ಡಿ ವೈ ಎಸ್ ಪಿ ದೇವಿಂದರ್ ಸಿಂಗ್ ಬಂಧನದ ಹಿಂದಿಲ್ಲವೇ ನಿಗೂಢತೆಗಳು !?
ಕೆಲವು ದಿನಗಳ ಹಿಂದೆ ದೆಹಲಿಯತ್ತ ಹೊರಟಿದ್ದ ಕಾಶ್ಮೀರದ
ಡಿ ವೈ ಎಸ್ ಪಿ ದೇವಿಂದರ್ ಸಿಂಗ್ ಬಂಧನ ಈಗ ಒಂದು ಮಟ್ಟದ ಸುದ್ಧಿಗೆ ಕಾರಣವಾಗಿದೆ. ಆತನ ಜೊತೆಯಲ್ಲಿ
ಉಗ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದವರಿದ್ದರು. ಅವರು ಹಿಜ್ಬುಲ್ ಮುಜಾಹಿದೀನ್ ಎಂಬ ಉಗ್ರ
ಸಂಘಟನೆಗೆ ಸೇರಿದವರಾಗಿದ್ದಾರೆ. ಅವರ ಮನೆಯಲ್ಲಿ ಏಕೆ 47 ನಂತಹ ಬಂದೂಕು ಹಾಗೂ ಎರಡು
ಪಿಸ್ತೂಲುಗಳು ದೊರೆತಿವೆ. ತನ್ನ ಮನೆಯಲ್ಲಿಉಗ್ರವಾದಿ ಸಂಘಟನೆಗಳ ಸದಸ್ಯರಿಗೆ ಆಶ್ರಯ
ಕಲ್ಪಿಸಿದ್ದರು. ಅವರು ದೇಶದ ರಾಜಧಾನಿ ದೆಹಲಿಯಲ್ಲಿ ಬಾಂಬ್ ಸ್ಫೋಟ ಮೊದಲಾದ ವಿಧ್ವಂಸಕ
ಕೃತ್ಯಗಳನ್ನು ನಡೆಸಲು ಯೋಜನೆ ಹೆಣೆದಿದ್ದರು ಎನ್ನುವುದು ಸುದ್ದಿಯ ಮುಖ್ಯ ವಿಚಾರವಾಗಿದೆ. ಜನವರಿ
26ರ ಗಣರಾಜ್ಯ ದಿನೋತ್ಸವದಂದು ವಿಧ್ವಂಸಕ ಕೃತ್ಯಗಳ ಯೋಜನೆ ಅವರದಾಗಿತ್ತೆ ಎಂಬ ಬಗ್ಗೆ
ತನಿಖೆಯಾಗಲಿದೆಯೆಂದು ವರದಿಯಾಗಿದೆ.
ಅದಕ್ಕಿಂತಲೂ ಮುಖ್ಯವಾಗಿರುವ ಮತ್ತೊಂದು ವಿಚಾರವಿದೆ. ಅದೇನೆಂದರೆ
ಇದೇ ದೇವಿಂದರ್ ಸಿಂಗ್ ತನ್ನನ್ನು ವಶಕ್ಕೆ ತೆಗೆದುಕೊಂಡು ಚಿತ್ರಹಿಂಸೆ ನೀಡಿ ಸಂಸತ್ ಭವನದ ಮೇಲಿನ
ಧಾಳಿಯಲ್ಲಿ ಪಾಲ್ಗೊಂಡವರಲ್ಲಿ ಒಬ್ಬನಿಗೆ ದೆಹಲಿಗೆ ಕರೆದುಕೊಂಡು ಹೋಗಿ ವಸತಿ ವ್ಯವಸ್ಥೆ
ಮಾಡಿಕೊಡುವಂತೆ ಒತ್ತಾಯಿಸಿದ್ದರು ಎಂದು ಅಫ್ಜಲ್ ಗುರು ತನ್ನ ವಕೀಲರಿಗೆ ಬರೆದ ಪತ್ರದಲ್ಲಿ
ಹೇಳಿಕೊಂಡಿದ್ದರು. ಆ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಫ್ಜಲ್ ಗುರುವನ್ನು ಸಂಸತ್ ಭವನದ ಧಾಳಿಯ ಒಬ್ಬ ರೂವಾರಿಯೆಂದು ಗಲ್ಲು ಶಿಕ್ಷೆ
ನೀಡಿ ಫೆಬ್ರುವರಿ 2013 ರಲ್ಲಿ ನೇಣಿಗೆ ಹಾಕಲಾಗಿತ್ತು.
ಅದು 2001ನೇ ಇಸವಿ, ವಿಶ್ವದ
ದೊಡ್ಡಣ್ಣನೆಂದು ಇಂಡಿಯಾದ ಮಾಧ್ಯಮಗಳಿಂದ ಬಿಂಬಿಸಿಕೊಳ್ಳುವ ಅಮೇರಿಕ ಭಾರಿ ಧಾಳಿಗೆ ಈಡಾಗಿತ್ತು. ಸೆಪ್ಟಂಬರ್ ತಿಂಗಳ 11ರಂದು ಅಮೇರಿಕದ ಪ್ರತಿಷ್ಠಿತ ಹಾಗೂ ಭಾರಿ ಭದ್ರತೆಯಿರುವ ವರ್ಲ್ಡ್ ಟ್ರೇಡ್ ಸೆಂಟರ್, ಹಾಗೂ ಪೆಂಟಗನ್ ಮೇಲೆ
ಸರಣಿಯಾಗಿ ನಾಲ್ಕು ಧಾಳಿಯಾಯಿತು. ವೈಟ್ ಹೌಸ್ ಮೇಲೂ ಧಾಳಿಯ ಪ್ರಯತ್ನವಾಗಿದ್ದರೂ ಅದನ್ನು ಅಮೇರಿಕದ ಭದ್ರತಾ ಪಡೆಗಳು ತಡೆದವು ಎಂದು ಹೇಳಲಾಯಿತು. ನಾಲ್ಕು ವಿಮಾನಗಳನ್ನು ಸ್ಪೋಟಕಗಳೊಂದಿಗೆ ಆ ಕಟ್ಟಡಗಳೊಳಗೆ ನುಗ್ಗಿಸಿ
ಈ ಧಾಳಿಗಳನ್ನು ನಡೆಸಲಾಗಿತ್ತು. ಈ ಧಾಳಿಯಲ್ಲಿ ಸುಮಾರು
3000 ಜನರ ಸಾವುಗಳು ಸಂಭವಿಸಿ, ಸುಮಾರು 25,000 ಜನರು ಗಾಯಾಳುಗಳಾದರೆಂದು ವರದಿಯಿದೆ. ಸುಮಾರು ಹತ್ತು ಬಿಲಿಯನ್ ಡಾಲರುಗಳ
ಮೂಲಸೌಲಭ್ಯಗಳ ನಷ್ಟ ಅಮೇರಿಕಕ್ಕೆ ಆಗಿತ್ತು ಎಂಬ ಒಂದು ಅಂದಾಜಿದೆ. ಅಮೇರಿಕ ಹಿಂದೆಂದೂ ಆ ಮಟ್ಟದ ಧಾಳಿಗೆ
ಈಡಾಗಿರಲಿಲ್ಲ ಎನ್ನಬಹುದು. ಈ ಧಾಳಿಯನ್ನು ಅಲ್
ಖಾಯಿದಾದ ಒಸಾಮಾ ಬಿನ್ ಲಾದೆನ್ ಮಾಡಿದ್ದೆಂದೂ ಅಮೇರಿಕ ಹೇಳಿತು. ಆರಂಭದಲ್ಲಿ ಒಸಾಮಾ ಬಿನ್ ಲಾದೆನ್ ಈ ಧಾಳಿ ತಾನು
ಮಾಡಿದ್ದಲ್ಲವೆಂದು ಹೇಳುವ, ನಂತರ 2004ರಲ್ಲಿ ಅದನ್ನು ತಾನೇ ಮಾಡಿದ್ದೆಂದು ಹೇಳುವ ಒಸಾಮಾಬಿನ್ ಲಾದೆನ್ ನದೆಂದು ಹೇಳಲಾದ ವೀಡಿಯೋ ಹಾಗೂ ಆಡಿಯೋ ಸಂದೇಶವಿರುವ ತುಣುಕುಗಳು ಬಿತ್ತರವಾಗಿದ್ದವು.
9/11 ಧಾಳಿ ಎಂದು
ಕರೆಯಲ್ಪಡುವ ಈ ಧಾಳಿಯ ನಂತರ ಭಯೋತ್ಪಾದನೆ ವಿರುದ್ದ ಜಾಗತಿಕ ಸಮರಕ್ಕೆ ಅಮೇರಿಕ ಕರೆ ನೀಡಿತು. ಅದರ ಭಾಗವಾಗಿ ಒಸಾಮಾ ಬಿನ್ ಲಾದೆನ್ ಗೆ ರಕ್ಷಣೆ ಒದಗಿಸುತ್ತಿದೆ ಎಂದು
ಅಫ್ಘಾನಿಸ್ತಾನದ ಮೇಲೆ ಧಾಳಿ ಮಾಡಿ ಅಲ್ಲಿನ ತಾಲಿಬಾನ್ ಸರಕಾರವನ್ನು ಅಮೇರಿಕ ಬೀಳಿಸಿ
ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸಿತು. ನಂತರ ಸಮೂಹ ನಾಶಕ ರಾಸಾಯನಿಕ ಅಸ್ತ್ರಗಳನ್ನು
ಹೊಂದಿರುವ ಆರೋಪ ಹೊರಿಸಿ ಇರಾಕಿನ ಮೇಲೆ ಧಾಳಿ ಮಾಡಿ ಸದ್ದಾಮ್ ಹುಸೇನ್ ಆಡಳಿತವನ್ನು
ಬೀಳಿಸಿದ್ದಲ್ಲದೆ ಸದ್ದಾಮ್ ಹುಸೇನ್ ನನ್ನು ಸೆರೆಹಿಡಿದು ವಿಚಾರಣೆಯ ನಾಟಕ ಮಾಡಿ ನೇಣಿಗೆ ಏರಿಸಿ
ಕೊಂದು ಹಾಕಿತು. ನಂತರ ಅಮೇರಿಕ ಲಿಬಿಯಾದ ಮೇಲೆ ಯುಧ್ಧ ಸಾರಿ ಲಿಬಿಯಾದ ಅಧ್ಯಕ್ಷರಾಗಿದ್ದ ಕರ್ನಲ್
ಮುಮ್ಮರ್ ಗದ್ದಾಫಿಯನ್ನು ಸೆರೆ ಹಿಡಿದು ಕೊಂದು ಹಾಕಿತು.
ಇದರಿಂದಾಗಿ ಹತ್ತಾರು
ಲಕ್ಷ ಜನರು ಸಾವಿಗೀಡಾಗಿ ಅದಕ್ಕಿಂತಲೂ ಹೆಚ್ಚಿನ ಜನರು ಗಾಯಾಳುಗಳಾದರು. ಈಗಲೂ ಈ ಪ್ರದೇಶಗಳು
ಅಂತರಿಕ ಕದನಗಳ ತಾಣಗಳಾಗಿ ಅರಾಜಕತೆಯ ಬೀಡಾಗಿದೆ. ಅಮೇರಿಕ
ಮತ್ತದರ ಮಿತ್ರ ರಾಷ್ಟ್ರಗಳು ಕೂಡ ಸಾಕಷ್ಟು ಪ್ರಾಣಗಳು ಹಾಗೂ ಸಂಪನ್ಮೂಲಗಳ ನಷ್ಟವನ್ನು
ಅನುಭವಿಸಬೇಕಾಯಿತು. ಅಲ್ಲದೇ ಆ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ ಅಲ್ಲಿನ ತೈಲ ಸಂಪತ್ತಿನ ಮೇಲೆ
ಹಿಡಿತ ಸಾಧಿಸುವ ಅವುಗಳ ಬಯಕೆಗಳು ಈಗಲೂ ಈಡೇರದೇ ಹೋಗಿವೆ.
ಅಮೇರಿಕದ ವರ್ಲ್ಡ್
ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ ಮೇಲಿನ ಧಾಳಿಯ ಹೊಣೆ ಹೊರಿಸಿ ಪಾಕಿಸ್ತಾನದ
ಒಬಾಟಾಬಾದ್ ನಲ್ಲಿದ್ದ ಒಸಾಮಾ ಬಿನ್ ಲಾದೆನ್ ರನ್ನು ಮೇ 2 -2011ರಂದು ಅಮೇರಿಕ ಕೊಂದು
ಹಾಕಿತು. ಅಲ್ಲಿ ಪಾಕಿಸ್ತಾನದ ಸಾರ್ವಭೌಮತ್ವವನ್ನು ಅಮೇರಿಕ ಗಣನೆಗೇ ತೆಗೆದುಕೊಂಡಿರಲಿಲ್ಲ.
ಕಳೆದ
2019ರ ಜನವರಿ 9ರಂದು ಆ ಧಾಳಿಯನ್ನು ನಡೆಸಿದ್ದು ಒಸಾಮ ಬಿನ್ ಲಾದೆನ್ ಅಲ್ಲ. ತಪ್ಪು ಮಾಹಿತಿಯಿಂದಾಗಿ ಒಸಾಮರನ್ನು ಕೊಂದೆವು ನಮ್ಮಿಂದ ತಪ್ಪಾಗಿದೆ ಎಂದು ಕ್ಷಮಾಪಣೆ ಕೇಳಿ ಮಿಲಿಯಾಂತರ ಡಾಲರುಗಳ ನಷ್ಟಪರಿಹಾರವನ್ನು ಒಸಾಮಾಬಿನ್ ಲಾದೆನ್ ಕುಟುಂಬಕ್ಕೆ ನೀಡುವುದಾಗಿ ಸಿ ಐ ಎ ಯ ಮೂಲಕ ಬಹಿರಂಗವಾಗಿ ಅಮೇರಿಕ ಹೇಳಿದ್ದ
ವರದಿಯೊಂದು ಹರಿದಾಡಿತ್ತು. ಯಾಹೂ ಜಾಲತಾಣ ಕೂಡ
ಅದೇ ಸುದ್ಧಿಯನ್ನು ಬಿತ್ತರಿಸಿತ್ತು. ನಂತರ ಅದು ಸುಳ್ಳು ವರದಿಯೆಂದು, ಆನಿಯನ್ (onion) ಎಂಬ
ವ್ಯಂಗ್ಯ ಜಾಲತಾಣದ ಕಲ್ಪಿತ ಸುದ್ಧಿಯದು ಎಂದು 2019ರ ಜೂನ್ ತಿಂಗಳಲ್ಲಿ ಒಂದೆರಡು ಜಾಲತಾಣಗಳು ಹೇಳಿದವು.
ಅದೇನೆ
ಇರಲಿ ಅಂತಹ ದೊಡ್ಡ ಪ್ರಮಾಣದ ಧಾಳಿಯೊಂದನ್ನು ಒಸಾಮಾ ಬಿನ್ ಲಾದೆನ್ ಮತ್ತಾತನ ಸಂಘಟನೆ ನಡೆಸಲು
ಸಾಧ್ಯವಿದೆಯೇ ಎಂಬ ಪ್ರಶ್ನೆಯಂತೂ ಈಗಲೂ ಜಗತ್ತಿನ ಸಾಕಷ್ಟು ಜನರಿಗೆ ಕಾಡುತ್ತಿರುವುದು ನಿಜ.
ಕಾರಣ ಲಾದೆನ್ ನ ಅಲ್ ಖಾಯಿದಾಗೆ ಅಮೇರಿಕದಲ್ಲೇ 5
ವಿಮಾನಗಳನ್ನು ಅಪಹರಿಸಿ, ಅದರಲ್ಲಿ ಸ್ಪೋಟಕವಿಟ್ಟುಕೊಂಡು, ಅಲ್ಲಿನ ರಾಡಾರ್ ಜಾಲ ಸೇರಿದಂತೆ ಇನ್ನಿತರ
ಭದ್ರತಾ ಜಾಲಗಳನ್ನೆಲ್ಲಾ ಭೇಧಿಸಿ ಸರಣಿ ಧಾಳಿಗಳನ್ನು ಆ ಮಟ್ಟದಲ್ಲಿ ಸಂಘಟಿಸಲು ಅಮೇರಿಕದ ಆಡಳಿತ
ವಲಯದ ಗಟ್ಟಿಬೆಂಬಲವಿಲ್ಲದೇ ಸಾಧ್ಯವೆಂದು ಸಾಮಾನ್ಯವಾಗಿ ಒಂದಷ್ಟು ಗ್ರಹಿಕೆಯಿರುವವರಿಗೆ
ಅನಿಸಲಾರದು. ಮಾಧ್ಯಮಗಳು ಲಾದೆನ್ ಹಾಗೂ ಆತನ ಸಂಘಟನೆ ಬಗ್ಗೆ ಏನೆಲ್ಲಾ ಹೇಳಿದ್ದರೂ ಅವುಗಳಲ್ಲಿ
ಹುರುಳಿಲ್ಲದವೇ ಹೆಚ್ಚಿವೆ ಎನ್ನುವುದು ಈಗೀಗ ಸಾಕಷ್ಟು ಜನರಿಗೆ ಅರ್ಥವಾಗಿರುವ ವಿಚಾರ.
ಅಮೇರಿಕ
ಮತ್ತದರ ಮಿತ್ರಕೂಟ ಇರಾಕಿನಲ್ಲಿ ಸಮೂಹ ನಾಶಕ ರಾಸಾಯನಿಕ ಅಸ್ತ್ರಗಳ ಆರೋಪ ಮಾಡಿದ್ದು ಸುಳ್ಳಾಗಿತ್ತು ಎಂದು ಅದರ ಮಿತ್ರ
ಹಾಗೂ ಯದ್ಧದ ಪಾಲುದಾರ ಯುನೈಟೆಡ್ ಕಿಂಗ್ ಡಂ ನ ಪ್ರಧಾನಿಯಾಗಿದ್ದ ಟೋನಿ ಬ್ಲೇರ್ ಬಹಿರಂಗವಾಗಿಯೇ
ಹೇಳಿದ್ದರು. ಅವರು ಅದಕ್ಕೆ ಅಂಶಿಕವಾಗಿ
ಕ್ಷಮೆಯನ್ನೂ ಕೇಳಿದ್ದರು. ಅಲ್ಲದೇ ಇರಾಕಿನಿಂದ ಯಾವುದೇ ರೀತಿಯ ಸಮೂಹ ನಾಶಕ ರಾಸಾಯನಿಕ
ಅಸ್ತ್ರಗಳ ಪತ್ತೆ ಹಚ್ಚಲು ಕೂಡ ಸಾಧ್ಯವಾಗಿರಲಿಲ್ಲ. ಲಿಬಿಯಾದ ಮೇಲಿನ ಅಮೇರಿಕ ಆಕ್ರಮಣಕ್ಕೆ
ಲಿಬಿಯಾದ ನಾಗರಿಕರನ್ನು ಗದ್ದಾಫಿ ಸರಕಾರದ ಧಾಳಿಗಳಿಂದ ರಕ್ಷಿಸುವ ನೆಪ ಹೇಳಲಾಗಿತ್ತು. ವಾಸ್ತವ
ಮಾತ್ರ ಅದಾಗಿರಲಿಲ್ಲ. ಈಗ ಬೊಲಿವಿಯಾದಲ್ಲಿ, ವೆನಜುಯೇಲಾದಲ್ಲಿ ಅಮೇರಿಕ ಇವೇ ನೆಪ ಹೇಳುತ್ತಾ
ತನ್ನ ಹಸ್ತಕ್ಷೇಪ ಮಾಡುತ್ತಿದೆ. ಅವೆಲ್ಲವೂ ಸುಳ್ಳು ಎನ್ನುವುದು ಅಮೇರಿಕದ ಆಡಳಿತದ ಇತಿಹಾಸವೇ
ಹೇಳುತ್ತದೆ.
ನಂತರ 13 ಡಿಸೆಂಬರ್ 2001ರ ಇಂಡಿಯಾದ ಸಂಸತ್
ಭವನದ ಮೇಲೆ ಧಾಳಿಯೊಂದು ನಡೆಯಿತು. ಅಂತಹ ಧಾಳಿ ಇಂಡಿಯದ
ಚರಿತ್ರೆಯಲ್ಲೇ ಮೊದಲಿನದು ಎಂದು ಹೇಳಬಹುದು. ಭಾರಿ
ಸ್ಫೋಟಕ ತುಂಬಿದ್ದ ಬಿಳಿಯ ಅಂಬಾಸಿಡರ್ ಕಾರಿನೊಂದಿಗೆ ಐವರು ಭಯೋತ್ಪಾದಕರು ಸಂಸತ್ ಭವನಕ್ಕೆ
ನುಗ್ಗಲು ಯತ್ನಿಸಿದಾಗ ಭದ್ರತಾ ಪಡೆಗಳು ತಡೆದರು. ಅಗ ಗುಂಡಿನ ಕಾಳಗ ನಡೆದು ಧಾಳಿಗೆ ಬಂದಿದ್ದ ಐವರು,
ಒಬ್ಬರು ಉದ್ಯಾನವನ ಪರಿಪಾಲಕ, ಇಬ್ಬರು ಸಂಸತ್ ಭವನದ ಕಾವಲುಗಾರರು, ಒಬ್ಬರು ಪತ್ರಕರ್ತ, ಐದು ಜನ
ದೆಹಲಿ ಪೋಲಿಸರು, ಒಬ್ಬರು ಸಿ ಆರ್ ಪಿ ಎಫ್ ಮಹಿಳಾ ಪೇದೆ ಸೇರಿದಂತೆ ಒಟ್ಟು 15 ಜನರು
ಸಾವಿಗೀಡಾದರು. ಧಾಳಿಕೋರರು ಬಳಸಿದ ಕಾರಿನಲ್ಲಿ ಸ್ಪೋಟಕಗಳೊಂದಿಗೆ, ಬಂದೂಕುಗಳು, ಮೊಬೈಲು
ಫೋನುಗಳು, ಫೋನ್ ಸಂಖ್ಯೆಗಳು, ಗುರುತಿನ ಚೀಟಿಗಳು, ಒಣಗಿದ ಹಣ್ಣಗಳು, ಜೊತೆಗೆ ಒಂದು ಪ್ರೇಮಪತ್ರ
ಕೂಡ ಇತ್ತೆಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯ ಹೊಣೆ ಲಷ್ಕರ್ ಇ ತಾಯಿಬಾ ಹಾಗೂ
ಜೈಷೆ ಮೊಹಮದ್ ಎಂಬ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳದು ಎಂದು ಹೇಳಲಾಯಿತು. ರೂವಾರಿಗಳೆಂದು
ಅಫ್ಜಲ್ ಗುರು, ದೆಹಲಿ ವಿವಿಯ ಫ್ರೊಫೆಸರ್ ಎಸ್ ಎ
ಆರ್ ಗಿಲಾನಿ ಮೊದಲಾದವರನ್ನು ಬಂಧಿಸಲಾಯಿತು.
ಈ ಘಟನೆಯ ನಂತರ
ದೇಶಾದ್ಯಂತ ಮುಸ್ಲಿಂ ವಿರೋಧಿ ಸಮೂಹ ಸನ್ನಿಯನ್ನು ಭಯೋತ್ಪಾದನೆಯ ವಿರುದ್ಧದ ಸಮರದ ಹೆಸರಿನಲ್ಲಿ
ವ್ಯಾಪಕವಾಗಿ ಬಿತ್ತಲಾಯಿತು. ಇಂಡಿಯಾ ಭಯೋತ್ಪಾದನೆ ವಿರುದ್ಧ
ಸಮರದಲ್ಲಿ ಅಮೇರಿಕದ ಜೊತೆಗೂಡಿ
ನಿಂತಿತು.
ಸಂಸತ್ ಭವನದ
ಧಾಳಿಕೋರರಲ್ಲಿ ಒಬ್ಬರನ್ನೂ ಕೂಡ ಜೀವಂತವಾಗಿ ಹಿಡಿಯಲಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ
ನಡೆದು ಸಾಂಧರ್ಭಿಕ ಸಾಕ್ಷಿಯಿದೆಯೆಂದು ತೀರ್ಮಾನಿಸಿ ಆಪಾದಿತರಿಗೆ ಶಿಕ್ಷೆ ವಿಧಿಸಲಾಯಿತು. ಹತ್ತಾರು ತಿಂಗಳು ಕಾರಾಗೃಹದಲ್ಲಿರಬೇಕಾಗಿ ಬಂದ ಎಸ್ ಎ
ಆರ್ ಗಿಲಾನಿಯನ್ನು ಸರ್ವೋಚ್ಚ ನ್ಯಾಯಾಲಯ ಸಾಕ್ಷಿಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿತು. ಗಿಲಾನಿ
ಇತ್ತೀಚೆಗೆ ಹೃದಯಾಘಾತದಿಂದ ಸಾವಿಗೀಡಾದರು.
ಸರ್ವೋಚ್ಚ ನ್ಯಾಯಾಲಯ
ಅಫ್ಜಲ್ ಗುರುವಿಗೆ ಮರಣ ದಂಡನೆ ಶಿಕ್ಷೆಯನ್ನು ಎತ್ತಿಹಿಡಿಯಿತು. ಆ ಧಾಳಿಯ
ರೂವಾರಿಯಲ್ಲೊಬ್ಬರೆಂದು ಅಫ್ಜಲ್ ಗುರುವನ್ನು ನೇಣಿಗೇರಿಸಿ ಕೊಲ್ಲಲಾಯಿತು. ನ್ಯಾಯಾಲಯ
ಶಿಕ್ಷೆ ನೀಡುವಾಗ ಇಂಡಿಯಾದ
ಜನರ ಸಾಮೂಹಿಕ ಆತ್ಮ
ಸಾಕ್ಷಿ (ಅಥವಾ ಬಯಕೆ)
( collective conscience) ಯಂತೆ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿದ್ದರೂ ಸಾಂಧರ್ಭಿಕ
ಸಾಕ್ಷಿಯನುಸಾರ ಈ ಶಿಕ್ಷೆ
ವಿಧಿಸಲಾಗಿದೆ ಎಂದು
ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದು ಒಂದು ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಕೇವಲ
ಸಾಂಧರ್ಭಿಕ ಸಾಕ್ಷಿಯನ್ನಿಟ್ಟುಕೊಂಡು ವಿವಾದಾಸ್ಪದ ಸಾಮೂಹಿಕ ಆತ್ಮಸಾಕ್ಷಿಯನ್ನು ಮುಂದೊಡ್ಡಿ ಮರಣ
ದಂಡನೆಯಂತಹ ಶಿಕ್ಷೆ ನೀಡುವುದು ಸರಿಯೇ ಎನ್ನುವುದು ವಿವಾದದ ಮುಖ್ಯ ವಿಚಾರವಾಗಿತ್ತು. ಸಂಘ
ಪರಿವಾರ ಸಹಜವಾಗಿ ಅಂತಹ ಚರ್ಚೆಗಳನ್ನು ಧ್ವೇಷಿಸುತ್ತಾ ಪ್ರಶ್ನೆಗಳನ್ನೆತ್ತಿ ಚರ್ಚಿಸುವವರ ಮೇಲೆ
ದೈಹಿಕ ಹಲ್ಲೆಯೂ ಸೇರಿದಂತೆ ಧಾಳಿ ಮಾಡುತ್ತಾ
ಬಂದಿತ್ತು.
ಈಗ ಡಿ ವೈ ಎಸ್ ಪಿ ಶ್ರೇಣಿಯ
ಮುಸ್ಲಿಮೇತರ ಅಧಿಕಾರಿಯೊಬ್ಬರು ಉಗ್ರಗಾಮಿ ಚಟುವಟಿಕೆ
ನಡೆಸುವವರೊಂದಿಗೆ ಕಾರಿನಲ್ಲಿ ಸಾಗುತ್ತಿದ್ದಾಗ ಬಂಧನಕ್ಕೀಡಾಗಿರುವುದು ಹಳೇ ಚರ್ಚೆಗಳನ್ನು
ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ತಾನು ಅಫ್ಜಲ್
ಗುರುವಿಗೆ ವಶಕ್ಕೆ ಪಡೆದುಕೊಂಡು ಚಿತ್ರಹಿಂಸೆ ನೀಡಿರುವುದನ್ನು ಸಂಧರ್ಶನವೊಂದರಲ್ಲಿ ಈ
ಅಧಿಕಾರಿಯೇ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಇವೆಲ್ಲಾ ಬಹಳ ಗಂಭೀರವಾದ ಅನುಮಾನ ಹಾಗೂ
ಪ್ರಶ್ನೆಗಳನ್ನು ಸಂಸತ್ ಭವನದ ಮೇಲಿನ ಧಾಳಿಯಂತಹ ಘಟನೆಗಳ ಕುರಿತು ಹುಟ್ಟುಹಾಕುವುದು ಸಹಜವೇ
ಆಗಿದೆ.
ಕಳೆದ
ವರ್ಷ ಕಾಶ್ಮೀರದ ಪುಲ್ವಾಮದಲ್ಲಿ ಭಾರಿ ಭದ್ರತಾ
ವಲಯದಲ್ಲೇ ಸುಮಾರು ೭೦ಕ್ಕೂ
ಹೆಚ್ಚು ಟ್ರಕ್ಕುಗಳಲ್ಲಿ ಸಂಚರಿಸುತ್ತಿದ್ದ ಭದ್ರತಾ
ಪಡೆಗಳ ಮೇಲೆಯೇ ಧಾಳಿ
ನಡೆದು ಹತ್ತಾರು ಜನರನ್ನು
ಕೊಲ್ಲಲಾಯಿತು. ಅದೂ ಕೂಡ ಅನುಮಾನಾಸ್ಪದ ವಿಚಾರವಾಗಿಯೇ ಉಳಿದಿದೆ.
ಕೆಲವು ರಾಜಕೀಯ ನಾಯಕರು
ಅದನ್ನು ಕೇಂದ್ರ ಸರಕಾರವೇ
ಮಾಡಿಸಿ ಜನರನ್ನು ಭಾವೋದ್ರೇಕಗೊಳಿಸಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎನ್ನುವಂತಹ ಮಾತುಗಳನ್ನು ಆಡಿದ್ದರು. ಆಯಾ ಸಮಯ ಸಂಧರ್ಭಗಳ
ಹಿನ್ನೆಲೆಗಳಲ್ಲಿಯೇ ಇವುಗಳನ್ನೆಲ್ಲಾ ವಿಶ್ಲೇಷಿಸಬೇಕಾಗುತ್ತದೆ.
ಡಿ ವೈ ಎಸ್ ಪಿ ಯನ್ನು ಭಯೋತ್ಪಾದಕರೆಂದು ಹೇಳಲ್ಪಟ್ಟವರ ಜೊತೆಗೆ
ಬಂಧನದ ಹಿಂದೆ ಹಲವು
ನಿಗೂಢತೆಗಳಿರುವ ಬಗ್ಗೆ ಮೇಲ್ನೋಟಕ್ಕೆ ಗೊತ್ತಾಗುವ ವಿಚಾರ.
ಇಂತಹುವುಗಳನ್ನು ಮಾಡಬೇಕಾದರೆ ಒಬ್ಬ
ಡಿ ವೈ ಎಸ್ ಪಿ ಶ್ರೇಣಿಯ
ಅಧಿಕಾರಿಯೊಬ್ಬರಿಂದ ಮಾತ್ರ ಸಾಧ್ಯವಾಗಲಾರದು ಎನ್ನುವುದು ಕೂಡ ಮೇಲ್ನೋಟದಲ್ಲೇ
ಯಾರಿಗಾದರೂ ಗೊತ್ತಾಗುವ ಸಂಗತಿ. ಇವುಗಳ ಹಿಂದಿನ ಶಕ್ತಿಗಳು
ಬಹಿರಂಗವಾಗಬೇಕಿದೆ. ದೇಶದ ಜನರು
ಇವನ್ನೆಲ್ಲಾ ಅರಿಯಬೇಕಾದುದು
ಅತ್ಯಗತ್ಯವಾಗಿದೆ.
೧೮/೦೧/೨೦೨೦. - ನಂದಕುಮಾರ್ ಕೆ ಎನ್ . ಕುಂಬ್ರಿ ಉಬ್ಬು
Comments
Post a Comment