ಗ್ರಾಮೀಣ
ಬದುಕಿನ ಸಾಮಾಜಿಕ ವಾಸ್ತವಗಳ ಸೂಕ್ಷ್ಮ ಕೃತಿ
“ಗರ್ಭಗುಡಿ
ಮತ್ತು ಇತರೆ ಕತೆಗಳು”
ದಾವಣಗೆರೆ ಜಿಲ್ಲೆಯ ವಿಶ್ವನಾಥನಹಳ್ಳಿ ಮೂಲದ ಪತ್ರಕರ್ತ ಹಾಗೂ ಕತೆಗಾರ ಟಿ ಎನ್
ಷಣ್ಮುಖ ಲಂಕೇಶ್ ಪತ್ರಿಕೆ, ಪ್ರಗತಿರಂಗಗಳ ಮೂಲಕ ಸಾಮಾಜಿಕವಾಗಿ
ಸಕ್ರಿಯರಾದವರು. ನಂತರ ತಮ್ಮದೇ ‘ಪ್ರಜಾಕೂಗು’ ಎಂಬ ಪತ್ರಿಕೆಯನ್ನು ಹಲವಾರು ವರ್ಷಗಳ ಕಾಲ ಮುನ್ನೆಡೆಸಿದವರು.
ಗೌರಿ, ಪರಿವರ್ತನೆ, ಅನಾವರಣ, ಮುಖ ಮತ್ತು ಮುಖವಾಡಗಳು
ಸೇರಿದಂತೆ ಹತ್ತಕ್ಕೂ ಹೆಚ್ಚು ಇವರ ಕೃತಿಗಳು ಪ್ರಕಟಗೊಂಡಿವೆ.
2019ರಲ್ಲಿ ಇವರು ಗರ್ಭಗುಡಿ ಇತರೆ ಕತೆಗಳು
ಎಂಬ ಕೃತಿಯನ್ನು ಕಾವ್ಯಕಲಾ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಗರ್ಭಗುಡಿ, ಚಂದ್ರ ತಂದ ಗಂಗಾಜಲ,
ಬದುಕೆಂಬ ಮಾಯೆಯೊಳಗೆ, ತಮಟೆ ಸದ್ದು , ಪ್ರಣವ ಎಂಬ ಐದು ಕತೆಗಳ ಸಂಗ್ರಹ ರೂಪದ ಪುಸ್ತಕವಿದು. ಮೊದಲ
ಮೂರು ಕತೆಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಕತೆಗಳಾಗಿವೆ. ಉಳಿದ ಎರಡು ಅಪ್ರಕಟಿತ ಕತೆಗಳು.
‘ಗರ್ಭಗುಡಿ’ ಬಹಳ ಹಿಂದೆಯೇ ಕಾನೂನು ಪ್ರಕಾರ ರದ್ದಾಗಿದೆ ಎಂದು ಹೇಳಲಾದ
ಬಸವಿ ಪದ್ದತಿಯ ಸಾಮಾಜಿಕ ಕ್ರೌರ್ಯದ ಹಲವು ಆಯಾಮಗಳನ್ನು ಮನತಟ್ಟುವಂತೆ ತೆರೆದಿಡುವ ಕತೆ. ನಮ್ಮ ಗ್ರಾಮೀಣ
ಸಮಾಜದೊಳಗೆ ಜಾತಿ ಪದ್ದತಿಯೆಂಬ ಕ್ರೌರ್ಯ ಹೇಗೆ ತಳಪಾಯದ ಸಮುದಾಯದ ಮಹಿಳೆಯರನ್ನು ತಣ್ಣಗೆನಿಸುವ ರೀತಿಯಲ್ಲಿ
ಬಲಿ ಹಾಕಿಬಿಡುತ್ತದೆ ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ಈ ಕತೆ ಬಿಂಬಿಸುತ್ತದೆ. ಈ ಕತೆಯ ದುರುಗವ್ವ
ಹಾಗೂ ಆಕೆಯ ಮಗಳು ಸುಜಾತಳ ಕತಾಪಾತ್ರಗಳು ಶೋಷಣೆ ಹಾಗೂ
ಬಂಡಾಯದ ಪ್ರತಿಮಾ ರೂಪಗಳಾಗಿ ಕತೆಯಲ್ಲಿ ನಿಲ್ಲುತ್ತವೆ. ಈ ಎರಡು ಪಾತ್ರಗಳ ಸುತ್ತಾ ಮಾರ, ಕುಲಕಂಟೇಶ್ವರ
ಪೂಜಾರಿ ಪರಂಧಾಮಯ್ಯ, ಮರುಳಸಿದ್ಧ ಮೊದಲಾದ, ಕತಾಪಾತ್ರಗಳು ಸುತ್ತುತ್ತವೆ.
ನನ್ನ ಅಪ್ಪನ ಹೆಸರೇಳು ಎಂದು ಸ್ವಂತ ತಾಯಿಯನ್ನೇ ಪ್ರಶ್ನೆ
ಮಾಡಿ ಉತ್ತರ ಪಡೆಯುವ ಸುಜಾತಳ ಪ್ರಯತ್ನ ಹನುಮಂತದೇವರ
ಜಾತ್ರೆಯ ಸಂಧರ್ಭದಲ್ಲಿ ನಿರ್ಣಾಯಕವಾಗಿ ಕೊನೆಗೊಳ್ಳುತ್ತದೆ. ಆದರೆ ಅದು ಬಿಚ್ಚಿ ತೆರೆದಿಡುವ ಸತ್ಯಗಳು
ಘೋರವಾಗಿರುತ್ತದೆ. ಎಷ್ಟು ಮಟ್ಟಕ್ಕೆಂದರೆ ತಂದೆಯೇ ತನ್ನ ಸ್ವಂತ ಮಗಳನ್ನೇ ಹನುಮಂತ ದೇವರಿಗೆ ಬಸವಿ
ಬಿಡುವಂತೆ ಮಾಡಿ ಅದೇ ದೇವರ ಹೆಸರಲ್ಲಿ ಆಕೆಯನ್ನು ಲೈಂಗಿಕವಾಗಿ ಶೋಷಿಸಲು ಹೊರಟಿದ್ದ ಎನ್ನುವ ಘೋರ
ಸತ್ಯ ಅನಾವರಣವಾಗುತ್ತದೆ.
ಗ್ರಾಮೀಣ ಸಮಾಜದಲ್ಲಿ ಪುರೋಹಿತ ಶಾಹಿ ಹಿಡಿತದ
ಮೂಲಕ ಹೇಗೆಲ್ಲಾ ಇತರ ಸಮುದಾಯಗಳನ್ನು ಶೋಷಿಸಲಾಗುತ್ತಿದೆ. ಬ್ರಹ್ಮಚಾರಿ ಎಂದೇ ಬಿಂಬಿತನಾದ ಹನುಮಂತ
ದೇವರನ್ನು ಈ ಕೆಲಸಗಳಿಗೆ ಹೇಗೆಲ್ಲಾ ಉಪಯೋಗಿಸಲಾಗುತ್ತದೆ. ಅದರೊಳಗಿನ ಆರ್ಥಿಕತೆ ಹಾಗೂ ರಾಜಕಾರಣವನ್ನು
ಈ ಕತೆಯಲ್ಲಿ ಅನಾವರಣಗೊಳಿಸಲಾಗಿದೆ. ಗ್ರಾಮೀಣ ಭಾಷಾ ಶೈಲಿಯಲ್ಲಿ ಈ ಕತೆಯ ಸಂಭಾಷಣೆಗಳು ನಡೆಯುತ್ತವೆ.
ಚಂದ್ರ ತಂದ ಗಂಗಾಜಲ ಎಂಬ ಕತೆಯಲ್ಲಿ ಬ್ರಾಹ್ಮಣ
ಶ್ರೇಷ್ಠತೆಯ ವ್ಯಸನಗಳಿಂದ ನರಳುತ್ತಿಉವ ವ್ಯಕ್ತಿಗಳ ಬದುಕನ್ನು ಅನಾವರಣಗೊಳಿಸುವಂತಹುದು. ಗಂಗಾಜಲದ
ಪವಿತ್ರತೆ ಅದನ್ನು ತಂದು ಕೊಡುವ ವ್ಯಕ್ತಿಯ ಜಾತಿಯನ್ನು ಆದರಿಸಿ ನೋಡುವ ಮನಸ್ಥಿತಿಗಳಿಂದ ಆಗುವ ಬದುಕುಗಳಲ್ಲಿನ
ನಷ್ಟಗಳ ಪರಿಚಯ ಮಾಡಿಕೊಡುತ್ತದೆ.
ನಮ್ಮ ಕಾನೂನು ಪಾಲಕರೆನಿಸಿಕೊಂಡವರು ಹೇಗೆ ಪರಸ್ಪರ ಸಂಬಂಧವಿಲ್ಲದ
ವ್ಯಕ್ತಿಗಳನ್ನು ಹೇಗೆಲ್ಲಾ ಕಾನೂನು ಕುಣಿಕೆಯೊಳಗೆ ಸಿಲುಕಿಸಲು ಸಾಧ್ಯ ಎನ್ನುವುದನ್ನು ಬಿಡಿಸಿಡುವ
ಕತೆ ಬದುಕೆಂಬ ಮಾಯೆಯೊಳಗೆ. ಒಬ್ಬ ಕತೆಗಾರನ ಪುಸ್ತಕವೊಂದು ಎನ್ಕೌಂಟರಿನಲ್ಲಿ ಮೃತನಾದ ವ್ಯಕ್ತಿಯೊಬ್ಬರ
ಕೈಯಲ್ಲಿ ಇತ್ತು ಎನ್ನುವ ಕಾರಣಕ್ಕೇ ವಿಚಾರಣೆಗೊಳಗಾಗ ಬೇಕಾದ ಸಂಧರ್ಭ ಎದುರಾಗುವುದು. ಅದಕ್ಕಾಗಿ ತನ್ನ
ಹಲವು ತುರ್ತು ಕೆಲಸಗಳನ್ನು ಬದಿಗೊತ್ತಿ ಕುಟುಂಬ ಸಮೇತ ತನ್ನ ಹಳ್ಳಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.
ಇದರಿಂದಾಗಿ ಹಳ್ಳಿ ಜನರಲ್ಲಿ ಕತೆಗಾರನ ಬಗ್ಗೆ ಏಳುವ ವ್ಯಕ್ತ ಹಾಗೂ ಅವ್ಯಕ್ತ ಅನುಮಾನಗಳು, ಗೊಂದಲಗಳನ್ನು
ಹಾಗೇಯೇ ಉಸಿರು ಕಟ್ಟುವಂತಹ ಸ್ಥಿತಿಯನ್ನು ಬಿಚ್ಚಿಡುತ್ತದೆ. ಇಂತಹುದೇ ನಾಟಕೀಯ ಪ್ರಕರಣಗಳಲ್ಲಿ ಹಲವು
ಬರಹಗಾರರು, ವಕೀಲರುಗಳು, ಮಾನವ ಹಕ್ಕು ಹೋರಾಟಗಾರರು, ಬುಧ್ಧಿಜೀವಿಗಳನ್ನು ಕಾರಾಗೃಹಕ್ಕೆ ಕಳಿಸಿರುವ
ಸಂಧರ್ಭ ಇದಾಗಿರುವುದರಿಂದಾಗಿ ಈ ಕತೆಯು ಪ್ರಸ್ತುತವೆನಿಸಿಬಿಡುತ್ತದೆ.
ತಮಟೆಯ ಸದ್ದು ಭ್ರಾಹ್ಮಣ ಶ್ರೇಷ್ಠತೆಯ ಅಂಟು ಜಾಢ್ಯವನ್ನು ನವಿರಾಗಿ ಅನಾವರಣಗೊಳಿಸುತ್ತದೆ. ಸುಬ್ಬಾ
ಶಾಸ್ತ್ರಿಯ ಶಾಸ್ತ್ರ, ಸಂಪ್ರದಾಯ, ಆಚಾರಗಳ ಸೋಗಲಾಡಿತನವನ್ನು ಅವರ ಹೆಂಡತಿಯ ಪಾತ್ರದ ಮೂಲಕ ಮೊದಲೇ ಬಿಡಿಸಿಡಲಾಗುತ್ತದೆ.
ಅದರ ಕರಾಳ ಮುಖ ಅನಾವರಣವಾಗುವುದು ಮಾತ್ರ ನಂತರ. ಮಗ ಮದುವೆಯಾಗ ಹೊರಟ ಗಂಡನಿಂದ ಬೇರೆಯಾದ ಶೂದ್ರ ಮೂಲದ
ಚಂದ್ರಮತಿಯನ್ನೇ ಶಾಸ್ತ್ರ ಹೇಳುವ ನೆಪದಲ್ಲಿ ಕಾಮಿಸಲು ಹೊರಟ ವಯೋವೃದ್ಧ ಸುಬ್ಬಾ ಶಾಸ್ತ್ರಿಯ ಮೂಲಕ
ಅದು ಮುಖಕ್ಕೆ ರಾಚುತ್ತದೆ. ಸುಬ್ಬಾ ಶಾಸ್ತ್ರಿಯ ಮಗ ಸದಾಶಿವ ಶಾಸ್ತ್ರಿ ಆಕೆಯನ್ನು ಕೊನೆಯಲ್ಲಿ ಮದುವೆಯಾಗುವ
ಸಂಧರ್ಭದ ಮೂಲಕ ಭ್ರಾಹ್ಮಣಶಾಹಿ ಕರ್ಮಠತೆಯ ಟೊಳ್ಳನ್ನು ಒಡೆದು ಚೂರು ಮಾಡಿಬಿಡುತ್ತದೆ. ಆದರೆ ಅಗ್ರಹಾರದ
ಮೂಲಕ ಅದೇ ಕರ್ಮಠತೆ ಸುಬ್ಬಾಶಾಸ್ತ್ರಿ ಹಾಗೂ ಹಾಗೂ ಸದಾಶಿವಶಾಸ್ತ್ರಿಯನ್ನು ಬಹಿಷ್ಕರಿಸುವ ರೀತಿಯಲ್ಲಿ
ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಸುತ್ತದೆ.
ಪ್ರಣವ ಎಂಬ ಕತೆಯ ನಾಯಕ ಸಂಜೀವನ ಸ್ವಯಂ ಚರ್ಚೆಯ
ಸ್ವಗತಗಳೇ ಕತೆಯ ಹಂದರವಾಗಿದೆ. ಒಂದಷ್ಟು ಸಾಮಾಜಿಕ ಆದರ್ಶಗಳನ್ನು ಇಟ್ಟುಕೊಂಡಿರುತ್ತಾನೆ ಈತ. ಸ್ಥಾವರವನ್ನು
ವಿರೋಧಿಸುತ್ತಾ ಜಂಗಮತ್ವವನ್ನು ಎತ್ತಿ ಹಿಡಿಯುವ ಈತ ತನ್ನ ತಂದೆಯ ನಿಲುವುಗಳು ಸ್ಥಾವರದ್ದು ತಾನದಕ್ಕೆ
ಬಲಿಯಾಗಬಾರದು ಎನ್ನುವ ತವಕದ ವ್ಯಕ್ತಿ. ಆ ಕಾರಣದಿಂದಲೇ ಮನೆ ತೊರೆದು ಬದುಕಿಗಾಗಿ ಹತ್ತು ಹಲವು ಕೆಲಸಗಳನ್ನು
ಮಾಡುತ್ತಾ , ಅಸ್ಪಷ್ಟ ಅರೆಬೆಂದ ಚಿಂತನೆಗಳಲ್ಲಿ ಕಳೆದು ಹೋಗಿ, ಅರಾಜಕ ಬದುಕು ಸವೆಸಿ ಮೂವತ್ತು ವರುಷಗಳ
ನಂತರ ತನ್ನ ಊರಿಗೆ ವಾಪಾಸು ಬರುವ ಕತಾ ವಸ್ತು ಇದರದು. ಇದರಲ್ಲಿ ಜಂಗಮ ಹೆಸರಿನ ಜಾತಿಯ ಮನಸುಗಳ ಅನಾವರಣವೂ
ಇದೆ. ಆದರೆ ಕೊನೆಗೆ ಜಂಗಮತ್ವದ ಹೆಸರಿನ ಸ್ಥಾವರದೊಳಗೆ ದಲಿತ ಹಿನ್ನೆಲೆಯವರನ್ನೇ ಹಿಡಿದಿಟ್ಟು ಕರ್ಮಠತೆಯ
ಒಳ ಹಾಗೂ ಹೊರ ಹೂರಣಗಳನ್ನು ಎರಕ ಹೊಯ್ದು ತಯಾರು ಮಾಡಿಕೊಳ್ಳುವ ಬೆಳವಣಿಗೆ ಕಾಣುತ್ತದೆ.
ಒಟ್ಟು ಈ ಐದೂ ಕತೆಗಳು ಕೌಟುಂಬಿಕ ಚೌಕಟ್ಟುಗಳ ಮೂಲಕವೇ ಗಂಭೀರ ಸಾಮಾಜಿಕ ವಾಸ್ತವಗಳ
ವಿಡಂಬನೆಗಳನ್ನು ಹಲವಾರು ಸೂಕ್ಮತೆಗಳ ಮೂಲಕ ಮಾಡುತ್ತವೆ. ನಗರ ಹಾಗೂ ಗ್ರಾಮೀಣ ಬದುಕುಗಳ ವೈರುಧ್ಯ
ಹಾಗೂ ಸಂಬಂಧಗಳು ಎಲ್ಲಾ ಕತೆಗಳಲ್ಲಿಯೂ ಸಹಜವಾಗಿ ಮಿಳಿತವಾಗಿವೆ.
ಗರ್ಭಗುಡಿ ಕತೆಯಲ್ಲಿ ಪುಸ್ತಕದ ಪುಟ ಸಂಖ್ಯೆ
14 ರ 18ನೇ ಸಾಲಿನಲ್ಲಿ ‘ಟೋಟಲಿ ಸೌತ್ ಆಫ್ರಿಕಾದ ಪಡಿಯಚ್ಚಿನ ಆಕಾರ’ ಎನ್ನುವಂತಹ ಉಪಮೆಯನ್ನು ಕೊಟ್ಟಿದ್ದು
ಒಂದು ಗಂಭೀರ ಲೋಪವೆನಿಸುತ್ತಿದೆ. ಕಾರಣ ಈ ಹೋಲಿಕೆಯನ್ನು ಕಪ್ಪುಜನರನ್ನು ಹೀಯಾಳಿಸುವ ಜನಾಂಗೀಯವಾದಿ
ನಿಂದನೆಯನ್ನಾಗಿ ಜಗತ್ತಿನ ಎಲ್ಲೆಡೆ ಬಳಸಲಾಗುತ್ತಿದೆ.
ಗರ್ಭಗುಡಿಯ ಕತೆಯ ಮುಕ್ತಾಯ ಬಹಳ ನಾಟಕೀಯವಾಗಿ
ಹಾಗೂ ತಕ್ಷಣದ ತಿರುವು ಪಡೆದಂತೆ ಎನಿಸುತ್ತದೆ. ಕೊನೆಯ
ಕತೆ ಪ್ರಣವ ಕತೆಯಲ್ಲಿ ಹಲವು ವಿಚಾರಗಳನ್ನು ತುರುಕಿ ಸ್ವಗತಗಳ ಮೂಲಕ ಹೇಳಿಸಿದಂತೆ ಅನಿಸಿಬಿಡುತ್ತದೆ.
ಅಕ್ಷರದೋಷಗಳು ಸ್ವಲ್ಪ ಎದ್ದು ಕಾಣುತ್ತವೆ.
ವ್ಯಕ್ತಿ ಕೇಂದ್ರಿತ ಇಲ್ಲವೇ ನಗರದ ಮೇಲ್ಮದ್ಯಮ ಇಲ್ಲವೇ ಶ್ರೀಮಂತ
ವರ್ಗದ ಮಾನಸಿಕ ತುಮುಲಗಳು ಮೇಲೆ ಕೇಂದ್ರೀಕರಿಸಿರುವ ಕತೆಗಳು ಹೆ್ಚ್ಚಾಗಿರುವ ಇಂದಿನ ಸಂಧರ್ಭದಲ್ಲಿ
ಗರ್ಭಗುಡಿ ಮತ್ತು ಇತರೆ ಕತೆಗಳು ಮಹತ್ವ ಪಡೆಯುತ್ತವೆ.
26/03/2020 -ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಮಿಂಚಂಚೆ: nandakumarnandana67@gmail.com
ಪುಸ್ತಕದ ಬಗ್ಗೆ ಆಸಕ್ತರು ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬಹುದು
ಲೇಖಕರು,
ಟಿ ಎನ್ ಷಣ್ಮುಖ
ಮೊಬೈಲ್:9902231443
ಕಾವ್ಯ
ಕಲಾ ಪ್ರಕಾಶನ
ಮೊಬೈಲ್:9964124831


ಗರ್ಭಗುಡಿ ಮತ್ತು ಇತರೆ ಕಥೆಗಳು ಕೃತಿಯ ಕುರಿತು
ReplyDeleteಈ ಕಥಾಸಂಕಲನದಲ್ಲಿರುವ ಐದೂ ಕಥೆಗಳ ಕುರಿತು ಚೆನ್ನಾಗಿ ವಿಶ್ಲೇಷಿಸಿದ್ದೀರೀ