ಜಾಗತಿಕ ಆರ್ಥಿಕ ಕ್ಷೋಭೆಯ ಮುಂದುವರಿಕೆ..
ದುರಂತಮಯ ಪರಿಸ್ಥಿತಿಯಲ್ಲಿ ದೇಶ…
-ನಂದಕುಮಾರ್
ಕೆ ಎನ್. ಕುಂಬ್ರಿ ಉಬ್ಬು
ಅದು 2008ರ ಕಾಲ. ಮಾಹಿತಿ ತಂತ್ರಜ್ಞಾನದ
ಮನಮೊಹಕ ಪರದೆಯಾಗಲೇ ಹರಿದಿತ್ತು. ಇದು ಪ್ರಧಾನವಾಗಿ ಅಮೇರಿಕ ಯೂರೋಪುಗಳನ್ನೇ ಆಧರಿಸಿ ಇಂಡಿಯಾದಂತಹ ದೇಶಗಳಲ್ಲಿ ಭಾರಿ ಭ್ರಾಮಕ ಲೋಕವನ್ನು ಸೃಷ್ಠಿಸಿತ್ತು. ಆದರೆ
ಈ ಹೊತ್ತಿಗಾಗಲೇ ಐಟಿ ಎಂಜಿನಿಯರ್ ಗಳಿಗೆ ತಮ್ಮ ಮಕ್ಕಳನ್ನು ಕೊಟ್ಟು ಮದುವೆ ಮಾಡಬೇಕೆಂಬ ಬಹಳಷ್ಟು ಅಕ್ಷರಸ್ಥ ತಂದೆ ತಾಯಂದಿರು ತಮ್ಮ ಈ ನಿಲುವಿನಿಂದ ಹಿಂದೆ ಸರಿದು ಯೋಚಿಸುವಂತಾಗಿ ಬಿಟ್ಟಿತ್ತು.
ಇಂಡಿಯಾದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಲಕ್ಷಾಂತರ ಉದ್ಯೋಗಿಗಳು ನಿರುದ್ಯೋಗಿಗಳಾದರು.
ಅದರಲ್ಲೂ ಕಾಲ್ ಸೆಂಟರ್ ಉದ್ಯೋಗಿಗಳು ಬೀದಿಪಾಲಾಗಬೇಕಾಯಿತು. ಜೊತೆಗೆ ಇತರ ಹಲವಾರು ಉದ್ಯಮಗಳು ಸಾವಿರ
ಲಕ್ಷಗಳ ಸಂಖ್ಯೆಯಲ್ಲಿ ಜಾಗತಿಕಮಟ್ಟದಲ್ಲಿ ನೆಲಕಚ್ಚತೊಡಗಿದ್ದವು.
ಇದೇ
ಸಂಧರ್ಭದಲ್ಲೇ ಅಮೇರಿಕದಲ್ಲಿ ಸಾಮಾನ್ಯ ಜನರಿಗೆ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸತೊಡಗಿತು. ಅಮೇರಿಕದ
ಆರ್ಥಿಕತೆ ಕುಸಿತದ ನಡುವೆ ಇತ್ತು. ಅಮೇರಿಕದ ಕರಿಯ ಜನಾಂಗವು ಇದರ ಮೊದಲ ಗುರಿಯಾಗಿತ್ತು. ನಂತರವೇ
ಇತರ ಜನಸಮುದಾಯಗಳಿಗೆ ಇದರ ಸುಡುತ್ತಿರುವ ಕಾವು ತಟ್ಟಿ ಹೈರಾಣಾಗಿದ್ದರು. ಆದರೆ ಅಮೇರಿಕದ ಒಟ್ಟು ಜನಸಂಖ್ಯೆಯ
ಶೇಕಡಾ ಒಂದರಷ್ಟು ಇರುವ ಕಾರ್ಪೋರೇಟುಗಳು ತಮ್ಮ ಆಸ್ತಿ ಸಂಪತ್ತುಗಳನ್ನು ಅಮೇರಿಕದ ಒಟ್ಟು ಆಸ್ತಿಯ
ಶೇಕಡಾ 33ಕ್ಕೂ ಹೆಚ್ಚು ಹೆಚ್ಚಿಸಿಕೊಂಡಿದ್ದರು. ಈ ಪ್ರಕ್ರಿಯೆ ಬಿರುಸಿನಿಂದಲೇ ಸಾಗುತ್ತಿತ್ತು.
ಅದೇ ಸಂಧರ್ಭದಲ್ಲೇ ಅಮೇರಿಕದ ಅದ್ಯಕ್ಷರ ಚುನಾವಣೆಯಿತ್ತು. ಮೊದಲ ಬಾರಿಗೆ ಕಪ್ಪು ಜನಾಂಗಕ್ಕೆ ಸೇರಿದ ಮುಸ್ಲಿಂ ಮತ್ತು
ಕ್ರೈಸ್ತ ಸಮುದಾಯದ ಸಮ್ಮಿಶ್ರಣವಾಗಿದ್ದ ಆಫ್ರಿಕಾ ಖಂಡ ಮೂಲದ ಬರಾಕ್ ಒಬಾಮರನ್ನು ಅಧ್ಯಕ್ಷರನ್ನಾಗಿ
ಆರಿಸಿಕೊಳ್ಳುವ ಸಂಧರ್ಭದಲ್ಲಿ ಅಮೇರಿಕವಿತ್ತು. ಬರಾಕ್ ಒಬಾಮರ ‘ವಿ ಕ್ಯಾನ್ ಡೂ’ ಎಂಬ ಪದವಿಶೇಷಣದ
ಭಾಷಣವನ್ನು ಭಾರಿ ಮಟ್ಟದಲ್ಲಿ ಬಿಂಬಿಸಲಾಗಿತ್ತು. ಹತಾಷ ಸ್ಥಿತಿಗೆ ಜಾರಿದ್ದ ಯುವ ಸಮೂಹಕ್ಕೆ ಬರಾಕ್
ಒಬಾಮ ಭರವಸೆಯಂತೆ ಬಿಂಬಿಸಲಾಯಿತು. ಒಬಾಮರು ತಮ್ಮ ಚುನಾವಣಾ ಭಾಷಣದಲ್ಲಿ ಅಮೇರಿಕ ಎದುರಿಸುತ್ತಿರುವ
ಸಂಕಷ್ಟಗಳನ್ನು ಪರಿಹರಿಸುವ ಭಾರಿ ಭರವಸೆಗಳನ್ನು ಆಕರ್ಷಕವಾಗಿ ಮನಮುಟ್ಟುವಂತೆ ಮಾತನಾಡುತ್ತಿದ್ದರು.
ಇವರ ಭಾಷಣಗಳಿಗೆ ಬಾರಿ ಪ್ರಚಾರ ನೀಡಲಾಗುತ್ತಿತ್ತು. ಇದೇ ಸಂಧರ್ಭದಲ್ಲೇ ದಿವಾಳಿಯಾಗಿದ್ದ ಅಮೇರಿಕದ
ಬ್ಯಾಂಕಿಂಗ್ ವ್ವವಸ್ಥೆಗೆ ಪುನರುಜ್ಜೀವನ ಯೋಜನೆಯ ಭರವಸೆ ಬಗ್ಗೆ ಮಾತನಾಡುತ್ತಿದ್ದರು.
ನಂತರ 2008ರ ಅಕ್ಟೋಬರ್ ನಲ್ಲಿ ಟ್ರಬಲ್ಡ್
ರಿಲೀಫ್ ಪ್ರೋಗ್ರಾಮ್ ಅಡಿ ಬ್ಯಾಂಕುಗಳಿಗೆ ಸುಮಾರು ಹದಿನಾರು ಟ್ರಿಲಿಯನ್ ಡಾಲರುಗಳಷ್ಟು ( ಒಂದು ಟ್ರಿಲಿಯನ್
ಅಂದರೆ ಸಾವಿರ ಕೋಟಿಗಳು) ಅಮೇರಿಕದ ಸಾರ್ವಜನಿಕರ ಹಣವನ್ನು ತುಂಬಿಸಲಾಯಿತು.
ಆದರೆ ಇದು ಅಮೇರಿಕದ ಸುಮಾರು ಒಂಬತ್ತು ದಶಲಕ್ಷದಷ್ಟು
ಉದ್ಯೋಗ ನಷ್ಟಗಳನ್ನು ತಡೆಯಲಿಲ್ಲ. ನಾಲ್ಕು ದಶಲಕ್ಷದಷ್ಟು ಯದ್ದಿಮೆಗಳು ನೆಲಕಚ್ಚುವುದನ್ನು ತಡೆಯಲಿಲ್ಲ.
ಬಡವರ, ಕಾರ್ಮಿಕರ, ಮತ್ತು ಮದ್ಯಮ ವರ್ಗದವರ ಸಂಪತ್ತು ತೀವ್ರವಾಗಿ ಕುಸಿಯುವುದನ್ನು ತಡೆಯಲಿಲ್ಲ. ಆದರೆ
ಬ್ಯಾಂಕಿಂಗ್ ವ್ಯವಸ್ಥೆಯ ಕುಸಿತವನ್ನು ತಡೆದಿತ್ತು. ಅದರ ಸಂಪೂರ್ಣ ಲಾಭ ಶೇಕಡಾ ಒಂದರಷ್ಟಿರುವ ಭಾರಿ
ಕಾರ್ಪೋರೇಟು ವಲಯ ಪಡೆದಿತ್ತು. ಹೀಗೆ ಅಮೇರಿಕದ ಸಾರ್ವಜನಿಕರನ್ನು ನಿರಂತರವಾಗಿ ವಂಚಿಸಿ ಮೋಸಮಾಡುತ್ತಾ
ಭಾರಿ ಆಸ್ತಿ ಒಟ್ಟುಗೂಡಿಸಿಕೊಂಡು ಬಂದಿದ್ದ ಈ ಶೇಕಡಾ ಒಂದರಷ್ಟು ಕಾರ್ಪೋರೇಟು ಸಮುದಾಯ ಬಹುಸಂಖ್ಯಾತ
ಜನಸಮುದಾಯದ ತೆರಿಗೆ ಉಳಿತಾಯಗಳನ್ನು ತಾವೇ ಸೃಷ್ಟಿಸಿದ್ದ ಆರ್ಥಿಕ ಸಂಕಷ್ಟದ ನೆಪದಲ್ಲಿ ಮತ್ತೊಮ್ಮೆ
ಕಬಳಿಸಿ ಬಿಟ್ಟಿತ್ತು. ಇದಕ್ಕೆ ಅಲ್ಲಿನ ಸರಕಾರಿ ವ್ಯವಸ್ಥೆ ಅನುಕೂಲ ಕಲ್ಪಿಸಿ ಕೊಟ್ಟಿತ್ತು. ಈ ಅಂಶವನ್ನೇ
ಕೇಂದ್ರವಾಗಿಸಕೊಂಡು ‘ವಾಲ್ ಸ್ಟ್ರೀಟ್ ಆಕ್ರಮಿಸಿ’ ಚಳವಳಿ ಸಿಡಿದು ಹರಡಿತ್ತು.
ಅಂದಿನಿಂದ ಆರಂಭವಾದ ಜಾಗತಿಕ ಆರ್ಥಿಕ ಬಿಕ್ಕಟ್ಟು
ಈಗಲೂ ಮುಂದುವರೆದಿದೆ. ಅದರ ಮೂಲ ಕಾರಣವಾದ ಭಾರಿ ಕಾರ್ಪೋರೇಟುಗಳ ಜಾಗತಿಕ ಹಿಡಿತ ಮತ್ತು ಸೂಪರ್ ಲಾಭದ
ಕೊಳ್ಳೆ ಇಂದಿಗೂ ಮುಂದುವರೆದಿವೆ. ಇಂತಹ ಬಿಕ್ಕಟ್ಟುಗಳಿಂದ ಪಾರಾಗಲು ಜಾಗತೀಕರಣ, ಉದಾರೀಕರಣ, ಖಾಸಗೀಕರಣ
ನೀತಿಗಳನ್ನು ಜಾಗತಿಕವಾಗಿ ಹೇರಿ ಮೂರು ದಶಕಗಳಿಗೂ ಹೆಚ್ಚು ಕಾಲವಾಗಿದ್ದರೂ ಇಂತಹ ಬಿಕ್ಕಟ್ಟುಗಳನ್ನು
ತಪ್ಪಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಇದು ಸೃಷ್ಠಿಸಿ ಜಾಗತಿಕಗೊಳಿಸಿದ
ಅನುಭೋಗಿತನದ ರೋಗವ್ಯಸನಗಳು ಇಂದು ಜಾಗತಿಕವಾಗಿ ವ್ಯಾಪಕವಾಗಿಯೂ ಜನಸಾಮಾನ್ಯರನ್ನು ಹಿಂಡಿ ಹಿಪ್ಪೆ
ಮಾಡುತ್ತಿದೆ. ನಮ್ಮಂತಹ ದೇಶಗಳಲ್ಲಿ ಅದರಲ್ಲೂ ಮದ್ಯಮವರ್ಗದ ಜನಸಾಮಾನ್ಯರು ಇದರ ವಾಹಕರೂ ಹಾಗೂ ಹೆಚ್ಚು
ಭಾಧಿತರೂ ಆಗಿದ್ದಾರೆ.
ನಮ್ಮ ದೇಶದ ಇಂದಿನ ದುರಂತಗಳ ಕಾರಣ ಕರ್ತರೂ
ಕೂಡ ಜಾಗತಿಕವಾಗಿ ಶೇಕಡಾ ಒಂದರಷ್ಟು ಇರಬಹುದಾದ ಈ ಭಾರಿ ಕಾರ್ಪೋರೇಟುಗಳು ಮತ್ತು ಅವರ ಸ್ಥಳೀಯ ಪ್ರತಿನಿಧಿಗಳೇ
ಆಗಿದ್ದಾರೆ. ಆಳುತ್ತಾ ಬಂದ ಸರ್ಕಾರಗಳೆಲ್ಲಾ ಇವರುಗಳ ಅಣತಿಯಂತೆ ನೀತಿ ನಿರೂಪಣೆ ಮಾಡಿ ಆಳುತ್ತಾ ಬಂದಿದ್ದರ
ಪರಾಕಾಷ್ಠೆಯ ಸ್ಥಿತಿ ಇದಾಗಿದೆ.
ನಮ್ಮ
ದೇಶವನ್ನು ಗ್ಯಾಟ್ ಡಂಕೆಲ್ ಒಪ್ಪಂದಗಳಿಗೆ ಅಡವಿಟ್ಟಿದ್ದು, ನಂತರ ವಿಶ್ವಬ್ಯಾಂಕ್, ಅಂತರಾಷ್ಟ್ರೀಯ
ಹಣಕಾಸು ನಿಧಿಗಳ ಸಾಲ ಸಹಾಯಗಳ ವಿಷಕೂಪದೊಳಗೆ ದೇಶವನ್ನು ಸಿಲುಕಿಸಿದ್ದು, ನಂತರ ಜಾಗತೀಕರಣ, ಉದಾರೀಕರಣ,
ಖಾಸಗೀಕರಣದ ವಿಷ ವರ್ತುಲದೊಳಗೆ ದೇಶವನ್ನು ಸಿಲುಕಿಸಿ, ನೂರಾರು ಅಸಮಾನ ಹಾಗೂ ಅನ್ಯಾಯದ ಒಪ್ಪಂದಗಳಿಗೆ
ಸಹಿಮಾಡಿ, ವಿಶ್ವ ವ್ಯಾಪಾರ ಸಂಘಟನೆಯಡಿ ಇಡೀ ದೇಶವನ್ನು ಸಿಲುಕಿಸಿ, ಇಂದು ದಿನಗೂಲಿ ಮಾಡುವವರ ಕನಿಷ್ಠ
ಆದಾಯವನ್ನು ಕೂಡ ಈ ಭಾರಿ ಕಾರ್ಪೋರೇಟುಗಳಿಗೆ ಎತ್ತಿಕೊಡುವ ಕೆಲಸಗಳನ್ನು ಮಾಡಲು ಮಾತ್ರ ಒಕ್ಕೂಟದ ಹಾಗೂ
ರಾಜ್ಯಗಳ ಸರ್ಕಾರಗಳಿವೆ ಎಂಬಂತಾಗಿದೆ.
ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿ ಕಳೆದ
ಒಂದು ವರ್ಷದ ಕೊರೋನಾ ಲಾಕ್ ಡೌನ್ ಪ್ರಕ್ರಿಯೆಯಲ್ಲಿ ನಮ್ಮ ದೇಶದ ಜನಸಾಮಾನ್ಯರ ಸಂಪತ್ತು ಹೇಗೆಲ್ಲಾ
ಬೆರಳೆಣಿಕೆಯಷ್ಟಿರುವ ಭಾರಿ ಕಾರ್ಪೋರೇಟುಗಳ ಕೈಗಳಿಗೆ ಸಲೀಸಾಗಿ ದಾಟಿಸಲಾಗಿದೆ ಎಂಬುದನ್ನು ಗಮನಿಸಬಹುದು.
ಇತ್ತೀಚಿನ ವರದಿಯಂತೆ ಕೇವಲ ಐದು ಬಿಲಿಯನೇರುಗಳು 56 ಬಿಲಿಯನ್
ಡಾಲರುಗಳ ದೇಶದ ಸಂಪತ್ತನ್ನು ಕೇವಲ ಕಳೆದ ಒಂದು ವರ್ಷದಲ್ಲಿ ತಮ್ಮ ಸುಪರ್ದಿಗೊಳಪಡಿಸಿಕೊಂಡಿವೆ. (ಒಂದು
ಬಿಲಿಯನ್ ಎಂದರೆ ನೂರು ಕೋಟಿಗಳು. ಒಂದು ಡಾಲರು ಎಂದರೆ ಇಂದಿನ ಇಂಡಿಯಾದ 74.93 ರೂಪಾಯಿಗಳು) ಅದರಲ್ಲಿ
37.3 ಬಿಲಿಯನ್ ಡಾಲರುಗಳ ಸಂಪತ್ತನ್ನು ಶೇಖರಿಸಿಕೊಂಡಿರುವ ಮುಖೇಶ್ ಅಂಬಾನಿ ಅತ್ಯುನ್ನತ ಸ್ಥಾನ ಹೊಂದಿ
ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕಳೆದ ವರ್ಷ ಗಂಟೆಗೆ ಸರಾಸರಿ ಸುಮಾರು 90 ಕೋಟಿಗಳಷ್ಟು ಸಂಪತ್ತು ಶೇಖರಿಸುತ್ತಿದ್ದರು
ಎಂಬ ವರದಿಯಿದೆ. 25.2 ಬಿಲಿಯನ್ ಡಾಲರುಗಳನ್ನು ಶೇಖರಿಸಿಕೊಂಡು ಗೌತಮ್ ಅದಾನಿ
ಎರಡನೇ ಅತೀ ದೊಡ್ಡ ಶ್ರೀಮಂತನೆಂಬ ಸ್ಥಾನ ಪಡೆದಿದ್ದಾರೆ. ಕಳೆದ ಒಂದು ವರ್ಷದಲ್ಲೇ ಈತ 9.5 ಬಿಲಿಯನ್
ಡಾಲರುಗಳನ್ನು ತನ್ನ ಸಂಪತ್ತಿಗೆ ಸೇರಿಸಿಕೊಂಡಿದ್ದಾರೆ. ಅದರಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ
ಕಟ್ಟಿ ಬೆಳೆಸಿದ್ದ ಸಾರ್ವಜನಿಕ ವಲಯದ ವಿಮಾನ ನಿಲ್ದಾಣಗಳು, ಬಂದರುಗಳು, ಗಣಿ ಉದ್ಯಮಗಳನ್ನು ಈತ ಸಲೀಸಾಗಿ
ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು ಇದೇ ಅವಧಿಯಲ್ಲೇ. ಕಳೆದ ವರ್ಷ ಈತನ ಸಂಪತ್ತಿನ ಬೆಳವಣಿಗೆ ಶೇ
61ರಷ್ಟು ಎಂಬ ವರದಿಯಿದೆ. ಮಾಹಿತಿ ತಂತ್ರಜ್ಞಾನ ರಂಗದ
ಶಿವನಾಡಾರ್ 20.4 ಬಿಲಿಯನ್ ಡಾಲರುಗಳನ್ನು ಶೇಕರಿಸಿಕೊಂಡು ಮೂರನೇ ಅತೀ ದೊಡ್ಡ ಶ್ರೀಮಂತನ ಸ್ಥಾನಕ್ಕೆ
ಜಿಗಿದಿದ್ದಾರೆ. ಸೆರಮ್ ಇನ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಎಸ್ ಪೂನಾವಾಲ ಎಂಬ ಜಾಗತಿಕವಾಗಿ ದೊಡ್ಡ ಚುಚ್ಚು ಮದ್ದು ಉತ್ಪಾದಕ ಸದ್ಯ ದೇಶಕ್ಕೆ ಕೋವಿಶೀಲ್ಡ್
ಎಂಬ ಕೊರೋನಾ ವಿರೋಧಿ ಎಂದು ಹೇಳಲಾಗುತ್ತಿರುವ ಚುಚ್ಚು ಮದ್ದನ್ನು ಪೂರೈಸುತ್ತಿರುವ ಭಾರಿ ಕಾರ್ಪೋರೇಟ್ 11.5 ಬಿಲಿಯನ್ ಡಾಲರುಗಳನ್ನು ಹೊಂದಿ ಆರನೇ ಅತೀ ದೊಡ್ಡ
ಶ್ರೀಮಂತ ಪಟ್ಟಕ್ಕೆ ತಲುಪಿದ್ದಾರೆ. ಕಳೆದ ವರ್ಷ ಈತ ಎರಡು ಸ್ಥಾನಗಳನ್ನು ಏರಿಸಿಕೊಂಡಿದ್ದಾರೆ. ಈ
ಮುಖಗಳು ಅಂತರಾಷ್ಟ್ರೀಯ ಭಾರಿ ಕಾರ್ಪೋರೇಟು ಕೂಟದ ಸ್ಥಳೀಯ ದಲ್ಲಾಳಿ ಮುಖಗಳು ಎನ್ನುವುದನ್ನು ಗಮನಿಸಬೇಕಾಗಿದೆ.
ಯಾಕೆಂದರೆ ಇವರ ಕಂಪನಿಗಳಲ್ಲಿ ಚೀನ, ಅಮೇರಿಕ ಯೂರೋಪುಗಳ ಅಂತರಾಷ್ಟ್ರೀಯ ಕಾರ್ಪೋರೇಟು ಹೂಡಿಕೆ ಪ್ರಧಾನವಾಗಿದೆ.
ಸಂಪತ್ತಿನ ಶೇಖರಣೆಯ ಏರಿಕೆ ಪ್ರಮಾಣದ ಒಂದು
ನಕ್ಷೆ.
ಅಂಕಿಅಂಶ ಫೋರ್ಬ್ಸ್ ಇಂಡಿಯಾ 2020ರ ವರದಿ
ಆದರೆ
ಇದೇ ವೇಳೆಯಲ್ಲಿ ದೇಶದ ಜನಸಾಮಾನ್ಯರನ್ನು ಇನ್ನಿಲ್ಲದ ಸಂಕಷ್ಟಗಳಿಗೆ ದೂಡಲಾಗಿದೆ. ನಿರುದ್ಯೋಗದ ಮಟ್ಟ
ಶೇಕಡಾ 25ಕ್ಕೂ ಹೆಚ್ಚು ದಾಟಿತ್ತು. 2020ರಲ್ಲಿ ಸುಮಾರು 10.9 ದಶಲಕ್ಷಗಳಷ್ಟು ಉದ್ಯೋಗಗಳು ನಷ್ಟವಾಗಿದ್ದವು.
ಅಸಂಘಟಿತ ವಲಯದ ನಷ್ಟಗಳ ಬಗ್ಗೆ ಸರಿಯಾದ ಅಂಕಿ
ಅಂಶಗಳೇ ಇಲ್ಲ. ಮುಂಬೈ ನ ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ
ಹಾಗೂ ಚಿಕಾಗೋದ ವಿಶ್ವ ವಿದ್ಯಾಲಯಗಳ ಅಧ್ಯಯನದ ಪ್ರಕಾರ
ಸುಮಾರು ಶೇಕಡಾ 84ರಷ್ಟು ಕುಟುಂಬಗಳು ತಮ್ಮ ಆದಾಯವನ್ನು ತೀವ್ರ ಮಟ್ಟದಲ್ಲಿ ಕಳೆದುಕೊಂಡಿದ್ದವು.
ಈ
ಪ್ರಕ್ರಿಯೆಗಳು ಈಗಷ್ಟೇ ಶುರುವಾಗಿದ್ದಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಹಿಂದಿನ ಸರ್ಕಾರಗಳ
ಕಾಲದಿಂದಲೂ ನಡೆಸಿಕೊಂಡು ಬಂದ ನೀತಿಗಳಾಗಿವೆ. ಅದರ ಪರಾಕಾಷ್ಠೆಗಳೇ ನೋಟುರದ್ದತಿ, ಜಿಎಸ್ ಟಿ ಹೇರಿಕೆ,
ಸಿ ಎಎ ಹೇರಿಕೆ, ಕೃಷಿ ಕಾಯಿದೆಗಳ ಹೇರಿಕೆ, ಹೊಸ ಶಿಕ್ಷಣ ನೀತಿ, ಹೊಸ ಕಾರ್ಮಿಕ ನೀತಿ ಇತ್ಯಾದಿಗಳ
ಹೇರಿಕೆಗಳ ಮುಂದುವರೆದ ಭಾಗ ಇಂದಿನದಾಗಿದೆ ಎನ್ನುವುದನ್ನು ಮರೆತು ನೊಡಿದರೆ ನಾವು ತಲುಪುವ ತೀರ್ಮಾನಗಳು
ತಪ್ಪಾಗಿ ಸಹಜವಾಗಿ ಆಳುವಂತಹವರಿಗೆ ಅನುಕೂಲಕರವಾಗಿ ಬಿಡುತ್ತವೆ.
ನಿರುದ್ಯೋಗ ಪ್ರಮಾಣ
ಅಂಕಿ ಅಂಶ ಸೆಂಟರ್ ಫಾರ್
ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಸಿ ಎಮ್ ಐ ಇ)
ಇದೇ
ಅವಧಿಯಲ್ಲಿ ಮಧ್ಯಮವರ್ಗದ ಜನ ಸಂಖ್ಯೆಯಲ್ಲಿ 33 ದಶಲಕ್ಷದಷ್ಟು
ಜನರು ಕೆಳಮಟ್ಟಕ್ಕೆ ತಳ್ಳಲ್ಪಟ್ದಿದ್ದರು. ಇವೆಲ್ಲದರ
ಪರಿಣಾಮವಾಗಿ ಬಡವರ ಜನಸಂಖ್ಯೆ ಗಾಬರಿ ಮಟ್ಟದಲ್ಲಿ ಏರುತ್ತಲೇ ಹೋಗುತ್ತಿದೆ. ಸಾಮಾಜಿಕ ಅಸಮಾನತೆ ಬೆಳೆಯುತ್ತಾ
ಸಾಮಾಜಿಕ ಭದ್ರತೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕೊರೋನಾದಂತಹ ಒಂದು ಸಾಮಾನ್ಯ ವೈರಸ್
ಅನ್ನು ಕೂಡ ನಿಯಂತ್ರಿಸಲಾಗದ ಸ್ಥಿತಿಯಲ್ಲಿ ಆಳುವ ಸರ್ಕಾರಗಳಿವೆ. ಜನಸಾಮಾನ್ಯರ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ
ಕನಿಷ್ಠ ಆಮ್ಲಜನಕವನ್ನು ಕೂಡ ಉತ್ಪಾದಿಸಿ ಪೂರೈಸಲಾಗದ ಪರಿಸ್ಥಿತಿಯಲ್ಲಿ ಸರ್ಕಾರಗಳಿವೆ. ಇರುವ ಸಾರ್ವಜನಿಕ
ಆಸ್ಪತ್ರೆಗಳನ್ನು ನಡೆಸಲಾಗದೇ ಮುಚ್ಚಿಬಿಡುವ ಪರಿಸ್ಥಿತಿಗೆ
ಒಕ್ಕೂಟ ಹಾಗೂ ರಾಜ್ಯಗಳ ಸರ್ಕಾರಗಳು ಬಂದು ತಲುಪಿವೆ. ಸರ್ಕಾರಗಳು ಕೇವಲ ನಾಮ ಮಾತ್ರದ್ದಾಗಿ ಬಿಡುತ್ತಿವೆ.
ಸಂಸತ್ತು ವಿಧಾನ ಸಭೆ ಕೇವಲ ಅಲಂಕಾರಿಕವಾಗುತ್ತಿವೆ. ಇದುವರೆಗೂ ಬಿಂಬಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವ,
ಸಂವಿಧಾನಗಳನ್ನು ತೋರುಗಾಣಿಕೆಗಾದರೂ ಒಂದು ಮಟ್ಟದಲ್ಲಿ ಅಳವಡಿಸಿಕೊಳ್ಳಲಾಗದ ಮಟ್ಟದಲ್ಲಿ ಆಳುವ ವ್ಯವಸ್ಥೆ
ಬಂದು ನಿಂತಿದೆ.
ಇಂತಹ
ಸಂಧರ್ಭದಲ್ಲೇ ಜನಪರರು ಹಾಗೂ ಪ್ರಗತಿಪರ ವಲಯದ ಒಂದು ಸ್ತರ ಸಂಘಪರಿವಾರ ಹಾಗೂ ಬಿಜೆಪಿ ಸರ್ಕಾರ ಮತ್ತದರ ಕೋಮುವಾದೀ ಫ್ಯಾಸಿಸ್ಟ್
ರಾಜಕಿಯವನ್ನು ವಿರೋಧಿಸುತ್ತಾ ಇವೆಲ್ಲದರ ಸಮ್ಮಿಶ್ರವಾದ ಕಾಂಗ್ರೆಸ್ ಭಜನೆಗೆ ಇಳಿದಿದೆ.
ಹಿಂದೆ
ನಡೆದ ಜನಹೋರಾಟಗಳ ಭಾಗವಾಗಿ ಪ್ರಜ್ಞಾವಂತಿಕೆ ಹಾಗೂ ನಾಯಕತ್ವ ಗುಣಗಳನ್ನು ಪಡೆದು ಹಲವು ಜನರಲ್ಲಿ ಭರವಸೆ
ಮೂಡಿಸಿದ್ದ ಹಲವು ಯುವತಿ ಯುವಕರು ಕಾಂಗ್ರೆಸ್, ಜೆ ಡಿ.ಎಸ್ ಇತ್ಯಾದಿ ಪಕ್ಷಗಳನ್ನು ಸೇರಿ ಅದರ ಕೆಲವು
ನಾಯಕರ ಗುಣಗಾನದಲ್ಲಿ ಮುಳುಗುತ್ತಿದ್ದಾರೆ. ಸ್ವಯಂ ವೈರುಧ್ಯಗಳ ಸುಳಿಯಲ್ಲಿ ಸಿಲುಕುತ್ತಿದ್ದಾರೆ.
ಜನಸಾಮಾನ್ಯರ ಅಪನಂಬಿಕೆಗೂ ಗುರಿ ಆಗುತ್ತಿದ್ದಾರೆ. ಈ ಯುವ ನಾಯಕತ್ವಕ್ಕೆ ಸರಿಯಾದ ಗ್ರಹಿಕೆ ನೀಡಬೇಕಾದ
ಹಿರಿಯರು, ಪ್ರಜ್ಞಾವಂತರೆನಿಸಿಕೊಂಡವರು ಅದನ್ನು ಮಾಡದೇ ಅವರ ಇಂತಹ ಅವಿವೇಕದ ನಡೆಗಳನ್ನು ಬೆಂಬಲಿಸುತ್ತಿರುವುದು
ನಾಡಿನ ದುರಂತವೂ ಆಗಿದೆ.
ಇವೆಲ್ಲಾ
ಸೇರಿ ಇಂದಿನ ದುರಂತಗಳಿಗೆ ಮೂಲಭೂತವಾಗಿ ಕಾಂಗ್ರೆಸ್ ಜನತಾದಳ, ಬಿಜೆಪಿ, ಬಿ. ಎಸ್ ಪಿ, ಸಮಾಜವಾದಿ
ಜನತಾದಳ ಮೊದಲಾದ ರಾಜಕೀಯ ಕಾರಣಕರ್ತರುಗಳ ವಿಷವಲಯದೊಳಗೇ ಈ ಯುವ ವಲಯವನ್ನು ಗಿರಕಿ ಹೊಡೆಸುತ್ತಾ ಸರಿಯಾದ
ಜನ ಪರ್ಯಾಯದತ್ತ ಹೊರಳದಂತೆ, ಆ ಬಗ್ಗೆ ಚಿಂತಿಸದಂತೆ
ಮಾಡುತ್ತಿದೆ. ಇದು ಬಹಳ ಅಪಾಯಕಾರಿಯಾದುದು.
25/05/2021
-ನಂದಕುಮಾರ್
ಕೆ ಎನ್. ಕುಂಬ್ರಿಉಬ್ಬು.
ಮಿಂಚಂಚೆ:
nandakumarnandana67@gmail.com


Comments
Post a Comment