ಕಲ್ಯಾಣಸ್ವಾಮಿಯ ಸಶಸ್ತ್ರ ಬಂಡಾಯ (1837)#ರೈತಾಪಿ ಬಂಡಾಯಗಳು-ಕೊನೆಯ ಕಂತು #kalyanaswamy rebellion#making history 2
ಕಲ್ಯಾಣಸ್ವಾಮಿಯ
ಸಶಸ್ತ್ರ ಬಂಡಾಯ (1837)
ರೈತಾಪಿ ಬಂಡಾಯಗಳು-ಕೊನೆಯ ಕಂತು
ಆಂಗ್ಲ ಮೂಲ: ಮೇಕಿಂಗ್
ಹಿಸ್ಟರಿ -ಸಂಪುಟ 2
ಕರ್ನಾಟಕಾಸ್ ಪೀಪಲ್ ಆಂಡ್
ದೆಯರ್ ಪಾಸ್ಟ್
-ಸಾಕಿ
ಕನ್ನಡ ರೂಪಾಂತರ- ಡಾ
ಆಶೋಕ್ ಕೆ ಆರ್.
-ನಂದಕುಮಾರ್ ಕೆ ಎನ್
ಕುಂಬ್ರಿ ಉಬ್ಬು
ಕಲ್ಯಾಣಸ್ವಾಮಿ ಮತ್ತು ಕೇದಂಬಾಡಿ ರಾಮ ಗೌಡ ಮುನ್ನಡೆಸಿದ ಹೋರಾಟವು 1837ರಲ್ಲಿ
ಭುಗಿಲೆದ್ದಿತಾದರೂ, ಈ ಹೋರಾಟಕ್ಕೆ ಮುನ್ನುಡಿ ಬರೆದ
ಘಟನೆಗಳನ್ನು 1834ರಲ್ಲೇ ಬ್ರಿಟೀಷರು ವೀರರಾಜೇಂದ್ರನನ್ನು
ಕೊಡಗಿನಿಂದ ನಿವೃತ್ತಿಯಾಗುವಂತೆ ಮಾಡಿ ಅಲ್ಲಿನ ಆಡಳಿತವನ್ನು ನೇರವಾಗಿ ತನ್ನ ಕೈಗೇ ತೆಗೆದುಕೊಂಡ
ದಿನದಿಂದಲೇ ಕಾಣಬಹುದು.
ಅ. ಆರ್ಥಿಕ
ಕಾರಣಗಳು
ಬ್ರಿಟೀಷರಿಗೆ
ವಾಣಿಜ್ಯ ಕೃಷಿಯೆಡೆಗಿದ್ದ ಆಕರ್ಷಣೆಯು, ದಕ್ಷಿಣ ಕನ್ನಡದ
ಪುತ್ತೂರು ಸುಳ್ಯ ಪ್ರದೇಶದಲ್ಲಿ-ಈ ಪ್ರದೇಶ 1804ರಿಂದ 1834ರವರೆಗೆ
ಕೊಡಗಿಗೆ ಸೇರಿತ್ತು- ಭೂ ಕಂದಾಯ ಕಟ್ಟಿಸಿಕೊಳ್ಳುವ ವಿಧಾನವನ್ನು ಹಣದ ವ್ಯವಹಾರವನ್ನಾಗಿಸಿತು, ಈ
ಮೊದಲು ಇಲ್ಲಿ ಭೂ ಕಂದಾಯವೆಂಬುದು ವಸ್ತುಗಳ ಬದಲಾವಣೆಯಾಗಿತ್ತು. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ
ಮತ್ತು ದಟ್ಟ ಕಾಡುಗಳಿಂದ ಆವೃತವಾದ ಪುತ್ತೂರು - ಸುಳ್ಯ ಪ್ರದೇಶದಲ್ಲಿ ಸರಕು ಉತ್ಪಾದನೆ ಕನಿಷ್ಟ
ಮಟ್ಟದಲ್ಲಿರುತ್ತಿತ್ತು. ಶ್ಯಾಮ್ ಭಟ್ ಹೇಳುವಂತೆ: “ಕೊಡಗಿನ
ರಾಜರ ಆಳ್ವಿಕೆಯಲ್ಲಿ, ಕಂದಾಯವನ್ನು ವಸ್ತುವಿನ
ರೂಪದಲ್ಲಿ ಕೊಡಲಾಗುತ್ತಿತ್ತು. ದಕ್ಷಿಣ ಕೆನರಾದ ಕಲೆಕ್ಟರ್ ಸರಕಾರಕ್ಕೆ ಕಟ್ಟುವ ತೆರಿಗೆಯನ್ನು
ಹಣದ ರೂಪದಲ್ಲೇ ನೀಡಬೇಕು ಎಂದು ಆದೇಶಿಸಿದ. ತತ್ಪರಿಣಾಮವಾಗಿ, ಈ
ಪ್ರದೇಶದ ರೈತರು ಕಟಾವು ಮಾಡಿದ ತಕ್ಷಣವೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿ ಬಂತು; ಸಾಮಾನ್ಯವಾಗಿ
ಆ ಸಮಯದಲ್ಲಿ ಬೆಲೆ ಕಡಿಮೆಯಿರುತ್ತದೆ. ಈ ರೀತಿಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ಬಡ್ಡಿ
ವ್ಯಾಪಾರಿಗಳ ಋಣಕ್ಕೆ ರೈತರು ಸಿಕ್ಕಿಹಾಕಿಕೊಂಡರು. ಇದರ ಜೊತೆಜೊತೆಗೆ, ಮಧ್ಯವರ್ತಿಗಳು
ಅವರನ್ನು ಲೂಟಿ ಮಾಡಿದರು ಮತ್ತು ಬಂಟ್ವಾಳದ ಕೊಂಕಣಿಗಳೇ ಹೆಚ್ಚಿದ್ದ ವರ್ತಕ ಸಮೂಹ ಅವರನ್ನು
ದೋಚಿತು. ಸ್ಥಳೀಯ ಮಟ್ಟದಲ್ಲಿ ಬನಿಯಾಗಳಂತೆ ವರ್ತಿಸುತ್ತಿದ್ದ ಈ ಬಂಟ್ವಾಳದ ಕೊಂಕಣಿ ಸಮುದಾಯ
ಬದಲಾವಣೆಗಳಲ್ಲಿ ತಮಗೆ ಅನುಕೂಲವಾಗುತ್ತಿದ್ದ ಸಂಗತಿಗಳತ್ತಲೇ ಸಹಜವಾಗಿ ಗಮನಕೊಟ್ಟರು.....”190
ಆ.
ಬಂಡಾಯದ ಸಂಘಟಿಸುವಿಕೆ
ಈ ಘಟನೆಗಳ
ಕುರಿತು ಸಂಪೂರ್ಣ ವಿವರಗಳನ್ನು ಶ್ಯಾಮ್ ಭಟ್ ಮತ್ತು ಪುರುಷೋತ್ತಮ ಬಿಳಿಮಲೆಯವರ ಪ್ರಬಂಧಗಳಲ್ಲಿ
ಕಾಣಬಹುದು. ಈ ಪ್ರಬಂಧಗಳಿಂದ ನಮಗೆ ತಿಳಿಯುವುದೇನೆಂದರೆ, ಕೊಡಗಿನ
ಪೀಠದ ಮೇಲೆ ಹಕ್ಕು ಸಾಧಿಸಿದ ನಿಜವಾದ ಕಲ್ಯಾಣಸ್ವಾಮಿಯನ್ನು ಯಾವುದೇ ಪ್ರಚಾರವಿಲ್ಲದೇ
ಬಂಧಿಸಲಾಗಿತ್ತು. ಶನಿವಾರಸಂತೆಯ ಲಿಂಗಾಯತ ರೈತನಾದ ಪುಟ್ಟಬಸಪ್ಪನನ್ನು ಕಲ್ಯಾಣಸ್ವಾಮಿ ಎಂದು
ಪರಿಚಯಿಸಲಾಯಿತು ಮತ್ತು ಪೀಠದ ಹಕ್ಕುದಾರ ಎನ್ನಲಾಯಿತು. ಸುಳ್ಯದ ಬಳಿಯ ಕೇದಂಬಾಡಿಯ ರಾಮ ಗೌಡ
ಪುಟ್ಟಬಸಪ್ಪನನ್ನು ಬೆಂಬಲಿಸಿದ. ತಾನು ಅಧಿಕಾರಕ್ಕೆ ಬಂದರೆ ರೈತರ ಬೇಡಿಕೆಗಳನ್ನೆಲ್ಲವನ್ನೂ
ಈಡೇರಿಸಲಾಗುವುದು ಎಂದು ಕಲ್ಯಾಣಸ್ವಾಮಿ ಘೋಷಿಸಿದ.
ಬಿಳಿಮಲೆಯವರ ಪ್ರಕಾರ ಈ
ಘೋಷಣೆಯಲ್ಲಿದ್ದ ಅಂಶಗಳೆಂದರೆ:
1) ಬ್ರಿಟೀಷರಿಗೆ ಜನರು ಕಟ್ಟುತ್ತಿದ್ದ
ಕಪ್ಪಕಾಣಿಕೆಯನ್ನು ರದ್ದು ಮಾಡಲಾಗುವುದು.
2) ಕಲ್ಯಾಣಸ್ವಾಮಿಯನ್ನು ಕೊಡಗಿನ ರಾಜನಾಗಿ
ಗುರುತಿಸಲಾಗುವುದು.
3) ಕೊಡಗನ್ನು ಬ್ರಿಟೀಷರಿಂದ ಸ್ವತಂತ್ರಗೊಳಿಸುವ
ಕಾರ್ಯದಲ್ಲಿ ಕೈಜೋಡಿಸುವ ರೈತರಿಗೆ ಮೂರು ವರುಷಗಳ ಕಾಲ ಎಲ್ಲಾ ತೆರಿಗೆಗಳಿಂದಲೂ ವಿನಾಯಿತಿ
ನೀಡಲಾಗುವುದು.
4) ಬ್ರಿಟೀಷರು ಜನರ ಮೇಲೆ ವಿಧಿಸಿದ ಯಾವ
ತೆರಿಗೆಯನ್ನೂ ಜನರು ಕಟ್ಟಬೇಕಾಗಿಲ್ಲ.191
ಗೌಡ, ಸ್ಥಾನಿಕ, ಮಲೆಕುಡಿಯ, ಚೆಟ್ಟಿಕುಡಿಯ, ಕರ್ತು
ಕುಡಿಯ, ಬಂಟ, ಮುಸ್ಲಿಮ್
ಮತ್ತು ಬ್ರಾಹ್ಮಣ ಸಮುದಾಯದ ಜನರು ಈ ಕರೆಗೆ ಓಗೊಟ್ಟರು ಮತ್ತು ರಾಜನಾಗಬಯಸಿದ ಕಲ್ಯಾಣಸ್ವಾಮಿಯ
ಬಂಡಾಯವನ್ನು ಬೆಂಬಲಿಸಿದರು.192
ಸುಳ್ಯದ ಜನರನ್ನು
ವಿಪರೀತವಾಗಿ ಶೋಷಿಸಿ ಕುಖ್ಯಾತಗೊಂಡಿದ್ದ ಕೊಡಗಿನ ಮಾಜಿ ದಿವಾನ ಲಕ್ಷ್ಮಿನಾರಾಯಣಯ್ಯನ ಸಹೋದರ
ರಾಮಪ್ಪಯ್ಯನ ಹತ್ಯೆಯೊಂದಿಗೆ 1837ರ ಮಾರ್ಚಿ 29ರಂದು
ಬಂಡಾಯ ಪ್ರಾರಂಭವಾಯಿತು.193
ಮಾರ್ಚ್
29 ಮತ್ತು 30 ರಂದು ಅಮರ ಸುಳ್ಯದಲ್ಲಿ ಬಂಡಾಯ
ಭುಗಿಲೆದ್ದಿತು, ಇದರಲ್ಲಿ ಕೇದಂಬಾಡಿ, ಕುಜಗೋಡು, ಬೆಳ್ಳಾರೆ
ಮತ್ತು ಸುಬ್ರಮಣ್ಯದಲ್ಲಿ ನಡೆದ ಬಂಡಾಯವು ಸೇರಿತ್ತು. “ಬೆಳ್ಳಾರೆಯಲ್ಲಿ, ಬಂಡಾಯಗಾರರು
ಸರಕಾರಿ ಕಛೇರಿಯ ಮೇಲೆ ದಾಳಿ ನಡೆಸಿದರು ಮತ್ತು ಖಜಾನೆಯನ್ನು ಲೂಟಿ ಮಾಡಿದರು. ಅಲ್ಲಿ ಅವರು
ಒಂದಷ್ಟು ಹಣವನ್ನು ಮತ್ತು ಸ್ವಲ್ಪ ಶಸ್ತ್ರಗಳನ್ನು ಪಡೆದುಕೊಂಡರು. ಬೆಳ್ಳಾರೆಯಿಂದ
ಕಲ್ಯಾಣಸ್ವಾಮಿಯ ಪಡೆಗಳು ಸ್ವಲ್ಪ ಈಶಾನ್ಯಕ್ಕೆ ಚಲಿಸಿ ಪುತ್ತೂರು ಸೇರಿ ನಂತರ ಬಂಟ್ವಾಳದ ಮೂಲಕ
ಮಂಗಳೂರು ತಲುಪಿದವು. ಈ ಎಲ್ಲಾ ಕೇಂದ್ರಗಳಲ್ಲಿ, ಬಂಡಾಯಗಾರರು
ಸರಕಾರಿ ಕಛೇರಿಗಳ ಮೇಲೆ ದಾಳಿ ನಡೆಸಿದರು ಮತ್ತು ಖಜಾನೆಯನ್ನು ಲೂಟಿ ಮಾಡಿದರು”.194
ಸರಿಸುಮಾರು
ಸಾವಿರ ಜನರಿದ್ದ ಕಲ್ಯಾಣಸ್ವಾಮಿಯ ಪ್ರಮುಖ ಸೈನ್ಯವು ಮಂಗಳೂರಿನ ಕಡೆಗೆ ಪಯಣ ಬೆಳೆಸಿದ್ದಕ್ಕೆ
ಕಾರಣ ಮಡಿಕೇರಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವ ಮುನ್ನ ಸಾಕಷ್ಟು ಬೆಂಬಲ
ಗಳಿಸುವುದಾಗಿತ್ತು. ಬಂಗವಾಡಿ, ವಿಟ್ಲ ಮತ್ತು
ಕುಂಬ್ಳದಲ್ಲೂ ಬಂಡಾಯಗಳು ನಡೆದವು.
“ಪ್ರಮುಖ ಪಡೆಯು
ಬಂಟ್ವಾಳದಲ್ಲಿದ್ದಾಗ, ಏಪ್ರಿಲ್ ಎರಡರಂದು ಚಿಕ್ಕ ಪಡೆಯೊಂದನ್ನು
ಕಾಸರಗೋಡಿಗೆ ಕಳುಹಿಸಲಾಯಿತು ಮತ್ತು ಅಲ್ಲಿ ಆ ಪಡೆ ಖಜಾನೆಯನ್ನು ದೋಚಿತು. ಏಪ್ರಿಲ್ ಆರರಂದು
ಬಂಡಾಯಗಾರರು ಕುಂಬ್ಳದ ಕಡೆಗೆ ಸಾಗಿದರು....ಬಂಟ್ವಾಳದಿಂದ ಬಂಡಾಯವು ಉಪ್ಪಿನಂಗಡಿಗೆ ಹರಡಿತು.
ಮುಲ್ಕಿ ಮತ್ತೊಂದು ಬಂಡಾಯದ ಕೇಂದ್ರವಾಗಿತ್ತು. ಬಂಟ್ವಾಳದಿಂದ ಕಲ್ಯಾಣಸ್ವಾಮಿಯ ಸೈನ್ಯ ಏಪ್ರಿಲ್
ಮೂರರಂದು ಮಂಗಳೂರು ತಲುಪಿತು. ನಗರವನ್ನು ಪ್ರವೇಶಿಸಿದ ನಂತರ, ಕಲ್ಯಾಣಸ್ವಾಮಿ
ಜೈಲಿನ ಗೇಟುಗಳನ್ನು ಒಡೆದು ಹಾಕಿ, ಖೈದಿಗಳನ್ನು
ಬಿಡುಗಡೆಗೊಳಿಸಿದ. ಕಲ್ಯಾಣಸ್ವಾಮಿ ಖಜಾನೆಯನ್ನು ವಶ ಪಡಿಸಿಕೊಂಡ ಮತ್ತು ಮಂಗಳೂರಿನಲ್ಲಿದ್ದ
ಇಂಗ್ಲೀಷ್ ಅಧಿಕಾರಿಗಳ ಮನೆಗಳಿಗೆ ಬೆಂಕಿ ಹಚ್ಚಿದ. ಹೆಚ್ಚು ಕಡಿಮೆ ಎರಡು ವಾರಗಳವರೆಗೆ ಮಂಗಳೂರು
ಬಂಡಾಯಗಾರರ ಕೈವಶವಾಗಿತ್ತು. ಬಂಡಾಯದ ಸಮಯದಲ್ಲಿ ಬಂಡಾಯಗಾರರು ಸರಕಾರಿ ಕಟ್ಟಡಗಳನ್ನು ನಾಶ
ಮಾಡಿದರು, ಸಂಗ್ರಹಗಾರಗಳನ್ನು ತಮ್ಮ ವಶಕ್ಕೆ
ತೆಗೆದುಕೊಂಡರು, ಅಂಚೆ ಕಛೇರಿಗಳನ್ನು
ಮುಚ್ಚಿದರು....ಸಾರ್ವಜನಿಕ ರಸ್ತೆಗಳನ್ನು ಬಂಡಾಯಗಾರರು ಮುಚ್ಚಿದರು, ಬ್ರಿಟೀಷರಿಗೆ
ನಿಯತ್ತಿನಿಂದಿದ್ದ ಅಧಿಕಾರಿಗಳ ಮೇಲೆ ದಾಳಿ ನಡೆಸಿದರು, ಅವರನ್ನು
ಅವಮಾನಕ್ಕೀಡುಮಾಡಿದರು... ಸರಕಾರಿ ಕಛೇರಿಗಳ ಮೇಲೆ ದಾಳಿ ನಡೆಸಿದ ನಂತರ
ತಹಸೀಲ್ದಾರರು, ಪೇಶಕಾರರು, ಗುಮಾಸ್ತರು
ಮತ್ತಿತರ ಸರಕಾರಿ ಅಧಿಕಾರಿಗಳನ್ನು ತಮ್ಮ ವಶದಲ್ಲಿರಿಸಿಕೊಂಡರು.... ಉಪ್ಪು ಮತ್ತು ತಂಬಾಕಿನ
ಸರಕಾರೀ ಉಗ್ರಾಣದ ಮೇಲೆ ದಾಳಿ ನಡೆಸಿ ಮಾರಿದರು.... ಬ್ರಿಟೀಷರ
ಪ್ರಕಾರ, ಈ ಎರಡು ಉತ್ಪನ್ನಗಳ ಮೇಲೆ ಬ್ರಿಟೀಷ್ ಸರಕಾರ
ಹೊಂದಿದ್ದ ಏಕಸ್ವಾಮ್ಯತೆಯ ನೀತಿ ನಿಯಮಗಳ ಉಲ್ಲಂಘನೆಗೆ ಇದು ಉದಾಹರಣೆಯಾಗಿತ್ತು”.195
ಇ.
ಶೀಘ್ರ ದಮನ
ಹೋರಾಟ ಎಷ್ಟು
ವೇಗವಾಗಿ ಬೆಳೆದಿತ್ತೋ ಅಷ್ಟೇ ಶೀಘ್ರವಾಗಿ ಅದನ್ನು ದಮನಿಸಲಾಯಿತು. ಕಣ್ಣೂರು ಮತ್ತು
ಬಾಂಬೆಯಲ್ಲಿದ್ದ ಬ್ರಿಟೀಷ್ ಪಡೆಗಳನ್ನು ಕರೆಸಲಾಯಿತು ಮತ್ತು ಬಂಡಾಯಗಾರರ ಪ್ರತಿರೋಧ ಹೆಚ್ಚಿನ
ಸಮಯ ಉಳಿಯಲಿಲ್ಲ. ಕೆಲವೊಂದು ಸಣ್ಣಪುಟ್ಟ ಘರ್ಷಣೆಗಳಿಂದ ಮಂಗಳೂರನ್ನು ಏಪ್ರಿಲ್ 16ರಂದು
ಪುನರ್ ವಶಪಡಿಸಿಕೊಳ್ಳಲಾಯಿತು. ಮಂಗಳೂರಿನಿಂದ ತಪ್ಪಿಸಿಕೊಂಡ ಕಲ್ಯಾಣಸ್ವಾಮಿ, ದಕ್ಷಿಣ
ಕನ್ನಡದ ಇತರೆ ಭಾಗಗಳಲ್ಲೂ ಪ್ರತಿಭಟನೆ ಹಿಂದಾಗಿದ್ದನ್ನು ನೋಡಿದ. ಬೋಪಣ್ಣನ ನೇತೃತ್ವದ ಪಡೆಗೆ
ಸುಳ್ಯ ಏಪ್ರಿಲ್ 24ರಂದು ಶರಣಾಯಿತು ಮತ್ತು ಬೆಳ್ಳಾರೆ ಏಪ್ರಿಲ್ 30ಕ್ಕೆ
ಬ್ರಿಟೀಷರ ಕೈವಶವಾಯಿತು. ನಂತರ, ಶತ್ರುಗಳು
ಕಲ್ಯಾಣಸ್ವಾಮಿ ಮತ್ತು ರಾಮಗೌಡನನ್ನು ಬಂಧಿಸುವೆಡೆಗೆ ತಮ್ಮ ಗಮನವನ್ನು ಹರಿಸಿದರು.
ಕಲ್ಯಾಣಸ್ವಾಮಿಯ ತಲೆಗೆ ಹತ್ತು ಸಾವಿರ ಮತ್ತು ಇನ್ನಿತರೆ ನಾಯಕರ ತಲೆಗೆ ಐದು ಸಾವಿರ ಬಹುಮಾನ
ಘೋಷಿಸಲಾಯಿತು. ಬ್ರಿಟೀಷರು ಘಟ್ಟದಿಂದ ಹೊರ ಹೋಗುವ ರಸ್ತೆಗಳನ್ನು ಮುಚ್ಚಿದರು, ಕಲ್ಯಾಣಸ್ವಾಮಿ
ಘಟ್ಟವನ್ನು ತೊರೆದು ನಗರ ಪ್ರಾಂತ್ಯಕ್ಕೆ ಹೋಗುವ ಆಲೋಚನೆಯಲ್ಲಿದ್ದ. ತದನಂತರ, ಮಾಹಿತಿದಾರರ
ಸಹಾಯದಿಂದ ಕಲ್ಯಾಣಸ್ವಾಮಿಯನ್ನು 1837ರ ಮೇ ತಿಂಗಳಿನ
ಮೊದಲ ವಾರದಲ್ಲಿ ಬಂಧಿಸಲಾಯಿತು ಮತ್ತು ಮಡಿಕೇರಿಯಲ್ಲಿ ಬಹಿರಂಗವಾಗಿ ನೇಣಿಗೇರಿಸಲಾಯಿತು.
ಭೂಮಾಲೀಕರು -
ಬಡ್ಡಿ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ಬ್ರಿಟೀಷರಿಗೆ ಎಲ್ಲಾ ರೀತಿಯ ಸಹಾಯ ಮಾಡಿದರು.
“ಮಂಗಳೂರಿನಲ್ಲಿ ಬಂಡಾಯಗಾರರ ದಾಳಿಯಿಂದ ಬ್ರಿಟೀಷ್ ಅಧಿಕಾರಿಗಳು ಮತ್ತು ಸೈನಿಕರು
ತಪ್ಪಿಸಿಕೊಳ್ಳಲು ಬಂಟ್ವಾಳದ ರಂಗ ಬಾಳಿಗ (ಗೌಡ ಸಾರಸ್ವತ ಬ್ರಾಹ್ಮಣ) ಸಹಾಯ ಮಾಡಿದ. ಆತ ಆ
ಪ್ರದೇಶದ ಶ್ರೀಮಂತ ಭೂಮಾಲೀಕ ಮತ್ತು ಪ್ರವರ್ಧಮಾನಕ್ಕೆ ಬರುತ್ತಿದ್ದ ವರ್ತಕನಾಗಿದ್ದ. ಕುಡುಲು
ಕುಟುಂಬದ ಪಡಿ ಸುಬ್ಬಯ್ಯ ಶಾನುಭೋಗ ಬಂಡಾಯಗಾರರನ್ನು ದಮನಿಸಲು ಬ್ರಿಟೀಷರಿಗೆ ಸಹಾಯ ಮಾಡಿದ”.196
ರೈತರ ಯಾವ
ಬೇಡಿಕೆಗಳನ್ನೂ ಈಡೇರಿಸಿರಲಿಲ್ಲ. ಆದರೂ ರಂಗ ಬಾಳಿಗನ ಕುಟುಂಬಕ್ಕೆ ಮುಂದಿನ ಮೂರು
ತಲೆಮಾರಿನವರೆಗೂ ಕಂದಾಯ ವಿನಾಯಿತಿ ನೀಡುವ ಮೂಲಕ ಬ್ರಿಟೀಷರು ಕ್ರೂರ ವಿನೋದವನ್ನು ಆಚರಿಸಿದರು; ಪಡಿಯ
ಶಾನುಭೋಗನಿಗೆ ಚಿನ್ನದ ಕಡಗವನ್ನು ಬಹುಮಾನವಾಗಿ ನೀಡಲಾಯಿತು.197
ಬಂಡಾಯಗಾರರನ್ನು ದಮನಿಸುತ್ತಿದ್ದ ಬ್ರಿಟೀಷರಿಗೆ ಎಲ್ಲಾ ರೀತಿಯ ನೆರವು ನೀಡಿದ ದಿವಾನ್
ಬೋಪಣ್ಣನಿಗೆ ಬಂಡಾಯಗಾರರ ಬಳಿಯಿದ್ದ ಎಲ್ಲಾ ಸಂಪತ್ತನ್ನೂ ಬಹುಮಾನವಾಗಿ ನೀಡಲಾಯಿತು.198 ಇನ್ನು
ಕೆಲವು ವಿಶೇಷ ಕೊಡವರಿಗೆ ಜಾಗೀರು ಸಿಕ್ಕಿತು.199
ಕೆಲವರಿಗೆ ಬ್ರಿಟೀಷ್ ಸರಕಾರದ ವತಿಯಿಂದ ಕೆಂಬಟ್ಟಿ ಹೊಲೆಯರನ್ನು ಮತ್ತು ಇತರೆ ಗುಲಾಮರನ್ನು
ಉಡುಗೊರೆಯಾಗಿ ನೀಡಲಾಯಿತು.200
ಕೊಡಗಿನಲ್ಲಿ
ಬೆಂಬಲ ಗಳಿಸುವ ಬಂಡಾಯದ ಉದ್ದೇಶ ವಿಫಲವಾಯಿತು ಮತ್ತು ಬಂಡಾಯ ಪಶ್ಚಿಮ ದಿಕ್ಕಿಗೆ, ತುಳುನಾಡಿನ
ದಕ್ಷಿಣ ಮತ್ತು ಮಧ್ಯ ಭಾಗದ ರೈತರನ್ನು ಚಳುವಳಿಗೆ ಪ್ರೇರೇಪಿಸುತ್ತ ಮಂಗಳೂರಿನ ಕಡೆಗೆ
ಮುಂದುವರೆಯಿತು. ಬ್ರಿಟೀಷ್ ವಸಾಹತುಶಾಹಿಯ ದಮನವನ್ನು ಕೊಡಗಿನ
ಜನರು ಇನ್ನೂ ಅನುಭವಿಸಬೇಕಿತ್ತಷ್ಟೇ; ದಮನವಿಲ್ಲದ
ಸಮಯದಲ್ಲಿ ಕೊಡವರು ಕಲ್ಯಾಣಸ್ವಾಮಿಯ ಬೆನ್ನಿಗೆ ನಿಲ್ಲಲು ಸಿದ್ಧರಿರಲಿಲ್ಲ; ಕಲ್ಯಾಣಸ್ವಾಮಿ
ಕೂಡ ನಕಲಿ ಎಂದವರಿಗೆ ತಿಳಿದಿತ್ತು. ಶುದ್ಧ ಊಳಿಗಮಾನ್ಯ ಗುಣಗಳು ಕೊಡವ ರೈತರನ್ನು ಬಂಡಾಯದಿಂದ
ದೂರ ಇರುವಂತೆ ಮಾಡಿತ್ತು. ಬದಲಿಗೆ ಆಸಕ್ತಿಕರ ವಿಷಯವೆಂದರೆ ಕೊಡವ ಜನರಿಗೆ ಸಂಬಂಧಪಟ್ಟಂತಹ
ಬೇಡಿಕೆಗಳನ್ನೊಳಗೊಂಡ ಚಳುವಳಿಯೊಂದು ತುಳುನಾಡಿನ ರೈತರನ್ನು ತಲುಪಲು ಯಶಸ್ವಿಯಾಗಿತ್ತು. ಕೂಟ
ಹೋರಾಟದಲ್ಲಿ ನಾವು ನೋಡಿರುವಂತೆ, ಬ್ರಿಟೀಷ್
ವಸಾಹತುಶಾಹಿಯ ದೌರ್ಜನ್ಯ ದಕ್ಷಿಣ ಕನ್ನಡದ ಜನಸಮೂಹದ ಮೇಲೆ ಹೆಚ್ಚಿತ್ತು ಮತ್ತು ಈ ಕಾರಣದಿಂದಾಗಿ
ಕಲ್ಯಾಣಸ್ವಾಮಿಯ ಕರೆಗೆ ಅವರು ಓಗೊಟ್ಟರು, ಯಾಕೆಂದರೆ ಕೆಲವು
ವರುಷಗಳ ಹಿಂದೆ ತಾವು ಮುಂದಿಟ್ಟಿದ್ದ ಹಕ್ಕೊತ್ತಾಯಗಳನ್ನೇ ಕಲ್ಯಾಣಸ್ವಾಮಿ ಮುಂದಿಟ್ಟಿದ್ದ.
ಹಾಗಿದ್ದರೂ ಮಡಿಕೇರಿಯನ್ನು ವಶಪಡಿಸಿಕೊಳ್ಳುವುದೇ ಕಲ್ಯಾಣಸ್ವಾಮಿಯ ಮುಖ್ಯ
ಗುರಿಯಾಗಿಬಿಟ್ಟಿದ್ದರಿಂದ ಚಳುವಳಿಯ ವ್ಯಾಪ್ತಿಯನ್ನು ಕಿರಿದಾಗಿಸಿತು, ದಕ್ಷಿಣ
ಕನ್ನಡದ ಮೇಲೂ ಗಮನಹರಿಸಿದ್ದರೆ ಚಳುವಳಿ ಸ್ಪೋಟಕ ಬೆಳವಣಿಗೆ ಗಳಿಸಿಕೊಳ್ಳುತ್ತಿದ್ದುದರಲ್ಲಿ
ಅನುಮಾನಗಳಿಲ್ಲ.
ಬಂಡಾಯ ನಾಯಕರ
ಸೇನಾ ಚಿಂತನೆಯಲ್ಲಿ ಮಂಗಳೂರು ಮತ್ತು ಮಡಿಕೇರಿಯಲ್ಲಿ ಚಿಕ್ಕ ಅವಧಿಯ ಪಥಸಂಚಲನ ನಡೆಸುವುದು
ಸೇರಿತ್ತು. ಇದಷ್ಟೇ ಬ್ರಿಟೀಷರನ್ನು ಓಡಿಸಿ ತಮಗೆ ಅಧಿಕಾರ ಕೊಡಿಸಲು ಸಾಕು ಎಂದವರ
ನಿರೀಕ್ಷೆಯಾಗಿತ್ತು. ಬ್ರಿಟೀಷ್ ವಸಾಹತುಶಾಹಿಯ ಶಕ್ತಿಯ ಬಗ್ಗೆ ಸಾಮಾನ್ಯವಾಗಿ ಊಳಿಗಮಾನ್ಯ
ಮನಸ್ಥಿತಿಯವರಿಗಿರುವ ಕೆಳಅಂದಾಜು ಇಲ್ಲೂ ಇತ್ತು ಮತ್ತು ಅದೇ ಸಮಯದಲ್ಲಿ ರೈತ ಸಮೂಹದ ಪಾತ್ರವನ್ನು
ಗುರುತಿಸಲಿಲ್ಲ ಅಥವಾ ತಮಗನುಕೂಲಕರವಾಗಿದ್ದ ಭೂಪ್ರದೇಶವನ್ನು ಚಾಣಾಕ್ಷತನದಿಂದ
ಉಪಯೋಗಿಸಿಕೊಳ್ಳಲಿಲ್ಲ. ಕಲ್ಯಾಣಸ್ವಾಮಿಯ ಸೈನ್ಯದಲ್ಲಿ ಮಾಜಿ ಆಳುಗಳು ಮತ್ತು ಉತ್ಸಾಹಭರಿತ
ರೈತಾಪಿಗಳಿದ್ದರು. ಯುದ್ಧಗಳಿಂದ ನಮಗೆ ತಿಳಿಯುವುದೇನೆಂದರೆ ಮುಖಾಮುಖಿ ಕದನಕ್ಕೆ ಯಾವ ರೀತಿಯ
ತಯಾರಿಯೂ ಬಂಡಾಯಗಾರ ಸೈನ್ಯದಲ್ಲಿರಲಿಲ್ಲ. ಹಾಗಾಗಿ ರೈತಾಪಿ ಸಮೂಹವು ಚಳುವಳಿಯಲ್ಲಿ ಒಂದಲ್ಲ ಒಂದು
ವಿಧದಲ್ಲಿ ಗಣನೀಯವಾಗಿ ಭಾಗವಹಿಸುವ ಅವಕಾಶವನ್ನು ಪಡೆಯುವಷ್ಟರಲ್ಲಿ, ಬಂಡಾಯ
ಸೈನ್ಯವನ್ನು ಸೋಲಿಸಲಾಗಿತ್ತು ಮತ್ತದರ ನಾಯಕತ್ವವನ್ನು ಹತ್ತಿಕ್ಕಲಾಗಿತ್ತು. ಅಲ್ಲೊಂದು
ಇಲ್ಲೊಂದರಂತೆ ಸಶಸ್ತ್ರ ಹೋರಾಟದಲ್ಲಿ ರೈತರು ಭಾಗವಹಿಸಿದ್ದರ ಬಗ್ಗೆ ಪುರುಷೋತ್ತಮ ನಮಗೆ
ತಿಳಿಸುತ್ತಾರೆ; ಚಳುವಳಿಯು ಮುಂದುವರೆದಿದ್ದರೆ ಈ
ಭಾಗವಹಿಸುವಿಕೆಯು ಖಂಡಿತವಾಗಿ ಹೆಚ್ಚಾಗುತ್ತಿತ್ತು ಮತ್ತು ರೈತ ಗೆರಿಲ್ಲಾ ಯುದ್ಧದ ಗುಣಗಳನ್ನು
ಪಡೆದುಕೊಳ್ಳುತ್ತಿತ್ತು.201
4. ರೈತರ
ಸಶಸ್ತ್ರ ಹೋರಾಟದ ಐತಿಹಾಸಿಕ ಮಹತ್ವ
ಅ.
ಗೆರಿಲ್ಲಾ ಯುದ್ಧತಂತ್ರದ ಪ್ರಶ್ನೆ
ಹತ್ತೊಂಬತ್ತನೇ
ಶತಮಾನದ ಮೊದಲಾರ್ಧದಲ್ಲಿ ಕರ್ನಾಟಕದ ಸಮಾಜವು ವಸಾಹತುಶಾಹಿಯನ್ನು ಕಿತ್ತೊಗೆಯಲು ಹತ್ತು ಹಲವು
ದಿಟ್ಟ ಪ್ರಯತ್ನಗಳನ್ನು ನಡೆಸಿತು. ಈ ದಶಕಗಳನ್ನು ಅಲಂಕರಿಸಿದ ಜನಪ್ರಿಯ ಸಶಸ್ತ್ರ ಪ್ರಯತ್ನಗಳು, ಗೆರಿಲ್ಲಾ
ಯುದ್ಧತಂತ್ರ, ಸಂಚಾರಿ ಯುದ್ಧತಂತ್ರ ಮತ್ತು ಸ್ಥಾವರ
ಯುದ್ಧತಂತ್ರಗಳ ರೂಪದಲ್ಲಿ ಈ ಪ್ರಯತ್ನಗಳು ಹೊರಹೊಮ್ಮಿತು. ರೈತರು ಹಳ್ಳಿಗಳಿಂದ ಯುದ್ಧದಲ್ಲಿ
ತೊಡಗಿದ್ದಾಗ, ಯುದ್ಧವು ಗೆರಿಲ್ಲಾ ತಂತ್ರವನ್ನು
ಅಳವಡಿಸಿಕೊಂಡಿತು. ದೇಶಗತಿಗಳು ತಮ್ಮ ಕೇಂದ್ರ ಪಟ್ಟಣಗಳಿಂದ ಹೋರಾಡಿದಾಗ ತಮ್ಮ ಕೋಟೆಗಳ ಒಳಗಿಂದ
ಸ್ಥಾನಿಕ ಯುದ್ಧ ತಂತ್ರವನ್ನು ಅಳವಡಿಸಿಕೊಂಡರು. ದೊಂಡಿಯಾವಾಗನ ವಿಷಯದಲ್ಲಿ ಮಾತ್ರ ನಾವು ಬೇರೆಯೇ
ತಂತ್ರವನ್ನು ನೋಡಬಹುದು: ಸಂಚಾರಿ ಯುದ್ಧತಂತ್ರವನ್ನು ಆತ ಕೆಲಕಾಲದ ಮಟ್ಟಿಗೆ ಅಳವಡಿಸಿಕೊಂಡ
ಮತ್ತು ಅವನ ಅನೇಕ ಕದನಗಳು ಬಯಲಿನಲ್ಲಿ ನಡೆದಂತಹವು. ಎಲ್ಲರಿಗೆ ಹೋಲಿಸಿದರೆ ದೊಂಡಿಯಾ ವಾಗ್
ಹೆಚ್ಚಿನ ಸಂಖ್ಯೆಯ ಕುದುರೆಸವಾರರನ್ನು ಹೊಂದಿದ್ದ ಮತ್ತು, ಮೈಸೂರು
ಸೈನ್ಯದಲ್ಲಿ ಕಲಿತುಕೊಂಡಿದ್ದ ಯುದ್ಧತಂತ್ರಗಳನ್ನು ಆತ ಪುನರಾವರ್ತಿಸ ಬಯಸಿದ್ದ.
ಈ ಎಲ್ಲಾ
ವಿಧಾನಗಳಲ್ಲಿ ನಾವು ಗೆರಿಲ್ಲಾ ಯುದ್ಧತಂತ್ರದ ಕಡೆಗೆ ಒಂದಷ್ಟು ಗಮನಹರಿಸೋಣ. ಜನಸಮೂಹವಷ್ಟೇ ಅಲ್ಲ
ಶತ್ರುಗಳೂ ವ್ಯಾಪಕವಾಗಿ ಅಳವಡಿಸಿಕೊಂಡಿದ್ದ ವಿಧಾನವಾಗಿತ್ತು ಇದು.
ಆ ಕಾಲದ ಸಾಮಾಜಿಕ - ಸೈನಿಕ
ಲಕ್ಷಣವೆಂದರೆ ಜನರ ಬಳಿ ಶಸ್ತ್ರಗಳಿದ್ದವು. ಈ ಜಿಲ್ಲೆಗಳ ಮುಖ್ಯ ಕಲೆಕ್ಟರ್ ಆಗಿದ್ದ ಮನ್ರೋ 1804ರಲ್ಲಿ On Disarming the People, ಎಂಬ ಹೆಸರಿನಲ್ಲಿ ಬರೆದ
ಟಿಪ್ಪಣಿಯಲ್ಲಿ “ಖಡ್ಗವನ್ನು ಹೊಂದಿರದ
ನಿವಾಸಿಗಳ ಸಂಖ್ಯೆ ತುಂಬಾ ಕಡಿಮೆಯಿತ್ತು. ಬಹಳಷ್ಟು ಜನರ ಬಳಿ ಖಡ್ಗದ ಜೊತೆಗೆ ಒಂದು ದೇಶೀ ಬಂದೂಕು
ಅಥವಾ ಭರ್ಜಿ ಅಥವಾ ಎರಡನ್ನೂ ಹೊಂದಿದ್ದರು” 202 ಎಂದು ಬರೆಯುತ್ತಾನೆ.
ಊಳಿಗಮಾನ್ಯತೆಯು
ತನ್ನನ್ನು ತಾನು ರಕ್ಷಿಸಿಕೊಳ್ಳಲು ತನ್ನ ಆಳುಗಳಿಗೆ ಶಸ್ತ್ರಗಳನ್ನು ನೀಡಿತ್ತು. ಪಾಳೇಗಾರರ ಲೂಟಿ
ಮಾಡುವ ಪ್ರವೃತ್ತಿ ಹದಿನಾರು ಮತ್ತು ಹದಿನೇಳನೇ ಶತಮಾನದಲ್ಲಿ ನಿರಂತರವಾಗಿದ್ದಾಗ, ರೈತಸಮೂಹವು
ತನ್ನ ರಕ್ಷಣೆಗಾಗಿ ಶಸ್ತ್ರಸಜ್ಜಿತವಾಗಿತ್ತು. ಊಳಿಗಮಾನ್ಯತೆಯನ್ನು ರಕ್ಷಿಸುವ ಸಲುವಾಗಿ
ಬಂದೂಕುಗಳನ್ನು ಪರಿಚಯಿಸಿದ ನಂತರ, ಸಮಯ ಕಳೆದಂತೆ, ಊಳಿಗಮಾನ್ಯತೆಯ
ವಿರುದ್ಧ ಜನಸಮೂಹ ಬಂದೂಕುಗಳನ್ನು ಉಪಯೋಗಿಸಲಾರಂಭಿಸಿತು, ಇದರಿಂದಾಗಿ
ಊಳಿಗಮಾನ್ಯತೆಯ ಕೊಳೆಯುವಿಕೆ ಮತ್ತು ಪತನವು ಮುಂಚಿಗಿಂತಲೂ ಸುಲಭಸಾಧ್ಯವಾಗಿಸಿತ್ತು.
ಊಳಿಗಮಾನ್ಯತೆ
ಮತ್ತು ವಸಾಹತುಶಾಹಿ ನಡುವಿನ ವಿವಾಹವು ಒಂದಷ್ಟು ಜನರನ್ನು ಉಳಿಸಿಕೊಂಡು ಬಹಳಷ್ಟು ಜನರನ್ನು
ಇಲ್ಲವಾಗಿಸಿ, ಆಧುನಿಕ ಇಂಡಿಯಾ ಪ್ರಭುತ್ವವನ್ನು ಸ್ಥಾಪಿಸಲು
ಮುನ್ನುಡಿ ಹಾಕಿತು. ಪ್ರಬಲ ಬ್ರಿಟೀಷ್ ರಾಜ್ ನ ಸುಲಿಗೆತನವನ್ನು ಜನಸಮೂಹ ಶಸ್ತ್ರಗಳೊಂದಿಗೆ
ಎದುರಿಸಿತು. ಸಶಸ್ತ್ರ ಜನ ಸಮೂಹ ಹುಟ್ಟಿಸಿದ ಭೀತಿಯ ಬಗ್ಗೆ ಮನ್ರೋ ಮುಕ್ತವಾಗಿ “ಗೊಂದಲಗಳನ್ನು
ಸೃಷ್ಟಿಸಲು ಈ ಜನ ಸಮೂಹ ಯಾರೊಡನೆ ಬೇಕಾದರೂ ಸೇರಿಬಿಡುತ್ತಾರೆ” 203ಎಂದು
ಬರೆಯುತ್ತಾನೆ.
ಜೊತೆಗೆ ಜಮೀನ್ದಾರರ
ಬಳಿಯಿರುವ ಶಸ್ತ್ರಗಳನ್ನು ಬಲವಂತವಾಗಿ ವಶಪಡಿಸಿಕೊಂಡರೂ, ಶಸ್ತ್ರಗಳ
ಮೂಲ ಬಿಡಿ ಭಾಗಗಳು ಅವರ ಬಳಿಯೇ ಉಳಿದುಹೋಗುತ್ತದೆ ಮತ್ತು ವಶಪಡಿಸಿಕೊಳ್ಳುವ ಉದ್ದೇಶವೇ
ಈಡೇರುವುದಿಲ್ಲ ಎಂದು ಮನ್ರೋ ಭಾವಿಸಿದ್ದ. “ನಿಜಕ್ಕೂ
ಅಪಾಯಕಾರಿ ಎನ್ನಿಸಿಕೊಳ್ಳುವ ಜನರಿಂದ ಶಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ”.204
ಮನ್ರೋ
ಜನಸಮೂಹವನ್ನು ನಿಶ್ಯಸ್ತ್ರಗೊಳಿಸುವ ಸಮಸ್ಯೆಯ ತಿರುಳನ್ನು ಗಮನಿಸಿದ್ದ. ಆ ಸಮಸ್ಯೆಗೆ ಪರಿಹಾರ
ಕಂಡುಕೊಳ್ಳದೇ ಹೋದರೆ ಸಾಮ್ರಾಜ್ಯ ಅಸ್ಥಿರವಾಗುತ್ತದೆ, ಖಡ್ಗ, ನಾಡ
ಬಂದೂಕು ಮತ್ತು ಭರ್ಜಿ ಜೊತೆಗೂಡಿ ನಡೆಸುವ ದಾಳಿಯಿಂದ ಸಾಮ್ರಾಜ್ಯಕ್ಕೆ ಧಕ್ಕೆಯಾಗುತ್ತದೆ.
ಕೋವಿಗಳನ್ನು
ಹೊಂದಿರುವ ಜನಸಮೂಹ ಮತ್ತು ಜನರು ಅದನ್ನು ತಮ್ಮ ಮೇಲಿನ ದಬ್ಬಾಳಿಕೆಯ ವಿರುದ್ಧ ಉಪಯೋಗಿಸುವ
ನಿರ್ಧಾರ ಮಾಡಿದ ಸಾಮಾಜಿಕ ಪರಿಸ್ಥಿತಿಯು ವರ್ಗಗಳ ನಡುವಿನ ಹೋರಾಟದಲ್ಲಿ ನಡೆದ ಅತಿ ಪ್ರಮುಖವಾದ
ಶೀಘ್ರ ಪರಿವರ್ತನೆ. ಜೊತೆಗಿದು ರಾಷ್ಟ್ರೀಯ ಚಳುವಳಿಯನ್ನು ಯುದ್ಧವನ್ನಾಗಿ ಮಾರ್ಪಡಿಸಿತು, ಇನ್ನೂ
ಸ್ಪಷ್ಟವಾಗಿ ಗೆರಿಲ್ಲಾ ಯುದ್ಧವಾಗಿ ಮಾರ್ಪಡಿಸಿತು.
ಆ ಸಮಯದಲ್ಲಿದ್ದ
ಎರಡನೇ ಸಾಮಾಜಿಕ - ಸೈನಿಕ ಲಕ್ಷಣವೆಂದರೆ ಮಾಜಿ ಸೈನಿಕರ ನಿರುದ್ಯೋಗ. ಈ ಸಂಪುಟದ ಮೊದಲ ಭಾಗದಲ್ಲಿ
ನಾವೀಗಾಗಲೇ ಅದರ ಕುರಿತು ನೋಡಿದ್ದೇವೆ.
1857ರಲ್ಲಿ ಇಡೀ
ಇಂಡಿಯಾ ಉಪಖಂಡ ನಿಗ್ರಹಕ್ಕೊಳಗಾಗಿದ್ದಾಗ ಬ್ರಿಟೀಷ್ ಇಂಡಿಯಾ ಸೈನ್ಯದ ಬಲ 2,40,000ರಷ್ಟಿತ್ತು.
ಇದರಲ್ಲಿ 40,000 ಬ್ರಿಟೀಷರಿದ್ದರು.205
ಬ್ರಿಟೀಷರಿಗೆ
ಸೋಲುವುದಕ್ಕೆ ಮೊದಲು ಇಂಡಿಯಾ ಉಪಖಂಡದಲ್ಲಿದ್ದ ಎಲ್ಲಾ ಸೈನಿಕರ ಸಂಖ್ಯೆಯನ್ನು ಕೂಡಿಸಿದರೆ, ಅದು
ಬ್ರಿಟೀಷ್ ಇಂಡಿಯನ್ ಸೈನ್ಯದ ಬಲಕ್ಕಿಂತ ಎಷ್ಟೋ ಪಟ್ಟು ಹೆಚ್ಚಿತ್ತು. ಮೈಸೂರು ಸೈನ್ಯದಲ್ಲೇ 1.4
ಲಕ್ಷದಷ್ಟು ಜನರು ಸೈನ್ಯದಲ್ಲಿದ್ದರು. ಕರ್ನಾಟಕದ್ದಷ್ಟೇ ಲೆಕ್ಕ ತೆಗೆದುಕೊಂಡರೂ, ಬ್ರಿಟೀಷರು
ಆಕ್ರಮಿಸುವುದಕ್ಕೂ ಮೊದಲು ಇಲ್ಲಿನ ಎಲ್ಲಾ ಸೈನಿಕರ ಸಂಖ್ಯೆ 1857ರಲ್ಲಿ
ಬ್ರಿಟೀಷ್ ಇಂಡಿಯನ್ ಸೈನ್ಯದಲ್ಲಿದ್ದ ಜನರ ಸಂಖ್ಯೆಯ ಸಮೀಪವೇ ಇತ್ತು. ಆ ಸಮಯದ ಅನುಪಾತವನ್ನು
ಲೆಕ್ಕಕ್ಕೆ ತೆಗೆದುಕೊಂಡರೆ, ಕರ್ನಾಟಕದ
ಆಕ್ರಮಣಕ್ಕೂ ಮುನ್ನ ಶಸ್ತ್ರ ಹೊಂದಿದ ಜನರ ಸಂಖ್ಯೆ ಏನಿಲ್ಲವೆಂದರೂ 3
ಲಕ್ಷಗಳಿಗಿಂತಲೂ ಹೆಚ್ಚಿತ್ತು. ಹದಿನೆಂಟನೇ ಶತಮಾನದ ಕೊನೆಯ ಭಾಗದಲ್ಲಿ ಕರ್ನಾಟಕ ಒಂದರಲ್ಲೇ
ಸಶಸ್ತ್ರ ಪಡೆಗಳ ಸಂಖ್ಯೆ 5 ಲಕ್ಷಗಳಿಗಿಂತಲೂ
ಹೆಚ್ಚಿತ್ತು.
ಮಾಜಿ ಮೈಸೂರು
ಸೈನ್ಯದಿಂದ ಯಾವ ಸೈನಿಕನನ್ನು ನೇಮಿಸಿಕೊಳ್ಳದ ನಿರ್ಧಾರ ಬ್ರಿಟೀಷರ ನೀತಿಯೇ ಆಗಿತ್ತು. ಈ ನೀತಿಯ
ಪರಿಣಾಮಗಳನ್ನು ಈ ಕಾಲದಲ್ಲೂ ಕಾಣಬಹುದು; ಇವತ್ತಿನ
ಇಂಡಿಯಾದ ಸೈನ್ಯದಲ್ಲಿ ಹಳೆ ಮೈಸೂರು ಭಾಗದ ಸೈನಿಕರ ಸಂಖ್ಯೆ ತುಂಬಾ ಕಡಿಮೆ. ಕೊಡಗು, ಬೆಳಗಾವಿ ಅಥವಾ
ಬಿಜಾಪುರಕ್ಕೆ ಹೋಲಿಸಿದರೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. 1.8ಲಕ್ಷ
ಕಂದಚಾರ ಗುಮಾಸ್ತರಲ್ಲಿ ಒಡೆಯರ್ 40,000 ಜನರನ್ನು ಮಾತ್ರ
ಉಳಿಸಿಕೊಂಡ. ಬ್ರಿಟೀಷರ ಆಳ್ವಿಕೆಯ ಮೊದಲ ದಶಕದಲ್ಲಿ ಈ ಸಂಖ್ಯೆಯನ್ನು ತುಂಬಾ ಚಾಣಾಕ್ಷತನದಿಂದ
ಕಡಿಮೆ ಮಾಡಲಾಯಿತು. ಮತ್ತೆ, ಬ್ರಿಟೀಷರು ಮರಾಠ
ಊಳಿಗಮಾನ್ಯತೆಯ ಹಿನ್ನೆಲೆಯಿರುವ ಕೆಲವರನ್ನು ಸೈನ್ಯಕ್ಕೆ ತೆಗೆದುಕೊಂಡರು. ಒಟ್ಟಿನಲ್ಲಿ ಮಾಜಿ
ಸೈನಿಕರಲ್ಲಿ ಕೆಲವು ಸಾವಿರ ಜನರಿಗಷ್ಟೇ ಅವರು ಉದ್ಯೋಗ ನೀಡಿದರು. ಕೆಲವು ಸಾವಿರ ಜನರನ್ನು
ಮೈಸೂರು ರಾಜ, ನಿಜಾಮ, ಹಾಲೇರಿ
ರಾಜರುಗಳು ಮತ್ತು ಹಲವು ಉಪರಾಜಮನೆತನಗಳ ಪ್ರೀತಿಗೆ ವಹಿಸಿಕೊಟ್ಟರು. ಹೀಗಾಗಿ ಬ್ರಿಟೀಷ್ ಪೂರ್ವ
ಕರ್ನಾಟಕದಲ್ಲಿದ್ದ ಸುಮಾರು ಐದು ಲಕ್ಷ ಚಿಲ್ಲರೆ ಸೈನಿಕರಲ್ಲಿ ಬಹಳಷ್ಟು ಜನರು
ನಿರುದ್ಯೋಗಿಗಳಾದರು.
ಈ ಮಾಜಿ
ಸೈನಿಕರಲ್ಲಿ ಮತ್ತು ಹೊಸ ಸೈನ್ಯದಲ್ಲಿ ಕೆಲಸ ಪಡೆದುಕೊಂಡವರಲ್ಲೂ ಶಸ್ತ್ರಗಳಿದ್ದವು. ಬ್ರಿಟೀಷ್
ಪ್ರಾಬಲ್ಯದ ವಿರುದ್ದದ ರೇಗುವಿಕೆ ಹೆಚ್ಚುತ್ತಾ ಸಾಗಿದಂತೆ, ಈ
ಸೈನಿಕರು ಮತ್ತು ಆಳುಗಳು ಕಳೆದುಹೋಗಿದ್ದ ತಮ್ಮ ಬುದ್ಧಿಯನ್ನು ಮರಳಿ ಪಡೆದರು. ಶಸ್ತ್ರ ಮತ್ತು
ಬುದ್ಧಿಯೊಂದಿಗೆ ಅವರು ಕಮಾಂಡರಿನ ಪ್ರಮುಖ ಭಾಗವಾದರು ಮತ್ತು ಗೆರಿಲ್ಲಾ ಸೈನ್ಯ ಕಟ್ಟುವ
ಮೂಲಪುರುಷರಾದರು. ಸಂಗೊಳ್ಳಿ ರಾಯಣ್ಣನ ಯುದ್ಧದಲ್ಲಿ ಸಿಗುವ ಸಾಕ್ಷಿಗಳು ಈ ಸೈನಿಕರು ಶೀಘ್ರ
ದಾಳಿಯ ಭಾಗವಾಗಿದ್ದರು ಎನ್ನುವುದನ್ನು ಸಾದರಪಡಿಸುತ್ತವೆ. ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದ
ತೀವ್ರತೆಯಿದ್ದ ಪಡೆಗಳಿವು.
ಈ ಸೈನಿಕರ
ಸಾಮಾಜಿಕ ಜೀವನದಲ್ಲಿ ಮತ್ತೊಂದು ಮಗ್ಗುಲಿತ್ತು, ಗೆರಿಲ್ಲಾ
ಯುದ್ಧವನ್ನು ತೀವ್ರ ಭಾವಾವೇಶದಿಂದ ಮಾಡಲು ಇದು ಕಾರಣವಾಗಿತ್ತು. ಹೈದರ್ ಅಲಿ ಮತ್ತು ಟಿಪ್ಪು
ಸುಲ್ತಾನನ ಆಳ್ವಿಕೆಯಲ್ಲಿ ಅಥವಾ ದೇಶಗತಿಯ ಆಳ್ವಿಕೆಯಲ್ಲಿ ಕೆಲಸ ಮಾಡುವಾಗ ಈ ಸೈನಿಕರಿಗೆ
ಭೂಮಿಯನ್ನು ಸಂಬಳದ ರೂಪದಲ್ಲಿ ಮಂಜೂರು ಮಾಡಲಾಗಿತ್ತು. ಈ ಸೈನಿಕರಿಗೆ ಖಾಸಗಿ ಆಸ್ತಿಯಿತ್ತು
ಮತ್ತು ಅವರು ಮೂಲಭೂತವಾಗಿ ಬಡ ಅಥವಾ ಮಧ್ಯಮ ರೈತ ವರ್ಗಕ್ಕೆ ಸೇರುತ್ತಿದ್ದರು. ಊಳಿಗಮಾನ್ಯ
ದೊರೆಗಳ ಬಳಿ ಜೀತದಿಂದ ಅವರು ಮುಕ್ತಿ ಪಡೆದಿದ್ದರು. ಸಂಪುಟ ಒಂದರಲ್ಲಿ ನಾವು ಅಂದಾಜಿಸಿದಂತೆ
ಹದಿನೆಂಟನೇ ಶತಮಾನದ ಕೊನೆಯ ಭಾಗದಲ್ಲಿ ಮೈಸೂರು ಜನಸಂಖ್ಯೆಯ ಶೇಕಡಾ15ರಷ್ಟು ಜನರು ಭೂಮಿಯನ್ನು ಹೊಂದಿರುವ ಬಡ - ಮಧ್ಯಮ - ಶ್ರೀಮಂತ
ರೈತರಾಗಿದ್ದರು; ಇವರು ಊಳಿಗಮಾನ್ಯತೆಯ ನೇರ ಲೂಟಿಯಿಂದ ಪಾರಾಗಿ
ಜೀವನ ನಡೆಸುತ್ತಿದ್ದರು.206 ರೈತರ ಈ ವರ್ಗವು
ಹಳ್ಳಿಗಳಲ್ಲಿ ಬಂಡವಾಳಶಾಹಿ ಪ್ರಜಾಪ್ರಭುತ್ವ ಕ್ರಾಂತಿಯ ಬೀಜಗಳು ಮೊಳಕೆಯೊಡೆಯಲು ಚಾಲನಾ
ಶಕ್ತಿಯಾಗಿದ್ದರು. ಈ ಸ್ವತಂತ್ರ ರೈತರಲ್ಲಿ ದೊಡ್ಡ ಮಟ್ಟದ ಜನರು ಮಾಜಿ ಸೈನಿಕರಾಗಿದ್ದವರು.
ವಿಪರೀತವೆನ್ನಿಸುವಷ್ಟು ಕೃಷಿ ಕಂದಾಯ ಮತ್ತು ಊಳಿಗಮಾನ್ಯ ಅಧಿಕಾರಶಾಹಿ ಪ್ರತಿಗಾಮಿಗಳ ಸುಲಿಗೆ
ಮಾಡುವ ಪೈಶಾಚಿಕತನ ಜೀವನ ನಡೆಸುವುದನ್ನೇ ದುಸ್ತರವಾಗಿಸಿದಾಗ, ಮತ್ತು
ರಾಜ್ಯಕ್ಕೆ ತೀರಿಸಬೇಕಿದ್ದ ಸಾಲದ ಮೊತ್ತಕ್ಕೆ ತಮ್ಮ ಭೂಮಿಯನ್ನೇ ಕಳೆದುಕೊಳ್ಳುವ ಆ ಮೂಲಕ ತಮ್ಮ
ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ, ತಮ್ಮ
ಬಂದೂಕಿನ ನಳಿಕೆಗಳಿಗೆ ಸಿಡಿಮದ್ದು ಮತ್ತು ದ್ವೇಷವನ್ನು ತುಂಬಿ ಬಂದೂಕು ಸಿಡಿಸಿದರು. ಹೆಚ್ಚು
ಕಡಿಮೆ ಪ್ರತಿ ಬಾರಿಯೂ ಈ ಸೈನಿಕರೇ ಬಂಡಾಯವನ್ನು ಪ್ರಾರಂಭಿಸಿದ್ದು. ಕರ್ನಾಟಕದ ಗೆರಿಲ್ಲಾ
ಯುದ್ಧತಂತ್ರದ ಮುಂಚೂಣಿಯಲ್ಲಿದ್ದವರು ಇವರು.
“ಬ್ರಿಟೀಷ್
ಆಳ್ವಿಕೆ ಸೈನ್ಯವನ್ನು ಸೃಷ್ಟಿಸುವುದರ ಜೊತೆಜೊತೆಗೆ ಇಂಡಿಯಾದ ಜನರಲ್ಲಿ ಯಾವತ್ತೂ ಇದ್ದ
ಪ್ರತಿರೋಧದ ಅಂಶವನ್ನು ಸಂಘಟಿಸಿದರು” ಎನ್ನುತ್ತಾರೆ
ಕಾರ್ಲ್ ಮಾರ್ಕ್ಸ್.207 ಇದು ನಂತರದಲ್ಲಿ
1857ರ ಬಂಡಾಯಕ್ಕೆ ಮತ್ತು ನಗರಗಳ ಮುತ್ತಿಗೆಗೆ ದಾರಿ ಮಾಡಿಕೊಟ್ಟಿತು.
ಆದರೆ, ಕರ್ನಾಟಕದಲ್ಲಿ ಮಾಜಿ ಸೈನಿಕರನ್ನು
ನಿರುದ್ಯೋಗಿಗಳನ್ನಾಗಿಸುವ ಮೂಲಕ, ಬ್ರಿಟೀಷರು
ಗ್ರಾಮೀಣ ಭಾಗದಲ್ಲಿ ಗೆರಿಲ್ಲಾ ಯುದ್ಧತಂತ್ರವು ಹರಡಲೂ ಕಾರಣಕರ್ತರಾದರು.
ಯುದ್ಧವನ್ನಾರಂಭಿಸಲು
ಒಂದು ಪ್ರದೇಶವನ್ನು ಹೊಂದಿರದ ಅಥವಾ ಕಿತ್ತೂರಿನಲ್ಲಾದಂತೆ ಪ್ರದೇಶವನ್ನು ಕಳೆದುಕೊಂಡಿದ್ದ
ಕಾರಣದಿಂದಾಗಿ ಕರ್ನಾಟಕದ ಬಂಡಾಯಗಾರರು ಗೆರಿಲ್ಲಾ ಯುದ್ಧತಂತ್ರದ ಮೊರೆ ಹೋದರು. ಪ್ರದೇಶ, ಪ್ರಮುಖ
ಪಟ್ಟಣಗಳು ಮತ್ತು ನಗರಗಳು ಶತ್ರುಗಳ ಕೈವಶವಾಗಿದ್ದಾಗ ಈ ಯುದ್ಧತಂತ್ರವನ್ನು ಅಳವಡಿಸಿಕೊಳ್ಳಬೇಕು.
ಈ ಯುದ್ಧತಂತ್ರವು ಅಧಿಕಾರಹೀನರಿಗೆ ಅಧಿಕಾರವನ್ನು ಪರಿಚಯಿಸುತ್ತದೆ ಮತ್ತು ಅವರನ್ನು ಅಧಿಕಾರಕ್ಕೆ
ತರುತ್ತದೆ. ಈ ಕಾರಣದಿಂದಾಗಿ ಗೆರಿಲ್ಲಾ ಯುದ್ಧತಂತ್ರವು ಸಾಮಾನ್ಯವಾಗಿ, ಜನಪ್ರಿಯ
ಮತ್ತು ಪ್ರಗತಿಪರ ಗುಣಗಳನ್ನು ಹೊಂದಿರುತ್ತದೆ.
ಮಾವೋ ತ್ಸೇ
ತುಂಗ್ ಬರೆಯುವಂತೆ: “ಗೆರಿಲ್ಲಾ ಯುದ್ಧತಂತ್ರವು ಕ್ರಾಂತಿಕಾರಿ ಗುಣಗಳನ್ನು ಹೊಂದಿದೆ. ಯಾಕೆಂದರೆ
ಗೆರಿಲ್ಲಾ ಯುದ್ಧತಂತ್ರವು ಮೂಲಭೂತವಾಗಿ ಜನರಿಂದ ಹುಟ್ಟಿದ್ದು ಮತ್ತು ಜನರ ಬೆಂಬಲದಿಂದ ಇರುವುದು, ಜನರ
ಅನುಕಂಪ ಮತ್ತು ಸಹಕಾರವಿಲ್ಲದೇ ಹೋದರೆ ಗೆರಿಲ್ಲಾ ಯುದ್ಧತಂತ್ರವು ಅಸ್ತಿತ್ವದಲ್ಲಿರುವುದಾಗಲೀ
ಅರಳುವುದಾಗಲೀ ಸಾಧ್ಯವೇ ಇಲ್ಲ.”208
ಗೆರಿಲ್ಲಾ
ಯುದ್ದತಂತ್ರವು ಅಧಿಕಾರರಹಿತ ಗ್ರಾಮೀಣ ಜನತೆಗೆ ಅತ್ಯಂತ ಸುಲಭವಾಗಿ ಎಟುಕುವಂತಹದು. ಮತ್ತು ಅದರ ಪರಿಣಾಮವಾಗಿ
ಅದು ಸ್ವಪ್ರೇರಣೆ, ವಿಕೇಂದ್ರೀಕೃತ ಲಕ್ಷಣ ಮತ್ತು ಕ್ರಮಬದ್ದತೆಯ ಕೊರತೆಯನ್ನು ತನ್ನೊಂದಿಗೆ ಹೊತ್ತುಕೊಂಡಿರುತ್ತದೆ.
1854ರಲ್ಲಿ
ಸ್ಪೇನಿನ ಗೆರಿಲ್ಲಾ ಯುದ್ಧದ ಬಗ್ಗೆ ಬರೆಯುತ್ತಾ ಕಾರ್ಲ್ ಮಾಕ್ರ್ಸ್ “ಗೆರಿಲ್ಲಾಗಳು
ಜನರ ನಿಜವಾದ ಶಸ್ತ್ರಗಳಾಗಿದ್ದರು” 209ಎಂದು
ಹೇಳುತ್ತಾರೆ.
ಗೆರಿಲ್ಲಾ
ಯುದ್ಧತಂತ್ರವು ಜನರೊಂದಿಗೆ ಸಾವಯವ ಸಹಜ ಸಂಬಂಧವನ್ನೇರ್ಪಡಿಸಿಕೊಳ್ಳುತ್ತದೆ. ಗೆರಿಲ್ಲಾ
ಯುದ್ಧತಂತ್ರವು ಜನರೆಂಬ “ಶಸ್ತ್ರಗಳ” ಮೇಲೆ
ಅವಲಂಬಿತವಾಗಿ ಅವರ ನಿರಂತರ ಬೆಂಬಲವನ್ನು ಅವಲಂಬಿಸಿರುತ್ತದೆ; ಇದು
ಗೆರಿಲ್ಲಾ ಯುದ್ಧತಂತ್ರಕ್ಕೂ ಉಳಿದ ಯುದ್ಧ ವಿಧಾನಗಳಿಗೂ ಇರುವ ವ್ಯತ್ಯಾಸ.
ಕ್ರಾಂತಿಕಾರಿ
ರೈತರಿಗೆ ಗೆರಿಲ್ಲಾ ಯುದ್ಧತಂತ್ರವು ಸ್ವಾಭಾವಿಕವಾಗಿಯೇ ಬರುತ್ತದೆ. ಇದರಲ್ಲಿ ಸೈನಿಕ
ತಂತ್ರಗಾರಿಕೆಗಳು ಮತ್ತು ಉಪಕರಣಗಳು, ತರಬೇತಿಯ
ಬೇಡಿಕೆಗಳು ಕಡಿಮೆ. ಇದರ ವಿಕೇಂದ್ರೀಕೃತ ಗುಣ ಮತ್ತು ಸಣ್ಣ ಸಣ್ಣ ರೂಪದ ಪಡೆಗಳು, ಆದೇಶ
ಮತ್ತು ಸಮನ್ವಯವನ್ನು ಸಲೀಸಾಗಿಸುತ್ತದೆ. ಕಿತ್ತೂರಿನ ಶೇಟ್ ಸನದಿಗಳು ಅಥವಾ ಮೈಸೂರಿನ ಕಂದಚಾರ
ಗುಮಾಸ್ತರು ಆ ಸಾಮ್ರಾಜ್ಯದ ಸೈನಿಕ ಶಕ್ತಿಗೆ ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅವರಿಗಿದ್ದ ತರಬೇತಿ ಕಡಿಮೆ ಮಟ್ಟದ್ದಾಗಿತ್ತು ಮತ್ತು ಅವರಲ್ಲಿದ್ದ ಶಸ್ತ್ರಗಳ ಗುಣಮಟ್ಟ ಕೂಡ
ಹೇಳಿಕೊಳ್ಳುವಂತದ್ದಾಗಿರಲಿಲ್ಲ. ಅವರಿಗೆ ಸೈನಿಕ ತಂತ್ರಗಾರಿಕೆ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ
ಮತ್ತು ಸಾಮಾನ್ಯ ಸೈನ್ಯದ ರೀತಿಯಲ್ಲಿ ಅವರಿಗೆ ಕಠಿಣ ತರಬೇತಿಗಳಿರುತ್ತಿರಲಿಲ್ಲ. ಆದ್ದರಿಂದ, ಸಂಗೊಳ್ಳಿ
ರಾಯಣ್ಣನಿಗಾಗಲೀ ಮಾನಪ್ಪನಿಗಾಗಲೀ ಸಾಮಾನ್ಯ ರೀತಿಯಲ್ಲಿ ಯುದ್ಧವನ್ನು ನಡೆಸುವುದು
ಕಷ್ಟಸಾಧ್ಯವಾಗಿತ್ತು. ಈ ಪರಿಸ್ಥಿತಿಯ ಒತ್ತಡದಿಂದಾಗಿ ಅವರು ಹೊಡೆ ಮತ್ತು ಓಡು ಯುದ್ಧವನ್ನು
ಪ್ರಾರಂಭಿಸಿದರು. ಕದನದಲ್ಲಿ ಅವರ ಯುದ್ಧ ರೇಖೆ ಮತ್ತು ಅವರ ಸ್ಥಾನ ನಿರಂತರವಾಗಿ
ಬದಲಾಗುತ್ತಿತ್ತು. ದೀರ್ಘ ಕಾಲೀನ ಯುದ್ಧವನ್ನು ಅವರು ನಡೆಸುತ್ತಿರಲಿಲ್ಲ, ತಮ್ಮನ್ನು
ತಾವು ಉಳಿಸಿಕೊಳ್ಳುವ ಸಲುವಾಗಿ. ಅವಿತುಕೊಳ್ಳುವಿಕೆ ಮತ್ತು ಅಚ್ಚರಿಯ ಆಘಾತ ನೀಡುವುದು ಅವರ
ಯುದ್ಧ ಸೂತ್ರವಾಯಿತು. ಶತ್ರುಗಳನ್ನು ಅಂತ್ಯವೇ ಇಲ್ಲದಂತೆ ಶೋಷಿಸಿದರು. ಈ ಗುಣಗಳನ್ನು
ಗುರುತಿಸುವಲ್ಲಿ ಬಂಡಾಯಗಾರರು ವಿಫಲವಾದಾಗ ವಿಧಿಯಿಲ್ಲದೇ ಅವರು ಸೋತುಹೋದರು.
ಒಂದೆಡೆ
ವ್ಯಾಪಕತೆ ಮತ್ತು ಛಲ, ಮತ್ತೊಂದೆಡೆ ಗೆರಿಲ್ಲಾ ಯುದ್ಧಗಳು ಹಾಗು
ಸಶಸ್ತ್ರ ಹೋರಾಟದ ತೀವ್ರತೆ ಇಂಗ್ಲೀಷ್ ಭಾಷೆಗೆ ಹೊಸದೊಂದು ಪದವನ್ನೇ ಸೇರಿಸಿಬಿಟ್ಟಿತು: ದಂಗೆ
(riot)). ಶಸ್ತ್ರಗಳೊಂದಿಗೆ ಪ್ರತಿಭಟನೆಗಿಳಿದ ರೈತರ (ryots) ಗುಣ, ಶತ್ರುಗಳ
ಮೇಲೆ ಮತ್ತವರ ಸಂಪತ್ತಿನ ಮೇಲೆ ಅವರು ನಡೆಸುತ್ತಿದ್ದ ದೀರೋದ್ದಾತ ದಾಳಿಗಳು ‘riot’ ಪದದ ಹುಟ್ಟಿಗೆ
ಏಕಮಾತ್ರ ಮೂಲ ಎಂದು ಹೇಳುತ್ತಾರೆ ಡೇವಿಡ್ ಅರ್ನಾಲ್ಡ್.210
ಆ.
ಮಲೆನಾಡಿನ ಗೆರಿಲ್ಲಾ ಯುದ್ಧ
ರೈತರನ್ನು
ಸಶಸ್ತ್ರ ಚಳುವಳಿಯ ಕಡೆಗೆ ಸೆಳೆಯುತ್ತಿದ್ದ ಕಲ್ಯಾಣಸ್ವಾಮಿಯ ಹೋರಾಟವನ್ನು ದಮನಿಸಲಾಯಿತು.
ಕಲ್ಯಾಣಸ್ವಾಮಿಯ ಹೋರಾಟ ಒಂದು ತಿಂಗಳ ಅವಧಿಯಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು; ಒಂದು
ತಿಂಗಳ ಅವಧಿಯು ರೈತ ಗೆರಿಲ್ಲಾ ಹೋರಾಟದ ಪ್ರಾರಂಭಕ್ಕೆ ತುಂಬಾ ಚಿಕ್ಕ ಸಮಯ. ಸಂಗೊಳ್ಳಿ ರಾಯಣ್ಣನ
ಹೋರಾಟದಲ್ಲಿ ಯುದ್ಧವು ನಾಲ್ಕು ತಿಂಗಳುಗಳವರೆಗೆ ಮುಂದುವರೆದಿತ್ತು. ಈ
ಕಾರಣದಿಂದಾಗಿ ಗೆರಿಲ್ಲಾ ಯುದ್ಧ ನಡೆಸುವ ರೈತರ ಕ್ರಿಯಾಶೀಲತೆಯನ್ನು ಅಲ್ಲಿ ಕಾಣಬಹುದಿತ್ತು.
ಕೆಲವು ಮೂಲಭೂತ ಲಕ್ಷಣಗಳನ್ನು ಅದು ತೋರಿಸಿಕೊಟ್ಟಿತು. ನಾಲ್ಕು ವರುಷದ ಇತಿಹಾಸವಿರುವ ನಗರದ
ಬಂಡಾಯದಲ್ಲಿ, ಸಶಸ್ತ್ರ ಹೋರಾಟದ ಹಂತವು ಮೂರು
ವರುಷಗಳಷ್ಟಿತ್ತು; ನಗರ ಬಂಡಾಯವು ರೈತರ ಗೆರಿಲ್ಲಾ
ಯುದ್ಧತಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿತು. ಇದು ತುಂಬ ದಿನಗಳ ಕಾಲ ಅಸ್ತಿತ್ವದಲ್ಲಿದ್ದ
ಕಾರಣ ಮತ್ತು ವ್ಯಾಪಕವಾಗಿದ್ದ ಕಾರಣ ಹೆಚ್ಚು ತಿಳುವಳಿಕೆ ನೀಡುವಂತಿತ್ತು. ರೈತ ಸಮೂಹದ ತ್ಯಾಗವು, ನಂತರದ
ದಿನಗಳಲ್ಲಿ ದುಡಿಯುವ ವರ್ಗಕ್ಕೆ ಅರಿವು ಮೂಡಿಸುವ ಕೆಲಸ ಮಾಡಿತು ಮತ್ತು ಸುದೀರ್ಘ ಜನರ
ಯುದ್ಧದಲ್ಲಿ ರೈತ ಗೆರಿಲ್ಲಾ ಯುದ್ಧತಂತ್ರವು ಮುಖ್ಯ ಭಾಗವಾಯಿತು. ಕರ್ನಾಟಕದಲ್ಲಿ ಈ ಹೋರಾಟಗಳು
ನಡೆದ ಒಂದು ಶತಮಾನದ ನಂತರ, ದುಡಿಯುವ ವರ್ಗದ
ಅಂತರಾಷ್ಟ್ರೀಯ ಮುಖಂಡ ಮಾವೋ ತ್ಸೇ ತುಂಗ್ ಪ್ರಪಂಚದ ಶೋಷಿತ ಜನರ ಸೈನ್ಯವನ್ನು ಕಟ್ಟಿ
ಊಳಿಗಮಾನ್ಯತೆ ಮತ್ತು ವಸಾಹತುಶಾಹಿಯ ವಿರುದ್ಧ ಹೋರಾಡಿದರು.
ಕರ್ನಾಟಕದ
ರೈತಾಪಿ ಸಶಸ್ತ್ರ ಚಳುವಳಿಗಳು ನಮಗೆ ತಿಳಿಸಿಕೊಡುವ ಮತ್ತೊಂದು ಪ್ರಮುಖ ಅಂಶವೆಂದರೆ ಈ ಚಳುವಳಿಯು
ದೀರ್ಘಕಾಲೀನವಾಗಿ ಉಳಿದುಕೊಳ್ಳುವುದಕ್ಕೆ ಮಲೆನಾಡಿನ ಭೂಪ್ರದೇಶದ ಕೊಡುಗೆ ಅಪಾರ. ಕರ್ನಾಟಕದಲ್ಲಿ
ಮಲೆನಾಡು ಉತ್ತರದಿಂದ ದಕ್ಷಿಣಕ್ಕೆ 700 ಕಿಲೋಮೀಟರುಗಳಷ್ಟು
ಹರಡಿಕೊಂಡಿದೆ; ಅತ್ಯದ್ಭುತ ಮರಗಳ ಸೂರಿರುವ ಮಲೆನಾಡಿನಲ್ಲಿ
ಊಳಿಗಮಾನ್ಯತೆ ಮತ್ತು ವಸಾಹತುಶಾಹಿಯ ವಿರುದ್ಧ ಹೋರಾಡುವ ಅಸಾಧಾರಣ ಛಾತಿ ತೋರುವ ರೈತ
ಸಮುದಾಯವಿದೆ. ಮಲೆನಾಡು ವೇಗವಾಗಿ ಹರಿಯುವ ಪಶ್ಚಿಮಮುಖಿ ನದಿಗಳಿಗೆ ಜನ್ಮ ಕೊಟ್ಟಿದೆ, ಅಡ್ಡಾದಿಡ್ಡಿಯಾಗಿ
ಪೂರ್ವ ದಿಕ್ಕಿಗೆ ಹರಿಯುವ ನದಿಗಳಿಗೂ ಜನ್ಮ ಕೊಟ್ಟಿದೆ. ಈ ನದಿಗಳು ಕರ್ನಾಟಕದ ಕಿರಿದಾದ ಕರಾವಳಿ
ಹಾಗೂ ವಿಸ್ತಾರವಾದ ಬಯಲುಸೀಮೆಯ ಜೀವಜಲವಾಗಿವೆ. ಈ ಮಲೆನಾಡಿನ ರಕ್ಷಣೆಯಲ್ಲಿಯೇ ಕರ್ನಾಟಕದಲ್ಲಿ
ರೈತ ಗೆರಿಲ್ಲಾ ಯುದ್ಧದ ಪ್ರಯತ್ನಗಳು ನಡೆದವು, ಗೆರಿಲ್ಲಾ ಯುದ್ಧ
ತಂತ್ರವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಐತಿಹಾಸಿಕ ಪಾತ್ರವಿರುವ ಮಲೆನಾಡಿನಲ್ಲಿ, ಅದರ
ಅನುಕೂಲಕರ ಭೂಪ್ರದೇಶದ ಕಾರಣದಿಂದ ಮತ್ತೊಮ್ಮೆ ತನ್ನ ಐತಿಹಾಸಿಕ ಮಹತ್ವದ ಪಾತ್ರವನ್ನು
ವಹಿಸುತ್ತದೆ. ಈ ಬಾರಿ ಜನರ ದೀರ್ಘಕಾಲಿಕ ಯುದ್ಧವು ಪ್ರಾರಂಭವಾಗುತ್ತದೆ, ಅರಣ್ಯದೊಳಗಿಂದ
ಪ್ರಾರಂಭವಾಗುವ ಈ ಯುದ್ಧವು ಬಯಲುಪ್ರದೇಶದಲ್ಲಿರುವ ಜನರ ಯುದ್ಧದೊಂದಿಗೆ ಸಮನ್ವಯ ಸಾಧಿಸಿ
ಊಳಿಗಮಾನ್ಯತೆಯನ್ನು ಇಲ್ಲವಾಗಿಸುತ್ತದೆ ಮತ್ತು ವಸಾಹತುಶಾಹಿಯನ್ನು ನಮ್ಮ ನೆಲದಿಂದ
ಒದ್ದೋಡಿಸುತ್ತದೆ. ಸಂಗೊಳ್ಳಿ ರಾಯಣ್ಣ ಮಲೆನಾಡಿನ ಪಾತ್ರವನ್ನು ಬೆಳಗಾವಿ, ಉತ್ತರ
ಕನ್ನಡ ಮತ್ತು ಧಾರವಾಡದಲ್ಲಿ ತೋರಿಸಿದ; ನಂತರ ನಗರ
ಹೋರಾಟವು ಮಲೆನಾಡಿನ ಉಪಯುಕ್ತತೆಯನ್ನು ಮತ್ತಷ್ಟು ದಕ್ಷಿಣ ದಿಕ್ಕಿಗೆ ತಂದಿತು, ಉತ್ತರ
ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು
ಮತ್ತು ಹಾಸನದ ಭೂಪ್ರದೇಶವು ನಗರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು; ಕಲ್ಯಾಣಸ್ವಾಮಿ
ದಕ್ಷಿಣ ಕನ್ನಡದ ಭೂಪ್ರದೇಶವನ್ನು ಉಪಯೋಗಿಸಿಕೊಂಡ ಮತ್ತು ಕೊಡಗಿನ ಬಾಗಿಲು ಬಡಿಯುವ ಪ್ರಯತ್ನ
ಮಾಡಿದ. ಹೀಗೆ ಗೆರಿಲ್ಲಾ ಯುದ್ಧವು ಮಲೆನಾಡಿನುದ್ದಕ್ಕೂ ಹಬ್ಬಿತು. ಎಂಟು ವರುಷಗಳ ಅವಧಿಯಲ್ಲಿ ಮಲೆನಾಡು
ಹಬ್ಬಿರುವ ಕರ್ನಾಟಕದ ಎಲ್ಲಾ ಒಂಭತ್ತು ಜಿಲ್ಲೆಗಳಲ್ಲೂ ರಾಜ್ಯದ ಪಡೆಗಳ ವಿರುದ್ಧ ಹೋರಾಟ
ನಡೆಯಿತು. ಇತಿಹಾಸ ನಮಗೆ ಕಲಿಸಿದಂತೆ, ದಕ್ಷಿಣದಿಂದ
ಉತ್ತರಕ್ಕೆ ಕರ್ನಾಟಕದ 21 ಜಿಲ್ಲೆಗಳಲ್ಲಿ 9
ಜಿಲ್ಲೆಗಳನ್ನು ಬೆಸೆದಿರುವ ಮಲೆನಾಡು ಪ್ರದೇಶವು ಜನರ ದೀರ್ಘಕಾಲಿಕ ಯುದ್ಧವನ್ನು ಪ್ರಾರಂಭಿಸಲು
ಬೇಕಾದ ಉತ್ತಮ ಕಾರಿಡಾರ್ ಆಗಿದೆ. 2,000 ಕಿಮಿ
ಉದ್ದವಿರುವ ಪಶ್ಚಿಮ ಘಟ್ಟದಲ್ಲಿ ಕರ್ನಾಟಕದ ಮಲೆನಾಡಿನ ಭಾಗವೇ ಅಧಿಕ. ಮದ್ರಾಸಿನ ಗವರ್ನರ್
ಲಷಿಂಗ್ಟನ್ ಗೆ ಈ ಭೂಪ್ರದೇಶವು ಯುದ್ಧತಂತ್ರದಲ್ಲಿ ಹೇಗೆ ಪ್ರಮುಖವಾಗಿದೆ ಎಂಬುದರ ಬಗ್ಗೆ
ಅರಿವಿತ್ತು ಎನ್ನುವುದಕ್ಕೆ 1831ರ ಏಪ್ರಿಲ್ 12ರಂದು
ಬರೆದ ಲೇಖನವೇ ಸಾಕ್ಷಿ: “ನನಗನ್ನಿಸುವಂತೆ ನಗರ ಪ್ರಾಂತ್ಯವು ಇರುವ ಭೌಗೋಳಿಕ ಪ್ರದೇಶದ
ಕಾರಣದಿಂದಾಗಿ ರಾಜ ಅದನ್ನು ತನ್ನ ವಶದಲ್ಲಿಟ್ಟುಕೊಳ್ಳುವುದು ಕಷ್ಟ; ವಶಪಡಿಸಿಕೊಳ್ಳಲು
ಘಾಸಿಯಾಗಲೇಬೇಕು, ರಾಜನ ಆಸಕ್ತಿಗಳು ಘಾಸಿಯಾಗಬೇಕು, ಜನರ
ಸಂತಸಕ್ಕೆ ತಡೆಯಾಗಬೇಕು, ಜೊತೆಗೆ ಬ್ರಿಟೀಷ್ (ಕೆನರಾ ಮತ್ತು
ಮಲಬಾರಿನಲ್ಲಿ) ಮತ್ತು ಮೈಸೂರಿನ (ಮೈಸೂರಿನಲ್ಲಿ) ಪರಸ್ಪರ ಬೆಳವಣಿಗೆಗೂ ಧಕ್ಕೆಯಾಗುತ್ತದೆ”.211
ಬಾಂಬೆಯಲ್ಲಿದ್ದಾಗ
ಬರೆದ ಲೇಖನವೊಂದರಲ್ಲೂ ಎಲ್ಫಿನ್ ಸ್ಟೋನ್ ಕಿತ್ತೂರಿನ ಸಶಸ್ತ್ರ ಹೋರಾಟವು ಮಹಾರಾಷ್ಟ್ರ ಮತ್ತು
ಗೋವಾ ಪ್ರದೇಶಗಳಿಗೆ ಮಾಡಬಹುದಾದ ಸಂಭಾವ್ಯ ಪರಿಣಾಮಗಳ ಬಗ್ಗೆ ಮಾತನಾಡುವಾಗ ಇದೇ ರೀತಿಯ
ಅನಿಸಿಕೆಯನ್ನು ವ್ಯಕ್ತಪಡಿಸುತ್ತಾನೆ. 1804ರಲ್ಲಿ ಬರೆದ
ಪತ್ರವೊಂದರಲ್ಲಿ ವೆಲ್ಲೆಸ್ಲಿ: “ಕಿತ್ತೂರು
ರಾಜ್ಯದೊಂದಿಗೆ ಯುದ್ಧ ಮಾಡಲು ನನಗೆ ಹಿಂಜರಿಕೆ. ಅದು ಅನಿವಾರ್ಯವಾದರೆ ಮಾತ್ರ ಅಥವಾ ನಮ್ಮ ಎಲ್ಲಾ
ಪಡೆಗಳನ್ನು ನಿಯೋಜಿಸಿದರೆ ಮಾತ್ರ ಕಿತ್ತೂರಿನ ಜೊತೆಗಿನ ಯುದ್ಧದಲ್ಲಿ ಭಾಗವಹಿಸಬಲ್ಲೆ. ವಯನಾಡು, ಕೂರ್ಗ್, ಬಲ್ಲಂ, ಬೆದನೂರು
ಮತ್ತು ಸೂಂಡಾದಂತೆಯೇ ಕಿತ್ತೂರು ಕೂಡ ಪಶ್ಚಿಮ ಘಟ್ಟದ ಭಾಗವಾಗಿದೆ. ಆ ಪ್ರದೇಶಗಳಂತೆಯೇ ಕಿತ್ತೂರು
ಕೂಡ ನಮ್ಮ ಸೈನ್ಯಕ್ಕೆ ಅತ್ಯಂತ ಕಷ್ಟಕರ ಭೂಪ್ರದೇಶವಾಗಿದೆ.”212
ಈ ಎಲ್ಲಾ
ಹೇಳಿಕೆಗಳನ್ನೂ ಘಟನೆಗಳನ್ನೂ ಒಟ್ಟುಗೂಡಿಸಿದಾಗ ಕರ್ನಾಟಕದಲ್ಲಿ ಭವಿಷ್ಯತ್ತಿನಲ್ಲಿ ನಡೆಯುವ
ಸಶಸ್ತ್ರ ಹೋರಾಟದಲ್ಲಿ ಮಲೆನಾಡು ವಹಿಸುವ ಪ್ರಮುಖ ಪಾತ್ರದ ಅರಿವಾಗುತ್ತದೆ. ಇದೇ ಸಮಯದಲ್ಲಿ, ಮಹಾರಾಷ್ಟ್ರ, ಗೋವಾ, ಕೇರಳ
ಮತ್ತು ತಮಿಳುನಾಡನ್ನು ಕರ್ನಾಟಕದ ಜೊತೆಗೆ ಬೆಸೆಯುವ ಪಶ್ಚಿಮ ಘಟ್ಟವು ಇಂಡಿಯಾದ ವಿಮೋಚನೆಯ
ಹಾದಿಯಾಗುತ್ತದೆ.
ಇ.
ದುರ್ಬಲಗೊಂಡ ರಾಷ್ಟ್ರೀಯತೆ, ಕ್ರಾಂತಿಯ ತಡೆ
ಮೇಕಿಂಗ್
ಹಿಸ್ಟರಿಯ ಮೊದಲ ಸಂಪುಟದಲ್ಲಿ ಕರ್ನಾಟಕದ ಮಧ್ಯಯುಗದಲ್ಲಿನ ಊಳಿಗಮಾನ್ಯತೆಯನ್ನು ಆರಂಭಿಕ, ಮಧ್ಯಮಕಾಲೀನ
ಮತ್ತು ಕೊನೆಯ ಹಂತಗಳನ್ನಾಗಿ ವಿಭಾಗಿಸಿದ್ದೆವು. ಆರಂಭಿಕ ಊಳಿಗಮಾನ್ಯತೆಯ ಹಂತದ ಸಮಯದಲ್ಲಿ
ಕರ್ನಾಟಕದಲ್ಲಿ ಊಳಿಗಮಾನ್ಯತೆಯು ಒಂದು ಸಾಮಾಜಿಕ ವ್ಯವಸ್ಥೆಯಾಗಿ ಕ್ರೋಡೀಕರಣಗೊಂಡರೆ, ಊಳಿಗಮಾನ್ಯತೆಯ
ಕೊನೆಯ ಹಂತವು ಬಂಡವಾಳಶಾಹಿ ಪ್ರಜಾಸತ್ತಾತ್ಮಕ ಕ್ರಾಂತಿಯು ಊಳಿಗಮಾನ್ಯತೆಯನ್ನು ಕಿತ್ತೆಸೆಯುವ
ಹಂತವಾಗಿತ್ತು.
ಬಂಡವಾಳಶಾಹಿ
ಪ್ರಜಾಸತ್ತಾತ್ಮಕ ಕ್ರಾಂತಿಯ ಪ್ರಾರಂಭಕ್ಕೆ ಅಡಿಪಾಯವಾಗಿದ್ದು ಕನ್ನಡ ರಾಷ್ಟ್ರೀಯತೆಯನ್ನು
ಬ್ರಿಟೀಷರು ಆಕ್ರಮಿಸಿದ ನಂತರ; ಇದರಿಂದ ಇಡೀ
ಸಾಮಾಜಿಕ ಅಭಿವೃದ್ಧಿಯ ದಿಕ್ಕೇ ಬದಲಾಯಿತು.
ಹನ್ನೆರಡನೆಯ
ಶತಮಾನದಲ್ಲಿ ವಚನಕಾರ ಚಳುವಳಿ ಹೊರಹೊಮ್ಮಿದ ನಂತರ - ಇದು ಕರ್ನಾಟಕದಲ್ಲಿ ಆರಂಭಿಕ
ಊಳಿಗಮಾನ್ಯತೆಯು ಮಧ್ಯಮಕಾಲೀನ ಊಳಿಗಮಾನ್ಯತೆಗೆ ಬದಲಾದ ಕಾಲವೂ ಹೌದು - ಊಳಿಗಮಾನ್ಯತೆಯ ವಿರುದ್ಧದ
ವರ್ಗ ಹೋರಾಟವು ಸಾಮಾಜಿಕ ಅಭಿವೃದ್ಧಿಯ ಭಾಗವೇ ಆಗಿತ್ತು. ಹದಿನೇಳನೆ ಶತಮಾನದ ಪ್ರಾರಂಭದೊಂದಿಗೆ
ಪಾಳೇಗಾರ ದೊರೆಗಳ ವರ್ಗದ ವಿರುದ್ಧ ಜನಪ್ರಿಯ ಚಳುವಳಿಗಳು ಪ್ರಾರಂಭವಾಗಿದ್ದವು ಮತ್ತು ನಂತರದಲ್ಲಿ
ಇದನ್ನು ಚಿಕ್ಕದೇವರಾಜ ಒಡೆಯರ್ ಹಾಗೂ ತದನಂತರ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್
ಉಪಯೋಗಿಸಿಕೊಂಡರು, ಇದರಿಂದಾಗಿ ಈ ಪದರದ ಊಳಿಗಮಾನ್ಯತೆಯು ಅಳಿಯಿತು
ಮತ್ತು ವರ್ತಕ ಬಂಡವಾಳಶಾಹಿಯ ಒಟ್ಟುಗೂಡುವಿಕೆಗೆ ಹಾಗೂ ಬೆಳವಣಿಗೆಗೆ ಹೊಸ ಅವಕಾಶಗಳು
ತೆರೆದುಕೊಂಡವು. ಒಂದೆಡೆ ಹಳ್ಳಿ ಮಟ್ಟಕ್ಕಿಂತ ಮೇಲಿದ್ದ ಊಳಿಗಮಾನ್ಯ ವರ್ಗ, ಅಂದರೆ
ಪಾಳೇಗಾರರು, ನಿರ್ನಾಮವಾದರು; ಮತ್ತೊಂದೆಡೆ
ಹಳ್ಳಿಯೊಳಗೇ ಬೇರುಬಿಟ್ಟಿದ್ದ ಶಾನುಭೋಗರು ಮತ್ತು ಪಟೇಲರು ಅರೆಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆಯ
ಪ್ರಧಾನ ಆಧಾರವಾದರು. ಹದಿನೆಂಟನೆಯ ಶತಮಾನದ ಕೊನೆಯ ದಶಕದಲ್ಲಿ ಕರ್ನಾಟಕದ ಸಾಮಾಜಿಕ ರಚನೆಯು
ಕೈಗಾರಿಕೋದ್ಯಮಿ ಬಂಡವಾಳಶಾಹಿಗಳ ಹುಟ್ಟಿಗೆ ಸಾಕ್ಷಿಯಾಯಿತು. ಹಳ್ಳಿಗಳ ಕಡೆ ಬಂಡವಾಳಶಾಹಿ
ಸಂಬಂಧಗಳು ಪ್ರವೇಶಿಸುವುದರೊಂದಿಗೆ ಊಳಿಗಮಾನ್ಯ ವರ್ಗದ ಒಂದು ಪದರದ ನಾಶದೊಂದಿಗೆ ಊಳಿಗಮಾನ್ಯ
ಅಧಿಕಾರ ದುರ್ಬಲವಾಯಿತು. ಹೈದರ್ ಮತ್ತು ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡುವುದರೊಂದಿಗೆ, ಅವರು
ಸಾಮಾಜಿಕ ಪರಿಸ್ಥಿತಿ ಮತ್ತಷ್ಟು ಪ್ರಬುದ್ಧವಾಗುವುದಕ್ಕೆ, ಬಂಡವಾಳಶಾಹಿಯ
ಏಳಿಗೆಯ ಜೊತೆಗೆ ರೈತರ ಸಹಾಯದಿಂದ ಊಳಿಗಮಾನ್ಯತೆಯನ್ನು ಅಂತ್ಯಗೊಳಿಸುವುದಕ್ಕೆ ಕಾರಣರಾದರು.
ಕರ್ನಾಟಕಕ್ಕೆ ಆಗ ಬೇಕಿದ್ದಿದ್ದು ಸ್ವಲ್ಪ ಹೆಚ್ಚಿನ ಸಮಯವಷ್ಟೇ. ಇನ್ನೊಂದಷ್ಟು ಸಮಯ
ಸಿಕ್ಕಿದ್ದರೆ ರೈತಾಪಿಗಳು ಮತ್ತು ಇನ್ನೂ ಅನೇಕ ದಮನಿತ ವರ್ಗಗಳು ಬಂಡವಾಳಶಾಹಿಗಳ ನೇತೃತ್ವದಲ್ಲಿ
ಜೊತೆ ಸೇರಿ, ಬಂಡವಾಳಶಾಹಿ ಕ್ರಾಂತಿಯ ವಿಜಯಕ್ಕೆ
ಕಾರಣಕರ್ತರಾಗುತ್ತಿದ್ದರು.
ಬಂಡವಾಳಶಾಹಿಯ
ಜನನವಾಗಿತ್ತು. ರೈತರು ಮತ್ತು ಕುಶಲಕರ್ಮಿಗಳ ಊಳಿಗಮಾನ್ಯ ವಿರೋಧಿ ಹೋರಾಟವು ಬಂಡವಾಳಶಾಹಿ
ಪ್ರಬುದ್ಧವಾಗಲು ಅವಕಾಶ ನೀಡುತ್ತಿತ್ತೇನೋ, ಈ ಹೋರಾಟವು ರಾಜಕೀಯ
ವಾಸ್ತವವಾಗಿ ಪರಿವರ್ತನೆಯಾಗಿ, ಕ್ರಾಂತಿಗೆ
ಪ್ರಭಾವಶಾಲಿ ನಾಯಕತ್ವವನ್ನು ಒದಗಿಸುತ್ತಿತ್ತೇನೋ. ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಮೊದಲ
ಸಂಪುಟದಲ್ಲಿ ನೋಡಿದಂತೆ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯಲ್ಲಿ ಇದ್ದ ಕೊರತೆಯೆಂದರೆ ರೈತರ
ಸಂಘಟನೆ. ಆಗಷ್ಟೇ ಪಾಳೇಗಾರರ ವಿರುದ್ಧ ಯಶಸ್ವಿ ಯುದ್ಧವನ್ನು ನಡೆಸಿ ಗೆದ್ದು ಮುಂದೆ ನಡೆಸಬೇಕಾದ
ಸುಧಾರಣೆಗಳ ಬಗ್ಗೆ ಯೋಚಿಸುತ್ತ ಬಿಸಿಲು ಕಾಯಿಸುತ್ತಾ ಕುಳಿತುಬಿಟ್ಟಿದ್ದೇ ಇದಕ್ಕೆ ಕಾರಣ.
ಹದಿನೆಂಟನೆ ಶತಮಾನದ ಕೊನೆಯ ಭಾಗದಲ್ಲಿ ಕರ್ನಾಟಕದ ರೈತರಲ್ಲಿದ್ದ ಶಾಂತಿಯು, ಚಂಡಮಾರುತಕ್ಕೆ
ಮುನ್ನ ಇರುವ ಶಾಂತತೆಯಾಗಿತ್ತು.
ಆದರೆ ಅಟ್ಲಾಂಟಿಕ್
ನಿಂದ ಪ್ರಾರಂಭವಾದ ಶೀತ ಮಾರುತ ಕರ್ನಾಟಕಕ್ಕೆ ಬ್ರಿಟೀಷ್ ದೊರೆಗಳನ್ನು ತಂದು ಬಿಸಾಕಿತು. ಇದು
ಕನ್ನಡ ರಾಷ್ಟ್ರದ ಬಂಡವಾಳಶಾಹಿ ಪ್ರಜಾಸತ್ತಾತ್ಮಕ ಕ್ರಾಂತಿಯ ಭವಿಷ್ಯವನ್ನು
ಮಬ್ಬಾಗಿಸಿಬಿಟ್ಟಿತು.
ಮೊದಲಿಗೆ ಬ್ರಿಟೀಷರು
1799ರಲ್ಲಿ ಟಿಪ್ಪು ಸುಲ್ತಾನನ ನೇತೃತ್ವದಲ್ಲಿದ್ದ ಮೈಸೂರು ಸೈನ್ಯವನ್ನು
ಸೋಲಿಸುವ ಮೂಲಕ ಸ್ಥಳೀಯ ರಾಜಕೀಯ ಆಳ್ವಿಕೆಯನ್ನು ಇಲ್ಲವಾಗಿಸಿದರು, 1818ರಲ್ಲಿ
ಮರಾಠರನ್ನು ಸೋಲಿಸಿದರು ಮತ್ತು ಹೈದರಾಬಾದಿನ ನಿಜಾಮ ಹಾಗೂ ಕೊಡಗಿನ ವೀರರಾಜೇಂದ್ರನ
ವಿಧೇಯತೆಯನ್ನು ಖರೀದಿ ಮಾಡಿದರು.
ಎರಡನೆಯದಾಗಿ ಆಗಷ್ಟೇ
ಶಿಶುವಾಗಿ ಬೆಳೆಯಲಾರಂಭಿಸಿದ್ದ ಬಂಡವಾಳಶಾಹಿ ಕೈಗಾರಿಕೆಯನ್ನು ಹಾಗೂ ಯೌವನದ ಹಂತ ತಲುಪಿದ್ದ
ರಾಷ್ಟ್ರೀಯ ವಾಣಿಜ್ಯತೆಯನ್ನು ಸ್ಥಳೀಯ ಕೈಗಾರಿಕೆ ಮತ್ತು ವ್ಯಾಪಾರವನ್ನು ನಾಶ ಪಡಿಸುವ ಮೂಲಕ
ಬ್ರಿಟೀಷ್ ವಸಾಹತುಶಾಹಿ ಮರಣದಂಚಿಗೆ ನೂಕಿತು.
ಮೂರನೆಯದಾಗಿ ಸಾಯುತ್ತಿದ್ದ
ಊಳಿಗಮಾನ್ಯ ವರ್ಗದ ಕೈಗಳನ್ನು ವಸಾಹತುಶಾಹಿ ಬಲಪಡಿಸಿತು, ಮತ್ತು
ವಾಸ್ತವದಲ್ಲಿ ಕೃಷಿಶ್ರಮಿಕ - ಕುಶಲಕರ್ಮಿ - ದೇಶೀ ಸೈನ್ಯವನ್ನು ಊಳಿಗಮಾನ್ಯ ದೊರೆಗಳ ತೆಕ್ಕೆಗೆ
ನೂಕಿಬಿಟ್ಟಿತು. ಇದರಿಂದಾಗಿ ಊಳಿಗಮಾನ್ಯತೆ ಮತ್ತೆ ಭಾಗಶಃ ಮರುಕಳಿಸಿತು.
ನಾಲ್ಕನೆಯದಾಗಿ, ಕರ್ನಾಟಕದ
ಸ್ಥಳೀಯ ಮಾರುಕಟ್ಟೆಯಲ್ಲಿ ಮೂಡುತ್ತಿದ್ದ ಏಕತೆಯನ್ನು ವಸಾಹತುಶಾಹಿ ಮುರಿದು ಹಾಕಿತು. ಕನ್ನಡ
ರಾಷ್ಟ್ರದ ಆರ್ಥಿಕತೆಯಲ್ಲಿ ಹೆಚ್ಚುತ್ತಿದ್ದ ಏಕತೆ, ಕೃಷಿ
ಮತ್ತು ಕೈಗಾರಿಕೆಗಳ ನಡುವೆ ಬೆಳೆಯುತ್ತಿದ್ದ ಏಕತೆಯನ್ನು ಮುರಿದು ಹಾಕಿದ ಪರಿಣಾಮದಿಂದ
ಕರ್ನಾಟಕವು ಹಲವು ಡಜನ್ನು ಚೂರುಗಳಾಗಿ ಒಡೆದುಹೋಯಿತು.
ಈ ಎಲ್ಲಾ ನೀತಿಗಳ
ಒಟ್ಟಾರೆ ಪರಿಣಾಮವೆಂದರೆ ಆಗಷ್ಟೇ ಹುಟ್ಟಿದ್ದ ಕೈಗಾರಿಕಾ ಬಂಡವಾಳಶಾಹಿಯ ಪತನ.
ತೊಟ್ಟಿಲಲ್ಲಿದ್ದಾಗಲೇ ಅದರ ಕುತ್ತಿಗೆ ಹಿಸುಕಿ ಸಾಯಿಸಲಾಯಿತು. ಹೀಗಾಗಿ ನಾಯಕತ್ವ ವಹಿಸಲು
ಸ್ಥಳೀಯ ಬಂಡವಾಳಶಾಹಿ ಇಲ್ಲದೆಯೇ ಬಂಡವಾಳಶಾಹಿ ಕ್ರಾಂತಿಯು ಅನಾಥವಾಯಿತು. ರಾಜಕೀಯದ ದೇಹದಲ್ಲಿ
ತಲೆಯೇ ಇಲ್ಲದಂತಾಯಿತು.
ಹಾಗಿದ್ದರೂ ಸಹ ಕೃಷಿಶ್ರಮಿಕರ
ಸಂಯೋಜನೆ ಮುಖ್ಯವಾಗಿದ್ದ ದೇಹವಿನ್ನೂ ಅಸ್ತಿತ್ವದಲ್ಲಿತ್ತು, ಒಟ್ಟಾಗಿತ್ತು:
ಇನ್ನೂ ಬದುಕಿತ್ತು. ಕರ್ನಾಟಕದ ಮೇಲಿನ ಆಕ್ರಮಣವು ಕೃಷಿಶ್ರಮಿಕರ ಮೇಲೆ ಒಂದಾದ ಮೇಲೊಂದರಂತೆ
ಪೆಟ್ಟುಗಳನ್ನು ಕೊಟ್ಟಿತು: ಅದರ ಚೂರು ಪಾರು ಉಳಿತಾಯವನ್ನು ನಿರ್ಲಜ್ಜೆಯಿಂದ ದೋಚಲಾಯಿತು, ಕೃಷಿ
ಹತಾಶ ಪರಿಸ್ಥಿತಿಯಲ್ಲಿತ್ತು, ನಾಡಿಗೆ ಬರ
ಹಿಂಬಾಲಿಸಿತ್ತು, ಶೋಷಣೆ ಮತ್ತು ದೈಹಿಕ ಶಿಕ್ಷೆಗಳನ್ನು
ವ್ಯವಸ್ಥಿತಗೊಳಿಸಲಾಯಿತು ಮತ್ತು ಬ್ರಿಟೀಷ್ ವಸಾಹತುಶಾಹಿ ಉಡುಗೊರೆಯಾಗಿ ಕೊಟ್ಟಿದ್ದ ಮುಳ್ಳಿನ
ಕಿರೀಟವನ್ನು ಭ್ರಷ್ಟ ಅಧಿಕಾರಶಾಹಿ ಮತ್ತು ಊಳಿಗಮಾನ್ಯ ದೊರೆಗಳು ಕೃಷಿಶ್ರಮಿಕರ ಮೇಲೆ
ಅಲಂಕರಿಸಿದರು. ಕೃಷಿಶ್ರಮಿಕರನ್ನು ಬಂಡಾಯವೇಳುವುದಕ್ಕೆ ಬರೀ ತಳ್ಳಲಿಲ್ಲ, ಛಡಿ
ಏಟು ಕೊಟ್ಟು ಬಂಡಾಯವೇಳುವಂತೆ ಮಾಡಿದರು.
1829ರಿಂದ 1837ರವರೆಗೆ
ಅಂದರೆ ಪೂರ್ತಿ ಎಂಟು ವರುಷಗಳವರೆಗೆ, ಕೃಷಿಶ್ರಮಿಕರ
ಸಮೂಹ ಶಸ್ತ್ರಗಳೊಂದಿಗೆ ಬಂಡೆದ್ದಿತು. ಒಂದು ಹಳ್ಳಿಯಲ್ಲಿ ಮಾತ್ರವಲ್ಲ ಒಂದು ಜಿಲ್ಲೆಯಲ್ಲ
ಮಾತ್ರವಲ್ಲ ಒಂದು ಪ್ರದೇಶದಲ್ಲಿ ಮಾತ್ರವಲ್ಲ ಬದಲಿಗೆ ಇಡೀ ಕರ್ನಾಟಕದ ಉದ್ದಗಲಕ್ಕೂ ಬಂಡೆದ್ದಿತು. ವಸಾಹತುಶಾಹಿ
ಊಳಿಗಮಾನ್ಯ ರಾಜ್ಯದ ವಿರುದ್ಧ ಗೆರಿಲ್ಲಾ
ಯುದ್ಧದಲ್ಲಿ ತೊಡಗಿತು. ಹಳ್ಳಿಗಳ ಮಟ್ಟದಲ್ಲಿ ಊಳಿಗಮಾನ್ಯ ವರ್ಗಗಳನ್ನು
ತೊಡೆದುಹಾಕಿತು.
ಈ ಹೋರಾಟದ
ಪ್ರಧಾನ ಲಕ್ಷಣಗಳನ್ನು ಗೌರವಿಸಿದರಷ್ಟೇ ಇದರ ಐತಿಹಾಸಿಕ ಪ್ರಾಮುಖ್ಯತೆ ಅರಿವಾಗಲು ಸಾಧ್ಯ.
ಮೊದಲಿಗೆ ಈ
ಹೋರಾಟವು ಊಳಿಗಮಾನ್ಯತೆಯ ವಿರುದ್ಧವಿತ್ತು. ಊಳಿಗಮಾನ್ಯ ದೊರೆಗಳಿಗೆ ಯಾವುದೇ ಅವಕಾಶ ನೀಡದಂತೆ
ಅವರನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿರ್ಧಾರ ಮಾಡಿದ್ದಂತಹ ಹೋರಾಟವಾಗಿತ್ತು ಇದು. ಹಾಗಾಗಿ ಈ
ಹೋರಾಟವು ಶತಮಾನಗಳಷ್ಟು ಹಳೆಯದಾದ ಜನಸಮೂಹದ ಸಂಸ್ಕೃತಿಯ ಭಾಗದಂತಿದ್ದ ಊಳಿಗಮಾನ್ಯತೆಯ ವಿರೋಧಿ
ಹೋರಾಟದ ಮುಂದುವರಿಕೆಯಾಗಿತ್ತು. ಶತಮಾನಗಳಷ್ಟು ಹಳೆಯ ಹೋರಾಟದ ಪರಾಕಾಷ್ಠ ಸ್ಥಿತಿಯಾಗಿತ್ತು ಇದು
ಎಂದರೆ ತಪ್ಪಾಗಲಾರದು.
ಎರಡನೆಯದಾಗಿ ಪ್ರತಿಯೊಂದು
ದೃಷ್ಠಿಯಿಂದಲೂ ಇದು ಪರಾಕಾಷ್ಠೆಯ ಸ್ಥಿತಿಯಾಗಿತ್ತು; ಯಾಕೆಂದರೆ, ಮೈಸೂರು
ಪ್ರದೇಶದಲ್ಲಿ ಹಳ್ಳಿಯಿಂದ ಮೇಲ್ಮಟ್ಟದಲ್ಲಿದ್ದ ಊಳಿಗಮಾನ್ಯ ದೊರೆಗಳಾದ ಪಾಳೇಗಾರರು ಈಗಾಗಲೇ
ನಿರ್ನಾಮವಾಗಿ ಹೋಗಿದ್ದರು. ಊಳಿಗಮಾನ್ಯ ವರ್ಗದಲ್ಲಿ ಉಳಿದಿದ್ದವರು ಮುಖ್ಯವಾಗಿ ಹಳ್ಳಿಗಳ ಪಟೇಲರು
ಮತ್ತು ಶಾನುಭೋಗರು. ಕೃಷಿಶ್ರಮಿಕರ ಸಮೂಹವು ಊಳಿಗಮಾನ್ಯ ವ್ಯವಸ್ಥೆಯ ಈ ಸಾಮಾಜಿಕ ತಳಹದಿಯನ್ನು
ಧೃಡ ನಿರ್ಧಾರದೊಂದಿಗೆ ಬಡಿದು ಹಾಕಿದರು. ಕೃಷಿಶ್ರಮಿಕರ ಸಮೂಹವು ನೂರಾರು ಹಳ್ಳಿಗಳಲ್ಲಿ ವಸಾಹತು
ಶಕ್ತಿಯನ್ನು ನಾಶಪಡಿಸಿದರು, ಹಳ್ಳಿಗಳ
ಮಟ್ಟದಲ್ಲಿ ವಸಾಹತುವಿನ ಜೊತೆಗೆ ಕೈಜೋಡಿಸಿದ್ದ ಊಳಿಗಮಾನ್ಯತೆಯನ್ನು ಒಂದೋ ನಾಶಪಡಿಸಿದರು ಇಲ್ಲಾ
ಅವರು ಒಡ್ಡಿದ ಪ್ರತಿರೋಧವನ್ನು ಮೀರಿ ಗೆದ್ದರು.
ಹಾಗಾಗಿ ಈ ಎಂಟು
ವರ್ಷದಲ್ಲಿ ನಡೆದ ಘಟನೆಗಳು ಊಳಿಗಮಾನ್ಯ ವಿರೋಧಿ ಬಂಡವಾಳಶಾಹಿ ಪ್ರಜಾಸತ್ತಾತ್ಮಕ
ಕ್ರಾಂತಿಯಾಗಿತ್ತು, ಬಂಡವಾಳಶಾಹಿ ಇಲ್ಲಿ ಇರಲಿಲ್ಲ ಅಷ್ಟೇ.
ನಿರ್ದೇಶಕನಿಲ್ಲದ ಸಾಮಾಜಿಕ ನಾಟಕವಾಗಿತ್ತಿದು. ಇದೊಂದು ದುರಂತ ಮಹಾಕಾವ್ಯ. ಬ್ರಿಟೀಷ್ ಮಹಿಳೆಯರು
ಮತ್ತು ಮಹನೀಯರು ನಕ್ಕುಬಿಟ್ಟಿರಬೇಕು, ಆದರೆ ಕರ್ನಾಟಕದ
ಜನಸಮೂಹ ಪರಾಭವದಿಂದ ತಲೆತಗ್ಗಿಸಿತು. ಇದೊಂದು ಬಂಡವಾಳಶಾಹಿ ಕ್ರಾಂತಿಯಾಗಿತ್ತು, ಆದರೆ
ಬಂಡವಾಳಶಾಹಿ
ಇಲ್ಲದ ಕ್ರಾಂತಿಯಾಗಿತ್ತು.
ಮೂರನೆಯದಾಗಿ ಈ
ಹೋರಾಟವು ಹಳ್ಳಿಗಳಲ್ಲಿ ಊಳಿಗಮಾನ್ಯ ದೊರೆಗಳ ಸದ್ದಡಗಿಸುವುದರ ಜೊತೆಗೆ ಹಲವು ತಾಲ್ಲೂಕುಗಳಲ್ಲೂ
ಅವರನ್ನು ತಣ್ಣಗಾಗಿಸಿತು. ವಸಾಹತುಶಾಹಿ - ಊಳಿಗಮಾನ್ಯ ಅಧಿಕಾರಶಾಹಿಯಿದ್ದ ಅಸಂಖ್ಯಾತ
ಕೋಟೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು; ಇಡೀ ಫೌಜುದಾರಿಯ
ಕೇಂದ್ರ ಸ್ಥಾನವಾದ ನಗರವನ್ನು ಬಂಡಾಯವೆದ್ದ ಜನರು ದೀರ್ಘಕಾಲದವರೆಗೆ ತಮ್ಮ
ವಶದಲ್ಲಿಟ್ಟುಕೊಂಡಿದ್ದರು.
ಬೂದಿ ಬಸಪ್ಪ
ನಾಯಕನನ್ನು ಹೊಗಳಲೇ ಬೇಕಾಗಿತ್ತು ಮತ್ತು ಇಕ್ಕೇರಿ ಪಾಳೇಗಾರರನ್ನು ಪುನರ್ ಸ್ಥಾಪಿಸಿದ್ದನ್ನು
ಘೋಷಿಸಿದ್ದರಲ್ಲಿ ಅನುಮಾನವಿರಬೇಕಿಲ್ಲ. ಇದರಲ್ಲಿ ಮತ್ತದೇ ಊಳಿಗಮಾನ್ಯತೆಯ ಕಡಗ ಇಲ್ಲವೇ ಎಂದರೆ ಖಂಡಿತವಾಗಿ
ಇದೆ. ಇದು ಯಾಕೆ ಆಯಿತೆಂದರೆ ಹೋರಾಟವನ್ನು ಮುನ್ನಡೆಸಬೇಕಿದ್ದ ಕನ್ನಡದ ಬಂಡವಾಳಶಾಹಿ ಜನತೆ
ಮಾತನಾಡುವ ಮುನ್ನವೇ ಅದರ ಕತ್ತು ಹಿಚುಕಲಾಗಿತ್ತು. ಇದು ಯಾಕೆ ಆಯಿತೆಂದರೆ ಇದು ಬಂಡವಾಳಶಾಹಿ
ಇಲ್ಲದ ಬಂಡವಾಳಶಾಹಿ ಕ್ರಾಂತಿಯಾಗಿತ್ತು.
ನಾಲ್ಕನೆಯದಾಗಿ ಊಳಿಗಮಾನ್ಯತೆಯ
ಚೌಕಟ್ಟಿನೊಳಗೇ ಕೃಷಿಶ್ರಮಿಕರ ಸಮೂಹವು ತಮ್ಮ ಬೇಡಿಕೆಗಳನ್ನು ಇಡುತ್ತಿದ್ದರೂ ರಾಜಕೀಯ
ಪ್ರಜಾಪ್ರಭುತ್ವದ ಸಬಲ ಸಂಪ್ರದಾಯಗಳು ರೂಪುಗೊಂಡವು. ಆ ಕಾಲದ ಸಾಮರ್ಥ್ಯದ ಬಗ್ಗೆ ‘ಕೂಟ’ ರಚನೆಯು
ನಮಗೆ ಉದಾಹರಣೆಯಾಗಿ ನಿಲ್ಲುತ್ತದೆ ಮತ್ತಿದು ಹೊಸತೊಂದು ಯುಗಕ್ಕೆ ಬಾಗಿಲು ತೆರೆಯಿತು. ‘ಕೂಟ'ವು
ಜನಸಮೂಹವನ್ನು ಪ್ರತಿನಿಧಿಸುವ ರಾಜಕೀಯ ಸಂಸ್ಥೆಯಾಯಿತು. ಅದು ಹಳ್ಳಿಗಳಿಂದ ಬೆಳೆಯಿತು, ತಾಲ್ಲೂಕುಗಳಿಗೆ
ವಿಸ್ತರಿಸಿತು ಮತ್ತು ಇಡೀ ಜಿಲ್ಲೆಗೆ ವ್ಯಾಪಿಸಿತು. ಅದು ತನ್ನದೇ ಆದ ಕಾರ್ಯಕಾರಿ ಸಮಿತಿಯನ್ನು
ರಚಿಸಿಕೊಂಡಿತು. ಇದರಲ್ಲಾಗಲೇ ಮೂರು ಹಂತದ ರಚನೆಯನ್ನು ಕಾಣಬಹುದಿತ್ತು. ಜಿಲ್ಲಾ ಕೂಟವನ್ನು
ಮಹಾಕೂಟ ಅಥವಾ ಗ್ರ್ಯಾಂಡ್ ಕಾಂಗ್ರೆಸ್ ಎಂದು ಕರೆಯಲಾಗುತ್ತಿತ್ತು. ಕನ್ನಡ ಬಂಡವಾಳಶಾಹಿ ಇನ್ನೂ
ಜೀವಂತವಿದ್ದಿದ್ದರೆ, ಮತ್ತು ಆತನಿಗೆ ಮುನ್ನಡೆಸುವ ಅವಕಾಶ
ಸಿಕ್ಕಿದ್ದರೆ, ಕನ್ನಡ ರಾಷ್ಟ್ರಕ್ಕಾಗಿ ಮಹಾಕೂಟ ಅಥವಾ ಅದೇ
ರೀತಿಯ ಸಂಸ್ಥೆಯೊಂದು ರೂಪುಗೊಳ್ಳುತ್ತಿತ್ತು ಎಂಬುದನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವೇ? ಇಂತಹ
ಪರಿಸ್ಥಿತಿಯಲ್ಲಿ ಮಹಾಕೂಟ ಅಥವಾ ಅದನ್ನು ಹೋಲುವ ಸಂಸ್ಥೆಯೊಂದು ಕನ್ನಡ ರಾಷ್ಟ್ರದಲ್ಲಿ ರಾಜಕೀಯ
ಪ್ರಜಾಪ್ರಭುತ್ವದ ಸಂಸ್ಥೆಯಾಗುವ ಕರ್ನಾಟಕದ ಸಂಸತ್ತಿನಂತೆ ರೂಪುಗೊಳ್ಳುವುದನ್ನು ತಡೆಯುವ ಶಕ್ತಿ
ಯಾವುದಿತ್ತು?
ಐದನೆಯದಾಗಿ ಮೂರು
ರೈತ ಕಾರ್ಮಿಕ ಬಂಡಾಯಗಳನ್ನು ಒಟ್ಟಾಗಿ ಗಮನಿಸಿದಾಗ ಹೆಚ್ಚು ಕಡಿಮೆ ಇಡೀ ಕರ್ನಾಟಕವನ್ನು ಈ ಬಂಡಾಯ
ಒಳಗೊಂಡಿದ್ದು ಅರಿವಿಗೆ ಬರುತ್ತದೆ. ನಾವೀಗಾಗಲೇ ತಿಳಿದುಕೊಂಡಂತೆ ರಾಯಚೂರು
ಪ್ರಕ್ಷುಬ್ಧವಾಗಿತ್ತು ಮತ್ತು ಬಳ್ಳಾರಿಯಲ್ಲೂ ಕೂಡ ಹೋರಾಟದ ಬಗ್ಗೆ ಸಹಾನುಭೂತಿ
ಮೂಡಲಾರಂಭಿಸಿತ್ತು. ಬಂಡಾಯವು ರಾಷ್ಟ್ರೀಯ ಗುಣಗಳನ್ನು ಪಡೆದುಕೊಂಡಿತ್ತು, ಕನ್ನಡ
ರಾಷ್ಟ್ರೀಯತೆಯಿದ್ದ ಪ್ರಾಂತ್ಯಗಳೆಲ್ಲವನ್ನೂ ಒಳಗೊಂಡಿತ್ತು. ಇದನ್ನು ಕನ್ನಡದ ಬಂಡವಾಳಶಾಹಿ
ಮುನ್ನಡೆಸಿದ್ದಿದ್ದರೆ, ಊಳಿಗಮಾನ್ಯತೆ ಮತ್ತು ವಸಾಹತುಶಾಹಿಯನ್ನು ಇಡೀ
ಕನ್ನಡ ರಾಷ್ಟ್ರದಿಂದ ಕಿತ್ತೊಗೆಯುವ ಸಾಧ್ಯತೆಗಳಿದ್ದವು ಮತ್ತು ರಾಜಕೀಯ ಪ್ರಜಾಪ್ರಭುತ್ವದ
ನಿಜವಾದ ರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಯಾಗುತ್ತಿತ್ತು. ಇದು ಇಡೀ ಕನ್ನಡ ರಾಷ್ಟ್ರದಲ್ಲಿ ಕನ್ನಡದ
ದೇಶಿ ಮಾರುಕಟ್ಟೆಯ ಬಲವರ್ಧನೆಗೆ ಕಾರಣವಾಗುತ್ತಿತ್ತು.
ಆರನೆಯದಾಗಿ ಕೃಷಿಶ್ರಮಿಕರ
ಸಮೂಹವು ಊಳಿಗಮಾನ್ಯತೆಯ ವಿರುದ್ಧ ಸಾರಿದ ಯುದ್ಧವು, ಪ್ರಜಾಪ್ರಭುತ್ವಕ್ಕಾಗಿ
ಅದು ಹಂಬಲಿಸಿದ್ದು, ವಸಾಹತು ಆಕ್ರಮಣದ ನೆಪದಲ್ಲಿ
ಶುರುವಾದಂತಹವುಗಳಾಗಿದ್ದವು. ಹಿಂಜರಿಕೆಯಿಲ್ಲದ ನಿಶ್ಚಿತತೆಯಿಂದ ಶತಮಾನಗಳ ಕಾಲ ಊಳಿಗಮಾನ್ಯ
ವಿರೋಧಿ ಹೋರಾಟವನ್ನು ಮಾಡಿದ್ದು, ನಿಧಾನವಾಗಿ ವಸಾಹತು ವಿರೋಧಿ ಹೋರಾಟವಾಗಿ ರೂಪಾಂತರಗೊಂಡಿತು.
ಊಳಿಗಮಾನ್ಯ ವಿರೋಧಿ ಐತಿಹಾಸಿಕ ಪ್ರವೃತ್ತಿಯು ವಸಾಹತುಶಾಹಿ ವಿರೋಧಿಯಾಗಿ ಮುಂದುವರಿಯಿತು. ಎರಡೂ
ಪ್ರವೃತ್ತಿಯೂ ಒಂದರೊಳಗೊಂದು ಬೆಸೆದುಕೊಂಡವು. ಒಂದೆಡೆ ವಸಾಹತುಶಾಹಿ ಕ್ಷಯಿಸುತ್ತಿದ್ದ
ಊಳಿಗಮಾನ್ಯತೆಯೊಂದಿಗೆ ಕೈಜೋಡಿಸಿದರೆ, ಮತ್ತೊಂದೆಡೆ
ಊಳಿಗಮಾನ್ಯತೆಯ ವಿರುದ್ಧದ ವರ್ಗ ಹೋರಾಟದಲ್ಲಿ ತೊಡಗಿದ್ದ ಜನರು ತಮ್ಮ ಶಕ್ತಿ ಮತ್ತು
ಪ್ರಯತ್ನವನ್ನು ಎರಡು ಕೆಲಸ ಪೂರೈಸುವುದರ ಕಡೆಗೆ ಗಮನ ಕೇಂದ್ರೀಕರಿಸಿದರು: ಊಳಿಗಮಾನ್ಯತೆಯ
ನಿರ್ನಾಮ ಮತ್ತು ವಸಾಹತುಶಾಹಿಯನ್ನು ಅದರ ದಲ್ಲಾಳಿಯೊಂದಿಗೆ ಪದಚ್ಯುತಿ.
ಹತ್ತೊಂಭತ್ತನೇ
ಶತಮಾನದ ಮಧ್ಯಭಾಗದ ಜಪಾನಿನ ಉದಾಹರಣೆಯು, ಜನಸಮೂಹದ
ಊಳಿಗಮಾನ್ಯ ವಿರೋಧಿ ಹೋರಾಟವು, ದೇಶವನ್ನು
ವಸಾಹತುಶಾಹಿ ಆಕ್ರಮಿಸುವ ಪ್ರಯತ್ನ ಮಾಡಿದಾಗ ಹೇಗೆ ವಸಾಹತು ವಿರೋಧಿ ಹೋರಾಟವಾಗಿ ದಿಕ್ಕು
ಬದಲಿಸಿತು ಎಂಬುದಕ್ಕೆ ನಿದರ್ಶನ. ಪಶ್ಚಿಮದ ಕೈಗೊಂಬೆಯಾಗಿ ಪರಿವರ್ತನೆಯಾಗುತ್ತಿದ್ದ ಟೊಕುಗಾವ
ಶೊಗುನಾಟೆಯನ್ನು ಪದಚ್ಯುತಿಗೊಳಿಸುವ ಮೂಲಕವಷ್ಟೇ ಜಪಾನಿನ ಬಂಡವಾಳಶಾಹಿ ಪ್ರಜಾಸತ್ತಾತ್ಮಕ
ಕ್ರಾಂತಿ ಯಶಸ್ವಿಯಾಗಿದ್ದು.
ಆದರೆ ಜಪಾನ್
ಮೈಜಿಯ ಸ್ಥಾಪನೆಯನ್ನು ಸಾಧಿಸುವುದಕ್ಕೆ ಕಾರಣವಾಗಿದ್ದು ಶೈಶಾವಸ್ಥೆಯಲ್ಲಿದ್ದ ಬಂಡವಾಳಶಾಹಿಯನ್ನು
ಜೀವಂತವಾಗಿಟ್ಟುಕೊಂಡಿದ್ದು. ಜಪಾನಿನಲ್ಲಿ ಬಂಡವಾಳಶಾಹಿಯು ಸಾಮಾಜಿಕ ಕ್ರಾಂತಿಯ ತಲೆಯಾಗಿತ್ತು. ಕರ್ನಾಟಕದ
ದುರಂತವೆಂದರೆ ಬಂಡವಾಳಶಾಹಿಯನ್ನು ಕರ್ನಾಟಕ ತೊರೆದುಬಿಟ್ಟಿತ್ತು.
1820 ಮತ್ತು
1830ರ ನಡುವಿನ ಕೃಷಿಶ್ರಮಿಕರ ಬಂಡಾಯವು ಬಂಡವಾಳಶಾಹಿ ಕ್ರಾಂತಿಯ ಸುಪ್ತ
ಹೊಳಪುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟಿತ್ತು. ಬಂಡವಾಳಶಾಹಿ ಶಿಶುವಿನ ಮರಣದ ನಂತರ ಇದು
ನಡೆದಿತ್ತು. ಆದರೆ ಅದೇ ಸಮಯದಲ್ಲೆ ಊಳಿಗಮಾನ್ಯತೆಯನ್ನು ಗುರಿಯಾಗಿಸಿ, ವಸಾಹತುಶಾಹಿಯ
ಮೇಲೆ ದಾಳಿ ನಡೆಸುವ ಮೂಲಕ ಈ ಹೋರಾಟಗಳು ಕರ್ನಾಟಕದ ಭವಿಷ್ಯತ್ತಿನ ಹೋರಾಟದ ದಾರಿಯನ್ನು
ತೋರಿರುವುದರಲ್ಲಿ ಅನುಮಾನವೇ ಇಲ್ಲ.
-----------------------------------------
ಪರಾಮರ್ಶನ
ಆಕರಗಳು:
190 N Shyam Bhat, A Study, Pp
288-289
191 B Purushotham, p 43
192 N Shyam Bhat, A Study, p
281DN Krishnayya, The South, Pp 80-82
193 N Shyam Bhat, A Study, Pp
301-302
194 ibid
195 ibid, Pp 302-303
196 ibid, p 303-304
197 ibid, Pp 310-311
198 ibid, p 309
199 TP Vijaya, Jamma, Pp 41-42
200 ibid, p 48
201 B Purushotham, Pp 51-53
202 Alexander J Arbuthnot, II, p
211
203 ibid, p 212
204 ibid, p 213
205 Karl Marx, The Revolt in the
Indian Army, Karl Marx and Fredeick Engels, The First,
p 37
206 Saki, I, Pp 431-438
207 Karl Marx, The Revolt in the
Indian Army, Karl Marx and Frederick Engels, The First, Pp 37-8
208 Mao Tsetung, On Guerrilla
Warfare, VI, Pp 169-170
209 Karl Marx, Guerrilla Warfare
in Spain, in William J Pomeroy ed, Guerrilla Warfare and
Marxism, p 55
210 David Arnold, Looting.
211 Copies, I, SB Lushington,
President’s Munute, 12 April 1831, p 64
212
SS Wodeyar, Kitturu Deshgathi, in Balanna Seegihalli ed, Belagavi, p 9
-----------------------------------------------------------------------------------------
Comments
Post a Comment