Skip to main content

ಗಣರಾಜ್ಯೋತ್ಸವದ ಆಚೆಗೂ # republic day# india


ಗಣರಾಜ್ಯೋತ್ಸವದ ಆಚೆಗೂ… ಈಚೆಗೂ….

ಇಂಡಿಯಾ ದೇಶ ತನ್ನ 71ನೆಯ ಗಣರಾಜ್ಯೋತ್ಸವವನ್ನು ಹಾದು ಹೋಗುತ್ತಿದೆ. 1950 ಜನವರಿ 26ರಂದು  ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲಾಗಿದೆ ಎಂದು ಅಧೀಕೃತವಾಗಿ ಘೋಷಿಸಲಾಯಿತು. ಇದೊಂದು  ಗಣರಾಜ್ಯವೆಂದು ಕರೆಯಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ  ಪ್ರಜೆಗಳ ಸಾರ್ವಭೌಮತ್ವವೇ ನೀತಿಯೆಂದು ಹೇಳಲಾಯಿತು. ಬ್ರಿಟೀಷರ ನೇರ ಆಳ್ವಿಕೆ ಕೊನೆಯಾದ ಆಗಸ್ಟ್ 15  1947 ರಿಂದ 1950ರ ಜನವರಿ 26ರವರೆಗೆ ಯೂನಿಯನ್ ಆಫ್ ಇಂಡಿಯಾ ಎಂದೇ ಕರೆಯಲಾಗಿತ್ತು.

ಅವಿರತವಾಗಿ ನಡೆಸಿದ ಜನಸಾಮಾನ್ಯರ ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಬ್ರಿಟಿಷರ ನೇರ ಆಡಳಿತದಿಂದ ಹೊರಬಂದ ನಂತರದ  ಈ ಎಪ್ಪತ್ತಮೂರು ವರುಷಗಳಲ್ಲೂ ಇಂಡಿಯಾದ ಜನಸಾಮಾನ್ಯರು ನಿರಂತರವಾಗಿ ಹೋರಾಟಗಳಲ್ಲಿರಬೇಕಾದ ಅನಿವಾರ್ಯ ಸ್ಥಿತಿಯನ್ನು ಆಳುವ ಶಕ್ತಿಗಳು ಒಡ್ಡುತ್ತಲೇ ಬಂದಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರಬೇಕಾದರೆ ಜನತೆಯ ಸಕ್ರಿಯ ರಾಜಕೀಯ ಪಾಲ್ಗೊಳ್ಳುವಿಕೆ ಅತ್ಯಗತ್ಯವೆನ್ನುವುದು ನಿಜ. ಆದರೆ ನಮ್ಮ ದೇಶದಲ್ಲಿ ಯಾವ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಬ್ರಿಟೀಷರ ವಿರುಧ್ಧ ಹೋರಾಡುತ್ತಾ ಬರಲಾಗಿತ್ತೋ ಮೂಲಭೂತವಾಗಿ ಅವೇ ಕಾರಣಕ್ಕಾಗೇ ಈಗಲೂ ಹೋರಾಡಬೇಕಾದ ಸ್ಥಿತಿಯೇ ಮುಂದುವರೆದಿದೆ.

ಅದು ಭಾರಿ ಕಾರ್ಪೋರೇಟುಗಳ ಹಿಡಿತ, ಭಾರಿ ಆಸ್ತಿವಂತ ವರ್ಗಗಳು ಹಿಡಿತ, ಭಾಷಾ ಹಕ್ಕುಗಳು, ರಾಜ್ಯಗಳ ಹಕ್ಕುಗಳು, ದೇಶದ ಸಾರ್ವಭೌಮತ್ವ, ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು, ಪ್ರಜಾತಾಂತ್ರಿಕ ಹಕ್ಕುಗಳು ಹೀಗೆ ಸಾಗಿ ಇದೀಗ ಜನಸಾಮಾನ್ಯರ ಪೌರತ್ವದ ವಿಚಾರದವರೆಗೂ ಬಂದು ನಿಂತಿದೆ. ಅಂದರೆ ಈ ದೇಶದಲ್ಲಿ ತಲತಲಾಂತರದಿಂದ ಬದುಕುತ್ತಾ ದೇಶದ ಸಂಪತ್ತಿನ ಉತ್ಪಾದನೆಯಲ್ಲಿ ಪ್ರಧಾನ ಕೊಡುಗೆ ನೀಡುತ್ತಾ ಬಂದಿರುವ ಬಹುಸಂಖ‍್ಯಾತ ಜನಸಾಮಾನ್ಯರನ್ನೇ ಆಳುವ ವ್ಯವಸ್ಥೆ ನಿಮ್ಮ ಪೌರತ್ವ ಸಾಬೀತುಪಡಿಸಿದ ನಂತರ ಸೌಲಭ್ಯ ಸವಲತ್ತುಗಳ ಕೊರತೆಗಳ ಬಗ್ಗೆ ಮಾತನಾಡಿ ಎಂದು ನೇರವಾಗಿಯೇ ಹೇಳಲಾರಂಭಿಸಿದೆ. ಹಾಗೇ ನೋಡಿದರೆ ಬ್ರಿಟೀಷ್ ಆಡಳಿತಕ್ಕಿಂತಲೂ ಭಾರಿ ಭೀಕರ ಸ್ಥಿತಿಯನ್ನು ಇಂಡಿಯಾದ ಜನರಿಗೆ ತಂದೊಡ್ಡಲಾಗಿದೆ.

ಬ್ರಿಟೀಷ್ ವಿರೋಧಿ ಸಂಗ್ರಾಮದ ಮೂಲಭೂತ ವಿಚಾರ ಸ್ವಾತಂತ್ರ್ಯ  . ಸ್ವಾತಂತ್ರ್ಯವೆಂದಾಗ ಅದು ಸಮಾನತೆಯ ನೆಲೆಗಟ್ಟಿನಲ್ಲೇ ಎತ್ತಿರುವ ವಿಚಾರವಾಗಿತ್ತು. ಅಂದರೆ ಆರ್ಥಿಕವಾಗಿ ಸಾಮಾಜಿಕವಾಗಿ ಶೋಷಣೆಯಿಲ್ಲದ ವ್ಯವಸ್ಥೆಗಾಗಿನ ಸಂಗ್ರಾಮವಾಗಿತ್ತು ಅದು. ಅದೇ  ಕಾರಣಕ್ಕಾಗೇ ಆಳುವವರು ಎಷ್ಟೇ ಅವಗಣನೆ ಮಾಡಿದರೂ, ತಿರುಚಿ ಅಪಪ್ರಚಾರ ಮಾಡಿದರೂ ಭಗತ್ ಸಿಂಗ್ ಮತ್ತವರ ಸಂಗಾತಿಗಳಂತಹವರು ಜನಸಾಮಾನ್ಯರ ಹೃದಯಗಳಲ್ಲಿ ಈಗಲೂ ನೆಲೆ ನಿಂತಿರುವುದು. ಯಾಕೆಂದರೆ ಅವರು ಇಂಡಿಯಾ ದೇಶದ ಬಹುಸಂಖ‍್ಯಾತ ಜನಸಾಮಾನ್ಯರಾದ ದಲಿತ ದಮನಿತ, ಬಡ ಇನ್ನಿತರ ಜನಸಮುದಾಯಗಳನ್ನು ಪ್ರತಿನಿಧಿಸಿದ್ದರು. ಆ ಜನರ ಭಾವನೆಗಳನ್ನು ಹಾಗೂ ರಾಜಕೀಯ ಆಶೋತ್ತರಗಳಾದ ಎಲ್ಲಾ ರೀತಿಯ ಶೋಷಣಾಮುಕ್ತ ಸಾಮಾಜಿಕ ವ್ಯವಸ್ಥೆಯೊಂದರ ಸಾಕಾರಕ್ಕಾಗಿ ಅವರು ಕಾರ್ಯ ನಿರ್ವಹಿಸಿ ತಮ್ಮ ಬೆವರು, ರಕ್ತ, ಪ್ರಾಣಗಳನ್ನೇ  ಧಾರೆಯೆರೆದಿದ್ದರು.

ಅವರದು ನಿಜವಾದ ಸ್ವಾತಂತ್ರ್ಯದ ವಿಚಾರಧಾರೆಯಾಗಿತ್ತು. ಭಾರಿ ಆಸ್ತಿವಂತರು ಮತ್ತೂ ಆಸ್ತಿವಂತರಾಗುತ್ತಾ ಹೋಗಿ ದೇಶದ ಬಹುಪಾಲು ಆಸ್ತಿ ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ಮುಕ್ತವಾಗಿರುವ ವ್ಯವಸ್ಥೆಯೊಂದನ್ನು ಅವರು ಬಯಸಿರಲಿಲ್ಲ. ಆರ್ಥಿಕ ಸಮಾನತೆಯ ನೆಲೆಗಟ್ಟಿನ ಮೇಲೆಯೇ ಸಾಮಾಜಿಕ ಸಮಾನತೆ ನೆಲೆಗೊಳ್ಳಲು ಸಾಧ್ಯವೆಂದು, ಅಂತಹ ಸಮಾನತೆಯ ನೆಲೆಗಟ್ಟಿನ ಮೇಲೆ ಮಾತ್ರ ನಿಜವಾದ ಪ್ರಜಾಪ್ರಭುತ್ವ ನೆಲೆಗೊಂಡು ಅರಳುತ್ತಾ ಬೆಳೆಯಲು ಸಾಧ್ಯವೆಂಬ ಗ್ರಹಿಕೆ ಅವರಿಗೆ ಸ್ಪಷ್ಟವಾಗಿತ್ತು. ಆದರೆ 1947ರಲ್ಲಿ ಬ್ರಿಟೀಷರಿಂದ ಅಧಿಕಾರ ಹಸ್ತಾಂತರವನ್ನು ತಮ್ಮ ಕೈಗೆ  ಮಾಡಿಕೊಂಡ ಶಕ್ತಿಗಳು ರಾಜಪ್ರಭುತ್ವ ಮತ್ತಿತರ ಊಳಿಗಮಾನ್ಯ ವರ್ಗ ಹಾಗೂ ಭಾರಿ ಆಸ್ತಿವಂತ ವರ್ಗ ಮತ್ತವರ ಪ್ರತಿನಿಧಿಗಳಾಗಿದ್ದರು. ಅವರು ಮೇಲ್ಜಾತಿ ಮೇಲ್ವರ್ಗಗಳು ಇಲ್ಲವೇ ಅವರ ಪ್ರತಿನಿಧಿಗಳಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಇವರುಗಳದೇ ರಾಜಕೀಯ ಪಕ್ಷವಾಗಿತ್ತು.  ಇಂಡಿಯಾದ ಮೊದಲ ಸಂಸತ್ ಆಗಿ ಕಾರ್ಯ ನಿರ್ವಹಿಸಿದ್ದ ಸಂವಿಧಾನ ರಚನಾ ಸಭೆಯ ಪ್ರಕ್ರಿಯೆಯಲ್ಲಿಯೂ ಅವರದೇ ಪ್ರಾಬಲ್ಯವಾಗಿತ್ತು. ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಭೀಮರಾವ್ ಅಂಬೇಡ್ಕರ್ ರನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಸಂವಿಧಾನ ಕರಡು ರಚನೆಯಲ್ಲಿ ಅಂಬೇಡ್ಕರ್ ರು ಪ್ರಧಾನ ಪಾತ್ರ ನಿರ್ವಹಿಸಿದ್ದರೂ ಸಂವಿಧಾನವನ್ನು ಅಂಗೀಕರಿಸುವ ವಿಚಾರದಲ್ಲಿ ಅಂತಿಮ ತೀರ್ಮಾನದ ಮೇಲುಗೈ ಇದೇ ಮೇಲ್ಜಾತಿ ಮೇಲ್ವರ್ಗಗಳದಾಗಿತ್ತು.

1947ರ ಜೂನ್ ಸಮಯದಲ್ಲಿ ಪೂರ್ಣವಾಗಿ ಅಸ್ತಿತ್ವಕ್ಕೆ ಬಂದ ಸಂವಿಧಾನ ರಚನಾ ಸಭೆಯ ಒಟ್ಟು 296 ಸದಸ್ಯರುಗಳಲ್ಲಿ  ಇವರುಗಳದೇ ಪ್ರಬಲ್ಯವಾಗಿತ್ತು. ಅದರಲ್ಲಿ 93 ಊಳಿಗಮಾನ್ಯ ರಾಜಸಂಸ್ಥಾನಗಳ ಪ್ರತಿನಿಧಿಗಳಿದ್ದರು. ಉಳಿದವರುಗಳಲ್ಲಿ ವಿವಿಧ ಪ್ರಾಂತ್ಯಗಳ ಪ್ರತಿನಿಧಿಗಳಿದ್ದರು. ಅದರಲ್ಲೂ  ಶೇ 63ರಷ್ಟು ಪ್ರತಿನಿಧಿತ್ವ ಇದ್ದ ಕಾಂಗ್ರೆಸ್ ನ ಮೇಲುಗೈ ಇತ್ತು  ಇದರಲ್ಲಿ ಪಾಕಿಸ್ತಾನದೊಂದಿಗೆ ಸೇರಿಕೊಳ್ಳದ ಮುಸ್ಲಿಂ ಲೀಗ್ ನ ಪ್ರತಿನಿಧಿಗಳಿದ್ದರೂ ಅವರೂ ಕೂಡ ಆಸ್ತಿವಂತ ವರ್ಗದ ಹಿನ್ನೆಲೆಯವರೇ ಆಗಿದ್ದರು. ಇನ್ನು ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿತ್ವ ಇದ್ದರೂ ಅದು ನಿರ್ಣಾಯಕ ಪಾತ್ರ ವಹಿಸುವಂತಹ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೇ ಅದು ಕಾಂಗ್ರೆಸ್ ನ ಒಂದು ಅಂಗದಂತೆಯೇ ಆಗ ಕಾರ್ಯ ನಿರ್ವಹಿಸುತ್ತಿತ್ತು.

ನಮ್ಮ ದೇಶದ ಸಂವಿಧಾನ ರಚನಾ ಸಭೆಯ ಸದಸ್ಯರುಗಳ ಸಂಯೋಜನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರೆ ನಮ್ಮ ದೇಶ ಇಂದು ತಲುಪಿರುವ ಮೂಲಭೂತ ಕಾರಣಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮನ್ನಾಳುವವರು ಬಿಂಬಿಸುತ್ತಾ ಬಂದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಾರ್ವಭೌಮತ್ವಗಳ ನಿಜ ತಿರುಳುಗಳನ್ನು ಗ್ರಹಿಸಲಾಗುವುದಿಲ್ಲ.

ಬೀಮರಾವ್ ಅಂಬೇಡ್ಕರರಿಗೆ ದಲಿತ ದಮನಿತ ಜನಸಮೂಹದ ಹಿತಾಸಕ್ತಿಗಳನ್ನು ಕಾಪಾಡುವ, ಜಾತಿ ಶೋಷಣೆಯನ್ನು ನಿವಾರಿಸುವ ಅದಮ್ಯ ಬದ್ದತೆಯಿದ್ದರೂ ಅಂಗೀಕೃತಗೊಂಡ ಸಂವಿಧಾನದ ಮೂಲಕ ಅದನ್ನು ಪೂರ್ಣವಾಗಿ ಸಾಧಿಸಬಹುದು ಎಂದು ಅವರೂ ಕೂಡ ಭಾವಿಸಿರಲಿಲ್ಲ. ಆದರೆ ಇಂಡಿಯಾದ ಆಳುವ ಶಕ್ತಿಗಳು ಅಂಬೇಡ್ಕರ್ ರನ್ನು ಇಂಡಿಯಾದ ಸಂವಿಧಾನಕ್ಕೆ ಪರ್ಯಾಯವಾಗಿ ಮುಂದಿಡುತ್ತಾ, ಸಮೀಕರಿಸುತ್ತಾ, ಭಾವನಾತ್ಮಕವಾಗಿ ದಲಿತ ದಮನಿತರನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾ ಬಂದರು. ಅದು ಯಾವ ಮಟ್ಟಕ್ಕೆ ಎಂದರೆ ಸಂವಿಧಾನ ಎಂದರೆ ಅಂಬೇಡ್ಕರ್ ಎನ್ನುವ ಮಟ್ಟಕ್ಕೆ ಬೆಳೆಸಿದರು.

ಅದೇ ರೀತಿ ದಲಿತ ಹಿನ್ನಲೆಯ ಹಲವು ರಾಜಕೀಯ ಪುಡಾರಿಗಳು ಹಾಗೂ ಹಲವು ನಾಯಕರುಗಳು ಹಾಗೂ ಇನ್ನಿತರ ಪಟ್ಟಭಧ್ರ ಹಿತಾಸಕ್ತಿಗಳು ಆಳುವ ಶಕ್ತಿಗಳ ಇಂತಹ ಸಂಚುಗಳ ಭಾಗವಾಗಿ ಅಂಬೇಡ್ಕರ್ ರನ್ನು ಸಂವಿಧಾನಕ್ಕೆ ಪರ್ಯಾಯವಾಗಿ ಬಿಂಬಿಸುವುದರಲ್ಲಿ ತಮ್ಮ ಕೈಗಳನ್ನೂ ಜೋಡಿಸುತ್ತಾ ಬಂದರು. ಅವೆಲ್ಲದರ ಒಟ್ಟು ಪರಿಣಾಮವೇ ನಾವಿಂದು ಅನುಭವಿಸುತ್ತಿರುವುದು. ಈಗ ಆಳುವ ಶಕ್ತಿಗಳಿಗೆ ಸಂವಿಧಾನ ಬೇಡವಾಗಿದೆ. ಅದರಿಂದ ಎದುರಾಗುವ ಕೆಲವು ತಾಂತ್ರಿಕ ತೊಡಕುಗಳು ಅವರಿಗೆ ತಡೆಗಳನ್ನು ಒಡ್ಡುವುದರಿಂದಾಗಿ ಸಂವಿಧಾನವನ್ನು ಒಂದು ಮಟ್ಟಕ್ಕೂ ಇಟ್ಟುಕೊಳ್ಳುವುದು ಬೇಡವೆಂಬ ದಾವಂತದಲ್ಲಿದ್ದಾರೆ.

ದಲಿತ ದಮನಿತ ವರ್ಗಗಳ ಸಂಘಟಿತ ಶಕ್ತಿ ಆಳುವವರನ್ನು ನಾಮಮಾತ್ರಕ್ಕೂ ಪ್ರಶ್ನಿಸಲಾರದಂತಹ ಸ್ಥಿತಿಗೆ ಈ ಮೊದಲೇ ತರಲಾಗಿತ್ತು. ಈಗಲೂ ಕೂಡ ದಲಿತ ದಮನಿತರು ಸಂಘಟಿತರಾಗಿ ಪರಿಸ್ಥಿತಿಗೆ ತಕ್ಕಂತೆ ಬೀದಿಗಿಳಿದು ತಮ್ಮ ಪ್ರತಿರೋಧವನ್ನು ಒಡ್ಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಮಟ್ಟಕ್ಕೆ ಹಾನಿಗಳನ್ನು ಆಳುವ ಶಕ್ತಿಗಳು ದಲಿತ ದಮನಿತರ ಸಂಘಟಿತ ಶಕ್ತಿಗೆ ಮಾಡಿದೆ ಎನ್ನುವುದನ್ನು ಗಮನಿಸಬೇಕು. ಆದರೆ  ಗುಜರಾತಿನ ಉನ್ನಾವೋ ವಿಚಾರ, ರೋಹಿತ್ ವೇಮುಲ, ಭೀಮ ಕೋರೆಗಾಂವ್, ಉತ್ತರ ಪ್ರದೇಶದ ದಲಿತರ ಮೇಲಿನ ದಮನಕಾಂಡ ಮೊದಲಾದ ವಿಚಾರದಲ್ಲಿ ದಲಿತ ಪ್ರತಿರೋಧಗಳು ಚಿಗುರಿ ಬೆಳೆಯಲಾರಂಭಿಸಿವೆ. ಇದು ಈಗಿನ ಭರವಸೆದಾಯಕ ವಿದ್ಯಮಾನವಾಗಿದೆ.

ಒಂದು ವಿಚಾರ ಸ್ಪಷ್ಟ. ಅದು ಮೇಲ್ನೋಟದಲ್ಲೇ ಎದ್ದು ಕಾಣುವ ವಿಚಾರ. ಈ ದೇಶದ ದಲಿತರು, ದಮನಿತರು, ಆದಿವಾಸಿಗಳು, ಮಹಿಳೆಯರು, ಮುಸ್ಲಿಂ ಅಲ್ಪಸಂಖ‍್ಯಾತರು ಇನ್ನಿತರ ಬಡವರ ಬದುಕಿನಲ್ಲಿ ಸಂವಿಧಾನದ ಆಶಯಗಳಾಗಲೀ, ಕಲಮುಗಳಾಗಲೀ ಈಗಲೂ ಮೂಲಭೂತವಾಗಿ ಅನ್ವಯವಾಗುತ್ತಲೇ ಇಲ್ಲ. ಈ ರೀತಿಯಿರುವವರ  ಸಂಖ್ಯೆ ಸುಮಾರು ನಲವತ್ತು ಕೋಟಿಯಷ್ಟಿರಬಹುದು. ಇನ್ನು ಅಲ್ಪ ಸ್ವಲ್ಪ ಅನುಕೂಲ ಪಡೆದ ಸಮುದಾಯದವರು ಹತ್ತಾರು ಕೋಟಿಗಳಿರಬಹುದು. ಆದರೆ ಅದು ಮೂಲಭೂತವಾಗಿ ಅವರ ಬದುಕುಗಳಲ್ಲಿ ಬದಲಾವಣೆಗಳನ್ನು ತಂದಿಲ್ಲ ಎನ್ನುವುದನ್ನು ಗಮನಿಸಬೇಕು. ವಸತಿಯಿಲ್ಲದ, ಭೂಮಿಯಿಲ್ಲದ, ಶಿಕ್ಷಣವಿಲ್ಲದ, ಕೊನೆಗೆ ತಮ್ಮಅಸ್ತಿತ್ವದ ಬಗ್ಗೆ ಯಾವುದೇ ದಾಖಲೆಗಳು ಕೂಡ ಇಲ್ಲದ ಜನರೇ ದೇಶದ  ಶೇ 35ರಿಂದ ಶೇ40ರಷ್ಟು ಇದ್ದಾರೆ ಎಂದರೆ  ಸಂವಿಧಾನ ಇವರುಗಳ ಜೀವನದಲ್ಲಿ ಈಗಲೂ ವರ್ತಿತವಾಗಿಲ್ಲ ಎಂದು ತಾನೆ ಅರ್ಥ. ?

ಶೇ 1ರಷ್ಟಿರುವವರ ಬಳಿ ದೇಶದ ಶೇ70ಕ್ಕೂ ಹೆಚ್ಚು ಸಂಪತ್ತು ಕ್ರೋಢೀಕೃತವಾಗಿದೆ ಎನ್ನುವ ಹಲವು ವರದಿಗಳು ಇದನ್ನೇ  ಹೇಳುತ್ತಿವೆ. ಅಂದರೆ ಬಹುಸಂಖ‍್ಯಾತ ಜನಸಾಮಾನ್ಯರ ದುಡಿಮೆಯ ಸಂಪತ್ತನ್ನು ಶೇ 1ರಷ್ಟಿರುವ ಮೇಲ್ಜಾತಿ ಮೇಲ್ವರ್ಗದ ಜನರು ಕಬಳಿಸುತ್ತಾ ಬಂದು ಅದರ ವಾರಸುದಾರರಾಗಿ ದೇಶದ ರಾಜಕೀಯ ಅಧಿಕಾರದ ಹಿಡಿತ ಸಾಧಿಸಿದ್ದಾರೆ. ಅವರಿಗೆ ಏನು ಬೇಕೋ ಅದನ್ನು, ಯಾರು ಬೇಕೋ ಅವರನ್ನು ಚುನಾವಣೆ ಎಂಬ ಪ್ರಹಸನದ ಮೂಲಕ ನೇಮಿಸಿಕೊಳ್ಳುತ್ತಾ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾ ದೇಶವನ್ನು ದಿವಾಳಿಯ ಅಂಚಿಗೆ ತಂದಿದ್ದಾರೆ. ನಮ್ಮ ದೇಶದ ಸಾಂಪ್ರಾದಾಯಿಕ ಕೃಷಿ ಹಾಗೂ ಉದ್ಯಮಗಳಿಂದ ಹಿಡಿದು  ಆಧುನಿಕ ಕೃಷಿ ಹಾಗೂ ಭಾರಿ ಉದ್ದಿಮೆಗಳು ಇಂದು ನೆಲಕಚ್ಚಿ ತೆವಳುತ್ತಿರುವುದು ಈ ಎಲ್ಲಾ ಕಾರಣಕ್ಕಾಗಿಯೇ. 

ನಮ್ಮ ದೇಶದ ಆರ್ಥಿಕ ಸಾಮಾಜಿಕ ಅಸಮಾನತೆಯ ಕಂದಕವಿಂದು ತಲುಪಿರುವ ಸ್ಥಿತಿಯನ್ನು ಗಮನಿಸಿದಾಗ ಇಂಡಿಯಾದ ಪ್ರಜಾಪ್ರಭುತ್ವ ಎನ್ನುವುದು ಎಷ್ಟು ಪೊಳ್ಳಾದುದು ಎನ್ನುವುದು ಅರ್ಥವಾಗುವ ವಿಚಾರ.  ಹಾಗಂತ ನಮ್ಮ ದೇಶವಿಂದು 1947ರಲ್ಲಿದ್ದಂತೆಯೇ ಇದೆಯೇ ಎಂದು ಕೇಳಿದರೆ ಖಂಡಿತಾ ಇಲ್ಲ ಎಂದೇ ಹೇಳಬೇಕಾಗುತ್ತದೆ.. ಜನಸಂಖ್ಯೆಯಿಂದ ಹಿಡಿದು ಮೂಲಸೌಲಭ್ಯಗಳವರೆಗೆ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಅವುಗಳು ಒಟ್ಟಾರೆ ಬಹುಸಂಖ‍್ಯಾತ ಜನಸಾಮಾನ್ಯರ ಅಭಿವೃಧ್ಧಿ ಹಾಗೂ ಸಮಾನತೆಯ ಲಕ್ಷಣಗಳನ್ನಾಗಿ ನೋಡಿದರೆ ಎಡವಿ ಬೀಳುತ್ತೇವೆ.

ವರದಿಗಳ ಪ್ರಕಾರ ಇಂದು ಆರ್ಥಿಕ ಪರಿಸ್ಥಿತಿ ಕಳೆದ ನಲವತ್ತು ವರುಷಗಳ ಹಿಂದಿನಕ್ಕಿಂತಲೂ ಕಳಪೆಯಾಗಿದೆ. ನಿರುದ್ಯೋಗದ ಮಟ್ಟದ ಕತೆ ಕೂಡ ಅದೇ ಪರಿಸ್ಥಿತಿ. ಸಾಮಾಜಿಕ ಭದ್ರತೆಯ ವಿಚಾರದಲ್ಲೂ ಆಗಿನದಕ್ಕಿಂತಲೂ ಕಳಪೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇಡೀ ದೇಶವನ್ನು ಯಾವುದೇ ಸಾಂವಿಧಾನಿಕ ಹಕ್ಕುಗಳು ಮೇಲ್ಮಟ್ಟದಲ್ಲೂ ಕೂಡ ಇಲ್ಲದ ಫ್ಯಾಸಿಸ್ಟ್ ವ್ಯವಸ್ಥೆಯತ್ತ ಯೋಜನಾ ಬಧ್ದವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಅದೂ ಸಂವಿಧಾನ ಬದ್ದವೆಂದು ತೋರಿಸಿಯೇ ಮಾಡಲಾಗುತ್ತಿದೆ ಎನ್ನುವುದನ್ನು ಗಮನಿಸಬೇಕು. ಪೌರತ್ವ ತಿದ್ದುಪಡಿ ಕಾಯಿದೆಯನ್ನು ಇಷ್ಟೆಲ್ಲಾ ಜನವಿರೋಧ ಭುಗಿಲೆದ್ದ ಮೇಲೂ ಜಾರಿಗೆ ತರಲಾಗಿದೆ.

 ಇವೆಲ್ಲಾ ಕೇವಲ ಮೋದಿಯ ಬಿ ಜೆ ಪಿ ಸರ್ಕಾರ ಬಂದಿದ್ದರಿಂದಾಗಿ, ಸಂಘ ಪರಿವಾರದಿಂದಾಗಿ ಸಂಭವಿಸಿವೆ. ಬೇರೆ ಸರ್ಕಾರವಿದ್ದಲ್ಲಿ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದೆಲ್ಲಾ ಅಭಿಪ್ರಾಯಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಚಾಲ್ತಿಯಲ್ಲಿವೆ. ಅಂತಹ ಅಭಿಪ್ರಾಯಗಳನ್ನು ಚಾಲ್ತಿಯಲ್ಲಿಟ್ಟು ಹರಡುವುದರಲ್ಲಿ ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡವರ ಪಾಲೂ ಕೂಡ ಸಾಕಷ್ಟಿದೆ. ಆದರೆ ಅದು ಪೂರ್ಣ ಸತ್ಯವಲ್ಲ ಎನ್ನುವುದನ್ನು ಗಮನಿಸದೇ ಹೋದರೆ ದೇಶದ ಪರಿಸ್ಥಿತಿ ಮತ್ತದರ ಕಾರಣಗಳನ್ನು  ಸರಿಯಾಗಿ ಅರ್ಥ ಮಾಡಕೊಳ್ಳಲಾಗುವುದಿಲ್ಲ. ಇಂದಿನ ಪರಿಸ್ಥಿತಿಯ ಆರಂಭ ಸಂವಿಧಾನ ಅಂಗೀಕೃತಗೊಂಡು ಸಂಸತ್ತಿನ, ಹಾಗೂ ವಿದಾನಸಭೆಗಳ ಚುನಾವಣೆಗಳು ನಡೆದು ಸರ್ಕಾರಗಳು ರಚನೆಗೊಂಡಂದಿನಿಂದಲೇ ಆಗಿದೆ. ಈಗದರ ಉನ್ನತ ಹಂತದಲ್ಲಿ ದೇಶವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಹಿಂದೆ ಆಡಳಿತದಲ್ಲಿದ್ದ ವಿರೋಧ ಪಕ್ಷಗಳು ತಾವು ಪ್ರತಿಪಾದಿಸುತ್ತಾ ಬಂದ ಸಂವಿಧಾನವನ್ನು ಸಮರ್ಥಿಸಿ ಹೇಳಿಕೊಳ್ಳುವಂತಹ ರೀತಿಯಲ್ಲಿ ಗಟ್ಟಿ ದನಿಯೆತ್ತಿ ಜನರನ್ನು ಸಂಘಟಿಸಲು ಸಾಧ್ಯವಾಗದ ಸ್ಥಿತಿಯನ್ನೂ ಇದೇ ಹಿನ್ನೆಲೆಯಲ್ಲಿಯೇ ನೋಡಬೇಕಿದೆ.

ಇಂದಿನ ನಮ್ಮ ಮುಂದಿರುವ ಪ್ರಧಾನ ತಡೆಗಳು ಭಾರಿ ಕಾರ್ಪೋರೇಟು ಹಾಗೂ ಭಾರಿ ಆಸ್ತಿವಂತರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹಿಡಿತ. ಅವರ ಪರವಾಗಿ ಆಡಳಿತ ನಡೆಸುತ್ತಿರುವ ಸರಕಾರಗಳು. ಇವರುಗಳು ಸಂವಿಧಾನವನ್ನೂ ತಮ್ಮ ಶಸ್ತೃ ಹಾಗೂ ಗುರಾಣಿಗಳನ್ನಾಗಿ ಬಳಸುತ್ತಾ ಬಂದಿದ್ದಾರೆ. ಈ ತಡೆಗಳನ್ನು ಸೈದ್ಧಾಂತಿಕವಾಗಿ ಹಾಗೂ ಸಂಘಟಿತವಾಗಿ ಎದುರಿಸುವುದೇ ಜನಸಾಮಾನ್ಯರ ಮುಂದಿರುವ ಸವಾಲುಗಳಾಗಿವೆ. ಪೌರತ್ವ ಕಾಯಿದೆ ಹಾಗೂ ಯೋಜನೆಗಳ ವಿರುದ್ಧ ಚರಿತ್ರಾರ್ಹವಾಗಿ ವಿದ್ಯಾರ್ಥಿ ಯುವ ಸಮೂಹ, ಮಹಿಳೆಯರು ಹಾಗೂ ಜನಸಾಮಾನ್ಯರು ಸಿಡಿದೆದ್ದು ನಿಂತಿರುವ ಈ ಸಂಧರ್ಭದಲ್ಲಿ ಈ ಬಗೆಗಿನ ಚಿಂತನೆಗಳು, ಚರ್ಚೆಗಳು ಹೆಚ್ಚಾಗಬೇಕಾದುದು ಅಗತ್ಯವಾಗಿದೆ.

27/01/2020                                         -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು
ಮಿಂಚಂಚೆ: nandakumarnandana67@gmail.com

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...