ಜನಸಾಮಾನ್ಯರ ತೀರದ ವ್ಯಥೆಯೂ!
ಅದು 2014 ರ ಸಂದರ್ಭ. ಅದುವರೆಗೂ ಮೋದಿ ಪ್ರಧಾನಿ ಪಟ್ಟದಲ್ಲಿ ಕುಳಿತುಕೊಳ್ಳಬಹುದೆಂದು ನಿರೀಕ್ಷಿಸಿದವರು
ಬಹಳ ಕಡಿಮೆ ಜನ. ಯಾಕೆಂದರೆ ಬಿಜೆಪಿಯ ಹೈ ಕಮಾಂಡಿನಲ್ಲೇ ಮೋದಿ ಬಗ್ಗೆ ಒಪ್ಪಿಗೆಯಿರಲಿಲ್ಲ. ಮೋದಿಗೆ
ಬಿಜೆಪಿಯಲ್ಲೂ ಹೇಳಿಕೊಳ್ಳುವಂತಹ ಹಿಡಿತವೇನೂ ಇರಲಿಲ್ಲ. ವಾಜಪೇಯಿ, ಅಡ್ವಾನಿ ಮುರಳಿಮನೋಹರ ಜೋಷಿಯಾದಿಯಾಗಿ
ಬಿಜೆಪಿ ನಾಯಕತ್ವ ಕೆಲವು ಸಂಧರ್ಭಗಳಲ್ಲಿ ಮೋದಿಗೆ ಪ್ರತಿಕೂಲವಾದ ಮಾತುಗಳನ್ನೂ ಆಡಿದ್ದರು. ಗುಜರಾತ್
ನರಮೇಧದ ಬಗ್ಗೆ ದೇಶದಾದ್ಯಂತ ಆಕ್ರೋಷ ವ್ಯಕ್ತವಾಗಿತ್ತು. ಆ ನರಮೇಧ ನರೇಂದ್ರ ಮೋದಿಯ ನೇರ ನಿರ್ದೇಶನದಲ್ಲಿ
ನಡೆದಿತ್ತು ಎಂದು ಅ ಮೊದಲು ಕುಮಾರ್ ನಂತರ ಸಂಜೀವ್ ಭಟ್ ಸೇರಿದಂತೆ ಕೆಲವು ಐಪಿಎಸ್ ಅಧಿಕಾರಿಗಳು ಬಹಿರಂಗವಾಗಿಯೇ
ಹೇಳಿದ್ದರು. ನ್ಯಾಯಾಲಯಗಳಲ್ಲಿ ಹಲವು ಖಟ್ಲೆಗಳನ್ನು ಹೂಡಲಾಗಿದ್ದವು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ
ಎರಡು ಅವಧಿಗೆ ಆಯ್ಕೆಯಾಗಿದ್ದು ಮೂರನೇ ಅವಧಿಗೂ ಅವರು ಸ್ಪರ್ದಿಸುತ್ತಾರೆಂದು ಇತ್ತು. ಆದರೆ ಆಗಲೇ ಮೊದಲಿನಿಂದಲೂ ಹೇಳಲಾಗುತ್ತಿದ್ದ ಮೋದಿ ಹವಾ ಗುಜರಾತಿನಲ್ಲೂ
ಇದ್ದಿರಲಿಲ್ಲ. ಪಾಟಿದಾರ್ ಸಮೂಹ ಮೋದಿಯ ವಿರುದ್ದ ನಿಲ್ಲಲಾರಂಭಿಸಿದ್ದರು. ಗುಜರಾತಿನ ಜನಸಾಮಾನ್ಯರಲ್ಲಿ
ಮೋದಿ ಪಾಲನೆ ಬಗ್ಗೆ ಅಸಮಾಧಾನಗಳು ಬೆಳೆದಿದ್ದವು.
ನಂತರದ್ದು ಆಕಸ್ಮಿಕವೆನ್ನುವಂತೆ ಕಾಣಿಸತೊಡಗಿ
ಅಚ್ಚರಿಪಡುವಂತಹ ರೀತಿಯ ಬೆಳವಣಿಗೆಗಳು ನಡೆದವು. ಅದುವರೆಗೂ
ಅವರ ಪಕ್ಷದಲ್ಲೇ ಬೆಂಬಲ ಇಲ್ಲವೆಂದು ಅನಿಸಿದ್ದು ನಂತರ ಪೂರ್ತಿ ತಿರುಗ ಮುರುಗಾಯಿತು. ಅದುವರೆಗೂ ಇರದಿದ್ದ
ಬೆಂಬಲ ಅವರ ಪಕ್ಷದಲ್ಲೇ ಅವರಿಗೆ ಕಾರ್ಯಕರ್ತರಿಂದ ಆಶ್ಚರ್ಯಕರ ರೀತಿಯಲ್ಲಿ ಕಾಣಿಸತೊಡಗಿತು. ನಮೋ ಬ್ರಿಗೇಡ್
ಗಳಂತಹ ಹೊಸ ಹೊಸ ಸಂಘಟನೆಗಳು ಎಲ್ಲೆಲ್ಲೂ ಕಾಣಿಸತೊಡಗಿದವು. ಜೊತೆಗೆ ನಮೋ ಬನಿಯನ್, ನಮೋ ಟೋಪಿ, ನಮೋ
ಷರ್ಟ್ ಹೀಗೆಲ್ಲಾ ಹೊರಬಂದವು. ಅಡ್ವಾನಿ ಜೋಷಿಯಾದಿಗಳು ಏನೂ ಮಾಡಲಾಗದೇ ಹೈಕಮಾಂಡನ್ನು ಪಕ್ಕಕ್ಕೆ ಸರಿಸಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ನಂತರದ್ದು ಮತ್ತೊಂದು
ಕತೆ. ಭಾರತ ಅದುವರೆಗೂ ಕಂಡಿರದಿದ್ದ ಮಟ್ಟದಲ್ಲಿ ಭಾರಿ ಪ್ರಚಾರ ತಂತ್ರಗಳನ್ನು ಬಳಸಲಾಯಿತು. ಅದರಲ್ಲಿ
ಅಂತರ್ಜಾಲ, ಆಕಾಶವಾಣಿ, ದೂರದರ್ಶನ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳನ್ನು
ವ್ಯಾಪಕವಾಗಿ ಏಕಪಕ್ಷೀಯವಾಗಿ ಬಳಸಲಾಯಿತು. ಸಾಮಾಜಿಕ ಜಾಲತಾಣಗಳದು ಅದರಲ್ಲೆಲ್ಲಾ ವಿಶೇಷವಾದುದು. ಇವುಗಳನ್ನೆಲ್ಲಾ
ನಿರ್ವಹಿಸಲು ಸಾವಿರಾರು ಸಂಖ್ಯೆಯ ಜನರನ್ನು ಚಾಲನೆಗೊಳಿಸಲಾಯಿತು. ಅದರಲ್ಲಿ ಐಟಿ ಉದ್ಯೋಗಿಗಳದು ದೊಡ್ಡ
ಪಡೆಯಿತ್ತು. ಇವರೆಲ್ಲರಿಗೂ ಭಾರಿ ಆಕರ್ಷಕ ಸಂಬಳವೂ ಇತ್ತು. ದ್ವೇಷ ಹರಡುವವರ, ಅಕ್ಷರ ಧಾಳಿಗಳನ್ನು
ನಡೆಸುವ, ದೈಹಿಕ ಧಾಳಿಗಳನ್ನು ನಡೆಸುವ, ಮೋದಿ ಬಗ್ಗೆ ಟೀಕೆ ವಿಮರ್ಶೆಗಳು ಬಾರದಂತೆ, ಬಂದರೂ ಹರಡದಂತೆ
ನೋಡಿಕೊಳ್ಳುವ ತಂಡಗಳು ಎಲ್ಲೆಲ್ಲೂ ಕಾರ್ಯಾಚರಿಸತೊಡಗಿದವು. ಸಾಮಾಜಿಕ ಮಾಧ್ಯಮಗಳಾದ ಪೇಸ್ ಬುಕ್, ವಾಟ್ಸಾಪ್,
ಟ್ವಿಟ್ಟರ್, ಯೂ ಟ್ಯೂಬ್ ಗಳಂತಹವುಗಳನ್ನೂ ಮೋದಿ ಪರವಾಗಿ ಇರುವಂತೆ ನೋಡಿಕೊಳ್ಳಲಾಯಿತು. ಅದಕ್ಕೆ ಅವರಿಗೆ
ಕೊಡಬೇಕಾದ ಇನಾಮುಗಳನ್ನು ಕೊಡಲಾಗಿತ್ತು.
ಭಾರಿ ಜಾಗತಿಕ ಕಾರ್ಪೊರೇಟ್ ಕಂಪನಿಗಳು ಮೊಟ್ಟ
ಮೊದಲಿಗೆ ಒಂದು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವಾಗ ಮಾಡುವ ಜಾಹೀರಾತು ವಿದಾನಗಳಿಗಿಂತಲೂ ಹತ್ತಾರು
ಪಟ್ಟು ಹೆಚ್ಚಿನ ರೀತಿಗಳಲ್ಲಿ ಮೋದಿ ಬ್ರಾಂಡ್ ಅನ್ನು ನಿರ್ಮಾಣ ಮಾಡಲಾಯಿತು. ಮೋದಿಯನ್ನು ಜನಸಾಮಾನ್ಯರ ಬಳಿ ತೆಗೆದುಕೊಂಡು ಹೋಗಲು ಮೋದಿ ತಂಡ ಬಿತ್ತಿದ
ಕತೆಯನ್ನು ಹಿಡಿದು ಕಾಂಗ್ರೆಸ್ಸಿನ ಮಣಿ ಶಂಕರ್ ಅಯ್ಯರ್ ಮಾಡಿದ ಮೋದಿಯ ಚಾಯ್ ಮಾರಾಟದ ಬಗ್ಗೆ ನಿಂದನಾತ್ಮಕ ಹೇಳಿಕೆಯನ್ನೇ
‘ಚಾಯ್ ಪೇ ಚರ್ಚಾ’ ಎಂದು ಜನಪ್ರಿಯಗೊಳಿಸಿ ಹಿಂದೆಂದೋ
ಚಾಯ್ ಮಾರಿದ್ದ ಅತೀ ಸಾಮಾನ್ಯ ವ್ಯಕ್ತಿಯನ್ನಾಗಿ ಮೋದಿಯನ್ನು
ಬಿಂಬಿಸಲಾಯಿತು. ಅದು ಸಾಕಷ್ಟು ಪ್ರಮಾಣದಲ್ಲಿ ಜನಸಾಮಾನ್ಯರನ್ನು ತಟ್ಟಿತ್ತು ಕೂಡ. ಆದರೆ ಮೋದಿ ಎಂದೂ
ಚಾಯ್ ಮಾರಿದ ಉದಾಹರಣೆಯೇ ಇರಲಿಲ್ಲ ಎನ್ನುವುದು ನಂತರ ಬಯಲಾಯಿತು. ಅವೆಲ್ಲಾ ಉತ್ಪಾದಿತ ಸುಳ್ಳುಗಳ
ಭಾಗವಾಗಿದ್ದವು ಎನ್ನುವುದು ಬಹುತೇಕರಿಗೆ ಅರ್ಥವಾಗತೊಡಗಿದ್ದು ಇತ್ತೀಚೆಗಷ್ಟೇ.
ಮೋದಿ ಬ್ರಾಂಡ್ ನಿರ್ಮಿಸುವ ಭರಾಟೆಯಲ್ಲಿ
ಬಿಜೆಪಿಯಲ್ಲಿ ಆಗ ಅಡ್ವಾನಿಗಾಗಲೀ ವಾಜಪೇಯಿಗಾಗಲೀ
ಜೋಷಿಗಾಗಲೀ ಹೇಳಿಕೊಳ್ಳುವಂತಹ ಸ್ಥಾನವಿರಲೇ ಇಲ್ಲ. ಬಿಜೆಪಿ ಪಕ್ಷವನ್ನೂ ಮೀರಿದಂತೆ ಮೋದಿ ಹವಾ ನಿರ್ಮಿಸಲು
ಹತ್ತು ಹಲವು ಹೊಸ ಪ್ರಚಾರ ತಂತ್ರಗಳನ್ನು ಹೆಣೆದು ಜಾರಿಗೊಳಿಸಲಾಯಿತು. ಆ ತಂತ್ರಗಳಲ್ಲಿ ಧನಾತ್ಮಕಕ್ಕಿಂತಲೂ
ಅಧಿಕವಾಗಿ ಋಣಾತ್ಮಕ ಪ್ರಚಾರ ತಂತ್ರ ಹೆಚ್ಚಿತ್ತು.
ಅಂದರೆ ಮುಸ್ಲಿಂ ಹಾಗೂ ಕ್ರೈಸ್ತ ಅಲ್ಪ ಸಂಖ್ಯಾತರನ್ನು,
ಪಾಕಿಸ್ತಾನವನ್ನು, ಪ್ರಗತಿಪರರನ್ನು, ಪ್ರಜಾತಂತ್ರ ವಾದಿಗಳನ್ನು, ಪ್ರಜಾ ತಾಂತ್ರಿಕ ಮೌಲ್ಯಗಳನ್ನು,
ವಿರೋಧ ಪಕ್ಷಗಳನ್ನು ( ಈ ಪಕ್ಷಗಳ ಮಹಾ ಸಾಧನೆಗಳ ಬಗ್ಗೆ
ಜನರಿಗೆ ಮೊದಲೇ ಬಹುತೇಕವಾಗಿ ಗೊತ್ತಿದ್ದುದರಿಂದ
ಇವರುಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾದ ಅವಶ್ಯಕತೆಯೇ ಬಂದಿರಲಿಲ್ಲ ಬಿಡಿ ), ಅತ್ಯಂತ ಕೆಟ್ಟ ರೀತಿಯಲ್ಲಿ
ಬಿಂಬಿಸಿ ಜನರೆದುರು ನಿಲ್ಲಿಸುವ ಕೆಲಸ ಭಾರಿ ವ್ಯವಸ್ಥಿತ ರೀತಿಗಳಲ್ಲಿ ಮಾಡಲಾಯಿತು. ವಿವಾದಗಳು ಏಳುವಂತೆ
ಮಾಡಿ ಪ್ರಚಾರ ಮಾಡಲಾಯಿತು.
ನೋಡ ನೋಡುತ್ತಿದ್ದಂತೆ ಇಡೀ ಚುನಾವಣಾ ವಾತಾವರಣವೇ
ಬದಲಾಗತೊಡಗಿತ್ತು. ಎಲ್ಲೆಡೆಯೂ ಮೋದಿ ಅಲೆಯೆದ್ದು ಬೀಸುತ್ತಿದೆ ಎನಿಸತೊಡಗಿತು. ಜೊತೆ ಮೋದಿ ಜನಸಾಮಾನ್ಯರ,
ನಿರುದ್ಯೋಗಿಗಳ ಭಾಗ್ಯವಿದಾತನೆಂಬಂತೆ ತನ್ನ ವಾಝ್ಜರಿಯಿಂದಲೂ ಬಿಂಬಿಸಲು ಸಾಕಷ್ಟು ಯಶಸ್ವಿಯಾಗಿದ್ದರು.
ಹಲವು ಸಮಾಜಮುಖಿ ಮನಸುಗಳು ಮೋದಿ ವ್ಯಕ್ತಿಯಾಗಿ ಬಿಜೆಪಿ ಇಲ್ಲವೇ ಸಂಘ ಪರಿವಾರದ ರೀತಿಯಲ್ಲಿ ಅಲ್ಲ.
ಮೋದಿ ಆಡಳಿತವಿದ್ದ ಗುಜರಾತಿನಲ್ಲಿ ಸಂಘ ಪರಿವಾರದ ಚಟುವಟಿಕೆಗಳು ಚಿಗುರದಂತೆ ನೋಡಿಕೊಂಡಿದ್ದರು ಎಂದೆಲ್ಲಾ
ಗೊತ್ತಿದ್ದೋ ಗೊತ್ತಿಲ್ಲದಂತೆಯೋ ಮೋದಿಯ ಬಗ್ಗೆ ಸದಭಿಪ್ರಾಯವನ್ನು ಹರಡತೊಡಗಿದ್ದರು. ಹಲವರು ಮೋದಿ
ಸಂಘ ಪರಿವಾರದ ಅಣತಿಯಂತೆ ಕಾರ್ಯ ನಿರ್ವಹಿಸದಿದ್ದರೂ ಅದಾನಿ, ಅಂಬಾನಿ, ಟಾಟಾಗಳಂತಹ ಭಾರಿ ಕಾರ್ಪೋರೇಟುಗಳ
ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ಹೇಳಿದರು.
ಮೋದಿ ಆಡಳಿತದಲ್ಲಿ ಗುಜರಾತ್ ಅಧ್ಬುತ ಬೆಳವಣಿಗೆಗಳನ್ನು ಸಾಧಿಸಿತು ಎಂದೆಲ್ಲಾ ಹೇಳತೊಡಗಿದರು. ಆದರೆ
ಅವರು ಹೇಳುತ್ತಿದ್ದ ಅಂಕಿ ಅಂಶಗಳು ಸುಳ್ಳಾಗಿದ್ದವು ಎನ್ನುವುದು ಬಹುತೇಕರಿಗೆ ಅರಿವಾಗಿದ್ದು ಬಹಳ ನಂತರವೇ.
ಮೋದಿಯ ಬಿಜೆಪಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ
ಭಾರಿ ಬಹುಮತ ಪಡೆದು ಸುಮಾರು ಎರಡು ದಶಕಗಳ ನಂತರ ಬಹುಮತದ
ಸರ್ಕಾರವೊಂದನ್ನು ಸ್ಥಾಪಿಸಲಾಯಿತು. ಇದು ಮೋದಿಯ ಭಾರಿ ಸಾಧನೆಯನ್ನಾಗಿಯೂ ಬಿಂಬಿಸಿಡಲಾಯಿತು. ಚುನಾವಣೆಯಲ್ಲಿ
ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಗಳನ್ನು ಹಂಚಿಕೆ ಮಾಡಿ ಒತ್ತಿದ ಮತಗಳೆಲ್ಲವೂ ಮೋದಿ ಪರವಾಗಿಯೇ ಹೋಗುವಂತೆ ಮಾಡಲಾಗಿತ್ತು
ಎಂಬ ವರದಿಗಳೂ ಬಂದವು. ಅಷ್ಟರಲ್ಲಿ ಆಗಲೇ ಭಾರತದ ಮಧ್ಯಮ ವರ್ಗ ಮೋದಿ ಮೋಡಿಯೊಳಗೆ ಸಿಲುಕಿ ತೇಲಾಡತೊಡಗಿದ್ದರು.
ಭಾರಿ ಭರವಸೆಗಳನ್ನೂ ಹೊಂದಿದ್ದರು. ನಂತರದ ಎರಡು ವರ್ಷಗಳ ಕಾಲ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ,
ಸಬ್ಸಿಡಿ ಹಣ ನೇರ ಬ್ಯಾಂಕ್ ಖಾತೆಗೆ, ಭೇಟಿ ಪಡಾವೋ
ಭೇಟಿ ಬಚಾವೋ, ಪ್ರಧಾನ್ ಮಂತ್ರಿ ಜನಧನ್ ಯೋಜನಾ, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನಾ, ಇತ್ಯಾದಿ ಯೋಜನೆಗಳನ್ನು
ಜನಸಾಮಾನ್ಯರಿಗೆ ಆಕರ್ಷಕವಾಗುವಂತೆ ಮಾಡಿ ಮುಂದಿಡಲಾಯಿತು.
ಆದರೆ ವಾಸ್ತವದಲ್ಲಿ ಇವುಗಳು ಯಾವುವೂ ಜನಸಾಮಾನ್ಯರಿಗೆ ಪ್ರಯೊಜನಕ್ಕೆ ಬಾರದ, ಅಪಾಯಕಾರಿಯೂ ಆದ ಅದೇ ವೇಳೆ ಭಾರಿ ಕಾರ್ಪೊರೇಟುಗಳಿಗೆ ಸೂಪರ್ ಬಂಪರ್ ಲಾಭಗಳನ್ನು
ಮಾಡುವ ಯೋಜನೆಗಳಾಗಿದ್ದವು ಎನ್ನುವುದು ಹಲವರಿಗೆ ಗೊತ್ತಾಗಿದ್ದು
ನಂತರವೇ. ನಂತರ ನೋಟು ರದ್ದತಿ, ಜಿ ಎಸ್ ಟಿ ಹೇರಿಕೆ.
ನೋಟು ರದ್ದತಿಯನ್ನು ಬಹುತೇಕ ಜನರು ಸ್ವಾಗತಿಸುವಂತಹ ರೀತಿಯಲ್ಲಿ ಬಿಂಬಿಸಿ ಮಾಡಲಾಗಿತ್ತು. ಇದು ಸರ್ಕಾರ
ಮಾಡಿದ ದೇಶದ ಜನಸಾಮಾನ್ಯರ ಹಗಲು ದರೋಡೆ ಎನ್ನುವುದು ಹಲವರಿಗೆ ಗೊತ್ತಾಗಿದ್ದು ಇತ್ತೀಚೆಗೆ. ಈ ನಡುವೆ
ಹಲವು ನೀತಿ ಬದಲಾವಣೆಗಳು, ಕಾನೂನು ತಿದ್ದುಪಡಿಗಳು ಇತ್ಯಾದಿಗಳೆಲ್ಲಾ ನಡೆದವು. ಸರಕಾರಿ ಹಿಡಿತದ ಲಾಭಪೂರಿತ
ಸಂಸ್ಥೆಗಳೆಲ್ಲಾ ನಷ್ಟ ತೋರಿಸುವ ಇಲ್ಲವೇ ಖಾಸಗಿಯವರಿಗೆ ಮಾರಾಟವಾಗುವ ರೀತಿ ಆಗತೊಡಗಿತು.
ಅಂದರೆ ತಮಗೆ ಬೇಕಾದ ಒಬ್ಬ ವ್ಯಕ್ತಿಯನ್ನು
ಆಧರಿಸಿದ ಸರ್ಕಾರವನ್ನು ಅಧಿಕಾರಕ್ಕೆ ತಂದು ತಮಗೆ ಬೇಕಾದ ಹಾಗೆ ಕಾನೂನು ಕಟ್ಟಳೆಗಳನ್ನು ತಿರುಚಿ,
ಉಲ್ಲಂಘಿಸಿ, ಹಾಗೆ ಸಾದ್ಯವಾಗದವುಗಳನ್ನು ಮಾರ್ಪಡಿಸಿ ಐದು ವರ್ಷಗಳ ಕಾಲ ಜನಸಾಮಾನ್ಯರನ್ನು ಈ ಮಟ್ಟದಲ್ಲಿ
ದೋಚಿ ಭಾರಿ ಕಾರ್ಪೋರೇಟುಗಳಿಗೆ ಈ ಮಟ್ಟದ ಸೂಪರ್ ಡೂಪರ್ ಲಾಭ ಮಾಡಿಕೊಟ್ಟಂತಹ ಸರ್ಕಾರ ಮೋದಿ ಸರಕಾರ.
ಅದಾನಿ, ಅಂಬಾನಿ ಕೂಟ ಇದರ ಅತ್ಯಂತ ಹೆಚ್ಚಿನ ಫಲಾನುಭವಿಗಳೆಂದು ಮೇಲ್ಮಟ್ಟದಲ್ಲಿ ಕಾಣಿಸುತ್ತದೆ. ಆದರೆ
ವಾಸ್ತವ ಅಷ್ಟು ಮಾತ್ರವೇ ಅಲ್ಲ.
ಮೋದಿಯನ್ನು ಜನಪ್ರಿಯ ಜನನಾಯಕನನ್ನಾಗಿ ಬಿಂಬಿಸಿ
ಜನಸಾಮಾನ್ಯರನ್ನು ಯಾಮಾರಿಸುವಲ್ಲಿ ಆಪ್ಕೋ ವರ್ಲ್ಡ್
ವೈಡ್ ( APCO-worldwide) ) ಎಂಬ ಅಮೇರಿಕಾ ಮೂಲದ ಅಂತರಾಷ್ಟ್ರೀಯ ಮಟ್ಟದ ಸಾರ್ವಜನಿಕ ಸಂಬಂಧ ಹಾಗೂ
ಲಾಭಿ ಮಾಡುವ ಸಂಸ್ಥೆಯ ನೇರ ಪಾತ್ರವಿದೆ. ಇದು ಅರ್ನಾಲ್ಡ್ ಅಂಡ್ ಪೋರ್ಟರ್ ಎಂಬ ಕಾನೂನು ಸೇವೆ ಸಂಬಂಧಿತ
ಜಾಗತಿಕ ಕಂಪನಿಯ ಅಂಗವಾಗಿದೆ. ಇದಕ್ಕೆ ಅಮೇರಿಕದ ಗೂಢಚಾರಿ ಸಂಸ್ಥೆ ಸಿ ಐ ಎ ಹಾಗೂ ಅಮೇರಿಕದ ಸೇನಾ ಸಂಸ್ಥೆಗಳ ಜೊತೆ ನೇರ ಸಂಬಂಧವಿದೆ
ಎಂಬ ವರದಿಯಿದೆ. ಇದು ತಾನೇ ಹೇಳಿಕೊಳ್ಳುವಂತೆ ಸರಕಾರಗಳಿಗೆ, ರಾಜಕಾರಣಿಗಳಿಗೆ, ಕಾರ್ಪೋರೇಟುಗಳಿಗೆ
ಅಪರೂಪದ ವೃತ್ತಿಪರ ಹಾಗೂ ನೈಪುಣ್ಯತೆಯ ಹಲವು ಸೇವೆಗಳನ್ನು ಒದಗಿಸುತ್ತದೆ. ಅದು ಜನಸಾಮಾನ್ಯರನ್ನು
ಪ್ರಭಾವಿಸಿ ಜನಾಭಿಪ್ರಾಯಗಳನ್ನು ತನ್ನ ಗ್ರಾಹಕರಿಗೆ ಪೂರಕವಾಗುವಂತೆ ಮಾಡುವುದನ್ನೂ ಮಾಡುತ್ತದೆ. ಇದರ
ಸೇವೆಗಳನ್ನು ಪಡೆದಿರುವ ಜಾಗತಿಕವಾಗಿರುವ ಹೆಚ್ ಪಿ
ಕಂಪನಿ, ದೈತ್ಯ ಸಿಗರೇಟು ಕಂಪನಿ ಫಿಲಿಫ್ ಮೋರಿಸ್
ಸೇರಿದಂತೆ ಹಲವಾರು ಭಾರಿ ಕಾರ್ಪೋರೇಟು ಕಂಪನಿಗಳಿವೆ. ಅದೇ ರೀತಿಯಲ್ಲಿ ಹಿಂದಿನ ಬ್ರಿಟೀಷ್
ಪ್ರಧಾನಿ ಟೋನಿ ಬ್ಲೇರ್ ನಂತಹ ಹಲವಾರು ರಾಜಕಾರಣಿಗಳಿದ್ದಾರೆ. ಈ ಕಂಪನಿ ಟೋನಿ ಬ್ಲೇರ್ ಇರಾಕ್ ಯುಧ್ಧದಲ್ಲಿ
ಪಾಲ್ಗೊಳ್ಳಲು ಪೂರಕವಾಗುವಂತೆ ಬ್ರಿಟೀಷ್ ನಾಗರಿಕರ ಅಭಿಪ್ರಾಯಗಳನ್ನು ರೂಪುಗೊಳಿಸುವ ಕೆಲಸ ಮಾಡಿತ್ತು.
ಅಮೇರಿಕ ಕಂಪನಿಗಳಿಗೆ ಯುದ್ಧದಿಂದ ಜರ್ಝರಿತವಾಗಿರುವ ಇರಾಕ್ ಅನ್ನು ಪುನರ್ ನಿರ್ಮಿಸುವ ಗುತ್ತಿಗೆ
ಕೆಲಸಗಳು ಹೆಚ್ಚಾಗಿ ದೊರೆಯುವಂತಾಗಲು ಅಮೇರಿಕದ ಕಂಪನಿಗಳಿಗೆ ಸೇವಾ ಸಹಾಯ ನೀಡಿತ್ತು. ಇತ್ತೀಚೆಗೆ
ಇರಾನ್ ಮೇಲೆ ದಾಳಿ ಮಾಡಲು ಪೂರಕವಾಗುವಂತಹ ವರದಿಯೊಂದನ್ನು ಇದರ ಮಾತೃಸಂಸ್ಥೆಯಾದ ಅರ್ನಾಲ್ಡ್ ಅಂಡ್
ಪೋರ್ಟ್ ರ್ ತಯಾರು ಮಾಡಿತ್ತೆಂದೂ ಹೇಳಲಾಗಿದೆ. ಈ ಸಂಸ್ಥೆ ಇಸ್ರೇಲಿನ ಗೂಢಚಾರ ಸಂಸ್ಥೆ ಮೊಸ್ಸಾದ್
ನ ವಿದೇಶಿ ಏಜೆಂಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿದೆ ಎಂಬ ವರದಿಯೂ ಇದೆ.
ಅಪ್ಕೋ ವರ್ಲ್ಡ್ ವೈಡ್ 2007ರಿಂದಲೇ ಆಗಿನ
ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯ ಸೇವಾ ಸಹಾಯಕ್ಕೆ ನಿಂತಿತ್ತು. ಎರಡನೇ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ
ಆಯ್ಕೆಯಾಗಲು ಸಾಕಷ್ಟು ಕಳೆಗುಂದಿದ್ದ ನರೇಂದ್ರ ಮೋದಿ ಇಮೇಜ್ ಪುನರ್ ನಿರ್ಮಾಣದ ಕೆಲಸದ ಗುತ್ತಿಗೆಯನ್ನು ಅದು ಪಡೆದಿತ್ತು.ಇದಕ್ಕಾಗಿ
ತಿಂಗಳಿಗೆ ಸಾವಿರಾರು ಅಮೇರಿಕನ್ ಡಾಲರ್ ಗಳಷ್ಟು ತೆರಿಗೆದಾರರ ಹಣವನ್ನು ಗುಜರಾತ್ ಸರ್ಕಾರ ಅಪ್ಕೋಗೆ
ನೀಡುತ್ತಿತ್ತು. ‘ವೈಬ್ರೆಂಟ್ ಗುಜರಾತ್’ ಪರಿಕಲ್ಪನೆ ಕೂಡ ಇದರದೇ ಆಗಿತ್ತು. ಅದರಿಂದ ಅದು ಪರೋಕ್ಷವಾಗಿ
ಹಾಗೂ ಪ್ರತ್ಯಕ್ಷವಾಗಿ ಸಾವಿರಾರು ಡಾಲರುಗಳ ಲಾಭ ಪಡೆಯುತ್ತಿತ್ತು.
ನರೇಂದ್ರ ಮೋದಿಗೆ ಅಂಟಿದ್ದ 2000 ಕ್ಕೂ ಹೆಚ್ಚಿನ
ಜನರ ಗೋದ್ರೋತ್ತರ ನರಮೇಧದ ಕರಾಳತೆಯನ್ನು ಅಳಿಸಿ ಸಭ್ಯನನ್ನಾಗಿ ಬಿಂಬಿಸಿ ಜನರೆದುರು ನಿಲ್ಲಿಸುವ ಕೆಲಸ
ಅದರದಾಗಿತ್ತು. ಗೋವು, ಹಿಂದುತ್ವ, ಗುಜರಾತ್ ಮಾದರಿ ಅಭಿವೃದ್ಧಿ, ವಿದೇಶಿ ನೇರ ಹೂಡಿಕೆ, ಅಲ್ಪಸಂಖ್ಯಾತ ಹೀಗೆ ಎಲ್ಲವನ್ನೂ ಅದಕ್ಕಾಗಿ ಸಮರ್ಥವಾಗಿ ಬಳಸಲಾಗಿದ್ದನ್ನು ನಾವು ಗಮನಿಸಬಹುದು. ಹಾಗೆಲ್ಲ
ಮಾಡಿ ಗುಜರಾತ್ ನರಮೇಧದ ಕುರುಹುಗಳನ್ನು ಜನಸಾಮಾನ್ಯರ ಮನಸ್ಸಿನಿಂದಲೇ ಮಸುಕಾಗುವಂತೆ ಮಾಡಿ ಮತ್ತೊಮ್ಮೆ ಗುಜರಾತ್ ಮುಖ್ಯ ಮಂತ್ತ್ರಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದನ್ನು
ನಾವು ಗಮನಿಸಬಹುದು. ಅದಕ್ಕಾಗಿ ‘ನಮೋ’ ಬ್ರಿಗೇಡ್ ‘ಗುಜರಾತ್ ಮಾದರಿ’ ಇತ್ಯಾದಿ ಬಜನೆ ಶುರುವಾಗಿದ್ದರಲ್ಲಿ
ಇದೇ ಕಂಪನಿಯ ಪ್ರಚಾರ ತಂತ್ರವಿದೆ. ಭಾರತದಲ್ಲಿ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಹಿಂದುತ್ವ ಏರುಗತಿಯಲ್ಲಿ
ಮುನ್ನೆಲೆಗೆ ಬರುವಲ್ಲಿ ಜಾಗತಿಕ ಕಾರ್ಪೋರೇಟುಗಳ ನೇರ ಹಿತಾಸಕ್ತಿಯಿದೆ. ಅದಕ್ಕೆ ಇದೂ ಕೂಡ ಒಂದು ತಾಜಾ
ಉದಾಹರಣೆಯಾಗಿದೆ. ಅಂದರೆ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಕೂರಿಸುವಲ್ಲಿ ಕೇವಲ ಅದಾನಿ ಅಂಬಾನಿಗಳದೇ ಪ್ರಧಾನ ಪಾತ್ರವಲ್ಲ ಬದಲಿಗೆ ಅಮೇರಿಕದ
ನೇರ ಪಾತ್ರವೂ ಇತ್ತು. ಮೊದಲು ಅಮೇರಿಕಾ ಮೋದಿಗೆ ವೀಸಾ ನಿರಾಕರಿಸಿದ್ದು ಅಮೇರಿಕದ ಜನರ ಕಣ್ಣಿಗೆ ಮಣ್ಣೆರಚಲು
ಮಾತ್ರವಾಗಿತ್ತು.
ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (
I –PAC ) ಎನ್ನುವ ಒಂದು ಸಂಸ್ಥೆ 2014ರ ಚುನಾವಣಾ ಸಂಧರ್ಭದಲ್ಲಿ ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿಅಸ್ತಿತ್ವಕ್ಕೆ
ಬಂತು. ಇದರ ಮೂಲವೂ ಅಮೇರಿಕದ್ದೇ ಆಗಿದೆ. ಇದರ ಜೊತೆಗೆ
ಸಿಟಿಜನ್ಸ್ ಫಾರ್ ಅಕೌಂಟೇಬಲ್ ಗವರ್ನನ್ಸ್ ( ಸಿ ಎ ಜಿ) ಎಂಬ ಸಂಸ್ಥೆಯನ್ನು ಮಾದ್ಯಮಗಳೆಲ್ಲಾ ಚುನಾವಣಾ ತಂತ್ರ ನಿಪುಣನೆಂದು
ಬಿಂಬಿಸಿದ್ದ ಪ್ರಶಾಂತ್ ಕಿಶೋರ್ ರಚಿಸಿದ್ದ. ಇದರಲ್ಲಿದ್ದವರೆಲ್ಲಾ ಐಐಟಿ, ಐ ಐ ಎಂ, ಸ್ಟಾನ್ ಫೋರ್ಡ್ ಯೂನಿವರ್ಸಿಟಿ, ಕಾರ್ನೆಲ್
ಯೂನಿವರ್ಸಿಟಿ ಮೊದಲಾದ ಕಡೆಯಿಂದ ಬಂದವರೇ ಹೆಚ್ಚಿನವರು ಆಗಿದ್ದರು. ಅವರೆಲ್ಲಾ ಮೆಕಿನ್ಸೆ, ಜೆ ಪಿ
ಮಾರ್ಗನ್, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್, ಆಲ್ ಇಂಡಿಯಾ ರೇಡಿಯೋ
ಮೊದಲಾದೆಡೆ ಕಾರ್ಯ ನಿರ್ವಹಿಸಿದವರಾಗಿದ್ದರು. ಅವರಿಗೆಲ್ಲಾ ಲಕ್ಷಾಂತರ ರೂಪಾಯಿಗಳ ಸಂಬಳ ನೀಡಲಾಗುತ್ತಿತ್ತು.
ಈ ಸಿ ಎ ಜಿ ತನ್ನನ್ನು ಸೋಷಿಯಲ್ ಅಸಿಸ್ಟೆನ್ಸ್ ಆರ್ಗನೈಜೇಷನ್ ( ಸಾಮಾಜಿಕ
ಸಹಾಯಕ ಸಂಘಟನೆ) ಎಂದು ಕರೆದುಕೊಂಡಿತ್ತು. ಬಿಹಾರಿನ
ಮುಖ್ಯ ಮಂತ್ರಿ ನಿತೀಶ್ ಕುಮಾರ್ ಹಾಗೇನೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್
ಕೂಡ ಇದೇ ಪ್ರಶಾಂತ್ ಕಿಶೋರ್ ಸೇವೆಯನ್ನು ಪಡೆದುಕೊಂಡವರಾಗಿದ್ದಾರೆ. ಲಾಭರಹಿತವಾದ ಸೇವೆ ತಮ್ಮದೆಂದು
ಹೇಳುತ್ತಾ ಸಾವಿರಾರು ಕೋಟಿ ರೂಪಾಯಿಗಳನ್ನು ಇಂತಹ ಕೆಲಸಗಳಿಗಾಗಿ ಪಡೆಯುತ್ತಿದೆ. ಕೋಟ್ಯಾಂತರ ರೂಪಾಯಿಗಳು
ಇದರ ಸಿಬಂದಿ ವರ್ಗದವರ ಸಂಬಳಕ್ಕೇ ಬೇಕಾಗುತ್ತದೆ. ಆದರೆ ಅದರ ಆದಾಯ ಮೂಲಗಳ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ. ಅಷ್ಟು ನಿಗೂಢತೆಗಳಿವೆ ಈ ಸಂಸ್ಥೆಗಳ ಕಾರ್ಯ ಕಲಾಪಗಳಲ್ಲಿ.
ಇಷ್ಟೇ ಅಲ್ಲದೇ ನಡುವೆ ಒಬ್ಬ ಯುವತಿಯನ್ನು ಇಂಡಿಯಾದ ಗೂಢಚಾರ ಸಂಸ್ಥೆಗಳು ಹಿಂಬಾಲಿಸಿದ್ದು, ಅದಕ್ಕೆ ನರೇಂದ್ರ ಮೋದಿ ಈಗಿನ ಬಿಜೆಪಿಯ ಅಧ್ಯಕ್ಷ
ಅಮಿತ್ ಷಾ ಹೆಸರು ತಳಕು ಹಾಕಿಕೊಂಡಿದ್ದು ಕೂಡ ಸಾಕಷ್ಟು ವಿವಾದವಾಗಿತ್ತು. ‘ಸ್ನೂಪ್ ಗೇಟ್’ ಪ್ರಕರಣ
ಎಂದೇ ಇದನ್ನು ಆಂಗ್ಲದಲ್ಲಿ ಕರೆಯಲಾಗುತ್ತದೆ. ಆ ಯುವತಿಯೊಂದಿಗೆ ಗುಜರಾತಿನ ಅತ್ಯಂತ ಪ್ರಭಾವಿ ರಾಜಕಾರಣಿಯೊಬ್ಬರ ಹೆಸರು ತಳುಕು ಹಾಕಿಕೊಂಡಿದ್ದು ಆ ಸಂಬಂದದ ನಿಗೂಢ ಸಾಕ್ಷ್ಯಗಳು
ಆಕೆಯ ಬಳಿಯಿದ್ದವು. ಅದಕ್ಕಾಗೇ ಆಕೆಯನ್ನು ಇಂಡಿಯಾದ ಹಲವು ಗೂಢಚಾರ ಹಾಗೂ ರಕ್ಷಣಾ ಸಂಸ್ಥೆಗಳು ಹಿಂಬಾಲಿಸಿದ್ದವು.
ಆಕೆಗೂ ಇಸ್ರೇಲಿನ ಗೂಢಚಾರ ಸಂಸ್ಥೆ ಮೊಸ್ಸಾದ್ ಗೂ ನೇರ ಸಂಬಂಧವಿದೆ ಎಂಬ ವರದಿ ಕೂಡ ಇದೆ. ಆಕೆಯ ಕಂಪನಿ
ನೇರವಾಗಿ ಇಸ್ರೇಲಿನ ಜೊತೆ ಸಂಬಂದ ಹೊಂದಿದೆ.
ಮೊಸ್ಸಾದ್ ತನ್ನಲ್ಲಿ ಮಹಿಳೆಯರನ್ನು ದೊಡ್ಡ
ಪ್ರಮಾಣದಲ್ಲಿ ನಿಯೋಜಿಸಿದೆ. ಈ ಘಟನೆ ಕುರಿತು ನ್ಯಾಯಾಲಯದಲ್ಲೂ ಖಟ್ಲೆಯಿದೆ. ಪ್ರದೀಪ್ ಶರ್ಮ ಎನ್ನುವವರು
ನ್ಯಾಯಾಲಯಕ್ಕೆ ನೀಡಿದ ಅಫಿಡೇವಿಟ್ ನಲ್ಲೂ ಸಾಕಷ್ಟು ಇಂತಹ ಬೆಚ್ಚಿ ಬೀಳಿಸಬಹುದಾದ ಮಾಹಿತಿಗಳಿವೆ.
ಈಗ ನಾವು ಯೋಚನೆ ಮಾಡಬೇಕಾದ ಹಲವು ಗಂಭೀರ ವಿಚಾರಗಳಿವೆ. ಇಲ್ಲಿ
ದೇಶದ ಸಂವಿಧಾನ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ
ಎನ್ನುವುದೆಲ್ಲವನ್ನು ಎಲ್ಲಿ ಹುಡುಕಬೇಕು.’ ಪ್ರಜಾತಂತ್ರದ ಹಬ್ಬ’ ಎಂದು ಹುಸಿತನ
ಮೆರೆದು, ಮಹಾ ಚುನಾವಣೆ ಎಂದು, ಜಗತ್ತಿನಲ್ಲೇ ಅತೀ ದೊಡ್ಡ ಪ್ರಜಾ ಪ್ರಭುತ್ವ ಎಂದೆಲ್ಲಾ ಹೇಳಿದರೂ,
ಆ ಪಕ್ಷ ಈ ಪಕ್ಷ, ಆ ವ್ಯಕ್ತಿ ಈ ವ್ಯಕ್ತಿ ಎಂದೆಲ್ಲಾ ಬಡಿದಾಡಿದರೂ , ಯಾರೇ ಅಧಿಕಾರದಲ್ಲಿ ಬಂದು ಕುಳಿತರೂ
ಏನಾದರೂ ಜನಸಾಮಾನ್ಯರ ಪರವಾದ, ದೇಶದ ಪರವಾದ ಆಡಳಿತವನ್ನ ಪಡೆಯಲು ಸಾಧ್ಯವೇ?
ಅಲ್ಲಿ, ಪ್ರಜಾತಾಂತ್ರಿಕ ಮೌಲ್ಯಗಳನ್ನುಹುಡುಕಲು ಹೋದರೆ ಕತ್ತಲಲ್ಲಿ
ಕಣ್ಣುಕಟ್ಟಿಕೊಂಡು ತಡಕಾಡುವ ಪರಿಸ್ಥಿತಿಯಾಗುವುದಿಲ್ಲವೆ. ಇಂತಹ ಚುನಾವಣೆಗಳ ಪಲಿತಾಂಶಗಳನ್ನು ಮತ್ತು ಆಡಳಿತ ನಡೆಸುವ ಸರಕಾರಗಳನ್ನು ಯಾವ ಶಕ್ತಿಗಳು ನಿರ್ಧರಿಸುತ್ತಿವೆ
ಎನ್ನುವುದು ಈಗಂತೂ ಹತ್ತು ಹಲವು ಉದಾಹರಣೆಗಳಿಂದ ಹೆಚ್ಚು
ಕಡಿಮೆ ಸ್ಪಷ್ಟ ತಾನೆ. ಜನಸಾಮಾನ್ಯರು ತಮ್ಮ ನೈಜ ಪರ್ಯಾಯದ ಬಗ್ಗೆ ಗಂಭೀರವಾಗಿ ಚಿಂತಿಸ ಬೇಡವೇ.!
?
-ನಂದಕುಮಾರ್ ಕುಂಬ್ರಿ ಉಬ್ಬು
ಹೆಚ್ಚಿನ
ಮಾಹಿತಿಗೆ ಮುಂದಿನ ಅಂತರ್ಜಾಲ ತಾಣಗಳನ್ನು ನೋಡಬಹುದು.
·
·
·
//economictimes.indiatimes.com/articleshow/35131371.cms?utm_source=contentofinterest&utm_medium=text&utm_campaign=cppst is funding Prashant
Kishor?
Comments
Post a Comment