ಫ್ಯಾಶಿಸ್ಟ್ ವ್ಯವಸ್ಥೆಯ ಹೇರಿಕೆ ತಡೆಯಲು
ಕಾರ್ಮಿಕ ವರ್ಗ ಮುಂದಾಗಬೇಕು. !
'ವಿಶ್ವ ಕಾರ್ಮಿಕರೆ ಒಂದಾಗಿ' ಇದು ಜಗತ್ತನ್ನೆ ಬಹುಸಂಖ್ಯಾತ ದುಡಿಯುವ ವರ್ಗದ ಪರವಾಗಿ ಬದಲಾಯಿಸಿ ನಿಜವಾದ ಬಹುಸಂಖ್ಯಾತ
ಪ್ರಜೆಗಳ ಪ್ರಭುತ್ವವನ್ನು ನಿರ್ಮಿಸುವ ಶಕ್ತಿಯಿರುವ
ವಿಶ್ವ ಕಾರ್ಮಿಕ ವರ್ಗಕ್ಕೆ ಜಾಗತಿಕ ವ್ಯಕ್ತಿತ್ವ ಕಾರ್ಲ್ ಮಾರ್ಕ್ಸ್ ಕೊಟ್ಟ ಕರೆ.
1848ರ ಅಂದಿನ ಆ ಕರೆ ಇಪ್ಪತ್ತೊಂದನೇ ಶತಮಾನದ ಇಂದಿಗೂ ಪ್ರಸ್ತುತ. ಇಂದು ವಿಶ್ವದ ಬಹು ಸಂಖ್ಯಾತ ಜನಸಮೂಹ ನೂರೆಂಟು ಸಂಕಷ್ಟಗಳಿಗೆ ಈಡಾಗಿದ್ದಾರೆ. ಎಲ್ಲಾ ರೀತಿಯ ಅಸಮಾನತೆಗಳಿಗೆ ಈಡು ಮಾಡಲಾಗಿದೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ವರ್ಣಅಸಮಾನತೆ, ಪ್ರಾದೇಶಿಕ ಅಸಮಾನತೆ ಹೀಗೆ ಅಸಮಾನತೆಗಳ ದೊಡ್ಡ ಕೂಪಗಳೊಳಗೆ ಈ ಜನರೆಲ್ಲಾ ಒದ್ದಾಡುವಂತೆ ಮಾಡಲಾಗಿದೆ. ಜಾಗತಿಕವಾಗಿ ಶ್ರಮಜೀವಿಗಳಿಂದ ಉತ್ಪಾದನೆಯಾಗುವ ಸಂಪತ್ತು ಕೆಲವೇ ಜಾಗತಿಕ ಕಾರ್ಪೊರೆಟ್ ಗಳು ಹತ್ತು ಹಲವು ಕುತಂತ್ರ , ತಂತ್ರಗಳಿಂದ ದೋಚುತ್ತಾ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ.ಅದೇ ವೇಳೆ ಹಿಂದೆ ಇದ್ದಕಾರ್ಮಿಕರ ಜಾಗಗಳಲ್ಲಿ ರೋಬೋಟೀಕರಣ ಮಾಡಲಾಗುತ್ತಿದೆ. ಭಾರಿ ಕಾರ್ಪೋರೇಟುಗಳ ಪೈಪೋಟಿಗಳಿಂದಾಗಿ ಸಾವಿರಾರು ಉದ್ದಿಮೆಗಳು ನೆಲಕಚ್ಚಿ ಹೋಗಿವೆ. ಭಾರತದ ನಿರುದ್ಯೋಗದ ಪ್ರಮಾಣ ಪ್ರಸ್ತುತ ಶೇ 7ಕ್ಕೂ ಹೆಚ್ಚು ಇದೆ. ಹೊಸ ಉದ್ದಿಮೆಗಳು ಮೇಲೇಳಲಾಗದಂತಹ ವಾತಾವರಣವಿದೆ. ಹೆಚ್ಚಾಗಿ ಮೊಬೈಲ್ ಜಾಲ, ವಿಮೆ, ಪ್ರವಾಸೋದ್ದಿಮೆ, ರಿಟೇಲ್, ವ್ಯಾಪಾರಗಳಂತಹ ಸೇವಾ ವಲಯಗಳಿಗೆ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಉತ್ಪಾದನೆಯಿಲ್ಲದ ಅರ್ಥ ವ್ಯವಸ್ಥೆಯಂತೆ ಮಾಡಲಾಗಿದೆ. ಎಲ್ಲವನ್ನೂ ದೈತ್ಯ ಕಾರ್ಪೋರೇಟುಗಳು ನುಂಗಿ ನೀರು ಕುಡಿಯುತ್ತಿವೆ. ಭಾರತದಲ್ಲಿ ಈ ಪ್ರಕ್ರಿಯೆಯನ್ನು ಅಂಬಾನಿ, ಅದಾನಿ ಮೊದಲಾದ ಭಾರಿ ಕಾರ್ಪೋರೇಟು ಕೂಟಗಳು ಯಾವುದೇ ಹೊಸ ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸದೇ ದೇಶದ ಆಸ್ತಿ ಸಂಪತ್ತುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಇತ್ತೀಚಿನ ಪರಿಯನ್ನು ಗಮನಿಸಿದರೆ ಅರ್ಥವಾಗುತ್ತದೆ.
ಇವೆಲ್ಲದರಿಂದ ಜಾಗತಿಕ ನಿರುದ್ಯೋಗ ಹೆಚ್ಚಿದೆ. ಅಮೇರಿಕಾ, ಯುಕೆ, ಫ್ರಾನ್ಸ್,
ಜರ್ಮನಿ, ಜಪಾನ್, ರಷ್ಯಾ, ಮೊದಲಾದ ಮುಂದುವರೆದ ರಾಷ್ಟ್ರಗಳೆನಿಸಿಕೊಂಡವುಗಳ ಪ್ರಧಾನ ಸಮಸ್ಯೆ ಕೂಡ
ನಿರುದ್ಯೋಗವೇ ಆಗಿದೆ. ವಿಶ್ವಕಾರ್ಮಿಕವರ್ಗ
ನಿರುದ್ಯೋಗ, ಅರೆ ಉದ್ಯೋಗಗಳಿಂದ ತತ್ತರಿಸುತ್ತಿದೆ. 2018ರ ಅಂಕಿ ಅಂಶದ ಪ್ರಕಾರ ಜಾಗತಿಕವಾಗಿ
ಸುಮಾರು 200ದಶಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದಾರೆ. ಅಮೇರಿಕಾ ಹಾಗೂ ಯುನೈಟೆಡ್
ಕಿಂಗ್ ಡಂ ನ ನಿರುದ್ಯೋಗದ ಪ್ರಮಾಣ ಶೇ 5ಕ್ಕೂ ಹೆಚ್ಚಿದೆ. ಫ್ರಾನ್ಸ್ ನಲ್ಲಿ ಸುಮಾರು ಶೇ 10ಕ್ಕೂ
ಹೆಚ್ಚಿದೆ. ಗ್ರೀಸ್ ನಲ್ಲಿ ಅದು ಶೇ 21ಕ್ಕೂ ಹೆಚ್ಚಿದೆ. ದಿನವಹಿ ಹತ್ತಾರು ಸಾವಿರ ಜನರು
ಜಾಗತಿಕವಾಗಿ ಉದ್ಯೋಗ ಸಂಬಂದಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ ಎಂದು ಅಂತರಾಷ್ಟ್ರೀಯ ಲೇಬರ್
ಆರ್ಗನೈಜೇಷನ್( ಐ ಎಲ್ ಒ) ಹೇಳಿದೆ. ಇದು ಈ ದೇಶಗಳಲ್ಲಿ ಕಾರ್ಮಿಕರ ಭಾರಿ ಪ್ರತಿಭಟನೆಗಳಿಗೆ
ಕಾರಣವಾಗಿದೆ. ಫ್ರಾನ್ಸ್ ನಲ್ಲಿ ಈಗಲೂ ನಡೆಯುತ್ತಿರುವ ಯೆಲ್ಲೋ ವೆಸ್ಟ್ಸ್ ಪ್ರತಿಭಟನೆಗಳಿಗೆ ಇದೇ
ಪ್ರಧಾನ ಕಾರಣವಾಗಿದೆ.
ಮೇ
ದಿನಾಚರಣೆ ಕೂಡ ಈಗ ಆಚರಣೆಯಾಗದೇ ಕಾರ್ಮಿಕರ ಹಕ್ಕೊತ್ತಾಯಗಳಿಗಾಗಿನ ಭಾರಿ ಪ್ರತಿಭಟನಾ
ಹೋರಾಟಗಳಾಗಿವೆ. ಭಾರಿ ಬೀದಿ ಕಾಳಗಗಳ ದಿನವಾಗಿ ಮಾರ್ಪಟ್ಟಿದೆ. ಅದಕ್ಕಾಗಿಯೇ ಹಲವಾರು
ರಾಷ್ಟ್ರಗಳು ಪ್ರತ್ಯೇಕವಾಗಿಯೇ ಭಾರಿ ರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಂಡು ಮೇ ದಿನದ ಕಾರ್ಮಿಕ
ರ್ಯಾಲಿಗಳನ್ನು ನಿರ್ಭಂಧಿಸುತ್ತಿವೆ.
ಈ ಬಾರಿಯ ಮೇ ದಿನದಂದು ಮಾಹಿತಿ ತಂತ್ರಜ್ಞಾನ ದೈತ್ಯ ಗೂಗಲ್
ನ ನೌಕರರು ಜಾಗತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಜರ್ಮನಿ ಮೊದಲಾದ ಐರೋಪ್ಯ ಒಕ್ಕೂಟದ
ರಾಷ್ಟ್ರಗಳಲ್ಲಿ ಕನಿಷ್ಠ ವೇತನ ಹಾಗೂ ಕಾರ್ಮಿಕರ
ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರಿ ಪ್ರತಿಭಟನೆಗಳು ನಡೆದಿವೆ.
ಒಂದೆಡೆ ಜನಸಾಮಾನ್ಯರ ಬದುಕುಗಳನ್ನು
ಭಾರಿ ಕನಿಷ್ಠ ಮಟ್ಟಕ್ಕೆ ದೂಡುತ್ತಾ, ಸೇನಾ ನಿರ್ವಹಣೆಗಾಗಿ ಮಾಡುತ್ತಿರುವ
ವೆಚ್ಚ ಜಾಗತಿಕವಾಗಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. 2018ರಲ್ಲಿ ಸುಮಾರು 1.8
ಟ್ರಿಲಿಯನ್ ಡಾಲರುಗಳಷ್ಟು ಹಣವನ್ನು ಜಾಗತಿಕವಾಗಿ ಕೇವಲ ಸೇನೆಗಾಗಿಯೇ ವೆಚ್ಚ ಮಾಡಲಾಗಿದೆ. ಇದು ಇದುವರೆಗಿನ
ದಾಖಲಾದ ಅತೀ ಹೆಚ್ಚಿನ ಸೇನಾ ವೆಚ್ಚವಾಗಿದೆ.
ಅಂದರೆ ಉತ್ಪಾದನೆಯಾಗುವ ಸಂಪತ್ತಿನಲ್ಲಿ ದೊಡ್ಡ ಪಾಲು ಅನುತ್ಪಾದಕ ಹಾಗೂ ವಿನಾಶಕಾರಿ ಯುಧ್ಧ
ಸನ್ನದ್ಧತೆಗಳಿಗಾಗಿಯೇ ಜಾಗತಿಕ ಆಳುವ ಶಕ್ತಿಗಳು ಖರ್ಚು ಮಾಡುತ್ತಿವೆ.
ಜಾಗತಿಕ ಸೇನಾ ವೆಚ್ಚಗಳ ಏರುವಿಕೆಯ ಪ್ರಮಾಣ

ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ತನ್ನದೇ ಮುಖ್ಯ ಕಾರಣಗಳಿಂದ ಬಿಕ್ಕಟ್ಟಿಗೆ ಒಳಗಾಗಿ ಬಹಳ ಕಾಲವಾಗಿದೆ. ಬಂಡವಾಳಶಾಹಿ ಇಡೀ ಜಗತ್ತನ್ನೇ ಆವರಿಸಿಕೊಂಡಾದ ಮೇಲೆ ಅದಕ್ಕೆ ಹೊಸ ಮಾರುಕಟ್ಟೆಯ ಸಾಧ್ಯತೆಗಳು ಕರಗಿಹೋದವು. ಹಾಗಾಗಿ ಇರುವ ಜಾಗತಿಕ ಮಾರುಕಟ್ಟೆಗಾಗಿಯೇ ಪೈಪೋಟಿಗಳು, ಕದನಗಳು, ಯುಧ್ಧಗಳು, ವ್ಯಾಪಾರಿ ಯುಧ್ಧಗಳು, ಸಾಲ ಸಹಾಯಗಳ ತಂತ್ರ ಕುತಂತ್ರಗಳ ಕಳ್ಳಾಟಗಳು ಶುರುವಾದವು. ನವವಸಾಹತು ರೀತಿಯ ಲೂಟಿಗಳ ಮೂಲಕ ಜಗತ್ತಿನ ರಾಷ್ಟ್ರಗಳನ್ನು ಈ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಮೂಗಿನ ನೇರಕ್ಕೆ ಹಿಡಿತದಲ್ಲಿಟ್ಟುಕೊಂಡಿವೆ. ಅಲ್ಲಿನ ಸರಕಾರಗಳನ್ನೂ ತಾವೇ ನಿಯಂತ್ರಣದಲ್ಲಿಟ್ಟುಕೊಂಡಿವೆ. ಆಯಾ ದೇಶಗಳ ಜನರ ನಡುವೆ ಒಡಕು ಮೂಡಿಸಲು ಜಾತಿ, ಧರ್ಮ, ಬಣ್ಣ, ಲಿಂಗ ಹೀಗೆ ತಮಗೆ ಅನುಕೂಲಕರ ಅಂಶಗಳನ್ನು ಸಮರ್ಥವಾಗಿ ಬಳಸುತ್ತಿದ್ದಾರೆ. ಅದಕ್ಕೆ ಪ್ರಜಾ ಪ್ರಭುತ್ವದ ಹುಸಿ ಮುಸುಕುಗಳನ್ನೂ ಹಾಕಲಾಗುತ್ತದೆ. ಹಲವಾರು ವಿನಾಶಕಾರಿ ಯುದ್ಧಗಳನ್ನು ಪ್ರಜಾಪ್ರಭುತ್ವ ಸ್ಥಾಪನೆ ಮಾಡಿ ಆಯಾ ರಾಷ್ಟ್ರಗಳ ಜನರಿಗೆ ಸಹಾಯ ಮಾಡುವ ನೆಪಗಳಲ್ಲೇ ನಡೆಸಲಾಗಿದೆ. ಇವುಗಳನ್ನು ನಾವು ಗಮನಿಸಿದರೆ ಬಂಡವಾಳಶಾಹಿಗಳು ಹೇಳುವ ಪ್ರಜಾಪ್ರಭುತ್ವದ ಹೂರಣವೇನು ಎನ್ನುವುದು ಅರ್ಥವಾಗುವ ವಿಚಾರ. ಭಾರತದಲ್ಲಿರುವುದು ಕೂಡ ಇದೇ ರೀತಿಯ ಬಂಡವಾಳಶಾಹಿ ಪ್ರಜಾಪ್ರಭುತ್ವವೇ ಆಗಿದೆ. ಅದರಲ್ಲಿ ಕೆಲವು ಸಮಾಜವಾದಿ ಬಣ್ಣಗಳನ್ನು ಕಟ್ಟಲಾಗಿದೆ ಅಷ್ಟೇ. ಮೀಸಲಾತಿ ರಕ್ಷಣೆ ಅದರಲ್ಲಿ ಒಂದು.
ಅದರಿಂದಲೇ ಭಾರತದ ಕಾರ್ಮಿಕರು, ರೈತಾಪಿಗಳು, ಕೂಲಿಕಾರರು ಸೇರಿದಂತೆ ಬಹುಸಂಖ್ಯಾತ
ಜನಸಾಮಾನ್ಯರು ಇಂದಿನ ಬದುಕು ನಡೆಸಲಾಗದ ತೀಕ್ಷ್ಣವಾದ
ಬಿಕ್ಕಟ್ಟಿನ ಸ್ಥಿತಿಗೆ
ಒಳಗಾಗಿದ್ದಾರೆ. ಕೆಲವೇ ಕಾರ್ಪೋರೇಟುಗಳು ದೇಶದ ಒಟ್ಟು ಆಸ್ತಿ ಸಂಪತ್ತಿನ ಮೇಲೆ ತಮ್ಮ ಹಿಡಿತ
ಸಾಧಿಸಿರುವುದಲ್ಲದೇ ಸರಕಾರಗಳನ್ನೂ ಕೂಡ ತಾವೇ ನೇರವಾಗಿ ನಿರ್ಧರಿಸುತ್ತಿವೆ. ಇದೇ ರೀತಿಯ
ವಿದ್ಯಮಾನಗಳೇ ಜಾಗತಿಕವಾಗಿ ಬಹುತೇಕ ರಾಷ್ಟ್ರಗಳಲ್ಲಿ ನಡೆಯುತ್ತಿವೆ. ಅಮೇರಿಕ, ಫ್ರಾನ್ಸ್ ,
ಯುಕೆ ಮೊದಲಾದ ರಾಷ್ಟ್ರಗಳಲ್ಲಿ ಇದುವರೆಗೂ ಇದ್ದ ಬಂಡವಾಳಶಾಹಿ ಪ್ರಜಾಪ್ರಭುತ್ವದ ನಿಯಮಗಳೂ ಕೂಡ
ರದ್ದಾಗಿ ನಿರಂಕುಶ ಫ್ಯಾಸಸ್ಟೀಕರಣಗಳನ್ನು ಹೇರಲಾಗುತ್ತಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಸೇನಾ ವೆಚ್ಚ ಮಾಡುವ ರಾಷ್ಟ್ರಗಳಲ್ಲಿ
ಭಾರತ ರಷ್ಯಾವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ. ಆದರೆ ಭಾರತದ ಬಹುಸಂಖ್ಯಾತ ಜನಸಮೂಹವನ್ನು ತೀವ್ರ ಆರ್ಥಿಕ
ದುಸ್ಥಿತಿಗೆ ತಳ್ಳಿದೆ.
ಇದರ ಬಾಗವಾಗಿಯೇ ಮೂರು ದಶಕಗಳ
ಹಿಂದೆ ಜಾಗತಿಕ ಕಾರ್ಪೊರೆಟ್ ಗಳ ಲೂಟಿಗಾಗಿಯೇ ಜಾಗತೀಕರಣವನ್ನು ವಿಶ್ವದ ಜನರ ಮೇಲೆ ಹೇರಲಾಯಿತು. ಆದರೂ ಜಾಗತಿಕ ಬಂಡವಾಳಿಗರು ತಮ್ಮ ಸೂಪರ್ ಲಾಭ ಕಾಯ್ದುಕೊಳ್ಳಲು ಸಾದ್ಯವಾಗುತ್ತಿಲ್ಲ. ಅಗತ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ಉತ್ಪಾದನೆ ಮಾಡುವುದು
ಒಂದೆಡೆಯಾದರೆ ಉತ್ಪಾದನೆ ಮಾಡದೆ ಲಾಭ ಕೊಳ್ಳೆ ಹೊಡೆಯಲು ತಮ್ಮ ತಮ್ಮಲ್ಲೇ ಪೈಪೋಟಿ ಮಾಡುತ್ತಾ ಮತ್ತೂ ಬಿಕ್ಕಟ್ಟಿನ ಸ್ಥಿತಿಗೆ ಜಗತ್ತನ್ನು ಕೊಂಡೊಯ್ಯುತ್ತಿದ್ದಾರೆ. ಸಿರಿಯಾ, ಲಿಬಿಯಾ, ಇರಾಕ್,
ಅಫ್ಘಾನಿಸ್ತಾನ, ಪ್ಯಾಲೆಸ್ತೇನ್ ಮೊದಲಾದೆಡೆಗಳಲ್ಲಿ ಪ್ರಾದೇಶಿಕ ಯುದ್ಧಗಳನ್ನು ಜಾಗತಿಕ ಮಟ್ಟದಲ್ಲಿ ನಡೆಸಿದರೂ ಅವರ ಬಿಕ್ಕಟ್ಟು ಪರಿಹಾರವಾಗದೇ ಮತ್ತೂ ಹೆಚ್ಚು ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಅವರ
ಇಂತಹ ವಿನಾಶಕಾರಿ ಪ್ರಯತ್ನಗಳು ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಅಂತರ್ಯಧ್ಧಗಳಿಗೆ,
ಅರಾಜಕತೆಗಳಿಗೆ ಕಾರಣವಾಗಿವೆ. ಜಾಗತಿಕ ಬಂಡವಾಳಶಾಹಿ ಅಮೇರಿಕಾ ಮಿತ್ರ ಕೂಟ ಈಗ ವೆನೆಜುಯೇಲಾದ ಭಾರಿ
ತೈಲಸಂಪತ್ತನ್ನು ಹೇಗಾದರೂ ಕೈವಶ ಮಾಡಬೇಕೆಂದು ಅಲ್ಲಿನ ಆಡಳಿತದಲ್ಲಿ ನೇರ ಹಸ್ತ ಕ್ಷೇಪ
ನಡೆಸುತ್ತಿದೆ.
ಬಿಕ್ಕಟ್ಟಿನ ಭಾಗವಾಗಿ ಅಮೇರಿಕದಂತಹ ಅಮೇರಿಕವೇ ನಾವಿನ್ನು ವಿಶ್ವ ಪೋಲಿಸ್ ಗಿರಿ ಮಾಡಲು ಸಾದ್ಯವಿಲ್ಲ, ನಮ್ಮ
ಸೈನಿಕ ಸಹಾಯ ಬೇಕಾದಲ್ಲಿ ಅದರ ವೆಚ್ಚವನ್ನು ಆಯಾ ರಾಷ್ಟ್ರಗಳು ಭರಿಸಬೇಕು, ವಲಸಿಗರಿಗೆ ಅವಕಾಶವಿಲ್ಲ, ಅಮೇರಿಕ ಅಮೇರಿಕಾದವರಿಗೆ ಮಾತ್ರ ಎಂದೆಲ್ಲಾ ಹೊಸ
ಮಾತುಗಳ ವರಸೆ ಶುರುವಿಟ್ಟುಕೊಂಡಿದೆ. ಹಿಂದೆಲ್ಲಾ ಅಭಿವೃಧ್ಧಿ
ಹೆಸರಿನಲ್ಲಿ ಜಾಗತಿಕ ಹಳ್ಳಿ, ಜಾಗತೀಕರಣ, ಉದಾರೀಕರಣ ಇತ್ಯಾದಿ ಮಂತ್ರ ಪಠಿಸುತ್ತಿದ್ದ ಅಮೇರಿಕ, ಟ್ರಂಪ್ ಅಧ್ಯಕ್ಷರಾದ
ಮೇಲೆ ಈಗ ಬದುಕಿನ ಅಭದ್ರತೆಗಳಿಂದ ತತ್ತರಿಸುತ್ತಿರುವ ಅಮೇರಿಕದ ಜನರನ್ನು ಯಾಮಾರಿಸಲು ಅಮೇರಿಕೀಕರಣದ ಮಂತ್ರ
ಹೇಳತೊಡಗಿದೆ. ಈಗಿನ
ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ಸ್ವತಃ ಒಬ್ಬ ಭಾರಿ ಕಾರ್ಪೋರೇಟೇ ಆಗಿದ್ದಾರೆ.
ಭಾರತದಲ್ಲಿ ಕಾರ್ಮಿಕ
ವರ್ಗ ಹೋರಾಡಿ ಪಡೆದಂತಹ ಹಲವು ಕಾರ್ಮಿಕ ಹಕ್ಕುಗಳು ಈಗ
ಬಹುತೇಕ ಇಲ್ಲವಾಗಿವೆ. ಕಾರ್ಮಿಕರಿಗೆ ಒಂದು ಮಟ್ಟದ ಭದ್ರತೆ ಒದಗಿಸುತ್ತಿದ್ದ
ಹಳೇ ಕಾರ್ಮಿಕ ಕಾಯ್ಡೆಗಳಿಗೆಲ್ಲಾ ಜಾಗತೀಕರಣದ ನಂತರ ಜಾಗತಿಕ ಭಾರಿ ಕಾರ್ಪೋರೇಟುಗಳಿಗೆ
ಅನುಕೂಲವಾಗುವಂತೆ ಹಲವಾರು ತಿದ್ದುಪಡಿಗಳನ್ನು ಮಾಡುತ್ತಾ ಬರಲಾಗುತ್ತಿದೆ. ಅದು ಯಾವ
ಮಟ್ಟಕ್ಕೆಂದರೆ ಕಾರ್ಮಿಕರನ್ನು ಕಾರ್ಮಿಕರಾಗಿಯೇ ಪರಿಗಣಿಸದೇ ಇರುವಷ್ಟು ಮಟ್ಟಕ್ಕೆ ಆಗಿದೆ. ನಿಗಧಿತ ಅವಧಿಯ ಉದ್ಯೋಗ ( Fixed term employment)
ಅನ್ನುವ ನಿಯಮ ಅದಕ್ಕೆ ಮೋದಿ ಸರ್ಕಾರದ ಒಂದು ಸೇರ್ಪಡೆಯಾಗಿದೆ. ಮೋದಿ ಸರಕಾರ ನೋಟು ರದ್ಧತಿ, ಜಿ ಎಸ್ ಟಿ ಹೇರಿಕೆಗಳನ್ನು ಮಾಡಿ ಅದುವರೆಗೂ ಇದ್ದ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಉದ್ಯೋಗಗಳೂ ನೆಲಕಚ್ಚುವಂತೆ ಮಾಡಿತು. ಒಂದು ವರದಿಯ ಪ್ರಕಾರ ಇದು ಭಾರತದ 50 ಲಕ್ಷ ಉದ್ಯೋಗಗಳನ್ನು ನೆಲಕಚ್ಚುವಂತೆ ಮಾಡಿದೆ.
ಮಟ್ಟಕ್ಕೆಂದರೆ ಕಾರ್ಮಿಕರನ್ನು ಕಾರ್ಮಿಕರಾಗಿಯೇ ಪರಿಗಣಿಸದೇ ಇರುವಷ್ಟು ಮಟ್ಟಕ್ಕೆ ಆಗಿದೆ. ನಿಗಧಿತ ಅವಧಿಯ ಉದ್ಯೋಗ ( Fixed term employment)
ಅನ್ನುವ ನಿಯಮ ಅದಕ್ಕೆ ಮೋದಿ ಸರ್ಕಾರದ ಒಂದು ಸೇರ್ಪಡೆಯಾಗಿದೆ. ಮೋದಿ ಸರಕಾರ ನೋಟು ರದ್ಧತಿ, ಜಿ ಎಸ್ ಟಿ ಹೇರಿಕೆಗಳನ್ನು ಮಾಡಿ ಅದುವರೆಗೂ ಇದ್ದ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಉದ್ಯೋಗಗಳೂ ನೆಲಕಚ್ಚುವಂತೆ ಮಾಡಿತು. ಒಂದು ವರದಿಯ ಪ್ರಕಾರ ಇದು ಭಾರತದ 50 ಲಕ್ಷ ಉದ್ಯೋಗಗಳನ್ನು ನೆಲಕಚ್ಚುವಂತೆ ಮಾಡಿದೆ.
ಇವೆಲ್ಲದರ ವಿರುಧ್ದ ಹಲವು ಹೋರಾಟಗಳು ನಡೆಯುತ್ತಿವೆ ನಿಜ. ಆದರೆ ಆ ಹೋರಾಟಗಳು
ವರ್ಗ ಪ್ರಜ್ಞೆ ಹೊಂದಿದ, ನಿಖರವಾಗಿ ತಮ್ಮ ಶತೃಗಳನ್ನು ಗ್ರಹಿಸಿರುವ ಒಂದು ಮಹಾ
ರಾಜಕೀಯ ಶಕ್ತಿಯಾಗಿ ಮಾರ್ಪಡದೇ ಯಾವ ಬದಲಾವಣೆಯೂ ಬರಲು ಸಾಧ್ಯವಿಲ್ಲ. ಅದು
ವರ್ಗಪ್ರಜ್ಞೆ ಬೆಳೆಸಿಕೊಂಡ ಕಾರ್ಮಿಕರಿಂದ ಮಾತ್ರ ಸಾಧ್ಯ. ಕೇವಲ ಸಂಬಳ, ಸವಲತ್ತುಗಳು, ಚುನಾವಣೆಗಳಿಗೆ ಮಾತ್ರ ಹೋರಾಟದಲ್ಲಿರುವವರಿಂದ ಅದು
ಸಾಧ್ಯವಾಗುವುದಿಲ್ಲ. ಸದ್ಯಕ್ಕೆ ಬಿಜೆಪಿಗಿಂತ ಕಾಂಗ್ರೆಸ್ ಪಕ್ಷ ವಾಸಿ ಹಾಗಾಗಿ ಕಾಂಗ್ರೆಸ್ಸನ್ನು
ಬೆಂಬಲಿಸೋಣ, ಕೆಲವು ಒಳ್ಳೆಯ ವ್ಯಕ್ತಿಗಳನ್ನು ಬೆಂಬಲಿಸಿ ಶಾಸನ ಸಭೆಗಳಲ್ಲಿ ಕೂಡಿಸಿದರೆ
ಪರಿಸ್ಥಿತಿ ಬದಲಾಗುತ್ತದೆ…. ಇತ್ಯಾದಿ ಗೊಂದಲಗಳ ಹಾಗೂ ಅಪಾಯಕಾರಿ ನಿಲುವುಗಳನ್ನಿಟ್ಟುಕೊಂಡು ಚುನಾವಣೆಗಾಗಿ ಮಾತ್ರ ಜನರನ್ನು ಸಂಘಟಿಸುವುದರಿಂದಲೂ
ಸಾಧ್ಯವಿಲ್ಲ. ರಾಜಕೀಯ ಹೋರಾಟಗಳಲ್ಲಿ ದೈನಂದಿನ ಹಕ್ಕೊತ್ತಾಯಗಳ ಆರ್ಥಿಕ ಹೋರಾಟಗಳನ್ನು ಬೆರೆಸುವ
ಮೂಲಕ ರಾಜಕೀಯ ಪ್ರಜ್ಞೆಯನ್ನು ಹೆಚ್ಚಿಸುತ್ತಾ ಸಮಾಜದ ಅಮೂಲಾಗ್ರ ಬದಲಾವಣೆಗಾಗಿ ಐಕ್ಯ
ಹೋರಾಟ ಕಟ್ಟಬೇಕಾಗುತ್ತದೆ. ಈಗ ಹೇರಲಾಗುತ್ತಿರುವ
ಫ್ಯಾಸಿಸ್ಟ್ ವ್ಯವಸ್ಥೆಯನ್ನು ಜನಸಾಮಾನ್ಯರ ಐಕ್ಯ
ಸಮರಶೀಲ ಹೋರಾಟಗಳ ಮೂಲಕ ಮಾತ್ರ ತಡೆಯಲು ಸಾಧ್ಯ ಎನ್ನುವ ಅರಿವನ್ನು ಬೆಳೆಸಿಕೊಳ್ಳಬೇಕಿದೆ.
ವಿಶ್ವ ಕಾರ್ಮಿಕ ದಿನದ ಈ ಸಂಧರ್ಭದಲ್ಲಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿಯುವ ದಿಕ್ಕಿಗೆ ಹೊರಳುವಂತಾಗಬೇಕಲ್ಲವೆ. ಕೇವಲ ಶುಭಾಶಯಗಳಿಗೆ ಮಾತ್ರ
ಸೀಮಿತವಾಗಬಾರದಲ್ಲವೆ.
-ನಂದಕುಮಾರ್. ಕೆ.ಎನ್
ಮೇ 01-2019
ಮಿಂಚಂಚೆ:
nandakumarnandana67@gmail.com

Comments
Post a Comment