ತಾಲಿಬಾನ್ ಅಫ್ಘಾನಿಸ್ತಾನವನ್ನು ಅಮೇರಿಕದ
ಹಿಡಿತದಿಂದ ವಿಮೋಚಿತಗೊಳಿಸಿದೆಯೇ….?
-ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು.
ಅಫ್ಘಾನಿಸ್ತಾನ
ಈಗ ಇಂಡಿಯಾದ ಮಾಧ್ಯಮ ಲೋಕದಲ್ಲಿ ಭಾರಿ ಸುದ್ದಿಯಲ್ಲಿದೆ. ಅಂತರಾಷ್ಟ್ರೀಯವಾಗಿಯೂ ಸಾಕಷ್ಟು ಸುದ್ದಿಯನ್ನು
ಮಾಡುತ್ತಿದೆ. ರಾಜ್ಯದ ಹಲವು ಕನ್ನಡ ಟಿವಿ ಮಾಧ್ಯಮಗಳಂತೂ ನಮ್ಮ ರಾಜ್ಯ ಹಾಗೂ ದೇಶದಲ್ಲಿ ಬೇರೇನೂ ಸಮಸ್ಯೆಗಳಾಗಲೀ
ಸುದ್ಧಿಗಳಾಗಲೀ ಇಲ್ಲದೇ ಬರಗೆಟ್ಟವರಂತೆ ಅಪ್ಘಾನಿಸ್ತಾನ… ಅಲ್ಲಿನ ತಾಲಿಬಾನ್… ಅಲ್ಲಿನ ಮಹಿಳಾ ಹಕ್ಕುಗಳು…
ಅಲ್ಲಿನ ಪ್ರಜಾ ಪ್ರಭುತ್ವ.. ಎಂದೆಲ್ಲಾ ಸುಳ್ಳುಗಳು ಹಾಗೂ ಅತಿ ರಂಜಿತತೆ ಬೆರೆಸಿ ಅರಚಾಡುತ್ತಾ ಆ
ಮೂಲಕ ತಮಗೆ ನಿರ್ದೇಶನವಾಗಿರುವ ಕೋಮುವಾದಿ ಕಾರ್ಯಸೂಚಿಯನ್ನು ಭರದಿಂದ ಜಾರಿಯಲ್ಲಿಟ್ಟಿವೆ.
ಅಫ್ಘಾನಿಸ್ತಾನದ ನಗರಗಳು
ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಹೊರಹೊಮ್ಮಿದ ಏಷಿಯಾ ಖಂಡದ ಒಂದು ರಾಷ್ಟ್ರ ಅಫ್ಘಾನಿಸ್ತಾನ. ಇದು 6,52,230 ಚದರ ಕಿಲೋಮೀಟರುಗಳ ವಿಶಾಲ ಭೂಪ್ರದೇಶವನ್ನು ಹೊಂದಿದೆ. ಇಲ್ಲಿನ ಬಹುಸಂಖ್ಯಾತ ಜನಸಮೂಹ ಅಂದರೆ ಜನಸಂಖ್ಯೆಯ ಸುಮಾರು ಶೇಕಡಾ ಎಪ್ಪತ್ತಾರಕ್ಕೂ ಹೆಚ್ಚು ಭಾಗ ಹಿಂದುಳಿದ ಗ್ರಾಮೀಣ ಪ್ರದೇಶಗಳ ನಿವಾಸಿಗಳಾಗಿದ್ದಾರೆ. ಪಶುಪಾಲಕ ಅಲೆಮಾರಿ ಸಮುದಾಯಗಳು ಇಲ್ಲಿ ಹೆಚ್ಚಿವೆ. ಇಲ್ಲಿ ಪಶ್ತೂನ್, ತಾಜಿಕ್, ಉಜ್ಬೆಕ್, ಅಯಿಮಗ್, ಟರ್ಕ್ ಮನ್, ಬಲುಚ್, ಪಾಶಾಯಿ, ನುರಿಸ್ತಾನಿ, ಗುಜ್ಜರ್, ಅರಬ್, ಬ್ರಹೂಯಿ, ಕಿಜಿಬಾಶ್, ಪಾಮಿರಿ, ಕಿರ್ಗಿಜ್, ಸಾದತ್ ಇನ್ನಿತರ ಜನಾಂಗಗಳಿವೆ. ಇವುಗಳಲ್ಲಿ ಬಹುತೇಕವು ಬುಡಕಟ್ಟುಗಳಾಗಿವೆ.
ನೂರಿಸ್ತಾನದ
ಒಂದು ನೋಟ
ಒಟ್ಟು
ಜನಂಖ್ಯೆಯ ಸುಮಾರು ಶೇಕಡಾ 42ರಷ್ಟು ಪಶ್ತೂನರಿದ್ದರೆ, ಶೇಕಡಾ 27ರಷ್ಟು ತಾಜಿಕ್ ಜನಸಂಖ್ಯೆಯಿದೆ.
ಉಜ್ಬೆಕ್ ಹಾಗೂ ಹಾಜಿರಾ ಸಮುದಾಯ ಸುಮಾರು ತಲಾ ಶೇಕಡಾ 9ರಷ್ಟಿವೆ. ಉಳಿದಂತೆ ಚಹರ್ ಐಮೆಕ್ ಸಮುದಾಯ
ಶೇಕಡಾ 4, ಟರ್ಕ್ ಮನ್ ಸಮುದಾಯ ಶೇಕಡಾ 3ರಷ್ಟಿದೆ. ಇನ್ನಿತರ ಸಮುದಾಯಗಳು ಶೇಕಡಾ 6ರಷ್ಟಿವೆ. ಚಾರಿತ್ರಿಕವಾಗಿ
ಸೂಫಿ ಸಿದ್ಧಂತದ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿದೆ. ಸುನ್ನಿ ಮುಸ್ಲಿಂ ಪಂಥ ಶೇಕಡಾ 80ರಷ್ಟಿದೆ . ಶಿಯಾ
ಮುಸ್ಲಿಂ ಪಂಥ ಶೇಕಡಾ 18ರ ಆಸುಪಾಸು ಇದೆ. ಇದು ಸುತ್ತಲೂ ಭೂಪ್ರದೇಶಗಳಿಂದ ಸುತ್ತುವರೆದ ರಾಷ್ಟ್ರವಾಗಿದೆ.
1978ರಲ್ಲಿ
ಇಲ್ಲಿ ಪ್ರಜಾತಾಂತ್ರಿಕ ಗಣರಾಜ್ಯವನ್ನು ಸ್ಥಾಪಿಸಲಾಗಿತ್ತು. 1960ರ ಸುಮಾರಿಗೆ ಆರಂಭವಾದ ಪಿಡಿಪಿ
(ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿ) ಇತರ ಶಕ್ತಿಗಳೊಂದಿಗೆ ಮೈತ್ರಿಕುಟ ಮಾಡಿಕೊಂಡು ನೂರ್ ಮಹಮದ್ ತಾರಿಕಿಯ
ನಾಯಕತ್ವದಲ್ಲಿ ಆಗ ರಾಜಾಡಳಿತವನ್ನು ಕೊನೆಗಾಣಿಸಿ ಆಡಳಿತ ಸೂತ್ರವನ್ನು ಹಿಡಿದಿತ್ತು. ಭೂಹಂಚಿಕೆ ಹಾಗೂ
ಜನಪರ ಸುಧಾರಣೆಗಳನ್ನು ಘೋಷಿಸಲಾಗಿತ್ತು. ಯೋಜನಾಬದ್ದ ಅಭಿವೃದ್ಧಿಗಳನ್ನು ಕೂಡ ಘೋಷಿಸಲಾಗಿತ್ತು. ಕನಿಷ್ಠ
ವೇತನ ನಿಗದಿಗೊಳಿಸಿದ್ದಲ್ಲದೇ, ಶಿಕ್ಷಣ ಆಂದೋಲನ, ಆರೋಗ್ಯ ಯೋಜನೆ, ವಸತಿ, ನಾಗರಿಕ ಸೌಲಭ್ಯ, ರೈತ
ಸಹಕಾರಿಗಳನ್ನು ಜಾರಿಗೆ ತಂದಿತ್ತು. 2001ನವಂಬರ್ 17ರ ತನ್ನಸಂಚಿಕೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ
ಕ್ರಾನಿಕಲ್ ತನ್ನ ವರದಿಯಲ್ಲಿ “ತಾರಿಕಿ ಆಡಳಿತದ ಅವಧಿಯಲ್ಲಿ ಮಹಿಳೆಯರು, ಕೃಷಿ, ಎಂಜಿನಿಯರಿಂಗ್,
ಮತ್ತು ವ್ಯಾಪಾರ ವಹಿವಾಟುಗಳ ಶಿಕ್ಷಣವನ್ನು ಕಾಬೂಲ್ ನಗರದ ವಿಶ್ವವಿದ್ಯಾಲಯದಲ್ಲಿ ಪಡೆಯುತ್ತಿದ್ದರು.
1980ರ ಕಾಲದಲ್ಲಿ ಅಫ್ಘನ್ ಮಹಳೆಯರು ಸರಕಾರಿ ನೌಕರಿಯಲ್ಲಿದ್ದರು. ಏಳು ಜನ ಮಹಿಳೆಯರು ಸಂಸತ್ ಸದಸ್ಯರಾಗಿದ್ದರು.
ವಿಶ್ವವಿದ್ಯಾಲಯದಲ್ಲಿ ಕಲಿಯುವವರಲ್ಲಿ ಶೇಕಡಾ ಐವತ್ತರಷ್ಟು ವಿದ್ಯಾರ್ಥಿನಿಯರಿದ್ದರು” ಎಂದು ವರದಿ
ಮಾಡಿತ್ತು.
ಕಾಬೂಲ್
ನಗರದ ಒಂದು ನೋಟ
ಆದರೆ
ಭೂ ಸುಧಾರಣೆ, ರಾಷ್ಟ್ರೀಕರಣ, ಮಹಿಳಾ ಸಮಾನತೆ ಇನ್ನಿತರ ಜನಪರ ಯೋಜನೆಗಳ ವಿರುದ್ಧ ಅಮೇರಿಕ ಪ್ರಾಯೋಜಿತ
ಮುಜಾಹಿದೀನ್ ಗಳು, ಮುಲ್ಲಾಗಳು ಹಾಗೂ ಭಾರಿ ಆಸ್ತಿವಂತರುಗಳು ಬಂಡಾಯ ಹೂಡುತ್ತಾರೆ. ಈ ಬಂಡಾಯಕ್ಕೆ
ಪಾಕಿಸ್ತಾನ ಹಾಗೂ ಮತ್ತು ಸೌದಿ ಅರೇಬಿಯಾ ಕೂಡ ಸೈನಿಕವೂ ಸೇರಿದಂತೆ ಎಲ್ಲಾ ರೀತಿಯ ಬೆಂಬಲ ನೀಡುತ್ತವೆ.
ಇದೇ ಸಂಧರ್ಭವನ್ನು ಉಪಯೋಗಿಸಿಕೊಂಡು ತಾರಿಕಿ ಸರಕಾರದ ಉನ್ನತ ಅಧಿಕಾರಿ ಹಫೀಜುಲ್ಲಾ ಅಮಿನ್ ಕ್ಷಿಪ್ರ
ಸೇನಾ ದಂಗೆ ನಡೆಸಿ ಸರಕಾರವನ್ನು ಪದಚ್ಯುತಗೊಳಿಸಿ ಅಧ್ಯಕ್ಷ ತಾರಿಕಿಯ ಕೊಲೆ ಮಾಡಿಸುತ್ತಾನೆ. ಹಫೀಜುಲ್ಲಾ
ಅಮೀನ್ ಅಧಿಕಾರ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡು ತಾರಿಖಿ ಸರ್ಕಾರ ಜಾರಗೊಳಿಸಿದ್ದ ಎಲ್ಲಾ ಜನಪರ
ಸುಧಾರಣೆಗಳನ್ನು ರದ್ದುಗೊಳಿಸಿ ಬಿಡುತ್ತಾನೆ. ಸಾವಿರಾರು ಜನ ತಾರಿಖಿ ಬೆಂಬಲಿಗರನ್ನು ಕೊಲೆಮಾಡಿಸುತ್ತಾನೆ.
ಇದನ್ನೆಲ್ಲಾ ಆತ ಅಮೇರಿಕದ ನಿರ್ದೇಶನದಲ್ಲಿಯೇ ಮಾಡಿದ್ದು ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ.
ಅಫ್ಘಾನಿಸ್ತಾನದ ಒಂದು ಪಾರಂಪರಿಕ ತಾಣ
ಆದರೆ ಅಧಿಕಾರ ವಶಪಡಿಸಿಕೊಂಡ ಎರಡು ತಿಂಗಳ ಒಳಗೆ ಪಿಡಿಪಿ ಯ ಸದಸ್ಯರುಗಳು ಪುನರ್ ಸಂಘಟಿತರಾಗಿ ಆತನನ್ನು ಪದಚ್ಯುತಗೊಳಿಸಿ ತಮ್ಮ ಸರಕಾರವನ್ನು ಮರುಸ್ಥಾಪಿಸುತ್ತಾರೆ. 1979ರಲ್ಲಿ ಅಮೇರಿಕ ಬೆಂಬಲಿತ ಮುಜಾಹಿದೀನ್ ಮತ್ತಿತರ ಪ್ರತಿಗಾಮಿ ಶಕ್ತಿಗಳ ಬಂಡಾಯದ ಕಾವು ಜಾಸ್ತಿಯಾಗತೊಡಗಿದಂತೆ ಪಿಡಿಪಿ ಸರಕಾರ ಸೋವಿಯತ್ ರಷ್ಯಾದ ಸೈನಿಕ ನೆರವನ್ನು ಕೇಳುತ್ತದೆ. ಆರಂಭದಲ್ಲಿ ಸೋವಿಯತ್ ರಷ್ಯಾ ಆ ಬಗ್ಗೆ ಪರಿಗಣಿಸುವುದಿಲ್ಲವಾದರೂ ನಂತರ ಪಿಡಿಪಿ ಸರ್ಕಾರದ ನೆರವಿಗೆ ತನ್ನ ಸೇನೆಯನ್ನು ಅಫ‍್ಘಾನಿಸ್ತಾನಕ್ಕೆ ಕಳಿಸುತ್ತದೆ. ಹಫೀಜುಲ್ಲಾ ಅಮೀನ್ ಮತ್ತವನ ಬೆಂಬಲಿಗರು ಕೊಲೆಗೀಡಾಗುತ್ತಾರೆ. ಅದಕ್ಕೂ ಮೊದಲಿನಿಂದಲೂ ಸೋವಿಯತ್ ರಷ್ಯ ಅಫ್ಘಾನಿಸ್ತಾನಕ್ಕೆ ಹಣಕಾಸು ಸೇರಿದಂತೆ ಹಲವು ರೀತಿಯ ನೆರವನ್ನೂ ನೀಡುತ್ತಾ ಬಂದಿದ್ದರೂ ಸೇನೆಯನ್ನು ಕಳಿಸಿರಲಿಲ್ಲ.
ಅಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ಸೇನೆ
ಸೋವಿಯತ್
ರಷ್ಯಾ ಸೇನೆ ಅಫ್ಘಾನಿಸ್ತಾನದಲ್ಲಿ ಹತ್ತುವರುಷಗಳ ಕಾಲ ನೆಲೆಯೂರಿ, ಅದು ಅಫ್ಘಾನಿಸ್ತಾನದ ಮೇಲಿನ ಆಕ್ರಮಣವಾಗಿ
ಮಾರ್ಪಟ್ಟು ಭೀಕರ ಯುದ್ದಕ್ಕೆ ಸಾಕ್ಷಿಯಾಗುತ್ತದೆ. ಈ ಸಮಯದಲ್ಲಿ ಬಾಬ್ರಾಕ್ ಕರ್ಮಾಲ್ ಅಫ್ಘಾನಿಸ್ತಾನದ ಪ್ರಧಾನಿ ಹಾಗೂ ರೆವಲ್ಯೂಷನರಿ ಕೌನ್ಸಿಲ್
ನ ಅಧ್ಯಕ್ಷ ಹಾಗೂ ಪಿಡಿಪಿಎ ಪಕ್ಷದ ಸೆಕ್ರೆಟರಿ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಆ ಸಂಧರ್ಭದಲ್ಲೇ
ಅಮೇರಿಕ ರಷ್ಯಾದ ವಿರುದ್ದ ತಾಲಿಬಾನ್ ಸಂಘಟನೆಯನ್ನು ಪ್ರಾಯೋಜಿಸುತ್ತದೆ. ಸುಮಾರು ನಲವತ್ತು ದೇಶಗಳಿಂದ
ನೇಮಕಾತಿ ಮಾಡಿಕೊಂಡ ಲಕ್ಷಾಂತರ ಮುಜಾಹಿದೀನ್ ಗಳಿಗೆ ತರಬೇತಿ ನೀಡಿ ಯುದ್ಧಕ್ಕೆ ಇಳಿಸುತ್ತದೆ. ಅದರಲ್ಲಿ
ಸೌದಿ ಅರೇಬಿಯಾ ಮೂಲದ ಒಸಾಮಾ ಬಿನ್ ಲಾದೆನ್ ಕೂಡ ಒಬ್ಬ ಎಂದು ಹೇಳಲಾಗುತ್ತಿದೆ.
ಅಫ್ಘಾನಿಸ್ತಾನದ
ಭೂ ಪ್ರದೇಶದ ಒಂದು ನೋಟ
ಅಮೇರಿಕ ತನ್ನ ಗೂಢಚರ ಸಂಸ್ಥೆ ಸಿ ಐ ಎ. ಇನ್ನಿತರ ಅಂಗಗಳ
ಮೂಲಕ ಮುಜಾಹಿದೀನ್ ಇನ್ನಿತರ ಮೂಲಭೂತವಾದಿ ಸಂಘಟನೆಗಳಿಗೆ ಹಣಕಾಸು ಹಾಗೂ ಆಧುನಿಕ ಶಸ್ತ್ರಾಸ್ರ್ತ ನೀಡುತ್ತಾ
ಪೋಷಿಸತೊಡಗುತ್ತದೆ. ಸ್ಟಾಲಿನ್ ಕಾಲದ ನಂತರ ಸಮಾಜವಾದಿ ಗುಣಗಳನ್ನು ಕಳೆದುಕೊಳ್ಳ ತೊಡಗಿದ್ದ ಸೋವಿಯತ್
ರಷ್ಯಾ ಬೆಳೆಸಿಕೊಂಡ ತನ್ನದೇ ಹಲವು ಬಿಕ್ಕಟ್ಟುಗಳು ಹಾಗೂ ಅಂತರಾಷ್ಟ್ರೀಯ ಒತ್ತಡಗಳ ಕಾರಣಗಳಿಂದ 1989ರ
ಫೆಬ್ರವರಿಯಲ್ಲಿ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಾಸು ಕರೆಸಿಕೊಳ್ಳುತ್ತದೆ. ಆಗ ಅಲ್ಲಿ
ನಜೀಬುಲ್ಲಾ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆ. ಅದಾಗಿ ಮೂರು ವರುಷಗಳಲ್ಲಿ ಸೊವಿಯತ್
ರಷ್ಯಾ ಕೈಗೊಂಬೆಯಾದ ನಜೀಬುಲ್ಲಾ ನೇತೃತ್ವದ ಪಿಡಿಪಿ ಸರಕಾರದ ಆಡಳಿತ ಕೊನೆಗೊಳ‍್ಳುತ್ತದೆ. ಮುಜಾಹಿದೀನ್
ಗಳ ಆಡಳಿತ ಆರಂಭವಾಗುತ್ತದೆ. ಅದು ಮತ್ತಷ್ಟು ಅಂತರ್ಯದ್ದಗಳಿಗೆ ಕಾರಣವಾಗುತ್ತದೆ. 1995ರಲ್ಲಿ ತಾಲಿಬಾನ್
ಆಡಳಿತ ಸ್ತಾಪಿಸುತ್ತದೆ. ಎಲ್ಲಾ ಪ್ರಗತಿಪರತೆಗಳನ್ನು ತಳ್ಳಿಹಾಕಿ ಪ್ರತಿಗಾಮಿ ಊಳಿಗಮಾನ್ಯ ನಿರ್ಭಂಧಗಳನ್ನು
ಜನರ ಅದರಲ್ಲೂ ಮಹಿಳೆಯರ ಮೇಲೆ ಹೇರುತ್ತದೆ.
ಈಗ
ಆ ರಾಷ್ಟ್ರದ ಅರ್ದಕ್ಕೂ ಹೆಚ್ಚಿನ ಜನಸಂಖ್ಯೆಗೆ ಕುಡಿಯುವ ನೀರು ಕೂಡ ಇಲ್ಲ. ರೈಲು ಸೌಲಭ್ಯ ಇನ್ನೂ
ಬಂದಿಲ್ಲ. ರಸ್ತೆ ಇತ್ಯಾದಿ ನಾಗರಿಕ ಸೌಲಭ್ಯಗಳು ಅತ್ಯಲ್ಪವಾಗಿವೆ. ಭೂಸಂಪತ್ತಿನ ಶೇಕಡಾ ಎಪ್ಪತ್ತಕ್ಕೂ
ಹೆಚ್ಚು ಪಾಲು ಕೇವಲ ಶೇಕಡಾ ಒಂದರಿಂದ ಎರಡು ಇರುವ ಆಸ್ತಿವಂತರ ಹಿಡಿತದಲ್ಲಿದೆ. ಯುದ್ಧಕೋರ ಆಸ್ತಿವಂತರುಗಳು
ಹಲವು ಪ್ರದೇಶಗಳಲ್ಲಿ ತಮ್ಮ ಅಧಿಪತ್ಯಗಳನ್ನು ಹೊಂದಿದ್ದಾರೆ. ಹೆಚ್ಚಾಗಿ ಆಮದಿನ ಮೇಲೆಯೇ ಅವಲಂಬಿತವಾಗಿರುವ
ರಾಷ್ಟ್ರವಿದು. ಕೃಷಿ ಹಾಗೂ ಕೈಗಾರಿಕೆಗಳು ಬಹಳ ಹಿಂದುಳಿದ ಮಟ್ಟದಲ್ಲಿವೆ. ಶಿಕ್ಷಣ ಮಟ್ಟ ಬಹಳ ಕಡಿಮೆ
ಇದೆ. ಒಂದು ಅಂದಾಜಿನ ಪ್ರಕಾರ ಅದು ಒಟ್ಟು ಜನಸಂಖ್ಯೆಯ ಶೇಕಡಾ 30ರಷ್ಟು ಇದೆ. ಹಾಗಾಗಿ ಪತ್ರಿಕೆಗಳು
ಬಹಳ ಕಡಿಮೆ ಇವೆ. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ ಬಹಳ ಹಿಂದಿದೆ. ಮುಸ್ಲಿಂ ಧಾರ್ಮಿಕತೆ ಹಾಗೂ ಊಳಿಗಮಾನ್ಯ
ಕಟ್ಟುಪಾಡುಗಳಿಂದಾಗಿ ಜನಸಾಮಾನ್ಯರು ಅದರಲ್ಲೂ ಮಹಿಳೆಯರ ಸಂಕಷ್ಟಗಳು ಬಹಳ ಹೆಚ್ಚಾಗಿವೆ. ಶಿಕ್ಷಣ ವ್ಯವಸ್ಥೆಯೇ
ಬಹಳ ಅತ್ಯಲ್ಪವಾಗಿದೆ. ಗಣಿಗಾರಿಕೆ ಬಿಟ್ಟರೆ ಭಾರಿ ಕೈಗಾರಿಕೆಗಳು ಇಲ್ಲ. ಬ್ಯಾಂಕಿಂಗ್ ವ್ಯವಸ್ಥೆ
ಬಹಳ ಕಡಿಮೆ. ದೂರವಾಣಿ ಜಾಲ ವ್ಯವಸ್ಥೆ ಕಡಿಮೆ ಇದೆ. 2019ರ ಅಂದಾಜಿನ ಪ್ರಕಾರ ಮೊಬೈಲ್ ಜಾಲ ಪ್ರತಿ
ನೂರು ಜನರಿಗೆ 63ರಷ್ಟು ಇದೆ. ಅಂತರ್ಜಾಲ ಸಂಪರ್ಕ ಒಟ್ಟು ಜನಸಂಖ್ಯೆಯ ಶೇ 13.5 ರಷ್ಟು ಇದೆ. 46ರಷ್ಟು
ವಿಮಾನ ನಿಲ್ದಾಣಗಳನ್ನು ಈ ರಾಷ್ಟ್ರ ಹೊಂದಿದೆ. ಇವುಗಳು ಬಹುತೇಕವಾಗಿ ಅಮೇರಿಕದ ಯುದ್ಧ ಅವಶ್ಯಕತೆಗಳಿಗಾಗಿ
ಬಳಕೆಯಾಗುತ್ತಿದ್ದವು. ವಿಮಾನ ಸೇವೆ ಅತ್ಯಲ್ಪವಾಗಿದೆ.
ಕಳೆದ
ಇಪ್ಪತ್ತು ವರುಷಗಳಿಂದ ಅಫ್ಘಾನಿಸ್ತಾನವನ್ನು ಆಕ್ರಮಿಸಿ ಇಟ್ಟುಕೊಂಡು ತನ್ನ ಕೈಗೊಂಬೆ ಸರ್ಕಾರದ ಮೂಲಕ
ಆಡಳಿತ ನಡೆಸಲು ಹೊರಟಿದ್ದ ಅಮೇರಿಕ ತನ್ನ ಎಲ್ಲಾ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ಈಗ
ಬಹುತೇಕವಾಗಿ ಪೂರ್ಣಗೊಳಿಸಿದೆ. ಅಮೇರಿಕ ಪಡೆಗಳು ಹಿಂದ್ಸರಿದಂತೆಲ್ಲಾ ತಾಲಿಬಾನಿಗಳು ಆ ಪ್ರದೇಶಗಳನ್ನು
ಸುಲಭವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾ ಬಂದು ಇದೀಗ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಹೆಚ್ಚೂ
ಕಡಿಮೆ ಇಡೀ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಾಗಿದೆ.
ಅಫ್ಘಾನಿಸ್ತಾನದಿಂದ ಹೊರಹೊರಟಿರುವ ಅಮೇರಿಕ ಸೇನೆ
ವಿಶ್ವಬ್ಯಾಂಕ್
ನ ಆರ್ಥಿಕ ತಜ್ಞನಾಗಿ ಕಾರ್ಯ ನಿರ್ವಹಿಸಿದ್ದ ಅಮೇರಿಕ ಕೈಗೊಂಬೆಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಕಾರುಗಳಲ್ಲಿ
ಹೆಲಿಕಾಪ್ಟರುಗಳಲ್ಲಿ ನೋಟಿನ ಕಂತೆಗಳ ಮೂಟೆಗಳನ್ನು ಹಾಗೂ ಚಿನ್ನ ವಜ್ರಗಳ ಗಂಟುಗಳನ್ನು ತುಂಬಿಕೊಂಡು
ದೇಶ ತೊರೆದು ಓಡಿದ್ದಾನೆ.
1994ರ
ಸುಮಾರಿಗೆ ಆರಂಭವಾದ ತಾಲಿಬಾನ್ (ಪಶ್ತೂನ್ ಭಾಷೆಯಲ್ಲಿ ಇದರ ಅರ್ಥ ವಿದ್ಯಾರ್ಥಿ ಎಂದಾಗಿದೆ) ಎರಡನೇ
ಬಾರಿ ಅಫ್ಘಾನಿಸ್ತಾನದಲ್ಲಿ ಆಡಳಿತ ಸೂತ್ರ ಹಿಡಿಯುವಂತಾಗಿದೆ. ಆರಂಭದಲ್ಲಿ ಇದರ ಪೋಷಕರು ಹಾಗೂ ಹಣಕಾಸು
ನೆರವು ಹಾಗೂ ಶಸ್ತ್ರಾಸ್ತ್ರಗಳನ್ನು ಒದಗಿಸಿದವರು ಅಮೇರಿಕ ಹಾಗೂ ಪಾಕಿಸ್ತಾನಗಳಂತಹ ರಾಷ್ಟ್ರಗಳೇ ಆಗಿದ್ದವು
ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಗಝ್ನಿಯ
ಪಾರಂಪರಿಕ ತಾಣ
ಅದೇ
ರೀತಿಯಲ್ಲಿ ಹಿಂದಿನ ಅಮೇರಿಕ ಪೋಷಿತ ಸರಕಾರದಲ್ಲಿದ್ದ ಸೇನಾಧಿಕಾರಿಗಳು, ಪೊಲಿಸ್ ಅಧಿಕಾರಿಗಳು, ಸರಕಾರಿ
ಅಧಿಕಾರಿಗಳು, ತಾವುಗಳು ದೋಚಿ ಇಟ್ಟುಕೊಂಡಿದ್ದ ಹಣ ಸಂಪತ್ತುಗಳೊಂದಿಗೆ ಕುಟುಂಬಗಳನ್ನು ಕರೆದುಕೊಂಡು
ಅಮೇರಿಕ ಸಹಕಾರದೊಂದಿಗೆ ರಾಷ್ಟ್ರ ತೊರೆದಿದ್ದಾರೆ. ಹಿಂದಿನ ಸರಕಾರಿ ನೌಕರರಲ್ಲಿ ಹಲವರು ತಮ್ಮ ಕುಟುಂಬಗಳೊಂದಿಗೆ
ರಾಷ್ಟ್ರ ಬಿಟ್ಟು ಪಲಾಯನ ಮಾಡುವಾಗ ಪಡಬಾರದ ಕಷ್ಟ ಪಡುತ್ತಿದ್ದಾರೆ. ಅದರ ನೂಕು ನುಗ್ಗಲಿನಲ್ಲಿ ಹಲವರು
ಸತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಜೊತೆಗೆ ಈ ಹಿಂದೆ ಅಮೇರಿಕದ ಪರವಾಗಿ ಕೆಲಸ ಮಾಡಿದ ಹಲವು
ಆಸ್ತಿವಂತ ಕುಟುಂಬಗಳು, ಸ್ಥಳೀಯ ಪುಡಾರಿಗಳು ಕೂಡ ತಮ್ಮ ಸಂಪತ್ತುಗಳೊಂದಿಗೆ ರಾಷ್ಟ್ರ ತೊರೆಯಲು ಹಲವು
ಮಾರ್ಗಗಳನ್ನು ಎಡತಾಕುತ್ತಿದ್ದಾರೆ. ಇನ್ನಿತರ ಹಲವರು ತಮ್ಮದೇ ಕಾರಣಗಳು ಹಾಗೂ ಭಯಗಳಿಂದಾಗಿ ರಾಷ್ಟ್ರ
ತೊರೆಯುತ್ತಿದ್ದಾರೆ. ಆದರೆ ಹಾಗೆ ರಾಷ್ಟ್ರ ತೊರೆಯುವವರಲ್ಲಿ ಗ್ರಾಮೀಣ ಭಾಗದ ಜನಸಾಮಾನ್ಯರು ಇಲ್ಲವೆನ್ನುವಷ್ಟು
ಕಡಿಮೆ ಎನ್ನಬಹುದು.
ರಾಷ್ಟ್ರ
ತೊರೆಯಲು ವಿಮಾನದ ಒಳಗೆ ಸೇರಿಕೊಂಡಿರುವ ಜನರು.
ಯಾರೂ ಹೆದರಬೇಕಾಗಿಲ್ಲ ನಮಗೇನೂ ಯಾರ ಮೇಲೂ ದ್ವೇಷವಿಲ್ಲ,
ಸರಕಾರಿ ನೌಕರರಾಗಲೀ ಜನರಾಗಲೀ ರಾಷ್ಟ್ರ ತೊರೆಯಬೇಕಿಲ್ಲ, ಮಹಿಳಾ ಶಿಕ್ಷಣಕ್ಕೆ ನಮ್ಮ ವಿರೋಧವಿಲ್ಲ,
ಮಹಿಳೆಯರು ನಮ್ಮ ಸರ್ಕಾರದ ಭಾಗವಾಗುತ್ತಾರೆ, ನೌಕರರಾಗಿಯೂ ಮುಂದುವರೆಯಬಹುದು, ಯಾರೂ ಗೊಂದಲಗೊಳ್ಳಬೇಕಿಲ್ಲ
ಎಂದೆಲ್ಲಾ ತಾಲಿಬಾನ್ ಸಂಘಟನೆ ಹೇಳಿಕೆ ನೀಡಿದ್ದರೂ ಅದನ್ನು ನಂಬುವ ಸ್ಥಿತಿಯಲ್ಲಿ ಬಹುತೇಕರು ಇಲ್ಲ.
ಇದರ ಜೊತೆಗೆ ಅಫ್ಘಾನಿಸ್ತಾನ ಇನ್ನು ಮುಂದೆ ಇಸ್ಲಾಮಿಕ್ ರಾಷ್ಟ್ರವಾಗಿದ್ದು; ಇಸ್ಲಾಮಿಕ್ ಶರಿಯಾಗಳ
ಆದಾರದಲ್ಲಿ ಆಡಳಿತ ಇರುತ್ತದೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತಾಲಿಬಾನ್ ಮನೆಮನೆಗ
ತೆರಳಿ ಶೋಧನೆ ನಡೆಸುತ್ತಾ ತಮ್ಮ ವಿರುದ್ಧವಿರುವ ವ್ಯಕ್ತಿಗಳನ್ನು ಸೆರೆಹಿಡಿಯುತ್ತಿರುವ ಸುದ್ಧಿಗಳು
ಹರಿದಾಡುತ್ತಿವೆ. ಇದಲ್ಲದೇ ನೂರಾರು ಸುಳ್ಳು ವೀಡಿಯೋಗಳನ್ನು ಕೂಡ ವ್ಯಾಪಕವಾಗಿ ಹರಡಲಾಗುತ್ತಿದೆ.
ಒಂದಂತೂ
ಸ್ಪಷ್ಟ ಸದ್ಯಕ್ಕೆ ತಾಲಿಬಾನ್ ಅಪ್ಘಾನಿಸ್ತಾನದ ಆಳುವ ಸರ್ಕಾರವಾಗಿದೆ. ತಾಲಿಬಾನ್ ಎಂದಾಗ ಅದು ಏಕರೂಪದ
ಸಂಘಟನೆಯೂ ಅಲ್ಲ. ಹಲವಾರು ಬಂಡುಕೋರ ಗುಂಪುಗಳನ್ನು ಒಳಗೊಂಡಿರುವ ಒಂದು ಸಂಘಟನೆಯಾಗಿದೆ. ತಾಲಿಬಾನ್
ವಿರುದ್ಧ ನಿಂತಿರುವ ಮುಜಾಹಿದೀನ್, ಅಲ್ ಕೈದಾದಂತಹ ಬಂಡುಕೋರ ಸಂಘಟನೆಗಳು ಹಾಗೂ ಯುದ್ದಕೋರ ಬುಡಕಟ್ಟು
ನಾಯಕರುಗಳು ಈಗಲೂ ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಾ ಕೆಲವು ಪ್ರದೇಶಗಳನ್ನು ಕೂಡ ತಮ್ಮ
ಹಿಡಿತದಲ್ಲಿ ಇಟ್ಟುಕೊಂಡಿವೆ. ಅಲ್ಲದೇ ತಮ್ಮದೇ ಸಂಘಟನೆಗಳನ್ನು ಕೂಡ ರೂಪಿಸಿಕೊಂಡಿವೆ. ಅವುಗಳಲ್ಲಿ
ಉತ್ತರದ ಮೈತ್ರಿಕೂಟ ಹಾಗೂ ರಾಷ್ಟ್ರೀಯ ಪ್ರತಿರೋಧ ರಂಗ ಪ್ರಧಾನವಾಗಿವೆ. ಇವುಗಳು ತಮ್ಮದೇ ಶರತ್ತುಗಳೊಂದಿಗೆ
ತಾಲಬಾನ್ ಸರ್ಕಾರದಲ್ಲಿ ಸೇರಿಕೊಳ್ಳುವ ಇರಾದೆಗಳನ್ನು ವ್ಯಕ್ತಪಡಿಸಿವೆ. ಆದರೆ ತಮ್ಮ ಶರತ್ತುಗಳನ್ನು
ಒಪ್ಪಿಕೊಳ್ಳದಿದ್ದರೆ ತಾಲಿಬಾನ್ ವಿರುದ್ದ ಸಮರವನ್ನು ಆಯ್ದುಕೊಳ್ಳುವುದಾಗಿ ಸ್ಪಷ್ಟಪಡಿಸಿವೆ.
ಅಮೇರಿಕ
ಸೇರಿದಂತೆ, ರಷ್ಯಾ, ಚೀನಾ, ಇಂಡಿಯಾ, ಇರಾನ್, ಯು.ಎ.ಇ, ಸೌದಿಅರೇಬಿಯಾ ಮೊದಲಾದ ದೇಶಗಳು ಒಪ್ಪಿಕೊಂಡಿವೆ.
ಅಮೇರಿಕ, ರಷ್ಯ, ಚೀನ, ಪಾಕಿಸ್ತಾನ, ಇರಾನ್ ಗಳು ಬಹಿರಂಗವಾಗಿಯೇ ಒಪ್ಪಿಕೊಂಡು ರಾಜ ತಾಂತ್ರಿಕ ಸಂಬಂಧಗಳನ್ನು
ಏರ್ಪಡಿಸಿಕೊಂಡಿವೆ. ಚೀನಾ, ಅಮೇರಿಕ, ರಷ್ಯಾ ಮೊದಲಾದ ರಾಷ್ಟ್ರಗಳು ಈ ಮೊದಲೇ ಅಫ್ಘಾನಿಸ್ತಾನದ ತೈಲ.
ನೈಸರ್ಗಿಕ ಅನಿಲ, ಲೀಥಿಯಂ, ಕಬ್ಬಿಣ ಮೊದಲಾದ ಸಂಪತ್ತಿನ ಮೇಲೆ ಭಾರಿ ಮೊತ್ತವನ್ನು ಹೂಡಿಕೆ ಮಾಡಿವೆ.
ಇಂಡಿಯಾ
ಕೂಡ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ತಾಲಿಬಾನಿನೊಂದಿಗೆ ರಾಜ ತಾಂತ್ರಿಕವಾಗಿ ಸಂಬಂಧಗಳನ್ನು ಕುದುರಿಸಿ
ಬಹಳ ಕಾಲವಾಗಿದೆ. ಇಂಡಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ನೇರವಾಗಿ ತಾಲಿಬಾನ್ ಸಂಘಟನೆಯೊಂದಿಗೆ
ಮಾತುಕತೆ ನಡೆಸಿರುವುದು ಈಗ ಹಳೆಯ ಸುದ್ದಿ. ಅಲ್ಲದೇ ಇಂಡಿಯಾ ತಾಲಿಬಾನ್ ಆಡಳಿತದ ಬಗ್ಗೆ ಯಾವುದೇ ಬಹಿರಂಗ
ಹೇಳಿಕೆಯನ್ನು ಇದುವರೆಗೂ ನೀಡಿಲ್ಲ. ಇಂಡಿಯಾ ಮೂಲದ ಭಾರಿ ಉದ್ಯಮಿಗಳು ಸಾವಿರಾರು ಕೋಟಿಗಳನ್ನು ಅಫ್ಘಾನಿಸ್ತಾನದಲ್ಲಿ
ಹೂಡಿದ್ದಾರೆ ಎಂಬುದನ್ನು ಗಮನದಲಿಟ್ಟುಕೊಳ್ಳಬೇಕು.
ದೋಹದಲ್ಲಿ
ತಾಲಿಬಾನ್ ಅಮೇರಿಕ ಒಪ್ಪಂದ
ವರ್ಲ್ಡ್
ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ ಮೇಲೆ 2001 ಸೆಪ್ಟಂಬರ್ 11ರಲ್ಲಿ ನಡೆದ ದಾಳಿಯ ನೆಪದಲ್ಲಿ ಜಾಗತಿಕವಾಗಿ
ಭಯೋತ್ಪಾದನೆಯ ವಿರುದ್ಧ ಯುದ್ದವನ್ನು ಅಮೇರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಜೂನಿಯರ್
ಘೋಷಿಸುತ್ತಾರೆ. ದಾಳಿ ನಡೆಸಿದ್ದು ಅಲ್ ಖಾಯಿದಾ ದ ಒಸಾಮಾ ಬಿನ್ ಲಾಡೆನ್ ಎಂದು ಆರೋಪಿಸಲಾಗುತ್ತದೆ.
ಆತನಿಗೆ ತಾಲಿಬಾನ್ ಸರ್ಕಾರ ಆಶ್ರಯ ನೀಡಿ ಬೆಂಬಲಿಸುತ್ತಿದೆ ಎಂಬ ಆರೋಪವನ್ನು ಅಮೇರಿಕ ಮಾಡುತ್ತದೆ.
ಒಸಾಮಾ ಬಿನ್ ಲಾಡೆನ್ ಅನ್ನು ತನಗೆ ಒಪ್ಪಿಸಬೇಕೆಂದು ಅಮೇರಿಕ ತಾಲಿಬಾನ್ ಸರ್ಕಾರವನ್ನು ಒತ್ತಾಯಿಸುತ್ತದೆ.
ಆ ಬಗ್ಗೆ ಸಾಕ್ಷಿ ಪುರಾವೆಗಳನ್ನು ನಮಗೆ ಕೊಡಿ ನಾವು ಪರಿಶೀಲಿಸುತ್ತೇವೆ ಎಂದು ತಾಲಿಬಾನ್ ಸರ್ಕಾರ
ಅಮೇರಿಕಕ್ಕೆ ಹೇಳುತ್ತದೆ. ಅಮೇರಿಕ ಅಂತಹ ಸಾಕ್ಷ್ಯ ಪುರಾವೆಗಳನ್ನು ಕೊಡುವುದಿಲ್ಲ. ವಾಸ್ತವದಲ್ಲಿ
ಅಮೇರಿಕ ಈಗಲೂ ಕೂಡ ತನ್ನ ಒಸಾಮಾ ಬಿನ್ ಲಾಡೆನ್ ಮೇಲಿನ ಆರೋಪಗಳನ್ನು ಸಮರ್ಥಿಸುವ ದಾಖಲೆಗಳನ್ನು ಬಹಿರಂಗಗೊಳಿಸಿಲ್ಲ.
ಅಮೇರಿಕ
ಮತ್ತದರ ಮಿತ್ರ ರಾಷ್ಟ್ರಗಳು 2001 ಅಕ್ಟೋಬರ್ 7ರಂದು ಒಸಾಮಾ ಬಿನ್ ಲಾಡೆನ್ ಹಿಡಿಯುವ ನೆಪದಲ್ಲಿ ಅಫ್ಘಾನಿಸ್ತಾನದ
ಮೇಲೆ ವೈಮಾನಿಕ ಧಾಳಿಗಳಿಗೆ ಮೊದಲಿಡುತ್ತದೆ. ಬೇಕಾಬಿಟ್ಟಿ ಬಾಂಬುಗಳನ್ನುಅಫ್ಘಾನಿಸ್ತಾನದ ಮೇಲೆ ಎಸೆಯುತ್ತಾ
ಸಾವಿರಾರು ಅಫ್ಘಾನಿಸ್ತಾನಿಯರ ಸಾವಿಗೆ ಕಾರಣವಾಗುತ್ತಾರೆ. ತಾಲಿಬಾನ್ ಹಿಂದ್ಸರಿದು ತನ್ನ ಗ್ರಾಮೀಣ
ನೆಲೆಗಳಿಗೆ ತೆರಳಿ ಗೆರಿಲ್ಲಾ ಯುದ್ಧವನ್ನು ಮುನ್ನೆಡೆಸುತ್ತದೆ.
ಎರಡು ತಿಂಗಳ ಒಳಗೆ ತಾಲಿಬಾನ್ ಸರಕಾರವನ್ನು ಬೀಳಿಸಿ ಅಮೇರಿಕ
ತನ್ನ ಕೈಗೊಂಬೆ ಸರಕಾರವನ್ನು ಹಮೀದ್ ಕರ್ಜಾಯಿ ನೇತೃತ್ವದಲ್ಲಿ ರಚಿಸುತ್ತದೆ. ಅದೇ ಸರಕಾರದ ಅಡಿಯಲ್ಲಿ
ಚುನಾವಣೆಯೆಂಬ ಪ್ರಹಸನಗಳನ್ನೂ ನಡೆಸುತ್ತದೆ. ಹಮೀದ್ ಕರ್ಜಾಯಿ 2001ರ ಡಿಸೆಂಬರ್ ನಿಂದ 2014ರ ಸೆಪ್ಟಂಬರ್
ವರೆಗೆ ಎರಡು ಅವಧಿಗೆ ಅಧ್ಯಕ್ಷರಾಗಿದ್ದರೆ ನಂತರ ಚುನಾವಣಾ ಪ್ರಹಸನದ ಮೂಲಕ ಅಧ್ಯಕ್ಷರಾಗಿ ಬಂದವರು
ಅಶ್ರಫ್ ಘನಿ. ಪ್ರಹಸನ ಎಂದು ಕರೆಯಲು ಕಾರಣ ಈ ಚುನಾವಣೆಗಳಲ್ಲಿ ಜನರ ಬಾಗವಹಿಸುವಿಕೆ ನಾಮ ಮಾತ್ರದ್ದಾಗಿತ್ತು
ಹಾಗೂ ಅಕ್ರಮಗಳು ವ್ಯಾಪಕವಾಗಿದ್ದವು ಎಂಬ ವರದಿಗಳಿವೆ. ಸ್ವತಹ ಅಪ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಿದ
ಮ್ಯಾಥ್ಯೂ ಹೋ ರಂತಹ ಅಮೇರಿಕದ ಸೇನಾಧಿಕಾರಿಗಳು ಕೆಲವರು ಈ ವಿಚಾರಗಳನ್ನು ಹೇಳಿದ್ದಾರೆ. ಅಮೇರಿಕ ಸೇನೆಯೇ
ಇಂತಹ ಅಕ್ರಮಗಳಲ್ಲಿ ಭಾಗಿಯಾಗಿತ್ತು ಎಂಬುದನ್ನೂ ಇವರುಗಳು ಹೇಳಿದ್ದಾರೆ.
ಈ ಇಬ್ಬರು ಅಧ್ಯಕ್ಷರುಗಳ ಅವಧಿಗಳಲ್ಲೂ ಇಡೀ ಅಫ್ಘಾನಿಸ್ತಾನದ
ಮೇಲಿನ ಪೂರ್ಣ ಹಿಡಿತ ಇವರ ಸರಕಾರಗಳ ಕೈಯಲ್ಲಿ ಇರಲಿಲ್ಲ. ಕೇವಲ ಕಾಬೂಲ್, ಕಂದಹಾರ್, ಹೆರಾತ್ ನಂತಹ
ಕೆಲವು ನಗರಗಳಲ್ಲಿ ಮಾತ್ರ ಸರಕಾರಿ ಆಡಳಿತ ಇತ್ತು. ಅಮೇರಿಕದ ಸೇನೆ ಕೂಡ ಗ್ರಾಮೀಣ ಪ್ರದೇಶಗಳಲ್ಲಿ
ನೆಲೆ ಸ್ಥಾಪಿಸಿರಲಿಲ್ಲ. ಅಲ್ಲಿ ಬಹುತೇಕವಾಗಿ ತಾಲಿಬಾನ್ ಹಾಗೂ ಇನ್ನಿತರ ಯುದ್ಧಕೋರ ಬುಡಕಟ್ಟು ನೇತಾರರದೇ
ಆಡಳಿತವಿತ್ತು.
ಅಮೇರಿಕ
ಅಂತಹ ಕೆಲವು ಯುದ್ಧಕೋರ ಬುಡಕಟ್ಟು ನಾಯಕರನ್ನು ತನ್ನೊಂದಿಗೆ ಒಳಗೊಳಿಸಿದ್ದರೂ ಅದು ಆಯಾ ಜನರಿಗೆ ಅಂಗೀಕಾರವಾಗಿರಲಿಲ್ಲ.
ಬದಲಿಗೆ ಅಮೇರಿಕ ವಿರೋಧಿ ಭಾವನೆಗಳೂ ಬೆಳೆಯುತ್ತಾ ಹೋದವು. ಹಾಗಾಗಿ ಅಮೇರಿಕ ಸೇನೆಗೆ ಅಫ್ಘಾನಿಸ್ತಾನದ
ಜನರ ಬೆಂಬಲ ಸಿಗದೇ ನರಳಬೇಕಾದ ಪರಿಸ್ಥಿತಿ ಹೆಚ್ಚುತ್ತಾ ಹೋಯಿತು. ಜೊತೆಗೆ ತಾಲಿಬಾನ್, ಮುಜಾಹಿದೀನ್,
ಅಲ್ ಖೈದಾ ಇನ್ನಿತರ ಬಂಡುಕೋರರ ಧಾಳಿಗಳನ್ನು ತಡೆಯಲು ಸಾಧ್ಯವಾಗದೇ ಕೇವಲ ಆಯ್ದ ನಗರ ಪ್ರದೇಶಗಳಲ್ಲಿ
ಕೋಟೆಗಳಂತಹ ನಿರ್ಮಾಣಗಳ ಒಳಗೆ ಇರಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಿಸಿತು. ಅಮೇರಿಕ, ಸೋವಿಯತ್ ರಷ್ಯಾ
ಇನ್ನಿತರ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳು ಮಾಡಿರುವ ಅವಾಂತರಗಳಿಂದ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು
ಕಾಲ ಅಫ್ಘಾನಿಸ್ತಾನ ಯುದ್ದ ಹಾಗೂ ಬಂಡುಕೋರ ಚಟುವಟಿಕೆಗಳಡಿ ಮುಳುಗಿ ನಲುಗಿ ಹೋಗಿದೆ. ಆಗಿರುವ ಹಾನಿ
ಸುಲಭದಲ್ಲಿ ಸರಿಪಡಿಸಲು ಸಾಧ್ಯವಾಗದಂತಾಗಿದೆ.
ಮುಜಾಹಿದೀನ್
ಸೇನೆ
ಅಮೇರಿಕ
ತನ್ನ ಕೈಗೊಂಬೆ ಅಧ್ಯಕ್ಷರುಗಳನ್ನಾಗಿ ಮಾಡಿದವರಲ್ಲಿ ಮೊದಲನೇಯವರಾದ ಹಮೀದ್ ಕರ್ಜಾಯಿ ಕುಟುಂಬ ಸ್ವತಹ
ಭಾರಿ ಅಕ್ರಮ ಆಫೀಮು ಬೆಳೆಗಾರ ಹಾಗೂ ಅದರ ವ್ಯಾಪಾರಿಗಳೂ ಕೂಡ ಹೌದು. ಅಮೇರಿಕ ಬೆಂಬಲಿತ ಸರಕಾರದಿಂದ
ಇವರ ಕುಟುಂಬ ಭಾರಿ ಲಾಭವನ್ನೂ ಪಡೆದಿದೆ. ಲಾಭವೆಂದಾಗ ಅದು ಅಮೇರಿಕ ಕಳಿಸುವ ಹಣಕಾಸು ನೆರವು, ಸೇನಾವೆಚ್ಚ
ಹಾಗೂ ಸ್ಥಳೀಯವಾಗಿ ಸಂಪನ್ಮೂಲಗಳ ಕೊಳ‍್ಳೆಯಲ್ಲಿನ ಪಾಲು ಕೂಡ ಸೇರಿದೆ. ಈಗ ಅಫ್ಘಾನಿಸ್ತಾನದಲ್ಲಿ ಇತರ
ಶಕ್ತಿಗಳೊಂದಿಗೆ ಸರಕಾರ ರಚಿಸುವ ಕುರಿತು ತಾಲಿಬಾನ್
ಜೊತೆಗೆ ಮಾತುಕತೆಯ ಮುಂಚೂಣಿಯನ್ನು ಅವರೇ ವಹಿಸಿದ್ದಾರೆ ಎಂದರೆ ಅದು ಆಶ್ಚರ್ಯದ ವಿಚಾರ ಆಗಬೇಕಿಲ್ಲ.
ಕರ್ಜಾಯಿ
ಮತ್ತು ಘನಿ ಆಡಳಿತಗಳಲ್ಲಿ ಅಲ್ಲಿನ ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳು ಹಾಗೂ ಶಿಕ್ಷಣದ ಸೌಲಭ್ಯ ಹಾಗೂ
ಅವಕಾಶಗಳನ್ನೇನೂ ನೀಡಿರಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಜೊತೆಗೆ ಧಾರ್ಮಿಕ ದಿಗ್ಬಂದನ ಹಾಗೂ
ಊಳಿಗಮಾನ್ಯ ಕಟ್ಟುಪಾಡುಗಳನ್ನು ಸಡಿಲಿಸಿರಲೂ ಇಲ್ಲ.
ಅಮೇರಿಕ ಹಾಗೂ ಸರಕಾರಿ ಪಡೆಗಳ ಅತ್ಯಾಚಾರ ಮೊದಲಾದ ಲೈಂಗಿಕ ದಾಳಿಗಳು ಸೇರಿದಂತೆ ಹಲವಾರು ರೀತಿಯ ಧಾಳಿಗಳಿಂದಾಗಿ
ಮಹಿಳೆಯರ ಆತ್ಮಹತ್ಯೆಗಳು ಭಾರಿ ಪ್ರಮಾಣದಲ್ಲಿ ನಡೆದವು.
ಜಗತ್ತಿನಲ್ಲಿ
ಪ್ರಜಾಪ್ರಭುತ್ವ ನಿರ್ಮಾಣದ ಬಗ್ಗೆ ದೊಡ್ಡದಾಗಿ ಹೇಳುತ್ತಾ ಬಂದ ಅಮೇರಿಕ ಕೂಡ ಅಪ್ಘಾನಿಸ್ತಾನದ ಮಹಿಳೆಯರ
ಹಕ್ಕುಗಳು ಹಾಗೂ ಜನರ ಪ್ರಜಾತಾಂತ್ರಿಕ ಹಕ್ಕುಗಳು ಹಾಗೂ ಮಾನವಹಕ್ಕುಗಳ ಬಗ್ಗೆ ಏನನ್ನೂ ಕಾರ್ಯದಲ್ಲಿ
ಮಾಡಿರಲಿಲ್ಲ. ಹಿಂದಿನ ಸೆಕ್ರೆಟರಿ ಆಫ್ ಸ್ಟೇಟ್ ಮ್ಯಾಡೆಲಿನ್ ಅಲ್ ಬ್ರಯಿಟ್, ಜಾರ್ಜ್ ಬುಷ್ ರ ಬಾಳಸಂಗಾತಿ
ಲಾರ ಬುಷ್ ರಂತಹವರು ತಾಲಿಬಾನಿನಡಿ ಮಹಿಳಾ ಹಕ್ಕುಗಳು ನಶಿಸಿಹೋಗಿವೆ ಎಂಬ ಮಾತುಗಳನ್ನು ಹರಿಬಿಟ್ಟಿದ್ದು
ಬಿಟ್ಟರೆ ಇನ್ನೇನೂ ಆಗಿರಲಿಲ್ಲ. ಅಮೇರಿಕದ ಇಪ್ಪತ್ತು ವರುಷಗಳ ಯುದ್ದ ಹಾಗೂ ಆಡಳಿತದಲ್ಲಿ ಅಫ್ಘಾನಿಸ್ತಾನದ
ಜನಸಾಮಾನ್ಯರ ಅಭಿವೃದ್ಧಿಯನ್ನು ಮಾಡಿರಲೂ ಇಲ್ಲ. ಅವರ ಉದ್ದೇಶವೂ ಅದಾಗಿರಲಿಲ್ಲ.
ಅಫ್ಘಾನಿಸ್ತಾನದ
ಅಭಿವೃದ್ದಿ ಹಾಗೂ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಅಮೇರಿಕ ಟ್ರಿಲಿಯನ್ ಗಟ್ಟಲೆ ಡಾಲರುಗಳನ್ನು ವೆಚ್ಚಮಾಡಿದೆ
ಎಂದು ಅಮೇರಿಕದ ಹಾಲಿ ಅಧ್ಯಕ್ಷ ಜೋಯ್ ಬಿಡೆನ್ ಪ್ರತಿಪಾದಿಸುತ್ತಿದ್ದಾರೆ. ಆದರೆ ಅದು ಪ್ರಧಾನವಾಗಿ
ತನ್ನ ಹಿತಾಸಕ್ತಿಗಳ ರಕ್ಷಣೆ ಹಾಗೂ ತನ್ನ ಕೈಗೊಂಬೆ ಸರಕಾರದ ಸೇನೆಗೆ ಮತ್ತು ಯುದ್ದಕ್ಕಾಗಿ ಮಾತ್ರವಾಗಿತ್ತು
ಎನ್ನುವುದನ್ನು ಮರೆಮಾಚುವ ಮಾತುಗಳಾಗಿವೆ. ಆಸ್ಪತ್ರೆ, ಶಾಲೆ ಇತ್ಯಾದಿ ಸೌಲಭ್ಯ ನಿರ್ಮಿಸಲೆಂದು ಒದಗಿಸಿದ
ಅಲ್ಪ ಹಣಕಾಸು ಕೂಡ ಅಲ್ಲಿನ ಸರ್ಕಾರದ ಭ್ರಷ್ಟತೆಗಳಿಂದಾಗಿ ಕಾರ್ಯರೂಪಕ್ಕೆ ಇಳಿಯುತ್ತಿರಲಿಲ್ಲ.
ಇವರೆಲ್ಲಾ ಸೇರಿ ಅಭಿವೃದ್ದಿಯ ಬದಲಿಗೆ ಆ ರಾಷ್ಟ್ರವನ್ನು
ತೀವ್ರ ರೀತಿಯ ರಾಜಕೀಯ, ಆರ್ಥಿಕ, ಸಾಮಾಜಿಕ ಅರಾಜಕತೆಗಳಿಗೆ ಹಾಗೂ ಕ್ರೂರ ಬಡತನಗಳಿಗೆ ಮತ್ತಷ್ಟು ದೂಡುವುದನ್ನು
ಮಾಡಿತು. ಜೊತೆಗೆ ಅಲ್ಲಿನ ತೈಲ, ಅನಿಲ ಹಾಗೂ ಖನಿಜ ಸಂಪತ್ತಿನ ಲೂಟಿಯ ಹೊಸ ಶಕೆಯನ್ನು ಆರಂಭಿಸಿತು.
ಬಿನ್
ಲಾದೆನ್ ನೆಪದಲ್ಲಿ ಅಫ್ಘಾನಿಸ್ತಾನದ ಮೇಲೆ ಧಾಳಿ ಆರಂಭಿಸಿದ ಅಮೇರಿಕ, ಲಾದೆನ್ ಅನ್ನು ಪಾಕಿಸ್ತಾನದ
ಅಬೊಟ್ಟಾಬಾದಿನಲ್ಲಿ ಹಿಡಿದು ಕೊಂದು ಹಾಕಿದ ನಂತರವೂ ಸುಮಾರು ಹತ್ತು ವರುಷಗಳ ಕಾಲ ಅಫ್ಘಾನಿಸ್ತಾನದಿಂದ
ಹೊರಹೋಗದೇ ಇದುವರೆಗೂ ಉಳಿದಿತ್ತು. ಅಲ್ಲಿನ ತೈಲ. ನೈಸರ್ಗಿಕ ಅನಿಲ, ಉನ್ನತ ಗುಣಮಟ್ಟದ ಕಬ್ಬಿಣಗಳ
ಹೊಸ ನಿಕ್ಷೇಪಗಳನ್ನು, ಉತ್ಕೃಷ್ಟ ಮಟ್ಟದ ಕಲ್ಲಿದ್ದಲು ನಿಕ್ಷೇಪಗಳನ್ನು ಇಂದಿನ ಎಲೆಕ್ಟ್ರಾನಿಕ್ ಯುಗಕ್ಕೆ
ಅತ್ಯಗತ್ಯವೆನಿಸಿರುವ ಲೀಥಿಯಂಗಳ ಭಾರಿ ನಿಕ್ಷೇಪಗಳನ್ನು ಈ ಅವಧಿಯಲ್ಲಿ ಪತ್ತೆ ಹಚ್ಚುವ ಕಾರ್ಯ ಮಾಡಿ
ಅಮೇರಿಕದ ಹತ್ತಾರು ಕಂಪನಿಗಳು ಸೇರಿದಂತೆ ಹಲವು ಜಾಗತಿಕ ಕಂಪನಿಗಳು ತಮ್ಮ ಬಂಡವಾಳವನ್ನು ಹೂಡಿದವು.
ಆದರೆ
ಇದಕ್ಕಾಗಿ ಅದು ಬಹಳ ದುಬಾರಿ ಬೆಲೆಯನ್ನು ತೆರಬೇಕಾಗಿ ಬಂದಿತು. ಅಫ್ಘಾನಿಸ್ತಾನದ ಜನರ ತೀವ್ರ ಸಿಟ್ಟಿಗೆ
ಗುರಿಯಾಗಬೇಕಾಯಿತು. ಸುಮಾರು ಮೂರುಸಾವಿರಕ್ಕೂ ಹೆಚ್ಚು ಸಂಖ್ಯೆಯ ತನ್ನ ಸೈನಿಕರನ್ನು ಕಳೆದುಕೊಂಡಿತು.
ಇಪ್ಪತ್ತು ಸಾವಿರಕ್ಕೂ ಹೆಚ್ಚುಅಮೇರಿಕದ ಸೈನಿಕರು ಗಂಭೀರ ಗಾಯಗಳಿಗೆ ತುತ್ತಾದರು. ಸಾವಿರಾರು ಸೈನಿಕರು
ಹಾಗೂ ಅವರ ಕುಟುಂಬಗಳು ಮಾನಸಿಕವೂ ಸೇರಿದಂತೆ ಹಲವಾರು ಒತ್ತಡಗಳಿಗೆ ಒಳಗಾದರು. ತನ್ನ ದೇಶದ ನಾಗರಿಕರ
ಸಿಟ್ಟಿಗೂ ಗುರಿಯಾಗಿದ್ದಲ್ಲದೇ ತನ್ನ ಬಿಕ್ಕಟ್ಟುಗಳ ಹೆಚ್ಚಳಕ್ಕೂ ಕಾರಣವಾಯಿತು.
ಲಕ್ಷದಷ್ಟು
ಅಪ್ಘಾನಿಸ್ತಾನದ ಸರಕಾರಿ ಸೈನಿಕರು ಸಾವಿಗೀಡಾದರು. ಸುಮಾರು ಎರಡು ಲಕ್ಷದಷ್ಟು ಜನಸಾಮಾನ್ಯರು ನೇರವಾಗಿ
ಸಾವಿಗೀಡಾಗಬೇಕಾಯಿತು. ಪರೋಕ್ಷ ಸಾವುಗಳು ಅದರ ಹಲವು ಪಟ್ಟಾದರೂ ಇರಬಹುದು. ಲಕ್ಷಾಂತರ ಜನರು ನಿರ್ವಸಿತರಾದರು.
ನಾಲ್ಕೈದು ಲಕ್ಷಜನರು ದೇಶಭ್ರಷ್ಟರಾಗಿ ಪಾಕಿಸ್ತಾನ, ಇರಾನ್ ನಂತಹ ರಾಷ್ಟ್ರಗಳಿಗೆ ನಿರಾಶ್ರಿತರಾಗಿ
ನೆಲೆಸಬೇಕಾಯಿತು. ಜೊತೆಗೆ ಅಮೇರಿಕದ ತೆರಿಗೆದಾರರ ಹಲವು ಟ್ರಿಲಿಯನ್ ಡಾಲರುಗಳನ್ನು (ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿಗಳು) ಈ ಯುದ್ದಕ್ಕಾಗಿ
ವ್ಯಯಿಸಬೇಕಾಗಿ ಬಂದಿತು. 2009ರ ವೇಳೆಗಾಗಲೇ ಸುಮಾರು ಆರು ಟ್ರಿಲಿಯನ್ ಡಾಲರುಗಳಷ್ಟು ವೆಚ್ಚ ಮಾಡಲಾಗಿತ್ತು
ಎಂಬ ವರದಿಯೂ ಇದೆ.
ಅಷ್ಟೆಲ್ಲಾ ಮಾಡಿಯೂ ಕೂಡ ಅಮೇರಿಕ ನಿರೀಕ್ಷಿಸಿದ ಲಾಭ ದೊರೆಯಲಿಲ್ಲ.
ಜೊತೆಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಒತ್ತಡಗಳು ಕೂಡ ಹೆಚ್ಚಾಗುತ್ತಾ ಹೋದವು. ಅಮೇರಿಕ ಅಂತರಿಕವಾಗಿಯೇ
ಭಾರಿ ಬಿಕ್ಕಟ್ಟುಗಳಿಗೆ ಒಳಗಾಗಿ ಅದರಿಂದ ಹೊರಬರಲಾಗದೇ ತೀವ್ರ ಪಜೀತಿಯಲ್ಲಿದೆ. ಹಾಗಾಗಿ ಅಮೇರಿಕ ಅನಿವಾರ್ಯವಾಗಿ
ತನ್ನ ಸೇನೆಯನ್ನು ವಾಪಾಸು ಪಡೆಯಲೇಬೇಕಾದ ಪರಿಸ್ಥಿತಿ ಎದುರಾಯಿತು.
ಆದರೆ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ನಷ್ಟಗಳಿಲ್ಲದೇ ರಕ್ಷಿಸಿಕೊಂಡು
ಮುಂದುವರೆಯಲು ತಾಲಿಬಾನಿನೊಂದಿಗೆ 2020ರ ಫೆಬ್ರವರಿಯಲ್ಲೇ ದೋಹದಲ್ಲಿ ಬಹಿರಂಗ ಒಪ್ಪಂದ ಮಾಡಿಕೊಂಡಿತು.
ಅದರಲ್ಲಿ ತಾಲಿಬಾನ್ ತನ್ನ ದಾಳಿಗಳನ್ನು ನಿಲ್ಲಿಸಿ ಅಮೇರಿಕಕ್ಕೆ ತನ್ನ ಸೇನೆಯನ್ನು ವಾಪಾಸು ಕರೆದುಕೊಳ‍್ಳಲು
ಮುಕ್ತ ಅವಕಾಶ ಕಲ್ಪಿಸುವುದು, ಅಮೇರಿಕ ವಿರೋಧಿ ಬಂಡುಕೋರ ಸಂಘಟನೆಗಳಾದ ಅಲ್ ಕಾಯಿದಾ, ಮುಜಾಹಿದೀನ್
ಗಳಿಗೆ ಬೆಳೆಯಲು ಅವಕಾಶ ನೀಡದಿರುವುದು ಸೇರಿವೆ. ಹಾಗೇನೆ ಅಮೇರಿಕ ತನ್ನ ವಾಯುಧಾಳಿಗಳನ್ನು ನಿಲ್ಲಿಸಿ,
ತಾಲಿಬಾನ್ ವಿರುದ್ಧದ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂಬ ತಾಲಿಬಾನ್ ಹಾಕಿರುವ ಶರತ್ತುಗಳನ್ನು
ಅಮೇರಿಕ ಒಪ್ಪಿಕೊಂಡು ಅದರಂತೆ ನಡೆದುಕೊಂಡಿತು. ಅದಲ್ಲದೇ ಹಲವು ರಹಸ್ಯ ಒಪ್ಪಂದಗಳನ್ನು ಕೂಡ ಮಾಡಿಕೊಂಡಿದ್ದು
ಗುಟ್ಟೇನಲ್ಲ. ತಾಲಿಬಾನ್ ಅದಕ್ಕೆಲ್ಲಾ ಒಪ್ಪಿಕೊಂಡ ನಂತರವೇ ತನ್ನ ಪಡೆಗಳನ್ನು ಹಿಂಪಡೆಯಲು ಶುರುಮಾಡಿತು.
ಅದೀಗ ಮುಕ್ತಾಯದ ಹಂತ ತಲುಪಿದೆ. ಆದರೆ ತಾಲಿಬಾನಿಗೆ ಸುಲಭವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತದೆ
ಎನ್ನಲಾಗುವುದಿಲ್ಲ. ಅಮೇರಿಕ ಹಾಗೂ ತಾಲಿಬಾನ್ ವಿರೋಧಿ ಶಕ್ತಿಗಳು ಈಗಲೇ ಒಗ್ಗೂಡ ತೊಡಗಿವೆ. ಹಾಗಾಗಿ
ಮತ್ತೊಂದು ಅಂತರ್ ಯುದ್ಧದ ಸಾಧ್ಯತೆಗಳು ಹೆಚ್ಚ ತೊಡಗಿವೆ.
ಅಫ್ಘಾನಿಸ್ತಾನದ ಮೂರು ಲಕ್ಷಕ್ಕೂ ಹೆಚ್ಚಿದ್ದ ಸರಕಾರಿ ಸೇನೆ ಹಾಗೂ ಪೋಲಿಸ್ ಪಡೆ ಅಮೇರಿಕದ ತರಬೇತಿಗಳನ್ನು ಪಡೆದು ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ತಾಲಿಬಾನ್ ಮುನ್ನೆಡೆಯನ್ನು ತಡೆಯಲು ಹೋಗಲೇ ಇಲ್ಲ. ಅಲ್ಲದೇ ತಾಲಿಬಾನ್ ಹೊಡೆತಗಳಿಗೆ ಪ್ರತಿರೋಧಿಸಿ ನಿಲ್ಲುವ ಸ್ಥೈರ್ಯವನ್ನೂ ತೋರಲಿಲ್ಲ. ಬದಲಿಗೆ ಪಲಾಯನ ಹಾಗೂ ಶರಣಾಗತಿಗಳ ಮಾರ್ಗಗಳನ್ನು ಹುಡುಕತೊಡಗಿತು.
ಅಫ್ಘಾನ್
ರಾಷ್ಟ್ರೀಯ ಸೇನೆ
ಅದು ಯಾವುದೇ ಬದ್ದತೆ ಇಲ್ಲದೇ ಭ್ರಷ್ಟಗೊಂಡು ಅದಃಪತನ ಹೊಂದಿ
ಸೆಣಸುವ ಶಕ್ತಿಯನ್ನೇ ಕಳೆದುಕೊಂಡಿರುವ ಪಡೆಯಾಗಿತ್ತು. ಅಮೇರಿಕ ಒದಗಿಸುತ್ತಿದ್ದ ಸೈನಿಕರ ಸಂಬಳವನ್ನೂ
ಸರಿಯಾಗಿ ನೀಡುತ್ತಿರಲಿಲ್ಲ. ಅವೆಲ್ಲವನ್ನೂ ಅಲ್ಲಿನ ಸರ್ಕಾರಿ ಅಧಿಕಾರಿಗಳು ಹಾಗೂ ಸೈನಿಕ ಅಧಿಕಾರಿಗಳು
ನುಂಗಿಹಾಕುತ್ತಿದ್ದರು. ಈಗ ತನಗೆ ಶರಣಾಗತರಾಗುತ್ತಿರುವ ಹಿಂದಿನ ಸರಕಾರಿ ಸೈನಿಕರಿಗೆ ತಾಲಿಬಾನ್ ಸಂಘಟನೆಯೇ
ಖರ್ಚಿಗೆ ಹಣ ನೀಡಿ ಕಳಿಸಬೇಕಾಗಿದೆ ಎಂದರೆ ಆ ಸೈನ್ಯದ ಪರಿಸ್ಥಿತಿಯೇನು ಎಂಬುದನ್ನು ಗ್ರಹಿಸಬಹುದಾಗಿದೆ.
ಅಮೇರಿಕ ಅದು ಶಕ್ತಿಹೀನವಾಗಿ ವಿಸರ್ಜನೆಗೊಳ್ಳುವಂತಹ ಪರಿಸ್ಥಿತಿಯನ್ನು ಯೋಜಿತವಾಗಿ ನಿರ್ಮಿಸಿತ್ತು
ಎಂಬ ವಾದವೂ ಇದೆ.
ಹೆಣ್ಣು
ಮಕ್ಕಳಿಗೆ ದುರ್ಲಭವಾಗಿರುವ ಶಿಕ್ಷಣ
ಅಮೇರಿಕದ
ಲೇಖಕ, ರಾಜಕೀಯ ವಿಜ್ಞಾನಿ ಹಾಗೂ ಸಾಂಸ್ಕೃತಿಕ ವಿಮರ್ಶಕ ಮೈಕೇಲ್ ಪರೆಂಟಿ (Michael Parenti) ತನ್ನ
ಒಂದು ಲೇಖನದಲ್ಲಿ ಜಾನ್ ರ್ಯಾನ್ (John Ryan) ಎಂಬುವವರು ಹೇಳಿದ ಒಂದು ಮಾತನ್ನು ಉದ್ದರಿಸುತ್ತಾರೆ.
ಅದೇನೆಂದರೆ ಒಂದು ವೇಳೆ ಅಮೇರಿಕ 1979ರಲ್ಲಿ ಅಫ್ಘಾನಿಸ್ತಾನದ ಮಾರ್ಕ್ಸ್ ವಾದಿ ಸರಕಾರವಾಗಿದ್ದ ತಾರಿಕಿ
ಸರಕಾರವನ್ನು ಕೆಲಸ ಮಾಡಲು ಬಿಟ್ಟದ್ದರೆ “ಅಲ್ಲಿ ಮುಜಾಹಿದೀನ್ ಗಳ ಸೇನೆಯೂ ಇರುತ್ತಿರಲಿಲ್ಲ, ಸೋವಿಯತ್
ರಷ್ಯಾದ ಮಧ್ಯಪ್ರವೇಶವೂ ಇರುತ್ತಿರಲಿಲ್ಲ, ಅಫ್ಘಾನಿಸ್ತಾನವನ್ನು ನಾಶಗೊಳಿಸಿದ ಯುದ್ಧವೂ ಇರುತ್ತಿರಲಿಲ್ಲ,
ಒಸಾಮಾ ಬಿನ್ ಲಾದೆನ್ ಇರುತ್ತಿರಲಿಲ್ಲ, ಮತ್ತು ಸೆಪ್ಟಂಬರ್ 11 ರ ದುರಂತವೂ ಆಗುತ್ತಿರಲಿಲ್ಲ,” ಎಂಬುದರಲ್ಲಿ
ಬಹುತೇಕವಾಗಿ ಯಾರಿಗೂ ಅಸಮ್ಮತಿ ಇರಲಿಕ್ಕಿಲ್ಲ ಎಂದು.
ಆದರೆ
ಜಾಗತಿಕ ಬಂಡವಾಳಶಾಹಿ ಜಗತ್ತು ಸಾಗುತ್ತಿರುವ ಇಂದಿನ ಅಸ್ಥಿರತೆ ಹಾಗೂ ಬಿಕ್ಕಟ್ಟುಗಳ ಪರಿಸ್ಥಿತಿಗಳು
ಜಾಗತಿಕ ಜನಸಾಮಾನ್ಯರಿಗೆ ಎಂತೆಂತಹ ಸಮಸ್ಯೆಗಳನ್ನು ತಂದಿಡಬಹುದು ಎಂಬುದನ್ನು ಸರಳವಾಗಿ ನೋಡಲು ಸಾಧ್ಯವಿಲ್ಲ.
ಅದು ಜಾಗತಿಕ ಬಂಡವಾಳಶಾಹಿಯಲ್ಲೇ ಅಂತರ್ಗತವಾಗಿರುವ ವಿಚಾರವಾಗಿದೆ.
ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳು ಹಾಗೂ ಸ್ಥಳೀಯ ಮತೀಯತೆ ಊಳಿಗಮಾನ್ಯ
ಶಕ್ತಿಗಳು ಕೈ ಜೋಡಿಸಿದರೆ ಅಂತಹವುಗಳ ವಿರುಧ್ಧ ಜನರ ಸಂಘಟಿತ ಹೋರಾಟ ಶಕ್ತಿಯುತವಾಗದಿದ್ದರೆ ಅಂತಹ
ರಾಷ್ಟ್ರಗಳ ದುರಂತ ಪರಿಸ್ಥಿತಿ ಏನೆಲ್ಲಾ ಆಗಬಹುದು
ಎನ್ನುವುದಕ್ಕೆ ಅಫ್ಘಾನಿಸ್ತಾನ ಕೂಡ ಒಳ್ಳೆಯ ಉದಾಹರಣೆಯಾಗಿದೆ.
23/09/2021
ಮಿಂಚಂಚೆ:
nandakumarnandana67@gmail.com

Comments
Post a Comment