ನೆನಯಲೇ ಬೇಕಾದ ದಮನ್ ಪಾಟೀಲರೆಂಬ ಪತ್ರಿಕಾ ಕಾರ್ಯಕರ್ತ ಹಾಗೂ
ವಿಶ್ವನಾಥ
ಬಾಬುರಾವ್ ಪಾಟೀಲ (ದಮನ್ ಪಾಟೀಲ್) ಬೀದರ.
ಇತ್ತೀಚೆಗೆ ನಿಧನರಾದ
ರಾಜ್ಯದ ಹಿರಿಯ ಪತ್ರಕರ್ತ ವಿಶ್ವನಾಥ ಪಾಟೀಲ ಹಕ್ಯಾಳರು ಇದೇ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕಾದ
ಔರಾದಿನ ಹಕ್ಯಾಳ ಹಳ್ಳಿಯವರು. ದಮನ್ ಪಾಟೀಲರೆಂದೇ ಇವರನ್ನು ಬಹುತೇಕರು ಕರೆಯುತ್ತಿದ್ದಿದ್ದು. ಮುಂದುವರೆದ
ಸಮುದಾಯದಲ್ಲಿ ಜನಿಸಿದ್ದರೂ ಅವರು ತಮ್ಮ ಕಡೆಯ ಉಸಿರಿನವರೆಗೆ ಇದ್ದಿದ್ದು ಮಾತ್ರ ದಲಿತ ದಮನಿತ ಬಡ
ಸಮುದಾಯಗಳ ಜೊತೆಗೆ. ಬೀದರಿನ ಸ್ಥಳೀಯ ಭಾಷಾ ಸೊಗಡಿನಲ್ಲಿಯೇ ಮಾತನಾಡುತ್ತಿದ್ದ ದಮನ್ ಪಾಟೀಲರು ಯಾವಾಗಲೂ
ಉನ್ನತಮಟ್ಟದ ಚಿಂತನೆಗಳೊಂದಿಗೆ ಕಾರ್ಯಾಚರಿಸುತ್ತಿದ್ದವರು. ಅವರು ಜಿಲ್ಲಾ ಮಟ್ಟದ ಸರಕಾರಿ ಉದ್ಯೋಗಕ್ಕೆ
ಇದೇ ಕಾರಣದಿಂದಾಗಿಯೇ ರಾಜೀನಾಮೆ ನೀಡಿ ನೇರವಾಗಿ ಪತ್ರಿಕಾ ರಂಗಕ್ಕೆ ಬಂದವರು. ಬೀದರಿನ ಒಂದು ಸಹಜ
ಆಡುಭಾಷೆಯಾದ ಹಿಂದಿ ಭಾಷೆಯಲ್ಲಿ ‘ದಮನ್’ ಎಂಬ ದಿನಪತ್ರಿಕೆಯನ್ನು ನಡೆಸಿಕೊಂಡು ಬಂದರು. ಆ ಭಾಗದಲ್ಲಿ
ಬೇರೆ ಯಾವುದೇ ಪತ್ರಿಕೆಗೆ ಇರದ ಖದರು ‘ದಮನ್’ ಪತ್ರಿಕೆಯದಾಗಿತ್ತು. ಸತ್ಯ ನಿಷ್ಟ ವರದಿಗಳು ಮತ್ತು
ದಮನ್ ಪಾಟೀಲರು ಬರೆಯುತ್ತಿದ್ದ ಜನಪರ ರಾಜಕೀಯ ವಿಶ್ಲೇಷಣಾತ್ಮಕ ಸಂಪಾದಕೀಯಗಳು ದಮನ್ ಪತ್ರಿಕೆಯು ನಿರಂತರವಾಗಿ
ಕಾಯ್ದುಕೊಂಡ ವೈಶಿಷ್ಟ್ಯವಾಗಿತ್ತು. ದಮನ್ ಪತ್ರಿಕೆಯ ವರದಿಗಳು ಹಾಗೂ ಸಂಪಾದಕೀಯಗಳನ್ನು ರಾಜಕೀಯ ವಲಯ
ಹಾಗೂ ಅಧಿಕಾರಿ ವಲಯ ಗಂಭೀರವಾಗಿ ಕಾಣುತ್ತಿತ್ತು. ದಮನ್ ಪತ್ರಿಕೆಯಲ್ಲದೇ ಕನ್ನಡದಲ್ಲಿ ‘ಜನಪರ. ಎಂಬ
ದಿನಪತ್ರಿಕೆಯನ್ನು ಅವರು ನಡೆಸಿಕೊಂಡು ಬಂದಿದ್ದರು. ಅದಕ್ಕೆ ಸಂಪಾದಕರನ್ನಾಗಿ ತಮ್ಮ ಸಮಾನ ಮನಸ್ಕ
ಗೆಳೆಯರನ್ನು ತೊಡಗಿಸಿದ್ದರು. ಅದಕ್ಕಾಗಿಯೇ ಸಮಾನ ಮನಸ್ಕರನ್ನು ಸೇರಿಸಿ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದರು.
ಜೊತೆಯಲ್ಲಿ ಆಂಗ್ಲದ ‘ದಿ ಹಿಂದು’ ರಾಷ್ಟ್ರ ಮಟ್ಟದ ಪತ್ರಿಕೆಯ ಬೀದರ್ ಜಿಲ್ಲೆಯ ಪ್ರತಿನಿಧಿಯಾಗಿ ಕಾರ್ಯ
ನಿರ್ವಹಿಸಿದ್ದರು.
ಇವಲ್ಲದೇ ವಿಶ್ವನಾಥ
ಪಾಟೀಲರು ಸಾಮಾಜಿಕ ಕಾರ್ಯಕರ್ತರಾಗಿಯೂ ಕಾರ್ಯ ನಿರ್ವಹಿಸುತ್ತಾ ಬಂದವರಾಗಿದ್ದರು. ಜನಸಾಮಾನ್ಯರ ಮಾನವಹಕ್ಕು
ಹರಣವಾದಾಗ, ಕೋಮು, ಜಾತಿ ಗಲಭೆಗಳಾದಾಗ ಅಲ್ಲಿ ದಮನ್ ಪಾಟೀಲರು ನಿಂತು ಪರಿಹಾರದ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅವುಗಳ ಹಿಂದಿನ ಮೂಲ ಕಾರಣಗಳನ್ನು ಹಿಡಿದು ವಿಶ್ಲೇಷಣೆ ನಡೆಸುತ್ತಾ ಸಂಘಟನಾತ್ಮಕವಾಗಿ ರಾಜಕೀಯ ಪಕ್ಷಗಳ
ಹಾಗೂ ಸರಕಾರದ ವಿವಿಧ ಅಂಗಗಳನ್ನು ತೊಡಗಿಸುತ್ತಿದ್ದವರು. ಆ ಬಗ್ಗೆ ಸತ್ಯ ಶೋಧನಾ ತಂಡಗಳೊಂದಿಗೆ ಕಾರ್ಯ
ನಿರ್ವಹಿಸುತ್ತಿದ್ದರು. ಅವುಗಳ ಬಗ್ಗೆ ಆಳವಾದ ವಿಶ್ಲೇಷಣೆಯೊಂದಿಗೆ ದಮನ್ ಪತ್ರಿಕೆಯಲ್ಲಿ ಸಂಪಾದಕೀಯವನ್ನು
ಬರೆಯುತ್ತಿದ್ದರು. ಬೀದರಿನಂತಹ ಊಳಿಗಮಾನ್ಯ ಪರಿಸರದಲ್ಲಿ ಉನ್ನತ ಮಟ್ಟದ ಬಹುಸಂಖ್ಯಾತಪರ ಪ್ರಜಾತಾಂತ್ರಿಕತೆಗಳನ್ನು
ರೂಢಿಸಿಕೊಂಡು ಕಾರ್ಯ ನಿರ್ವಹಿಸುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ದಮನ್ ಪಾಟೀಲರು ಅದನ್ನು
ಸಾಧಿಸಿದ್ದರು. ಅವರು ಅದನ್ನು ರೂಢಿಸಿಕೊಳ್ಳುತ್ತಾ ಅದರೊಂದಿಗೇ ಬಾಳಿ ತಮ್ಮ ಬದುಕು ನಡೆಸಿ ಈಗ ಕೊನೆಯುಸಿರನ್ನೂ
ಎಳೆದು ತಮ್ಮ ಬದುಕನ್ನು ಮುಗಿಸಿದ್ದಾರೆ.
ಕರ್ನಾಟಕದ ರಾಜ್ಯ
ಮಟ್ಟದ ಘಟಾನುಘಟಿ ರಾಜಕೀಯ ದುರೀಣರುಗಳು ತಮ್ಮ ಸಹಪಾಠಿಗಳು ಹಾಗೂ ಒಂದು ಕಾಲದ ಗೆಳೆಯರುಗಳು ಆಗಿದ್ದರೂ
ರಾಜಕೀಯವಾಗಿ ಅವರುಗಳು ಉನ್ನತ ಅಧಿಕಾರದ ಅಂಗಗಳ ಭಾಗವಾದಾಗ ದಮನ್ ಪಾಟೀಲರು ತಮ್ಮ ಸ್ವಾರ್ಥಕ್ಕಾಗಿ
ಅವರುಗಳಿಂದ ಯಾವುದೇ ಅನುಕೂಲಗಳನ್ನು ಪಡೆಯಲು ಹೋಗಲೇ ಇಲ್ಲ. ಅಲ್ಲದೇ ಅವರುಗಳಿಂದ ಅಂತರವನ್ನು ಇಟ್ಟುಕೊಂಡು
ಬಂದರು. ಅಷ್ಟೇ ಅಲ್ಲದೇ ಅವರುಗಳ ರಾಜಕೀಯ ತಪ್ಪುಗಳು, ಹಗರಣಗಳು ಹಾಗೂ ಸಾಮಾಜಿಕ ಕೆಡುಕುಗಳ ಕುರಿತು
ತಮ್ಮ ಸಂಪಾದಕೀಯಗಳಲ್ಲಿ ಯಾವುದೇ ಮುಲಾಜಿಲ್ಲದೇ ಬರೆದು ಕುಟುಕುತ್ತಾ ಬಂದರು. ಕರ್ನಾಟಕದ ರಾಜಕೀಯದಲ್ಲಿ
ಘಟಾನುಘಟಿಗಳಾದ ಗುರುಪಾದಪ್ಪಾ ನಾಗಮಾರಪಲ್ಲಿ, ಭೀಮಣ್ಣ ಖಂಡ್ರೆ, ಅಶೋಕ್ ಖೇಣಿ ಮೊದಲಾದವರ ಊಳಿಗಮಾನ್ಯ
ದರ್ಪ ದೌರ್ಜನ್ಯಗಳು, ರಾಜಕೀಯ ಹಾಗೂ ಆರ್ಥಿಕ ಹಗರಣಗಳ ವಿರುದ್ದ ನಿರಂತರವಾಗಿ ನಿಂತವರಾಗಿದ್ದರು ದಮನ್
ಪಾಟೀಲರು. ಅವರುಗಳು ನಡೆಸುತ್ತಿದ್ದ ಹಗರಣಗಳು ಮತ್ತು ಮಾಡುತ್ತಿದ್ದ ದಲಿತ ದಮನಿತರ ಮೇಲಿನ ದೌರ್ಜನ್ಯಗಳ
ವಿರುದ್ಧ ದಮನ್ ಪಾಟೀಲರು ನಿರಂತರವಾಗಿ ನಿಂತಿದ್ದರು. ಎಂಬತ್ತರ ದಶಕದಲ್ಲಿ ಜಿಲ್ಲೆಯ ಔರಾದ ಭಾಗದಲ್ಲಿ
ಸಿಡಿದ ರೈತಕೂಲಿಗಳ ಹೋರಾಟವನ್ನು ದಮನ್ ಪಾಟೀಲರು ಬೆಂಬಲಿಸಿ ನಿಂತವರು. ಬೀದರಿನ ಕೊಳಾರ ಕೈಗಾರಿಕಾ
ಪ್ರದೇಶದಲ್ಲಿ ಭಾರಿ ಮಾಲಿನ್ಯಕ್ಕೆ ಕಾರಣವಾಗಿ ಹಲವಾರು ಸಾವು ನೋವುಗಳು ಹಾಗೂ ರೋಗಗಳ ಕೊಡುಗೆ ಇತ್ತಿದ್ದ
ಬಲ್ಕ್ ಡ್ರಗ್ ಉತ್ಪಾದಕ ಕಂಪನಿಗಳ ದೌರ್ಜನ್ಯ ಹಾಗೂ
ಅಕ್ರಮಗಳ ವಿರುದ್ಧ ಜನಹೋರಾಟ ಸಿಡಿದಾಗ ದಮನ್ ಪಾಟೀಲರು ಆ ಹೋರಾಟದೊಂದಿಗೆ ಸಂಪೂರ್ಣವಾಗಿ ನಿಂತರು.
ಕಾರ್ಯಕರ್ತರಂತೆ ಕಾರ್ಯ ನಿರ್ವಹಿಸಿದ್ದರು. ಆ ಹೋರಾಟದಲ್ಲಿ ಭಾಗಿಯಾಗಿದ್ದ ಹಲವಾರು ಹೋರಾಟಗಾರರ ಬಂಧನವಾದಾಗ
ಅವರ ಬಿಡುಗಡೆಗೆ ಕೆಲಸ ಮಾಡಿದವರು. ವಿನಾಶಕಾರಿ ಮಾಲಿನ್ಯಕಾರಕ ಕಂಪನಿಗಳ ಪರವಾಗಿ ನಿಂತಿದ್ದ ಹಲವಾರು
ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ದುರೀಣರುಗಳನ್ನು ಕಾನೂನು ಉಲ್ಲಂಘನೆಗಳು ಹಾಗೂ ಮಾಲಿನ್ಯ
ನಿಯಂತ್ರಣಗಳ ಬಗ್ಗೆ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಪತ್ರಿಕಾಗೋಷ್ಠಿಗಳಲ್ಲಿ ತಮ್ಮ ಪ್ರಶ್ನೆಗಳಿಂದ
ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದರು. ಹೊರಗಡೆಯವರು ಬಂದು ಇಲ್ಲಿ ಹೋರಾಟದ ಹೆಸರಿನಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ
ಎಂದು ಪೋಲಿಸ್ ಅಧಿಕಾರಿಗಳ ಆರೋಪದ ಮಾತುಗಳನ್ನು ತಡೆದು ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದು ಅಧಿಕಾರ ಚಲಾಯಿಸಬಹುದೆಂದರೆ
ಅನ್ಯಾಯದ ವಿರುದ್ಧ ಯಾರೇ ಆಗಲೀ ಎಲ್ಲಿಂದಲೇ ಬರಲಿ ದನಿಯೆತ್ತುವುದು ಹೋರಾಟ ಮಾಡುವುದು ತಪ್ಪಾಗುತ್ತದೆಯೇ
ಎಂದು ತುಂಬಿದ ಸಭೆಯಲ್ಲಿ ಕೇಳಿ ಬಾಯಿ ಮುಚ್ಚಿಸಿದ್ದರು.
ವೈಚಾರಿಕವಾಗಿ ಮಾರ್ಕ್ಸ್ ವಾದಿಗಳಾಗಿದ್ದ ದಮನಪಾಟೀಲರು ಮಾರ್ಕ್ಸ್ ವಾದದ ಹೆಸರಿನಲ್ಲಿ ಕೇವಲ ಚುನಾವಣಾ ರಾಜಕೀಯ ಮಾಡುತ್ತಾ ಬರುತ್ತಿದ್ದ ಎಡಪಕ್ಷಗಳ ರಾಜಕೀಯ ಹಾಗೂ ಸಂಘಟನಾತ್ಮಕ ದಿವಾಳಿಕೋರತನದ ಕಟು ವಿಮರ್ಶಕರಾಗಿದ್ದರು. ಆದರೆ ದಲಿತ ದಮನಿತ ಜನಸಾಮಾನ್ಯರು ಯಾವುದೇ ರೀತಿಯ ಹೋರಾಟಗಳನ್ನು ಮಾಡಿದರೂ ಅವರೊಂದಿಗೆ ಬೇಷರತ್ತಾಗಿ ನಿಲ್ಲುತ್ತಿದ್ದ ವ್ಯಕ್ತಿ ವಿಶ್ವನಾಥ ಪಾಟೀಲರಾಗಿದ್ದರು. ಸಾಮಾಜಿಕ ಬದಲಾವಣೆಯಾಗಬೇಕೆಂಬ ತುಡಿತವನ್ನು ಅವರೆಂದೂ ಬಿಟ್ಟಿರಲಿಲ್ಲ. ಹಲವು ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರೆಂದುಕೊಂಡವರ ಕುರಿತು ವಿಮರ್ಶೆ, ಬೇಸರಗಳು, ಸಿಟ್ಟು ಅವರಿಗಿದ್ದವು.
ಎಡಪಕ್ಷಗಳ ಹಲವಾರು ನಾಯಕರುಗಳು ಹಾಗೂ ಕಾರ್ಯಕರ್ತರುಗಳು ಅವರೊಂದಿಗೆ
ಒಂದುಕಾಲದಲ್ಲಿ ಕೆಲಸಮಾಡಿದವರು ಕೂಡ ಆಗಿದ್ದಾರೆ. ಸಮುದಾಯ ರಂಗತಂಡವನ್ನು ಕಟ್ಟಿ ಮುನ್ನೆಡೆಸಿದ್ದ
ದಮನ ಪಾಟೀಲರು ಹಲವಾರು ಸಾಂಸ್ಕೃತಿಕ ಕಾರ್ಯಕರ್ತರನ್ನು ತಯಾರುಗೊಳಿಸಿದ್ದರು. ರಂಗ ಭೂಮಿ ಹಾಗೂ ಪತ್ರಿಕಾರಂಗಗಳಲ್ಲಿ
ದಮನ್ ಪಾಟೀಲರೊಂದಿಗೆ ಕೆಲಸ ಮಾಡಿ ವೈಚಾರಿಕ ಜಾಗೃತಿ ಹೊಂದಿದವರು ಈಗಲೂ ಎಡಪಕ್ಷಗಳೂ ಸೇರಿದಂತೆ ಪತ್ರಿಕಾ
ರಂಗದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಲ್ಲಿ ದಮನ್ ಪಾಟೀಲರ ನ್ಯಾಯಪರತೆ, ಜನಪರತೆ
ಹಾಗೂ ಸತ್ಯ ನಿಷ್ಠತೆಗಳನ್ನು ರೂಢಿಸಿಕೊಂಡು ಈಗಲೂ ಕಾರ್ಯ ನಿರ್ವಹಿಸುತ್ತಿರುವವರು ಬಹಳ ಕಡಿಮೆಯೆಂದೇ
ಹೇಳಬೇಕಾಗಿದೆ. ಆ ಭಾಗದ ಹಲವರು ಪತ್ರಿಕಾ ವೃತ್ತಿಯನ್ನು ಅವರಿಂದಲೇ ಕಲಿತರೂ ಅವರ ನ್ಯಾಯಪರತೆ, ಸತ್ಯನಿಷ್ಠತೆ
ಹಾಗೂ ಜನಪರತೆಗಳನ್ನು ರೂಢಿಸಿಕೊಂಡು ಪತ್ರಕರ್ತರಾಗಿ ಕಾರ್ಯನಿರ್ವಹಿಸುವವರು ಬಹಳ ಕಡಿಮೆಯೆಂದೇ ಹೇಳಬೇಕಾಗಿದೆ.
ಅವರ ಇಂತಹ ರಾಜಿರಹಿತ
ಸ್ಪಷ್ಟ ರಾಜಕೀಯ ನಿಲುವುಗಳು ಹಾಗೂ ಗುಣಗಳಿಂದಾಗಿ ದೈಹಿಕ ಹಲ್ಲೆಗಳೂ ಸೇರಿದಂತೆ ಹಲವು ರೀತಿಯ ಕಿರುಕುಳಗಳಿಗೆ
ಈಡಾಗಬೇಕಾಯಿತು. ಆದರೆ ದಮನ್ ಪಾಟೀಲರು ಅಂತಹವುಗಳಿಗೆ ಅಂಜದೇ ಎದುರಿಸುತ್ತಾ ದೃಢವಾಗಿ ನಿಂತರು. ದಮನ
ಪಾಟೀಲರು ಕೊನೆಯವರೆಗೂ ಸತ್ಯನಿಷ್ಠೆ, ವೃತ್ತಿಪರತೆ, ರಾಜಕೀಯ ನಿಷ್ಠೂರತೆಗಳನ್ನು ಬಿಟ್ಟುಕೊಡದೇ ಬದುಕಿದರು.
ಎಂಬತ್ತನಾಲ್ಕು ವರ್ಷ ಬದುಕಿದ ಅವರು ಕೊನೆಯ ಕೆಲವು ವರುಷಗಳಲ್ಲಿ ಪಾರ್ಶ್ವ ವಾಯು ದಾಳಿ ಸಂಬಂದಿತ ಸಮಸ್ಯೆಗಳನ್ನು
ಎದುರಿಸಬೇಕಾಯಿತು. ಆದರೆ ಆಗಲೂ ಅವರ ವೈಚಾರಿಕ ಪ್ರಖರತೆಯಾಗಲೀ ರಾಜಕೀಯ ಉತ್ಸಾಹವಾಗಲೀ ಕುಂದಿರಲಿಲ್ಲ.
ಸಾಮಾಜಿಕ ರಾಜಕೀಯ ವಿಚಾರಗಳನ್ನು ಉತ್ಸಾಹದಿಂದಲೇ ಚರ್ಚಿಸುತ್ತಿದ್ದರು. ಕೊನೆಯ ಒಂದೆರಡು ವರುಷಗಳಲ್ಲಿ
ಅವರ ನೆನಪಿನ ಶಕ್ತಿ ಸ್ವಲ್ಪ ಕ್ಷೀಣಿಸಿದ್ದರೂ ನೆನಪಿಸಿಕೊಳ್ಳುತ್ತಾ ಮಾತಾಡುತ್ತಿದ್ದರು. ದೈಹಿಕವಾಗಿ
ಬಲಹೀನರಾಗಿದ್ದರೂ ಮಾನಸಿಕವಾಗಿ ಹಾಗೂ ರಾಜಕೀಯವಾಗಿ ದೃಢವಾಗಿದ್ದವರು ದಮನ್ ಪಾಟೀಲರು.
ಅವರ ವ್ಯಕ್ತಿತ್ವ ಸದಾ ಉತ್ಸಾಹಪೂರಿತವಾಗಿರುತ್ತಿತ್ತು. ಹಲವಾರು ಯುವಕರಿಗೆ
ಆಶ್ರಯ ಹಾಗೂ ಬೆಂಬಲಗಳನ್ನು ಕೊಟ್ಟಿದ್ದರು. ಅವರ ಸಾಮಾಜಕ ಸ್ಪಂದನೆ ಬಹಳ ಸಂವೇದನಾಶೀಲವಾಗಿತ್ತು. ಎಲ್ಲಿಯೇ
ಆಗಲೀ ಯಾರಿಗೇ ಆಗಲೀ ಅನ್ಯಾಯವಾದಾಗ ಅವರು ಮನಸ್ಸು ನೋಯುತ್ತಿತ್ತು. ಅದರ ಪರಿಹಾರಕ್ಕಾಗಿ ತಾನು ಏನು
ಮಾಡಬಹುದು ಎಂದು ಯೋಚಿಸುವ ಮನಸ್ಸು ಅವರದಾಗಿತ್ತು. ಆದರೆ ಅವರ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು
ಹಾಗೂ ಆಡುವ ಮಾತುಗಳು ಖಚಿತತೆಯಿಂದ ಕೂಡಿರುತ್ತಿದ್ದವು.
ಇಂದು ದಮನ್ ಪಾಟೀಲರು
ದೈಹಿಕವಾಗಿ ನಮ್ಮೊಂದಿಗೆ ಇಲ್ಲವೆಂದು ಯೋಚಿಸಲು ವಿಷಾಧವೆನಿಸಿದರೂ ಸತ್ಯ ಅದೇ ಆಗಿದೆ ತಾನೆ. ಅವರು
ತಮ್ಮ ಐಷಾರಾಮಕ್ಕಾಗಿ ಬದುಕದೇ ತಮ್ಮ ಬದುಕಿನ ಹೆಚ್ಚಿನ ಪಾಲನ್ನು ಸಾಮಾಜಿಕ ಬದಲಾವಣೆಗಾಗಿ ನೀಡಿ ಹೊರಟುಹೋಗಿದ್ದಾರೆ.
ಮಕ್ಕಳನ್ನು ಅವರವರ ಸ್ವಂತಕಾಲ ಮೇಲೆ ನಿಲ್ಲುವಂತೆ ಮಾಡಿದ್ದಾರೆಯೇ ಹೊರತು ಅವರಿಗಾಗಿ ಆಸ್ತಿ ಸಂಪಾದಿಸಿ
ಪೇರಿಸಿ ಇಡಲಿಲ್ಲ.
ಒಬ್ಬ ಪ್ರಖರ ವೈಚಾರಿಕತೆಯ
ಜನಪರ ಪತ್ರಕರ್ತ ಹಾಗೂ ಮಾನವಹಕ್ಕು ಹಾಗೂ ಸಾಮಾಜಿಕ ಹೋರಾಟಗಾರನನ್ನು ನಾಡು ಕಳೆದುಕೊಂಡಿದೆ. ದಮನ್
ಪಾಟೀಲ್ ಎಂಬ ವಿಶ್ವನಾಥ ಬಾಬುರಾವ್ ಪಾಟೀಲ ಹಕ್ಯಾಳ ಇನ್ನು ನೆನಪು ಮಾತ್ರ. ಆದರೆ ಅವರ ಸ್ಪೂರ್ತಿ ಹಾಗೂ
ಚೈತನ್ಯಗಳಿಗೆ ಕೊನೆಯಿಲ್ಲ. ಅವರಂತಹವರ ನ್ಯಾಯಪರತೆ, ಜನಪರತೆ, ಸ್ಪೂರ್ತಿ ಹಾಗೂ ಉತ್ಸಾಹಗಳು ನಾಡಿನ
ಭವಿಷ್ಯಕ್ಕೆ ಅವಶ್ಯವಾದುದು…. ನಮನಗಳು…
21/02/2021 -ನಂದಕುಮಾರ್ ಕೆ ಎನ್.
ಕುಂಬ್ರಿ ಉಬ್ಬು.
Comments
Post a Comment