ಕೂದುವಳ್ಳಿಯ ಹೂವಪ್ಪ ಬಿಟ್ಟು ಹೋದ ಹೆಜ್ಜೆಗುರುತುಗಳು# Hoovappa# Activist#Advocate#Human rights# struggle#Chickmagaluru
ಕೂದುವಳ್ಳಿಯ
ಹೂವಪ್ಪ ಬಿಟ್ಟು ಹೋದ ಹೆಜ್ಜೆಗುರುತುಗಳು…
ಉಳಿಸಿಹೋದ ಆಶಯ ಹಾಗೂ ಹೋರಾಟದ ಸ್ಪೂರ್ತಿಗಳು…
ಬಯಲಾಗುತ್ತಿರುವ ಆಳುವವರ ಕೊರೋನಾ ಹಿಂದಿನ ಕ್ರೂರ ಹುನ್ನಾರಗಳು…
ಜನಪರ ವಕೀಲ, ದುಡಿಯುವ ಜನಸಾಮಾನ್ಯರ ಒಡನಾಡಿಯಾಗಿದ್ದ, ಮಾನವ ಹಕ್ಕು ಕಾರ್ಯಕರ್ತರಾಗಿದ್ದ ಹೂವಪ್ಪ ಕೊನೆಯುಸಿರು ಎಳೆದಿದ್ದಾರೆ.. ಜಾತಿ ವಿನಾಶ ವೇದಿಕೆ, ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಒಕ್ಕೂಟ, ಕೋಮುಸೌಹಾರ್ಧ ವೇದಿಕೆ ಮೊದಲಾದ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯ ಪದಾದಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಹೂವಪ್ಪ ತಮ್ಮ ಜೀವನದ ಅಂತಿಮ ಯಾತ್ರೆಯನ್ನು ಕಳೆದ ಮೇ 31ರ ಸಂಜೆಯ ವೇಳೆಗೆ ಮುಗಿಸಿದ್ದಾರೆ. ಅವರು ಸಮಾಜದಲ್ಲಿರುವ ಜಾತೀಯತೆಯ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದ ಜಾತಿ ವಿನಾಶ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರಾಗಿಯೂ ಅವರು ಕೆಲಸ ಮಾಡಿದ್ದರು. ಕೊರೊನಾ ನಿರ್ಭಂಧಗಳ ಮಧ್ಯೆಯೂ ಅವರ ಸ್ಮರಣ ಸಭೆಗಳು ನಾಡಿನ ಹಲವಾರು ಕಡೆಗಳಲ್ಲಿ ನಡೆಯ ತೊಡಗಿವೆ. ಕೊರೋನಾ ಕಾರಣದಿಂದಾಗಿ ಅವರ ಅಂತಿಮ ದರ್ಶನ ಮಾಡಲು ಸಾಧ್ಯವಾಗದೇ ಹೋಗಿದ್ದು ನಾಡಿನ ಹಲವರಿಗೆ ಅಪಾರ ನೋವು ತಂದಿದೆ.
ಹೂವಪ್ಪರು ಚಿಕ್ಕಮಗಳೂರು ಸಮೀಪದ ಕೂದುವಳ್ಳಿ ಎಂಬ ಹಳ್ಳಿಯವರು. ಬಡ ದಲಿತ
ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಿಂದಲೂ ಸಮಾಜದಲ್ಲಿ ದಲಿತರ ಮೇಲಾಗುವ ಅಸ್ಪೃಶ್ಯತೆ ದಮನ
ದೌರ್ಜನ್ಯಗಳನ್ನು ಸ್ವತಃ ಅನುಭವಿಸುತ್ತಾ, ನೋಡುತ್ತಾ ಬಂದವರಾಗಿದ್ದರು.
ಕಳೆದ ಎರಡು ಮೂರು ದಶಕಗಳಿಂದ ಸಾಮಾಜಿಕ ಜೀವನದಲ್ಲಿ ಹತ್ತು ಹಲವು ರೀತಿಗಳಲ್ಲಿ
ಸಕ್ರಿಯ ಪಾತ್ರ ನಿರ್ವಹಿಸುತ್ತಾ ಬಂದವರಾಗಿದ್ದರು ಹೂವಪ್ಪ. ಅವರದು ಸಾಯುವ ವಯಸ್ಸೇನೂ ಆಗಿರಲಿಲ್ಲ.
ಹದಿನೈದು ವರುಷಗಳ ಹಿಂದೆ ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು
ನಂತರವೂ ವೃತ್ತಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿಯೇ ಇದ್ದವರಾಗಿದ್ದರು. ಚಿಕ್ಕಮಗಳೂರು
ಸುತ್ತಮುತ್ತಲಿನ ಜನಹೋರಾಟಗಳಿಗೆ ಸಕ್ರಿಯ ಬೆಂಬಲ ನೀಡುತ್ತಾ ಬಂದವರಾಗಿದ್ದರು.
ಇತ್ತೀಚೆಗೆ ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಬೇಕಾಗಿ ಬಂದಿತ್ತು.
ಕೊರೋನಾ ಸೋಂಕಿನಿಂದ ವಾರದ ಹಿಂದೆಯೇ ಗುಣಮುಖರಾಗಿ ಹೊರಬಂದಿದ್ದರೂ ಕೂಡ ಅವರಿಗೆ ಬಿಳಿರಕ್ತಕಣಗಳ
ಕೊರತೆಯ ಸಮಸ್ಯೆ ತಲೆದೋರಿತ್ತು. ಕೆಮ್ಮು ಕೂಡ ಇತ್ತು. ಆಮ್ಲಜನಕದ ಬೆಂಬಲವೂ ಇತ್ತು.
ಆಸ್ಪತ್ರೆಯಲ್ಲೇ ಚಿಕಿತ್ಸೆಪಡೆಯುತ್ತಿದ್ದರು. ಉಳಿದಂತೆ ಹುಷಾರಾಗಿಯೇ ಇದ್ದರು. ಅವರು ಹಾಗೂ ಅವರ
ಬಾಳಸಂಗಾತಿ ಆರೋಗ್ಯ ಚೇತರಿಸಿಕೊಂಡ ಬಗ್ಗೆ ವಿಶ್ವಾಸದಿಂದಲೇ ಇದ್ದರು. ಆದರೆ ಮೇ 29ರ ರಾತ್ರಿ
ಎರಡು ಗಂಟೆಯ ವೇಳೆಗೆ ಕಫದೊಂದಿಗೆ ರಕ್ತ ಬೀಳಲಾರಂಭಿಸಿತು. ನಂತರ ಬೆಳಿಗ್ಗೆ ಅದಕ್ಕೆ ಚಿಕಿತ್ಸೆ
ಮಾಡಿದ ನಂತರ ರಕ್ತ ಬರುವುದು ನಿಂತಿತ್ತು.
31/05/2021ರ ಮದ್ಯಾಹ್ನದ ವೇಳೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಿಂದ ಡಿಸ್
ಚಾರ್ಜ್ ಆಗಿ ಅಲ್ಲಿನ ವೈದ್ಯರ ಶಿಫಾರಸಿನಂತೆ ಮಂಗಳೂರಿಗೆ ಚಿಕಿತ್ಸೆಗಾಗಿ ಹೊರಡುವಾಗ ಚೆನ್ನಾಗಿಯೇ
ಇದ್ದರು. ಮಾರ್ಗ ಮಧ್ಯೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಂತರ ಸ್ವಲ್ಪ ಸುಧಾರಿಸಿಕೊಂಡು
ಮಂಗಳೂರಿನವರೆಗೂ ಸಾಗಿದ್ದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ತಮ್ಮ ಉಸಿರಾಟ
ನಿಲ್ಲಿಸಿದ್ದಾರೆ. ಹೃದಯಾಘಾತ ಸಂಭವಿಸಿದಂತಿದೆ ಎಂದು ಹೇಳಲಾಗುತ್ತಿದೆ.
ಅವರ ಮರಣ ಮಲೆನಾಡು ಹಾಗೂ ಕರ್ನಾಟಕದ ಜನಚಳವಳಿಗೆ, ಪ್ರಾಮಾಣಿಕ ದಲಿತ ದ್ವನಿಗೆ
ಆಗಿರುವ ಅಪಾರವಾದ ನಷ್ಟವಾಗಿದೆ. ನಾಡು ಪ್ರಾಮಾಣಿಕ ಹಾಗೂ ನಿಸ್ವಾರ್ಥದ ಸಾಮಾಜಿಕ ಕಾರ್ಯಕರ್ತ
ಹಾಗೂ ಸಂಘಟಕರೊಬ್ಬರನ್ನು ಕಳೆದುಕೊಂಡಿದೆ.
ನಾಡಿನ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗು ದಮನಿತರ ಮೇಲಿನ ಅನ್ಯಾಯಗಳ
ವಿರುದ್ಧ ಅವರು ನಿಂತಿದ್ದರು. ಅದಕ್ಕಾಗಿ ರಾಜ್ಯದ ಹಲವೆಡೆಗಳಲ್ಲಿ ಓಡಾಡಿದ್ದರು. ಸರ್ಕಾರದ
ಪಡೆಗಳು ಹೋರಾಟನಿರತ ಜನರ ಮೇಲೆ ನಡೆಸಿದ್ದ ಎನ್ ಕೌಂಟರ್ ಹೆಸರಿನ ಕಗ್ಗೊಲೆಗಳನ್ನು ಜನರೆದುರು
ಸತ್ಯಶೋಧನೆಗಳ ಮೂಲಕ ಬಯಲುಗೊಳಿಸುವ ಕಾರ್ಯ ಮಾಡಿದ್ದರು. ದಲಿತ ದಮನಿತರು, ಅಲ್ಪಸಂಖ್ಯಾತರ ಮೇಲಿನ
ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ದನಿಯೆತ್ತುತ್ತಾ ಬಂದವರಾಗಿದ್ದರು. ನಾಡಿನಲ್ಲಿ ನಡೆದ
ಹಲವಾರು ಅಕ್ರಮ, ದೌರ್ಜನ್ಯಗಳ ವಿರುದ್ಧ ಸತ್ಯಶೋಧನಾ ತಂಡಗಳಲ್ಲಿ ಸಕ್ರಿಯರಾಗಿ
ಪಾಲ್ಗೊಂಡಿದ್ದವರಾಗಿದ್ದರು. ಹೋರಾಟ ನಿರತರ ಮೇಲಿನ ಹಲವಾರು ಪ್ರಕರಣಗಳಲ್ಲಿ ಕಾನೂನು ನೆರವು
ನೀಡುತ್ತಿದ್ದರು. ವಿವಿಧ ಪ್ರಕರಣಗಳಡಿ ಕಾರಾಗೃಹದಲ್ಲಿದ್ದ ಹೋರಾಟಗಾರರಿಗೆ ಕಾನೂನು ನೆರವು ಹಾಗೂ
ನೈತಿಕ ಬೆಂಬಲವನ್ನೂ ನೀಡುತ್ತಾ ಬಂದಿದ್ದರು.
ಕೋಮವಾದ, ಜಾತೀಯತೆ, ಆಳುವ ಶಕ್ತಿಗಳು ನಡೆಸುವ ದಮನ ದೌರ್ಜನ್ಯಗಳ
ವಿರುದ್ಧವಿದ್ದ ಹೂವಪ್ಪ ಅವುಗಳ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಾ
ಬಂದವರಾಗಿದ್ದರು.
ಆರಂಭದಲ್ಲಿ ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯರಾಗಿದ್ದ ಹೂವಪ್ಪ ನಂತರ ದಲಿತ
ಸಂಘರ್ಷ ಸಮಿತಿ(ಸಂಯೋಜಕ)ದ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ನಂತರ ಜಾತಿ ವಿನಾಶ ವೇದಿಕೆಯ
ಹೋರಾಟಗಳಲ್ಲಿ, ಕುದ್ರೆಮುಖ ರಾಷ್ಟ್ರೀಯ ಉದ್ಯಾನವನ, ಕಳಸೇಶ್ವರ ಇನಾಮು ಭೂಮಿ, ಮೀಸಲು ಅರಣ್ಯ,
ರಕ್ಷಿತಾರಣ್ಯ, ಹುಲಿ ಯೋಜನೆ, ಅಭಯಾರಣ್ಯ, ಕಸ್ತೂರಿರಂಗನ್ ವರದಿಯ ಅನುಷ್ಠಾನ ಹೆಸರಿನಲ್ಲಿ
ಆದಿವಾಸಿ, ದಲಿತ, ಮತ್ತಿತರ ಜನಸಾಮಾನ್ಯರ ಎತ್ತಂಗಡಿಗಳನ್ನು, ಅಪಾಯಕಾರಿ ಪರಿಸರ ವಿನಾಶಗಳನ್ನು,
ಭಾರಿ ಕಾರ್ಪೋರೇಟುಗಳ ಕೊಳ್ಳೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಜನರ ಹೋರಾಟಗಳ ಭಾಗವಾಗಿ
ಸಕ್ರಿಯರಾಗಿ ಕೆಲಸ ಮಾಡಿದ್ದರು ಹೂವಪ್ಪ. ಅನೇಕ ಹೋರಾಟ ಚಟುವಟಿಕೆಗಳಲ್ಲಿ ಕ್ರಾಂತಿಗೀತೆಗಳನ್ನು
ಹಾಡುತ್ತಿದ್ದರು.
ಈ ಎಲ್ಲಾ ಹೋರಾಟಗಳೊಂದಿಗೆ ತಮ್ಮ ವೈಚಾರಿಕ ಸ್ಪಷ್ಟತೆಗಳನ್ನು
ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದರು. ದಲಿತ ವಿಮೋಚನೆಯ ಸಾಕಾರವು, ಸಾಮಾಜಿಕ ಬದಲಾವಣೆಯ ಹೋರಾಟ
ಮತ್ತು ದುಡಿಯುವ ವರ್ಗದ ವಿಮೋಚನೆಯ ಮೂಲಕ ಮಾತ್ರ ಆಗಲು ಸಾಧ್ಯ ಎಂಬುದನ್ನು ಗ್ರಹಿಸಿದವರಾಗಿದ್ದರು.
ಯಾಕೆಂದರೆ ಈ ದೇಶದ ದುಡಿಯುವ ವರ್ಗವೆಂದಾಗ ಅದರಲ್ಲಿ ದಲಿತ ದಮನಿತರದು ದೊಡ್ಡ ಪಾಲಾಗಿದೆ. ದೇಶದ
ಆಸ್ತಿ ಹಾಗೂ ರಾಜಕೀಯ ಅಧಿಕಾರದಲ್ಲಿ ಸಮಾನ ಅವಕಾಶ ದಲಿತ ದಮನಿತರ ಸಹಜ ಹಕ್ಕಾಗಬೇಕು ಎಂಬ ಗ್ರಹಿಕೆ
ಹೊಂದಿದ್ದವರಾಗಿದ್ದರು ಹೂವಪ್ಪ.
ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಹೇಳಲಾಗದ ಹತ್ತು ಹಲವು ಪ್ರತ್ಯಕ್ಷ ಹಾಗೂ
ಪರೋಕ್ಷ ದೌರ್ಜನ್ಯ, ಅಪಮಾನ, ಭರ್ತ್ಸನೆಗಳನ್ನೆಲ್ಲಾ ಸಹಿಸಿ ಹೋರಾಡುತ್ತಾ ಬಹಳ ಕಷ್ಟದಿಂದ
ಶಿಕ್ಷಿತರಾಗಿ ವಕೀಲರಾದವರು ಹೂವಪ್ಪ.
ಹೂವಪ್ಪ ದುಡಿಯುವ ಜನರ ಸಂಗಾತಿಯಾಗಿದ್ದರು. ದಲಿತ ದಮನಿತರ ನೋವಿನ
ದನಿಯಾಗಿದ್ದರು, ಸಮಾಜ ಬದಲಾವಣೆಯ ಕ್ರಾಂತಿಕಾರಿ ಪ್ರಜಾತಾಂತ್ರಿಕ ಆಶೋತ್ತರಗಳನ್ನು
ಹೃದಯದಲ್ಲಿಟ್ಟುಕೊಂಡ ಸಹೃದಯ ಹೋರಾಟಗಾರರಾಗಿದ್ದರು. ಜಾತೀಯತೆಯ ವಿನಾಶದ ಕಾರ್ಯಕರ್ತರಾಗಿದ್ದ
ಹೂವಪ್ಪ. ವರ್ಗ, ಜಾತಿ, ಲಿಂಗ, ವರ್ಣಭೇಧಗಳ ವಿರುದ್ಧ ನಿಂತ ಮಾನವೀಯ ಕಳಕಳಿಯ ವ್ಯಕ್ತಿಯಾಗಿದ್ದರು.
ಕೋಮು ಸೌಹಾರ್ಧ ವೇದಿಕೆಯಂತಹ ಜನಹೋರಾಟದ ವೇದಿಕೆಗಳು ರಾಜಕೀಯಪಕ್ಷಗಳ, ರಾಜಕೀಯ
ನಾಯಕರುಗಳ ಸ್ವಾರ್ಥಹಿತಾಸಕ್ತಿಗಳಿಗಾಗಿ ಅಡವಿಡುವ ಕಾರ್ಯಗಳನ್ನು ಆ ವೇದಿಕೆಯಲ್ಲಿರುವ ಕೆಲವು
ಅವಕಾಶವಾದಿ ಹಿತಾಸಕ್ತಿಗಳು ಮಾಡಲಾರಂಭಿಸಿದಾಗ ಅದನ್ನು ಬಲವಾಗಿ ವಿರೋಧಿಸಿ ಹೂವಪ್ಪ ನಿಂತಿದ್ದರು.
ಕೋಮುಸೌಹಾರ್ಧ ವೇದಿಕೆಯ ಹುಟ್ಟಿನೊಂದಿಗೆ ಅದರಲ್ಲಿದ್ದು ಕಾರ್ಯ ನಿರ್ವಹಿಸಿದ್ದ ಅವರನ್ನು ಹಾಗೂ
ಅವರೊಂದಿಗೆ ನಿಂತವರನ್ನು ಆ ಕಾರಣಕ್ಕಾಗೇ ಕೋಮುಸೌಹಾರ್ದ ವೇದಿಕೆಯಿಂದ ಕುಂಟು ಕಾರಣ ನೀಡಿ ಅಪ್ರಜಾತಾಂತ್ರಿಕವಾಗಿ
ಹೊರಹಾಕಲಾಗಿತ್ತು. ಆ ವೇದಿಕೆಯನ್ನು ಹಾಗೆಲ್ಲಾ ಚುನಾವಣಾರಾಜಕೀಯದ ಹಿತಾಸಕ್ತಿಗಳಿಗೆ ಬಳಸುತ್ತಾ
ನಂತರ ಅದನ್ನು ಸ್ತಭ್ಧಗೊಳಿಸಲಾಯಿತು. ಇಂದು ಅವರಲ್ಲೇ ಕೆಲವರು ಹೂವಪ್ಪರ ಸಾವಿನ ಕುರಿತು ಸಂತಾಪದ
ಮಾತುಗಳನ್ನಾಡುತ್ತಿದ್ದಾರೆ. ಹಲವರು ಬಾಯನ್ನೇ ಬಿಚ್ಚಿಲ್ಲ.
ದುಡಿಯುವ ಜನತೆ ತನ್ನ ಒಂದು ಹೋರಾಟದ ದನಿಯನ್ನು ಇಂದು ಕಳೆದುಕೊಂಡಿದೆ. ದಲಿತ
ಆದಿವಾಸಿ , ಅಲ್ಪ ಸಂಖ್ಯಾತ, ದಮನಿತರು ತಮ್ಮ ಹೋರಾಟದ ಸಂಗಾತಿಯನ್ನು ಕಳೆದುಕೊಂಡಿದ್ದಾರೆ.
ಹೂವಪ್ಪರ ಭೌತಿಕ ದೇಹ ಇಂದು ಕಳೆದುಹೋಗಿದ್ದರೂ ಅವರ ಸಮಾಜ ಬದಲಾವಣೆಯ
ಆಶೋತ್ತರಗಳು, ಕಾರ್ಯಶೀಲತೆ ಹಾಗೂ ಹೋರಾಟದ ಸ್ಪೂರ್ತಿಗಳು ದಲಿತ ಆದಿವಾಸಿ, ಅಲ್ಪ ಸಂಖ್ಯಾತ ದಮನಿತ
ಜನಸಮೂಹಗಳಿಗೆ, ಮಾನವ ಹಕ್ಕು ಹೋರಾಟಗಾರರಿಗೆ ಎಂದಿಗೂ ಬೆನ್ನೆಲುಬಾಗಿ ನಿಲ್ಲುತ್ತದೆ.
ಸರಕಾರಗಳು ಮತ್ತು ಅವುಗಳು ಮುನ್ನೆಡೆಸುತ್ತಿರುವ ವ್ಯವಸ್ಥೆಯೇ ಈಗ
ನಡೆಯುತ್ತಿರುವ ಹೂವಪ್ಪರಂತಹವರ ಸಾವಿರಾರು ಸಾಮಾಜಿಕ ಕಾರ್ಯಕರ್ತರ ಹಾಗೂ ಲಕ್ಷಾಂತರ ಜನರ ಸಾವುನೋವುಗಳಿಗೆ,
ಸಾವಿರಾರು ಮಕ್ಕಳು ಅನಾಥರಾಗಲು ನೇರ ಕಾರಣವಾಗಿದೆ. ಇದು ಈ ವ್ಯವಸ್ಥೆ ನಡೆಸುತ್ತಿರುವ
ಕಗ್ಗೊಲೆಗಳಲ್ಲದೇ ಮತ್ತೇನೂ ಅಲ್ಲ.
ಕೊರೋನಾ ಕಾಣಿಸಿಕೊಂಡ
ಆರಂಭದಲ್ಲೇ ಅಂತರಾಷ್ಟ್ರೀಯ ಯಾತ್ರಿಗಳ ಬಗ್ಗೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಬಂದೋಬಸ್ತು
ಮಾಡಿ, ಸೋಂಕಿತರನ್ನು ಬೇರ್ಪಡಿಸಿ ಅಗತ್ಯ ವೈಜ್ಞಾನಿಕ ಚಿಕಿತ್ಸೆ ಕಲ್ಪಿಸಿ ಕೊರೋನಾ ಹರಡುವುದನ್ನು
ನಿಯಂತ್ರಿಸದೇ, ನಮಸ್ತೆ ಟ್ರಂಪ್, ಕುಂಭಮೇಳ, ಸಾಮೂಹಿಕ ಪೂಜೆ, ಹೋಮ, ಹವನ, ಜಾತ್ರೆ, ರಾಜಕೀಯ
ಸಮಾವೇಶಗಳಿಗೆ ಮುಕ್ತ ಅವಕಾಶ ನೀಡಿದ್ದಲ್ಲದೇ, ಅವೈಜ್ಞಾನಿಕ ಲಾಕ್ ಡೌನ್ ಹೇರಿ ಒಮ್ಮೆಗೆ
ದೇಶದಾದ್ಯಂತ ಕೊರೋನಾ ಹರಡುವಂತೆ ಮಾಡಲಾಯಿತು. ಜೊತೆಗೆ ಸರಕಾರದ ಮಂತ್ರಿಗಳೇ ಕೊರೋನಾ ಹೋಗಲಾಡಿಸಲು
ಗೋಮೂತ್ರಪಾನ, ಸೆಗಡಿ ಸ್ನಾನ, ಹೋಮ, ಮಂತ್ರ ಇತ್ಯಾದಿ ಮಾಡಲು ಹೇಳುತ್ತಾ ಅವೈಜ್ಞಾನಿಕತೆ ಹಾಗೂ ಅಪಾಯಗಳಿಗೆ
ಜನಸಾಮಾನ್ಯರನ್ನು ಈಡುಮಾಡಿದರು. ಕೊರೋನಾ ಬಗ್ಗೆ ವಾಸ್ತವ ವೈಜ್ಞಾನಿಕ ಮಾಹಿತಿಗಳನ್ನು ನೀಡಿ
ಜನಜಾಗೃತಿ ಮೂಡಿಸುವ ಬದಲು ತಪ್ಪು ಮಾಹಿತಿಗಳನ್ನು ಅರ್ದಸತ್ಯಗಳನ್ನು ನೀಡುತ್ತಾ ಬರಲಾಯಿತು.
ಜನರನ್ನು ರೋಚಕ ಭಯಾಂದೋಲನಗಳಗೆ ಗುರಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಬರುತ್ತಿದೆ.
ಜನಸಾಮಾನ್ಯರು ಹಸಿವು
ನೀರಡಿಕೆ, ಭಯ ಆತಂಕಗಳಿಂದಲೇ ಸಾಯಬೇಕಾದಂತಹ ಪರಿಸ್ಥಿತಿಯನ್ನು ತಂದಿತ್ತರು. ಸಾಮೂಹಿಕ
ಭಯಾಂದೋಲನಕ್ಕೆ ಜನಸಾಮಾನ್ಯರನ್ನು ಈಡು ಮಾಡಲಾಯಿತು. ಇದರಲ್ಲಿ ಮಾಧ್ಯಮಗಳ ಪಾತ್ರ ಪ್ರಧಾನವಾದುದು.
ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸದೇ ಖಾಸಗೀ ಆಸ್ಪತ್ರೆಗಳ ಲಾಬಿಗಳಿಗೆ ಜನರನ್ನು ಲೂಟಿ
ಮಾಡಲು ಮುಕ್ತ ಅವಕಾಶ ಕಲ್ಪಿಸಲಾಯಿತು. ಮದ್ಯಮವರ್ಗದ ಜೀವಮಾನದ ಉಳಿತಾಯಗಳನ್ನು ಎಗ್ಗಿಲ್ಲದೇ
ಮಲ್ಟಿ ಸ್ಪೆಷಾಲಿಟಿ ಎಂದೆಲ್ಲಾ ಬಿಂಬಿಸಿಕೊಂಡು ಐಷಾರಾಮಿ ಆಸ್ಪತ್ರೆಗಳೆಂದು ಹೇಳುವ ಭಾರಿ
ಕಾರ್ಪೋರೇಟು ಆಸ್ಪತ್ರೆಗಳು ಸರಕಾರಗಳ ಬೆಂಬಲದಿಂದಲೇ ಸುಲಿಗೆ ಮಾಡಿ ಬಿಟ್ಟವು. ಕೇವಲ ಹಾಸಿಗೆ
ಕಾಯ್ದಿರಿಸಲೆಂದೇ ಮೂರರಿಂದ ಹತ್ತು ಲಕ್ಷಗಳಷ್ಟು ಸುಲಿದ ಉದಾಹರಣೆಗಳು ಸಾಕಷ್ಟಿವೆ.
ಕೊರೋನಾ ಸೋಂಕು ಆರಂಭವಾಗಿ ಒಂದೂವರೆ ವರುಷ ಕಳೆದಿದೆ.. ಸರಕಾರಗಳು
ಅನುಸರಿಸುತ್ತಾ ಬಂದ ಬೇಕಾಬಿಟ್ಟಿ ನೀತಿಗಳು ವಿಫಲವಾಗಿವೆ ಎನ್ನುವುದೂ ನಿಚ್ಚಳವಾಗಿ
ಕಾಣಿಸುತ್ತಿದೆ. ಈಗ ದೇಶದಾದ್ಯಂತ ನಗರ ಹಳ್ಳಿ ಸೇರಿದಂತೆ ಕೊರೋನಾ ಹರಡಿದೆ. ಆದರೆ ಕೊರೋನಾ ಕುರಿತಂತೆ ಸ್ಪಷ್ಟ ವೈಜ್ಞಾನಿಕ ಸಾಮಾನ್ಯ ಚಿಕಿತ್ಸಾ
ಸೂತ್ರಗಳನ್ನು ಈಗಲೂ ಆಳುವ ಸರಕಾರಗಳು ರೂಪುಗೊಳಿಸಿಲ್ಲ.
ಒಂದು ಸಾಮಾನ್ಯ ವೈರಸ್ ಅನ್ನು ಮಹಾ ಅಪಾಯಕಾರಿಯೆಂದು ಚಿತ್ರಿಸಿ ಸಮಾಜದಲ್ಲಿ
ಭಯಾಂದೋಲನ ಹಬ್ಬಿಸಿ, ಕನಿಷ್ಠ ಔಷದೋಪಚಾರಗಳನ್ನು ಕೂಡ ಒದಗಿಸದೇ ಊಹಿಸಲಾಗದಷ್ಟು ಆರ್ಥಿಕ, ರಾಜಕೀಯ
ಹಾಗೂ ಸಾಮಾಜಿಕ ಸೂಪರ್ ಲಾಭಗಳನ್ನು ಆಳುವ ಹಿತಾಸಕ್ತಿಗಳು ಪಡೆಯುತ್ತಿವೆ. ಈಗ ವ್ಯಾಕ್ಸಿನ್
ಹೆಸರಿನಲ್ಲಿ ಲೂಟಿ ಆರಂಭವಾಗಿದೆ. ಅದರ ಹೆಸರಿನಲ್ಲಿ ಆಳುವ ಸರಕಾರಗಳ ಅಸಹ್ಯ ಬ್ರಾಹ್ಮಣತ್ವ, ಜಾತಿ
ಭೇದ, ವರ್ಗಭೇದಗಳು ಬಹಿರಂಗವಾಗಿಯೇ ಕಾಣಿಸಿಕೊಳ್ಳತೊಡಗಿವೆ. ಬ್ರಾಹ್ಮಣರಿಗೆ, ಬ್ರಾಹ್ಮಣ
ಅರ್ಚಕರಿಗೆ ಪ್ರತ್ಯೇಕವಾದ ಚುಚ್ಚುಮದ್ದು (ವ್ಯಾಕ್ಸಿನ್) ಮೇಳಗಳನ್ನು ಸರ್ಕಾರವೇ ನಡೆಸತೊಡಗಿದೆ.
ಇತರರರಿಗೆ ಚುಚ್ಚು ಮದ್ದು ಸಿಗಲಾರದಂತಾಗಿದೆ. ಇನ್ನೊಂದೆಡೆ ಎರಡು ಡೊಸ್ ಚುಚ್ಚು ಮದ್ದು
ತೆಗೆದುಕೊಂಡವರಲ್ಲೂ ಕೊರೋನಾ ಸೋಂಕು ಹರಡಿರುವ ಉದಾಹರಣೆಗಳು ಸಾಕಷ್ಟಿವೆ.
ಇವೆಲ್ಲದರ ನೇರ ಹಾಗೂ ಪರೋಕ್ಷ ಪರಿಣಾಮವಾಗಿ ಇನ್ನೆಷ್ಟು ಜನರ ಬಲಿಯಾಗಲಿದೆಯೋ
ಊಹಿಸಲು ಸಾಧ್ಯವಿಲ್ಲ. ಈಗಾಗಲೇ ಲಾಕ್ ಡೌನ್ ಹಾಗೂ ಕೊರೋನಾ ಭಯಾಂದೋಲನಗಳಿಂದ ಆತ್ಮಹತ್ಯೆಗಳ
ಸಂಖ್ಯೆ ಏರುತ್ತಿದೆ.
ಈ ಎಲ್ಲಾ ಅವ್ಯವಸ್ಥೆ ಹಾಗೂ ಆಡಳಿತದ ಅಸಡ್ಡೆ ಅರಾಜಕತೆಗಳಿಂದಾಗಿ ಹೂವಪ್ಪರಂತಹ
ಇನ್ನೆಷ್ಟು ಸಾಮಾಜಿಕ ಕಾರ್ಯಕರ್ತರುಗಳು, ದಲಿತ ದಮನಿತ ಇನ್ನಿತರ ಜನಸಾಮಾನ್ಯರು ಬಲಿಯಾಗಬೇಕಿದೆಯೋ
ಹೇಳಲಾಗದು. ಜನಸಾಮಾನ್ಯರು ಗಂಭೀರವಾಗಿ ಇವೆಲ್ಲದರ ಬಗ್ಗೆ ಚಿಂತಿಸಿ ಕಾರ್ಯೋನ್ಮುಖರಾಗಬೇಕಾದ
ಅಗತ್ಯವಿದೆ.
03/06/2021.
-
ನಂದಕುಮಾರ್. ಕೆ. ಎನ್. ಕುಂಬ್ರಿ ಉಬ್ಬು
ಮಿಂಚಂಚೆ: nandakumarnandana67@gmail.com
ಸಂಗಾತಿ ಹೂವಪ್ಪರವರ ಕುರಿತು ಹಾಗೂ ಪ್ರಸ್ತುತ ಆಳುವ ವರ್ಗದ ಕಾರ್ಪೊರೇಟ್ ರಾಜಕಾರಣದ ಬಗ್ಗೆ ವಿವೇಚನಾತ್ಮಕ ಚಿಂತನೆಗೆ ಧನ್ಯವಾದಗಳು ಸರ್.
ReplyDeleteDanyavaada
Delete