Skip to main content

ಆರ್ ಸಿ ಇ ಪಿ ಒಪ್ಪಂದ -RCEP, china-partnership


ಆರ್ ಸಿ ಇ ಪಿ ಒಪ್ಪಂದ ವ್ಯಾಪಾರಿ ಪಾಲುದಾರಿಕೆಯೋ !?
ಭಾರತದ ಅಳಿದುಳಿದ ಆರ್ಥಿಕತೆಯನ್ನು ಚೀನದಂತಹ ಜಾಗತಿಕ ಶಕ್ತಿಗಳಿಗೆ ಒಪ್ಪಿಸುವ ಹುನ್ನಾರವೋ !?

ಚೀನ ಇಂದು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಸುಮಾರು 140 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ದೇಶ ಜಾಗತಿಕವಾಗಿ  ವಿಸ್ತೀರ್ಣದಲ್ಲಿ ಮೂರನೇ ಅತೀ ದೊಡ್ಡ ದೇಶವಾಗಿದೆ. 2018ರ ಅಂಕಿ ಅಂಶದ ಪ್ರಕಾರ ಚೀನ 13.28 ಟ್ರಿಲಿಯನ್ ಅಮೇರಿಕನ್ ಡಾಲರ್ ಗಳ  ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ. ಕೊಳ್ಳುವ ಶಕ್ತಿಯ ಮಾನದಂಡದ ಪ್ರಕಾರ ಚೀನ ಜಗತ್ತಿನ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಜಗತ್ತಿನ ಅತೀ ದೊಡ್ಡ ವಸ್ತು ಹಾಗೂ ಸೇವೆಗಳ ಉತ್ಪಾದನೆ ಮತ್ತು ರಫ್ತುದಾರ ದೇಶವಾಗಿದ್ದರೆ, ಜಗತ್ತಿನ ಎರಡನೇ ಅತೀ ದೊಡ್ಡ ಕಚ್ಚಾ ವಸ್ತುಗಳು ಆಮದು ಮಾಡಿಕೊಳ್ಳುವ ದೇಶ. ಜಾಗತಿಕವಾಗಿ ಅತೀ ದೊಡ್ಡ ಸೈನಿಕ ಶಕ್ತಿಯಿರುವ ಚೀನ, ಎರಡನೇ ಅತೀ ದೊಡ್ಡ ರಕ್ಷಣಾ ಆಯವ್ಯಯವನ್ನು ಹೊಂದಿರುವ ದೇಶವಾಗಿದೆ. ಅಣ್ವಸ್ತ್ರಗಳನ್ನು ಹೊಂದಿರುವ ಚೀನಾ ಜಾಗತಿಕ ಬೆಳವಣಿಗೆಗಳ ಮೇಲೆ ನಿರ್ಣಾಯಕ ಪ್ರಭಾವ ಬೀರುವ ದೇಶವಾಗಿದೆ.

ಮೊಬೈಲುಗಳು , ಗಣಕ ಯಂತ್ರಗಳು ಸೇರಿದಂತೆ ವಿದ್ಯುನ್ಮಾನ  ಕ್ಷೇತ್ರದಿಂದ ಹಿಡಿದು ಕ್ಷಿಪಣಿ ತಂತ್ರಜ್ಞಾನದವರೆಗೆ ಮಕ್ಕಳ ಗೊಂಬೆಗಳಿಂಧ ಹಿಡಿದು ಕಬ್ಬಿಣ ಸಿಮೆಂಟು, ಆಟೋ ಮೊಬೈಲುಗಳವರೆಗೆ ಅಕ್ಕಿ, ಗೋದಿ, ಮೊದಲಾದ ಕೃಷಿ ಉತ್ಪನ್ನಗಳವರೆಗೆ ಚೀನ ಇಂದು ಜಗತ್ತಿನ ದೊಡ್ಡ ಉತ್ಪಾದಕ ರಾಷ್ಟವಾಗಿದೆ ಚೀನದ ವ್ಯಾಪಾರ ವಹಿವಾಟು ಅಮೇರಿಕಾದೊಂದಿಗೆ ಶೇ17 ರಷ್ಟು ಮಿಗತೆಯನ್ನು ಹೊಂದಿದೆ. ಅಂದರೆ ಚೀನಾದಿಂದ ಅಮೇರಿಕಕ್ಕೆ ರಫ್ತಾಗುವ ಪ್ರಮಾಣ ಹೆಚ್ಚಿದ್ದು, ಅಮೇರಿಕದಿಂದ ಚೀನಕ್ಕೆ ಆಮದಾಗುವ ಪ್ರಮಾಣವು ಕಡಿಮೆಯಿದೆ. ಅಮೇರಿಕಾ ಚೀನದೊಡನೆ ವ್ಯಾಪಾರಿ ಯುದ್ಧದಲ್ಲಿ ತೊಡಗಿದ ಮೇಲೂ ಚೀನ ಅಮೇರಿಕದೊಂದಿಗೆ ವ್ಯಾಪಾರದಲ್ಲಿ 351.76 ಬಿಲಿಯನ್ ಅಮೇರಿಕನ್ ಡಾಲರುಗಳಷ್ಟು ಮಿಗತೆಯನ್ನು ಹೊಂದಿದೆ.

ಅಮೇರಿಕದಲ್ಲಿ ಕಾರ್ಪೋರೇಟ್ ಜಗತ್ತಿನ ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಚೀನದೊಂದಿಗೆ ವ್ಯಾಪಾರಿ ಸಮರ ತೀವ್ರಗೊಳಿಸಲಾಗಿದೆ. ಆದರೆ ಅಮೇರಿಕದ ಆರ್ಥಿಕತೆಯಲ್ಲಿ ಚೀನದ ಪಾಲು ಗಣನೀಯ ಪ್ರಮಾಣದಲ್ಲಿರುವುದರಿಂದಾಗಿ ಅದು ಸದ್ಯಕ್ಕೆ ದೊಡ್ಡ ಪರಿಣಾಮವನ್ನು ಬೀರಲು ಸಾಧ್ಯವಾಗಿಲ್ಲ. ಅದರಿಂದ ಡೋನಾಲ್ಡ್ ಟ್ರಂಪ್ ಗೆ ಒಂದು ಮಟ್ಟದ ರಾಜಕೀಯ ಲಾಭ ದೊರೆತಿರಬಹುದು. ಸಣ್ಣ ಪ್ರಮಾಣದಲ್ಲಿ ಚೀನಕ್ಕೆ ಆರ್ಥಿಕ ನಷ್ಟವಾಗಿರಬಹುದು. ಜಾಗತಿಕ ಆರ್ಥಿಕ ಬಿಕ್ಕಟ್ಟುಗಳ ಮದ್ಯೆಯೂ ಚೀನ ಸಾಪೇಕ್ಷ ಸ್ಥಿರತೆಯನ್ನು ಕಾಪಾಡಿಕೊಂಡು ಬರುತ್ತಿರುವ ದೇಶ. ಅದರೆ ಜಿಡಿಪಿ ಬೆಳವಣಿಗೆ ದರ 1978ರಿಂದಲೂ ಶೇ 6ಕ್ಕಿಂತಲೂ ಕಡಿಮೆಯಾಗಲಿಲ್ಲ. ಚೀನ ಜಾಗತೀಕರಣಕ್ಕೆ ತೆರೆದುಕೊಂಡಿದ್ದರೂ ಅದು ತನ್ನ ದೇಶದ ಉದ್ದಿಮೆ, ಕೃಷಿ ವ್ಯವಹಾರಗಳನ್ನು ರಕ್ಷಣಾತ್ಮಕವಾಗಿಯೇ ಇರಿಸಿಕೊಂಡಿದೆ.

ಚೀನದ ಈ ಸಾಧನೆಗೆ ಹಿಂದಿನ ಸಮಾಜವಾದಿ ವ್ಯವಸ್ಥೆಯ ನಿರ್ಮಾಣ ಸಂಧರ್ಭದ ದೇಶ ಕಟ್ಟುವ ಜನರ ಸ್ಪೂರ್ತಿ ಮುಖ್ಯ ಕಾರಣವೆನ್ನಬಹುದು. ಸಮಾಜವಾದಿ ವ್ಯವಸ್ಥೆಯ ನಿರ್ಮಾಣವೆಂದಾಗ ಅದರಲ್ಲಿ ಇಡೀ ಜನಸಮೂಹವನ್ನು ಒಳಗೊಳಿಸುತ್ತಾ , ಒಳಗೊಂಡು ಸಾಧಿಸಬೇಕಾಗುತ್ತದೆ. ದೇಶ ಪ್ರೇಮ, ಮನುಷ್ಯ ಪ್ರೇಮಗಳೇ ಮೇಲುಗೈಯಲ್ಲಿರಬೇಕಾಗುತ್ತದೆ. ಚೀನ ತನ್ನ ದೇಶ ಕಟ್ಟುವ ಕೆಲಸವನ್ನು ಪ್ರಧಾನವಾಗಿ ಬಾಹ್ಯ ನೆರವಿಲ್ಲದೇ ಚೀನಾದ ಜನಸಾಮಾನ್ಯರಿಂದಲೇ ಮಾಡಿಕೊಂಡಿತು. ಆದರೆ 1972ರಲ್ಲಿ ಮಾವೋ ಜೆಡಾಂಗ್ ಮೃತರಾದ ನಂತರ ಚೀನ ಕಮ್ಯೂನಿಷ್ಟ್ ಪಕ್ಷ ಡೆಂಗ್ ಕ್ಸಿಯೋಪಿಂಗ್ ರಂತಹ ಸಮಾಜವಾದಿ ಮುಸುಕಿನ ಬಂಡವಾಳಶಾಹಿ ನಾಯಕತ್ವದ ಹಿಡಿತಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲಿಂದ ಚೀನ ಕಮ್ಯೂನಿಸ್ಟ್ ಪಕ್ಷದ ನಾಯಕರುಗಳೇ ದೊಡ್ಡ ಬಂಡವಾಳಶಾಹಿಗಳಾಗಿ ಮಾರ್ಪಡಲಾರಂಭಿಸುತ್ತಾರೆ. ಚೀನ ಉದ್ದಿಮೆಗಳಲ್ಲಿ ಅಲ್ಲಿನ ಕಮ್ಯೂನಿಸ್ಟ್ ಪಕ್ಷದ ನಾಯಕರ ಹಿಡಿತವಿದೆ. ಅವರು ಅಧಿಕಾರಿಗಳೋ, ನಿರ್ದೇಶಕರುಗಳೋ ಆಗಿರುತ್ತಾರೆ.

ಚೀನ ಈಗ ಸಮಾಜವಾದಿ ರಾಷ್ಟ್ರವೆಂದು ಹೇಳಿಕೊಳ್ಳುತ್ತದೆ. ಆದರೆ ಅದು ಮಾವೋ ಜೆಡಾಂಗ್ ನಿಧನದ ನಂತರ ಸಮಾಜವಾದಿ ವ್ಯವಸ್ಥೆಯ ನಿರ್ಮಾಣಕ್ಕೆ ತಿಲಾಂಜಲಿ ಕೊಟ್ಟು ಸಮಾಜವಾದಿ ಹೆಸರಿನಲ್ಲಿ ಬಂಡವಾಳವಾದವನ್ನು ಸ್ಥಾಪಿಸುತ್ತಾ ಬಂದ ದೇಶವಾಗಿದೆ. ಈಗ ಜಾಗತಿಕವಾಗಿಯೂ ಅದರ ಆರ್ಥಿಕ ಹಿಡಿತ ಹೆಚ್ಚಿದೆ. ದಕ್ಷಿಣ ಏಷ್ಯಾದ ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ದೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ವಿಯಟ್ನಾಮ್, ಮ್ಯಾನ್ಮಾರ್ ಗಳಂತಹ ರಾಷ್ಟ್ರಗಳ ಮೇಲೆ ಚೀನಾದ ಹಿಡಿತ ನಿರ್ಣಾಯಕವಾಗಿದೆ. ವೆನೆಜುಯೇಲಾ, ಕ್ಯೂಬಾ, ಉತ್ತರ ಕೊರಿಯಾಗಳಂತಹ ರಾಷ್ಟ್ರಗಳ ಮೇಲೂ ಚೀನದ ಹಿಡಿತ ಗಣನೀಯವಾಗಿದೆ. ಅಮೇರಿಕ ಹಾಗೂ ಐರೋಪ್ಯ ರಾಷ್ಟ್ರಗಳೊಂದಿಗೆ ಜಾಗತಿಕ ಮಾರುಕಟ್ಟೆಗಾಗಿನ ಪೈಪೋಟಿಯಲ್ಲಿ ಚೀನ  ಪ್ರಸ್ತುತ ಮೇಲುಗೈ ಪಡೆದಿದೆ ಎನ್ನಬಹುದು.

ಅಮೇರಿಕ ಸಂಯುಕ್ತ ಸಂಸ್ಥಾನದ ನೇತೃತ್ವದಲ್ಲಿ ಬ್ರೆಟ್ಟನ್ ವುಡ್ ಸಂಸ್ಥೆಗಳೆಂದು ಹೆಸರಾದ ಡಂಕೆಲ್, ಗ್ಯಾಟ್, ನಂತರ ವಿಶ್ವ ವ್ಯಾಪಾರಿ ಸಂಘಟನೆಗಳ ಮೂಲಕ ಅಮೇರಿಕ ಮತ್ತು ಐರೋಪ್ಯ ರಾಷ್ಟ್ರಗಳು ಜಾಗತಿಕವಾಗಿ ಜನಸಾಮಾನ್ಯರನ್ನು ಹಾಗೂ ಜಾಗತಿಕ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಾ ಬಂದಿದ್ದರೂ ಆರ್ಥಿಕ ಬಿಕ್ಕಟ್ಟು ಹಾಗೂ ಆರ್ಥಿಕ ಕುಸಿತಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಈಗಲೂ ಈ ಎಲ್ಲಾ ರಾಷ್ಟ್ರಗಳ ಆರ್ಥಿಕತೆಗಳು ಅಗತ್ಯಕ್ಕೆ ತಕ್ಕಂತಹ ಚೇತರಿಕೆ ಕಾಣಲಾರದೇ ಹೋಗಿವೆ. ಈ ಎಲ್ಲಾ ರಾಷ್ಟ್ರಗಳು ವ್ಯಾಪಕ ನಿರುದ್ಯೋಗ, ಬಡತನ, ಸಾಮಾಜಿಕ ಕ್ಷೋಭೆಗಳಿಂದ ತುಂಬತೊಡಗಿವೆ. ಅಮೇರಿಕ,‍ ಫ್ರಾನ್ಸ್, ಯುಕೆ, ಜರ್ಮನಿ ಮೊದಲಾದೆಡೆ ನಡೆದ ವಾಲ್ ಸ್ಟ್ರೀಟ್ ಆಕ್ರಮಿಸಿ, ಹಳದಿ ನಿಲುವಂಗಿ ಇತ್ಯಾದಿ ಭಾರಿ ಹಿಂಸಾಪೂರಿತ ಜನಾಂದೋಲನಗಳನ್ನು ನಾವು ಗಮನಿಸಬಹುದು. ಕೆಲವೇ ಕಾರ್ಪೋರೇಟುಗಳು ಜಾಗತಿಕ ಸಂಪತ್ತಿನ ಒಡೆಯರಾಗಿ ಬಿಟ್ಟಿರುವುದರಿಂದಾಗಿ ಈ ರಾಷ್ಟ್ರಗಳು ಮರುಹೂಡಿಕೆ, ಉತ್ಪಾದನೆ ಹಾಗೂ ಲಾಭಗಳಿಕೆಗೆ ಅವಕಾಶವೇ ಇಲ್ಲದಂತಹ ಸ್ಥಿತಿಯಿದೆ. 

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ವಿಶ್ವಸಂಸ್ಥೆಯೂ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಅಮೇರಿಕದ ಪಾಲ್ಗೊಳ್ಳುವಿಕೆ ನಗಣ್ಯವೆನ್ನುವ ಮಟ್ಟಕ್ಕೆ ಇಳಿದಿದೆ. ವಿಶ್ವಸಂಸ್ಥೆಗೆ ಅಮೇರಿಕ ತನ್ನ ನಿಗದಿತ ದೇಣಿಗೆಯನ್ನು ಕೂಡ ಕಡಿತಗೊಳಿಸಿದ್ದೂ ಅಲ್ಲದೇ ದೊಡ್ಡ ಮೊತ್ತ ಬಾಕಿ ಉಳಿಸಿದೆ. ವಿಶ್ವಸಂಸ್ಥೆ ತನ್ನ ನೌಕರರಿಗೆ ಸಂಬಳ ನೀಡಲಾಗದ ಸ್ಥಿತಿಗೆ ತಲುಪಿದೆ ಎಂದು ಅದರ ಪ್ರಧಾನ ಕಾರ್ಯದರ್ಶಿಯೇ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಅಮೇರಿಕ ತಾನೇ ಪ್ರಧಾನವಾಗಿ ರೂಪಿಸಿದ ಹಲವು ಜಾಗತಿಕ ಒಪ್ಪಂದಗಳು ಹಾಗೂ ಸಂಸ್ಥೆಗಳಿಂದ ಹೊರಬರತೊಡಗಿದೆ. ಇಲ್ಲವೇ ಅಂತಹ ಒಪ್ಪಂದಗಳನ್ನು ಉಲ್ಲಂಘಿಸತೊಡಗಿದೆ. ತಾನೇ ಮುಕ್ತ ವ್ಯಾಪಾರ ವಲಯ ಒಪ್ಪಂದಗಳಿಂದಲೂ ಹೊರಬರತೊಡಗಿದೆ.

  ಅಮೇರಿಕ ಸಂಯುಕ್ತ ಸಂಸ್ಥಾನ ಸೇರಿದಂತೆ ಕೆನಡಾ, ಚಿಲಿ, ಪೆರು, ಮೆಕ್ಸಿಕೋ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲ್ಯಾಂಡ್, ಬ್ರೂನೆ, ಸಿಂಗಾಪುರ್, ಮಲೇಷ್ಯಾ, ವಿಯಟ್ನಾಮ್  ಒಟ್ಟು12 ರಾಷ್ಟ್ರಗಳನ್ನು ಒಳಗೊಂಡಿದ್ದ ಟಿಪಿಪಿ ( Trans-Pacific Partnership ) ಎಂಬ ವ್ಯಾಪಾರಿ ಕೂಟ ಅಮೇರಿಕ ನೇತೃತ್ವದಲ್ಲಿ 2015ರ ಸಮಯದಲ್ಲಿ ರೂಪುಗಳ್ಳತೊಡಗಿತ್ತು. ಇದೇ ವೇಳೆಯಲ್ಲೇ ಚೀನ ನೇತೃತ್ವದಲ್ಲಿ 16 ದೇಶಗಳ ಆರ್ ಸಿ ಇ ಪಿ ( Regional Comprehensive Economic Partenership ) ಎಂಬ ಹೆಸರಿನ ಮುಕ್ತ ವ್ಯಾಪಾರಿ ಪಾಲುದಾರಿಕಾ ವಲಯವೂ ರೂಪುಗೊಳ್ಳತೊಡಗಿತ್ತು. ಇದರಲ್ಲಿ ಚೀನ ಜನತಾ ಗಣರಾಜ್ಯ, ಭಾರತ ಗಣರಾಜ್ಯ, ಕೊರಿಯ ಗಣರಾಜ್ಯ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲ್ಯಾಂಡ್, ಲಾವೋ ಜನತೆಯ ಗಣರಾಜ್ಯ, ಮ್ಯಾನ್ಮಾರ್, ಇಂಡೋನೇಷಿಯಾ, ಫಿಲಿಫೈನ್ಸ್, ಥಾಯ್ ಲ್ಯಾಂಡ್, ಕಾಂಬೋಡಿಯಾ, ಬ್ರೂನೆ, ಮಲೇಷಿಯಾ, ಸಿಂಗಪುರ್, ವಿಯೆಟ್ನಾಮ್ ಗಳು ಸೇರಿದ್ದವು.

2017 ಜನವರಿಯಲ್ಲಿ ಅಮೇರಿಕ ತಾನು ರೂಪಿಸಿದ ಟಿ ಪಿ ಪಿ ಎಂಬ ವ್ಯಾಪಾರಿ ಪಾಲುದಾರಿಕಾ ವಲಯದಿಂದ  ಹೊರಹೋಗುವುದಾಗಿ ಘೋಷಿಸಿತು. ಅಲ್ಲಿಗೆ ಆ ವ್ಯಾಪಾರಿ ಒಪ್ಪಂದ ನೆನಗುದಿಗೆ ಬಿದ್ದುಹೋಗಿದೆ. ವಾಸ್ತವದಲ್ಲಿ ಈ ಎರಡೂ ವ್ಯಾಪಾರಿ ಪಾಲುದಾರಿಕಾ ವಲಯಗಳು ಎರಡು ಆರ್ಥಿಕ ಶಕ್ತಿಗಳ ನಡುವಿನ ಜಾಗತಿಕ ಮಾರುಕಟ್ಟೆ ಹಂಚಿಕೊಳ್ಳುವ ಹಿತಾಸಕ್ತಿಗಳ ಪೈಪೋಟಿಯಲ್ಲದೇ ಬೇರೇನೂ ಆಗಿರಲಿಲ್ಲ.

ಇಂತಹ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸಾಪೇಕ್ಷವಾಗಿ ಆರ್ಥಿಕ ಸ್ಥಿರತೆ ಇರುವ, ಜಾಗತಿಕವಾಗಿ ಅತೀ ದೊಡ್ಡ ವ್ಯಾಪಾರ ಮಿಗತೆಯ ದೇಶವಾಗಿರುವ ಚೀನ ತನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಲು ತೊಡಗಿದೆ. ಅದರ ಭಾಗವಾಗಿ  ಚೀನದಿಂದ ಯೂರೋಪಿನವರೆಗೆ ಭೂ ಹಾಗೂ ಸಮುದ್ರ ಸಾರಿಗೆಗಳ ಬೃಹತ್ ಜಾಗತಿಕ ಸಂಪರ್ಕ ಜಾಲಗಳನ್ನು ನಿರ್ಮಿಸತೊಡಗಿದೆ. ಅದನ್ನು ಒನ್ ಬೆಲ್ಟ್ ಒನ್ ರೋಡ್, ( one belt one one road) ಜಿಯೋ ಎಕನಾಮಿಕ್ ಸಿಲ್ಕ್ ರೋಡ್ (geo economic silk road) ಮಾರಿ ಟೈಮ್ ಸಿಲ್ಕ್ ರೂಟ್ ( maritime silk route) ಎಂಬ ಹೆಸರುಗಳೊಂದಿಗೆ ಗುರ್ತಿಸಲಾಗುತ್ತಿದೆ.

ಚೀನಾ ಈಗ ಆಕ್ರಮಣಕಾರಿ ಹೆಜ್ಜೆಗಳನ್ನು ಇಡತೊಡಗಿದೆ. ಆರ್ ಸಿ ಇ ಪಿ ವ್ಯಾಪಾರಿ ಪಾಲುದಾರಿಕಾ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿದೆ. ಅದರಂತೆ ಮೋದಿ ನೇತೃತ್ವದ ಭಾರತದ ಕೇಂದ್ರ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದೆ. ಈ ಒಪ್ಪಂದದಿಂದ ಗರಿಷ್ಠವಾಗಿ ಚೀನಕ್ಕೆ ಲಾಭದಾಯಕವಾಗುತ್ತದೆಯೇ ಹೊರತು ಭಾರತಕ್ಕಲ್ಲ ಎನ್ನುವುದನ್ನು ಸರಕಾರ ಜಾಣತನದಿಂದ ಮರೆಮಾಚುತ್ತಿದೆ. ಭಾರತಕ್ಕೆ ಇದರಿಂದ ಭಾರಿ ಲಾಭವಾಗುತ್ತದೆ, ಚೀನದೊಂದಿಗೆ ಇರುವ ವ್ಯಾಪಾರಿ ಕೊರತೆ ಯನ್ನು ಇದರಿಂದ ಸರಿಪಡಿಸಬಹುದು ಎಂದೆಲ್ಲಾ ಬೊಗಳೆ ಬಿಡತೊಡಗಿದೆ. ಈ ಒಪ್ಪಂದದ ಪ್ರಕಾರ ಇದರ ಸದಸ್ಯ ರಾಷ್ಟ್ರಗಳ ನಡುವೆ ಸುಂಕರಹಿತ ಇಲ್ಲವೇ ಏಕರೀತಿಯ ಸುಂಕದ ಆಮದು ಹಾಗೂ ರಫ್ತುಗಳಿರುತ್ತವೆ. ಮೇಲ್ನೋಟಕ್ಕೇ ಅದು ಒಳ್ಳೆಯದಲ್ಲವೇ ಎನಿಸಬಹುದು. ಆದರೆ ಸದಸ್ಯ ರಾಷ್ಟ್ರಗಳಲ್ಲಿ ಚೀನಾ ಸರಕು ಹಾಗೂ ಸೇವೆಗಳ ಭಾರಿ ದೊಡ್ಡ ಉತ್ಪಾದಕ ದೇಶವಾಗಿರುವುದರಿಂದ ಚೀನ ಉತ್ಪನ್ನಗಳು ಇದರ ಗರಿಷ್ಠ ಲಾಭಗಳನ್ನು ಪಡೆಯಬಹುದೇ ಹೊರತು ಇತರ ರಾಷ್ಟ್ರಗಳಲ್ಲ. ಸುಂಕ ರಹಿತ ಇಲ್ಲವೇ ಏಕರೀತಿಯ ಸುಂಕದಿಂದಾಗಿ ಕಚ್ಚಾ ಪದಾರ್ಥಗಳನ್ನು ಸುಲಭವಾಗಿ ಅಗ್ಗದಲ್ಲಿ ತರಿಸಿಕೊಂಡು ಉತ್ಪನ್ನವನ್ನಾಗಿ ಪರಿವರ್ತಿಸಿ ಸುಲಭ ಮತ್ತು ಅಗ್ಗವಾಗಿ ಮಾರಾಟ ಮಾಡಬಹುದು. ಇದೂ ಕೂಡ ಪ್ರಧಾನವಾಗಿ ಚೀನಕ್ಕೆ ಅನುಕೂಲವೇ ಹೊರತು ಇತರ ರಾಷ್ಟ್ರಗಳಿಗಲ್ಲ. ಯಾಕೆಂದರೆ ಚೀನಾ ಆರ್ ಸಿ ಇ ಪಿ ಸದಸ್ಯರಾಷ್ಟ್ರಗಳಲ್ಲೆಲ್ಲಾ ತನ್ನ ಆರ್ಥಿಕ ಹಾಗೂ ಉತ್ಪಾದನಾ ಚಟುವಟಿಕೆಗಳನ್ನು, ಕಂಪನಿಗಳನ್ನು ಹೊಂದಿದೆ. ನಮ್ಮ ದೇಶದ ಕೃಷಿ, ಹೈನುಗಾರಿಕೆ ಹಾಗೂ ತೋಟಗಾರಿಕಾ ಉತ್ಪನ್ನಗಳು, ಉಳಿದಿರುವ ಸಣ್ಣ, ಮದ್ಯಮ ಕೈಗಾರಿಕಾ ಉತ್ಪಾದನಾ ಘಟಕಗಳು ಮತ್ತಷ್ಟು ನೆಲಕಚ್ಚುವ ಸ್ಥಿತಿಗೆ ಈ ಪಾಲುದಾರಿಕೆ ಹೆಸರಿನ ಒಪ್ಪಂದ ತಳ್ಳುತ್ತದೆ.

ಈಗಾಗಲೇ ನಮ್ಮನ್ನು ಆಳುತ್ತಾ ಬಂದ ಸರ್ಕಾರಗಳು ಡಂಕೆಲ್, ಗ್ಯಾಟ್, ವಿಶ್ವ ವ್ಯಾಪಾರಿ ಸಂಘಟನೆ ಮೊದಲಾದ ಒಪ್ಪಂದಗಳಿಗೆ ಸಹಿ ಹಾಕುತ್ತಾ ದೇಶವನ್ನು ಅದರ ಆರ್ಥಿಕತೆಯನ್ನು ಹದಗೆಡಿಸಿ ಇಟ್ಟಿವೆ. ದೇಶದ ಸ್ವಾತಂತ್ರ್ಯ, ಸಾರ್ವಭೌಮತೆ, ಗಡಿಗಳಿಗೆ ಅರ್ಥವೇ ಇಲ್ಲದಂತೆ ಮಾಡಿವೆ. ಈಗ ದೇಶದಲ್ಲಿ ಅಳಿದುಳಿದದ್ದನ್ನು ಚೀನಾ ನುಂಗಿಹಾಕಲು ಈಗಿನ ಸರಕಾರ ಅನುವು ಮಾಡಿಕೊಡಲು ಹೊರಟಿದೆ.

RCEP ಕಾರಣವಾಗಿ, ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಸಂಪೂರ್ಣ ರದ್ದಾಗಲಿದೆ ಮತ್ತು ವಿದೇಶಗಳಿಂದ ಉತ್ಪನ್ನಗಳ ಆಮದು ಧಾರಾಕಾರವಾಗಿ ಹರಿದು ಬರಲಿದೆ. ಹೊರದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ತಂದು ಸುರಿಯಲಿವೆ. ವಿಶೇಷವಾಗಿ ಹೈನುಗಾರಿಕೆ ಮತ್ತು ಹಾಲಿನ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಹರಿದುಬರಲಿವೆ. ಇದರಿಂದಾಗಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ಲಕ್ಷಾಂತರ ಬಡ ರೈತರು ಮುಖ್ಯವಾಗಿ ಹೆಣ್ಣುಮಕ್ಕಳ ಬದುಕು ಬೀದಿಗೆ ಬರಲಿದೆ. ಬೀಜ ತಯಾರಿಸುವ ಕಂಪನಿಗಳು  ಇಂಟಲೆಕ್ಚುಅಲ್ ಪ್ರಾಪರ್ಟಿ ರೈಟ್ಸ್” (ಬೌದ್ಧಿಕ ಆಸ್ತಿಯ ಹಕ್ಕು) ಮೂಲಕ ನಿರ್ಣಾಯಕ ಅಧಿಕಾರ ಹೊಂದಲಿವೆ. ರೈತರು ಬೀಜಗಳನ್ನು ಬಳಸಿದಾಗ, ವಿನಿಮಯ ಮಾಡಿಕೊಂಡಾಗ ತೀವ್ರ ಶಿಕ್ಷೆಗೆ ಗುರಿಯಾಗಬೇಕಾಗಬಹುದು. ಜೈಲು ಪಾಲಾಗಬೇಕಾಗಿಯೂ ಬರಬಹುದು. ಮೋದಿ ನೇತೃತ್ವ ಬಿಜೆಪಿ ಸರಕಾರ ಆಸಿಯಾನ್ ದೇಶಗಳಲ್ಲದೆಯೇ ಆರ್ಥಿಕ ಸಾಮರ್ಥ್ಯದ ದೇಶಗಳಾದ ಚೈನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ , ದಕ್ಷಿಣ ಕೊರಿಯಾ ದೇಶಗಳೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಲು ತಯಾರಾಗಿ ನಿಂತಿದೆ. ಬಹುತೇಕ ನವೆಂಬರ ಮೊದಲ ವಾರದಲ್ಲಿ ಒಪ್ಪಂದ ಜಾರಿಯಾಗಲಿದೆ. ಮೂಲಕ ಕೃಷಿ, ಹೈನುಗಾರಿಕೆ ಮತ್ತು ಕೈಗಾರಿಕಾವಲಯ ದಲ್ಲಿ ಮತ್ತೂ ಹೆಚ್ಚು ಅಸಮತೋಲನ ಉಂಟಾಗಿ ಅರಾಜಕತೆ ತಾಂಡವವಾಡಲಿದೆ. ಒಪ್ಪಂದದ ಸೋರಿರುವ  ಮಾಹಿತಿಗಳ ಪ್ರಕಾರ ಜಾಗತಿಕ ಹೂಡಿಕೆದಾರರಿಗೆ ನಮ್ಮ ದೇಶದಲ್ಲಿ ಎಲ್ಲೆಂದರಲ್ಲಿ ಕೃಷಿ ಭೂಮಿ ಕೊಂಡುಕೊಳ್ಳಲು ಮುಕ್ತ ಅವಕಾಶ ದೊರೆಯಲಿದೆ. ಜಾಗತಿಕ ಕಾರ್ಪೊರೇಟ್ ಗಳಿಗೆ ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಕೃಷಿ ಉತ್ಪನ್ನ ಮತ್ತು ಸೇವೆಗಳನ್ನು ಬೇಕಾಬಿಟ್ಟಿಯಾಗಿ ಖರೀದಿಸಲು ಸಂಪೂರ್ಣ ಅವಕಾಶವಾಗಲಿದೆ. ಜಾಗತಿಕ ಕಾರ್ಪೋರೇಟ್ಳ ಬಳಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ಸಂಪೂರ್ಣ ಅಧಿಕಾರ ಕೇಂದ್ರೀಕೃತವಾಗಲಿದೆ.

ಇದರಿಂದಾಗಿ ನಮ್ಮ  ಅಳಿದುಳಿದ ಸಣ್ಣ ಪುಟ್ಟ ಚಿಲ್ಲರೆ ವ್ಯಾಪಾರಸ್ಥರು,  ಬೀದಿ ಬದಿಯ ಅಂಗಡಿಗಳ ಮಾಲಿಕರು ಸಂಪೂರ್ಣ ನಾಶವಾಗಿ ಹೋಗಲಿದ್ದಾರೆ. ಅಕಸ್ಮಾತ್ ನಮ್ಮ ಸರಕಾರಗಳು ನಮ್ಮ ರೈತರ, ಕಾರ್ಮಿಕರ ಹಿತ ರಕ್ಷಿಸಲು ಮುಂದಾದಲ್ಲಿ ಹೈಕೋರ್ಟು, ಸುಪ್ರೀಂ ಕೋರ್ಟುಗಳನ್ನ ಹೊರಗಿಟ್ಟು ಖಾಸಗಿ ಮಧ್ಯಸ್ಥಿಕೆಯ ನ್ಯಾಯಮಂಡಳಿಗಳ (Private arbitration tribunal) ಮೂಲಕ Investor-State dispute settlement (ISDS) ವ್ಯವಸ್ಥೆ ಭಾಗವಾಗಿ ಜನರಿಂದ ಚುನಾಯಿತವಾದ ನಮ್ಮ ಸರಕಾರಗಳ ವಿರುದ್ಧ ಮೊಕದ್ದಮೆ ಹೂಡಲು ಬೃಹತ್ ಜಾಗತಿಕ ಕಾರ್ಪೊರೇಟ್ ಗಳಿಗೆ RCEP  ಸಾಧ್ಯಮಾಡಿಕೊಡುತ್ತದೆ. RCEP ಒಪ್ಪಂದಗಳು ವಿಶ್ವ ವ್ಯಾಪಾರಿ ಸಂಘಟನೆಯಷ್ಟೂ ಕೂಡ ಪಾರದರ್ಶಕವಾಗಿಲ್ಲ. ಒಪ್ಪಂದದ  ಕರಡನ್ನು ಸಾರ್ವಜನಿಕರಿಂದ ಮುಚ್ಚಿಡಲಾಗಿದೆ. ಅಧೀಕೃತವಾಗಿ ಸಾರ್ವಜನಿಕರಿಗೆ ಮತ್ತು ಸಂಸತ್ ಸದಸ್ಯರಿಗೂ ಒದಗಿಸಲಾಗಿಲ್ಲ. ಈ ಒಪ್ಪಂದ ಇದುವರೆಗಿನ ಎಲ್ಲಾ ಅಂತರಾಷ್ಟ್ರೀಯ ಒಪ್ಪಂದಗಳಿಗಿಂತಲೂ ಮಾರಣಾಂತಿಕವಾಗಿದೆ ಎಂದು ಹೇಳಲಾಗುತ್ತಿದೆ.

                ಇಷ್ಟೆಲ್ಲಾ ರಹಸ್ಯವಾಗಿ ಈ ಒಪ್ಪಂದದ ಕರಡನ್ನು ಮುಚ್ಚಿಡುವುದರ ಹಿಂದೆ ಭಾರಿ ಕುತಂತ್ರಗಳ ಹುನ್ನಾರಗಳಿವೆ ಎನ್ನುವುದನ್ನು ಗ್ರಹಿಸಬೇಕು.

ಆಳುವ ವರ್ಗಗಳು ಮತ್ತವರ ಸರ್ಕಾರಗಳು  ಈಗಾಗಲೇ ಗ್ಯಾಟ್, ಡಂಕೆಲ್, ವಿಶ್ವ ವ್ಯಾಪಾರ ಸಂಘಟನೆ ಮೊದಲಾದ ಜಾಗತಿಕ ಲೂಟಿಕೋರ ಒಪ್ಪಂದಗಳಿಗೆ ಸಹಿ ಹಾಕಿ ನಮ್ಮ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ ಕಲೆ, ಸಂಸ್ಕೃತಿ, ಭಾಷೆ ಮೊದಲಾದ ರಂಗಗಳನ್ನು ಬರ್ಬಾದು ಮಾಡಿಡಲಾಗಿದೆ. ರೈತರು, ಕಾರ್ಮಿಕರು, ಮದ್ಯಮವರ್ಗ ಸೇರಿದಂತೆ ಜನಸಾಮಾನ್ಯರ ಬದುಕುಗಳು ಮೂರಾಬಟ್ಟೆಯಾಗಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ ಪಿ, ತೆಲುಗುದೇಶಂ, ಡಿ ಎಂಕೆ ,ಎಐಡಿಎಂಕೆ ಸೇರಿದಂತೆ ಎಲ್ಲಾ ಚುನಾವಣಾ ಪಕ್ಷಗಳೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಾಗೀದಾರಿಗಳೇ ಆಗಿದ್ದಾರೆ. ಇದಕ್ಕೆ ಎಡವೆಂದು ಹೇಳಿಕೊಳ್ಳುವ ಚುನಾವಣಾ ಪಕ್ಷಗಳು ಕೂಡ ಮೂಲಭೂತವಾಗಿ ಹೊರತಾಗಿಲ್ಲ. ಇವುಗಳಲ್ಲಿ ಕೆಲವು ನಾಮ ಮಾತ್ರದ ವಿರೋಧಗಳನ್ನು  ವ್ಯಕ್ತಪಡಿಸಿದ್ದವು ಅಷ್ಟೆ.

            ಅದು ಸಾಲದೆಂದು  ಮೋದಿ ಸರಕಾರ ಜಾರಿಗೆ ತಂದ ಕ್ರೂರ ನೋಟು ರದ್ದತಿ, ಮಾರಣಾಂತಿಕ ಅವೈಜ್ಞಾನಿಕ GST ತೆರಿಗೆ ವ್ಯವಸ್ಥೆ ಹೇರಿಕೆಗಳ ಮೂಲಕ ದೇಶವನ್ನು ದಿವಾಳಿಯತ್ತ ದೂಡಲಾಗಿದೆ.  ದೇಶವನ್ನು ಫ್ಯಾಸಿಸ್ಟ್ ನಿರಂಕುಶಾಧಿಕಾರದ ತೆಕ್ಕೆಗೆ ಒಪ್ಪಿಸಲಾಗುತ್ತಿದೆ. ಈಗ ಅಳಿದುಳಿದ ನಮ್ಮ ರೈತರ,  ಕಾರ್ಮಿಕರ ಬದುಕುಗಳ ಮೇಲೆ ಮತ್ತಷ್ಟು ಗದಾ ಪ್ರಹಾರ ಮಾಡುವ ಒಪ್ಪಂದ ಇದಾಗಿದೆ.  ಚಿಲ್ಲರೆ ಸಣ್ಣ, ಮದ್ಯಮ ಕೈಗಾರಿಕೆಗಳು, ಇನ್ನಿತರ ವ್ಯವಹಾರಸ್ಥರಿಗೆ ಈಗಾಗಲೇ ಆಗಿರುವ ಗಾಯಗಳ ಮೇಲೆ RCEP ಬರೆ ಎಳೆಯುವಂತಹುದಾಗಿದೆ.

ಕೆಲವು ರೈತ ಸಂಘಟನೆಗಳು ಭಾರತ ಸರಕಾರದ ಆರ್ ಸಿ ಇ ಪಿ ಹೆಸರಿನ ಚೀನಾ ಪರ ನಡೆಗಳನ್ನು ವಿರೋಧಿಸಿ ಹೋರಾಟಗಳಿಗೆ ಇಳಿದಿವೆ. ಆದರೆ ಇದರ ಅಪಾಯಗಳ ಬಗ್ಗೆ ಜನರಲ್ಲಿಅರಿವು ಮೂಡಿಸುವ ಕಾರ್ಯ ಬಹಳ ಕಡಿಮೆಯೆಂದೇ ಹೇಳಬೇಕಾಗಿದೆ.

ಅಮೇರಿಕ ನೇತೃತ್ವದಲ್ಲಿದ್ದ ವಿಶ್ವ ವಾಣಿಜ್ಯ ಸಂಘಟನೆಯಂತಹ ಅಸಮತೋಲಿತ ಹಾಗೂ ಜಾಗತಿಕ ಕಾರ್ಪೋರೇಟುಗಳಿಗೆ ಮಾರಾಟವಾಗುವಂತಹ ಒಪ್ಪಂದಗಳಿಂದ ಭಾರತ ಈಗಲಾದರೂ ಹೊರಬರಬೇಕಾಗಿದೆ. ಅಂತರಾಷ್ಟ್ರೀಯ ಹಣಕಾಸುನಿಧಿಗಳಂತಹ ಜಾಗತಿಕ ಹಣಕಾಸು ಸಂಸ್ಥೆಗಳ ಹಿಡಿತಗಳಿಂದ ಭಾರತ ಹೊರಬಾರದೇ ಹೋದರೆ ಮುಂದೆ ಭವಿಷ್ಯ ಮತ್ತಷ್ಟು ಕರಾಳವಾಗಲಿದೆ.

  ದೇಶದ ರೈತರು, ಕಾರ್ಮಿಕರು, ವಿದ್ಯಾರ್ಥಿಯುವಜನರು, ಮದ್ಯಮ ವರ್ಗದ ಜನಸಾಮಾನ್ಯರು ಈಗಲಾದರೂ ಎಚ್ಚತ್ತುಕೊಳ್ಳದಿದ್ದಲ್ಲಿ ಜನರಿಗೆ ಹಾಗೂ ದೇಶಕ್ಕೆ ಭವಿಷ್ಯ ಏನೂ ಉಳಿಯಲಾರದು.
22/10/2019                                             - ನಂದಕುಮಾರ್ ಕೆ .ಎನ್. ಕುಂಬ್ರಿ ಉಬ್ಬು.






Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...