ನಿಲ್ಲದ ಅಮೇರಿಕ ಪ್ರಾಯೋಜಿತ ವೆನೆಜುಯೇಲಾ ಬವಣೆ ಸೋಲದ ವೆನೆಜುಯೇಲಾ ಜನತೆ. ದೊಡ್ಡ ತೈಲ ಸಂಪತ್ತಿನ ರಾಷ್ಟ್ರ ವೆನೆಜುಯೇಲಾ ಕಳೆದ ಕೆಲವು ತಿಂಗಳುಗಳಿಂದ ಕ್ಷೋಭೆಯಲ್ಲಿದೆ. ಕ್ಷೋಭೆಗೆ ಮುಖ್ಯ ಕಾರಣ ವೆನೆಜುಯೇಲಾವಲ್ಲ. ಬದಲಿಗೆ ವಿಶ್ವದ ಲೂಟಿಕೋರ ರಾಷ್ಟ್ರ ಅಮೇರಿಕ ಮತ್ತದರ ಕೂಟ. ಜನರಿಂದ ಚುನಾಯಿತವಾದ ಮದುರೋ ಸರಕಾರವನ್ನು ಉರುಳಿಸಲು ಇನ್ನಿಲ್ಲದ ಬುಡಮೇಲು ಕೃತ್ಯಗಳನ್ನು ಹಾಗೂ ಕಸರತ್ತುಗಳನ್ನು ಅದು ನಡೆಸುತ್ತಲೇ ಇದೆ. ಅಮೇರಿಕದ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ ನಂತರ ಬರಾಕ್ ಒಬಾಮಾ ಕಾಲದಿಂದಲೂ ವೆನೆಜುಯೇಲಾದ ಮೇಲೆ ಹೇರಿದ್ದ ಆರ್ಥಿಕ ನಿರ್ಭಂಧಗಳನ್ನು ತೀವ್ರ ರೀತಿಯಲ್ಲಿ ಹೆಚ್ಚು ಮಾಡುತ್ತಲೇ ಮತ್ತೊಂದು ಕಡೆ ಸಹಾಯದ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರುವ ಕುಟಿಲ ನೀತಿಯನ್ನೂ ಅದು ಅನುಸರಿಸುತ್ತಿದೆ. ಜನರಿಂದ ಆಯ್ಕೆಯಾಗದ ವಿರೋಧ ಪಕ್ಷದ ನಾಯಕನೆಂದು ಹೇಳಿಕೊಂಡಿರುವ 30ರ ಹರೆಯದ ಅಮೇರಿಕದ ಕೈಗೊಂಬೆ ಜುವಾನ್ ಗ್ವಾಯಿಡೋನನ್ನು ಇಟ್ಟುಕೊಂಡು ವೆನೆಜುಯೇಲಾದ ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸಬೇಕೆಂದು ತಿಣುಕಾಡುತ್ತಿದೆ. ಗ್ವಾಯಿಡೋ ತಾನು ಹಿಂದಿನ ವೆನೆಜುಯೇಲಾದ ಅಧ್ಯಕ್ಷ ಹ್ಯೂಗೋ ಚಾವೇಜ್ ರ ಕಾಲದಲ್ಲಿ ರಾಷ್ಟ್ರೀಕರಣಗೊಂಡ ಕಂಪನಿಗಳನ್ನು ಮರಳಿ ಖಾಸಗೀಕರಿಸುತ್ತೇನೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ. ಅದು ರಾಷ್ಟ್ರದ ಅಭಿವೃದ್ದಿಗೆ ಅಗತ್ಯವೆಂದು ಜನರಿಗೆ ನಂಬಿಸುವ ಪ್ರಯತ್ನ ಮಾಡ...