ಮಲೆನಾಡಿನ ರಸ್ತೆ ಅಗಲೀಕರಣವೂ ..
ಭಾರಿ ಕಾರ್ಪೋರೇಟು ಹಿತಾಸಕ್ತಿಗಳೂ...
ನೆರೆ ಪ್ರವಾಹ, ಭೂಕುಸಿತಗಳೂ...
ಕಳೆದ ನೂರಾರು ವರುಷಗಳಿಂದ ಮಲೆನಾಡಿನ ಬೆಟ್ಟಗುಡ್ಡಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದ ಹಲವಾರು ರಸ್ತೆಗಳು ಈಗ ಭಾರಿ ಅಗಲವಾಗತೊಡಗಿವೆ. ಬಿಳಿ ಪಟ್ಟಿಗಳು, ಹಳದಿ ಪಟ್ಟಿಗಳು, ಕಬ್ಬಿಣದ ಬದಿತಡೆಗಳನ್ನು ಪಡೆಯತೊಡಗಿವೆ.
ಮಲೆನಾಡು, ಪಶ್ಚಿಮ
ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ. ಅದನ್ನು ರಕ್ಷಿಸಬೇಕೆಂದು ಹೇಳುತ್ತಾ ರಾಷ್ಟ್ರೀಯ ಉದ್ಯಾನವನ, ರಕ್ಷಿತಾರಣ್ಯ, ಅಭಯಾರಣ್ಯ, ಮೀಸಲು
ಅರಣ್ಯ, ಇನಾಮು ಭೂಮಿ ಎಂದೆಲ್ಲಾ ಕರೆದು ಅಲ್ಲಿ
ತಲತಲಾಂತರಗಳಿಂದ ಬದುಕು ನಡೆಸುತ್ತಾ ಬಂದ ಆದಿವಾಸಿ, ದಲಿತ
ಇನ್ನಿತರ ಜನಸಮೂಹಗಳನ್ನು ಅಲ್ಲಿಂದ ಖಾಲಿಮಾಡಿಸಿ ಇಡೀ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ
ಭೂಪ್ರದೇಶದ ಮೇಲೆ ಸರ್ಕಾರಿ ಹಿಡಿತ ಹೊಂದಿ ನಂತರ ಡಿನೋಟಿಫೇಕೇಷನ್ ಇತ್ಯಾದಿ ಮಾಡಿ,
ಪ್ರವಾಸೋದ್ದಿಮೆಯೆಂದೋ, ಪರಿಸರ ಪ್ರವಾಸಿತಾಣವೆಂದೋ, ಪರಿಸರಸ್ನೇಹಿ
ಯೋಜನೆಗಳೆಂದೋ ಚೆಕ್ ಡ್ಯಾಂ, ಕಿರುವಿದ್ಯುತ್, ನೀರು
ಸರಬರಾಜು, ಸಸ್ಯಪ್ರಭೇದಗಳು ಪ್ರಾಣಿ ಪ್ರಭೇಧಗಳ ರಕ್ಷಣೆ,
ಸಾಮಾಜಿಕ ಅರಣ್ಯ ಯೋಜನೆಗಳೆಂದೋ, ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಪರಿಸರ ರಕ್ಷಣೆ
ಎಂದೆಲ್ಲಾ ಹೆಸರಿಸಿ ಭಾರಿಕಾರ್ಪೋರೇಟುಗಳಿಗೆ ಹಸ್ತಾಂತರಿಸುವ ನೂರಾರು ಯೋಜನೆಗಳನ್ನು ಸರ್ಕಾರಗಳು
ಈಗಾಗಲೇ ತಯಾರು ಮಾಡಿ ಇಟ್ಟಿವೆ. ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅಕೇಷಿಯಾ ಹಾಗೂ ನೀಲಗಿರಿಗಳನ್ನು
ಬೆಳೆಸಿ ಮಲೆನಾಡಿನ ಗುಡ್ಡಗಳನ್ನು ಇತರ ಭೂಮಿಗಳನ್ನು ಬರಡು ಮಾಡಿದ್ದಲ್ಲದೆ ಪರಿಸರಕ್ಕೆ ಭಾರಿ
ಹಾನಿಗಳನ್ನು ಮಾಡಿಡಲಾಗಿದೆ. ಮಲೆನಾಡಿನ ಮೇಲೆ ಇಂತಹ ಅಕ್ರಮಗಳನ್ನು ಮಾಡಿದ್ದಲ್ಲದೇ ಅದರಡಿಯಲ್ಲಿ ಭಾರಿ
ಕಾರ್ಪೋರೇಟುಗಳಿಗೆ ಕಚ್ಚಾ ವಸ್ತುಗಳನ್ನು ಸಾರ್ವಜನಿಕರ ತೆರಿಗೆಯ ಹಣ ವ್ಯಯಿಸಿ ಒದಗಿಸುವ
ಕೆಲಸಗಳನ್ನು ಸರ್ಕಾರಗಳು ಮಾಡುತ್ತಾ ಬಂದಿದ್ದವು. ನಂತರ ಇತ್ತೀಚೆಗೆ ನೀಲಗಿರಿ ಅಕೇಷಿಯ
ಬೆಳೆಯುವುದನ್ನು ನಿಷೇಧಿಸುವ ಪ್ರಹಸನವನ್ನೂ ಮಾಡಲಾಯಿತು.
ಅದೇ ವೇಳೆಯಲ್ಲಿ
ಪಶ್ಚಿಮ ಘಟ್ಟ ಹಾಗೂ ಮಲೆನಾಡು ರಕ್ಷಣೆಯ ಭಾರಿ ಕ್ರಮ ಎಂಬಂತೆ ಮಾಧವ ಗಾಡ್ಗೀಳ್ ವರದಿ ನಂತರ ಅದರ ಸುಧಾರಿತ ರೂಪ ಕಸ್ತೂರಿರಂಗನ್ ವರದಿಯ ತಯಾರಿ
ನಂತರ ಈಗ ಜಾರಿಯ ಬಗ್ಗೆ ಭಾರಿಕಾರ್ಪೋರೇಟುಗಳು
ಹಾಗೂ ಅವುಗಳೇ ಪ್ರಾಯೋಜಿಸುತ್ತಿರುವ ಸರ್ಕಾರಗಳು ಭಾರಿ ಉತ್ಸುಕವಾಗಿವೆ. ಹಲವು ನಗರಕೇಂದ್ರಿತ
ಪರಿಸರ ಪ್ರೇಮದ ಸೋಗಿನವರು, ಹಾಗೇನೆ ಕೆಲವು
ಪರಿಸರ ಕಾಳಜಿಯ ಮನಸುಗಳೂ ಕೂಡ ಕಸ್ತೂರಿ ರಂಗನ್ ವರದಿಯನ್ನು ಬೆಂಬಲಿಸುತ್ತಿದ್ದಾರೆ. ಕಸ್ತೂರಿ
ರಂಗನ್ ವರದಿ ಕೂಡ ಮೇಲುನೋಟದಲ್ಲಿ ನೋಡಿದಾಗ ಪರಿಸರ ರಕ್ಷಣೆ, ಜನರ
ಅಭಿವೃದ್ಧಿಯ ಕುರಿತಾಗಿ ಆಕರ್ಷಕವಾಗಿ ಕಾಣಿಸುತ್ತದೆ.
ಆದರೆ ಅದನ್ನು ವಾದಸರಣಿ ಹಾಗೂ ಅಂಕಿ ಅಂಶಗಳುಳ್ಳ ಪರಿಸರ ಹಾಗೂ ಜನರ ಮೇಲೆ ಕಾಳಜಿ ಇರುವಂತೆ
ಹೆಣೆಯಲಾಗಿದೆ. ಸಾಕಷ್ಟು ನಯವಂತಿಕೆ, ಚಾಕಚಕ್ಯತೆ ಅಲ್ಲಿ ಕೆಲಸ ಮಾಡಿದೆ. ಅದು ಪಶ್ಚಿಮ ಘಟ್ಟದ
ಮೇಲೆ ಕಾರ್ಪೋರೇಟು ಹಿಡಿತ ಹೆಚ್ಚಿಸುವ ನಯವಂತಿಕೆ ಹಾಗೂ ನಾಜೂಕಿನ ನಡೆಗಳನ್ನು ಶಿಫಾರಸು ಮಾಡಿದ
ವರದಿಯಾಗಿದೆ ಎನ್ನುವುದು ಹಲವು ನೈಜ ಪರಿಸರ ಕಾಳಜಿಯವರಿಗೂ ಕೂಡ ಅರ್ಥವಾದಂತಿಲ್ಲ. ಆ ವರದಿಯ ಶಿಫಾರಸುಗಳಲ್ಲಿ ಒಟ್ಟಾರೆಯಾಗಿ
ಜಾರಿಯಾಗುವುದು ಜನಸಾಮಾನ್ಯರ ವಿರುದ್ಧ ಹಾಗೇನೆ ಭಾರಿ ಕಾರ್ಪೋರೇಟುಗಳ ಪರವಾಗೇನೆ ಎನ್ನುವುದನ್ನು
ಅಗತ್ಯವಾಗಿ ಗ್ರಹಿಸಬೇಕಿದೆ.
ಅಂತಿಮವಾಗಿ ಸಣ್ಣ
ಪುಟ್ಟ ಹಿಡುವಳಿದಾರರ ಭೂಮಿ ಸಾವಯವ ಕೃಷಿ ಮಾಡುವ ನೆಪದಲ್ಲಿ ಭಾರಿ ಕಾರ್ಪೋರೇಟುಗಳು, ದೊಡ್ಡ
ಹಿಡುವಳಿದಾರರ ಕೈಗೆ ಸಹಜವೆಂಬಂತೆ ಹೋಗಿ
ಸೇರುತ್ತದೆ. ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಆದಿವಾಸಿ, ದಲಿತ, ಹಿಂದುಳಿದ ಸಮುದಾಯಗಳು ಇನ್ನಿತರ
ಜನಸಮುದಾಯಗಳ ಬಹುಸಂಖ್ಯಾತ ಜನರು ಬದುಕು ಕಳೆದುಕೊಂಡು ಊಹಿಸಲಾಗದ ಸಂಕಷ್ಟಗಳಿಗೆ ಸಿಲುಕುತ್ತಾರೆ.
ಪಶ್ಚಿಮ ಘಟ್ಟ ಪ್ರದೇಶ ಊಹಿಸಲಾಗದಷ್ಟು ಅಪಾಯಗಳಿಗೆ ಗುರಿಯಾಗುತ್ತದೆ.
ಅದೆಲ್ಲಾ
ಒಂದುಕಡೆ ಇದ್ದರೆ ಈಗ ರಸ್ತೆಗಳನ್ನು ಅನಗತ್ಯವಾಗಿ ಭಾರಿ ಹೆದ್ದಾರಿಗಳ ರೀತಿಯಲ್ಲಿ
ಅವೈಜ್ಞಾನಿಕವಾಗಿ ಅಗಲೀಕರಿಸಲು ಸರ್ಕಾರಗಳಿಗೆ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಯಾಕೆ
ತಡೆಯಾಗಿ ನಿಲ್ಲುತ್ತಿಲ್ಲ ಎಂಬ ಪ್ರಶ್ನೆಯನ್ನು ಹಾಕಬೇಕಿದೆ. ಅದೇ ವೇಳೆಯಲ್ಲಿ ಜನಸಾಮಾನ್ಯರ ಹಾಡಿ, ಕೂಡಿಗೆ, ಹಳ್ಳಿ, ಮನೆಗಳಿಗೆ
ಸಂಪರ್ಕಿಸುವ ರಸ್ತೆ ದಾರಿಗಳಿಗೆ, ಅವರುಗಳ ತುಂಡು
ಜಮೀನುಗಳಿಗೆ ಖಾಯಂ ಹಕ್ಕುಪತ್ರ ಒದಗಿಸಲು, ಮನೆಗಳಿಗೆ
ವಿದ್ಯುತ್ ಸಂಪರ್ಕ ಕಲ್ಪಿಸಲು, ಶಾಲೆ, ಆಸ್ಪತ್ರೆ, ಕುಡಿಯುವ
ನೀರು ಇತ್ಯಾದಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಮಾತ್ರ ಯಾಕೆ ಕಸ್ತೂರಿ ರಂಗನ್ ವರದಿಯನ್ನು, ರಾಷ್ಟ್ರೀಯ
ಉದ್ಯಾನ, ಮೀಸಲು,
ಅಭಯಾರಣ್ಯ, ಹುಲಿ ಯೋಜನೆ ಇತ್ಯಾದಿಗಳನ್ನು ಅಡ್ಡಿಯಾಗಿ
ನಿಲ್ಲಿಸಿ ತಡೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಾಗಿದೆ.
ಗುಡ್ಡಗಳು ಬೋಳಾಗಿ ಕಾಣತೊಡಗಿವೆ. ಹಿತಕರ ವಾತಾವರಣದ
ಜಾಗದಲ್ಲಿ ಬಿಸಿಯೇರುತ್ತಿರುವ ವಾತಾವರಣ, ಅನಾವೃಷ್ಠಿ, ಅತೀವೃಷ್ಟಿ
ಈಗ ಮಲೆನಾಡಿನ ಮಾಮೂಲಿ ಸಂಗತಿಗಳಾಗಿಬಿಟ್ಟಿವೆ. ಬೇಸಿಗೆಯಲ್ಲಿ
ಕುಡಿಯುವ ನೀರಿಗೂ ತತ್ವಾರವಾಗತೊಡಗಿದೆ.
ಈ ಪರಿಸ್ಥಿತಿಗೆ
ಅಲ್ಲಿ ಹಲವು ಪೀಳಿಗೆಗಳಿಂದ ವಾಸ ಮಾಡುತ್ತಾ ಬಂದ ಜನಸಾಮಾನ್ಯರು ಪ್ರಧಾನ ಕಾರಣರಲ್ಲ
ಎನ್ನುವುದನ್ನು ಸ್ಪಷ್ಟವಾಗಿ ಗ್ರಹಿಸಿದಾಗ ಮಾತ್ರ ನೈಜ ಕಾರಣಗಳತ್ತ ಹೊರಳಿ ಚಿಂತಿಸಲು
ಸಾಧ್ಯವಾಗುತ್ತದೆ. ಮಲೆನಾಡಿನ ಇಂತಹ ಪರಿಸ್ಥಿತಿಗೆ ಅರಣ್ಯ ಹಾಗೂ ಪರಿಸರದ ಲೂಟಿಗೆ ಪ್ರಧಾನ ಕಾರಣ
ಕರ್ತರು ಸರ್ಕಾರ ಮತ್ತದರ ಆಡಳಿತಾಂಗಗಳು, ಅದರಲ್ಲೂ ಅರಣ್ಯ ಇಲಾಖೆ, ಭಾರಿ
ಭೂ ಒಡೆಯರುಗಳು, ಧಾರ್ಮಿಕ ಕಾರ್ಪೋರೇಟುಗಳು ಭಾರಿ ಕಾರ್ಪೋರೇಟುಗಳು, ಗಣಿಗಾರಿಕೆ, ಕಾಡುತ್ಪನ್ನ
ಗುತ್ತಿಗೆದಾರರು, ಕಳ್ಳ ಅರಣ್ಯ ಮಾಫಿಯಾಗಳು ಪ್ರಧಾನ ಕಾರಣ
ಕರ್ತರುಗಳಾಗಿದ್ದಾರೆ. ಇದನ್ನು ಮರೆತು
ಮಾತನಾಡುವವರು ಪರಿಸರ ಪ್ರೇಮಿಗಳಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕೂಡ ನೆನಪಿನಲ್ಲಿ
ಇಡಬೇಕು..
ಇದರಿಂದಾಗಿ
ಮಲೆನಾಡಿನಲ್ಲಿ ಗುಡ್ಡಕುಸಿತಗಳು, ಮಣ್ಣು ಸವಕಳಿ, ನದಿಗಳಲ್ಲಿ
ಹೂಳುಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗತೊಡಗಿವೆ. ಅದರ ಪರಿಣಾಮವಾಗಿ ಜನಸಾಮಾನ್ಯರ ಪ್ರಾಣಗಳು
ಆಸ್ತಿಪಾಸ್ತಿಗಳು ನಾಶವಾಗತೊಡಗಿವೆ. ಪಶ್ಚಿಮ ಘಟ್ಟ, ಮಲೆನಾಡು
ಭೀಕರ ಹಾನಿಗೊಳಗಾಗುತ್ತಾ ಜನಸಾಮಾನ್ಯರ ಬದುಕು ದಿನೇ ದಿನೇ ದುಸ್ತರವಾಗತೊಡಗಿದೆ. ಭತ್ರ, ಅಡಿಕೆ ,
ಏಲಕ್ಕಿ, ,ತೆಂಗು, ಕಾಫಿ, ಟಿ
ಇತ್ಯಾದಿಗಳ ಕೃಷಿಯೂ ಗಂಡಾಂತರಗಳಿಗೆ ಒಳಗಾಗಿವೆ.
ಇದು ಕೇವಲ
ಪಶ್ಚಿಮ ಘಟ್ಟ ಅಥವಾ ಮಲೆನಾಡಿನ ಜನರು ಹಾಗೂ ಪರಿಸರದ ವಿಚಾರ ಮಾತ್ರ ಅಲ್ಲ. ಇದು ಇಡೀ ಏಷ್ಯಾ, ದೇಶ
ಅದರಲ್ಲೂ ದಕ್ಷಿಣ ಇಂಡಿಯಾದ ಜನರು ಹಾಗೂ ಭೌಗೋಳಿಕ ಪರಿಸರದ ಪ್ರಶ್ನೆಯಾಗಿದೆ.
೨೭/೦೬/೨೦೨೧. - ನಂದಕುಮಾರ್. ಕೆ. ಎನ್. ಕುಂಬ್ರಿಉಬ್ಬು.
ಮಿಂಚಂಚೆ: nandakumarnandana67@gmail.com

Comments
Post a Comment