Skip to main content

ಲಾಕ್ ಡೌನ್ ತಂದ ಬಿಕ್ಕಟ್ಟು.#lockdown# migrant labour#exodus#crisis


ಲಾಕ್ ಡೌನ್ ತಂದ ಬಿಕ್ಕಟ್ಟು..
ವಲಸೆ ಕಾರ್ಮಿಕರ ಮರುವಲಸೆ
ಮುಂದೇನು…




ದೆಹಲಿ, ಕೊಲ್ಕತ್ತಾ, ಮುಂಬೈ, ಚೆನ್ನೈ, ಬೆಂಗಳೂರು ಮಂಗಳೂರಿನಂತಹ ನಗರಗಳಿಂದು ಖಾಲಿಖಾಲಿಯೆನಿಸತೊಡಗಿವೆ. ಕೋವಿದ್ 19 ನ ಕಾರಣ ಹಿಡಿದು ದೇಶಾದ್ಯಂತ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮವಿದು. ನಗರಗಳಿಂದ ತಮ್ಮ ತಮ್ಮ ಹಳ್ಳಿಗಳೆಡೆಗೆ ಮರುವಲಸೆಯಿಂದಾಗಿ ಇಂತಹ ಸ್ಥಿತಿಯೊಂದು ನಿರ್ಮಾಣವಾಗಿದೆ. ಪೋಲಿಸರ ಹೊಡೆತ ಬಡಿತ, ನಿಂದನೆ, ತಾತ್ಸಾರಗಳಿಗೆ ಗುರಿಯಾಗುತ್ತಿದ್ದಾರೆ. ಪ್ರಯಾಣದ ಬೇರೆ ದಾರಿ ಕಾಣದೇ ನಡೆದುಕೊಂಡು ತಮ್ಮ ತಮ್ಮಊರುಗಳಿಗೆ ತೆರಳಿದ್ದಾರೆ. ಹಾಗೆ ಸಾಗುವಾಗ ಹಸಿವು, ನೀರಡಿಕೆ, ದಣಿವುಗಳಿಗೆ ಈಡಾಗಿ ಹತ್ತಾರು ಸಾವುಗಳು ವರದಿಯಾಗಿವೆ. ಇನ್ನು ವರದಿಯಾಗದ ಎಷ್ಟು ಸಾವುಗಳಾಗಿವೆಯೋ ಅದರ ಲೆಕ್ಕ ಸಿಗದು. ಲಾಕ್ ಡೌನ್ ಕಾರಣ ಕೆಲಸವಿಲ್ಲದೇ ಆಹಾರ ಒದಗಿಸಲು ಸಾಧ್ಯವಾಗದೇ ತನ್ನ ಕರುಳಿನ ಕುಡಿಗಳನ್ನು ನದಿಗೆ ಎಸೆಯಬೇಕಾಗಿ ಬಂದ ಉತ್ತರಪ್ರದೇಶದ ದಿನಗೂಲಿ ಕಾರ್ಮಿಕ ತಾಯಿಯಂತಹ ಕತೆಗಳು ಎಷ್ಟಿವೆಯೋ ಹೇಳುವುದು ಕಷ್ಟ. ಹಲವರು ಸಾರಿಗೆ ಸಂಪರ್ಕ ಸಿಗದೇ ದೇಶದ ಹಲವು ಕಡೆಗಳಲ್ಲಿಆಹಾರ ನೀರು ಇಲ್ಲದೇ ಸೂಕ್ತ ಸಹಾಯವೂ ಸಿಗದೇ ನಗರಗಳಲ್ಲೇ ನರಳುತ್ತಿದ್ದಾರೆ.

ನಗರಗಳ ನಿರ್ಮಾಣ, ನಿರ್ವಹಣೆ, ಜೀವಂತಿಕೆಗಳಿಗೆ ದೇಶದ ಹಳ್ಳಿಗಾಡು, ಸಣ್ಣಪುಟ್ಟ ಪಟ್ಟಣಗಳಿಗೆ ಸೇರಿದ ಈ ವಲಸೆ ಕಾರ್ಮಿಕರೇ ಪ್ರಧಾನ ಕಾರಣ ಕರ್ತರು. ಈ ಕಾರ್ಮಿಕರ ಕೊಡುಗೆ ಇಲ್ಲದೇ ಯಾವ ನಗರಗಳೂ ಕೂಡ ಅಸ್ತಿತ್ವದಲ್ಲಿರಲು ಅಸಾಧ್ಯ. ಆದರೆ ಈಗ ನಗರಗಳಲ್ಲಿ ಈ ಕಾರ್ಮಿಕರಿಗೆ ಉಸಿರು, ಹಾಗೂ ಬದುಕೇ ಇಲ್ಲದಂತಹ ಸ್ಥಿತಿ ತಂದಿಡಲಾಗಿದೆ. ಉಚಿತ ಊಟ, ಉಚಿತ ಪಡಿತರ, ಉಚಿತ ವಸತಿಗಳ ಬಗ್ಗೆ ಹಲವು ಸರಕಾರಗಳು ಘೋಷಣೆಗಳನ್ನು ಮಾಡಿದ್ದರೂ ಕಾರ್ಯರೂಪದಲ್ಲಿ ಜಾರಿಯಲ್ಲಿ ಬಂದಿರುವುದು ಕಡಿಮೆ. ಗುರುತಿನ ಚೀಟಿ, ಪಡಿತರ ಚೀಟಿ, ಆದಾರ್ ಕಾರ್ಡ್ ಗಳಿಲ್ಲದ, ಅವೆಲ್ಲಾ ಇದ್ದರೂ ಹಲವಾರು ಲೋಪ ಹುಡುಕಿ ಘೋಷಿತ ಸೌಲಭ್ಯಗಳು ಸಿಗದಂತೆ ಮಾಡುವುದೇ ಹೆಚ್ಚಾಗಿ ನಡೆಯುತ್ತಿದೆ. ಸಧ್ಯಕ್ಕೆ ಕೇರಳ ಮಾತ್ರ ಇದಕ್ಕೆ ಒಂದು ಮಟ್ಟದಲ್ಲಿ ಅಪವಾದವಾಗಿ ಕಾಣಿಸುತ್ತಿದೆ. ಇನ್ನುಳಿದಂತೆ ನಗರಗಳ  ಬುನಾದಿಯಾದ ಈ ಕಾರ್ಮಿಕರಿಗೆ ನಗರಗಳ ಆಡಳಿತಗಳಾಗಲಿ ಅವರನ್ನು ದುಡಿಸಿಕೊಳ್ಳುವ ಕಂಪನಿಗಳಾಗಲೀ ಪರ್ಯಾಯವನ್ನು ರೂಪಿಸಿಕೊಡದೇ ಕೆಲಸದ ಸ್ಥಳಗಳಿಂದ ಹೊರಹೋಗುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ.

ಇಂಡಿಯಾದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಸುಮಾರು ಶೇ9 ರಷ್ಟು ಕಟ್ಟಡ ನಿರ್ಮಾಣ ವಿಭಾಗ ನೀಡುತ್ತಿದೆ. ವಲಸೆ ಕಾರ್ಮಿಕರಲ್ಲಿ ಗರಿಷ್ಠ ಜನರು ಈ ವಿಭಾಗದಲ್ಲೇ ದುಡಿಯುತ್ತಿರುವುದು ಕೂಡ. 55 ದಶಲಕ್ಷಕ್ಕೂ ಹೆಚ್ಚು  ವಲಸೆ ದಿನಗೂಲಿ ಕಾರ್ಮಿಕರು ನಗರಗಳ ಕಟ್ಟಡ ನಿರ್ಮಾಣಗಳಲ್ಲಿ ಇದ್ದಾರೆ. ಪ್ರತಿವರ್ಷ ಸುಮಾರು 9 ದಶಲಕ್ಷ ಕಾರ್ಮಿಕರು ದೇಶದ ಉತ್ತರ ಹಾಗೂ ಮಧ್ಯಭಾಗದ ಹಳ್ಳಿಗಾಡಿನಿಂದ ನಗರಗಳಿಗೆ ವಲಸೆ ಬರುತ್ತಿದ್ದಾರೆಂದು ವರದಿ ಹೇಳುತ್ತಿದೆ. ಇವರುಗಳಿಗೆ ನೀಡುವ ಕೂಲಿ ಕೂಡ ಕಡಿಮೆಯೇ. ಅದಲ್ಲದೇ ದಲ್ಲಾಳಿಗಳು ಮದ್ಯವರ್ತಿಗಳು ಕಮಿಷನ್ ಮೊದಲಾದ ಹೆಸರಿನಲ್ಲಿ ಇವರನ್ನು ದೋಚುತ್ತಿರುತ್ತಾರೆ. ಜನಸಾಹಸ ಎಂಬ ದೆಹಲಿ ಮೂಲದ ಸಂಸ್ಥೆ ಇತ್ತೀಚೆಗೆ ಕೋರೋನಾ ಲಾಕ್ ಡೌನ್ ನಿಂದಾಗಿ ಕಟ್ಟಡ ನಿರ್ಮಾಣದಲ್ಲಿರುವ ದಿನಗೂಲಿ ವಲಸೆ ಕಾರ್ಮಿಕರ ಸ್ಥಿತಿಗತಿಯ ಕುರಿತಾದ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ ಶೇ 94ರಷ್ಟು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯಿಲ್ಲ. ಗುರುತಿನ ಚೀಟಿಯಿಲ್ಲದವರಿಗೆ ಸರಕಾರ ನೀಡುವ ಲಾಕ್ ಡೌನ್ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಇವರಲ್ಲಿ ಸುಮಾರು ಶೇ 14 ರಷ್ಟು ಕಾರ್ಮಿಕರಿಗೆ ಪಡಿತರ ಚೀಟಿ ಕೂಡ ಇಲ್ಲ. ಈ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 17 ರಷ್ಟು ಕಾರ್ಮಿಕರಿಗೆ ಬ್ಯಾಂಕ್ ಖಾತೆಗಳಿಲ್ಲ. ನ್ಯಾಯಾಲಯದ  ಆದೇಶಾನುಸಾರ ಸರಕಾರ ಕಟ್ಟಡ ಕಾರ್ಮಿಕರಿಗೆಂದೇ 32000 ಕೋಟಿ ರೂಪಾಯಿಗಳ (BOCOW) ನಿಧಿಯೊಂದನ್ನು ಹಿಂದೆಯೇ ಘೋಷಿಸಿತ್ತು. ಆದರೆ ಆ ನಿಧಿಯ ಉಪಯೋಗ ಕಟ್ಟಡ ಕಾರ್ಮಿಕರಿಗೆ ಇಲ್ಲದಂತಹ ಸ್ಥಿತಿಯಾಗಿದೆ.

ಈ ಸಮೀಕ್ಷೆಯ ಪ್ರಕಾರ ಕಟ್ಟಡ ಕಾರ್ಮಿಕರಲ್ಲಿ ಶೇ 42 ರಷ್ಟು ಜನರಿಗೆ ಲಾಕ್ ಡೌನ್ ಪರಿಣಾಮ ಯಾವುದೇ ಪಡಿತರ ಒಂದು ದಿನಕ್ಕಾಗುವಷ್ಟೂ ಕೂಡ ಇರಲಿಲ್ಲ. ಅಲ್ಲದೇ ಶೇ 31 ರಷ್ಟು ಜನರಿಗೆ ಬ್ಯಾಂಕ್ ಸಾಲಗಳಿವೆ. ಸಾಮಾನ್ಯವಾಗಿ ಕಟ್ಟಡ ಕಾರ್ಮಿಕರು ಕೂಲಿ ಗುತ್ತಿಗೆದಾರರ ಮತ್ತಿತರರಿಂದ ಸಾಲ ಪಡೆದಿರುತ್ತಾರೆ. ಜೊತೆಗೆ ಖಾಸಗಿ ಬಡ್ಡಿ ಸಾಲಗಳ ಸುಳಿಯಲ್ಲಿ ಸಿಲುಕಿರುತ್ತಾರೆ. ಶೇ 62ರಷ್ಟು ಜನರಿಗೆ ತುರ್ತು ಪರಿಹಾರ ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ.

ಇಂಡಿಯಾದ ಕಾರ್ಮಿಕರಲ್ಲಿ ಅತೀ ದೊಡ್ಡ ಸಂಖ್ಯೆ ಅರೆಕಾಲಿಕ ವಲಸೆ ಕಾರ್ಮಿಕರದು. ಮೈಗ್ರಂಟ್ಸ್ ಇನ್ ಇಂಡಿಯಾ ವರದಿ ಪ್ರಕಾರ ಇದರಲ್ಲಿ ಶೇ 23.1 ರಷ್ಟು ಕಾರ್ಮಿಕರು ಪರಿಶಿಷ್ಠ ಜಾತಿಗಳಿಗೆ, ಶೇ 18.6 ರಷ್ಟು ಕಾರ್ಮಿಕರು ಪರಿಶಿಷ್ಠ ಬುಡಕಟ್ಟುಗಳಿಗೆ ಸೇರಿದವರಾಗಿದ್ದಾರೆ. ಶೇ 39.9 ಹಿಂದುಳಿದ ವರ್ಗಗಳಿಗೆ ಶೇ18.4 ರಷ್ಟು ಇತರ ಜಾತಿಗಳಿಗೆ ಸೇರಿದವರಾಗಿದ್ದಾರೆ. ವಲಸೆ ಕಾರ್ಮಿಕರಲ್ಲಿ ಶೇ 37 ಭಾಗ ಕಟ್ಟಡ ನಿರ್ಮಾಣದಲ್ಲಿ, ಶೇ 21 ಕೃಷಿಯಲ್ಲಿ, ಶೇ16 ಇತರ ಉತ್ಪಾದನಾ ವಲಯಗಳಲ್ಲಿ ದುಡಿಯುತ್ತಾರೆ. ಇವರಿಗೆ 200 ರೂಪಾಯಿಗಳಿಂದ 400 ರೂಪಾಯಿಗಳಷ್ಟು ಪಡೆಯುವವರು ಶೇ 55 ಜನರಾಗಿದ್ದರೆ, 400 ರೂಪಾಯಿಗಳಿಂದ 600 ರೂಪಾಯಿಗಳಷ್ಟು ಪಡೆಯುವವರು ಶೇ 39ರಷ್ಟು ಜನರು.

ಇದು ಇಂಡಿಯಾದ ಬಹುಸಂಖ್ಯಾತ ಕಾರ್ಮಿಕರ ಸಾಮಾನ್ಯ ಸ್ಥಿತಿಯಾಗಿದೆ. ಇತರರಿಗೆ ಹೋಲಿಸಿದಲ್ಲಿ ಸ್ವಲ್ಪ ಮಟ್ಟಿಗಿನ ಸುಧಾರಿತ ಬದುಕು ನಡೆಸುತ್ತಿರುವವರು ಸಂಘಟಿತ ಕಾರ್ಮಿಕರು. ಆದರೆ ಇಂಡಿಯಾದ ಸಂಘಟಿತ ಕಾರ್ಮಿಕರ ಸಂಖ್ಯೆ ಬಹಳ ಕಡಿಮೆ. ಅದು ಕೇವಲ ಶೇ 7 ರಷ್ಟು ಮಾತ್ರ. ಉಳಿದ ಶೇ 93 ರಷ್ಟು  ಕಾರ್ಮಿಕರು ಅಸಂಘಟಿತ ವಲಯದವರು. ಅದರಲ್ಲಿ ಕೃಷಿ, ಕೈಗಾರಿಕೆ, ಸೇವೆ, ವ್ಯಾಪಾರ ವಹಿವಾಟು ಎಲ್ಲಾ ಸೇರಿವೆ. ಅಂದರೆ ದೇಶದ ಬುನಾದಿಯಾದ ಬಹುಸಂಖ್ಯಾತ ಕಾರ್ಮಿಕರ ಬದುಕಿಗೆ ಯಾವುದೇ ರೀತಿಯ ಭದ್ರತೆಯಾಗಲೀ ಭವಿಷ್ಯತ್ ಆಗಲೀ ಇಲ್ಲದಂತಹ ಸ್ಥಿತಿ ನಮ್ಮ ದೇಶದ್ದು.

ನಗರಗಳಿಗೆ ವಲಸೆ ಬರುವವರಲ್ಲಿ ಬಹುತೇಕರಿಗೆ ಮಲಗಲು ಜಾಗವಿಲ್ಲದ, ತಲೆಮೇಲೆ ಒಂದು ಸೂರಿಲ್ಲದ, ಕುಡಿಯಲು ಶುದ್ಧ ನೀರಿಲ್ಲದ ಸ್ಥತಿಯಿದೆ. ಹೀಗಿರುವಾಗ ಕೊರೋನಾ ಹೆಸರಿನಲ್ಲಿ ಹೇರಿದ ಲಾಕ್ ಡೌನ್ ಕೋಟ್ಯಾಂತರ ಇಂತಹ ಕಾರ್ಮಿಕರ ಬದುಕನ್ನು ಇನ್ನಿಲ್ಲದ ಧಾರುಣ ಸ್ಥಿತಿಗೆ ತಳ್ಳಿದೆ. ತಮ್ಮ ಪ್ರಾಣದ ಉಸಿರು ಹಿಡಿದುಕೊಳ್ಳಲೇ ಹೆಣಗಾಡಬೇಕಾದ ಹೃದಯ ವಿದ್ರಾವಕ ಸ್ಥಿತಿಗೆ ಅವರನ್ನು ಒಡ್ಡಲಾಗಿದೆ.

ಯಾವುದೇ ಪೂರ್ವ ತಯಾರಿ ಮಾಡದೇ, ಸಮಸ್ಯೆಗಳ ಸುಳಿಗೆ ಸಿಲುಕುವ ಜನರಿಗೆ ಯಾವುದೇ ಪರ್ಯಾಯ ಕಲ್ಪಿಸದೇ ಲಾಕ್ ಡೌನ್ ಘೋಷಿಸಿ ಜನರು ಅದರಲ್ಲಿ ಸಿಲುಕಿ ನರಳಿದ ನಂತರ ಸರಕಾರಗಳು ಘೋಷಣೆ ಮಾಡುವ ಪರಿಹಾರ ಯೋಜನೆಗಳು ಕೇವಲ ಬಾಯುಪಚಾರದ ಹಾಗೂ ಅಬ್ಬರದ ಪ್ರಚಾರಕ್ಕಷ್ಟೇ ಸೀಮಿತವಾಗುವ ನಡೆಗಳಾಗಬಹುದು ಅಷ್ಟೇ. ಅದೇ ಬಹುತೇಕವಾಗಿ ಈಗ ನಡೆಯುತ್ತಿರುವುದು ಕೂಡ. ಈಗಾಗಲೇ ಕೇವಲ ಲಾಕ್ ಡೌನ್ ನಿಂದಾಗಿಯೇ 195ಕ್ಕೂ ಹೆಚ್ಚು ಮರಣಗಳು ಸಂಭವಿಸಿವೆ ಎಂದು ‘ದಿ ಪ್ರಿಂಟ್’ ಸುದ್ದಿಜಾಲತಾಣ ವರದಿ ಮಾಡಿದೆ. ಅದರಲ್ಲಿ ಹಸಿವು, ನಿರ್ಜಲೀಕರಣ, ಸುಸ್ತು, ವೈದ್ಯೋಪಚಾರದ ಅಲಭ್ಯತೆ, ಸಾರಿಗೆ ವ್ಯವಸ್ಥೆಯ ಅಲಭ್ಯತೆ ಎಲ್ಲವೂ ಸೇರಿವೆ. ವಾಸ್ತವ ಇದಕ್ಕಿಂತಲೂ ಹೆಚ್ಚಿರಬಹುದೇ ಹೊರತು ಕಡಿಮೆಯಂತೂ ಆಗಲು ಸಾಧ್ಯವಿಲ್ಲ.

ನಮ್ಮ ದೇಶದ ಜಿಡಿಪಿ ಅಭಿವೃದ್ದಿಗೆ ಇಂತಹ ಕಾರ್ಮಿಕರ ಕೊಡುಗೆಯೇ ಪ್ರಧಾನವಾದುದು. ಅವರ ಬದುಕುಗಳು ಬರ್ಬಾದಾದರೆ ಅದು ನಮ್ಮ ಅರ್ಥವ್ಯವಸ್ಥೆಯ ತಳಪಾಯವನ್ನೇ ಕುಸಿಯುವಂತೆ ಮಾಡುತ್ತದೆ. ಯಾಕೆಂದರೆ ಇವರ ದುಡಿಮೆಯಿಲ್ಲದೇ ದೇಶದ ಯಾವುದೇ ರಂಗವೂ ಚೇತರಿಸಿಕೊಳ್ಳಲಾಗದು. ಪಾಶ್ಛಿಮಾತ್ಯ ರಾಷ್ಟ್ರಗಳ ಕಾರ್ಮಿಕರು ನಮ್ಮ ದೇಶಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಂಘಟಿತರು ಹಾಗೂ ಜೀವನ ಮಟ್ಟದಲ್ಲಿ ಅನುಕೂಲಸ್ಥರು. ಅವರುಗಳು ಕೂಡ ನಿರುದ್ಯೋಗ, ಬಡತನಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ನಮ್ಮ ದೇಶದ ಅಸಂಘಟಿತ ಕಾರ್ಮಿಕರಲ್ಲಿ ದಲಿತರು ಹಾಗೂ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಹೆಚ್ಚಿನವರು. ಅಂದರೆ ನಮ್ಮ ದೇಶದ ಬಡತನ ಹಾಗೂ ಬದುಕಿನ ಅಭದ್ರತೆ ಜಾತಿವ್ಯವಸ್ಥೆಯೊಂದಿಗೂ ತಳುಕು ಹಾಕಿಕೊಂಡಿದೆ.

ಹಳ್ಳಿಗಾಡೇ ಇರಲಿ, ನಗರಗಳೇ ಇರಲಿ ಜಾತಿ ವ್ಯವಸ್ಥೆಯನ್ನು ಜೀವಂತವಾಗಿಯೇ ಇರಿಸಲ್ಪಟ್ಟಿದೆ. ಮುನಿಸಿಪಾಲಿಟಿ ನಗರ ಸಭೆ ದಿನಗೂಲಿಗಳಲ್ಲಿ ಹೆಚ್ಚು ಕಡಿಮೆ ಎಲ್ಲರೂ ದಲಿತರೇ ಆಗಿರುತ್ತಾರೆ. ವಲಸೆ ಕಾರ್ಮಿಕರಲ್ಲೂ ಶೇ 50 ರಷ್ಟು ದಲಿತ ಹಾಗೂ ಬುಡಕಟ್ಟುಗಳಿಗೆ ಸೇರಿದವರೇ ಆಗಿರುವುದನ್ನು ಗಮನಿಸಿದಾಗ ಜಾತಿ ವ್ಯವಸ್ಥೆಯ ಕರಾಳತೆ ನಮಗೆ ಅರ್ಥವಾಗುತ್ತದೆ.

ಸರಕಾರ ಎಲ್ಲಾ ಭೂರಹಿತರನ್ನು, ಸ್ಥಿರ ಉದ್ಯೋಗವಿಲ್ಲದವರನ್ನು ಅಸಂಘಟಿತ ಕಾರ್ಮಿಕರೆಂದು ಅಧೀಕೃತವಾಗಿ ಘೋಷಿಸಬೇಕು. ಲಾಕ್ ಡೌನ್ ಮುಗಿಯುವ ವರೆಗೂ ಅವರ ಬದುಕು ಸಾಗಣೆಗೆ ಯಾವುದೇ ಶರತ್ತುಗಳಿಲ್ಲದೇ ಅಗತ್ಯ ಮಾಸಿಕ ಪಿಂಚಣಿಯನ್ನು ಪಡಿತರದ ಜೊತೆಗೆ ನೀಡಬೇಕಾದುದು ಅಗತ್ಯ. ಲಾಕ್ ಡೌನ್ ಕೊನೆಯಾದ ಮೇಲೂ ಕೂಡ ಈ ಎಲ್ಲಾ ಕಾರ್ಮಿಕರಿಗೆ ಮಾಸಿಕವಾಗಿ ನಿಶ್ಚಿತ ವರಮಾನದ ಖಾತರಿಯನ್ನು ಸರಕಾರಗಳು ಅಧೀಕೃತಗೊಳಿಸಬೇಕು. ಇಲ್ಲದಿದ್ದರೆ ಈ ಶ್ರಮಜೀವಿಗಳ ಬದುಕುಗಳು ಛಿದ್ರಗೊಂಡು ಸಾಮಾಜಿಕವಾಗಿ ಭಾರಿ ಹಾನಿಗೆ ಕಾರಣವಾಗುತ್ತದೆ.

ಲಾಕ್ ಡೌನ್ ಕೊನೆಗೊಂಡ ನಂತರ ಗುಡಿ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಪುನಶ್ಚೇತನ ಹಾಗೂ ಬೆಳವಣಿಗೆಗಳಿಗೆ  ಹಣಕಾಸು ನೆರವು ಸೇರಿದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರ ನೇರವಾಗಿ ಇಂತಹ ಕೈಗಾರಿಕೆಗಳನ್ನು ವಿಕೇಂದ್ರೀಕೃತವಾಗಿ ಸ್ಥಾಪಿಸಬೇಕು. ಅದರ ನಿರ್ವಹಣೆಗೆ ಸಹಕಾರಿ ಪದ್ದತಿಯನ್ನು ಅಳವಡಿಸಿ ನಡೆಸಬೇಕು. ಅನಾರೋಗ್ಯಕರ ಪೈಪೋಟಿ ಹಾಗೂ ಅನಗತ್ಯ ಉತ್ಪಾದನೆಗಳನ್ನು ನಿಯಂತ್ರಿಸಿ ವ್ಯವಸ್ಥಿತಗೊಳಿಸಬೇಕು.

ಯಾಕೆಂದರೆ ಗರಿಷ್ಠ ಮಟ್ಟದ ಉದ್ಯೋಗಗಳು ಸೃಷ್ಠಿಯಾಗುವುದು ಈ ವಲಯಗಳಿಂದಲೇ ಹೊರತು ಭಾರಿ ಕಾರ್ಪೋರೇಟ್ ಉದ್ದಿಮೆಗಳಿಂದಲ್ಲ. ಜೊತೆಗೆ ಕೃಷಿಯಲ್ಲಿ ಸಹಕಾರಿ ಪದ್ದತಿಗಳನ್ನು ಬೆಳೆಸಬೇಕು. ಖಾತರಿ ಆದಾಯ, ಮಾರುಕಟ್ಟೆ ಸೌಲಭ್ಯ ಒದಗಿಸಿ ಭಾರಿ ಭೂಹಿಡುವಳಿದಾರರ ಮೇಲೆ ನಿಯಂತ್ರಣ ಹೆಚ್ಚಿಸಬೇಕು. ಅಂತಹವರ ಹೆಚ್ಚುವರಿ ಭೂಮಿಗಳನ್ನು ಭೂಹೀನರಿಗೆ ಹಂಚಿ ಅವರನ್ನು ಕೃಷಿಯಲ್ಲಿ ತೊಡಗಿಸಬೇಕು. ಅದಕ್ಕೆ ಬೇಕಾದ ಮೂಲಸೌಲಭ್ಯ ಒದಗಿಸಿ ನಿರ್ವಹಣೆ ಮಾಡಬೇಕು.

ಯಾಕೆಂದರೆ ಅಂತರಾಷ್ಟ್ರೀಯ ಆರ್ಥಿಕ ಬಿಕ್ಕಟ್ಟು ಜೊತೆಗೆ ಕೋವಿದ್ 19 ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆ ಚೇತರಿಸಿಕೊಳ್ಳುವುದು ಸಧ್ಯದಲ್ಲಿ ಆಗುವುದಿಲ್ಲ. ಹಾಗಾಗಿ ನಮ್ಮ ದೇಶ ಸ್ವಾವಲಂಭನೆಯನ್ನು ಸಾಧಿಸುವತ್ತ ಪ್ರಧಾನ ಒತ್ತು ನೀಡಬೇಕು. ಕೃಷಿಯಲ್ಲಿ ಸ್ವಾವಲಂಭನೆ ಸಾಧಿಸುವ ಮೂಲಕ ಮಾತ್ರ ಕೈಗಾರಿಕೆಯಲ್ಲೂ ಸ್ವಾವಲಂಭನೆ ಸಾಧಿಸಬಹುದು. ಇದುವರೆಗೂ ಇದ್ದ ಡಬ್ಲ್ಯೂ. ಟಿ. ಒ ಮೊದಲಾದ ಎಲ್ಲಾ ಅಸಮಾನ ಅಂತರಾಷ್ಟ್ರೀಯ ಒಪ್ಪಂದಗಳಿಂದ ಇಂಡಿಯಾ ಹೊರಬರಬೇಕು. ಇದನ್ನೆಲ್ಲಾ ಮಾಡುವುದರ ಮೂಲಕ ಇದುವರೆಗೂ ಇದ್ದ ಅಮೇರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳ ಹಿಡಿತಗಳನ್ನು ತಪ್ಪಿಸಿ ಈಗ ಪ್ರಸ್ತುತ ಎದುರಾಗಿರುವ ಚೀನಾದ ಹಿಡಿತಗಳಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೆಲ್ಲಾ ಮಾಡಬೇಕಾದರೆ ಸರಕಾರಗಳು ಅಗತ್ಯ ಹಣಕಾಸನ್ನು ಭಾರಿ ಕಾರ್ಪೋರೇಟುಗಳನ್ನೂ ಒಳಗೊಂಡಂತೆ ಎಲ್ಲಾ ಮೂಲಗಳಿಂದಲೂ ಸಂಚಯಿಸಿಕೊಳ್ಳಬೇಕು. ದೇಶದ ಎಲ್ಲಾ ಹಣಕಾಸು ಸಂಸ್ಥೆಗಳನ್ನು, ಭಾರಿ ಕಾರ್ಪೋರೇಟ್ ಗಳ ದತ್ತಿ ಸಂಸ್ಥೆಗಳನ್ನು ಸರಕಾರ ವಶಪಡಿಸಿಕೊಳ್ಳಬೇಕು. ದೇಶದಿಂದ ನಮ್ಮ ಸಂಪತ್ತು ರವಾನೆಯಾಗದಂತೆ ತಡೆಯೊಡ್ಡಬೇಕು.  ಭಾರಿ ಕಾರ್ಪೋರೇಟುಗಳು ಸಂಪತ್ತು ಶೇಖರಣೆಯ ಮೇಲೆ ಮಿತಿ ನಿಗದಿ ಮಾಡಿ ಹೆಚ್ಚುವರಿ ಸಂಪತ್ತನ್ನು ಸರಕಾರ ವಶಪಡಿಸಿಕೊಳ್ಳಬೇಕು. ಅಯಾ ಕಾರ್ಪೋರೇಟುಗಳು ಉಳಿಸಿಕೊಂಡಿರುವ ತೆರಿಗೆಬಾಕಿಗಳು, ಸಾಲಬಾಕಿಗಳು, ಪಡೆದುಕೊಂಡ ರಿಯಾಯ್ತಿಗಳು, ಸಾಲ ಮನ್ನಾಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಅವರು ಪ್ರಸ್ತುತ ಹೊಂದಿರುವ ಆಸ್ತಿ ಸಂಪತ್ತುಗಳಿಂದ ಜಮೆ ಮಾಡಿಸಿಕೊಳ್ಳಬೇಕು. ಭಾರಿ ಕಾರ್ಪೋರೇಟುಗಳಿಗೆ ವಿವಿಧ ಕಾರಣಗಳಿಗೆ ನೀಡಿದ ಭೂಮಿಯನ್ನು ಮರುವಶಪಡಿಸಿಕೊಂಡು ಭೂಹೀನರಿಗೆ ಹಂಚಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಜೊತೆಗೆ ಮಠ, ಮಂದಿರ, ದೇವಸ್ಥಾನ, ಚರ್ಚ್, ಮಸೀದಿಗಳ ಆಸ್ತಿಪಾಸ್ತಿಗಳನ್ನು ಸರಕಾರದ ವಶಕ್ಕೆ ತೆಗೆದುಕೊಂಡು ಆ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.

ಇಂತಹ ಒಂದು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿಜವಾದ ಜನಕಾಳಜಿ ಹಾಗೂ ದೇಶದ ಬಗ್ಗೆ ಪ್ರೇಮ ಅಭಿಮಾನ ಇರುವ ಪ್ರಾಮಾಣಿಕ ಸರ್ಕಾರವೊಂದಕ್ಕೆ ಮಾತ್ರ ಸಾಧ್ಯ. ದೇಶದ ಜನಸಾಮಾನ್ಯರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.

13/04/2020               - ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಮಿಂಚಂಚೆ: nandakumarnandana67@gmail.com

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...