Skip to main content

ಜಾಗತಿಕ ಬಂಡವಾಳವಾದದ ವಿನಾಶಕಾರಿ ಕ್ರಿಯೆಗಳೂ#global capital#crisis#job losses# economic derpression

 

 ಜಾಗತಿಕ ಬಂಡವಾಳವಾದದ ವಿನಾಶಕಾರಿ ಕ್ರಿಯೆಗಳೂ…

ಹೆಚ್ಚುತ್ತಿರುವ ಜನಸಾಮಾನ್ಯರ ಬದುಕಿನ ಭವಣೆಗಳೂ…


    -ನಂದಕುಮಾರ್ ಕೆ. ಎನ್. ಕುಂಬ್ರಿಉಬ್ಬು

                                                            ಮಿಂಚಂಚೆ:nandakumarnandan67@gmail.com


ಇಪ್ಪತೈದು ವರುಷಗಳ ಹಿಂದೆ ಇಂಡಿಯಾದಲ್ಲಿ ತನ್ನ ಉತ್ಪಾದನೆ ಹಾಗೂ ಜೋಡಣೆಯನ್ನು ಶುರುಮಾಡಿದ್ದ ಅಮೇರಿಕಾ ಮೂಲದ ಫೋರ್ಡ್ ಮೋಟಾರ್ ಕಂಪನಿ ಈಗ ಇಲ್ಲಿನ ತನ್ನ ಘಟಕಗಳನ್ನು ಮುಚ್ಚುತ್ತಿದೆ. ಅದರಿಂದಾಗಿ ಸುಮಾರು 4000 ಉದ್ಯೋಗಗಳು ನಷ್ಟವಾಗುತ್ತವೆ ಎಂದು ಹೇಳಲಾಗುತ್ತಿದೆ. ಇಂಡಿಯಾದಲ್ಲಿ ಎರಡುವರೆ ಶತಕೋಟಿ ಡಾಲರುಗಳನ್ನು ಹೂಡಿದ್ದ ಈ ಸಂಸ್ಥೆಗೆ ಕಳೆದ ಹತ್ತು ವರುಷಗಳಿಂದ ಇದುವರೆಗೆ  ಒಟ್ಟು ಎರಡು ಶತಕೋಟಿ ಡಾಲರುಗಳಷ್ಟು ನಷ್ಟವಾಗಿದೆ ಎನ್ನಲಾಗುತ್ತಿದೆ. ಹೀಗೆ ಏರಿಕೆಯತ್ತ ಸಾಗುತ್ತಿರುವ ನಷ್ಟ ಹಾಗೂ ಬೆಳವಣಿಗೆಯ ಭರವಸೆಯಿಲ್ಲದೇ ಅಮೇರಿಕದ ಜನರಲ್ ಮೋಟಾರ್ ಕಂಪನಿ, ಹಾರ್ಲೆ ಡೇವಿಡ್ ಸನ್ ಬೈಕ್ ಕಂಪನಿ, ದಕ್ಷಿಣ ಕೊರಿಯಾದ ದಾಯಿವೂ ಮೊದಲಾದ ಮೊಟಾರು ಕಂಪನಿಗಳು ದೇಶದಿಂದ ಹೊರಹೋಗಿವೆ. ಫೋರ್ಡ್ ಈ ವರುಷದ ಆರಂಭದಲ್ಲಿ ಬ್ರಜಿಲ್ ನಲ್ಲಿ ಕೂಡ  ತನ್ನ ಘಟಕಗಳನ್ನು ಮುಚ್ಚಿತ್ತು.



 ಆಟೋಮೊಬೈಲ್ ಕ್ಷೇತ್ರ ದೇಶದ  ಉತ್ಪಾದನಾ ವಲಯದ ಶೇಕಡಾ 50 ರಷ್ಟಿದೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಪ್ರಕಾರ ಈ ಕ್ಷೇತ್ರದಲ್ಲಿ ನೇರವಾಗಿ ದೇಶದ ಎರಡೂವರೆ ದಶಲಕ್ಷ ಜನರು ಹಾಗೇನೆ ಪರೋಕ್ಷವಾಗಿ ಎರಡೂವರೆ ದಶಲಕ್ಷ ಜನರು ಉದ್ಯೋಗದಲ್ಲಿದ್ದರು. ಇನ್ನೊಂದು ಲೆಕ್ಕಾಚಾರದ ಪ್ರಕಾರ ನೇರ ಹಾಗೂ ಪರೋಕ್ಷವಾಗಿ ಒಟ್ಟು ಈ ಕ್ಷೇತ್ರದಲ್ಲಿ ಸುಮಾರು 35 ದಶಲಕ್ಷ ಜನರು ತೊಡಗಿಸಿಕೊಂಡಿದ್ದಾರೆ.

 2019ರ ಮೂರು ತಿಂಗಳಲ್ಲೇ 286 ಮಾರಾಟ ಮಳಿಗೆಗಳು ಸ್ಥಗಿತವಾಗಿ 32000 ಉದ್ಯೋಗಗಳನ್ನು ರದ್ದು ಮಾಡಲಾಯಿತು. ಮಾರುತಿ, ಟಾಟಾ, ಮಹೀಂದ್ರ ಅಶೋಕ್ ಲೇಲ್ಯಾಂಡ್, ಹೊಂಡಾದಂತಹ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು 2019ರ ಜುಲೈಯಿಂದ ಕನಿಷ್ಠವೆಂದರೂ ಎರಡು ತಿಂಗಳುಗಳ ಕಾಲ ಮುಚ್ಚಿ ಬಿಟ್ಟಿದ್ದವು. ಅಷ್ಟೇ ಅಲ್ಲದೇ ಈ ಕ್ಷೇತ್ರದ ಅವಿಭಾಜ್ಯ ಅಂಗವಾದ ಬಾಷ್, ಎಕ್ಸೈಡ್ ಮೊದಲಾದ ಬಿಡಿಭಾಗ ಉತ್ಪಾದಕರುಗಳು ಕೂಡ ತಮ್ಮ ಉತ್ಪಾದನೆಗಳನ್ನು ಕಡಿತಗೊಳಿಸಬೇಕಾಗಿ ಬಂದಿತ್ತು. ಆಟೋಮೋಟಿವ್ ಕಾಂಪೋನೆಂಟ್ ಮ್ಯಾನ್ಯುಫ್ಯಾಕ್ಚರರರ್ಸ್ ಅಸೊಸಿಯೇಷನ್ ಆಫ್ ಇಂಡಿಯಾ ಪ್ರಕಾರ ಉತ್ಪಾದನೆಯಲ್ಲಿ ಶೇಕಡಾ 15ರಿಂದ ಶೇಕಡಾ 20ರಷ್ಟು ಇಳಿಕೆಯಾದರೂ ಕನಿಷ್ಠವೆಂದರೂ ಒಂದು ದಶಲಕ್ಷದಷ್ಟು ದೇಶದ ಉದ್ಯೋಗಗಳು ನಷ್ಟವಾಗುತ್ತವೆ.

2000ದ ಸುಮಾರಿಗೆ ಆಟೋ ಮೊಬೈಲ್ ಕ್ಷೇತ್ರ ಸ್ಥಗಿತತೆಯಿಂದ ಇಳಿಮುಖದತ್ತ ತಿರುಗಿತ್ತು.   2019ರ ವೇಳೆಗೆ ಸುಮಾರು ಕನಿಷ್ಟವೆಂದರೂ ಎರಡು ಲಕ್ಷದಷ್ಟು ಉದ್ಯೋಗಗಳು ನಷ್ಟದತ್ತ ಸಾಗಿದ್ದವು. ಈ ವಿದ್ಯಮಾನ ಹಲವು ಕ್ಷೇತ್ರಗಳಲ್ಲಿ ಪ್ರಧಾನವಾಗಿ ಕಳೆದ ಸುಮಾರು ಹದಿನೈದು ವರುಷಗಳಿಂದ ಜಾಗತಿಕವಾಗಿ ನಡೆಯುತ್ತಾ ಬರುತ್ತಿದೆ.

            ಮೂರು ದಶಕಗಳ ಹಿಂದೆ ಜಾಗತಿಕ ಕಾರ್ಪೋರೇಟ್ ಶಕ್ತಿಗಳ ಪ್ರಾಯೋಜಕತ್ವದ ಜಾಗತೀಕರಣವನ್ನು ನಮ್ಮಂತಹ ದೇಶಗಳ ಮೇಲೆ ಹೇರಲಾಗಿತ್ತು. ಅದರಿಂದ ಭಾರಿ ಅಭಿವೃದ್ದಿ ಹಾಗೂ ಉದ್ಯೋಗಾವಕಾಶಗಳ ವಿಪುಲ ಅವಕಾಶಗಳ ಖಜಾನೆಯೇ ದೇಶದ ಜನಸಾಮಾನ್ಯರಿಗೆ ತೆರೆಯುತ್ತದೆ ಎಂದೆಲ್ಲಾ ಮದ್ಯಮವರ್ಗ ಹಾಗೂ ಯುವ ಸಮೂಹವನ್ನು ನಂಬಿಸಲಾಗಿತ್ತು. ಅಂತಹ ಆಮಿಷಗಳಿಗೆ ದೇಶದ ಮದ್ಯಮವರ್ಗ ಒಳಗಾಗಿ ಐಷಾರಾಮಿ ಜೀವನದ ಕನಸಿನಲ್ಲಿ ತೇಲಾಡತೊಡಗಿದರು. ಜಾಗತೀಕರಣವನ್ನು ಎಗ್ಗಿಲ್ಲದೇ ಸಮರ್ಥಿಸುತ್ತಾ ಬಂದರು. ಮದ್ಯಮ ವರ್ಗದ ಜನಸಂಖ್ಯೆಯಲ್ಲೂ ಗಣನೀಯವಾದ, ಕೆಲವೆಡೆ ಎರಡುಪಟ್ಟು ಏರಿಕೆಗಳಾದವು. ಆದರೆ ಅವರಲ್ಲಿ ಬಹುತೇಕರು ಭಾರಿ ಸಾಲಗಾರ, ಅದರಲ್ಲೂ ಅನುತ್ಪಾದಕ ಸಾಲಗಳ ಹೊಣೆಗಾರಿಕೆಯ ತಲೆ ಮೇಲೆ ಹೊತ್ತುಕೊಂಡವರಾಗಿದ್ದರು.

ಜಾಗತೀಕರಣದ ಮೊದಲ ದಶಕದಲ್ಲಿ ಮದ್ಯಮವರ್ಗದ ಕನಸುಗಳಾದ ಕಾರು, ಮನೆ, ಕೈ ತುಂಬಾ ಸಂಬಳ ಇತ್ಯಾದಿಗಳು ನನಸಾದಂತೆಯೇ ಅನಿಸಿತ್ತು. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕತಂತ್ರಜ್ಞಾನ ಕ್ಷೇತ್ರ ಸಾವಿರಾರು ಮದ್ಯಮ ವರ್ಗದ ವಿದ್ಯಾವಂತ ಯುವ ಸಮೂಹಕ್ಕೆ ವಿಪುಲ ಉದ್ಯೋಗಾವಕಾಶಗಳನ್ನು ತೋರಿಸಿದ್ದು, ಭಾರಿ ಆಶಾಗೋಪುರಗಳನ್ನು ಕಟ್ಟಲು ನೆಲೆಯೊದಗಿಸಿದ್ದು ನಿಜ. ಆದರೆ ಅದು ಜಾಗತೀಕರಣದ ಎರಡನೇ ದಶಕದ ಹೊತ್ತಿಗೆ ಛಿದ್ರವಾಗಿ ಬಿಟ್ಟಿತ್ತು. ಮಾಹಿತಿ ತಂತ್ರಜ್ಞಾನ ಜಾಗತಿಕವಾಗಿಯೇ ನೆಲಕಚ್ಚಿ ಕೆಲವರಿಗಷ್ಟೇ ಎಂಬಂತಾಗಿತ್ತು. ನಂತರದ್ದು ಪಜೀತಿಯೇ ಮದ್ಯಮವರ್ಗದ ಕತೆಯಾಯಿತು. ರೈತಸಮೂಹ, ಯುವಸಮೂಹ ಆರ್ಥಿಕ ಹೊರೆ ಭರಿಸಲಾಗದೇ ಹಲವಾರು ಲಕ್ಷಗಳ ಸಂಖ್ಯೆಯಲ್ಲಿ ಆತ್ಮಹತ್ಯೆ ದಾರಿ ಹಿಡಿದರು. ಈಗಂತೂ ಸರ್ಕಾರಗಳು ಆ ಸಾವುಗಳ ಲೆಕ್ಕಗಳನ್ನು ಇಡುವ ಕೆಲಸವನ್ನೇ ನಿಲ್ಲಿಸಿಬಿಟ್ಟಿವೆ.



            ಆರಂಭದಲ್ಲೇ ಜಾಗತೀಕರಣ ದೇಶವನ್ನು ಜಾಗತಿಕ ಕಾರ್ಪೋರೇಟ್ ಶಕ್ತಿಗಳು ಲೂಟಿ ಮಾಡಲು ಮಾಡುತ್ತಿರುವ ಹೊಸ ತಂತ್ರ ಅದು ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತದೆ, ದೇಶದ ಆಸ್ತಿ ಸಂಪನ್ಮೂಲಗಳನ್ನು ನವವಸಾಹತು ಮಾದರಿಯಲ್ಲಿ ಕೊಳ್ಳೆ ಹೊಡೆಯುವ ಜಾಗತಿಕ ಬಂಡವಾಳಶಾಹಿ ತಂತ್ರ ಇದಾಗಿದೆ ಎಂದೆಲ್ಲಾ ವಿವರಿಸಿ ಜಾಗತೀಕರಣ ವಿರೋಧಿಸಿ ಹೋರಾಟ ಮಾಡುತ್ತಿದ್ದವರನ್ನು ಈ ವರ್ಗ ಅನುಸರಿಸಲಿಲ್ಲ. ದೇಶದ ಕೃಷಿಕರು, ಕಾರ್ಮಿಕರು, ದಲಿತ, ಆದಿವಾಸಿ ಇನ್ನಿತರ ದುಡಿಯುವ ಜನಸಮೂಹಗಳ ಬದುಕುಗಳ ಬಗ್ಗೆ, ಅವರುಗಳ ಶ್ರಮ ಹಾಗೂ ಅವರ ಬದುಕುಗಳೊಂದಿಗಿನ ತಮ್ಮ ಬದುಕುಗಳ ನೇರ ಸಂಬಂಧಗಳ ಬಗ್ಗೆ ಚಿಂತಿಸಲಿಲ್ಲ. ಬದಲಿಗೆ ಜಾಗತಿಕ ಬಂಡವಾಳಶಾಹಿ ಉಣಿಸಿದ ಕ್ರೂರ ಅನುಭೋಗಿ ಸಂಸ್ಕೃತಿಯ ಮೋಹಕ್ಕೆ ಬಿದ್ದು ಮತ್ತಿನಲ್ಲಿ ತೇಲಾಡತೊಡಗಿದರು. ಹಾಸಿಗೆಯಿದ್ದಷ್ಟು ಕಾಲು ಚಾಚದೇ ಉದ್ದುದ್ದ ಕಾಲುಕೈ ಚಾಚಿ ಉತ್ಪಾದಕತೆಗಿಂತಲೂ ಐಷಾರಾಮಿತನಕ್ಕಾಗಿ ಸಾಲಗಳನ್ನು ಮಾಡತೊಡಗಿದರು. ವಾಸ್ತವದಲ್ಲಿ ಅಂತಹ ಪರಿಸ್ಥಿತಿಗೆ ಅವರನ್ನು ಹಲವಾರು ರೀತಿಯಲ್ಲಿ ದೂಡಲಾಯಿತು. ದೇಶದ ವಾಣಿಜ್ಯ ಬ್ಯಾಂಕುಗಳನ್ನು ಅದಕ್ಕಾಗಿಯೇ ತೊಡಗಿಸಲಾಯಿತು. ಕಾರು, ಮನೆ, ಗಣಕಯಂತ್ರ ಮೊದಲಾದ ಕಂತು ಸಾಲಗಳ ಸೌಲಭ್ಯಗಳು ಹೇರಳವಾದವು. ದೇಶದ ಜನರ ಅದರಲ್ಲೂ ಮದ್ಯಮವರ್ಗದ ಜೀವನ ಮಟ್ಟದಲ್ಲಿ ಭಾರಿ ಕ್ರಾಂತಿಯಾಗುತ್ತಿದೆ ಎಂದೆಲ್ಲಾ ಭ್ರಮೆಗಳನ್ನು ವ್ಯಾಪಕವಾಗಿ ಬಿತ್ತಲಾಯಿತು. ಮಾಧ್ಯಮಗಳನ್ನು ಈ ನಿಟ್ಟಿನಲ್ಲಿ ವ್ಯಾಪಕವಾಗಿ ತೊಡಗಿಸಲಾಯಿತು. ಸಾಹಿತ್ಯ ಕಲೆಗಳನ್ನೂ ಜಾಗತೀಕರಣದ ವಾಹಕಗಳನ್ನಾಗಿಯೇ ಕಾರ್ಯ ನಿರ್ವಹಿಸುವಂತೆ ಮಾಡಲಾಯಿತು. ಆಧುನಿಕೋತ್ತರ ಕಾಲಘಟ್ಟ (ಪೋಸ್ಟ್ ಮಾಡರ್ನಿಸ್ಟ್ ಎರಾ), ಸತ್ಯೋತ್ತರ ಕಾಲಘಟ್ಟ (ಪೋಸ್ಟ್ ಟ್ರೂತ್ ಎರಾ) ಎಂಬೆಲ್ಲಾ ಕಾಲಘಟ್ಟ ವಿಂಗಡನಾ ಪರಿಭಾಷೆಗಳನ್ನು ಪರಿಚಯಿಸಲಾಯಿತು.

ವಿಶ್ವವಿದ್ಯಾಲಯಗಳ ಹಲವಾರು ಭೋದಕರುಗಳು, ಶಿಕ್ಷಕರುಗಳು, ಪರಿಸರ ಹಾಗೂ ಸಾಮಾಜಿಕ ಕಾರ್ಯಕರ್ತ ವಲಯಗಳ ಹಲವರು ಜಾಗತೀಕರಣದ ಪ್ರಲೋಭನೆಗಳಿಗೆ ತಾವಾಗೇ ಸೇರಿಕೊಳ್ಳುತ್ತಾ; ಜಾಗತಿಕ ಕಾರ್ಪೋರೇಟುಗಳ ಹಣಕಾಸು ಹಾಗೂ ಸೌಕರ್ಯಗಳನ್ನು ಮೂಲ ಜನಸಮುದಾಯಗಳ ಸಂಶೋಧನೆ, ಜನಪದ ಸಂಶೋಧನೆ, ಉನ್ನತ ಸಂಶೋಧನೆ, ಪರಿಸರ ರಕ್ಷಣೆ, ತಳಿ ಸಂಶೋಧನೆ, ಫೆಲೋಶಿಪ್, ದೇಣಿಗೆ, ಪೀಠ, ಫೌಂಡೇಶನ್, ಉನ್ನತ ವ್ಯಾಸಾಂಗ, ಇತ್ಯಾದಿ ಹೆಸರುಗಳಲ್ಲಿ ಪದವಿ, ಪುರಸ್ಕಾರ, ವಿದೇಶ ಪ್ರವಾಸ, ಹುದ್ದೆ ಇತ್ಯಾದಿಗಳನ್ನು ಸ್ವೀಕರಿಸಿದರು. ತಮ್ಮ ಸಂಶೋಧನೆ ಇತ್ಯಾದಿಗಳ ಫಲಿತಗಳನ್ನು ಭಾರಿ ಜಾಗತಿಕ ಕಾರ್ಪೋರೇಟು ಹಿತಾಸಕ್ತಿಗಳಿಗೆ ಒದಗಿಸಿಕೊಟ್ಟು ಅವರುಗಳಿಗೆ ಲಾಭಗಳಿಕೆಯನ್ನು ಹೆಚ್ಚಿಸುವಲ್ಲಿ ನೆರವಾದರು. ಈಗ ಪ್ರಗತಿಪರವಲಯದಲ್ಲಿ ಗುರುತಿಸಿಕೊಂಡಿರುವ ಹಲವರು ಕೂಡ ಫೋರ್ಡ್ ಫೌಂಡೇಶನ್, ರಾಕೆ ಫೆಲ್ಲರ್ ಫೌಂಡೇಶನ್ ಮೊದಲಾದ ಜಾಗತಿಕ ಭಾರಿ ಕಾರ್ಪೋರೇಟು ಸಂಸ್ಥೆಗಳ ಫಲಾನುಭವಿಗಳಾಗಿದ್ದರು ಎಂಬುದನ್ನು ಕೂಡ ಇಲ್ಲಿ ಗುರುತಿಸಬೇಕಾಗಿರುವ ವಿಚಾರ.



ಬಂಡವಾಳವಾದದ ಅಂತಿಮ ಘಟ್ಟವೇ ಜಾಗತಿಕ ಬಂಡವಾಳವಾದವಾಗಿದೆ. ಈ ಘಟ್ಟದ ನಂತರ ಅದಕ್ಕೆ ವ್ಯಾಪಿಸಿ ಬೆಳೆಯಲು ತಾಣವಿಲ್ಲದೇ ಬಂಡವಾಳವಾದದ ಕ್ಷಯಿಸುವಿಕೆ ಸಹಜವಾಗುತ್ತದೆ. ಜಾಗತಿಕ ಬಂಡವಾಳಶಾಹಿಗಳು ಇಲ್ಲವೇ ಅವುಗಳ ವಿವಿಧ ಬಣಗಳ ನಡುವೆ ಕ್ರೂರ ಸ್ಪರ್ಧೆ, ಪೈಪೋಟಿ ಏರ್ಪಟ್ಟು ಪರಸ್ಪರ ಭಾರಿ ತಿಕ್ಕಾಟಗಳಿಗೆ, ಯುದ್ಧ ಹಾಗೂ ಅಂತರ್ಯದ್ಧಗಳಿಗೆ ಕಾರಣವಾಗುತ್ತವೆ. ದೊಡ್ಡ ಕಾರ್ಪೋರೇಟುಗಳು ತಮಗಿಂತ ಚಿಕ್ಕ ಕಾರ್ಪೋರೇಟುಗಳನ್ನು ವಿಲೀನಗಳು, ಕೊಂಡುಕೊಳ್ಳುವಿಕೆಗಳು, ವಿನಾಶಕಾರಿ ಪೈಪೋಟಿಗಳ ಮೂಲಕ ಸ್ವಾಧೀನ ಪಡಿಸಿಕೊಳ್ಳುವ ಇಲ್ಲವೇ ನಾಶಮಾಡುವ ಕಾರ್ಯಗಳನ್ನು ಮಾಡುತ್ತಾ ರಾಷ್ಟ್ರೀಯ ಇಲ್ಲವೇ ಸ್ಥಳೀಯ ಆವಿಷ್ಕಾರ, ಉತ್ಪಾದನೆ, ಹಾಗೂ ಆರ್ಥಿಕ ವ್ಯವಹಾರಗಳನ್ನು ನಿರ್ಬಂಧಿಸುವ ಇಲ್ಲವೇ ತಡೆಯುವ ಕಾರ್ಯಗಳನ್ನು ಮಾಡುತ್ತವೆ. ಜಾಗತಿಕವಾಗಿ ಎಲ್ಲೆಡೆಗಳಲ್ಲೂ ಉತ್ಪಾದಿತವಾಗುವ ಸಂಪತ್ತು ಹಾಗೂ ಜಾಗತಿಕ ಪ್ರಾಕೃತಿಕ ಸಂಪತ್ತುಗಳ ಮೇಲೆ ಕೆಲವೇ ಕಾರ್ಪೋರೇಟುಗಳು ಹಿಡಿತ ಸಾಧಿಸತೊಡಗುತ್ತವೆ. ಈ ಪ್ರಕ್ರಿಯೆಗಳು ಹೆಚ್ಚಾಗುತ್ತಾ, ಏಕಸ್ವಾಮ್ಯತೆ ಬೆಳೆಯುತ್ತಾ ಜಾಗತಿಕವಾಗಿ ಜನರನ್ನು ಇನ್ನಿಲ್ಲದ ಕಷ್ಟ ಕಾರ್ಪಣ್ಯಗಳಿಗೆ ಹಾಗೂ ಅಭದ್ರತೆಗಳಿಗೆ ದೂಡುತ್ತಾ ಸಾಗುತ್ತದೆ. ಹಾಗಾಗಿ ಜಾಗತಿಕ ಬಂಡವಾಳಶಾಹಿ ಜಾಗತಿಕವಾಗಿ ಜನರ ಪ್ರತಿರೋಧಗಳಿಗೆ, ವಿರೋಧಗಳಿಗೆ ಗುರಿಯಾಗುತ್ತದೆ. ದೇಶಗಳು ಛಿದ್ರವಾಗುವುದು, ರಾಷ್ಟ್ರಗಳು ಸ್ವಾತಂತ್ರ ಹೊಂದುವುದು ನಡೆಯಬಹುದು. ಅದನ್ನು ಮಾರ್ಕ್ಸ್ ವಾದಿ ಪರಿಕಲ್ಪನೆಯಲ್ಲಿ ಸಾಮ್ರಾಜ್ಯವಾದಿ ಘಟ್ಟ ಎಂದು ಕರೆಯುಲಾಗುತ್ತದೆ. ಒಂದು ವೇಳೆ ಜನರು ಸರಿಯಾದ ಸೈದ್ಧಾಂತಿಕ ನೆಲೆಗಟ್ಟಿನಡಿ ಸಂಘಟಿತರಾಗಿ ತಮ್ಮ ಶತೃಗಳನ್ನು ಸರಿಯಾಗಿ ಗ್ರಹಿಸಿ ಸಾಮಾಜಿಕ ಬದಲಾವಣೆಯತ್ತ ತಮ್ಮ ಸಮರಶೀಲ ಹೋರಾಟವನ್ನು ಮುನ್ನೆಡೆಸಿದರೆ ಅದು ಸಮಾಜದ ಮೂಲಭೂತ ಬದಲಾವಣೆಯ ಕ್ರಾಂತಿಯಾಗಿ ಹೊರಹೊಮ್ಮುತ್ತದೆ. ಹೀಗೆಂದು ಸಮಾಜವಿಜ್ಞಾನದ ಈ ವಿಚಾರವನ್ನು ಸೈದ್ಧಾಂತಿಕವಾಗಿ ವಿವರಿಸಿ ಆಚರಣೆಗೆ ಇಳಿಸಿದವರು ಸೋವಿಯತ್ ರಷ್ಯಾದ ಕಮ್ಯೂನಿಸ್ಟ್ ಕ್ರಾಂತಿಯ ಉನ್ನತ ನಾಯಕತ್ವದ ಭಾಗವಾಗಿದ್ದ ವಿ ಐ ಲೆನಿನ್, ಜೋಸೆಫ್ ಸ್ಟಾಲಿನ್ ಹಾಗೂ ಚೀನಾದ ಕಮ್ಯೂನಿಸ್ಟ್ ಉನ್ನತ ನಾಯಕತ್ವದ ಭಾಗವಾಗಿದ್ದ ಮಾವೋ ತ್ಸೆ ತುಂಗ್. ಆದರೆ ನಂತರದ ಕೃಶ್ಚೇವ್ ಕಾಲಘಟ್ಟದಲ್ಲಿ ಸೋವಿಯತ್ ರಷ್ಯ ಹಾಗೂ ಡೆಂಗ್ ಕ್ಸಿಯಾಪಿಂಗ್ ಕಾಲದಿಂದ ಚೈನಾ ಜಾಗತಿಕ ಬಂಡವಾಳವಾದದ ಭಾಗವಾಗಿಬಿಟ್ಟವು. ಸೋವಿಯತ್ ರಷ್ಯಾ ಒಡೆದು ಹಲವು ರಾಷ್ಟ್ರಗಳಾಗಿದ್ದರೆ, ಚೈನಾದಲ್ಲಿ ಬಿಕ್ಕಟ್ಟು ಏರುಮುಖದಲ್ಲಿ ಸಾಗುತ್ತಿದೆ.



ಜಾಗತೀಕರಣದ ಸೂತ್ರಗಳಾದ ಉದಾರೀಕರಣ, ಖಾಸಗೀಕರಣಗಳ ಮೂಲಕ ಸಾರ್ವಜನಿಕ ವಲಯದಲ್ಲಿ ಸರಕಾರಗಳ ಪಾತ್ರಗಳನ್ನು ಕಡಿತಗೊಳಿಸುತ್ತಾ ಬಂದು ಈಗ ಪರಾಕಾಷ್ಠೆಯತ್ತ ಸಾಗತೊಡಗಿದೆ. ಹಾಗಿದ್ದರೂ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ಗಣನೀಯ ಮಟ್ಟದಲ್ಲಿ ಏರುಮುಖದ ಬೆಳವಣಿಗೆ ಕಾಣಲು ಸಾಧ್ಯವಾಗುತ್ತಿಲ್ಲ. ತನ್ನ ಸ್ಥಿರತೆಯನ್ನು ಕೂಡ ಕಾಪಾಡಿಕೊಳ್ಳಲಾಗುತ್ತಿಲ್ಲ. ಈಗ ಜಾಗತಿಕ ಕಾರ್ಪೋರೇಟುಗಳು ತಾವುಗಳು ಮೂರು ದಶಕಗಳ ಹಿಂದೆ ಹೇರಿದ್ದ ಜಾಗತೀಕರಣ ನೀತಿಗಳು ಹಾಗೂ ಒಪ್ಪಂದಗಳಿಂದ ಹಿಂದೆ ಸರಿಯುವ, ನಮ್ಮ ಮಾರುಕಟ್ಟೆ ನಮಗೆ, ನಮ್ಮ ದೇಶ ನಮಗೆ, ನಮ್ಮ ದೇಶದ ಉದ್ಯೋಗಾವಕಾಶ ನಮ್ಮ ದೇಶದವರಿಗೆ, ಡಿಗ್ಲೋಬಲೈಸೇಷನ್ ಎಂದೆಲ್ಲಾ ತಮ್ಮ ಅನುಕೂಲ ಹಾಗೂ ಆಯ್ಕೆಯ ವಾದಗಳನ್ನು ರಕ್ಷಣಾತ್ಮಕ ನೀತಿಗಳನ್ನು ಮುಂದಿಡತೊಡಗಿವೆ. ಆದರೆ ಅವರುಗಳೇ ಸೃಷ್ಟಿಸಿದ ಸಿಕ್ಕುಗಳಿಂದ ಬಿಡಿಸಿಕೊಳ್ಳಲಾಗದೇ ತಿಣುಕಾಡುತ್ತಿದ್ದಾರೆ.

ಜಾಗತೀಕರಣದ ಮೂಲಕ ಕೆಲವೇ ಕಾರ್ಪೋರೇಟು ಸಂಸ್ಥೆಗಳು ಜಾಗತಿಕ ಸಂಪತ್ತಿನ ಬಹುಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಸಾಗಿದ್ದಾರೆ. ಆದರೂ ಅವುಗಳು ಬಯಸಿದ ಜಾಗತಿಕ ಆರ್ಥಿಕ ಚೇತರಿಕೆಗಳು ಕಾಣದೇ ಹೋಗುತ್ತಿವೆ. ಇದಕ್ಕೆ ಕೃಷಿ, ಕೈಗಾರಿಕೆ, ಮೊದಲಾದ ಉತ್ಪಾದನಾ ವಲಯಗಳ ಬೆಳವಣಿಗೆಯಾಗದೇ ಹೋಗುತ್ತಿರುವುದೇ ಪ್ರಧಾನ ಕಾರಣವಾಗಿದೆ. ಜಾಗತಿಕವಾಗಿ ಜನಸಾಮಾನ್ಯರ ಕೊಳ್ಳುವ ಶಕ್ತಿ ಬೆಳೆಯದೇ ಕ್ಷಯಿಸುತ್ತಾ ಸಾಗುತ್ತಿರುವುದು ಇದಕ್ಕೆ ಪ್ರಧಾನ ಕಾರಣವಾಗಿದೆ. ಇಂಡಿಯಾದ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಲ್ಲ. ಜನರ ಆದಾಯಮೂಲಗಳು ನಾಶಮಾಡಿದ್ದು, ಉದ್ಯೋಗಾವಕಾಶಗಳ ನಾಶ ಎಲ್ಲಾ ಸೇರಿ ಜನರ ಕೊಳ್ಳುವ ಶಕ್ತಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಕುಸಿದುಹೋಗಿದೆ. ಹಾಗಾಗಿ ಆಟೋಮೊಬೈಲ್ ಸೇರಿದಂತೆ ಎಲ್ಲಾ ಉತ್ಪಾದನಾ ಹಾಗೇನೆ ಸೇವಾ ಕ್ಷೇತ್ರಗಳಲ್ಲಿ ಗ್ರಾಹಕರ ಕೊರತೆ ಭಾರಿ ಮಟ್ಟ ತಲುಪಿದೆ. ನೋಟು ರದ್ದತಿಯ ನಂತರ ಇದು ಪರಾಕಾಷ್ಟೆಯತ್ತ ಸಾಗುತ್ತಾ ಹೋಗುತ್ತಿದೆ. ಕೋರೋನಾ ಲಾಕ್ ಡೌನ್ ಹಾಗೂ ನಿರ್ಬಂಧ ಅದನ್ನು ಮತ್ತೂ ಉನ್ನತ ಹಂತದ ಪರಾಕಾಷ್ಟೆತೆಯತ್ತ ಸಾಗಿಸುತ್ತಿದೆ. ಕೊರೋನಾ ಲಾಕ್ ಡೌನ್ ಮೊದಲ ಎರಡು ತಿಂಗಳುಗಳಲ್ಲೇ ದಿನಗೂಲಿಗಳು ಹಾಗೂ ಸಣ್ಣ ವ್ಯಾಪಾರಿ ವಲಯದ ಸುಮಾರು 12 ಕೋಟಿಗಳಿಗೂ ಹೆಚ್ಚು ಉದ್ಯೋಗಗಳು ನಷ್ಟವಾಗಿದ್ದವು ಎಂಬ ವರದಿಗಳಿದ್ದವು.



ಜಾಗತೀಕರಣದ ಬಿಕ್ಕಟ್ಟಿನ ಭಾಗವಾಗೇ ಕೊರೋನಾ ಬಿಕ್ಕಟ್ಟನ್ನು ಸೃಷ್ಠಿಮಾಡಲಾಯಿತು. ಒಂದು ಸಾಮಾನ್ಯ ವೈರಸ್ ನೆಪ ಹಿಡಿದು ಜಾಗತಿಕವಾಗಿ ಭೂಮಿ, ಸಲಕರಣೆಗಳು, ಯಂತ್ರಗಳು, ಕಾರ್ಮಿಕರು, ಶ್ರಮಿಕರು ಸೇರಿದಂತೆ ಉತ್ಪಾದನಾ ಶಕ್ತಿಗಳ ಮೇಲೆ ಧಾಳಿಗಳನ್ನು ಮಾಡುತ್ತಾ ನಾಶ ಮಾಡಲಾಯಿತು. ಇದರ ಗರಿಷ್ಠ ಲಾಭ ಮತ್ತೆ ಜಾಗತಿಕ ಹಿಡಿತದ ಕೆಲವೇ ಕಾರ್ಪೋರೇಟುಗಳ ಕೈಗೆ ಸೇರಿತು. ಇದಕ್ಕೆ ಕೊರೋನಾ ಕಾಲದಲ್ಲಿ ನಮ್ಮ ದೇಶದಲ್ಲಿ ಅಂಬಾನಿ ಅದಾನಿ ಮೊದಲಾದ ಕಾರ್ಪೋರೇಟ್ ಬಳಗ ಹಲವು ಪಟ್ಟು ಸಂಪತ್ತನ್ನು ಶೇಕರಿಸಿಕೊಂಡಿದ್ದನ್ನು ಗಮನಿಸಬಹುದು. ಅದೇ ರೀತಿ ಮೈಕ್ರೋಸಾಫ್ಟ್, ಫೇಸ್ ಬುಕ್, ಗೂಗಲ್, ಅಸ್ಟ್ರಾಜೆನೆಕಾ, ಅಮೇಜಾನ್ ನಂತಹ ಜಾಗತಿಕ ಕಾರ್ಪೋರೇಟುಗಳು ಹತ್ತಾರು ನೂರಾರು ಪಟ್ಟು ಸಂಪತ್ತನ್ನು ಶೇಕರಿಸಿಕೊಂಡವು. ಆದರೆ ಇವುಗಳಲ್ಲಿ ಉತ್ಪಾದನಾ ವಲಯದ ಕಾರ್ಪೋರೇಟುಗಳನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ಇವುಗಳು ಸಂಪತ್ತು ಶೇಖರಿಸಿದ್ದು ಪ್ರಧಾನವಾಗಿ ಉತ್ಪಾದನೆಯ ಹೆಚ್ಚಳದ ಮೂಲಕ ಅಲ್ಲ. ಬದಲಿಗೆ ಜನರ ಕನಿಷ್ಠ ಬದುಕಿನ ಆದಾಯಗಳನ್ನು ಕಸಿಯುವ ಹಾಗೂ ಸೇವಾ ವಲಯ ಹಾಗೂ ಸಾರ್ವಜನಿಕ ವಲಯಗಳನ್ನು ತಮ್ಮ ಹಿಡಿತಗಳಿಗೆ ಸೇರಿಸುವ ಮೂಲಕ ಅದು ಗಣಿ, ವಿಮೆ, ಬ್ಯಾಂಕ್, ರೇಲ್ವೆ, ವಿಮಾನಯಾನ, ಸಾರಿಗೆ, ಭೂಮಿ, ಅರಣ್ಯ ಹೀಗೆ ಸಾಗುತ್ತದೆ. ಇದರಲ್ಲಿ ಎಲ್ಲೂ ಹೊಸದಾದ ಸರಕು ಉತ್ಪಾದನೆಗಳು ಇಲ್ಲವೇ ಸರಕು  ಉತ್ಪಾದನೆಯ ಹೆಚ್ಚಳ ಕಾಣುವುದು ಅಪರೂಪ.



ಈ ಜಾಗತಿಕ ಬಿಕ್ಕಟ್ಟಿನ ಭಾಗವಾಗೇ ನಮ್ಮ ದೇಶದಲ್ಲಿ ಆಗುತ್ತಿರುವ ನಿರುದ್ಯೋಗದ ಹೆಚ್ಚಳ ಹಾಗೂ ಜನರ ಕೊಳ್ಳುವ ಶಕ್ತಿಯ ಹರಣಗಳು ಹೆಚ್ಚುತ್ತಿರುವ ಸಾಮಾಜಿಕ ಅಭದ್ರತೆ ಹಾಗೂ ಅಶಾಂತಿಗಳನ್ನು ಗ್ರಹಿಸಬೇಕಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುತ್ತಾ ಸಾಗಬಹುದು.

ಜನಸಾಮಾನ್ಯರು ತಮ್ಮ ಹಾಗೂ ತಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸಿಕೊಳ್ಳುವ ಜವಾಬ್ದಾರಿ ಹೊರದ ಹೊರತು ಬೇರೆ ದಾರಿಯೇನೂ ಇಲ್ಲ.

 

12/09/2021                                                    


 

 

 

 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...