Skip to main content

ಮೋದಿಯ ಚುನಾವಣಾ ಗೆಲುವು!
ಮುನ್ನೆಲೆಗೆ ತಂದ ಕೆಲವು ಮುಖ್ಯ ಪ್ರಶ್ನೆಗಳು!?

ಭಾರಿ ಗದ್ದಲದ 2019ರ ಭಾರತದ ಸಾರ್ವತ್ರಿಕ ಚುನಾವಣೆ ಮುಗಿದು ಪಲಿತಾಂಶ ಕೂಡ ಬಂದಾಯಿತು. ಹಲವರು ಆಶ್ಚರ್ಯ ಪಡುವಂತೆ ಮೋದಿಯ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಭಾರಿ ಬಹುಮತದಿಂದ ಮುಂದಿನ ಐದು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. 2019ರಲ್ಲಿ ಒಟ್ಟು 900 ದಶಲಕ್ಷ ಮತದಾರರಲ್ಲಿ 468 ದಶಲಕ್ಷ ಪುರುಷರು 432 ದಶಲಕ್ಷ ಮಹಿಳೆಯರು 38,325 ಜನ ತೃತೀಯ ಲಿಂಗಿಗಳು ಸೇರಿದ್ದರು. 2014ರ ಸಾರ್ವತ್ರಿಕ ಚುನಾವಣೆಗಿಂತಲೂ 84.3 ದಶಲಕ್ಷ  ಮತದಾರರು ಹೆಚ್ಚಾಗಿದ್ದರು.

            ಈ ಬಾರಿ ಶೇ 67ರಷ್ಟು ಮತ ಚಲಾವಣೆಯಾಗಿತ್ತು. ಇದು ಇದುವರೆಗಿನ ಸರಾಸರಿ ಚಲಾವಣೆಯಾದ ಮತಗಳಲ್ಲೇ ಅತೀ ಹೆಚ್ಚು ಎಂದು ಹೇಳಲಾಗುತ್ತಿದೆ.  ಬಿಜೆಪಿ ತನ್ನ ಶೇಕಡಾವಾರು ಮತಗಳಿಕೆಯನ್ನು ಹಾಗೂ ಸಂಖ್ಯೆಗಳನ್ನೂ ಕೂಡ ಹೆಚ್ಚಿಸಿಕೊಂಡಿದೆ. ಚುನಾವಣಾ  ಆಯೋಗದ ಅಂಕಿ ಅಂಶಗಳ ಪ್ರಕಾರ ದೇಶದ 200 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 50ರಷ್ಟು ಮತಗಳನ್ನು ತನ್ನದಾಗಿಸಿ ಕೊಂಡಿದೆ. ಈ ಬಾರಿ ಅದು  2014ರ ಲೋಕಸಭಾ ಚುನಾವಣೆಗಿಂತಲೂ ಶೇ6ರಷ್ಟು ಶೇಕಡಾವಾರು ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ.  ಆದರೆ ನೋಟಾ ಮತಗಳಲ್ಲಿ ಹೆಚ್ಚಳವಾಗಲೀ ಕಡಿಮೆಯಾಗಲೀ ಗಮನಾರ್ಹ ರೀತಿಯಲ್ಲಿ ಕಾಣಿಸುತ್ತಿಲ್ಲ.  ಸುಮಾರು 200ಕ್ಕೂ ಹೆಚ್ಚು ಉತ್ತರಭಾರತದ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಯಂತ್ರಗಳ ಹ್ಯಾಕಿಂಗ್ ಹಾಗೂ ಬದಲಾಯಿಸುವುದು ಕೂಡ ನಡೆದಿವೆ ಎಂಬ ವರದಿಗಳೂ ಕೂಡ  ಇವೆ.

 ಪ್ರಮುಖ ವಿರೋಧ ಪಕ್ಷವೆನಿಸಿಕೊಂಡ ಕಾಂಗ್ರೆಸ್ ಲೋಕಸಭೆಯಲ್ಲಿ ಇರೋದರಲ್ಲಿ ಅತೀ ದೊಡ್ಡ ವಿರೋಧ ಪಕ್ಷವಾಗಿದ್ದರೂ ಪುನಃ ಸತತ ಎರಡನೇ ಬಾರಿ ಅಧೀಕೃತ ವಿರೋಧ ಪಕ್ಷದ ಸ್ಥಾನವನ್ನು ಕೂಡ ಗಳಿಸಲಾರದೇ ಹೋಗಿದೆ. ಕೇವಲ 52 ಸ್ಥಾನಗಳಿಗೆ  ಅದು ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿದೆ. ಅಧಿಕೃತ ವಿರೋಧ ಪಕ್ಷವಾಗಲು ಲೋಕಸಭೆಯ ಶೇ 10 ರಷ್ಟು ಸ್ಥಾನಗಳನ್ನಾದರೂ ಗಳಿಸಬೇಕು. ಅಂದರೆ ಕನಿಷ್ಠ 55 ಸಂಸದರನ್ನಾದರೂ ಹೊಂದಿರಬೇಕು. ಮಹಾ ಘಟಬಂಧನ್ ಎನ್ನುವ ಇತರ ವಿರೋಧ ಪಕ್ಷಗಳ ದಿಢೀರ್ ರಾಜಕೀಯ ಪರ್ಯಾಯ ಕೂಡ ನೆಲಕಚ್ಚಿ ಕುಳಿತಿದೆ. ಉತ್ತರ ಪ್ರದೇಶದ  ಎಸ್ ಪಿ, ಬಿಎಸ್ಪಿ ಮೈತ್ರಿ ಕೂಡ ಹೆಚ್ಚಿನ ಫಲವನ್ನೇನೂ ನೀಡಿಲ್ಲ.

ದಕ್ಷಿಣ ಭಾರತದ ಕರ್ನಾಟಕದಲ್ಲಿ ಕಾಂಗ್ರೆಸ್ ಜನತಾದಳ ಮೈತ್ರಿ ಸರ್ಕಾರವಿದ್ದರೂ ಹತ್ತು ಹಲವು ಪ್ರಗತಿಪರವೆನಿಸಿಕೊಂಡ ಸಂಘಟನೆಗಳು, ವ್ಯಕ್ತಿಗಳು ಕಾಂಗ್ರೆಸ್ ಇಲ್ಲವೇ ಮೈತ್ರಿ ಸರಕಾರದ ಪರವಾಗಿ ಪ್ರಚಾರಗಳನ್ನು ಮಾಡಿದ್ದರೂ  ರಾಜ್ಯದ ಒಟ್ಟು 28 ಸ್ಥಾನಗಳಲ್ಲಿ ಬಿಜೆಪಿ 26 ಸ್ಥಾನಗಳನ್ನು ಗಳಿಸಿ ಕಳೆದ ಬಾರಿಗಿಂತ 9 ಹೆಚ್ಚು ಲೋಕಸಭಾ ಸ್ಥಾನಗಳನ್ನು ಗಳಿಸಿದೆ. ಈ ಬಾರಿ ಮತ್ತೊಂದು ವಿಶೇಷವೆಂದರೆ  ರಾಜ್ಯದ ಎಲ್ಲಾ  ಎಸ್ಸಿ ಎಸ್ಟಿ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿರೋದು. ಕಾಂಗ್ರೆಸ್ ಜನತಾದಳ ಪಕ್ಷಗಳು ತಲಾ ಒಂದೊಂದು ಸ್ಥಾನಗಳನ್ನು ಗಳಿಸಿ ನೆಲಕಚ್ಚಿ ಮಲಗಬೇಕಾದ ಸ್ಥಿತಿಗೆ ಇಳಿದಿದೆ. ಚಿಂಚೋಳಿ ವಿದಾನ ಸಭಾ ಸ್ಥಾನವನ್ನೂ ಕೂಡ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಉಳಿಸಿಕೊಳ್ಳದೇ ಹೋಗಿದೆ.  ಉಳಿದ ಪಕ್ಷಗಳು ಹೇಳ ಹೆಸರಿಲ್ಲದೇ ಹೋಗಿದ್ದರೂ ಕಾಂಗ್ರೆಸ್ ಅನ್ನು ಸೋಲಿಸುವಲ್ಲಿ ಬಿಜೆಪಿಯನ್ನು ಗೆಲ್ಲಿಸುವಲ್ಲಿ ಕೆಲವೆಡೆಗಳಲ್ಲಿ ಇವುಗಳು ಪಡೆದ ಮತಗಳು ಗಮನಾರ್ಹವಾಗಿದೆ.

 ವಾಸ್ತವದಲ್ಲಿ ಈ ಎಲ್ಲಾ ಚುನಾವಣಾ ಅಂಕಿ ಸಂಖ್ಯೆಗಳು, ವಿವರಗಳು ಭಾರತದ ‘ಪ್ರಜಾ ಪ್ರಭುತ್ವ’ದ ನೈಜ ಲಕ್ಷಣಗಳನ್ನೇನೂ ಬಿಂಬಿಸುವುದಿಲ್ಲ. ಒಂದು ವೇಳೆ ಹಾಗಂದುಕೊಂಡರೆ ಅದು ತಪ್ಪಾದ ಗ್ರಹಿಕೆ ಹಾಗೂ ನಿಲುವುಗಳಿಗೆ ದಾರಿ ಮಾಡಿಕೊಡುತ್ತದೆ. ಈ ತಪ್ಪು ಗ್ರಹಿಕೆಗಳಲ್ಲೇ ವಿದ್ಯಾವಂತರಲ್ಲಿ ಹಲವರು ಈಗಲೂ ತೇಲಾಡುತ್ತಿದ್ದಾರೆ. ಈ ದೇಶದ ಹಳ್ಳಿಗಾಡನ್ನೊಳಗೊಂಡ ಬಹುಸಂಖ್ಯಾತ ಜನರ ಬದುಕಿನಲ್ಲಿ ಈ ಪ್ರಜಾ ಪ್ರಭುತ್ವ, ಸಂವಿಧಾನ, ಸಂಸತ್ತು, ಚುನಾವಣೆಗಳು ಯಾವುದೇ ಮೂಲಭೂತ ಬದಲಾವಣೆಗಳನ್ನು ತಂದಿಲ್ಲ. ಅಲ್ಲಿ ದಲಿತ ಆದಿವಾಸಿ ಹಿಂದುಳಿದ ಜನಸಾಮಾನ್ಯರಿದ್ದಾರೆ. ಅವರೆಲ್ಲರೂ ಎಲ್ಲಾ ಹಕ್ಕುಗಳಿಂದ ವಂಚಿತವಾಗಿ ಬಡವರಾಗಿಯೇ ಈಗಲೂ ಉಳಿಸಲ್ಪಟ್ಟಿದ್ದಾರೆ ಎನ್ನುವುದೇ ಸರಿಯಾದುದು. ಅವರುಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳು ಅಭ್ಯರ್ಥಿಗಳ ಬಗ್ಗೆ ಭ್ರಮೆಗಳು ಕಡಿಮೆ. ಒಂದು ಗಣನೀಯ ದೊಡ್ಡ ಸಂಖ್ಯೆಯ ಜನಸಾಮಾನ್ಯರಿಗೆ ಮೊದಲಿನಿಂದಲೂ ಇವು ಯಾವುವೂ ಹತ್ತಿರ ಕೂಡ ಸುಳಿದಿಲ್ಲ ಎನ್ನುವುದು ನಗರ ಕೇಂದ್ರಿತ ಚಿಂತನೆಗಳಿಗೆ ಈಗಲೂ ದಕ್ಕದೇ ಹೋಗುತ್ತಿವೆ. ಚುನಾವಣೆಗಳಲ್ಲಿ ಮತ ಚಲಾಯಿಸಿದವರಲ್ಲಿ  ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲದ ಹಳ್ಳಿಗಾಡಿನ ಹಾಗೆಯೇ ನಗರ ಪ್ರದೇಶದ   ಬಹುತೇಕರು ಇಂತಹುದೇ ಪಕ್ಷಕ್ಕೆ  ಮತ ಚಲಾಯಿಸಿದರೆ ತಮಗೆ  ಹಾಗೂ ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯದೊಂದಿಗೆ ಪ್ರಜ್ಞಾ ಪೂರ್ವಕವಾಗಿ ತಮ್ಮ ಮತಗಳನ್ನು ಚಲಾಯಿಸಿರುವುದಿಲ್ಲ. ಅದು ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ಒಂದು ಮಟ್ಟಕ್ಕೆ ಇತ್ತೆನ್ನಬಹುದೇನೋ. ಆದರೆ ಆಗಲೂ ಬಹುಸಂಖ್ಯಾತ ಜನರು ಚುನಾವಣಾ ಪ್ರಕ್ರಿಯೆಗಳಿಂದಲೇ ದೂರ ಉಳಿಯುತ್ತಿದ್ದರು. ಭಾರಿ ಭೂ ಮಾಲಿಕ ಹಿಡಿತದ ಹಿಂದುಳಿದ ಪ್ರಾಂತ್ಯಗಳಲ್ಲಿ ಕಳ್ಳ ಮತದಾನಗಳು, ಮತಗಟ್ಟೆ ವಶಪಡಿಸುವಿಕೆಗಳು ಮಾಮೂಲಿ ವಿಚಾರಗಳಾಗಿದ್ದವು. ಆ ಬಗೆಗಿನ ವರದಿಗಳು ಹೊರ ಜಗತ್ತಿಗೆ ತಿಳಿಯುತ್ತಿದ್ದುದು ಆಗ ಬಹಳ ವಿರಳವಾಗಿತ್ತು. ಅಂದರೆ ಚಲಾವಣೆಯಾಗುವ ಮತಗಳು ಆಯಾ ಮತದಾರರ ಪ್ರಜ್ಞಾಪೂರ್ವಕ ಭಾಗವಹಿಸುವಿಕೆಯಿಂದ ಆದವುಗಳಾಗಿರಲಿಲ್ಲ.  ಈಗ ಒಂದು ಮಟ್ಟದ ವಿದ್ಯಾಭ್ಯಾಸದ ಬೆಳವಣಿಗೆ ನಗರೀಕರಣದ ಹೆಚ್ಚಳ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಇತ್ಯಾದಿಗಳಿಂದಾಗಿ ಮೊದಲಿಗಿಂತ ಹೆಚ್ಚು ಪಾರದರ್ಶಕತೆ ಚುನಾವಣೆಗಳಲ್ಲಿ ಬಂದಿದ್ದರೂ ಪೂರ್ಣವಾಗಿ ವಶೀಲಿಬಾಜಿ, ಬೆದರಿಕೆ ಹಾಗೂ ಕಳ್ಳ ಮತದಾನಗಳಿಂದ ಮುಕ್ತವಲ್ಲ.

ಈ ಬಾರಿ ಕೂಡ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಇಂತಹುದೇ ನಿರ್ದಿಷ್ಠ ಗುಂಡಿಗಳನ್ನು ಒತ್ತುವಂತೆ ಮುಗ್ಧ ಜನರಿಗೆ ಒತ್ತಾಯಿಸಿರುವ, ಏಜೆಂಟರುಗಳೇ ಮತದಾರರ ಪರವಾಗಿ ಒತ್ತಿರುವ  ವರದಿಗಳೂ ಇವೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಹತ್ತು ಲಕ್ಷ ಮುಸ್ಲಿಮರು, 17 ಲಕ್ಷ ದಲಿತರ ಹೆಸರುಗಳೇ ಮತದಾರ ಪಟ್ಟಿಯಿಂದಲೇ ಕಾಣೆಯಾಗಿರುವ ಕುರಿತು  ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಕೋಲ್ಸೆ ಪಾಟೀಲ್ ಹೇಳಿರುವುದನ್ನು ಉಲ್ಲೇಖಿಸಿ ಕಾರಾವಾನ್ ಪತ್ರಿಕೆ ವರದಿ ಮಾಡಿದೆ. 
ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಾಕಷ್ಟು ಜನರಿಗೆ ವಿಶ್ವಾಸವಿಲ್ಲ. ಅದಕ್ಕೆ ಕಾರಣ ಯಾವುದೇ ಗುಂಡಿಯನ್ನು ಒತ್ತಿದರೂ ಆ ಮತ ಬಿಜೆಪಿಗೇ ಹೋಗಿರುವ ಸಾಕಷ್ಟು ಉದಾಹರಣೆಗಳು ಕೂಡ ಹಿಂದಿನಿಂದಲೂ ಇವೆ. ಬಿಜೆಪಿ ಕೂಡ ಇಂತಹುದೇ ಆರೋಪವನ್ನು ಹಿಂದೆ ಕಾಂಗ್ರೆಸ್ ಮೇಲೆ ಹೊರಿಸಿತ್ತು. ಅಲ್ಲದೇ ಸ್ಯಾಮ್ ಪಿತ್ರೋದಾನಂತಹ ಗಣಕ ತಜ್ಞ ಕೂಡ ವಿದ್ಯುನ್ಮಾನ ಮತಯಂತ್ರಗಳು ಪೂರ್ಣ ಲೋಪಮುಕ್ತವಲ್ಲ, ಅಕ್ರಮಗಳು ನಡೆಯುವ ಸಾಧ್ಯತೆಗಳೂ ಇವೆ ಎಂದು ಹೇಳಿದ್ದಾರೆ. ಆದರೆ ಕೆಲವು ವಿದ್ಯುನ್ಮಾನ ತಜ್ಞರು ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗದು ಎಂಬ ಚುನಾವಣಾ ಆಯೋಗದ ನಿಲುವನ್ನು ಪುಷ್ಟೀಕರಿಸಿದ್ದಾರೆ. ಆದರೆ  ಇದುವರೆಗೂ ವರದಿಯಾದ ಪ್ರಕರಣಗಳಲ್ಲಿ  ಬೇರೆ ಪಕ್ಷಕ್ಕೆ ನೀಡಿದ ಮತಗಳೆಲ್ಲವೂ ಬಿಜೆಪಿಗೆ ಯಾಕೆ ಹೋಗುತ್ತಿತ್ತು ಎಂಬ ಬಗ್ಗೆ ಯಾವುದೇ ವಿವರಣೆ ಬಂದ ಹಾಗೆ ಕಾಣುತ್ತಿಲ್ಲ. ಮತ ಪಟ್ಟಿಯಿಂದ ಲಕ್ಷಗಳ ಸಂಖ್ಯೆಯಲ್ಲಿ ಮತದಾರರ ಹೆಸರುಗಳೇ ಕಾಣೆಯಾಗುವ ಮತದಾರರ ಹೈಜಾಕ್ ನ ಪರಿಯ ಬಗ್ಗೆ ಯಾವುದೇ ಸೂಕ್ತ ವಿವರಣೆ ಕಾಣುತ್ತಿಲ್ಲ.

 ಆಳುವ ಶಕ್ತಿಗಳು ಇಪ್ಪತ್ತೊಂದನೇ ಶತಮಾನದಲ್ಲೂ ಮತಚಲಾವಣೆಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಯಂತ್ರಿಸಬಲ್ಲರು ಎಂಬುದಕ್ಕೆ ಇವೆಲ್ಲವೂ ಉದಾಹರಣೆಗಳಾಗಿ ನಮ್ಮೆದುರು ನಿಲ್ಲುತ್ತವೆ. ಅಂದರೆ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಮತನೀಡಿಕೆ ಎಂಬುದು ಆಡಳಿತಕ್ಕೆ ನಿರ್ಣಾಯಕ ವಿಚಾರವಲ್ಲ. ಯಾಕೆಂದರೆ ಕೇವಲ ಶೇ 10ರಷ್ಟು ಮತಚಲಾವಣೆಯಾದಲ್ಲೂ ಸರ್ಕಾರ ರಚನೆಯಾಗುತ್ತಿರುವ ದೇಶ ನಮ್ಮದು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಕಾಶ್ಮೀರ ಪಂಜಾಬ್, ಈಶಾನ್ಯ ಭಾರತದ ಹಲವೆಡೆಗಳಲ್ಲಿ ಈ ರೀತಿ ಆಗಿರುವ ಉದಾಹರಣೆಗಳಿವೆ.

ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನ ಜನರು ಆ ದಿನ ತಮಗೆ ದೊರೆಯಬಹುದಾದ ಆದಾಯಕ್ಕಾಗಿಯೋ ಇಲ್ಲವೇ ಯಾರದೋ ಮರ್ಜಿಗೆ ಬಿದ್ದೋ ತಮ್ಮ ಮತಗಳನ್ನು ಹಾಕುವವರೇ ಹೆಚ್ಚಿನವರು. ಅದರಲ್ಲೂ ಜಾತಿ, ಒಳಜಾತಿ,  ಮತ, ಧರ್ಮ, ಒಳಧರ್ಮಗಳ  ಸೆರೆಯಲ್ಲಿರುವವರು ಆ ವಿಚಾರಗಳ ಮೇಲೆಯೇ ತಮ್ಮ ಮತವನ್ನು ನೀಡುತ್ತಾರೆ. ಈ ವಿಬಾಗದಲ್ಲಿ ವಿದ್ಯಾವಂತರೆನಿಸಿಕೊಂಡವರೂ ಬಹಳ ಜನರಿದ್ದಾರೆ. ಆಗಲೂ ಶೇಕಡಾವಾರು ಮತದಾನವನ್ನು ನೋಡಿದರೆ ಬಹಳ ಕಡಿಮೆಯೇ ಆಗಿರುತ್ತದೆ. ಒಬ್ಬ ಅಭ್ಯರ್ಥಿಯನ್ನು ಪುರಸ್ಕರಿಸುವವರಿಗಿಂತಲೂ ತಿರಸ್ಕರಿಸುವವರೇ ಬಹುಸಂಖ್ಯಾತರಾಗಿರುತ್ತಾರೆ.

ಈ ಬಾರಿ ಒಬ್ಬ ಅಭ್ಯರ್ಥಿ ಹಾಗೂ  ಪಕ್ಷವನ್ನು ಬೆಂಬಲಿಸಿ, ಸಂಘ ಪರಿವಾರ ಹಾಗೂ ಬಿಜೆಪಿಯನ್ನು ವಿರೋಧಿಸಿ ಪ್ರಚಾರ ನಡೆಸಿದ ಸಮಾಜಮುಖಿ ಗುಂಪಿಗೆ ಇವರ ಭಾಷಣಗಳೆಲ್ಲಾ ಮುಗಿದ ಮೇಲೆ ಕೊನೆಯಲ್ಲಿ ಜನರು ಕೇಳುತ್ತಿದ್ದುದು ‘ಅವರು ಇಷ್ಟು ಹಣ ಕೊಡುತ್ತೇವೆಂದು ಹೇಳಿದ್ದಾರೆ ನೀವು ಹೇಳಿದ ಅಭ್ಯರ್ಥಿಗೆ ಮತ ನೀಡಿದರೆ ನೀವು ಎಷ್ಟು ಕೊಡುತ್ತೀರಿ’ ಎಂದು. ಬಹುಪಾಲು ಜನರಿಗೆ ಚುನಾವಣೆಯೆಂದರೆ ಇಷ್ಟೇಯೇ. ಇದಕ್ಕಿಂತ ಹೆಚ್ಚಿನ ಲಾಭ ಅವರಿಗೆ ಈ ವರೆಗೂ ಕಾಣಿಸಿಲ್ಲವೆನ್ನೋದೇ ವಾಸ್ತವ. ಅಂದರೆ ನಮ್ಮ ದೇಶ ಇನ್ನೂ ಪ್ರಜಾತಂತ್ರೀಕರಣವಾಗಿಲ್ಲ.  ಅದು ಕೇವಲ ಚುನಾವಣೆಗಳಿಂದ ಮಾತ್ರ ಆಗುವಂತಹುದೂ ಅಲ್ಲ. ಪ್ರಜಾತಂತ್ರ ಬೇರು ಮಟ್ಟದಿಂದ ನೆಲೆಗೊಂಡಾಗ ಮಾತ್ರ ಪ್ರಜಾ ಪ್ರಭುತ್ವ ಅಸ್ತಿತ್ವಕ್ಕೆ ಬರಲು ಸಾಧ್ಯ. ಅದಿಲ್ಲದೇ  ಏನೇ ಹೇಳಿದರೂ ಅದು ಆಳುವ ಶಕ್ತಿಗಳಿಗೆ ಜನಸಾಮಾನ್ಯರನ್ನು ಯಾಮಾರಿಸುವ ಸಾಧನಗಳಾಗಿ ಬಳಕೆಯಾಗುತ್ತವೆ.

ಚುನಾಯಿತ ರೀತಿಯ ಫ್ಯಾಸಿಸ್ಟ್ ನಿರಂಕುಶತ್ವವನ್ನೇ  ಪ್ರಜಾ ಪ್ರಭುತ್ವದ ಸೋಗಿನಡಿಯಲ್ಲಿ ಪಾಲಿಸಿಕೊಂಡು ಬರಲಾಗಿದೆ. ಮೊದಲು ಅದಕ್ಕೆ ಹೆಚ್ಚು ಪರದೆಯಿದ್ದರೆ ಈಗದು ತನ್ನ ನಗ್ನ ರೂಪ ಪ್ರದರ್ಶಿಸಬೇಕಾಗಿ ಬಂದಿದೆ. ಇಂದಿನ ಸ್ಥಿತಿ ಹೇಗಿದೆಯೆಂದರೆ ಆಳುವ ಶಕ್ತಿಗಳು ತೋರುಗಾಣಿಕೆಯ ಪ್ರಜಾಪ್ರಭುತ್ವವನ್ನು ಕೂಡ ಜನಸಾಮಾನ್ಯರ ಮುಂದೆ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಮೊದಲೂ ಕೂಡ ಅದು ಬಹುಸಂಖ್ಯಾತರ ಪ್ರಜಾ ಪ್ರಭುತ್ವವಾಗಿರಲಿಲ್ಲ. ಈಗ ಸಂವಿಧಾನ, ಸಂಸತ್ತು ಚುನಾವಣೆಗಳನ್ನು ರಾಜಾ ರೋಷವಾಗಿ ಬಳಸಿಕೊಂಡು ಫ್ಯಾಸಿಸ್ಟ್ ಆಡಳಿತವನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಹೇರಲಾರಂಭಿಸಿದೆ.

ಭಾರತದ ಮದ್ಯಮ ವರ್ಗ ಸಾಪೇಕ್ಷವಾಗಿ ಈ ‘ಪ್ರಜಾಪ್ರಭುತ್ವ’ದ ಕೆಲವು ಫಲಗಳನ್ನು ಪಡೆಯುತ್ತಾ ಬಂದಿತ್ತು. ಈಗ ಅದಕ್ಕೆ ಆ ಫಲಗಳು ಸಿಗಲಾಗದ ಸ್ಥಿತಿ ಬಂದಿದೆ. ಜಾಗತೀಕರಣದ ಸಾಪೇಕ್ಷ ಫಲಾನುಭವಿಗಳೂ ಕೂಡ ಪ್ರಧಾನವಾಗಿ ಈ ಮದ್ಯಮ ವರ್ಗವೇ ಆಗಿತ್ತು. ಅದು ಈಗ ಕರಗಿರುವುದರಿಂದಾಗಿ ಈ ವರ್ಗ ಹತಾಶ ಸ್ಥಿತಿಯಲ್ಲಿದೆ. ಅಸಮಾಧಾನ, ಅಸಹನೆ, ಆಕ್ರೋಷಗಳಿಂದ ಅದು ತತ್ತರಿಸುತ್ತಿದೆ. ಅದರಿಂದಾಗಿ ಸಂಘ ಪರಿವಾರ ಮುಂದೊಡ್ಡುತ್ತಿರುವ ಜಾತಿ ಹಾಗೂ ಕೋಮು ವಿಷಗಳನ್ನು ಹಾಗೆಯೇ ಈ ವರ್ಗದ ಯುವ ಸಮೂಹ ನುಂಗುತ್ತಿದೆ. ಅದಕ್ಕೆ ಈಗ ಪ್ರಜಾ ಪ್ರಭುತ್ವ ಮೌಲ್ಯಗಳು ಕಂಟಕವೆನಿಸತೊಡಗಿದೆ. ಏಕ ವ್ಯಕ್ತಿ ಆಡಳಿತ, ಇಲ್ಲವೇ ಸೇನಾ ಮಾದರಿಯ ಫ್ಯಾಸಿಸ್ಟ್ ಆಡಳಿತದ ಅಮಲಿನಲ್ಲಿ ಬಿದ್ದಿದೆ. ಬಲಿಷ್ಠ ವ್ಯಕ್ತಿಯ ಕೈಯಲ್ಲಿ ದೇಶವಿದ್ದರೆ ತಾವು ಸುರಕ್ಷಿತರಾಗಬಹುದೆಂಬ ಭ್ರಮೆಗಳಲ್ಲಿ  ತೇಲುತ್ತಿದೆ. ಇವರುಗಳೇ ಸಂಘ ಪರಿವಾರ ಹಾಗೂ ಬಿಜೆಪಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಅದರಿಂದ ಅವರಿಗೆ ಸಾಕಷ್ಟು ಆರ್ಥಿಕ ಲಾಭವೂ ಸಿಗುತ್ತಿದೆ.

ಭಾರತ ದೇಶದಲ್ಲಿ ಪ್ರಾಬಲ್ಯದಲ್ಲಿರುವ  ದರ್ಮ, ಜಾತಿ, ಆಚಾರ, ದೇವರು, ನಂಬಿಕೆ ಮೊದಲಾದ ವಿಚಾರಗಳಲ್ಲಿನ ಹಳೇ ಊಳಿಗಮಾನ್ಯ ಚಿಂತನೆಗಳನ್ನು ಸುಲಭವಾಗಿ ಸಂಘಪರಿವಾರ  ಬಳಸಿಕೊಳ್ಳುತ್ತಿದೆ. ಕಾರ್ಪೋರೇಟ್ ಹಾಗೂ ಭಾರಿ ಆಸ್ತಿವಂತ ಶಕ್ತಿಗಳ ಎಲ್ಲಾ ಬೆಂಬಲವೂ ಅದಕ್ಕಿದೆ. ವಿರೋಧ ಪಕ್ಷಗಳು ವಿರೋಧಿಸಲಾಗದಂತೆ ಶಕ್ತಿಹೀನವಾಗಿ ಕುಳಿತಿರುವ ಸಂಧರ್ಭ ಕೂಡ ಅದಕ್ಕೆ ಮತ್ತಷ್ಟು ಪೂರಕವಾಗಿದೆ. ಅಂತಹ ವಿರೋಧ ಪಕ್ಷಗಳನ್ನೇ ನೆಚ್ಚಿಕೊಂಡು ಸಂಘ ಪರಿವಾರದ ಫ್ಯಾಸಿಸ್ಟ್ ಶಕ್ತಿಗಳಿಗೆ ತಡೆಯೊಡ್ಡಬಹುದು ಎಂದುಕೊಳ್ಳುವುದು ಫ್ಯಾಸಿಸ್ಟ್ ಶಕ್ತಿಗಳಿಗೆ ಪೂರಕವಾಗುತ್ತವೆಯೇ ಹೊರತು ಬೇರೇನೂ ಆಗುವುದಿಲ್ಲ. ಅಲ್ಲದೆ ಅಂತಹ ನಿಲುವು ತಾಳಿ ಪ್ರಚಾರಕ್ಕೆ ಇಳಿಯುವವರ ಬಗ್ಗೆ ಭರವಸೆ ಕೂಡ ಜನರಲ್ಲಿ ಮೂಡುವುದಿಲ್ಲ. ಜನಸಾಮಾನ್ಯರ ನೈಜ ಪರ್ಯಾಯವೊಂದೇ ಏನನ್ನಾದರೂ ಸಾಧಿಸಬಲ್ಲದೇ ಹೊರತು ಬೇರೇನಿಲ್ಲ. ವಿರೋಧ ಮಾಡಲಾಗದ ವಿರೋಧ ಪಕ್ಷಗಳನ್ನು ಮತ್ತವುಗಳ ನಾಯಕರನ್ನು ಹೊರಗಿಟ್ಟು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನಸಾಮಾನ್ಯರನ್ನು ಒಂದೇ ಕಡೆ ಅಣಿನೆರೆಸುವ ಚಟುವಟಿಕೆಗಳು, ಕಾರ್ಯಕ್ರಮಗಳು ಹೆಚ್ಚಾಗಬೇಕಾದ ಅವಶ್ಯಕತೆ ಬಹಳ ಇದೆ.

26/05/2019                                                                                         -ನಂದಕುಮಾರ್ ಕೆ. ಎನ್
                                                                                     - ಕುಂಬ್ರಿಉಬ್ಬು –ಕೊಪ್ಪ 577126
Email: nandakumarnandana67@gmail.com

ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ಪ್ರಕಟಿತ ಲೇಖನ
ನಂದಕುಮಾರ್ ಕೆ. ಎನ್‌

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...