ಕೋರೋನಾ ಬಿಕ್ಕಟ್ಟನ್ನು ಬಳಸುತ್ತಾ ಮುಂದುವರೆದ ಜನಪರ ದನಿಗಳ ದಮನಿಸುವ ಕಾರ್ಯ!
ದೇಶವಿಂದು ಹಿಂದೆಂದೂ
ಇಲ್ಲದ ರೀತಿಯ ತೀವ್ರ ಆರ್ಥಿಕಸಂಕಷ್ಟಗಳಿಗೆ ತಳ್ಳಲ್ಪಟ್ಟಿದೆ. ಜೊತೆಗೆ ಕೋವಿದ್ 19 ವೈರಸ್ ನ ಸಮಸ್ಯೆಯನ್ನು ಬಿಕ್ಕಟ್ಟನ್ನಾಗಿಸಲಾಗಿದೆ. ಅವೈಜ್ಞಾನಿಕವಾಗಿ ಹೇರಿದ ಲಾಕ್ ಡೌನ್ ನಿಂದಾಗಿ ದೇಶದ ಬಹುಸಂಖ್ಯಾತ ಜನರ ಬದುಕಿನ ಚಟುವಟಿಕೆಗಳು
ಸ್ಥಬ್ಧವಾಗಿವೆ. ವಲಸೆಕಾರ್ಮಿಕರು ನೂರಾರು ಕಿಲೋಮೀಟರು ನಡೆದು ದಣಿದು ಹೇಗೇಗೋ ಕಷ್ಟಪಟ್ಟು ಹಲವರು ಊರು ಸೇರಿದರೆ ಹತ್ತಾರು
ಜನರು ಸಾವಿಗೀಡಾಗಿದ್ದಾರೆ. ನೂರಾರು ಜನರು ಅಸ್ವಸ್ಥರಾಗಿ ನರಳುತ್ತಿದ್ದಾರೆ. ನಿರುದ್ಯೋಗ,
ಆರ್ಥಿಕ ಹಾಗೂ ಆರೋಗ್ಯಗಳ ಹೊಡೆತಗಳಿಂದ ಜನರು ತತ್ತರಿಸತೊಡಗಿದ್ದಾರೆ. ಕೊರೊನಾ ಬಿಕ್ಕಟ್ಟನ್ನು
ಬಳಸುತ್ತಾ ಕೋಮುವಾದಿಕರಣಗೊಳಿಸುವ ಕೆಲಸ ಬಿರುಸಿನಿಂದಲೇ ಸಾಗುತ್ತಿದೆ.
ಇವೆಲ್ಲದರ ಮಧ್ಯೆಯೂ
ಸರಕಾರ ಜನರ ಹಾಗೂ ದೇಶದ ಪರ ಹೋರಾಡುತ್ತಾ ಬಂದವರನ್ನು ದಮನಿಸುವ, ಬಂಧಿಸುವ ಕಾರ್ಯಗಳನ್ನು
ಎಗ್ಗಿಲ್ಲದಂತೆ ನಡೆಸುತ್ತಿದೆ. ದೆಹಲಿಯ ಪೌರತ್ವ ವಿರೋಧಿ ಹೋರಾಟಗಾರರನ್ನು ಲಾಕ್ ಡೌನ್ ಸಮಯದಲ್ಲೇ
ಹುಡುಕಿ ಹುಡುಕಿ ಬಂಧಿಸಲಾಗುತ್ತಿದೆ. ಸಂಘ ಪರಿವಾರ ಪ್ರಾಯೋಜಿತ 2018ರ ಭೀಮಾ ಕೋರೆಗಾಂವ್ ನ
ಹಿಂಸಾಚಾರದ ನೆಪ ಹಿಡಿದು ಯುಎಪಿಎ ಯಂತಹ ಕರಾಳ ಕಾನೂನುಗಳನ್ನು ಹೇರಿ ಬಂದಿಸಿದವರಿಗೆ ನಿರಂತರವಾಗಿ
ಜಾಮೀನು ನಿರಾಕರಿಸುತ್ತಾ ಬರಲಾಗುತ್ತಿದೆ. ಇದುವರೆಗೂ ಬಂಧಿಸದಂತೆ ನ್ಯಾಯಾಂಗದ ರಕ್ಷಣೆಯಲ್ಲಿದ್ದ
ಆನಂದ್ ತೇಲ್ತುಂಬ್ಡೆ ಹಾಗೂ ಗೌತಮ್ ನವಲಾಖರನ್ನು ಈಗ ಬಂಧನಕ್ಕೊಳಪಡಿಸಲಾಗಿದೆ.
ಸರಕಾರದ ಈ ನಡೆಗಳನ್ನು
ಖಂಡಿಸದೇ ಸಮರ್ಥಿಸುವ ರೀತಿಯಲ್ಲಿ ಹಲವು ಸಂಘಟನೆಗಳು ವ್ಯಕ್ತಿಗಳು, ಬುದ್ಧಿಜೀವಿಗಳು
ವರ್ತಿಸುತ್ತಿದ್ದಾರೆ. ಅದಕ್ಕೆ ವೈಚಾರಿಕತೆಯ ಲೇಪ ಹಚ್ಚುತ್ತಿದ್ದಾರೆ. ಹಲವರು ಸಂಧರ್ಭಕ್ಕೆ
ತಕ್ಕುದಲ್ಲದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇಂದಿನ ಸಂಧರ್ಭದಲ್ಲಿ ಇದು ಜನರಿಗೆ ಹಾಗೂ
ದೇಶಕ್ಕೆ ಬಹಳ ಅಪಾಯಕಾರಿಯಾದುದು.
ವೈಚಾರಿಕ
ಬಿನ್ನಾಭಿಪ್ರಾಯ ಚರ್ಚೆ ಮಾಡಬಹುದಾದ ವಿಚಾರ ಮಾತ್ರವಾಗಬೇಕು. ನಂತರವೂ ವೈಚಾರಿಕ
ಭಿನ್ನಾಭಿಪ್ರಾಯಗಳು ಮುಂದುವರೆದರೂ ಕೂಡ ಪ್ರಜಾತಾಂತ್ರಿಕ ಸಂಬಂಧಗಳನ್ನು ಅದು ಕೆಡಿಸುವಂತೆ
ಮಾಡಬಾರದು. ನಮ್ಮ ಅಭಿಪ್ರಾಯಗಳನ್ನು
ಬೆಂಬಲಿಸುವುದಿಲ್ಲ ಎನ್ನುವ ಕಾರಣಕ್ಕೆ, ಇಲ್ಲವೇ ನಾವು ಗೌರವಿಸುವ ವ್ಯಕ್ತಿಯನ್ನು
ವಿಮರ್ಶಿಸುತ್ತಾರೆ ಎನ್ನುವ ಕಾರಣಕ್ಕೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗಬಾರದು. ಅಕ್ರಮಕ್ಕೊಳಗಾದ
ವ್ಯಕ್ತಿಯ ಬಗ್ಗೆ ಸಂಧರ್ಭಕ್ಕೆ ತಕ್ಕುದಲ್ಲದ ಅಭಿಪ್ರಾಯಗಳನ್ನು ತೇಲಿ ಬಿಡುವವರು, ನಾವು
ಸಮರ್ಥಿಸುವ ಚಿಂತನೆಗಳನ್ನು ಸಮರ್ಥಿಸುವುದಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಹಾಗಾಗಿದ್ದು
ಒಳ್ಳೇದೇ ಆಯಿತು ಎಂದೆಲ್ಲಾ ಬಹಿರಂಗವಾಗಿ ಇಲ್ಲವೇ ಗುಪ್ತವಾಗಿ ವಾದಿಸುವವರು, ಅಂತಿಮವಾಗಿ ಅನ್ಯಾಯ
ಅಕ್ರಮಗಳ ಬೆಂಬಲಿಗರಾಗಿಬಿಡುತ್ತಾರೆ.
ಭಿನ್ನ
ಭಿನ್ನ ಅಭಿಪ್ರಾಯಗಳೊಂದಿಗೂ ಪರಸ್ಪರ ಗೌರವಿಸಬೇಕಾದುದು ಪ್ರಜಾತಂತ್ರವನ್ನು ಒಪ್ಪುವವರ ಕರ್ತವ್ಯ.
ಭಿನ್ನ ಆಲೋಚನೆಯ ವ್ಯಕ್ತಿ ಇಲ್ಲವೇ ಸಮೂಹಕ್ಕೆ ಅನ್ಯಾಯಗಳಾದಾಗ ಪರಸ್ಪರ ಪ್ರಜಾತಾಂತ್ರಿಕವಾಗಿ
ಬೆಂಬಲಿಸುವುದನ್ನು ಅನ್ಯಾಯಗಳನ್ನು ಪ್ರಶ್ನಿಸುವುದನ್ನು ರೂಢಿಸಿಕೊಳ್ಳದವರು ಸಮಾಜಮುಖಿಯಾಗಿರಲು
ಸಾಧ್ಯವಿಲ್ಲ.
ಆಗುತ್ತಿರುವ
ಅನ್ಯಾಯ ಅಕ್ರಮಗಳನ್ನು ಸಮರ್ಥಿಸುವ ಇಲ್ಲವೇ ಮೌನ ವಹಿಸುವ ಮೂಲಕ ಸಮರ್ಥಿಸುವ ರೀತಿಯಲ್ಲಿ
ವರ್ತಿಸುವವರು ಯಾವುದೇ ವಾದಿಗಳೆಂದು ತಮ್ಮನ್ನು ಕರೆದುಕೊಂಡರೂ ಅವರುಗಳು ಪ್ರಜಾತಂತ್ರವಿರೋಧಿಗಳೇ
ಆಗುತ್ತಾರೆ. ಅಂತಿಮವಾಗಿ ಆಳುವವರ ಪರ ನಿಲ್ಲುವವರಾಗುತ್ತಾರೆ.
ಅಂಬೇಡ್ಕರ್
ವಾದಿಗಳೆಂದು ಹೇಳಿಕೊಳ್ಳುವವರು ಅಂಬೇಡ್ಕರ್ ರ ವಿಚಾರಗಳನ್ನಾಗಲೀ ಹೋರಾಟಗಳನ್ನಾಗಲೀ
ಎತ್ತಿಹಿಡಿಯುವುದಾಗಲೀ ಪಾಲಿಸುವುದಾಗಲಿ ಮಾಡದೇ ಇರುವವರು ಬಹಳ ಜನರಿದ್ದಾರೆ. ತಮ್ಮ
ಸುತ್ತಮುತ್ತಲಿನ ದಲಿತ ವಿರೋಧಿ ಕೃತ್ಯಗಳನ್ನೂ ಕೂಡ ಕಂಡೂ ಕಾಣದಂತೆ ಇರುವವರು ಬಹಳ ಜನರಿದ್ದಾರೆ.
ಹಲವರು ಸಂಘಪರಿವಾರದ ಹಿಂಬಾಲಕರು ಪರಿಚಾರಕರೂ ಆಗಿದ್ದಾರೆ.
ಆನಂದ್
ತೇಲ್ತುಂಬ್ಡೆ, ಗೌತಮ್ ನವಲಾಖ ಈ ದೇಶದ ಶೋಷಿತ ಜನಸಮುದಾಯಗಳ ಪರವಾಗಿ ಪ್ರಾಮಾಣಿಕವಾಗಿ
ಕಾರ್ಯನಿರ್ವಹಿಸುತ್ತಾ ಬಂದವರು. ದಲಿತದಮನಿತರ ಪರ ನಿಲ್ಲುವುದನ್ನು ಚುನಾವಣಾ ಗಿಮಿಕ್ ಆಗಿ,
ಇಲ್ಲವೇ ಅಧಿಕಾರದ ಅಡ್ಡೆಗಳಲ್ಲಿ ಪೈರವಿ ಕಾರ್ಯಗಳಿಗಾಗಿ ಬಳಸಿಕೊಂಡವರಲ್ಲ. ದಲಿತ ದಮನಿತಪರ
ಕಾರ್ಯಗಳನ್ನು ತಮ್ಮ ತಮ್ಮ ನೌಕರಿ ಭಡ್ತಿಗಳಿಗೆ ಇನ್ನಿತರ ವೈಯಕ್ತಿಕ ಹಿತಾಸಕ್ತಿಗಳಿಗಾಗಿ
ಉಪಯೋಗಿಸಿಕೊಂಡವರಲ್ಲ. ಅಂಬೇಡ್ಕರ್ ಬಜನೆ ಮಾಡುತ್ತಾ ಅಂಬೇಡ್ಕರ್ ವಿಚಾರ ಹಾಗೂ ಹೋರಾಟಗಳನ್ನು
ಸಾಯಿಸಿದವರಲ್ಲ. ದಲಿತ ದಮನಿತ ಶತೃಗಳಂತೂ ಮೊದಲೇ ಅಲ್ಲ.
ಅವರು
ಅಂಬೇಡ್ಕರ್ ಚಿಂತನೆ ಹಾಗೂ ಹೋರಾಟಗಳನ್ನು ಎತ್ತಿಹಿಡಿಯುತ್ತಾ ಪ್ರಜಾತಾಂತ್ರಿಕವಾಗಿ ಚರ್ಚೆಗಳನ್ನು
ನಡೆಸುತ್ತಾ ಶೋಷಿತರ ಸಾಮಾಜಿಕ ಹಾಗೂ ಆರ್ಥಿಕ ಒಳಿತಿಗಾಗಿ ಹೋರಾಡುತ್ತಾ ಬಂದವರು. ಇದು ಈ ಹಿಂದೆ
ಭೀಮಾ ಕೋರೆಗಾಂವ್ ಪ್ರಕರಣ ಹೇರಿ ಬಂಧಿಸಿ ಸೆರೆಯಲ್ಲಿಟ್ಟಿರುವ ಸುಧಾ ಬಾರದ್ವಾಜ್, ಶೋಮಾ ಸೇನ್,
ವೆರ್ನಮ್ ಗೊನ್ಸಾಲ್ವಿಸ್, ವರವರರಾವ್, ಸುರೇಂದ್ರ ಗಾಡ್ಲಿಂಗ್, ಅರುಣ್ ಪೆರೇರಾ, ರೋನಾ ವಿಲ್ಸನ್,
ಮಹೇಶ್ ರೌತ್ ಮೊದಲಾದವರಿಗೂ ಅನ್ವಯವಾಗುವ ವಿಚಾರ.
ಇದೇ ಪ್ರಕರಣದಡಿಯಲ್ಲಿಯೇ ಅಂಬೇಡ್ಕರ್ ಕುಟುಂಬದ ಆನಂದ್ ತೇಲ್ತುಂಬ್ಡೆ ಹಾಗೂ ಪತ್ರಕರ್ತ ಮತ್ತು ಮಾನವ ಹಕ್ಕು ಹೋರಾಟಗಾರ ಗೌತಮ್ ನವಲಾಖರನ್ನು ಬಂಧಿಸಿ ರಾಷ್ಟ್ರೀಯ
ತನಿಖಾ ದಳ (ಎನ್ ಐ ಎ) ವಶಕ್ಕೆ ನೀಡಲಾಗಿದೆ. ಜೊತೆಗೆ ದೇಶದ ಪ್ರಧಾನಿಯನ್ನು ಕೊಲ್ಲುವ ಸಂಚು
ನಡೆಸಿದ್ದಾರೆಂಬ ಪ್ರಕರಣವನ್ನೂ ಸೇರಿಸಲಾಗಿದೆ. ಇವೆಲ್ಲಾ ಮೇಲ್ನೋಟಕ್ಕೇ ಸುಳ್ಳಾದ ಆರೋಪಗಳು
ಎನ್ನುವುದು ಯಾರಿಗಾದರೂ ಗೊತ್ತಾಗುವಂತಹುದು.
ಕರ್ನಾಟಕದ
ಬುದ್ಧಿಜೀವಿ ವಲಯದ ಕೆಲವರಷ್ಟೇ ಇದನ್ನು ಖಂಡಿಸಿದ್ದು ಬಿಟ್ಟರೆ ಉಳಿದವರು ಜಾಣತನದ ನಡೆಗಳನ್ನು ನಡೆಸುತ್ತಿದ್ದಾರೆ.
ಕೆಲವರು ಸಂಧರ್ಭಕ್ಕೆ ಸಂಬಂಧ ಪಡದ ಬೇರೆ ಏನೇನೋ ಹೇಳಹೊರಟಿದ್ದಾರೆ. ಹಲವು ಜನಪರ ವಲಯದ ಸಂಘಟನೆಗಳು
ಜಾಣ ಮೌನ ವಹಿಸಿವೆ.
ಹಲವು
ದಲಿತ ಹಿನ್ನೆಲೆಯ ಬುದ್ಧಿಜೀವಿಗಳು, ಹೋರಾಟಗಾರರು, ಸಂಘಟನೆಗಳು ಈ ಬಗ್ಗೆ ಜಾಣ ಮೌನಕ್ಕೆ
ಶರಣಾಗಿದ್ದಾರೆ. ಕೆಲವರು ತೇಲ್ತುಂಬ್ಡೆ ಬಂಧನವನ್ನು ಖಂಡಿಸುವ ಕನಿಷ್ಠ ಪ್ರಜಾತಾಂತ್ರಿಕ ಪ್ರಜ್ಞೆ
ತೋರಿಸದೇ ಅವರನ್ನು ಅಂಬೇಡ್ಕರ್ ವಿರೋಧಿಯನ್ನಾಗಿ ಚಿತ್ರಿಸುವಲ್ಲಿ ಅನಗತ್ಯ ಉತ್ಸಾಹ ತೋರಿಸುತ್ತಾ
ಆಳುವವರ ಜಾಡಿನಲ್ಲಿ ತಮ್ಮ ಹೆಜ್ಜೆಗಳನ್ನು ಊರುತ್ತಿದ್ದಾರೆ.
ಪ್ರಭುತ್ವದ
ಅನ್ಯಾಯ ಅಕ್ರಮಗಳನ್ನು ಪ್ರಶ್ನಿಸದೇ ಹೋಗುವುದು ಪ್ರಭುತ್ವದ ಫ್ಯಾಸಿಸ್ಟ್ ನೀತಿಗಳನ್ನು
ಬಲಪಡಿಸಿದಂತಾಗುತ್ತದೆ. ಅದು ಒಟ್ಟಾರೆ ದಲಿತ ದಮನಿತರಿಗೆ ಹಾಗೇನೆ ಪ್ರಜಾತಂತ್ರಕ್ಕೇ
ಮುಳುವಾಗುತ್ತದೆ ಎನ್ನುವುದನ್ನು ಗ್ರಹಿಸಬೇಕು. ಇಂದಿನ ಸಂಧರ್ಭದ ಸೂಕ್ಷ್ಮತೆಯನ್ನು ಗಮನಿಸದೇ
ಜಾಣಕುರುಡು ತೋರುವ, ಸಂಧರ್ಭದ ಮುಖ್ಯ ವಿಚಾರ ಬಿಟ್ಟು ಅದರ ಎಳೆ ಹಿಡಿದು ಬೇರೇನೋ ಗಹನವಾದುದನ್ನು
ಹೇಳುತ್ತಿದ್ದೇವೆಂಬ ಬರಹಗಳನ್ನು ಹಾಕುವುದರಿಂದ ಯಾರಿಗೆ ಉಪಯೋಗವಾಗುತ್ತದೆ ಎನ್ನುವುದನ್ನು
ಗ್ರಹಿಸುವುದೊಳಿತು.
ಈ
ರೀತಿಯ ನಡೆಗಳು ಎಲ್ಲರಿಗೂ ಅಪಾಯ ತಂದಿಡುತ್ತದೆ. ಈಗಾಗಲೇ ಇಂತಹ ವರ್ತನೆಗಳಿಂದಾಗಿ ಅಪಾರ
ಹಾನಿಗಳಾಗಿವೆ ಎನ್ನುವುದನ್ನು ಮರೆಯದಿರುವುದು ಅಗತ್ಯ.
೧೮/೦೪/೨೦೨೦. - ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು
Comments
Post a Comment