Skip to main content

ವಚನ ಚಳವಳಿಯ ಬೀದರಿನ ಪ್ರಗತಿಪರ ಪ್ರಜಾತಾಂತ್ರಿಕ ಜೀವ ಶಿವರಾಜಕಾಡೋದೆ#bidar#vachana chaluvali#shivaraj kaadode

 


ವಚನ ಚಳವಳಿಯ ಬೀದರಿನ ನೆಲದ ಪ್ರಗತಿಪರ ಪ್ರಜಾತಾಂತ್ರಿಕ ಜೀವ

 ಶಿವರಾಜಕಾಡೋದೆ… ಒಂದು ನೆನಪು…

ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಡೆಸಿ ನಿವೃತ್ತ ಜೀವನ ನಡೆಸುತ್ತಿದ್ದ 73 ವಯಸಿನ ಶಿವರಾಜ ಕಾಡೋದೆಯವರು ಇತ್ತೀಚೆಗೆ ಹೃದಯ ಸ್ತಂಭನಕ್ಕೊಳಗಾಗಿ ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ. ಇದಕ್ಕೂ ಕೆಲವು ದಿನಗಳ ಮೊದಲು ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು ಅದರಿಂದ ಗುಣಮುಖರಾಗಿ ಹೊರಬಂದಿದ್ದರು. ಅವರು ಚೇತರಿಸಿಕೊಂಡು ನಮ್ಮೆಲ್ಲರ ನಡುವೆ ಇನ್ನಷ್ಟು ಕಾಲ ಇರುತ್ತಾರೆ ಎಂದೇ ಎಲ್ಲರೂ ಬಾವಿಸಿದ್ದರು. ಆದರೆ ಅದು ಆಗದೇ ಹೋಗಿದ್ದು ಬಹಳ ವಿಷಾಧದ ಸಂಗತಿ.

        

                            

                                                ಶಿವರಾಜ್ ಕಾಡೋದೆ

ಭೂಮಾಲಿಕ ವ್ಯವಸ್ಥೆ ಹೇರಿರುವ ಬಿಟ್ಟಿಚಾಕರಿಗಳು, ಜೀತಗಾರಿಕೆ, ಬರ್ಭರ ಶೋಷಣೆ ದೌರ್ಜನ್ಯಗಳು, ದಲಿತ ದಮನಿತ ಸಮುದಾಯಗಳ ಮಹಿಳೆಯರ ಮೇಲೆ ಲೈಂಗಿಕವೂ ಸೇರಿದಂತೆ ದೌರ್ಜನ್ಯಗಳು ಸರ್ವಸಾಮಾನ್ಯವಾಗಿದ್ದ ಬೀದರಿನಂತಹ ಊಳಿಗಮಾನ್ಯ ಹಿಡಿತ ಹೆಚ್ಚಾಗಿರುವ ವ್ಯವಸ್ಥೆಯಲ್ಲಿ ಸಮಾಜಮುಖಿಯಾಗಿರುವುದೆಂದರೆ ಆ ಸಂದರ್ಭದಲ್ಲಿ ಅದು ಬಲು ದೊಡ್ಡ ಮಾತು. ಸರ್ಕಾರಿ ಅಂಗಗಳೂ ಕೂಡ ಸಂಪೂರ್ಣವಾಗಿ ಈ ಶಕ್ತಿಗಳ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಕಾಲವಾಗಿತ್ತು. ಬೀದರಿನಲ್ಲಿ ಆ ರೀತಿ ಸಮಾಜಮುಖಿಯಾಗಿ ಇದ್ದ ಕೆಲವರಲ್ಲಿ ಶಿವರಾಜ ಕಾಡೋದೆಯವರು ಒಬ್ಬರು.

 


ವಿಶ್ವನಾಥ ಬಾಬುರಾವ ಪಾಟೀಲ (ದಮನ್ ಪಾಟೀಲ)


ಇತ್ತೀಚೆಗೆ ಮರಣ ಹೊಂದಿದ್ದ ಗಟ್ಟಿತನದ, ಪ್ರಾಮಾಣಿಕ ಹಿರಿಯ ಪತ್ರಕರ್ತ ವಿಶ್ವನಾಥ ದಮನ್ ಪಾಟೀಲರ ಹತ್ತಿರದ ಒಡನಾಡಿಯಾಗಿದ್ದ ಶಿವರಾಜ ಕಾಡೋದೆ ಸಾಮಾಜಿಕ ಬದಲಾವಣೆಗಾಗಿ ಗಟ್ಟಿ ಆಶಯಗಳನ್ನು ಹೊಂದಿದ್ದವರು. ಅದಕ್ಕಾಗಿ ಕೆಲಸ ಮಾಡಿದವರು. ದಲಿತ, ದಮನಿತ, ರೈತ ಕೂಲಿ ಕಾರ್ಮಿಕರೊಂದಿಗೆ ನಿಂತವರು. ಯಾವಾಗಲೂ ಸಮಾಜಮುಖಿ ಚಿಂತನೆಗಳನ್ನು ಇರಿಸಿಕೊಂಡು ಬೆಳೆಸಿಕೊಂಡು ಬಂದವರಾಗಿದ್ದರು.  ವಿಶ್ವನಾಥ ದಮನ್ ಪಾಟೀಲ್ ಹಾಗೂ ಹಣಮಂತಪ್ಪಾ ಪಾಟೀಲರ ಸಂಪಾದಕತ್ವದಲ್ಲಿದ್ದ ಬೀದರಿನ ಗಟ್ಟಿ ಪತ್ರಿಕೆಗಳಾದ ಹಿಂದಿ ಭಾಷೆಯ 'ದಮನ್' ಹಾಗೂ ಕನ್ನಡ ಭಾಷೆಯ 'ಜನಪರ' ಪತ್ರಿಕೆಗಳನ್ನು ನಡೆಸಿಕೊಂಡು ಬಂದ ತಂಡದಲ್ಲಿದ್ದ ಸಕ್ರಿಯ ವ್ಯಕ್ತಿಗಳಲ್ಲಿ ಶಿವರಾಜ ಕಾಡೋದೆಯವರು ಒಬ್ಬರು.

 

ಶಿವರಾಜ ಕಾಡೋದೆಯವರು ವಚನ ಚಳವಳಿ ಸಿಡಿದ ಬೀದರಿನ ನೆಲದಲ್ಲಿ ಹುಟ್ಟಿ ಬೆಳೆದು ಪ್ರಗತಿಪರ ಚಿಂತನೆಗಳನ್ನು ಹಾಗೂ ಸಮಾಜದ ಕ್ರಾಂತಿಕಾರಿ ಬದಲಾವಣೆಯ ತುಡಿತವನ್ನು ಬೆಳೆಸಿಕೊಂಡವರಾಗಿದ್ದರು. ಈ ದೇಶದ ಬುನಾದಿಯಾದ ಶ್ರಮಜೀವಿಗಳಿಗೆ ಸಹಜವಾಗಿ ಸಮಾನನೆಲೆಯಲ್ಲಿ ಎಲ್ಲಾ ಹಕ್ಕುಗಳು ಹಾಗೂ ರಾಜಕೀಯ ಅಧಿಕಾರ ದೊರೆಯುವಂತಾಗಬೇಕೆಂಬುದು ಅವರ ಮಹೋನ್ನತ ಆಶಯವಾಗಿತ್ತು. ಹಾಗಾಗಿ ಅವರು ಯಾವಾಗಲೂ ದಲಿತ ದಮನಿತರಿಂದೊಡಗೂಡಿದ ದುಡಿಯುವ ಜನರ ಪರವಾಗಿ ನಿಲ್ಲುತ್ತಿದ್ದರು. ಪಕ್ಕದ ರಾಜ್ಯ ಆಂದ್ರದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಚಳವಳಿಯ ಸ್ಪೂರ್ತಿಯೂ ಅವರಲ್ಲಿ ಇತ್ತು.

 

ಕಾಡೋದೆಯವರು ಪ್ರಾದ್ಯಾಪಕರಾಗಿ ವಿದ್ಯಾರ್ಥಿಗಳಿಗೆ ರಾಜಕೀಯ ಹಾಗೂ ವೆೈಜ್ಞಾನಿಕ ಅರಿವನ್ನು ಮೂಡಿಸಲು ಅವರಿಗೆ ಇರುವ ಅವಕಾಶದಲ್ಲಿ ಶ್ರಮಿಸುತ್ತಾ ಬಂದವರಾಗಿದ್ದರು. ಮೊದಲಿನಿಂದಲೂ ಜನಪರವಾಗಿ ಇರುವ ಚಳವಳಿಗಳ ಜೊತೆಗೆ ಇದ್ದ ಶಿವರಾಜ್ ಕಾಡೋದೆ 1990ರ ವೇಳೆಯಲ್ಲಿ  ಬೀದರಿನಲ್ಲಿ ರೆೈತಕೂಲಿಗಳ ಹೋರಾಟ ಸಿಡಿದಾಗ ಅದನ್ನು ಬೆಂಬಲಿಸಿ ನಿಂತಿದ್ದರು. ಊಳಿಗಮಾನ್ಯತೆ ಕರ್ಮಠತೆಯ ವಾರಸುದಾರರಾದ ಭೂಮಾಲಿಕ ಶಕ್ತಿಗಳು ರೆೈತಕೂಲಿಗಳನ್ನು ಇನ್ನಿಲ್ಲದಂತೆ ಶೋಷಿಸುತ್ತಾ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುತ್ತಾ, ರಾಜಕೀಯ ಅಧಿಕಾರ ಹಿಡಿಯುತ್ತಾ ದರ್ಪ ದೌರ್ಜನ್ಯಗಳ ಮೂಲಕ ದಮನಕಾಂಡ ನಡೆಸುತ್ತಾ ಬಂದಿರುವುದನ್ನು ನೇರವಾಗಿ ಕಾಣುತ್ತಾ ಬೆಳೆದವರಾಗಿದ್ದರು ಕಾಡೋದೆಯವರು. ಹಾಗಾಗಿ ರೆೈತಕೂಲಿಗಳ ಮೇಲೆ ಅವರ ಕಾಳಜಿ ಹೆಚ್ಚಾಗುತ್ತಲೇ ಬಂದಿತು. ಬೀದರಿನಂತಹ ಹಿಂದುಳಿದ ಊಳಿಗಮಾನ್ಯ ಪ್ರದೇಶದಲ್ಲಿ ಕಾಡೋದೆಯಂತಹವರು ಈ ರೀತಿಯ ವಿಚಾರಗಳನ್ನು ಇಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲಿನ ವಿಚಾರವಾಗಿದ್ದರೂ ಅವರು ಅದನ್ನು ನಿರಂತರವಾಗಿ ತಮ್ಮೊಳಗೆ ಕಾಪಾಡಿಕೊಂಡು ಬಂದಿದ್ದರು.

 

ಸರಳವಾಗಿ ಬೆರೆಯುವ ಸ್ವಭಾವದವರಾಗಿದ್ದ ಕಾಡೋದೆಯವರು ವೃದಾಪ್ಯದಲ್ಲೂ ಕೂಡ ತಮ್ಮ ವೆೈಚಾರಿಕ ಬದ್ಧತೆಯನ್ನು ಹಾಗೂ ಸಾಮಾಜಿಕ ಕಾಳಜಿಯನ್ನು ಕಳೆದುಕೊಳ್ಳದೆ ಸಕ್ರಿಯರಾಗಿದ್ದರು. ಬೀದರಿನಲ್ಲಿ ವೈಚಾರಿಕ ಆಸಕ್ತಿಗಳನ್ನು ಹೆಚ್ಚಿಸುವ, ಸಮಾಜಮುಖಿ ಅಧ್ಯಯನ ಹಾಗೂ ಸಂಶೋಧನೆಗಳಿಗೆ ನೆರವಾಗುವ ಉದ್ದೇಶದಿಂದ ಬೀದರ್ ನಗರದ ಹೊರಭಾಗದಲ್ಲಿ ಆರಂಭಿಸಲಾದ ಸುಸಜ್ಜಿತವಾದ ‘ಕೆಂಪು ನೀಲಿ’ ಗ್ರಂಥಾಲಯದ ಸ್ಥಾಪನೆ ಹಾಗೂ ನಿರ್ವಹಣಾ ತಂಡದ ಒಬ್ಬ ಸಕ್ರಿಯ ಸದಸ್ಯರಾಗಿ ತಮ್ಮ ಕೊನೆಗಾಲದವರೆಗೂ ಕಾರ್ಯ ನಿರ್ವಹಿಸಿದ್ದರು.

 ಅವರ ಸಕ್ರಿಯ ವೈಚಾರಿಕ ಹಾಗೂ ಪತ್ರಿಕೋದ್ಯಮ ತಂಡದ ಪ್ರಮುಖರಾಗಿದ್ದ ದಮನ್ ಪಾಟೀಲರ ಆರೋಗ್ಯ ಕ್ಷೀಣಗೊಂಡಿದ್ದು ನಂತರ ಅವರ ಮರಣ ಸಂಭವಿಸಿದ್ದು, ಇವರ ತಂಡದ ಮತ್ತೊಬ್ಬ ಸಕ್ರಿಯ ಸದಸ್ಯರಾಗಿದ್ದ ಶಿಕ್ಷಕ  ಹಾಗೂ ಪತ್ರಕರ್ತ ಹಣಮಂತಪ್ಪಾ ಪಾಟೀಲರ ವೃದ್ದಾಪ್ಯ ಹಾಗೂ ಅನಾರೋಗ್ಯದ ನಂತರ ಕಾಡೋದೆಯವರು ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದರು.

 



        ಹಣಮಂತಪ್ಪಾ ಪಾಟೀಲ

ಬೀದರ ಜಿಲ್ಲೆಯ ಹಾಗೇನೆ ರಾಜ್ಯದ ಹಿರಿಯ ಪತ್ರಕರ್ತರಾಗಿದ್ದ ವಿಶ್ವನಾಥ ಪಾಟೀಲ (ದಮನ್ ಪಾಟೀಲರ) ಬಗ್ಗೆ, ಪತ್ರಿಕಾ ರಂಗ, ಸಾಮಾಜಿಕ ರಂಗ ಮತ್ತು ರಂಗಭೂಮಿಯಲ್ಲಿ ದಮನ್ ಪಾಟೀಲರ ಕೊಡುಗೆಗಳ ಬಗ್ಗೆ ಬರೆಯುವುದನ್ನಾಗಲೀ ಸಭೆಯನ್ನು ಆಯೋಜಿಸುವುದನ್ನಾಗಲೀ ಮಾಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಬೀದರಿನ ಕೆಲವು ಕಾಳಜಿಯುತ ಮನಸುಗಳನ್ನು ಸೇರಿಸಿಕೊಂಡು ದಮನ್ ಪಾಟೀಲರ ಸ್ಮರಣ ಸಭೆಯನ್ನು ಆಯೋಜಿಸುವಲ್ಲಿ ಕಾಡೋದೆಯವರ ಪಾತ್ರವೂ ಪ್ರಮುಖವಾಗಿತ್ತು. ಸಾಮಾಜಿಕ ಕಾಳಜಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದ ಶಿವರಾಜ ಕಾಡೋದೆಯವರು ಬೀದರಿನಂತಹ ಊಳಿಗಮಾನ್ಯ ಹಿಂದುಳಿದಿರುವಿಕೆ ಇರುವ ಪ್ರದೇಶದಲ್ಲಿ ವೆೈಚಾರಿಕ ಜಾಗೃತಿಯನು ವೆೈಜ್ಞಾನಿಕ ಅರಿವನ್ನು ಮೂಡಿಸುವ ದಿಸೆಯಲ್ಲಿ ಪ್ರಾರಂಭದಿಂದಲೂ ಶ್ರಮಿಸುತ್ತಾ ಬಂದವರಾಗಿದ್ದರು. ಶಿವರಾಜಕಾಡೋದೆಯವರು ಮರಣ ಹೊಂದಿದ ಕೆಲವೇ ದಿನಗಳಲ್ಲಿ ಹಣಮಂತಪ್ಪಾ ಪಾಟೀಲರು ಕೂಡ ಮರಣ ಹೊಂದಿದರು. ಹೀಗೆ ಬೀದರಿನ ಪ್ರಗತಿಪರ ಪರಂಪರೆಯ ಪ್ರಮುಖ ಕೊಂಡಿಗಳು ವೈಚಾರಿಕತೆ ಹಾಗೂ ಸಮಾಜ ಬದಲಾವಣೆಯ ಆಶಯಗಳನ್ನು ಬಿತ್ತಿ ತಮ್ಮ ಕೆಲಸ ಮುಗಿಯಿತೆಂದು ಎಲ್ಲರನ್ನೂ ಬಿಟ್ಟು ತೆರಳಿದರು.

 

ಬೀದರಿನ ನೆಲ ಹಾಗೂ ಜನರು ಅಷ್ಟೇ ಅಲ್ಲದೇ ನಾಡಿನ ನೆಲ ಹಾಗೂ ಜನರು ಸಾಮಾಜಿಕ ಮುಖಿಗಳಾಗಿದ್ದ, ಮಾನವತಾವಾದಿಗಳನ್ನು, ಕ್ರಾಂತಿಕಾರಿ ಸಾಮಾಜಿಕ ಬದಲಾವಣೆಗಾಗಿ ತುಡಿಯುತ್ತಾ ಕಾರ್ಯ ನಿರ್ವಹಿಸಿದ್ದ ದಮನ್ ಪಾಟೀಲ್, ಶಿವರಾಜ್ ಕಾಡೋದೆ ಹಾಗೂ ಹಣಮಂತಪ್ಪಾ ಪಾಟೀಲರಂತಹ ಹಿರಿಯ ಜೀವಗಳನ್ನು ಕಳೆದುಕೊಂಡಿದೆ. ಅವರುಗಳು ಬಿತ್ತಿದ ಮಾನವೀಯತೆ, ಸಮಾನತೆ, ನೈಜ ಪ್ರಜಾತಾಂತ್ರಿಕತೆ, ಸಮಾಜದ ಬಹುಸಂಖ್ಯಾತ ಜನರ ಪರವಾದ ಬದಲಾವಣೆಗಳ ಆಶಯಗಳು ನಿರಂತರವಾಗಿ ಹರಡುತ್ತಲೇ ಇರುತ್ತದೆ.

ಜೂನ್ 2021                                               -ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು

                                                                  http://nandakuamrnandana67@gmail.com



Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...