Skip to main content

ಜಾಗತಿಕ ಬಂಡವಾಳ ಶಾಹಿ ವ್ಯವಸ್ಥೆ# imperialist system# corona# globalpeople


ಜಾಗತಿಕ ಬಂಡವಾಳ ಶಾಹಿ ವ್ಯವಸ್ಥೆಯ ವಿಫಲತೆಯ ಕೊಡುಗೆ!
ಕೊರೋನಾ ಕರಾಮತ್ತು!

ಜನಜೀವನಕ್ಕೇ ಆಪತ್ತು!

ನೋವಲ್ ಕೋವಿದ್ 19  ಎಂದು ಹೆಸರಿಸಲ್ಪಟ್ಟ ಕೊರೋನಾ ವೈರಸ್ ನ ಹರಡುವಿಕೆ ಇಂದು ಜಾಗತಿಕ ವ್ಯಾಪ್ತಿಗೆ ಸೇರಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಕೊರೋನಾ ಈಗಾಗಲೇ ಹರಡಿದೆ. ಕ್ಯೂಬಾ, ವೆನಜುಯೇಲಾ, ಚೀನಾ, ಸಿಂಗಪುರ, ಥಾಯ್ ಲ್ಯಾಂಡ್ ನಂತಹ ಕೆಲವು ರಾಷ್ಟ್ರಗಳು ಮಾತ್ರ ಕೊರೋನಾ ಹರಡುವಿಕೆಯನ್ನು ನಿಯಂತ್ರಣದಲ್ಲಿಟ್ಟಿವೆ. ಅಲ್ಲೆಲ್ಲಾ ಸ್ಥಳೀಯ ಮಟ್ಟದಲ್ಲಿ ಕೊರೋನಾ ಸೋಂಕು ತಗುಲುವುದು ನಿಂತಿದೆ. ಕೇವಲ ವಿದೇಶಗಳಿಂದ ಬಂದವರಿಗೆ ಮಾತ್ರ ಸೀಮಿತವಾಗಿದೆ. ಆದರೆ ಕೊರೋನಾದಂತಹ ವೈರಸ್ಸನ್ನು ತಡೆದು ನಿಲ್ಲಿಸಬೇಕಾದರೆ ಕೇವಲ ಒಂದೆರಡು ರಾಷ್ಟ್ರಗಳು ಶ್ರಮಿಸಿದರೆ ಏನೇನೂ ಸಾಲದು. ಕೆಲವು ದಿನಗಳವರೆಗೆ ಹರಡುವಿಕೆಯನ್ನು ತಡೆಯಬಹುದು ಅಷ್ಟೇ.

ಬಹಳ ದಿನಗಳ ಕಾಲ ಅಂತರಾಷ್ಟ್ರೀಯ ಸಂಪರ್ಕ ಸಂವಹನಗಳಿಂದ ಹೊರತಾಗಿ ಯಾವ ರಾಷ್ಟ್ರಕ್ಕೂ ಇರಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ಸಂಪರ್ಕಗಳಿಗೆ ತೆರೆದುಕೊಂಡಾಗ ಸಹಜವಾಗಿ ಗುಣಿತದ ರೀತಿಯಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ವೇಗವರ್ದಿತವಾಗಿ ಹರಡುವ ಗುಣವುಳ್ಳ ಈ ವೈರಸ್ ಅನ್ನು ನಿಯಂತ್ರಿಸುವುದು ಸುಲಭದ ವಿಚಾರವಲ್ಲ. ಇದರ ಹರಡುವಿಕೆಯನ್ನು ತಡೆಯಲು ದೈಹಿಕ ಅಂತರ ಕಾಪಾಡುವ, ಪ್ರತ್ಯೇಕವಾಗುಳಿಯುವ, ಕೈ, ಮುಖ, ಮೂಗು, ಬಾಯಿ, ಪರಿಸರಗಳ ಶುಚಿತ್ವ ಕಾಪಾಡುವುದು ಬಿಟ್ಟರೆ ಬೇರೆ ಪರಿಣಾಮಕಾರಿ ಔಷಧಿ ಇಂಡಿಯಾ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಂತೂ ಸದ್ಯಕ್ಕೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಾದರೆ ಇಡೀ ಜಗತ್ತೇ ಒಂದಾಗಿ ನಿಲ್ಲಬೇಕಾಗುತ್ತದೆ.

ಆದರೆ ಅಮೇರಿಕ, ಇಸ್ರೇಲ್ ನಂತಹ ಶಕ್ತಿಗಳು ಇದಕ್ಕೆ ತಡೆಯಾಗಿ ಕೆಲಸ ಮಾಡುತ್ತಿವೆ. ಕೊರೋನಾದ ಸಂಧರ್ಭವನ್ನೂ ಕೂಡ ನಿರ್ಬಂಧ, ಬಲಪ್ರಯೋಗ, ತಮ್ಮ ದುರಾಸೆ ಹಾಗೂ ಆಕ್ರಮಣಶೀಲತೆಗಳಿಗೆ ಸಿಕ್ಕ ಸುವರ್ಣಾವಕಾಶ ಎಂದು ಭಾವಿಸಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ. ಕೊರೋನಾ ಔಷಧೋಪಚಾರ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಪಡೆಯಲು ಹಾಗೂ ನೀಡಲು ಕೂಡ ಇರಾನ್, ಕ್ಯೂಬಾ, ವೆನೆಜುಯೇಲಾಗಳಂತಹ ರಾಷ್ಟ್ರಗಳ ಮೇಲೆ ಅಮೇರಿಕ ತನ್ನ ನಿರ್ಭಂಧಗಳನ್ನು ಹೆಚ್ಚಿಸಿದೆ.

ಸದ್ಯದ ಮಟ್ಟಿಗೆ ಕ್ಯೂಬಾ, ಚೀನಾದಂತಹ ಕೆಲವೇ ದೇಶಗಳಲ್ಲಿ ನೋವೆಲ್ ಕೋವಿದ್ 19ಎಂಬ ಹೊಸ ರೀತಿಯ ಕೊರೋನಾಕ್ಕೆ ಔಷಧಿ ಇವೆ. ಇತರ ದೇಶಗಳು ಈಗ ಆ ಬಗ್ಗೆ ಪ್ರಯೋಗಗಳಿಗೆ ಇಳಿದಿವೆ. ಅಮೇರಿಕ ಯೂರೋಪುಗಳಂತಹ ಮುಂದುವರೆದ ರಾಷ್ಟ್ರಗಳಲ್ಲೂ ಕೊರೋನಾ ವಿರುದ್ಧ ಹೋರಾಡುವ ಔಷಧಿ ಇಲ್ಲ.  ಅಲ್ಲೆಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಸಲಕರಣೆಗಳು, ಮುನ್ನೆಚ್ಚರಿಕಾ ಸಲಕರಣೆಗಳ ಕೊರತೆ ತೀವ್ರವಾಗಿದೆ.

        ಮುಂದುವರೆದ ರಾಷ್ಟ್ರಗಳೆಂದು ಪರಿಗಣಿಸಿರುವ ಅಮೇರಿಕಾ ಯೂರೋಪುಗಳೇ ಇಂದು ಭಾರಿ ಪ್ರಮಾಣದಲ್ಲಿ ಕೊರೋನಾ ಭಾಧೆಗೆ ತೀವ್ರವಾಗಿ ತುತ್ತಾಗಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಮೇರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಅಮೇರಿಕದಲ್ಲಿ ಕನಿಷ್ಠ ಎರಡು ಲಕ್ಷ ಜನರಾದರೂ ಕೊರೋನಾದಿಂದಾಗಿ ಸಾಯಲಿದ್ದಾರೆ. ಅದನ್ನು ಒಂದು ಲಕ್ಷಕ್ಕೆ ನಿಲ್ಲಿಸಿದರೆ ಅದು ಬಹಳ ದೊಡ್ಡ ಸಾಧನೆಯೇ ಸರಿ ಎಂದು ಪ್ರತ್ಯೇಕ ಸಂದರ್ಭಗಳಲ್ಲಿ ಹೇಳಿದ್ದಾರೆ. ಅಮೇರಿಕ ಸ್ಪೈನ್ , ಇಟಲಿಗಳಲ್ಲಿ ದಿನವೊಂದಕ್ಕೆ ಸಾವಿರದಷ್ಟು ಜನರು ಸಾಯಲಾರಂಭಿಸಿದ್ದಾರೆ. ಜರ್ಮನಿಯಲ್ಲಿ ಮಂತ್ರಿಯೊಬ್ಬರು ಕೋರೋನಾ ಒತ್ತಡ ತಾಳಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಇದು ಕೊರೋನಾ ಉಂಟುಮಾಡಿರುವ ಶಾರೀರಿಕ ಹಾಗೂ ಮಾನಸಿಕ ಪರಿಣಾಮಗಳ ಪ್ರಮಾಣ ಎಂತಹುದೆಂಬ ಗ್ರಹಿಕೆಯನ್ನು ನಮಗೆ ನೀಡುತ್ತದೆ.
        ಕೊರೋನಾದಿಂದಾಗಿ ಸಾಯುವವರಲ್ಲಿ ಬಹುಪಾಲು ಜನರು ಹಲವು ತೀವ್ರತರದ ದೈಹಿಕ ಸಮಸ್ಯೆಗಳನ್ನು ಹೊಂದಿರುವವರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳೇ ಹೆಚ್ಚಿನವರಾಗಿದ್ದಾರೆ. ಕೊರೋನಾ ಸೋಂಕಿತರಲ್ಲಿ ಸಾಯುವವರ ಅನುಪಾತ ಶೇ 2 ರಷ್ಟು ಮಾತ್ರ. ಇದನ್ನು ಹಲವಾರು ವೈದ್ಯರುಗಳು ಹಾಗೂ ಚೀನಾದ ಉದಾಹರಣೆಗಳು ಸ್ಪಷ್ಟಪಡಿಸಿವೆ. ಆದರೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕಿಂತಲೂ  ಹೆಚ್ಚಾಗಿ ಭಯಾಂದೋಲನಗಳನ್ನು ವ್ಯಾಪಕಗೊಳಿಸಲಾಗುತ್ತಿದೆ.

ಇಂಡಿಯಾದಲ್ಲಿ ಕರೋನಾ ಹರಡುವಿಕೆಯನ್ನು ತಡೆಯುವ ಹೆಸರಿನಲ್ಲಿ ದೇಶಾದ್ಯಂತ ಮಾರ್ಚ್ 25ರಿಂದ ಆರಂಭವಾದ  ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಘೋಷಣೆ ತನ್ನ ಭೀಕರ ಪರಿಣಾಮಗಳನ್ನು ತೋರಿಸಲಾರಂಭಿಸಿದೆ. ಅಗತ್ಯ ತಯಾರಿಯಿಲ್ಲದೇ ಕೇವಲ ನಾಲ್ಕು ಗಂಟೆಗಳ ಸಮಯ ನೀಡಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಈ ದೇಶ ವಲಸೆಕಾರ್ಮಿಕರಿಗೆ, ಅಸಂಪ್ರಾದಾಯಿಕ ಹಾಗೂ ಅಸಂಘಟಿತ ಕಾರ್ಮಿಕರಿಗೆ ಹೇಳ ತೀರದ ಅಡ್ಡಪರಿಣಾಮಗಳು ಹಾಗೂ ಅನಾಹುತಗಳನ್ನು ತಂದೊಡ್ಡಿದೆ. ಉಚಿತ ಪಡಿತರ, ತಲಾ 1000 ರೂಪಾಯಿಗಳ ಸಹಾಯ, ಸಾಮೂಹಿಕ ಅಡುಗೆ ಮನೆ ಇತ್ಯಾದಿ ಪರಿಹಾರ ಕ್ರಮಗಳನ್ನು ನಂತರದಲ್ಲಿ ಘೋಷಣೆ ಮಾಡಿದ್ದರೂ ಅವುಗಳು ಸಂಬಂಧ ಪಟ್ಟವರಿಗೆ ತಲುಪುವುದೆಂದು ನಂಬಲು ಸಾಧ್ಯವಾಗದ ಪರಿಸ್ಥಿತಿ ನಮ್ಮ ದೇಶದ್ದಾಗಿದೆ. ಅಷ್ಟೇ ಅಲ್ಲದೇ ಎಲ್ಲಾ ರಾಜ್ಯ ಸರಕಾರಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿಲ್ಲದಿರುವುದೂ ಕೂಡ ಎದ್ದು ಕಾಣುತ್ತಿದೆ. ಇರುವುದರಲ್ಲಿ ಕೇರಳ ರಾಜ್ಯ ಸರಕಾರ ಮಾತ್ರ ಕೊರೋನಾ ವಿಚಾರದಲ್ಲಿ ಪರಿಣಾಮಕಾರಿಯಾದ ಕಾರ್ಯ ನಿರ್ವಹಿಸುತ್ತಿದೆ. ಆದರೆ ಲಾಕ್ ಡೌನ್ ಘೋಷಿಸಿದ ಕೆಂದ್ರ ಸರಕಾರದ ಸಹಾಯವೇನೂ ರಾಜ್ಯಗಳಿಗೆ ಸಿಗುತ್ತಿಲ್ಲ. ಆರಂಭದಲ್ಲಿ ವೈದ್ಯಕೀಯ ಪರಿಕರಗಳಿಗೆಂದು ಘೋಷಿಸಿದ 15000 ಕೋಟಿ ರೂಪಾಯಿಗಳು ಬಿಟ್ಟರೆ ಉಳಿದಂತೆ ನಂತರ ಘೋಷಿಸಿದ 1.75 ಲಕ್ಷ ಕೋಟಿಗಳ ಪ್ರಕಟಣೆ ಆಯವ್ಯಯದ ಭಾಗವಾಗಿಯೇ ಇರುವಂತಹುದೇ ಆಗಿದೆ. ಅದರ ಭಾಗವಾಗಿಯೇ ಗಣಿಗಾರಿಕಾ ನಿಧಿಯಂತಹವುಗಳನ್ನು ಬಳಸಬಹುದು ಎಂಬ ಸಲಹೆಗಳು ಅದರಲ್ಲಿ ಇದ್ದವು. ಆದರೆ ಗಣಿಗಾರಿಕೆಯಿಂದಾಗುವ ಪರಿಸರ ಹಾನಿಯನ್ನು ಸರಿಪಡಿಸುವ ಉದ್ದೇಶದಿಂದ ಗಣಿ ಮಾಲಕರುಗಳಿಂದ ಸಂಗ್ರಹಿಸುವ ವಿಶೇಷ ತೆರಿಗೆಯ ಸಂಗ್ರಹವಿದು. ಅದನ್ನು ಆ ಉದ್ದೇಶದ ಹೊರತಾದ ಕಾರ್ಯಗಳಿಗೆ ಬಳಸುವಂತೆ ಸಲಹೆ ನೀಡುವುದು ಸರ್ಕಾರ ತೋರುತ್ತಿರುವ ಪರಿಸರದ ಬಗೆಗಿನ ಕಾಳಜಿ ಎಂತಹುದು ಎನ್ನುವುದನ್ನು ಎತ್ತಿ ತೋರಿಸುತ್ತದೆ.

ನಮ್ಮ ದೇಶದ ಶೇ 90ಕ್ಕೂ ಹೆಚ್ಚು ಕಾರ್ಮಿಕರು ಅಸಂಘಟಿತ ಹಾಗೂ ಅಸಂಪ್ರಾದಾಯಿಕ ವಲಯಕ್ಕೆ ಸೇರಿದವರಾಗಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡದೇ ಲಾಕ್ ಡೌನ್ ಅವರುಗಳ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ವಿವರಿಸಲು ಬಹಳ ಕಷ್ಟ.

ಕೊರೋನಾ ಬರುವುದರ ಮೊದಲೇ ನಮ್ಮ ದೇಶದ ಆರ್ಥಿಕತೆ ನಲಕಚ್ಚಿತ್ತು. ಕೈಗಾರಿಕಾ ವಲಯ ನಕಾರಾತ್ಮಕ ಬೆಳವಣಿಗೆ ದಾಖಲಿಸಲಾರಂಭಿಸಿತ್ತು. ಈಗ ಕೊರೋನಾ ನೆಪದಲ್ಲಿ ಈ ವಲಯದ ಕಾರ್ಮಿಕರು, ನೌಕರರು ತಮ್ಮ ಉದ್ಯೋಗಗಳನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರಲಿದೆ. ಮಾಲಿಕರುಗಳು ತಮ್ಮ ಬಿಕ್ಕಟ್ಟಿನಿಂದ ಬಚಾವಾಗಲು ಕಾರ್ಮಿಕರನ್ನು/ ನೌಕರರನ್ನು ಬಲಿಕೊಡುತ್ತದೆ. ಲೇ ಆಫ್, ರಿಟ್ರೆಂಚ್ ಮೆಂಟ್ ಮೊದಲಾದ ಅಸ್ತ್ರಗಳನ್ನು ಅದು ಬಳಸುತ್ತಾ ಬಂದಿತ್ತು. ಕೊರೋನಾ ಅದಕ್ಕೆ ಮತ್ತೊಂದು ಅಸ್ತ್ರವಾಗುತ್ತದೆ.

ಮೊದಲೇ ನೋಟು ರದ್ದತಿ ಹಾಗೂ ಜಿ ಎಸ್ ಟಿ ಹೇರಿಕೆಯಿಂದಾಗಿ ಸಾಕಷ್ಟು ತತ್ತರಿಸಿದ್ದ ಸಣ್ಣ ಪುಟ್ಟ ಹಾಗೂ ಮದ್ಯಮ ಕೈಗಾರಿಕೆಗಳು ಕೊರೋನಾದಿಂದಾಗಿ ಪೂರ್ಣ ಅವಸಾನದಂಚಿಗೆ ತಲುಪಿವೆ. ಇದು ದೇಶದ ಬಹುತೇಕ ಉದ್ಯೋಗಗಳನ್ನು ಸೃಷ್ಠಿಸುವ ವಲಯ. ಆ ಉದ್ಯೋಗಗಳ ನಷ್ಟ ಈ ದೇಶದ ಬಹುಸಂಖ್ಯಾತ ಕಾರ್ಮಿಕರನ್ನು ಸಾವಿನೆಡೆಗೆ ದೂಡುತ್ತದೆ. ಈಗಾಗಲೇ ಲಾಕ್ ಡೌನ್ ಹೆಸರಿನಲ್ಲಿ ಇಡೀ ದೇಶವನ್ನೇ ಸ್ತಭ್ಧಗೊಳಿಸಿದ್ದರಿಂದಾಗಿ ಹಸಿವು ನೀರಡಿಕೆ, ಆಯಾಸಗಳಿಂದ 27ಕ್ಕೂ ಹೆಚ್ಚು ಕಾರ್ಮಿಕರು ಪ್ರಾಣ ಕಳೆದುಕೊಂಡ ವರದಿಗಳಿವೆ.  ಮುನ್ನೆಚ್ಚರಿಕೆಯಿಲ್ಲದೇ ಲಾಕ್ ಡೌನ್ ಘೋಷಣೆಯನ್ನು ಏಕಾಏಕಿ ಜಾರಿಮಾಡಿದ್ದರಿಂದಾಗಿ ದೇಶಾದ್ಯಂತ ಭಯಾಂದೋಲನವುಂಟಾಗಿ ನಗರಗಳಲ್ಲಿದ್ದ ವಲಸೆ ಕಾರ್ಮಿಕರು ಒಮ್ಮೆಗೆ ತಮ್ಮ ತಮ್ಮ ರಾಜ್ಯ ಹಾಗೂ ಹಳ್ಳಿಗಳಿಗೆ ಗುಂಪುಗುಂಪಾಗಿ ನಡಿಗೆಯಲ್ಲಿ ತೆರಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಕೊರೋನಾ ವೈರಸ್  ದೇಶದ ಹಳ್ಳಿಗಾಡನ್ನೂ ಸೇರಿರುವ ಸಾಧ್ಯತೆಯನ್ನು ಹೆಚ್ಚಿಸಿದೆ. ಇದು ಇಡೀ ದೇಶದಾದ್ಯಂತ ಕೋರೋನಾ ವೈರಸ್ ನ ಹರಡುವಿಕೆಗೆ ದಾರಿ ಮಾಡಿರುವ ಸಂಭವ ಕಾಣಿಸುತ್ತಿದೆ.

ಸದ್ಯಕ್ಕೆ ಮಾರುಕಟ್ಟೆಯಿಂದ ಕೊಳ್ಳುವ ಶಕ್ತಿಯಿರುವುದು ಸ್ಥಿರ ಆದಾಯದ ಖಾತ್ರಿಯಿರುವ ಕೇವಲ ಮದ್ಯಮವರ್ಗ ಹಾಗೂ ಶ್ರೀಮಂತ ವರ್ಗಕ್ಕೆ ಮಾತ್ರ. ಈ ವರ್ಗದ ಕೊಳ್ಳುವ ಶಕ್ತಿಯಿಂದ ಮಾತ್ರ ಮಾರುಕಟ್ಟೆ ಚೇತರಿಸಿಕೊಳ್ಳಲು ಸಾಧ್ಯವಾಗದು. ಮಾರುಕಟ್ಟೆ ಚೇತರಿಸಿಕೊಳ್ಳದೇ ಕೈಗಾರಿಕಾ ಉತ್ಪಾದನೆ ಹೆಚ್ಚದು. ಅಲ್ಲದೇ ಲಾಕ್ ಡೌನ್ ನಿಂದಾಗಿ ಕೃಷಿ ಕ್ಷೇತ್ರದ ನಷ್ಟ ಈಗ ಲೆಕ್ಕಕ್ಕೆ ಬಾರದಾಗಿದೆ. ಕೃಷಿ ಕ್ಷೇತ್ರದ ನಷ್ಟವೂ ಕೈಗಾರಿಕಾ ಕ್ಷೇತ್ರದ ನಷ್ಷಕ್ಕೆ ನೇರವಾಗಿ ಕಾರಣವಾಗುತ್ತದೆ. ಕಾರ್ಮಿಕರ ಕೊರತೆ ತೀವ್ರವಾಗಿ ಹೆಚ್ಚಾಗುತ್ತದೆ. ಬೆಳೆದು ನಿಂತ ಹಲವು ಬೆಳೆಗಳನ್ನು ಕಟಾವು ಮಾಡಲು ಸಾಧ್ಯವಾಗದೇ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕೊರತೆ ಕಾಣಿಸುವ ಸಾಧ್ಯತೆಗಳು ನಿಚ್ಚಳವಾಗಿದೆ. ನಮ್ಮ ದೇಶದ  ಒಟ್ಟು ಜನಸಂಖ್ಯೆಯ ಶೇ 65 ಕ್ಕೂ ಹೆಚ್ಚು ಬಾಗ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದಾರೆನ್ನುವುದನ್ನು ಇಲ್ಲಿ ಗಮನಿಸಬೇಕಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಜನರ ಬದುಕಿನ ಮೂಲವೇ ನಷ್ಟವಾದಾಗ  ಉಂಟು ಮಾಡಬಹುದಾದ ನೇರ ಹಾಗೂ ಪರೋಕ್ಷ ಹಾನಿಗಳ ಭೀಕರತೆಯನ್ನು ನಾವು ಊಹಿಸಬಹುದು.

ರೈತರಿಗೆ ವಾರ್ಷಿಕ 6000 ರೂಪಾಯಿಗಳ ಕೇಂದ್ರ ಸರಕಾರದ ಕೊಡುಗೆಯಾಗಲೀ, ಫಸಲ್ ಭಿಮಾ ಯೋಜನೆಯಾಗಲೀ ಈ ಜನರ ನೆರವಿಗೆ ಬರುವುದಿಲ್ಲ. ವಿಮಾಕಂಪನಿಗಳು ಕೊರೋನಾದಿಂದಾದ ಬೆಳೆ ನಷ್ಟಕ್ಕೆ ವಿಮಾ ಪರಿಹಾರ ಕೊಡುವುದು ಸದ್ಯಕ್ಕೆ ಕನಸಿನ ಮಾತೇ ಸರಿ. ಅಲ್ಲದೇ ಫಸಲ್ ಭಿಮಾ ಯೋಜನೆಯೇ ದೊಡ್ಡ ಹಗರಣವಾಗಿರುವಾಗ ಅದು ಸಾಧ್ಯವಾಗದ ವಿಚಾರ.

        ಇನ್ನು ಸಣ್ಣ ಪುಟ್ಟ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಸ್ಥರುಗಳ ಚೇತರಿಕೆ ಸನಿಹದಲ್ಲಿ ಕಾಣಲು ಸಾಧ್ಯ ಇಲ್ಲ. ನಮ್ಮ ಸರಕಾರಗಳು ಭಾರಿ ಕಾರ್ಪೋರೇಟುಗಳಿಗೆ ನೀಡುವ ನೆರವುಗಳನ್ನು ಈ ವಲಯಗಳಿಗೆ ನೀಡುವುದಿಲ್ಲ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವ ಬಹಿರಂಗ ಸತ್ಯ.
ಕೊರೋನಾ ವೈರಸ್ ಬಾವಲಿ ಮೂಲದ ವೈರಸ್ಸಾಗಿದ್ದು ಕಾಡು ಹಾಗೂ ಪ್ರಕೃತಿಯ ನಾಶದಿಂದಾಗಿ ಮಾನವನಿಗೆ ಹರಡತೊಡಗಿದೆ ಎನ್ನುವುದು ಈಗಿರುವ ವೈಜ್ಞಾನಿಕ ವಿಶ್ಲೇಷಣೆಯಾಗಿದೆ. ಪ್ರಾಕೃತಿಕ ನಾಶ, ಅರಣ್ಯನಾಶ, ಪರಿಸರದ ಬಗೆಗಿನ ಅಸಡ್ಡೆ, ಭೂಮಿಯ ಉಷ್ಣತೆಯ ಹೆಚ್ಚಳ, ಭೂಮಿಯ ದೃವಗಳ ಹಿಮ ಕರಗುವಿಕೆ ಇತ್ಯಾದಿಗಳ ಕಾರಣದಿಂದಾಗಿ ಭೂಪರಿಸರ ಭಾರಿ ಏರುಪೇರುಗಳನ್ನು ಕಾಣುತ್ತಿದೆ. ಇದರ ಕಾರಣದಿಂದ ಅಕಾಲಿಕ ಮಳೆ, ಅತೀ ವೃಷ್ಠಿ, ಅನಾವೃಷ್ಠಿ, ಜಲಪ್ರಳಯಗಳು ಹೆಚ್ಚಾಗತೊಡಗಿವೆ. ಹಲವು ಸಾರ್ಸ್ ( ಎಸ್ ಎ ಆರ್ ಎಸ್) ಸೇರಿದಂತೆ ವೈರಸ್ ಗಳು ಬೆಳೆದು ಹರಡಲು ಇಂತಹ ಭೂವಾತಾವರಣ ಪೂರಕವಾಗತೊಡಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಲವು ವೈರಸ್ ಗಳು ಭೂ ವಾತಾವರಣದ ನಿರ್ದಿಷ್ಟ ಉಷ್ಣತೆಯಲ್ಲೇ  ಹುಟ್ಟಿ ಬೆಳೆಯುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈಗಿನ ನೊವಿದ್ ಕೊರೋನ 19 ಕೂಡ ಅದರಲ್ಲಿ ಒಂದಾಗಿದೆ.

ಭೂಮಿಯ ಮೇಲ್ಮೈ ಬಿಸಿಯೇರಿಕೆ ಹಾಗೂ ಪ್ರಾಕೃತಿಕ ವಿನಾಶದ ಮೂಲ ಜಾಗತಿಕ ಕಾರ್ಪೋರೇಟುಗಳ ಸೂಪರ್ ಲಾಭದ ದುರಾಸೆಯಾಗಿದೆ. ಭೂಮಿಯ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆಹೊಡೆಯುವುದು ಭಾರಿ ಕಾರ್ಪೋರೇಟುಗಳ ಸುಲಭದ ದಾರಿಗಳಾಗಿವೆ. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ಭೂಮಿಯ ಮೇಲೆ ನಿರಂತರವಾಗಿ ಆಕ್ರಮಣಗಳ ಪರಿಣಾಮಗಳನ್ನು ಇಡೀ ಮಾನವ ಸಮುದಾಯವೇ  ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ನೋವಿದ್ ಕೋರೋನಾ 19 ಹೆಚ್ಚಾಗಿ ಭಾಧಿಸುತ್ತಿರವುದು ಸಾಮ್ರಾಜ್ಯಶಾಹಿ ರಾಷ್ಟ್ರಗಳಲ್ಲಿ. ಜೊತೆಗೆ ಸಾವಿಗೀಡಾಗಿರುವವರಲ್ಲಿ ಶೇ99 ಜನರು ವೃದ್ದಾಪ್ಯದಲ್ಲಿದ್ದವರು. ವೃದ್ದಾಪ್ಯವೆಂದಾಗ ಸಹಜವಾಗಿ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಿರುತ್ತದೆ. ವೃದ್ದಾಪ್ಯ ಸಂಬಂಧಿ ಕಾಯಿಲೆಗಳೂ ಕೂಡ ಜೊತೆಗಿರುತ್ತವೆ. ಅತೀ ಹೆಚ್ಚು ಕೊರೋನಾ ಸಾವುಗಳು ಸಂಭವಿಸಿರುವ ಇಟಲಿ, ಚೀನಾ, ಅಮೇರಿಕಾ, ಯುಕೆ ಗಳ ಉದಾಹರಣೆಗಳು ಈ ವಿಚಾರವನ್ನು ಸ್ಪಷ್ಟಪಡಿಸುತ್ತವೆ.
ಯೂರೋಪಿನ ರಾಷ್ಟ್ರವಾದ ಹಂಗೇರಿಯಲ್ಲಿ ಕೊರೋನಾ ನೆಪ ಮುಂದಿಟ್ಟು ಸಂವಿಧಾನ ಹಾಗೂ ಕಾನೂನುಗಳನ್ನು ಅಸಿಂಧುಗೊಳಿಸಿ ಸರ್ವಾಧಿಕಾರವನ್ನು ಜಾರಿಗೆ ತರಲಾಗಿದೆ. ಹಲವಾರು ರಾಷ್ಟ್ರಗಳಲ್ಲಿ ಇದುವರೆಗೂ ಇದ್ದ ಪ್ರಜಾತಾಂತ್ರಿಕ ಪ್ರಕ್ರಿಯೆಗಳಾದ ಚುನಾವಣೆ, ಮಾನವ ಹಕ್ಕುಗಳು, ಕಾನೂನು  ನಿಯಮಗಳು ಮೊದಲಾದವನ್ನು ಕರೋನಾ ನೆಪ ಹಿಡಿದು ರದ್ದುಗೊಳಿಸಲಾಗಿದೆ. ಅಪರಿಮಿತ ಅಧಿಕಾರಗಳನ್ನು ಆಯಕಟ್ಟಿನ ಸ್ಥಾನದಲ್ಲಿರುವವರು ತಮ್ಮ ಕೈಗೆ ಪಡೆದುಕೊಳ್ಳತೊಡಗಿದ್ದಾರೆ. ಅಮೇರಿಕದ ಟ್ರಂಪ್ ಕೂಡ ಇದೇ ಹಾದಿಯಲ್ಲಿರುವ ವರದಿಗಳಿವೆ. ಕೊರೋನಾದ ನೆಪದಲ್ಲಿನ ಆಳುವವರ ರಾಜಕೀಯ ನಡೆಗಳು ಸರ್ವಾಧಿಕಾರ ಸ್ಥಾಪನೆಯತ್ತ ಸಾಗುತ್ತಿದೆ. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ( ಸಾಮ್ರಾಜ್ಯಶಾಹಿ ವ್ಯವಸ್ಥೆ) ಹಿಂದೆಂದೂ ಇಲ್ಲದೆಷ್ಟು ಮಹಾ ವಿಫಲತೆಗಳಿಗೆ ಒಳಗಾಗಿ ಅದು ಹಿಂದೆಲ್ಲಾ ಜನಸಾಮಾನ್ಯರಿಗೆ ಅತ್ಯುತ್ತಮ ಸಾಮಾಜಿಕ ವ್ಯವಸ್ಥೆ, ಜನರಿಂದ, ಜನರಿಗಾಗಿ, ಜನರೇ ನಿರ್ಮಿಸಿಕೊಳ್ಳುವ ವ್ಯವಸ್ಥೆ ಇದಕ್ಕೆ ಬೇರೆ ಯಾವ ಪರ್ಯಾಯ ವ್ಯವಸ್ಥೆಯೂ ಇಲ್ಲ  ಎಂದೆಲ್ಲಾ ಬಿಂಬಿಸಿಕೊಂಡು ಬಂದಿದ್ದ ಎಲ್ಲಾ ತತ್ವಗಳು ಸಂಪೂರ್ಣ ಪೊಳ್ಳು ಎಂಬುದು ಈಗವರು ತೆಗೆದುಕೊಳ್ಳುತ್ತಿರುವ ನಡೆಗಳು ಸ್ಪಷ್ಟವಾಗಿ ಸಾಬೀತು ಮಾಡುತ್ತಿವೆ. ಅವರೀಗ ಅವರುಗಳೇ ಸೃಷ್ಟಿಸಿಕೊಂಡ ಬಿಕ್ಕಟ್ಟುಗಳ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಅಸ್ತಿತ್ವಗಳಿಗಾಗಿ ಭೂಮಿ ಪರಿಸರ ಅಷ್ಟೇ ಅಲ್ಲದೇ ಮಾನವ ಸಮುದಾಯಕ್ಕೇನೇ ಎಂತಹ ಅಪಾಯಗಳನ್ನೂ ಕೂಡ ತಂದೊಡ್ಡುವ ತರಾತುರಿಯಲ್ಲಿದ್ದಾರೆ. ಕೋರೋನಾ ಬಿಕ್ಕಟ್ಟನ್ನು ಅವರು ಅದೇ ರೀತಿಯಲ್ಲಿಯೇ ಉಪಯೋಗಿಸಿಕೊಳ್ಳ ತೊಡಗಿದ್ದಾರೆ.

ಇಂಡಿಯಾದಲ್ಲಿ ಕೊರೋನಾ ಬಿಕ್ಕಟ್ಟನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಮೌಢ್ಯವನ್ನು ಬಳಸಿಕೊಳ್ಳುತ್ತಾ ಸಮೂಹ ಸನ್ನಿಗೆ ಇಡೀ ದೇಶದ ಜನರನ್ನು ಒಳಪಡಿಸುವ ಕಾರ್ಯ ನಡೆಯುತ್ತಿದೆ. ಕೊರೋನಾ ವೈರಸ್ ಹರಡದಂತೆ ತಡೆಯಬಹುದಾದ ಎಲ್ಲಾ ಅವಕಾಶಗಳನ್ನೂ ಜಾಣಕುರುಡು ನಡೆಗಳ ಮೂಲಕ ಹಾಗೂ ವ್ಯವಸ್ಥಿತವಾಗಿ ತಳ್ಳಿಹಾಕಲಾಗಿತ್ತು. ಅದು ದೇಶ ವ್ಯಾಪಿ ಹರಡುವಂತಹ ಸ್ಥಿತಿಯವರೆಗೆ ತಲುಪಲು ಬಿಡಲಾಯಿತು. ನಂತರ ಕೊರೋನಾ ಬಗ್ಗೆ ಇನ್ನಿಲ್ಲದ ಭಯಾಂದೋಲನಗಳಿಗೆ ಜನರನ್ನು ಒಡ್ಡಲಾಯಿತು. ನಂತರ ಕೊರೋನಾ ನಿಯಂತ್ರಿಸುವ ಕಾರ್ಯಗಳಿಗೆ ಸರ್ಕಾರಗಳು ತೊಡಗುತ್ತಿರುವಂತೆ ತೋರಿಸುತ್ತಾ ದೇಶದ ಜನಸಾಮಾನ್ಯರನ್ನು ನಿಯಂತ್ರಿಸಲು ತೊಡಗಲಾಯಿತು. ಜನರ ಹಕ್ಕುಗಳು ಹಾಗೂ ದನಿಗಳನ್ನು ವ್ಯವಸ್ಥಿತವಾಗಿ ಅಡಗಿಸಲಾಯಿತು.

 ಆಳುವ ಶಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಜನರನ್ನು ಮೋಡಿ ಮಾಡಿ ಸಜ್ಜುಗೊಳಿಸುವ ಪ್ರಕ್ರಿಯೆಗಳನ್ನು ಸರಕಾರಗಳು ಹೆಚ್ಚು ಮಾಡತೊಡಗಿವೆ. ಮುಂದಿನ ದಿನಗಳಲ್ಲಿ ಆಳುವ ಶಕ್ತಿಗಳಿಗೆ ಅಗತ್ಯವಾಗುವ ಸಂಪೂರ್ಣ ನಿರಂಕುಶಾಧಿಕಾರ ಹೇರಿಕೆಗೆ ಜನರಿಗೆ ತಾಲೀಮು ನೀಡತೊಡಗಿದ್ದಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಂತಹ ಸ್ಥಿತಿಯಲ್ಲಿರಲು ಜನರನ್ನು ಸಜ್ಜುಗೊಳಿಸುತ್ತಿದ್ದಾರೆ. ಯಾವುದೇ ರಾಷ್ಟ್ರಗಳಲ್ಲೂ ಮಾಡದ ರೀತಿಯ ಲಾಕ್ ಡೌನ್ ಅನ್ನು ಇಂಡಿಯಾದಲ್ಲಿ ಕೊರೋನಾ ಭಯಾಂದೋಲನದ ಮೂಲಕ  ಹೇರಲಾಯಿತು. ಜನಸಾಮಾನ್ಯರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಇಡೀ ದೇಶವನ್ನು ಸ್ತಬ್ಧಗೊಳಿಸಿ ಇಡಲಾಯಿತು. ಪೋಲಿಸ್ ನಿಯಂತ್ರಣ ಹಾಗೂ, ಗೃಹಬಂಧನದಲ್ಲಿ ಇಡೀ ದೇಶದ ಜನರನ್ನು ಬಹಳ ಚಾಕಚಕ್ಯತೆಯಿಂದ ಇರಿಸಲಾಯಿತು.
135 ಕೋಟಿಯಷ್ಟು ಜನರನ್ನು ಸಾಮಾನ್ಯ ಸಂಧರ್ಭಗಳಲ್ಲಿ ಇಂತಹ ಒಂದು ಸ್ಥಿತಿಗೆ ಒಗ್ಗಿಸಿಕೊಳ್ಳುವುದು  ಕಾನೂನಾತ್ಮಕವಾಗಿಯೂ ಅಷ್ಟು ಸುಲಭದ್ದಲ್ಲ. ಆದರೆ ಜನತಾ ಕರ್ಫ್ಯೂ, ಚಪ್ಪಾಳೆ ತಟ್ಟುವಿಕೆ, ದೀಪಕೆಡಿಸಿ, ದೀಪ ಹಚ್ಚುವಿಕೆ, ಏಕಾಏಕಿ ಲಾಕ್ ಡೌನ್, ಕರ್ಫ್ಯೂ ಇತ್ಯಾದಿಗಳ ಮೂಲಕ ಸಮೂಹ ಸನ್ನಿಯನ್ನು ಬಡಿದೆಬ್ಬಿಸುವ, ಭಯಾಂದೋಲನ ಹರಡುವ, ಭಾವನಾತ್ಮಕ ಬ್ಲಾಕ್ ಮೇಲ್ ತಂತ್ರ ಬಳಕೆ, ಮಾಧ್ಯಮ ನಿಯಂತ್ರಣ ಮೊದಲಾದವುಗಳ ಮೂಲಕ ಸಲೀಸಾಗಿ ಮಾಡಲಾಯಿತು. ಆದರೆ ಕೋರೋನಾ ಪೀಡಿತರಿಗೆ, ವೈದ್ಯಕೀಯ, ಆಹಾರ, ನೀರು, ವಸತಿ ವ್ಯವಸ್ಥೆ, ಏಕಾಏಕಿ ಲಾಕ್ ಡೌನ್ ನಿಂದ ನರಳುವವರಿಗೆ ಆಹಾರ, ಮತ್ತಿತರ ಅಗತ್ಯಗಳ ಪೂರೈಕೆ, ಅವರ ಮುಂದಿನ ಜೀವನಕ್ಕೆ ದಾರಿ ಇತ್ಯಾದಿ ಹೇಳಿಕೊಳ್ಳುವಂತಹ ಯಾವುದೇ ಪರಿಹಾರಗಳನ್ನು ಸರ್ಕಾರ ಈಗಲೂ ಮಾಡದೇ ಇರುವುದು ಕಣ್ಣಿಗೆ ರಾಚುವಂತಿದೆ. ಆದಾಗ್ಯೂ ಇಷ್ಟೊಂದು ಅಗಾಧ ಜನಸಂಖ್ಯೆಯ ದೇಶವೊಂದನ್ನು ಯಾವುದೇ ನಿರಂಕುಶಾಧಿಕಾರವೂ ಮಾಡಿರದಂತಹ ಸ್ಥಿತಿಯಲ್ಲಿಡಲಾಗಿರುವುದನ್ನು ನಾವು ಸೂಕ್ಷ್ಮವಾಗಿ ನೋಡಿದರೆ ಈ ಎಲ್ಲಾ ವಿಚಾರಗಳು ಗ್ರಹಿಕೆಗೆ ಬರುತ್ತದೆ. ಇದರ ನೇರ ಹಾಗೂ ಅಡ್ಡ ಪರಿಣಾಮಗಳು ಮುಂದಿನ ದಿನಗಳಲ್ಲಿ ಭೀಕರವಾಗಲಿದೆ

ಇಂಡಿಯಾದಲ್ಲಿ ಕೋರೋನಾ ವೈರಸ್ ಗೆ ಕೋಮುವಾದದ ಸೋಂಕನ್ನು ಕೂಡ ತಗುಲಿಸಲಾಗಿದೆ. ಮುಸ್ಲಿಮರನ್ನು ಕೊರೋನಾ ವೈರಸ್ ಸಂಧರ್ಭ ಬಳಸಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸುವ ಪ್ರಯೋಗದಲ್ಲಿ ಸಂಘ ಪರಿವಾರ ನಿರತವಾಗಿದೆ. ದೇಶದ ಹಲವು ಭಾಗಗಳಲ್ಲಿ ಅದರ ಕೆಟ್ಟ ಪರಿಣಾಮ ಬೀರತೊಡಗಿದೆ.  ಅದಕ್ಕಾಗಿ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮುಸ್ಲಿಮ್ ಸಮುದಾಯದಲ್ಲಿರುವ ತಿಳುವಳಿಕೆಯ ಕೊರತೆಗಳು, ಅಂಧ ವಿಶ್ವಾಸಗಳು, ಬೇಜವಾಬ್ದಾರಿತನಗಳು ಹಾಗೂ ಆ ಸಮುದಾಯದಲ್ಲಿರುವ ಕೆಲವು ಮೂಲಭೂತವಾದಿ ಮನಸುಗಳ ಕೆಲವು ನೀಚ ಕೃತ್ಯಗಳನ್ನು ಅದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಅಪಾಯಕಾರಿ ಸ್ಥಿತಿಯನ್ನು ಸಾಮಾಜಿಕವಾಗಿ ಸೃಷ್ಠಿಸಲಾರಂಭಿಸಿದೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ಒಂದು ನಾಗರಿಕ ಯುದ್ಧದ ವಾತಾವರಣ ಏರ್ಪಡತೊಡಗಿದೆ. ಅದರ ಪರಿಣಾಮ ಹಲವು ರೀತಿಗಳಲ್ಲಿ ಆಗಬಹುದು, ಈಗಿರುವ ದೇಶ,  ರಾಷ್ಟ್ರಗಳ ಗಡಿಗಳೇ ಬದಲಾಗಬಹುದು. ದೊಡ್ಡ ದೇಶಗಳು ಹಲವು ಸಣ್ಣ ರಾಷ್ಟ್ರಗಳಾಗಿ ಮಾರ್ಪಡಬಹುದು. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಅರಾಜಕತೆಯು ಅತಿ ಉನ್ನತ ಹಂತ ತಲುಪುತ್ತಿದೆ. “ಸಾಮ್ರಾಜ್ಯವಾದ ಬಂಡವಾಳವಾದದ ಅತ್ಯುನ್ನತ ಘಟ್ಟ” ಎಂದು ವ್ಲಾದಿಮಿರ್ ಲೆನಿನ್ ಸಾಮ್ರಾಜ್ಯಶಾಹಿ ಘಟ್ಟವನ್ನು ವಿವರಿಸಿದ್ದರು.

        ಕೊರೋನಾ ವೈರಸ್ ಕೇವಲ ದೈಹಿಕ ಇಲ್ಲವೇ ಪ್ರಾಕೃತಿಕ ವೈರಸ್ ಮಾತ್ರವಲ್ಲ ಅದು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ವೈರಸ್ ಕೂಡ ಆಗಿ  ಆಳುವ ಶಕ್ತಿಗಳಿಗೆ ಉಪಯೋಗಿಸಲ್ಪಡುತ್ತಿದೆ ಎನ್ನುವುದು ಇವುಗಳನ್ನು ಗಮನಿಸಿದಾಗ ಅರ್ಥವಾಗುವ ವಿಚಾರ. ಇವೆಲ್ಲಾ ಸೇರಿ ದೇಶದ ಜನಸಾಮಾನ್ಯರ ಮುಂದಿನ ದಿನಗಳನ್ನು ಧಾರುಣಗೊಳಿಸಲಿದೆ. ಜಾಗತಿಕವಾಗಿ ಜನಹೋರಾಟಗಳು ತೀವ್ರವಾಗಲಿವೆ. ಹೊಸದೊಂದು ಸಾಮಾಜಿಕ ವ್ಯವಸ್ಥೆಯತ್ತ ಜಗತ್ತು ಚಲಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ. ಇದುವರೆಗೂ ಮಾಡಿಕೊಂಡು ಬಂದ ಪ್ಯಾಚ್ ಅಪ್ ಕಾರ್ಯಗಳು ಈಗ ತಾತ್ಕಾಲಿಕವಾಗಿ ಕೂಡ ಕೆಲಸಕ್ಕೆ ಬರಲು ಸಾಧ್ಯವಾಗದ ಪರಿಸ್ಥಿತಿಗಳೇ ಎಲ್ಲಡೆಯೂ ಕಾಣುತ್ತಿದೆ. ಅಸಮಾನತೆ ತೊಲಗಲಿ ಮಾನವ ಕುಲ ಉಳಿದು ಬೆಳೆಯಲಿ ಆಗ ಮಾತ್ರ ಜಗತ್ತು ತನ್ನ ಅಸ್ತಿತ್ವವನ್ನು ಸರಿಯಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

06/04/2020               -ನಂದಕುಮಾರ್ ಕೆ. ಎನ್. ಕುಂಬ್ರಿಉಬ್ಬು
ಮಿಂಚಂಚೆ: nandakumarnandana67@gmail.com


Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...