Skip to main content

ಮದ್ಯಮ ವರ್ಗ ಪತನದತ್ತ#declining middle class#india

 

ಪತನದತ್ತ ತಳ್ಳಲ್ಪಡುತ್ತಿದ್ದರೂ ತಿರುಗಿ ನಿಲ್ಲದ ಮದ್ಯಮ ವರ್ಗ..

                                           -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು

 

                                 


                            ಮಿಂಚಂಚೆ: nandakumarnandana67@gmail.com

 

ಇದೇ 2021ರ ಆಗಸ್ಟ್ ನ ಒಂದು ತಿಂಗಳ ಅವಧಿಯಲ್ಲೇ ಸುಮಾರು ಹದಿನೈದು ಲಕ್ಷ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸೆಂಟರ್ ಫಾರ್ ಮಾನಿಟರಿಂಗ್ ಎಕಾನಮಿ (CMIE) ಹೊರಬಿಟ್ಟಿದೆ. ನಗರ ನಿರುದ್ಯೋಗಮಟ್ಟ ಶೇ 9.78 ಗ್ರಾಮೀಣ  ನಿರುದ್ಯೋಗಮಟ್ಟ  ಶೇ 7.64 ಕ್ಕೆ ಏರಿದೆ ಎಂದು ಆ ವರದಿ ಹೇಳಿದೆ. 




ಕೊರೋನಾ ಲಾಕ್ ಡೌನ್ ನ ನಂತರ ಇಂಡಿಯಾದಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳ ಕುಸಿತಗಳು ಭಾರಿ ಹೆಚ್ಚಿನ ಮಟ್ಟ ತಲುಪಿವೆ. ಕೋಟ್ಯಾಂತರ ಉದ್ಯೋಗಗಳು ನಷ್ಟವಾಗುತ್ತಾ ಸಾಗುತ್ತಿವೆ. ಲಕ್ಷಾಂತರ ಕುಟುಂಬಗಳು ತಮ್ಮ ಬದುಕಿನ ಆದಾಯಗಳನ್ನು ಕಳೆದುಕೊಂಡಿದ್ದಲ್ಲದೇ ತಮ್ಮ ಜೀವಮಾನದ ಉಳಿತಾಯಗಳನ್ನು ಕೂಡ ಕಳೆದುಕೊಂಡು ತೀವ್ರ ಆತಂಕ ಹಾಗೂ ಅಭದ್ರತೆಗಳಿಗೆ ಬಲಿಯಾಗುತ್ತಾ ಸಾಗಿದ್ದಾರೆ. ಈ ಬಗೆಗಿನ ಸರಿಯಾದ ಅಂಕಿಅಂಶಗಳು ಸಿಗದಂತಹ ಪರಿಸ್ಥಿತಿ ಇದೆ. ಯಾಕೆಂದರೆ ಈ ಬಗೆಗಿನ ನಿಖರ ಮಾಹಿತಿಗಳ ಸಂಗ್ರಹಕಾರ್ಯ ನಡೆಯುತ್ತಿಲ್ಲ. ಅಲ್ಲದೇ ಈಗ ಸರಕಾರಿ ಅಂಕಿಅಂಶಗಳೂ ಕೂಡ ಬಿಡುಗಡೆ ಮಾಡದಂತೆ ತಡೆಹಿಡಿಯಲಾಗಿದೆ. ವಾಸ್ತವ ಪರಿಸ್ಥಿತಿಯನ್ನು ಗ್ರಹಿಸಲು ಇದರಿಂದ ಭಾರಿ ತಡೆಯುಂಟಾಗಿದೆ ಎನ್ನಬಹುದು.

ಜಾಗತಿಕ ಆರ್ಥಿಕ ಸಂಸ್ಥೆಗಳು ಈಗಾಗಲೇ ಇಂಡಿಯಾವನ್ನು ಅಭಿವೃದ್ಧಿಶೀಲ ದೇಶಗಳ ಪಟ್ಟಿಯಿಂದ ಹೊರಗಿಟ್ಟಿವೆ. ಇಂಡಿಯಾದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಹಿಂದೆಂದೂ ಕಾಣದಷ್ಟು ಕುಸಿತ ಕಂಡು ಅದು ನಕಾರಾತ್ಮಕ ಬೆಳವಣಿಗೆಯಲ್ಲಿ ಸಾಗತೊಡಗಿದೆ ಎಂದು ಈ ಸಂಸ್ಥೆಗಳು ಹೇಳಿವೆ. 2020-21ನೇ ಸಾಲಿನಲ್ಲಿ ಇಂಡಿಯಾದ ಒಟ್ಟು ರಾಷ್ಟ್ರೀಯ ಉತ್ಪನ್ನದ ಬೆಳವಣಿಗೆಯನ್ನು  ಅಂತರಾಷ್ಟ್ರೀಯ ಹಣಕಾಸು ನಿಧಿಯು ನಕಾರಾತ್ಮಕವಾಗಿ ಶೇಕಡಾ -8 ಎಂದು, ವಿಶ್ವಬ್ಯಾಂಕ್ ಶೇಕಡಾ     -9.6, ಆರ್ ಬಿ ಐ ಶೇಕಡಾ-7.5 ಎಂದು ಹೇಳಿದ್ದವು. ಇದು  ಜಾಗತಿಕವಾಗಿರುವ ನಕಾರಾತ್ಮಕ ಬೆಳವಣಿಗೆಗಳಲ್ಲಿ ಅತ್ಯಂತ ಹೆಚ್ಚಿನ ಸಾಲಿನಲ್ಲಿ ನಿಲ್ಲುತ್ತದೆ. ಅದೇ ವೇಳೆಯಲ್ಲಿ ನೆರೆಯ ಬಾಂಗ್ಲಾ ದೇಶ, ಪಾಕಿಸ್ತಾನ, ನೇಪಾಳದಂತಹ ಬಡರಾಷ್ಟ್ರಗಳು ಸಕಾರಾತ್ಮಕ ಬೆಳವಣಿಗೆ ದರಗಳನ್ನು ದಾಖಲಿಸುತ್ತಿವೆ. ಅದರಲ್ಲೂ ಬಾಂಗ್ಲಾ ದೇಶ ಎರಡಂಕಿಯ ಬೆಳವಣಿಗೆಗಳನ್ನು ದಾಖಲಿಸುತ್ತಾ ಸಾಗಿದೆ.



ಆದರೆ 2020-2021 ಸಾಲಿನಲ್ಲಿ ಇಂಡಿಯಾದ ಒಟ್ಟು ರಾಷ್ಟ್ರೀಯ ಉತ್ಪನ್ನದ ಬೆಳವಣಿಗೆಯನ್ನು ಐ ಎಂ ಎಫ್ ಶೇಕಡಾ 11.5, ವಿಶ್ವಬ್ಯಾಂಕ್ ಶೇಕಡಾ 5.4, ಆರ್ ಬಿ ಐ ಶೇಕಡಾ10.5 ಎಂದು ಅಂದಾಜಿಸಿವೆ. ಆದರೆ ಈ ಬೆಳವಣಿಗೆ ದರ ಸಾಕಾರವಾಗುವ ಯಾವ ಭರವಸೆಯನ್ನು ಇಡಲಾಗದಂತಹ ರೀತಿಯಲ್ಲಿ ದೇಶದ ಪರಿಸ್ಥಿತಿ ವಿಷಮವಾಗುತ್ತಾ ಸಾಗುತ್ತಿದೆ.

ಒಟ್ಟು ರಾಷ್ಟ್ರೀಯ ಉತ್ಪನ್ನವೆಂದಾಗ ನಿಗದಿತ ಕಾಲದಲ್ಲಿ( ಸಾಮಾನ್ಯವಾಗಿ ಒಂದು ವರ್ಷ, ಇಲ್ಲವೇ ತ್ರೈಮಾಸಿಕ) ದೇಶದಲ್ಲಿ ಆಗುವ ಒಟ್ಟು ಉತ್ಪನ್ನ ಹಾಗೂ ಸೇವೆಗಳ ಒಟ್ಟು ಮೌಲ್ಯ ಎಂದಾಗಿದೆ. ಇದನ್ನು ಲೆಕ್ಕ ಹಾಕಲು 1944 ಅನ್ನು ಅಧೀಕೃತ ಮೂಲವರುಷವನ್ನಾಗಿ ಪರಿಗಣಿಸಲಾಗಿದೆ.

ಆದರೆ ಈ ಒಟ್ಟಾರೆ ಲೆಕ್ಕವು ಜನಸಾಮಾನ್ಯರ ಬದುಕಿನ ಬೆಳವಣಿಗೆಯ ಮಾನದಂಡವನ್ನಾಗಿ ನೋಡಲು ಅಸಾಧ್ಯ. ಅದಕ್ಕೆ ತಲಾವಾರು ವಾಸ್ತವ ಆದಾಯ ಹಾಗೂ ವೆಚ್ಚ, ತಲಾವಾರು ಉಳಿತಾಯಗಳು, ತಲಾವಾರು ಪಡೆಯುತ್ತಿರುವ ಸೇವೆಗಳ ಅಂಕಿ ಅಂಶಗಳನ್ನು ನೋಡಬೇಕಾಗುತ್ತದೆ. ಆ ರೀತಿಯ ವೈಜ್ಞಾನಿಕವಾಗಿ ನಿಖರ ಅಂಕಿಅಂಶಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ನಮ್ಮ ಸರಕಾರಗಳು  ಬೇಕೆಂದೇ ರೂಪಿಸಿಲ್ಲ. ಹಾಗಿದ್ದರೂ ಜಿಡಿಪಿಯ ಈ ಪ್ರಮಾಣದ ಕುಸಿತವನ್ನು ನಾವು ಗ್ರಹಿಸಿದಾಗ ನಮ್ಮ ದೇಶದ ಜನಸಾಮಾನ್ಯರ  ಬದುಕಿನ ಮಟ್ಟ ಹೇಗೆಲ್ಲಾ  ಕುಸಿತಗಳಿಗೆ ಒಳಗಾಗುತ್ತಾ ಸಾಗುತ್ತಿದೆ ಎನ್ನುವುದನ್ನು ಅಂದಾಜಿಸಬಹುದು. ಇದು ನೇರವಾಗಿಯೂ ಅಪ್ರತ್ಯಕ್ಷವಾಗಿಯೂ ನಡೆಯುತ್ತಿರುವುದರಿಂದಾಗಿ ಸಾಮಾಜಿಕ ಹಾಗೂ ವ್ಯಕ್ತಿಗತ ಬದುಕುಗಳ ಮೇಲೆ ಅಗಾಧವಾದ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ.

ಅಲ್ಲದೇ ಒಟ್ಟು ರಾಷ್ಟ್ರೀಯ ಉತ್ಪನ್ನದ ಪರಿಧಿಯೊಳಗೆ ಬಾರದ ದೇಶದ ಸಂಪತ್ತಿನ ಅಕ್ರಮ ಸಾಗಾಟ ಭಾರಿ ದೊಡ್ಡ ಮೊತ್ತವೇ ಆಗಿದೆ. ಗ್ಲೋಬಲ್ ಫ್ಯನಾನ್ಸಿಯಲ್ ಇಂಟೆಗ್ರಿಟಿ ಎಂಬ ಅಮೇರಿಕದ ವಾಷಿಂಗ್ಟನ್ ಮೂಲದ ಸಂಸ್ಥೆ ಮಾಡಿರುವ ಸಂಶೋಧನಾ ವರದಿಯ ಪ್ರಕಾರ 2008ರ ಹೊತ್ತಿಗೆ ನಮ್ಮ ದೇಶದಿಂದ ಹೊರಗೆ ಅಕ್ರಮವಾಗಿ ಸಾಗಾಟವಾದ ಒಟ್ಟು ಸಂಪತ್ತು 462 ಬಿಲಿಯನ್ ಅಮೇರಿಕನ್ ಡಾಲರುಗಳು. ಈ ಲೆಕ್ಕಾಚಾರ ಪೂರ್ಣ ಚಿತ್ರವನ್ನು ನೀಡುವುದಿಲ್ಲ. ಇದು ಕಡಿಮೆ ಅಂದಾಜಿನ ಲೆಕ್ಕಾಚಾರವಾಗಿದೆ. ವಾಸ್ತವ ಇದಕ್ಕಿಂತಲೂ ಹಲವು ಪಟ್ಟು ಇದೆ ಎನ್ನಬಹುದು.

ಇತ್ತೀಚೆಗೆ ಮಧ್ಯಮ ವರ್ಗಗಳ ಜನಸಂಖ್ಯೆಯಲ್ಲಿ ಜಾಗತಿಕವಾಗಿ ಭಾರಿ ಇಳಿಕೆ ಕಾಣತೊಡಗಿವೆ ಎಂಬ ಸುದ್ಧಿಗಳು ಪ್ರಾಮುಖ್ಯತೆ ಪಡೆಯತೊಡಗಿದೆ. ಅದರಲ್ಲೂ ಕೊರೋನಾ ನಂತರದಲ್ಲಿ ಮದ್ಯಮವರ್ಗ ಬಾರಿ ಮಟ್ಟದಲ್ಲಿ ಬಡವರ್ಗವಾಗಿರುವ ಸುದ್ಧಿಗಳು ಹೆಚ್ಚಾಗತೊಡಗಿವೆ. ಜಾಗತೀಕರಣ ಶುರುವಾಗಿ ಜಗತ್ತನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಧ್ಯಮವರ್ಗಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವ, ಕೆಲವು ಕಡೆ ಎರಡು ಪಟ್ಟು ಹೆಚ್ಚಾಗಿರುವ ಸುದ್ಧಿಗಳು ಬರುತ್ತಿದ್ದವು. ನಮ್ಮ ದೇಶದಲ್ಲೂ ಮದ್ಯಮ ವರ್ಗಗಳ ಪ್ರಮಾಣದಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ ಎಂಬ ವರದಿಗಳು ಇದ್ದವು. ಮದ್ಯಮ ವರ್ಗದ ಹೆಚ್ಚಳ ಎನ್ನುವುದನ್ನು ಬಡತನ ನಿರ್ಮೂಲನೆ ಹಾಗೂ ಅಭಿವೃದ್ಧಿಯ ಭಾಗವೆಂಬತೆ ಸರಕಾರಗಳು ಪ್ರಚುರಪಡಿಸುತ್ತಿದ್ದವು. ಆದರೆ ಮದ್ಯಮ ವರ್ಗಗಳ ಕುರಿತಾದ ಮಾನದಂಡಗಳು ವೈಜ್ಞಾನಿಕವಾಗಿ ನಿರ್ಧರಿಸಲಾಗಿವೆಯೇ ಎಂದರೆ ಸಮಾಧಾನಕರವಾದ ಉತ್ತರಗಳು ಯಾರಿಗೂ ಸಿಗಲಾರದು. ಮದ್ಯಮ ವರ್ಗವೆಂದರೆ ಬಡತನ ರೇಖೆಯ ಮೇಲಿರುವವರು ಶ್ರೀಮಂತರಿಗಿಂತ ಕೆಳಗಿರುವವರು ಎಂದಾಗಿದೆ. ಬಡತನ ರೇಖೆಯ ಕೆಲವು ಲೆಕ್ಕಾಚಾರಗಳಂತೂ ಹಾಸ್ಯಾಸ್ಪದ ಎನ್ನುವಂತಹವುಗಳಾಗಿದ್ದವು. ಯುಪಿಎ ಆಡಳಿತಾವಧಿಯಲ್ಲಿ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಯೋಜನಾ ಆಯೋಗ ನಗರ ಪ್ರದೇಶಗಳಲ್ಲಿ ದಿನಕ್ಕೆ 32 ರೂಪಾಯಿಗಳನ್ನು ಗಳಿಸುವವರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 28 ರೂಪಾಯಿಗಳನ್ನು ಗಳಿಸುವವರು ಬಡತನ ರೇಖೆಗಿಂತ ಮೇಲಿನವರ ಸಾಲಿಗೆ ಸೇರುತ್ತಾರೆ ಎಂಬಂತಹ ಹಾಸ್ಯಾಸ್ಪದ ಮಾನದಂಡವನ್ನು 2012-2013ನೇ ಸಾಲಿನಲ್ಲಿ ರೂಪಿಸಿದ್ದನ್ನು ನಾವಿಲ್ಲಿ ಗಮನಿಸಬಹುದು.



ಇಂಡಿಯಾದಲ್ಲಿ ಮದ್ಯಮ ವರ್ಗಗಳಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳಲ್ಲಿ ನಿಗದಿತ ಸಂಬಳಕ್ಕೆ ದುಡಿಯುತ್ತಿರುವವರು, ಸರಕಾರಿ ನೌಕರರು, ಖಾಸಗೀ ಕ್ಷೇತ್ರದ ನೌಕರರು, ಕಾರ್ಮಿಕರು, ಗ್ರಾಮೀಣ ಪ್ರದೇಶದ ಭೂಹಿಡುವಳಿದಾರರು, ವ್ಯಾಪಾರ ಕ್ಷೇತ್ರದವರು, ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಹೀಗೆ ಸೇರುತ್ತಾರೆ.

ನಮ್ಮ ದೇಶದ ಸಂದರ್ಭದಲ್ಲಿ ಮದ್ಯಮ ವರ್ಗವನ್ನು ಕೆಳಮದ್ಯಮ ವರ್ಗ, ಮದ್ಯ ಮದ್ಯಮ ವರ್ಗ, ಮೇಲ್ ಮದ್ಯಮ ವರ್ಗ ಎಂದು ವಿಂಗಡಿಸಿ ನೋಡಬೇಕಾಗುತ್ತದೆ. ಮದ್ಯಮ ವರ್ಗವೆಂದಾಗ ಕೇವಲ ಆರ್ಥಿಕ ಮಾನದಂಡವಲ್ಲದೇ ಚಿಂತನೆ ಹಾಗೂ ಜೀವನ ಶೈಲಿಯನ್ನೂ ಕೂಡ ಪರಿಗಣಿಸಬೇಕಾಗುತ್ತದೆ. ಕೆಳ ಮದ್ಯಮ ವರ್ಗ ನಿಗದಿತ ಆದಾಯವನ್ನು ಹೊಂದಿ ತಮ್ಮ ಆಹಾರ, ಬಟ್ಟೆ, ವಸತಿ, ಶಿಕ್ಷಣಗಳಂತಹ ಮೂಲಭೂತ ಅಗತ್ಯಗಳನ್ನು ಕಷ್ಟದಿಂದ ಪೂರೈಸಿಕೊಳ್ಳುತ್ತಿರುತ್ತಾರೆ. ಸ್ವಂತ ಮನೆ ಇಲ್ಲವೇ ಹೇಳಿಕೊಳ್ಳುವಂತಹ ಆಸ್ತಿ, ದೊಡ್ಡ ಮಟ್ಟದ ಉಳಿತಾಯವೇನೂ ಇರುವುದಿಲ್ಲ. ಇವರುಗಳಲ್ಲಿ ಹಲವರು ಆರ್ಥಿಕವಾಗಿ ಬಡತನದ ಸನಿಹದಲ್ಲಿ ಇರುತ್ತಾರೆ. ಬದುಕು ನಡೆಸಲು ಹೆಚ್ಚು ಖಾಸಗಿ ಸಾಲಗಾರರಾಗಿರುತ್ತಾರೆ. ಕೆಳ ಹಂತದ ಸರಕಾರಿ ನೌಕರರು, ಖಾಸಗಿ ಕ್ಷೇತ್ರದ ಕೆಳಹಂತದ ನೌಕರರು, ಮೆಕಾನಿಕ್ ಗಳು, ವೆಲ್ಡರುಗಳಂತಹವರು, ಅಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ರಿಕ್ಷಾ/ಟ್ಯಾಕ್ಸಿ ಚಾಲಕರುಗಳು, ಸಣ್ಣಪುಟ್ಟ ಗುತ್ತಿಗೆದಾರರು, ಸಣ್ಣಪುಟ್ಟ ಅಂಗಡಿ ಮಾಲಿಕರುಗಳು, ಸಣ್ಣ ಪುಟ್ಟ ವ್ಯಾಪಾರಿಗಳು ಮೊದಲಾದವರನ್ನು ಇದರಲ್ಲಿ ಸೇರಿಸಬಹುದು.  

ಮದ್ಯ ಮದ್ಯಮ ವರ್ಗ ಎಂದಾಗ ನಿಗದಿತ ಆದಾಯ ಹೊಂದಿ ಆಹಾರ, ಬಟ್ಟೆ ವಸತಿ, ಶಿಕ್ಷಣಗಳ ಜೊತೆಗೆ ಸ್ವಂತ ಮನೆ, ಮದ್ಯಮ ಆಸ್ತಿ ಹೊಂದಿರುವವರು. ಸ್ವಂತ ನಾಲ್ಕು ಚಕ್ರದ ವಾಹನದ ಜೊತೆಗೆ ಹೇಳಬಹುದಾದ ಬ್ಯಾಂಕ್ ಉಳಿತಾಯಗಳನ್ನು ಹೊಂದಿರುವವರು ಸೇರುತ್ತಾರೆ. ತಾಲ್ಲೂಕು ಮಟ್ಟದ ಸರಕಾರಿ ಅಧಿಕಾರಿಗಳು, ಕೆಳಹಂತದ ಖಾಸಗೀ ಕ್ಷೇತ್ರದ ಅಧಿಕಾರಿಗಳು, ಸಂಘಟಿತ ವಲಯದ ಕಾರ್ಮಿಕರು, ಭಾರಿ ವಾಹನಗಳ ಚಾಲಕರು, ಮದ್ಯಮ ಗಾತ್ರದ ಕಾರ್ಖಾನೆ/ವ್ಯಾಪಾರಗಳ ಒಡೆಯರುಗಳು, ತಮ್ಮ ಮೂಲಭೂತ ಅವಶ್ಯಕತೆಗಳಿಗಿಂತಲೂ ಹೆಚ್ಚಿನ ಆದಾಯವಿರುವ, ಸಾಕಷ್ಟು ಉಳಿತಾಯ ಹೊಂದಿರುವ, ಸ್ವಂತ ಮನೆ ಹಾಗೂ ಆಸ್ತಿ, ಐಷಾರಾಮಿ ವಾಹನಗಳ ಮಾಲಿಕರುಗಳು ಮೊದಲಾದವರನ್ನು ಇದರಲ್ಲಿ ಸೇರಿಸಬಹುದು. ಮೇಲ್ ಮದ್ಯಮ ಎಂದಾಗ ಹೋಲಿಕೆಯಲ್ಲಿ ದೊಡ್ಡ ಮಟ್ಟದ ನಿಗದಿತ ವರಮಾನ, ಹೋಲಿಕೆಯಲ್ಲಿ ಕೆಲವು ಕೋಟಿಗಳ ಆಸ್ತಿ, ಐಷಾರಾಮಿ ಮನೆ ಮತ್ತು ಐಷಾರಾಮಿ ವಾಹನಗಳ ಮಾಲಿಕರುಗಳು, ಕೋಟಿಗಳ ಲೆಕ್ಕದ ಉಳಿತಾಯಗಳನ್ನು ಹೊಂದಿರುವವರು ಮೊದಲಾದವರು ಇದರಲ್ಲಿ ಬರುತ್ತಾರೆ. ಇವರು ಶ್ರೀಮಂತರ ಮಟ್ಟದ ಸನಿಹದಲ್ಲಿ ಇರುತ್ತಾರೆ. ಇವರಲ್ಲಿ ಜಿಲ್ಲಾ/ ರಾಜ್ಯ ಮಟ್ಟದ ಸರಕಾರಿ ಗೆಜೆಟೆಡ್ ಅಧಿಕಾರಿಗಳು, ಎಂಜಿನಿಯರುಗಳು, ಡಾಕ್ಟರುಗಳು, ಐಟಿ, ಬಿಟಿ ನೌಕರರಂತಹವರು, ಗ್ರಾಮೀಣ ಭೂ ಒಡೆಯರುಗಳು ಮೊದಲಾದವರನ್ನು ಸೇರಿಸಬಹುದು.

ತಮ್ಮ ದೈನಂದಿನ ಜೀವನದ ಕನಿಷ್ಠ ಅವಶ್ಯಕತೆಗಳಿಗೂ ಕಷ್ಟ ಪಡುತ್ತಿರುವವರು ಉಳಿತಾಯವಾಗಲೀ, ಹೇಳಿಕೊಳ್ಳುವಂತಹ ಆಸ್ತಿ ಭೂಮಿಯಾಗಲೀ ಇಲ್ಲದವರು ಬಡ ವರ್ಗವೆಂದು ಪರಿಗಣಿಸಬಹುದು. ಇವರ ಬದುಕುಗಳಿಗೆ ಕನಿಷ್ಠ ಭದ್ರತೆ ಕೂಡ ಇರುವುದಿಲ್ಲ. ಶಿಕ್ಷಣ ಮಟ್ಟವೂ ಬಹಳ ಕಡಿಮೆ ಇರುತ್ತದೆ. ಆದಿವಾಸಿ ಜನಸಮುದಾಯಗಳು, ಮುಸ್ಲಿಮರಲ್ಲಿನ ಬಹುಸಂಖ್ಯಾತರು, ದಲಿತರಲ್ಲಿನ ಬಹುಸಂಖ್ಯಾತರು ಗ್ರಾಮೀಣ ಬಡ ರೈತರು, ಗ್ರಾಮೀಣ ಕೃಷಿ ಕೂಲಿಗಳು, ನಗರದ ಕೂಲಿಗಳು, ಅಸಂಘಟಿತ ವಲಯದ ಕೆಳಹಂತದ ಕಾರ್ಮಿಕರು, ಬೀದಿ ಬದಿಯ ಪುಟ್ಟ ವ್ಯಾಪಾರ/ವ್ಯವಹಾರದವರು ಮೊದಲಾದವರನ್ನು ಬಡ ವರ್ಗವೆಂದು ಪರಿಗಣಿಸಬಹುದು. ಈ ವರ್ಗೀಕರಣಗಳ ಪಟ್ಟಿ ಪರಿಪೂರ್ಣವಲ್ಲ. ಸದ್ಯಕ್ಕೆ ಒಂದು ಸಾಮಾನ್ಯ ಗ್ರಹಿಕೆಗಾಗಿ ಮಾತ್ರ ಇದನ್ನು ಪರಿಗಣಿಸಬಹುದು.

ಜಾಗತೀಕರಣದ  ನಂತರ ಮದ್ಯಮವರ್ಗ ಅದರಲ್ಲೂ ನಗರ ಕೇಂದ್ರಿತ ಮದ್ಯ ಹಾಗೂ ಮೇಲ್ ಮದ್ಯಮ ವರ್ಗದ ಜನರಿಗೆ ಭಾರಿ ಅವಕಾಶಗಳನ್ನು ಬಿಂಬಿಸುತ್ತಾ ಬರಲಾಯಿತು. ಉಪಭೋಗಿ ವಸ್ತುಗಳು, ದ್ವಿಚಕ್ರ, ಮತ್ತು ನಾಲ್ಕು ಚಕ್ರದ ವಾಹನಗಳು ಅವರ ಮನೆಗಳ ಭಾಗವಾಗತೊಡಗಿದವು. ಹಲವಾರು ಗ್ರಾಹಕ ಆಯ್ಕೆಗಳನ್ನು ಅವರ ಮುಂದೆ ತೆರೆದಿಡಲಾಯಿತು. ಬ್ಯಾಂಕ್ ಸಾಲ ಸೌಲಭ್ಯಗಳು ಅವರ ಕೈಗಳಿಗೆ ಎಟುಕುವಂತೆ ಮಾಡಲಾಯಿತು. ಅಂತರ್ಜಾಲ ಸೌಲಭ್ಯಗಳಿಂದಾಗಿ ಬದುಕಿನ ಮಟ್ಟದಲ್ಲಿ ಭಾರಿ ಬದಲಾವಣೆಯನ್ನು ಬಿಂಬಿಸಲಾಯಿತು ಇವೆಲ್ಲವುಗಳ ಮೂಲಕ ಅನುಭೋಗಿ ಸಂಸ್ಕೃತಿಯನ್ನು ಇವರುಗಳ ಮದ್ಯೆ ವ್ಯಾಪಕಗೊಳಿಸಲಾಯಿತು. ಉದ್ಯೋಗಾವಕಾಶಗಳ ಭಾರಿ ಭರವಸೆಗಳನ್ನು ಬಿತ್ತಲಾಯಿತು. ಅದರ ಭಾಗವಾಗಿ ಐಟಿ ಕಾಲ್ ಸೆಂಟರ್ ಗಳಂತಹವು ಆರಂಭವಾದವು.

ತೊಂಬತ್ತರ ದಶಕದ ಮದ್ಯದ ವೇಳೆಗೆ ಇಂಡಿಯಾದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ1 ರಷ್ಟಿದ್ದ ಬಿಲಿಯಾಧೀಶರುಗಳ ಸಂಪತ್ತು 2008ರ ವೇಳೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 22ಕ್ಕೆ ಏರುತ್ತದೆ. ಆಗ ಇದ್ದ ಒಟ್ಟು 46 ಬಿಲಿಯಾಧೀಶರುಗಳಲ್ಲಿ 28 ಬಿಲಿಯಾಧೀಶರುಗಳು ಬನಿಯಾ (ಮಾರ್ವಾಡಿ), ಪಾರ್ಸಿ, ಸಿಂಧಿ ಸಮೂಹಗಳಿಗೆ ಸೇರಿದವರು. ಇತರರು ಬ್ರಾಹ್ಮಣ, ಖತ್ರಿ, ನಾಡಾರ್, ಜಾಟ್, ಮತ್ತು ರೆಡ್ಡಿ ಸಮೂಹಗಳ ಹಿನ್ನೆಲೆಯವರು. ಒಬ್ಬರು ಮಾತ್ರ ಮುಸ್ಲಿಂ ಸಮುದಾಯದ ಹಿನ್ನೆಲೆಯವರು.

ಆದರೆ ಜಾಗತೀಕರಣ ಊದಿ ಬಿಟ್ಟ ರಂಗುರಂಗಿನ ಬಲೂನುಗಳು ಒಡೆಯಲು ಹೆಚ್ಚು ಸಮಯ ತೆಗೆದುಕೊಳ‍್ಳಲಿಲ್ಲ. ಉದ್ಯೋಗಾವಕಾಶಗಳು ಕಡಿತಗೊಳ್ಳುತ್ತಾ ಮಾಡಿದ ಸಾಲ ಕಟ್ಟಲಾಗದ ಪರಿಸ್ಥಿತಿಗಳು ಹೆಚ್ಚಾಗತೊಡಗಿದವು. ಐಟಿ ಬಿಟಿ ಕುಸಿತ ಕಂಡವು. ಕೃಷಿಕರು ಆತ್ಮಹತ್ಯೆಗಳಿಗೆ ನೂಕಲ್ಪಟ್ಟರು, ಯುವಕರು  ಆತ್ಮ ಹತ್ಯೆ, ಕಳ್ಳತನ ದರೋಡೆಗಳಿಗೆ ನೂಕಲ್ಪಟ್ಟರು. ಇದರಲ್ಲಿ ಐಟಿ ಬಿಟಿ ಎಂಜಿನಿಯರುಗಳು ಸೇರಿದ್ದರು ಎನ್ನುವುದನ್ನು ಇಲ್ಲಿ ಗುರುತಿಸಬೇಕು.

ಅದೇ ವೇಳೆಯಲ್ಲಿ ಬಿಲಿಯಾಧೀಶರ ಸಂಪತ್ತಿನ ಕ್ರೋಢೀಕರಣಗಳು ಎಗ್ಗಿಲ್ಲದೇ ಸಾಗುತ್ತಲೇ ಬಂದಿದೆ. ಈಗ ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ ಒಂದರಷ್ಟು ಇರುವ ಬಿಲಿಯಾಧೀಶರ ಕೈಯಲ್ಲಿ ದೇಶದ ಬಹುಪಾಲು ಆಸ್ತಿ ಸಂಪತ್ತು ಶೇಕರಣೆಗೊಳ್ಳುತ್ತಲೇ ಹೋಗುತ್ತಿರುವುದರ ವರದಿಗಳು ಬರುತ್ತಲೇ ಇವೆ.

 


ಅಂದರೆ ಜಾಗತೀಕರಣ ಆರಂಭವಾದ ತೊಂಬತ್ತರ ದಶಕದ ಅಂತ್ಯದ ವೇಳೆಗೆ ಭಾರಿ ಅಭಿವೃದ್ಧಿಯನ್ನು ಬಿಂಬಿಸಿದ್ದುದು ನಂತರದಲ್ಲಿ ಕುಸಿತದತ್ತ ಸಾಗತೊಡಗಿತು. ಆದರೆ ಜಿಡಿಪಿ ಅಭಿವೃದ್ಧಿ ದರ ಎರಡಂಕಿಯ ಏರಿಕೆಯಲ್ಲಿತ್ತು. ಅದೇ ವೇಳೆ ಜನಸಾಮಾನ್ಯರಲ್ಲಿ ದೊಡ್ಡ ಕ್ಷೋಭೆಯನ್ನು ಹುಟ್ಟುಹಾಕತೊಡಗಿತು. ಉದಾರೀಕರಣ ಖಾಸಗೀಕರಣ, ವಿದೇಶಿ ನೇರಬಂಡವಾಳಗಳೇ ಅಭಿವೃದ್ಧಿಯ ಮಾನದಂಡಗಳನ್ನಾಗಿ ಬಿಂಬಿಸುವುದು ನಿಲ್ಲಲಿಲ್ಲ. ಅದಕ್ಕೆ ಪೂರಕವಾಗಿ ಮೊದಲಿನ ಕಾನೂನುಗಳ ಸಡಿಲಿಕೆಗಳು ತಿದ್ದುಪಡಿಗಳು, ರದ್ದುಗಳು ಹೆಚ್ಚು ಮಾಡುತ್ತಾ, ದೇಶದ ಗಣಿ, ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್, ವಿಮೆ, ಬ್ಯಾಂಕ್ ಮೊದಲಾದ ಸಾರ್ವಜನಿಕ ಕ್ಷೇತ್ರಗಳನ್ನು ಜಾಗತಿಕ ಬಂಡವಾಳಕ್ಕೆ ಮುಕ್ತಗೊಳಿಸುತ್ತಾ ಬರಲಾಯಿತು.

ಈಗ ಜಾಗತೀಕರಣಕ್ಕೆ ಮೂರು ದಶಕಗಳಾಗಿವೆ. ಈ ಸಂದರ್ಭದಲ್ಲಿ ಜಾಗತಿಕ ಬಂಡವಾಳಶಾಹಿ ಚೇತರಿಸಿಕೊಂಡು ಸ್ಥಿರತೆಯತ್ತ ಸಾಗಲು ಸಾಧ್ಯವಾಗದೇ ಮತ್ತಷ್ಟು ಕುಸಿತದತ್ತಲೇ ಸಾಗುತ್ತಿದೆ. ಜಾಗತೀಕರಣದ ಮೊದಲ ದಶಕದ ಕೊನೆಯ ವೇಳೆಗೆ ಸುಮಾರು ಒಟ್ಟು ಜನಸಂಖ‍್ಯೆಯ ಶೇಕಡಾ 30ರಷ್ಟು ಮದ್ಯಮ ವರ್ಗದ ಜನಸಂಖ್ಯೆ ತಲುಪಿತ್ತು. ನಂತರ ಕೂಡ ದೊಡ್ಡ ಪ್ರಮಾಣದ ಹೆಚ್ಚಳವಾಗುತ್ತಾ ಒಂದು ಅಂದಾಜಿನ ಪ್ರಕಾರ ಒಟ್ಟು 2019 ರ ವೇಳೆಗೆ ಜನಸಂಖ್ಯೆಯ ಶೇಕಡಾ 40ರಷ್ಟಕ್ಕೆ ಮುಟ್ಟಿತ್ತು. ಇದರಲ್ಲಿ ಶೇಕಡಾ 13.7ರಷ್ಟಿರುವ ಗ್ರಾಮೀಣ ಮದ್ಯಮ ವರ್ಗ ಕೂಡ ಸೇರಿದೆ. ಈಗ ಜಾಗತೀಕರಣ ನೀತಿಯ ಹೊಡೆತಗಳ ಕಾರಣದಿಂದಾಗಿ ಇಂಡಿಯಾದ ಮದ್ಯಮ ವರ್ಗದ ಜನಸಂಖ್ಯೆಯಲ್ಲಿ ಭಾರಿ ಇಳಿಕೆ ಕಾಣತೊಡಗಿದೆ. ಅದರಲ್ಲೂ ಕಳೆದ ಎರಡು ವರುಷಗಳಲ್ಲಿ ತೀವ್ರಗತಿಯಲ್ಲಿ ಕಾಣುತ್ತಿದೆ. ಇದಕ್ಕೆ ಕೊರೋನಾ ಒಂದು ನೆಪ ಮಾತ್ರವಾಗಿದೆ. ಜಾಗತೀಕರಣವನ್ನು ಪ್ರಾಯೋಜಿಸಿ ಮಾನ್ಯಗೊಳಿಸಲು ಮದ್ಯಮವರ್ಗವನ್ನೇ ಪ್ರಧಾನವಾಗಿ ಅವಲಂಬಿಸಿದ್ದ ಭಾರಿ ಜಾಗತಿಕ ಕಾರ್ಪೋರೇಟುಗಳು ಹಾಗೂ ಸರ್ಕಾರಗಳು ನಂತರವೂ ಮುಂದುವರೆದ ತಮ್ಮ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲಾಗದೇ ಮದ್ಯಮ ವರ್ಗದ ಜೇಬಿಗೆ ಕತ್ತರಿಹಾಕತೊಡಗಿತು. ಐಟಿಬಿಟಿ ಕುಸಿತ, 2008ರಿಂದ ತೀವ್ರಗೊಂಡ ಜಾಗತಿಕ ಆರ್ಥಿಕ ಹಿಂಜರಿತಗಳೆಲ್ಲಾ ಸೇರಿ ಜನಸಾಮಾನ್ಯರ ಶ್ರಮದ ದುಡಿಮೆಯನ್ನೂ ಎಷ್ಟು ಹಾಗೂ ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾ ದೋಚತೊಡಗಿತು. ಇದರ ನೇರ ಪರಿಣಾಮ ಮದ್ಯಮವರ್ಗದ ಜನರ ಆರ್ಥಿಕತೆಗಳು ಕೆಳಮುಖವಾಗಿ ಸಾಗತೊಡಗಿದವು. ಅದರ ಇದುವರೆಗಿನ ಅತೀಹೆಚ್ಚು ಹೊಡೆತಗಳು ಕೊರೋನಾ ನೆಪದಲ್ಲಿ ಆದವು.

ಕೊರೊನಾ ಬಿಕ್ಕಟ್ಟು ಕೂಡ ಜಾಗತೀಕರಣದ ಬಿಕ್ಕಟ್ಟಿನ ಭಾಗವಾಗಿಯೇ ಸೃಷ್ಟಿಮಾಡಿದ್ದು ಎಂಬುದನ್ನು ಗಮನಿಸಬೇಕು. ಇದು ಒಂದು ಸಹಜ ಸಾಂಕ್ರಾಮಿಕವಾಗಿದ್ದರೂ ಇದನ್ನು ಬಿಕ್ಕಟ್ಟಾಗಿಸಿದ್ದರ ಹಿಂದೆ ಜಾಗತಿಕ ಆರ್ಥಿಕ, ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಕೊರೋನಾ ಸಂಧರ್ಭದಲ್ಲಿ ಹಿಂದಿನಿಂದ ಒಂದಷ್ಟು ಮಟ್ಟದಲ್ಲಿ ಇದ್ದ ಪ್ರಜಾತಾಂತ್ರಿಕತೆ, ಜನಹಿತ ಕಾನೂನುಗಳನ್ನು ಹಲವಾರು ರೂಪಗಳಲ್ಲಿ ಇಲ್ಲದಂತೆ ಮಾಡಿರುವುದು, ಹಿಂದಿನಿಂದ ಒಂದಷ್ಟು ಮಟ್ಟದಲ್ಲಿ ಇದ್ದ ಜನಸಾಮಾನ್ಯರ ಹಕ್ಕುಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೇಲೆ ನಿರ್ಬಂದಗಳನ್ನು ಹೇರಿರುವುದು, ಜನಕಲ್ಯಾಣ ಯೋಜನೆಗಳನ್ನೆಲ್ಲಾ ಹೆಚ್ಚು ಕಡಿಮೆ ರದ್ದಾಗುವಂತೆ ಮಾಡಿ ಸಂಪೂರ್ಣವಾಗಿ ಭಾರಿ ಕಾರ್ಪೋರೇಟು ಪರವಾಗಿ ಸರಕಾರಗಳು ನಿಂತು ಕಾರ್ಯನಿರ್ವಹಿಸುತ್ತಿರುವುದು, ಆರೋಗ್ಯ ಕ್ಷೇತ್ರದ ಮೇಲೆ ಸರಕಾರಗಳ ಹಿಡಿತವಿಲ್ಲದೇ ಖಾಸಗೀ ಹಿಡಿತಕ್ಕೆ ಒಪ್ಪಿಸಿದ್ದು ಮತ್ತು ಇನ್ನಿತರ ಲಾಭಕೋರ ಹಿತಾಸಕ್ತಿಗಳ ಕಾರಣದಿಂದಾಗಿಯೇ ಕೊರೋನಾ ಒಂದು ಜಾಗತಿಕ ಪಿಡುಗಾಗಿ ಬಿಂಬಿಸಲ್ಪಟ್ಟಿದ್ದು ಎನ್ನುವುದು ಈಗೀಗ ಹಲವರಿಗೆ ಅರ್ಥವಾಗತೊಡಗಿರುವ ವಿಚಾರ.

ಕಳೆದ ವರುಷದಿಂದ ಇಲ್ಲಿಯವರೆಗೆ ಇಂಡಿಯಾದ ಮದ್ಯಮ ವರ್ಗದ ಜನಸಂಖ್ಯೆಯಲ್ಲಿ ಭಾರಿ ಇಳಿಕೆಗಳು ಕಾಣುತ್ತಾ ಬಡತನಕ್ಕೆ ದೂಡಲ್ಪಡುತ್ತಿದ್ದಾರೆ. 2020ರ ಒಂದು ವರುಷದ ಅವಧಿಯಲ್ಲೇ ಮದ್ಯಮವರ್ಗದ ಸಂಖ್ಯೆಯ ಶೇಕಡಾವಾರು ಪ್ರಮಾಣವು ಶೇ 2ಕ್ಕಿಂತಲೂ ಹೆಚ್ಚು ಕಡಿತಗೊಂಡಿದೆ ಎಂದು ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ಅಂದರೆ ಆ ಅಂಕಿ ಅಂಶದ ಪ್ರಕಾರ ಮದ್ಯಮ ವರ್ಗದ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಜನರು ಕೇವಲ ಒಂದು ವರ್ಷದ ಅವಧಿಯಲ್ಲೇ ಬಡತನದತ್ತ ತಳ್ಳಲ್ಪಟ್ಟಿದ್ದಾರೆ ಎಂದಾಗುತ್ತದೆ.

ಈ ಪ್ರಕ್ರಿಯೆಗಳು ಭಾರಿ ತೀವ್ರತೆ ಕಂಡಿದ್ದು ನೋಟು ರದ್ದತಿಯೊಂದಿಗೆ ಎಂದು ಹೇಳಬಹುದು. ನಂತರದ ಜಿ. ಎಸ್. ಟಿ ಹೇರಿಕೆ, ಕಾರ್ಮಿಕ ಕಾಯಿದೆಗಳ ಸಡಿಲಿಕೆ ಮತ್ತು ತಿದ್ದುಪಡಿಗಳು, ಹೆಚ್ಳಳಗೊಳಿಸಿದ ಸಾರ್ವಜನಿಕ ಕ್ಷೇತ್ರದ ಉದ್ಯೋಗಾವಕಾಶಗಳ ಕಡಿತಗಳು, ಹೆಚ್ಚಳಗೊಳಿಸಿದ ಸಾರ್ವಜನಿಕ ಕ್ಷೇತ್ರಗಳ ಕಾರ್ಪೋರೇಟೀಕರಣಗಳು.. ಹೀಗೆ ಸಾಗುತ್ತಾ ಬಂದು ಕೊರೋನಾ ನೆಪದಲ್ಲಿ ಹೇರಿದ ಅವೈಜ್ಞಾನಿಕ ಲಾಕ್ ಡೌನ್ ಮತ್ತು ಹಬ್ಬಿಸಿದ ಕೊರೋನಾ ಭಯಾಂದೋಲನಗಳಿಂದಾಗಿ ದೇಶದ ಮದ್ಯಮ ವರ್ಗದ ಒಂದು ದೊಡ್ಡ ಜನಸಂಖ್ಯೆ ತಮ್ಮ ಜೀವಮಾನದ ಉಳಿತಾಯ ಹಾಗೂ ಆಸ್ತಿಗಳನ್ನು ಕಳೆದುಕೊಂಡು ಕುಸಿತಕ್ಕೊಳಗಾಗುತ್ತಾ ಸಾಗಿದೆ.  ತೈಲ ಬೆಲೆಯೇರಿಕೆಯ ಪರಾಕಾಷ್ಟೆ, ಜೊತೆಗೆ ಹೊಸ ಕೃಷಿ ಕಾಯಿದೆಗಳು, ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ಇಳಿಕೆಗಳು, ಭೂ ಕಾಯಿದೆಗಳಿಗೆ ಹೊಸ ತಿದ್ದುಪಡಿಗಳು, ಕಾರ್ಮಿಕ ಕಾಯಿದೆಗಳ ರದ್ದತಿ ಮತ್ತು ತಿದ್ದುಪಡಿಗಳು ಇತ್ಯಾದಿಗಳಿಂದಾಗಿ ಕೋಟ್ಯಾಂತರ ಸಂಖ್ಯೆಯ ಮದ್ಯಮ ವರ್ಗ ಇಂದು ಬಡವರ್ಗಕ್ಕೆ ಸೇರತೊಡಗಿದ್ದಾರೆ. ಈಗ ಹೊರಬರುತ್ತಿರುವ ಹಲವಾರು ವರದಿಗಳು ಹಾಗೂ ಅಂಕಿಅಂಶಗಳು ಇದನ್ನು ದೃಢಪಡಿಸುತ್ತಿವೆ.

ಜೊತೆಗೆ ಸಾಪೇಕ್ಷವಾಗಿ ಮೊದಲಿದ್ದ ಪ್ರಜಾತಾಂತ್ರಿಕ ಅವಕಾಶಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟಿತವಾಗುವ ಅವಕಾಶ ಮೊದಲಾದವುಗಳನ್ನು ಮದ್ಯಮ ವರ್ಗಗಳಿಗೆ; ಅದರಲ್ಲೂ ಸಾಹಿತಿ, ವಕೀಲ, ಬರೆಹಗಾರ, ಪತ್ರಕರ್ತ, ಬುದ್ದಿಜೀವಿ ಸಮೂಹಗಳಿಗೆ, ಇಂದು ದುರ್ಲಭವಾಗತೊಡಗಿವೆ. ದಮನ ಮತ್ತು ನಿರ್ಬಂಧಗಳು ಹೆಚ್ಚಾಗತೊಡಗಿವೆ. ಈ ಎಲ್ಲಾ ಸೇರಿ ಈ ವಲಯಗಳಲ್ಲಿ ತೀವ್ರವಾದ ಅಶಾಂತಿ ಅಸಮಾಧಾನಗಳಿಗೆ ಕಾರಣವಾಗಿದೆ. ಆದರೆ ಬಹುತೇಕವಾಗಿ ಮದ್ಯಮವರ್ಗದ ವಲಯದಲ್ಲಿರುವವರು ಒಂದಲ್ಲಾ ಒಂದು ರೀತಿಗಳಲ್ಲಿ ಸ್ವಕೇಂದ್ರಿತ ಇಲ್ಲವೇ ವ್ಯಕ್ತಿ ಕೇಂದ್ರಿತವಾಗಿಯೇ ಚಿಂತಿಸುವುದು ಹಾಗೂ ಕಾರ್ಯಾಚರಿಸುವ ಗುಣಗಳನ್ನು ಬೆಳೆಸಿಕೊಂಡಿರುವವರಾಗಿದ್ದಾರೆ. ಜಾತೀಯತೆ, ಕೋಮುವಾದದ ಪ್ರಭಾವಗಳಲ್ಲಿ ಮುಳುಗಿರುವುದು ಕೂಡ ಸಾಮೂಹಿಕತೆ ಮತ್ತು ಸಂಘಟನಾಶೀಲತೆಗಳನ್ನು ಬೆಳೆಸಲು ಅಡ್ಡಿಮಾಡುತ್ತಿವೆ. ಜೊತೆಗೆ ಒಣ ಹಮ್ಮು ಹಾಗೂ ಒಣಪ್ರತಿಷ್ಟೆಗಳ ದಾಸರಾಗಿರುವುದರ ಪರಿಣಾಮ ಅಗತ್ಯ ಪ್ರಮಾಣದ ಪ್ರತಿರೋಧ ಈ ವಲಯದಲ್ಲಿ ಹುಟ್ಟುತ್ತಿಲ್ಲ. ಇತರ ಜನಸಮುದಾಯಗಳೊಂದಿಗೆ ಸಹಜವಾಗಿ ಬೆರೆಯುತ್ತಾ ಸಂಘಟಿತ ಶಕ್ತಿಯನ್ನು ಬೆಳೆಸಿಕೊಂಡು ತಮ್ಮ ಮತ್ತು ಇತರ ಜನಸಮುದಾಯಗಳ ಕಳೆದುಹೋಗುತ್ತಿರುವ ಬದುಕಿನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ತೆಗೆದುಕೊಳ್ಳಲಾಗದಂತಾಗಿದ್ದಾರೆ. ಇದು ಆಳುವ ಹಿತಾಸಕ್ತಿಗಳಿಗೆ ಸಾಕಷ್ಟು ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.

  ಸಮಾಜದ ಎಲ್ಲಾ ಜಾತಿ, ಸಮುದಾಯಗಳ ಜೊತೆಗೆ, ತಳಪಾಯದ ಸಮುದಾಯಗಳ ಜೊತೆಗೆ ಒಳಗೊಳ್ಳುತ್ತಾ ಹೆಚ್ಚು ಹೆಚ್ಚು ಪ್ರಜಾತಾಂತ್ರಿಕಗೊಳ್ಳುತ್ತಾ ಸಾಗುತ್ತಿರುವ ದೆಹಲಿಯ ರೈತ ಹೋರಾಟ ಇದಕ್ಕೆ ಒಂದು ಅಪವಾದವಾಗಿ ನಿಲ್ಲುವುದಲ್ಲದೇ ಸಂಘಟಿತ ಜನಹೋರಾಟಗಳಿಗೆ ಹಲವು ಹೊಸ ಹೊಸ ಪಾಠಗಳನ್ನು ಹೇಳುತ್ತಿದೆ. 2013ರಲ್ಲಿ ಭಾರಿ ಕೋಮು ಗಲಭೆಯಲ್ಲಿ ಬೆಂದುಹೋಗಿದ್ದ ಉತ್ತರಪ್ರದೇಶದ ಮುಜಾಫರ್ ನಗರ್ ನಲ್ಲಿ ಇತ್ತೀಚಿಗೆ ನಡೆದ ರೈತರ ಮಹಾಪಂಚಾಯತ್ ನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮುಸ್ಲಿಂ, ಜಾಟ್, ದಲಿತ, ಹಿಂದುಳಿದ ವರ್ಗಗಳಿಗೆ ಸೇರಿದ ರೈತಾಪಿಗಳು ಭಾಗವಹಿಸಿದ್ದು ಇದಕ್ಕೆ ಒಂದು ಒಳ್ಳೆ ಉದಾಹರಣೆಯಾಗಿದೆ.

 

06/09/2021                                                     

 

 

 


 

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...