Skip to main content

ಗಂಭೀರ ವಿಚಾರಗಳನ್ನು ಬಿಚ್ಚಿಟ್ಟ ನೌಕರರ ಮುಷ್ಕರ# KSRTC WORKERS STRIKE 2020#exposed serious matters.

  ಗಂಭೀರ ವಿಚಾರಗಳನ್ನು ಬೀದೀಲಿ ಬಿಚ್ಚಿಟ್ಟ

ರಾಜ್ಯ ಸಾರಿಗೆ ನೌಕರರ ಮುಷ್ಕರ !

ಕರ್ನಾಟಕ ಸರಕಾರದ ಸಾರಿಗೆ ಕಾರ್ಮಿಕರು ಹಾಗೂ ನೌಕರರು ಇದೇ ಡಿಸೆಂಬರ್ ಹತ್ತರಂದು ದಿಢೀರ್ ಎಂದು ಮುಷ್ಕರ ಹೂಡಿ ತಮ್ಮ ಹತ್ತು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಬಿ. ಎಮ್. ಟಿ. ಸಿ, ಕೆ ಎಸ್ ಆರ್ ಟಿ ಸಿ, ಈಶಾನ್ಯ, ವಾಯುವ್ಯ ಸೇರಿದಂತೆ ನಾಲ್ಕೂ ವಿಭಾಗಗಳ ಬಹುತೇಕ ಸರಕಾರಿ ಸಾರಿಗೆ ನೌಕರರು ಈ ಮುಷ್ಕರದಲ್ಲಿ ಭಾಗಿಯಾಗಿದ್ದರು. ಸರಕಾರದ ಒಡೆದಾಳುವ ನೀತಿ ಹಾಗೂ ಕುಟಿಲ ವಿಳಂಬ ನೀತಿಯಿಂದಾಗಿ ನಾಲ್ಕು ದಿನಗಳ ಕಾಲ ನಡೆದ ಈ ಮುಷ್ಕರದಿಂದ ರಾಜ್ಯದ ಸಾರಿಗೆ ಸಂಪರ್ಕ ವ್ಯವಸ್ಥೆ ದಿಕ್ಕೆಟ್ಟುಹೋಗಿತ್ತು. ಹಕ್ಕೊತ್ತಾಯಗಳಲ್ಲಿ ಬಹುಮುಖ್ಯವಾಗಿ ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಿ ಅದರಂತೆ ಸಂಬಳ ಭತ್ಯೆ ಸವಲತ್ತುಗಳನ್ನು ಒದಗಿಸಬೇಕೆಂಬುದಾಗಿತ್ತು. ಸರಕಾರಿ ನೌಕರರೆಂದು ಪರಿಗಣಿಸಬೇಕೆಂಬ ಹಕ್ಕೊತ್ತಾಯ ಹೊರತುಪಡಿಸಿ ಉಳಿದ ಹಕ್ಕೊತ್ತಾಯಗಳನ್ನು ಮಾನ್ಯ ಮಾಡುವುದಾಗಿ ಸರಕಾರ ಲಿಖಿತವಾಗಿ ಹೇಳಿಕೆ ಕೊಟ್ಟಿದ್ದ ಕಾರಣ ಹೇಳಿ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಾಸು ಪಡೆದುಕೊಂಡರು. ಈಗ ಸಾರಿಗೆ ಮುಷ್ಕರದಿಂದ ಅಸ್ತವ್ಯಸ್ತವಾಗಿದ್ದ ಜನಜೀವನ ಸಾಮಾನ್ಯವಾಗತೊಡಗಿದೆ.

 ಸರಕಾರ ಲಿಖಿತವಾಗಿ ಒಪ್ಪಿರುವ ನೌಕರರ ಒಂಬತ್ತು ಹಕ್ಕೊತ್ತಾಯಗಳಲ್ಲಿ ಕೋವಿದ್ 19 (ಕೊರೊನಾ) ನಿಂದ ಮರಣ ಹೊಂದಿದ ನೌಕರರಿಗೆ ಸರಕಾರಿ ನೌಕರರಿಗೆ ನೀಡುವಂತೆ ಮೂವತ್ತು ಲಕ್ಷ ಪರಿಹಾರವನ್ನು ನೀಡುವುದು, ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೊಳಿಸುವುದು, ತರಬೇತಿಯ ಻ಅವಧಿಯನ್ನು ಒಂದು ವರುಷಕ್ಕೆ ಇಳಿಸುವುದು, ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಅಗತ್ಯ ಭತ್ಯೆಯನ್ನು ನೀಡುವುದು, ಎನ್. ಐ. ಎನ್ ಸಿ (Not issued Not collected) ಪದ್ಧತಿಗೆ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡುವುದು, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸಿ ಸಾರಿಗೆ ನೌಕರರಿಗೂ ಅನ್ವಯವಾಗುವಂತೆ ಜಾರಿಮಾಡುವುದು, ಸಾರಿಗೆ ನೌಕರರಿಗೆ ಆರೋಗ್ಯ ಭಾಗ್ಯ ವಿಮೆ ನೀಡುವುದು, ಅಂತರ ನಿಗಮ ವರ್ಗಾವಣೆಗೆ ಅವಕಾಶನೀಡುವುದು, ನೌಕರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವುದು ಸೇರಿವೆ. ಇದರಲ್ಲಿ ಕೋವಿದ್ ನಿಂದ ಮರಣ ಹೊಂದುವ ನೌಕರರಿಗೆ ಸರಕಾರಿ ನೌಕರರಂತೆ ಮೂವತ್ತು ಲಕ್ಷ ಪರಿಹಾರ ನೀಡುವ ಪ್ರಸ್ತಾವನೆ ಸ್ವೀಕೃತವೆಂದು ಸರಕಾರಿ ಪ್ರಕಟಣೆ ತಿಳಿಸಿದ್ದು, ಉಳಿದ ಹಕ್ಕೊತ್ತಾಯಗಳ ಈಡೇರಿಕೆಗೆ ಸದರಿ ಸಂಸ್ಥೆಯ ಅಧಿಕಾರಿಗಳಿಗೆ ಅದಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲು ಸರಕಾರ ಅಧೀಕೃತವಾಗಿ ಸೂಚಿಸಿದೆ. ವೇತನ ವಿಚಾರ ಸಂಬಂಧಿಸಿದಂತೆ ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸುವುದಾಗಿ ಅಧೀಕೃತವಾಗಿ ಹೇಳಿದೆ.

ಇನ್ನು ರಾಜ್ಯದ ಸಾರಿಗೆ ನೌಕರರು ಎದುರಿಸುತ್ತಾ ಬಂದಿರುವ ಈ ಸಮಸ್ಯೆಗಳು ನಿನ್ನೆ ಮೊನ್ನೆಯದೇನಲ್ಲ. ಬಹಳ ಮೊದಲಿನಿಂದಲೂ ಈ ಸಮಸ್ಯೆಗಳೂ ಸೇರಿದಂತೆ ಹಲವಾರು ಸಮಸ್ಯೆಗಳು ರಾಜ್ಯ ಸಾರಿಗೆ ನೌಕರರನ್ನು ಬಾಧಿಸುತ್ತಲೇ ಬಂದಿವೆ. ಮಹಿಳಾ ಕಾರ್ಮಿಕರು ಹಾಗೂ ನೌಕರರಿಗೆ ಆಗುತ್ತಿರುವ ಸಮಸ್ಯೆಗಳು ಕಿರುಕುಳಗಳು ಪ್ರತ್ಯೇಕವಾಗಿವೆ.

 ಮೊದಲನೆಯದಾಗಿ ಸಚಿವಾಲಯ ಹಾಗೂ ಸರಕಾರಿ ಆಡಳಿತಾಧಿಕಾರಿಗಳ ಮಟ್ಟದಲ್ಲಿ ಉದ್ದಗಲಕ್ಕೂ ಇರುವ ವ್ಯಾಪಕ ಭ್ರಷ್ಟಾಚಾರ ರಾಜ್ಯ ಸರಕಾರಿ ಸಾರಿಗೆ ವ್ಯವಸ್ಥೆಯನ್ನು ಹದಗೆಡಿಸುತ್ತಾ ಬರುತ್ತಿದೆ. ಸರಕಾರದ ಉನ್ನತ ಮಟ್ಟದಲ್ಲಿ ನಡೆಯುವ ಅಡ್ಡ ವ್ಯವಹಾರಗಳು ಸಾರಿಗೆ ನಿಗಮಗಳನ್ನು ಭಾರಿ ಒತ್ತಡಗಳಿಗೆ ಸಿಲುಕಿಸಿ ನೌಕರರು ಸಹಜವಾಗಿ ಕಾರ್ಯ ನಿರ್ವಹಿಸಲಾಗದ ಪರಿಸ್ಥಿತಿಯನ್ನು ನಿರ್ಮಿಸಿದೆ. ಅದು ಬಸ್ ಖರೀದಿಯಾಗಿರಬಹುದು, ಬಸ್ ನಿಲ್ದಾಣಗಳ ನಿರ್ಮಾಣ ಹಾಗೂ ಆಧುನೀಕರಣವಾಗಿರಬಹುದು, ನಿರ್ದಿಷ್ಟ ಬಸ್ ಸೇವೆಗಳನ್ನು ಖಾಸಗಿಯವರಿಗೆ ಒಪ್ಪಿಸುವ ಕಾರ್ಯವಾಗಿರಬಹುದು, ಹಳೆಯ ಬಸ್ ಗಳನ್ನು ಮಾರಾಟ ಮಾಡುವುದಾಗಿರಬಹುದು, ಮಾರ್ಗಗಳಿಗೆ ಸುಸಜ್ಜಿತ ಬಸ್ ಗಳನ್ನು ಒದಗಿಸುವ ವಿಚಾರವಿರಬಹುದು, ಕೊನೆಗೆ ಬೇಡವೆಂದು ಪರಿಗಣಿಸಿ ಮಾರುವ ಕಬ್ಬಿಣ ಇತ್ಯಾದಿ ಸ್ಕ್ರಾಪ್ ಗಳಾಗಿರಬಹುದು ಹೀಗೆ ಪ್ರತಿಯೊಂದರಲ್ಲೂ ಕೋಟ್ಯಾಂತರ ರೂಪಾಯಿಗಳ ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳು ಕಣ್ಣಿಗೆ ರಾಚುವಂತೆ ಇರುವುದು ರಹಸ್ಯ ವಿಚಾರವೇನಲ್ಲ.

ನಂತರ ಕೆಳಗಿನ ಹಂತದವರೆಗೂ ಈ ಭ್ರಷ್ಟಾಚಾರದ ಕಬಂಧಬಾಹುಗಳು ಚಾಚುತ್ತಾ ಕೊನೆಗದು ಒಟ್ಟು ನಾಲ್ಕೂವರೆ ಲಕ್ಷಗಳಷ್ಟಿರುವ ರಾಜ್ಯದ ಸಾರಿಗೆ ಕಾರ್ಮಿಕರು ಹಾಗೂ ನೌಕರರನ್ನು ಹಿಂಡಿ ಹಿಪ್ಪೆ ಮಾಡುತ್ತಾ ಅವರಿಗೆ ಅತೀವ ಒತ್ತಡಗಳನ್ನುಂಟುಮಾಡುತ್ತಿವೆ. ಸಾರಿಗೆ ಕಾರ್ಮಿಕರು ಹಾಗೂ ನೌಕರರು ಇಲಾಖಾ ಸಹಜವಾದ ಪ್ರತಿ ಕೆಲಸಗಳಿಗೂ ಲಂಚ ಕೊಡಬೇಕಾದ ಪರಿಸ್ಥಿತಿ ಈಗಲೂ ಇದೆಯೆಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು. ಸಂಸ್ಥೆಯ ಮೂಲದ ಪ್ರಕಾರ ರಾಜ್ಯದ ಸಾರಿಗೆ ಇಲಾಖೆಯಲ್ಲಿ ನಿರ್ವಾಹಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿ ನಿವೃತ್ತಿಯಾಗುವ ಸಮಯಕ್ಕೆ ಅವರಿಗೆ ಸಿಗುವ ಸಂಬಳ ಕೇವಲ 50,000 ರೂಪಾಯಿಗಳವರೆಗೆ ಮಾತ್ರ. ಹದಿನಾರು ವರುಷದ ಸೇವಾವಧಿ ಇದ್ದರೂ ಅವರಿಗೆ ಸಿಗುವ ಸಂಬಳ ಕೇವಲ 24000 ರೂಪಾಯಿಗಳು. ನಿರ್ವಾಹಕರು ಹಾಗೂ ಚಾಲಕರಾಗಿ ನಿಯುಕ್ತರಾಗುವವರು ಎರಡು ವರುಷಗಳ ತರಬೇತಿ ಮತ್ತೆರಡು ವರುಷಗಳು ಪ್ರೊಭೆಷನರಿಯಾಗಿ ಸೇವೆ ಸಲ್ಲಿಸಬೇಕು. ಅಂದರೆ ನಾಲ್ಕು ವರುಷಗಳ ಕಾಲ ಕಡಿಮೆ ಸಂಬಳ ಹಾಗೂ ಅಭದ್ರತೆಯಲ್ಲೇ ಕಾಲ ಕಳೆಯಬೇಕು. ಅದರಲ್ಲೂ ತರಬೇತಿಯೆನ್ನುವ ಎರಡು ವರುಷ ಕೇವಲ 9000 ರೂಪಾಯಿ ಸಂಬಳ ನೀಡಲಾಗುತ್ತದೆ. ನಿರ್ವಾಹಕರು ಮತ್ತು ಚಾಲಕರುಗಳಿಗೆ ನೀಡುವ ದಿನಭತ್ಯೆ ಕೇವಲ 38 ರೂಪಾಯಿಗಳು. ಇದರಲ್ಲೇ ಅವರುಗಳು ದಿನದ ಒಂದು ಹೊತ್ತಿನ ಆಹಾರ ಕೂಡ ಪೂರೈಸಲು ಸಾಧ್ಯವಾಗದು ಎನ್ನುವುದು ಯಾರಿಗೂ ಅರ್ಥವಾಗುವ ವಿಚಾರ. ಇನ್ನು ಬೆಂಗಳೂರು ಮಂಗಳೂರಿನಂತಹ ನಗರಗಳಲ್ಲಿ ಈ ಸಂಬಳ ಹಾಗೂ ದಿನಭತ್ಯೆಗಳಿಂದ ಜೀವನ ನಡೆಸಲು ಸಾಧ್ಯವೇ ಇಲ್ಲ. ಈ ಅಲ್ಪ ಸಂಬಳದಿಂದಲೇ ಜೀವನವನ್ನೂ ನಡೆಸಬೇಕು ಮತ್ತೆ ಇಲಾಖಾ ಅಧಿಕಾರಿಗಳಿಗೆ ದಿನ ಹಾಗೂ ತಿಂಗಳುಗಳ ಲೆಕ್ಕದಲ್ಲಿ 5 ರೂಪಾಯಿಗಳಿಂದ ಹಿಡಿದು 500 ರೂಪಾಯಿಗಳವರೆಗೂ ಲಂಚವನ್ನೂ ನೀಡಬೇಕೆಂದರೆ ನೌಕರರ ಪರಿಸ್ಥಿತಿ ಹೇಗಿರಬೇಡ. ಅದು ಮಾತ್ರವಲ್ಲ ಪ್ರತೀ ತಿಂಗಳೂ ಯಾವುದಾದರೂ ಒಂದು ನೆಪದಲ್ಲಿ  ಮೆಮೋ, ದಂಡಗಳೆಂದು 100 ರೂಗಳಿಂದ ಹಿಡಿದು 1000 ರೂಪಾಯಿಗಳವರೆಗೂ ನಿರ್ವಾಹಕರು ಹಾಗೂ ಚಾಲಕರಿಂದ ಕೀಳಲಾಗುತ್ತದೆ. ಇಷ್ಟೆಲ್ಲಾ ಕಿರುಕುಳಗಳ ನಡುವೆ ಕಾರ್ಯ ನಿರ್ವಹಿಸಿದರೂ ಅದಕ್ಕೆ ತಕ್ಕ ಪ್ರತಿಫಲವಿಲ್ಲದೇ ಸಾರಿಗೆ ನೌಕರರ ಮೇಲೆ ಅತೀವ ಒತ್ತಡ ಉಂಟಾಗಿ ಅನಾರೋಗ್ಯ, ಆತ್ಮಹತ್ಯಾ ಮನೋಭಾವಗಳು, ಅಸಂತೃಪ್ತಿ, ಆಕ್ರೋಷ, ನಿರುತ್ಸಾಹಗಳು ಬೆಳೆದು ನಿಂತಿವೆ. ಹಲವರು ಇದಕ್ಕೆ ಜೀವಬಲಿಯಾಗಿದ್ದಾರೆ ಈಗಲೂ ಬಲಿಯಾಗುತ್ತಿದ್ದಾರೆ. ಇಷ್ಟೆಲ್ಲಾ ಒತ್ತಡ ಆರೋಗ್ಯ ಸಮಸ್ಯೆಗಳನ್ನು ನೌಕರಿ ಕಾರಣದಿಂದಲೇ ಎದುರಿಸುತ್ತಿರುವ ಸಾರಿಗೆ ನೌಕರರಿಗೆ ಆರೋಗ್ಯ ಭಾಗ್ಯ ವಿಮೆಯ ಸೌಲಭ್ಯ ಕೂಡ ಇಲ್ಲವೆಂದರೆ ನೌಕರರ ಪರಿಸ್ಥಿತಿ ಹೇಗಾಗಿರಬೇಡ. ಇನ್ನು ರಜೆ ಬೇಕೆಂದರೂ ಕೂಡ ಹತ್ತುದಿನ ಮೊದಲೇ ಅರ್ಜಿ ಸಲ್ಲಿಸಬೇಕು. ತುರ್ತಾಗಿ ರಜೆಬೇಕೆಂದರೆ ನೂರಾರು ರೂಪಾಯಿ ಲಂಚಕೊಡಬೇಕು.

ಇವೆಲ್ಲದರ ಜೊತೆಗೆ ಕೊರೋನಾ ಕಾರಣ ಹಾಗೂ ನಷ್ಟಗಳನ್ನು ಮುಂದೊಡ್ಡಿ ಎರಡುಮೂರು ತಿಂಗಳ ಸಂಬಳವನ್ನೇ ನೀಡದೇ ಸಾರಿಗೆ ನೌಕರರನ್ನು ಸತಾಯಿಸಲಾಗಿತ್ತು. ಕೊರೋನಾ ಲಾಕ್ ಡೌನ್ ಸಂಧರ್ಭ ಎಲ್ಲರಂತೆ ಸಾರಿಗೆ ನೌಕರರಿಗೂ ಸಂಕಷ್ಟದ ಸಂಧರ್ಭವಾಗಿತ್ತು. ಅಂತಹ ಸಮಯದಲ್ಲೇ ಸಂಬಳ ನೀಡದೇ ಇರುವ ಸರಕಾರದ ಻ನೀತಿ ಎಂತಹ ಕ್ರೌರ್ಯಯುತವಾದದ್ದು ಎನ್ನುವುದನ್ನು ಯಾರೂ ಕೂಡ ಊಹಿಸುವಂತಹುದೇ. ಕಳೆದ ಸೆಪ್ಟಂಬರ್ ವರೆಗೂ ಶೇ 70ರಷ್ಟು ಸಂಬಳವನ್ನು ಮಾತ್ರ ನೌಕರರಿಗೆ ನೀಡಲಾಗಿದೆ ಎಂದರೆ ನೌಕರರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗ್ರಹಿಸಬಹುದು.

ಪ್ರತಿ ನಾಲ್ಕು ವರರುಷಗಳಿಗೊಮ್ಮೆ ವೇತನ ಪರಿಷ್ಕರಿಸುವ ವಾಡಿಕೆಯಿದ್ದರೂ ಅದು ಕೇವಲ ಶೇ 4 ಇಲ್ಲವೇ ಶೇ5ರಷ್ಟು ಮಾತ್ರವೇ ಆಗುತ್ತಾ ಬರುತ್ತಿದೆಯೇ ವಿನಹ ಇತರೆ ಸರಕಾರಿ ವಲಯಗಳಲ್ಲಿ ಆಗುತ್ತಿರುವಂತೆ ಶೇ18 ಇಲ್ಲವೇ ಶೇ20 ಇಲ್ಲವೇ ಶೇ 22 ಯಾವತ್ತೂ ಆಗಿಲ್ಲ. ಪಕ್ಕದ  ಆಂದ್ರಪ್ರದೇಶದಲ್ಲಿ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಶೇ22ರಷ್ಟು ಮಾಡಿರುವ ಉದಾಹರಣೆಯಿದೆ. ಇದೇ ವರುಷದ ಜನವರಿಯಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆ ಕೋವಿದ್ ನೆಪ ಹೂಡಿ ಈ ಬಾರಿ ಮಾಡಿರಲೇ ಇಲ್ಲ. ಈ ಅಸಮಧಾನವೂ ಸಾರಿಗೆ ನೌಕರರರನ್ನು ಕಾಡುತ್ತಿತ್ತು.

ಇಂತಹ ಅಕ್ರಮಗಳು ಹಾಗೂ ಕಿರುಕುಳಗಳನ್ನು ಪ್ರಶ್ನೆ ಮಾಡುವ ನೌಕರರನ್ನು ಬಲಿಪಶುಮಾಡಿ ಅವರನ್ನು ಬಲಿಹಾಕುವ ಹಲವಾರು ಫ್ಯಾಸಿಸ್ಟ್ ಕುತಂತ್ರಗಳನ್ನು ಹಲವು ವಿಧಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಸುರಕ್ಷಾ ದಳ, ತನಿಖಾ ದಳ, ಭದ್ರತಾ ಇಲಾಖೆಗಳೆಂದು ಇರುವ ವ್ಯವಸ್ಥೆ ಪ್ರಧಾನವಾಗಿ ಪ್ರಶ್ನೆ ಮಾಡುವವರನ್ನು ಬಗ್ಗು ಬಡಿಯಲೆಂದೇ ಇರುವ ವಿಭಾಗಗಳೆಂಬಂತೆ ಕಾರ್ಯ ನಿರ್ವಹಿಸುತ್ತವೆ.

1997ರಲ್ಲಿ ಜನತಾ ಪರಿವಾರದ, ಲೋಹಿಯಾವಾದಿಯೆಂದು ಬಿಂಬಿಸಿಕೊಂಡ ಪಿ ಜಿ ಆರ್ ಸಿಂದ್ಯ ಸಾರಿಗೆ ಮಂತ್ರಿಯಾಗಿದ್ದಾಗ ಒಂದೇ ಸಂಸ್ಥೆಯಾಗಿದ್ದ ಕರ್ನಾಟಕ ಸರಕಾರಿ ಸಾರಿಗೆ ಸಂಸ್ಥೆಯನ್ನು ಹಲವು ವಿಭಾಗಗಳಾಗಿ ಒಡೆದು ನೌಕರರು ಒಗ್ಗೂಡಿ ಸಂಘಟಿತರಾಗುವುದನ್ನು ತಡೆಯಲು ಪ್ರಯತ್ನಿಸಲಾಯಿತು. ಅದರ ಉದ್ದೇಶ ಪ್ರಧಾನವಾಗಿ ಸಾರಿಗೆ ವ್ಯವಸ್ಥೆಯ ಖಾಸಗಿಕರಣಕ್ಕೆ ದಾರಿ ಸುಗಮಗೊಳಿಸಿಕೊಳ್ಳುವುದೂ ಆಗಿತ್ತು. ಸೇವಾ ಆಧ್ಯತೆಯಾಗಿದ್ದ ಈ ಸಂಸ್ಥೆ ನಂತರ ಲಾಭವನ್ನು ಆಧ್ಯತೆಯಾಗಿಸಿಕೊಳ್ಳುತ್ತಾ ಸಾಗಿಬಂದಿತು. ಖಾಸಗಿಯವರೊಂದಿಗೆ ಪೈಪೋಟಿಯಿದ್ದರೆ ಸರಕಾರಿ ಸಾರಿಗೆ ದಕ್ಷವೂ ಲಾಭದಾಯಕವೂ ಆಗಿ ಬದಲಾಗುತ್ತದೆ ಎಂಬಂತಹ ನಯವಂಚಕ ಕಾರಣಗಳನ್ನು ಮುಂದೊಡ್ಡಿ ಖಾಸಗೀಕರಣದ ದಾರಿಗಳನ್ನು ಸುಗಮಗೊಳಿಸುವ ಕಾರ್ಯ ನಡೆಸಿಕೊಂಡು ಬರಲಾಯಿತು. ಅದರ ನಂತರ ದೂರ ಪಯಣದ ಹಲವು ಬಸ್ ಸೇವೆಗಳನ್ನು ಖಾಸಗಿ ಕಾರ್ಪೋರೇಟುಗಳಿಗೂ ಬಿಟ್ಟುಕೊಡಲಾಯಿತು. ಹಾಗಾಗಿಯೇ ಖಾಸಗೀ ಕಾರ್ಪೋರೇಟು ಸಾರಿಗೆ ಲಾಬಿಯಿಂದು ಸರಕಾರಿ ಬಸ್ ಸೇವೆ ಹಾಗೂ ರೈಲು ಸೇವೆಗಳನ್ನೂ ಕೂಡ ನಿಯಂತ್ರಿಸುವ ಇಲ್ಲವೇ ತಡೆಯುವ ಮಟ್ಟಕ್ಕೆ ಬೆಳೆದು ಸಾರ್ವಜನಿಕ ಹಿತಾಸಕ್ತಿಗೆ ವಿರುಧ್ಧವಾಗಿ ನಿಂತಿದೆ. ಮೊನ್ನೆ ನಡೆದ ಮುಷ್ಕರಕ್ಕೆ ಖಾಸಗೀ ಬಸ್ ಮಾಲಿಕರುಗಳ ಒಂದು ಸ್ತರ ಬೆಂಬಲವನ್ನು ನೀಡಿದ್ದು ಕೂಡ ಸುದ್ಧಿಯಾಗಿತ್ತು.

 ಆದರೆ ಸರಕಾರಿ ಸಾರಿಗೆ ಮಾತ್ರವಿರುವ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಖಾಸಗಿಯವರು ಕಾರ್ಯನಿರ್ವಹಿಸಲು ಮುಂದೆಬಂದಿಲ್ಲ. ಕೇವಲ ಹೆದ್ದಾರಿಗಳು ಲಾಭ ತರುವ ಭಾಗಗಳಲ್ಲಿ ಮಾತ್ರ ಖಾಸಗೀ ಸಾರಿಗೆ ಕಾರ್ಪೋರೇಟುಗಳು ಕಾರ್ಯನಿರ್ವಹಿಸುತ್ತಿವೆ. ಅಂತಹ ಲಾಭ ತರುವ ಮಾರ್ಗಗಳಲ್ಲಿ, ದೀರ್ಘ ಪಯಣದ ಮಾರ್ಗಗಳಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸಿ ಸರಕಾರಿ ಬಸ್ ಗಳಿಗೆ ಆದಾಯ ಕಡಿತವಾಗುವಂತೆ ಮಾಡಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸರಕಾರಿ ಬಸ್ ನಿರ್ವಾಹಕರು ಹಾಗೂ ಚಾಲಕರುಗಳ ಮೇಲೆ ಆದಾಯ ಹೆಚ್ಚಿಸಲು ನಿರಂತರ ಒತ್ತಡ ಹೇರಲಾಗುತ್ತಾ ಬರಲಾಗಿದೆ.

ಇಲ್ಲಿ ಸರಕಾರಿ ಬಸ್ ನಿರ್ವಾಹಕರುಗಳು ಹಾಗೂ ಚಾಲಕರುಗಳ ಕಾರ್ಯನಿರ್ವಹಣೆಯಲ್ಲಿ ದಕ್ಷತೆ, ಸಮಯ ನಿರ್ವಹಣೆ ಹಾಗೂ ಪ್ರಯಾಣಿಕ ಸ್ನೇಹಿ ಮನೋಭಾವ ಬೆಳೆಸಬೇಕಾದುದು ಅಗತ್ಯವಾಗಿದ್ದರೂ ಅದಕ್ಕೆ ಖಾಸಗಿಯವರೊಂದಿಗೆ ಪೈಪೋಟಿಗೆ ದೂಡಿ ಒತ್ತಡ ಹಾಕುವುದು ಪರಿಹಾರವಲ್ಲ, ಬದಲಿಗೆ ಅದು ಸಮಸ್ಯೆಯ ಭಾಗವಾಗುತ್ತದೆ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುವ ವಿಚಾರ.

1948ರ ಸೆಪ್ಟಂಬರ್ 12ರಂದು ಮೈಸೂರು ಸರಕಾರಿ ರಸ್ತೆ ಸಾರಿಗೆ ವಿಭಾಗ ಎಂದು ಆರಂಭವಾದ ಈ ಸಂಸ್ಥೆ ನಂತರ 1961ರ ಆಗಸ್ಟ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವಾಯಿತು. ಈಗ ಲಕ್ಷಾಂತರ ಕೋಟಿ ಆಸ್ತಿ ಹೊಂದಿರುವ ಭೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಆದರೆ ಅದರ ನೌಕರರ ಪರಿಸ್ಥಿತಿ ಈಗ ಇಂತಹ ಹೀನಾಯ ಸ್ಥಿತಿಗೆ ತಲುಪಿರುವುದಕ್ಕೆ ಪ್ರಧಾನವಾಗಿ ಸರಕಾರದ ಭ್ರಷ್ಟ ವ್ಯವಸ್ಥೆಯೇ ಕಾರಣವಾಗಿದೆ.

ನೌಕರರು ಅದರಲ್ಲೂ ಮುಖ್ಯವಾಗಿ ನಿರ್ವಾಹಕರು ಹಾಗೂ ಚಾಲಕರುಗಳನ್ನು ಇಷ್ಟೆಲ್ಲಾ ಸಮಸ್ಯೆಗಳು ಕಿತ್ತುತಿನ್ನುತ್ತಿರುವಾಗ ಪಕ್ಷಕ್ಕೊಂದು ಜಾತಿಗೊಂದರಂತೆ ಇರುವ ಸಾರಿಗೆ ನೌಕರರ ಸಂಘಟನೆಗಳು ಏನು ಮಾಡುತ್ತಿವೆ ಎಂಬುದು ಬಹು ಮುಖ್ಯವಾಗಿ ಕೇಳಬೇಕಾದ ಪ್ರಶ್ನೆಯಾಗಿದೆ. ರಾಜ್ಯ ಸಾರಿಗೆ ನೌಕರ ಸಂಘಗಳು ಮುಖ್ಯವಾಗಿ ಎ ಐ ಟಿ ಯು ಸಿ, ಐ ಎನ್ ಟಿ ಯು ಸಿ, ಬಿ ಎಮ್ ಟಿ ಸಿ ಅಂಡ್ ಕೆ ಎಸ್ ಆರ್ ಟಿ ಸಿ ನೌಕರರ ಯೂನಿಯನ್ ಜೊತೆಗೆ ಎಸ್ಸಿ, ಎಸ್ ಟಿ ನೌಕರರ ಯೂನಿಯನ್, ಒಕ್ಕಲಿಗ ನೌಕರರ ಯೂನಿಯನ್, ಲಿಂಗಾಯತ ನೌಕರರ ಯೂನಿಯನ್ ಅಂತೆಲ್ಲಾ ಬಹಳ ಕಾಲದಿಂದ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಎಡಪಕ್ಷಗಳೆಂದು ಹೇಳಿಕೊಳ್ಳುವ ಸಿ ಪಿ ಐ (ಎಂ) ಹಾಗೂ ಸಿಪಿಐ ಪಕ್ಷಗಳಡಿ ಇರುವ ಕಾರ್ಮಿಕ ಸಂಘಟನೆಗಳೂ ಇವೆ.

 ಆದರೆ ಈ ಎಲ್ಲಾ ಕಾರ್ಮಿಕ ಸಂಘಟನೆಗಳ ನಾಯಕತ್ವವನ್ನು ಹೊರಗಿಟ್ಟು ನೌಕರರು ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರರನ್ನು ಮುಂದಿಟ್ಟುಕೊಂಡು ದಿಢೀರ್ ಎಂದು ಮುಷ್ಕರ ಹೂಡಿದ್ದಾರೆ ಎಂದರೆ ಈ ಎಲ್ಲಾ ಕಾರ್ಮಿಕ ಹಾಗೂ ನೌಕರರ ಸಂಘಟನೆಗಳ ನಾಯಕತ್ವದ ಮೇಲೆ ಸಾರಿಗೆ ನೌಕರರಿಗೆ ವಿಶ್ವಾಸವಿಲ್ಲ ಎಂಬುದೇ ಪ್ರಧಾನವಾಗಿರುವ ವಿಚಾರ ತಾನೇ. ಉಳಿದ ವಿಚಾರಗಳೆಲ್ಲಾ ನಂತರದ್ದು ಮಾತ್ರ. ಕೋಡಿ ಹಳ್ಳಿ ಚಂದ್ರಶೇಖರ್ ರನ್ನು ಗೌರವ ಻ಅಧ್ಯಕ್ಷರನ್ನಾಗಿ ಮಾಡಿಕೊಂಡು ರಾಜ್ಯದ ಸಾರಿಗೆ ಕಾರ್ಮಿಕರ ನೌಕರರ ಸಂಘಟನೆ ಅಸ್ತಿತ್ವಕ್ಕೆ ಬಂದು ಒಂದೆರಡು ತಿಂಗಳುಗಳಲ್ಲಿಯೇ ಈ ಮಟ್ಟದ ಮುಷ್ಕರಕ್ಕೆ ಮುಂದಾಗುವ ಪರಿಸ್ಥಿತಿ ಬಂದಿದ್ದು ಹೇಗೆ. ಅದು ಮೊದಲಿನಿಂದಲೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಕಾರ್ಮಿಕ ನಾಯಕತ್ವದ ಗಂಭೀರ ವಿಫಲತೆಯ ಕಾರಣದಿಂದಲ್ಲವೇ ?

ಈ ಮುಷ್ಕರದಿಂದ ನೌಕರರ ಮುಖ್ಯ ಹಕ್ಕೊತ್ತಾಯವಾದ ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಿ ಅದರಂತೆ ಸವಲತ್ತು ಸೌಲಭ್ಯಗಳನ್ನು ಒದಗಿಸಬೇಕೆನ್ನುವುದು ಈಡೇರದಿದ್ದರೂ ಇತ್ತೀಚಿನ ವರುಷಗಳಲ್ಲಿ ನಡೆದ ಸಾರಿಗೆ ನೌಕರರ ದೊಡ್ಡ ಹಾಗೂ ದೀರ್ಘಾವಧಿಯ ಮುಷ್ಕರ ಇದಾಗಿದೆ ಎನ್ನುವುದು ಗಮನಾರ್ಹವಾದುದು. ಮುಷ್ಕರ ಹಿಂದಿನಿಂದಲೂ ಇದ್ದ ನಾಯಕತ್ವದ ಪ್ರಸ್ತುತತೆಯನ್ನೇ ಗಂಭೀರವಾಗಿ ಪ್ರಶ್ನಾರ್ಹಗೊಳಿಸಿದೆ ಎಂದರೆ ತಪ್ಪಾಗಲಾರದು. ಅಲ್ಲದೇ ಈ ನಾಯಕತ್ವ ಇದುವರೆಗೂ ಸಾರಿಗೆ ಕಾರ್ಮಿಕರು ಹಾಗೂ ನೌಕರರ ಹಿತಾಸಕ್ತಿಯನ್ನು ಕಾಪಾಡುತ್ತಿತ್ತೇ ಅಥವಾ ಸರಕಾರ ಮತ್ತು ಅಧಿಕಾರಶಾಹಿಯೊಂದಿಗೆ ಶಾಮೀಲಾಗಿ ಕಾರ್ಯ ನಿರ್ವಹಿಸುತ್ತಿತ್ತೇ ಎಂಬ ಪ್ರಶ್ನೆ ಸಾರಿಗೆ ನೌಕರರು ನಿರಂತರವಾಗಿ ಎದುರಿಸಿಕೊಂಡು ಬರುತ್ತಿರುವ ತೀವ್ರ ರೂಪದ ಸಮಸ್ಯೆಗಳ ಮೂಟೆ ಹಾಗೂ ಅಗಾಧತೆ ಗಮನಿಸಿದಾಗ ಯಾರಿಗಾದರೂ ಬರಲೇಬೇಕು.

ಇದಕ್ಕೆ ಪೂರಕವೆಂಬಂತೆಯೇ ಈ ಸಂಘಟನೆಗಳ ನಾಯಕತ್ವವು ಮುಷ್ಕರದ ಕುರಿತು ಹಲವು ರೀತಿಗಳಲ್ಲಿ ಪ್ರತಿಕ್ರಿಯಿಸಿದವು., ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಮುಷ್ಕರ ಹೂಡಿದ ನೌಕರರನ್ನು ವಜಾಗೊಳಿಸಿದ ಫ್ಯಾಸಿಸ್ಟ್ ಉದಾಹರಣೆ ನೀಡುತ್ತಾ ಮುಷ್ಕರನಿರತರನ್ನು ಬೆದರಿಸಲು ಹೊರಟಿದ್ದು, ಮುಷ್ಕರದಿಂದ ಜನರಿಗೆ ಸಮಸ್ಯೆಯಾಗುತ್ತದೆ, ಮುಂಚಿತವಾಗಿ ನೋಟೀಸು ಕೊಡಬೇಕಿತ್ತು, ನಮ್ಮದು ಅಧೀಕೃತ ಕಾರ್ಮಿಕ ಸಂಘಟನೆ, ನಾವು ಈ ಮುಷ್ಕರಕ್ಕೆ ಕರೆಕೊಟ್ಟಿಲ್ಲ ಇತ್ಯಾದಿ ಕೇವಲ ತಾಂತ್ರಿಕ ಇಲ್ಲವೇ ಸಂಘಟನಾತ್ಮಕ ಻ಅಂಶಗಳನ್ನು ಮುಂದಿಟ್ಟು ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಆಳವನ್ನು ಮರಮಾಚಿ ಭಾರಿ ಮುಷ್ಕರವನ್ನು ಕೇವಲಗೊಳಿಸಲು ಪ್ರಯತ್ನಿಸಿದ್ದು, ತಮ್ಮನ್ನು ಹೊರತುಪಡಿಸಿ ಬೇರೆಯವರು ನೌಕರರ ಪರವಾಗಿ ನಿಲ್ಲುವುದು ತಪ್ಪಾದುದು ಎಂಬಂತೆ ಬಿಂಬಿಸಲು ಯತ್ನಿಸಿದ್ದು, ಈ ಮುಷ್ಕರದ ನಾಯಕತ್ವವನ್ನು ಹೀಗೆಳೆದು; ಅಲ್ಪಗೊಳಿಸಿ ದಿಕ್ಕುತಪ್ಪಿಸಲು ಎಲ್ಲಾ ವಿಧದಲ್ಲಿಯೂ ಪ್ರಯತ್ನಿಸಿದ್ದು, ಮೊದಲು ಸಾರಿಗೆ ಸಂಸ್ಥೆಯನ್ನು ಉಳಿಸಬೇಕು, ಸರಕಾರಿ ನೌಕರರಾದರೆ ಸಂಘಟನಾ ಶಕ್ತಿ ಕುಂದಿ ನೌಕರರಿಗೆ ಹಾಗೂ ಸಂಸ್ಥೆಗೆ ಹಾನಿಯಾಗುತ್ತದೆ ಎಂಬ ಹಾಸ್ಯಾಸ್ಪದ ರೀತಿಯ ಹೇಳಿಕೆಗಳನ್ನು ನೀಡಿ ಹೆದರಿಸಲು ಪ್ರಯತ್ನಿಸಿದ್ದು, ಇವೆಲ್ಲವನ್ನೂ ನಾವು ನೌಕರರ ಮುಷ್ಕರದ ವಿರುದ್ಧವಿಲ್ಲ, ಅವರು ಮುಂದಿಟ್ಟಿರುವ ಹಕ್ಕೊತ್ತಾಯಗಳೊಂದಿಗೆ ನಾವೂ ಇದ್ದೇವೆ ಎಂದು ಹೇಳುತ್ತಲೇ ಮಾಡಿದ್ದು ಇತ್ಯಾದಿಗಳು ಈ ಮೇಲಿನ ಅಂಶವನ್ನು ಮತ್ತಷ್ಟು ಸಮರ್ಥಿಸುತ್ತವೆ. ಅಲ್ಲದೇ ಈ ನಾಯಕತ್ವವನ್ನು ದೂರವಿಟ್ಟು ಸಾರಿಗೇ ನೌಕರರು ನಾಲ್ಕು ದಿನಗಳವರೆಗೂ ಪಟ್ಟುಹಿಡಿದು ಮುಷ್ಕರ ನಡೆಸಿ ಕೆಲವು ಹಕ್ಕೊತ್ತಾಯಗಳನ್ನು ಈಡೇರಿಸಿಕೊಂಡಿರುವುದು ಅದನ್ನು ಮತ್ತಷ್ಟು ಬಲಪಡಿಸುತ್ತದೆ.

ರಾಜ್ಯ ಸರಕಾರ ಕೂಡ ಈ ಸಂಧರ್ಭ ಬಳಸಿ ಸಾರಿಗೆ ನೌಕರರ ಒಗ್ಗಟ್ಟಿನ ಮುಷ್ಕರವನ್ನು ಒಡೆದು ದಮನಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿತು. ಅಗತ್ಯ ಸೇವೆಗಳ ಕಾಯ್ದೆ (ESMA) ಹೇರುವ ಬೆದರಿಕೆ ಹಾಕಿತು. ನೌಕರರ ಸಂಘಟನಾ ಶಕ್ತಿಯನ್ನು ಕುಂದಿಸಲು ಪ್ರಯತ್ನಿಸಿತು. ಮುಷ್ಕರದಲ್ಲಿ ಪಾಲ್ಗೊಳ್ಳದ ನಾಯಕತ್ವದೊಂದಿಗೆ ಮಾತುಕತೆ ನಡೆಸಿ ದಿಕ್ಕು ತಪ್ಪಿಸಲು ನೋಡಿತು. ಕೊನೆಗೆ ನೌಕರರ ಆಕ್ರೋಷ ಹಾಗೂ ನಾಲ್ಕು ದಿನಗಳವರೆಗೂ ಮುಷ್ಕರ ಮುಂದುವರೆದಾಗ ಸರಕಾರ ಒಂಬತ್ತು ಹಕ್ಕೊತ್ತಾಯಗಳನ್ನು ಒಪ್ಪಿಕೊಳ್ಳುವ ತೀರ್ಮಾನಕ್ಕೆ ಬಂದಿತು. ಆದರೆ ನೌಕರರ ಬಹು ಮುಖ್ಯ ಹಕ್ಕೊತ್ತಾಯವಾದ ಸರಕಾರಿ ನೌಕರರೆಂದು ತಮ್ಮನ್ನು ಪರಿಗಣಿಸಬೇಕೆಂಬ ವಿಚಾರ ಇತ್ಯರ್ಥವಾಗದಿರುವುದು, ಅಲ್ಲದೇ ವೇತನ ಪರಿಷ್ಕರಣೆ ವಿಚಾರದಲ್ಲಿ ಖಚಿತ ಭರವಸೆ ದೊರೆಯದಿರುವುದು ನೌಕರರಲ್ಲಿ ಅಸಂತೃಪ್ತಿ ಮುಂದುವರೆಯಲು ಕಾರಣವಾಗಿ ಈಗಲೂ ಉಳಿದಿದೆ.

ಸಾರಿಗೆ ನೌಕರರ ಈ ಮುಷ್ಕರವು ಕಾರ್ಮಿಕ ವರ್ಗದ ಪಕ್ಷಗಳೆಂದು ಬಿಂಬಿಸಿಕೊಳ್ಳುವ ಪಕ್ಷಗಳ ನಾಯಕತ್ವ ಮಾಡುತ್ತಾ ಬರುತ್ತಿರುವುದೇನು, ತಾವುಗಳು ಸಂಘಟಿಸುವ ಜನರಿಗೆ ನೀಡುತ್ತಿರುವ ರಾಜಕೀಯ ಚೈತನ್ಯ ಎಂತಹುದು ಎಂಬುದನ್ನು ಮತ್ತೊಮ್ಮೆ ಬೀದಿಯಲ್ಲಿ ಬಹಿರಂಗಗೊಳಿಸಿದೆ.

ಇಂದಿನ ಸಂಧರ್ಭ ಬಹಳ ಕ್ಲಿಷ್ಟಕರವಾದುದ್ದಾಗಿದೆ. ಸರಕಾರಗಳು ಸಾರ್ವಜನಿಕ ವಲಯದ ಲಾಭದಾಯಕವಾಗಿರುವ ಎಲ್ಲವನ್ನೂ ಭಾರಿ ಕಾರ್ಪೋರೇಟುಗಳಿಗೆ ಯಾವುದಾದರೂ ನೇರ ಇಲ್ಲವೇ ಅಡ್ಡಹಾದಿಗಳ ಮೂಲಕ ದಾಟಿಸುವ ಕಾರ್ಯವನ್ನು ಭಾರಿ ಬಿರುಸಿನಿಂದ ಮಾಡತೊಡಗಿವೆ. ಹಾಗಾಗಿ ಸಾರಿಗೆ ವಲಯದ ಕಾರ್ಮಿಕರು ಹಾಗೂ ನೌಕರರು ಈ ಅಪಾಯವನ್ನು ರಾಜಕೀಯವಾಗಿ ಗ್ರಹಿಸಿ ಸರಕಾರಗಳ ಅಂತಹ ಪ್ರಯತ್ನಗಳ ವಿರುದ್ಧ ಸಂಘಟಿತವಾಗಿ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಇದುವರೆಗಿನ ನಾಯಕತ್ವಗಳ ವಿಫಲತೆಯ ಪಾಠಗಳನ್ನು ಪಡೆದು ಸರಿಪಡಿಸಿಕೊಂಡು ನಡೆಯಬೇಕಿದೆ. ಹಾಗಾಗಿ ಸಮಸ್ಯೆಗಳು ಮುಗಿದಿಲ್ಲ.

ಸರಕಾರಿ ನೌಕರರೆಂದು ಪರಿಗಣಿಸಿದಾಕ್ಷಣ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವಂತಿಲ್ಲ. ಅಲ್ಲದೇ ಈಗ ಮೊದಲಿನಂತೆ ಸೌಲಭ್ಯಗಳ ಖಾತ್ರಿಯೊಂದಿಗೆ ಸರಕಾರ ನೌಕರರನ್ನು ನೇಮಿಸಿಕೊಳ್ಳುತ್ತಿಲ್ಲ ಎನ್ನುವುದನ್ನೂ ಗಮನಿಸಬೇಕು. ಹೆಚ್ಚೂ ಕಡಿಮೆ ಗುತ್ತಿಗೆಯಾದಾರಿತವಾಗಿ ಇಲ್ಲವೇ ಅಂತಹ ನಿಬಂಧನೆಗಳಿಗೆ ಒಳಪಡಿಸಿಯೇ ನೌಕರಿಯನ್ನು ನೀಡುವ ಪರಿಪಾಠ ಆರಂಭವಾಗಿ ಬಹಳ ಕಾಲವಾಗಿದೆ.

ಈ ಹಿನ್ನೆಲೆಯಲ್ಲಿ ಲಾಭದಾಯಕವಾದ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಖಾಸಗಿಯವರಿಗೆ ನೀಡಿರುವ ಪರವಾನಿಗೆಗಳನ್ನು ರದ್ದುಪಡಿಸಿ ಸರಕಾರಿ ಸಾರಿಗೆ ನಿಗಮಗಳಿಗೆ ಆಗುತ್ತಿರುವ ನಷ್ವವನ್ನು ತಪ್ಪಿಸಬೇಕಿದೆ. ಜೊತೆಗೆ ಸಾರಿಗೆ ನಿಗಮಗಳಲ್ಲಿ ಭಾರಿ ನಷ್ಟಗಳಿಗೆ ಕಾರಣವಾಗಿರುವ ಮೇಲಿನಿಂದ ತಳ ಮಟ್ಟದವರೆಗೂ ಚಾಚಿಕೊಂಡಿರುವ ಭಾರಿ ಭ್ರಷ್ಟಾಚಾರ ಹಾಗೂ ಭಾರಿ ಅವ್ಯವಹಾರಗಳ ವಿರುದ್ಧ ಹೋರಾಡಬೇಕಿದೆ. ಸಾರಿಗೆ ವ್ಯವಸ್ಥೆಯನ್ನು ಲಾಭ ಮಾಡುವುದಕ್ಕಾಗಿ ಎಂಬಂತೆ ನೋಡದೇ ಸಾರ್ವಜನಿಕ ಸೇವೆಯ ಭಾಗ ಎಂಬಂತೆ ಪರಿಗಣಿಸಿ ಕಾರ್ಯ ನಿರ್ವಹಣೆಯಲ್ಲಿ ಶಿಸ್ತು, ದಕ್ಷತೆ ಹೆಚ್ಚಿಸಿ ಪ್ರಯಾಣಿಕ ಸ್ನೇಹಿಯಾಗಿಸಲು ಹೋರಾಡುವ ಕರ್ತವ್ಯವೂ ಇದೆ. ಸಾರಿಗೆ ನಿಗಮಗಳಲ್ಲಿ ಚಾಲ್ತಿಯಲ್ಲಿರುವ ಕಾರ್ಮಿಕರು ಹಾಗೂ ನೌಕರ ವಿರೋಧಿ ಫ್ಯಾಸಿಸ್ಟ್ ನಡೆಗಳು ಹಾಗೂ ದಮನಕಾರಿ ನೀತಿಗಳ ವಿರುಧ್ಧ ಜಾಗೃತಿ ಮೂಡಿಸುತ್ತಾ ಹೋರಾಡುವ ಅಗತ್ಯವಿದೆ.

ಜೊತೆಗೆ ಸಾರಿಗೆ ಕಾರ್ಮಿಕರು ಹಾಗೂ ನೌಕರರ ಸಂಘಟಿತ ಶಕ್ತಿಯನ್ನು ನಾಶಮಾಡುವ ರಾಜಕೀಯ ಪಕ್ಷಗಳು, ಜಾತಿ, ಮತ, ಕೋಮವಾದ ಆಧಾರಿತ ಸಂಘಟನೆಗಳ ನಾಯಕತ್ವಗಳನ್ನು ದೂರವಿಡಬೇಕಾದುದು ಅತ್ಯಗತ್ಯ. ಇಲ್ಲದಿದ್ದಲ್ಲಿ ಆಳುವ ಶಕ್ತಿಗಳು ಅಂತಹ ನಾಯಕತ್ವಗಳನ್ನು ಉಪಯೋಗಿಸಿ ತಮ್ಮ ಹಿತಾಸಕ್ತಿಗಳ ರಕ್ಷಣೆಗೆ ಚೆನ್ನಾಗಿಯೇ ಬಳಸಿಕೊಳ್ಳುತ್ತವೆ.

ಹೀಗೆ ಮಾಡಿದಲ್ಲಿ ಮಾತ್ರ ಸಾರಿಗೆ ನಿಗಮಗಳು ಉಳಿದು ಕಾರ್ಮಿಕರು ನೌಕರರ ಜೀವನಕ್ಕೂ ಭದ್ರತೆ ಒದಗಲು ಸಾಧ್ಯವಾಗುತ್ತದೆ. ಸಾರ್ವಜನಿಕರಿಗೂ ಸುವ್ಯಸ್ಥಿತ ಸಂಚಾರಿ ವ್ಯವಸ್ಥೆ ಇರುತ್ತದೆ. ಒಟ್ಟಾರೆಯಾಗಿ ಸಮಾಜಕ್ಕೂ ಕೊಡುಗೆಯಾಗುತ್ತದೆ.

17-12-2020                                     - ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು.

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...