Skip to main content

'ಲವ್ ಮತ್ತು ನಾರ್ಕೋಟಿಕ್ಸ್ ಜಿಹಾದ್’ ನ ಹಿಂದೆ ಮುಂದೆ #ಕೇರಳ ಕ್ರಿಶ್ಚಿಯನ್# 'love and narcotics jihad'# kerala bishop joseph kallarangatt

 

ಕೇರಳ ಕ್ರಿಶ್ಚಿಯನ್ ಧಾರ್ಮಿಕ ಮುಖಂಡತ್ವ ಪ್ರತಿಪಾದನೆಯ ‘ಲವ್ ಮತ್ತು ನಾರ್ಕೋಟಿಕ್ಸ್ ಜೆಹಾದ್’ ನ ಹಿಂದೆ ಮುಂದೆ…

                                                            -ನಂದಕುಮಾರ್. ಕೆ. ಎನ್ ಕುಂಬ್ರಿ ಉಬ್ಬು

 


ಮಿಂಚಂಚೆ: nandakumarnandana67@gmail.com

ಇಂಡಿಯಾದಲ್ಲಿ ‘ಲವ್ ಜಿಹಾದ್’ ಪದದ ಆವಿಷ್ಕಾರ ಮಾಡಿದ್ದು ಸಂಘಪರಿವಾರ. ನಂತರ ನ್ಯಾಯಾಲಯದಲ್ಲಿ ಅಂತಹ ಪದವಾಗಲೀ, ಅಂತಹ ಪರಿಕಲ್ಪನೆಯಾಗಲೀ ತಮ್ಮ ಸರ್ಕಾರಕ್ಕೆ ಇಲ್ಲವೆಂದು ಪ್ರಮಾಣಪತ್ರ ಸಲ್ಲಿಸಿದ್ದು ಕೂಡ ಸಂಘ ಪರಿವಾರದ ಬಿಜೆಪಿ ಪಕ್ಷದ ಸರಕಾರವೇ ಆಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಕೋಮುದ್ರುವೀಕರಣ ಮಾಡಿ ಗರಿಷ್ಟ ರಾಜಕೀಯ ಲಾಭ ಪಡೆಯುವ ಎಲ್ಲಾ ಹುನ್ನಾರಗಳನ್ನು ಸಂಘಪರಿವಾರ ಮತ್ತದರ ನಾಯಕರುಗಳು ಮಾಡುತ್ತಾ ಬರುತ್ತಿರುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದರ ಮಧ್ಯೆಯೇ ಲವ್ ಜಿಹಾದ್ ಎಂದು ಆರೋಪಿಸಿದ ಕೇರಳದ ಹನ್ನೊಂದು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದ  ಕೂಡ ತನಿಖೆ ಮಾಡಿ ಲವ್ ಜಿಹಾದ್ ನಡೆಯುತ್ತಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿ ಆಗಿದೆ.   

 

                            

                      ಪಾಲಾದ ಬಿಷಪ್ ಮಾರ್ ಜೋಸೆಫ್ ಕಲ್ಲರಂಗಟ್ಟ್

ಇದೀಗ ಸೆಪ್ಟಂಬರ್ 6ರಂದು ಮದ್ಯಕೇರಳದ ಕೋಟ್ಟಯಂ ಜಿಲ್ಲೆಯ ಪಾಲದ ಸೈರೋ ಮಲಬಾರ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಬಿಷಪ್ ಆಗಿರುವ ಮಾರ್ ಜೋಸೆಫ್ ಕಲ್ಲರಂಗಟ್ಟ್ ‘ಲವ್ ಜಿಹಾದ್‘ ಜೊತೆಗೆ ‘ನಾರ್ಕೋಟಿಕ್ಸ್ ಜೆಹಾದ್’ ಎಂಬ ಪದವನ್ನು ಸೇರಿಸಿ ಮುಸ್ಲಿಂ ಅಲ್ಪಸಂಖ್ಯಾತರನ್ನು ನೇರವಾಗಿ ಗುರಿ ಮಾಡಿದ್ದಾರೆ.  ಅದೇ ಜಿಲ್ಲೆಯ ಕುರುವಿಲಾಂಗಾಡಿಯ ಮಾರ್ಥ ಮರಿಯಂ ಚರ್ಚ್ ನಲ್ಲಿ ತಮ್ಮ ಧಾರ್ಮಿಕ ಪ್ರವಚನದ ಸಂಧರ್ಭದಲ್ಲಿ ತಮ್ಮ ಸಮುದಾಯದ ಮಹಿಳೆಯರನ್ನು ಪ್ರೇಮ ಹಾಗೂ ಮಾದಕ ಮದ್ದುಗಳ ಆಮಿಷವೊಡ್ಡಿ ಮತಾಂತರ ಮಾಡುವ ಸಂಚುಗಳು ನಡೆಯುತ್ತಾ ಬಂದಿವೆ. ಮುಸ್ಲಿಂ ಭಯೋತ್ಪಾದನೆಯ ಭಾಗವಾಗಿ ಇದನ್ನು ಕೇರಳದಲ್ಲಿ ನಡೆಸಲಾಗುತ್ತಿದೆ. ಕೇರಳದಲ್ಲಿ ಶಸ್ತ್ರಗಳ ಮೂಲಕ ಇವುಗಳನ್ನು ನಡೆಸಲು ಸಾಧ್ಯವಿಲ್ಲವಾದುದರಿಂದ ಲವ್ ಜೆಹಾದ್ ಹಾಗೂ ನಾರ್ಕೋಟಿಕ್ ಜೆಹಾದ್ ಮೂಲಕ ನಡೆಸಲಾಗುತ್ತಿದೆ. ಈ ಬಗ್ಗೆ ತಂದೆ ತಾಯಿಗಳು ಹಾಗೂ ಪೋಷಕರು ಜಾಗೃತರಾಗಬೇಕು ಎಂದೆಲ್ಲಾ ಕರೆಯನ್ನೂ ಕೊಟ್ಟರು. ಅವರು ಮೊದಲೇ ಬರೆದು ತಯಾರಿಸಿಕೊಂಡು ಬಂದಿದ್ದ ಪ್ರವಚನವನ್ನು ಸುಮಾರು ಮುಕ್ಕಾಲು ಗಂಟೆಗಳ ಸಮಯ ತೆಗೆದುಕೊಂಡು ಈ ಸಭೆಯಲ್ಲಿ ಮಂಡಿಸಿದರು. ಅವರ ಮಾತುಗಳನ್ನು ಪುಷ್ಟೀಕರಿಸುವ ಯಾವುದೇ ಆಧಾರಗಳನ್ನು ತಮ್ಮ ಪ್ರವಚನದಲ್ಲಿ ಎಲ್ಲಿಯೂ ಅವರು ಮುಂದಿಡಲಿಲ್ಲ. ಬಿಷಪ್ ರ ಈ ಧಾರ್ಮಿಕ ಧ್ವೇಷದ ಮಾತುಗಳನ್ನು ವಿರೋಧಿಸಿದ ಕೆಲವು ಕ್ರೈಸ್ತ ಸನ್ಯಾಸಿನಿಯರು ಕೂಡಲೇ ಆ ಸಭೆಯಿಂದ ಎದ್ದು ಹೊರನಡೆದರಲ್ಲದೇ ತಮ್ಮ ಹೇಳಿಕೆಗಳನ್ನೂ ನೀಡಿದರು.

            ಬಿಷಪ್ ಜೋಸೆಫ್ ರ ಈ ನಡೆ ಭಾರಿ ವಿವಾದವನ್ನೂ ಹುಟ್ಟುಹಾಕಿದೆ. ಕೊರೋನಾ ನಿಫಾ ಬಿಕ್ಕಟ್ಟುಗಳ ನಡುವೆ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿ ಬಿಷಪ್ ಭಾರಿ ವಿರೋಧವನ್ನೂ ಎದುರಿಸಬೇಕಾಗಿ ಬಂದಿದೆ. ಇದರ ಮಧ್ಯೆಯೇ ಬಿಷಪ್ ರ ಈ ನಡೆಗಳನ್ನು ಕೇರಳ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ ಕೂಡ ಬೆಂಬಲಿಸಿದೆ. ರಾಜ್ಯದ ಬಿಜೆಪಿ ಪಕ್ಷ ಕೂಡ ಬಿಷಪ್ ರ ಬೆಂಬಲಕ್ಕೆ ನಿಂತಿದೆ. ಕೇರಳದ ಮೇಲ್ಜಾತಿ ಬಲಾಢ್ಯ ನಾಯರ್ ಸಮುದಾಯದ ಸಂಘಟನೆ ನಾಯರ್ ಸರ್ವೀಸ್ ಸೋಸೈಟಿ ಬಿಷಪ್ ರ ನಿಲುವನ್ನು ಸಮರ್ಥಿಸಿ ಹೇಳಿಕೆ ನೀಡಿದೆ. ಆದರೆ ಕ್ಯಾಥೋಲಿಕ್ ಸಮುದಾಯವೂ ಸೇರಿದಂತೆ ಕೇರಳದ ಬಹುಸಂಖ‍್ಯಾತರು ಬಿಷಪ್ ರ ನಡೆಗಳನ್ನು ಬೆಂಬಲಿಸಿಲ್ಲ. ಅಷ್ಟೇ ಅಲ್ಲದೇ ಇವರುಗಳ ಹಲವಾರು ಚರ್ಚ್ ಗಳೂ ಕೂಡ ಬಿಷಪ್ ರ ನಡೆಗಳನ್ನು ಸಮರ್ಥಿಸಿಲ್ಲ.

ಬಿಜೆಪಿ ಮತ್ತು ಕೇರಳ ಕಾಂಗ್ರೆಸ್ ನ ಕೆಲವು ನಾಯಕರು, ಕೇರಳ ಜನ ಪಕ್ಷಂ ನ ಪಿ ಸಿ ಜಾರ್ಜ್ ಹೊರತುಪಡಿಸಿ ಇತರ ಯಾವುದೇ ರಾಜಕೀಯ ಪಕ್ಷಗಳು ಬಿಷಪ್ ರ ನಡೆಗಳನ್ನು ಒಪ್ಪಿಲ್ಲ. ಮಾಣಿ ಮರಣದ ನಂತರ ಕೇರಳ ಕಾಂಗ್ರೆಸ್ ಈಗ ಒಡೆದ ಬಣಗಳಾಗಿದೆ. ಕೆಲವು ರಾಜಕೀಯ ಪಕ್ಷಗಳು ಬಿಷಪ್ ಆಡಿದ ಮಾತುಗಳಿಗೆ ಯಾವುದೇ ವಾಸ್ತವತೆ ಇಲ್ಲ, ಅಲ್ಲದೇ ಧಾರ್ಮಿಕ ನೇತಾರರು ಮಾತನಾಡುವಾಗ ಬಹಳ ಜಾಗರೂಕತೆ ವಹಿಸಬೇಕು, ಸಮುದಾಯಗಳನ್ನು ಪರಸ್ಪರ ಎದುರು ಬದುರಾಗಿ ನಿಲ್ಲಿಸಿ ಸಾಮಾಜಿಕ ಅಶಾಂತಿಗೆ ಕಾರಣ ಕರ್ತರಾಗಬಾರದು ಎಂದು ವಿರೋಧಿಸಿವೆ. ಪಿಣರಾಯಿ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರ ಜಾಣ ನಡೆಗಳನ್ನು ನಡೆಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಷಪ್ ಯಾವುದೇ ಸಮುದಾಯವನ್ನು ಗುರಿಮಾಡಿ ತಮ್ಮ ಮಾತುಗಳನ್ನು ಆಡಿಲ್ಲ. ಸಾಮಾನ್ಯ ಅರ್ಥದಲ್ಲಿ ತಂದೆತಾಯಿಗಳಿಗೆ ಹಾಗೂ ಪೋಷಕರಿಗೆ ಜಾಗೃತಿಗಾಗಿ ಹೇಳಿದ್ದಾರೆ, ಧಾರ್ಮಿಕ ಮುಖಂಡರುಗಳು ಎಚ್ಚರಿಕೆಯಿಂದ ಮಾತುಗಳನ್ನು ಆಡಬೇಕಾದ ಅಗತ್ಯವಿದೆ, ಇದುವರೆಗೂ ನಾರ್ಕೋಟಿಕ್ಸ್ ಜಿಹಾದ್ ಎಂಬ ಶಬ್ದ ಕೇಳಿಲ್ಲ ನಾರ್ಕೋಟಿಕ್ಸ್ ಮಾಫಿಯಾ ಶಬ್ದ ಕೇಳಿದ್ದೆ, ನಾರ್ಕೋಟಿಕ್ಸ್ ಜೊತೆಗೆ ಧರ್ಮವನ್ನು ಸೇರಿಸಿ ನೋಡಬಾರದು ಎಂದೆಲ್ಲಾ ಹೇಳಿ ತಮ್ಮ ಓಟು ಬ್ಯಾಂಕ್ ಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಬಿಷಪ್ ರ ವಿರುದ್ದ ರಾಜ್ಯದಾದ್ಯಂತ ಹಲವಾರು ಪ್ರತಿಭಟನೆಗಳು ನಡೆದಿವೆ. ಬಿಷಪ್ ರನ್ನು ಸಮರ್ಥಿಸುವ ಪ್ರದರ್ಶನವೂ ನಡೆದಿದೆ.

ಬಿಷಪ್ ವಿರುದ್ಧ ಧಾರ್ಮಿಕ ದ್ವೇಷದ ಪ್ರಕರಣ ಕೂಡ ದಾಖಲಿಸಲಾಗಿದೆ. ಆದರೆ ಆ ದೂರಿನ ಬಗ್ಗೆ ಯಾವುದೇ ತನಿಖೆಯನ್ನು ಇದುವರೆಗೆ ಸರಕಾರ ಆದೇಶಿಸಿಲ್ಲ. ಕ್ಲಬ್ ಹೌಸ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಬಿಷಪ್ ರ ನಿಲುವುಗಳನ್ನು ವಿರೋಧಿಸಿ ಚರ್ಚೆಗಳು ನಡೆಯುತ್ತಿವೆ. ಆ ಚರ್ಚೆಗಳು ಹತ್ತಾರು ಗಂಟೆಗಳವರೆಗೂ ವಿಸ್ತರಿಸುತ್ತಾ ನಡೆಯುತ್ತಿವೆ. ಈ ಮದ್ಯೆ ಬಿಷಪ್ ಮಾರ್ ಜೋಸೆಫ್ ಕಲ್ಲರಂಗಾಡ್ ರ ಹೇಳಿಕೆ ಯಾವುದೇ ಸಮುದಾಯವನ್ನು ಉದ್ದೇಶಿಸಿ ಅಲ್ಲ ಕೇವಲ ದುರುದ್ದೇಶ ಇಟ್ಟುಕೊಂಡು ದುಷ್ಕೃತ್ಯಗಳನ್ನು ನಡೆಸುವವರ ಬಗ್ಗೆ ತಂದೆತಾಯಿಗಳು ಹಾಗೂ ಪೋಷಕರು ಜಾಗೃತೆ ವಹಿಸಬೇಕೆಂದು ತಿಳಿಸುವ ಕಾರ್ಯ ಮಾತ್ರ ಅವರ ಉದ್ದೇಶವಾಗಿತ್ತು ಎಂದು ಪಾಲಾ ಡಯೋಸಿಸ್ ಚರ್ಚ್ ವಿವರಣೆ ನೀಡಿದೆ.

( ಆಸಕ್ತರು ಬಿಷಪ್ ರ ಮಲಯಾಳಂ ಭಾಷೆಯಲ್ಲಿರುವ ಮಾತುಗಳನ್ನು ನೇರವಾಗಿ ಈ ಕೆಳಗಿನ ಯೂಟ್ಯೂಬ್ ಕೊಂಡಿಯ ಮೂಲಕ ನೋಡಬಹುದು

https://www.youtube.com/watch?v=SlPWW977iAc )

ಆದರೆ ಈ ವಿವರಣೆಗೂ ಸೈರೋ ಮಲಬಾರ್ ಕ್ಯಾಥೋಲಿಕ್ ಬಿಷಪ್ ಮತ್ತಿತರ ಧಾರ್ಮಿಕ ಮುಖ್ಯಸ್ಥರುಗಳು ಮಾಡುತ್ತಿರುವ ನಡೆಗಳಿಗೂ ತಾಳೆಯಾಗುತ್ತಿಲ್ಲ. ಪಾಲಾ ಬಿಷಪ್ ತಮ್ಮ ಮಾತುಗಳನ್ನು ಆಕಸ್ಮಿಕವಾಗಿಯೋ ಕಾಕತಾಳೀಯವಾಗಿಯೋ ಆಡಿದ್ದಲ್ಲ ಎಂಬುದು ವಾಸ್ತವಗಳನ್ನು ಅವಲೋಕಿಸಿದಾಗ ಅರ್ಥವಾಗುವ ವಿಚಾರ. ಇದಕ್ಕೂ ಕೆಲವು ವಾರಗಳ ಮೊದಲು ಈ ಬಿಷಪ್ ತಮ್ಮ ಸಮುದಾಯದ ಜನರಿಗೆ ತಾವು ಪ್ರತಿಪಾದಿಸುತ್ತಿರುವ ಲವ್ ಮತ್ತು ನಾರ್ಕೋಟಿಕ್ ಜಿಹಾದ್ ಗಳನ್ನು ಕುರಿತಾದ ಸುತ್ತೋಲೆಯೊಂದನ್ನು ಕೂಡ ಹೊರಡಿಸಿದ್ದರು. ತಮ್ಮ ಮೇಲ್ಜಾತಿ ಹಿರಿಮೆಗೆ ಪ್ರೇಮ, ಮದುವೆ ಇತ್ಯಾದಿಗಳ ಮೂಲಕ ದಕ್ಕೆಯಾಗುತ್ತಿದೆ ಎಂಬ ಧಾರ್ಮಿಕ ಹಾಗೇನೆ ಜಾತಿ ಶ್ರೇಷ್ಟತೆಯ ವ್ಯಸನ ಕೂಡ ಇದರ ಹಿಂದೆ ಇದೆ. ಈ ಸಮುದಾಯದ ಧಾರ್ಮಿಕ ಮುಖಂಡರುಗಳಲ್ಲಿ ಕೆಲವರು ಹಿಂದೆಯೂ ಈ ರೀತಿಯ ಹೇಳಿಕೆಗಳನ್ನು ಮಾಡಿ ನಂತರ ಹಿಂದ್ಸರಿದ ಉದಾಹರಣೆಗಳು ಕೂಡ ಇವೆ. ಅಲ್ಲದೇ ಸಂಘಪರಿವಾರದ ಜೊತೆಗೆ ಈ ಧಾರ್ಮಿಕ ಮುಖ್ಯಸ್ಥರುಗಳ ಒಡನಾಟವಿರುವುದು ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಇತ್ಯಾದಿಗಳು ಬಹಿರಂಗ ಸತ್ಯವಾಗಿದೆ. ಈ ಹಿಂದೆ ಕೂಡ ಈ ಧಾರ್ಮಿಕ ಮುಖಂಡರುಗಳು ಲವ್ ಜಿಹಾದ್ ಆರೋಪಗಳೊಂದಿಗೆ ಪ್ರಧಾನ ಮಂತ್ರಿ ಮೋದಿಯ ಬಳಿಗೆ ನಿಯೋಗ ಹೋಗಿತ್ತು.

ತಮ್ಮ ಸಮುದಾಯದ ಯುವ ಸಮೂಹವು ಪ್ರೇಮ ವಿವಾಹ, ಅಂತರ್ಜಾತಿ ಹಾಗೂ ಅಂತರ್ ಧರ್ಮ ವಿವಾಹವಾಗುವ, ಸಣ್ಣ ಕುಟುಂಬಕ್ಕೆ ಸೀಮಿತವಾಗುವ, ತಡವಾಗಿ ಮದುವೆಯಾಗುವ, ಒಂದು ಮಗುವಿಗೆ ಸೀಮಿತಗೊಳಿಸುವ ಇತ್ಯಾದಿ ಪ್ರಕ್ರಿಯೆಗಳಿಂದಾಗಿ ತಮ್ಮ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಧಾರ್ಮಿಕ ಮುಖಂಡತ್ವ ಪ್ರತಿಪಾದಿಸುತ್ತಾ ಬರುತ್ತಿದೆ. ಹಾಗಾಗಿ  ಕೇರಳ ಬಿಷಪ್ ಕೌನ್ಸಿಲ್  ಒಂದಕ್ಕಿಂತ ಹೆಚ್ಚು ಇಲ್ಲವೇ ಮೂರು ಮಕ್ಕಳನ್ನು, ಐದು ಮಕ್ಕಳನ್ನು ಹೊಂದುವವರಿಗೆ ವಿಶೇಶ ಪ್ರೋತ್ಸಾಹಗಳನ್ನು ಹಾಗೂ ಆರ್ಥಿಕ ಕೊಡುಗೆಗಳನ್ನು ಅಧೀಕೃತವಾಗಿಯೇ ಘೋಷಿಸಿತ್ತು.

ಸಾಪೇಕ್ಷವಾಗಿ ಹೆಚ್ಚಿನ ರಾಜಕೀಯ ಗ್ರಹಿಕೆ, ಶಿಕ್ಷಣ, ಉದ್ಯೋಗ, ವಿದೇಶವಾಸ ಇತ್ಯಾದಿಗಳಿಂದಾಗಿ ಯುವ ಸಮೂಹ ಈ ಧಾರ್ಮಿಕ ಮುಖಂಡರುಗಳು ಪ್ರತಿಪಾದಿಸುತ್ತಿರುವ ಊಳಿಗಮಾನ್ಯ ಜಾತಿವಾದಿ ಧಾರ್ಮಿಕ ಕಟ್ಟುಪಾಡುಗಳಡಿ ನಿಲ್ಲದೇ ತಮ್ಮದೇ ರೀತಿಯ ಜೀವನ ಹಾಗೂ ನಂಬಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಕೇರಳದ ಎಲ್ಲಾ ಸಮುದಾಯಗಳಲ್ಲೂ ದೇಶದ ಉಳಿದ ಭಾಗಕ್ಕಿಂತ ಹೆಚ್ಚಿದೆ. ಹಾಗಾಗಿ ತಮ್ಮದೇ ಆಯ್ಕೆಯ ಮದುವೆ, ಮಕ್ಕಳ ಸಂಖ್ಯೆಗಳನ್ನು ನಿರ್ದರಿಸುತ್ತಾರೆ. ಹೆಚ್ಚಿನವರು ಸಣ್ಣ ಕುಟುಂಬವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೇವಲ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವ ವಿಚಾರವಲ್ಲ. ಮುಸ್ಲಿಂ ಸಮುದಾಯ, ಹಿಂದು ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುತ್ತಿರುವ ವಿಚಾರವಾಗಿದೆ. ಅಲ್ಲದೇ ದೇಶದ ಇತರೆಡೆಗೆ ಹೋಲಿಸಿದಾಗ ಕೇರಳದಲ್ಲಿ ಅಂತರ್ಜಾತಿ ಮತ್ತು ಅಂತರ್ ಧರ್ಮ ವಿವಾಹಗಳು ಹೆಚ್ಚಾಗಿವೆ. ಇದು ಕೇವಲ ಕ್ರಿಶ್ಚಿಯನ್ ಸಮುದಾಯಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ.

2020ರ ಕೇರಳ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಧಾರ್ಮಿಕ ವಲಸೆ ಹೆಚ್ಚಾಗಿ ಅಂದರೆ ಒಟ್ಟು ಧಾರ್ಮಿಕ ವಲಸೆಯ ಶೇಕಡಾ 47ರಷ್ಟು ಆಗುತ್ತಿರುವುದು ಹಿಂದೂ ಧರ್ಮಕ್ಕೆ ಆಗಿದೆ. ಬದಲಿಗೆ ಮುಸ್ಲಿಂ ಧರ್ಮಕ್ಕೆ ಅಲ್ಲ. ಕ್ರಿಶ್ಚಿಯನ್ ಸಮುದಾಯದಿಂದ ಹಿಂದೂ ಧರ್ಮಕ್ಕೆ ಬಂದವರಲ್ಲಿ ಶೇಕಡಾ 72ರಷ್ಟು ದಲಿತ ಕ್ರಿಶ್ಚಿಯನ್ನರುಗಳೇ ಆಗಿದ್ದಾರೆ. ಸರಕಾರಿ ಸವಲತ್ತು ಇನ್ನಿತರ ಕಾರಣಗಳಿಗಾಗಿ ಇದು ನಡೆಯುತ್ತಿದೆ. ತಮ್ಮ ಧರ್ಮಕ್ಕೆ ವಲಸೆ ಬಂದ ದಲಿತ ಸಮುದಾಯವನ್ನು ಈ ಧಾರ್ಮಿಕ ಮುಖಂಡರುಗಳು ತಮ್ಮ ಮೇಲ್ಜಾತಿ ಮೇಲ್ವರ್ಗದ ದೃಷ್ಠಿಕೋನಗಳಿಂದಲೇ ನೋಡುತ್ತಿರುವುದರ ಪ್ರತಿಫಲವದು. ಆ ಬಗ್ಗೆ ಈ ಬಿಷಪ್ ಇತ್ಯಾದಿ ಧಾರ್ಮಿಕ ಮುಖಂಡರುಗಳ ಕಳವಳ ಎಲ್ಲೂ ಕಾಣುತ್ತಿಲ್ಲ. 2020ರ ಒಂದು ವರುಷದ ಅವಧಿಯಲ್ಲಿ ನಡೆದ ಒಟ್ಟು 506ರಷ್ಟು ಧಾರ್ಮಿಕ ವಲಸೆಗಳಲ್ಲಿ ಕ್ರಿಶ್ಚಿಯನ್ ಸಮುದಾಯದಿಂದ ಹಾಗೂ ಮುಸ್ಲಿಂ ಸಮುದಾಯಗಳಿಂದ ಹಿಂದೂ ಧರ್ಮಕ್ಕೆ ವಲಸೆ ಬಂದವರು 241 ಜನರಾಗಿದ್ದಾರೆ.

ಹಿಂದು ಸಮುದಾಯದಿಂದ ಕ್ರಿಶ್ಚಿಯನ್ ಆಗಿ ನೂರ ಹನ್ನೊಂದು ಜನ ವಲಸೆ ಬಂದಿದ್ದರೆ ಕ್ರಿಶ್ಚಿಯನ್ ಸಮುದಾಯದಿಂದ ಹಿಂದೂ ಆಗಿ 209 ಜನರು ವಲಸೆ ಬಂದಿದ್ದಾರೆ. ಆದರೆ ಮುಸ್ಲಿಂ ಧರ್ಮಕ್ಕೆ 111ಜನರು ವಲಸೆ ಬಂದಿದ್ದಾರೆ. ಆದರೆ ಕ್ರಿಶ್ಚಿಯನ್ ಧರ್ಮದಿಂದ ಕೇವಲ 33ಜನರು ಮಾತ್ರ ಮುಸ್ಲಿಂ ಧರ್ಮಕ್ಕೆ ವಲಸೆ ಬಂದಿದ್ದಾರೆ. ಇಸ್ಲಾಂ ನಿಂದ ಹಿಂದೂ ಆಗಿ 32 ಜನರು ವಲಸೆ ಬಂದಿದ್ದರೆ, ಇಸ್ಲಾಂನಿಂದ ಕ್ರಿಶ್ಚಿಯನ್ ಆಗಿ 8 ಜನರು ವಲಸೆ ಬಂದಿದ್ದಾರೆ.

 

ಕೇರಳದ ಮೂರನೇ ಅತ್ಯಂತ ದೊಡ್ಡ ಸಮುದಾಯವಾದ ಕ್ರಿಶ್ಚಿಯನ್ ಸಮುದಾಯದಲ್ಲಿ ಅತ್ಯಂತ ಹೆಚ್ಚಿರುವ ಜನಸಂಖ್ಯೆ ಅಂದರೆ ಸುಮಾರು ಶೇ 40.2 ರಷ್ಟು ಸೈರೋ ಮಲಬಾರ್ ಕ್ಯಾಥೋಲಿಕ್ ಆಗಿದೆ. ಉಳಿದಂತೆ ಲ್ಯಾಟಿನ್ ಕ್ಯಾಥೋಲಿಕ್ ಶೇ. 13.2, ಮಲಂಕರ ಆರ್ಥೋಡೆಕ್ಸ್ ಶೇ. 8.0, ಸಿರಿಯನ್ ಜಾಕೋಬಿಟ್ ಶೇ. 7.9, ಸೈರೋ ಮಲಂಕರ ಶೇ. 7.6, ಸಿರಿಯನ್ ಮಾರ್ಥೋಮಾ ಶೇ. 6.6, ಸಿ ಎಸ್ ಐ ಶೇ. 4.5, ಪೆಂಟೆಕೋಸ್ಟ್ ಶೇ. 4.3, ದಲಿತ್ ಕ್ರಿಶ್ಚಿಯನ್ ಶೇ. 2.6, ಸಿರಿಯನ್ ಚಾಲಡೀನ್ ಶೇ. 0.43 ರಷ್ಟಿದ್ದಾರೆ. ಈ ಎಲ್ಲಾ ಕ್ರಿಶ್ಚಿಯನ್ ಪಂಗಡಗಳು ಸೇರಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 18.38 ರಷ್ಟು ಇದ್ದಾರೆ.

2018ರ ಒಂದು ಅಂದಾಜಿನ ಪ್ರಕಾರ ಹಿಂದುಗಳಲ್ಲಿ ಜನನ ಪ್ರಮಾಣ ಅವರ ಒಟ್ಟು ಜನಸಂಖ್ಯೆಯ ಶೇ. 41.6 ರಷ್ಟಿದ್ದರೆ, ಮುಸ್ಲಿಮರಲ್ಲಿ ಜನನ ಪ್ರಮಾಣ ಶೇ 43.61 ರಷ್ಟಿದೆ. ಕ್ರಿಶ್ಚಿಯನ್ನರಲ್ಲಿ ಜನನ ಪ್ರಮಾಣ ಶೇ. 14.31 ರಷ್ಟಿದೆ. ಯಾವುದೇ ಧರ್ಮಕ್ಕೆ ಸೇರದವರೆಂದು ಘೋಷಿಸಿಕೊಂಡವರಲ್ಲಿನ ಜನನ ಪ್ರಮಾಣ 0.03 ರಷ್ಟುಇದೆ. ಇತರರದು ಜನನ ಪ್ರಮಾಣ 0.25 ರಷ್ಟು ಇದೆ. ಮುಸ್ಲಿಮರಲ್ಲಿ ಜನನ ಪ್ರಮಾಣ ಕ್ರಮೇಣವಾಗಿ ಇಳಿಕೆಯಾಗುತ್ತಿರುವುದು 2011ರ ಜನಗಣತಿಯ ಅಂಕಿ ಅಂಶಗಳಿಂದಲೂ ಅರ್ಥವಾಗುವ ವಿಚಾರ. 1981ರಲ್ಲಿ ಶೇಕಡಾ 30ರಷ್ಟಿದ್ದ ಮುಸ್ಲಿಮರ ಜನನ ಪ್ರಮಾಣ 2011ರ ವೇಳೆಗೆ ಶೇಕಡಾ 12.84ಕ್ಕೆ ಇಳಿದಿದೆ. 1981 ರಲ್ಲಿ ಒಟ್ಟು ಕ್ರಿಶ್ಚಿಯನ್ನರ ಜನ ಸಂಖ್ಯೆಯ ಶೇ.16.46 ರಷ್ಟು ಇದ್ದ ಜನನ ಪ್ರಮಾಣ 2011ರ ವೇಳೆಗೆ ಶೇ. 1.3 ರಷ್ಟಕ್ಕೆ ಇಳಿದಿದೆ. 1981ರಲ್ಲಿ ಶೇ 19. 24ರಷ್ಟಿದ್ದ ಕೇರಳದ ಒಟ್ಟಾರೆ ಜನಸಂಖ್ಯಾ ಪ್ರಮಾಣದ ಏರಿಕೆ 2011ರ ಜನಗಣತಿಯ ಪ್ರಕಾರ ಶೇಕಡಾ 4.91ರಷ್ಟಕ್ಕೆ ಇಳಿದಿದೆ.

ಈ ಅಂಕಿ ಅಂಶಗಳು ಧಾರ್ಮಿಕ ವಲಸೆಗಳು ಆಯಾ ಸಮುದಾಯಗಳ ಜನಸಂಖ್ಯಾ ಏರಿಕೆಯನ್ನು ನಿರ್ಧರಿಸುತ್ತಿಲ್ಲ ಎಂಬ ವಾಸ್ತವ ಅಂಶವನ್ನು ತೆರೆದಿಡುತ್ತದೆ. ಅಲ್ಲದೆ ಧಾರ್ಮಿಕ ವಲಸೆಗಳಿಗೆ ಜಿಹಾದ್ ಆಗಲಿ, ನಾರ್ಕೋಟಿಕ್ಸ್ ಆಮಿಷಗಳಾಗಲೀ ಕಾರಣವಾಗುತ್ತಿಲ್ಲ ಎಂಬುದೂ ಕೂಡ ಸ್ಪಷ್ಟ. ವಾಸ್ತವ ಸಂಗತಿಗಳು ಹೀಗಿರುವಾಗ ಈ ಕ್ಯಾಥೋಲಿಕ್ ಧಾರ್ಮಿಕ ಮುಖಂಡರುಗಳ ಇಂತಹ ವರಸೆಗಳು ಸಂಘ ಪರಿವಾರದ ಕೋಮುದ್ರುವೀಕರಣದ ಪ್ರಯತ್ನದ ಭಾಗವಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದಕ್ಕೆ ಇಂಬು ಕೊಡುವಂತಹ ಹಲವಾರು ಕಾರ್ಯಗಳನ್ನು ಈ ಧಾರ್ಮಿಕ ಮುಖಂಡತ್ವ ಮಾಡುತ್ತಾ ಬರುತ್ತಿದೆ ಕೂಡ.

ಇದರಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಹಿಡಿತ ಹೆಚ್ಚು ಇರುವುದು ಕ್ಯಾಥೋಲಿಕ್ ಕ್ರಿಶ್ಚಿಯನ್ನರಾಗಿದ್ದಾರೆ. ಇದರಲ್ಲಿ ಸೈರೋ ಮಲಬಾರ್ ಕ್ಯಾಥೋಲಿಕ್, ಲ್ಯಾಟಿನ್ ಕ್ಯಾಥೋಲಿಕ್, ಮಲಂಕರ ಆರ್ಥೋಡೆಕ್ಸ್ ಸೇರಿದ್ದಾರೆ. ಇವರೆಲ್ಲಾ ಸೇರಿದರೆ ಕೇರಳದ ಒಟ್ಟು ಕ್ರಿಶ್ಚಿಯನ್ ಸಮುದಾಯದ ಶೇಕಡಾ ಅರವತ್ತೊಂದಕ್ಕೂ ಹೆಚ್ಚು ಆಗುತ್ತಾರೆ. ಕೇರಳದ ಕ್ಯಾಥೋಲಿಕ್ ಕ್ರಿಶ್ಚಿಯನ್ನರಲ್ಲಿ ಹಲವರು ಹಿಂದಿನ ಮೇಲ್ಜಾತಿಗಳಾದ ನಂಬೂದಿರಿ ಹಾಗೂ ನಾಯರ್ ಮೂಲದವರಾಗಿದ್ದಾರೆ. ತಮಗೆ ಅನುಕೂಲವಾದ ಹಲವು ಕಾರಣಗಳಿಗಾಗಿ ಮತಾಂತರವಾದವರು ಇವರುಗಳಲ್ಲಿ ಹೆಚ್ಚಿನವರು. ಆರ್ಥಿಕವಾಗಿಯೂ ಸಾಕಷ್ಟು ಅನುಕೂಲಸ್ಥರಾಗಿದ್ದು ಸರಕಾರಿ ಅಧಿಕಾರಿ ವಲಯದಲ್ಲೂ ಇವರುಗಳು ಹೆಚ್ಚಿದ್ದಾರೆ. ರಾಜ್ಯದ ಹಲವಾರು ಶೈಕ್ಷಣಿಕ ಸಂಸ್ಥೆಗಳು ಇವರುಗಳ ಹಿಡಿತದಲ್ಲಿವೆ. ಹಾಗಾಗಿ ಮೇಲ್ಜಾತಿ ಮೇಲ್ವರ್ಗದ ದುಷ್ಟ ವ್ಯಸನಗಳೆಲ್ಲಾ ಈ ಧಾರ್ಮಿಕ ಮುಖ್ಯಸ್ಥರುಗಳಲ್ಲಿ ಬಳುವಳಿಯಾಗಿಯೇ ಮುಂದುವರೆಯುತ್ತಿದೆ. ಮಧ್ಯಕೇರಳದಲ್ಲಿ ಇವರುಗಳ ಹಿಡಿತ ಹೆಚ್ಚು ಇದೆ. ಕೇರಳದ ಎರಡು ಪ್ರಭಾವಶಾಲಿ ಜಾತಿ ಸಂಘಟನೆಗಳಾದ ನಾಯರ್ ಸರ್ವೀಸ್ ಸೋಸೈಟಿ, ಈಡಿಗರ ಜಾತಿ ಸಂಘಟನೆಯಾದ ಎಸ್ ಎನ್ ಡಿ ಪಿ (ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಮ್) ಯಂತೆ ಈ ಚರ್ಚ್ ಗಳು ರಾಜ್ಯದ ರಾಜಕೀಯ ಅಧಿಕಾರದ ಮೇಲೂ ತಮ್ಮ ಹಿಡಿತ ಹೊಂದಿವೆ. ಇದುವರೆಗೂ ಕೆ ಎಮ್ ಮಾಣಿಯ ನೇತೃತ್ವದ ಕೇರಳ ಕಾಂಗ್ರೆಸ್ ಗೆ ಈ ಕ್ರಿಶ್ಚಿಯನ್ ಸಮುದಾಯ ಆಶ್ರಯವಾಗಿತ್ತು. ಮಾಣಿ ಸಾವಿನ ನಂತರ ಸೂಕ್ತ ರಾಜಕೀಯ ನಾಯಕ ಈ ಸಮುದಾಯಕ್ಕೆ ಇಲ್ಲದೇ ರಾಜಕೀಯ ಅತಂತ್ರತೆ ಕೂಡ ಅನುಭವಿಸತೊಡಗಿದೆ. ಜೊತೆಗೆ ಧಾರ್ಮಿಕ ಅಲ್ಪ ಸಂಖ‍್ಯಾತರಿಗೆ ಇರುವ ಶೈಕ್ಷಣಿಕ ಸೌಲಭ್ಯಗಳನ್ನು ಮುಸ್ಲಿಂ ಅಲ್ಪ ಸಂಖ‍್ಯಾತ ಸಮುದಾಯದೊಂದಿಗೆ ಜನಸಂಖ‍್ಯಾಧಾರಿತವಾಗಿ 80:20 ರಂತೆ ಹಂಚಿಕೊಡುವ ರಾಜ್ಯ ಸರ್ಕಾರದ ನಿರ್ದಾರ ಕೂಡ ಮುಸ್ಲಿಂ ಸಮುದಾಯದ ವಿರುದ್ಧದ ಇಂತಹ ನಡೆಗಳ ಹಿಂದೆ ಇದೆ ಎನ್ನಲಾಗುತ್ತಿದೆ. ಆದರೆ ಆ ಸರ್ಕಾರಿ ಆದೇಶವನ್ನು ನ್ಯಾಯಾಲಯ ಈಗಾಗಲೇ ತಿರಸ್ಕರಿಸಿದೆ.

ಬಹಳ ಮುಖ್ಯವಾದ ವಿಚಾರವೆಂದರೆ ಕ್ಯಾಥೋಲಿಕ್ ಚರ್ಚ್ ಗಳು ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿವೆ. ಅದರಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ಪ್ರಧಾನವಾಗಿವೆ. ಕೆಲವರು ಬಂಧನಕ್ಕೊಳಗಾಗಿದ್ದಾರೆ. ಎರಡು ವರುಷಗಳ ಹಿಂದೆ ಲ್ಯಾಟಿನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಲ್ಲಕ್ಕಲ್ ಮೇಲೆ ಲೈಂಗಿಕ ಪೀಡನೆ ಮತ್ತು ಅತ್ಯಾಚಾರದ ಗಂಭೀರ ಪ್ರಕರಣ ದಾಖಲಾಗಿ ಆತನ ವಿರುದ್ಧ ಭಾರಿ ಪ್ರತಿಭಟನೆಗಳು ಕೂಡ ನಡೆದರೂ ಈ ಧಾರ್ಮಿಕ ಮುಖಂಡರುಗಳು ಆ ಬಿಷಪ್ ಗೆ ಬೆಂಬಲವಾಗಿ ನಿಂತಿದ್ದು ಬಿಟ್ಟರೆ ಸಂತ್ರಸ್ಥ ಸನ್ಯಾಸಿನಿಯ ಪರವಾಗಿ ನಿಂತಿರಲಿಲ್ಲ. ಬದಲಿಗೆ ಆಕೆಗೆ ಹಾಗೂ ಆಕೆಯ ಪರವಾಗಿ ದನಿಯೆತ್ತಿದ ಇತರ ಸನ್ಯಾಸಿನಿಯರಿಗೆ ಇನ್ನಿಲ್ಲದ ಕಿರುಕುಳಗಳನ್ನು ಈಗಲೂ ಮುಂದುವರೆಸಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಹೀಗೆ ಸುಮಾರು 63ಕ್ಕೂ ಹೆಚ್ಚು ಕೇರಳದ ಕ್ರೈಸ್ತ ಪಾದ್ರಿಗಳು ಹಾಗೂ ಬಿಷಪ್ ಗಳು ಕೊಲೆಗಳು, ಲೈಂಗಿಕ ದೌರ್ಜನ್ಯ, ಸ್ಪೋಟಕ ಹೊಂದುವಿಕೆ, ಮಾನವ ಕಳ್ಳಸಾಗಾಣಿಕೆ, ಅತ್ಯಾಚಾರ, ಆಸ್ತಿ ಲಪಟಾಯಿಸುವಿಕೆಗಳು, ಅಪಹರಣ, ಹಲ್ಲೆ, ವಂಚನೆ, ಅಕ್ರಮ ಹಣ ಸಾಗಾಟ ಇತ್ಯಾದಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದರೆ ದಾಖಲೆಯಾಗದೇ ಉಳಿದ ಪ್ರಕರಣಗಳು ಇದರ ಹತ್ತಾರು ಪಟ್ಟಾದರೂ ಇರಬಹುದು. ಧಾರ್ಮಿಕ ಮುಖಂಡತ್ವ ಬಹುತೇಕವಾಗಿ ಇಂತಹ ಅಪರಾಧಿ ಆರೋಪಗಳಿರುವವರ ಪರವಾಗೇ ನಿಂತಿರುವುದು ಎದ್ದು ಕಾಣುತ್ತದೆ.

ಇವೆಲ್ಲದರಿಂದಾಗಿ ಈ ಧಾರ್ಮಿಕ ಸಂಸ್ಥೆಗಳು ಮತ್ತವುಗಳ ಮುಖ್ಯಸ್ಥರುಗಳು ಜನರ ಅವಗಣನೆಗೆ ಪಾತ್ರವಾಗುವುದು ಹೆಚ್ಚಿದೆ. ಅಲ್ಲದೇ ಕೊರೋನಾ ಮೂಲಕ ಉಂಟು ಮಾಡಿದ ಬಿಕ್ಕಟ್ಟು ಧಾರ್ಮಿಕ ಮುಖ್ಯಸ್ಥರುಗಳು ಹಾಗೂ ಜನರ ನಡುವಿನ ಕಂದಕ ಹಾಗೂ ಬಿಕ್ಕಟ್ಟನ್ನು ಹೆಚ್ಚು ಮಾಡಿದೆ. ಜನರು ಪರ್ಯಾಯ ಪ್ರಾರ್ಥನಾ ಮೂಲಗಳನ್ನು ಹುಡುಕಿಕೊಂಡಿದ್ದಾರೆ. ಈ ಧಾರ್ಮಿಕ ಮುಖಂಡರುಗಳಿಲ್ಲದೆಯೂ ಪ್ರಾರ್ಥನಾ ವಿಧಿಗಳನ್ನು ನಡೆಸತೊಡಗಿದ್ದಾರೆ.

ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಇಂತಹ ಆಧಾರ ರಹಿತ ಆರೋಪಗಳು ಹಾಗೂ ಸಾಮುದಾಯಿಕ ಬಿಕ್ಕಟ್ಟು ಹಾಗೂ ದ್ವೇಷ ಸೃಷ್ಟಿಸುವ, ಕೋಮು ದ್ರುವೀಕರಣ ಮಾಡಿಕೊಳ್ಳುವ, ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಈ ಎಲ್ಲಾ ಧಾರ್ಮಿಕ ಮುಖಂಡರುಗಳು ನಡೆಸುತ್ತಿದ್ದಾರೆ. ಸಂಘ ಪರಿವಾರ ಇದುವರೆಗೆ ನಡೆಸಿದ ಎಲ್ಲಾ ಪ್ರಯತ್ನಗಳು ನಿರೀಕ್ಷಿತ ಫಲ ಕೊಡದೇ ಇರುವುದರಿಂದಾಗಿ ಈಗ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಕೋಮುದ್ರುವೀಕರಣ ಮಾಡಿ ತನ್ನ ಕೋಮು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಅವರ ಪ್ರಯತ್ನಗಳನ್ನು ಕೇರಳದ ಜನರು ಸ್ವೀಕರಿಸುತ್ತಿಲ್ಲ ಎನ್ನುವುದು ಈಗಲೂ ಕಾಣುತ್ತಿರುವ ವಾಸ್ತವವಾಗಿದೆ.

19/09/2021                                        

 

 

 

 

 

 

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...