Skip to main content

ಮೇಕಿಂಗ್ ಹಿಸ್ಟರಿ ಸಂಪುಟ 1#making history#introduction

 

ಮೇಕಿಂಗ್ ಹಿಸ್ಟರಿ

ಸಂಪುಟ 1

ಆಂಗ್ಲ ಮೂಲ : ಸಾಕಿ

ಕನ್ನಡ ರೂಪಾಂತರ: -ಡಾ. ಕೆ ಆರ್ ಅಶೋಕ್

-ನಂದಕುಮಾರ್ ಕೆ ಎನ್ . ಕುಂಬ್ರಿಉಬ್ಬು

 

ಪರಿಚಯ

ಮೇಕಿಂಗ್ ಹಿಸ್ಟರಿ ಕರ್ನಾಟಕದ ಗತಕಾಲದ ನಿರೂಪಣೆಯೂ ಹೌದು ವಿಶ್ಲೇಷಣೆಯೂ ಹೌದು.

ಭೌಗೋಳಿಕ ಮತ್ತು ಪ್ರಾಕೃತಿಕ ರೂಪಲಕ್ಷಣಗಳ ಸಂಕ್ಷಿಪ್ತ ವಿವರಗಳೊಂದಿಗೆ ಪ್ರಾರಂಭವಾಗುವ ಈ ಕೃತಿ, ಕರ್ನಾಟಕದಲ್ಲಿ ಮಾನವ ವಾಸದ ಗುರುತುಗಳು ಕಂಡು ಬಂದ ಸಮಯದಿಂದ ಆದ ಸಾಮಾಜಿಕ ಬೆಳವಣಿಗೆಗಳ ಕುರುಹುಗಳನ್ನು ಹುಡುಕುತ್ತದೆ.

ಹಳೇ ಶಿಲಾ ಯುಗದ ಕಾಲದಿಂದ ಆರಂಭವಾಗುವ ಈ ಅಧ್ಯಯನ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಗೆಲ್ಸ್ 150 ವರುಷಗಳ ಹಿಂದೆ ಅಭಿವೃದ್ಧಿ ಪಡಿಸಿದ ಚಾರಿತ್ರಿಕ ಭೌತಿಕವಾದಿ (Historical Materialism) ಮಾದರಿಯನ್ನು ಅಳವಡಿಸಿಕೊಂಡಿದೆ. ಮಾರ್ಕ್ಸ್ ಮತ್ತು ಏಂಗೆಲ್ಸ್ ಇದನ್ನು ಅಭಿವೃದ್ಧಿ ಪಡಿಸಿದ ನಂತರ ಈ ಮಾದರಿಯನ್ನು ತುಂಬ ಪರಿಣಾಮಕಾರಿಯಾಗಿ ಉಪಯೋಗಿಸಲಾಗಿದೆ. ಈ ಮಾದರಿಯು ಸಮಾಜವು ಸ್ವಯಂ ಗ್ರಹಿಕೆಯಿಂದ ಅತ್ಯದ್ಭುತ ಸಾಧನೆಗಳನ್ನು ಮಾಡುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಸಮಾಜದ ಬದಲಾವಣೆಗೂ ತನ್ನ ಕಾಣಿಕೆಯನ್ನು ನೀಡಿದೆ. ಕರ್ನಾಟಕದ ಗತಕಾಲದ ಕುರಿತಾದ ಈ ಹುಡುಕಾಟದಲ್ಲಿ ನಾವು ಮಾರ್ಕ್ಸ್ ವಾದದ ಅಮೂಲ್ಯ ಖಜಾನೆಗೆ ಋಣಿಯಾಗಿದ್ದೇವೆ.

ಇಂಡಿಯಾದ ಪೂರ್ವೇತಿಹಾಸವನ್ನು ಕೆಲವೇ ಕೆಲವು ಮಾರ್ಕ್ಸ್ ವಾದಿ ಇತಿಹಾಸಕಾರರು ಸಂಶೋಧಿಸಿದ್ದಾರೆ. ಸರಿಯಾದ ಇತಿಹಾಸದೊಂದಿಗೆ ಮಾರ್ಕ್ಸ್ ವಾದಿ ಮಾದರಿಯ ಇತಿಹಾಸ ಇಂಡಿಯಾದಲ್ಲಿ ಅರಳಿದೆ. ಕರ್ನಾಟಕದ ಪೂರ್ವೇತಿಹಾಸದ ಸಂಶೋಧನೆಯಲ್ಲಿ ಮಾರ್ಕ್ಸ್ ವಾದಿ ಮಾದರಿಯ ಅಳವಡಿಕೆಯಾಗಲಿ, ವಿಶ್ಲೇಷಣೆಯಾಗಲೀ ಇಲ್ಲಿಯವರೆಗೆ ನಡೆದಿದ್ದು ಕಂಡುಬರುವುದಿಲ್ಲ. ಈ ಸಂಪೂರ್ಣ ಅನುಪಸ್ಥಿತಿಯ ನಡುವೆಯೂ, ಎಲ್ಲಾ ಪುರಾತತ್ವಜ್ಞರು ಮತ್ತು ಇತಿಹಾಸಕಾರರು, ಪೂರ್ವೇತಿಹಾಸದ ಬಗ್ಗೆ ಬರೆಯುವಾಗ ಸಂಶೋಧನೆ ಮತ್ತು ವಿಶ್ಲೇಷಣೆಯಲ್ಲಿ ಒರಟು ಒರಟಾಗಿ ಮಾರ್ಕ್ಸ್ ವಾದಿ ಗ್ರಹಿಕೆಯನ್ನು ಸಾರ್ವತ್ರಿಕವಾಗಿ ಅಳವಡಿಸಿಕೊಂಡಿರುವ ಪ್ರವೃತ್ತಿಯನ್ನು ನಾವು ಕಾಣಬಹುದು. ಇದು ಇತಿಹಾಸ ಮತ್ತು ಇತಿಹಾಸಬರಹದ ಒಂದು ವೈರುಧ್ಯ. ಸಾಮಾಜಿಕ ಅಭಿವೃದ್ಧಿಯ ಮಾರ್ಕ್ಸ್ ಸಿದ್ಧಾಂತವನ್ನು ನಖಶಿಖಾಂತ ವಿರೋಧಿಸುವವರೂ ಕೂಡ ಮಾರ್ಕ್ಸ್ ವಾದದ ಕೆಲವು ನಿರ್ವಿವಾದಿತ ನೀತಿಗಳ ಮೇಲೆ ಅವಲಂಬಿತನಾಗಲೇಬೇಕಾಗಿದೆ. ಈ ವೈಚಿತ್ರ್ಯ ಹಾಗೂ ಅಪರಿಚಿತದಂತೆ ಕಾಣಬಹುದಾದ ಈ ಪ್ರಕ್ರಿಯೆಯ ಕಾರಣವನ್ನು ಪೂರ್ವೇತಿಹಾಸ ಮತ್ತು ಮಾನವ ಕುಲವು ವರ್ಗ ಸಮಾಜವಾಗಿ ಪರಿವರ್ತನೆಗೊಂಡಿದ್ದರ ಬಗ್ಗೆ ಏಂಗೆಲ್ಸ್ ಕೊಟ್ಟ ಪ್ರಸ್ತುತಿಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ: ಕಿರಾತಾವಸ್ಥೆ ಮತ್ತು ಅನಾಗರಿಕತೆಯಿಂದ ನಾಗರೀಕತೆಯ ಪ್ರಾರಂಭದೆಡೆಗೆ ನಡೆದ ಮಾನವಕುಲದ ವಿಕಾಸದ ಚಿತ್ರಣವನ್ನು ಮಾರ್ಗನ್ನಿನ ನಂತರ ನಾನು ಚಿತ್ರಿಸಿರುವುದರಲ್ಲೀಗ ಹೊಸ ಹಾಗೂ ನಿರ್ವಿವಾದದ ಅಂಶಗಳು ಶ್ರೀಮಂತವಾಗಿವೆ, ನಿರ್ವಿವಾದವೇಕೆಂದರೆ ಉತ್ಪಾದನೆಯಿಂದ ನೇರವಾಗಿ ಅವುಗಳನ್ನು ತೆಗೆದುಕೊಳ್ಳಲಾಗಿದೆ.....”1

ಮಾರ್ಕ್ಸ್ ವಾದದ ಮೂಲಾಧಾರ ಸಮಾಜದ ಅಧ್ಯಯನವನ್ನು ಶ್ರಮದ ಪ್ರಕ್ರಿಯೆಯಿಂದ, ಉತ್ಪಾದನೆಯಿಂದ ಅತ್ಯವಶ್ಯಕವಾಗಿ, ಮನುಷ್ಯನ ಎಲ್ಲಾ ಕಾರ್ಯಚಟುವಟಿಕೆಗಳಿಗಿದು ಅವಶ್ಯ ಮತ್ತು ಆಧಾ - ಪ್ರಾರಂಭಿಸಬೇಕು. ಉತ್ಪಾದನೆಗೆ ಮಾನವರು ಉಪಯೋಗಿಸುವ ಸಾಧನಗಳು ಮತ್ತು ರೀತಿಗಳು ಮನುಷ್ಯನ ಭೌತಿಕ ಜೀವನವನ್ನು ನಿರ್ಧರಿಸುತ್ತದೆ. ಉತ್ಪಾದನಾ ಸಾಧನಗಳಲ್ಲಿನ ಸುಧಾರಣೆಗಳು ಸಮಾಜದ ಭೌತಿಕ ಜೀವನವನ್ನು ಸುಧಾರಿಸುತ್ತದೆ ಮತ್ತು ನವೀನ ವಸ್ತುಗಳ ಉಪಯೋಗವು ಮಾನವನ ಸ್ಪೂರ್ತಿಯನ್ನು ತುಂಬಿಸಿ ಮತ್ತಷ್ಟು ಸಾಮಾಜಿಕ ಮುನ್ನಡೆಯ ಜಿಗಿತವನ್ನು ಜೀವಂತಗೊಳಿಸುತ್ತದೆ.

ಪೂರ್ವೇತಿಹಾಸದ ಪುರಾತತ್ವದ ಅಧ್ಯಯನವು, ಇಂತಹ ಉತ್ಪಾದನಾ ಸಾಧನಗಳನ್ನು ಸಂಗ್ರಹಿಸಿ ಅವುಗಳನ್ನು ವಿಭಾಗೀಕರಿಸುವ ವಿಜ್ಞಾನವಾಗಿದೆ. ಉತ್ಪಾದನಾ ಸಾಧನಗಳ ಗುಣಮಟ್ಟದ ಮೇಲೆ ಮಾನವ ಉತ್ಪಾದಿತ ವಸ್ತುಗಳ ಗುಣಮಟ್ಟವನ್ನು ಅಳೆಯಬಹುದಾಗಿದೆ ಮತ್ತಿವೆರಡರಿಂದ ಜನರ ಭೌತಿಕ ಮತ್ತು ಅಭೌತಿಕ ಜೀವನವನ್ನು ಪುನರ್ ನಿರ್ಮಿಸಬಹುದು. ನಂತರ ಆ ಪುನರ್ ನಿರ್ಮಾಣವನ್ನು ಪುರಾತನ, ಮಧ್ಯ ಹಾಗೂ ನವ ಶಿಲಾಯುಗವೆಂದು (Paleolithic, Mesolithic and Neolithic) ವರ್ಗೀಕರಿಸಬಹುದು. ನಂತರದಲ್ಲಿ ತಾಮ್ರ, ಕಂಚು ಹಾಗೂ ಕಬ್ಬಿಣದ ಯುಗಗಳು. ಇವುಗಳನ್ನು ಒಂದು ಕ್ರಮದಲ್ಲಿರಿಸಿದಾಗ, ಇದು ಬದಲಿಸಲಾಗದ ಐತಿಹಾಸಿಕ ವಾಸ್ತವವಾಗುತ್ತದೆ. ಪೂರ್ವೇತಿಹಾಸದ ಸಾಮಾಜಿಕ ಅಭಿವೃದ್ಧಿಯ ಸ್ವಯಂ ಸಾಕ್ಷ್ಯದ ಸಿದ್ಧಾಂತವಾಗುತ್ತದೆ. ಯಾವೊಬ್ಬ ಪುರಾತತ್ವ ಶಾಸ್ತ್ರಜ್ಞನೂ ಅಸಂಬದ್ಧವಾಗಿ ಲೋಹ ಯುಗದ ನಂತರ ಶಿಲಾಯುಗ ಬಂತೆಂದು ಹೇಳಲಾರ ಅಥವಾ ನವ ಶಿಲಾಯುಗವು ಪುರಾತನ ಶಿಲಾಯುಗಕ್ಕೂ ಮುಂಚೆ ಬಂತು ಎಂದಾಗಲೀ, ಕಬ್ಬಿಣ ತಾಮ್ರಕ್ಕಿಂತ ಮುಂಚೆ ಬಂತು ಎಂದಾಗಲೀ ಹೇಳಲಾರ. ಬದಲಿಗೆ ಅವನು ಅಥವಾ ಅವಳು ಈ ಮೇಲಿನ ಕ್ರಮದ ಮುಂದುವರಿಕೆಗೆ ಬದ್ಧರಾಗಿರುತ್ತಾರೆ. ಉತ್ಪಾದನೆ ಮತ್ತು ಉತ್ಪಾದನಾ ಸಾಧನಗಳ ಆಧಾರದಲ್ಲಿ ನಡೆಸುವ ಸಮಾಜದ ಅಧ್ಯಯನ ಅದರ ಸಂಸ್ಕೃತಿ ಮತ್ತು ಮೌಲ್ಯ, ಪದ್ಧತಿ ಮತ್ತು ಸೌಂದರ್ಯ ನಮ್ಮ ಇತಿಹಾಸದ ಭೌತಿಕವಾದಿ ವಿಶ್ಲೇಷಣೆಯಲ್ಲದೇ ಬೇರೇನೂ ಅಲ್ಲ. ಪುರಾತತ್ವಶಾಸ್ತ್ರ, ಪುರಾತನ ಕಾಲದ ವಸ್ತುಗಳ ಅವಶೇಷಗಳ ಆಧಾರದ ಮೇಲೆಯೇ ಕಲ್ಲಿನ ಚೂರಿನಿಂದ ಹಿಡಿದು ಮೂಳೆಯ ತುಂಡಿನವರೆಗೆ, ಮಡಿಕೆಯ ಚೂರುಗಳಿಂದ ಹಿಡಿದು ಚಿತ್ರಕಲೆಯವರೆಗೆ ಮತ್ತು ಚಪ್ಪಡಿಯಿಂದಿಡಿದು ಬೂದಿಯಗುಡ್ಡದವರೆಗೆ ಬದುಕುಳಿಯಬೇಕಾದ ಅವಶ್ಯಕತೆಯಿದೆ, ಬೇರೆ ಆಯ್ಕೆಗಳಿಲ್ಲ. ಕಲ್ಲು, ಮಣ್ಣು, ಧೃಢ, ಭೌತಿಕ ವಸ್ತುಗಳೆಂಬ ನಿರ್ವಿವಾದದ ತಳಹದಿಯ ಮೇಲೆಯೇ ಕಾರ್ಯನಿರ್ವಹಿಸಬೇಕಿದೆ.

ವರ್ಗ ಸಮಾಜದಲ್ಲಿ ಹುಟ್ಟಿದ ಪುರಾತತ್ವಶಾಸ್ತ್ರಜ್ಞರಲ್ಲಿನ ಆದರ್ಶವಾದವು ಎಲ್ಲೆಡೆಯಿಂದಲೂ ಈ ಸಾಕ್ಷ್ಯಗಳೆಂಬ ಪ್ರಾಪಂಚಿಕತೆಯಿಂದ ಬಂಧಿಸಲ್ಪಟ್ಟಿದೆ. ಪ್ರತಿಯೊಂದು ಕಲ್ಪನಾತ್ಮಕ ಹೇಳಿಕೆಯನ್ನು ತೊಡೆದುಹಾಕಬೇಕು ಮತ್ತು ಆಧ್ಯಾತ್ಮಿಕ ಮನಸ್ಸಿನ ಹಾರಾಟವನ್ನು ತಡೆಯಲೇಬೇಕು. ಪೂರ್ವೇತಿಹಾಸದ ಕಾಲದಲ್ಲಿ ನಡೆದ ಮನುಷ್ಯ ಕುಲದ ಪ್ರಗತಿ, ಒಂದು ಉತ್ಪಾದನಾ ವಿಧಾನವು ಮತ್ತೊಂದನ್ನು ಮೀರಿ ಬೆಳೆದಿದ್ದು, ಉಪಕರಣಗಳ ಆವಿಷ್ಕಾರ ನಡೆದದ್ದನ್ನು ತೀರ ಧಾರ್ಮಿಕ ಮನಸ್ಥಿತಿಯ ಪುರಾತತ್ವಶಾಸ್ತ್ರಜ್ಞರೂ ನಿರಾಕರಿಸಲಾಗುವುದಿಲ್ಲ.

 ಮಾರ್ಕ್ಸ್ ಸಿದ್ಧಾಂತಗಳ ಮತ್ತು ಯೋಚನೆಗಳ ಬಗ್ಗೆ ವಿಪರೀತವೆನಿಸುವಷ್ಟು ದ್ವೇಷ ಬೆಳೆಸಿಕೊಂಡಿರುವವರು, ಕೋಮುವಾದೀಕರಣಗೊಂಡವರೂ ಕೂಡ ಇದನ್ನು ನಿರಾಕರಿಸಲಾಗುವುದಿಲ್ಲ.

ಕಬ್ಬಿಣದ ಯುಗ ನಾಗರೀಕತೆಯಾಗಲಾರಂಭಿಸಿದಾಗ, ಪ್ರಾಚೀನ ಸಮತಾವಾದ ಇತಿಹಾಸವಾಗಿ ಮತ್ತು ಬುಡಕಟ್ಟುಗಳು ವರ್ಗಗಳಾಗಿ ಬಿರಿಯುವಾಗ, ಭೌತಿಕ ಸಾಕ್ಷ್ಯಧಾರಗಳನ್ನು ಸೂಕ್ಷ್ಮವಾಗಿ ಪರಿವೀಕ್ಷಿಸುವ ಮತ್ತು ದೊರೆತ ಉಪಕರಣಗಳನ್ನು ಐತಿಹಾಸಿಕ ಕ್ರಮದಲ್ಲೇ ಇಡಬಯಸುವ ಇದೇ ಪುರಾತತ್ವಶಾಸ್ತ್ರಜ್ಞರು, ತಾವು ಅನುಸರಿಸಿದ ಕಠಿಣ ವಿಧಾನವನ್ನು ಸುಲಭವಾಗಿ ಬಿಟ್ಟು ಬಿಡುತ್ತಾರೆ. ಉತ್ಪಾದನೆಯ ಪಾತ್ರವನ್ನಾಗಲೀ ಅಥವಾ ನೇಗಿಲನ್ನಾಗಲೀ ಅಥವಾ ಉಳುಮೆಯನ್ನಾಗಲೀ ಗಮನಿಸಲು ಮರೆತುಬಿಡುತ್ತಾರೆ. ಬುಡಕಟ್ಟುಗಳು ವರ್ಗಗಳಾಗಿ ಬೆಳೆಯುತ್ತಿರುವುದನ್ನು, ಮಾಟ ಮಂತ್ರಗಳು ಧರ್ಮಗಳಾಗಿ ರೂಪಾಂತರ ಹೊಂದುವುದನ್ನು ಗಮನಿಸುವುದೇ ಇಲ್ಲ. ಧರ್ಮದ ಹುಟ್ಟಿನೊಂದಿಗೆ, ಅದರಲ್ಲೂ ವೇದಾಂತದ ಹುಟ್ಟಿನೊಂದಿಗೆ ವರ್ಗ ಸಮಾಜ ಉದಯಿಸಿತು. ಊಳಿಗಮಾನ್ಯತೆ ಉದಯಿಸಿತು. ಇತಿಹಾಸಕಾರನಿಲ್ಲಿ ಆದರ್ಶವಾದಿಯಾಗಿಬಿಡುತ್ತಾನೆ. ಜಾತಿ, ವರ್ಗ, ಧರ್ಮ ಮತ್ತು ಪಿತೃಪ್ರಧಾನತೆಯು ಗ್ರಹಿಕಾ ಶಕ್ತಿಯ ಮೇಲೆ ಮೋಡದ ಪರದೆ ಮೂಡಿಸಿಬಿಡುತ್ತದೆ.

ಇಂಡಿಯಾದಂತೆಯೇ ಕರ್ನಾಟಕದಲ್ಲೂ ಇಲ್ಲಿಯವರೆಗೆ ಊಳಿಗಮಾನ್ಯತೆಯೊಂದಿಗೇ ಇತಿಹಾಸ ಅಸ್ತಿತ್ವ ಕಂಡುಕೊಂಡಿದೆ. ಅಸಂಖ್ಯಾತ ಇತಿಹಾಸಕಾರರು ಊಳಿಗಮಾನ್ಯತೆಯನ್ನು ಒಂದಲ್ಲಾ ಒಂದು ವಿಧದಲ್ಲಿ, ಒಂದಲ್ಲ ಒಂದು ಕೋನದಲ್ಲಿ ಎತ್ತಿ ಹಿಡಿಯುತ್ತಾರೆ. ಅದು ಹಿಂದೆ ಇದ್ದ ರೂಪದಲ್ಲಿ ಅಥವಾ ಈಗ ಕಾಣುವ ರೂಪದಲ್ಲಿ. ಅವರಲ್ಲನೇಕರಿಗೆ ಊಳಿಗಮಾನ್ಯತೆಯ ಬೇರುಗಳಿವೆ, ಅದನ್ನು ಸುಲಭವಾಗಿ ಕತ್ತರಿಸಿ ಹಾಕಲಾಗದು, ಅಥವಾ ಅವರದನ್ನು ಕತ್ತರಿಸಿ ಹಾಕಿದ್ದರೆ, ಪುಟ್ಟ ಬಂಡವಾಳಶಾಹಿಗಳಾಗಿದ್ದರೆ, ಇನ್ನೂ ಅವರ ಯೋಚನೆ ಮತ್ತು ವಿಶ್ಲೇಷಣೆಗಳನ್ನು ಊಳಿಗಮಾನ್ಯ ನುಡಿಗಟ್ಟುಗಳ ಧಿರಿಸುಗಳಲ್ಲಿ ಹೊದೆಸುತ್ತಿರುತ್ತಾರೆ. ದು ಕೋಮುವಾದಿ ಮತ್ತು ಪ್ರತಿಗಾಮಿ ಅಲ್ಲದೇ ಹೋದರೂ ವೈಭವೋಪೇತ ಬಡಾಯಿಯಾಗಿರುತ್ತದೆಇವರ ಪ್ರಕಾರ ಊಳಿಗಮಾನ್ಯತೆಯಿಂದ ತುಂಬಿರುವ ಸಮಾಜವೊಂದರಲ್ಲಿ ಹುಟ್ಟಿ ಬೆಳೆದು ಬದುಕಿರುವ ಹಾಗೂ ಸಾಮ್ರಾಜ್ಯಶಾಹಿಯಿಂದ ತುಳಿತಕ್ಕೊಳಗಾಗಿರುವ ಸಾಮಾಜಿಕ ಪ್ರಗತಿ ಮತ್ತು ಮನುಷ್ಯ ಪ್ರಗತಿಯೆಂಬುದು ಇಲ್ಲವೇ ಇಲ್ಲ. ಊಳಿಗಮಾನ್ಯತೆಯೆಂಬುದು ಅಂತ್ಯವೇ ಇಲ್ಲದ ಶಾಶ್ವತ ವ್ಯವಸ್ಥೆಯಾಗಿದೆ, ಸಾಮ್ರಾಜ್ಯಶಾಹಿ ಕೇಂದ್ರವು ಮನುಷ್ಯನ ಸಾಧನೆಗಿರುವ ಏಕೈಕ ಅಧೋಗತಿಯ ಕೇಂದ್ರವೆಂದು ತೋರುತ್ತದೆ. ಎಲ್ಲಾ ಇತಿಹಾಸ ಮತ್ತು ಕಾಲ ಸ್ಥಬ್ಧವಾಗಿಬಿಡುತ್ತದೆ. ಪೂರ್ವೇತಿಹಾಸದಲ್ಲಿ ಗರ್ಭಕಟ್ಟಿದ್ದ ಪ್ರಗತಿಯ ನಮೂನೆ ವಿಫಲವಾಗುತ್ತದೆ. ಅಭಿವೃದ್ಧಿಯ ಎಲ್ಲಾ ತರ್ಕಗಳೂ ಸ್ಥಗಿತಗೊಳ್ಳುತ್ತವೆ. ಉತ್ಪಾದನಾ ವಿಧಾನವಾಗಿ ಶೂದ್ರ ಹಿಡುವಳಿ ವ್ಯವಸ್ಥೆ (shudra holding system), ಊಳಿಗಮಾನ್ಯತೆ ಮತ್ತು ಬಂಡವಾಳಶಾಹಿತನವು ಯಶಸ್ವಿಯಾಗಿ ಮುನ್ನಡೆಯುತ್ತಿರುವುದನ್ನು ದಾಖಲಿಸಲು ವಿಫಲರಾಗುತ್ತಾರೆ. ಸಮಗ್ರ ವಿಶ್ಲೇಷಣೆ ಒದಗಿಸುವ ಮಾರ್ಕ್ಸ್ ವಾದದ ಸಮಾಜವಾದಿ ಪರ್ಯಾಯವನ್ನು ಗ್ರಹಿಸದೇ ಪಲಾಯನ ಮಾಡುತ್ತಾರೆ. ಮನುಷ್ಯ ಪ್ರಗತಿಯ ಮಾದರಿಯನ್ನು ಬುದ್ಧಿವಂತಿಕೆಯಿಂದ ಗ್ರಹಿಸುವ ಇದೇ ಪುರಾತತ್ವಶಾಸ್ತ್ರಜ್ಞರು, ಪೂರ್ವೇತಿಹಾಸದ ಬಗೆಗಿನ ಮಾರ್ಕ್ಸ್ ವಾದಿಗಳ ಗ್ರಹಿಕೆಯನ್ನು ಒರಟೊರಟು ರೀತಿಯಲ್ಲಿ ಅಜಾಗರೂಕತೆಯಿಂದ ಬೇರೆ ದಾರಿಯಿಲ್ಲದೇ ಒಪ್ಪಿಕೊಳ್ಳುತ್ತಾರೆ. ನಾಗರೀಕತೆಯ ನಂತರದ ಕಾಲಘಟ್ಟದ ಬಗೆಗಿನ ತಮ್ಮ ಬರವಣಿಗೆಗಳಿಂದ ಕಳಪೆ ಹಾಗೂ ರಾಜಿಕೋರ ಧೋರಣೆಯ ಇತಿಹಾಸಕಾರರಾಗಿಬಿಡುತ್ತಾರೆ. ಇದು ವರ್ಗ ಇತಿಹಾಸ ರಚನೆಯನ್ನೇ ಅಲ್ಲಗೆಳೆಯುವಂತಿದೆ ಕಲ್ಪನೆಯನ್ನು ಹಿಡಿದಿಡಲು, ಐತಿಹಾಸಿಕ ಮುನ್ನಡೆಯ ಗತಿಶೀಲತೆಯನ್ನು ಹಿಡಿದಿಡಲು ವಿಫಲವಾಗುತ್ತದೆ. ಅದು ಶಿಥಿಲವಾಗುತ್ತವೆ.  ರಾಜರು ಮತ್ತು ಸಾಮ್ರಾಜ್ಯಗಳ ಮೂರ್ಖ ಮಾಹಿತಿಗಳು, ಅವರ ಏಳು ಬೀಳಿನ ಚಕ್ರಗಳು ಮತ್ತವುಗಳ ಪುನರಾವರ್ತಿತ ವಿವರಗಳು ಬೇಸರವನ್ನೂ ಮೂಡಿಸುತ್ತದೆ

ಈ ಕಾರಣಗಳಿಂದಾಗಿ ಇಂಡಿಯಾದ ಮಾರ್ಕ್ಸ್ ವಾದಿ ಇತಿಹಾಸ ರಚನೆಯು ವರ್ಗ ಸಮಾಜದ ಪ್ರಾರಂಭದೊಂದಿಗೆ ಶುರುವಾಯಿತು ಎಂದರದು ಅಚ್ಚರಿಯ ವಿಷಯವಾಗಲಾರದು. ಹಿಂದಿದ್ದ ಮತ್ತು ಈಗಿರುವ ವರ್ಗ ಹೋರಾಟ, ಹೊಸದರ ಉದಯ ಮತ್ತು ಹಳೆಯದರ ನಾಶ, ಸಮಾಜವು ವಿವಿಧ ಯಶಸ್ವಿ ಉತ್ಪಾದನಾ ವಿಧಾನಗಳಿಗೆ ಸತತವಾಗಿ ಮುನ್ನಡೆಯುತ್ತಿರುವುದು ಇಂಡಿಯಾದ ಮಾರ್ಕ್ಸ್ ವಾದಿ ಇತಿಹಾಸಕಾರರ ಗಮನ ಆ ಕಡೆ ಹರಿಯುವಂತೆ ಮಾಡಿದೆ. ಇತಿಹಾಸವು ಶೋಷಕ ಮತ್ತು ಶೋಷಿತ ವರ್ಗವಾಗಿದ್ದನ್ನು ವಿಶ್ಲೇಷಿಸುತ್ತಾ, ಮನೋನಿಷ್ಠತೆಯಿಂದಲ್ಲದೇ ಉದ್ದೇಶಿತ ಪ್ರಕ್ರಿಯೆಯನ್ನು ವಸ್ತುನಿಷ್ಠವಾಗಿ ಗ್ರಹಿಸುತ್ತದೆ. ಇಂಡಿಯಾದ ಮಾರ್ಕ್ಸ್ ವಾದಿ ಇತಿಹಾಸ ರಚನೆಯು ಎಲ್ಲಾ ಛಾಯೆಗಳ ಆದರ್ಶವಾದಿ (ಬಂಡವಾಳಶಾಹಿ ಅಥವಾ ಊಳಿಗಮಾನ್ಯ) ಇತಿಹಾಸ ರಚನೆಗಳೊಂದಿಗೆ ಚರ್ಚೆಗಿಳಿಯುತ್ತದೆ. ಮಾನವ ಸಮಾಜ ಶೋಷಿತ ಮತ್ತು ಶೋಷಕ ವರ್ಗವಾಗಿ ಭಾಗವಾದ ಸಮಯದಿಂದಲೂ ಆರಂಭವಾಗುತ್ತದೆ.  ಸಿದ್ಧಾಂತ ಮತ್ತು ಧರ್ಮ, ಜಾತಿ ಮತ್ತು ಪಿತೃಪ್ರದಾನತೆಗಳು ಮಾನವೀಯತೆಗೆ ಕೊಡುಗೆ ನೀಡುತ್ತಲೇ ಕುರೂಪಗೊಳಿಸಿದ್ದರ ಬಗ್ಗೆ ಹಾಗೂ ಇತಿಹಾಸ ನಿರ್ಮಿಸುವುದಕ್ಕಿದ್ದ ನಿಜವಾದ ಶಕ್ತಿಗಳ ಬಗ್ಗೆ ಚರ್ಚೆಗೆ ಇಳಿಯುತ್ತದೆ.

 ನಾವು ತುಂಬ ಹೆಚ್ಚು ಅವಲಂಬಿತರಾಗುವುದು ಡಿ.ಡಿ.ಕೋಸಂಬಿ ಹಾಗೂ ಆರ್.ಎಸ್.ಶರ್ಮ ಎಂಬ ಇಂಡಿಯಾದ ಮೇರು ಇತಿಹಾಸಕಾರರ ಸಂಶೋಧನೆಗಳ ಮೇಲೆ. ಅವರ ಪರಂಪರೆಯಲ್ಲೇ ನಡೆದವರು ಇನ್ನೂ ಹಲವರಿದ್ದಾರೆ. ಆರ್.ಎಸ್.ಶರ್ಮ ಕಾರ್ಯ ನಿರ್ವಹಿಸುತ್ತಿದ್ದ ಪಾಟ್ನಾ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಬೋಧಕ ವರ್ಗದ ಬಗ್ಗೆ ಇಲ್ಲಿ ಹೇಳಲೇಬೇಕು. ಆರ್.ಎಸ್.ಶರ್ಮ ಮೊದಲ ವರ್ಗ ಸಮಾಜದ ಬಗ್ಗೆ ಮತ್ತು ಇಂಡಿಯಾ ಊಳಿಗಮಾನ್ಯತೆ ರಚನೆಯಾದ ಬಗ್ಗೆ ಪರಿಣಿತಿ ಹೊಂದಿದ್ದರೆ, ಪಾಟ್ನಾನ ಇತಿಹಾಸಕಾರರ ಒಂದು ತಂಡ ಇಪ್ಪತ್ತನೇ ಶತಮಾನದವರೆಗೂ ಕರ್ನಾಟಕದಲ್ಲಿ ರೂಪುಗೊಂಡ ಊಳಿಗಮಾನ್ಯತೆ ಬಗ್ಗೆ ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ವಿದ್ವಾಂಸರಲ್ಲಿ ನಾವು ಆರ್.ಎನ್.ನಂದಿಯವರ ಬಗ್ಗೆ ಹೇಳಲೇಬೇಕು; ನಂದಿಯವರ ಕರ್ನಾಟಕದ ಬಗೆಗಿನ ನಿರ್ದಿಷ್ಟವಾದ ಬರಹಗಳು ಮತ್ತು ಪರ್ಯಾಯ ದ್ವೀಪ ಪ್ರದೇಶ (peninsular India) ಇಂಡಿಯಾದ ಬಗೆಗಿನ ಬರಹಗಳು ನಮ್ಮ ಇತಿಹಾಸವನ್ನು ಅರಿಯುವುದಕ್ಕಿರುವ ಬಹುಮುಖ್ಯ ತಳಹದಿ.

ಆದರೆ ಕರ್ನಾಟಕದ ಬಗೆಗಿನ ಮಾರ್ಕ್ಸ್ ವಾದಿ ಇತಿಹಾಸ ರಚನೆಯು ಊಳಿಗಮಾನ್ಯತೆಯ ಉಗಮದೊಂದಿಗೆ ಪ್ರಾರಂಭವಾಗಿ ಕರ್ನಾಟಕ ಮಧ್ಯಯುಗೀಯ ಕಾಲಕ್ಕೆ ಪ್ರವೇಶಿಸುವುದರೊಂದಿಗೆ ಮುಗಿದುಹೋಗುತ್ತದೆ. ಇದಕ್ಕೆ ಒಂದು ಅಪವಾದವೆಂದರೆ ಮೈಸೂರು ವಿಶ್ವವಿದ್ಯಾನಿಲಯದ ಕೆ.ಎಸ್.ಶಿವಣ್ಣ; ಅವರು ತಮ್ಮ ವಿಶ್ಲೇಷಣೆಗೆ ಮಾರ್ಕ್ಸ್ ವಾದಿ ಪರಿಕಲ್ಪನೆಗಳನ್ನೇ ಬಳಸಿಕೊಳ್ಳುತ್ತಾರೆ. ಶಿವಣ್ಣನವರ ರೀತಿಯಲ್ಲಿಯೇ ವಸಾಹತು ಮತ್ತು ಪೂರ್ವವಸಾಹತು ಇತಿಹಾಸವನ್ನು ಮಾರ್ಕ್ಸ್ ವಾದದ ಮೂಲಕ ವಿಶ್ಲೇಷಿಸುವ ಕೆಲವು ವಿದ್ವಾಂಸರು ಮಂಗಳೂರು, ಕರ್ನಾಟಕ, ಕುವೆಂಪು ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಇದ್ದಾರೆ.

ಈ ಪ್ರಯತ್ನಗಳ ಹೊರತಾಗಿಯೂ, ಕರ್ನಾಟಕದ ಇತಿಹಾಸ ರಚನೆಯು; ಅವುಗಳಲ್ಲಿ ಕೆಲವು ಕಠಿಣವಾದವುಗಳು, ಮಾರ್ಕ್ಸ್ ವಾದಿಯೇತರ ಯೋಚನಾಲಹರಿಯಿಂದಲೇ ರಚಿಸಲ್ಪಟ್ಟಿದೆ. ಆ ಲೇಖಕರಿಂದಲೂ ನಾವು ಬಹಳಷ್ಟನ್ನು ಪಡೆದುಕೊಂಡಿದ್ದೇವೆ, ಅವರಲ್ಲಿ ಅನೇಕರು ತುಂಬ ಶ್ರಮಬಿದ್ದು ಅದ್ಭುತವೆನ್ನಿಸುವಂತಹ ಕೆಲಸಗಳನ್ನು ಮಾಡಿ ತಮ್ಮ ಲೇಖನವನ್ನು ಹೊಸ ಬೆಳಕಿನಡಿ ಇಟ್ಟಿದ್ದಾರೆ.

ಈ ಮೇಲುಗೈಯಲ್ಲಿರುವ ಮಾರ್ಕ್ಸ್ ವಾದಿಯೇತರ ಸಂಪ್ರದಾಯದಲ್ಲಿ ಉದಾರವಾದಿ ಮತ್ತು ಊಳಿಗಮಾನ್ಯ ಯೋಚನಾಲಹರಿಗಳನ್ನು ಬೇರ್ಪಡಿಸುವ ಒಂದು ತೆಳುವಾದ ಗೆರೆಯನ್ನು ಕಾಣಬಹುದು. ಉದಾರವಾದಿ ಸಂಪ್ರದಾಯವು ತನ್ನ ಸ್ವತಂತ್ರತೆಯನ್ನು ಸ್ಥಾಪಿಸಿಕೊಳ್ಳಲು ಹಿಂಜರಿಯುತ್ತದೆ, ಅದು ಸಾಗರೋತ್ತರ ಭೌದ್ದಿಕವಲಯದ್ದಾದರೆ ಮತ್ತೂ ಹೆಚ್ಚು ಹಿಂಜರಿಯುತ್ತದೆ. ಬಹಳಷ್ಟು ಸಲ ಈ ಉದಾರವಾದಿ ಚಿಂತನಾ ಕ್ರಮಗಳು ಊಳಿಗಮಾನ್ಯ ತಳಹದಿಯನ್ನೇ ಅವಲಂಬಿಸುತ್ತವೆ. ಈ ಊಳಿಗಮಾನ್ಯ ವ್ಯಾಖ್ಯಾನಗಳು ತನ್ನದೇ ಆದ ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ. ಶಾತವಾಹನರಿಂದ ಪ್ರಾರಂಭವಾಗಿ, ವಿಶೇಷವಾಗಿ ಕದಂಬರು ಮತ್ತು ಗಂಗರ ವಿಷಯಕ್ಕೆ ಬಂದಾಗ, ರವಷ್ಟು ಕನ್ನಡ ದುರಭಿಮಾನವನ್ನು ವ್ಯಕ್ತಪಡಿಸಲಾರಂಭಿಸುತ್ತದೆ ಈ ರೀತಿಯ ಇತಿಹಾಸಕಾರರಲ್ಲಿ ಸಾಕಷ್ಟು ಜನರು ಸಾಕಷ್ಟು ಹೆಚ್ಚು ಕಲ್ಪನೆಯಿಂದಲೇ ಪಠ್ಯ ಪುಸ್ತಕವನ್ನು ಬರೆದುಬಿಟ್ಟಿದ್ದಾರೆ. ಆದರೆ ಇಂಡಿಯಾಕ್ಕೆ ಇಸ್ಲಾಮಿನ ಆಗಮನದೊಂದಿಗೆ, ಈ ಊಳಿಗಮಾನ್ಯ ಮನಸ್ಥಿತಿಯು ಕೋಮುವಾದವಾಗಿ ಬದಲಾಯಿತು.  ಆ ರೀತಿಯ ಸೃಜನಶೀಲತೆಗಳನ್ನು ನಾವು ವಿಜಯನಗರದ ಕುರಿತಾದ ಬರಹಗಳಲ್ಲೂ ನೋಡಬಹುದು. ಈ ವಿದ್ವಾಂಸರುಗಳು ಬರೆದ ಪಠ್ಯಪುಸ್ತಕಗಳಿಂದ ಹಿಡಿದು ಗೆಝೆಟಿಯರುಗಳವರೆಗೆ, ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯಿಂದ ಹಿಡಿದು ಮಾಧ್ಯಮಗಳ ಜನಪ್ರಿಯ ಲೇಖನಗಳವರೆಗೆ ಇತಿಹಾಸ ಬರಹಗಳ ಹೃದಯದುದ್ದಕ್ಕೂ ಕೋಮುವಾದಿ ವ್ರಣ ಹಬ್ಬುತ್ತಲೇ ಸಾಗಿತು.

ವಿಜಯನಗರದ ಪತನದೊಂದಿಗೆ, ಇತಿಹಾಸ ರಚನೆಯು ಬರೋಬ್ಬರಿ ಎರಡು ಶತಮಾನಗಳ ಕಾಲ ಮರಣ ಮೌನಕ್ಕೆ ಶರಣಾಯಿತು. ಬ್ರಾಹ್ಮಣ ವೃತವನ್ನು ಪ್ರಾಕ್ಸಿ ಫರ್ನಾಂಡಿಸ್, ಶೇಕ್ ಅಲಿ, ಸಿ.ಕೆ ಕರೀಮ್, ನಿಖಿಲೆಸ್ ಗುಹಾ, ಬಂಗಾಲದ ಅಶೋಕ್ ಸೇನ್, ಬ್ರಿಟೀಷ್ ವಸಾಹತು ಇತಿಹಾಸಕಾರರು ಮುರಿದು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಾಲದ ಬಗ್ಗೆ ಬರೆದರು. ಹೊಸ ತಲೆಮಾರಿನ ಇತಿಹಾಸಕಾರರು ಟಿಪ್ಪುಸುಲ್ತಾನರ ವಧೆಯೊಂದಿಗೆ, ಮೈಸೂರಿನ ಆಕ್ರಮಣದೊಂದಿಗೆ ಮತ್ತು ವಸಾಹತುಶಾಹಿಯು ಊಳಿಗಮಾನ್ಯತೆಯ ಜೊತೆಗೂಡಿದ ನಂತರ, ಕೈಗೊಂಬೆ ರಾಜನನ್ನು ಪೀಠದ ಮೇಲೆ ಕೂರಿಸಿದ ನಂತರ ಮತ್ತೆ ಜೀವ ಪಡೆದರು. ತಮ್ಮ ಸುದೀರ್ಘ ನಿದ್ರೆಯಿಂದ ಎಚ್ಚೆತ್ತರು ಮತ್ತು ತಮ್ಮ ದೀರ್ಘಾವಧಿ ಮೌನಕ್ಕೆ ಪರಿಹಾರವೆಂಬಂತೆ, ಮೈಸೂರು ಆಸ್ಥಾನದ ಸೇವೆಯಲ್ಲಿದ್ದ ಹಾಗೂ ಅವರಿಂದ ಪ್ರಾಯೋಜಿತಗೊಂಡಿದ್ದ ಈ ಇತಿಹಾಸಕಾರರು, ಸಂಪುಟಗಟ್ಟಲೇ ಬರೆದರು. ವಸಾಹತುಶಾಹಿ ಊಳಿಗಮಾನ್ಯತೆಯ ಆಳ್ವಿಕೆಯನ್ನು ಕೊಂಡಾಡಿದ ಈ ಪುಟಗಳು ಆಧುನಿಕ ಕರ್ನಾಟಕದ ಇತಿಹಾಸದ ಅಡಿಪಾಯವಾಗಿ ಕಾರ್ಯನಿರ್ವಹಿಸಿತು. ಮೈಸೂರು ಅರಮನೆಯಿಂದ ಒಪ್ಪಿಸುವ ಈ ಇತಿಹಾಸವು ನಮ್ಮನ್ನು ವಸಾಹತು ಕಾಲಕ್ಕೆ ಕೊಂಡೊಯ್ಯುತ್ತದೆಯಾ? ಕರ್ನಾಟಕ ಇತಿಹಾಸದ ಮುಂದಿನ ಸಂಪುಟದಲ್ಲಿ ಈ ಪ್ರಶ್ನೆಯನ್ನು ಚರ್ಚಿಸಬೇಕೆಂದಿದ್ದೇವೆ.

ಅದೇನೇ ಇರಲಿ ಈ ಇತಿಹಾಸಕಾರರೆಲ್ಲರೂ ನಮಗೆ ಅಗಾಧ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅವರ ರಚನೆಯಲ್ಲಿ ಬಣ್ಣ ತುಂಬಿದ ಅಥವಾ ದೂರದೃಷ್ಟಿಯ ಕೊರತೆಯ ಹೊರತಾಗಿಯೂ ಅವರು ತಳಮಟ್ಟದಲ್ಲಿ ನಡೆಸಿದ ಕೆಲಸಗಳನ್ನು ಉತ್ತಮ ಮೂಲವನ್ನು ನಾವು ಆದರಿಸಿದ್ದೇವೆ. ನಾವು ಈ ಪುಸ್ತಕವನ್ನು ರಚಿಸಿದ ವಿಶೇಷ ಪರಿಸ್ಥಿತಿಗಳ ಕಾರಣದಿಂದಾಗಿ ಶಾಸನಗಳನ್ನು ನೇರವಾಗಿ ಉಪಯೋಗಿಸುವುದು ಸಾಧ್ಯವಾಗದ ಕಾರಣದಿಂದಾಗಿ ದ್ವಿತೀಯ ಮೂಲಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಹಾಗಿದ್ದಾಗ್ಯೂ, ಈ ದ್ವಿತೀಯ ಮೂಲಗಳಲ್ಲಿರುವ ಶ್ರೀಮಂತಿಕೆಯು ಪ್ರಾಥಮಿಕ ಮೂಲಗಳಾದ ಶಾಸನಗಳನ್ನು ಉಪಯೋಗಿಸದೇ ಇದ್ದುದರಿಂದಾದ ಕೊರತೆಯನ್ನು ನೀಗಿಸಿದೆ. ಹಾಗಾಗಿ, ನಾವು ತೆಗೆದುಕೊಂಡಿರುವ ತೀರ್ಮಾನಗಳನ್ನು ಅದು ಯಾವುದೇ ರೀತಿಯಿಂದಲೂ ವಿಕಲಗೊಳಿಸುವುದಿಲ್ಲ.

ಐತಿಹಾಸಿಕ ಮತ್ತು ಪುರಾತತ್ವ ಮೂಲಗಳ ಹೊರತಾಗಿ ನಾವು ಮಾನವಶಾಸ್ತ್ರೀಯ ಸಮೀಕ್ಷೆಗಳನ್ನು ಅವಲಂಬಿಸಿದ್ದೇವೆ. ಪುರಾತತ್ವ ಅಸ್ಥಿಪಂಜರಕ್ಕೆ ಮಾನವಶಾಸ್ತ್ರೀಯ ವಿವರಗಳು ಮಾಂಸ ತುಂಬುತ್ತದೆ. ಈ ಪದ್ಧತಿಯನ್ನು ತುಂಬ ಸಮರ್ಥವಾಗಿ ಉಪಯೋಗಿಸಿದ್ದು ಡಿ.ಡಿ. ಕೋಸಂಬಿ. ಸಮಕಾಲೀನ ಮಾನವಶಾಸ್ತ್ರೀಯ ವಿವರಗಳನ್ನು ಉಪಯೋಗಿಸಿಕೊಂಡು ಇತಿಹಾಸದಲ್ಲಿನ ಬಿರುಕುಗಳನ್ನು ಎಚ್ಚರಿಕೆಯಿಂದ ತುಂಬುವ ಅದ್ಭುತ ಕೆಲಸ ಮಾಡಿದ್ದು ದೇಬಿಪ್ರಸಾದ್ ಚಟ್ಟೋಪಾಧ್ಯಾಯ.

ನಾವು ಈಗಾಗಲೇ ಹೇಳಿದಂತೆ, ಕರ್ನಾಟಕದ ಬಗೆಗಿನ ಮಾರ್ಕ್ಸ್ ವಾದಿ ಇತಿಹಾಸ ರಚನೆಯು ತುಂಬಾ ಕಡಿಮೆಯಿದೆ, ಈ ಗ್ರಂಥ ಆ ಕೊರತೆಯನ್ನು ತುಂಬುವ ಸೇತುವೆಯಾಗುತ್ತದೆ. ಕನ್ನಡ, ತುಳುವ ಮತ್ತು ಕೊಡವ ರಾಷ್ಟ್ರೀಯತೆಯ ಹೃದಯ ಭಾಗ ಕರ್ನಾಟಕ. ಜೋಸೆಫ್ ಸ್ಟಾಲಿನ್ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸುವಾಗಐತಿಹಾಸಿಕವಾಗಿ ವಿಕಸನ ಹೊಂದಿದ ಒಂದು ಸುಸ್ಥಿರ ಸಮುದಾಯ2 ಎಂದು ಹೇಳುತ್ತಾರೆ. ಕರ್ನಾಟಕದ ರಾಷ್ಟ್ರೀಯತೆಯ ಅಧ್ಯಯನಕ್ಕೂ ಈ ಮಾರ್ಕ್ಸ್ ವಾದಿ ಇತಿಹಾಸ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಕರ್ನಾಟಕದಲ್ಲಿ ವಿಕಸನಗೊಂಡ ಮೂರು ರಾಷ್ಟ್ರೀಯತೆಗಳಲ್ಲಿ, ಕನ್ನಡ ರಾಷ್ಟ್ರೀಯತೆಯ ಬಗ್ಗೆ ನಿರ್ದಿಷ್ಟವಾಗಿ ಗಮನ ಕೇಂದ್ರೀಕರಿಸಿ, ಕರ್ನಾಟಕದ ಇತಿಹಾಸವು ಇಂಡಿಯಾದರಾಷ್ಟ್ರೀಯಇತಿಹಾಸದೊಳಗಿನಪ್ರಾದೇಶಿಕಆವೃತ್ತಿಯಾಗಷ್ಟೇ ನೋಡದೆ, ರಾಷ್ಟ್ರೀಯತೆಯ ಹಾದಿಯ ಜೊತೆಯಿರುವ ರಾಜಕೀಯ ಮತ್ತು ಐತಿಹಾಸಿಕ ಶೋಧನೆಯ ಮಹತ್ವವನ್ನು ಅರಿಯಲು ಮಾರ್ಕ್ಸ್ ವಾದಿ ಇತಿಹಾಸ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಇಂಡಿಯಾದ ಪ್ರಭುತ್ವದ ಉಗಮಕ್ಕೂ ಹಲವು ಶತಮಾನಗಳು, ಹಲವು ಸಹಸ್ರಾರು ವರುಷಗಳಿಗೂ ಮುಂಚೆಯೇ ದೇಶದಲ್ಲಿ ಹಲವು ರಾಷ್ಟ್ರೀಯತೆಗಳು ಇದ್ದಿದ್ದು ಸತ್ಯವೇ ಅಲ್ಲವೇ? ಇಂಡಿಯಾ ಉಪಖಂಡದ ಸಾಮಾನ್ಯ ಗುಣ ಲಕ್ಷಣಗಳ ಜೊತೆಗೆ, ಪ್ರತಿಯೊಂದು ರಾಷ್ಟ್ರೀಯತೆಯ ಐತಿಹಾಸಿಕ ಬೆಳವಣಿಗೆಯನ್ನು ಮಾರ್ಕ್ಸ್ ವಾದಿ ಇತಿಹಾಸ ವಿಧಾನದಲ್ಲಿ ಅಭ್ಯಸಿಸುವುದು ಇಂಡಿಯಾದ ಬಗೆಗಿನ ನಮ್ಮ ಗ್ರಹಿಕೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಇಂಡಿಯಾದ ಸಮಾಜದ ಈ ಸುಭದ್ರ ಗುಣಲಕ್ಷಣಗಳ ಬಗ್ಗೆ ಪ್ರಸ್ತಾಪಿಸುವುದರಿಂದ ಮಾರ್ಕ್ಸ್ ವಾದಿ ಇತಿಹಾಸ ವಿಧಾನವು ಹೊಸ ಎತ್ತರಕ್ಕೆ ತಲುಪುತ್ತದೆ.

ಲಭ್ಯವಿರುವ ಈ ಶ್ರೀಮಂತ ಮೂಲಗಳಿಗೆ ಮಾರ್ಕ್ಸ್ ವಾದಿ ವಿಧಾನವನ್ನು ಅಳವಡಿಸುವ ಮೂಲಕ, ನಾವು ನಮ್ಮ ಇತಿಹಾಸವನ್ನು ಪುನರ್ ರಚಿಸುವ ಪ್ರಯತ್ನ ಮಾಡಿದ್ದೇವೆ, ಜನರ ಜೀವನ ಮತ್ತು ಇತಿಹಾಸದ ರೂಪುಗೊಳ್ಳುವಿಕೆಯಲ್ಲಿ ಅವರ ಪಾತ್ರದ ಬಗ್ಗೆ ನಿರ್ದಿಷ್ಟವಾಗಿ ಗಮನಹರಿಸಿದ್ದೇವೆ.

ಶಿಲಾಯುಗದಿಂದ ವಸಾಹತುಶಾಹಿ ಆಕ್ರಮಣದವರೆಗಿನ ಕರ್ನಾಟಕದ ಇತಿಹಾಸವನ್ನು ಮೂರು ಪ್ರಮುಖ ಉತ್ಪಾದನಾ ವಿದಾನವಾಗಿ ವಿಭಾಗಿಸಬಹುದು:

  1. ಆದಿಮ ಸಮತಾವಾದ (40,000 ಬಿ.ಪಿ ಕ್ರಿಸ್ತಪೂರ್ವ 250),
  2. ಶೂದ್ರರ ಹಿಡುವಳಿ ವ್ಯವಸ್ಥೆ (ಕ್ರಿಸ್ತಪೂರ್ವ 250 ಕ್ರಿಸ್ತಶಕ 240), ಮತ್ತು
  3. ಊಳಿಗಮಾನ್ಯತೆ (ನಾಲ್ಕರಿಂದ ಹದಿನೆಂಟನೆಯ ಶತಮಾನದವರೆಗೆ).

ಈ ಪ್ರತಿ ವಿಭಾಗವನ್ನೂ ನಾವು ಹಲವು ನಿರ್ದಿಷ್ಟ ಹಂತಗಳಾಗಿ ವಿಭಜಿಸಿದ್ದೇವೆ. ಆದಿಮ ಸಮತಾವಾದದಲ್ಲಿ ಹಳೆಯ ಮತ್ತು ಮಧ್ಯಕಾಲೀನ ಶಿಲಾಯುಗದ ಬೇಟೆ ಆಹಾರ ಸಂಗ್ರಹಿಸುವ ಪದ್ಧತಿಯ ಕಾಲ; ನಂತರ ನವ ಶಿಲಾ ಯುಗ ಹಾಗೂ ಲೋಹ ಯುಗದ ಪ್ರಾಚೀನ ಕೃಷಿ ಪದ್ಧತಿಯ ಕಾಲ. ಲೋಹ ಯುಗದಲ್ಲಿ ಆದಿಮ ಸಮತಾವಾದದೊಳಗಿನಿಂದಲೇ ವರ್ಗ ಶಕ್ತಿಗಳನ್ನು ಸೃಷ್ಠಿಸುವ ಅಲ್ಪಜನಾಧಿಪತ್ಯದ ಉಗಮವನ್ನೂ ಮತ್ತಿದು ಆದಿವಾಸಿ ಪದ್ಧತಿಯನ್ನು ಕಿತ್ತೊಗೆಯಲು ದಾರಿ ಮಾಡಿದ್ದನ್ನೂ ನಾವು ಕಾಣುತ್ತೇವೆ.

ಈ ರೀತಿಯಾಗಿ ಹುಟ್ಟಿದ ಶೂದ್ರ ದಾಸ್ಯತ್ವವು ಅರ್ಧ ಸಹಸ್ರಮಾನದವರೆಗೂ ಮುಂದುವರೆಯಿತು; ನಾಲ್ಕನೇ ಶತಮಾನದಲ್ಲಿ ಉದಯಿಸಿದ ಊಳಿಗಮಾನ್ಯತೆಯಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿಕೊಂಡಿತು.

ಊಳಿಗಮಾನ್ಯ ಉತ್ಪಾದನಾ ಪದ್ಧತಿಯ ಕಾಲವನ್ನು ಮೂರು ನಿರ್ದಿಷ್ಟ ಹಂತಗಳನ್ನಾಗಿ ವಿಭಜಿಸಬಹುದು:

  1. ಪ್ರಾರಂಭಿಕ ಊಳಿಗಮಾನ್ಯತೆ (ನಾಲ್ಕರಿಂದ ಹನ್ನೆರಡನೇ ಶತಮಾನ),
  2. ಮಧ್ಯಕಾಲೀನ ಊಳಿಗಮಾನ್ಯತೆ (ಹದಿಮೂರರಿಂದ ಹದಿನೇಳನೇ ಶತಮಾನ), ಹಾಗೂ
  3. ಕೊನೆಯ ಹಂತದ ಊಳಿಗಮಾನ್ಯತೆ (ಹದಿನೇಳು ಮತ್ತು ಹದಿನೆಂಟನೇ ಶತಮಾನ).

ಊಳಿಗಮಾನ್ಯ ಸಂಬಂಧಗಳು ಮತ್ತು ವಸ್ತುಗಳು ಊಳಿಗಮಾನ್ಯತೆಯ ಕಾಲದುದ್ದಕ್ಕೂ ಪ್ರಾಬಲ್ಯ ಸ್ಥಾಪಿಸಿದರೆ; ಮೊದಲ ಹಂತದಲ್ಲಿ ಸರಕು ಉತ್ಪಾದನೆಯು ಸಂಪೂರ್ಣವಾಗಿ ಇಲ್ಲವಾಗಿತ್ತು; ಎರಡನೆಯ ಹಂತದಲ್ಲಿ ಸರಕು ಉತ್ಪಾದನೆ ಪ್ರಾರಂಭವಾಯಿತು ಮತ್ತು ಮೂರನೇ ಹಂತದಲ್ಲಿ ಸರಕು ಉತ್ಪಾದನೆಯು ಮತ್ತಷ್ಟು ಹರಡಿತು, ವರ್ತಕ ವರ್ಗದ ಉಗಮವಾಗುವುದರೊಂದಿಗೆ ವರ್ತಕ ವರ್ಗವು ಊಳಿಗಮಾನ್ಯ ವರ್ಗದೊಂದಿಗೆ ಪ್ರಭುತ್ವ ಅಧಿಕಾರವನ್ನು ಹಂಚಿಕೊಂಡ ಪರಿಣಾಮ ಊಳಿಗಮಾನ್ಯ ವರ್ಗದ ಒಂದು ಪದರ ಇಲ್ಲವಾಯಿತು; ಈ ಅರೆಊಳಿಗಮಾನ್ಯ ಆಳ್ವಿಕೆಯ ಸಮಯದಲ್ಲೇ ಕರ್ನಾಟಕವು ವಸಾಹತು ಆಕ್ರಮಣಕ್ಕೆ ದೊಡ್ಡ ಮಟ್ಟದ ಪ್ರತಿರೋಧವನ್ನು ಒಡ್ಡಿದ್ದು.

ಈ ವಿಭಜನಾ ನಿದರ್ಶನಗಳು ಇತಿಹಾಸದ ಸಾಮಾನ್ಯ ಚಲನೆಯನ್ನು ಹಿಂಬಾಲಿಸುತ್ತದೆ. ಈ ಪ್ರತಿಯೊಂದು ವಿಧಾನದ ಮತ್ತು ಕಾಲದ ಗುಣವೈಶಿಷ್ಟ್ಯತೆಗಳನ್ನು ಮತ್ತು ಅವುಗಳಲ್ಲಿನ ಹಂತಗಳನ್ನು ಚರ್ಚಿಸುವಾಗ ಇಡೀ ಉಪಖಂಡದೊಂದಿಗೆ ಹಾಗೂ ಇಡೀ ಪ್ರಪಂಚದೊಂದಿಗೆ ಹೋಲಿಕೆ ಮಾಡಿ ನೋಡುವುದರೆಡೆಗೆ ನಾವು ಗಮನ ಹರಿಸಿದ್ದೇವೆ. ಇತಿಹಾಸದ ಸಾರ್ವತ್ರಿಕ ಪಥವನ್ನಷ್ಟೇ ಇದು ಗುರುತಿಸುತ್ತದೆ. ಪೂರ್ವವೋ ಪಶ್ಚಿಮವೋ, ಇತಿಹಾಸದಲ್ಲೊಂದು ಆರೋಹಣ ಸ್ವರಮೇಳವಿದೆ. ಆದರೆ ವಸಾಹತುವಾದದ ವಿಷಯಕ್ಕೆ ಬಂದರೆ, ಯುರೋಪು ಮತ್ತು ಜಪಾನಿನ ಜನತೆ ಮಾಡಿದಂತೆ - ಕರ್ನಾಟಕವು (ನಮ್ಮ ನಂಬಿಕೆಯಂತೆ ಇಂಡಿಯಾವೂ ಮಾಡಿದಂತೆ) ಊಳಿಗಮಾನ್ಯತೆಯನ್ನು ತೊಡೆದುಹಾಕುವ ಹಾಗೂ ಬಂಡವಾಳಶಾಹಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಬಯಕೆಯನ್ನು ತೋರಿಸಿತು. ಹಾಗಿದ್ದರೂ, ವಸಾಹತುವಿನ ಹೊಡೆತಕ್ಕೆ ಸಿಕ್ಕ ಕಾರಣದಿಂದಾಗಿ ನಾವೀಗ ಅದರ ಸಾಧ್ಯತೆಯ ಬಗ್ಗೆ ಅದರ ಐತಿಹಾಸಿಕ ಅನಿವಾರ್ಯತೆಯ ಕುರಿತು ಮಾತನಾಡಬಹುದಷ್ಟೇ.

ಮುಂದಿನ ಸಂಪುಟದಲ್ಲಿ ವಸಾಹತು ಕಾಲಘಟ್ಟವನ್ನು ನಾವು ವಿವರಿಸುತ್ತೇವೆ. ನೀವು ಯಾವ ರೀತಿಯಿಂದಲೇ ನೋಡಲು ಬಯಸಬಹುದು ವಸಾಹತಿಗಿಂತ ಮುಂಚಿನ ಊಳಿಗಮಾನ್ಯತೆ, ಅಥವಾ ಊಳಿಗಮಾನ್ಯತೆಯ ಜೊತೆಗಿನ ವಸಾಹತುಶಾಹಿತನ, ಇತಿಹಾಸವು ತೋರ್ಪಡಿಸುವ ಸತ್ಯವೆಂದರೆ, ಬೇರೆಲ್ಲಾ ಸಮಾಜಗಳಂತೆಯೇ ನಮ್ಮ ಸಮಾಜವೂ ಕೂಡ ಈ ವರ್ಗಗಳ ಆಳ್ವಿಕೆಯ ವಿರುದ್ಧ ಬಂಡಾಯವೆದ್ದಿತ್ತು. ಜನಪ್ರಿಯ ಹೋರಾಟಗಳೇ ಚಾಲಕ ಶಕ್ತಿಗಳಾಗಿದ್ದವು. ಶೋಷಣೆಗೊಳಗಾಗಿ, ತಿರುಗುವುದಕ್ಕೂ ಅವಕಾಶವಿಲ್ಲದಿದ್ದರೂ, ಜನಸಮೂಹಗಳು ತಾವಾಗಿಯೇ ಮುಂದೆ ಬಂದು, ಮುಂದುವರೆದು ತಮ್ಮ ಇತಿಹಾಸವನ್ನು ತಾವೇ ನಿರ್ಮಿಸಿಕೊಳ್ಳುತ್ತಾರೆ.

ಆಗ ಈ ಪುಸ್ತಕದ ಉದ್ದೇಶ ಈಡೇರುತ್ತದೆ.  ಈ ಪುಸ್ತಕ ರಚನೆಗಿರುವ ಕಾರಣ ಆಗ ಮುಕ್ತಾಯವನ್ನು ಕಾಣುತ್ತದೆ ಇತಿಹಾಸ ರಚನಾ ಪದ್ಧತಿಯು ಇತಿಹಾಸದೊಂದಿಗೆ ಜೊತೆಗೂಡಿರುತ್ತದೆ.

              ------------0------------------0-----------     

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...