Skip to main content

ಜೆ ಎನ್ ಯು ಮೇಲಿನ ಧಾಳಿಗಳು-j n u in attack - education system


ಜೆ ಎನ್ ಯು ಮೇಲಿನ ಧಾಳಿಗಳು

ಭಾರತದ ವಿಶ್ವ ವಿದ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ಧಾಳಿಗಳಾಗಿವೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೆ ಜಾಗತಿಕ ಸುದ್ಧಿಗೆ ಗ್ರಾಸವಾಗಿದೆ. ಸಂಕ್ಷಿಪ್ತವಾಗಿ ಜೆ ಎನ್ ಯು ಎಂದು ಕರೆಯಲ್ಪಡುವ ಈ ಕೇಂದ್ರೀಯ ವಿಶ್ವವಿದ್ಯಾಲಯ ಜಾಗತಿಕ ಮನ್ನಣೆ ಪಡೆದ ಭಾರತದ ವಿಶ್ವ ವಿದ್ಯಾಲಯವಾಗಿದೆ. ಭಾರತದಲ್ಲಿ ಜೆಎನ್ ಯುವಿನಂತಹ ವಿಶ್ವ ವಿದ್ಯಾಲಯ ಬೇರೊಂದಿಲ್ಲ. ಇಲ್ಲಿ ಅತ್ಯಂತ ಅಗ್ಗದಲ್ಲಿ ಉನ್ನತ ಶಿಕ್ಷಣವನ್ನು ಸಮಾಜದ ಎಲ್ಲಾ ಅದರಲ್ಲೂ ದಲಿತ ದಮನಿತ ವರ್ಗದ ವಿದ್ಯಾರ್ಥಿಗಳಿಗೆ ದೊರೆಯುತ್ತಾ ಬಂದಿತ್ತು. ಈ ವಿಶ್ವ ವಿದ್ಯಾಲಯ ಕಳೆದ ಕೆಲವು ವರುಷಗಳಿಂದ ವಿವಾದಗಳ ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಹಾಗೆ ಮಾಡುವುದರಲ್ಲಿಆಳುವಂತಹ ಶಕ್ತಿಗಳಿಗೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶಗಳಿವೆ. ಭೌದ್ಧಿಕವಾಗಿ ಮುಂಚೂಣಿಯಲ್ಲಿರುವ ಈ ವಿಶ್ವ ವಿದ್ಯಾಲಯವನ್ನು ಇಲ್ಲದಂತೆ ಮಾಡುವ  ಸಂಚುಗಳು ನಡೆಯುತ್ತಾ ಬಂದಿವೆ. ಈ ಬಗ್ಗೆ ಕರ್ನಾಟಕದ ವಿಶ್ವ ವಿದ್ಯಾಲಯಗಳ ಬೋಧಕ ವಲಯಗಳಲ್ಲಿರುವ ಬಹುತೇಕ ಪ್ರಾಧ್ಯಾಪಕರುಗಳು ಸಣ್ಣ ದನಿಯನ್ನೂ ಕೂಡ ಎತ್ತಲಾಗದಷ್ಟು ಬಲಹೀನರಾಗಿದ್ದಾರೆ ಎನ್ನುವುದು ಕಣ್ಣಿಗೇ ರಾಚುತ್ತಿರುವ ವಿಚಾರ. ಪಡೆಯುತ್ತಿರುವ ಯುಜಿಸಿ ಸಂಬಳ ಹಾಗೂ ಸವಲತ್ತುಗಳು ಅವರ ಕಣ್ಣು ಹಾಗೂ ಮೆದುಳುಗಳಿಗೆ ಗರಬಡಿಸಿದಂತೆ ಕಾಣುತ್ತಿದೆ.

ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯವನ್ನು 1969ರಲ್ಲಿ ಸಂಸತ್ತಿನ ಮಸೂದೆಯಡಿ ಸ್ಥಾಪಿಸಲಾಗಿತ್ತು. 1965 ರ ಸೆಪ್ಟಂಬರ್ 1 ರಂದು ರಾಜ್ಯಸಭೆಯಲ್ಲಿ ಜೆ ಎನ್ ಯು ಮಸೂದೆ ಮಂಡನೆಯಾಗುತ್ತದೆ. ಅದನ್ನು ಉನ್ನತ ಚಿಂತನೆಗಳಿರುವ ಭಾರತದ  ವಿಶೇಷ ಶಿಕ್ಷಣ ಕೇಂದ್ರವನ್ನಾಗಿಸುವ ಉದ್ಧೇಶದಿಂದಲೇ ಸ್ಥಾಪಿಸಲಾಗಿತ್ತು. ರಾಜತಾಂತ್ರಿಕ, ಪತ್ರ ಕರ್ತ ಹಾಗೂ ಶಿಕ್ಷಣ ತಜ್ಞ ಜಿ ಪಾರ್ಥಸಾರಥಿ ಈ ಕೇಂದ್ರೀಯ ವಿಶ್ವ ವಿದ್ಯಾಲಯದ ಮೊದಲ ಉಪಕುಲಪತಿಗಳಾಗಿದ್ದರು. ಅಲ್ಲಿ ವೈಜ್ಞಾನಿಕ ಸಮಾಜವಾದವನ್ನು ಕೂಡ ಒಂದು ನಿಕಾಯವಾಗಿ ಮಾಡಬೇಕೆಂಬ ಪ್ರಸ್ತಾವನೆಯೊಂದಿಗೆ ಮಸೂದೆ ಮಂಡನೆಯಾಗಿತ್ತು. 1970ರಲ್ಲಿ ಅಂತರಾಷ್ಟ್ರೀಯ ಅಧ್ಯಯನಗಳಿಗಾಗಿನ ಭಾರತೀಯ ಕೇಂದ್ರವನ್ನು ಇದರೊಂದಿಗೆ ವಿಲೀನಗೊಳಿಸಲಾಗುತ್ತದೆ.

 ಈ ವಿಶ್ವ ವಿದ್ಯಾಲಯ ದೇಶದಲ್ಲಿ ಉನ್ನತ ಮಟ್ಟದ ವಿಶ್ವ ವಿದ್ಯಾಲಯವೆಂದು ಪರಿಗಣಿತವಾಗಿದೆ. ಸಂಶೋಧನೆ ಹಾಗೂ ಪಾಠಗಳಿಗೆ ಜಾಗತಿಕ ಮನ್ನಣೆಯನ್ನು ಪಡೆದಿದೆ. ಹಲವು ಸೇನಾ ಶಿಕ್ಷಣ ಸಂಸ್ಥೆಗಳು, ಕೆಲವು ಬಿಸಿನೆಸ್  ಶಿಕ್ಷಣ ಸಂಸ್ಥೆಗಳು, ಹಲವಾರು ಸಂಶೋಧನಾ ಸಂಸ್ಥೆಗಳು ಜೆ ಎನ್ ಯು ಯಡಿ ಕಾರ್ಯ ನಿರ್ವಹಿಸುತ್ತಿವೆ. ದೇಶದ ವಿವಿಧ ಭಾಗಗಳಿಗೆ ಸೇರಿದ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ/ನಿಯರು  ಜೆ ಎನ್ ಯು ವಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ ಸಮಾಜದ ತಳಪಾಯದ ಸಮುದಾಯಗಳಿಗೆ ಸೇರಿದವರೇ ಅಧಿಕ. ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ನೀಡುವ ಉನ್ನತ ಮಟ್ಟದ ಮಾನ್ಯತೆ ಪಡೆದಿರುವ ಏಕೈಕ ವಿಶ್ವ ವಿದ್ಯಾಲಯ ಜೆ ಎನ್ ಯು ಆಗಿದೆ ಎನ್ನಬಹುದು.

ಇಲ್ಲಿ ಶಿಕ್ಷಣ ಪಡೆದವರಲ್ಲಿ ಹೆಸರಾಂತ ಅರ್ಥ ಶಾಸ್ತ್ರಜ್ಞರು, ಶಿಕ್ಷಣತಜ್ಞರು, ಸಾಹಿತಿಗಳು, ಇತಿಹಾಸಕಾರರು, ಭಾಷಾ ವಿದ್ವಾಂಸರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದ್ದಾರೆ. ಭಾರತದಲ್ಲಿ ಜವಾಹರ್ಲಾಲ್ ನೆಹರು ವಿಶ್ವ ವಿದ್ಯಾಲಯದ ರೀತಿಯ ವೈವಿಧ್ಯಮಯತೆ, ಬಹುತ್ವ, ದೇಶದ ಎಲ್ಲಾ ಆಗುಹೋಗುಗಳನ್ನು ಮುಕ್ತವಾಗಿ ಚರ್ಚಿಸುವ ನಿಜವಾದ ಪ್ರಜಾತಾಂತ್ರಿಕ ವಾತಾವರಣವಿರುವ ಉನ್ನತ ಶಿಕ್ಷಣ ಸಂಸ್ಥೆ ಬೇರೊಂದಿಲ್ಲ ಎನ್ನಬಹುದು.

ಬಾರತದಲ್ಲಿ ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತಷ್ಟು ಹೆಚ್ಚಾಗಬೇಕಿತ್ತು. ಅದನ್ನು ನಮ್ಮನ್ನಾಳುತ್ತಾ ಬಂದ ಯಾವ ಸರ್ಕಾರಗಳೂ ಮಾಡಲಿಲ್ಲ. ಅಷ್ಟೇ ಅಲ್ಲ ಜೆ ಎನ್ ಯು ವನ್ನೇ ನಾಶಗೊಳಿಸುವ ಕಾರ್ಯದಲ್ಲಿ ತೊಡಗಿದವು. ಜಾಗತೀಕರಣವನ್ನು ದೇಶದ ಮೇಲೆ ಹೇರಿದ ನಂತರ ಶಿಕ್ಷಣ ಒದಗಿಸಬೇಕಾದ  ಸರಕಾರಗಳ ಶಿಕ್ಷಣದ ಬಗೆಗಿನ ವ್ಯಾಖ್ಯಾನಗಳೇ ಬದಲಾದವು ಕಾರ್ಪೋರೇಟಿಕರಣವೇ ಎಲ್ಲಾ ರಂಗಗಳ ಅಭಿವೃದ್ಧಿಗೆ ಪರಿಹಾರದ ಮಂತ್ರವೆಂಬಂತೆ ಬಿಂಬಿಸಲಾಯಿತು. ಅದರ ಭಾಗವಾಗಿ ಕಿಂಡರ್ ಗಾರ್ಟನ್ ನಿಂದ ಹಿಡಿದು ಉನ್ನತ ಶಿಕ್ಷಣ ರಂಗದ ಮೇಲೆ ಖಾಸಗಿಯವರ ಹಿಡಿತ ಪ್ರಧಾನವಾಗಿ ಸರಕಾರಿ ಹಿಡಿತ ನಾಮ ಮಾತ್ರದ್ದಾಯಿತು. ನಂತರ ಖಾಸಗೀ ವಿಶ್ವವಿದ್ಯಾನಿಲಯ ಜಾರಿಯಾಗತೊಡಗಿದವು. ವಿದೇಶಿಮೂಲದ ವಿಶ್ವ ವಿದ್ಯಾಲಯಗಳ ಪ್ರವೇಶಕ್ಕೂ ಕಾನೂನು ತಿದ್ದುಪಡಿಯನ್ನು ಹಿಂದಿನ ಕಾಂಗ್ರೆಸ್ ಸರಕಾರದ ಕಾಲದಲ್ಲೇ ಮಾಡಲಾಗಿತ್ತು. ಇದರ ಜೊತೆಯಲ್ಲೇ ಹಾಲಿ ಇರುವ ವಿಶ್ವ ವಿದ್ಯಾಲಯಗಳನ್ನು ಕೂಡ ಭಾರಿ ಕಾರ್ಪೋರೇಟುಗಳ ಕೈಗಳಿಗೆ ದಾಟಿಸುವ ಪ್ರಕ್ರಿಯೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಡೆಯತೊಡಗಿದವು. ಸರಕಾರಿ ಯಂತ್ರಾಂಗಗಳು ಶಿಕ್ಷಣ ನೀಡುವ ಬದಲಿಗೆ ಯಾವ್ಯಾವ ರೀತಿಗಳಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೋರೇಟು ಕೈಗಳಿಗೆ ದಾಟಿಸಲು ನೀತಿ ಕುನೀತಿಗಳನ್ನು ಹೆಣೆದು ಜಾರಿಗೊಳಿಸುವ ಬಗ್ಗೆಯೇ ಚಿಂತಿಸತೊಡಗಿದವು. ಅದರ ಭಾಗವಾಗಿ ಹಲವಾರು ಕಾರ್ಪೋರೇಟು ವಿಶ್ವ ವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದವು. ಅದನ್ನು ಡೀಮ್ಡ್  ಯೂನಿವರ್ಸಿಟಿಗಳೆಂದು ಕರೆಯಲಾಯಿತು. ಸ್ವಾಯತ್ತತೆಯನ್ನೂ ನೀಡಲಾಯಿತು.

ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ಮೇಲೆ ಜಿಯೋ ಹೆಸರಿನ ಮುಖೇಶ್ ಅಂಬಾನಿಯ ಕಾರ್ಪೋರೇಟ್ ವಿಶ್ವ ವಿದ್ಯಾಲಯವನ್ನು ಭಾರತದ ಅತ್ಯುನ್ನತ ವಿಶ್ವ ವಿದ್ಯಾಲಯವೆಂದು ಮಾನ್ಯತೆ ನೀಡಿ ಸುಮಾರು ಸಾವಿರ ಕೋಟಿಗಳಷ್ಟು ರೂಪಾಯಿಗಳ ಅನುದಾನವನ್ನು ನೀಡಲಾಯಿತು. ಆದರೆ ಈ ಜಿಯೋ ವಿಶ್ವ ವಿದ್ಯಾಲಯ ಕೇವಲ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಅದೂ ಅಲ್ಲದೇ ಅದು ಆಗಷ್ಟೇ ಆರಂಭವಾದ ಸ್ವಂತ  ಕಟ್ಟಡ ಕೂಡ ಇಲ್ಲದ, ಪ್ರಾರಂಭವೇ ಆಗಿಲ್ಲದ ಒಂದು ವಿಶ್ವ ವಿದ್ಯಾಲಯವಾಗಿತ್ತು. ಅದಕ್ಕೆ ಅಕ್ರಮವಾಗಿ ಅತ್ಯುತ್ತಮ ಎಂದು ಮಾನ್ಯತೆ ನೀಡಿದ್ದಲ್ಲದೇ ಅನುದಾನವನ್ನೂ ಕೊಟ್ಟಿದ್ದು ಸಾಕಷ್ಟು ವಿವಾದವನ್ನೂ ಸೃಷ್ಠಿಸಿತ್ತು.

ಜೆ ಎನ್ ಯು ವಿನಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ, ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಹೀಗೆ ಎಲ್ಲಾ ಮುಖ್ಯ ರಂಗಗಳಲ್ಲಿ ನಡೆಯುವ ಸಮಕಾಲೀನ ಬೆಳವಣಿಗೆಗಳ ಬಗ್ಗೆ ವ್ಯಾಪಕ ಚರ್ಚೆ, ಸಂವಾದ, ಪ್ರತಿಭಟನೆ ಹೋರಾಟಗಳು ದಿನನಿತ್ಯದ ಸಂಗತಿಗಳಾಗಿ ಬೆಳೆದು ಬಂದಿವೆ. ಭಾರತದಲ್ಲಿ ಅತೀ ಹೆಚ್ಚು ಪ್ರಜಾತಾಂತ್ರಿಕ ಚರ್ಚೆಗಳು ಸಂವಾದಗಳು ಜೆ ಎನ್ ಯು ವಿನಲ್ಲಿ ನಡೆಯುತ್ತವೆ. ಅಲ್ಲಿರುವಷ್ಟು ರಾಜಕೀಯ ಹಾಗೂ ಪ್ರಜಾತಾಂತ್ರಿಕ ವಾತಾವರಣ ಭಾರತದ ಇತರ ಯಾವ ವಿಶ್ವವಿದ್ಯಾಲಯಗಳಲ್ಲಿಯೂ ಇಲ್ಲವೆನ್ನಬಹುದು. ಹಾಗಾಗಿ ಅಲ್ಲಿ ವ್ಯಾಸಾಂಗ ಮಾಡಿದ ಹಲವರಲ್ಲಿ ಪ್ರಜ್ಞಾಮಟ್ಟ ಕೂಡ ಹೆಚ್ಚಿನದಾಗಿರುವುದು ಸಾಮಾನ್ಯ ಸಂಗತಿಯಾಗಿದೆ.

ವಿಶ್ವ ವಿದ್ಯಾಲಯ ಖಾಸಗೀಕರಣದ ಭಾಗವಾಗಿ ಮೋದಿ ಸರಕಾರ ಬಂದ ಮೇಲೆ ಜೆ ಎನ್ ಯುವನ್ನು ಪೂರ್ಣ ನಾಶ ಮಾಡುವ ಪ್ರಕ್ರಿಯೆಗಳು ಚುರುಕುಗೊಂಡವು. ಜೊತೆಗೆ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಗುಪ್ತ ಕಾರ್ಯ ಸೂಚಿಯೂ ಇತ್ತು. ವಸಾಹತು ಕಾಲದ ರಾಜ ದ್ರೋಹ ಕಾಯಿದೆಗಳನ್ನು ಜೆ ಎನ್ ಯು ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿ ಜೈಲಿಗೆ ತಳ್ಳುವ, ಸಂಘ ಪರಿವಾರದ ಅಂಗಗಳ ಮೂಲಕ ವಿಶ್ವ ವಿದ್ಯಾಲಯದ ಖ್ಯಾತಿಗೆ ಮಸಿ ಬಳಿಯುವ, ದುಷ್ಪ್ರಚಾರ ನಡೆಸುವ, ಆಡಳಿತಾಂಗಗಳಲ್ಲಿ ಕೋಮುವಾದಿಗಳನ್ನು, ಜಾತೀವಾದಿಗಳನ್ನು ತುರುಕುವ ಕಾರ್ಯಗಳು ಕೂಡ ಚುರುಕುಗೊಂಡವು. ಜೆ ಎನ್ ಯುವಿನ ಪ್ರಜಾತಾಂತ್ರಿಕ ವಾತಾವರಣವನ್ನು ನಾಶ ಮಾಡುವ ಕಾರ್ಯಗಳು ಹೆಚ್ಚಾದವು. ಕ್ಯಾಂಪಸ್ ನಲ್ಲಿ ಪೊಲೀಸ್ ಬಲಗಳನ್ನು ಹೆಚ್ಚಿಸಲಾಯಿತು. ಜೆ ಎನ್ ಯು ಆಡಳಿತದಿಂದ ವಿದ್ಯಾರ್ಥಿ ಚಟುವಟಿಕೆಗಳ ಮೇಲೆ ನಿರ್ಬಂಧಗಳು, ವಸ್ತ್ರ ಸಂಹಿತೆಗಳನ್ನು ಹೇರುವ ಕಾರ್ಯಗಳು ಅಧಿಕವಾದವು. ಜೊತೆ ಜೊತೆಯಲ್ಲಿ ಹಾಸ್ಟೆಲ್ ಮೊದಲಾದ ಸೌಲಭ್ಯಗಳನ್ನು ತುಟ್ಟಿ ಮಾಡಲಾರಂಭಿಸಿದರು. ಅವೆಲ್ಲಾ ಪ್ರಧಾನವಾಗಿ ದೇಶದ ವಿವಿಧ ಭಾಗಗಳ ಬಡ ಹಾಗೂ ತಳಪಾಯದ ಸಮುದಾಯಗಳಿಗೆ ಉನ್ನತ ಶಿಕ್ಷಣದ ತಾಣವಾಗಿದ್ದ ಒಂದು ವಿಶ್ವ ವಿದ್ಯಾಲಯ ಮಾದರಿಯನ್ನೇ ಇಲ್ಲವಾಗಿಸುವ ಪ್ರಯತ್ನಗಳಾಗಿದ್ದವು. ಹಣವುಳ್ಳವರಿಗೆ, ಶ್ರೀಮಂತರಿಗೆ ಮಾತ್ರ ಶಿಕ್ಷಣ ಎನ್ನುವಂತಹ ಮಟ್ಟಕ್ಕೆ ಜೆ ಎನ್ ಯುವನ್ನು ಇಳಿಸುವ ಕಾರ್ಯಗಳು ಎಲ್ಲಾ ರೀತಿಗಳಿಂದಲೂ ಚುರುಕಾಯಿತು.

ಜೆ ಎನ್ ಯು ವಿನ ಮೇಲಿನ ಧಾಳಿಯನ್ನು ನಾವು ಕೇವಲ ಆ ಒಂದು ವಿಶ್ವ ವಿದ್ಯಾಲಯದ ಮೇಲಿನ ಧಾಳಿಯನ್ನಾಗಿ ಮಾತ್ರ ಗ್ರಹಿಸಲು ಹೋದರೆ ಸರಿಯಾಗುವುದಿಲ್ಲ. ಅದು ನಮ್ಮ ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆಯೇ ನಡೆಯುತ್ತಿರುವ ನೇರ ಧಾಳಿಗಳೆಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂದು ದೇಶದ ಎಲ್ಲಾ ರಂಗಗಳನ್ನು ಕಾರ್ಪೋರೇಟುಗಳಿಗೆ ಹಸ್ತಾಂತರಿಸುವ ಕಾರ್ಯಗಳು ಹಿಂದೆಂದೂ ಇಲ್ಲದ ವೇಗವನ್ನು ಪಡೆದಿರುವ ಸಂಧರ್ಭವಾಗಿದೆ. ಅದರ ಜೊತೆಯಲ್ಲೇ ದೇಶದಲ್ಲಿ ಆರ್ಥಿಕ ರಾಜಕೀಯ ಬಿಕ್ಕಟ್ಟು ಕೂಡ ಹಿಂದೆಂದಿಗಿಂತ ತೀವ್ರವಾಗಿದೆ.

ಇದೀಗ ಭಾರತ್ ಪೆಟ್ರೋಲಿಯಂ, ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಸೇರಿದಂತೆ ಸುಮಾರು 28 ಕ್ಕೂ ಹೆಚ್ಚು ಸಾರ್ವಜನಿಕ ರಂಗದ ಲಾಭ ಮಾಡುತ್ತಿರುವ ಉದ್ದಿಮೆಗಳನ್ನು ಕಾರ್ಪೋರೇಟುಗಳ ಹಿಡಿತಕ್ಕೆ ಒಪ್ಪಿಸುವ ತೀರ್ಮಾನ ತೆಗೆದುಕೊಂಡಿದೆ ಮೋದಿ ಸರ್ಕಾರ. ಈ ತೀರ್ಮಾನಗಳು ಮುಂದಿನ ದಿನಗಳಲ್ಲಿ ಉದ್ಯೋಗ ಹಾಗೂ ಅಲ್ಪ ಮಟ್ಟದಲ್ಲಾದರೂ ಇರುವ ಮೀಸಲಾತಿಯಂತಹ ಸಾಮಾಜಿಕ ನ್ಯಾಯಗಳಲ್ಲಿ ಭಾರಿ ಹೊಡೆತಗಳಿಗೆ ಕಾರಣವಾಗುವುದರಲ್ಲಿ ಅನುಮಾನ ಬೇಕಿಲ್ಲ.

ಇಂತಹುದೇ ಕ್ರಮಗಳು ವಿಶ್ವವಿದ್ಯಾಲಯಗಳ ವಿಚಾರದಲ್ಲೂ ಚಾಲ್ತಿಯಲ್ಲಿವೆ. ಅಲ್ಲಿ ನೇರವಾಗಿ ಇಡೀ ವಿಶ್ವ ವಿದ್ಯಾಲಯಗಳನ್ನೇ ಕಾರ್ಪೋರೇಟುಗಳಿಗೆ ವಹಿಸಿಕೊಡುವ ಕಾರ್ಯ ಈಗ ಆರಂಭವಾಗದಿದ್ದರೂ ಬೇರೆ ರೀತಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ವಿದಾನಗಳ ಮೂಲಕ ಆ ಕಾರ್ಯ ಚಾಲ್ತಿಯಲ್ಲಿದೆ. ಫೀ ಹೆಚ್ಚಳ, ಯುಜಿಸಿ ಅನುದಾನ ಸೌಲಭ್ಯಗಳ ಕಡಿತ ಇಲ್ಲವೇ ನಿರಾಕರಣೆ, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಹಕ್ಕುಗಳ ದಮನ, ಹೊಸಹೊಸ ದಮನಕಾರಿ ನಿಯಮಗಳ ಜಾರಿ, ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿ ಚುನಾವಣೆಗಳು ನಡೆಯದಂತೆ ಮಾಡುವ ಕ್ರಮಗಳು,…. ಅದೇ ವೇಳೆಯಲ್ಲೇ ಜಿಯೋ ವಿಶ್ವ ವಿದ್ಯಾಲಯಗಳಂತಹುವುಗಳಿಗೆ ಬೇಕಾಬಿಟ್ಟಿ ಅನುದಾನ ಹಾಗೂ ಮನ್ನಣೆ ನೀಡುತ್ತಿರುವುದು ಕೆಲವು ಉದಾಹರಣೆಗಳಾಗಿವೆ.

ಇದೇ ಸಂಧರ್ಭದಲ್ಲೇ 2.18 ಟ್ರಿಲಿಯನ್  ರೂಗಳಷ್ಟು ಶಿಕ್ಷಣ, ಸ್ವಚ್ಚತೆ, ಮೊದಲಾದ ಕಾರ್ಯಗಳಿಗೆಂದೇ ವಸೂಲಿ ಮಾಡಿದ ತೆರಿಗೆಯ ಹಣವನ್ನೂ ಕೂಡ ಆ ಉದ್ದೇಶಗಳಿಗಾಗಿ ಉಪಯೋಗಿಸಿಯೇ ಇಲ್ಲವೆಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿ ಎ ಜಿ) ವರದಿ ಹೇಳಿದೆ. ಉನ್ನತ ಶಿಕ್ಷಣಕ್ಕಾಗಿ ತೆಗೆದಿರಿಸಲ್ಪಟ್ಟಿದ್ದ ಸುಮಾರು 940 ಬಿಲಿಯನ್ ರೂಪಾಯಿಗಳಷ್ಟು  ಹಣವನ್ನು ಆ ಉದ್ದೇಶಕ್ಕೆ ಬಳಸದೇ ಮೂರ್ತಿ ಸ್ಥಾಪನೆ, ಕಾರ್ಪೋರೇಟುಗಳ ಸಾಲ ಮನ್ನಾ ಮೊದಲಾದವುಗಳಿಗೆ ಹರಿಸಲಾಗುತ್ತಿದೆ.

ಇದನ್ನೆಲ್ಲಾ ಹೇಳಿದ್ದರ ಉದ್ದೇಶವೇನೆಂದರೆ, ಎಷ್ಟೊಂದು ವ್ಯವಸ್ಥಿತವಾಗಿ ಜನರ ತೆರಿಗೆಯ ಹಣವನ್ನು ಹತ್ತು ಹಲವು ಹೆಸರುಗಳಲ್ಲಿ ಕಾರ್ಪೋರೇಟುಗಳ ತಿಜೋರಿಗೆ ಸೇರಿಸುವ ಕೆಲಸಗಳನ್ನು ಎಲ್ಲಾ ಸರ್ಕಾರಗಳು ಮಾಡಿಕೊಂಡು ಬಂದಿವೆ. ಅದೇ ವೇಳೆಯಲ್ಲಿ ಜೆ ಎನ್ ಯು ನಡೆಸಲು ಬೇಕಾಗುವ ಸುಮಾರು 450 ಕೋಟಿ ರೂಪಾಯಿ ಒದಗಿಸಲು ಸಾಧ್ಯವಿಲ್ಲ ಎನ್ನುವ ಸರಕಾರದ ವರಸೆಗಳನ್ನು  ಅರ್ಥಮಾಡಿಕೊಳ್ಳಲು. ಜಾಗತೀಕರಣದ ಪ್ರಕ್ರಿಯೆಗಳಿಗೆ ದೇಶವನ್ನು ಮುಕ್ತಗೊಳಿಸಿದ ನಂತರ ಇವೆಲ್ಲಾ ಬಹಳ ವೇಗದಿಂದ ನಡೆಯಲಾರಂಭಿಸಿತೆನ್ನಬಹುದು. ಜಾಗತೀಕರಣದ ಮೂಲ ಮಂತ್ರವೇ ಭಾರಿ ಕಾರ್ಪೋರೇಟುಗಳ ಕೈಗೆ ಎಲ್ಲವನ್ನೂ ನೀಡಬೇಕೆನ್ನುವುದೇ ಆಗಿದೆ.  ಸರ್ಕಾರದ ಪಾತ್ರ ಜನರ ಕ್ಷೇಮಾಭ್ಯುದಯ ಹಾಗೂ ಮೂಲ ಸವಲತ್ತುಗಳನ್ನು ಒದಗಿಸುವುದರಲ್ಲಿ  ಏನೂ ಇರಬಾರದು. ಜನರು ತಮ್ಮ ಹಣಕಾಸಿನಿಂದಲೇ ಎಲ್ಲವನ್ನೂ ಪಡೆಯಬೇಕು. ಸಹಾಯಧನ , ಹಾಸ್ಟೆಲ್ ವ್ಯವಸ್ಥೆ, ವಿದ್ಯಾರ್ಥಿ ವೇತನ, ಕೃಷಿ ಸಹಾಯ ಧನ ಇತ್ಯಾದಿ ಯಾವುದನ್ನೂ ಸರಕಾರ ಮಾಡಕೂಡದು. ಎಲ್ಲವನ್ನೂ ಜನರು ಮಾರುಕಟ್ಟೆಯಲ್ಲೇ ಕೊಂಡುಕೊಳ್ಳುವಂತೆ ಮಾಡಬೇಕು….ಹೀಗೆ ಸಾಗುತ್ತದೆ ಜಾಗತೀಕರಣದ ವರಸೆ.

ಅದರ ಭಾಗವಾಗಿ ಹಂತ ಹಂತವಾಗಿ ಸಾರ್ವಜನಿಕ ರಂಗಗಳನ್ನು ಕಾರ್ಪೋರೇಟುಗಳಿಗೆ ಮುಕ್ತಗೊಳಿಸುತ್ತಾ ಈಗ ರಕ್ಷಣೆ, ವಿಮೆ, ಶಿಕ್ಷಣ, ರೇಲ್ವೆ, ತೈಲ, ಕಲ್ಲಿದ್ದಲು, ವಿದ್ಯುತ್, ಬ್ಯಾಂಕಿಂಗ್, ಮಾಧ್ಯಮ, ವಿಮಾನಯಾನ ಮೊದಲಾದ ರಂಗಗಳನ್ನು ಸಂಪೂರ್ಣವಾಗಿ ಭಾರಿ ಕಾರ್ಪೋರೇಟುಗಳಿಗೆ ಒಪ್ಪಿಸಲಾಗುತ್ತಿದೆ.  ಅದಕ್ಕೆ ಹಲವು ಹೆಸರುಗಳನ್ನು ನೀಡಲಾಗುತ್ತಿದೆ.
ಜೆ ಎನ್ ಯು ಮೇಳಿನ ಧಾಳಿ ಐಐಟಿ ಮದ್ರಾಸ್, ರೋಹಿತ್ ವೇಮುಲ, ಜಾದವ್ ಪುರ್ ವಿವಿ ಪ್ರಕರಣ, ದೆಹಲಿ ವಿವಿ ಪ್ರಕರಣ  ಹೀಗೆ ಎಲ್ಲವೂ ಈ ದೇಶದ ಜನಸಾಮಾನ್ಯರ ಶಿಕ್ಷಣದ ಹಕ್ಕಿನ ಮೇಲೆಯೇ ನಡೆಯುತ್ತಿರುವ ಭಾರಿ ಕಾರ್ಪೋರೇಟ್ ಪ್ರಾಯೋಜಿತ ಸರ್ಕಾರಿ ಧಾಳಿಗಳಾಗಿವೆ. ಅದನ್ನು ಪ್ರತಿರೋಧಿಸಿ ತಡೆಗಟ್ಟಬೇಕಾದ ಕರ್ತವ್ಯ  ಎಲ್ಲಾ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರದಾಗಿದೆ.                                                        

24/11/2019                                                 -ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು          
ಮಿಂಚಂಚೆ: nandakumarnandana67@gmail.com

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...