ಟ ರಾಜಕೀಯ ಹಾಗೂ ವೈಚಾರಿಕ ಗ್ರಹಿಕೆಯೊಂದಿಗೆ ಉನ್ನತ ಮಟ್ಟದ ಪ್ರಜಾತಾಂತ್ರಿಕತೆಯನ್ನು ಸಾಧಿಸುತ್ತಾ ದೇಶದ ರೈತಾಪಿ ಇನ್ನಿತರ ಎಲ್ಲಾ ಜನಪರ ಹಾಗೂ ದೇಶಪರ ಶಕ್ತಿಗಳನ್ನು ಒಳಗೊಳ್ಳುವ ಮತ್ತು ಒಳಗೊಳಿಸಿಕೊಳ್ಳುವ ಕಾರ್ಯಮಾಡುತ್ತಾ ಮುಂದೆ ಸಾಗುತ್ತಿರುವುದರಿಂದಾಗಿ ಇದು ಸಾಧ್ಯವಾಗಿದೆ. ಹಕ್ಕೊತ್ತಾಯಗಳ ಪ್ರಧಾನ ವಿಚಾರಗಳಲ್ಲಿ ಈ ಸಾಮೂಹಿಕ ನಾಯಕತ್ವದ ಚಳವಳಿ ಯಾವುದೇ ರಾಜಿಗೂ ತಯಾರಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೊಟ್ಟಿದೆ. ಇವು ಬಹಳ ಪ್ರಧಾನವಾದ ವಿಚಾರವಾಗಿವೆ. ಜನಚಳವಳಿಗಳು ಕಲಿಯಬೇಕಾದ ಪ್ರಧಾನ ಪಾಠ ಇದಾಗಿದೆ. ಸಾಮೂಹಿಕತೆ ಇಲ್ಲದೇ ಕೇವಲ ವ್ಯಕ್ತಿ, ಗುಂಪು, ಜಾತಿ, ಧರ್ಮ, ಚುನಾವಣಾ ಕೇಂದ್ರಿತವಾಗಿ ಚಳವಳಿ ಉಳಿದರೆ ಅದಕ್ಕೆ ಶಕ್ತಿಯೂ ಇರದು, ಬಹಳ ಕಾಲವೂ ನಿಲ್ಲದು, ಕೊನೆಗದು ಬೇರೆ ದಾರಿ ಇಲ್ಲದೇ ಆಳುವವರ ತೆಕ್ಕೆಗಳಿಗೆ ಹೋಗಿ ಸೇರುತ್ತವೆ, ಸ್ವಾರ್ಥ ಸಾಧಕರ ಸಾಧನವಾಗಿ ಮಾರ್ಪಡುತ್ತದೆ, ಜನರಿಗೆ ಹಾಗೂ ದೇಶಕ್ಕೆ ಎಸಗುವ ದ್ರೋಹವಾಗಿ ಮಾರ್ಪಡುತ್ತವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅಂತಹವುಗಳ ಕೆಟ್ಟ ಫಲಗಳನ್ನು ನಾವುಗಳು ಈಗ ಅನುಭವಿಸುತ್ತಲೂ ಇದ್ದೇವೆ.


ಆದರೆ ಈಗ ನಡೆಯುತ್ತಿರುವ ರೈತಾಪಿ ಚಳವಳಿ ಆಳುವ ಶಕ್ತಿಗಳು ಮತ್ತವರ ರಾಜಕೀಯ ಪಕ್ಷಗಳ ಎಲ್ಲಾ ರೀತಿಯ ಕುತಂತ್ರಗಳನ್ನು ಎದುರಿಸುತ್ತಾ ಅವರ ಬಲೆಯೊಳಗೆ ಬೀಳದೇ ತನ್ನ ಸಂಘಟಿತ ಶಕ್ತಿಯನ್ನು ಹಾಗೂ ಸಂಘಟಿತ ಪ್ರಭಾವವನ್ನು ಅಭಿವೃದ್ಧಿಪಡಿಸುತ್ತಾ ಸಾಗುತ್ತಿದೆ. ಹಾಗಾಗಿ ದೇಶಾದ್ಯಂತ ರೈತಾಪಿಗಳನ್ನು ಮತ್ತು ಇತರ ಸಮುದಾಯಗಳನ್ನು ಹಾಗೇನೆ ಸಮಾಜಮುಖಿ ಜನಜನಸಮೂಹವನ್ನು ಒಗ್ಗೂಡಿಸುತ್ತಾ ಸಾಗುತ್ತಿದೆ. ಇಂದು ಚುನಾಯಿತ ರೂಪದಲ್ಲಿ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಭಾಗವಾಗೇ ದೇಶ ಫ್ಯಾಸಿಸ್ಟ್ ಹಿಡಿತಕ್ಕೆ ಹೋಗತೊಡಗಿದೆ. ಇಂತಹ ಸಂಧರ್ಭದಲ್ಲೂ ಆಳುವ ಶಕ್ತಿಗಳಿಗೆ ಪ್ರಬಲವಾಗಿ ಸೆಡ್ಡು ಹೊಡೆದು ನಿಲ್ಲಬಹುದು ಎಂಬುದನ್ನು ರೈತ ಹೋರಾಟ ತೋರಿಸಿಕೊಡತೊಡಗಿದೆ.

 


 

ಸರಿಯಾದ ಪ್ರಜಾತಾಂತ್ರಿಕ ನೆಲೆಗಟ್ಟಿನ ಮೇಲೆ ನಿಂತಿರುವ ಜಾತಿ, ಧರ್ಮ, ಲಿಂಗಭೇದಗಳನ್ನು ಬದಿಗೊತ್ತಿ ಸಾಮೂಹಿಕ ನಾಯಕತ್ವದಲ್ಲಿ ನಡೆಯುವ ಚಳವಳಿಯೊಂದನ್ನು ಸುಲಭವಾಗಿ ದಮನಿಸಲಾಗದು ಎಂಬ ಪಾಠವನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ. ಲಕ್ಷಾಂತರ ರೈತಾಪಿಗಳನ್ನು ದೇಶದ ರಾಜಧಾನಿಯ ಸುತ್ತ ಅಣಿನೆರೆಸಿ ಬಿಸಿಲು ಮಳೆ ಚಳಿಗೆ ಮೈಯೊಡ್ಡಿ ಹತ್ತು ತಿಂಗಳುಗಳಿಂದ ಧರಣಿ ನಡೆಸುತ್ತಿರೋದು, ಚಳವಳಿಯ ಭಾಗವಾಗಿದ್ದ ಸುಮಾರು 600ರಷ್ಟು ರೈತಾಪಿಗಳು ತಮ್ಮ ಪ್ರಾಣಗಳನ್ನೇ ಕಳೆದುಕೊಳ್ಳಬೇಕಾಗಿ ಬಂದರೂ ಧೃಡವಾಗಿ ಚಳುವಳಿ ಮುಂದೆ ಸಾಗುತ್ತಿರುವುದು, ಹೋರಾಟ ನಿರತ ರೈತಾಪಿಗಳಿಗೆ ಆಹಾರ, ನೀರು, ವೈದ್ಯೋಪಚಾರ, ತಾತ್ಕಾಲಿಕ ಶೆಡ್, ಗ್ರಂಥಾಲಯ, ಹೋರಾಟದ ಸುದ್ಧಿಗಳ ವಿನಿಮಯಕ್ಕಾಗೇ ಪರ್ಯಾಯ ಮಾದ್ಯಮ ವ್ಯವಸ್ಥೆ… ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತಿರುವುದು, ಅಗತ್ಯ ಬೆಂಬಲ ಹಾಗೂ ಸರಬರಾಜನ್ನು ಒದಗಿಸುತ್ತಿರುವ ಹಳ್ಳಿಗಳ ಹಾಗೂ ನಗರ ಪ್ರದೇಶದ ಜನರ ಸಕ್ರಿಯ ಪಾತ್ರಗಳು, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು, ಸಾಮಾಜಿಕ ರಾಜಕೀಯ, ಆರ್ಥಿಕ ಚರ್ಚೆಗಳು, ಸಂವಾದಗಳ ಚಟುವಟಿಕೆಗಳು, ದೇಶದ ನಾನಾ ಭಾಗಗಳಿಂದ ಬಂದು ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು. ಹಾಗೆ ಬಂದ ಎಲ್ಲರಿಗೂ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಿರುವ ಸ್ವಯಂಸೇವಕರುಗಳು, ಜೊತೆಗೆ ಕೃಷಿ ಕೆಲಸಗಳನ್ನೂ ಸಹಕಾರಿ ತತ್ವದಡಿ ಪಾಳಿಗಳಲ್ಲಿ ಎಲ್ಲರೂ ಸೇರಿ ಪೂರೈಸಿ ಹೋರಾಟ ಪ್ರದೇಶದಲ್ಲಿ ಬಂದು ಸೇರುವುದು….ಹೀಗೆ ಈ ಹೋರಾಟ ಕೊಡುತ್ತಿರುವ ಹೊಸಹೊಸ ಕ್ರಿಯಾತ್ಮಕ ವಿಚಾರಗಳು ದೊಡ್ಡ ಅಧ್ಯಯನ ಬಯಸುವ ವಿಷಯವಾಗಿ ಹೊರಹೊಮ್ಮಿದೆ. ಸಮಾಜ ವಿಜ್ಞಾನದ ಮಹತ್ವದ ಪಾಠವಾಗಿವೆ.

 


 

 

ಒಕ್ಕೂಟ ಸರ್ಕಾರ ಜಾಗತೀಕರಣ ಉದಾರೀಕರಣ ಖಾಸಗೀಕರಣ ಒಪ್ಪಂದಗಳ ಭಾಗವಾಗಿ ಜಾರಿಗೆ ತಂದಿರುವ ಕೃಷಿ ಮಸೂದೆಗಳು ಪ್ರಧಾನವಾಗಿ ಈ ದೇಶದ ರೈತಾಪಿಗಳ ಎಲ್ಲಾ ಭೂಮಿಗಳನ್ನು ಭಾರಿ ಅಂತರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳಿಗೆ ಯಾವುದೇ ಅಡೆತಡೆಯಿಲ್ಲದೇ ವರ್ಗಾಯಿಸಲು ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಅದನ್ನು ಸಾಧಿಸಲು ರೈತರಿಗೆ ಜಾಗತಿಕ ಮಾರುಕಟ್ಟೆ, ಕಾರ್ಪೋರೇಟ್ ಗುತ್ತಿಗೆ ಕೃಷಿಯ ಪೂರ್ಣ ಲಾಭ ನೇರವಾಗಿ ರೈತರಿಗೆ, ತಾವು ಬೆಳೆದದ್ದನ್ನುಎಲ್ಲಿ ಬೇಕಾದರೂ ಮಾರುವ ಸ್ವಾತಂತ್ರ್ಯ, ಕೃಷಿ ಉತ್ಪನ್ನ ಮಾರುಕಟ್ಟೆಗಳ (ಎಪಿಎಂಸಿ) ಗಳ ಹಂಗು ತೊಡೆಯುವುದು, ಬೆಲೆಯ ಖಾತರಿ ಇತ್ಯಾದಿ ಆಕರ್ಷಕ ಪದಪುಂಜಗಳ ಮೂಲಕ ರೂಪಿಸಿರುವ ಈ ಮಸೂದೆಗಳು ಈಗ ಕೃಷಿ ಭೂಮಿಯ ಬಗ್ಗೆ ಗಮನ ಕೇಂದ್ರೀಕರಿಸಿದ್ದರೂ ವಾಸ್ತವದಲ್ಲಿ ವಸತಿಪ್ರದೇಶಗಳು, ವಾಣಿಜ್ಯ ನಿವೇಶನಗಳು ಸೇರಿದಂತೆ ಈ ದೇಶದ ಎಲ್ಲಾ ಭೂಸಂಪತ್ತಿನ ಮೇಲೆ ಭಾರಿ ಕಾರ್ಪೋರೇಟುಗಳಿಗೆ ಕಾನೂನಾತ್ಮಕವಾಗಿಯೇ ನೇರ ಹಿಡಿತ ಸಾಧಿಸಲು ಅನುವು ಮಾಡಿಕೊಡುವಂತಹವುಗಳಾಗಿವೆ. ದೇಶದ ಎಲ್ಲವನ್ನೂ ಭಾರಿ ಜಾಗತಿಕ ಕಾರ್ಪೋರೇಟುಗಳಿಗೆ ಮುಕ್ತಗೊಳಿಸಿ ಇಟ್ಟುಬಿಡುವ ಅಂತಿಮ ಹಂತದ ಜಾಗತೀಕರಣ ಪ್ರಕ್ರಿಯೆಗಳ ಭಾಗವಾಗಿವೆ.


 

ಇದರಲ್ಲಿ ಭೂಮಿ ಕಳೆದುಕೊಳ್ಳುವವರು ಕೇವಲ ಬಡ, ಮದ್ಯಮ ಹಾಗೂ ಶ್ರೀಮಂತ ರೈತರು ಮಾತ್ರವಲ್ಲ ಭಾರಿ ಭೂಮಾಲಿಕರುಗಳೂ ಕೂಡ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಭಾರಿ ಕಾರ್ಪೋರೇಟುಗಳು ದೇಶದ ಎಲ್ಲಾ ಭೂಮಿಯ ಮೇಲೆ ಹಿಡಿತ ಹೊಂದುತ್ತಾರೆ. ಯಾಕೆಂದರೆ ಕೃಷಿ ಭೂಮಿಗಳಿಗೆ ಇದುವರೆಗೂ ಇದ್ದ ಕಾನೂನಾತ್ಮಕ ರಕ್ಷಣೆಗಳನ್ನೇ ರದ್ದುಪಡಿಸುವ ಮಸೂದೆಗಳಾಗಿವೆ ಇವು. ಜೊತೆಗೆ ಕೃಷಿ ಉತ್ಪನ್ನಗಳ ಸಣ್ಣ ಮದ್ಯಮ ಮತ್ತು ದೊಡ್ಡ ವ್ಯಾಪಾರಸ್ಥರಿಗೂ ಈ ಮಸೂದೆಗಳು ಕಂಟಕವಾಗಿವೆ. ಅವರ ವ್ಯವಹಾರಗಳು ಸಂಪೂರ್ಣವಾಗಿ ನಿಂತುಹೋಗಿ ಭಾರಿ ಕಾರ್ಪೋರೇಟುಗಳ ದೊಡ್ಡ ದೊಡ್ಡ ಸೂಪರ್ ಮಾರುಕಟ್ಟೆ, ಮಾಲ್ ಗಳ ಕೈಯಲ್ಲಿ ಆ ಎಲ್ಲಾ ವ್ಯಾಪಾರ ವಹಿವಾಟುಗಳು ಕೇಂದ್ರೀಕೃತಗೊಳ್ಳುವಂತೆ ಮಾಡುತ್ತವೆ. ಇದು ಬಿತ್ತನೆ ಬೀಜ, ಕೃಷಿ ಸಲಕರಣೆಗಳ ವಿಚಾರದಲ್ಲೂ ನಡೆಯುತ್ತದೆ.


ಕೃಷಿ ಉತ್ಪನ್ನ ಮಾರುಕಟ್ಟೆಗಳು, ಕೃಷಿ ಸಹಕಾರ ಸಂಘಗಳು, ಭೂ ಸಹಕಾರ ಬ್ಯಾಂಕುಗಳು ಒಂದಾ ತಾವಾಗಿಯೇ ಮುಚ್ಚಿಹೋಗುವ ಸ್ಥಿತಿ ಬರುತ್ತದೆ. ಇಲ್ಲವೆಂದರೆ ಭಾರಿ ಕಾರ್ಪೋರೇಟುಗಳ ತೆಕ್ಕೆಗೆ ಬೀಳುತ್ತವೆ. ಕೃಷಿ ಕ್ಷೇತ್ರದ ಮೇಲೆ ಈ ಮಟ್ಟದಲ್ಲಿ ನಡೆಯುತ್ತಿರುವ ಧಾಳಿಗಳ ಪರಿಣಾಮವಾಗಿ ರೈತಾಪಿಗಳು ತಮ್ಮ ತಮ್ಮ ಸಹಕಾರಿಗಳನ್ನು ಕಟ್ಟಿಕೊಂಡು ಸಂಘಟಿತ ಮಾರುಕಟ್ಟೆ ವಲಯಗಳನ್ನು ತಾವಾಗಿಯೇ ಕಟ್ಟಿಕೊಳ್ಳುವ ಸಾಧ್ಯತೆಗಳಿರುವುದನ್ನು ಗ್ರಹಿಸಿಯೇ ರಾಜ್ಯ ಸರ್ಕಾರಗಳ ಭಾಗವಾಗಿದ್ದ ಸಹಕಾರಿ ರಂಗದ ಮೇಲೂ ಈಗ ಒಕ್ಕೂಟ ಸರ್ಕಾರ ತನ್ನ ಹಿಡಿತ ಸಾಧಿಸಲು ತೊಡಗಿದೆ. ಆ ಮೂಲಕ ಸಹಕಾರಿ ವಲಯವನ್ನೂ ಕೂಡ ಭಾರಿ ಕಾರ್ಪೋರೇಟುಗಳಿಗೆ ಅನುಕೂಲವಾಗುವಂತೆ ರೂಪಿಸಲು ಹೊರಟಿದೆ. ಒಕ್ಕೂಟ ಸರ್ಕಾರ ಈಗ ಅದಕ್ಕಾಗಿಯೇ ಇದುವರೆಗೂ ಇಲ್ಲದ ಸಹಕಾರಿ ಖಾತೆಯನ್ನು ಸೃಷ್ಟಿಸಿ ದೇಶದ ಗೃಹ ಮಂತ್ರಿಗೆ ಅದರ ಜವಾಬ್ದಾರಿಯನ್ನು ಒಪ್ಪಿಸಿದೆ.

 ಪರೋಕ್ಷವಾಗಿ ಹಾಗೂ ನೇರವಾಗಿ ಅರಣ್ಯ ಭೂಮಿಗಳನ್ನೂ ಕೂಡ ಕಾರ್ಪೋರೇಟುಗಳಿಗೆ ವಹಿಸಿಕೊಡುವ ಕೆಲಸಗಳು ಹಾಗೂ ಅದಕ್ಕೆ ಬೇಕಾದ ಕಾನೂನು ಮಾರ್ಪಾಡುಗಳು ಆಗುತ್ತಿವೆ. ಅರಣ್ಯ ಬೆಳೆಸುವುದು, ನಿರ್ವಹಣೆ ಮಾಡುವುದು ಹಾಗೂ ಪರಿಸರ ರಕ್ಷಣೆ, ಪ್ರವಾಸೋದ್ದಿಮೆಯ ಕಾರ್ಯವನ್ನು ಖಾಸಗಿಯವರಿಗೆ ವಹಿಸುವ ನೀತಿಗಳನ್ನು ಈಗಾಗಲೇ ರೂಪಿಸಿ ಜಾರಿಗೊಳಿಸಲಾಗಿದೆ. ಖಾಸಗಿಯವರಿಗೆ ಎಂದಾಗ ಇಂದಿನ ಸಂಧರ್ಭದಲ್ಲಿ ಭಾರಿ ಜಾಗತಿಕ ಕಾರ್ಪೋರೇಟುಗಳಿಗೆ ಎಂದೇ ಗ್ರಹಿಸಬೇಕು. ಪಶ್ಚಿಮ ಘಟ್ಟ ರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿಯ ಪ್ರಧಾನಾಂಶ ಕೂಡ ಇದಾಗಿದೆ. ಹಾಗಾಗಿ ಯಾರು ಎಷ್ಟು ಬೇಕಾದರೂ ಯಾವುದೇ ಬಗೆಯ ಭೂಮಿಯನ್ನು ನೇರವಾಗಿ ಖರೀದಿಸಿಕೊಳ್ಳುವ ಮುಕ್ತ ಅವಕಾಶಗಳಿಗೆ ಈ ಕೃಷಿ ಮಸೂದೆಗಳು ದಾರಿಮಾಡಿಕೊಡುತ್ತವೆ. ಹಾಗೆ ಖರೀದಿಸಲಿಕ್ಕೆ ಈಗ ಸಾಧ್ಯವಾಗುವುದು ಕೇವಲ ಭಾರಿ ಕಾರ್ಪೋರೇಟುಗಳಿಗೆ ಮಾತ್ರ ಎಂಬ ಸತ್ಯವನ್ನು ಬಿಡಿಸಿಹೇಳಬೇಕಾದ ಅವಶ್ಯಕತೆ ಇಲ್ಲವೆನಿಸುತ್ತದೆ. ಲಾಭದಾಯಕ ಕೃಷಿಗಾಗಿ ‘ಕಾರ್ಪೋರೇಟ್ ಫಾರ್ಮಿಂಗ್’ ಎಂಬ ಪರಿಕಲ್ಪನೆಯ ಮುಖ್ಯಾಂಶ ಕೂಡ ಇದೇ ಆಗಿದೆ.


ನಮ್ಮ ದೇಶದ ರೈತಾಪಿಗಳಲ್ಲಿ ಶೇಕಡಾ 85ಕ್ಕೂ ಹೆಚ್ಚು ಭಾಗ ಎರಡು ಹೆಕ್ಟೇರುಗಳಿಗಿಂತಲೂ ಕಡಿಮೆ ಭೂಹಿಡುವಳಿ ಇರುವ ಸಣ್ಣ ರೈತರಾಗಿದ್ದಾರೆ. ಇವರುಗಳ ಕೈಯಲ್ಲಿ ದೇಶದ ಶೇಕಡಾ 53 ರಷ್ಟು ಕೃಷಿಭೂಮಿ ಇದೆ. ಉಳಿದ ಶೇಕಡಾ 47ರಷ್ಟು ಕೃಷಿ ಭೂಮಿಯು ಶೇಕಡಾ 15ರಷ್ಟಿರುವ ದೊಡ್ಡ ಭೂಮಾಲಿಕರು ಹಾಗೂ ಶ್ರೀಮಂತ ರೈತರು ಹಾಗೂ ಮದ್ಯಮ ರೈತರ ಬಳಿ ಇದೆ. ಈ ಅಂಕಿ ಅಂಶಗಳಲ್ಲಿ ಪ್ರದೇಶವಾರು ವ್ಯತ್ಯಾಸಗಳು ಕೂಡ ಇವೆಯಾದರೂ ದೇಶದ ಒಟ್ಟು ಭೂ ಹಿಡುವಳಿ ಹೊಂದಿರುವವರ ಸರಾಸರಿ ಪ್ರಮಾಣದ ಅಂದಾಜು ಇದಾಗಿದೆ. ಕೃಷಿ ಕಾಯಿದೆಗಳು ಈ ಎಲ್ಲಾ ರೈತಾಪಿಗಳ ಭೂಮಿಯನ್ನು ಕಾರ್ಪೋರೇಟ್ ಫಾರ್ಮಿಂಗ್, ಗುತ್ತಿಗೆ ಕೃಷಿ, ಇಂಟೆನ್ಸೀವ್ ಫಾರ್ಮಿಂಗ್ ಇತ್ಯಾದಿ ಹೆಸರುಗಳಲ್ಲಿ ಯಾವುದೇ ತಡೆಯಿಲ್ಲದೇ ಭಾರಿ ಕಾರ್ಪೋರೇಟುಗಳು ಸುಲಭವಾಗಿ ವಶಪಡಿಸಿಕೊಳ್ಳುತ್ತವೆ. ಈಗಾಗಲೇ ದೇಶದ ಒಂದು ದೊಡ್ಡ ಪ್ರಮಾಣದ ಭೂಮಿ ಹತ್ತು ಹಲವು ನೆಪಗಳ ಮೂಲಕ ಭಾರಿ ಕಾರ್ಪೋರೇಟು ವಶಕ್ಕೆ ಹೋಗಿದೆ.

ಅಷ್ಟೇ ಅಲ್ಲದೇ ಕೃಷಿ ಉತ್ಪನ್ನಗಳನ್ನು ಪಾನ್ ಕಾರ್ಡ್ ಹೊಂದಿರುವ ಯಾರು ಬೇಕಾದರೂ ಎಷ್ಟು ಬೇಕಾದರೂ ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬುದು ಕೂಡ ಕೃಷಿ ಕಾಯಿದೆಗಳ ಭಾಗವಾಗಿದೆ. ಅದಕ್ಕೆ ಪೂರಕವಾಗಿ ಅಗತ್ಯ ವಸ್ತುಗಳ ಪಟ್ಟಿಯಿಂದ ಅಗತ್ಯ ಆಹಾರ ಧಾನ್ಯಗಳೂ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳನ್ನು ಹೊರಗಿರಿಸುವ ಕೆಲಸವನ್ನು ಈಗಿನ ಸರ್ಕಾರ ಮಾಡಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಸರ್ಕಾರದ ಯಾವುದೇ ನಿಯಂತ್ರಣಗಳು ಇಲ್ಲದಂತಾಗುತ್ತದೆ. ಇದರಿಂದಾಗಿ ಭಾರಿ ಕಾರ್ಪೋರೇಟುಗಳು ಆಹಾರ ಧಾನ್ಯಗಳ ಲಭ್ಯತೆ ಹಾಗೂ ಅವುಗಳ ಬೆಲೆಗಳನ್ನು ನಿರ್ಧರಿಸುವಂತಾಗುತ್ತದೆಯೇ ಹೊರತು ರೈತರಿಗಾಗಲೀ ದೇಶದ ಜನಸಾಮಾನ್ಯರಿಗಾಗಲೀ ಯಾವುದೇ ಲಾಭ ಇರುವುದಿಲ್ಲ. ಬದಲಿಗೆ ಆಹಾರದ ಅಲಭ್ಯತೆ ಹಾಗೂ ವಿಪರೀತ ಬೆಲೆಯೇರಿಕೆಗಳು ಸಹಜವೆನ್ನುವ ಸ್ಥಿತಿಯಾಗುತ್ತದೆ. ಇದುವರೆಗೂ ಇದ್ದ ಪಡಿತರ ವ್ಯವಸ್ಥೆಯೇ ಸಹಜವಾಗಿ ರದ್ದಾಗಿ ಬಿಡುವುದರಲ್ಲಿ ಅನುಮಾನ ಬೇಕಿಲ್ಲ. ಅಂದರೆ ಕೃಷಿ ಮಸೂದೆಗಳು ಕೇವಲ ರೈತರಿಗೆ ಮಾತ್ರ ಸಂಬಂಧಿಸಿದ್ದಾಗಿರದೇ ದೇಶದ ಇಡೀ ಜನಸಮೂಹವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾರಿ ಸಂಕಷ್ಟಕ್ಕೆ ದೂಡುತ್ತದೆ ಎನ್ನುವುದನ್ನು ಗ್ರಹಿಸಬೇಕಾಗಿದೆ.


ಈಗಾಗಲೇ ಅಡುಗೆ ಅನಿಲವನ್ನು ಬ್ಯಾಂಕ್ ಖಾತೆಗಳಿಗೆ ನೇರ ಸಬ್ಸಿಡಿ ಎಂಬ ಆಕರ್ಷಕವಾದ ನಯವಂಚಕ ಮಾರ್ಗಗಳ ಮೂಲಕ ಮುಕ್ತಗೊಳಿಸಿದ್ದರ ಪರಿಣಾಮ ಬೆಲೆಯ ಹೆಚ್ಚಳದ ಬಿಸಿ ತಡೆಯಲಾರದಂತಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆಯನ್ನೂ ಕೂಡ ಹೆಚ್ಚೂ ಕಡಿಮೆ ಮುಕ್ತಗೊಳಿಸಿದಂತಾಗಿದೆ. ಅದರ ಬೆಲೆಯೇರಿಕೆಯ ಬಿಸಿಯೂ ಏರುತ್ತಲೇ ಇದೆ. ಇದಕೆ ಕೇಂದ್ರೀಯ ತೆರಿಗೆ ಹಾಗೂ ಕೇಂದ್ರೀಯ ಸೆಸ್ ನ ಕಾರಣ ಈಗ ಮೇಲ್ನೋಟಕ್ಕೆ ಕಾಣುತ್ತಿದ್ದರೂ ಅವುಗಳು ಈ ಎಲ್ಲಾ ಕ್ಷೇತ್ರಗಳನ್ನು ಪೂರ್ಣವಾಗಿ ಭಾರಿ ಕಾರ್ಪೋರೇಟುಗಳಿಗೆ ಹಸ್ತಾಂತರಮಾಡುವ ಪ್ರಕ್ರಿಯೆಗಳ ಭಾಗವಾಗಿವೆ. ಇದರ ಭಾಗವಾಗಿಯೇ ಮೋದಿ ಸರ್ಕಾರ ಸಾರ್ವಜನಿಕ ವಲಯಗಳನ್ನು ನಗದೀಕರಿಸಿ ಆರುಲಕ್ಷ ಕೋಟಿ ರೂಪಾಯಿಗಳನ್ನುಸಂಗ್ರಹಿಸಿ ಸರ್ಕಾರಿ ಖಜಾನೆಗೆ ಸೇರಿಸಿ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಿರುವುದು. ಆದರೆ ಅಭಿವೃದ್ಧಿ ಯಾರದಾಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವ ಬಹಿರಂಗ ಸತ್ಯ ತಾನೇ.

ಇಂತಹ ಸ್ಥಿತಿಯಲ್ಲಿ ದೇಶದ ಜನಸಾಮಾನ್ಯರು, ವಿದ್ಯಾರ್ಥಿ ಯುವಜನರು ನಡೆಯುತ್ತಿರುವ ರೈತ ಚಳವಳಿಯ ಪಾಠಗಳನ್ನು ತಮ್ಮದಾಗಿಸಿಕೊಳ್ಳಬೇಕಾದ ಅಗತ್ಯ ಬಹಳ ಇದೆ.

27/09/2021                                         .

 

 

 


 

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...